ವಿಭೂತಿ ವೀಳ್ಯ
ಊರಿಂದೂರಿಗೆ ವರ್ಗಾವಣೆಯಾಗುವವರಿಗೆ, ದೀರ್ಘಕಾಲ ಒಡನಾಟದಲ್ಲಿದ್ದು ಬಿಟ್ಟು ಹೋಗುವವರಿಗೆ ಬೀಳ್ಕೊಡುಗೆ ಇರುವಂತೆ ಲಿಂಗಾಯತ ಧರ್ಮದಲ್ಲಿ ವಿಭೂತಿ ವೀಳ್ಯ ಎಂಬ ಬೀಳ್ಕೊಡುಗೆ ಕಾರ್ಯಕ್ರಮ ಇಡುವ ಪದ್ಧತಿ ಇದೆ. ರೋಗರುಜಿನದಿಂದ ಪೀಡಿತರಾಗಿ, ದಿನದಿನಕ್ಕೂ ಕ್ಷೀಣವಾಗುತ್ತಾ ಇನ್ನು ಉಳಿಯಲಾರರು ಎಂಬ ಭಾವ ಬಂದಾಗ ಈ ವಿಭೂತಿ ವೀಳ್ಯವನ್ನು ಏರ್ಪಡಿಸಲಾಗುವುದು. ಇದು ಸಾಯುವವರ ಮನಸ್ಸನ್ನು ಸತ್ ಚಿಂತನೆಯ ಮೂಲಕ ಸಾವನ್ನೆದುರಿಸಲು ಅಣಿಗೊಳಿಸುವ ಅರ್ಥಗರ್ಭಿತ ಕಾರ್ಯಕ್ರಮ.
ಮತ್ತೆ ಕೆಲವರು ಜೀವನ ಪರ್ಯಂತ – ವಿಲಾಸಿಗಳೂ, ದುರಹಂಕಾರಿಗಳೂ, ವಿಷಯಲೋಲುಪರೂ ಆಗಿರುವರು. ಧರ್ಮ - ದೇವರು ಅವರ ಬಳಿಯ ಸುಳಿದಿರುವುದಿಲ್ಲ. ಇಂಥವರು ಅಂತಿಮ ಕ್ಷಣದಲ್ಲಿಯಾದರೂ ಪಶ್ಚಾತ್ತಾಪ ಪಟ್ಟು ಪೂಜಾದಿ ಕಾರ್ಯಗಳನ್ನು ಮಾಡಿ (ಮುಕ್ತಾತ್ಮರಾಗದಿದ್ದರೂ) ಒಳ್ಳೆಯ ಜನ್ಮಕ್ಕಾದರೂ ನಾಂದಿ ಹಾಡಲಿ ಎಂಬ ಸದುದ್ದೇಶ ಈ ವಿಭೂತಿ ವೀಳ್ಯದಲ್ಲಿದೆ. ಇದು ವ್ಯಕ್ತಿಯು ಬದುಕಿದ್ದಾಗ ಮಾಡುವ ಕೊನೆಯ ಆದರೆ ಅಂತ್ಯಸಂಸ್ಕಾರದ ಮೊದಲನೆಯ ಧಾರ್ಮಿಕ ವಿಧಿಯಾಗಿರುತ್ತದೆ.
ವಿಭೂತಿ ವೀಳ್ಯಕ್ಕೆ ಬೇಕಾಗುವ ಸಾಮಾನುಗಳು-ಜನರು.
೧. ಗುರು (ಜಂಗಮ)ಮೂರ್ತಿ-ಕ್ರಿಯಾಮೂರ್ತಿ:
೨. ಭಸ್ಮದ ಗಟ್ಟಿಗಳು.
೩. ರಂಗವಲ್ಲಿ ಪುಡಿ, ಷಟ್ಕೋನ ಬಸವ ಧ್ವಜ,
೪. ಶ್ರೀ ಬಸವೇಶ್ವರರ ಭಾವಚಿತ್ರ ಮತ್ತು ಬಸವೇಶ್ವರ ಪೂಜಾವ್ರತ ಪುಸ್ತಕ.
೫. ಪೂಜಾ ಸಾಮಗ್ರಿಗಳಾದ ನೀರು, ಗಂಧ, ಅಕ್ಷತೆ, ಪತ್ರೆ-ಪುಷ್ಪ, ಕರ್ಪುರ, ಧೂಪ-ಊದಿನಕಡ್ಡಿ, ವೀಳೆಯದೆಲೆ-ಅಡಿಕೆ,
೬. ಕಳಸದ ಆರತಿ-೬.
೭. ತಾಡವೋಲೆ (ವಚನಗ್ರಂಥ).
೮. ಹೊಸದಾದ ಬಿಳಿಯಬಟ್ಟೆ ೨ ೧/೨ ಮೀಟರ್.
೯. ವೀಳ್ಯ ಪಡೆದುಕೊಳ್ಳುವ ಶರಣನಿಗೆ ಶರಣೆಗೆ ಹೊಸಬಟ್ಟೆ,
೧೦ ಗುರು (ಜಂಗಮ) ಮೂರ್ತಿಗೆ ಶಕ್ತಾನುಸಾರ ಗುರುಕಾಣಿಕೆ, ಹೊಸಬಟ್ಟೆ.
೧೧ ಇನ್ನಿತರರಿಗೆ ಮಾಡುವ ದಾಸೋಹ (ದಾನ)ದ ವಸ್ತುಗಳು.
೧೨ ಗಣಪ್ರಸಾದ ಆರೋಗಣೆಗೆ ಬೇಕಾದ ಸಾಮಾನುಗಳು.
విಧಿ ವಿಧಾನ
ಒಂದು ಅನುಕೂಲಕರವಾದ ದಿನವನ್ನು ಗೊತ್ತುಪಡಿಸಿ ಯಾರಾದರೂ ಪೂಜ್ಯರನ್ನು, ಗುರುಗಳನ್ನು ಅಥವಾ ಸದಾಚಾರ ಸಂಪನ್ನರಾದ ಶರಣರನ್ನು ದಿವ್ಯ ಸನ್ನಿಧಿ ವಹಿಸಲು ಆಹ್ವಾನಿಸಬೇಕು. ಹಾಗೆಯೇ ಇನ್ನಿತರ ಬಂಧು ಬಳಗ, ಲಿಂಗೈಕ್ಯರಾಗುವವರ ಮಕ್ಕಳು, ಬಂಧುಮಿತ್ರರು ಮುಂತಾದವರನ್ನು ಆಹ್ವಾನಿಸಬೇಕು. ಆಹ್ವಾನ ಪತ್ರಿಕೆಯನ್ನು ಸಹಾ ಮುದ್ರಿಸಬಹುದು. (ಮಾದರಿಯನ್ನು ಮೊದಲೇ ಕೊಡಲಾಗಿದೆ). ಗುರುಗಳು ಮನೆಗೆ ಆಗಮಿಸುತ್ತಲೇ ಬಾಗಿಲಿನಲ್ಲಿ ಪಾದಕ್ಕೆ ನೀರೆರೆದು ಸ್ವಾಗತಿಸಿ, ಅವರ ಕಡೆಯಿಂದ ಷಟ್ಕೋನ ಬಸವ ಧ್ವಜಾರೋಹಣ ಮಾಡಿಸಬೇಕು. ಮನೆಯ ಮೇಲ್ಬಾಗದಲ್ಲಿ ಎಲ್ಲರಿಗೂ ಕಾಣುವಂತೆ ಹಾರಿಸಬಹುದು. ಅಥವಾ ಮನೆಯ ಮುಂಭಾಗದಲ್ಲಿ ಕಂಭವೊಂದನ್ನು ನೆಟ್ಟು ಅಥವಾ ಚಪ್ಪರದ ಕಂಭಕ್ಕೆ ಹಾರಿಸಬಹುದು. ಆಹ್ವಾನಿತ ಗುರುಗಳ, ಶರಣರ ಇಷ್ಟಲಿಂಗಾರ್ಚನೆ ಪೂರೈಸಬೇಕು. ನಂತರ ಶ್ರೀ ಬಸವೇಶ್ವರ ಪೂಜಾವ್ರತವನ್ನು ಈ ಪೂಜ್ಯರು ಲಿಂಗೈಕ್ಯರಾಗುವವರ ಮಕ್ಕಳ ಕೈಯಿಂದ ಮಾಡಿಸಬೇಕು. (ನಂತರ ಕುಳಿತುಕೊಂಡು ಪುಷ್ಪಾರ್ಚನೆ ಮಾಡುವಷ್ಟು ವ್ಯಕ್ತಿಯು ಸಶಕ್ತರಾಗಿದ್ದರೆ ಅವರ ಕಡೆಯಿಂದ ೧೦೮ ಪತ್ರ - ಪುಷ್ಪಗಳನ್ನು ಏರಿಸಿ ಶ್ರೀ ಗುರುಬಸವ ಲಿಂಗಾಯ ನಮಃ ಹೇಳಿಸಬೇಕು. ಬಹಳ ಅಶಕ್ತರಾಗಿ ಹಾಸಿಗೆ ಹಿಡಿದಿದ್ದರೆ ಆಗ ಮಕ್ಕಳೇ ಅವರ ಪರವಾಗಿ ೧೦೮ ಮಂತ್ರ ಪಠಣ ಮಾಡಬೇಕು)
ಪೂಜಾವ್ರತ ಮುಗಿಯುವಷ್ಟರಲ್ಲಿ ೮ ಅಡಿ ಉದ್ದ ೪ ಅಡಿ ಅಗಲದ ಒಂದು ಚೌಕೋನಾಕಾರದ ಚಿತ್ರವನ್ನು ರಂಗೋಲಿ ಅಥವಾ ಅಕ್ಕಿ ಹಿಟ್ಟಿನಲ್ಲಿ ಬರೆಯಬೇಕು. ಅದಕ್ಕೆ ಮೊದಲು ಆ ಜಾಗವನ್ನು ಸ್ವಚ್ಛವಾದ ನೀರಿನಿಂದ ಒರೆಸಿ, ನಂತರ ಒಂದು ಬಟ್ಟಲು ನೀರನ್ನು ಮಂತ್ರೋದಕವನ್ನಾಗಿ ಮಾಡಿ ಅದನ್ನು ಸಿಂಪಡಿಸಿ ನಂತರ ಚಿತ್ರ ಬರೆಯಬೇಕು. ಮಂತ್ರೋದಕ ಮಾಡುವ ವಿಧಾನ - ಬಲಗೈಯ ಐದು ಬೆರಳುಗಳಿಗೆ ವಿಭೂತಿ ಧರಿಸಿ, ಒಂದೊಂದು ಗಣ್ಣಿಗೆ (ಗುರುತು) ಒಂದು ಸಲದಂತೆ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಸ್ಮರಿಸಿ, ಬೆರಳುಗಳನ್ನು ನೀರಿನಲ್ಲಿ ಎದ್ದಿ ಹೀಗೆ ಹೇಳಬೇಕು -
ಬಸವಂ ಪ್ರಣವಾಕಾರಂ
ಬಸವ ಶರಣಾಗತ ರಕ್ಷಕ ವರಲೋಲ
ಬಸವಂ ಜನ್ಮಕುಠಾರಂ
ಬಸವಂ ನಮಾಮಿ ಶ್ರೀ ಗುರು ಬಸವೇಶಂ
ಮಧ್ಯದಲ್ಲಿ ಬಿಳಿಯ ಹೊಸಬಟ್ಟೆಯನ್ನು ಹಾಸಬೇಕು. ಈ ಸಮಯದೊಳಗೆ ವಿಭೂತಿ ವೀಳ್ಯ ಮಾಡಿಸಿಕೊಳ್ಳಲಿರುವ ವ್ಯಕ್ತಿಗೆ ಸ್ನಾನ ಮಾಡಿಸಬೇಕು. ಒಂದು ವೇಳೆ ಸ್ನಾನ ಮಾಡಿಸಿ ಕೊಳ್ಳಲಾರದಷ್ಟು ಅಶಕ್ತರಿದ್ದರೆ ಬಟ್ಟೆಯನ್ನು ಬಿಸಿನೀರಿನಲ್ಲಿ ಎದ್ದಿ ಮೈಯನ್ನೆಲ್ಲ ಹಗುರವಾಗಿ ಒರೆಸಬೇಕು. ನಂತರ ಭಸ್ಮಸ್ನಾನವನ್ನು ಮಾಡಿಸಬೇಕು. ಕುಳಿತು ಕೊಳ್ಳುವ ಶಕ್ತಿ ಇದ್ದರೆ ಚೌಕೋನಾಕಾರದ ಮಧ್ಯೆ ಶುಭ್ರ ಬಿಳಿಯ ಆಸನದ ಮೇಲೆ ಕೂರಿಸಬೇಕು. ಈಗ ಒಂದು ಹೊಸ ತಟ್ಟೆಯಲ್ಲಿ ಒಂದು ವಿಭೂತಿ ಗಟ್ಟಿ, ವೀಳ್ಯದೆಲೆ, ಅಡಿಕೆ ಇಟ್ಟು ವಿಭೂತಿ ವೀಳ್ಯ ಮಾಡಿಸಿಕೊಳ್ಳುವ ವ್ಯಕ್ತಿಗುರುಮೂರ್ತಿಗೆ ಕೊಡಬೇಕು. ಇದು ವಿನಂತಿಸುವ ಕ್ರಿಯೆ. ಇಲ್ಲವಾದರೆ ಮಲಗಿಸಬೇಕು. ಆಗ ಗುರುಮೂರ್ತಿಯ ಸ್ಥಾನದಲ್ಲಿರುವವರು ಮೂರು ಎಳೆ ಭಸ್ಮವನ್ನು ಬಸವ ಬಸವಾ ಎಂಬ ಹಾಡು ಹೇಳುತ್ತಾ ಧರಿಸಬೇಕು. ವ್ಯಕ್ತಿಯು ಸಶಕ್ತರಿದ್ದು ವಿಭೂತಿ ವೀಳ್ಯವನ್ನು ಸ್ವಯಂ ಇಚ್ಛೆಯಿಂದ ತಗೊಳ್ಳುತ್ತಿದ್ದರೆ ಆಗ ಗುರುಮೂರ್ತಿಯು ವಿಭೂತಿಯನ್ನು ಆಶೀರ್ವದಿಸಿಕೊಟ್ಟರೆ ಸಾಕು, ಕೆಳಗೆ ಹೇಳಿದ ಸ್ಥಳಗಳಲ್ಲಿ ತಾವೇ ಧರಿಸಿಕೊಳ್ಳಬೇಕು
೧) ಹಣೆ
೨) ನೆತ್ತಿ
೩). ಎರಡೂ ಕಿವಿಗಳು
೪) ಕುತ್ತಿಗೆಯ ಎರಡೂ ಬದಿಗಳು
೫) ಎರಡೂ ಭುಜಗಳು
೬) ಹೊಕ್ಕುಳ
೭) ಎರಡೂ ಪಕ್ಕೆಗಳು
೮) ಬೆನ್ನು
೯) ಎರಡೂ ಮೊಳಕ್ಕೆ
೧೦) ನಡು ಕೈ
೧೧) ಮುಂಗೈ
೧೨) ಎರಡೂ ಪಾದಗಳು
ವಿಭೂತಿ ಧಾರಣ ಮಂತ್ರ
ಬಸವ ಬಸವಾ ಎಂದು ಭಸಿತಮಂ ಧರಿಸಿದರೆ
ಬಸವಾದಿ ಪ್ರಮಥರಿಗೆ ಪ್ರೀತಿಯಯ್ಯಾ
ಬಸವ ಷಟಸ್ಥಲ ಚನ್ನಬಸವ ಪ್ರಭು ಮುಖ್ಯರು
ಭಸಿತಮಂ ಧರಿಸಿ ಬಯಲಾದರಯ್ಯ
ಎಸೆವ ಅಂಗುಲಿತ್ರಯವು ಭಸಿತರೇಖೆಗಳೆಲ್ಲ
ಬಸವಾಕ್ಷರತ್ರಯಗಳೆಂದು ಮುದದಿ
ಭಸಿತದಿಂ ನವ ಪ್ರಣವ ಹಸನಾಗಿ ಅಂಗದಲಿ
ಬಸವ ಬಸವಾ ಎಂದು ಸಂಬಂಧಿಸುವೆನು
ದುರುಳ ಕರಣಂಗಳೆಂಬ ಬೆರಣಿಗಳನುರುಹಿದ
ಪರಮಚಿದ್ಭಸಿತವೆಂದರಿದು ನಾನು
ಹರಬಸವ ಗುರುಬಸವ ಚರಬಸವ
ಎಂದೆನುತ ಶಿರವಾದಿ ಚರಣಾಂತ್ಯದೊಳು ಧರಿಸುವೆ
ನೀನು ಧರಿಸಿದೆಯಾಗಿ ಆನು ಧರಿಸುವೆನಯ್ಯ
ಸ್ನಾನಧೂಳನ ಧಾರಣಗಳಿಂದ
ಹೀನಮಾನವರಿದರ ಜ್ಞಾನವಿಲ್ಲದೆ ಭವದ
ಕಾನನದೊಳಗೆ ತಾವು ಬೀಳುತಿಹರು
ತ್ರಿನಯನ ಮಹಾಂತೇಶ ದಣಿ ಬಸವರಾಜನ
ಅಣಿಯರದಿ ಸ್ಮರಿಸುತ್ತ ಭಜಿಸುತ್ತಲಿ
ಅಣುಮಾತ್ರ ಭಸಿತವನು ಹಣೆಯೊಳಿಟ್ಟಾಕ್ಷಣವೆ
ಒಣಗುವವು ದುರಿತಂಗಳೆಂಬ ಕುಜವು - ಬಾಲಲೀಲಾ ಮಹಾಂತ ಶಿವಯೋಗಿಗಳು
ನಂತರ ರುದ್ರಾಕ್ಷಿಧಾರಣೆ:೩೨ ಮಣಿ ಮತ್ತು ಒಂದು ಶಿಖಾಮಣಿಯುಳ್ಳ ಕಂಠಮಾಲೆಯನ್ನು ಅಥವಾ ಕನಿಷ್ಠ ಒಂದು ಕಾಳು ರುದ್ರಾಕ್ಷಿಯನ್ನಾಗಲಿ ಗುರುಮೂರ್ತಿಯು ಶರಣನಿಗೆ ಧರಿಸಬೇಕು. ಆಗ ಈ ವಚನ ಹೇಳಬೇಕು.
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ ಕಾರಣವು
ಅಯ್ಯಾ ಎನಗೆ ರುದ್ರಾಕ್ಷಿಯೇ ಸರ್ವ ಸಾಧನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ
ಅಯ್ಯಾ, ನಿಮ್ಮ ಪಂಚ ವಕ್ತ್ರಂಗಳೇ
ಪಂಚಮುಖ ರುದ್ರಾಕ್ಷಂಗಳಾದವಾಗಿ
ಅಯ್ಯಾ ಕೂಡಲ ಸಂಗಮದೇವಯ್ಯಾ,
ಎನ್ನ ಮುಕ್ತಿ ಪಥಕ್ಕೆ ಶ್ರೀ ರುದ್ರಾಕ್ಷಿಯೇ ಸಾಧನವಯ್ಯ, - ವಿಶ್ವಗುರು ಬಸವಣ್ಣನವರು.
ವ್ಯಕ್ತಿಯು ಜೀವನ ಪರ್ಯಂತರ ಲಿಂಗಧಾರಣೆ ಮಾಡಿಕೊಳ್ಳದೆ ಪೂಜೆ-ಪುರಸ್ಕಾರ ಮಾಡದೆ ಕಾಲಕಳೆದಿದ್ದರೆ ಈಗಲಾದರೂ ಅವನಿಗೆ ಲಿಂಗಧಾರಣೆಯನ್ನು ಗುರುಮೂರ್ತಿಯು ಮಾಡಬೇಕು. ಒಂದು ಇಷ್ಟಲಿಂಗವನ್ನು ಪೂಜಿಸಿ, ಚಿತ್ಕಳಾಭರಿತವಾಗಿ ಮಾಡಿ, ವ್ಯಕ್ತಿಯ ಹಸ್ತದಲ್ಲಿಟ್ಟು ತನ್ನ ಕೈಯನ್ನು ಆ ವ್ಯಕ್ತಿಯ ತಲೆಯ ಮೇಲಿಟ್ಟು ಷಡಕ್ಷರಿ ಮಂತ್ರೋಪದೇಶವನ್ನು ಮಾಡಬೇಕು. ನಂತರ ವ್ಯಕ್ತಿಯು ಸಶಕ್ತನಾಗಿದ್ದರೆ ತಾನೇ ಇಷ್ಟಲಿಂಗ ಪೂಜೆ ಮಾಡಬೇಕು. ಅಶಕ್ತನಿದ್ದರೆ, ಆತನ ದೇಹಕ್ಕೆ ಸಂಬಂಧಿಸಿ ಒಂದು ಸೂತ್ರ ಹಿಡಿದು ಮಕ್ಕಳು ತಾವೇ ಇಷ್ಟಲಿಂಗಾರ್ಚನೆ ಮಾಡಬೇಕು. ಗುರುಮೂರ್ತಿಯು ಭಸ್ಮಧರಿಸಿ, ಪುಷ್ಪ ಇಟ್ಟು ಪೂಜೆ ಮಾಡಿಸಬೇಕು. ಇಷ್ಟಲಿಂಗಪೂಜಾ ನಂತರ ಬಸವೇಶ್ವರ ಪೂಜಾವ್ರತದ ಕಡೆಯ ಪೂಜೆ ವಿಭೂತಿ ವೀಳ್ಯ ಪಡೆಯುವವರಿಂದ ಮಾಡಿಸಬೇಕು. ಅವರು ಅಶಕ್ತರಿದ್ದರೆ ಪುಷ್ಪ-ಪತ್ರೆಗಳನ್ನು ಅವರಿಂದ ಸ್ಪರ್ಶಿಸಿ ಮಕ್ಕಳೇ ಮಾಡಬೇಕು. ಗುರುಬಸವಣ್ಣನವರ ಮತ್ತು ಇಷ್ಟಲಿಂಗದ ಪೂಜಾನಂತರ ವ್ಯಕ್ತಿಯ ಕೈಯಿಂದ ಜಂಗಮ (ಅಂದಿನ ಸನ್ನಿಧಿ ವಹಿಸಿರುವ ಜ್ಞಾನಿಗಳು) ಪಾದಪೂಜೆ ಮಾಡಿಸಬೇಕು. ಇಲ್ಲವೇ ಆತನ ಪರವಾಗಿ ಮಕ್ಕಳು ಮಾಡಬೇಕು. ಈಗ ಗುರುಮೂರ್ತಿ (ಅಥವಾ ಜಂಗಮ ಮೂರ್ತಿ) ಯು ಸುಜ್ಞಾನ ತತ್ರೋಪದೇಶವನ್ನು ಮಾಡಬೇಕು. ನೀನು ಯಾರು ? ನಿನ್ನ ಆದಿ ಅಂತ್ಯವೇನು ? ಮಾನವ ಜನ್ಮ ಹೇಗೆ ಶ್ರೇಷ್ಠ. ಅದರ ಸಾರ್ಥಕತೆ ಹೇಗೆ ಸಾಧ್ಯ ? ಈ ಧರ್ಮದ ಶ್ರೇಷ್ಠತೆ ಏನು ? ಇದರಲ್ಲಿ ಹುಟ್ಟಬೇಕಾದರೆ ಅಥವಾ ದೀಕ್ಷೆಯ ಮೂಲಕ ಸ್ವೀಕರಿಸಿ ಹೊಂದಬೇಕಾದರೆ ಎಷ್ಟು ಪುಣ್ಯ ಮಾಡಿರಬೇಕು ಎಂಬುದನ್ನು ವಿವರಿಸಿ ಪ್ರವಚನ ರೂಪದಲ್ಲಿ ಹೇಳಬೇಕು. ಈ ಸನ್ನಿವೇಶದಲ್ಲಿ ಶ್ರೀ ಬಾಲ ಲೀಲಾ ಮಹಾಂತ ಶಿವಯೋಗಿಗಳ ಒಂದು ಪದ್ಯದ ಅರ್ಥವನ್ನು ಹೇಳಿದರೂ ಸಾಕು.
ಹರಪೂಜೆ ಗುರುಪೂಜೆ
ಹರಪೂಜೆ - ಗುರುಸೇವೆ ವರಪುಣ್ಯವಿಲ್ಲದೆ
ಬರಿದೆ ಸುಖಭೋಗವು ದೊರಕುವದುಂಟೆ ಆತ್ಮಾ?
ಹಣವಿರ್ದಾಗಲೆ ಭಕ್ತಿ ನೆಣವಿರ್ದಾಗಲೆ ಸೇವೆ
ಗುಣವಿರ್ದಾಗಲೆ ಮಾಡಿ ಮುಕ್ತಿ ಪಡೆಯಾತ್ಮಾ
ಒಣ ಮಾತಾಡಿದರೆಲ್ಲ ಸಣೆ ಹರಿದು ಹೋಗುವುದೆ
ತ್ರಿಣಯನೊಲಿಸುವುದು ಬಹು ಕಷ್ಟಕರವಾತ್ಮಾ
ಹಿಂದಿನ ಪುಣ್ಯವನು ಇಂದುಂಡು ಉಡಬೇಕು
ಇಂದಿನ ಪುಣ್ಯವನು ಮುಂದುಂಡುಡಬೇಕಾತ್ಮಾ
ಬಂಧನವೇಕಿದರೆ ಇಂದುಧರನ ಆಣೆಯಾಗಿ
ಸಂದೇಹವಿಲ್ಲವೋ ತಿಳಿಕಂಡೆಯಾತ್ಮಾ
ಹರಿಯಜ ಸುರರೆಲ್ಲ ಶರೀರದಂಡನೆ ಮಾಡಿ
ಪರಮಾತ್ಮನನೊಲಿಸಿದರು ಸುಗಮವಲ್ಲಲೆ ಆತ್ಮಾ
ನರ ಪಾಪ - ಪುಣ್ಯವನು ನರರ ಸೆರಗಿಲಿ ಹಾಕಿ
ಗುರುಮಹಾಂತಲಿಂಗ ತಾನು ಮರೆಯಾಗಿರುತಿರುವಾ
ಜೀವನದ ನಶ್ವರತೆ, ವೈರಾಗ್ಯಭಾವ, ಪರಮಾತ್ಮನ ಶಾಶ್ವತತೆ ಮುಂತಾದುವನ್ನು ವಿವರಿಸುವ ಇನ್ನೊಂದು ಪದ್ಯವನ್ನು ಕೊಡಲಾಗಿದೆ. ಇದರ ಅರ್ಥವಿವರಣೆ ಸಹಾ ಮಾಡಬಹುದು.
ಓ .. ಓ .. ಆತ್ಮನೇ, ಆಗು ನೀ ಶರಣ
ಹಿಡಿದು ಶಿವಚರಣ, ಪಡೆದು ಬಸವ ಕೃಪಾ
ಲೋಕವೆಂಬುದು ಹಿರಿಯ ಸಂತೆ
ಹೊತ್ತು ಬಂದಿಹೆ ಕೆಡುವ ಬೊಂತೆ.
ತುಂಬಿಹುದು ಬಗೆಬಗೆಯ ಕಂತೆ
ಮಾಡಬೇಡ ನೀ ವ್ಯರ್ಥ ಚಿಂತೆ
ವಿಶ್ವವೆಂಬುದು ದೇವನ ಸೃಷ್ಟಿ
ಮನುಜ ಜನ್ಮವು ಅದರ ಮುಕುಟ
ಅರಿವಿನಾಗರ, ಸುಖದ ಸಾಗರ
ನಿನ್ನ ನಿಲುವು ತಿಳಿದು ನೋಡಲು
ಶಿಲೆಯ ಮರೆಯ ಹೊನ್ನಿನಂತೆ
ಸುಮದಲಡಗಿಹ ಕಂಪಿನಂತೆ
ದೇವನಡಗಿಹ ಆತ್ಮದಲ್ಲಿ
ಕಾಣುತಿಹ ನೀ ನೋಡಿದಲ್ಲಿ
ದೇವರೂಪವನರಿತು ಧ್ಯಾನಿಸು
ದೇವ ಮಂತ್ರದಿ ಮನವ ಮೀಯಿಸು
ದೇವನೊಲುಮೆಯ ಪಡೆಯಲೆಳಸು
ಸಚ್ಚಿದಾನಂದನೊಳು ಬೆರೆಸು - ಜಗದ್ಗುರು ಮಾತೆ ಮಹಾದೇವಿ
ಗುರು ಭಕ್ತ ಸಂವಾದ
ಈಗ ಗುರು-ಭಕ್ತ ಸಂವಾದ ; ಇದು ಮಹತ್ವದ ಘಟ್ಟ,
ಶರಣ : ಪೂಜ್ಯರೇ ಮತ್ತು ಶರಣ ಬಂಧುಗಳೇ, ತಮ್ಮೆಲ್ಲರಿಗೂ ಶರಣು ಶರಣಾರ್ಥಿ.
ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ
ಬೆಳೆದೆನು ಅಸಂಖ್ಯಾತರ ಕರುಣದೊಳಗೆ
ಭಾವವೆಂಬ ಹಾಲು ಸುಜ್ಞಾನವೆಂಬ ತುಪ್ಪ
ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ.
ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರಿ
ಸಯವಪ್ಪ ಗಂಡಂಗೆ ಕೊಟ್ಟು ವಿವಾಹವ ಮಾಡಿದಿರಿ
ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ
ಬಸವಣ್ಣ ಮೆಚ್ಚಲು ಒಗೆತನವ ನಾ ಮಾಡುವೆ
ಲಿಂಗಪತಿಯ ಕೈವಿಡಿದು ಬಸವಾದಿ ಪ್ರಮಥರ ಮಂಡೆಗೆ ಕೀರ್ತಿ ತರುವೆನು.
ಮರ್ತ್ಯಲೋಕದಲ್ಲಿ ಮಾನವ ದೇಹವನ್ನು ಹೊತ್ತು ಹುಟ್ಟಿ ಇಲ್ಲಿಗೆ ನನಗೆ ವರ್ಷಗಳಾದವು. ಪೂರ್ವಪುಣ್ಯದಿಂದಲೇನೋ ಎಂಬಂತೆ ಶರಣರ ಮಾರ್ಗದಲ್ಲಿ ನಡೆದು ನನ್ನ ಐಹಿಕ ಕರ್ತವ್ಯವನ್ನು ಪೂರೈಸಿದ್ದೇನೆ. ತಾವಿನ್ನು ನನಗೆ ಲಿಂಗೈಕ್ಯರಾಗಲು ಅಪ್ಪಣೆ ಕೊಡಿರಿ.
ಗುರುಮೂರ್ತಿ : ಶರಣರೇ, ತಾವು ಧರ್ಮಗುರು ಬಸವಣ್ಣನವರನ್ನು ನಂಬಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದೀರಾ ?
ಶರಣ : ನಡೆದಿದ್ದೇನೆಂದು ವಿಶ್ವಾಸವಿದೆ.
ಗುರುಮೂರ್ತಿ : ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲ, ಷಟ್ ಸೂತ್ರಗಳ ಮರ್ಮವನ್ನರಿತಿದ್ದೀರಾ ?
ಶರಣ : ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಕೈಲಾದಷ್ಟು ಅಳವಡಿಸಿಕೊಂಡಿದ್ದೇನೆಂದು ನಮ್ರವಾಗಿ ಹೇಳುತ್ತೇನೆ.
ಗುರುಮೂರ್ತಿ : ನೀವು ಏನಾದರೂ ವಿಶೇಷವಾಗಿ ಹೇಳುವುದಿದೆಯೇ ?
ಶರಣ : ಅರಿತೋ ಅರಿಯದೆಯೋ ತಪ್ಪು ಮಾಡಿದ್ದರೆ ಧರ್ಮಪಿತ, ಮುಕ್ತಿದಾಯಕ ಬಸವಣ್ಣನವರು ನನ್ನನ್ನು ಕ್ಷಮಿಸಬೇಕೆಂದು ತಾವೆಲ್ಲ ನನ್ನ ಪರವಾಗಿ ಪ್ರಾರ್ಥಿಸಬೇಕೆಂದು ಬಿನ್ನಹ ಮಾಡುತ್ತೇನೆ.
ಗುರುಮೂರ್ತಿ : ನಿಮಗೆ ಮರುಜನ್ಮ ಬೇಕೋ ಮುಕ್ತಿ ಬೇಕೋ ?
ಶರಣ : ಅದು ಆ ಮಹಾಗುರುವಿಗೆ ಬಿಟ್ಟದ್ದು,
ಎನಗೆ ಜನನವಾಯಿತ್ತೆಂಬರು, ಎನಗೆ ಜನನವಿಲ್ಲವಯ್ಯಾ,
ಎನಗೆ ಮರಣವಾಯಿತ್ತೆಂಬರು, ಎನಗೆ ಮರಣವಿಲ್ಲವಯ್ಯಾ,
ಜನನವಾದೊಡೆ ನಿಮ್ಮ ಪಾದೋದಕ ಪ್ರಸಾದವ ಕೊಂಬೆ
ಮರಣವಾದೊಡೆ ನಿಮ್ಮ ಶ್ರೀಚರಣವನೆಯುವೆ
ಬಾವನ್ನದ ವೃಕ್ಷವು ಊರೊಳಗಿದ್ದಡೇನು, ಅಡವಿಯೊಳಗಿದ್ದಡೇನು
ಪರಿಮಳ ಒಂದೆ, ಕೂಡಲ ಸಂಗಮದೇವಾ -(ಬ.ಷ.ಹೆ.ವ. ೧೩೧೬)
ಗುರುಮೂರ್ತಿ : ಶರಣರೇ, ನಿಮ್ಮ ಅಂತಿಮ ಆಸೆ ಏನು ?
ಶರಣ : ನನ್ನ ಮಕ್ಕಳು ಮರಿಗಳೆಲ್ಲ ಧರ್ಮ ಮಾರ್ಗದಲ್ಲಿ ನಡೆಯಬೇಕು, ನನಗೆ ಮರುಜನ್ಮವಿದ್ದರೆ ಧರ್ಮಗುರು ಬಸವಣ್ಣನವರು ಕೊಟ್ಟ ಲಿಂಗವಂತ ಧರ್ಮದ ಅನುಯಾಯಿಯಾಗಿಯೇ ಹುಟ್ಟಿ, ಶರಣ ಪಥದಲ್ಲಿ ನಡೆಯುವಂತಾಗಬೇಕು.
ಗುರುಮೂರ್ತಿ : ಭಲೇ ಭಲೇ, ನಿಜ ಶರಣರು ನೀವು. ಶರಣ ಬಂಧುಗಳೇ ತಾವಿನ್ನು ಈ ಶರಣ ಚೇತನಕ್ಕೆ ವಿಭೂತಿ ವೀಳ್ಯ ನೀಡಿರಿ.
ಪೃಥ್ವಿ ಪೃಥ್ವಿಯ ಕೂಡದ ಮುನ್ನ
ಅಪ್ಪು ಅಪ್ಪುವ ಕೂಡದ ಮುನ್ನ
ತೇಜ ತೇಜವ ಕೂಡದ ಮುನ್ನ
ವಾಯು ವಾಯುವ ಕೂಡದ ಮುನ್ನ
ಆಕಾಶ ಆಕಾಶವ ಕೂಡದ ಮುನ್ನ
ಪಂಚೇಂದ್ರಿಯಗಳೆಲ್ಲ ಹಂಚು ಹರಿಯಾಗದ ಮುನ್ನ
ಚನ್ನ ಮಲ್ಲಿಕಾರ್ಜುನಂಗೆ ಶರಣೆನ್ನಿರೆ.
ಜಯಗುರು ಬಸವೇಶ ಹರಹರ ಮಹಾದೇವ ಎಂದು ಎಲ್ಲರೂ ಜಯಘೋಷ ಮಾಡಬೇಕು. ಈಗ ಆ ವ್ಯಕ್ತಿಯ ದೇಹಕ್ಕೆ ಅರ್ಚನೆ ನಡೆಯಬೇಕು. ಆಗ ಸಶಕ್ತರಿದ್ದರೆ ಕೂರಿಸಿ, ಅಶಕ್ತರಿದ್ದರೆ ಮಲಗಿಸಿರಬೇಕು. ಮಕ್ಕಳಲ್ಲಿ ಹಿರಿಯರು ಗುರು-ಲಿಂಗ-ಜಂಗಮ ತೀರ್ಥವನ್ನು ಪ್ರೋಕ್ಷಿಸಿ, ಭಸ್ಮಧಾರಣೆ, ಗಂಧಧಾರಣೆ, ಎಲ್ಲ ಮಾಡಿ ಪೂಜಿಸಬೇಕು. ಆಗ ಈ ಪದ್ಯವನ್ನು ಹೇಳಬೇಕು.
ಶರಣ ಪೂಜೆಯ ಮಾಡಿರಿ
ಶರಣ ಪೂಜೆಯ ಮಾಡಿರಿ ! ಸದ್ಭಕ್ತರೇ
ಶರಣ ಪೂಜೆಯ ಮಾಡಿರಿ
ಮರಣ ಭಯವ ಗೆಲಿದು ವಿಭೂತಿ ವೀಳ್ಯ ಪಡೆದು
ಪರಶಿವನ ಬೆರೆಯಲು ಮುದದಿಂದ ನಿಂದಿರುವ
ಗುರು-ಲಿಂಗ-ಜಂಗಮದ ಚಿನ್ಮಯ ತೀರ್ಥ
ಭರದಿಂದ ಪ್ರೋಕ್ಷಿಸುತ
ಸಾರಸುಂದರ ಚನ್ನ ಭಸಿತವ ನೊಸಲು - ಮಸ್ತಕ - ಚರಣಕಿಟ್ಟು
ಸಿರಿಯ ಗಂಧದ ಬೊಟ್ಟನೊಂದ ಹಣೆಯ
ಮಧ್ಯದ ಭ್ರುಕುಟಿಗಿಟ್ಟು
ಮಂಗಲದಕ್ಷತೆಯ ಶ್ರೀ ಚರಣಕಿಟ್ಟು
ಬಿಲ್ವದ ಪತ್ರೆ - ಪುಷ್ಪಗಳ
ಘಮಘಮಿಪ ಧೂಪವನು ಕರ್ಪೂರದಾರತಿಯ
ರುಚಿಯಾದ ಪಕ್ವಾನ್ನ ಲಿಂಗಕ್ಕೆಡೆ ಮಾಡುತ
ಶ್ರೀ ಗುರುಬಸವಣ್ಣನು ಮೆಚ್ಚುವ ತೆರದಿ
ಶರಣ ಪಥದಲಿ ನಡೆದು
ಇಳೆಯ ಬದುಕು ಸಾಕು ಎನುತ ವಿಭೂತಿ ವೀಳ್ಯ ಪಡೆದು
ನಿಷ್ಪತ್ತಿ ಹಣ್ಣಾಗಿ ಪರಮನಿಗೆ ಸಲುತಿರುವ
ಶೃಂಗ ಕುಸುಮದ ಮಧುವ ಹೀರುವ ತೆರದಿ
ಲಿಂಗದ ಆನಂದವ
ಅಂಗಮನ ಕರಣಾದಿ ಗುಣಗಳ ಲಿಂಗಭಾವದಿ ನಾಶಮಾಡಿ
ಲಿಂಗವೇ ನೀನಾಗು ಎಂದು ಹಾರೈಸುತ -ರಚನೆ : ಮಾತಾಜಿ
ಪುಷ್ಪಾಂಜಲಿ
ಶರಣನನ್ನು ಪೂಜಿಸಿದ ಮೇಲೆ ಈ ಪುಷ್ಪಾಂಜಲಿ ಕಾರ್ಯಕ್ರಮ.
ಮೊಟ್ಟ ಮೊದಲು, ಗುರು (ಕ್ರಿಯಾ) ಮೂರ್ತಿಯು ಶ್ರೀ ಬಸವೇಶ್ವರ ಪೂಜಾವ್ರತವನ್ನು ಮಾಡಿ ೧೦೮ ಮಂತ್ರ ಜಪ ಮಾಡಿದಾಗ ಏರಿಸಿದ ಪತ್ರ-ಪುಷ್ಪಗಳನ್ನು ಬಸವ ಪ್ರಸಾದವಾಗಿ ತಲೆಯ ಮೇಲೆ ವೃಷ್ಟಿಸಬೇಕು. ಮನೆಯವರು, ಮಕ್ಕಳು, ನೆರೆದವರು ಮುಂತಾದ ಎಲ್ಲರೂ ಪತ್ರ-ಪುಷ್ಪಗಳನ್ನು ಮಸ್ತಕಕ್ಕೆ, ಆತನು ಎರಡೂ ಕೈಗಳಿಂದ ಹಿಡಿದುಕೊಂಡ ಇಷ್ಟಲಿಂಗಕ್ಕೆ, ಆತನ ಚರಣಕ್ಕೆ ಏರಿಸಬೇಕು. ಆಗ ಈ ಹಾಡನ್ನು ಹೇಳಬೇಕು.
ಹೂವ ಸೂರ‍್ಯಾಡೋಣ.
ಹೂವ ಸೂರ‍್ಯಾಡೋಣ ಶ್ರೀ ಶರಣನ ಮೇಲೆ
ಬಸವ ಕಂದನ ಮೇಲೆ ಹೂವ ಸೂರ‍್ಯಾಡೋಣ
ಗುರುಬಸವಣ್ಣನ ಪಥದಲಿ ಸಾಗುತ
ಅರಿವಿನ ನಿಲುವನು ಪಡೆದ ಸದ್ಭಕ್ತನ ಮೇಲೆ
ಕರ್ತನಿಗಲ್ಲದೆ ಕುಚ್ಛಿತಗೆರಗೆನು
ಎಂದು ಛಲವ ತೊಟ್ಟ ವೀರಮಹೇಶನ ಮೇಲೆ
ನಾನು ಎನ್ನುವ ಹಮ್ಮನು ಹರಿಯುತ
ದೇವನಿಗೊಲಿದಿಹ ಪರಮ ಪ್ರಸಾದಿಯ ಮೇಲೆ
ಅಂಗದ ಗುಣವಳಿದು ಲಿಂಗಭಾವವು ಬಲಿದು
ಲಿಂಗದೇಹಿಯಾಗಿಹ ಪ್ರಾಣಲಿಂಗಿಯ ಮೇಲೆ
ಸತಿಸುತ ಮಿತ್ರರ ಮೋಹವ ಛೇದಿಸಿ
ದೇವಗೆ ಸತಿಯಾದ ದಿವ್ಯ ಶರಣನ ಮೇಲೆ
ಭವಬಾಧೆ ಗೆಲಿದು ಶಿವಭಾವ ಬಲಿದು
ಶ್ರೀ ವಿಭೂತಿ ವೀಳ್ಯ ಪಡೆದ ಐಕ್ಯನ ಮೇಲೆ
ಶರಣ ಮಂಗಲ
ಈಗ ವಿಭೂತಿ ವೀಳ್ಯವನ್ನು ಪಡೆದ ಶರಣನಿಗೆ ಮಂಗಲಾರತಿಯನ್ನು ಮಾಡಬೇಕು.
ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
ಹರಸಿರಿ ಮುಕುತಿಯ ಶ್ರೀ ಶರಣನಿಗೆ
ಜನ್ಮಾಂತರದ ಭವ ಹರಿಯಲೆಂದು
ಗುರು ಬಸವಣ್ಣನ ರಕ್ಷೆಯು ಇರಲೆಂದು
ದೇವನ ಒಲುಮೆಯು ಧಾರೈಸಲೆಂದು
ಚಿರಮುಕುತಿ ಸಂಪದ ನಿಮಗಾಗಲೆಂದು
ನೊಸಲಲಿ ವಿಭೂತಿ ಕೊರಳಲಿ ರುದ್ರಾಕ್ಷಿ
ಹಸ್ತಾಬ್ಬದಲಿ ಪರತರ ಇಷ್ಟಲಿಂಗ
ಅಷ್ಟಾವರಣದ ಶಿವರಕ್ಷೆ ಹೊಂದಿಹ
ನಿಷ್ಠೆಯ ಶರಣಗೆ ಮಂಗಲ ಮಾಡಿರಿ
ಲೋಕದ ಸುಳಿಗೆ ಮರಳದಿರೆಂದು
ವಿಭೂತಿ ವೀಳ್ಯವ ಕೊಡುತಿಹೆವಿಂದು
ಉರಿಯುಂಡ ಕರ್ಪೂರದಂತಾಗಲೆಂದು
ಪರಶಿವನೊಡಲಲಿ ಬಯಲಾಗಿರೆಂದು - ಜಗದ್ಗುರು ಮಾತೆ ಮಹಾದೇವಿ
ಶರಣರಿಗೆ ಮಂಗಲಾರತಿ ಮಾಡಿದ ಮೇಲೆ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಮಹಾಮಂಗಲವನ್ನು ಮಾಡಬೇಕು. ಜಯಕಾರವನ್ನು ಮಾಡಬೇಕು.
ಮಹಾಮಂಗಲ
ಓಂ ಗುರು ಬಸವಪ್ರಭು, ವರಗುರು ಶರಣವಿಭು
ಆಶ್ರಿತಜನ ಸಂರಕ್ಷಕ, ಸದ್ಗುರು ಬಸವಪ್ರಭು ವರಗುರು ಶರಣ ವಿಭು
ಶರಣಲೋಲನು ನೀ ಪರಮ ಪುರುಷನು ನೀ
ಕರುಣಾಸಿಂಧೂ ನೀ ದೀನರ ಬಂಧು ನೀ
ಸುಭಗಗಾತ್ರನು ನೀ ಪ್ರೇಮ ನೇತ್ರನು ನೀ
ಪರಮಚರಿತನು ನೀ ಜ್ಞಾನಭರಿತನು ನೀ
ಭವಭಯ ತಾರಕನೆ ನವಪಥದಾಯಕನೆ
ಹರಗಣ ತಾರೆಗಳಾ ನಡುವಿನ ಚಂದಿರನೇ
ಮಾತಾಪಿತನೂ ನೀ ಬಂಧು ಬಳಗವು ನೀ
ಭಕ್ತಜನ ಮನೋರಾಜಿತ ಮಂತ್ರಪುರುಷನು ನೀ
ಮೋಹರಹಿತನು ನೀ ಮಮತಾ ಸಹಿತನು ನೀ
ಮಾಯಾದೂರಕನೀ ಮುಕುತಿಯದಾಯಕ ನೀ
ಮನುಕುಲ ಜ್ಯೋತಿಯು ನೀ ಕ್ರಾಂತಿಯ ವೀರನು ನೀ
ಶಾಂತಿಯ ಹೊನಲನು ಹರಿಸಲು ಬಂದ ಸಚ್ಚಿದಾನಂದಸುತ ನೀ
ಮಂಗಲ ಶ್ಲೋಕ
ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಪರಶಿವನ ನಿಜ ತೇಜ
ಜಯತು ಕರುಣಾಸಿಂಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀಗುರು ಬಸವಾ
ಜಯಗುರು ಬಸವೇಶ ಹರಹರ ಮಹಾದೇವ - ಎಂದು ಸಾಮೂಹಿಕ ಜಯಘೋಷ ಮಾಡಬೇಕು. ವಿಶ್ವಗುರು ಬಸವೇಶ್ವರ ಮಹಾತ್ಮಾಕಿ ಜೈ - ಎನ್ನಬೇಕು.
ಗುರು (ಕ್ರಿಯಾ) ಮೂರ್ತಿಯು ವಿಭೂತಿ-ವೀಳ್ಯ ಪಡೆದವರಿಗೆ ಮೊದಲು ತೀರ್ಥ-ಪ್ರಸಾದ (ಕರುಣ ಪ್ರಸಾದ) ಕೊಡಬೇಕು. ಪಡೆದುಕೊಂಡಾದ ಮೇಲೆ ಶರಣರು ತಮ್ಮ ಶಕ್ತಾನುಸಾರ ಕಾಣಿಕೆಯನ್ನು ಫಲ-ಪುಷ್ಪಮಾಲಿಕೆಯೊಡನೆ ಸಮರ್ಪಿಸಬೇಕು. ಗುರುಮೂರ್ತಿಯು ನಂತರ ಎಲ್ಲರಿಗೂ ತೀರ್ಥಪ್ರಸಾದ ಕೊಡಬೇಕು. ಸಮಾಗಮಗೊಂಡ ಎಲ್ಲ ಶರಣವೃಂದಕ್ಕೆ ಪ್ರಸಾದದ ಆರೋಗಣೆ ಮಾಡಿಸಬೇಕು. ಈ ವಿಶೇಷ ಮತ್ತು ಶುಭಪ್ರಸಂಗದ ನಿಮಿತ್ತ ಚಿಕ್ಕ ಚಿಕ್ಕ ವಚನ ಗ್ರಂಥಗಳನ್ನು, ಬಸವ ಭಾವಚಿತ್ರಗಳನ್ನು ನೆನಪಿನ ಕಾಣಿಕೆಗಳನ್ನಾಗಿ ಬಂದವರಿಗೆಲ್ಲ ವಿತರಿಸಬಹುದು. ಇದು ಆದರ್ಶ ಮತ್ತು ಸ್ಮರಣೀಯ ಆಚರಣೆಯಾಗುವುದು.
ವಿಭೂತಿ ವೀಳ್ಯ ಪಡೆದ ನಂತರ ವ್ರತಧಾರಿ ಶರಣರು ತಪ್ಪದೆ ಎರಡೂ ಹೊತ್ತು ಇಷ್ಟಲಿಂಗಾರ್ಚನೆ ಮಾಡಬೇಕು. ಮಿತಾಹಾರ ಸೇವನೆ ಮಾಡುತ್ತಾ ವಚನ ಗ್ರಂಥಾಧ್ಯಯನ ಮಾಡಬೇಕು. ತಮಗೆ ಓದಲು ಸಾಧ್ಯವಿದ್ದರೆ ಓದಬೇಕು. ಇಲ್ಲವೇ ಬೇರೆಯವರ ಮೂಲಕ ಓದಿಸಿ ಕೇಳಬೇಕು. ಪ್ರಾರ್ಥನೆ - ಮಂತ್ರಜಪಗಳ ಧ್ವನಿ ಸುರುಳಿಗಳನ್ನು ಕೇಳಬೇಕು. ತಮ್ಮ ಚಿಂತನೆಯನ್ನು ಗಾಢಗೊಳಿಸಿಕೊಂಡು ಮಂತ್ರಧ್ಯಾನದಲ್ಲಿ ನಿರತರಾಗಬೇಕು.
ವಿಭೂತಿ ವೀಳ್ಯವನ್ನು ಹೊಂದಿ ಸಚ್ಚಿಂತನೆಯಲ್ಲಿ ಇರಬೇಕಾದ ಶರಣನು ಆಗಾಗ ಹಾಡಿಕೊಳ್ಳಬೇಕಾದ ಗೀತೆಗಳನ್ನು ಕೆಲವನ್ನು ಇಲ್ಲಿ ಕೊಡಲಾಗಿದೆ.
ದೇವ ನೀನು ರಕ್ಷಿಸಲ್ಪ ಜೀವಿ ನಾನು ಕರುಣಿ ನೀನು
ಸಾವು ಹುಟ್ಟುಗಳಿಗೆ ಬೆದರಿ ಹೆದರುತೈದೆನೆ
ಎಡಹಿ ಬೀಳಬಲ್ಲೆ ನಾನು ಒಡನೆ ಏಳಲರಿಯೆನಯ್ಯ
ನುಡಿಯ ಬಲ್ಲೆನಯ್ಯ ಮಿಗಿಲು ನಡೆಯಲಾರೆನು
ನುಡಿದ ಹಾಗೆ ನಡೆದವರ ಒಡೆಯ ನೀನು ಒಲ್ಲೆಯವರ
ನಡೆಗಳಿಲ್ಲದಧಮ ನಾನು ರಕ್ಷಿಸೆನ್ನನು
ಭಕ್ತಿ ಎನಗೆ ಇಲ್ಲವಯ್ಯ ನಿತ್ಯಜ್ಞಾನವಿಲ್ಲವೆನಗೆ ಮತ್ತೆ
ವಿರತಿಯೆನಗೆ ಮೊದಲೆ ತಾನು ಇಲ್ಲವು
ಕರ್ತೃ ನೀನೇ ಒಲಿದು ನಿಮ್ಮ ಚಿತ್ರದಲ್ಲಿ ಕರುಣ ಹುಟ್ಟಿ
ಎತ್ತಿ ರಕ್ಷಿಸೆನ್ನನಲ್ಲದಿರಲು ಕೆಡುವೆನು
ನರಶರೀರವೆಂಬ ದೊಡ್ಡ ಹಿರಿಯ ಕೊಳದೊಳಗೆ ಸಿಕ್ಕಿ
ಕರಗಿ ಕೊರಗಿ ಮರುಗಿ ಅಳಲಿ ಬಳಲುತ್ತೈದೆನೆ
ಮರುಕವೇಕೆ ಇಲ್ಲವಯ್ಯ ಕರುಣಿಯೆಂಬರಯ್ಯ ನಿಮ್ಮ
ಕೊರತೆ ನಿಮಗೆ ಬಾರದಂತೆ ರಕ್ಷಿಸೆನ್ನನು
ಧೀರನಲ್ಲವಯ್ಯ ನಾನು ವೀರನಲ್ಲವಯ್ಯ ನಾನು
ಘೋರ ತನುವ ತೊಡಿಸಿ ಎನ್ನನಿಲ್ಲಿ ಬಿಟ್ಟಿರಿ
ಮಾರಹರನೆ ನಿನ್ನನುಳಿದು ದೂರ ಕೇಳ್ವರಾರು ಎನ್ನ
ಮಾರವೈರಿ ಸಲಹು ಕರುಣ ಶರಧಿ ಚಂದ್ರಮ
ಕರುಣಿ ನೀನೆ ಬಲ್ಲೆ ನಾನು ಹರಗಣೆನಲು ಕರುಣಿಸಿದಿರಿ
ಇರದೆ ಅಹರ ಪ್ರಹರವೆನಲು ಒಡನೆ ಒಲಿದಿರಿ
ಸಂದ ಕುಸುಮ ಹರನಿಗೆನಲು ಕರುಣಿಸಿದಿರಿ ಬಿಡದೆ ಎನ್ನ
ಕರುಣಿಸಯ್ಯ ಪರಮ ಷಡಕ್ಷರಿಯ ಲಿಂಗವೆ - ಶ್ರೀ ಮುಪ್ಪಿನ ಷಡಕ್ಷರಿ.
ಬದುಕಿದೆ ನಾಂ ಬದುಕಿದೆ ! ಸತ್ಯ
ಸದಮಲ ಸಂಗನ ಬಸವನಂಘ್ರಿಯ ಕಂಡು
ಗುರು - ಬಾಗಿ ಬಂದವರ ತನ್ನಂತೆ ಮಾಡುವ ಕರ್ತೃ
ಶ್ರೀ ಗುರು ಸಂಗನ ಬಸವನಂಘ್ರಿಯ ಕಂಡು
ಲಿಂಗ - ಕಂಗಳಾಲಯದಿಷ್ಟಲಿಂಗಕ್ಕೆ ತನುವ ಸ
ರ್ವಂಗಯ್ಯ ಸಂಗನ ಬಸವನಂಘ್ರಿಯ ಕಂಡು
ಜಂಗಮ - ಮಂಗಳಾತ್ಮಕ ಪರತತ್ತ್ವವೆ ನಿರುಪಾಧಿ
ಜಂಗಮ ಸಂಗನ ಬಸವನಂಘ್ರಿಯ ಕಂಡು
ಪಾದೋದಕ - ಸ್ವಯಚರಪರದ ಶ್ರೀ ಚರಣದಿಂದೊಗೆದ ಚಿ
ನ್ಮಯ ತೀರ್ಥ ಸಂಗನಬಸವನಂಘ್ರಿಯ ಕಂಡು
ಪ್ರಸಾದ - ತನುಶುದ್ಧಮನಸಿದ್ಧ ಭಾವ ಪ್ರಸಿದ್ಧ ಚಿದ್
ಫನಶೇಷ ಸಂಗನ ಬಸವನಂಘ್ರಿಯ ಕಂಡು
ವಿಭೂತಿ - ಅಸಮ ತ್ರೈಪ್ರಣವ ರೂಪಕದ ತ್ರಿಪುಂಡ್ರ ಚಿದ್
ಭಸಿತ ಶ್ರೀ ಸಂಗನ ಬಸವನಂಘ್ರಿಯ ಕಂಡು
ರುದ್ರಾಕ್ಷಿ - ಚರಣ ಸಖನ ನಾಮವೆರಸಿದ ಮಾಲೆಯ
ವರಕಳೆ ಸಂಗನ ಬಸವನಂಘ್ರಿಯ ಕಂಡು
ಮಂತ್ರ - ಲಿಂಗಾಭಿದಾನ ಷಣ್ ಮಂತ್ರವೇ ಚಿತ್ ಪ್ರಾಣ
ಲಿಂಗ ಶ್ರೀ ಸಂಗನ ಬಸವನಂಘ್ರಿಯ ಕಂಡು
ಲಿಂಗಾಚಾರ ಸಾರ ಸದ್ಗುರು ಚೆನ್ನ
ವೀರಶ್ರೀ ಸಂಗನ ಬಸವನಂಘ್ರಿಯ ಕಂಡು - ಮೈಲಾರ ಬಸವಲಿಂಗ ಶರಣರು.
ಶರಣು ಶ್ರೀ ಗುರುಲಿಂಗ ಶರಣು ಸಜ್ಜನ ಸಂಗ
ಶರಣು ಜಂಗಮಲಿಂಗ ಚೆಲ್ವ ಲಿಂಗಯ್ಯ || ಪಲ್ಲವಿ ||
ನಿತ್ಯ ನಿರ್ಮಲಮೂರ್ತಿ ಮತ್ತಾರಿನ್ನೆನಗೆ ಗತಿ
ಅತ್ಯಂತ ಕರುಣದಿಂದ ನೋಡು ಲಿಂಗಯ್ಯ
ಸತ್ಯ ಶರಣರ ಮನೆಯ ನೃತ್ಯರಾಳಿನಾಳಿನ
ತೊತ್ತೆನ್ನ ಮಾಡಿ ಸಲಹು ಚೆಲ್ವ ಲಿಂಗಯ್ಯ
ಘೋರ ಸಂಸಾರವೆಂಬ ಹಿರಿದಡವಿಯೊಳ್ಳಿದ್ದು
ದಾರಿ ತಪ್ಪಿದೆ ನಿಮ್ಮ ಅರಿಯದೆ ಲಿಂಗಯ್ಯ
ಮಾರಾರಿ ಎನ್ನ ಗುಣವನಾರಯ್ಯದಿರು ವಿಧಿ
ಮೀರಲು ಕೃಪಾಬಿ ನೀನು ಚೆಲ್ವಲಿಂಗಯ್ಯ
ಬೆಟ್ಟಕ್ಕೆ ಬಾಣ ಹೂಡಿಬಿಟ್ಟರೆ ತಪ್ಪುವುದೇ
ಕೆಟ್ಟವರು ಉಂಟೆ ನಿಮ್ಮ ಕೂಡಿ ಲಿಂಗಯ್ಯ
ಪಟ್ಟಿಯಿಂ (ಫಟ್ಟಾಗಿ) ಪಟ್ಟಗಟ್ಟಿದ ಮೇಲೆ
ಬಿಟ್ಟು ಹೋಗುವರೇನೋ ಚೆಲ್ವಲಿಂಗಯ್ಯ
ಜಲಧಿ ಮೀರುಕ್ಕಿದರೆ ಮೊಲೆಹಾಲು ಕೊಲುವರೆ
ಒಳಗಣ ಒಡಲಗಿ ಸುಟ್ಟರೆ ಲಿಂಗಯ್ಯ
ಸೇರಿದೆನ್ನಯ್ಯ ಹಸ್ತ ಸೂರೆಗೊಂಡಿರ್ದ ಮೇಲೆ
ಬೇರೆಂಬುದೆನ್ನೊಳುಂಟೆ ನೋಡು ಲಿಂಗಯ್ಯ
ಸಾರಿದೈನೆಲೆಯ ಚನ್ನವೀರಾರ್ಯ ಎನ್ನ ನೀಂ
ಕಾರುಣ್ಯನಿಧಿಯೆ ಕಾಯೊ ಚೆಲ್ವ ಲಿಂಗಯ್ಯ - ಮೈಲಾರ ಬಸವಲಿಂಗ ಶರಣರು. (ಶಿವಾನುಭವ ದರ್ಪಣ - ೪೦ ಪುಟ ೧೯೨)
ಸಮಾರೋಪ
ವಿಭೂತಿ ವೀಳ್ಯ ಎಂಬ ಧಾರ್ಮಿಕ ವಿಧಿಯ ಮೂಲಕ ಲಿಂಗೈಕ್ಯರಾಗಲು ಒಪ್ಪಿಗೆ ಪಡೆಯುವ ವಿಧಾನ ಬಹಳ ಶ್ರೇಯಸ್ಕರವಾದುದು. ಜೈನ ಧರ್ಮದಲ್ಲಿ ಈಗಲೂ ಬಳಕೆಯಲ್ಲಿರುವ ಸಲ್ಲೇಖನ ವ್ರತದೊಡನೆ ಇದನ್ನು ಹೋಲಿಸಬಹುದಾದರೂ ಎರಡರ ನಡುವೆ ಬಹಳ ವ್ಯತ್ಯಾಸಗಳಿವೆ. ಸಲ್ಲೇಖನ ವ್ರತದಲ್ಲಿ ಶರೀರಕ್ಕೆ ವಿಪರೀತ ಕಿರುಕುಳ ಕೊಡುವ ಪ್ರಯತ್ನವಿರುತ್ತದೆ. ವಿಭೂತಿ ವೀಳ್ಯದಲ್ಲಿ ಆ ಕಿರುಕುಳ ಇರುವುದಿಲ್ಲ.
ಮನುಷ್ಯನಿಗೆ ಎಷ್ಟು ಕಾಲ ಜೀವಿಸಿ, ಶರೀರ ಮೆತ್ತಗಾಗಿ ಸಾಕಷ್ಟು ಹಿಂಸೆಯಾಗುತ್ತಿದ್ದರೂ ಬದುಕಬೇಕೆಂಬ ಆಸೆ ಕೊನೆಗೊಳ್ಳದು. ಇದರಿಂದ ತನಗೂ ಬಾಧೆ, ಸೇವೆ ಮಾಡುವ ಇತರರಿಗೂ ತೊಂದರೆ. ಇನ್ನು ಪ್ರೀತಿಯಿಂದ ನೋಡಿಕೊಳ್ಳುವವರು ಇಲ್ಲದೆ ಇದ್ದರಂತೂ ಅವರ ಪಾಡು ಅಸಹನೀಯ. ಈ ವಿಭೂತಿ ವೀಳ್ಯವು ಗೌರವಯುತವಾಗಿ ಮತ್ತು ನಿರ್ಲಿಪ್ತವಾಗಿ ಸಾಯಲು ವ್ಯಕ್ತಿಯ ಚಿಂತನೆಯನ್ನು ಪಕ್ವಗೊಳಿಸುತ್ತದೆ.
ಒಂದು ಊರಿನಲ್ಲಿ ಒಬ್ಬ ಅಜ್ಜಿಗೆ ೧೧೫ ವರ್ಷಗಳಾದುವು. ಇನ್ನೂ ಆರೋಗ್ಯ ಚೆನ್ನಾಗಿಯೇ ಇತ್ತು. ಅದರ ಕಣ್ಣೆದುರಿಗೆ ಮಕ್ಕಳು ಲಿಂಗೈಕ್ಯರಾದರು. ಮಕ್ಕಳು - ಮೊಮ್ಮಕ್ಕಳು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ನಾನು ಪ್ರವಚನಕ್ಕೆ ಹೋದೆ. ಮುಕ್ತಾಯಕ್ಕೆ ಪೂಜ್ಯ ಅಪ್ಪಾಜಿ ಆಗಮಿಸಿದರು. ಅವರ ಮನೆಯಲ್ಲಿ ಪಾದಪೂಜೆ ಇಟ್ಟಿದ್ದರು. ಅಜ್ಜಿಯೇ ಪೂಜ್ಯರ ಪಾದಪೂಜೆ ಮಾಡಿದರು. ತೀರ್ಥ (ಕರುಣ) ಪ್ರಸಾದ ತಗೊಳ್ಳುವಾಗ ಇನ್ನು ನನಗೆ ಅಪ್ಪಣೆ ಕೊಡಿ' ಎಂದು ಪೂಜ್ಯರನ್ನು ಕೇಳಿದರು. ಅವಸರವೇಕೆ ದೇವರ ಕರೆ ಬಂದಾಗ ಹೋಗುವಿರಂತೆ ಎಂದು ತಲೆಯ ಮೇಲೆ ಕೈಯಿಟ್ಟು ಪೂಜ್ಯ ಅಪ್ಪಾಜಿ ಆಶೀರ್ವದಿಸಿದರು. ನಂತರ ಒಂದು ವಾರದ ಮೇಲೆ ಅಜ್ಜಿ ಹೇಳಿದರಂತೆ. 'ಸಾಯುವ ಮುನ್ನ ದೀಕ್ಷಾಗುರುವಿನ ದರ್ಶನ ತೆಗೆದುಕೊಳ್ಳಬೇಕೆಂಬ ಆಸೆ ಇತ್ತು. ಅದು ಪೂರೈಸಿತು. ಇನ್ನು ನಾನು ಆಹಾರ ಕಮ್ಮಿ ಮಾಡುತ್ತೇನೆ. ಮನೆಯಲ್ಲಿ ಭಜನೆ ಇಡಿಸಿರಿ. ದಿನಾಲೂ ಸ್ನಾನಪೂಜೆ ಆಗಬೇಕು. ಕಡೆಯತನಕ ಲಿಂಗತೀರ್ಥಪ್ರಸಾದ ಮಾತ್ರ ತಪ್ಪಿಸಬೇಡಿರಿ.' ಎಂದು ವ್ರತ ಸ್ವೀಕಾರ ಮಾಡಿಬಿಟ್ಟರಂತೆ. ಭಜನೆ ಮಂತ್ರ ಜಪ ಕೇಳುತ್ತಾ ಪ್ರಾಣಬಿಟ್ಟರಂತೆ. ಇದನ್ನು ನಂತರ ಮೊಮ್ಮಕ್ಕಳು ಹೇಳಿದಾಗ ಆನಂದ ಆಶ್ಚರ್ಯ ಉಂಟಾದುವು. ಬೇಡವಾದ ಶರೀರವನ್ನು ತ್ಯಾಗ ಮಾಡಲು ಒಂದು ಸಾತ್ವಿಕ ಧಾರ್ಮಿಕ ವಿಧಿ ಇದ್ದರೆ ಎಷ್ಟು ಚೆನ್ನ ಎಂದು ಅಂದಿನಿಂದಲೂ ಆಲೋಚಿಸುತ್ತಿದ್ದೆ. ಲಿಂಗವಂತ ಧರ್ಮದಲ್ಲಿ ಇಂಥದೊಂದು ವಿಧಿ ಇದೆ ಎಂಬುದೇ ನನಗೆ ತಿಳಿದಿರಲಿಲ್ಲ. ಏಕೆಂದರೆ ಯಾರೂ ಆಚರಣೆ ಮಾಡಿದ್ದು ನೋಡೇ ಇಲ್ಲ. ಸ್ವಾಮಿಗಳು ಮಠಾಧಿಪತಿಗಳು ಅನೇಕರು ರೋಗರುಜಿನಗಳಿಂದ ಒದ್ದಾಡಿ, ಹುಳುಬಿದ್ದು, ಹುಚ್ಚು ಹಿಡಿದು, ಪಡಬಾರದ ಯಾತನೆ ಪಟ್ಟು, ಇನ್ನಿತರರಿಗೂ ಯಾತನೆ ಕೊಟ್ಟು ಸತ್ತಿರುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಲಿಂಗಾಯತ ಸಂಸ್ಕಾರಗಳು ಎಂಬ ಪುಸ್ತಕದಲ್ಲಿ ಇಂಥದೊಂದು ಧಾರ್ಮಿಕ ವಿಧಿ ಇದೆ ಪ್ರಸ್ತಾಪವಾಗಿರುವುದು ಕಂಡು (ಗರ್ಭಲಿಂಗಧಾರಣದಂತೆ) ಈ ವಿಭೂತಿ ವೀಳ್ಯ ಪದ್ಧತಿಯು ಆಚರಣೆಯಿಂದ ಮಾಯವಾಗಿರುವುದನ್ನು ಗಮನಿಸಿ ಪುನಃ ಆಚರಣೆಗೆ ತರಬೇಕೆಂದು ಈ ಪುಸ್ತಕದಲ್ಲಿ ಸವಿವರವಾಗಿ ಬರೆದಿದ್ದೇನೆ. ಇದರ ಪ್ರಯೋಜನಗಳು ಹಲವಾರು.
೧. ಸಾಯುವ ಮುನ್ನ ತನಗೆ ಇಷ್ಟವಾದವರನ್ನೆಲ್ಲ ಭೇಟಿ ಮಾಡಬಹುದು. ವಿಭೂತಿ ವೀಳ್ಯಕ್ಕೆ ಆಮಂತ್ರಿಸುವ ಮೂಲಕ.
೨. ಮಕ್ಕಳು ಮರಿಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟು ತಾನು ವೀಕ್ಷಿಸಬಹುದು, ನಿರ್ಲಿಪ್ತನಾಗಬಹುದು.
೩. ಜೀವನದ ಅಂತಿಮ ದಿನಗಳನ್ನಾದರೂ ಪರಿಶುದ್ಧವಾಗಿ, ದಿವ್ಯವಾಗಿ ಕಳೆಯಬಹುದು. ಧರ್ಮಸಾಹಿತ್ಯದ ಪಠಣ, ಪಾರಾಯಣಕ್ಕೆ ಅನುವು ದೊರೆಯುವುದು.
೪. ಪುನರ್ಜನ್ಮ ಬಂದರೆ ಒಳ್ಳೆಯ ಜನ್ಮ ಬರುವುದು, ಐಕ್ಯನಾದರೆ ಜನ್ಮಾಂತರವನ್ನೇ ಗೆಲ್ಲಬಹುದು.
೫. ಲೋಕದ ದೃಷ್ಟಿಯಲ್ಲೂ ಈ ನಿರ್ಲಿಪ್ತ ಬದುಕು ಗೌರವವನ್ನು ತಂದುಕೊಡುವುದು.
೬. ಕೆಲವೊಮ್ಮೆ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ಬಳಲುವವರು ಸಾಯುವವರೆಗೂ ಭಯಂಕರ ತಾಪದಾಯಕವಾದ ಚಿಕಿತ್ಸೆಗಳನ್ನು ಮಾಡಿಸಿಕೊಂಡು ನರಳುವ ಬದಲು ದೇವರ ಮೇಲೆ ಭಾರ ಹಾಕಿ, ನಿತ್ಯವೂ ತೀರ್ಥ-ಪ್ರಸಾದಗಳನ್ನು ಸೇವಿಸುತ್ತ ಪ್ರಾರ್ಥನೆ - ಭಜನೆ - ಧರ್ಮಶಾಸ್ತ್ರ ಪಠಣ - ಪಾರಾಯಣ - ಮಂತ್ರ ಜಪ ಕೇಳುತ್ತಾ ಶರೀರದ ಬಾಧೆಯನ್ನು ಮರೆತು ನೆಮ್ಮದಿಯಿಂದ ಬದುಕಬಹುದು.
ಕೆಲವೊಂದು ಕಡೆ ತಪ್ಪು ನಂಬಿಕೆ, ತಪ್ಪು ಆಚರಣೆ ಇದ್ದವಂತೆ. ಈ ರೀತಿ ವಿಭೂತಿ ವೀಳ್ಯವನ್ನು ಪಡೆದುಕೊಂಡ ವ್ಯಕ್ತಿ ರೋಗದಿಂದ ಗುಣಮುಖನಾಗಿ ಆರೋಗ್ಯವಂತನಾಗಿಬಿಟ್ಟರೆ ಆಗ ಅವರನ್ನು ಒಟ್ಟು ಕಾಡಿನಲ್ಲಿ ಬಿಟ್ಟು ಬರುತ್ತಿದ್ದರಂತೆ. ಇಂಥ ಆಚರಣೆ ತಪ್ಪು, ಅವರು ಚೇತರಿಸಿಕೊಂಡು ಶರಣ ಜೀವನವನ್ನು ನಡೆಸಿದರೆ ತಪ್ಪೇನೂ ಇಲ್ಲ.
ಸಂಪ್ರದಾಯದಲ್ಲಿ ಬದಲಾವಣೆ
೧. ವಿಭೂತಿ ವೀಳ್ಯ ಪಡೆಯುವ ಶರಣನನ್ನು ಮಲಗಿಸುವ ಚೌಕೋನಾಕಾರದ ಚಿತ್ರ ಬರೆದಾಗ, ತಲೆಯು ದಕ್ಷಿಣ ದಿಕ್ಕಿಗೆ ಕಾಲು ಉತ್ತರ ದಿಕ್ಕಿಗೆ ಆಗುವಂತೆ ಬರೆಯಬೇಕೆಂದು ಕೆಲವರ ನಂಬಿಕೆ. ದಕ್ಷಿಣವು ಯಮನ ದಿಕ್ಕು ಎಂದು ಅವರ ಕಲ್ಪನೆ. ದಿಕ್ಕು ದಿಕ್ಕುಗಳಲ್ಲಿ ಯಾವುದೇ ಶ್ರೇಷ್ಠ - ಕನಿಷ್ಠ ಎಂಬ ಭಾವ ಲಿಂಗವಂತ ಧರ್ಮದಲ್ಲಿ ಇರಕೂಡದು. ಆದ್ದರಿಂದ ಮನೆಯಲ್ಲಿ ಸ್ಥಳಾವಕಾಶ ಹೇಗೆ ಇರುತ್ತದೋ ಹಾಗೆ ಮಂಡಲ ರಚಿಸಿ, ಮಲಗಿಸಬಹುದು.
೨. ಮಲಗಿಸಿದ (ಅಥವಾ ಕುಳಿತು ಕೊಳ್ಳುವ) ಶರಣನ ತಲೆಯ ಮೇಲೆ ಜಂಗಮ ಪಾದವಿಟ್ಟು ಪೂಜಿಸುವ ಪದ್ಧತಿ ಇದೆ. ಇದು ಅಗತ್ಯವಿಲ್ಲ. ಗುರು ಬಸವಣ್ಣ - ಇಷ್ಟಲಿಂಗ
ಜಂಗಮದ ಪಾದತೀರ್ಥ ಮೂರೂ ಸೇರಿಸಿ ಚಿಮುಕಿಸಿದರೆ ಸಾಕು. ಪಾದತೀರ್ಥದ ಬದಲಿಗೆ ಗುರು (ಕ್ರಿಯಾ ಅಥವಾ ಜಂಗಮ) ಮೂರ್ತಿಯ ಹಸ್ತೋ (ಮಂತ್ರೋ)ದಕವೇ ಸಾಕಾದೀತು.
೩. ವಿಭೂತಿ ವೀಳ್ಯ ಪಡೆದ ಶರಣನು ಲಿಂಗೈಕ್ಯನಾಗುವವರೆಗೆ ದಿನಾಲೂ ಜಂಗಮರನ್ನು ಮನೆಗೆ ಬರಮಾಡಿಕೊಂಡು ಪಾದಪೂಜೆ ಮಾಡಿಸಿ, ಅವರ ಪ್ರಸಾದ ಸ್ವೀಕಾರದ ನಂತರ ಉಳಿದವರು ಮಾಡಬೇಕೆಂಬುದು ಸಂಪ್ರದಾಯಿಕವಾಗಿ ಆಚರಣೆಯಲ್ಲಿದೆ. ಇದು ಕಷ್ಟಸಾಧ್ಯ. ಇಲ್ಲಿ ಸಾಯಲಿರುವ ವ್ಯಕ್ತಿಯನ್ನೂ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಅಣಿಗೊಳಿಸುವುದು ಮುಖ್ಯವೇ ವಿನಾ ಉಳಿದುದಲ್ಲ. ದಿನಾಲೂ ಜಂಗಮರನ್ನು ಬರಮಾಡಿಕೊಳ್ಳುವುದು ಆಗದ ಮಾತು. ವಿಭೂತಿ ವೀಳ್ಯದ ದಿವಸ ಬಂದಿರುವರು. ನಂತರ ಲಿಂಗೈಕ್ಯರಾದಾಗ ಅಂತ್ಯ ಸಂಸ್ಕಾರ ಮಾಡಲು ಕರೆಸಿದರೆ ಸಾಕು. ಮಧ್ಯದ ಅವಧಿಯಲ್ಲಿ ಮನೆಯವರೇ ಲಿಂಗಪೂಜೆ - ಬಸವೇಶ್ವರ ಪೂಜೆ - ವಚನಾಧ್ಯಯನ - ಮಂತ್ರಜಪ, ಮಾಡಲು ನೆರವಾದರೆ ಸಾಕು. ತೀರಾ ಮೆತ್ತಗಾದಾಗ ಮನೆಯಲ್ಲಿ - ಉಪಚಾರ ಮಾಡುವವರೇ ತೀರ್ಥಪ್ರಸಾದ ಕೊಟ್ಟರೆ ಆಗುವುದು.
೪. ಇಷ್ಟಲಿಂಗಾರ್ಚನೆ ಮಾಡುವ ಶಕ್ತಿ ಇರುವವರೆಗೂ ಅವರೇ ಮಾಡಿಕೊಳ್ಳಬೇಕು. ನಂತರ ಒಂದು ಸೂತ್ರ ಹಿಡಿದು ಅವರ ಪಕ್ಕ ಕುಳಿತು ಅವರ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿ, ತೀರ್ಥ ತೆಗೆದು ಅವರಿಗೆ ಕುಡಿಸಿ - ಪ್ರಸಾದ ತಿನ್ನಿಸಿ ಆ ಇಷ್ಟಲಿಂಗವನ್ನು ಪುನಃ ಅವರಿಗೆ ಕಟ್ಟಬೇಕು. ಸಾಯುವವರೆಗೂ ಈ ರೀತಿ ಪಾಲಿಸಬೇಕು.
ಮೃತ್ಯು ಎದುರಾದಾಗ
ಸಾವಿನ ಘಳಿಗೆ ಸಮೀಪಿಸುವಾಗ ಜೊತೆಗೆ ಇರುವವರು ಕೆಲವೊಂದು ಕಾರ್ಯಗಳನ್ನು ಮಾಡಬೇಕು. ಆಸ್ಪತ್ರೆಯಲ್ಲಿದ್ದರೂ ಜೊತೆಗೆ ಧರ್ಮಗುರು ಬಸವಣ್ಣನವರ ಭಾವಚಿತ್ರ ಒಯ್ದು ಇಟ್ಟುಕೊಂಡಿರಬೇಕು. ಮನೆಯಲ್ಲಿ (ಅಥವಾ ಆಸ್ಪತ್ರೆಯ ಕೋಣೆಯಲ್ಲಿ) ತಾವು ಇಷ್ಟಲಿಂಗಾರ್ಚನೆ ಮಾಡಿ, ಲಿಂಗತೀರ್ಥವನ್ನು ತೆಗೆದು ಒಂದು ಶೀಷೆಯಲ್ಲಿ ಇಟ್ಟುಕೊಂಡು ಒಯ್ದಿರಬೇಕು. ಬಸವ ಭಾವಚಿತ್ರವನ್ನು ಕಣ್ಣಿಗೆ ಸ್ಪರ್ಶಿಸಬೇಕು. ಅವರು ಧರಿಸಿದ ಇಷ್ಟಲಿಂಗವನ್ನೂ ಸ್ಪರ್ಶಿಸಬೇಕು. ಓಂ ಲಿಂಗಾಯ ನಮಃ ಹೇಳುತ್ತಾ ಶೀಷೆಯಲ್ಲಿ ತಂದಿದ್ದ ತೀರ್ಥವನ್ನು ಬಾಯೊಳಕ್ಕೆ ಹನಿ ಹನಿಯಾಗಿ ಬಿಡಬೇಕು.
ಭಕ್ತಿ ಎಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿ ಎಂಬ ಹಣ್ಣಾಯಿತ್ತು
ನಿಷ್ಪತ್ತಿ ಎಂಬ ಹಣ್ಣು ತಾನು
ತೊಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವಾ,
ತನಗೆ ಬೇಕೆಂದು ಎತ್ತಿಕೊಂಡ.
ಎಂದು ಮನಸ್ಸಿನಲ್ಲಿ ವಚನ ಪಠಣ ಮಾಡುತ್ತ 'ಧರ್ಮಗುರು ಬಸವಣ್ಣಾ, ಇವರು ಪುನಃ ಭವಕ್ಕೆ ಬರದಂತೆ, ಪರಮಾತ್ಮನಲ್ಲಿ ಉರಿಯುಂಡ ಕರ್ಪೂರದಂತೆ ಲೀನವಾಗುವಂತೆ ಅನುಗ್ರಹಿಸು” ಎಂದು ಪ್ರಾರ್ಥಿಸಬೇಕು.
ಗಂಗಾಜಲ ನಿಷೇಧ :
ಕೆಲವರು ಎಂದೋ ಬಾಯಿ ಬಂಧಿಸಿದ ತಾಮ್ರದ ಪುಟ್ಟ ತಂಬಿಗೆಯ ನೀರನ್ನು ಕಾಶಿಯಿಂದ ತಂದ ಗಂಗಾ ಜಲ ಎಂದು ಸಾಯುವಾಗ ಬಿಡುವುದುಂಟು. ಲಿಂಗವಂತರಿಗೆ ಜಡ ತೀರ್ಥಕ್ಷೇತ್ರದ ನೀರು ಪಾವನ ಜಲವಲ್ಲ. ಆದ್ದರಿಂದ ಅದನ್ನು ಕುಡಿಸಬಾರದು. ಇಷ್ಟಲಿಂಗಪೂಜೆ ಮಾಡಿದ ನಂತರ ಮೊದಲ ಸಲ ತೆಗೆದ ತೀರ್ಥವನ್ನು ತಾನು ಸ್ವೀಕಾರ ಮಾಡಿ, ಇನ್ನೊಂದು ಸಲ ತೆಗೆದು ಸಂಗ್ರಹಿಸಿಟ್ಟುಕೊಳ್ಳಬೇಕು ಅಥವಾ ಶ್ರೀ ಬಸವೇಶ್ವರ ಪೂಜಾವ್ರತ ಮಾಡಿ ಐದೂ ಅಂಗುಲಿಗಳಿಗೆ ಭಸ್ಮವನ್ನು ಧರಿಸಿ ೧೨ ಬಾರಿ ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂದು ಹೇಳಿ ಆ ಬೆರಳುಗಳನ್ನು ಒಂದು ಲೋಟದಲ್ಲಿ ತೆಗೆದುಕೊಂಡ ನೀರಿನಲ್ಲಿ ಅದ್ದಿ ಮಂತ್ರೋದಕ ಸಿದ್ದಪಡಿಸಬೇಕು ಅಥವಾ ಯಾರಾದರೂ ಮಹಾತ್ಮರು ಲಭ್ಯವಿದ್ದರೆ ಅವರ ಪಾದೋದಕ ಅಥವಾ ಮಂತ್ರೋ(ಹಸ್ತೋ)ದಕ ಪಡೆದುಕೊಂಡಿರಬೇಕು. ಅವಸರಕ್ಕೆ ಆಗಿಂದಾಗಲೇ ಸಹಾ ಮಂತ್ರೋದಕ ಸಿದ್ಧಪಡಿಸಬಹುದು. ಹೀಗೆ ಶರಣರಿಗೆ ಗುರು-ಲಿಂಗ-ಜಂಗಮೋದಕ ಪಾವನವಲ್ಲದೆ ಗಂಗಾಜಲವಲ್ಲ ಅಥವಾ ಯಾವುದೇ ಕ್ಷೇತ್ರದ ಜಡತೀರ್ಥವಲ್ಲ.
ಸಾವಿನ ಘೋಷಣೆ
ಪಂಚಭೂತಾತ್ಮಕ ಶರೀರವು ಪ್ರಾಣ-ಆತ್ಮ ವಿರಹಿತವಾಗಿ ಜಡವಾಗುವುದಕ್ಕೆ ಸಾವು ಎನ್ನುವರು. ಸಾಮಾನ್ಯ ಮಾನವರು ಸತ್ತಾಗ ಶರೀರದ ೯ ದ್ವಾರಗಳ ಮೂಲಕ ಪ್ರಾಣವಾಯುವು ಹೋಗುವುದು ಎಂಬ ನಂಬಿಕೆ ಪ್ರಚಲಿತವಿದೆ. ಅಧೋದ್ವಾರಗಳ ಮೂಲಕ ಅಂದರೆ ನಾಭಿಯಿಂದ ಕೆಳಗಿರುವ ಗುದ-ಗುಹ್ಯಗಳ ಮೂಲಕ ಪ್ರಾಣವಾಯು ಹೋದರೆ ಅದು ಕನಿಷ್ಠ ಸಾವೆಂದು, ಊರ್ಧ್ವದ್ವಾರಗಳ ಮೂಲಕ ಹೋದರೆ ಅದು ಉತ್ತಮ ಸಾವೆಂದು ನಂಬಲಾಗುವುದು. ಪಶ್ಚಿಮಚಕ್ರದ ಕವಾಟ (ಚಕ್ರ) ತೆರೆದು ಯೋಗಿಗಳು ಪ್ರಾಣವಾಯುವನ್ನು ವಿಸರ್ಜಿಸುವುದರಿಂದ ಅದು ಉತ್ತಮೋತ್ತಮ ಸಾವೆಂದು ಭಾವಿಸಲಾಗುತ್ತದೆ. ಕಣ್ಣುಗಳ ಮೂಲಕ ಪ್ರಾಣ ಹೋದರೆ ಕಣ್ಣು ತೆರೆದಿರುತ್ತವೆ, ಬಾಯಿಯ ಮೂಲಕ ಹೋದರೆ ಬಾಯಿಯು ತೆರೆದಿರುತ್ತದೆ. ಅಧೋದ್ವಾರಗಳಲ್ಲಿ ಹೋದರೆ ಮಲಮೂತ್ರ ವಿಸರ್ಜನೆಯಾಗಿರುತ್ತದೆ.
ಲಿಂಗಾಯತ ಧರ್ಮದ ಪ್ರಕ್ರಿಯೆಯಲ್ಲಿ “ಲಿಂಗೈಕ್ಯರಾಗು, ಲಿಂಗವಾಗು, ನಿಜೈಕ್ಯರಾಗು, ಬಯಲಾಗು' ಎಂಬ ಪದಬಳಕೆಯಿದೆ. ಸತ್ತರು, ತೀರಿ ಹೋದರು ಎಂದು ಅನ್ನಲಾಗದು. ಸ್ವರ್ಗವಾಸಿ, ಕೈಲಾಸವಾಸಿ, ಶಿವೈಕ್ಯ ಎಂಬ ಪದವನ್ನು ಬಳಸಲಾಗದು. ಏಕೆಂದರೆ ಸ್ವರ್ಗ-ಕೈಲಾಸ ಎಂಬ ಲೋಕಗಳನ್ನಾಗಲಿ, ಅಲ್ಲಿಗೆ ಹೋಗಿ ಸೇರುವುದನ್ನಾಗಲಿ ಲಿಂಗಾಯತ ಧರ್ಮವು ಮಾನ್ಯ ಮಾಡಿಲ್ಲ. ಯಾವ ಪರಮಾತ್ಮನಿಂದ ಈ ಚೇತನವು ಹೊರಹೊಮ್ಮಿದೆಯೋ ಅದರಲ್ಲಿ ಅಡಗುವುದೇ ನಿಜಗುರಿ. ಆದ್ದರಿಂದ ಲಿಂಗೈಕ್ಯರಾಗಿ, ಲಿಂಗವಾಗುವುದೇ ಎಲ್ಲ ಜೀವಗಳ ಗುರಿ.
ವ್ಯಕ್ತಿಯ ಪ್ರಾಣವಿಸರ್ಜನೆಯಾದ ಸೂಚನೆ ಸಿಗುತ್ತಿದ್ದಂತೆಯೇ “ಲಿಂಗೈಕ್ಯರಾದರು ಎಂದು ಘೋಷಿಸಿ, ಚಾಚಿದ ಕಾಲುಗಳನ್ನು ತಕ್ಷಣ ಮಡಿಚಬೇಕಾಗುತ್ತದೆ. ಆಗ ಜಯಗುರು ಬಸವೇಶ ಹರಹರ ಮಹದೇವ' ಎಂದು ಕಾಲು ಮಡಚಬೇಕು. ಲಿಂಗಾಯತ ಧರ್ಮದಲ್ಲಿ ಶವವನ್ನು ಮಲಗಿಸಿ ಒಯ್ಯದೆ, ಲಿಂಗಾರ್ಚನೆಗೆ ಕುಳಿತಂತೆ ಕೂಡ್ರಿಸುವುದರಿಂದ ಕಾಲುಗಳನ್ನು ಬೇಗನೆ ಆ ಭಂಗಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಅವು ಸೆಟೆದುಕೊಂಡು ಮಡಚಲು ಬರದಂತೆ ಆಗುವುದು. ಪ್ರಣತೆಯೊಂದನ್ನು ಹಚ್ಚಿ ಮನೆಯ ಮುಂಭಾಗದಲ್ಲಿ ಇಡಬೇಕು.
ಭೇದ ಸಲ್ಲದು
ಮಠಸ್ಥರು - ಗೃಹಸ್ಥರು, ಸಿರಿವಂತರು - ನಿರ್ಗತಿಕರು ಎಂದು ಬಗೆಬಗೆಯ ಭೇದಗಳನ್ನು ಕೆಲವರು ಮಾಡುತ್ತಾರೆ. ಧರ್ಮದ ಪ್ರಕ್ರಿಯೆಯಲ್ಲಿ ಲಿಂಗೈಕ್ಯನಾದ ಎಂದಿದ್ದರೂ ಸತ್ತ, ನೆಗೆದು ಬಿದ್ದ, ಹೆಣವಾದ ಎಂದೆಲ್ಲ ಮಾತನಾಡುವುದುಂಟು. ಸತ್ತ ವ್ಯಕ್ತಿ ಎಂಥವನೇ ಇರಲಿ ಅವನು ಪಾಪಿಯಲ್ಲಿ ಕಡು ಪಾಪಿಯೇ ಇದ್ದರೂ ಧಾರ್ಮಿಕ ಪರಿಭಾಷೆಯಲ್ಲಿ ಕರೆಯುವುದೇ ಶಿಷ್ಟಾಚಾರ.