ಲಿಂಗಾಯತ ವಿವಾಹ
ಹೆಣ್ಣು-ಗಂಡು ಸಮಾಜದಲ್ಲಿ ಕೂಡಿ ಬದುಕಲು, ಶಾರೀರಿಕ ಕಾಮನೆ, ಮಾನಸಿಕ ಆಸೆ-ಆಕಾಂಕ್ಷೆಗಳನ್ನು ತೃಪ್ತಿಮಾಡಿಕೊಳ್ಳಲು, ಸಂತಾನ ಉತ್ಪತ್ತಿ ಮಾಡಿ ವಂಶದ ಋಣವನ್ನು ತೀರಿಸಲು ಗುರುಹಿರಿಯರು ಸಾಮಾಜಿಕವಾಗಿ ಕೊಡುವ ಅಧಿಕೃತ ಮಾನ್ಯತೆ, ಒಪ್ಪಿಗೆ ಎಂಬುದೇ ಮದುವೆ.
ಮದುವೆ ಎನ್ನುವ ಧಾರ್ಮಿಕ ವಿಧಿಯು ಮನುಷ್ಯನ ಜೀವನದಲ್ಲಿ ಒಮ್ಮೆ ಮಾತ್ರ ಬರುವಂಥಾದ್ದು; ಆದರೆ, ಆತನ ಆಕೆಯ ಪೂರ್ಣ ಭವಿಷ್ಯವನ್ನೇ ನಿರ್ಧರಿಸುವಂತಹುದು. ಪರಸ್ಪರ ಪರಿಚಿತರಲ್ಲದ ಇಬ್ಬರು ಈಗ ಪರಿಚಿತರು, ಆತ್ಮೀಯರೂ ಆಗಿ ಇಡೀ ಜೀವನ ಪರ‍್ಯಂತರ ಒಟ್ಟುಗೂಡಿ ಬಾಳಲೇ ಬೇಕು. ಇಂತಹ ಅನ್ಯೋನ್ಯತೆ ಉಂಟು ಮಾಡುವ ವಿವಾಹ ಕಾರ್ಯಕ್ರಮವು ಅರ್ಥಗರ್ಭಿತವಾಗಿ, ದಾಂಪತ್ಯ ಜೀವನವನ್ನು ಪ್ರವೇಶಿಸುವವರಿಗೆ ಸ್ಫೂರ್ತಿದಾಯಕವಾಗಿ ಇರಬೇಕು. ಈಗ ಆ ಅರ್ಥವತ್ತತೆ, ಸತ್ವ ಇಲ್ಲವೇ ಇಲ್ಲ.
೧. ಜನ ಸಾಮಾನ್ಯರ ಆಡುಭಾಷೆಗಳಲ್ಲಿ ಮದುವೆಯ ವಿಧಿವಿಧಾನ ಸಾಗದೆ ಸಂಸ್ಕೃತದಲ್ಲಿಯೇ ಸಾಗಿ ಜನ ಸಾಮಾನ್ಯರಿಗೆ ಏನೇನೂ ಅರ್ಥವಾಗದೆ ಹೋಗುವುದು. ವಧು-ವರರಿಗೆ ತಾವು ಏನನ್ನು ಆಡಿದ್ದೇವೆ, ಆಡುತ್ತಿದ್ದೇವೆ ಎಂಬುದು ಎಷ್ಟೋ ತಿಳಿಯದು. ಮುಹೂರ್ತದ ಕಡೆಗೆ : ಎಲ್ಲರ ಗಮನವಿದ್ದು ಬರೀ ಗಡಿಬಿಡಿಯಲ್ಲೇ ಕೆಲಸ ಮುಂದುವರಿಯುತ್ತವೆ.
೨. ಅರ್ಥವಿಲ್ಲದ ಆಚರಣೆಗಳ ಸಂತೆಯಾಗಿರುವುದು. ಉದಾಹರಣೆಗೆ ಕಾಶೀಯಾತ್ರೆ, ಅಳಿಯನ ಕಾಲು ತೊಳೆಯುವುದು ಮುಂತಾದ್ದು. ಸ್ತ್ರೀ ಸಂಪತ್ತು ತನ್ನ ಮನೆಯನ್ನು ಪ್ರವೇಶಿಸುವಾಗ, ಆಕೆ ಜೀವನ ಪರ‍್ಯಂತರ ಇವನ ಸಂಗಾತಿಯಾಗಲಿದ್ದು, ಬಾಳಿನ ಬಂಡಿಗೆ ಹೆಗಲನ್ನು ಕೊಡಲು ಬರುವಾಗ ಕೃತಜ್ಞತೆಯಿಂದ ಅಳಿಯನು ತನ್ನ ವಧುವನ್ನು ಸ್ವಾಗತಿಸಬೇಕು. “ಅತ್ತೆಮಾವಂದಿರು ಅಳಿಯನ ಕಾಲು ತೊಳೆದು ಕನ್ಯಾದಾನ ಮಾಡುವಲ್ಲಿ ನಮ್ಮದೊಂದು ಹೊರೆಯನ್ನು ನಿಮಗೆ ಹಸ್ತಾಂತರಿಸಿದ್ದೇವೆ, ಸ್ವೀಕರಿಸಿ, ಉಪಕೃತರನ್ನಾಗಿ ಮಾಡಿ' ಎಂಬ ಧೋರಣೆ ಅಂತರ್ಗತವಾಗಿರುತ್ತದೆ. ಇದು ಸ್ತ್ರೀಕುಲಕ್ಕೆ ಅಪಮಾನಕಾರಕ ಮತ್ತು ಇಂದಿನ ಕಾಲದಲ್ಲಿ ಅರ್ಥಹೀನ. ಆ ಅಳಿಯನಾದರೂ ಹಿರಿಯರಾದ ಅತ್ತೆ ಮಾವಂದಿರಿಂದ ಕಾಲು ತೊಳೆಸಿಕೊಳ್ಳುವುದು ಒಂದು ರೀತಿ ಉದ್ದಟತನವೆ !
ಈ ಪುಸ್ತಕದಲ್ಲಿ ವಿವರಿಸಲ್ಪಡುವ ವಿವಾಹವಿಧಿಯು ಅವರವರ ಮಾತೃಭಾಷೆಗಳಲ್ಲಿ ನಡೆಯುತ್ತದೆ. ಪುರೋಹಿತರ ಅವಲಂಬಿತವಾಗಿರದು. ಒಂದೇ ದಿವಸ ಮುಹೂರ್ತಗಳಿದ್ದು ಪುರೋಹಿತರಿಗಾಗಿ ಪರದಾಡುವ ಬದಲು, ಸಾತ್ವಿಕರು ಸದಾಚಾರಿಗಳು ವಿದ್ಯಾವಂತರು ಆದ ಯಾರಾದರೂ ಪುಸ್ತಕವನ್ನು ಓದಿ ಕ್ರಿಯಾಮೂರ್ತಿಗಳಾಗಿ ತಾವೇ ಕಾರ್ಯಗಳನ್ನು ನಿರ್ವಹಿಸಬಹುದು. ಈಗಾಗಲೇ ಸಾಂಪ್ರದಾಯಿಕವಾಗಿ ವಿವಾಹಗಳನ್ನು ಮಾಡಿಸುತ್ತಿರುವವರು ಈ ಕ್ರಮವನ್ನು ಅಳವಡಿಸಿಕೊಂಡು ಜನರಿಗೆ ಮೆಚ್ಚುಗೆಯಾಗುವಂತೆ ನಿರ್ವಹಿಸಬಹುದು.
ಅರ್ಥವಿಲ್ಲದ ಆಚರಣೆಗಳನ್ನೆಲ್ಲ ಕೈಬಿಟ್ಟು ಅತ್ಯಗತ್ಯವಾದ ಆಚರಣೆಗಳನ್ನು ಮಾತ್ರ ಈ ಕ್ರಮದಲ್ಲಿ ಉಳಿಸಿಕೊಳ್ಳಲಾಗಿದೆ. ವೈವಾಹಿಕ ಜೀವನವನ್ನು ಪ್ರವೇಶಿಸುವ ಪತಿ-ಪತ್ನಿಯರು ಪರಸ್ಪರ ಅರ್ಥಮಾಡಿಕೊಳ್ಳಲು, ಭಾವನಾತ್ಮಕವಾಗಿ ಒಂದಾಗಲು ಬೇಕಾದ ಆಚರಣೆ ಸಾಕೇ ಸಾಕು. ಮಂತ್ರಕ್ಕಿಂತಲೂ ಉಗುಳೇ ಜಾಸ್ತಿಯಾದಂತೆ ಇರುವ ಬಹುಪಾಲು ಮದುವೆಗಳು ಪರಿಶ್ರಮದ ಆಗರ, ಹಣಕ್ಕೆ ಕತ್ತರಿ. ಇದನ್ನೆಲ್ಲ ಪ್ರಸ್ತುತ ವಿಧಾನದಿಂದ ತಪ್ಪಿಸಬಹುದು.
ಮದುವೆಯ ಕಾರ್ಯಕ್ಕೆ ಸಿದ್ಧತೆ
ಸಾಮಾನ್ಯವಾಗಿ ನಿಶ್ಚಯದ ದಿವಸ, ಅಂದಾಗದಿದ್ದರೆ ಇನ್ನೊಂದು ದಿವಸ ಹೆಣ್ಣು-ಗಂಡಿನ ಕಡೆಯವರು ಪರಸ್ಪರ ಚರ್ಚಿಸಿ ವಿವಾಹದ ದಿನ, ಸ್ಥಳ, ಸಮಯ ಕುರಿತು ನಿರ್ಧರಿಸಿಕೊಳ್ಳುತ್ತಾರೆ. ವಿವಾಹದ ಆಹ್ವಾನ ಪತ್ರಿಕೆ ಮುದ್ರಿಸುವರು. ಮಾದರಿಯನ್ನು ಈ ಗ್ರಂಥದ ಪೀಠಿಕೆಯಲ್ಲಿ ಕೊಡಲಾಗದೆ.
ಮದುವೆಗೆ ಒಂದು ವಾರ ಮೊದಲು ಆಯಾ ಓಣಿಯ ಅಥವಾ ಬಳಗದ ಹೆಣ್ಣು ಮಕ್ಕಳಿಗೆ ಹಸಿರು ಬಳೆ ಇಡಿಸುತ್ತಾರೆ. ಬಹುಶಃ ಕಡಿಮೆ ಬೆಲೆಯಲ್ಲಿ ನೆನಪಿನ ಕೊಡುಗೆ ಕೊಡುವ ಪರಿಪಾಠ ಇದಾಗಿರಬಹುದು. ಹಸಿರು ಬಳೆ ಸಂಭ್ರಮ ಸೂಚಕ ಸಮಾರಂಭದ ಕುರುಹು. ಕನ್ಯೆಯ ಕೈಗೂ ಬಳೆ ಹಾಕಲಾಗುತ್ತದೆ. ವಧುವಿನ ಬಲ ಕೈಗೆ ದ್ವಾದಶ ಪ್ರಣವ ಓಂ ಶ್ರೀ ಗುರುಬಸವಲಿಂಗಾಯನಮಃ ದ ಸಂಕೇತವಾಗಿ ೧೨ ಬಳೆಗಳನ್ನು (ಬಂಗಾರದ ಬಳೆ ಸೇರಿಯೂ ೧೨ ಆಗಬಹುದು) ಅಷ್ಟಾವರಣದ ಸಂಕೇತವಾಗಿ ಎಡಗೈಗೆ ೮ ಬಳೆಗಳನ್ನು ಮೊಟ್ಟ ಮೊದಲು ತೊಡಿಸಿ ನಂತರ ಉಳಿದವರಿಗೆ ಹಾಕಲಾಗುವುದು.
ಲಗ್ನದ ಅಕ್ಕಿಗಂಟು ಕಟ್ಟುವುದು.
ವಿವಾಹದ ದಿನಾಂಕವನ್ನು ನಿಶ್ಚಯಿಸುವ ದಿವಸ ಲಗ್ನದ ಅಕ್ಕಿಗಂಟು ಕಟ್ಟಲಾಗುವುದು. ಹೆಣ್ಣು-ಗಂಡು ಉಭಯತರ ಕಡೆಯವರು ಒಂದು ಕಡೆ ಸೇರುವರು. ಆರಂಭದಲ್ಲಿ ಧರ್ಮಗುರು ಬಸವಣ್ಣನವರ ಭಾವಚಿತ್ರ ಇಟ್ಟು ಪೂಜೆಯನ್ನು ಮಾಡುವರು. ಭಾವಚಿತ್ರದ ಮುಂದೆ ಒಂದು ಚಾಪೆ ಅಥವಾ ಜಮಖಾನ ಹಾಸಿಕೊಂಡು, ಎಲ್ಲರೂ ಕುಳಿತು, ಮಾತುಕತೆಯಾಡಿ ಕ್ರಿಯಾಮೂರ್ತಿಯ ಕೈಯಲ್ಲಿ ಲಗ್ನಪತ್ರಿಕೆ (ಮುದ್ರಣಕ್ಕೆ ಹೋಗುವ ಮಾದರಿ) ಬರೆಸುವರು. ಬರೆದ ಲಗ್ನಪತ್ರಿಕೆಯನ್ನು ಭಾವಚಿತ್ರದ ಮುಂದೆ ಇಡುವರು.
ಸುಮಾರು ಅರ್ಧ ಅಥವಾ ಮುಕ್ಕಾಲು ಮೀಟರು ವಸ್ತ್ರವನ್ನು ತೆಗೆದುಕೊಂಡು ಹಾಸುವರು. ಅದರ ಮೇಲೆ ವಿಭೂತಿಯಿಂದ ಬಸವಲಿಂಗ ಮುದ್ರೆಯನ್ನು ಲೇಖಿಸುವರು. ಒಂದು ಲೋಟ (ಅಥವಾ ಅಳತೆಯ ಕಾಲುಪಾವು) ತೆಗೆದುಕೊಂಡು ಅಕ್ಕಿಯನ್ನು ತುಂಬಿ, ಆರು ಲೋಟದಷ್ಟು ಅಕ್ಕಿಯನ್ನು ವಸ್ತ್ರದೊಳಕ್ಕೆ ಹಾಕುವರು. ೬ ವೀಳೆಯದೆಲೆ, ೬ ಅಡಿಕೆ ಬೆಟ್ಟು, ೬ ಕೊಬ್ಬರಿ ಗಿಟುಕು, ೬ ಉತ್ತತ್ತಿ, ೬ ಅರಿಷಿಣ ಕೊಂಬು, ೧ ಖಣ, ವಿಭೂತಿ ಗಟ್ಟಿ, ಬಸವ ಮುದ್ರೆ, ವಚನಗ್ರಂಥ ಸಾಮಗ್ರಿಗಳನ್ನು ಆ ವಸ್ತ್ರದೊಳಕ್ಕೆ ಇಡುವರು. ಬರೆದ ಲಗ್ನಪತ್ರಿಕೆಯನ್ನು ಇಟ್ಟು ಬಸವ ಮಂಗಲವನ್ನು ಮಾಡುವರು. ಕ್ರಿಯಾಮೂರ್ತಿಯು ವಿಭೂತಿ ಧರಿಸಿದ ಬಸವ ಪಾದವನ್ನು ಸ್ಪರ್ಶಿಸಿ, ಆ ವಿಭೂತಿ ಧರಿಸಿದ ಬೆರಳಿನಿಂದ ಈ ವಸ್ತುಗಳನ್ನೆಲ್ಲ ಸ್ಪರ್ಶಿಸುವರು. ನಂತರ ವಸ್ತ್ರವನ್ನು ಗಂಟು ಕಟ್ಟಲಾಗುವುದು. ಅದಕ್ಕೆ ಅಕ್ಷತೆ ಸಿಂಪಡಿಸುವರು. ಸಾಮಾನ್ಯವಾಗಿ ಹಳೆಯ ಮೈಸೂರಿನಲ್ಲಿ ಲಗ್ನವು ಹೆಣ್ಣಿನ ಮನೆಯಲ್ಲಿ, ಊರಿನಲ್ಲಿ ನಡೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಈ ನಿಯಮವಿಲ್ಲ. ಹೆಣ್ಣಿನ ಮನೆಯಲ್ಲಿ ಮದುವೆ ಮಾಡಿ ಕೊಡುವ ಜವಾಬ್ದಾರಿ ಹೊರುವವರು ಯಾರೂ ಇಲ್ಲದಿದ್ದರೆ, ಬೇರಿತರ ಅನುಕೂಲವಿಲ್ಲದಿದ್ದರೆ ವಿವಾಹದ ಖರ್ಚಿಗೆ ಎಂದು ಇಂತಿಷ್ಟು ಹಣಕೊಟ್ಟುಬಿಟ್ಟರೆ ಗಂಡಿನ ಕಡೆಯವರೇ ಲಗ್ನ ಮಾಡಿಕೊಳ್ಳುತ್ತಾರೆ. ಲಗ್ನವು ಯಾರ ಕಡೆ ನೆರವೇರುವುದೋ ಅವರ ಮನೆಯಲ್ಲಿ ಈ ಲಗ್ನದ ಅಕ್ಕಿಕಾಳಿನ ಗಂಟು ಉಳಿಯುವುದು. ಇದು ಒಂದು ಬಗೆಯ ಒಡಂಬಡಿಕೆಯ ಸೂಚಕ
ಮತ್ತು ಬೀಗರನ್ನು ಕರೆಯಲು ಹೋಗುವಾಗ ಒಯ್ಯುವ ಆಹ್ವಾನದ ಸಂಕೇತ. ವಿವಾಹದ ಒಂದೆರಡು ದಿನ ಮೊದಲು ಬೀಗರನ್ನು ಕರೆಯಲು ಹೋಗುವವರೆಗೆ ಈ ಗಂಟನ್ನು ಪೂಜಾಗೃಹದಲ್ಲಿ ಕಟ್ಟೆಯ ಮೇಲೆ ಇಟ್ಟಿರಲಾಗುವುದು.
ಮದುವೆಯ ಸ್ಥಳಕ್ಕೆ ಹೊರಡುವ ಒಂದೆರಡು ದಿನ ಮೊದಲು ಒಬ್ಬರು ಈ ಅಕ್ಕಿಯ ಗಂಟನ್ನು, ಮುದ್ರಿತ ಆಹ್ವಾನ ಪತ್ರಿಕೆಯನ್ನು ತೆಗೆದುಕೊಂಡು ಬೀಗರ ಮನೆಗೆ ಹೋಗುವರು. ಅವರು ಅದನ್ನು ಸ್ವೀಕರಿಸುವರು. ಮರುದಿನ ಬೆಳಿಗ್ಗೆ ವಿಶೇಷವಾಗಿ ಮನೆಯಲ್ಲಿ ಬಸವೇಶ್ವರ ಪೂಜಾವ್ರತ ಮಾಡಿ ಮಂಗಲಾಕ್ಷತೆ ಸಿದ್ಧಪಡಿಸುವರು. ಅಕ್ಕಿಯ ಗಂಟು ಬಿಚ್ಚಿ ಅಕ್ಕಿಯಿಂದ ಅನ್ನವನ್ನು ಮಾಡಿ, ಸಿಹಿ ಪದಾರ್ಥಕ್ಕೆ ಕೊಬ್ಬರಿ ತುರಿದು ಹಾಕಿ, ಬಸವ ಮುದ್ರೆ-ಭಸ್ಮದ ಗಟ್ಟಿಯನ್ನು ಪೂಜಾಗೃಹದಲ್ಲಿ ಇಡುವರು. ಮದುವೆಗೆ ಬಂಧು ಬಳಗ ಸಹಿತವಾಗಿ ಹೊರಡುವರು.
ದೇವತಾ ಕಾರ್ಯದ (ದೇವರ ಕರೆ) ಬದಲು ಬಸವ ಗುರುಪೂಜೆ
ದೇವತಾ ಕಾರ್ಯ ಎಂದು ಪೂರ್ವಭಾವಿಯಾಗಿ ಮನೆ ದೇವರು, ಊರಲ್ಲಿರುವ ದೇವತೆಗಳು ಮುಂತಾದುವುಕ್ಕೆಲ್ಲ ಪೂಜೆ ಸಲ್ಲಿಸಿ, ಎಡೆಕೊಟ್ಟು ಬರುವ ಸಂಪ್ರದಾಯ ಕೆಲವು ಕಡೆ ಆಚರಣೆಯಲ್ಲಿದೆ. ಇಷ್ಟು ಮಾತ್ರವಲ್ಲ ಎತ್ತಿನ ಬಂಡಿಯ ಪೂಜೆ ಮಾಡಲಾಗುವುದು. ಬಂಡಿ ಗಾಲಿಗೆ ಧೋತ್ರ, ರುಮಾಲು ಸುತ್ತಲಾಗುವುದು. ಉಪವಾಸವಿದ್ದು ೫ ಜನ ಮಹಿಳೆಯರು ಮತ್ತು ಓರ್ವ ಪುರುಷನು ಬಂಡಿಯನ್ನು ಪೂಜಿಸಿ, ಆರತಿ ಮಾಡುವರು. ಒಳಕಲ್ಲು ಬೀಸುವಕಲ್ಲು-ಕಸಪೊರಕೆ, ರುಬ್ಬುವಗುಂಡು ಪೂಜೆ ಸಹ ನಡೆಯುತ್ತದೆ.
[2] ಬಸವ ತತ್ತ್ವಾನುಯಾಯಿಗಳು ಇವೇನನ್ನೂ ಮಾಡದೆ
'ಬಸವೇಶ್ವರ ಪೂಜಾ ವ್ರತ' ನೆರವೇರಿಸಿ, ಲಗ್ನದ ಅಕ್ಕಿಯ ಗಂಟಿನ ಅಕ್ಕಿಯನ್ನು ಬಳಸಿ ಅಡಿಗೆ ಮಾಡಿ ಬಂಧು ಬಳಗ ಪುರಪ್ರಮುಖರಿಗೆ ಗಣದಾಸೋಹ ಮಾಡಬೇಕು.
ಹಂದರ ಹಾಕುವದು
ಹಸಿರು ಸಂಭ್ರಮ, ಶುಭಕಾರ್ಯ ಸೂಚಕ ವರ್ಣ. ಆದ್ದರಿಂದ ಮದುವೆ ಮನೆ ಎಂದು ಬಂದ ಜನರು ಸುಲಭವಾಗಿ ಗುರುತಿಸಲು ಅನುವಾಗುವಂತೆ ಮನೆಯ ಮುಂದೆ ಹಂದರವನ್ನು ಹಾಕಬೇಕು. ತೆಂಗಿನ ಗರಿ ಹೊದ್ದಿಸಿ ಚಪ್ಪರಹಾಕಿ, ಬಾಳೆಯ ಕಂಭಗಳನ್ನು ಕಟ್ಟಲಾಗುವುದು. ಹಸಿರು ಚಪ್ಪರಕ್ಕೆ ಷಟ್ಕೋನ ಬಸವ ಧ್ವಜವನ್ನು ಕಟ್ಟಿ, ಚಪ್ಪರ ಹಾಕಿದವರಿಗೆ ಸಿಹಿಯೂಟ ಮಾಡಿಸಬೇಕು.
ವಿವಾಹಕ್ಕೆ ಜೋಡಿಸಿಕೊಳ್ಳಬೇಕಾದ ಸಾಮಾನು
೧. ಲಿಂಗದೀಕ್ಷೆಗಾಗಿ ಇಷ್ಟಲಿಂಗಗಳು, ಕರಡಿಗೆ, ಶಿವದಾರ, ಹುದುಗ ಪಾವಡ, ರುದ್ರಾಕ್ಷಿ,
೨. ಉತ್ತಮ ಕಂಬಳಿ ಅಥವಾ ಜಮಖಾನಾ ಅರ್ಥಾತ್ ನೆಲಹಾಸು,"
೩. ಕೈ ಒರೆಸಿಕೊಳ್ಳಲು ವಸ್ತ್ರಗಳು,
೪. ನೀರಿನ ತಂಬಿಗೆ, ಲೋಟಗಳು, ಮಜ್ಜನ ಸಾಲೆ, ಧಾರಾ ಪಾತ್ರೆ,
೫. ವಿಭೂತಿ, ರುದ್ರಾಕ್ಷಿ, ಕರ್ಪೂರ, ಊದಿನಕಡ್ಡಿ, ಕಲ್ಲುಸಕ್ಕರೆ, ಗಂಧ ಪತ್ರೆ, ಪುಷ್ಪ, ಅಕ್ಷತೆ, ತೆಂಗಿನಕಾಯಿ, ಬೆಂಕಿಪೊಟ್ಟಣ, ದೀಪಸ್ತಂಭಗಳು, ಅವುಗಳಿಗೆ ಎಣ್ಣೆ-ಬತ್ತಿ, ಆರು ಕಲಶದಾರತಿಗಳು.
೬. ಬಸವ ರಕ್ಷೆ (ಕೈಕಂಕಣ), ಬಾಸಿಂಗಗಳು.
೭. ಕರಿಮಣಿ, ಎರಡು ರುದ್ರಾಕ್ಷಿ ಪೋಣಿಸಿದ ಮಾಂಗಲ್ಯ, ಒಂದು ಜೊತೆ ಕಾಲುಂಗರ,
೮. ಎಲೆ-ಅಡಿಕೆ, ಹಂಚಲಿಕ್ಕೆ ಬೇಕಾದ ಫಲ-ತಾಂಬೂಲ. ವಚನ ಪುಸ್ತಿಕೆ.
೯. ಒಂದು ಸಣ್ಣ ವಚನ ಗ್ರಂಥ, ಬಸವ ಮುದ್ರೆ (ಅಥವಾ ಬಸವ ನಾಣ್ಯ)
೧೦. ಅರಿಶಿನ ಮಿಶ್ರಿತ ಅಕ್ಕಿ ಕಾಳು ಅರ್ಧದಿಂದ ಒಂದು ಕೆ.ಜಿ.ಯಷ್ಟು
೧೧. ದೊಡ್ಡ ಹೂಮಾಲೆ ಗುರುಬಸವ ಭಾವಚಿತ್ರಕ್ಕೆ ಮತ್ತು ವಧು-ವರರಿಗೆ
೧೨. ಬೀಗರು ಪರಸ್ಪರ ಹಂಚಿಕೊಳ್ಳಲು ನಾಲ್ಕು ಹೂಮಾಲೆಗಳು, ವಧುವಿಗೆ ಮುಡಿಯಲು ಹೂವಿನ ದಂಡೆ, ಪೂಜೆಗೆ ಬಿಡಿ ಹೂಗಳು.
೧೩. ವರನಿಗೆ ಶಲ್ಯ-ಮೇಲು ಹೊದ್ದಿಕೆ - `ವಧುವಿಗೆ.
೧೪. ಧ್ವನಿವರ್ಧಕದ ಸಾಮಾನು,
೧೫. ಮದುವೆ ವಿವರಗಳನ್ನೊಳಗೊಂಡ ಬ್ಯಾನರ್, ಷಟಸ್ಥಲ ಧ್ವಜ ೩.
೧೬. ಪ್ರತಿಜ್ಞಾ ಪಟ-೨
ಚನ್ನಬಸವಣ್ಣನವರ ಒಂದು ವಚನದಲ್ಲಿ ಬಾಸಿಂಗ ಕಟ್ಟುವುದು ಅಗತ್ಯವಿಲ್ಲ ಎಂದು ಪ್ರಸ್ತಾಪವಾಗಿದೆ. ಬಾಸಿಂಗ ಕಟ್ಟುವುದು ಈಗ ಗಾಢವಾಗಿ ರೂಢಿಯಲ್ಲಿದೆ. ಅದರ ಮುಖ್ಯ ಉದ್ದೇಶ, ಇನ್ನಿತರ ಜನರ ಮಧ್ಯೆ ವರ-ಕನ್ಯೆಯರನ್ನು ಸುಲಭವಾಗಿ ಗುರುತಿಸುವುದೇ ಆಗಿದೆ. ಆದ್ದರಿಂದ ಬಾಸಿಂಗ ಕಟ್ಟಲು ಅವಕಾಶ ನೀಡಬಹುದು. ಆದರಿಷ್ಟೆ ವಿಪರೀತ ದೊಡ್ಡದಿರುವ, ಅನ್ಯ ದೇವತಾ ಚಿತ್ರಗಳಿರುವ ಬಾಸಿಂಗ ಕಟ್ಟದೆ ಧರ್ಮಗುರು ಬಸವಣ್ಣನವರ ಭಾವಚಿತ್ರ ಅಂಟಿಸಿದ ಸರಳವಾಗಿರುವ ಬಾಸಿಂಗವನ್ನು ಕಟ್ಟುವುದು ಸೂಕ್ತವೆಂದು ತೋರುತ್ತದೆ.
ಮದುವೆ ಪೂರ್ತಿಯಾದ ಮೇಲೆ ದಂಪತಿಗಳು ಹಿರಿಯರು ಸಹಿತವಾಗಿ ಕ್ಷೇತ್ರಗಳಿಗೆ ಹೋಗಿ ಬಾಸಿಂಗಗಳನ್ನು ನದಿಗಳಲ್ಲಿ ತೇಲಿ ಬಿಡುವರು. ಬಹುಶಃ ಈ ಕ್ರಿಯೆಯ ಹಿಂದಿನ ಉದ್ದೇಶ, ಈ ಧಾರ್ಮಿಕ ನೇಮದ ನೆಪದಲ್ಲಾದರೂ ತಮ್ಮ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿಬರಲಿ ಎಂಬುದು ಒಂದಾದರೆ, ನವ ದಂಪತಿಗಳು ತಿರುಗಾಡಿ ಬರಲಿ ಎಂಬುದು ಎರಡನೆಯದು. (ಬಾಸಿಂಗಗಳನ್ನು ತಮ್ಮ ಮದುವೆಯ ನೆನಪಿಗೆ ಹಾಗೆಯೇ ಷೋಕೇಸಿನಲ್ಲಿ ಇಟ್ಟರೂ ತಪ್ಪಾಗಲಿಕ್ಕಿಲ್ಲ.
ಹೆಣ್ಣಿನ ಮನೆಯಲ್ಲಿ
ಇತ್ತ ಹೆಣ್ಣಿನ ಮನೆಯಲ್ಲಿ ಅಥವಾ ಮದುವೆಯ ಜವಾಬ್ದಾರಿ ಹೊತ್ತಿರುವವರ ಮನೆಯಲ್ಲಿ ಕೆಲವು ಕಾರ್ಯಗಳನ್ನು ಮಾಡಬೇಕು.
೧. ಬಸವೇಶ್ವರ ಪೂಜಾವ್ರತ ಮಾಡಿ ಮಂತ್ರಾಕ್ಷತೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ದೇವತಾ ಕಾರ್ಯ ಎಂದು ಇವರೂ ಸಹ ಊರೊಳಗಿರುವ ಎಲ್ಲ ದೇವತೆಗಳ ಪೂಜೆ - ಬಂಡಿ ಪೂಜೆ - ಒಳಕಲ್ಲು, ಬೀಸೋಕಲ್ಲು ಪೂಜೆ ಮಾಡಬಾರದು.
೨. ಮನೆಯ ಮುಂದೆ ಹಸಿರು ಚಪ್ಪರ ಹಾಕಿ, ಷಟ್ಕೋನ ಬಸವ ಧ್ವಜ ಕಟ್ಟಬೇಕು. ಇದು ಧಾರ್ಮಿಕ ವಿಧಿಯಷ್ಟೆ ಅಲ್ಲ, ವಿವಾಹದ ಮನೆ ಗುರುತಿಸಲು ನೆರವಾಗುವುದು.
ಕಲ್ಯಾಣ ಮಂಟಪಗಳಲ್ಲಿ ವಿವಾಹ ಮಾಡುವವರು ಹಿಂದಿನ ದಿನವೇ ಸಾಮಾನು ಸಾಗಿಸುವರಷ್ಟೆ. ಆಗ ಪ್ರಪ್ರಥಮವಾಗಿ ಕೆಲವರು ಮೆರವಣಿಗೆಯಲ್ಲಿ ಬರಬೇಕು. ಪರವೂರಿನ ಕಲ್ಯಾಣ ಮಂಟಪವಾದರೆ ಗೇಟಿನಿಂದ ಮುಂಬಾಗಿಲವರೆಗೆ ಮೆರವಣಿಗೆಯಲ್ಲಿ ಬಂದರೂ ಸಾಕು. ಒಬ್ಬರು ಷಟಸ್ಥಲ ಧ್ವಜವನ್ನು, ಮತ್ತೊಬ್ಬರು ತಟ್ಟೆಯಲ್ಲಿ ಬಸವಗುರುವಿನ ಭಾವಚಿತ್ರವನ್ನು, ಮಗದೊಬ್ಬರು ಧರ್ಮಸಾಹಿತ್ಯವನ್ನು ಹಿಡಿದುಕೊಂಡು ಬರಬೇಕು.
ಮಹಿಳೆಯರು ಆರತಿಯನ್ನು ತೆಗೆದುಕೊಂಡಿರಬೇಕು. ಇವರೆಲ್ಲ ವಾದ್ಯ ಸಮೇತವಾಗಿ ಬಂದು, ಕಲ್ಯಾಣ ಮಂದಿರವನ್ನು ಪ್ರವೇಶಿಸುವರು. ಆಗ ಷಟಸ್ಥಲ ಧ್ವಜವನ್ನು ಚಪ್ಪರಕ್ಕೆ ಕಟ್ಟಿ, ಮುಂದೆ ಒಳಕ್ಕೆ ಹೋಗಬೇಕು.
ಮದುವೆಯ ಮಂಟಪದ ವೇದಿಕೆ ಮೇಲೆ ಒಂದು ಉನ್ನತ ಸ್ಥಾನದಲ್ಲಿ ಗುರು ಬಸವಣ್ಣನವರ ಭಾವಚಿತ್ರ ಪ್ರತಿಷ್ಠಾಪಿಸಬೇಕು. ಪಕ್ಕದಲ್ಲಿ ವಚನ ಸಾಹಿತ್ಯದ ಗ್ರಂಥಗಳನ್ನಿಡಬೇಕು. ಉಳಿದ ಸಾಮಾನುಗಳನ್ನು ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಇಡಬೇಕು.
ತಮ್ಮ ಮನೆಯಿಂದಲೋ ಪರ ಊರಿನಿಂದಲೋ ವಧುವು ಬರುವಳು. ಆಗ ಕಲ್ಯಾಣ ಮಂದಿರದ ಒಳಗೆ ಇರುವವರು ತಲೆಬಾಗಿಲಿಗೆ ಬಂದು “ಶರಣು ಶರಣಾರ್ಥಿ” ಅಥವಾ “ಶರಣು ಬನ್ನಿ” ಎಂದು ಹೇಳಿ, ಭಸ್ಮಧಾರಣೆ ಮಾಡಿ, ಹೂಮಾಲೆ ಹಾಕಿ, ಆರತಿಯನ್ನು ಬೆಳಗಿ ಸ್ವಾಗತಿಸಬೇಕು. ಅವರು ತಲೆಬಾಗಿಲನ್ನು ದಾಟುವಾಗ 'ಜಯ್ ಗುರು ಬಸವೇಶ ಹರಹರ ಮಹಾದೇವ' ಎಂದು ಹೇಳಬೇಕು.
ಪರವೂರಿಂದ ಬರುವ ಬೀಗರು ನೇರವಾಗಿ ಬೀಗರ ಮನೆಗಾಗಲಿ, ಕಲ್ಯಾಣ ಮಂಟಪಕ್ಕಾಗಲೀ ಬರುವುದಿಲ್ಲ. ಬೇರೆ ಒಂದು ಕಡೆ ಬಿಡಾರದ ವ್ಯವಸ್ಥೆ ಮಾಡಿರಲಾಗುತ್ತದೆ. ಅವರು ಬಂದ ವಾರ್ತೆ ಮುಟ್ಟುತ್ತಲೇ ಲಗ್ನದ ಹೊಣೆ ಹೊತ್ತವರು ಸ್ವಾಗತಿಸಲು ಹೋಗುವರು. ಆರತಿ ಕಳಸ ಹಿಡಿದ ಮಹಿಳೆಯರು, ವಾದ್ಯದವರು ಹಿರಿಯರು ಕೂಡಿ ಪರವೂರಿನಿಂದ ಬಂದ ಬೀಗರನ್ನು ಸ್ವಾಗತಿಸಲು ಹೋಗುವರು. ಪರಸ್ಪರ ಶರಣುಗಳ ವಿನಿಮಯವಾಗುತ್ತದೆ. ಗಂಡಸರಿಗೆ ವಿಭೂತಿ ಧರಿಸುವರು, ಹೆಣ್ಣು ಮಕ್ಕಳಿಗೆ ವಿಭೂತಿ ಕುಂಕುಮ ಇಡುವರು, ಎಲೆ-ಅಡಿಕೆ-ಬಾಳೆಯ ಹಣ್ಣು ಕೊಡುವರು. ವರನಿಗೆ ಭಸ್ಮ ಧರಿಸಿ ಮಾಲೆ ಹಾಕಿ, ಆರತಿ ಮಾಡುವರು. ಹಾಗೆ ಬಿಡಾರ ಬಿಟ್ಟವರು ಕನ್ಯೆಯ ಕಡೆಯವರಾಗಿದ್ದರೆ ಆಗ ಕನ್ಯೆಗೆ ವಿಭೂತಿ - ಕುಂಕುಮ ಹಚ್ಚಿ, ಹೂ ಮುಡಿಸಿ, ಮಾಲೆ ಹಾಕಿ, ಉಡಿ ತುಂಬಿ ಆರತಿ ಮಾಡಿ ಮೆರವಣಿಗೆಯಲ್ಲಿ ಕಲ್ಯಾಣ ಮಂಟಪಕ್ಕೆ ಕರೆತರಬೇಕು. ಆಗ ಬಿಡಾರದಿಂದ ಎಲ್ಲರೂ ಕೂಡಿ ಕಲ್ಯಾಣ ಮಂಟಪಕ್ಕೆ ಬರುವರು.
ಕಲ್ಯಾಣ ಮಂಟಪದಲ್ಲಿ ಇದಿರ್ಗೊಳ್ಳುತ್ತಿರಲಿ ಅಥವಾ ತಮ್ಮ ಮನೆಯ ಮುಂದೆ ಮದುವೆಯಾಗುತ್ತಿದ್ದು ಇಲ್ಲಿಯೆ ಇದಿರ್ಗೊಳ್ಳುತ್ತಿರಲಿ ಆಗ ಹೀಗೆ ಮಾಡಬೇಕು. ಶರಣು ಬನ್ನಿ' ಎಂದು ಕೈ ಮುಗಿದು, ವರನಿಗೆ ಭಸ್ಮಧಾರಣೆ ಮಾಡಿ, ಅವರ ಜೊತೆಗೆ ಇರುವ ಪ್ರಮುಖರಿಗೂ ಭಸ್ಮಧಾರಣೆ ಮಾಡಬೇಕು. ಹೂಮಾಲೆಯನ್ನು ವರನಿಗೆ ಹಾಕಿ, ಆರತಿಯನ್ನು ಬೆಳಗಬೇಕು. ಒಂದು ತಟ್ಟೆಯಲ್ಲಿ ಮಂಗಲಾಕ್ಷತೆ ಇಟ್ಟುಕೊಂಡು ಅದರ ಮೇಲೆ ಒಂದು ವಿಭೂತಿ ಗಟ್ಟಿ ಇಟ್ಟು ವಧುವಿನ ತಂದೆಯು ವರನ ತಂದೆಯ ಕೈಯಲ್ಲಿ ಇರುವ ಅವರು ತಂದಿರುವ ಅಂಥದೇ ಅಕ್ಷತೆಯ ತಟ್ಟೆಯನ್ನು ಪಡೆದುಕೊಂಡು ತನ್ನ ಕೈಯಲ್ಲಿರುವುದನ್ನು ಕೊಡಬೇಕು. ಈ ವಿನಿಮಯ ಆದ ಮೇಲೆ ವರನು ಬಾಗಿಲನ್ನು ದಾಟುವನು. ಆಗ ಜಯಗುರು ಬಸವೇಶ ಹರಹರ ಮಹಾದೇವ ಎಂದು ಎಲ್ಲರೂ ಜಯಕಾರ ಹಾಕಬೇಕು.
(ಯಾರಾದರೂ ಗುರುಗಳು, ಮಠಾಧೀಶರು ಬಂದಾಗಲೂ ಹೀಗೇ ಹೇಳಬೇಕು. ಅವರ ಪಾದಪೂಜೆಯನ್ನು ತಲೆಬಾಗಲಲ್ಲಿ ಮಾಡಬಹುದು)
ವಧುವರರನ್ನು ಪ್ರತ್ಯೇಕವಾಗಿ ಸ್ವಾಗತಿಸಿ ಒಳಗೆ ಬರಮಾಡಿಕೊಳ್ಳಬೇಕು. ಅವರು ಒಳಗೆ ಬಂದವರೇ ಸೀದಾ ಹೋಗಿ ವೇದಿಕೆಯ ಮೇಲಿಟ್ಟಿರುವ ಬಸವಭಾವಚಿತ್ರಕ್ಕೆ ನಮಸ್ಕರಿಸಿ, ತಮಗೆ ನಿಗದಿ ಪಡಿಸಿರುವ ಕೋಣೆಗಳಿಗೆ ಹೋಗಿ ಬಿಡಾರ ಮಾಡಬೇಕು.