ಭಾಗ-೪ ಮಾಂಗಲ್ಯ ಧಾರಣೆ ಮತ್ತು ಅಕ್ಷತಾರೋಪಣೆ
ಮಾಂಗಲ್ಯವನ್ನು, ಅಕ್ಷತೆಯನ್ನು ಪೂಜ್ಯರು, ಹಿರಿಯರು ಮತ್ತು ಎಲ್ಲ ಸಭಿಕರ ಕೈಯಿಂದ ಮುಟ್ಟಿಸಿಕೊಂಡು ಬರಬೇಕು. ಆಗ ವರನು ಹೀಗೆ ಹೇಳಬೇಕು.:
ನನ್ನ ಜೀವನದ ಅರ್ಧಾಂಗಿ ಎಂದು
ಜೊತೆಗೂಡಿ ನಡೆಯುವ ಸಹಚರಿಣಿ ಎಂದು
ಮನೆ ಮನ ತುಂಬುವ ಸತಿರತ್ನವೆಂದು
ಮಾಂಗಲ್ಯ ಧರಿಸುವೆನು ದೇವಿ ನಿನಗಿಂದು
ಎಂದು ಹೇಳಿ ಮಾಂಗಲ್ಯವನ್ನು ಧರಿಸಬೇಕು. ಮಾಂಗಲ್ಯಧಾರಣೆ ಯಾಗುವಾಗ ಜಯಗುರು ಬಸವೇಶ ಹರಹರ ಮಹಾದೇವ ಎಂದು ಎಲ್ಲರೂ ಜಯಘೋಷ ಮಾಡಬೇಕು. ಆಗ ಸತಿಯೂ ಸಹ ಒಂದು ಉಂಗುರವನ್ನು (ಚಿನ್ನ, ಬೆಳ್ಳಿ, ತಾಮ್ರ ಯಾವ ಲೋಹದ್ದಾದರೂ ಸರಿಯೆ) ಕೈಲಿ ಹಿಡಿದು ಹೀಗೆ ಹೇಳಬೇಕು.
ನನ್ನ ಜೀವನದ ಸರ್ವಸ್ವವೆಂದು
ಕೈ ಬಿಡದೆ ಸಲಹುವ ಪೋಷಕರು ಎಂದು
ಮಡದಿ ಮಕ್ಕಳ ಪೊರೆವ ಪತಿರತ್ನವೆಂದು
ನಿಮ್ಮ ಕೈ ಹಿಡಿಯುವೆ, ನಂಬಿ ನಾನಿಂದು
ಎಂದು ಹೇಳಿ ಉಂಗುರವನ್ನು ತೊಡಿಸಬೇಕು.
ಎಲ್ಲರೂ ಮೊದಲೇ ಗಮನಿಸಬೇಕಾದುದು
೧. ಮಂಗಲಾಕ್ಷತೆಯನ್ನು ಕುಳಿತಲ್ಲಿಂದ ಎರಚಕೂಡದು.
೨. ಒಂದನೆಯದಾಗಿ, ಯಾವುದನ್ನು ಪವಿತ್ರ ವಸ್ತುವೆಂದು ಹರಸಲು ಎಸೆಯುತ್ತೀರೋ ಅದನ್ನು ಚೆಲ್ಲಿ ತುಳಿದರೆ, ಪಾಪ ಸಮನಿಸುತ್ತದೆ.
೩. ಎಸೆದ ಕಾಳುಗಳು ವಧುವರರ ತನಕ ಸಾಗದೆ ದಾರಿಯಲ್ಲಿ ಮತ್ತೆ ಯಾರಾರ ತಲೆಯ ಮೇಲೋ ಬಿದ್ದು ಬಿಡುತ್ತವೆ. ಎಸೆದ ಉದ್ದೇಶವೇ ಸಫಲವಾಗದು.
೪. ಪರಮಾತ್ಮನ ಸೃಷ್ಟಿಯಲ್ಲಿ ತಿನ್ನಲೆಂದು ಸೃಷ್ಟಿಯಾದ ಈ ಅಮೂಲ್ಯ ಧಾನ್ಯವನ್ನು ಚೆಲ್ಲಿ ತುಳಿದು ಹಾಳು ಮಾಡುವುದು ಪಾಪಮಯ. ಆದ್ದರಿಂದ ಮಾಂಗಲ್ಯವನ್ನು ಮುಟ್ಟಿಸಿಕೊಂಡು ಬರಲು ಹೋಗುವಾಗಲೇ ಅಕ್ಷತೆಯ ಪಾತ್ರೆಯನ್ನು ಜೊತೆಗೆ ತೆಗೆದುಕೊಂಡು ಹೋಗಿ, ಅಕ್ಷತೆಯನ್ನು ಮಾಂಗಲ್ಯಧಾರಣೆಯ ಕಾಲಕ್ಕೆ ಎಸೆಯಲು ಅವರ ಕೈಗೆ ಕೊಡದೆ ಹಾಗೆಯೇ ಮುಟ್ಟಿಸಿಕೊಂಡು ತಂದು ಬಿಡಬೇಕು. ಮಾಂಗಲ್ಯ ಧಾರಣೆ ಕಾಲಕ್ಕೆ ವೇದಿಕೆಯ ಮೇಲಿದ್ದ ಕೆಲವರು ಹತ್ತಿರ ಹೋಗಿ ಹಾಕಿದರೆ ಸಾಕು, ನಂತರ ಸಭಿಕರು ಒಬ್ಬೊಬ್ಬರೇ ಬಂದು ಅಕ್ಷತೆ ಹಾಕಿ, ಆರತಿ ಮಾಡಿ, ಕೊಡುಗೆಗಳನ್ನು ಕೊಡಬಹುದು. ಇದರಿಂದ ಮಂಗಲಾಕ್ಷತೆ ಜಮಖಾನದ ಮೇಲೆ ಬಿದ್ದಿರುತ್ತವೆ. ಬಳಿದುಕೊಂಡು ಉಪಯೋಗಿಸಲು ಸಾಧ್ಯವಾಗುತ್ತದೆ.
ಮುಂದೆ ಅಕ್ಷತಾರೋಪಣೆ:
ಕ್ರಿಯಾಮೂರ್ತಿಯು ಅಕ್ಷತಾರೋಪಣೆಯ ಸೂಚನೆ ಕೊಡುವನು. ಹತ್ತಿರದ ಬಂಧುಬಳಗದವರು ವೇದಿಕೆಯ ಮೇಲೆ ಇದ್ದವರು ಅಕ್ಷತೆಯನ್ನು ಕೈಲಿ ಹಿಡಿದುಕೊಂಡು ಸಿದ್ಧರಾಗುವರು.
ಎಮ್ಮವರು ಬೆಸಗೊಂಡ ಶುಭಲಗ್ನದಲ್ಲಿ,
ನಿತ್ಯ ಲಿಂಗಾರ್ಚನೆಯ ಮಾಡಿದ ಫಲದಿಂದ.
ರಾಶಿಕೂಟ ಗಣ ಸಂಬಂಧ ಕೂಡಿ ಬಂದಿಹುದೆಂದು,
ದಂಪತಿಗಳಿವರ ಬಾಳು ಹಾಲು-ಜೇನಾಗಲೆಂದು,
ಸೃಷ್ಟಿಕರ್ತನ ಕೃಪೆಯ ಕೊಂಡಾಡಿ ನಾವು,
ಬಸವ ಗುರುವನು ಸ್ಮರಿಸಿ ಅಕ್ಷತೆಯ ಹಾಕುವಾ.
'ಶರಣ ಬಂಧುಗಳೇ, ತಾವೆಲ್ಲ ಅಕ್ಷತೆಯನ್ನು ಮುಟ್ಟಿ, ಹರಸಿ ಕಳಿಸಿದ್ದೀರಿ. ಎಲ್ಲೆಲ್ಲಿಂದಲೋ ಎರಚಿ ನೆಲದ ಮೇಲೆ ಬಿದ್ದು ತುಳಿದು ಹಾಳಾಗಬಾರದೆಂದು ವೇದಿಕೆಯ ಮೇಲಿದ್ದವರಷ್ಟೆ ಹಾಕುವರು. ತಾವು ಜಯಘೋಷ ಮಾಡಿದರೆ ಸಾಕು. ನಂತರ ದಂಪತಿಗಳ ಸಮೀಪ ಬಂದು ಎಲ್ಲರೂ ಹಾಕಬಹುದು'.
ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಪರಶಿವನ ನಿಜ ತೇಜ
ಜಯತು ಕರುಣಾಸಿಂಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀಗುರುಬಸವಾ
ಈಗ ''ಜಯ ಗುರು ಬಸವೇಶ ಹರಹರ ಮಹಾದೇವ' ಎಂದು ಎಲ್ಲರೂ ಜಯಘೋಷ ಮಾಡುವಾಗ, ಮಂಗಲಾಕ್ಷತೆಯನ್ನು ಎಲ್ಲೆಲ್ಲಿಂದಲೋ ಎರಚದೆ ಪೂಜ್ಯರು, ಕ್ರಿಯಾಮೂರ್ತಿ ಮತ್ತು ವೇದಿಕೆಯ ಮೇಲೆ ಇರುವ ಹಿರಿಯರು ನೂತನ ಸತಿಪತಿಗಳ ಬಳಿ ಬಂದು ತಲೆಯ ಮೇಲೆ ಹಾಕಬೇಕು:
ಈಗ ಮಂಗಳವಾದ್ಯಗಳನ್ನು ಮೊಳಗಿಸಬೇಕು.
ಸಂಬಂಧಮಾಲಿಕೆ ವಿನಿಮಯ
ಪತಿಯು ಹೇಳುವುದು :
ಎಲ್ಲಿಯೋ ಬೆಳೆದಿರುವ ನಲ್ಲೆ ಮನವನು ತುಂಬಿ
ಮಲ್ಲಿಗೆಯ ಕಂಪ ಸೂಸಿಹಳು ಈ ಜಾಣೆ
ಬಾಳಿನ ಬಂಡಿಗೆ ಹೆಗಲು ತಾ ಕೊಡಲೆಂದು
ಬಂದಿರುವ ಇವಳ ಹೆಸರು ...............................................
ಎಂದು ಹೆಸರು ಹೇಳಿ ತಾನು ಹಾಕಿಕೊಂಡಿರುವ ಮಾಲೆಯನ್ನು ತನ್ನ ಪತ್ನಿಯ ಕೊರಳಿಗೆ ಹಾಕಬೇಕು.
ಪತ್ನಿಯು ಹೇಳುವುದು :
ಎನ್ನ ಮನವ ಗೆದ್ದವರು
ಎನ್ನ ಹೃದಯ ಕದ್ದವರು
ಚಿನ್ನದಂಧ ಗುಣ ಉಳ್ಳವರು
ಎನ್ನ ನಲ್ಮೆಯ ಪತಿ .............................................. ಇವರ ಒಲುಮೆಯವಳಾನು.
ಎಂದು ಹೆಸರು ಹೇಳಿ, ತಾನು ಹಾಕಿಕೊಂಡಿದ್ದು, ಈಗ ಹೊರತೆಗೆದು ಕೈಲಿ ಹಿಡಿದ ಹೂಮಾಲೆಯನ್ನು ಗಂಡನ ಕೊರಳಿಗೆ ಹಾಕಬೇಕು.
ಗುರು ಬಸವಣ್ಣನವರ ಭಾವಚಿತ್ರದ ಮುಂದೆ ನೈವೇದ್ಯ ಮಾಡಿ ಇಟ್ಟಿರುವ ಪ್ರಸಾದವನ್ನು ಕ್ರಿಯಾಮೂರ್ತಿ ತಂದು ಪತಿ-ಪತ್ನಿಯರ ಕೈಯಲ್ಲಿ ಸ್ವಲ್ಪ ಸ್ವಲ್ಪ ಇಡಬೇಕು. ಆಗ ಆ ಪ್ರಸಾದವನ್ನು ಗಂಡನು ಹೀಗೆ ಹೇಳುತ್ತಾ,
ಶರಣು ಶರಣೆಂಬುವೆವು ಹರಣ ಹಾರುವ ತನಕ
ಕರುಣಿಸಿರಿ ಗುರುವೆ ಬಸವಯ್ಯ | ನಮಗಿನ್ನು
ಹರಸಿರಿ ಹುಲುಸು ಹುಲ್ಲುಲಿಗೊ ||
ಎಂದು ಹೆಂಡತಿಯ ಬಾಯಿಗೆ ಇಡಬೇಕು.
ಆಗ ಪತ್ನಿಯು ಹೀಗೆ ಹೇಳುತ್ತಾ :
ನಡೆವಲ್ಲಿ ನುಡಿವಲ್ಲಿ ಉಡುವಲ್ಲಿ ಉಂಬಲ್ಲಿ
ಬಿಡೆನಯ್ಯ ಇವರ ಹಸ್ತವನು | ಈ ಛಲವ
ಕಡೆ ಮುಟ್ಟಿಸೆನಗೆ ಬಸವೇಶ ||
ಎಂದು ಗಂಡನ ಬಾಯಿಗೆ ಪ್ರಸಾದವನ್ನು ಇಡಬೇಕು. ಈಗ ಗಂಡನು ತನ್ನ ಪತ್ನಿಯ ಹಣೆಗೆ ಕುಂಕುಮದ ಬೊಟ್ಟನ್ನು, ಹೆಂಡತಿಯು ಪತಿಯ ಹಣೆಗೆ ವಿಭೂತಿಯ ಬೊಟ್ಟನ್ನು ಇಡಬೇಕು. ಅಂದರೆ ಇಲ್ಲಿ ಮಾಂಗಲ್ಯ-ಉಂಗುರ, ಮಾಲೆಗಳು, ಪ್ರಸಾದ, ಕುಂಕುಮ-ವಿಭೂತಿ ನಾಲ್ಕು ವಸ್ತುಗಳನ್ನು ವಿನಿಮಯ ಮಾಡಿ ಸತಿ-ಪತಿಗಳು ಒಂದುಗೂಡಿದಂತಾಯಿತು.
ಬಂದಿರುವ ಆಮಂತ್ರಿತರು, ಹಿರಿಯರು ತಾವು ಶುಭವನ್ನು ಹರಸಬೇಕು. ಆಗ ಕ್ರಿಯಾಮೂರ್ತಿ ಹೇಳುವನು :
'ಶರಣ ಬಂಧುಗಳೇ, ಇಂದು ತಾವು ಶರಣ ...............................................ಮತ್ತು ಶರಣೆ ...................................... ಅವರ ವಿವಾಹದಲ್ಲಿ ಭಾಗಿಗಳಾಗಿದ್ದೀರಿ. ನವದಂಪತಿಗಳಾದ ಅವರನ್ನು ಹರಸಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ದಯವಿಟ್ಟು, ನಾನು ಹೇಳಿಕೊಟ್ಟಂತೆ ಹೇಳಿ ಅವರನ್ನು ಹರಸಿರಿ
ಓಂ ಶ್ರೀ ಗುರು ಬಸವಲಿಂಗಾಯ ನಮಃ
ಶರಣ ದಂಪತಿಗಳೇ, ನೀವಿಂದು ದಾಂಪತ್ಯ ಜೀವನವನ್ನು ಸ್ವೀಕರಿಸಿ, ಜೀವನ ಸಂಗಾತಿಗಳಾಗಿದ್ದೀರಿ. ನಿಮ್ಮ ಮೇಲೆ ಪರಮಾತ್ಮನ ಕೃಪೆ ಸದಾ ಇದ್ದು, ಧರ್ಮ ಗುರು ಬಸವಣ್ಣನವರ ಆಶೀರ್ವಾದದಿಂದ, ಆಯುಷ್ಯ, ಆರೋಗ್ಯ, ಭಾಗ್ಯ, ಸಂತಾನ, ಸಂವೃದ್ಧಿ, ಸಂತೃಪ್ತಿ ಎಂಬ ಷಟ್ ಸಂಪತ್ತು ಪ್ರಾಪ್ತಿಯಾಗಲೆಂದು ಹಾರೈಸುತ್ತೇವೆ.
ಜಯ ಗುರು ಬಸವೇಶ ಹರಹರ ಮಹಾದೇವ'
ವಿವಿಧ ಮಂಗಳ ವಾದ್ಯಗಳ ಮೊಳಗುತ್ತವೆ.
ಈಗ ಸತಿಪತಿಯರು ಪ್ರಪ್ರಥಮವಾಗಿ ಬಸವಭಾವಚಿತ್ರಕ್ಕೆ ನಮಸ್ಕರಿಸಬೇಕು. ನಂತರ ಸನ್ನಿಧಿ ವಹಿಸಿರುವ ಪೂಜ್ಯರ ಬಳಿಗೆ ಹೋಗಿ ನಮಸ್ಕರಿಸಬೇಕು. ತಟ್ಟೆಯಲ್ಲಿ ಪೂಜ್ಯರಿಗೆ ಸಲ್ಲಿಸಬೇಕಾಗಿರುವ ಫಲ-ಪುಷ್ಪ-ಕಾಣಿಕೆಗಳನ್ನು ಮಾಲಾರ್ಪಣೆ ಮಾಡಿ, ಸಲ್ಲಿಸಿ, ನಮಸ್ಕರಿಸಿ, ಆಶೀರ್ವಾದ ಪಡೆದುಕೊಳ್ಳಬೇಕು. ತಮ್ಮ ತಾಯಿತಂದೆಯರಿಗೆ, ಕೆಲವು ಹಿರಿಯರಿಗೆ ನಮಸ್ಕರಿಸಬೇಕು. ನಂತರ ಬಂದು ತಮ್ಮ ಜಾಗಗಳಲ್ಲಿ ಕುಳಿತುಕೊಳ್ಳಬೇಕು.
ಪುಷ್ಪವೃಷ್ಟಿ
ಇದು ಕಡ್ಡಾಯ ವಿಧಿಯಲ್ಲ; ಸಂತೋಷ-ಸಂಭ್ರಮಕ್ಕಾಗಿ ಬಗೆಬಗೆಯ ಬಣ್ಣಗಳ ಹೂವುಗಳನ್ನು ಬೆರೆಸಿ, ಹೆಂಗೆಳೆಯರು ನವದಂಪತಿಗಳ ಆತ್ಮೀಯರು ಅವರ ಮೇಲೆ ವರ‍್ಷಿಸಬೇಕು.
ಆಗ ಹೇಳವ ಹಾಡು:
ಹೂವ ಸೂರ‍್ಯಾಡೋಣ ದಂಪತಿಗಳ ಮೇಲೆ
ಶುಭ ಹರಸುತ ನಾವು ಹೂವ ಸೂರ‍್ಯಾಡೋಣ.
ಗುರು ಬಸವಣ್ಣನ ಶ್ರೀರಕ್ಷೆ ಇರಲೆಂದು
ಐಹಿಕ ಬಾಳು ಸುಖಮಯವಾಗಲೆಂದು ||1||
ಗುರುಲಿಂಗ ಜಂಗಮದ ಕಾರುಣ್ಯವಿರಲೆಂದು
ಶರಣ ಬಂಧುಗಳೆಲ್ಲ ಒಂದಾಗಿ ಹರಸಿ
ಆಯುಷ್ಯ ಆರೋಗ್ಯ, ಐಶ್ವಯ್ಯ, ಸಂತಾನ
ಸಂವೃದ್ಧಿ ಸಂತೃಪ್ತಿ ಹರಿದು ತಾ ಬರಲೆಂದು
ಗಣಸಾಕ್ಷಿಯ ನಡುವೆ ದಂಪತಿಗಳಾಗಿ
ಶರಣರ ಪಥದಲ್ಲಿ ಸಾಗುವ ಜೋಡಿಯ ಮೇಲೆ
ಕೆಲವು ತಾಯಂದಿರು ಬಂದು ಕಳಸದಾರತಿ ಬೆಳಗಬೇಕು. ಈ ಆರತಿ ಪದ ಹಾಡಬೇಕು.
ಸತಿಪತಿಗಳಿಗೆ ಆರತಿ
ಬೆಳಗಿರಿ ಬೆಳಗಿರಿ ಆರತಿ ಬೆಳಗಿರಿ
ಹರಸಿರಿ ಶುಭವನ್ನು ದಂಪತಿಗಳಿಗೆ
ದೇವನ ಕರುಣೆಯು ಕಾಪಾಡಲೆಂದು
ಗುರು ಬಸವಣ್ಣನ ರಕ್ಷೆಯು ಇರಲೆಂದು
ಆಯುಷ್ಯ-ಆರೋಗ್ಯ ನಿಮಗಿರಲಿ ಎಂದು
ಸಂಪತ್ತು-ಸಂತಾನ ನಿಮಗಾಗಲೆಂದು
ಮನೆ ಮನ ತುಂಬುವ ಮಡದಿಯಾಗಮ್ಮ
ಹಿರಿಯರ ಸಲಹುವ ಮಗಳಾಗಮ್ಮ
ಸತಿಸುತ ಹಿರಿಯರ ಅರ್ತಿಯಿಂ ಪೊರೆವ
ಕೀರ್ತಿಯ ಕುವರ ನೀನಾಗು ಅಣ್ಣ
ನಯನವೆರಡಾದರೂ ನೋಟವೊಂದಾಗುವೊಲು
ಕಾಯವೆರಡಾದರೂ ಭಾವವೊಂದಾಗಲೆಂದು
ಶರಣರ ಪಥದಲ್ಲಿ ಮುನ್ನಡೆಯಿರೆಂದು
ಸಚ್ಚಿದಾನಂದನ ಸ್ಮರಿಸುತ ಹರಸಿ
ಆರತಿ ಬೆಳಗಿ, ತಾಯಂದಿರು ಅಕ್ಷತಾರೋಪಣ ಮಾಡಿ ಪತ್ನಿಗೆ ಕುಂಕುಮ ಅರಿಷಿಣವನ್ನಿಟ್ಟು ಹೂವು ಮುಡಿಸಬೇಕು. ಪತಿಗೆ ವಿಭೂತಿ ಬೊಟ್ಟನ್ನಿಡಬೇಕು.
ಈಗ ವೃದ್ಧಿಯ ಸಂಕೇತವಾಗಿ ಪತ್ನಿಗೆ ಉಡಿಯನ್ನು ತುಂಬಬೇಕು. ಒಂದು ಬೇರೆ ವಸ್ತ್ರವನ್ನು ಮಡಿಲಲ್ಲಿ ಹಾಕಿ, ಅಕ್ಕಿ, ಎಲೆ-ಅಡಿಕೆ, ಕೊಬ್ಬರಿ-ಬೆಲ್ಲಗಳನ್ನು ಮಡಿಲಲ್ಲಿ ಹಾಕಬೇಕು.
ಗುರು-ಜಂಗಮಮೂರ್ತಿಯಿಂದ ಆಶೀರ್ವಚನ
ಗುರು-ಲಿಂಗ-ಜಂಗಮ ಸಾಕ್ಷಿಯಾಗಿ ವಿವಾಹವಾಗಿರುವ ಶರಣ ದಂಪತಿಗಳೇ ಮತ್ತು ಇಲ್ಲಿ ನೆರೆದಿರುವ ಶರಣ ಬಂಧುಗಳೇ ನಿಮ್ಮೆಲ್ಲರಿಗೂ ಬಸವ ಸ್ಮರಣಪೂರ್ವಕ ಶುಭಹಾರೈಕೆಗಳು. ಬಾಳಿನ ಬಂಡಿಯ ಎರಡು ಚಕ್ರಗಳಂತೆ, ಶರೀರದ ಎರಡು ಕಣ್ಣುಗಳಂತೆ ಒಟ್ಟಾಗಿ ಕಾರ್ಯಮಾಡಲು ಇಂದು ಶರಣ ............................ ..... ಮತ್ತು ಶರಣೆ .......................................... ದಾಂಪತ್ಯ ಜೀವನವನ್ನು ಸ್ವೀಕರಿಸಿದ್ದಾರೆ. ಸುಖ ದುಃಖ, ನೋವು ನಲಿವುಗಳೆರಡರಲ್ಲೂ ಜೊತೆಗೂಡಿ ಬಾಳಿ, ಗುರುಹಿರಿಯರ ಸೇವೆಯನ್ನು ಮನಮುಟ್ಟಿ ಮಾಡಿ, ಉತ್ತಮ ಸಂತಾನವನ್ನು ಜಗತ್ತಿಗೆ ಕೊಡುವುದು ಗೃಹಸ್ಥನ ಕರ್ತವ್ಯ. ಪರಮಾತ್ಮನ ಕೃಪೆಯಿಂದ, ವಿಶ್ವಗುರು ಮಂತ್ರಪುರುಷ ಬಸವಣ್ಣನವರ ಅನುಗ್ರಹದಿಂದ ನವ ದಂಪತಿಗಳಿವರ ಬಾಳು ಆಯುರಾರೋಗ್ಯ ಭಾಗ್ಯ ಸಕಲ ಸಂಪತ್ತಿನಿಂದ ಶೋಭಿಸಲೆಂದು ಹಾರೈಸುತ್ತೇವೆ.
(ಹೇಳುವವರ ಪ್ರತಿಭೆಯ ಮೇಲೆ ವಿಷಯವನ್ನು ವಿಸ್ತರಿಸಬಹುದು.)
ಜಯಗುರು ಬಸವೇಶ ಹರಹರ ಮಹಾದೇವ ಎಂದು ಮುಗಿಸಬೇಕು.
ಮದುವೆಯವರ ಪರವಾಗಿ ಒಬ್ಬರು ಶರಣು ಸಮರ್ಪಣೆ ಮಾಡಿ, ಪೂಜ್ಯರಿಗೆ ಕಾಣಿಕೆ, ಕ್ರಿಯಾಮೂರ್ತಿಗೆ ಫಲ-ತಾಂಬೂಲ-ದಕ್ಷಿಣೆ ಸಲ್ಲಿಸಿ, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಬೇಕು. ಬಂದಿರುವ ಆಹ್ವಾನಿತರು ಈಗ ಒಬ್ಬೊಬ್ಬರೇ ಬಂದು ಪತಿ-ಪತ್ನಿಯರಿಗೆ ಅಕ್ಷತೆ ಹಾಕಿ, ಆರತಿ ಮಾಡಿ, ತಾವು ತಂದಿರುವ ಕೊಡುಗೆ (ಮುಖ್ಯ, ಆಹೇರು)ಗಳನ್ನು ಕೊಡುತ್ತಾ ಹೋಗಬಹುದು. ಅಲ್ಲಿಂದ ಪ್ರಸಾದ ಸ್ವೀಕರಿಸಲಿಕ್ಕೆ ಪ್ರಸಾದ ಮಂಟಪಕ್ಕೆ ನಡೆಯಬಹುದು.
ಪ್ರಸಾದದಾರೋಗಣೆಯ ನಂತರ ತಾಂಬೂಲ, ಫಲ-ತಾಂಬೂಲ, ಗ್ರಂಥಾರ್ಪಣೆ ಮಾಡಿ ಆಮಂತ್ರಿತರನ್ನು ಬೀಳ್ಕೊಡಬಹುದು. ಒಬ್ಬರು ಬಾಗಿಲಲ್ಲಿ ನಿಂತು "ಶರಣು ಶರಣಾರ್ಥಿ” ಹೇಳಿ ಎಲ್ಲರನ್ನೂ ಕಳಿಸಿಕೊಡಬೇಕು.
ಇಲ್ಲಿಗೆ ವಿವಾಹ ಕಾರ್ಯಕ್ರಮವು ಪೂರ್ತಿಗೊಳ್ಳುತ್ತದೆ.
ಆರತಕ್ಷತೆ ( ಉತ್ತರ ಕರ್ನಾಟಕದ ಬೀಗರ ಊಟ [Dinner Party])
ಹಳೆಯ ಮೈಸೂರು ಭಾಗದಲ್ಲಿ ವಿವಾಹವನ್ನು ಬೆಳಗಿನ ಹೊತ್ತು ಪೂರೈಸಿ, ಸಂಜೆ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಎಂದು ಇರಿಸಿಕೊಳ್ಳುತ್ತಾರೆ. ಇದರ ಉದ್ದೇಶವೆಂದರೆ ನಾನಾ ಕಾರಣಗಳಿಂದ ಮದುವೆಗೆ ಬರಲಾರದವರಿಗೆ ಸಾಯಂಕಾಲ ಬರಲು ಸಾಧ್ಯವಾಗುತ್ತದೆ ಎಂಬುದು. ಮುಹೂರ್ತಗಳಿಟ್ಟು ಲಗ್ನ ಮಾಡುವುದರಿಂದ ಒಂದೇ ಸಮಯಕ್ಕೆ ಹಲವಾರು ಮದುವೆಗಳು ಆಗುತ್ತವೆ. ಎಲ್ಲಿಯಾದರೂ ಒಂದು ಕಡೆ ಭಾಗವಹಿಸಬಹುದಷ್ಟೆ. ಉಳಿದಲ್ಲಿಗೆ ಆರತಕ್ಷತೆಗೆ ಹೋಗಿ ಬಿಡುವರು. ಕಾಯಕದ ದಿನವಾದರಂತೂ ರಜೆ ಸಿಗುವುದು ಕಷ್ಟ. ಆಗಲೂ ಆರತಕ್ಷತೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಂಜೆ ಪುನಃ ಆರತಕ್ಷತೆ ಇಡುವುದಿಲ್ಲ ಮದುವೆ ಹೆಣ್ಣಿನವರ ಮನೆಯಲ್ಲಾದರೆ ಗಂಡಿನ ಮನೆಯಲ್ಲಿ, ಗಂಡಿನ ಮನೆಯಲ್ಲಿ ಮದುವೆಯಾದರೆ ಹೆಣ್ಣಿನ ಮನೆಯಲ್ಲಿ. ನಂತರ ಒಂದು ದಿವಸ ಆರತಿ-ಅಕ್ಷತೆಯನ್ನು ಇಡಲಾಗುವುದು. ಇದು ಸ್ಥಳೀಯ ಸ್ನೇಹಿತರು, ಬಂಧು-ಬಳಗದವರು ಭಾಗವಹಿಸಲು ಅನುಕೂಲವಾಗುವುದು. ಅಲ್ಪ ಉಪಾಹಾರ, ಫಲ-ತಾಂಬೂಲ ಕೊಡಲಾಗುವುದು.
ಈ ರೀತಿ ಆರತಕ್ಷತೆ ಇಟ್ಟಾಗ ಮನೆಯಲ್ಲಿ ನವದಂಪತಿಗಳು ಶ್ರೀ ಬಸವೇಶ್ವರ ಪೂಜಾವ್ರತವನ್ನು ಬೆಳಿಗ್ಗೆ ನೆರವೇರಿಸಬೇಕು. ಮೆರವಣಿಗೆ ಸಹ ಮಾಡಬಹುದು. ಅನವಶ್ಯಕವಾಗಿ ಮದ್ದು-ಪಟಾಕಿ ಸುಡಬಾರದು. ವಾಹನದಲ್ಲಿ ಹಿಂಭಾಗದಲ್ಲಿ ಧರ್ಮಗುರು ಬಸವಣ್ಣನವರ ಚಿತ್ರವನ್ನಿಟ್ಟು ಮುಂದೆ ಅಲಂಕೃತ ದಂಪತಿಗಳನ್ನು ಕುಳ್ಳಿರಿಸಿ ಮೆರವಣಿಗೆ ಮಾಡಬಹುದು.
ಹಿಂದಿನ ಕಾಲದಲ್ಲಿ ವಿವಾಹಗಳು ವಾರಗಟ್ಟಳೆ ನಡೆಯುತ್ತಿದ್ದವು. ಹಲವಾರು ದಿವಸ ಎಣ್ಣೆನೀರು ಹಾಕುವುದು, ಕೋರೂಟ ಎಂದು ಮನೆ ಮನೆಗೆ ದಂಪತಿಗಳನ್ನು ಆಹ್ವಾನಿಸಿ ಊಟೋಪಚಾರ ಮಾಡಿಸುವುದು ಮುಂತಾಗಿ ಇದ್ದಿತು. ಇಂದು ಎಲ್ಲರೂ ಅವಸರದ ಯುಗದಲ್ಲಿದ್ದಾರೆ ಮತ್ತು ಬಹಳ ದಿವಸ ಬೀಗರನ್ನು ಉಪಚರಿಸುವುದು ಕಷ್ಟಸಾಧ್ಯವಲ್ಲವೇ ? ಆದ್ದರಿಂದ ವಿವಾಹವನ್ನು ಸಂಕ್ಷಿಪ್ತಗೊಳಿಸುವುದು ಅನಿವಾರ್ಯವಾಗಿದೆ.
ಬಸವ ತತ್ತ್ವದ ಪ್ರಕಾರ ಅಂದರೆ ಲಿಂಗಾಯತ ಧರ್ಮದ ಸಂವಿಧಾನದ ಚೌಕಟ್ಟಿನಲ್ಲಿ ಮದುವೆಯಾಗುವುದೆಂದರೆ ತೀರಾ ಸಪ್ಪೆ ಎಂಬ ಭಾವ ಬಂದು ಮೂಢರು ಮತ್ತು ಭಾವುಕರು, ನಿರಾಸಕ್ತಿ ತಾಳಬಾರದೆಂದು ಸಂಪ್ರದಾಯಿಕ ಲಗ್ನ ವಿಧಿಗೆ ಪರ್ಯಾಯ ವಿಧಿಗಳನ್ನು - ಕನ್ನಡ ಮಂತ್ರಗಳನ್ನು ಹೊಂದಿಸಿದ್ದೇನೆ.
ಇನ್ನೂ ಸಂಕ್ಷಿಪ್ತವಾಗಿ - ಸರಳವಾಗಿ ಮಾಡಿಕೊಳ್ಳಬೇಕು ಎನ್ನುವವರು ಈ ಕ್ರಮ ಅನುಸರಿಸಿದರೆ ಸಾಕು.
೧. ವಧುವರರ ಸ್ನಾನ - ಇಷ್ಟಲಿಂಗ ದೀಕ್ಷೆ.
೨. ಉಪಾಹಾರ
೩. ಬಸವೇಶ್ವರ ಪೂಜಾವ್ರತ
೪. ಧಾರೆ
೫. ಪ್ರತಿಜ್ಞಾ ಸ್ವೀಕಾರ
೬. ಮಾಂಗಲ್ಯಧಾರಣೆ
೭. ಅಕ್ಷತಾರೋಪಣೆ
೮. ಆರತಿ
೯. ಜ್ಞಾನಿಗಳಿಂದ ದಂಪತಿಗಳಿಗೆ - ಹಿತೋಪದೇಶ
೧೦. ಶರಣು ಸಮರ್ಪಣೆ - ಗಣದಾಸೋಹ
ಮನೆ ತುಂಬಿಸುವ ಶಾಸ್ತ್ರ
ತೌರಿನಿಂದ ಗಂಡನ ಮನೆಗೆ ಮೊದಲ ಬಾರಿಗೆ ಸೊಸೆಯು ಬಂದಾಗ ಮನೆ ತುಂಬಿಸುವ ಶಾಸ್ತ್ರ ಮಾಡುವರು. ಹೊಸ್ತಿಲ ಮೇಲೆ ಪಾದ ಇಡಿಸಿ ಆಕೆಯ ಹೆಬ್ಬೆರಳು ಮತ್ತು ಅದರ ಪಕ್ಕದ ಬೆರಳುಗಳ ಮಧ್ಯೆ ಮೊಳೆ ಇಟ್ಟು, ಶಾಶ್ವತವಾಗಿ ಇಲ್ಲಿಯೇ ಇರುವಳು ಎಂಬುದರ ಸಂಕೇತವಾಗಿ ಮೊಳೆಯು ಹೊಸ್ತಿಲ ಒಳಕ್ಕೆ ಹೋಗುವಂತೆ ಹೊಡೆಯುವರು. ಆಮೇಲೆ ಸೇರಿನಲ್ಲಿ ಅಕ್ಕಿ ತುಂಬಿಸಿಟ್ಟು ಕಾಲಲ್ಲಿ ಒದೆಸುವರು. ಅದು ಮನೆಯಲ್ಲೆಲ್ಲ ಸೂರೆಯಾಡಬೇಕು. ಇದೇ ರೀತಿ ಈ ಸೊಸೆ ಬಂದಾಗ ಮನೆ ತುಂಬ ಸಂಪತ್ತು ಸೂರೆಯಾಡುತ್ತದೆ ಎಂಬ ನಂಬಿಕೆ ! ಇವೆಲ್ಲ ಹುಚ್ಚುತನ, ಅಕ್ಕಿಯಂತಹ ಅಮೂಲ್ಯ ವಸ್ತುವನ್ನು ಕಾಲಲ್ಲಿ ಒದೆಸಿ ಮನೆ ತುಂಬ ಚೆಲ್ಲಿಸುವುದು ಸಲ್ಲದು. ಮನೆ ಮುಂದೆ ಚಪ್ಪರ ಹಾಕಿ ತಳಿರು ತೋರಣ ಕಟ್ಟಿರಬೇಕು. ಊರಿನಿಂದ ಬಂದವರನ್ನು ಸಮೀಪದ ಬಂಧುಗಳ ಮನೆಯಲ್ಲಿ ಇಳಿಸಿ ಸ್ನಾನ ಪೂಜೆಯ ನಂತರ ಅಲಂಕರಿಸಿ ಕರೆತರಬೇಕು. ತಲೆ ಬಾಗಿಲಲ್ಲಿ ಸ್ವಾಗತಿಸುವಾಗ ವಿಭೂತಿ ಧರಿಸಿ, ಹೂಮಾಲೆ ಹಾಕಿ, ಆರತಿ ಮಾಡಿ ಷಟಸ್ಥಲಧ್ವಜವನ್ನು ಕೋಲಿಗೆ ಕಟ್ಟಿ ಇಟ್ಟಿದ್ದನ್ನು ಕೊಡಬೇಕು. ಆಕೆ ಅದನ್ನು ಚಪ್ಪರದ ಒಂದು ಕಂಭಕ್ಕೆ ಕಟ್ಟುವಳು.
ಹೊಸ್ತಿಲನ್ನು ದಾಟುವಾಗ “ಜೈ ಗುರು ಬಸವೇಶ ಹರಹರ ಮಹಾದೇವ” ಎಂದು ಘೋಷಣೆ ಮಾಡಿ ಎಲ್ಲರೂ ಹರ್ಷವನ್ನು ಸೂಚಿಸಬೇಕು. ಅಲ್ಲಿಂದ ಆಕೆಯು ಒಳಗೆ ಹೋಗಿ ಬಸವೇಶ್ವರ ಪೂಜೆಯನ್ನು ಮಾಡಬೇಕು. ಅದಕ್ಕೆ ಬೇಕಾದ ಸಾಮಾನುಗಳನ್ನು ಭಾವಚಿತ್ರವನ್ನು ಸಿದ್ಧಮಾಡಿ ಇಟ್ಟಿರಬೇಕು. ಪೂಜೆಯನ್ನು ಮಾಡಿ ನಂತರ ಎಲ್ಲರಿಗೆ, ಓಣಿಯವರಿಗೆ ಪ್ರಸಾದವನ್ನು ವಿತರಿಸಬೇಕು.