Previous ಸಂಸ್ಕಾರದ ವಿವಿಧ ಮುಖಗಳು ಲಿಂಗಧಾರಣೆ-ನಾಮಕರಣ-ತೊಟ್ಟಿಲು Next

ಗರ್ಭ ಲಿಂಗಧಾರಣೆ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಗರ್ಭ ಲಿಂಗಧಾರಣೆ ಮತ್ತು ಸೀಮಂತ

ವ್ಯಕ್ತಿಯ ಬದುಕಿನ ಮೊದಲ ನಿಲ್ದಾಣವು ಜನನ. ಆದರೆ ಇದಕ್ಕೂ ಮೊದಲೇ ಜೀವದ ಚಟುವಟಿಕೆ ಪ್ರಾರಂಭವಾಗುತ್ತದೆ. ತಾಯಿಯು ಗರ್ಭವತಿಯಾಗುತ್ತಲೇ, ಮಗುವಿನ ದೇಹದ ವಿಕಾಸವು ಗರ್ಭವು ನಿಂತ ಕೂಡಲೇ ಪ್ರಾರಂಭವಾದರೆ ಜೀವದ ಪ್ರವೇಶ ಶಿಶುವಿನ ದೇಹಕ್ಕೆ ಆರುತಿಂಗಳು ತುಂಬಿದ ಮೇಲೆ ಪ್ರಾರಂಭವಾಗುತ್ತದೆ. ಆದ್ದರಿಂದ ಮಗುವು ಭೂಮಿಗೆ ಬರುವ ಪೂರ್ವದಲ್ಲಿಯೇ ಅದಕ್ಕೆ ಧಾರ್ಮಿಕ ಸಂಸ್ಕಾರ ಸಿಕ್ಕಬೇಕು. ತಾಯಿಯ ಮೂಲಕ ಗರ್ಭಸ್ತ ಶಿಶುವು ಹೇಗೆ ಆಹಾರವನ್ನು ಪಡೆಯುತ್ತದೆಯೋ ಹಾಗೆಯೇ ಧರ್ಮಸಂಸ್ಕಾರ- ಮಂತ್ರೋಪದೇಶ ಪಡೆಯಬೇಕು ಎನ್ನುವುದೇ ಲಿಂಗಾಯತ ಧರ್ಮದ ಮೂಲಸಿದ್ಧಾಂತ.

ಈ ವಿಶೇಷ ಸಂಸ್ಕಾರ ಜಗತ್ತಿನ ಮತ್ತಾವುದೇ ಧರ್ಮದಲ್ಲಿಯೂ ಇಲ್ಲ. ಇದು ಮಹಾಪ್ರವಾದಿ, ಸ್ವತಂತ್ರ ವಿಚಾರವಾದಿ, ಬಸವಣ್ಣನವರ ವಿಚಾರದ ಪ್ರತಿಫಲ. ನಮ್ಮ ಧಾರ್ಮಿಕ ಜಗತ್ತಿನಲ್ಲಿ ತುಂಬಿರುವ ಹಲವಾರು ಧೂರ್ತ ಸ್ವಾಮಿಗಳು ಮತ್ತು ಸ್ವಾರ್ಥಪರ ಬಾಲಬಡುಕ ಸಾಹಿತಿಗಳು ಬಸವಣ್ಣನವರ ಸ್ವತಂತ್ರ ಮತ್ತು ಶ್ರೇಷ್ಠ ಕೊಡುಗೆಗಳನ್ನೆಲ್ಲ ಅಲ್ಲಿವೆ ಇಲ್ಲಿವೆ ಎಂದು ನಿರಾಧಾರಾತ್ಮಕವಾಗಿ ವಾದಿಸುತ್ತಾರೆ. ಇಂದು ಲಿಂಗವಂತ ಸಮಾಜ ಬಿಟ್ಟು ಬೇರೆ ಯಾವ ಭಾರತೀಯ ಧರ್ಮದಲ್ಲೂ ಈ ಸಂಸ್ಕಾರ ಇಲ್ಲ. ಮತ್ತು ಧರ್ಮ-ಸಂಸ್ಕೃತಿ ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಕೇವಲ ವಚನ ಸಾಹಿತ್ಯದ ಶರಣ ಸಂಸ್ಕಾರ ಇರುವ ಮನೆತನಗಳಲ್ಲಿ ಮಾತ್ರ ಈ ಪದ್ಧತಿ ಆಚರಣೆಯಲ್ಲಿದೆ.

ಇಂದಿನ ಆಧುನಿಕ ವಿಜ್ಞಾನವು ಮಗುವಿನ ಮನಃಸ್ಥಿತಿ, ಬುದ್ಧಿಶಕ್ತಿ, ಮುಂತಾದ್ದೆಲ್ಲವು ತಾಯಿಯ ಮನಃಸ್ಥಿತಿ, ಚಟುವಟಿಕೆ, ಆಚಾರ-ವಿಚಾರ, ಹೆರಿಗೆಯ ಸಮಯದಲ್ಲಿ ಆಗುವ ವೇದನೆ, ಇವೆಲ್ಲವುಗಳ ಮೇಲೆ ಅವಲಂಬಿಸಿದೆ ಎಂದು ಹೇಳುವುದು. ತಾಯಿಯು ಗರ್ಭವತಿ ಇದ್ದಾಗ ಒಳ್ಳೆಯ ಚಿಂತನೆ-ಅಧ್ಯಯನ ಮುಂತಾದುವುಗಳಲ್ಲಿ ತೊಡಗಿ ಮನಸ್ಸಿನ ಸ್ಥಿತಿಯನ್ನು ಉತ್ತಮವಾಗಿ ಕಾಯ್ದುಕೊಂಡರೆ ಮಗುವು ಸಹ ಉತ್ತಮ ಸ್ವಭಾವದ್ದು ಆಗುವುದು. ಇದಕ್ಕೆ ಪೂರಕವಾಗಲೆಂದು ಈ 'ಗರ್ಭ ಲಿಂಗಧಾರಣ” ಅಳವಡಿಸಲಾಗಿದೆ.

ನಮಗೆ ಇದರ ಉಲ್ಲೇಖ ಚನ್ನಬಸವಣ್ಣನವರ ಜನನ ಪ್ರಸಂಗದಲ್ಲಿ ಬರುತ್ತದೆ. ಅಕ್ಕನಾಗಲಾಂಬಿಕೆಯು ಗರ್ಭಿಣಿ ಇದ್ದಾಗ ಗುರು ಬಸವಣ್ಣನವರೇ ಗರ್ಭಸ್ತ ಶಿಶುವಿಗೆ ಮಂತ್ರೋಪದೇಶ ಮಾಡಿದ್ದಾರೆ. ಮುಂದೆ ಚನ್ನಬಸವಣ್ಣ ಬಾಲಕನಾದಾಗ ಲಿಂಗದೀಕ್ಷೆ ಮಾಡಲು ಬಸವಣ್ಣನವರನ್ನು ಕೇಳುತ್ತಾನೆ. ಬಹುಶಃ ಸೋದರಳಿಯನಿಗೆ ತಾವು ಮಾಡುವುದು ಬೇಡ, ಬೇರೆ ಯಾವ ಶರಣರಿಂದಾಗಲೀ ಮಾಡಿಸೋಣ ಎಂದು ಅವರು ನಿರಾಕರಿಸುತ್ತಾರೆ. ಆಗ ಚನ್ನಬಸವಣ್ಣ ಹೇಳುವನು:

ಅಂಜದಿರಿ ಅಂಜದಿರಿ
ನಿಮ್ಮ ಪ್ರಮಥರ ಮುಂದೆ ನಿಮಗೆ ಅಹುದಹುದೆನಲು
ನಿಮಗನಾದಿಯ ಶಿಶು ನಾನಯ್ಯಾ !
ಕೆಡುವುದ ಗುರುವಿನುಪದೇಶ, ಪಿಂಡ ಮರೆವುದೆ ಶಿವಜ್ಞಾನವ
ನೀವು, ನಾನು ಹೊಟ್ಟೆಯಲ್ಲಿರ್ದಂದು
ವಿಭೂತಿಯ ಪಟ್ಟವ ಕಟ್ಟಿದಂದ ಅನುಗ್ರಹವಾಯಿತ್ತು. - ಚೆನ್ನಬಸವಣ್ಣ

ಮಗುವು ತಾಯಿಯ ಗರ್ಭದಲ್ಲಿರುವಾಗ ಉಪದೇಶ ಹೊಂದಿದರೂ ಅದರ ಪರಿಣಾಮ ಅಚ್ಚಳಿಯದೆ ಉಳಿದಿರುತ್ತದೆ, ಆಗ ಪಿಂಡ ಪಡೆದುಕೊಂಡ ಶಿವಜ್ಞಾನ ಎಂದೂ ಹೋಗದು ಎಂಬ ಮಾತು ಈ ವಚನದಲ್ಲಿ ಸ್ಪಷ್ಟಗೊಂಡಿದೆ. ಮತ್ತು ಶ್ರೀಗುರುಬಸವಣ್ಣನವರು ತಾಯಿಯ ಗರ್ಭದಲ್ಲಿದ್ದ ಚನ್ನಬಸವಣ್ಣನಿಗೆ ವಿಭೂತಿ ಪಟ್ಟ ಕಟ್ಟಿದ್ದಾರೆ ಎಂಬುದಕ್ಕೆ ಈ ವಚನ ಜ್ವಲಂತ ಸಾಕ್ಷಿಯಾಗಿದೆ.

ಗರ್ಭ ಲಿಂಗಧಾರಣೆ ಕ್ರಮ

ಗುರು (ಕ್ರಿಯಾ) ಮೂರ್ತಿಯು ಮನೆಗೆ ಆಗಮಿಸಿ, ಸ್ನಾನ ಮಾಡಿ ಇಷ್ಟಲಿಂಗಾರ್ಚನೆ ಮಾಡಬೇಕು. ಇಷ್ಟಲಿಂಗ ತೀರ್ಥವನ್ನು ಒಂದು ಬಟ್ಟಲಲ್ಲಿ ಸಂಗ್ರಹಿಸಿ ಮಡಿವಸ್ತ್ರ ಮುಚ್ಚಿ ಇಡಬೇಕು. ಬಸವೇಶ್ವರ ಪೂಜಾವ್ರತವನ್ನು ಸಮಯಾನುಕೂಲಕ್ಕೆ ತಕ್ಕಂತೆ ೧,೨,೫ ಹೀಗೆ ಗರ್ಭವತಿ ಮಹಿಳೆ ಮತ್ತು ಆಕೆಯ ಪತಿಯ ಕೈಯಿಂದ ಮಾಡಿಸಬೇಕು. ಬಸವೇಶ್ವರ ಪೂಜಾವ್ರತ ಮಾಡುವ ವಿಧಾನ ತಿಳಿದ ಮನೆಯವರಿದ್ದರೆ ಅವರು ಮೊದಲು ದಂಪತಿಗಳಿಂದ ಮಾಡಿಸಿ, ಕಡೆಯ ಪೂಜೆಯನ್ನು ಗುರುಮೂರ್ತಿ ಬಂದಾಗ ಇಟ್ಟುಕೊಳ್ಳಬಹುದು. ಮಂತ್ರಪಠಣ ಮಾಡುತ್ತ, ದಂಪತಿಗಳು ಅದನ್ನು ಪುನರುಚ್ಚರಿಸಿ ಪತ್ರೆ-ಪುಷ್ಪಗಳನ್ನು ಏರಿಸುವಂತೆ ತಿಳಿಸಬೇಕು. ಪುಷ್ಪಾರ್ಚನೆ ಆದ ಮೇಲೆ ಮಹಾಮಂಗಲವನ್ನು ಮಾಡಬೇಕು. ಬಸವ ಲಿಂಗ ಮಂತ್ರ ಪಠಣ ಮಾಡಿ ಮಂತ್ರೋದಕ ಸಿದ್ಧಪಡಿಸಿ, ಮೊದಲು ಮಾಡಿದ ಲಿಂಗತೀರ್ಥದ ಬಟ್ಟಲಲ್ಲಿ ಹಾಕಿ ಇಟ್ಟುಕೊಳ್ಳಬೇಕು.

ದಂಪತಿಗಳನ್ನು ಎದುರಿಗೆ ಕೂರಿಸಿಕೊಂಡು, ಮುಂದೆ ಮಗುವಿಗೆ ಧಾರಣ ಮಾಡಲಿರುವ ನಾಗೋಸ ಅಥವಾ ಚಿಕ್ಕ ಕಂಥೆಯ ಲಿಂಗವನ್ನು ಮೊದಲು ಶುದ್ಧಜಲದಿಂದ ತೊಳೆದು, ನಂತರ ಮಾಡಿಕೊಂಡು ಇಟ್ಟಿರುವ ತೀರ್ಥದಿಂದ ಹೊಸ ಲಿಂಗವನ್ನು ಶುದ್ಧಿಮಾಡಿ, ನಂತರ ತಮ್ಮ ಅಂಗೈಯಲ್ಲಿಟ್ಟುಕೊಂಡು ಪೂಜಿಸಿ, ಚಿತ್ಕಳಾಭರಿತವಾಗಿ ಮಾಡಬೇಕು. ಮನದಲ್ಲಿ ಮಂತ್ರವನ್ನು ಪಠಿಸುತ್ತ ದಿಟ್ಟಿಸಿ ಇಷ್ಟಲಿಂಗವನ್ನು ನೋಡಿ ಚಿತ್ಕಳೆಯನ್ನು ತುಂಬಬೇಕು. ೧೦೮ ಸಲ ಓಂ ಲಿಂಗಾಯ ನಮಃ ಪಠಣ ಆದನಂತರ ಇಷ್ಟಲಿಂಗದ ಮುಂದಿಟ್ಟ ಕಲ್ಲುಸಕ್ಕರೆ ಪ್ರಸಾದವನ್ನು ದಂಪತಿಗಳಿಗೆ ಕೊಡಬೇಕು. ತೀರ್ಥವನ್ನು ತಲೆಯ ಮೇಲೆ ಸಿಂಪಡಿಸಿ, ನಂತರ ಭಸ್ಮವನ್ನು ಉಭಯತರಿಗೂ ಧರಿಸಬೇಕು.

ಗರ್ಭವತಿಯ ಎಡ ಅಂಗೈಯಲ್ಲಿ ಪಂಚಕೋನ ಪ್ರಣವವನ್ನು ಬರೆದು - ನಾಗೋಸ (ಲಿಂಗ)ವನ್ನಿಟ್ಟು ಭಸ್ಮಧರಿಸಿ, ಪತ್ರೆ-ಪುಷ್ಪ-ಕಲ್ಲು ಸಕ್ಕರೆ ಇಡಬೇಕು. ಈಗ ತಲೆಯ ಮೇಲೆ ಕೈಗಳನ್ನಿಟ್ಟು ಮಂತ್ರವನ್ನು ಉಸುರಿ. ಅವರಿಂದ ಪುನರುಚ್ಚರಿಸಬೇಕು. ೯ ಬಾರಿ ಮಂತ್ರೋಚ್ಚಾರ ಆದ ಮೇಲೆ, ಆಕೆಗೆ ಕೊಂಚ ಹೊತ್ತು ತ್ರಾಟಕದ ಮೂಲಕ ಇಷ್ಟಲಿಂಗವನ್ನು ನೋಡಿ, ಮಂತ್ರಜಪ ಮಾಡಲು ಹೇಳಬೇಕು. ಕುರಂಗ ಮುದ್ರೆಯಿಂದ ಇಷ್ಟಲಿಂಗಕ್ಕೆ ನಮಸ್ಕರಿಸಲು ಹೇಳಬೇಕು. ದಂಪತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಬೇಕು.

ಬಸವ (ಲಿಂಗಾಯತ) ಧರ್ಮಾನುಯಾಯಿಗಳ ಪ್ರತಿಜ್ಞಾವಿಧಿ ಹನ್ನೆರಡು ಪ್ರತಿಜ್ಞೆಗಳು (Twelve Oaths)

ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರು ಬಸವಂಗೆ ಶರಣಾಗಹೆ, ಲಿಂಗದೇವನಿಗೆ ಶರಣಾಗಹೆ, ಶರಣಗಣಕ್ಕೆ ಶರಣಾಗಿಹೆ, ಗಣಪದವಿಯನ್ನು ನಾ ಹೊಂದಿದೆ.

1ಓಂ ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ.
2ಶ್ರೀ ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ.
3ಗು ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ.
4ರು ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ.
5 ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ.
6 ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ.
7 ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ.
8ಲಿಂ ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ.
9ಗಾ ಪರಧನ, ಪರಸ್ತ್ರೀಯರನ್ನು ಬಯಸುವುದಿಲ್ಲ.
10ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ.
11ನಮಗೆ ಜನಿಸಲಿರುವ ಮಗುವನ್ನು ಲಿಂಗಾಯತ ಧರ್ಮಾನುಯಾಯಿಯನ್ನಾಗಿ ಮಾಡಿ, ಬಸವ ಪಥದಲ್ಲಿ ಮುನ್ನಡೆಸುತ್ತೇವೆ.
12ಮಃ ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ.

ಜಯಗುರು ಬಸವೇಶ ಹರಹರ ಮಹಾದೇವ.

ನಂತರ ತೀರ್ಥ - ಪ್ರಸಾದವನ್ನು ಇಷ್ಟಲಿಂಗಕ್ಕೆರೆದು ಸ್ವೀಕರಿಸಲು ಇಬ್ಬರಿಗೂ ಹೇಳಬೇಕು. ಮಹಿಳೆ ಈಗ ತಾನು ಸ್ವೀಕರಿಸಿರುವ ಕೂಸಿನ ಇಷ್ಟಲಿಂಗಕ್ಕೆರೆದು, ಆಕೆಯ ಪತಿ ಕರಡಿಗೆಯಿಂದ ತನ್ನ ಇಷ್ಟಲಿಂಗ ತೆಗೆದು ಅದಕ್ಕೆರೆದು ಕರುಣ (ತೀರ್ಥ) ಪ್ರಸಾದ ಸ್ವೀಕರಿಸಬೇಕು.

ಒಂದು ಚಿಕ್ಕ ಬಟ್ಟೆಯಲ್ಲಿ ಈ ಇಷ್ಟಲಿಂಗವನ್ನು (ಅಥವಾ ನಾಗೋಸ) ಕಟ್ಟಿ, ಗರ್ಭಿಣಿಯು ತನ್ನ ಕರಡಿಗೆಯ ದಾರಕ್ಕೆ ಕಟ್ಟಿಕೊಳ್ಳಬೇಕು. ನಿತ್ಯವೂ ಪೂಜಿಸಿ ಲಿಂಗಧಾರಣೆಯ ಸಮಯದಲ್ಲಿ ಮಗುವಿಗೆ ಧರಿಸಬೇಕು. ಅಷ್ಟೊಂದು ನಿಷ್ಠೆಯಿಲ್ಲದವರು ಎತ್ತಿಟ್ಟು, ಲಿಂಗಧಾರಣೆಯ ಸಮಯದಲ್ಲಿ ಕಟ್ಟುವರು.

ಗರ್ಭಸ್ತ ಶಿಶುವಿನ ಲಿಂಗಧಾರಣೆಯಲ್ಲಿ ಬಹುಮಹತ್ವದ ಅಂಗ ವಿಭೂತಿ ಪಟ್ಟ ಕಟ್ಟುವುದು. ಅಂದರೆ ಗರ್ಭಿಣಿಯ ಹೊಟ್ಟೆಗೆ ವಿಭೂತಿ ಧರಿಸುವುದು. ಗಂಡು ಮಕ್ಕಳು ಗುರುಗಳಿರುವುದರಿಂದಲೇ ಬಹಳ ಜನ ಈ ಪದ್ಧತಿಯನ್ನು ಕೈ ಬಿಡುತ್ತಿದ್ದಾರೆ. ಮಾಡುವ ಗುರುಗಳಿಗೂ ಮುಜುಗರ, ಮಾಡಿಸಿಕೊಳ್ಳುವ ಮಹಿಳೆಯರಿಗೂ ಸಂಕೋಚ. ಹೆಣ್ಣು ಮಕ್ಕಳು ಶರಣೆಯರಾಗಿ, ಗುರುಮೂರ್ತಿಯಾಗಿ ಈ ಸಂಸ್ಕಾರ ನೆರವೇರಿಸುವ ಪರಿಪಾಠ ಬೆಳೆಸುವುದು ಸರ್ವ ಶ್ರೇಷ್ಠ. ನಾವು ದೀಕ್ಷಾ ಪದ್ಧತಿ ಆರಂಭಿಸಿದ ಮೇಲೆ ಗರ್ಭ ಲಿಂಗಧಾರಣೆ ಮಾಡುವ ಪರಿಪಾಠ ಜಾಸ್ತಿಯಾಗಿದೆ. ಇದು ಸ್ವಾಭಾವಿಕ.

ಪರಿಹಾರ : ಹೆಣ್ಣುಮಕ್ಕಳು ಗುರುಗಳಿದ್ದು ಅವರಿಂದ ಮಾಡಿಸುವುದು ಅತ್ಯಂತ ಸೂಕ್ತ. ಗುರುಮೂರ್ತಿ - ಕ್ರಿಯಾಮೂರ್ತಿಗಳಾಗಿ ವಿಧಿವಿಧಾನಗಳನ್ನು ನೆರವೇರಿಸಲು ಬರುವವರು ಶರಣರೇ ಇರಲಿ ಅಥವಾ ಸಾಂಪ್ರದಾಯಿಕ ಅಯ್ಯನವರೇ ಇರಲಿ, ಅವರ ಧರ್ಮಪತ್ನಿಯನ್ನೂ ಜೊತೆಗೆ ಕರೆತಂದು ಅವರ ಕಡೆಯಿಂದ ಮಾಡಿಸುವುದು ಎರಡನೆಯ ಪರಿಹಾರ.

ಗುರು (ಕ್ರಿಯಾ) ಮೂರ್ತಿ ಮಂತ್ರಿಸಿಕೊಟ್ಟ ವಿಭೂತಿಯನ್ನು ಗರ್ಭವತಿಯ ತಾಯಿಯಾಗಲಿ, ಅಕ್ಕನಾಗಲಿ, ಯಾರೇ ಹಿರಿಯ ಮಹಿಳೆಯರು ಧರಿಸುವುದು ಮೂರನೆಯ ಪರಿಹಾರ. ಗರ್ಭವತಿಗೆ ಮೇಲು ಹೊಟ್ಟೆಯ ಭಾಗದಲ್ಲಿ ಸೀರೆಯನ್ನು ಸಡಿಲ ಮಾಡಿಕೊಳ್ಳಲು ಹೇಳಿ, ಅನುಗ್ರಹಿಸುವ ಮಹಿಳೆಯರು ಮೂರು ಬೆರಳಿನಿಂದ ಭಸ್ಮವನ್ನು ಧರಿಸಬೇಕು. ಆಗ “ಓಂ ಶ್ರೀ ಗುರುಬಸವ ಲಿಂಗಾಯ ನಮಃ, ಓಂ ಲಿಂಗಾಯ ನಮಃ ಎಂದು ಮೂರು ಬಾರಿ ಹೇಳಿ, ಮನಸ್ಸಿನಲ್ಲಿ 'ಗುರುವಿನ ಕೃಪೆಯಿಂದ ಸುಖವಾಗಿ ಹೆರಿಗೆಯಾಗಲಿ, ಮಗುವು ಆರೋಗ್ಯವಾಗಿರಲಿ, ಶಾಂತಿ - ಸದ್ಗುಣಗಳಿಂದ ಕೂಡಿರಲಿ, ಭಕ್ತಿವಂತನಾಗಿ ಬಸವ ಪಥದಲ್ಲಿ ನಡೆಯುವಂತಾಗಲಿ.” ಎಂದು ಸಂಕಲ್ಪಿಸಿ, ಹಾರೈಸಬೇಕು.

ನಂತರ ಉಳಿದ ಮಂದಿಗೆಲ್ಲ ತೀರ್ಥ-ಪ್ರಸಾದ ವಿತರಣೆ, ಗುರುಮೂರ್ತಿ ಮತ್ತು ಶರಣಗಣಂಗಳಿಗೆ ಪ್ರಸಾದ ದಾಸೋಹ. ಇವಿಷ್ಟೂ ಧಾರ್ಮಿಕ ವಿಧಿಗಳಾದರೆ, ಸಂಜೆ ಪತಿ-ಪತ್ನಿಯರನ್ನು ಕೂರಿಸಿ ಆರತಿ ಮಾಡುವುದು, ಅವರಿಗೆ ಉಡಿ ತುಂಬುವುದು, ಕೊಡುಗೆಗಳನ್ನು ಕೊಡುವುದು ಸಾಂಸ್ಕೃತಿಕ ಕಾರ್ಯಕ್ರಮ. ಅವರವರ ಆರ್ಥಿಕ ಶಕ್ತ್ಯಾನುಸಾರ ಅವರು ಮಾಡಬಹುದು. ಅದನ್ನೆಲ್ಲ ಕಾಣಿಸುವ ಅಗತ್ಯವಿಲ್ಲಿಲ್ಲ. ಈ ಸಂಸ್ಕಾರವನ್ನು ಕೇವಲ ಚೊಚ್ಚಲು ಹೆರಿಗೆಗೆ ಮಾಡಬೇಕೆಂದೇನೂ ಇಲ್ಲ. ಎಲ್ಲ ಮಕ್ಕಳಿಗೂ ಆಶೀರ್ವಾದ ಅಗತ್ಯ. ಆದ್ದರಿಂದ ಎಲ್ಲ ಮಕ್ಕಳಿಗೂ ಗರ್ಭವತಿಯಾದಾಗ ಈ ಕಾರ್ಯ ಮಾಡಿಸಿಕೊಳ್ಳಬೇಕು. ಸೀಮಂತ ಐಚ್ಚಿಕ (optional) ಇದ್ದರೂ ಗರ್ಭಲಿಂಗಧಾರಣೆ ಕಡ್ಡಾಯ (Compulsary) ಇರಬೇಕು.

ಹೆರಿಗೆ

ವಿವಾಹಿತ ಮಹಿಳೆಯ ಜೀವನದಲ್ಲಿ ಅತ್ಯಂತ ನೋವಿನ ಸನ್ನಿವೇಶ ಚೊಚ್ಚಲು ಹೆರಿಗೆ ಎಂದು ಹೇಳುತ್ತಾರೆ. ದೇವರ - ಧರ್ಮಗುರುವಿನ ನಾಮಸ್ಮರಣೆ ಮಾಡುತ್ತಾ ನೋವನ್ನು ಮರೆಯಲು ಯತ್ನಿಸಬೇಕು. ಹೆರಿಗೆ ತಡವಾದರೆ ಹಳ್ಳಿಗಳಲ್ಲಿ ವೈದ್ಯರನ್ನು ಕರೆಸಿ ತೋರಿಸುವುದು ಬಿಟ್ಟು ಮೌಡ್ಯತೆಯಿಂದ ಏನೇನೋ ಮಾಡುತ್ತಾರೆ. ಮೇಲಿನಿಂದ ಗರ್ಭವತಿಯನ್ನು ತೂಗಿಬಿಡುವ ಕ್ರೂರ ಪದ್ಧತಿ ಸಹ ಇಂದಿಗೂ ಕೆಲವು ಆದಿವಾಸಿಗಳಲ್ಲಿದೆಯಂತೆ.

ಗರ್ಭಿಣಿಯರಲ್ಲಿ ನೋವು ಕಾಣಿಸಿಕೊಂಡು, ಪುನಃ ನಿಂತುಹೋದರೆ ಹಳ್ಳಿಗಳಲ್ಲಿ ಬೇಗನೆ ಹೆರಿಗೆಯಾದ ಮಹಿಳೆಯನ್ನು ಕರೆಸಿ ಆಕೆಯ ಸೀರೆಯ ನೆರಿಗೆಗಳನ್ನು ಈಕೆಯ ಹಣೆಗೆ ಮುಟ್ಟಿಸುವುದು, ಏಕಪತ್ನಿ ವ್ರತಸ್ಥನೆಂದು ಹೆಸರುಳ್ಳವನ ಹಸ್ತ ಮುಟ್ಟಿದ ನೀರನ್ನು ಗರ್ಭಿಣಿಯ ಮೇಲೆ ಸಿಂಪಡಿಸುವುದನ್ನು ಮಾಡುವರಂತೆ.[2]

ಗರ್ಭವತಿಯ ಹೊಕ್ಕಳು ಮತ್ತು ಗರ್ಭದ ಮೇಲ್ಬಾಗದಲ್ಲಿ ಎಣ್ಣೆ ಸವರಿ ಮೃದುವಾಗಿ ಮರ್ದನ ಮಾಡುವ, ಬಿಸಿಯ ಹಾಲಿನಲ್ಲಿ ತುಪ್ಪ ಹಾಕಿ ಕುಡಿಸುವ ಪದ್ಧತಿಯೂ ಉಂಟಂತೆ.[2] ಇನ್ನು ಹಳ್ಳಿಯ ಮಾಂತ್ರಿಕರ ಕೈಯಿಂದಲೂ ಬಗೆಬಗೆಯ ಚಿಕಿತ್ಸೆ ಮಾಡಿಸುವರಂತೆ.

ಬದಲಾದ ಈ ಕಾಲದಲ್ಲಿ ವೈದ್ಯರು, ಸೂಲಗಿತ್ತಿಯರ ನೆರವನ್ನು ಪಡೆಯುವುದು ಶ್ರೇಯಸ್ಕರ. ದೇವರ ಕೃಪೆ ಬಹಳ ಅಗತ್ಯ. ಆದ್ದರಿಂದ ಅವೈಜ್ಞಾನಿಕ ವಿಧಾನ, ಮಂತ್ರವಾದಿಗಳ ಮೊರೆ ಹೋಗದೆ ಗುರು ಬಸವಣ್ಣನವರಲ್ಲಿ, ಸೃಷ್ಟಿಕರ್ತನಾದ ಪರಮಾತ್ಮನಲ್ಲಿ ಶರಣರು-ಮಹಾತ್ಮರಲ್ಲಿ ನಂಬಿಕೆ ಇಟ್ಟು ಪ್ರಾರ್ಥಿಸುವುದು ಒಳ್ಳೆಯದು. ತಾವು ಪೂಜೆ ಮಾಡಿ ಗರ್ಭಿಣಿಗೆ ವಿಭೂತಿ ಧರಿಸುವುದು, ತೀರ್ಥ ಕೊಡುವುದು, ಮಂತ್ರೋದಕ ಮಾಡಿ ಕುಡಿಸುವುದು, ಮನಸ್ಸಿನಲ್ಲಿ ಮಂತ್ರಜಪ ಮಾಡುವುದು ಸೂಕ್ತ.

ಮಗುವಿನ ಜನನ

ಮಗು ಹುಟ್ಟಿ ಅಳು-ಉಸಿರಾಟ ಎಲ್ಲ ಸುಗಮವಾಗಿ ಸುರಕ್ಷಿತ ಸ್ಥಿತಿಗೆ ಬಂದಾಗ ಎಲ್ಲರಿಗೂ ನಿರಾಳ ಎನ್ನಿಸುವುದು ಸ್ವಾಭಾವಿಕ. ಹುರಿಕೊಯ್ದ ಬಳಿಕ ತಾಯಿ ಮತ್ತು ಮಗುವಿನ ಸ್ನಾನಕ್ಕೆ ವ್ಯವಸ್ಥೆ ಮಾಡಬೇಕು: ಶರಣರ ಅಭಿಪ್ರಾಯದಲ್ಲಿ ಗುರುಪಾದೋದಕದಲ್ಲಿ ಸ್ನಾನ-ಲಿಂಗಧಾರಣೆ ಆಗಬೇಕು.

ಜಾತಕರ್ಮ ಶುಭಕರ್ಮ ಪ್ರೇತಕರ್ಮವ
ಮಾಡುವರು ಲೋಕದ ಮನುಜರು
ಈ ಪರಿಯ ಮಾಡುವನೇ ಶಿವಭಕ್ತ ?
ಅದೆಂತೆಂದಡೆ ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ.
(ಚ.ಬ.ವ ೨೨೭)

ಹುಟ್ಟಿದ ಶಿಶುವಿಗೆ ಲಿಂಗಧಾರಣವ ಮಾಡದೆ ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೇ ಇಪ್ಪತ್ತನೆಯ ಆಚಾರ.

ಚನ್ನಬಸವಣ್ಣನವರ ವಚನಗಳಲ್ಲಿ ಹೀಗೆ ಆದೇಶಿಸಲಾಗಿದೆ. ಇಲ್ಲಿ ಗುರು ಪಾದೋದಕವೆಂದರೆ ಗುರು ಬಸವಣ್ಣನವರ ನಾಮಸ್ಮರಣೆ ಮಾಡಿ ಸಿದ್ಧಪಡಿಸಿದ ಮಂತ್ರೋ(ಹಸ್ತೋ)ದಕ.

ಪಂಚಕೋನ ಪ್ರಣವ ಮಂತ್ರೋದಕವನ್ನು ಸಿದ್ಧಪಡಿಸುವ ವಿಧಾನ : ಐದೂ ಬೆರಳುಗಳಿಗೆ ವಿಭೂತಿ ಧರಿಸಿಕೊಳ್ಳಬೇಕು. ಹೆಬ್ಬೆರಳಿನಿಂದ ನಾಲ್ಕೂ ಬೆರಳುಗಳ ಮೂರು ಗಣ್ಣುಗಳನ್ನು ಎಣಿಸುತ್ತಾ 12 ಬಾರಿ ಓಂ ಶ್ರೀ ಗುರುಬಸವ ಲಿಂಗಾಯ ನಮಃ ಎಂದು ಪಠಿಸಿ, ನೀರಿನಲ್ಲಿ ನಡು ಬೆರಳಿನಿಂದ ಪಂಚಕೋನ ಪ್ರಣವ ಬರೆದು, ಐದೂ ಬೆರಳುಗಳನ್ನೂ ಅದ್ದಿ ಮಂತ್ರೋದಕ (ಇದಕ್ಕೆ ಹಸ್ತೋದಕ ಎಂದೂ ಅನ್ನಬಹುದು) ವನ್ನು ಸಿದ್ಧಪಡಿಸಬೇಕು. ಸ್ವಚ್ಛತೆಗೆ ಗಮನ ಕೊಡಬೇಕು. ನೀರು ಮಲಿನವಾಗಿರಬಾರದು, ವಿಭೂತಿ ಮೇಲೆ ಧೂಳು ಕೂತಿರಬಾರದು. ಕೈ ಸ್ವಚ್ಛವಿರಬೇಕು.
ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ವಿಭೂತಿಯ ನೆರವಿನಿಂದ ಮಂತ್ರೋದಕ ಮಾಡಿ ಉಳಿದ ಬಿಸಿನೀರಿಗೆ ಬೆರೆಸಿ ತಾಯಿ-ಮಗುವಿಗೆ ಸ್ನಾನ `ಮಾಡಿಸಬೇಕು. ಸ್ನಾನಾನಂತರ ತಾಯಿ ಸಂಕ್ಷಿಪ್ತವಾಗಿಯಾದರೂ ಪೂಜೆ ಮಾಡಿ, ತೀರ್ಥ ಸ್ವೀಕಾರ ಮಾಡಬೇಕು. ಮಗುವಿಗೆ “ಓಂ ಶ್ರೀ ಗುರುಬಸವಲಿಂಗಾಯ ನಮಃ, ಓಂ ಲಿಂಗಾಯ ನಮಃ ” ಎಂದು ಶ್ರೀಗುರು ಬಸವಣ್ಣನವರ ಭಾವಚಿತ್ರದ ಪಾದಕ್ಕೆ ಸ್ಪರ್ಶಿಸಿದ ಭಸ್ಮವನ್ನು ಧಾರಣ ಮಾಡಿ, ಗರ್ಭಲಿಂಗಧಾರಣೆಯ ಕಾಲದಲ್ಲಿ ಕಟ್ಟಿದ ಲಿಂಗವನ್ನು ತಾಯಿ-ಅಜ್ಜಿ ಮುಂತಾದವರು ಮಗುವಿಗೆ ಧರಿಸಿ, ತಾಯಿ ಸಿದ್ಧಪಡಿಸಿದ ತೀರ್ಥದ ಒಂದು ಹನಿಯನ್ನು ಬಾಯಿಯಲ್ಲಿ ಬಿಟ್ಟು, ನಂತರ ಎದೆ ಹಾಲು ಕುಡಿಸಬೇಕು. ದೇವರ ಕೃಪೆ ಪಡೆದು ತಾಯಿಯ ಹಾಲನ್ನು ಈ ಮರ್ತ್ಯಕ್ಕೆ ಬಂದ ಬಳಿಕ ಕುಡಿಯುವುದು ಶ್ರೇಯಸ್ಕರವಲ್ಲವೇ ?

ಸಾಮಾನ್ಯವಾಗಿ ಇನ್ನಿತರ ಧರ್ಮಗಳವರಿಗಿಂತಲೂ ಲಿಂಗಾಯತ ಸಮಾಜದಲ್ಲಿ ಅಜ್ಞಾನ, ಮೂಢ ನಂಬಿಕೆ, ಧರ್ಮಾಚರಣೆಯ ಬಗ್ಗೆ ನಾಚಿಕೆ, ಹೊರಗೆ ಧಾರ್ಮಿಕ ಪ್ರವೃತ್ತಿ ತೋರಿಸಿಕೊಳ್ಳಲು ಸಂಕೋಚ ಕಾಡುತ್ತಿರುತ್ತವೆ. ಈ ಸಂಕೋಚವು ಮುಸ್ಲಿಮರಲ್ಲಾಗಲೀ, ಸಿಖ್ಖರಲ್ಲಾಗಲೀ ಇರದು. ಇದರಿಂದಾಗಿಯೇ ಉಳಿದವರು ಲಿಂಗಾಯತರನ್ನು ಛೇಡಿಸುತ್ತಾರೆ, ಮುಸ್ಲಿಂ, ಸಿಖ್ಖರ ತಂಟೆಗೆ ಹೋಗರು.

ಅಂಗದ ಮೇಲೆ ಇಷ್ಟಲಿಂಗವಿದ್ದರೆ - ಅದೂ ಗುರುಕೃಪೆಯಿಂದ ಉದ್ದೀಪಿತವಾದುದು, ಚಿತ್ಕಳಾಭರಿತವಾದುದು, ಒಂದು ರಕ್ಷೆ ಇದ್ದಂತೆ. ವೈದ್ಯರು ತೆಗೆಸುತ್ತಾರೆ ಎಂದು ಇವರು ತೆಗೆಯುತ್ತಾರೆ. ಅದೇ ಲೌಕಿಕ ಪತಿಯ ಕುರುಹಾದ ಮಾಂಗಲ್ಯವನ್ನು ಸುತರಾಂ ತೆಗೆಯುವುದಿಲ್ಲ. ಹೆರಿಗೆ ಸಮಯದಲ್ಲಿ ಕರಡಿಗೆ (ಲೋಹದ್ದು) ಭಾರವಾದುದು, ಅನಾನುಕೂಲಕರ ಎನ್ನಿಸಿದರೆ ಆಗ ಬಟ್ಟೆಯಲ್ಲಿ ಕಟ್ಟಿಕೊಂಡಿರಬಹುದಲ್ಲವೆ ? ಜನನವಾದ ಬಳಿಕ ಮಗುವಿಗೂ ಮೃದು ಬಟ್ಟೆಯಲ್ಲಿ ಕಟ್ಟಬಹುದು.

ಇನ್ನು ಕೆಲವರು, ಚಿಕಿತ್ಸಾಲಯ ಎಂದರೆ ಎಲ್ಲ ಜಾತಿಯವರು ಇರುವ ಮೈಲಿಗೆಯ ಸ್ಥಳ ಎಂದು, ಇಷ್ಟಲಿಂಗವು ಮೈಲಿಗೆಯಾಗುತ್ತದೆ ಎಂದು ಮನೆಯಲ್ಲೇ ತೆಗೆದಿಟ್ಟು ಹೋಗಿಬಿಡುತ್ತಾರೆ. ಅದಿಲ್ಲದೆಯೇ ಎಲ್ಲ ವ್ಯವಹಾರ ಮುಗಿಸಿ ನಂತರ ಮಗುವಿನ ಲಿಂಗಧಾರಣೆಯ ದಿನ ತಾವು ಧರಿಸಿಕೊಳ್ಳುತ್ತಾರೆ.

ತಾವು ಯಾವ ಸ್ಥಳದಲ್ಲಿರುವರೋ ಅಲ್ಲೇ ಸ್ವಲ್ಪ ಸ್ವಚ್ಛಮಾಡಿಕೊಂಡು, ಒರೆಸಿ, ಕುಳಿತು ಪೂಜೆ ಮಾಡಬಹುದು. ಈ ನಿಷ್ಠೆ ನಮ್ಮಲ್ಲಿ ಬೆಳೆದರೆ ಬೇರೆಯವರು ವ್ಯಂಗ್ಯವಾಡುವುದಿಲ್ಲ. ಗೌರವಭಾವದಿಂದ ಕಾಣುವರು. ಅದಕ್ಕೇ ಧರ್ಮಪಿತರು ಹೇಳಿರುವುದು:

ಆಳಿಗೊಂಡಿಹರೆಂದು ಅಂಜಲದೇಕೆ ?
ನಾಸ್ತಿಕವಾಡಿಹರೆಂದು ನಾಚಲದೇಕೆ ?
ಆರಾದೊಡಾಗಲಿ ಶ್ರೀ ಮಹಾದೇವಂಗೆ ಶರಣೆನ್ನಿ,


ಪೂಜೆ-ಧ್ಯಾನ ಮಾಡುವುದು ಅಪರಾಧವಲ್ಲ. ಅದಕ್ಕಾಗಿ ಸಂಕೋಚ ಪಡಬಾರದು ಮತ್ತು ಪೂಜೆ-ಧ್ಯಾನಗಳ ಹಲವು ಉದ್ದೇಶಗಳಲ್ಲಿ ಒಂದು ಶುದ್ದೀಕರಣ. ಯಾವ ಸ್ಥಳವೂ ಮೈಲಿಗೆಯಲ್ಲ.

ಜನನದ ನೋಂದಣಿ ಕಾರ್ಯಾಲಯದಲ್ಲಿ ಮಗುವಿನ ಹುಟ್ಟಿನ ಬಗ್ಗೆ ಬರೆಸಿದರೆ ಸಾಕು. ದಿನಾಂಕ, ಸಮಯ ಗುರುತು ಹಾಕಿಕೊಂಡರೆ ಆಯಿತು. ಹುಟ್ಟಿದ ಗಳಿಗೆ ಹೇಗಿದೆ ಎಂದು ಜ್ಯೋತಿಷಿಗಳನ್ನು ವಿಚಾರಿಸುವುದು; ಸರಿಯಿಲ್ಲ ಎಂದು ಅವರು ಹೇಳಿದರೆ, ಶಾಂತಿ ಮಾಡಿಸುವುದು ಲಿಂಗವಂತ ಧರ್ಮವಲ್ಲ. ಗ್ರಹಗಳ ದೈವಿಕತೆಯನ್ನೇ ಬಸವಾದಿ ಪ್ರಮಥರು ನಂಬುವುದಿಲ್ಲ ಅಂದಾಗ ಇನ್ನು ಜಾತಕ ಬರೆಸುವ ಗೋಜೇ ಇರುವುದಿಲ್ಲ.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.
[2] ಲಿಂಗಾಯತ ಸಂಸ್ಕಾರಗಳು. ಡಾ ಶಿವಾನಂದ ಗುಬ್ಬಣ್ಣನವರು. ಪುಟ - ೨೭

ಪರಿವಿಡಿ (index)
Previous ಸಂಸ್ಕಾರದ ವಿವಿಧ ಮುಖಗಳು ಲಿಂಗಧಾರಣೆ-ನಾಮಕರಣ-ತೊಟ್ಟಿಲು Next