ಗೃಹ ನಿರ್ಮಾಣ ಮತ್ತು ಗುರು ಪ್ರವೇಶ.
ವ್ಯಕ್ತಿಯ ಜೀವನದಲ್ಲಿ ಮನೆ ಕಟ್ಟಿಸುವುದು ಸಹ ಒಂದು ಮಹತ್ತರವಾದ ಕಾರ್ಯ. ಗುತ್ತಿಗೆದಾರರು, ಇಂಜಿನಿಯರ್ಸ್, ಶ್ರೀಮಂತರು ಬೇಕಾದಷ್ಟು ಮನೆಗಳನ್ನು ಕಟ್ಟಿಸುವಾದರೂ ತಮ್ಮದು ಎಂದು ಜೀವನ ಪರ್ಯಂತರ ವಾಸಿಸುವುದಕ್ಕಾಗಿ ಕಟ್ಟಿಸಿಕೊಳ್ಳುವುದು ಅತೀವ ಮಹತ್ವಪೂರ್ಣ. ಅದರಲ್ಲಿಯೂ ಮಧ್ಯಮ ವರ್ಗದವರು, ಸಾಮಾನ್ಯರಿಗಂತೂ ಒಂದು ಮನೆಯನ್ನು ಕಟ್ಟಿಸಿಕೊಳ್ಳುವುದರಲ್ಲಿ ಸಾಕು ಸಾಕಾಗಿರುತ್ತದೆ. ತಾವು ಕಟ್ಟಿಸುವ ಮನೆ ಸುಂದರವಾಗಿ, ಅಚ್ಚುಕಟ್ಟಾಗಿ ಇರಬೇಕೆಂಬುದಷ್ಟೇ ಅಲ್ಲ ಅದು ಶುಭದಾಯಕವಾಗಿ ಇರಬೇಕು. ಮುಂದಿನ ಜೀವನವು ಸುಖ-ಸಂವೃದ್ಧಿ-ಸಂತೃಪ್ತಿಗಳಿಂದ ಕೂಡಿರುವಂತಾಗಬೇಕು ಎಂಬ ನಿರೀಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ. ಕಟ್ಟುವಿಕೆಯು ನಿರ್ವಿಘ್ನವಾಗಿ ನೆರವೇರಬೇಕೆಂಬ ಆಶಯವಿರುತ್ತದೆ.
ಬಸವ ಧರ್ಮವು ಗುರು-ಲಿಂಗ-ಜಂಗಮದ ಕೃಪೆಯ ಮೂಲಕವೇ ಎಲ್ಲವನ್ನೂ ಹೊಂದಬೇಕೆಂದು ಆದೇಶಿಸುತ್ತದೆ. ಆದ್ದರಿಂದ ಕಟ್ಟಡ ಕೆಲಸ ಪ್ರಾರಂಭಿಸುವಾಗ ಮತ್ತು ಹೊಸಮನೆಯನ್ನು ಪ್ರವೇಶಿಸುವಾಗ ಏನೇನು ಮಾಡಬೇಕೆಂದು ಈಗ ಬರೆಯುತ್ತೇನೆ.
ಭೂಮಿಯ ಅನುಕೂಲತೆಗೆ ತಕ್ಕಂತೆ ನಿವೇಶನಗಳನ್ನು ಮಾಡುತ್ತಾರೆ. ಆಗ ಮುಂಬಾಗಿಲು ದಕ್ಷಿಣಕ್ಕೆ ಬರುವಂತಾದರೆ ಕೆಲವರು ಬಹಳ ಭಯಪಡುತ್ತಾರೆ, ಮತ್ತೆ ಕೆಲವರು ಆ ಹೆಸರಿಗೆ ಯಾವುದೋ ದಿಕ್ಕಿಗೆ ಹೊಂದಿಕೆಯಾಗದು ಎಂದು ಹೇಳುತ್ತಾರೆ. ನಿವೇಶನಗಳು ನಾಲ್ಕೂ ಮೂಲೆಯಿಲ್ಲದೆ ಮೂರೋ, ಐದೋ ಮೂಲೆ ಇದ್ದರೆ ಅದಕ್ಕೂ ಭಯಪಡಿಸುತ್ತಾರೆ. ನಿವೇಶನದ ಮಧ್ಯ ಹುತ್ತ ಬಂದಿದ್ದರೆ ಅದನ್ನೂ ಕೆಡವಬಾರದು, ಮನೆ ಕಟ್ಟಬಾರದು ಎಂದು ಭಯಪಡಿಸುತ್ತಾರೆ. ಹೀಗೆ ಅನವಶ್ಯಕ ಚಿಂತೆಗಳನ್ನು ತಲೆಯಲ್ಲಿ ತುಂಬಿಕೊಳ್ಳಬಾರದು. ನಿವೇಶನದ ಅಳತೆ-ಆಕಾರಕ್ಕೆ ತಕ್ಕಂತೆ ಯೋಜನೆ ಸಿದ್ಧಪಡಿಸಬೇಕು.
ಪಾಯ ತೋಡಲು ಆರಂಭಿಸುವ ದಿವಸ ಕೆಲವೊಂದು ವಿಧಿಗಳನ್ನು ಅನುಸರಿಸಬೇಕು. ಕೆಲವರು ಗುದ್ದಲಿ ಪೂಜೆ ಎಂದು ಮಾಡುತ್ತಾರೆ. ಗುರುಪೂಜೆ ಮಾಡಬೇಕೇ ವಿನಾ ಗುದ್ದಲಿಯನ್ನಲ್ಲ. ಕಬ್ಬಿಣದ ಸಾಧನವಾದ ಗುದ್ದಲಿಯು ಒಂದು ಜಡ ಸಾಧನ ಅಷ್ಟೆ. ನಿವೇಶನದಲ್ಲಿ ಬಸವೇಶ್ವರ ಪೂಜಾವ್ರತಕ್ಕೆ ಅನುಕೂಲತೆ ಇದ್ದರೆ ಮನೆಯೊಡೆಯ - ಒಡತಿ ಅಲ್ಲೇ ಪೂಜೆ ಮಾಡಿ, ತೀರ್ಥವನ್ನು ಸಿದ್ದಪಡಿಸಿ ಮನೆಯ ಆಕೃತಿ ಗುರುತಿಸಲು ಹಾಕಿದ ಸಾಲಿನ ಮೇಲೆ ಸಿಂಪಡಿಸಿ ಸಲಿಕೆ ಗುದ್ದಲಿ ಮುಂತಾದ ಸಲಕರಣೆಗಳ ಮೇಲೂ ಸಿಂಪಡಿಸಿ ಎಲ್ಲಿಂದ ಅಗೆತ ಪ್ರಾರಂಭಿಸುವರೋ ಅಲ್ಲಿಗೆ ತೀರ್ಥ ಸಿಂಪಡಿಸಬೇಕು. ಒಂದು ವೇಳೆ ನಿವೇಶನದಲ್ಲೇ ಪೂಜೆ ಮಾಡಲು ಅನುಕೂಲತೆ ಇಲ್ಲದಿದ್ದರೆ ಮನೆಯಲ್ಲೇ ಪೂಜೆ ಮಾಡಿ ಇಷ್ಟಲಿಂಗ ತೀರ್ಥವನ್ನು ಸಿದ್ಧಪಡಿಸಿಕೊಂಡು ಬರಬೇಕು. ನಿವೇಶನದ ಸಾಲಿನ ಮೇಲೆ ನಿವೇಶನದ ಸಾಲಿನ ಮೇಲೆ ಗುರುಬಸವಣ್ಣನವರ ಭಾವಚಿತ್ರವನ್ನು ಇಟ್ಟು ಸಂಕ್ಷಿಪ್ತವಾಗಿ ಪೂಜಿಸಿ, ಮಂತ್ರೋದಕವನ್ನು ಸಿದ್ಧಪಡಿಸಬೇಕು. ಇಷ್ಟಲಿಂಗತೀರ್ಥ ಮತ್ತು ಬಸವ ಮಂತ್ರೋದಕಗಳೆರಡನ್ನು ಬೆರೆಸಿ ಎಲ್ಲರಿಗೂ ತೀರ್ಥಪ್ರಸಾದ ವಿತರಿಸಿ, ಗುರುತಿಸಿದ ಸಾಲುಗಳ ಮೇಲೆ ಮಂತ್ರೋಚ್ಚಾರ ಮಾಡುತ್ತಾ ಸಿಂಪಡಿಸಿ, ಉಳಿದ ತೀರ್ಥವನ್ನು ಸಲಿಕೆ, ಗುದ್ದಲಿ ಮುಂತಾದ ಸಲಕರಣೆಗಳ ಮೇಲೆ ಸಿಂಪಡಿಸಿ, ಅಗೆತ ಪ್ರಾರಂಭಿಸುವ ಸ್ಥಳಕ್ಕೆ ಸಿಂಪಡಿಸಬೇಕು.
ನೆರೆದ ಜನಕ್ಕೆ ಸಿಹಿ ಮತ್ತು ತಾಂಬೂಲ ವಿತರಿಸಬಹುದು. ಪಾಯ ತೋಡಿದ ಮೇಲೆ ಮೊಟ್ಟ ಮೊದಲ ಮೂಲೆಕಲ್ಲು ಇಡುವಾಗ ಇದೇ ರೀತಿ ಗುರುಪೂಜೆ ಮಾಡಿ, ಆ ಕಲ್ಲಿನ ಮೇಲೆ ಬಸವ - ಲಿಂಗ ಮುದ್ರೆ ಬರೆದು ಅದನ್ನು ಒಳಗಿಡಬೇಕು. ಕೆಲವರು ಪಾಯಕ್ಕೆ ನವರತ್ನಗಳನ್ನು ಹಾಕಬೇಕು ಎಂಬ ಜ್ಯೋತಿಷಿಗಳ ಮಾತು ಕೇಳಿ ಚೂರು ಚೂರು ನವರತ್ನ ಹಾಕುವುದುಂಟು. ಇದು ಅನಗತ್ಯ.
ದುಡ್ಡಿನ ಆಸೆಗಾಗಿ ಪಾಯ ತೋಡುವವನು ಗುದ್ದಲಿಪೂಜೆ ಮಾಡಿ ಎಂದರೆ ಗೌಂಡಿ ಮೂಲೆಕಲ್ಲು ಪೂಜಿಸಿರಿ ಎನ್ನುವನು. ಬಾಗಿಲು ಇಡುವಾಗ ಬಡಗಿ - ಗೌಂಡಿ ಇಬ್ಬರೂ ಬಾಗಿಲು ಪೂಜಿಸಿರಿ ಎನ್ನುವರು. ತಾರಸಿ ಹಾಕುವಾಗಲೂ ಅಷ್ಟೆ, ದುಡ್ಡಿನ ಆಸೆಗಾಗಿ ಇಂಥ ಪೂಜೆಗಳಿಗೆ ಒತ್ತಾಯ ಮಾಡುವರು. ಬಸವ ಭಕ್ತರು ಗುದ್ದಲಿ, ಕಲ್ಲು, ಬಾಗಿಲು ಚೌಕಟ್ಟು ಇಂಥವನ್ನೆಲ್ಲ ಪೂಜಿಸಲು ಹೋಗದೆ ಅವರು ಹೇಳಿದಾಗಲೆಲ್ಲ ಬಸವೇಶ್ವರ ಭಾವಚಿತ್ರ ಪೂಜಿಸಿ ಆಸೆಬುರುಕರಿಗೆ ಅಷ್ಟಿಷ್ಟು ಹಣ ಕೊಟ್ಟುಬಿಡಬೇಕು.
ಮನೆಯ ಮೇಲೆ ಷಟ್ಕೋನ ಸಹಿತ ಬಸವಲಿಂಗ ಮುದ್ರೆಯನ್ನು ಸಿಮೆಂಟಿನಲ್ಲಾದರೂ ಮಾಡಿಸಬಹುದು ಅಥವಾ ಕಬ್ಬಿಣದ (grill) ಸಳಿಯಲ್ಲಾದರೂ ಮಾಡಿಸಬಹುದು.
ಬಸವ ತತ್ತ್ವಾನುಯಾಯಿಗಳ ಮನೆಯ ಮೇಲೆ ಈ ಚಿತ್ರವು ಅಷ್ಟೊತ್ತಿರಬೇಕು. ಶರಣ ಸಂಸ್ಕೃತಿಯ ಹೆಸರನ್ನಿಟ್ಟು ಮನೆಯ ಮುಂಭಾಗದಲ್ಲಿ ಸ್ಪಷ್ಟವಾಗಿ ಕಾಣಿಸುವಂತೆ ಬರೆಸಬೇಕು. ವಿಶೇಷ ಸಮಾರಂಭಗಳಲ್ಲಿ ಧ್ವಜ ಹಾರಿಸಲು ಅನುಕೂಲವಾಗುವಂತೆ ಒಂದು ಸ್ತಂಭವನ್ನು (GI pipe) ಮೇಲೆ ಮಾಡಿಸಿರಬೇಕು. ತಲೆ ಬಾಗಿಲಲ್ಲಿ ಹೆಜ್ಜೆ ಇಡುತ್ತಲೇ ಕಾಣುವಂತೆ ಬಸವಣ್ಣನವರ ಭಾವಚಿತ್ರ ಹಾಕಲು ಪಟ್ಟಿಯನ್ನು ಹೊಡೆಸಿರಬೇಕು. ಪೂಜಾಕೋಣೆಯಲ್ಲಿ ಬಸವಣ್ಣನವರ ಭಾವಚಿತ್ರ ಇಡಲು ಒಂದು ಸುಂದರವಾದ ಮಂಟಪ ಅಥವಾ ಕಟ್ಟೆ ಮಾಡಿಸಬೇಕು. ಗೃಹಪ್ರವೇಶದ ದಿನ ಯಾರಾದರೂ ಪೂಜನೀಯ ಗುರುಗಳನ್ನು ಆಹ್ವಾನಿಸಬಹುದು. ಮುಂಭಾಗದಲ್ಲಿ ತಳಿರುತೋರಣ ಕಟ್ಟಬೇಕು. ಗುರುಗಳು (ಕ್ರಿಯಾಮೂರ್ತಿ) ಬರುತ್ತಲೇ ಮಹಡಿಯ ಮೇಲೆ ಅಥವಾ ಮನೆಯ ಮುಂಭಾಗದಲ್ಲಿ ಷಟ್ಕೋನ ಬಸವ ಧ್ವಜವನ್ನು ಅವರ ಕೈಯಿಂದ ಹಾರಿಸಬೇಕು. ನಂತರ ತಲೆಬಾಗಿಲಲ್ಲಿ ಪಾದಕ್ಕೆ ನೀರೆರೆದು, ಪೂಜಿಸಿ, ಒಳಗೆ ಬರಮಾಡಿಕೊಳ್ಳಬೇಕು. ಪೂಜ್ಯರು ಸ್ನಾನಮಾಡಿ ಪೂಜೆ ಮಾಡಿ, ಲಿಂಗ ತೀರ್ಥವನ್ನು ಬಟ್ಟಲಲ್ಲಿ ಸಂಗ್ರಹಿಸುವರು. ನಂತರ ಬಸವಲಿಂಗ ಮಂತ್ರ ಪಠಣ, ಪುಷ್ಪಾರ್ಚನೆ ಮಾಡುವರು. ಬಸವ ಮಂತ್ರೋದಕ ಸಿದ್ದಪಡಿಸುವರು. ಮನೆಯ ಒಡೆಯರು ಪೂಜ್ಯರ ಪಾದಪೂಜೆ ಮಾಡಿ ಪಾದೋದಕ ಸಂಗ್ರಹಿಸುವರು. ಈ ಮೂರನ್ನೂ ಮಿಶ್ರಣ ಮಾಡಿ ಒಂದು ಬಟ್ಟಲಲ್ಲಿ ಇಟ್ಟು ವಸ್ತ್ರವನ್ನು ಮುಚ್ಚಲಾಗುವುದು. ಮಹಾಮಂಗಳಾರತಿಯನ್ನು ಎಲ್ಲರೂ ಸೇರಿ ಮಾಡುವರು. ಜಯಕಾರವಾದ ಬಳಿಕ ಗುರುಗಳು ಮನೆಯೊಡೆಯರು-ಒಡತಿಯನ್ನು ಕೂರಿಸಿ ಹಣೆಗೆ ಭಸ್ಮಧರಿಸಿ ಕರುಣಪ್ರಸಾದ ಕೊಡುವರು. ನಂತರ ಉಳಿದವರೂ ಕರುಣ ಪ್ರಸಾದ ಪಡೆಯುವರು.
ನಂತರ ಮನೆಯ ಶುದ್ದೀಕರಣ, ಅರ್ಥಾತ್ ಪ್ರಸಾದೀಕರಣ. ಒಂದು ಬಟ್ಟಲಲ್ಲಿ ತೀರ್ಥ, ಇನ್ನೊಂದು ಬಟ್ಟಲಲ್ಲಿ ವಿಭೂತಿ ಪುಡಿಯನ್ನು ತೀರ್ಥದಲ್ಲಿ ಕಲೆಸಿ ಇಟ್ಟುಕೊಳ್ಳಬೇಕು. ಒಂದು
ಬಸವ ನಾಣ್ಯ, ಷಟ್ಕೋನ ಚಿತ್ರ, ಓಂ ಶ್ರೀ ಗುರುಬಸವಲಿಂಗಾಯನಮಃ ಇರುವ ಸ್ಟಿಕ್ಕರ್ ಗಳನ್ನು ಜೋಡಿಸಿ ಇಡಬೇಕು. ತಲೆಬಾಗಿಲ ಹೊರಗಡೆ ಧರ್ಮಗುರು ಬಸವಣ್ಣನವರ ಭಾವಚಿತ್ರವನ್ನು ಒಂದು ಕುರ್ಚಿಯ ಮೇಲೆ ಇಟ್ಟು ಪೂಜಿಸಿ, ಆರತಿಯನ್ನು ಮಾಡಬೇಕು. ನಂತರ ಪ್ರಸಾದೀಕರಣ ಪ್ರಾರಂಭ. ಮೊದಲು ಮನೆಯ ತಲೆಬಾಗಿಲ ಹೊರಗೆ ನಿಂತು ದೇವಮಂತ್ರ ಓಂ ಲಿಂಗಾಯ ನಮಃ ಗುರುಮಂತ್ರ ಓಂ ಶ್ರೀಗುರುಬಸವಲಿಂಗಾಯನಮಃ ಪಠಿಸುತ್ತ ಭಸ್ಮದ ಮೂರು ಎಳೆಗಳನ್ನು ಬಾಗಿಲಿನ ಚೌಕಟ್ಟು ಮತ್ತು ಪಡಕದ ಮೇಲೆ ಅಲ್ಲಲ್ಲೇ ಧರಿಸಬೇಕು. ಬಸವ ನಾಣ್ಯವನ್ನು ರಾಸಾಯನಿಕ ಅಂಟಿನೊಡನೆ ತಲೆಬಾಗಿಲಿನ ಚೌಕಟ್ಟಿನ ಮೇಲೆ ಅಂಟಿಸಬೇಕು. ಬಸವ ನಾಣ್ಯಕ್ಕೆ ಮಧ್ಯೆ ತೂತು ಮಾಡಿಸಿ, ಬಾಗಿಲ ಚೌಕಟ್ಟಿಗೆ ಮೊಳೆಯ ನೆರವಿನಿಂದ ಹೊಡೆಯಲೂಬಹುದು. ಈಗ ಬಿಗಿಯಾಗಿ ಅಂಟಿಸುವ ರಾಸಾಯನಿಕ ಅಂಟುಗಳು ಬಂದಿರುವುದರಿಂದ ಹಾಗೆಯೇ ಅಂಟಿಸಿಬಿಡಬಹುದು. ತೀರ್ಥವನ್ನು ತಲೆಬಾಗಿಲಿಗೆ ಸಿಂಪಡಿಸಿ ಪೂಜಿಸಿ ಇಟ್ಟ ಬಸವ ಭಾವಚಿತ್ರವನ್ನು ಬಲಗೈಲಿ ಹಿಡಿದು ಜೈಗುರು ಬಸವೇಶ ಹರಹರ ಮಹಾದೇವ ಎಂದು ಒಳಗೆ ಪಾದವಿಡಬೇಕು. ಎದುರಿಗೇ ಕಾಣುವಂತೆ ಓಂ ಶ್ರೀಗುರುಬಸವಲಿಂಗಾಯ ನಮಃ ಎಂಬ ಸ್ಟಿಕ್ಕರ್ ಹಚ್ಚಬೇಕು. ಪ್ರತಿಯೊಂದು ಕೋಣೆಗೂ ತೀರ್ಥ ಸಿಂಪಡಿಸಿ, ಮುಖ್ಯ ಸ್ಥಳಗಳಲ್ಲಿ ಷಟ್ಕೋನ ಸಹಿತ ಬಸವಲಿಂಗ ಮುದ್ರೆಯನ್ನು ಬೆರಳಲ್ಲಿ ಬರೆಯಬೇಕು. ಅಡಿಗೆಮನೆಯಲ್ಲಿ ಒಂದು ಸ್ಟಿಕ್ಕರ್ ಹಚ್ಚಬೇಕು. ಸಂಪತ್ತು ವೃದ್ಧಿಯಾಗಲಿ ಎಂದು ಹಾರೈಸಿ ತೀರ್ಥವನ್ನು ಸಿಂಪಡಿಸಬೇಕು. ಕೈಲಿ ಹಿಡಿದುಕೊಂಡಿರುವ ಭಾವಚಿತ್ರವನ್ನು ಪೂಜಾಗೃಹದ ಕಟ್ಟೆಯ ಮೇಲಿಟ್ಟು ಬಸವ ಚಿತ್ರಕ್ಕೆ ಆರತಿ ಮಾಡಬೇಕು. ಪೂಜಾ ಕೋಣೆಗೆಲ್ಲ ತೀರ್ಥ ಸಿಂಪಡಿಸಬೇಕು. ಅಲ್ಲಿಯೂ ಒಂದು ಸ್ಟಿಕ್ಕರ್ ಹಚ್ಚಬೇಕು. ಸಾಂಪ್ರದಾಯಿಕವಾಗಿ ದಿಗ್ ಬಂಧನ ಎಂದು ಮಾಡುವರು. ಈಗ ಗುರುಮೂರ್ತಿಯು ಆ ತೀರ್ಥವನ್ನು ಕೈಯಲ್ಲಿ ತೆಗೆದುಕೊಂಡು ಮನೆಯ ಸುತ್ತಲೂ ಹಾಕಬೇಕು. ಉಳಿದುದನ್ನು ಭಾವಿಯೊಳಕ್ಕೆ ಸುರಿಯಬೇಕು. ಭಾವಿಯಿಲ್ಲದಿದ್ದರೆ ಗಿಡಕ್ಕೆ ಸುರಿಯಬೇಕು. ಕೆಲವರು ಮಂತ್ರಿಸಿದ ತೆಂಗಿನಕಾಯಿ-ನಿಂಬೆಹಣ್ಣು-ಮೆಣಸಿನಕಾಯಿ ಮನೆಯಲ್ಲಿ ಮೇಲೆ ಕಟ್ಟುವುದುಂಟು. ಇವೆಲ್ಲ ಅಶಾಶ್ವತವಾದ ಬಾಡಿ-ಬತ್ತಿ ಹೋಗುವ ವಸ್ತುಗಳು. ಇಂಥವನ್ನು ಕಟ್ಟದೆ ಬಸವ ಮುದ್ರೆ ಕಟ್ಟಿದರೆ ಸಾಕು. ಮಂತ್ರಿಸಿದ ಭಸ್ಮದ ಗಟ್ಟಿಯನ್ನು ಬಟ್ಟೆಯಲ್ಲಿ ಕಟ್ಟಿ ಮೇಲೆ ಕಟ್ಟಬಹುದು. ಅಷ್ಟಾವರಣದ ಹೊರತು ಬೇರೇನೂ ಯೋಗ್ಯವಲ್ಲ.
ಮತ್ತೆ ಕೆಲವರು ಮನೆಗೆ ದೃಷ್ಟಿಯಾಗದಿರಲೆಂದು ಅಕರಾಳ ವಿಕರಾಳವಾದ ಮುಖವನ್ನು ತೂಗಿಹಾಕುವರು. ಇದೂ ತಪ್ಪು, ಬಸವಲಿಂಗಮುದ್ರೆ ಮನೆಯ ಮೇಲೆ ರಾರಾಜಿಸುವಾಗ, ಯಾರ ದೃಷ್ಟಿಬಿದ್ದರೂ ಅದು ಮಂಗಲದೃಷ್ಟಿಯಾಗಿರುವುದೇ ವಿನಾ ಕಾಕದೃಷ್ಟಿಯಾಗದು.
ಮನೆಯ ಮುಂಭಾಗದಲ್ಲಿ ಕೆಂಪು (ಕುಂಕುಮದ ನೀರನ್ನು ತುಂಬಿದ ಬೂದುಗುಂಬಳಕಾಯಿಯನ್ನು ಒಡೆಯುವುದಾಗಲಿ, ಅನ್ನದ ಉಂಡೆ ಮಾಡಿ ಕೆಂಪು ನೀರಿನಲ್ಲಿ ಅದ್ದಿ ತಲೆಬಾಗಿಲಮುಂದೆ ಇಡುವುದಾಗಲೀ, ಹಸುವನ್ನು ತಲೆಬಾಗಿಲಿನಲ್ಲಿ ನುಗ್ಗಿಸುವುದಾಗಲೀ ಸರ್ವಥಾ ಸಲ್ಲದು. ಗುರು ಪ್ರವೇಶವಾದರೆ ಗೃಹಪ್ರವೇಶವಾದಂತೆಯೆ, ಗುರುಗಳೂ ಪ್ರಸಾದ ಸಲ್ಲಿಸಲು ಒಳನಡೆವರು. ಬಂದ ಜನರಿಗೆಲ್ಲ ಮಹಾಪ್ರಸಾದ ನಡೆಯಬೇಕು. ನೆನಪಿನ ಕಾಣಿಕೆಯಾಗಿ ಚಿಕ್ಕ ಚಿಕ್ಕ ವಚನ ಗ್ರಂಥಗಳನ್ನು ಕೊಡಬಹುದು.
ಹೊಸಮನೆಯನ್ನು ಕಟ್ಟಿಸಿದಾಗಲೇ ಇದನ್ನು ಮಾಡಬೇಕು ಎಂದೇನೂ ಇಲ್ಲ. ಬೇರೆಯವರು ಕಟ್ಟಿಸಿದ್ದನ್ನು ಕೊಂಡು ಪ್ರವೇಶಿಸುವಾಗ, ಭೋಗ್ಯಕ್ಕೆ ಹಾಕಿಕೊಂಡಾಗ, ಬಾಡಿಗೆ ಮನೆಗೆ ಹೋಗುವಾಗ, ಕೆಲವೊಮ್ಮೆ ಮನೆಗಳಲ್ಲಿ ಯಾರೂ ವಾಸಿಸಲು ಇಷ್ಟಪಡದೆ ಆ ಮನೆ ಬಗ್ಗೆ ಭೂತ-ಪ್ರೇತಗಳಿವೆ ಎಂದು ಅಪಪ್ರಚಾರ ಇದ್ದಾಗ ಅಂಥ ಸಂದರ್ಭಗಳಲ್ಲೆಲ್ಲ ಈ ರೀತಿ ಶುದ್ದೀಕರಣ ಮಾಡಿ ವಾಸಿಸಬಹುದು.
ಮನೆಗೆ/ ಕಟ್ಟಡಗಳಿಗೆ ಲಿಂಗಾಯತ ಹೆಸರುಗಳು