![]() | ಲಿಂಗಧಾರಣೆ-ನಾಮಕರಣ-ತೊಟ್ಟಿಲು | ಮೈ ನೆರೆಯುವಿಕೆ - ದೀಕ್ಷಾ ಸಂಸ್ಕಾರ | ![]() |
ಜಾವಳ - ಮಗುವಿನ ಮೊದಲ ಕೂದಲು ತೆಗೆಸುವುದು |
ಸಾಮಾನ್ಯವಾಗಿ ಇದು ಬಹಳ ಮಹತ್ವದ ಕಾರ್ಯಕ್ರಮವಾಗಿ ಇಂದಿಗೂ ಆಚರಿಸಲ್ಪಡುತ್ತಿದೆ. ದೊಡ್ಡವರಾದ ಮೇಲೆ ದೇವರಿಗೆ ಕೂದಲು ಕೊಡುತ್ತೇವೆ ಎಂದು ಹೋಗಿ ಕೂದಲು ಬೋಳಿಸಿಕೊಂಡು ಬರುವುದು ಮೂರ್ಖ ಆಚರಣೆ. ಯಾವ ದೇವತೆಯ ಹೆಸರಲ್ಲಿಯೂ ಹರಕೆ ಮಾಡಿಕೊಂಡು ಹೋಗಿ ಕೂದಲು ಕೊಡುವುದನ್ನು ಬಸವ ಧರ್ಮಿಯರು ಖಂಡಿತಾ ಆಚರಿಸಬಾರದು.
ಮಗುವಿನ ಮೊದಲ ಕೂದಲನ್ನು ತೆಗೆಸುವುದು ವೈಜ್ಞಾನಿಕವಾಗಿ ಅಗತ್ಯ. ತಾಯಿ ಹೊಟ್ಟೆಯೊಳಗಿನ ಕೂದಲು ತೆಗೆಯದ ಹೊರತು ಹೊಸ ಕೂದಲು ಚೆನ್ನಾಗಿ ಬರುವುದಿಲ್ಲವೆಂದು ಅಜ್ಜಿಯರು ಮಾತನಾಡುವುದುಂಟು. ಮೊದಲು ತೆಳುವಾಗಿ ಇರುವ ಕೂದಲು ಆನಂತರ ದಟ್ಟವಾಗಿ ಬೆಳೆಯುವುದುಂಟು. ಆದ್ದರಿಂದ ಇದನ್ನು ಆಚರಿಸಬಹುದು. ಆದರೆ ದಿನಮಾನಗಳಲ್ಲಿ ಈಗ ಮಾಡುವಂತೆ ಖರ್ಚು ಮಾಡುವುದು ಉಚಿತವೇ ? ಇದಕ್ಕಾಗಿ ಹಣ ಹೊಂದಿಸಲು ಬಡವರು ಪರದಾಡುವರು. ಆದ್ದರಿಂದ ತಮ್ಮ ಮನೆಯಲ್ಲಿಯೇ ಈ ಕೂದಲು ತೆಗೆಸುವ ಕಾರ್ಯಕ್ರಮ ಇರಿಸಿಕೊಳ್ಳಬಹುದು.
ಗುರು (ಕ್ರಿಯಾ) ಮೂರ್ತಿಯನ್ನು ಒಂದು ದಿವಸ ಬರಮಾಡಿಕೊಂಡು ಇಷ್ಟಲಿಂಗಾರ್ಚನೆ ಮಾಡಿಸಬೇಕು. ನಂತರ ಬಸವೇಶ್ವರ ಪೂಜಾವ್ರತವನ್ನು ಮಾಡಬೇಕು. ಮಗುವಿನ ತಾಯಿ ತಂದೆ ೧೦೮ ಬಸವ ಮಂತ್ರ ಹೇಳಿ ಪುಷ್ಪಾರ್ಚನೆ ಮಾಡಿ, ಮಹಾಮಂಗಲಾರತಿ ಮಾಡಬೇಕು. ಗುರುಮೂರ್ತಿಯು ಎಂದಿನಂತೆ ಇಷ್ಟಲಿಂಗ ತೀರ್ಥ ಸಂಗ್ರಹಿಸಿ ಇಟ್ಟುಕೊಂಡಿರಬೇಕು. ಈಗ ಮಂತ್ರೋದಕ ಸಿದ್ಧಪಡಿಸಬೇಕು. ಎಲ್ಲರಿಗೂ ಕರುಣ ಪ್ರಸಾದವನ್ನು ಕೊಡಬೇಕು. ನಂತರ ತಾಯಿಯು ಮಗುವನ್ನು ಎತ್ತಿಕೊಂಡು ಕುಳಿತುಕೊಳ್ಳುವಳು. ಈಗ ಮಗುವಿಗೆ ಭಸ್ಮವನ್ನು ಧರಿಸಬೇಕು. ತಲೆಯ ಮೇಲೆ ತೀರ್ಥವನ್ನು ಸಿಂಪಡಿಸಬೇಕು. ನಂತರ ಒಂದು ವೀಳೆಯದೆಲೆಗೆ ಭಸ್ಮ ಧರಿಸಿ, ಓಂ ಶ್ರೀ ಗುರುಬಸವಲಿಂಗಾಯನಮಃ ಎಂದು ಮಂತ್ರ ಹೇಳುತ್ತಾ ಆ ವೀಳೆಯದೆಲೆಯನ್ನು ಕೂದಲಿಗೆ ಹಿಡಿದು ಎರಡು ಸೇರಿ ಕತ್ತರಿಯಿಂದ ಸ್ವಲ್ಪ ಕತ್ತರಿಸಬೇಕು.
ಕ್ಷೌರಿಕನನ್ನು ಕರೆಸಿದ್ದು, ನಂತರ ಕ್ಷೌರಿಕನಿಂದ ಪೂರ್ತಿಯಾಗಿ ತಲೆಗೂದಲು ತೆಗೆಸಬೇಕು. ಹುಟ್ಟಿದಾಗಿನ ಕೂದಲು ಒಮ್ಮೆ ಪೂರ್ತಿ ತೆಗೆದು ಬಿಟ್ಟರೆ ಒಳ್ಳೆಯದು. ತಾಯಿ ಮಗು ಸ್ನಾನ ಮಾಡಿ ಬಂದು ಶ್ರೀಗುರುಗಳಿಂದ ಭಸ್ಮಧಾರಣೆ ಮಾಡಿಸಿಕೊಂಡು, ಕರುಣಪ್ರಸಾದ ಪಡೆಯಬೇಕು. ಜನರು ಹೀಗೆ ತೆಗೆದ ಕೂದಲನ್ನು ನದಿಯಲ್ಲಿ ತೇಲಿಬಿಡುತ್ತಾರೆ. ಮತ್ತೆ ಕೆಲವರು ನೆಲದಲ್ಲಿ ತಗ್ಗು ತೆಗೆದು ಹೂಳುತ್ತಾರೆ. ಯಾರ ಕೈಗಾದರೂ ಸಿಕ್ಕರೆ ಮಂತ್ರ - ತಂತ್ರ ಮಾಡಿ ಮಗುವಿನ ಭವಿಷ್ಯಕ್ಕೆ ಅಪಾಯ ಉಂಟು ಮಾಡಬಹುದೆಂಬ ಭಯ. ಇದೆಲ್ಲ ಅನವಶ್ಯಕ ಭಯ. ನದಿಯಲ್ಲಿ ಹಾಕುವುದರಿಂದ ನದಿಯ ನೀರು ಮಲಿನವಾಗುತ್ತದೆ. ಭೂಮಿಯಲ್ಲಿ ತಗ್ಗು ತೆಗೆದು ಹೂಳುವುದು ಒಳ್ಳೆಯದು. ಕೇವಲ ಈ ಕೂದಲನ್ನಷ್ಟೇ ಅಲ್ಲ, ಯಾವ ಕೂದಲನ್ನೇ ಆಗಲೀ ಭೂಮಿಯಲ್ಲಿ ಹಾಕುವುದು ಒಳ್ಳೆಯದು. ನಮ್ಮ ದೇಶದ ಜನರಲ್ಲಿ ಕೂದಲನ್ನು ಎಲ್ಲಿ ಬೇಕಾದರೂ ಉಂಡೆ ಕಟ್ಟಿ ಎಸೆಯುವ ದುರಭ್ಯಾಸವಿದೆ. ದನಗಳು ಹುಲ್ಲಿನ ಜೊತೆ ತಿಂದು ಆ ಕೂದಲು ಕರಗದೆ ಹೊಟ್ಟೆಯಲ್ಲಿ ಕರುಳಿಗೆ ಸುತ್ತಿಕೊಳ್ಳುವುದುಂಟು. ಇಲ್ಲವೇ ಗಡ್ಡೆ ಕಟ್ಟಿಕೊಳ್ಳುವುದುಂಟು. ಮಕ್ಕಳ ಕೂದಲು ಚಿಕ್ಕವಿದ್ದು ಸುತ್ತಲೂ ಹಾರಾಡಿ ಹುಲ್ಲಿನಲ್ಲಿ ಸೇರಿಕೊಳ್ಳಬಹುದಾದ್ದರಿಂದ ಈ ಮುನ್ನೆಚ್ಚರಿಕೆ ಅಗತ್ಯ.
ಕೂದಲು ತೆಗೆಸುವ (ಜಾವಳ) ಕಾರ್ಯ ಮನೆ ದೇವರಲ್ಲಿ ಆಗಬೇಕು, ದೊಡ್ಡ ಕ್ಷೇತ್ರದಲ್ಲಿ ಆಗಬೇಕು ಎಂಬ ನಂಬಿಕೆ ಇದೆ ಮತ್ತು ಕೆಲವರು ಸಂತಾನಪ್ರಾಪ್ತಿ ತಡವಾದಾಗ, ಹೆರಿಗೆಗೆ ತೊಂದರೆಯಾದರೆ, ಮಗುವಿಗೆ ಏನಾದರೂ ಕಾಯಿಲೆ ಬಂದರೆ ಕ್ಷೇತ್ರಗಳಿಗೆ ಬಂದು ಕೂದಲು ತೆಗೆಸುವ ಹರಕೆ ಮಾಡಿಕೊಳ್ಳುವುದುಂಟು. ಈ ಹರಕೆ ತಮ್ಮ ನಂಬಿಕೆಯ ಬಲದಿಂದಲೋ, ಗುರು ಕೃಪೆಯಿಂದಲೋ ಫಲಿಸುವುದುಂಟು. ತಮ್ಮ ಬಂಧು ಬಳಗವನ್ನು ಕರೆದುಕೊಂಡು ಎಲ್ಲ ಖರ್ಚು ವೆಚ್ಚಗಳನ್ನು ತಾವೇ ಭರಿಸಿಕೊಂಡು ಈ ಕೂದಲು ತೆಗೆಸುವ ಕಾರ್ಯಕ್ಕೆ ಜನರು ಕ್ಷೇತ್ರಗಳಿಗೆ ಬರುತ್ತಾರೆ. ಬಸವ ಧರ್ಮವನ್ನು ಸರಿಯಾಗಿ ತಿಳಿದು ಪಾಲಿಸಬೇಕೆನ್ನುವವರು ಕೂದಲು ತೆಗೆಸುವ ಒಂದು ಕಾರ್ಯಕ್ಕೆಂದೇ ಸಮಯ - ಹಣ ವ್ಯಯ ಮಾಡದೆ ತಾವಿದ್ದಲ್ಲಿಯೆ ಪೂರೈಸುವುದೇ ಶ್ರೇಷ್ಠ. ಅದೇ ಹಣವನ್ನು ತಮ್ಮ ಮಗುವಿನ ಹೆಸರಿನಲ್ಲಿ ಚಿಕ್ಕ ವಚನ ಗ್ರಂಥಗಳನ್ನು ಹಂಚುವುದಕ್ಕೆ ಬಳಸಬಹುದು. ಈ ಯಾವ ಸಾಹಿತ್ಯಕ - ಬೌದ್ಧಿಕ ಸಂಸ್ಕಾರವಿಲ್ಲದ ಜನರು 'ಜಾವಳ' (ಕೂದಲು ತೆಗೆಸುವ) ಕಾರ್ಯಕ್ಕೆ ಕ್ಷೇತ್ರಕ್ಕೆ ಬರುವುದನ್ನು ನೋಡಿ ಕೆಲವೊಂದು ಒಳ್ಳೆಯ ಅಂಶಗಳನ್ನು ಊಹಿಸಬಹುದಾಗಿದೆ. ಗ್ರಾಮೀಣ ಜನರನ್ನು ಬಿಡಿ, ವಿದ್ಯಾವಂತರು ಕಲಿತವರಲ್ಲಿ ಸಹ ಇತಿಹಾಸ, ಧರ್ಮ, ಸಾಹಿತ್ಯ, ಸಂಸ್ಕೃತಿಯ ಸಂಪರ್ಕವಿರದು. ಕೂಡಲ ಸಂಗಮ ಒಂದು ಮಹತ್ವದ ಸ್ಥಾನ. ಎರಡು ಬೃಹತ್ ನದಿಗಳ ದಿವ್ಯಕೂಟದಲ್ಲಿ ಸಂಗಮೇಶ್ವರ ದೇವಾಲಯ - ಬಸವೇಶ್ವರ ಐಕ್ಯ ಮಂಟಪಗಳಿವೆ. ನಾವು ಧರ್ಮಗುರುವಿನ ಸ್ಥಾನಕ್ಕೆ ಆಗಾಗ ಬಂದು ಹೋಗಬೇಕು.” ಇಂಥ ಪ್ರೌಢ ಕರ್ತವ್ಯ ಪ್ರಜ್ಞೆ ಇಲ್ಲವೇ ಇಲ್ಲ. ಉಳಿವೆ ಚನ್ನಬಸವಣ್ಣನವರ ಐಕ್ಯ ತಾಣ. ನಿಸರ್ಗದ ರಮ್ಯ ಸ್ಥಳ. ಬಂದು ಆ ಪ್ರಕೃತಿ ಸೌಂದರ್ಯವನ್ನು ಪ್ರಶಾಂತ ವಾತಾವರಣವನ್ನು ಸವಿಯಬೇಕು ಎಂಬ ತುಡಿತ ಇಲ್ಲವೇ ಇಲ್ಲ. ಮನೆ ದೇವರು (1) ಬಸವಣ್ಣ, ಚನ್ನಬಸವಣ್ಣ, ಸಂಗಪ್ಪನದು (ಸಂಗಮೇಶ್ವರ), ಪುರಾತನ ಗುಡಿ ಇಲ್ಲಿ ಬಂದು ಜಾವಳ ತೆಗೆಸಬೇಕು, ಕೂದಲನ್ನು ಹೊಳೆಗೆ ಬಿಡಬೇಕು. ಈ ವಿಚಾರದವರೇ ಹೆಚ್ಚು. ನನಗನ್ನಿಸುತ್ತದೆ ಇಂಥ ಕಾರಣಕ್ಕಾಗಿಯಾದರೂ ಜನರು ಬಂದಿರದಿದ್ದರೆ ಶರಣರ ಸ್ಥಾನಗಳು ಪೂರ್ತಿ ನಾಮಾವಶೇಷವಾಗುತ್ತಲಿದ್ದವೇನೋ !
ಹಿಂದಿನ ಕಾಲದಲ್ಲಿ ಜನರು ಊರು ಬಿಟ್ಟು ಹೊರಗೆ ಬರಲು ಬೇರೆ ಅವಕಾಶಗಳು ಇರುತ್ತಿರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳ ಪರಿಸ್ಥಿತಿ ಇನ್ನೂ ಗಂಭೀರ. ಮಧ್ಯಮ ವರ್ಗ ಮತ್ತು ಮೇಲ್ವರ್ಗದ ಮನೆತನದ ಮಹಿಳೆಯರಿಗೆ ತಲೆಬಾಗಿಲು ದಾಟುವ ಅವಕಾಶ ಸಹಾ ಇರುತ್ತಿರಲಿಲ್ಲ. ಕೂದಲು ತೆಗೆಸಲು, ಹರಕೆ ಸಲ್ಲಿಸಲು ಕ್ಷೇತ್ರಗಳಿಗೆ ಬರುವ ಈ ಸಂಪ್ರದಾಯದಿಂದ ಅವರಿಗಂತೂ ಎಷ್ಟೋ ಹರ್ಷ. ಮಾಂಸ - ರಕ್ತಗಳಿಲ್ಲದ ಅಸ್ಥಿಪಂಜರದಂತೆ ಇಂಥ ಆಚರಣೆಗಳು ಸಮಾಜದಲ್ಲಿವೆ. ಇಂಥವರಿಗೆ ಪ್ರಕೃತಿ ಸೌಂದರ್ಯ ಆಸ್ವಾದನೆ, ಐತಿಹಾಸಿಕ ಪ್ರಜ್ಞೆ, ಸ್ಥಳ ಮಹಾತ್ಮ ತಿಳಿದರೆ ಆಚರಣೆಯಲ್ಲಿ ಜೀವಂತಿಕೆ ಬರಲು ಸಾಧ್ಯ. ಈ ನೆಪದಲ್ಲಾದರೂ ಮಗುವಿನ ತಂದೆ ತಾತಂದಿರು ಹಣ ಖರ್ಚು ಮಾಡಿ ಜನರನ್ನು ಕರೆತಂದು ಕ್ಷೇತ್ರದರ್ಶನ ಮಾಡಿಸುವರು. ಅಷ್ಟರ ಮಟ್ಟಿಗಾದರೂ ಈ ಯಾತ್ರೆ ಸ್ತುತ್ಯಾರ್ಹ.
ಮಗುವು ಜಗತ್ತಿಗೆ ಬಂದ ದಿನದಿಂದಲೇ ಆಹಾರವನ್ನು ತೆಗೆದುಕೊಳ್ಳುವುದಾದರೂ ಅದು ಪಡೆಯುವುದು ದ್ರವಾಹಾರ. ಜೀವನ ಪರ್ಯಂತರವಿಡೀ ಸ್ವೀಕರಿಸುವ ಘನಾಹಾರವನ್ನು ಒಂದು ದಿನ ಆರಂಭಿಸುವಾಗ 'ಅನ್ನ ಪ್ರಾಶನ' ಎಂಬ ಕಾರ್ಯ ಮಾಡಲಾಗುವುದು. ಲಿಂಗಾಯತ ಧರ್ಮದಲ್ಲಿ ಅನ್ನ, ಊಟ, ಭೋಜನ ಎಂಬ ಪದ ಬಳಕೆ ಸಲ್ಲದು. ಪ್ರಸಾದ, ಪ್ರಸಾದ ಸ್ವೀಕಾರ ಎಂದೆನ್ನಬೇಕು. ಅಕ್ಕಿಯ ಅನ್ನ, ಚಪಾತಿ, ಮುಂತಾದ್ದು ತಿನ್ನಬಲ್ಲದು ಎಂಬಷ್ಟು ಮಗು ಬೆಳೆದಾಗ, ಒಂದು ದಿವಸ ಈ ಕಾರ್ಯ ಮಾಡಬಹುದು.
ಗುರುಮೂರ್ತಿಯನ್ನು ಆಹ್ವಾನಿಸಬಹುದು ಅಥವಾ ತಾವೇ ಮಾಡಿಕೊಳ್ಳಬಹುದು. ಮಗುವಿಗೆ ಸ್ನಾನ ಮಾಡಿಸಿ ಪೂಜೆಗೆ ಕುಳ್ಳಿರಿಸಿ, ಅದರ ಇಷ್ಟಲಿಂಗವನ್ನು ಪೂಜಿಸಲು ಕಲಿಸುವುದು. ಆ ಇಷ್ಟಲಿಂಗದ ಮೇಲೆ ಮೂರು ಬಾರಿ ಎರೆದು, ನಿತ್ಯದಂತೆ ತೀರ್ಥ ಕುಡಿಸುವುದು. ಆಮೇಲೆ ಗುರುಬಸವಣ್ಣನವರ ಭಾವಚಿತ್ರಕ್ಕೆ ಪೂಜೆಯನ್ನು ತಾಯಿ ಮಾಡುತ್ತಾ ಮಗುವಿನಿಂದಲೂ ಮಾಡಿಸುವುದು. ಅಂದು ಉಣ್ಣಿಸಲು ಸಿದ್ಧಮಾಡಿರುವ ಪ್ರಸಾದ ಮುಖ್ಯವಾಗಿ ಬಿಸಿ ಅನ್ನ-ತುಪ್ಪ, ಏನಾದರೂ ಸಿಹಿ ಪದಾರ್ಥ ಭಾವಚಿತ್ರದ ಮುಂದಿಟ್ಟು ನೈವೇದ್ಯ ಮಾಡುವುದು. “ಗುರುಬಸವೇಶಾ, ನಿನ್ನ ಕೃಪೆಯೊಡನೆ ಸೃಷ್ಟಿಕರ್ತ, ಪರಮಾತ್ಮನ ಅನುಗ್ರಹವು ಈ ಮಗುವಿನ ಮೇಲಿದ್ದು ಆರೋಗ್ಯ, ಆಯುಷ್ಯ, ಬುದ್ದಿ, ವಿದ್ಯೆ, ಸಂಪತ್ತು, ಸದ್ಭಕ್ತಿ ಎಂಬ ಷಟ್ ಸಂಪತ್ತು ಪ್ರಾಪ್ತಿಯಾಗಲಿ.” ಎಂದು ಪ್ರಾರ್ಥಿಸಬೇಕು. ತಾಯಿ ಅಥವಾ ಮನೆಯಲ್ಲಿ ಇರುವ ಅಜ್ಜಿ - ಅಜ್ಜ ಮುಂತಾದ ಹಿರಿಯರು ಯಾರೇ ಇರಲಿ, ಮಗುವಿಗೆ ಭಸ್ಮ ಧರಿಸಿ, ತಲೆಯ ಮೇಲೆ ಕೈಯಿಟ್ಟು “ಶುಭವಾಗಲಿ - ಲೇಸಾಗಲಿ'' ಎಂದು ಆಶೀರ್ವದಿಸಬೇಕು.
ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವು ಅಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥಗಳು
ಇದಿರಲ್ಲಿಪ್ಪವು, ಕೂಡಲ ಸಂಗಮದೇವಾ
ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆಮಗೆ
ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆಮಗೆ
ಆಯಿತ್ತು ಬಸವಾ ನಿನ್ನಿಂದ ಜಂಗಮ ಸ್ವಾಯತವೆಮಗೆ
ಆಯಿತ್ತು ಬಸವಾ ನಿನ್ನಿಂದ ಪ್ರಸಾದ ಸ್ವಾಯತವೆಮಗೆ,
ಇಂತೀ ಚತುರ್ವಿಧ ಸ್ವಾಯತವನು ನೀನೆ ಮಾಡಿದೆಯಾಗಿ
ನಮ್ಮ ಗುಹೇಶ್ವರ ಲಿಂಗಕ್ಕೆ ವಿಳಾಸವಾದೆಯಲ್ಲೈ ಸಂಗನ ಬಸವಣ್ಣಾ
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು.
ದೇವರ ಮತ್ತು ಗುರುಬಸವಣ್ಣನ ನಾಮಸ್ಮರಣೆ ಮಾಡಿ ಮಗುವಿನ ಬಾಯಿಗೆ ಪ್ರಸಾದದ ತುತ್ತನ್ನು ಇಡಬೇಕು.ಸಾಮಾನ್ಯವಾಗಿ ಜನರಲ್ಲಿ ಬಹಳ ಅಜ್ಞಾನ, ಮೌಡ್ಯತೆ ತುಂಬಿದೆ. ತಾಯಿಯ ಹಾಲಿನ ಮೇಲಷ್ಟೆ ಬಹಳ ದೀರ್ಘ ಕಾಲ ಮಗುವನ್ನು ಬೆಳೆಸುವರು. ತೀವ್ರವಾಗಿ ಬೆಳೆಯುವ ಕೋಶಗಳ ಅಭಿವೃದ್ಧಿಗೆ ತಾಯಿಯ ಹಾಲಷ್ಟೇ ಸಾಕಾಗದು. ೪ ತಿಂಗಳು ತುಂಬುತ್ತಲೇ ಮಗುವಿಗೆ ಇತರ ಆಹಾರ ಕೊಡಲು ಆರಂಭಿಸಬೇಕು. ನೀರು, ಹಣ್ಣಿನ ರಸ ಕುಡಿಸಿದರೆ ಶೀತವಾಗುತ್ತದೆ ಎಂದು ಮಕ್ಕಳಿಗೆ ನೀರನ್ನು ಕುಡಿಸರು, ಹಣ್ಣಿನ ರಸ ಕುಡಿಸರು. ನಾನು ಅಮೆರಿಕಾಕ್ಕೆ ಹೋದಾಗ ಅಲ್ಲಿ ಆತಿಥೇಯರಾಗಿದ್ದ ಓರ್ವ ವೈದ್ಯೆ ನಾಲ್ಕು ತಿಂಗಳ ಮಗುವಿಗೆ ಬಾಟಲಿಯಲ್ಲಿ ಹಣ್ಣಿನ ರಸ ಹಾಕಿ, ಕುಡಿಯಲು ಕೊಟ್ಟಿದ್ದಳು. ನೋಡಿ ಸೋಜಿಗವಾಯಿತು. ಎಲ್ಲ ಬಗೆಯ ಪೌಷ್ಟಿಕ ಆಹಾರದಿಂದ ಶರೀರದಲ್ಲಿ ಅದ್ಭುತವಾದ ರೋಗನಿರೋಧಕ ಶಕ್ತಿ ಬರುತ್ತದೆ ಎಂದು ವಿವರಿಸಿದಳು. ಹಸಿ ತರಕಾರಿ, ಬೆಂದ ತರಕಾರಿ, ಸೊಪ್ಪು, ಮುಂತಾದ್ದು ಮಗುವಿನ ವಯಸ್ಸು ಮತ್ತು ಜೀರ್ಣಶಕ್ತಿಗನುಸಾರವಾಗಿ ಕೊಡುವುದರಿಂದ ಸುಲಭವಾಗಿ ಎಲ್ಲ ಅನ್ನಾಂಗ (ಜೀವಸತ್ವ) ಗಳನ್ನು ಕೊಡಬಹುದು. ಈ ದೇಶದಲ್ಲಿ ತರಕಾರಿಗೆಲ್ಲ ಇದು ಉಷ್ಣ, ಅದು ಶೀತ, ಇದು ಪಿತ್ತ ಎಂದು ಮೂಗೆಳೆಯುವ ಪರಿಪಾಠವಿದೆ.
ಎಳೆಯ ಮಕ್ಕಳಿಗೆ ಕೆಂಡದಂತೆ ಕಾದ ನೀರನ್ನು ಅವು ಕಿರಿಚಾಡುತ್ತಿದ್ದರೂ ಎರೆಯುವ ಪರಿಪಾಠ ಇಲ್ಲಿದೆ. ಪಾಶ್ಚಿಮಾತ್ಯರು ಅಷ್ಟು ಕೆಂಡದಂತಹ ನೀರನ್ನು ಎರೆಯದೇ, ಬೆಚ್ಚನೆಯ - ತುಸು ಬಿಸಿಯಾದ ನೀರನ್ನು ಮಾತ್ರ ಎರೆಯುವರು. ಮಗು-ಬಾಣಂತಿಯರ ಬಿಸಿ ನೀರಿನ ಸ್ನಾನವೆಂದರೆ ಇಲ್ಲಿ ಒಂದು ದೊಡ್ಡ ರಂಪಾಟವೇ ಸರಿ. ಆದ್ದರಿಂದ ಮುಂದುವರಿದ ವೈಜ್ಞಾನಿಕ ಸಂಶೋಧನೆಗಳ ಈ ಕಾಲದಲ್ಲಿ ಸರಿಯಾದ ಆಚರಣೆಗಳನ್ನು ರೂಢಿಗೆ ತರುವುದು ಒಳ್ಳೆಯದು.
ಮಗುವಿನ ಜೀವನದ ಮತ್ತೊಂದು ಮಹತ್ವದ ಹಂತ ವಿದ್ಯಾರಂಭ, ಮನೆಯಲ್ಲೇ ಕಲಿಸಲು ತೊಡಗುವಾಗಲಾಗಲಿ ಅಥವಾ ಶಿಶು ವಿಹಾರಕ್ಕೆ ಕಳಿಸುವ ದಿನವಾಗಲೀ ಸೂಕ್ತವಾದ ಕ್ರಿಯೆಯೊಡನೆ ವಿದ್ಯಾರ್ಜನೆಯನ್ನು ಆರಂಭಿಸಬೇಕು.
ಸ್ನಾನ ಮಾಡಿಸಿ ಮಡಿ ವಸ್ತ್ರಗಳನ್ನು ಉಡಿಸಿ ಪೂಜಾಗೃಹಕ್ಕೆ ಕರೆತರಬೇಕು. ಮೊದಲು ನಿತ್ಯದಂತೆ ಇಷ್ಟಲಿಂಗ ಪೂಜೆ ಮಾಡಿಸಿ, ತೀರ್ಥ ಪ್ರಸಾದ ಸ್ವೀಕರಿಸಲು ಹೇಳಬೇಕು. ಲಿಂಗಧಾರಣೆ ಮಾಡಿದರೂ, ಲಿಂಗವನ್ನು ಮಕ್ಕಳಿಗೆ ಕಟ್ಟದೇ ಎತ್ತಿಟ್ಟ ಪಾಲಕರು, ಇಂಥ ವಿಶೇಷ ದಿನಗಳಂದಾದರೂ ಪೂಜೆ ಮಾಡಲು ಹೇಳಬೇಕು:
ನಂತರ ಗುರುಬಸವಣ್ಣನವರ ಭಾವಚಿತ್ರ ಪೂಜೆ ಮಾಡಬೇಕು. ಮಗುವಿಗೆ ಹೇಳಿಕೊಟ್ಟು ಮಾಡಿಸಬೇಕು. ಮಂಗಲವನ್ನು ಮಾಡಬೇಕು. ನೈವೇದ್ಯವಾಗಿ ಕಲ್ಲು ಸಕ್ಕರೆ ದ್ರಾಕ್ಷಿ ಮುಂತಾದವನ್ನಿಡಬೇಕು. ಹೊಸದಾದ ಒಂದು ಕರಿ ಹಲಗೆ (ಪಾಟಿ), ಬಳಪ, ಅಂಕಲಿಪಿ ತಂದು ಬಸವ ಗುರುವಿನ ಮುಂದಿಡಬೇಕು. ಮಂಗಲವಾದ ಬಳಿಕ ತೀರ್ಥ (ಮಂತ್ರೋದಕ) ಸಿದ್ಧಪಡಿಸಬೇಕು. ವಿದ್ಯಾರಂಭ ಮಾಡಲಿರುವ ಮಗುವನ್ನು ಕೈ ಮುಗಿದಂತೆ ನಿಲ್ಲಿಸಿ, ಅದರ ಕೈಲಿ ಹೀಗೆ ಹೇಳಿಸಬೇಕು.
೧. ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯ
ಕೂಡಲ ಸಂಗಮ ದೇವಾ, ಹಾಲಲ್ಲದ್ದು, ನೀರಲ್ಲದ್ದು.
೨. ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನಾ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ, ||
ಹಣೆಗೆ ಭಸ್ಮ ಧರಿಸಿ, ತೀರ್ಥವನ್ನು ತಲೆಯ ಮೇಲೆ ಪ್ರೋಕ್ಷಿಸಿ, ಕುಡಿಯಲು ಕೊಟ್ಟು, ಬಲಗೈಯ ನಡುಬೆರಳಿನಿಂದ ನಾಲಿಗೆಯ ಮೇಲೆ ಓಂ ಶ್ರೀಗುರುಬಸವ ಎಂದು ಬರೆದು, ನಂತರ ಬಸವ ಗುರುವಿನ ಭಾವಚಿತ್ರದ ಮುಂದಿರುವ ನೈವೇದ್ಯ - ಪ್ರಸಾದವನ್ನು ತಿನ್ನಲು ಕೊಡಬೇಕು.
“ಗುರು ಬಸವೇಶಾ, ನಿನ್ನ ಕೃಪೆಯೊಡನೆ ಸೃಷ್ಟಿಕರ್ತ ಪರಮಾತ್ಮನ ಅನುಗ್ರಹವು ಈ ಮಗುವಿನ ಮೇಲಿದ್ದು ಆರೋಗ್ಯ, ಆಯುಷ್ಯ, ಬುದ್ಧಿ, ವಿದ್ಯೆ, ಸಂಪತ್ತು, ಸದ್ಭಕ್ತಿ ಎಂಬ ಷಟ್ ಸಂಪತ್ತು ಪ್ರಾಪ್ತಿಯಾಗಲಿ.” ಎಂದು ಪ್ರಾರ್ಥಿಸಬೇಕು.
ಈಗ ಕರಿಹಲಗೆಯನ್ನು ತೆಗೆದುಕೊಂಡು, ಬಲಗೈಯ ಮಧ್ಯದ ಬೆರಳಿಗೆ ಭಸ್ಮವನ್ನು ಧರಿಸಿ, ಕರಿ ಹಲಗೆಯ ಮೇಲೆ ಬಸವ-ಲಿಂಗ ಮುದ್ರೆಯನ್ನು ಭಸ್ಮದಿಂದ ಲಿಖಿಸಬೇಕು.
ನಂತರ ಮಧ್ಯದಲ್ಲಿ 'ಓಂ' ಸುತ್ತಲೂ ಶ್ರೀ ಗುರು ಬಸವ ಬರೆಯಬೇಕು.
ಮಗುವಿನ ಕೈಗೆ ಬಳಪ (ಸೀಮೆಸುಣ್ಣವನ್ನು ಬಲಗೈ ಬೆರಳಿಗೆ ಕೊಟ್ಟು ಓಂ ಶ್ರೀ ಗು ರು ಬ ಸ ವ ಎಂದು ಹೇಳಿಸುತ್ತ, ಕೈ ಹಿಡಿದು ತಿದ್ದಿಸಬೇಕು. ಅಂಕಲಿಪಿ ಪುಸ್ತಕಕ್ಕೂ ವಿಭೂತಿ ಧರಿಸಿ, ಅದರಿಂದ ಏನಾದರೂ ಓದಿಸಬೇಕು. ಚಿಕ್ಕ ಚಿಕ್ಕ ವಚನಗಳನ್ನು ನಿತ್ಯವೂ ಮಗುವಿಗೆ ಹೇಳಿಕೊಟ್ಟು ಬಾಯಿಪಾಠ ಮಾಡಿಸಬೇಕು.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಪ್ರಮಾಣ ಅಗೋಚರ ಅಪ್ರತಿಮ ಲಿಂಗವೇ
ಕೂಡಲ ಸಂಗಮ ದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ -ಬಸವಣ್ಣನವರು.
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.
![]() | ಲಿಂಗಧಾರಣೆ-ನಾಮಕರಣ-ತೊಟ್ಟಿಲು | ಮೈ ನೆರೆಯುವಿಕೆ - ದೀಕ್ಷಾ ಸಂಸ್ಕಾರ | ![]() |