- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ವಸ್ತು- ಶುದ್ದೀಕರಣ
ಹುಟ್ಟಿನಿಂದ ಸಾವಿನವರೆಗೆ, ಬೆಳಗಿನಿಂದ ಬೈಗಿನವರೆಗೆ, ಪುನಃ ಬೈಗಿನಿಂದ ಬೆಳಗಿನವರೆಗೆ ಹಲವಾರು ವಸ್ತುಗಳನ್ನು ಬಳಸುತ್ತೇವೆ. ಬಸವ ಧರ್ಮವು ಸೇಶ್ವರವಾದಿ, ಅಧ್ಯಾತ್ಮ ಪ್ರಧಾನ ಧರ್ಮವಾಗಿದ್ದು ಕರುಣೆ-ಕೃಪೆ (Grace)ಗೆ ಬಹಳ ಮಹತ್ವಕೊಡುತ್ತದೆ. ಯಾವುದೇ ವಸ್ತುವನ್ನು ಪದಾರ್ಥರೂಪದಲ್ಲಿ ಬಳಸದೆ, ಪ್ರಸಾದ ರೂಪದಲ್ಲಿ ಬಳಸಬೇಕು ಎಂದು ಬೋಧಿಸುತ್ತದೆ. ಪದಾರ್ಥವು ಅಂಗಗುಣಗಳನ್ನು ಬೆಳೆಸಿದರೆ ಪ್ರಸಾದವು ಅಂಗಗುಣಗಳನ್ನಳಿಸಿ ಲಿಂಗಗುಣಗಳನ್ನು ಬೆಳೆಸುತ್ತದೆ ಎಂದು ದೃಢವಾಗಿ ನಂಬಲಾಗಿದೆ.
ವಿಶ್ವದಾಕಾರದಲ್ಲಿ ವಿಶ್ವಾತ್ಮನ ಕುರುಹಾಗಿ ಅಂಗೈಗೆ ಚುಳುಕಾಗಿ ಬಂದಿರುವ ಇಷ್ಟಲಿಂಗಕ್ಕೆ ಸುಪ್ರಭಾತದಲ್ಲಿ ಮಜ್ಜನ, ಧೂಪ, ದೀಪ, ನೈವೇದ್ಯ ಸಮರ್ಪಿಸುವುದರೊಡನೆ ನಾವು ಬಳಸುವ ಪಂಚಭೂತಗಳನ್ನು ಪ್ರಸಾದೀಕರಿಸುವ ಪ್ರಯತ್ನ ನಡೆಯುತ್ತದೆ. ಗುರು ಬಸವಣ್ಣನವರ ಕೃಪೆ-ಜಗತ್ಕರ್ತನ ಕೃಪೆ-ಜಂಗಮಾತ್ಮರ ಕೃಪೆ ವಸ್ತುಗಳನ್ನು ಪ್ರಸಾದೀಕರಿಸುತ್ತವೆ. ಆದ್ದರಿಂದ ಯಾವುದೇ ಹೊಸವಸ್ತುವನ್ನು ತಂದಾಗ ಅದರ ಪೂರ್ವಾಶ್ರಯವಾದ ಪದಾರ್ಥಗುಣ ಕಳೆಯಬೇಕು, ಪ್ರಸಾದೀ (ದೈವೀ)ಕರಿಸಬೇಕು.
ಹೊಸಬಟ್ಟೆ :
ಹೊಸಬಟ್ಟೆ ಕೊಂಡಾಗ ನಾವು ಉಡುವ ಪೂರ್ವದಲ್ಲಿ ಪ್ರಸಾದೀಕರಿಸಬೇಕು. ಬಲಗೈಯ ಬೆರಳುಗಳಿಗೆ ವಿಭೂತಿಯನ್ನು ಧರಿಸಿ, ಪಂಚಕೋನ ಪ್ರಣವ ಬರೆದು ಓಂ ಲಿಂಗಾಯ ನಮಃ ಜಪಿಸಬಹುದು. ಷಟ್ ಕೋನ ಪ್ರಣವ ಬರೆದು ಓಂ ಶ್ರೀಗುರುಬಸವ ಎಂದು ರೇಖಿಸಬಹುದು.
ಹೊಸವಾಹನ:
ಹೊಸವಾಹನಗಳನ್ನು ಖರೀದಿಸಿದಾಗ ಅವಕ್ಕೆ ಪೂಜೆ ಮಾಡುವುದು ಬಸವ ತತ್ವದ ಪ್ರಕಾರ ತಪ್ಪಾಗುತ್ತದೆ. ಶ್ರೀ ಗುರುಬಸವಣ್ಣನವರ ಭಾವಚಿತ್ರವನ್ನು ಚಾಲಕನ ಆಸನದ ಮೇಲಿಟ್ಟು ಅದಕ್ಕೆ ಪೂಜೆಸಲ್ಲಿಸಬೇಕು. ಆರತಿ ಮಾಡಬೇಕು. ಬಸವ ಗುರುವಿನ ಪಾದವನ್ನು ಸ್ಪರ್ಶಿಸಿ, ಅದಕ್ಕೆ ಹತ್ತಿರುವ ವಿಭೂತಿ ಕೈಗೆ ಸವರಿಗೊಂಡು ಮಂತ್ರೋದಕ ಮಾಡಬೇಕು. ಮಂತ್ರೋದಕವನ್ನು ವಾಹನಕ್ಕೆ ಅಲ್ಲಲ್ಲೇ ಸಿಂಪಡಿಸಿ, ಓಂ ಶ್ರೀಗುರುಬಸವಲಿಂಗಾಯನಮಃ ಎಂದು ಪಠಿಸುತ್ತ ಸುತ್ತಲೂ ಮೂರು ಎಳೆ ಭಸ್ಮಧರಿಸುತ್ತ ಸಂಚರಿಸಬೇಕು. ಬಸವ ಗುರುವಿನ ಚಿತ್ರ ಮತ್ತು ಮಂತ್ರ ಇರುವ ಅಂಟುಪತ್ರ (ಸ್ಟಿಕ್ಕರ್) ಅಂಟಿಸಬೇಕು. ಭಾವಚಿತ್ರಕ್ಕೆ ಏರಿಸಿದ್ದ ಹೂಮಾಲೆಯನ್ನು ಚಾಲಕ ಚಕ್ರಕ್ಕೆ ಧರಿಸಬೇಕು.
ಕಾರು, ಲಾರಿ, ಸ್ಕೂಟರ್ ಯಾವುದೇ ಇರಲಿ ಹೀಗೆ ಮಾಡಬೇಕು; ನಿಂಬೆ ಹಣ್ಣು ಇಟ್ಟು ಗಾಲಿ ಹಾಯಿಸುವುದು, ವಾಹನದ ಮುಂದೆ ಕುಂಬಳಕಾಯಿ ಒಡೆಯುವುದು ಮುಂತಾಗಿ ಮಾಡಬಾರದು.
ಪೆಟ್ಟಿಗೆ, ಅಲ್ಮೇರಾ ಹೀಗೆ ಯಾವುದೇ ವಸ್ತುವನ್ನು ದೈವೀಕರಿಸಬೇಕು. ಹಸು-ಎಮ್ಮೆ ಕೊಂಡುತಂದಾಗ, ಅವು ಕರು ಹಾಕಿದಾಗ ಅವನ್ನು ಶುದ್ದೀಕರಿಸಬೇಕು. ಹಿಂದೆ `ಲಿಂಗಮುದ್ರೆ'ಯ ಬರೆಹಾಕುತ್ತಿದ್ದರು. ಅದು ಚರ್ಮಕ್ಕೆ ಗಾಯವನ್ನುಂಟು ಮಾಡುತ್ತದೆ. ನಾವು ಈ ಕಾಲದಲ್ಲಿ ಭಸ್ಮಧರಿಸಿ, ರುದ್ರಾಕ್ಷಿ ಕಟ್ಟಿದರೆ ಸಾಕು.
ಇಷ್ಟಲಿಂಗ ಶುದ್ದಿ
ಕೆಲವು ಜನರು ದೀಕ್ಷೆಯ ಬಗೆಗೆ ಸರಿಯಾದ ತಿಳುವಳಿಕೆ ಇರದೆ ದೀಕ್ಷೆ ಪಡೆದುಕೊಳ್ಳಲು ಹಿಂಜರಿಯುವರು. “ಇಷ್ಟಲಿಂಗವನ್ನು ಬರಿ ಶುದ್ದಿ ಮಾಡಿಕೊಡಿರಿ ಸಾಕು; ಮತ್ತೆ ದೀಕ್ಷೆ ತೆಗೆದುಕೊಳ್ಳುತ್ತೇವೆ. ಅಲ್ಲಿಯತನಕ ಹಾಗೆಯೇ ಪೂಜೆ ಮಾಡುತ್ತೇವೆ' ಎನ್ನುವರು. ಅವರನ್ನು ಒತ್ತಾಯಿಸಿದರೂ ಏನೂ ಪ್ರಯೋಜನವಾಗದು. ಆದ್ದರಿಂದ ಆಗ ಇಷ್ಟಲಿಂಗವನ್ನು ಶುದ್ದಿಮಾಡಿಕೊಡಬೇಕು. ಇದರಲ್ಲಿ ಅತಿ ಸರಳವೆಂದರೆ ಬಲಗೈಗೆ ಭಸ್ಮವನ್ನು ಧರಿಸಿಕೊಂಡು ಆ ಹೊಸಲಿಂಗವನ್ನು ಸ್ಪರ್ಶಿಸಿ, “ಓಂ ಲಿಂಗಾಯ ನಮಃ ” ಎಂದು ಉಚ್ಚರಿಸುತ್ತ ಅದನ್ನು ತೆಗೆದುಕೊಳ್ಳುವವರಿಗೆ ಕೊಡಬೇಕು.
ವಿಶೇಷ ಶುದ್ಧಿ :
ಬೆಳಗ್ಗೆ ಪೂಜೆ ಮಾಡುವಾಗ ಹೊಸಲಿಂಗವನ್ನು ಶುದ್ದಿ ಮಾಡಬೇಕು. ಗುರುಗಳು ತಮ್ಮ ಇಷ್ಟಲಿಂಗಕ್ಕೆ ಮಜ್ಜನಕ್ಕೆ ಎರೆಯುವಾಗ ತಮ್ಮ ಇಷ್ಟಲಿಂಗದ ಕೆಳಗೆ ಹೊಸ ಲಿಂಗವನ್ನು ಹಿಡಿದು ಮಜ್ಜನವೆರೆದು, ನಂತರ ಭಸ್ಮಧರಿಸಿ, ಪತ್ರೆ-ಪುಷ್ಪ ಮುಂತಾಗಿ ಇಟ್ಟು, ಕೊಡುವಾಗ ಮಂತ್ರವನ್ನು ಉಚ್ಚರಿಸಿ ಕೊಡಬೇಕು. ಈ ವಿಧಾನವು ಅರೆಬರೆ ಭಕ್ತರಿಗಾಗಿ ಹೇಳಲ್ಪಟ್ಟ ಅನುಕೂಲಸಿಂಧು ವಿಧಾನ.
ವಿಭೂತಿ ಶುದ್ದಿ:
ವಿಭೂತಿ ಗಟ್ಟಿಗಳನ್ನು ಕೊಂಡ ಬಳಿಕ ಕೆಲವರು ಗುರುಗಳು, ಮಹಾತ್ಮರ ಕೈಲಿ ಶುದ್ಧಿಮಾಡಿಸಿಕೊಳ್ಳಬಯಸಿ ವಿನಂತಿಸಿಕೊಳ್ಳುವರು. ಆಗ ಗುರುಗಳು ಬಲಗೈ ಬೆರಳುಗಳಿಗೆ ಭಸ್ಮವನ್ನು ಸವರಿಕೊಂಡು, ೧೨ ಬಾರಿ ಓಂ ಲಿಂಗಾಯ ನಮಃ ಎಣಿಸಿ, ಮಧ್ಯದ ಬೆರಳಿನಿಂದ ಪಂಚಕೋನ ಪ್ರಣವವನ್ನು ವಿಭೂತಿಗಟ್ಟಿಯ ಮೇಲೆ ಬರೆಯಬೇಕು.
ಇಷ್ಟಲಿಂಗಾರ್ಚನೆಯ ಸಮಯದಲ್ಲಿ ಬಂದು ಕೇಳಿದರೆ ಹೀಗೆ ಮಾಡಬೇಕು. ಬಲಗೈಯ ಬೆರಳುಗಳಿಗೆ ಭಸ್ಮವನ್ನು ಧರಿಸಿ, ೧೨ ಬಾರಿ ಓಂ ಲಿಂಗಾಯ ನಮಃ ಪಠಿಸಿ, ಈ ಬೆರಳುಗಳನ್ನು ನೀರಿನಲ್ಲಿ ಅದ್ದಿ, ಆ ಮಂತ್ರೋದಕವನ್ನು ವಿಭೂತಿಗೆ ಸವರಬೇಕು. ಬಲಗೈಯ ಮಧ್ಯದ ಬೆರಳಿನಿಂದ, ಬೆರಳನ್ನು ಮಂತ್ರೋದಕದಲ್ಲಿ ಅದ್ದಿ, ಪಂಚಕೋನ ಪ್ರಣವವನ್ನು ವಿಭೂತಿಯ ಗಟ್ಟಿಯ ಮೇಲೆ ಬರೆಯಬೇಕು.
ನಿತ್ಯಶುದ್ಧಿ:
ಪೂಜಕರು ಗುರು-ಮಹಾತ್ಮರಿಂದ ಶುದ್ಧಿಮಾಡಿಸಿಕೊಂಡು ತಂದ ಗಟ್ಟಿಯೇ ಇದ್ದರೂ, ಪ್ರತಿನಿತ್ಯ ಪೂಜೆ ಮಾಡುವಾಗ ಮೇಲೆ ತಿಳಿಸಿದಂತೆ ಪಂಚಕೋನ ಪ್ರಣವ ಬರೆದು, ಶುದ್ದಿ ಮಾಡಿಕೊಂಡೇ ಧರಿಸಬೇಕು. ಒಂದು ಸಲ ಶುದ್ಧಿ ಮಾಡಿಸಿದ್ದೇವೆಂದು ತಿಳಿಯಬಾರದು. ನಿತ್ಯಪೂಜೆ-ನಿತ್ಯಶುದ್ದಿ ಅಂದಂದಿನ ಕ್ರಮ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.