Previous ಗರ್ಭ ಲಿಂಗಧಾರಣೆ ಜಾವಳ - ಕೂದಲು ತೆಗೆಸುವುದು Next

ಮಗುವಿಗೆ ಇಷ್ಟಲಿಂಗಧಾರಣೆ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಮಗುವಿಗೆ ಇಷ್ಟಲಿಂಗಧಾರಣೆ

ಹೆರಿಗೆಯು ಆಸ್ಪತ್ರೆಯಲ್ಲಿ ಆದಾಗ ತಾವೇ ಮಗುವಿಗೆ ಧರಿಸಿರುವವರಾಗಲೀ ಅಥವಾ ಧರಿಸದವರಾಗಲೀ ಮನೆಗೆ ಬಂದಾನಂತರ ಗುರು (ಕ್ರಿಯಾ) ಮೂರ್ತಿಯಿಂದ ಲಿಂಗಧಾರಣೆ ಮಾಡಿಸಬೇಕು. ಅನುಕೂಲವಾದ ದಿನ ಮಾಡಿಸಬಹುದು.

ನಾ ಹುಟ್ಟಲೊಡನೆ ಶ್ರೀ ಗುರು ವಿಭೂತಿಯ ಪಟ್ಟವ ಕಟ್ಟಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.

ಎಂದು ಅಕ್ಕ ಮಹಾದೇವಿ ಹೇಳುವಂತೆ ಈ ಪದ್ಧತಿ ರೂಢಿಯಲ್ಲಿ ಸಾಗಿ ಬಂದಿದೆ.

ಆಧುನಿಕ ಶಿಕ್ಷಣದಿಂದ (ನಿಜಧರ್ಮದೊಡನೆ) ಮೂಢ ನಂಬಿಕೆಗಳನ್ನು ನಗರವಾಸಿಗಳು ಕಡಿಮೆ ಮಾಡುತ್ತಿರುವರಾದರೂ ಹಳ್ಳಿಗಳಲ್ಲಿ ನಾನಾ ಬಗೆಯ ಮೂಢ ನಂಬಿಕೆಗಳು, ಆಚರಣೆಗಳು ತುಂಬಿವೆ. ಐದನೆಯ ದಿನಕ್ಕೆ ಮಾಡುವ ಐದೇಶಿ (ಐದೆಸೆ ಎಂಬುದು ಮೂಲದ ಹೆಸರಿರಬೇಕು. ದೆಸೆ ಎಂದರೆ ಅದೃಷ್ಟ, ಹಣೆ ಬರಹ, ಐದೆಸೆ ಎಂದರೆ ಐದನೆಯ ದಿನ ಬರೆಯುವ ಅದೃಷ್ಟ, ಗ್ರಾಮೀಣ ಭಾಷೆಯಲ್ಲಿ ಐದೇಶಿಯಾಗಿದೆ) ಅಂಥ ಮೌಡ್ಯತೆಯ ಪರಮಾವಧಿ. ಬಾಣಂತಿಗೆ ಬೇಕಾದ ಸೊಪ್ಪು, ಖಾರ ಮುಂತಾದವುಗಳನ್ನು ಅರೆವ ಗುಂಡುಕಲ್ಲಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವರು. ಅದಕ್ಕೆ ಅಲಂಕಾರ ಮಾಡಿ ಪೂಜಿಸುವುದಕ್ಕೆ ಸೆಟಿ ಪೂಜೆ ಎನ್ನುವರು. ಇದೇ ಸೆಟಿಯೇ (ಗುಂಡುಕಲ್ಲೇ) ಮಗುವಿನ ಹಣೆಬರಹ (ಅದೃಷ್ಟ)ವನ್ನು ಬರೆಯುವುದಂತೆ !

ಮಾಸ (ಮಗುವು ಇದ್ದ ಗರ್ಭಕೋಶದ ಚೀಲ)ವನ್ನು ಹೂಳಿದ ಸ್ಥಳಕ್ಕೆ ಬಾಣಂತಿ ಹೋಗಿ ಪೂಜೆ ಮಾಡಿ, ಮೊರದಲ್ಲಿ ಬಗೆಬಗೆಯ ದಿನಸುಗಳನ್ನು ತುಂಬಿ ಆ ಸ್ಥಳದ ಮೇಲಿಡುವಳಂತೆ. ಆ ಸಾಮಗ್ರಿಗಳನ್ನೆಲ್ಲ ಹೆರಿಗೆಗೆ ನೆರವಾದ ಸೂಲಗಿತ್ತಿಗೆ ಕೊಡಲಾಗುವುದು. ಆಕೆ (ತನ್ನ ಭವಿಷ್ಯವನ್ನೇ ಬರೆದುಕೊಳ್ಳಲಾರದವಳು) ಒಂದು ಸೂಜಿ ಹಿಡಿದು ಮಗುವಿನ ಹಣೆಯ ಮೇಲೆ ಅದರ ಅದೃಷ್ಟ ಬರೆಯುವಂತೆ ಸೂಜಿ ಆಡಿಸುವಳಂತೆ.

ಬಾಣಂತಿಯನ್ನು ಮಲಗಿಸಿದ ಹೊರಸು (ಮಂಚ)ವನ್ನು ಪೂಜಿಸಿ, ಅದರ ನಾಲ್ಕೂ ಮೂಲೆಗಳಲ್ಲಿ ಅನ್ನದ ಉಂಡೆ ಇಟ್ಟು ನೈವೇದ್ಯ ಮಾಡಲಾಗುವುದು. ಜಾತಕ ಬರೆಸುವುದು ವೈದಿಕ ಧರ್ಮದಿಂದ ಬಂದು ಸೇರಿದಂತೆ, ಐದೇಶಿ ಎಂಬುದು ಬಣಾಚರಣೆ (tribal practice)ಯಿಂದ ಬಂದಿರುವುದು ಎಂಬುದು ಸ್ಪಷ್ಟವಾಗುತ್ತದೆ.

ಗುಂಡುಕಲ್ಲು, ಮಾಸ (ಗರ್ಭಚೀಲ, ಸತ್ತ placenta)ಗಳ ಪೂಜೆ ಅತ್ಯಂತ ನಿಕೃಷ್ಟವಾದುದು. ಹಾಗೆಯೇ ಮಂಚದ ಪೂಜೆಯೂ ಸಹ. ಸೂಲಗಿತ್ತಿ - ಸೆಟಿಯ ಪ್ರತಿನಿಧಿಯಾಗಿ ಹಣೆಬರಹ ಬರೆಯುವುದೂ ಹಾಸ್ಯಾಸ್ಪದವೇ.

ಲಿಂಗಧಾರಣೆಯ ಸಮಯದಲ್ಲಿ ಗುರುವು ಭಸ್ಮಧಾರಣೆ ಮಾಡುತ್ತಲೇ ಹಿಂದಣ ಜನ್ಮಗಳ ಕಾವಳ, ವಿಧಿ ಲಿಖಿತ ಅಳಿಸಿ ಹೋಗುತ್ತದೆ ಎಂಬ ನಂಬಿಕೆ ಬಸವ ಧರ್ಮದಲ್ಲಿ ಅಂತರ್ಗತವಾಗಿದೆ.

ಇಷ್ಟಲಿಂಗಧಾರಣೆ ನಾಮಕರಣ

ಲಿಂಗಧಾರಣೆ - ನಾಮಕರಣ ತೊಟ್ಟಿಲು ಕಾರ್ಯಕ್ರಮವು ಒಟ್ಟಾಗಿಯೇ ನಡೆಯಬೇಕು. ಲಿಂಗಧಾರಣೆ ಬೆಳಗಿನ ಹೊತ್ತು ನಡೆಯುವುದು, ಗುರುಮೂರ್ತಿಯಿಂದ ನಾಮಕರಣವೂ ನಡೆಯುವುದು, ಸಂಜೆಗೆ ಜನರನ್ನು ತೊಟ್ಟಿಲಿನ ಕಾರ್ಯಕ್ರಮಕ್ಕೆ ಕರೆದು, ಹೆಸರನ್ನು ಬಹಿರಂಗವಾಗಿಯೂ ಘೋಷಿಸಲಾಗುವುದು. ಬೆಳಗಿನ ಕಾರ್ಯಕ್ರಮ ಧಾರ್ಮಿಕ ವಿಧಿಯಾದರೆ ಸಂಜೆಯದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ವರೂಪದ್ದು. ಹದಿಮೂರದೇಶಿ ಎಂದು ಗ್ರಾಮೀಣ ಭಾಷೆಯಲ್ಲಿ ಇದನ್ನು ಕರೆಯುತ್ತಾರೆ. ಮೂಲತಃ ಹದಿಮೂರರ ದೆಸೆ ಎಂದು ಇರಬಹುದು.

ಪಂಚಕೋನ ಪ್ರಣವ ಪಂಚಕೋನ ಪ್ರಣವ ಮಂತ್ರೋದಕವನ್ನು ಸಿದ್ಧಪಡಿಸುವ ವಿಧಾನ : ಐದೂ ಬೆರಳುಗಳಿಗೆ ವಿಭೂತಿ ಧರಿಸಿಕೊಳ್ಳಬೇಕು. ಹೆಬ್ಬೆರಳಿನಿಂದ ನಾಲ್ಕೂ ಬೆರಳುಗಳ ಮೂರು ಗಣ್ಣುಗಳನ್ನು ಎಣಿಸುತ್ತಾ 12 ಬಾರಿ ಓಂ ಶ್ರೀ ಗುರುಬಸವ ಲಿಂಗಾಯ ನಮಃ ಎಂದು ಪಠಿಸಿ, ನೀರಿನಲ್ಲಿ ನಡು ಬೆರಳಿನಿಂದ ಪಂಚಕೋನ ಪ್ರಣವ ಬರೆದು, ಐದೂ ಬೆರಳುಗಳನ್ನೂ ಅದ್ದಿ ಮಂತ್ರೋದಕ (ಇದಕ್ಕೆ ಹಸ್ತೋದಕ ಎಂದೂ ಅನ್ನಬಹುದು) ವನ್ನು ಸಿದ್ಧಪಡಿಸಬೇಕು. ಸ್ವಚ್ಛತೆಗೆ ಗಮನ ಕೊಡಬೇಕು. ನೀರು ಮಲಿನವಾಗಿರಬಾರದು, ವಿಭೂತಿ ಮೇಲೆ ಧೂಳು ಕೂತಿರಬಾರದು. ಕೈ ಸ್ವಚ್ಛವಿರಬೇಕು.
ಗುರು ಮೂರ್ತಿಯು ಸ್ನಾನ ಮಾಡಿ ಬಂದು ಗದ್ದುಗೆಯ ಮೇಲೆ ಕೂರುತ್ತಾರೆ. ಮಂತ್ರೋದಕವನ್ನು ಬೆರೆಸಿದ ನೀರಿನಲ್ಲಿ ತಾಯಿ ಮತ್ತು ಮಗುವನ್ನು ಸ್ನಾನ ಮಾಡಿಸಿ ಕರೆದುಕೊಂಡು ಬರಲಾಗುವುದು, ಗುರುಮೂರ್ತಿಯು ಇಷ್ಟಲಿಂಗಾರ್ಚನೆ ಮಾಡಿ, ತೀರ್ಥವನ್ನು ತೆಗೆದು ಇರಿಸಿಕೊಳ್ಳುವನು. ಬಾಣಂತಿಯ ಮೇಲೆ ಹಾಗೂ ಮಗುವಿನ ಮೇಲೆ ತೀರ್ಥವನ್ನು ಪ್ರೋಕ್ಷಿಸುವನು. ಒಂದು ಮಡಿಯಾದ, ನಾಲ್ಕಾರು ಮಡಿಕೆಗಳಿರುವ ಬಟ್ಟೆಯನ್ನು ತೊಡೆಯ ಮೇಲೆ ಗುರುಮೂರ್ತಿಯು ಹಾಸಿಕೊಳ್ಳುವರು. ಆಗ ಯಾರಾದರೊಬ್ಬರು ಮೇಲೆ ತಾಯಿಯ ತೊಡೆಯ ಮೇಲಿರುವ ಮಗುವನ್ನು ಗುರುಮೂರ್ತಿಯ ತೊಡೆಯ ಮಲಗಿಸುವರು. ಗುರುಮೂರ್ತಿಯು “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದು ಉಚ್ಚರಿಸುತ್ತ ಮಗುವಿನ ಹಣೆಗೆ, ಕೈಗಳಿಗೆ ಮತ್ತು ಹೊಕ್ಕುಳ ಮೇಲೆ ಭಸ್ಮ ಧರಿಸುವನು. ಗರ್ಭಲಿಂಗಧಾರಣೆಯಾಗಿದ್ದರೆ ಅದೇ ಇಷ್ಟಲಿಂಗವನ್ನು ಮತ್ತೊಮ್ಮೆ ಶುದ್ದೀಕರಿಸಿ ಪೂಜಿಸುವನು. ಮಗುವಿನ ಕೊರಳಿಗೆ ಅದನ್ನು ಧರಿಸಿ, ತಲೆಯ ಮೇಲೆ ಹಸ್ತವನ್ನಿಟ್ಟು ಮೃದುವಾಗಿ, "ಓಂ ಲಿಂಗಾಯ ನಮಃ" ಎಂದು ಮಂತ್ರವನ್ನು ಉಸುರುವನು. ಅಂದೇ ಮೊದಲ ಬಾರಿಗೆ ಲಿಂಗಧಾರಣೆಯಿದ್ದರೆ ಹೊಸದಾದ ಲಿಂಗವನ್ನಾಗಲೀ, ನಾಗೋಸವನ್ನಾಗಲೀ ಶುದ್ದೀಕರಿಸಿ ಧರಿಸುವನು.
ನಾಗೋಸ ನಾಗೋಸ = ಇಷ್ಟಲಿಂಗದ ಕಂಥೆ ಮಕ್ಕಳ ಸಲವಾಗಿ ಎರಡು ಕಡೆ ದಾರ ಕಟ್ಟಲು ಕೊಕ್ಕೆ ಆಕಾರ ವಿರುವುದು
ಮನೆಯವರು ಯಾವ ಹೆಸರನ್ನು ಮಗುವಿಗೆ ಇಡಲು ಇಷ್ಟಪಡುವರೋ ಆ ಹೆಸರನ್ನು ಗುರುಮೂರ್ತಿ ಘೋಷಿಸಬೇಕು. ಗುರುಗಳೇ ಹೆಸರಿಡಲಿ ಎಂಬ ಶ್ರದ್ಧೆಯುಳ್ಳವರಾದರೆ ಆಗ ಗುರುಗಳೇ ಹೆಸರನ್ನು (ಮನೆಯವರ ಅನುಮತಿಯೊಡನೆ) ಘೋಷಿಸಬೇಕು. ತಾವು ಹೇಳಿದಂತೆ ಪುನರುಚ್ಚರಿಸಲು ಎಲ್ಲರಿಗೂ ಹೇಳಬೇಕು “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದು ಮೊದಲು ಹೇಳಿ ನಂತರ ಬಸವ – ಕಿರಣ, ಪ್ರಭುದೇವ, ಸಿದ್ದೇಶ, ಅಕ್ಕಮಹಾದೇವಿ, ನೀಲಮ್ಮ, ಇತ್ಯಾದಿ ಯಾವುದಾದರೊಂದು ಹೆಸರನ್ನು ಆರು ಬಾರಿ ಹೇಳಿ, ಇತರರಿಂದ ಹೇಳಿಸಬೇಕು. “ಜಯಗುರು ಬಸವೇಶ ಹರಹರ ಮಹಾದೇವ" ಎಂದು ಜಯಘೋಷ ಮಾಡಬೇಕು.

ಹೆಸರುಗಳನ್ನಿಡುವುದರಲ್ಲಿ ಸಂಸ್ಕೃತಿ

ಮಕ್ಕಳಿಗೆ, ಮನೆಗಳಿಗೆ, ಹೆಸರನ್ನಿಡುವುದರಲ್ಲಿ ಸಂಸ್ಕೃತಿಯು ಕಾಣಬರುತ್ತದೆ. ನಮ್ಮ ಪರಂಪರೆಯ ಆದ್ಯರಾದ ಬಸವಾದಿ ಪ್ರಮಥರ ಹೆಸರನ್ನಿಡುವುದು ಸರ್ವಶ್ರೇಷ್ಠ. ಅವರ ತ್ಯಾಗವನ್ನು, ಕೊಡುಗೆಯನ್ನು ಸ್ಮರಿಸಿಕೊಳ್ಳುವ ಶ್ರೇಷ್ಠ ಮಾರ್ಗವಿದು. ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ, ಸಿದ್ಧರಾಮೇಶ್ವರ, ಸಿದ್ಧಲಿಂಗೇಶ್ವರ, ಮಹದೇಶ್ವರ, ಅಕ್ಕಮಹಾದೇವಿ, ನೀಲಾಂಬಿಕೆ, ನಾಗಲಾಂಬಿಕೆ, ಕಲ್ಯಾಣಮ್ಮ, ಗಂಗಾಂಬಿಕೆ, ಹೀಗೆಲ್ಲ ಹೆಸರಿಡುವುದು ಶರಣ ಸಂಸ್ಕೃತಿ, ಆಧುನಿಕ ಕಾಲಕ್ಕೆ ಹೊಂದಿಕೊಳ್ಳುವಂತೆ ಹೆಸರುಗಳಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳಬಹುದು. ಬಸವ ಕಿರಣ, ಬಸವ ಪ್ರಸಾದ, ಬಸವ ಪ್ರಕಾಶ, ಬಸವ ಶ್ರೀ, ಬಸವ ಚಂದ್ರಿಕೆ, ಬಸವ ಜ್ಯೋತಿ, ವಚನ ಶ್ರೀ, ವಚನಾಂಬಿಕೆ, ಇತ್ಯಾದಿ, ಮಹಾಲಿಂಗ, ಗುರುಲಿಂಗ, ಮುಂತಾದುವು ದೇವವಾಚಕ ವಾಗುವುದರಿಂದ ಬಹಳ ಶ್ರೇಷ್ಠ ಹೆಸರುಗಳಿವು.

ಶೈವ ಸಂಸ್ಕೃತಿಯ ಹೆಸರುಗಳೂ ಪರವಾಗಿಲ್ಲ. ಬಸವ ಧರ್ಮವು ಸ್ವತಂತ್ರ ಧರ್ಮವಾಗಿದ್ದರೂ ಸಾಂಸ್ಕೃತಿಕವಾಗಿ ಶೈವ ಪರಂಪರೆಯೊಂದಿಗೆ ಕರುಳ ಸಂಬಂಧವನ್ನು ಹೊಂದಿಹೆ. ಆದ್ದರಿಂದ ಆದಿಯೋಗಿಯಾದ ಶಿವ ಮತ್ತು ಪ್ರಥಮ ಯೋಗಿಣಿಯಾದ ಉಮೆಗೆ ಸಂಬಂಧಿಸಿದ ಹೆಸರುಗಳು ಶರಣ ಸಂಸ್ಕೃತಿಗೆ ಹೊರತಾಗುವುದಿಲ್ಲ.

ಮಕ್ಕಳಿಗೆ ಲಿಂಗಾಯತ ಹೆಸರುಗಳು

ಮೂರನೆಯ ಸ್ಥಾನವನ್ನು ನಿಸರ್ಗದ ವಸ್ತುಗಳಿಗೆ, ವಿಶೇಷಣಗಳಿಗೆ, ಸದ್ಗುಣಗಳು ಮುಂತಾದುವಕ್ಕೆ ಕೊಡಬಹುದು. ಅನ್ಯ ದೇವತೆಗಳ ಹೆಸರು, ಕ್ಷುದ್ರ ದೈವಂಗಳ ಹೆಸರುಗಳನ್ನು ಇಡುವುದು ಉತ್ತಮವಲ್ಲ. ಹಿರಿಯರ ಹೆಸರುಗಳು ಅರ್ಥಗರ್ಭಿತವಾಗಿದ್ದರೆ ಇಡಬೇಕು. ಇದರಿಂದ ಅವರ ನೆನಪು - ಸಂಸ್ಕೃತಿ ಎರಡೂ ಉಳಿಯುತ್ತವೆ. ಗುರುಮೂರ್ತಿಯಿಂದ ಹೊಸ ಹೆಸರು ಘೋಷಣೆಯಾದ ಮೇಲೆ ಲಿಂಗಧಾರಣೆ ಮತ್ತು ನಾಮಕರಣ ಒಂದು ಹಂತಕ್ಕೆ ಬಂದಂತೆ.

ಈಗ ನವಜಾತ ಶಿಶುವಿನ ತಾಯಿ-ತಂದೆಯರು ಪ್ರತಿಜ್ಞಾ ಸ್ವೀಕಾರ ಮಾಡುವರು. ತಾಯಿಯು ಮಗುವನ್ನು ತೊಡೆಯ ಮೇಲೆ ಹಾಕಿಕೊಂಡೇ ಪ್ರತಿಜ್ಞಾ ಸ್ವೀಕಾರ ಮಾಡಬೇಕು.

ಬಸವ (ಲಿಂಗಾಯತ) ಧರ್ಮಾನುಯಾಯಿಗಳ ಪ್ರತಿಜ್ಞಾವಿಧಿ ಹನ್ನೆರಡು ಪ್ರತಿಜ್ಞೆಗಳು (Twelve Oaths)

ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರು ಬಸವಂಗೆ ಶರಣಾಗಹೆ, ಲಿಂಗದೇವನಿಗೆ ಶರಣಾಗಹೆ, ಶರಣಗಣಕ್ಕೆ ಶರಣಾಗಿದೆ, ಗಣಪದವಿಯನ್ನು ನಾ ಹೊಂದಿಹೆ.
1ಓಂ ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ.
2ಶ್ರೀ ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ.
3ಗು ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ.
4ರು ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ.
5 ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ.
6 ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ.
7 ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ.
8ಲಿಂ ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ.
9ಗಾ ಪರಧನ, ಪರಸ್ತ್ರೀಯರನ್ನು ಬಯಸುವುದಿಲ್ಲ.
10ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ.
11ನಮಗೆ ಜನಿಸಿರುವ ಮಗುವನ್ನು (ಹೆಸರು ಹೇಳಬೇಕು), ಲಿಂಗಾಯತ ಧರ್ಮಾನುಯಾಯಿಯನ್ನಾಗಿ ಮಾಡಿದ್ದು, ಬಸವ ಪಥದಲ್ಲಿ ಮುನ್ನಡೆಸುತ್ತೇವೆ.
12ಮಃ ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ.
ಜಯಗುರು ಬಸವೇಶ ಹರಹರ ಮಹಾದೇವ.

ನಂತರ ಗುರುಮೂರ್ತಿಯು ಕರುಣ ಪ್ರಸಾದ ನೀಡಬೇಕು. ಮಗುವಿನ ಬಾಯಿಯಲ್ಲಿ ಮೂರು ಹನಿ ತೀರ್ಥ ಬಿಡುವನು. ನಂತರ ತಾಯಿ-ತಂದೆಯರ ಇಷ್ಟಲಿಂಗಗಳ ಮೇಲೆ ಮೂರು ಮೂರು ಬಾರಿ ತೀರ್ಥ ಎರೆದು, ಕರುಣ ಪ್ರಸಾದವನ್ನು ಕೊಡುವನು. ತಾಯಿಯು ಈಗ ಶಿಶುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಮಗುವಿನ ಕೈಯನ್ನು ಹೂವಿಗೆ ಮುಟ್ಟಿಸಿ, ಆ ಹೂವುಗಳನ್ನು ಬಸವಗುರುವಿನ ಭಾವಚಿತ್ರಕ್ಕೆ ಏರಿಸಬೇಕು. ಬಸವಲಿಂಗ ಮಂತ್ರಪಠಣವನ್ನು ಮಾಡುತ್ತ ಪುಷ್ಪಾರ್ಚನೆ ಮಾಡಿ, ಮಹಾಮಂಗಲವನ್ನು ಮಾಡಬೇಕು. ಎಲ್ಲರೂ ಮಹಾಮಂಗಲದಲ್ಲಿ ಭಾಗಿಗಳಾಗಿ ಹೂವುಗಳನ್ನು ಬಸವ ಗುರುವಿಗೆ ಏರಿಸಲು ಕೊಡಬೇಕು. ಹಾಗೆ ಏರಿಸಿ, ನಮಸ್ಕರಿಸಿ ಬಂದು, ಗುರುಮೂರ್ತಿಯಿಂದ ಕರುಣ ಪ್ರಸಾದ ಪಡೆದು ನಮಸ್ಕರಿಸಿ ಹೋಗಬೇಕು. ಬಂದ ಎಲ್ಲರಿಗೂ ಮಹಾಪ್ರಸಾದ (ಊಟ) ಎಡೆ ಮಾಡಲಾಗುವುದು.

ತೊಟ್ಟಿಲು ಕಾರ್ಯಕ್ರಮ

ತೊಟ್ಟಿಲಿಗೆ ಹಾಕುವ ಕಾರ್ಯಕ್ರಮ ಸ್ತ್ರೀಯರಿಗೆ ಬಹಳ ಸಡಗರದ ಕಾರ್ಯಕ್ರಮ. ನವಜಾತ ಶಿಶುವಿನ ತಾಯಿಯ ಗೆಳತಿಯರು, ಸಮೀಪದ ಬಂಧು ಬಳಗದವರೆಲ್ಲರೂ ಸಮಾವೇಶವಾಗುವರು. ಇಲ್ಲಿಯವರೆಗೂ ತಾಯಿಯ ಜೊತೆಗೇ ಇರುತ್ತಿದ್ದ ಮಗುವನ್ನು ಸ್ವತಂತ್ರವಾಗಿ, ಸುರಕ್ಷಿತವಾಗಿ ಮಲಗಿಸಲು ತೊಟ್ಟಿಲಿನಲ್ಲಿ ಹಾಕುವ ಪದ್ಧತಿ ಆರಂಭಿಸಲಾಗುವುದು. ಮಗುವಿನ ಜನನದ ಸಂತೋಷದ ಸವಿಯನ್ನು ಎಲ್ಲರೊಡನೆ ಹಂಚಿಕೊಳ್ಳುವುದೂ ಇದರಲ್ಲಿ ಸೇರಿರುತ್ತದೆ.

ತೂಗುವ ತೊಟ್ಟಿಲನ್ನು ಸುಂದರವಾಗಿ ಅಲಂಕರಿಸಲಾಗುವುದು. ರೇಷ್ಮೆಯ ಸೀರೆಗಳು, ಬಣ್ಣ ಬಣ್ಣದ ಹೂವುಗಳು, ಚಿತ್ರಗಳು, ಗಿಳಿ ಗುಬ್ಬಿಗಳ ಗೊಂಬೆ ಮುಂತಾಗಿ ಕಟ್ಟಲಾಗುವುದು. ಚೊಚ್ಚಲು ಹೆರಿಗೆಗೆ ತೌರಿನವರು ತಮ್ಮ ಮಗಳಿಗೆ ಹೊಸದಾದ ತೊಟ್ಟಿಲನ್ನೇ ಕೊಡಿಸಿರುವರು.

ತೊಟ್ಟಿಲಿನ ಹತ್ತಿರದಲ್ಲೇ ಒಂದು ಕಡೆ ಸುಂದರವಾದ ಮಂಟಪ ಕಟ್ಟಿ ಗುರು ಬಸವಣ್ಣನವರ ಭಾವಚಿತ್ರವನ್ನು ಇಟ್ಟು ಅಲಂಕರಿಸಬೇಕು. ಎಲ್ಲರೂ ಸಮಾವೇಶವಾಗುತ್ತಲೇ ಅಲಂಕರಿಸಿದ ತಾಯಿ ಮತ್ತು ಮಗುವನ್ನು ಕರೆತರಬೇಕು. ತಾಯಿ ಬಸವೇಶ್ವರರಿಗೆ ಪೂಜೆಯನ್ನು ಸಲ್ಲಿಸುತ್ತಾಳೆ. ಪೂಜೆ ಸಲ್ಲಿಸಿ ಕುಳಿತುಕೊಳ್ಳುತ್ತಾಳೆ. ತಾಯಿಯ ಮನೆಯವರು ಮೊದಲು ಉಡಿ ತುಂಬಿ ತಮ್ಮ ಕೊಡುಗೆ ಕೊಡುತ್ತಾರೆ, ಗಂಡನ ಮನೆಯವರು ಉಡಿ ತುಂಬಿ ತಮ್ಮ ಕೊಡುಗೆ ಕೊಡುತ್ತಾರೆ. ಗುರು ಬಸವಣ್ಣನವರ ಪಾದವನ್ನು ಸ್ಪರ್ಶಿಸಿ, ಅದಕ್ಕೆ ಹತ್ತಿದ್ದ ವಿಭೂತಿಯನ್ನು ಕೈಗೆ ಸವರಿಕೊಂಡು ಮಗುವಿನ ಅಜ್ಜಿ, ಸೋದರತ್ತೆ, ಮುಂತಾದ ಹತ್ತಿರದ ಬಂಧುಗಳು ಮಗುವಿನ ಹಣೆಗೆ ಧರಿಸಿ, ತಾಯಿಯ ಉಡಿಗೆ ಮಗುವನ್ನು ಕೊಡುವರು.. ಅದಕ್ಕೆ ಕೊಡುವ ಉಡುಗೊರೆಯನ್ನು ತಾಯಿ ತಂದೆಗಳ ಮನೆಯ ಕಡೆಯವರು ಮಗುವಿನ ತಾಯಿಯ ಕೈಗೆ
ಕೊಡುವರು.

ಈಗ ಹಿರಿಯರಾದ ಮಹಿಳೆಯರು ಭಸ್ಮವನ್ನು ತೊಟ್ಟಿಲಿಗೆ ಅಲ್ಲಲ್ಲೇ ಹಚ್ಚಿ ಅದನ್ನು ಪ್ರಸಾದೀಕರಿಸುವರು. ಈಗ, ಪೂಜಿಸಿದ್ದ ಬಸವಣ್ಣನವರ ಭಾವಚಿತ್ರವನ್ನು ಆರು ಜನರು ಎತ್ತಿ ತಂದು ತೊಟ್ಟಿಲಿನಲ್ಲಿ 'ಜಯಗುರು ಬಸವೇಶ ಹರಹರ ಮಹದೇವ' ಎಂದು ಜಯಕಾರ ಮಾಡುತ್ತಾ ಇಡುವರು. ಬಸವ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. (ಖಾಲಿಯಿದ್ದ ತೊಟ್ಟಿಲನ್ನು ಪೂಜಿಸಬಾರದು- ಹೊಸ ವಸ್ತುವಾದ್ದರಿಂದ ವಿಭೂತಿ ಧರಿಸಿ ಅದನ್ನು ಶುದ್ದೀಕರಿಸಿದರೆ ಸಾಕು) ಬಸವ ಜೋಗುಳವನ್ನು ಹಾಡುವರು.

ಬಸವ ಧರೆಗೆ ಬಂದ ಜೋ ಜೋ
ಬಸವ ಧರೆಗೆ ಬಂದ


ಕರ್ತನ ಕರುಣೆಯ ಬಾಳಲಿ ಹೊತ್ತು
ಮರ್ತ್ಯವ ಬೆಳಗಲು ಇಳೆಗೆ ತಂದ || ಅ.ಪ ||

ಅಕ್ಷಯ ತೃತೀಯ ವೈಶಾಖದಲ್ಲಿ
ಅಕ್ಷಯ ಮಾರ್ಗವ ತೋರಲಿಕೆಂದು
ನೊಂದ ಹೃದಯಗಳ ಸಂತೈಸಲೆಂದು
ಮಂದ ಮಾರುತದೋಲ್ ಲೋಕಕೈತಂದ

ಮಾದಲಾಂಬಿಕೆಯ ಮಮತೆಯ ಕಂದಾ
ಮಾದೇವರಸರ ವಂಶದ ಅಂದ
ಭಾರತ ಭೂಮಿಯ ಭಾಗ್ಯದ ಚಂದ
ಮನುಕುಲಕೆಲ್ಲ ಪರಮಾನಂದ

ಸಮತೆಯ ಕಹಳೆಯ ಮೊಳಗಲು ಬಂದ
ಕಾಯಕ ಕೈಲಾಸ ಎನ್ನುತ ನಿಂದ
ಕರ್ತನ ಮಹಿಮೆಯ ಸಾರಲು ಬಂದ
ಮರ್ತ್ಯದ ಸತ್ಯವ ತೋರಲು ಬಂದ

ಧರ್ಮದ ದಿನಮಣಿ ಶರಣರ ಕಣ್ಮಣಿ
ಧರೆಗುತ್ತಮ ಶ್ರೀ ಗುರುಚೂಡಾಮಣಿ
ದೀನದಲಿತರ ಬಾಳಿನ ಶುಭಖಣಿ
ಆಶ್ರಿತ ರಕ್ಷಕ ಚೆನ್ನ ಪರುಷಮಣಿ

ಜಯಜಯವೆನ್ನುತ ಹಾಡಿ ಹರಸಿರಿ
ಜೋ ಜೋ ಎನ್ನುತ ತೊಟ್ಟಿಲ ತೂಗಿರಿ
ಮಂಗಲದಾರತಿ ಪ್ರೇಮದಿ ಬೆಳಗಿರಿ
ಭುವನದ ಭಾಗ್ಯ ಬಸವಗೆ ನಮಿಸಿರಿ

ಪಲ್ಲವಿ ಹೇಳುವಾಗ ಎಲ್ಲರೂ ಜೋ ಜೋ ಎಂದು ಧ್ವನಿಗೂಡಿಸಬೇಕು.

ಕೆಲವು ಕಡೆ ಮೊದಲು ತೊಟ್ಟಿಲಲ್ಲಿ ಗುಂಡುಕಲ್ಲನ್ನು ಹಾಕಿ ತೂಗಿ ನಂತರ ಮಗುವನ್ನು ಹಾಕಲಾಗುವುದಂತೆ, ಮಗುವು ಗುಂಡುಕಲ್ಲಿನಂತೆ ಆರೋಗ್ಯಕರವಾಗಿ ಬೆಳೆಯಲಿ ಎಂದು. ಗುಂಡುಕಲ್ಲು ನಿರ್ಜಿವ ವಸ್ತು. ಅದಕ್ಕೆ ಭೌತಿಕ ಅಸ್ತಿತ್ವ ಬಿಟ್ಟರೆ ಬೌದ್ಧಿಕ-ಆತ್ಮಿಕ ಯಾವುದೇ ಅಂಶವಿಲ್ಲ. ಆದ್ದರಿಂದ ಇದು ಸೂಕ್ತವಲ್ಲ. ಪ್ರಥಮವಾಗಿ ಬಸವಗುರುವಿನ ಭಾವಚಿತ್ರ ಇಡುವುದು ಬಹಳ ಅರ್ಥಗರ್ಭಿತವಾಗುವುದು.
ತಾಯಿ-ಮಗುವಿಗೆ ಆರತಿಯನ್ನು ಮಾಡಬೇಕು. ಮಗುವನ್ನು ಹಿರಿಯ ಮಹಿಳೆ ತೆಗೆದುಕೊಂಡು ಈಗ ಹೆಸರಿನ ಘೋಷಣೆ ಮಾಡಬೇಕು. "ಶರಣ ಬಂಧುಗಳೇ, ಈಗ ಈ ಮಗುವಿನ ಶುಭ ನಾಮವನ್ನು ಪ್ರಕಟಿಸಲಾಗುವುದು. ನೀವೆಲ್ಲರೂ ಪುನರುಚ್ಚರಿಸಿರಿ.

ಓಂ ಶ್ರೀ ಗುರುಬಸವಲಿಂಗಾಯ ನಮಃ
ಅಲ್ಲಮ ಪ್ರಭು, ಅಲ್ಲಮ ಪ್ರಭು, ಅಲ್ಲಮ ಪ್ರಭು

ಹೇಳಿ ಕೊಡುವವರು, ಹೇಳುವವರೂ ಸೇರಿ ಆರು ಬಾರಿ ಹೆಸರು ಹೇಳಿ, ಆರು ಜನ ಮಹಿಳೆಯರು ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ 'ಜಯ ಗುರು ಬಸವೇಶ ಹರಹರ ಮಹದೇವ' ಎಂದು ಸಾಮೂಹಿಕವಾಗಿ ಘೋಷಿಸುವರು. ಮೊದಲು ಇವರು ಜೋಗುಳ ಹಾಡುವರು

ಜೋ ಜೋ ಜೋ ಕಂದ ಪರಮಾನಂದ
ಮುದವನು ತಾ ತಂದ ಒಲವಿನ ಕಂದಾ ||ಜೋ ಜೋ ||

ತಾಯಿ ತಂದೆಯರ ಪ್ರೇಮದ ಅರಗಿಣಿ
ಬಂಧು ಬಾಂಧವರ ಮುದ್ದಿನ ಕಣ್ಮಣಿ
ವಂಶದ ಆಗಸದಿ ಚೆಲುವಿನ ದಿನಮಣಿ
ದಿನದಿನಕೆ ಬೆಳೆಯುತ ಆಗು ನೀ ಗುಣಮಣಿ ||ಜೋ ಜೋ ||

ಆರೋಗ್ಯ ಆಯುಷ್ಯ ಸಂಪ್ರಾಪ್ತವಾಗಲಿ
ವಿದ್ಯಾಬುದ್ದಿಗಳು ಎಂದೆಂದು ನಿನಗಿರಲಿ
ಸಂಪತ್ತು ಸಂತೋಷ ಸಂತೃಪ್ತಿ ದೊರಕಲಿ
ನೂರು ವರುಷ ಕಾಲ ಬದುಕುವ ದೆಸೆಯಿರಲಿ ||ಜೋ ಜೋ ||

ಜಗದೊಡೆಯ ದೇವನ ಕರುಣೆ ಕಾಪಾಡಲಿ
ಗುರುಹಿರಿಯರೆಲ್ಲರ ಒಲವಿನ ಬಲವಿರಲಿ
ಶರಣರ ಪಥದಲ್ಲಿ ಸಾಗುವ ಛಲವಿರಲಿ
ಗುರುಬಸವ ತಂದೆಯ ಶ್ರೀರಕ್ಷೆ ನಿನಗಿರಲಿ ||ಜೋ ಜೋ ||

ಉಳಿದ ಹೆಂಗೆಳೆಯರು ಜೋ ಜೋ ಎಂದು ಧ್ವನಿಗೂಡಿಸಬೇಕು. ಈಗ ಮಗುವಿಗೆ ಆರತಿಯನ್ನು ಮಾಡಬೇಕು. ನಂತರ ಬಂದವರೆಲ್ಲರು ತೊಟ್ಟಿಲು ತೂಗಿ ಆರತಿಯನ್ನು ಮಾಡಿ ಮಗುವಿಗೆ, ತಾಯಿಗೆ ಉಡುಗೊರೆ ಕೊಡಬಹುದು. ಸಿಹಿಯನ್ನು ಫಲ ತಾಂಬೂಲವನ್ನು, ವಚನ ಸಾಹಿತ್ಯವನ್ನು ಅನುಕೂಲವಾದಷ್ಟು ವಿತರಿಸಬಹುದು.

ಲಿಂಗಧಾರಣೆಯಾದ ಮೇಲೆ ಮಗುವಿನ ಕೊರಳಲ್ಲಿ ಇಷ್ಟಲಿಂಗವಿದ್ದರೆ ಒಳ್ಳೆಯದು. ಆದರೆ ಬೆಳ್ಳಿ ಕರಡಿಗೆ ಮುಂತಾದುವನ್ನು ಮಕ್ಕಳಿಗೆ ಹಾಕಲು ಸಾಧ್ಯವಾಗದು. ಶರೀರಕ್ಕೆ ಒತ್ತುವ ಭಯವೊಂದಾದರೆ, ಕಳ್ಳತನದ ಭಯ ಮತ್ತೊಂದು. ಅದಕ್ಕೆ ನಾಗೋಸ ಧರಿಸುವುದು ಒಳ್ಳೆಯದು. ಒಂದು ಕೃತಕ ಚಿನ್ನದ ಸರ ಹಾಕಿ ತುದಿಯಲ್ಲಿ ನಾಗೋಸ ಕಟ್ಟಿದರೆ, ಅದು ಉತ್ತಮ ಕಂಥೆಯದಾಗಿದ್ದರೆ, ಲಿಂಗವು ಫಳಫಳ ಹೊಳೆಯುತ್ತ ಮಗುವಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬಸವ ಧರ್ಮದ ಪ್ರಕಾರ ಹುಟ್ಟಿನಿಂದ ಸಾವಿನವರೆಗೂ ಇಷ್ಟಲಿಂಗವು ಸದಾ ಅಂಗದ ಮೇಲೆ ಇರಬೇಕು. ಶಾಲೆಗೆ ಹೋದಾಗ ಇನ್ನಿತರ ಮಕ್ಕಳು ಕೇಳುವರಲ್ಲ ಎಂದು ಸಂಕೋಚಪಡುವ ಅಗತ್ಯವಿಲ್ಲ. ಧೈರ್ಯವಾಗಿ ಉತ್ತರಿಸುವ ತರಬೇತಿ ಮನೆಯಲ್ಲಿ ಕೊಡಬೇಕು.

ಬಸವಣ್ಣನ (ಮಂಟಪಕ್ಕೆ) ಗುಡಿಗೆ ಹೋಗುವುದು.

ಹೆರಿಗೆಯಾದ ಒಂದು ತಿಂಗಳ ಒಳಗೆ ಬಾಣಂತಿಯು ಗುಡಿಗೆ ಹೋಗುವ ಪದ್ದತಿ ರೂಢಿಗೊಂಡಿದೆ. ಈ ಆಚರಣೆಯ ಹಿಂದಿರುವ ಉದ್ದೇಶ :

೧. ಸುಖಮಯ ಹೆರಿಗೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವುದು.
೨. ಗರ್ಭಧಾರಣೆಯಿಂದ ಸಮಾಜದ ಜನಗಳಿಂದ ಬೇರ್ಪಟ್ಟ ಹೆಣ್ಣು ಹೆರಿಗೆಯ ನಂತರ ಕ್ರಮೇಣ ಅವರಲ್ಲಿ ಬೆರೆಯುವುದು.

ಸಮಾಜದವರೆಲ್ಲರೂ ಸೇರುವ ಬಸವಣ್ಣನ ಗುಡಿಗೆ (ಅರ್ಥಾತ್ ಬಸವ ಮಂಟಪಕ್ಕೆ) ಕಡ್ಡಾಯವಾಗಿ ಪ್ರಥಮ ದರ್ಶನಕ್ಕೆ ಹೋಗುವ ಪರಿಪಾಠವಿದೆ. ಬಸವಣ್ಣನ ಗುಡಿ ಇಲ್ಲದಿದ್ದಲ್ಲಿ ಲಭ್ಯವಿರುವ ಯಾವುದಕ್ಕಾದರೂ ಹೋಗಿ ಸಮಾಧಾನ ಪಟ್ಟುಕೊಳ್ಳುವರು. ಕ್ರೈಸ್ತರಲ್ಲಿ ಚರ್ಚುಗಳಿದ್ದು ಮಗುವಿನ ದೀಕ್ಷಾಸ್ನಾನ (ಬ್ಯಾಪ್ಟಿಸಮ್)ವನ್ನು ಅಲ್ಲೇ ಮಾಡಿಸುವರು. ಹೀಗಾಗಿ ಅವರಲ್ಲಿ ಏಕ ಪ್ರಕಾರದ ಶಿಸ್ತು ಇದೆ.
ಬಸವ ಧರ್ಮಿಯರು ಬಸವ ಮಂಟಪಕ್ಕೆ, ಬಸವಣ್ಣನ ಗುಡಿಗೆ ಹೋಗಿ ಪ್ರಥಮ ಪೂಜೆ ದರ್ಶನ ಮಾಡಿಸಿ ಆಶೀರ್ವಾದವನ್ನು ಪಡೆದುಕೊಂಡು ಬರಬೇಕು. ಗುರುಗಳ ಮಠವಿದ್ದರೆ ದರ್ಶನ ಆಶೀರ್ವಾದ ಪಡೆದು ಬರಬಹುದು. ಇವೇನೂ ಇಲ್ಲದ (ಹಾಳೂರುಗಳೂ ಇರುತ್ತವೆ) ಊರಿನಲ್ಲಿ ಯಾವುದಾದರೂ ಕ್ಷುದ್ರ ದೈವಗಳ ಗುಡಿಗಳಿದ್ದರೆ ಉದಾ : ಮಾರಿ, ಮಸಣಿ, ಯಲ್ಲಮ್ಮ - ಅಂಥಲ್ಲಿಗೆ ಹೋಗಬಾರದು. ತತ್ತ್ವನಿಷ್ಠ ಲಿಂಗವಂತರು ಹೀಗೆ ಮಾಡಬೇಕು. ಅವರ ಬಂಧು ಮಿತ್ರರಲ್ಲಿ ಉತ್ತಮ ಸಂಸ್ಕಾರದ ಜನರು ಇದ್ದರೆ ಅವರ ಮನೆಯಲ್ಲಿ ಬಸವೇಶ್ವರ ಪೂಜೆ ಇಡಿಸಿ ಅಲ್ಲಿಗೇ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕು. ಗರ್ಭಗುಡಿಯ ಮುಂಭಾಗದಲ್ಲಿ ಮಗುವನ್ನು ಮಲಗಿಸಿ, ಪೂಜೆ ಮಂಗಳಾರತಿ ಮಾಡಿಸಿ, ಮಗುವಿನ ಹಣೆಗೆ ಭಸ್ಮ ಹಚ್ಚಿಸಿ, ಆರತಿಯನ್ನು ಕಣ್ಣಿಗೆ ಮುಟ್ಟಿಸಬೇಕು. ಗುರುಗಳು ಲಭ್ಯವಿದ್ದರೆ ಅವರಿಗೆ ನಮಸ್ಕರಿಸಿ, ಅವರಿಂದ ಭಸ್ಮಧಾರಣೆ ಮಾಡಿಸಬಹುದು.

ಇನ್ನು ಕೆಲವು ಆಚರಣೆಗಳು ಒಂದು ಕಾಲದಲ್ಲಿ ಇದ್ದವು. ಅದೆಂದರೆ ತಂದೆಯು ಮಗುವಿನ ಮುಖವನ್ನು ನೇರವಾಗಿ ನೋಡದೆ ಅದಕ್ಕೆ * ಕೆಲವು ಧಾರ್ಮಿಕ ವಿಧಿಗಳನ್ನು ಅನುಸರಿಸಿ ಮಗುವಿಗೆ ೧,೩,೫,೯ ಅಥವಾ ೧೧ನೆಯ ತಿಂಗಳಿನಲ್ಲಿ ಮುಖ(ಮಾರಿ) ನೋಡುವುದು. ಇದು ಸಂಪೂರ್ಣ ಅಸಂಬದ್ಧ. ಸ್ವಾಭಾವಿಕವಾಗಿ ಮಗುವನ್ನು ನೋಡುವ ಕುತೂಹಲವಿದ್ದು, ಹೆರಿಗೆಯ ಸುದ್ದಿ ತಿಳಿಯುತ್ತಲೇ ತಂದೆ ಬಂದಿರುತ್ತಾನೆ. ಆದ್ದರಿಂದ ಲಿಂಗಧಾರಣೆ ಮುಂತಾದ ಎಲ್ಲ ಕ್ರಿಯೆಗಳಲ್ಲೂ ಮಗು-ತಾಯಿಯ ಜೊತೆಗೆ ತಂದೆಯೂ ಭಾಗವಹಿಸುವುದು ಸಮರ್ಥನೀಯ.

ಅದೇ ರೀತಿ ಕಿವಿ ಚುಚ್ಚುವ ಪ್ರಕ್ರಿಯೆ. ಮೊದಲು ಅಕ್ಕಸಾಲಿಗರ ಕೈಯಲ್ಲಿ (ಪಂಚಾಳ ಪತ್ತಾರ) ಚುಚ್ಚಿಸಲಾಗುತ್ತಿತ್ತು. ಈಗ ವೈದ್ಯರ ಕೈಯಲ್ಲಿ ಚುಚ್ಚಿಸುವುದು ಎಲ್ಲ ದೃಷ್ಟಿಯಿಂದಲೂ ಕ್ಷೇಮ. ಯಾವುದೇ ನಂಜಿನ ಭಯ ಇರುವುದಿಲ್ಲ. ಇಂದಿಗೂ ಲಿಂಗಾಯತ ಸಮಾಜದ ಕೆಲವು ಉಪ ಪಂಗಡಗಳಲ್ಲಿ - ನಗರ್ತರಲ್ಲಿ (ವೀರಭದ್ರನ ಒಕ್ಕಲಿನವರಲ್ಲಿ) ಈ ಕಿವಿ ಚುಚ್ಚುವುದು ಒಂದು ವೆಚ್ಚದಾಯಕ, ಬೃಹತ್ತಾದ, ಉಪವಾಸ ವನವಾಸಗಳ ಭಾರೀ ಸಮಾರಂಭ. ಇಂಥದೊಂದು ಚಿಕ್ಕ, ನಗಣ್ಯ ಕೆಲಸಕ್ಕೆ ಅಷ್ಟೊಂದು ಭವ್ಯತೆ ಯಾಕೆ ಬಂದಿದೆಯೋ ಅರ್ಥವಾಗದ ಸಂಗತಿ.

ಮಗು ಜನಿಸಿದ ಮೂರು ತಿಂಗಳಿನ ಒಳಗಾಗಿ ತೌರಿನಿಂದ ತೊಟ್ಟಿಲು ಬಟ್ಟಲು ಸಹಿತವಾಗಿ ಮಹಿಳೆ ಗಂಡನ ಮನೆಗೆ ಹೋಗುತ್ತಾಳೆ. ಬಾಗಿಲಿನಲ್ಲೇ ಆಕೆಗೆ ಮಗುವಿಗೆ ಆರತಿ ಮಾಡಿ ಒಳಗೆ ಕರೆದು ಕೊಳ್ಳುತ್ತಾರೆ.

ಒಂದು ಕಾಲದಲ್ಲಿ ಆಚರಣೆಯಲ್ಲಿದ್ದ 'ಹುಟ್ಟಿದ ಕೋಣೆ ನೋಡುವುದು' ಈಗ ತನ್ನ ಅರ್ಥ ಕಳೆದುಕೊಂಡಿದೆ. ಮಗುವನ್ನು ಗಂಡನ ಮನೆಗೆ ಕರೆದುಕೊಂಡು ಹೋದ ತಾಯಿ ಪುನಃ ತೌರಿಗೆ ಒಂದು ತಿಂಗಳೊಳಗೆ ಬಂದು ಮಗು ಹುಟ್ಟಿದ ಕೋಣೆ ನೋಡಬೇಕೆಂಬ ನಂಬಿಕೆ ಇತ್ತು. ಅದೇ ರೀತಿ ಮಗುವಿಗೆ ನಾಲ್ಕು ತಿಂಗಳಿರುವಾಗ ಒಂದು ದಿವಸ ಸೋದರಮಾವ ಬಂದು ವಿದ್ಯುಕ್ತವಾಗಿ ಹಗಲಿನಲ್ಲಿ ಸೂರ್ಯ ದರ್ಶನ, ಇರುಳಿನಲ್ಲಿ ಚಂದ್ರ ದರ್ಶನ ಮಾಡಿಸುವ ಪರಿಪಾಠವಿತ್ತು. ಇವೆಲ್ಲವೂ ಈಗ ಅರ್ಥ ಕಳೆದುಕೊಂಡ ಆಚರಣೆಗಳಾಗಿವೆ.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.

ಪರಿವಿಡಿ (index)
Previous ಗರ್ಭ ಲಿಂಗಧಾರಣೆ ಜಾವಳ - ಕೂದಲು ತೆಗೆಸುವುದು Next