Previous ದತ್ತು ಸ್ವೀಕಾರ ವಿಧಿ ಗಣಾಚಾರ ದೀಕ್ಷೆ Next

ಕೆಲವೊಂದು ಐಚ್ಛಿಕ ವಿಧಿಗಳು

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಮದುವೆಯ ವಾರ್ಷಿಕೋತ್ಸವ

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಬಂದು ಸೇರಿರುವ ಆಚರಣೆ ಇದು. ಪಾಶ್ಚಿಮಾತ್ಯರಲ್ಲಿ ಮದುವೆಯಾದ ನಂತರ ಒಂದೊಂದು ವರ್ಷವನ್ನು ಕಳೆಯುವುದೂ ಘನ ಸಾಹಸವಾದ ಕಾರಣ ಮತ್ತು ತಾಯಿತಂದೆಯರಿಂದ ದೂರವಾಗಿ ಎಲ್ಲೆಲ್ಲೋ ಇರುವ ಮಕ್ಕಳು ಬಂದು ಅವರನ್ನು ಅಭಿನಂದಿಸಲು ಅವಕಾಶವಾಗುವಂತೆ ಈ ಪದ್ಧತಿ ಬಂದಿದೆ. ಇದರ ಪ್ರಭಾವ ಭಾರತೀಯ ಸಮಾಜದ ಮೇಲೂ ಆಗಿ. ನಗರವಾಸಿಗಳು ವಿವಾಹದ ವಾರ್ಷಿಕೋತ್ಸವ ಮಾಡುವುದುಂಟು. ಧಾರ್ಮಿಕವಾಗಿ ವಿರೋಧವಾಗೇನೂ ಇಲ್ಲದ್ದರಿಂದ ಬಸವಧರ್ಮದ ಚೌಕಟ್ಟಿನಲ್ಲಿ ಇದನ್ನು ಆಚರಿಸಬಹುದು.

ಗುರು-ಜಂಗಮರನ್ನು ಆಹ್ವಾನಿಸಬಹುದು. ಅವರನ್ನು ಆಹ್ವಾನಿಸಿ ಅವರ ಅನುಗ್ರಹ ಪಡೆದುಕೊಳ್ಳಬಹುದು. ಇಲ್ಲವೇ ತಾವೇ ಮನೆಯಲ್ಲಿ ವೈಯಕ್ತಿಕವಾಗಿ ಆಚರಿಸಿಕೊಳ್ಳಬಹುದು.

ಬೆಳಿಗ್ಗೆ ದಂಪತಿಗಳಿಗೆ ಮಕ್ಕಳು-ಬಂಧುಗಳು ತಲೆಗೆ ಎಣ್ಣೆ ಹಚ್ಚಿ ಅಭ್ಯಂಗನ ಸ್ನಾನ ಮಾಡಿಸಬೇಕು. ನಂತರ ಉಭಯತರೂ ಇಷ್ಟಲಿಂಗಾರ್ಚನೆ ಪೂರೈಸಬೇಕು. ಇಬ್ಬರೂ ಸೇರಿ ಬಸವೇಶ್ವರ, ಪೂಜಾವ್ರತ ಆಚರಿಸಬೇಕು. ತಮ್ಮ ಸಮರಸಪೂರ್ಣ ದಾಂಪತ್ಯವು ದೀರ್ಘಕಾಲವಿರಲಿ, ಸುಖ-ಸಂತೋಷ-ಸಂತೃಪ್ತಿಯಿಂದ ಕೂಡಿರಲಿ ಎಂದು ಧರ್ಮಗುರುವಿನಲ್ಲಿ ಪ್ರಾರ್ಥಿಸಬೇಕು ಪ್ರಸಾದವನ್ನು ಇಬ್ಬರೂ ಪರಸ್ಪರ ಬಾಯಲ್ಲಿ ಇಡಬೇಕು. ಗುರುಹಿರಿಯರಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ನಂತರ ದಂಪತಿಗಳನ್ನು ಕೂರಿಸಿ ಮನೆಯ ಇನ್ನಿತರರು ಆರತಿಯನ್ನು ಬೆಳಗಿ ಶುಭವನ್ನು ಹಾರೈಸಬೇಕು. ನಂತರ ಸಿಹಿಯೂಟ ಉಣ್ಣಬೇಕು. ಸಂಜೆಗೆ ಒಂದು ಮಂಟಪಕಟ್ಟಿ ಬಸವಭಾವಚಿತ್ರ ಇಟ್ಟು ಅಲಂಕರಿಸಿ ಪೂಜಿಸಿ, ಬಂಧು-ಮಿತ್ರರನ್ನು ಆಹ್ವಾನಿಸಿ ವಿವಾಹ ವಾರ್ಷಿಕೋತ್ಸವ ನಿಮಿತ್ತ ಆರತಿ ಮಾಡಿ ಪ್ರಸಾದವನ್ನು ಹಂಚಬೇಕು.

ಹುಟ್ಟುಹಬ್ಬ ಆಚರಣೆ

ಇದು ಒಂದು ಸಾಂಸ್ಕೃತಿಕ ಆಚರಣೆಯಾಗಿದ್ದು, ವ್ಯಕ್ತಿಯನ್ನು ಆದರಿಸಿ, ಹಾರೈಸುವ ಕಾರ್ಯಕ್ರಮ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ 'ಅಹಂ' ಎಂಬುದು ಇರುತ್ತದೆ. 'ವರ್ಷಕ್ಕೊಮ್ಮೆಯಾದರೂ ನನಗೆ ಮಹತ್ವವಿದೆ, ಮನೆಯ ಮಂದಿ ನೆನಪಿಸಿಕೊಳ್ಳುತ್ತಾರೆ. ಎಂಬುದೂ ಸಂತೋಷ-ಸಮಾಧಾನಕ್ಕೆ ಕಾರಣವಾಗುತ್ತದೆ. ವ್ಯಕ್ತಿಗಳ ಹುಟ್ಟು ಹಬ್ಬಗಳನ್ನು ಹೀಗೆ ಆಚರಿಸಬೇಕು.

ತಲೆಗೆ ಎಣ್ಣೆಹಚ್ಚಿ ಅಭ್ಯಂಗನ ಸ್ನಾನ ಮಾಡಿಸಬೇಕು. ಮಡಿಯಾದ ಬಟ್ಟೆ ತೊಡಿಸಬೇಕು. ನಂತರ ಹಿರಿಯರಿದ್ದರೆ ತಾವೇ ಸ್ವತಃ ಇಷ್ಟಲಿಂಗ ಪೂಜೆ, ಬಸವೇಶ್ವರ ಪೂಜಾವ್ರತ ಆಚರಿಸಬೇಕು. ಚಿಕ್ಕಮಕ್ಕಳಿದ್ದರೆ ತಾಯಿತಂದೆಯರೇ ಇಷ್ಟಲಿಂಗ ಪೂಜೆ, ಬಸವೇಶ್ವರ ಪೂಜಾವ್ರತ ಮಾಡಿ ಮಕ್ಕಳಿಗೆ ಭಸ್ಮಧರಿಸಿ, ತೀರ್ಥಪ್ರಸಾದ ಕೊಡಬೇಕು. ತೀರ್ಥ ಪ್ರಸಾದ ಸ್ವೀಕಾರಾನಂತರ
ಉಪಾಹಾರ ಮಾಡಬೇಕು.

ಆರತಿಯ ಕಾರ್ಯಕ್ರಮವನ್ನು ಬೆಳಿಗ್ಗೆಯೇ ಮಾಡಬಹುದು. ಇಲ್ಲವೇ ಪರಿಚಿತರು, ಮಿತ್ರರನ್ನು ಆಹ್ವಾನಿಸಿ ಸಂಜೆಗೆ ಇಟ್ಟುಕೊಳ್ಳಬಹುದು. ವ್ಯಕ್ತಿಗೆ ಹೊಸಬಟ್ಟೆಗಳನ್ನು (ಲಭ್ಯವಿದ್ದರೆ) ತೊಡಿಸಿ ಅಲಂಕರಿಸಿಬೇಕು. ನಡುಮನೆಯಲ್ಲಿ ಒಂದು ಸುಂದರ ಮಂಟಪ ಕಟ್ಟಿ, ಬಸವಣ್ಣನವರ ಭಾವಚಿತ್ರವನ್ನು ಇಟ್ಟು ಅಲಂಕರಿಸಬೇಕು.

ಆಹ್ವಾನಿತರು ಸಮಾವೇಶವಾಗುತ್ತಲೇ ವ್ಯಕ್ತಿಯ ಕೈಯಿಂದ ಗುರುಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು. ಮಂಗಳಾರತಿ ಅವರ ಕೈಯಿಂದಲೇ ಮಾಡಿಸಿದ ಮೇಲೆ ಆ ವ್ಯಕ್ತಿಯನ್ನು ಅಲಂಕರಿಸಿದ ಕುರ್ಚಿಯ ಮೇಲೆ ಕೂರಿಸಬೇಕು. ಪುಷ್ಪವೃಷ್ಟಿಯನ್ನು ಮಾಡಿ ಆರತಿಯನ್ನು ಮಾಡಬೇಕು. ಸಿಹಿ ತಿನ್ನಿಸಬೇಕು. ಉಡುಗೊರೆಗಳನ್ನು ಕೊಡುವವರು, ಶುಭಹಾರೈಸುವವರೂ ಪುಷ್ಪವೃಷ್ಟಿ ಮಾಡಿ ಕೊಡಬಹುದು. ವ್ಯಕ್ತಿ ಕಿರಿಯನಿದ್ದರೆ ಗುರುಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬಹುದು; ಹಿರಿಯರಿದ್ದರೆ ಉಳಿದವರು ನಮಸ್ಕರಿಸುವರು; ಆಶೀರ್ವದಿಸಬೇಕು.

ವ್ಯಾಪಕವಾಗಿ ವೈಭವಪೂರಿತವಾಗಿ ಮಾಡದಿದ್ದರೂ ಹುಟ್ಟುಹಬ್ಬವನ್ನು ಸರಳವಾಗಿಯಾದರೂ ಮಾಡುವ ಪದ್ಧತಿ ಇಟ್ಟುಕೊಳ್ಳಬೇಕು. ಎಷ್ಟೇ ಬಡವರಿರಲಿ ಮಕ್ಕಳ ಹುಟ್ಟುಹಬ್ಬ ಮಾಡಿ ಪೂಜೆ-ಪುರಸ್ಕಾರ ನೆರವೇರಿಸಿ ಅವರನ್ನು ಹರಸಬೇಕು. ಮನೆಯಲ್ಲಿರುವ ಹಿರಿಯರ ಹುಟ್ಟುಹಬ್ಬವನ್ನು ಆಚರಿಸಿ, ಅವರನ್ನು ಸಂತೋಷಪಡಿಸಬೇಕು.

ಪಾಶ್ಚಿಮಾತ್ಯ ಶಿಕ್ಷಣದ ಪ್ರಭಾವದಿಂದ ಪಾಶ್ಚಿಮಾತ್ಯ ಸಂಸ್ಕೃತಿಯು ತನ್ನ ಗಾಢವಾದ ಪ್ರಭಾವವನ್ನು ಹಿಂದುಗಳ ಮೇಲೆ ಬೀರುತ್ತಿದೆ. ಕಲಿತವರು, ತಾವು ಬಹಳ ಆಧುನಿಕರು ಎಂದುಕೊಳ್ಳುವವರು ಕೇಕ್ ಕತ್ತರಿಸುವುದು ಮತ್ತು ಹಚ್ಚಿದ ಮೋಂಬತ್ತಿ ಆರಿಸುವುದು ಮಾಡುತ್ತಾರೆ. ಇದು ತಪ್ಪು. ಸಿಹಿ ಮಾಡಿದ್ದರೆ ಅಥವಾ ಕೊಂಡು ತಂದಿದ್ದರೆ ಅದನ್ನು ಬಸವ ಗುರುವಿನ ಭಾವಚಿತ್ರದ ಮುಂದೆ ಇಟ್ಟು ನೈವೇದ್ಯ ಮಾಡಿ ಮೊದಲ ಚೂರನ್ನು ಪ್ರೀತಿಪಾತ್ರರು ಹುಟ್ಟುಹಬ್ಬ ಮಾಡಿಸಿಕೊಳ್ಳುವ ವ್ಯಕ್ತಿಯ ಬಾಯಿಗೆ ಇಡಬೇಕು. ದೀಪ ಆರಿಸುವುದು ಭಾರತೀಯ ಸಂಸ್ಕೃತಿಯಲ್ಲಿ - ಅಶುಭ ಸೂಚಕ, ದೀಪವನ್ನು ಬೆಳಗಿಸುವುದು ಶುಭದಾಯಕವೆನಿಸಿದೆ. ವ್ಯಕ್ತಿಗೆ ಎಷ್ಟು ವರ್ಷಗಳಾಗಿವೆಯೋ ಅಷ್ಟು ದೀಪಗಳನ್ನು [2] ತಟ್ಟೆಯಲ್ಲಿ ಹೊಂದಿಸಿ, ತಾಯಿ-ತಂದೆ ಅಕ್ಕ, ಹಿರಿಯರು-ಮಿತ್ರರು ಆ ದೀಪಗಳನ್ನು ಹಚ್ಚಿ, ಹುಟ್ಟು ಹಬ್ಬ ಮಾಡಿಸಿಕೊಳ್ಳುವ ವ್ಯಕ್ತಿಗೆ ಬೆಳಗಬೇಕು. ಶುಭವನ್ನು ಕೋರಿ, ವಿಭೂತಿ ಬೊಟ್ಟನಿಟ್ಟು, ಪುಷ್ಪ ವೃಷ್ಟಿ ಮಾಡಬೇಕು. ಹುಟ್ಟುಹಬ್ಬದ ನಿಮಿತ್ತ ಧರ್ಮಕ್ಷೇತ್ರ - ಧರ್ಮಸಂಸ್ಥೆಗಳಿಗೆ ಕಾಣಿಕೆ ಕೊಡಬಹುದು. ದೀನ ದಲಿತರಿಗೆ ಏನಾದರೂ ಕೊಡುಗೆಗಳನ್ನು ಕೊಡಬಹುದು. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಚುವ ಮಾನವೀಯ ಕಾರ್ಯಮಾಡಬಹುದು.

ಷಷ್ಠಪೂರ್ತಿ ಕಾರ್ಯಕ್ರಮ

ವ್ಯಕ್ತಿಯ ಜೀವನದಲ್ಲಿ ೬೦ ವರ್ಷ ತುಂಬಿದುದು ಒಂದು ಮಹತ್ವದ ಘಟ್ಟ. ಆದ್ದರಿಂದ ಅನೇಕರು ೬೦ ವರ್ಷದ ಶಾಂತಿ ಎಂದು ಹಲವಾರು ಪೂಜೆ-ಪುರಸ್ಕಾರ ಇಟ್ಟುಕೊಂಡು ದಾನಧರ್ಮ ಮಾಡುವರು. ಇದು ಬಸವ ಧರ್ಮದ ಅತ್ಯವಶ್ಯಕ ನೇಮವೇನೂ ಅಲ್ಲ. ಆದರೂ ಸ್ನೇಹಿತರು ಬಂಧುಬಳಗ ದೂರದಲ್ಲಿರುವ ಮಕ್ಕಳು ಎಲ್ಲರೂ ಒಟ್ಟು ಸೇರಿ ವಯಸ್ಕರನ್ನು ಅಭಿನಂದಿಸಲು ಸೂಕ್ತ ಅವಕಾಶ. ಗುರು-ಜಂಗಮರನ್ನು ಆಹ್ವಾನಿಸಬಹುದು. ಆಮಂತ್ರಣ ಪತ್ರ ಮುದ್ರಿಸಬಹುದು.

ಕಾರ್ಯಕ್ರಮ ನಿಗದಿಯಾದಂದು ಹಿರಿಯರಿಗೆ ಕಿರಿಯರೆಲ್ಲರೂ ಸೇರಿ ಮೈಗೆಲ್ಲ ಎಣ್ಣೆ ತಿಕ್ಕಬೇಕು. ಪ್ರೀತಿಯಿಂದ ಸ್ನಾನ ಮಾಡಿಸಬೇಕು. ಹೊಸಬಟ್ಟೆಗಳನ್ನು ಮಂತ್ರ ಸಂಸ್ಕಾರ ನೀಡಿ ಕೈಗೆ ವಿಭೂತಿ ಸವರಿಕೊಂಡು ಷಟ್ಕೋನ ಚಿತ್ರ ಬೆರಳಿನಿಂದ ಹೊಸಬಟ್ಟೆ ಕೊಳೆಯಾಗದಂತೆ ಹಗುರವಾಗಿ ಬರೆದು ಓಂ ಶ್ರೀ ಗುರು ಬಸವ ಎಂದು ಉಚ್ಚರಿಸಿ, ಇದು ಗುರು-ಲಿಂಗ-ಜಂಗಮದ ಶ್ರೀರಕ್ಷೆಯಾಗಿರಲಿ ಎಂದು ಮನದಲ್ಲಿ ನೆನೆದುಕೊಳ್ಳಬೇಕು. ಹೊಸ ಬಟ್ಟೆಗಳನ್ನು ಉಡಿಸಿ, ಅವರನ್ನು ಪೂಜಾಗೃಹಕ್ಕೆ ಕರೆತರಬೇಕು. ಅವರು ಇಷ್ಟಲಿಂಗಾರ್ಚನೆಯನ್ನು ಮಾಡಿಕೊಳ್ಳಬೇಕು. ನಂತರ ಶ್ರೀ ಬಸವೇಶ್ವರ ಪೂಜಾವ್ರತವನ್ನು ಮಾಡಬೇಕು. ನಂತರ ಗುರು-ಜಂಗಮರ ಪಾದಪೂಜೆಯನ್ನು ಮಾಡಬೇಕು.

ಗುರುಗಳು ಅವರಿಗೆ ಭಸ್ಮಧಾರಣೆ ಮಾಡಿ, ಕರುಣ ಪ್ರಸಾದವನ್ನು ನೀಡಿ ನಂತರ ತಲೆಯ ಮೇಲೆ ಕೈಯಿಟ್ಟು, ಧರ್ಮಗುರು ಬಸವಣ್ಣನವರು, ಜಗತ್ಕರ್ತ ಪರಮಾತ್ಮ ಮತ್ತು ಎಲ್ಲ ಶರಣರ ಅನುಗ್ರಹದಿಂದ ಆಯುರಾರೋಗ್ಯಭಾಗ್ಯ ಪ್ರಾಪ್ತಿಯಾಗಲಿ.” ಎಂದು ಹರಸಬೇಕು.

ಹಿರಿಯರನ್ನು ಅಲಂಕರಿಸಿದ ಕುರ್ಚಿ ಅಥವಾ ಮಂಟಪದಲ್ಲಿ ಕೂರಿಸಿ ಮಾಲಾರ್ಪಣೆ-ಪುಷ್ಪವೃಷ್ಟಿ-ಆರತಿಯನ್ನು ಮಾಡಿ ತಮ್ಮ ಕೊಡುಗೆಗಳನ್ನು ಕೊಡಬಹುದು. ಈ ಅಭಿನಂದನ ಕಾರ್ಯಕ್ರಮವನ್ನು ಮಧ್ಯಾಹ್ನವೇ ಮಾಡಬಹುದು, ಸಂಜೆಗೆ ಮಾಡಬಹುದು. ಸಂಜೆಯಲ್ಲಾದರೆ ಸಮಾರಂಭವು ವ್ಯಾಪಕವಾಗಿ ಆಗುವುದು. ಗುರುಗಳ ಸನ್ನಿಧಿಯಲ್ಲಿ ಅಭಿನಂದನೆಯ ಮಾತುಗಳನ್ನು ಸಹ ಅತಿಥಿಗಳು ಆಡಲು ಅವಕಾಶವಿರುತ್ತದೆ.

ಅಭಿನಂದನೀಯ ಕಾರ್ಯಗಳು :

ಷಷ್ಠಿಪೂರ್ತಿಯ ನಿಮಿತ್ತ ಕೆಲವೊಂದು ಕಾರ್ಯಗಳನ್ನು ಹಮ್ಮಿಕೊಳ್ಳಬಹುದು.

೧. ವಚನ ಸಾಹಿತ್ಯದ ಕೃತಿಗಳನ್ನು ಮುದ್ರಿಸಿ ಉಚಿತವಾಗಿ ಹಂಚುವುದು.
೨. ವಚನ ಸಾಹಿತ್ಯದ ಕೃತಿಗಳನ್ನು ಇತರರಿಂದ ಖರೀದಿಸಿ ಉಚಿತವಾಗಿ ಹಂಚುವುದು, ಶಾಲೆ-ವಿದ್ಯಾಲಯಗಳಿಗೆ ಕೊಡುಗೆಯಾಗಿ ಕೊಡುವುದು.
೩. ಧಾರ್ಮಿಕ-ಶೈಕ್ಷಣಿಕ ಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡುವುದು.
೪. ದೇಣಿಗೆ ನೀಡಿ ವಿಶ್ವಸ್ಥ ಸಂಸ್ಥೆಗಳನ್ನು ಮಾಡಿ ವಿವಿಧ ಯೋಜನೆಗಳಿಗೆ ಪ್ರೇರಣೆ ನೀಡುವುದು.
೫. ತನ್ನ ಧರ್ಮಕ್ಷೇತ್ರಗಳಿಗೆ, ಧರ್ಮಪೀಠಗಳಿಗೆ ದೇಣಿಗೆ ಕೊಡುವುದು.

ನಿಷಿದ್ದ ಕಾರ್ಯಗಳು :

೧. ಲಿಂಗಾಯತ ಧರ್ಮದ ಪ್ರಕಾರ ಷಷ್ಠ್ಯಬ್ದ ಶಾಂತಿ ಎಂದು ಹೋಮ-ಹವನ-ನವಗ್ರಹ ಪೂಜೆ, ಸತ್ಯನಾರಾಯಣ ವ್ರತ ಮುಂತಾದುವುಗಳನ್ನು ಮಾಡಿಸಬಾರದು. ವಿವಿಧ ದೇವಾಲಯಗಳಲ್ಲಿ ಹಣ ಕೊಟ್ಟು ಪೂಜೆ ಮಾಡಿಸುವುದು, ಮುಂತಾಗಿ ಮಾಡಬಾರದು. ತಾನೇ ಸ್ವತಃ ಗುರು-ಲಿಂಗ-ಜಂಗಮ ಪೂಜೆ ಮಾಡಬೇಕು.

೨. ತುಲಾಭಾರ ಎಂದು ಮಾಡಿ ತನ್ನ ತೂಕದ ನಾಣ್ಯ, ಬೆಲ್ಲ, ಸಕ್ಕರೆ ಮುಂತಾಗಿ ಹಂಚುವುದನ್ನು ಮಾಡಬಾರದು. ತನಗೆ ಏನು ಮಾಡಬೇಕು, ಅದಕ್ಕೆ ಎಷ್ಟು ಹಣ ವಿನಿಯೋಗಿಸಬೇಕು ಎಂದಿದೆಯೋ ಅಷ್ಟು ಹಣ ಸತ್ಕಾರ್ಯಕ್ಕೆ ಸಲ್ಲಿಸಬೇಕು. ಎಲ್ಲರ ಮುಂದೆ ಜಡದೇಹವನ್ನು ತೂಗಿಸಿಕೊಂಡು, ಅದಕ್ಕೆ ಬೆಲೆ ಕಟ್ಟುವ ಅಗತ್ಯವೇನಿದೆ ? ಇಲ್ಲಿ ತಾನು ಉಳ್ಳವನೆಂಬ ಹಮ್ಮು, ಹಾಗೆ ತೂಗಿದ ವಸ್ತುವನ್ನು ಇಲ್ಲದವರಿಗೆ ದಾನಮಾಡಬೇಕೆಂಬ ಹವ್ಯಾಸ ಇರುತ್ತದೆ.

ಹರಸಿ ಮಾಡುವುದು ಹರಕೆಯ ದಂಡ
ನೆರಹಿ ಮಾಡುವುದು ಡಂಬಿನ ಭಕ್ತಿ
ಹರಸಬೇಡ, ನೆರಹ ಬೇಡ
ಬಂದ ಬರವನರಿದಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲ ಸಂಗಮದೇವ.


ಎನ್ನುತ್ತಾರೆ ಧರ್ಮಪಿತರು. ನೆರಹಿ ಮಾಡುವುದು ಎಂದರೆ ಆಡಂಬರದಿಂದ ಹರಡಿಕೊಂಡು ಎಂದು ಅರ್ಥ. ದಾಸೋಹವು ಸರಳವಾಗಿ, ಹಮ್ಮಿನ ಪ್ರಜ್ಞೆಯಿಲ್ಲದೆ ಸಹಜವಾಗಿರಬೇಕು.

ಪುನಶ್ಚೇತನ ವ್ರತ

ವ್ಯಕ್ತಿಗಳಿಗೆ ಏನಾದರೂ ಮರಣಾಂತಿಕ ಅಪಘಾತಗಳು, ವಿಪತ್ತುಗಳು ಎರಗಿ ಅವುಗಳಿಂದ ವ್ಯಕ್ತಿಗಳು ಪಾರಾಗುವರು. ತೀವ್ರವಾದ ಅನಾರೋಗ್ಯಗಳಿಗೆ ಒಳಗಾಗಿ ಆಶ್ಚರ್ಯಕರ ರೀತಿಯಲ್ಲಿ ಸುಧಾರಿಸಿಕೊಂಡು ಪುನಃ ಸಹಜವಾದ ಜೀವನ ನಡೆಸುವರು. ಇಂಥ ಒಂದು ಪುನರ್ಜನ್ಮ ನೀಡಿದುದಕ್ಕೆ ಪರಮಾತ್ಮನಿಗೆ ಮತ್ತು ಧರ್ಮಗುರುವಿಗೆ ಕೃತಜ್ಞತೆ ಸಲ್ಲಿಸಬೇಕಾದುದು ಅತ್ಯಗತ್ಯ. ಐದು ದಿವಸಗಳ ಕಾಲದ ಶ್ರೀ ಬಸವೇಶ್ವರ ಪೂಜಾವ್ರತ ಕೈಗೊಂಡು, ಐದನೆಯ ದಿವಸದ ಪೂಜೆಗೆ ತಮ್ಮ ಬಂಧು-ಮಿತ್ರರನ್ನು ಆಹ್ವಾನಿಸಿ ಪೂಜಾ ನಂತರ ತೀರ್ಥ - ಪ್ರಸಾದ ಮಾತ್ರವಲ್ಲದೆ ಮಹಾಪ್ರಸಾದವನ್ನು ಮಾಡಿಸಬೇಕು. ಸೃಷ್ಟಿಕರ್ತ ಮತ್ತು ಧರ್ಮಗುರುವಿನ ಕೃಪೆಯಿಂದ ಪುನರ್ಜನ್ಮ ಪಡೆದುದನ್ನು ಕೊಂಡಾಡಬೇಕು.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.
[2] ಗೋಧಿ ಹಿಟ್ಟನ್ನು ಕಲಸಿ ಚಿಕ್ಕ ಚಿಕ್ಕ ದೀಪಗಳನ್ನು ಮಾಡಬಹುದು.

ಪರಿವಿಡಿ (index)
Previous ದತ್ತು ಸ್ವೀಕಾರ ವಿಧಿ ಗಣಾಚಾರ ದೀಕ್ಷೆ Next