ಸಾಭಾರಿ ಮತ್ತು ನಿರಾಭಾರಿ ಜಂಗಮ
|
|
- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಸಾಭಾರಿ ಮತ್ತು ನಿರಾಭಾರಿ ಜಂಗಮ
ಜಂಗಮರಲ್ಲಿ ಎರಡು ಪ್ರಕಾರ, ಸಾಭಾರಿ ಮತ್ತು ನಿರಾಭಾರಿ ಎಂಬುದಾಗಿ, ಸಾಭಾರಿ ಎಂದರೆ ಒಂದು ಮಠ, ಪೀಠಕ್ಕೆ ಅಧಿಕಾರಿಯಾಗಿ ಅದರ ನಿರ್ವಹಣೆ ಮಾಡುತ್ತ ಸಮಾಜದ ಹಿತವನ್ನು ಬಯಸುವ ವಿರಾಗಿ, ನಿರಾಭಾರಿ ಎಂದರೆ ಮಠ-ಪೀಠ-ಸಂಸ್ಥೆ ಯಾವುದಕ್ಕೂ ಸಿಲುಕದೆ, ಧರ್ಮಬೋಧೆ ಮಾಡುತ್ತ ಸದಾ ಸಂಚರಿಸುವ ತ್ಯಾಗಿ-ವಿರಾಗಿ.
ಲಿಂಗಾಯತ ಸಮಾಜದಲ್ಲಿ ಎಲ್ಲವೂ ವಿಕೃತಗೊಂಡಿರುವಂತೆ - ಜಂಗಮವು ಜಾತಿಯಾಗುವುದರ ಜೊತೆಗೆ, ಗುರು-ವಿರಕ್ತ ಎಂಬ ವರ್ಗಗಳೂ ಉಂಟಾಗಿವೆ. 'ಲಿಂಗಧಾರಣ ದೀಕ್ಷಾ ಬೋಧೆ, ಮತ ಪ್ರಸಾರವು ಗುರುವರ್ಗದ ಮಠಗಳ ಕಾರ್ಯ, ಕೇವಲ ಧರ್ಮ ಪ್ರಚಾರ ವಿರಕ್ತಮಠಗಳ ಕಾರ್ಯ'' [2] ಎಂಬ ಭಾವನೆ ಬಿತ್ತಲು ಮೂಢ ಸಂಪ್ರದಾಯವಾದಿಗಳು ಯತ್ನಿಸುತ್ತಾರೆ. ಇವರ ದೃಷ್ಟಿಯಲ್ಲಿ ಸ್ವಯಂ ಪ್ರೇರಣೆಯಿಂದ ತ್ಯಾಗ ಮಾರ್ಗಕ್ಕೆ ಬಂದು, ಧರ್ಮದಲ್ಲಿ ಜೀವಂತಿಕೆ ತಂದು, ಅಸಂಖ್ಯಾತ ಜನರನ್ನು ಧರ್ಮದತ್ತ ಆಕರ್ಷಿಸುವ ನಿಜ ಜಂಗಮರು, ತತ್ತ್ವ ಜಂಗಮರಿಗೆ ಯಾವ ಸ್ಥಾನವೂ ಇಲ್ಲ. ತಮ್ಮ ಕೋಳಿ ಕೂಗಿದರೆ ಬೆಳಕಾಗುವುದು ಎಂಬ ಜಾತಿವಾದಿಗಳು ದೀಕ್ಷಾ ಬೋಧೆ ತಮ್ಮ ಹಕ್ಕು ಎಂದು ತಿಳಿದಿದ್ದಾರೆ. ಆದ್ದರಿಂದ 'ಜಂಗಮ ಎಂಬುದು ಜಾತಿಯಲ್ಲ, ಗುರು-ವಿರಕ್ತ ಎಂಬುದಾಗಲೀ, ಸಾಭಾರಿ-ನಿರಾಭಾರಿ ಎಂಬುದಾಗಲಿ ವರ್ಗಗಳಲ್ಲ.' ಎಂಬುದನ್ನು ಸಮಾಜವು ಇದು ತಿಳಿಯಬೇಕಾಗಿದೆ.
ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ದರಾಮೇಶ್ವರರು ಸಾಭಾರಿ ಜಂಗಮರು, ನಿರ್ಲಜ್ಜ ಶಾಂತಯ್ಯ, ರೇವಣಸಿದ್ದೇಶ್ವರರು ಮುಂತಾದವರು [3] ನಿರಾಭಾರಿ ಜಂಗಮರು, ಧರ್ಮಪಿತರ ಆಲೋಚನೆ ಏನಿತ್ತೆಂದರೆ ಶೂನ್ಯ ಪೀಠವು ಇಡೀ ಗಣ (ಅನುಯಾಯಿ) ಸಮೂಹವನ್ನು ನಿಯಂತ್ರಿಸುವ, ಮಾರ್ಗದರ್ಶನ ಮಾಡುವ ಸಂಸ್ಥೆಯಾಗಿ ಇದರ ಪೀಠಾಧೀಶರಾದವರು ಸಾಭಾರಿಗಳಾದರೆ, ಧರ್ಮಪ್ರಚಾರ ಮಾಡುತ್ತ ಸತತವಾಗಿ ಸಂಚರಿಸುವ ತ್ಯಾಗಿಗಳು ನಿರಾಭಾರಿಗಳು. ಹೀಗೆ ಸಂಚರಿಸಿದ ವ್ಯಕ್ತಿ ಬೇಕೆನಿಸಿದಾಗ ಒಮ್ಮೆ ಒಂದು ಸ್ಥಳದಲ್ಲಿ ನೆಲೆ ನಿಂತು ಮಠ ಕಟ್ಟಿ ಸಾಭಾರಿಯಾಗಬಹುದು. ಮಠಾಧಿಕಾರಿಯಾಗಿ ಸಾಭಾರಿಯಾಗಿದ್ದವರು ಸಂಚರಿಸುವ ಇಚ್ಛೆಯಾದಾಗ ಶಿಷ್ಯನೊಬ್ಬನಿಗೆ ಅಧಿಕಾರ ವಹಿಸಿ, ನಿರಾಭಾರಿಯಾಗಿ ಸಂಚರಿಸಬಹುದು.
ಜಂಗಮವು ಒಂದು ವಿಶಿಷ್ಟ ಸಿದ್ದಿಯನ್ನು ಪಡೆದ ವ್ಯಕ್ತಿ ಅಂದಾಗ ಜಂಗಮತ್ವವು ಆ ಸ್ಥಿತಿಯನ್ನು ಪಡೆದವರಿಗೆಲ್ಲ ಲಭ್ಯ. ಇಂಥ ಜಂಗಮರಲ್ಲಿ ಧರ್ಮಪಿತ ಬಸವಣ್ಣನವರು ಗೃಹಸ್ಥ ಜಂಗಮರಾದರೆ ಅಲ್ಲಮಪ್ರಭುಗಳು ವಿರಕ್ತ ಜಂಗಮರು.
ಜೀವನದ ಪೂರ್ವಾರ್ಧದಲ್ಲಿ ಗೃಹಸ್ಥರಿದ್ದವರೂ ವೈರಾಗ್ಯಭಾವ ಬಲಿತರೆ ವಿರಕ್ತ ಮಾರ್ಗವಲಂಬಿಯಾಗಬಹುದು. ಜಂಗಮ ಲಾಂಛನಗಳನ್ನು ಧರಿಸಬಹುದು. ಇದಕ್ಕೆ ವಿಶ್ವಗುರು ಬಸವಣ್ಣನವರೇ ಒಂದು ಉಜ್ವಲ ಉದಾಹರಣೆ. ಅವರು ಸಂಸಾರವನ್ನು ತೊರೆದು ಕಾಡು-ಮೇಡನ್ನು ಸೇರಲಿಲ್ಲ ಆದರೆ ಪತ್ನಿಯೊಡನೆ ದಾಂಪತ್ಯ ಸಂಬಂಧವನ್ನು ತೊರೆದು ವಿರಕ್ತ ಜೀವನವನ್ನು ಸ್ವೀಕರಿಸಿದರು.
ಸತಿಯ ಕಂಡು ವ್ರತಿಯಾದ ಬಸವಣ್ಣ
ವ್ರತಿಯಾಗಿ ಬ್ರಹ್ಮಚಾರಿಯಾದ ಬಸವಣ್ಣ
ಬ್ರಹ್ಮಚಾರಿಯಾಗಿ ಭವಗೆಟ್ಟ ಬಸವಣ್ಣ
ಗುಹೇಶ್ವರ ಲಿಂಗದಲ್ಲಿ ಬ್ರಹ್ಮಚಾರಿಯಾದವ ಬಸವಣ್ಣನೊಬ್ಬನೆ.
ಅವರು ಶಾರೀರಿಕ, ಮಾನಸಿಕವಾಗಿ ದಾಂಪತ್ಯ ಸಂಬಂಧ ಬಿಟ್ಟುದಷ್ಟೇ ಅಲ್ಲ, ಲಾಂಛನಗಳಲ್ಲಿಯೂ ಬದಲಾವಣೆ ಹೊಂದಿದ್ದರು. ಕಾಷಾಯ ವಸ್ತ್ರ, ಹಾವುಗೆ ಮುಂತಾದ ವಿರಕ್ತ ಲಾಂಛನ ಧರಿಸಿದ್ದರು ಎಂಬುದನ್ನು ಚನ್ನಬಸವಣ್ಣನವರ ವಚನಗಳ ಮೂಲಕ ತಿಳಿಯಬಹುದು.
ಸಮತೆ ಎಂಬ ಕಂಥೆಯ ತೊಟ್ಟು
ಸುಬುದ್ಧಿ ಎಂಬ ಟೊಪ್ಪರವನಿಕ್ಕಿ
ವಿಷಯವೆಂಬ ಹಾವುಗೆಯ ಮೆಟ್ಟಿ
ತಮಂಧವೆಂಬ ಕುಣಿಯ ಬೀಳದೆ
ಮದವೆಂಬ ಚೇಳ ಮೆಟ್ಟದೆ
ವೈರಾಗ್ಯವೆಂಬ ಕೊರಡನೆಡಹದೆ
'ಭಕ್ತಿ ಭಿಕ್ಷಾಂ ದೇಹಿ' ಎಂದು ಬಸವಣ್ಣ ಕಪ್ಪಡಿಗೆ ಬಂದ
ಕೂಡಲ ಚನ್ನಸಂಗಮದೇವಾ.
ಕಂಥೆ ತೊಟ್ಟು, ಟೊಪ್ಪರವನಿಕ್ಕಿ, ಹಾವುಗೆಯ ಮೆಟ್ಟಿದ್ದರು. ವೈರಾಗ್ಯವೆಂಬ ಕೊರಡನ್ನು (ಎಡಹದೆ) ದಾಟಿದರು ಎಂಬ ವರ್ಣನೆಯು ಬಸವಣ್ಣನವರ ವಿರಕ್ತ ವೇಷ ಕುರಿತು ಬಣ್ಣಿಸುತ್ತದೆ.
ಇದರಿಂದ ನಮಗೆ ಖಚಿತವಾಗುವುದೇನೆಂದರೆ ಜಾತಿ ವರ್ಣ ವಂಶ ವರ್ಗ ಲಿಂಗ ಭೇದವಿಲ್ಲದೆ, ಗೃಹಸ್ಥ ಎಂಬ ಆಶ್ರಮ ಭೇದವಿಲ್ಲದೆ ವೈರಾಗ್ಯ ಭಾವ ಗಟ್ಟಿಗೊಂಡ ಯಾರು ಬೇಕಾದರೂ ಯಾವ ವಯಸ್ಸಿನಲ್ಲಿ ಬೇಕಾದರೂ ಜಂಗಮ (ಸನ್ಯಾಸ) ದೀಕ್ಷೆಯನ್ನು ಪಡೆದು ಜಂಗಮರಾಗಬಹುದು.
ಜಂಗಮ ದೀಕ್ಷೆ ಪಡೆಯುವ ವ್ಯಕ್ತಿಗೆ ಅರ್ಹತೆ ಬಹಿರಂಗದ ರೂಪವಾಗಲಿ, ವಂಶದ ಘನತೆಯಾಗಲಿ ಅಲ್ಲ ಧರ್ಮ-ದೇವರು-ಸಾಧನೆ ಮುಂತಾದವುಗಳಲ್ಲಿ ಇರುವ ಉತ್ಕಟ ಹಂಬಲ; ಗಟ್ಟಿಗೊಂಡ ವೈರಾಗ್ಯ; ಏನನ್ನಾದರೂ ಉದಾತ್ತವಾದುದನ್ನು ಸಾಧಿಸಬೇಕೆಂಬ ಛಲ, ಆತ್ಮೋದ್ಧಾರ ಮಾಡಿಕೊಂಡು ಸಮಾಜದ ಲೇಸಿಗೆ, ಧರ್ಮರಾಷ್ಟ್ರಗಳ ಏಳಿಗೆಗೆ ದುಡಿಯಬೇಕೆಂಬ ಕಳಕಳಿ, ಲೌಕಿಕವಾದ ಶಿಕ್ಷಣ ಸಹ ಅನಿವಾರ್ಯವಾದ ಅಳತೆಗೋಲಲ್ಲ. ಗುರು ಕೃಪೆ, ದೇವಾನುಗ್ರಹ ಒದಗಿದರೆ ಅಜ್ಞಾನಿಯೂ ಸುಜ್ಞಾನಿಯಾಗಬಲ್ಲ ಎಂಬುದು ಪರಮ ಸತ್ಯ.
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.
[2] ಡಾ. ಶಿವಾನಂದ ಗುಬ್ಬಣ್ಣನವರು, ಲಿಂಗಾಯತ ಸಂಸ್ಕಾರಗಳು ಪುಟ ೬೭.
[3] ಮೂರೇಳು ದೀಕ್ಷೆಯ ವಚನಗಳು, ಸಂ : ಪಿ.ಎಂ. ಗಿರಿರಾಜು ಶರಣ ಸಂತಾನ ೧-೪.