![]() | ಲಿಂಗವಂತ ಧರ್ಮ ಮತ್ತು ವಿವಾಹ | ಲಿಂಗಾಯತ ತತ್ವ-ಸಿದ್ಧಾಂತಗಳು | ![]() |
ಮದುವೆಯ ನಿಶ್ಚಯ ಕಾರ್ಯ |
ವಿವಾಹ ವಿಧಿಯು ಆರಂಭವಾಗುವುದು ಹೆಣ್ಣು-ಗಂಡು ನೋಡುವ ಕ್ರಿಯೆಯಿಂದ, ಮೊದಲು ಅದೆಲ್ಲ ಇರಲಿಲ್ಲ. ಒಂದು ಹೆಣ್ಣಿಗೆ ಒಂದು ಗಂಡು ಎಂಬಂತೆ ನಿಶ್ಚಯಿಸುತ್ತಿದ್ದರು. ಬಾಲ್ಯ ವಿವಾಹ ರೂಢಿಯಲ್ಲಿತ್ತು. ತೊಟ್ಟಿಲಲ್ಲಿರುವ ಮಕ್ಕಳಿಗೆ ಮದುವೆ ಮಾಡಿ ಬಿಡುತ್ತಿದ್ದರು. ಅತ್ಯಂತ ಸೀಮಿತವಾದ ಸೋದರ ಸಂಬಂಧದಲ್ಲಿ, ಹತ್ತಿರದ ಗ್ರಾಮಗಳಲ್ಲಿ ವೈವಾಹಿಕ ಸಂಬಂಧ ಬೆಳೆಸುತ್ತಿದ್ದರು. ಬಾಲ್ಯ ವಿವಾಹವು ಅಪರಾಧ ಎಂಬ ಕಾನೂನು ಆಗಿದೆ; ಜನರಲ್ಲಿಯೂ ತಿಳುವಳಿಕೆ ಬಂದಿದೆ. ಅತ್ಯಂತ ಸಮೀಪದ ಸೋದರ ಸಂಬಂಧಗಳಲ್ಲಿ ವಿವಾಹ ಮಾಡುವುದರಿಂದ ಸಂತಾನವು ದುರ್ಬಲವಾಗುತ್ತದೆ ಎಂಬ ಅರಿವೂ ಮೂಡುತ್ತಿದೆ. 'ಸಾರಿಗೆ ಸೌಕರ್ಯವು ಹೆಚ್ಚಾದಂತೆ ಈಗ ದೂರ ದೂರದ ಪ್ರದೇಶಗಳಿಗೆ ಹೋಗಿ ಬರುವುದೂ ಸುಲಭವಾದ್ದರಿಂದ ವಿವಾಹಗಳು ವ್ಯಾಪಕವಾದ ವಲಯಗಳಲ್ಲಿ ಏರ್ಪಾಡಾಗುತ್ತಿವೆ. ಆದರೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.
ಲಿಂಗವಂತ ಧರ್ಮ, ಕ್ರಾಂತಿಪುರುಷ ಬಸವಣ್ಣನವರ ವಿಚಾರಧಾರೆಯಿಂದಾಗಿ ವಿವಾಹಗಳನ್ನು ಸರಳಗೊಳಿಸಿದೆ, ಸುಲಭಗೊಳಿಸಿದೆ. ಜಾತಕ ಕೂಡಿ ಬಂದಿತೆ ಎಂದು ಕೇಳುವಂತಿಲ್ಲ, ಜಾತಿ-ಉಪಪಂಗಡವೇನು ಎಂದು ಪ್ರಶ್ನಿಸುವ ಗೋಜಿಲ್ಲ. ಕಲ್ಯಾಣ ಮಂಟಪಗಳನ್ನು ವಿವಾಹ ಮುಹೂರ್ತಗಳ ಪ್ರಕಾರ ಹುಡುಕಿದರೆ ಸಿಕ್ಕುವುದು ಕಷ್ಟಸಾಧ್ಯ. ಎಲ್ಲರಿಗೂ ಅನುಕೂಲವಾದ ಒಂದು ಪ್ರಶಸ್ತ ದಿನ, ಅನುಕೂಲಕರವಾದ ಸಮಯ ನೋಡಿದರೆ ಸಾಕು.
ಲಿಂಗಾಯತ ಧರ್ಮವು ದ್ರಾವಿಡ ಸಂಸ್ಕೃತಿಯ ಧರ್ಮವಾದ್ದರಿಂದ ಇಲ್ಲಿ ಹೆಣ್ಣಿಗೆ ಗೌರವದ ಸ್ಥಾನವಿದೆ. ಬುಟ್ಟಿಯಲ್ಲಿಟ್ಟುಕೊಂಡು ಹಣ್ಣು ಮಾರುವವನು ಮನೆಮನೆಗೆ ಹೋಗುವಂತೆ, ಹೆಣ್ಣು ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೆತ್ತವರು ಗಂಡಿನ ಮನೆಯ ಬಾಗಿಲು ಕಾಯುವಂತಿಲ್ಲ. ಗಂಡಿನ ಕಡೆಯವರೇ ಹೆಣ್ಣಿನ ಮನೆಗೆ ಬಂದು ಗೌರವ ಪೂರ್ಣವಾಗಿ ನೋಡಿ ಹೋಗುವರು. ಹೆಣ್ಣು ನೋಡಲು ಹೋದಾಗ ಶಿಷ್ಟಾಚಾರದಂತೆ ಉಡಿ ತುಂಬಲು ೧೨ ಬಾಳೆಯ ಹಣ್ಣಿನ ಚಿಪ್ಪು, ೬ ವೀಳೆಯದೆಲೆ, ೨ ಅಥವಾ ೫ ಕೊಬ್ಬರಿ, ಅಡಿಕೆ, ಸಕ್ಕರೆ, ಹೂವು-ಕುಂಕುಮ ಒಯ್ಯುವರು.
ಬಂದವರನ್ನು ಹೆಣ್ಣಿನ ಮನೆಯವರು ಸ್ವಾಗತಿಸುವರು; ಅಲಂಕೃತ ಕನ್ಯೆಯನ್ನು ತೋರಿಸಲಾಗುವುದು. ಹಳ್ಳಿಗಳಲ್ಲಿ ಕ್ರಿಯಾಮೂರ್ತಿಯ (ಅಯ್ಯನವರ) ನೇತೃತ್ವದಲ್ಲಿ ಹೆಣ್ಣಿನ ಪರೀಕ್ಷೆ ನಡೆಯುತ್ತದೆ ಮಣೆಯ ಮೇಲೋ ಚಾಪೆಯ ಮೇಲೋ ಕುರ್ಚಿಯ ಮೇಲೋ ಆಕೆ ಕುಳಿತುಕೊಳ್ಳುವಳು. ಓದಿಸಿ ನೋಡುವುದು, ಹಸ್ತರೇಖೆಗಳು, ದಾರ ಹಿಡಿದು ನೋಡುವುದು, ಹೇಗೆ ನಡೆಯುವಳೋ ಎಂದು ನಡಿಗೆ ನೋಡುವುದು ಮುಂತಾದ್ದನ್ನು ಗಂಡಿನ ಕಡೆಯ ಹೆಣ್ಣು ಮಕ್ಕಳು ನೋಡುವರು. ಪಟ್ಟಣಗಳಲ್ಲಿ ಇಷ್ಟೊಂದು ರಗಳೆ ಇಲ್ಲ. ಕುದುರೆಯನ್ನು ಪರೀಕ್ಷಿಸುವಂತೆ ಹೆಣ್ಣನ್ನು ಪರೀಕ್ಷಿಸುವ ಗಂಡಿನ ಬಗ್ಗೆ ಯಾವುದೇ ಪರೀಕ್ಷೆ ಮಾಡದಿರುವುದು ಪುರುಷ ಪ್ರಧಾನ ವ್ಯವಸ್ಥೆಯ ದ್ಯೋತಕವಾಗಿದೆ. ಹೀಗಾಗಿಯೇ ಏನಾದರೂ ಅವಗಡ ಸಂಭವಿಸಿದರೆ ಅದಕ್ಕೆ ಹೆಣ್ಣನ್ನೇ ಹೊಣೆಮಾಡುವರು. ಮಕ್ಕಳಾಗದಿದ್ದರೆ ಆಕೆಯ ದೊಷಣೆ ಮಾಡುವರು. ದೋಷವು ಗಂಡನಲ್ಲಿಯೂ ಇರಬಹುದು ಎಂದು ಊಹಿಸುವುದೇ ಇಲ್ಲ.
ಪರೀಕ್ಷೆ ಮುಗಿದ ಮೇಲೆ ಗಂಡಿನ ಕಡೆಯ ಹಿರಿಯ ಹೆಣ್ಣು ಮಕ್ಕಳು ಕನ್ಯೆಯ ಹಣೆಗೆ ಕುಂಕುಮವಿಟ್ಟು, ಹೂಮುಡಿಸಿ, ಎಲೆ-ಅಡಿಕೆ-ಬಾಳೆಹಣ್ಣು, ಸಕ್ಕರೆ ಚೀಟಿ ಉಡಿಗೆ ಹಾಕುತ್ತಾರೆ. ಆ ಸಾಮಾನು ಸಹಿತ ಎದ್ದು ಕನ್ಯೆಯು ಹಿರಿಯರಿಗೆ ನಮಸ್ಕರಿಸಿ ಒಳಗೆ ಹೋಗುತ್ತಾಳೆ. ಹೆಣ್ಣಿನ ಮನೆಯವರು ಉಪಾಹಾರದ ವ್ಯವಸ್ಥೆ ಮಾಡುತ್ತಾರೆ. ಇವೆಲ್ಲ ಇನ್ನೂ ಹಳ್ಳಿಗಳಲ್ಲಿ, ಮಧ್ಯಮ ವರ್ಗದ ಮನೆತನಗಳಲ್ಲಿ ಉಳಿದುಕೊಂಡು ಬಂದಿವೆ. ತುಂಬಾ ಸುಧಾರಿಸಿದವರು ಎನ್ನುವವರಲ್ಲಿ ಸಂಪ್ರದಾಯವೇನು ಧರ್ಮವೇ ಉಳಿದಿಲ್ಲ. ಮೊದಲೇ ಹುಡುಗನೊಡನೆ ಬೀದಿ, ಪಾರ್ಕ್, ಚಲನಚಿತ್ರ ಮಂದಿರ - ಹೀಗೆ ಎಲ್ಲಾ ಕಡೆ ಹುಡುಗಿಯರು ಸುತ್ತಿರುತ್ತಾರೆ.
ಸಾಕ್ಷಿ ವೀಳ್ಯ
ಹೆಣ್ಣು ಒಪ್ಪಿಗೆಯಾಗಿದ್ದರೆ ತಾವೂ ಮನೆತನವನ್ನು ನೋಡಲು ಬರಬಹುದೆಂದು ಗಂಡಿನ ಕಡೆಯವರು ಆಹ್ವಾನಿಸುತ್ತಾರೆ. ಕ್ರಿಯಾ ಮೂರ್ತಿಯ ನೇತೃತ್ವದಲ್ಲಿ ಒಂದು ದಿವಸ ಹೆಣ್ಣಿನ ಮನೆಯವರೂ ಉಡಿ ತುಂಬುವ ಸಾಮಾನುಗಳೊಡನೆ ಗಂಡಿನ ಮನೆತನ ನೋಡಲು ಹೋಗುವರು. ಮನೆತನ ಒಪ್ಪಿಗೆಯಾದರೆ ಉಭಯತರ ಕಡೆಯ ಹಿರಿಯರ ಸಾಕ್ಷಿಯಾಗಿ ಮಾತುಕತೆ ನಡೆಯುತ್ತವೆ. ಎಲ್ಲವೂ ಒಪ್ಪಿಗೆಯಾದಾಗ 'ಸಾಕ್ಷಿ ವೀಳ್ಯ' ಎಂಬ ಕಾರ್ಯಕ್ರಮ ಅಂದೇ ನಡೆಯುತ್ತದೆ. ಹೆಣ್ಣಿನ ತಂದೆ ಎಲೆ-ಅಡಿಕೆ, ತಾಳವೋಲೆ (ವಚನ ಗ್ರಂಥ), ಬಸವ ಗುರುವಿನ ಭಾವಚಿತ್ರ ಮೂರನ್ನೂ ಕೈಯಲ್ಲಿ ಹಿಡಿದು ನೆರೆದ ಗಣಸಾಕ್ಷಿಯಾಗಿ ಹೀಗೆ ಹೇಳಬೇಕು:
ಓಂ ಶ್ರೀಗುರುಬಸವಲಿಂಗಾಯನಮಃ
“ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ ಸರ್ವಶರಣರ ಸಾಕ್ಷಿಯಾಗಿ ಇಲ್ಲಿ ನೆರೆದ ಎಲ್ಲ ಗಣಂಗಳ ಸಮ್ಮುಖದಲ್ಲಿ ಮಾತು ಕೊಡುತ್ತೇನೆ.
ನಾನು ............................. ನನ್ನ .............................ನೆಯ ಮಗಳು ................. ................. ಳಿಗೆ ............. ................. ಊರಿನ ................. ................. ನವರ ............................. ನೆಯ ಸುಪುತ್ರ ................. ................. ನಿಗೆ ಮದುವೆ ಮಾಡಿ ಕೊಡಲು ಸಂತೋಷದಿಂದ ಒಪ್ಪಿ, ಈ ಸಾಕ್ಷಿ ವೀಳೆಯವನ್ನು ಕೊಡುತ್ತಿದ್ದೇನೆ.” ಗಂಡಿನ ತಂದೆಯು ಸ್ವೀಕರಿಸುವನು.
ಜಯಗುರು ಬಸವೇಶ ಹರಹರ ಮಹಾದೇವ ಎಂದು ನೆರೆದವರು ಆಗ ಉಗ್ಘಡಿಸುವರು. ಈಗ ಗಂಡಿನ ತಂದೆಯು ಹೇಳುವನು :
ಓಂ ಶ್ರೀಗುರುಬಸವಲಿಂಗಾಯನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ , ಸರ್ವಶರಣರ ಸಾಕ್ಷಿಯಾಗಿ ಇಲ್ಲಿ ನೆರೆದ ಎಲ್ಲ ಗಣಂಗಳ ಸಮ್ಮುಖದಲ್ಲಿ ಮಾತು ಕೊಡುತ್ತೇನೆ.
ನಾನು ................. ................. ನನ್ನ ................. ................. ನೆಯ ಮಗ ................. ................. ನಿಗೆ ................. ................. ಊರಿನ ................. ................. ನವರ ................. ................. ನೆಯ ಸುಪುತ್ರಿ ................. ................. ಯನ್ನು ಹೆಂಡತಿಯನ್ನಾಗಿ ತಂದುಕೊಳ್ಳಲು ಸಂತೋಷದಿಂದ ಒಪ್ಪಿ, ಈ
ಸಾಕ್ಷಿ ವೀಳೆಯವನ್ನು ಸ್ವೀಕರಿಸಿದ್ದೇನೆ.”
ಜಯಗುರು ಬಸವೇಶ ಹರಹರ ಮಹಾದೇವ ಎಂದು ಎಲ್ಲರೂ ಜಯಘೋಷ ಮಾಡುವರು. ತಂದ ವಸ್ತುಗಳನ್ನು ವರನ ತಾಯಿಗೆ ಉಡಿ ತುಂಬುವರು. ಗಂಡಿನವರು ಎಲ್ಲರಿಗೂ ಏನಾದರೂ ಸಿಹಿಯನ್ನು ಹಂಚುವರು. ಬಂದ ಬೀಗರಿಗೆ ಮಾತ್ರವಲ್ಲದೆ ಊರ ಪ್ರಮುಖರಿಗೂ ಸಿಹಿಯೂಟ ಮಾಡಿಸಲಾಗುತ್ತದೆ. ಸಂಬಂಧ ಗಟ್ಟಿಯಾಗದಿದ್ದರೆ ಊಟ ಹೋಗುವುದುಂಟು. ಇದು ಒಳ್ಳೆಯದಲ್ಲ. ಸಂಬಂಧ ಕುದುರದಿದ್ದರೇನಂತೆ ಸ್ವಧರ್ಮಿಯರು ಎಂಬ ಕಾರಣಕ್ಕೆ ಊಟೋಪಚಾರವು ನಡೆಯಬೇಕು.
ನಿಶ್ಚಯ ಕಾರ್ಯ
ಗಂಡಿನ ಮನೆಯಲ್ಲಿ ಸಾಕ್ಷಿವೀಳ್ಯ ಆದ ಮೇಲೆ, ಹೆಣ್ಣಿನ ಮನೆಯಲ್ಲಿ ನಿಶ್ಚಯ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಗಂಡಿನ ಮನೆಯವರು ಕ್ರಿಯಾಮೂರ್ತಿಯ ನೇತೃತ್ವದಲ್ಲಿ ನಿಗದಿ ಪಡಿಸಿದ ದಿನ ಕನ್ಯೆಯ ಮನೆಗೆ ಹೊರಡುವರು. ಹೊರಡುವಾಗ ಸಾಮಾನುಗಳನ್ನು ಹೀಗೆ ಹೊಂದಿಸಿಕೊಳ್ಳುವರು. ವಧುವಿಗಾಗಿ ಒಂದು ಹೊಸ ಸೀರೆ-ರವಿಕೆ ಕಣ, ೨ ಕೊಬ್ಬರಿ, ೧೨ ಬಾಳೆಯ ಹಣ್ಣಿನ ಚಿಪ್ಪು, ನೆರೆವ ಜನರಿಗೆ ಹಂಚಲು ಹರಳು (ಕಲ್ಲು) ಸಕ್ಕರೆ, ೧೧ ರೂಪಾಯಿ ನಾಣ್ಯಗಳು, ಎಲೆ-ಅಡಿಕೆ, ಬಂಗಾರದ ಉಂಗುರ (ಬಸವಣ್ಣನವರ ಭಾವಚಿತ್ರವಿರುವ ಸಾಮಾನ್ಯ ತಾಮ್ರದ ಉಂಗುರವಾದರೂ ನಡೆದೀತು).
ಸಂಪ್ರದಾಯದಲ್ಲಿ ವರನನ್ನು ಬಿಟ್ಟು, ವರನ ಕಡೆಯವರು ಹೋಗಿ ನಿಶ್ಚಿತಾರ್ಥ ಮಾಡಿಕೊಂಡು ಬರುವ ರೂಢಿ ಇದೆ. ಇದರಲ್ಲಿ ಬದಲಾವಣೆ ಅಗತ್ಯ. ಹಿಂದಿನ ಕಾಲದಲ್ಲಿ ವಧುವರರ ಪರಸ್ಪರ ಭೇಟಿಯಿಲ್ಲದೆ ಉಭಯತರ ಮಾತಾಪಿತೃಗಳೇ ಮಾತುಕತೆ ನಿಶ್ಚಿತಾರ್ಥ ಮುಗಿಸುತ್ತಿದ್ದರು. ಅಂತರ ಪಟ ಸರಿದಾಗಲೇ ವಧು-ವರರು ಪರಸ್ಪರ ನೋಡಿ (ಚೆನ್ನಾಗಿದ್ದರೆ) ಸಂಭ್ರಾಂತಿಗೋ ! (ಭಯಂಕರವಾಗಿದ್ದರೆ) ಆಘಾತಕ್ಕೊ ಒಳಗಾಗುತ್ತಿದ್ದರು. ಈಗ ಹಾಗಿಲ್ಲ. ಮೊದಲೇ ನೋಡಿ ಒಪ್ಪಿರುತ್ತಾರೆ. ಆದ್ದರಿಂದ ನಿಶ್ಚಿತಾರ್ಥ ಕಾರ್ಯಕ್ಕೆ ವರನನ್ನೂ ಕರೆದೊಯ್ಯುವುದು ಒಳ್ಳೆಯದು.
ಹೆಣ್ಣಿನ ಮನೆಯಲ್ಲಿ ನಿಶ್ಚಯಕಾರ್ಯ (ಲಗ್ನಪತ್ರವನ್ನು ಕಟ್ಟುವ ಕಾರ್ಯ)ಕ್ಕೆ ಬೇಕಾಗುವ ಸಾಮಾನುಗಳು.
೧. ಗುರು ಬಸವಣ್ಣನವರ ಕಟ್ಟು ಹಾಕಿಸಿರುವ ಭಾವಚಿತ್ರ.
೨. ಮುದ್ರಣಗೊಂಡ ನಿಶ್ಚಯ ಕಾರ್ಯದ ಪ್ರತಿಗಳು-೨ ವರನಿಗಾಗಿ ಒಂದು, ಕನ್ಯೆಗಾಗಿ ಒಂದು. (ಇವನ್ನು ಸಂಘ ಸಂಸ್ಥೆಗಳವರು ಮುದ್ರಿಸಿ ಇಡಬೇಕು.)
೩. ಶ್ರೀ ಬಸವಣ್ಣನವರ ವಚನಗಳ ಚಿಕ್ಕ ಪುಸ್ತಕ (ತಾಳವೋಲೆ ಬದಲಿಗೆ).
೪. ನೀರಿನ ತಂಬಿಗೆ, ೨ ಲೋಟಗಳು.
೫. ವಿಭೂತಿಗಟ್ಟಿ, ಗಂಧ, ಹೂ, ಊದಿನಕಡ್ಡಿ, ಕೊಬ್ಬರಿ, ಹಣ್ಣುಗಳು ಕರ್ಪೂರ, ಗಂಟೆ, ಹಂಚಲು ಕಲ್ಲುಸಕ್ಕರೆ.
೬. ಕುಂಕುಮ, ಅರಿಷಿಣ, ಅಕ್ಷತೆ, ಆರತಿ, ಕಳಸ ಅದರ ಜೊತೆಗಿಡಲು ಬಸವಮುದ್ರೆ, ಎಲೆ-ಅಡಿಕೆ, ಅರಿಷಿಣ ಸವರಿದ ಅಕ್ಕಿಕಾಳು.
೭. ಉಂಗುರ, ಉಡುಗೊರೆ ಎಂದು ಕೊಡಲಿರುವ ಸಾಮಗ್ರಿಗಳು, -ಶಕ್ತ್ಯಾನುಸಾರ.
೮. ಹೂಮಾಲೆಗಳು-೮, ಬಸವ ಭಾವಚಿತ್ರಕ್ಕೆ, ವರನಿಗೆ, ಕನ್ಯೆಗೆ, ಯಾರಾದರೂ ಗುರು-ಜಂಗಮ ಮೂರ್ತಿಗಳು ಬಂದಿದ್ದರೆ ಅವರಿಗೆ ಒಂದು, ವಧು-ವರರ ತಾಯಿತಂದೆಗಳಿಗೆ ಒಂದೊಂದು. ಹೀಗೆ ೮ ಹೂಮಾಲೆಗಳು.
೯. ಮಡಿಲು ತುಂಬಲು ೨ ವಸ್ತ್ರಗಳು.
೧೦. ಮಡಿಲು ತುಂಬಲು ಅಕ್ಕಿ, ಕೊಬ್ಬರಿ ಬಟ್ಟಲು ಉತ್ತುತ್ತಿ, ಅರಿಷಿಣಬೇರು, ಬಾಳೆಯ ಹಣ್ಣು.
೧೧. ಬಾಳೆಯ ಕಂಭ, ಮಾವಿನ ತಳಿರು.
೧೨. ವರ-ಕನ್ಯೆ ಕುಳಿತುಕೊಳ್ಳಲು ಎರಡು ಮಣೆಗಳು, (ಎರಡು ಕುರ್ಚಿಗಳು ಅಥವಾ ಒಂದು ಉತ್ತಮ ಚಾಪೆ ಅಥವಾ ಜಮಖಾನಾ.)
ಹೆಣ್ಣಿನ ಮನೆಯಲ್ಲಿ
ನಿಶ್ಚಿತಾರ್ಥದ ದಿನ ನಡುಮನೆಯಲ್ಲಿ ಒಂದು ಚಿಕ್ಕ ಮಂಟಪ ಕಟ್ಟಿ ಬಸವಣ್ಣನವರ ಭಾವಚಿತ್ರ ಇಟ್ಟು ಅಲಂಕರಿಸಬೇಕು.
ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು
ದುಃಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು
ಬಸವಣ್ಣನ ನೆನೆದಲ್ಲದೆ, ಎನಗೆ ಭಕ್ತಿಯಿಲ್ಲವೆಂದು,
ನಾನು, 'ಬಸವಣ್ಣಾ, ಬಸವಣ್ಣಾ, ಬಸವಣ್ಣಾ
ಎನುತಿರ್ದೆನು ಕಾಣಾ, ಕಲಿದೇವರದೇವಾ.
ಎಂಬ ಮಡಿವಾಳ ಮಾಚಿದೇವರ ವಾಣಿಯಂತೆ ಕನ್ಯೆಯ ಕೈಯಿಂದ ಅಂದು ಶ್ರೀ ಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡಿಸಿ, ಪೂಜಾವ್ರತ ನೆರವೇರಿಸಬೇಕು.
ನಿರ್ದಿಷ್ಟ ಸಮಯ ಗೊತ್ತುಪಡಿಸಿ, ಊರ ಪ್ರಮುಖರನ್ನು ಬಂಧುಗಳನ್ನೂ ಆಹ್ವಾನಿಸಬೇಕು. ಗಂಡಿನವರು ತಂದಿರುವ ಹೊಸ ಸೀರೆ ಮತ್ತು ರವಿಕೆಯನ್ನು ಗುರು ಬಸವಣ್ಣನವರ ಭಾವಚಿತ್ರದ ಮುಂದಿಟ್ಟು ಪ್ರಸಾದಗೊಳಿಸಿ, ಕನ್ಯೆಗೆ ಕೊಡಬೇಕು. ಆಕೆ ಅದನ್ನುಟ್ಟು ಅಲಂಕರಿಸಿಕೊಂಡು ಬರುವಳು. ಭಾವಚಿತ್ರ ಇಟ್ಟು ಪೂಜಿಸಿದ ಮಂಟಪದ ಮುಂದೆ ಮಣೆಗಳನ್ನು (ಕುರ್ಚಿಗಳನ್ನೂ) ಹಾಕಬೇಕು. ಗಂಡಿನ ಮನೆಯವರು ತಂದಿರುವ ಎಲ್ಲ ಸಾಮಾನುಗಳನ್ನು ತಟ್ಟೆಯಲ್ಲಿಟ್ಟು ಬಸವ ಭಾವಚಿತ್ರದ ಮುಂದಿಡಬೇಕು. ವರನು ಇಲ್ಲಿಯವರೆಗೆ ಒಂದು ಕುರ್ಚಿ ಅಥವಾ ಸೋಫಾದ ಮೇಲೆ ಕುಳಿತಿರುವನು.
ಅಲಂಕೃತಳಾದ ಕನ್ಯೆಯು ಬರುತ್ತಿದ್ದಂತೆಯೇ ಉಭಯತರ ಕೈಲಿ ಬಸವ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿಸಬೇಕು. ಬಸವಣ್ಣನವರಿಗೆ ನಮಸ್ಕರಿಸಿ ಇಬ್ಬರೂ ಹೋಗಿ ಮಣೆ ಅಥವಾ ಕುರ್ಚಿಗಳ ಮೇಲೆ ಹುಡುಗಿಯು ಎಡಕ್ಕೆ ಹುಡುಗನು ಬಲಕ್ಕೆ ಕುಳಿತುಕೊಳ್ಳುವರು. ಗಂಡಿನ ಕಡೆಯ ಹಿರಿಯ ಮಹಿಳೆಯರು ಕನ್ಯೆಗೆ ವಿಭೂತಿ ಧರಿಸಿ, ಕುಂಕುಮವಿಟ್ಟು, ಹೂ ಮುಡಿಸಿ, ಕೊರಳಿಗೆ ಹೂಮಾಲೆಯನ್ನು ಹಾಕುವರು. ಉಡಿಯಲ್ಲಿ ಒಂದು ವಸ್ತ್ರ ಹಾಕಿ ಬಾಳೆಯ ಹಣ್ಣು ತೆಂಗಿನ ಕಾಯಿ ಮುಂತಾದ (ಉಡಿ ತುಂಬುವ ವಸ್ತುಗಳೆಂದರೆ, ಬಾಳೆಯ ಹಣ್ಣು-ಕೊಬ್ಬರಿ - ಅಕ್ಕಿ -ವೀಳೆಯದೆಲೆ - ಅಡಿಕೆ - ಸಕ್ಕರೆ ಪೊಟ್ಟಣ - ಅರಿಷಿಣ ಬೇರು.) ಮಂಗಲ ವಸ್ತುಗಳನ್ನು ಹಾಕುವರು. ಅದೇ ರೀತಿ ಹೆಣ್ಣಿನ ಕಡೆಯವರು ಹುಡುಗನಿಗೆ ಭಸ್ಮಧರಿಸಿ, ಹೂಮಾಲೆ ಹಾಕಿ, ಕೈಗೆ ಒಂದು ವಸ್ತ್ರಕೊಟ್ಟು, ಕೊಬ್ಬರಿ ಬಾಳೆಯ ಹಣ್ಣು ಇತ್ಯಾದಿ ಫಲ ತಾಂಬೂಲ ನೀಡುವರು. ಕಳಸದ ಆರತಿಯನ್ನು ಉಭಯತರಿಗೆ ಮಾಡಿ, ಮಂಗಲಾಕ್ಷತೆಯನ್ನು (ಮಂಗಲಾಕ್ಷತೆಯನ್ನು ಸಿದ್ಧಪಡಿಸುವ ವಿಧಾನವನ್ನು ಈ ಪುಸ್ತಕದ ಪ್ರಾರಂಭದಲ್ಲಿ ವಿವರಿಸಲಾಗಿದೆ.) ಇಬ್ಬರ ತಲೆಯ ಮೇಲೆ ವರ್ಷಿಸುವರು. ಹೀಗೆ ಅಕ್ಷತೆ ಹಾಕುವ ಮೊದಲು
ಹೇಳಬೇಕು:
ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಪರಶಿವನ ನಿಜತೇಜ
ಜಯತು ಕರುಣಾಸುಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀಗುರುಬಸವಾ ||
ಅಕ್ಷತೆ ಹಾಕುವಾಗ ಜಯಗುರು ಬಸವೇಶ ಹರಹರ ಮಹಾದೇವ ಎನ್ನಬೇಕು.
ಹಿರಿಯರು ಲಗ್ನದ ಒಪ್ಪಂದ ಪತ್ರಿಕೆಯನ್ನು ಈಗ ಬರೆಸಬೇಕು. (ಲಿಂಗವಂತ ಧರ್ಮಿಯರ ಸಂಘ-ಸಂಸ್ಥೆಗಳವರು, ಪುಸ್ತಕ ಮಾರಾಟಗಾರರು ಮಾದರಿ ತೋರಿಸಿದ ರೀತಿ ಪ್ರತಿಗಳನ್ನು ಮುದ್ರಿಸಿ ಇಟ್ಟಿರುವುದು ಒಳ್ಳೆಯದು. ಗುರು ಬಸವಣ್ಣನವರೇ ಆದಿಗುರು, ವಚನ ಸಾಹಿತ್ಯವೇ ಧರ್ಮ ಸಂಹಿತೆ, ಇಷ್ಟಲಿಂಗವೇ ಧರ್ಮ ಲಾಂಛನ, ಕೂಡಲಸಂಗಮವೇ ಧರ್ಮ ಕ್ಷೇತ್ರ, ಷಟ್ ಕೋನ - ಬಸವಮಂತ್ರ ಸಹಿತವಾದ ಷಟ್ ಸ್ಥಲ ಧ್ವಜವೇ ಧರ್ಮ ಧ್ವಜ ಎಂಬ ೫ ಮುದ್ರೆಗಳನ್ನು ಈ ನಿಶ್ಚಯ ಪಟದಲ್ಲಿ ಮುದ್ರಿಸಲೇ ಬೇಕು.)
ಓಂ ಶ್ರೀಗುರುಬಸವಲಿಂಗಾಯ ನಮಃ
ಬಸವನ ಮೂರ್ತಿಯೆ ಧ್ಯಾನಕ್ಕೆ ಮೂಲ.
ಬಸವನ ಕೀರ್ತಿಯೆ ಜ್ಞಾನಕ್ಕೆ ಮೂಲ.
ಬಸವ ಬಸವಾ ಎಂಬುದೇ ಭಕ್ತಿ ಕಾಣಾ,
ಕಪಿಲ ಸಿದ್ಧ ಮಲ್ಲಿಕಾರ್ಜುನಾ.
ವಧುವಿನ ಸಹಿ ...... .................. .................. ವಧುವಿನ ಹೆಸರು .................. .................. ತಂದೆಯ ಸಹಿ ...... .................. .................. ತಂದೆಯ ಹೆಸರು .................. .................. ತಾಯಿಯ ಸಹಿ ...... .................. .................. ತಾಯಿಯ ಹೆಸರು ...... .................. .................. ವಧುವಿನ ಕಡೆಯವರ ಪ್ರಮುಖರ ಸಹಿ . .................. . .................. ವಧುವಿನ ಕಡೆಯವರ ಪ್ರಮುಖರ ಹೆಸರು . .................. . .................. |
ವರನ ಸಹಿ ...... .................. .................. ವರನ ಹೆಸರು .................. .................. ತಂದೆಯ ಸಹಿ .................. .................. ತಂದೆಯ ಹೆಸರು .................. .................. ತಾಯಿಯ ಸಹಿ ...... .................. .................. ತಾಯಿಯ ಹೆಸರು ...... .................. .................. ವರನ ಕಡೆಯವರ ಪ್ರಮುಖರ ಸಹಿ . .................. . .................. ವರನ ಕಡೆಯವರ ಪ್ರಮುಖರ ಹೆಸರು . .................. . .................. |
ಕ್ರಿಯಾಮೂರ್ತಿಯ ಹೆಸರು ಮತ್ತು ಸಹಿ . .................. . .................. .................. .................. ನಿಶ್ಚಯದ ಸ್ಥಳ ....... . .................. . .................. ನಿಶ್ಚಯದ ದಿನಾಂಕ....... . ................ |
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.
![]() | ಲಿಂಗವಂತ ಧರ್ಮ ಮತ್ತು ವಿವಾಹ | ಲಿಂಗಾಯತ ತತ್ವ-ಸಿದ್ಧಾಂತಗಳು | ![]() |