ಜೀವ ಜೀವದ ಭಾವ ಸಂಗಮ
ಮಾನವನ ಜೀವನದಲ್ಲಿ ಮದುವೆ ಎನ್ನುವುದು ಮಹತ್ವದ ಘಟನೆ, ಭಾರತೀಯರ ಜೀವನ ಪದ್ಧತಿಯಲ್ಲಿ ಇದೊಂದು ಮುಖ್ಯವಾದ ಸಂಸ್ಕಾರ. ಸ್ತ್ರೀ-ಪುರುಷರೆಂಬ ಇಬ್ಬರು ವ್ಯಕ್ತಿಗಳನ್ನು ಸಾಮಾಜಿಕ-ಧಾರ್ಮಿಕ ವಿಧಿ ವಿಧಾನಗಳಿಂದ ಒಟ್ಟುಗೂಡಿಸುವ ಸಂಸ್ಕಾರವೆಂದರೆ ವಿವಾಹ. ಎರಡು ಬೇರೆ ಬೇರೆ ಮನೆತನಗಳಲ್ಲಿ ಹುಟ್ಟಿ ಬೆಳೆದ, ಭಿನ್ನ ಪರಿಸರದ ಇಬ್ಬರು ಅಪರಿಚಿತರನ್ನು ಮದುವೆ ಎಂಬ ಸಂಸ್ಕಾರ ಒಂದುಗೂಡಿಸುತ್ತದೆ.
ಜಗತ್ತಿನ ಬೇರೆಬೇರೆ ದೇಶ, ಜನಾಂಗ, ಧರ್ಮಗಳವರಲ್ಲಿ ತಮ್ಮದೇ ಆದ ರೀತಿಯಲ್ಲಿ ವಿವಾಹದ ವಿಧಿವಿಧಾನಗಳು ಬಳಕೆಯಲ್ಲಿ ಇವೆ. 'ಮದುವೆ' ಎನ್ನುವ ಈ ಸಾಮಾಜಿಕ ಒಂದು ಕಟ್ಟುಪಾಡನ್ನು ಮನುಷ್ಯ ತನ್ನ ಸಮಾಜದಲ್ಲಿ ಅಳವಡಿಸಿಕೊಂಡದ್ದು ಏಕೆ ?
ಆದಿ ಮಾನವನಲ್ಲಿ, ಅನಾಗರಿಕ ವಾತಾವರಣವಿದ್ದ ಕಾಲದಲ್ಲಿ ಈ ಸಂಸ್ಕಾರ ಬಳಕೆಯಲ್ಲಿ ಇರಲಿಕ್ಕಿಲ್ಲ. ಯಾವ ರೀತಿ ಪಶುಪಕ್ಷಿಗಳು ತಮ್ಮ ಶಾರೀರಿಕ ಕಾಮನೆಗಳನ್ನು ಭಾವನಾರಹಿತವಾಗಿ ಪೂರೈಸಿಕೊಳ್ಳುತ್ತವೆಯೋ ಹಾಗೆ ಮನುಷ್ಯನೂ ವರ್ತಿಸಿರಲಿಕ್ಕೂ ಸಾಕು. ಕಾಲಾನಂತರದಲ್ಲಿ, ಗರ್ಭಿಣಿಯಾದ ನಿಸ್ಸಹಾಯಕ ಮಹಿಳೆಯರ ರಕ್ಷಣೆಗಾಗಿ, ಹೆತ್ತ ನಂತರ ನಿಸ್ಸಹಾಯಕ ಸ್ಥಿತಿಯಲ್ಲಿರುವ ತಾಯಿ-ಮಗುವಿನ ಪೋಷಣೆಗಾಗಿ ಹೊಣೆಗಾರಿಕೆಯೊಂದನ್ನು ವಹಿಸಿ ಕೊಡಲು, ಸ್ತ್ರೀ-ಪುರುಷರಲ್ಲಿ ಶಾಶ್ವತ ಸಂಬಂಧವನ್ನು ಏರ್ಪಡಿಸಲು ಸಮಾಜದಲ್ಲಿ 'ಹಿರಿಯರು' ಆಲೋಚಿಸಿ, ಈ ವಿಧಿಯನ್ನು ಅಳವಡಿಸಿರಬಹುದು. ಹುಟ್ಟುಗುಣಗಳಲ್ಲಿ ಮುಖ್ಯವಾದ ಕಾಮತೃಪ್ತಿಯಿಂದ ಆರಂಭವಾದ ಈ ಒಟ್ಟುಗೂಡಿಸುವ ಕ್ರಿಯೆ, ಮುಂದೆ ಇನ್ನೊಂದು ಹುಟ್ಟುಗುಣವಾದ ವಾತ್ಸಲ್ಯ ತೃಪ್ತಿಗೆ ಎಡೆಮಾಡಿಕೊಟ್ಟು, ನಂತರ ತನ್ನದೇ ಆದ ಸಂತಾನವನ್ನು ಜಗತ್ತಿಗೆ ಕೊಡಬೇಕೆಂಬ 'ಸಂಘಜೀವನಾಕಾಂಕ್ಷೆ' ಎಂಬ ಮತ್ತೊಂದು ಹುಟ್ಟುಗುಣವನ್ನೂ ತಣಿಸುತ್ತದೆ. ಕುಟುಂಬ ಎಂಬ ಪುಟ್ಟ ಘಟಕವು ಮನುಷ್ಯನ ಸಂಘ ಜೀವನಾಕಾಂಕ್ಷೆಯ ಒಂದು ಅಭಿವ್ಯಕ್ತ ರೂಪ.
ಪಾಶ್ಚಿಮಾತ್ಯರಲ್ಲೂ ವಿವಾಹ ಉಂಟು, ಪೌರ್ವಾತ್ಯರಲ್ಲೂ ಉಂಟು, ಅದರಲ್ಲೂ ಭಾರತೀಯ ಜೀವನಕ್ರಮದಲ್ಲಿ ವಿವಾಹವು ಉಳಿದೆಲ್ಲ ಸಂಸ್ಕಾರಗಳಿಗಿಂತ ಗಣ್ಯ ಸ್ಥಾನವನ್ನು ಗಿಟ್ಟಿಸಿದೆ. ಏಕೆಂದರೆ ಭಾರತೀಯರಲ್ಲಿ, ಮುಖ್ಯವಾಗಿ ಹಿಂದೂಗಳಲ್ಲಿ ಪತಿ-ಪತ್ನಿಯರ ಸಂಬಂಧ, ಸಾವಿನ ಪರ್ಯಂತರ ಅಗಲಲಾರದ ಸಂಬಂಧ. ಈಗೀಗ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಕೌಟುಂಬಿಕ ವ್ಯವಸ್ಥೆ ಸಡಲಿದೆಯಾದರೂ, ಇನ್ನೂ ಅಷ್ಟಿಷ್ಟು ಮೂಲತನವನ್ನು ಉಳಿಸಿಕೊಂಡಿದೆ. ಅದನ್ನೆಲ್ಲ ಸೋದಾಹರಣವಾಗಿ ಚರ್ಚಿಸಲು ಸಾಕಷ್ಟು ಸಾಮಗ್ರಿ ಇದೆಯಾದರೂ ಸ್ಥಳಾಭಾವದಿಂದಲೂ, ವಿಷಯಾಂತರ ಮಾಡಬಾರದೆಂದೂ ನಾನು ಪ್ರಸ್ತಾಪಿಸುತ್ತಿಲ್ಲ.
ಲಿಂಗವಂತ ಧರ್ಮ ಮತ್ತು ವಿವಾಹ
ನಾನು ನೇರವಾಗಿ ವಿಷಯಕ್ಕೆ ಬರುತ್ತಲಿದ್ದೇನೆ. ಲಿಂಗಾಯತ ಧರ್ಮದ ಸಂವಿಧಾನ ಕರ್ತಗಳಾದ ಬಸವಾದಿ ಪ್ರಮಥರು ಮತ್ತು ಅವರ ಸಮಕಾಲೀನರು ವಿವಾಹ ಕುರಿತು ತಮ್ಮದೇ ಆದ ಆಲೋಚನೆಗಳನ್ನು ಹೊಂದಿದ್ದಾರೆ. ಮೊದಲು ಸೈದ್ಧಾಂತಿಕವಾಗಿ ಚರ್ಚಿಸಿ ನಂತರ ಆದ ಆಲೋಚನೆಗಳನ್ನು ಹೊಂದಿದ್ದಾರೆ. ಮೊದಲು ಸೈದ್ಧಾಂತಿಕವಾಗಿ ಚರ್ಚಿಸಿ ನಂತರ ವಿಧಿವಿಧಾನಗಳನ್ನು ಕುರಿತು ಅವರು ತಳೆದಿದ್ದ ಮನೋಭಾವದ ಬಗ್ಗೆ ಬರೆಯುತ್ತೇನೆ.
೧. ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ ಆದೆ ಮಾಟ
ಕೂಡಲ ಸಂಗಮದೇವರ ಕೂಡುವ ಕೂಟ.
- ಗುರು ಬಸವಣ್ಣ
೨. ಉಭಯ ದೃಷ್ಟಿಯಲ್ಲಿ ದೃಷ್ಟವ ಕಾಂಬಂತೆ
ಸತಿಪತಿ ಏಕ ಭಾವವಾದಲ್ಲಿ
ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು,
ಸಂಗನ ಬಸವಣ್ಣ.
- ಅಲ್ಲಮಪ್ರಭು
೩. ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
- ಜೇಡರ ದಾಸಿಮಯ್ಯ
ಕಾಲುಗಳೆರಡಾದರೂ ಓಟ ಒಂದೇ ಹೇಗೋ, ಕೈಗಳು ಎರಡಾದರೂ ಮಾಟ ಒಂದೇ ಹೇಗೋ, ಕಣ್ಣುಗಳು ಎರಡಾದರೂ ನೋಡುವ ವಸ್ತು ಒಂದೆ ಹೇಗೋ ಹಾಗೆಯೇ ಶರೀರ ಎರಡಾದರೂ ಪತಿ-ಪತ್ನಿಯರ ಸಂಬಂಧ ಗಾಢವಾಗಿ, ಒಂದೇ ಗುರಿಯತ್ತ ಸಾಗಬೇಕು. ಹೀಗೆ ಸತಿಪತಿಗಳು ಒಂದಾಗಿ ಮಾಡುವ ಭಕ್ತಿ ಪರಮಾತ್ಮನಿಗೆ ಬಲು ಪ್ರಿಯ.
ಈ ರೀತಿ ಗೃಹಸ್ಥ ಜೀವನಕ್ಕೆ ಗಣನೀಯವಾದ ಒಂದು ಸ್ಥಾನವನ್ನು ಮತ್ತು ಜೀವನದಲ್ಲಿ ಮಹಿಳೆಗೂ ಒಂದು ಮನ್ನಣೆಯ ಸ್ಥಾನವನ್ನು ಶರಣರು ಕೊಟ್ಟರು. ಹೆಣ್ಣನ್ನು ಹುಣ್ಣೆಂದು ಕಡೆಗಣಿಸಿದ್ದ ಸಮಾಜದಲ್ಲಿ ಹೆಣ್ಣು, ಅಕ್ಕ ಮಹಾದೇವಿಯಂಥ ವೀರ ವಿರಾಗಿಣಿಯಾಗಿ ಮುಂದೆ ಬಂದಳು; ನೀಲಾಂಬಿಕೆಯಂತಹ ದಿವ್ಯಯೋಗಿಣಿಯಾದಳು, ಆಯ್ದಕ್ಕಿ ಲಕ್ಕಮ್ಮನಂತಹ ಆದರ್ಶ ದಿಟ್ಟ ಗೃಹಿಣಿಯಾದಳು, ವೀರಮಾತೆ ಅಕ್ಕನಾಗಲಾಂಬಿಕೆಯಂತಹ ಹೋರಾಟಗಾರ್ತಿಯಾದಳು. ಸಿದ್ಧಪುರುಷರು, ಜ್ಞಾನಿಗಳು, ಗಣ್ಯರು ಕುಳಿತ ಅನುಭವ ಮಂಟಪದ ಸಭೆಯಲ್ಲಿ ಅಕ್ಕಮಹಾದೇವಿ ಧೈರ್ಯವಾಗಿ ಉತ್ತರ ನೀಡಿದುದು, ಆಯ್ದಕ್ಕಿ ಲಕ್ಕಮ್ಮ 'ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೇ ಈಸಕ್ಕಿಯಾಸೆ ನಿಮಗೇಕೆ ? ಅಲ್ಲಿಯೇ ಸುರಿದು ಬನ್ನಿ ಮಾರಯ್ಯ ಎನ್ನುವ ಆತ್ಮಬಲ ಪಡೆದುದು ಬಸವಾದಿ ಪ್ರಮಥರು ಕೊಟ್ಟ ಸ್ಥಾನದಿಂದಾಗಿಯೇ.
ಶರಣರ ದೃಷ್ಟಿಯಲ್ಲಿ ಹೆಣ್ಣು ಕೇವಲ ದಾಸಿಯಲ್ಲ, ಭೋಗದ ಗೊಂಬೆಯಲ್ಲ ಅರ್ಧಾಂಗಿನಿ, ಸಮಾನ ಹಕ್ಕು ಉಳ್ಳವಳು, ಧರ್ಮ ಸಹಚರಿಣಿ, ಹೀಗೆ ಬಸವ ಧರ್ಮದಲ್ಲಿ ವಿವಾಹಕ್ಕೆ, ವೈವಾಹಿಕ ಜೀವನಕ್ಕೆ, ಹೆಣ್ಣಿಗೆ ಒಂದು ಮನ್ನಣೆಯ ಸ್ಥಾನವು ದೊರೆತಿದೆ.
ವಿವಾಹವು ಒಂದು ಕಡ್ಡಾಯವಾದ ಸಾಮಾಜಿಕ-ಧಾರ್ಮಿಕ ಆಚರಣೆ. ಆದರೆ ಇದನ್ನೊಂದು ಪ್ರಿಯವಾದ ಕ್ರಿಯೆಯನ್ನಾಗಿ ಮಾಡಿಕೊಳ್ಳಬೇಕೇ ವಿನಾ ಭಾರವಾದ ಹೇರನ್ನಾಗಿ ಅಲ್ಲ. ಅದಕ್ಕಾಗಿ ಸರಳವಾದ ವಿವಾಹ ಕ್ರಮವನ್ನು ಶರಣರು ಬೋಧಿಸುತ್ತಾರೆ.
ಲೌಕಿಕ ಮತ್ತು ಪಾರಮಾರ್ಥಿಕ ಮದುವೆಗಳು
ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ
ವಿಭೂತಿ ವೀಳಯವ ಕೊಟ್ಟು ಆರೋಗಣೆಯ ಮಾಡಿಸಿ
ಶಿವಗಣಂಗಳು ಸಾಕ್ಷಿಯಾಗಿ ಪ್ರಸಾದವನಿಕ್ಕುವುದೇ ಸದಾಚಾರವಲ್ಲದೆ.
ವಾರತಿಥಿ ಸುಮುಹೂರ್ತವೆಂದು ಲೌಕಿಕದ ಕರ್ಮವ ಮಾಡಿದಡೆ
ನಿಮ್ಮ ಸದ್ಭಕ್ತರಿಗೆ ದೂರವಯ್ಯ ಕೂಡಲಚನ್ನಸಂಗಮದೇವಾ.-ಚ.ಬ.ವ.
ಲಿಂಗವಂತ ಧರ್ಮಿಯನ ವಿವಾಹದಲ್ಲಿ
(೧) ವಿಭೂತಿ ವೀಳಯವ ಕೊಟ್ಟು ಆಹ್ವಾನಿಸಬೇಕು.
(೨) ಆರೋಗಣೆಯ ಮಾಡಿಸಬೇಕು.
(೩) ವಾರತಿಥಿ ಮುಹೂರ್ತ ನೋಡಬಾರದು.
ಲೌಕಿಕ ಮದುವೆಯ ವಿವರ ಇಲ್ಲಿದೆ. ಅಕ್ಕಮಹಾದೇವಿಯ ವಚನಗಳಲ್ಲಿ ಪಾರಮಾರ್ಥಿಕ ಮದುವೆಯಾದ ದೀಕ್ಷೆಯ ವಿವರವಿದೆ. ಆದರೆ ಈ ವರ್ಣನೆ ನಮಗೆ ಎಷ್ಟೋ ವಿವರಗಳನ್ನು ಒದಗಿಸುತ್ತದೆ.
೧. ಗುರುವೆ ತೆತ್ತಿಗೆ ಲಿಂಗವೇ ಮದುವಳಿಗ,
-ಅಕ್ಕಮಹಾದೇವಿ
ವಿವಾಹ ಕಾರ್ಯ ನೆರವೇರಿಸಲು ಒಬ್ಬ ವ್ಯಕ್ತಿ ಬೇಕು.
೨. ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ, ಕಂಬ
ಪವಳದ ಚಪ್ಪರವಿಕ್ಕಿ, ಮುತ್ತು ಮಾಣಿಕದ ಮೇಲುಕಟ್ಟು ಕಟ್ಟಿ
ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು.
ಕಂಕಣ, ಕೈಧಾರೆ, ಸ್ಥಿರ ಸೇಸೆಯನಿಕ್ಕಿ
ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರು
-ಅಕ್ಕಮಹಾದೇವಿ
ಕಂಭ ಹಾಕಿ, ಚಪ್ಪರವನ್ನು ರಚಿಸಿದರು. ಅದನ್ನು ಅಲಂಕರಿಸಲು ತೋರಣ ಕಟ್ಟಿದರು, ಮೇಲುಕಟ್ಟು ಕಟ್ಟಿದರು, ನೆಲದ ಮೇಲೆ ಕುಳಿತುಕೊಳ್ಳಲು ಉತ್ತಮ ವೇದಿಕೆ ರಚಿಸಿದರು. ಮದುವೆಗೆ ಬೇಕಾದ ಇನ್ನಿತರ ಸಾಮಗ್ರಿ ಎಂದರೆ ಕಂಕಣ, ಕೈಧಾರೆ, ಸ್ಥಿರ ಸೇಸೆ (ಅಕ್ಷತೆಕಾಳು)
೩. ಗುರುಪಾದ ತೀರ್ಥವೇ ಮಂಗಳಮಜ್ಜನವೆನಗೆ
ವಿಭೂತಿಯೇ ಒಳಗುಂದದರಿಷಿಣವೆನಗೆ
ದಿಗಂಬರವೇ ದಿವ್ಯಾಂಬರವೆನಗೆ
ಶಿವಭಕ್ತರ ಪಾದರೇಣುವೆ ಅನುಲೇಪನವೆನಗೆ
ರುದ್ರಾಕ್ಷಿಯೇ ಮೈದೊಡಿಗೆಯೆನಗೆ
ಶರಣರ ಪಾದವೆ ಶಿರದಲಿ ತೊಂಡಿಲು ಬಾಸಿಗವೆನಗೆ,
ಆನು ಚನ್ನಮಲ್ಲಿಕಾರ್ಜುನಂಗೆ ಮದುವಳಿಗೆ
ಎನಗೆ ಬೇರೆ ಶೃಂಗಾರವೇಕೆ ಹೇಳಿರೆ ಅವ್ವಗಳಿರಾ !
ವಧುವಿಗೆ ಅರಿಷಿಣವನ್ನು ಧರಿಸಬೇಕು, ಮಂಗಳ ಮಜ್ಜನವನ್ನು ಮಾಡಿಸಬೇಕು, ದಿವ್ಯಾಂಬರ ಉಡಿಸಬೇಕು, ಮಂಗಳದ್ರವ್ಯ ಲೇಪಿಸಬೇಕು, ಒಡವೆಗಳಿಂದ ಅಲಂಕರಿಸಬೇಕು, ತೊಂಡಿಲು ಬಾಸಿಂಗವನ್ನು ಕಟ್ಟಬೇಕು.
ಸಾಮಾನ್ಯವಾಗಿ ಸಾಂಪ್ರದಾಯಿಕ ಮದುವೆ ಮತ್ತು ಪ್ರೇಮ ವಿವಾಹ ಎಂದು ಎರಡು ಪ್ರಕಾರಗಳನ್ನು ನೀವು ನೋಡುವಿರಿ. ಪ್ರೇಮ ವಿವಾಹದಲ್ಲಿ ತಾಯಿತಂದೆಗಳ ಒಪ್ಪಿಗೆ ಸಿಕ್ಕಾಗ ಅವು ಸಾಂಪ್ರಾದಾಯಿಕ ವಿವಾಹಗಳಂತೆ ಶಾಂತವಾಗಿ, ವ್ಯವಸ್ಥಿತವಾಗಿ ನಡೆಯುತ್ತವೆ. ಪ್ರೇಮವಿವಾಹಗಳಲ್ಲಿ, ವಧೂವರರ ತಾಯಿತಂದೆಯರ, ಹಿರಿಯರ ಒಪ್ಪಿಗೆ ಇಲ್ಲದಿದ್ದರೆ ಶಾಂತವಾಗಿ ಸುವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ಮದುವೆ ನಡೆಯದೆ ಉದ್ವಿಗ್ನತೆ, ಅವಸರ, ಭಯ, ಸಂಕೋಚಗಳಲ್ಲೇ ಮುಗಿದು ಹೋಗುತ್ತದೆ. ನಿಶ್ಚಯ, ವಿವಾಹ, ನಿಷೇಕ (ಪ್ರಸ್ತ) ಹೀಗೆ ದಾಂಪತ್ಯ ಜೀವನದಲ್ಲಿ ಮೂರುಹಂತಗಳಿರುತ್ತವೆ. ಪ್ರೇಮ ವಿವಾಹಗಳು ತಿರುಗಮುರುಗ ಕ್ರಮದಲ್ಲಿ ಆಗುವುದೇ ಹೆಚ್ಚು. ಹಿರಿಯರ ಸಮ್ಮತಿ ಇಲ್ಲದ ವಿವಾಹಗಳಲ್ಲಿ ನೋಂದಣಿ ಅಧಿಕಾರಿಗಳ ಎದುರಿಗೆ ಆಗುವಂಥವೇ ಜಾಸ್ತಿ. ಅಂಥವರು ಈ ಎಲ್ಲ ಸಾಂಪ್ರದಾಯಿಕ ಶಾಸ್ತ್ರಗಳನ್ನು ಮಾಡಲಾಗದಿದ್ದರೆ ಅಷ್ಟೆ, ಕನಿಷ್ಠ ಪಕ್ಷ ತಮ್ಮ ಮಿತ್ರರ, ಹಿತೈಷಿಗಳ ನೆರವಿನಿಂದ ಪ್ರತಿಜ್ಞಾವಿಧಿ ಮುಂತಾದವನ್ನಾದರೂ ಪೂರೈಸಬೇಕು. ಅಂತಹ ಮಿತ್ರರು, ಹಿತೈಷಿಗಳು ಈ ಪುಸ್ತಕವನ್ನು ಓದಿ, ಕಲಿತು ಅವರೇ ವಿವಾಹ ಕಾರ್ಯವನ್ನು ನಿರ್ವಹಿಸಬಹುದು.
ಮದುವೆಯಲ್ಲಿ ಅನೇಕ ಘಟ್ಟಗಳಿವೆ. ಹೆಣ್ಣು ನೋಡುವುದು, ಸಾಕ್ಷಿ ವೀಳ್ಯ, ನಿಶ್ಚಿತಾರ್ಥ, ಲಗ್ನ ಕಟ್ಟಿಸುವುದು, ಮದುವೆ, ನಿಷೇಕ. ಈ ಆರು ಘಟ್ಟಗಳು ಪೂರೈಸಿದರೆ ಅಲ್ಲಿಗೆ ದಂಪತಿಗಳಿಗೆ ಕೂಡಿ ಬದುಕಲು ಗುರು-ಹಿರಿಯರು ಮತ್ತು ಗಣ (ಸಮಾಜ)ವು ಒಪ್ಪಿಗೆ ನೀಡಿದಂತಾಗುವುದು. ಇವುಗಳನ್ನು ಕ್ರಮವಾಗಿ ತಿಳಿಯೋಣ.
ಕಲ್ಯಾಣ ವಿವಾಹ ?
ಕೆಲವರು ಮದುವೆಗೆ ಕಲ್ಯಾಣ ವಿವಾಹ' ಎಂದು ಕರೆಯುತ್ತಾರೆ ಅದಕ್ಕೆ ಅವರಿಗೆ ಪ್ರೇರಣೆ ಎಂದರೆ ಚನ್ನಬಸವಣ್ಣನವರ ವಚನ, ಅದರಲ್ಲಿ ಚನ್ನಬಸವಣ್ಣನವರು ಹೇಳುತ್ತಾರೆ:
ರಾಜಾಧಿರಾಜ ಬಿಜ್ಜಳರಾಯನು ಆ ಬಸವಣ್ಣನೂ
ಆ ಕಲ್ಯಾಣ ಪಟ್ಟಣದೊಳಗೆ ಸುಖ ಸಂಕಥಾ ವಿನೋದದಿಂದ
ರಾಜ್ಯಂ ಗೈಯುತ್ತಿರಲು ಆ ಕಲ್ಯಾಣದ ನಾಮವಿಡಿದು
ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು.
ಕಲ್ಯಾಣ-ವಿವಾಹ ಎಂದು ಬರೆಯುವುದು ತಪ್ಪು. ಇಲ್ಲಿ ಎರಡೂ ಪದಗಳನ್ನು ಕೂಡಿ ಬಳಸಿದರೆ ಎರಡರ ಅರ್ಥವು ಒಂದೇ ಆಗಿರುವುದರಿಂದ ಆ ಬಳಕೆ ಕಾಂಪೌಂಡ್ ಗೋಡೆ, ಗೇಟ್ ಬಾಗಿಲು ಎಂದಂತೆ ಆಗುತ್ತದೆ.
ಆದರೆ 'ಕಲ್ಯಾಣ ಮಹೋತ್ಸವ' ಅಥವಾ 'ವಿವಾಹ ಮಹೋತ್ಸವ' ಎನ್ನಬಹುದು. ಕಲ್ಯಾಣ' ಪದವನ್ನು ಜೀವನದ ಒಂದು ಘಟನೆಯಾದ ಮದುವೆಗೆ ಅನ್ವಯಿಸಿ ಬಳಸುವುದಕ್ಕಿಂತಲೂ ಉದಾತ್ತ ಅರ್ಥ, ವಿಸ್ತಾರವಾದ ವ್ಯಾಪ್ತಿಯುಳ್ಳ Welfare ಲೇಸು ಅಥವಾ ಸಮಗ್ರ ಒಳ್ಳಿತಿಗೆ ಬಳಸುವುದು ಹೆಚ್ಚು ಸೂಕ್ತ. ಮದುವೆಯೊಂದರಿಂದಲೇ ಮನುಷ್ಯನ ಕಲ್ಯಾಣವಾಗದು ಅಥವಾ ಸಮಾಜದ ಕಲ್ಯಾಣವಾಗದು. ವ್ಯಕ್ತಿ, ಸಮಾಜ, ಸಮಷ್ಟಿಗಳ ಸರ್ವತೋಮುಖ ಲೇಸಿಗೆ ಕಲ್ಯಾಣ ಎಂಬ ಪದವನ್ನು ಮೀಸಲಿಡಬಯಸಿ, ವಿವಾಹಕ್ಕೆ ಕಲ್ಯಾಣವೆಂಬ ಪದವನ್ನು ನಾನು ಬಳಸಿಕೊಂಡಿಲ್ಲ.
ಜಾತಕ - ಗ್ರಹಬಲ ನೋಡಬೇಕಾಗಿಲ್ಲ
ವರ-ಕನ್ಯೆಯರನ್ನು ನಿಶ್ಚಯಿಸುವಾಗ ಉಭಯತರ ಜಾತಕಗಳನ್ನು ನೋಡಬೇಕಾಗಿಲ್ಲ. ಮನೆತನ, ಗುಣ, ವಿದ್ಯೆ, ರೂಪ, ನಡೆ-ನುಡಿ ಇವನ್ನು ನೋಡಿ ಇಬ್ಬರ ಮನಸ್ಸಿಗೂ ಒಪ್ಪಿಗೆ ಎನಿಸಿದರೆ, ಅವರ ತಾಯಿತಂದೆಯರಿಗೂ ಒಪ್ಪಿಗೆ ಎನಿಸಿದರೆ ಸಂಬಂಧವನ್ನು ಗಟ್ಟಿಗೊಳಿಸಬಹುದು.
ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯ
ರಾಶಿಕೂಟ ಗಣ ಸಂಬಂಧ ಉಂಟೆಂದು ಹೇಳಿರಯ್ಯ
ಚಂದ್ರಬಲ-ತಾರಾಬಲ ಉಂಟೆಂದು ಹೇಳಿರಯ್ಯ
ನಾಳಿನದಿನಕ್ಕಿಂದಿನ ದಿನ ಲೇಸೆಂದು ಹೇಳಿರಯ್ಯ
ಕೂಡಲ ಸಂಗನ ಪೂಜಿಸಿದ ಫಲ ನಿಮ್ಮದಯ್ಯ,
ಪರಸ್ಪರ ಎಲ್ಲರೂ ವಿಚಾರ ವಿನಿಮಯ ಮಾಡಿಕೊಂಡಾಗ ಎಲ್ಲರಿಗೂ ಮೆಚ್ಚುಗೆ ಎನಿಸಿದರೆ ಇದು ಒಳ್ಳೆಯ ಸಂಬಂಧ ಎಂದುಕೊಳ್ಳಿರಿ. ಇಬ್ಬರ ರಾಶಿ, ಕೂಟ ಎಲ್ಲ ಹೊಂದಿವೆ ಎಂದುಕೊಳ್ಳಿ, ಗಣ ಸಂಬಂಧ ಕೂಡಿ ಬಂದಿದೆ ಎಂದು ತಿಳಿಯಿರಿ. ಚಂದ್ರಬಲವೂ ಇದೆ, ತಾರಾಬಲವೂ ಇದೆ ಎಂದುಕೊಳ್ಳಿರಿ.
ಮುಹೂರ್ತ ನೋಡಲು ಹೋಗಬೇಡಿ; ನಾಳಿನ ದಿನಕ್ಕಿಂತ ಇಂದೇ ಚೆನ್ನಾಗಿದೆ ಎಂದು ನಿರ್ಧರಿಸಿರಿ. ಅದನ್ನು ನೋಡಲಿಲ್ಲ. ಇದನ್ನು ನೋಡಲಿಲ್ಲ ಎಂಬ ಭ್ರಾಂತಿ-ಭಯ ಬೇಡ, ಪರಮಪ್ರಭು, ಜಗದೊಡೆಯ ದೇವನನ್ನೇ ಪೂಜಿಸಿದ ಫಲ ನಿಮ್ಮದು.” ಎನ್ನುತ್ತಾರೆ ಧರ್ಮಪಿತ ಬಸವಣ್ಣನವರು.
ಕೆಲವರು ಕೇಳುತ್ತಾರೆ. “ಗುರು ಬಸವಣ್ಣನವರು ಚಂದ್ರಬಲ ತಾರಾಬಲ ಉಂಟೆಂದು ಹೇಳಿರಿ ಎನ್ನುತ್ತಾರೆ. ಅಂದರೆ ಅದರ ಅರ್ಥ ಅವರಿಗೆ ಚಂದ್ರಬಲ ತಾರಾಬಲಗಳಲ್ಲಿ ನಂಬಿಕೆ ಇತ್ತು ಎಂದು ಆಗುತ್ತದಲ್ಲವೆ ?” ಎಂಬುದಾಗಿ.
ಯಾವುದನ್ನೇ ಆಗಲಿ ಅದನ್ನು ನಿರಾಕರಿಸಿ ಹೇಳಬೇಕಾಗಿದ್ದರೂ ಅದರ ಹೆಸರು ಪ್ರಸ್ತಾಪಿಸಬೇಕಲ್ಲವೆ ? ಪ್ರಥಮವಾಗಿ, ನೀವು ಜಾತಕವನ್ನೇ ಪರಿಶೀಲಿಸಬೇಡಿ ಎಂದಾಗ ಉಳಿದವುಗಳಲ್ಲಿ ನಂಬಿಕೆ ಇಲ್ಲವೆಂದು ಅರ್ಥ ತಾನೆ ?
ಕೆಲವರು ಮೊದಲು ಜಾತಕ ನೋಡುತ್ತಾರೆ. ಇಲ್ಲಿ ಅವು ಹೊಂದಿಕೆಯಾದ ಮೇಲೇ ಮುಂದೆ ಪರಸ್ಪರ ನೋಡುವುದು. ರೂಪ, ಗುಣ, ಮನೆತನ, ನಡೆನುಡಿ ಎಲ್ಲ ಕೂಡಿಬಂದರೂ ಜಾತಕ ಕೂಡದಿದ್ದರೆ ಕೈಬಿಡುತ್ತಾರೆ. ಇದನ್ನು ಬಸವಣ್ಣನವರು ಒಪ್ಪದೇ, “ಮೊದಲು ಮನುಷ್ಯರ ಹೊಂದಾಣಿಕೆ ನೋಡಿರಿ. ಇಲ್ಲಿ ಎಲ್ಲವು ಸರಿಬಂದರೆ ನಂತರ ರಾಶಿ ಕೂಟ ಸೇರಿವೆ. ಚಂದ್ರಬಲ ತಾರಾಬಲ ಕೂಡಿಬಂದಿದೆ ಎಂದುಕೊಳ್ಳಿರಿ. ಯಾವುದಕ್ಕೂ ಭಯಪಡಬೇಡಿ; ಪರಮಾತ್ಮನನ್ನೇ ಪೂಜಿಸುವ ಭಕ್ತರು ನೀವಾಗುವ ಕಾರಣ ಎಲ್ಲವು ಯಶಸ್ವಿಯಾಗುತ್ತದೆ.
ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಸಂಗಯ್ಯ ?
ದೋಷವೆಲ್ಲಿಯದೋ, ದುರಿತವೆಲ್ಲಿಯದೋ, ಸಂಗಯ್ಯ ?
ನಿಮ್ಮ ಮಾಣದೆ ನೆನೆವಂಗೆ ಭವಕರ್ಮವೆಲ್ಲಿಯದೊ?
ಕೂಡಲಸಂಗಯ್ಯಾ
ನಿಜ ಕರ್ತನನ್ನು ಎಡಬಿಡದೆ, ನಿಷ್ಠೆಯಿಂದ ನೆನೆವಂಗೆ ವಿಘ್ನ, ತಾಪತ್ರಯವಿಲ್ಲ; ದೋಷ-ದುರಿತವಿಲ್ಲ, ಭವಕರ್ಮವೂ ಇಲ್ಲ.” ಎನ್ನುವರು.
ಮೂಢಜನರ ದುರ್ಬಲ ಮನಸ್ಸಿನ ಭ್ರಾಂತ್ಯಾತ್ಮಕ, ಸಂದೇಹಗಳಿಗೆ ಪರಿಹಾರ ಹುಡುಕುವುದು ಬಲುಕಷ್ಟ, ಮೌಡ್ಯತೆ ಉಳಿಯಲಿ, ಅದು ನಮ್ಮ ಹೊಟ್ಟೆ ಪಾಡಿಗೆ ಒಳ್ಳೆಯ ಮಾರ್ಗ” ಎನ್ನುವವರು ಮಾತ್ರ ಈ ಅಂಧಃಶ್ರದ್ದೆಯನ್ನು ಭಕ್ತರಲ್ಲಿ ಪ್ರಚೋದಿಸುವರು.
“ಮುಹೂರ್ತ-ಜಾತಕ ಏನನ್ನೂ ನೋಡದೆ ಶೀಲವಂತ-ಲಾವಣ್ಯವತಿ ಅವರ ಮದುವೆ ಮಾಡಿಸಿದ್ದರಿಂದಲೇ ಎಲ್ಲ ಬಗೆಯ ಸಂಕಷ್ಟ ಬಂದುದು. ಜಾತಿಗಳು ದೇವರು ಮಾಡಿದ್ದು. ಅದನ್ನು ತಪ್ಪಿ ನಡೆದುದುಕ್ಕೆ ಏನೇನೋ ದುರಂತವಾಯಿತು. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ.” ಹೀಗೆಲ್ಲ ಜಾತಿವಾದಿಗಳು ಮಾತನಾಡುತ್ತಾರೆ.
“ವರ್ಣಾಂತರ ವಿವಾಹದಂತಹ ದಿಟ್ಟ ಹೆಜ್ಜೆ ಇಟ್ಟರೆ ಏನೇನು ಆಗಬಹುದು.” ಎಂದು ಊಹಿಸದಷ್ಟು ಮೂಢರು. ಮುಗ್ಧರು ಅಲ್ಲ ಶರಣರು, ಚೈನಾದಲ್ಲಿ ಇತ್ತೀಚೆಗೆ ಪ್ರಜಾಪ್ರಭುತ್ವದ ಪರವಾಗಿ ಒಂದು ಪ್ರದರ್ಶನ ನಡೆದಾಗ ಒಬ್ಬ ವಿದ್ಯಾರ್ಥಿ ಮುಂದೆ ಸಾಗಿ ಟ್ಯಾಂಕರ್ ನ ಕೋವಿಯ ಬಾಯಿಗೆ ಎದುರಾಗಿ ನಿಂತ. ಅದು ಹಾರುತ್ತದೆ. ಅದರಿಂದ ನಾನು ಸಾಯುತ್ತೇನೆ ಎಂಬ ಅರಿವು ಇಲ್ಲದವನೇನೂ ಅಲ್ಲ, 'ಸಾಯಲಿ ಚಿಂತೆಯಿಲ್ಲ; ಆದರೆ ಇದರಿಂದ ಚೀನಾದಲ್ಲಿ ಪ್ರಜಾಪ್ರಭುತ್ವದ ಹಂಬಲವಿದೆ ಎಂಬುದು ಜಗತ್ತಿಗೆ ತಿಳಿಯುತ್ತದೆ.' ಎಂಬ ಸಾತ್ವಿಕ ಛಲ ಅವನದು. ಶರಣರು ತಿಳಿಯದೆ ಈ ದಿಟ್ಟ ಹೆಜ್ಜೆ ಇಟ್ಟಿದ್ದರೆ ನಂತರ ಕ್ಷಮೆ ಕೇಳಿ ಪಾರಾಗುತ್ತಿದ್ದರು. ತಮ್ಮ ತತ್ತ್ವಕ್ಕೆ ಅಂಟಿ ಕೊಂಡುದೇ ಅವರ ನಿಷ್ಠೆಯನ್ನು ತೋರಿಸುತ್ತದೆ.
ಆದ್ದರಿಂದ ನಿಜ ಶರಣ ಮಾರ್ಗಿಗಳು ಮಕ್ಕಳ ಜಾತಕ ಬರೆಸಬಾರದು, ನೋಡಬಾರದು. ಪರಸ್ಪರ ವ್ಯಕ್ತಿತ್ವ ನೋಡಿ ವಿವಾಹ ನಿಶ್ಚಯಿಸಬೇಕು.
ಮುಹೂರ್ತ ನೋಡಬಾರದು
ಒಂದು ಭಾನುವಾರ ಅಥವಾ ಸರ್ಕಾರಿ ರಜಾ ದಿನ ಇರುವ, ಹವೆಯು ಚೆನ್ನಾಗಿ ಇರುವಂತಹ ಒಂದು ತಿಂಗಳು ನೋಡಿ ಕಲ್ಯಾಣ ಮಂದಿರ ಒಪ್ಪಿಸಿಕೊಳ್ಳಿರಿ. ಇದರಿಂದ ಕಲ್ಯಾಣ ಮಂದಿರ ಬೇಗ ಸಿಕ್ಕುತ್ತದೆ. ಅದೇ ಮುಹೂರ್ತದಲ್ಲೇ ಬೇಕೆಂದು ಸಾಲುಗಟ್ಟಿದಾಗ ಕಲ್ಯಾಣ ಮಂದಿರ ಅಲಭ್ಯವಾಗುತ್ತವೆ. ಅವರೂ ಬೆಲೆ ಕಡಿಮೆ ಮಾಡಿಕೊಡುವರು. ರಜಾದಿನಗಳಲ್ಲಿ ಲಗ್ನ ಇಡುವುದರಿಂದ ಕಾಯಕ ಜೀವಿಗಳ ಕಾಯಕದ ದಿವಸ ವ್ಯರ್ಥವಾಗದು.
ಮುಹೂರ್ತ ನೋಡದೆ ಇರುವವರು, ಮದುವೆಯ ಕಾರ್ಯ ಸಂಪೂರ್ಣವಾಗಿ ಮಧ್ಯಾಹ್ನ ೧ ಗಂಟೆಗೆ ಮುಗಿಯುವಂತೆ ಇಟ್ಟು ಬಿಟ್ಟರೆ, ನಂತರ ಪ್ರಸಾದ ಸ್ವೀಕಾರಕ್ಕೆ ಸಮಯವು ಸರಿಯಾಗಿ ಹೊಂದುತ್ತದೆ. ನಾವು ತಿಳಿಸಿರುವ ಕ್ರಮಕ್ಕೆ ಪೂಜಾವ್ರತದಿಂದ ಪ್ರಾರಂಭವಾಗಿ ಆರತಿ ಆಗುವವರೆಗೆ ಸುಮಾರು ಮೂರೂವರೆ ಗಂಟೆಬೇಕು. ಸುಮಾರು ಬೆಳಗಿನ ೯-೩೦ ಕ್ಕೆ ಆರಂಭಿಸಿದರೆ ೧ ಗಂಟೆಗೆ ಎಲ್ಲವೂ ಪೂರ್ತಿಯಾಗುತ್ತದೆ. ಬೆಳಗಿನ ಲಿಂಗಾರ್ಚನೆ, ದೀಕ್ಷಾ ಕಾರ್ಯಕ್ರಮ ಇವಕ್ಕೆ ಎರಡು ಗಂಟೆ ಮೀಸಲಿಡಬಹುದು.
ಮಿಶ್ರ ಭಕ್ತರು
ಅರ್ಧಂಬರ್ಧ ಬಸವ ತತ್ತ್ವಾನುಯಾಯಿಗಳಾದ ಲಿಂಗವಂತರು ಮುಹೂರ್ತ ನೋಡಬಾರದು ಎಂದು ತಿಳಿದೂ ಭಯವನ್ನು ಗೆಲ್ಲಲಾರದ ದುರ್ಬಲ ಮನಸ್ಸಿನವರಾಗಿತ್ತಾರೆ. ಇವರು ಏನು ಮಾಡಬೇಕೆಂದರೆ ಮುಹೂರ್ತ ನೋಡಿದ್ದರೂ ಅದನ್ನು ಲಗ್ನಪತ್ರಿಕೆಯಲ್ಲಿ ಕಾಣಿಸದೆ, ಶರಣರಿಗೆ ಸಮ್ಮತವಾದ ಸಮಯ ದಲ್ಲಿ ಮಾಂಗಲ್ಯಧಾರಣೆ, ಅಕ್ಷತಾರೋಪಣ ನೆರವೇರುತ್ತದೆ ಎಂದು ಹಾಕಿದರೆ ಸಾಕು.
ಇಂಥ ಜನರು ತಮ್ಮ ನಿಗದಿತ ಸಮಯಕ್ಕೆ ೩ ಗಂಟೆ ಮೊದಲು ಭಾಗ-೨, ಶ್ರೀ ಬಸವೇಶ್ವರ ಪೂಜಾವ್ರತದಿಂದ ಆರಂಭಿಸಬಹುದು. ವೇಳಾಪಟ್ಟಿ ಸಿದ್ಧಪಡಿಸುವಾಗ ಆ ರೀತಿ ಸಮಯವನ್ನು ಹಾಕುತ್ತಾ ಹೋಗಬೇಕು.
ಆಡಂಬರ ಬೇಡ
ಬರುಬರುತ್ತ ಮದುವೆಗಾಗಿ ವ್ಯಯಿಸುವ ಹಣದ ಮೊತ್ತ ವಿಪರೀತವಾಗುತ್ತಿದೆ. ಅವರಷ್ಟು ಮಾಡಿದರು, ನಾವಿಷ್ಟು ಖರ್ಚು ಮಾಡುತ್ತೇವೆ ಎಂಬ ಸ್ಪರ್ಧೆಯೇ ಜಾಸ್ತಿ. ಬೆಲೆ ಸಿಕ್ಕಾಪಟ್ಟೆ ಏರಿರುವ ಕಾಲದಲ್ಲಿ ತೆಂಗಿನಕಾಯಿ ಕೊಡುವುದು ಬಹಳ ವೆಚ್ಚದಾಯಕ. ಇದರ ಜೊತೆಗೆ ಸ್ಟೀಲಿನ ತಟ್ಟೆ-ಲೋಟ ಮುಂತಾದವನ್ನು ಕೊಡುವ ಹವ್ಯಾಸ ವಿಪರೀತವಾಗುತ್ತಿದೆ. ಇಂಥದಕ್ಕೆ ಹಣ ವ್ಯಯಿಸುವ ಬದಲು ಅದೇ ಹಣವನ್ನು ಉದಾತ್ತ ಕಾರ್ಯ ಮಾಡುವ ಸಂಘ-ಸಂಸ್ಥೆಗಳಿಗೆ ಕೊಡಬಹುದು; ಅಥವಾ ಅದೇ ಮೊತ್ತದ ಹಣ ವ್ಯಯಿಸಿ ಧಾರ್ಮಿಕ ಸಾಹಿತ್ಯ ಮುದ್ರಿಸಿ, ಖರೀದಿಸಿ, ಅದರೊಳಗೆ ಮದುವೆಯ ಸ್ಮರಣಾರ್ಥ ಕೊಟ್ಟುದು ಎಂದು ಒಂದು ಹಾಳೆ ಅಂಟಿಸಿ, ತಾಂಬೂಲದ ಜೊತೆ ಕೊಡಬಹುದು. ಅಬ್ಬಾ, ಅವರು ಎಂತಹ ಅದ್ದೂರಿ ಮದುವೆ ಮಾಡಿದರು, ಸುಮಾರು ಆರೇಳು ರೂಪಾಯಿ ಬೆಲೆಬಾಳುವ ತಟ್ಟೆ ಕೊಟ್ಟರು. ಎಂದು ಮದುವೆಗೆ ಬಂದವರು ಹೊಗಳಬಹುದು. ಇನ್ನೊಬ್ಬರು ಅದಕ್ಕಿಂತಲೂ ಹೆಚ್ಚಿನ ಬೆಲೆಯ ಸಾಮಾನು ಕೊಟ್ಟಾಗ, ಇವರನ್ನು ಮರೆತು ಜನ ಅವರನ್ನು ಹೊಗಳುವರು.
ಕೀರ್ತಿ ವಾರ್ತೆಗೆ ಮಾಡುವವನ ಧನ
ವೃಥಾ ಹೋಯಿತ್ತಲ್ಲಾ ?
ಎಂದು ಇಂಥ ಜನರನ್ನು ಕಂಡೇ ಗುರುಬಸವಣ್ಣನವರು ಉದ್ಧರಿಸುವುದು.
ಇಂಥ ಕೊಡುಗೆಯಿಂದ ಪುಣ್ಯವೂ ಬರದು. ಯಾವನಿಗೆ ಒಂದು ವಸ್ತುವಿನ ಅಗತ್ಯ ವಿಪರೀತ ಇದೆಯೋ, ಆ ವಸ್ತುವನ್ನು ಕೊಟ್ಟಾಗ ವ್ಯಕ್ತಿಯ ಪ್ರಾಣವಾಗಲೀ, ಮಾನವಾಗಲಿ ಉಳಿಯುವುದೋ ಅಂಥದರಿಂದ ಪುಣ್ಯ ಬರುತ್ತದೆ: ಹಸಿದವನಿಗೆ ಅನ್ನ, ತೀರಾ ಬಡತನದಲ್ಲಿದ್ದು ತನ್ನ ಮಕ್ಕಳ ಮದುವೆ ಮಾಡದೆ ತತ್ತರಿಸುವವನಿಗೆ ಮದುವೆ ನೆರವು ಮುಂತಾಗಿ ಮಾಡಿದರೆ ಪುಣ್ಯ ಬಂದೀತು. ಶ್ರೀಮಂತರ ಮದುವೆಗೆ ಶ್ರೀಮಂತರು ಬಂದಾಗ ಕೀರ್ತಿವಾರ್ತೆಗಾಗಿ ಕೊಡುವ ವಸ್ತುಗಳಿಂದ ಪುಣ್ಯವು .. ಬರದು. ವ್ಯಕ್ತಿಯು ಅಂತರಂಗವನ್ನು ತೆರೆದಿಟ್ಟುಕೊಂಡು ಆಲೋಚಿಸಬೇಕು. ಶ್ರೀಮಂತರು ಮಾಡುವ ಆಡಂಬರ ಮಧ್ಯಮ ವರ್ಗದವರ ಪಾಲಿಗೆ ದೊಡ್ಡ ಕುತ್ತು. ಏಕೆಂದರೆ ವರಗಳು ತಮ್ಮ ಅತ್ತೆ ಮಾವಂದಿರನ್ನು ಹಾಗೇ ಮಾಡಿಕೊಡಿ, ಹೀಗೇ ಮಾಡಿಕೊಡಿ ಎಂದು ಕಾಡಿಸುವರು.
ಯಾರು ಅಳವಡಿಸಿಕೊಳ್ಳಲಿ ಬಿಡಲಿ ಹೇಳುವುದು ನನ್ನ ಕರ್ತವ್ಯ; ಹೇಳಿಬಿಡುತ್ತೇನೆ. ೩-೪ ರೂಪಾಯಿಗಳ ತೆಂಗಿನಕಾಯಿಯ ಬದಲು ವಚನ ಗ್ರಂಥಗಳನ್ನು ಖರೀದಿಸಿ, ಮುದ್ರಿಸಿಕೊಡುವ ಪರಿಪಾಠ ಬೆಳೆಸಿಕೊಳ್ಳಿರಿ. ಮದುವೆಗೆ ಎಲ್ಲ ಜಾತಿಯವರೂ ಬರುತ್ತಾರೆ; ಅವರಿಗೆ ನಮ್ಮ ಧರ್ಮದ ಗ್ರಂಥ ಕೊಡುವುದು ತಪ್ಪಲ್ಲವೆ ?” ಎಂದು ಕೆಲವರ ವಾದ. ಒಂದು ಕಾರ್ಯಕ್ರಮಕ್ಕೆ ಹೋದಾಗ ಒಬ್ಬ ಕ್ರೈಸ್ತರು ಬೈಬಲ್ ಪ್ರತಿ ತಂದು ಕೊಟ್ಟರು. ನನಗೆ ಸಂತೋಷವಾಯಿತು. ಅವರ ಮಿಶನರಿ ಜೀಲ್ ಮೆಚ್ಚಿಕೊಂಡೆ, ಮಂಗಳೂರಿನಲ್ಲಿ ಪ್ರವಚನ ಮಾಡುವಾಗ ಕನ್ನಡ ಕುರಾನ್ ಅನ್ನು ಒಬ್ಬರು ಕೊಟ್ಟರು ಸಂತೋಷವಾಯಿತು. ಹೀಗೇ ನಮ್ಮ ಧರ್ಮವನ್ನೂ ಅವರು ಕುತೂಹಲದಿಂದ ಓದಿ, ತಿಳಿಯುವರು. ವಿವಾಹಕ್ಕೆ ನೀವು ಆಮಂತ್ರಿಸಿದಾಗ ನೀವು ಲಿಂಗಾಯತ ಧರ್ಮಾನುಯಾಯಿಗಳು ಎಂದು ಅವರಿಗೆ ಗೊತ್ತೇ ಇರುತ್ತದಲ್ಲವೆ ? ನಮ್ಮ ಧರ್ಮವನ್ನು ತಿಳಿದುಕೊಳ್ಳಲು ಅವರಿಗೆ ಉತ್ತಮ ಅವಕಾಶ ಲಭ್ಯವಾಗುತ್ತದೆ. ನೀವು ಈ ರೀತಿ ಆಚರಿಸಿದರೆ ಒಂದು ಉದಾತ್ತ ಸಂಪ್ರದಾಯವೊಂದನ್ನು ಆಚರಣೆಗೆ ತಂದಂತಾಗುವುದು.
ಕೆಲವರು ಕೇಳಬಹುದು ತೆಂಗಿನಕಾಯಿಗೆ ೪ ರೂ. ಕೊಟ್ಟರೂ ಖರ್ಚೆ, ಪುಸ್ತಕಕ್ಕೂ ಖರ್ಚೆ. ವ್ಯತ್ಯಾಸವೇನು ? ನಿಜ, ತೆಂಗಿನಕಾಯಿ ಒಂದು ದಿನದ ಆಹಾರವಾಗಿ ಮರೆಯಾಗಬಹುದು. ಪುಸ್ತಕವು ಜಂಗಮ ಆಸ್ತಿಯಾಗಿ ಮನೆಯಲ್ಲಿ ನಿಲ್ಲುವುದು. ಓದಿದಾಗಲೆಲ್ಲ, ಓದಿದವರಿಗೆಲ್ಲ ಸಂತೋಷ ಉಂಟುಮಾಡುವುದು. ಕೊಡುಗೆಯಾಗಿ ಕೊಟ್ಟ ಗ್ರಂಥದಲ್ಲಿ ವಧುವರರ ಹೆಸರು, ತಾಯಿ-ತಂದೆಯರ ಹೆಸರು, ಮದುವೆ ದಿನಾಂಕ ಇರುವುದರಿಂದ ಅದನ್ನು ಓದಿದಾಗೆಲ್ಲ ವಿವಾಹಿತರ ನೆನಪಾಗುತ್ತದೆ.
ಪುನರ್ ವಿವಾಹ
ಏಕಪತ್ನಿತ್ವ – ಏಕ ಪತಿತ್ವ ಒಟ್ಟಾರೆ ಹಿಂದೂ ಸಮಾಜದ ಲಕ್ಷಣವಾಗಿರುವಂತೆ ಲಿಂಗಾಯತ ಸಮಾಜದಲ್ಲಿಯೂ ಬಂದಿದೆ. ಪರಸತಿಯ ಒಲ್ಲೆ' ಎಂಬುದು ಪುರುಷನ ನೀತಿಯಾದರೆ, “ಪರಮ ಪತಿವ್ರತೆಗೆ ಗಂಡನೊಬ್ಬ' ಎನ್ನುವುದು ಮಹಿಳೆಯ ನೀತಿ. ಹೀಗಾಗಿ ಭಾರತದ ಸಂವಿಧಾನ ಹೇಳುವಂತೆ ಒಬ್ಬಳೇ ಪತ್ನಿ, ಒಬ್ಬನೇ ಪತಿ ಎಂಬುದು ಲಿಂಗಾಯತ ಸಾಮಾಜಿಕ ಸಿದ್ಧಾಂತದ ಸಾರವೇ ಆಗಿದೆ.
ಕಾರಣಾಂತರದಿಂದ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ - ವಿರಸ ಬಂದರೆ ಪರಸ್ಪರರನ್ನು ಒಟ್ಟುಗೂಡಿಸಲು ಬಹಳ ಪ್ರಯತ್ನವನ್ನು ಹಿರಿಯರು, ಬಂಧುಗಳು ಮಾಡುವರು. ಅದು ಸಫಲವಾಗದಿದ್ದಾಗ ಪತಿ-ಪತ್ನಿ ದೂರವಿರುವರು. ಪುನರ್ ವಿವಾಹವಾಗಬೇಕು ಎಂಬ ಬಯಕೆ ಇರುವವರು ಮಾತ್ರ ವಿಧಿವತ್ತಾಗಿ ವಿಚ್ಛೇದನ ಪಡೆಯಲು ನ್ಯಾಯಾಲಯದ ಕಟ್ಟೆ ಹತ್ತುವರು. ಇಲ್ಲವಾದರೆ ಕಾನೂನಿನ ತೊಡಕು ಉಂಟಾಗುವುದೆಂಬ ಭಯ ಕಾಡುತ್ತದೆ.
ಕೆಲವೊಮ್ಮೆ ಮಕ್ಕಳಾಗದೆ ಇದ್ದಾಗ ಮೊದಲ ಹೆಂಡತಿಯೇ ಸ್ವಯಂ ಸಂತೋಷದಿಂದ ಎರಡನೆಯ ಮದುವೆ ಮಾಡುವುದುಂಟು.
ಅಧ್ಯಾತ್ಮ ಪ್ರಧಾನ ಧರ್ಮ
ಲಿಂಗಾಯತ ಧರ್ಮ ಸ್ವಭಾವತಃ ಅಧ್ಯಾತ್ಮ ಪ್ರಧಾನ ಧರ್ಮ, ಉತ್ತಮ ನಡತೆ - ಚಾರಿತ್ರ್ಯದಿಂದ ಕೂಡಿದ ಐಹಿಕ ಜೀವನ, ಶ್ರದ್ಧಾ-ಭಕ್ತಿಗಳಿಂದ ಕೂಡಿದ ಪಾರಮಾರ್ಥಿಕ ಜೀವನ ಕುರಿತು ಒತ್ತಿ ಒತ್ತಿ ಹೇಳುತ್ತದೆ. ವೈರಾಗ್ಯ ಜೀವನ ಕಷ್ಟ ಸಾಧ್ಯವಾದುದರಿಂದ ಎಲ್ಲರಿಗೂ ಸುಲಭವಲ್ಲವೆಂದು, ವೈವಾಹಿಕ ಜೀವನಕ್ಕೆ ಅವಕಾಶ ನೀಡುತ್ತದೆ. ವೈವಾಹಿಕ ಜೀವನವನ್ನು ಸಂಬಂಧವನ್ನು ತುಚ್ಚವಾಗಿ ಭಾವಿಸದೆ ಅದನ್ನು ಪಾರಮಾರ್ಥಿಕ ಸಾಧನೆಗೆ ಅನುಕೂಲಕರವಾಗಿ ಮಾಡಿಕೊಳ್ಳಬೇಕೆಂದು ಬೋಧಿಸುತ್ತದೆ.
ಆದರೆ ವಿವಾಹದಿಂದಲೇ ಜೀವನದ ಸಾರ್ಥಕ್ಯವೆಂದು ಹೇಳದು. “ಮಕ್ಕಳಾಗಲೇಬೇಕು ಮಕ್ಕಳಿಲ್ಲದಿದ್ದರೆ ಸದ್ಗತಿ ಇಲ್ಲ” ಎಂದು ಬೋಧಿಸದು. ಇವೆಲ್ಲ ಕೊರತೆಗಳನ್ನು ಶರಣರು ಗೌಣವಾಗಿಯೇ ಕಂಡಿದ್ದಾರೆ. ಮದುವೆ-ಮಕ್ಕಳು ಮುಂತಾದ ಕ್ರಿಯೆಗಳು ಎಲ್ಲ ಪ್ರಾಣಿ-ಪಶು-ಪಕ್ಷಿಗಳಲ್ಲಿಯೂ ಇರುವುದರಿಂದ ಇವುಗಳಿಂದಲೇ ಮನುಷ್ಯ ಜೀವನ ಘನವಾಗದು ಎಂಬ ನಿಲುವು ಬಸವಾದಿ ಪ್ರಮಥರದು. ಹೀಗಾಗಿ ಮದುವೆಯಾಗದಿದ್ದರೆ ಕೀಳಾಗಿ ಕಾಣುವುದು, ಮಕ್ಕಳಾಗದಿದ್ದರೆ ನಿಂದಿಸುವುದು ಇವು ಶರಣ ಮಾರ್ಗಿಗಳಿಗೆ ಸಲ್ಲದು. ಮಕ್ಕಳಾಗದಿದ್ದರೆ ಇನ್ನೊಂದು, ಎರಡು ಮದುವೆಯಾಗಿ ಮಕ್ಕಳನ್ನು ಪಡೆಯಬೇಕಿಲ್ಲ. ಇರುವ ಜೀವಿತಾವಧಿಯಲ್ಲಿ ತಾವೇ (ಗುರುವಿನ) ಮಕ್ಕಳಾಗಿ ಅಧ್ಯಾತ್ಮಿಕ ಜೀವನ ನಡೆಸಿದರೆ ಸಾಕು ಎನ್ನುತ್ತದೆ ಬಸವದರ್ಮ.
ಅಧ್ಯಾತ್ಮಿಕ ಔನ್ನತ್ಯದಲ್ಲಿ ನಿಂತು ವಿಚಾರ ಮಾಡಲಾರದವರು ವಿಚ್ಛೇದನ ಪಡೆದು ಸಂಗಾತಿಯಿಂದ ದೂರವಾದ ಮೇಲೆ ಮರುವಿವಾಹ ಮಾಡಿಕೊಳ್ಳಲು ಇಲ್ಲಿ ಅವಕಾಶ ಉಂಟು. ಸಂಗಾತಿಯು ತೀರಿ ಹೋದರೆ ಮಕ್ಕಳ ಸಂರಕ್ಷಣೆಗೆ ಪುರುಷನು ವಿವಾಹವಾಗಲು ಅವಕಾಶವಿರುವಂತೆ ವಿಧವಾ ಸ್ತ್ರೀಗೆ ಸಹ ಅವಕಾಶವಿರುವುದು ಲಿಂಗಾಯತ ಸಮಾಜದ ವಿಶೇಷ.
ಸಮಾಜ ಸುಧಾರಕರಾದ ಧರ್ಮಗುರು ಬಸವಣ್ಣನವರು 'ಹೆಂಡತಿ ಸತ್ತ ಗಂಡಸು ಮದುವೆಯಾಗಬಹುದಾದರೆ, ಗಂಡ ಸತ್ತ ಮಹಿಳೆ ಏಕಾಗಬಾರದು ?' ಎಂದು ವಿಧವಾ ವಿವಾಹ ಬಳಕೆಗೆ ತಂದರು. ವೈದಿಕ ಧರ್ಮದ ಆಚಾರ - ವಿಚಾರಗಳನ್ನು ಶ್ರೇಷ್ಠವೆಂದು ಭಾವಿಸಿ, ಯಾಂತ್ರಿಕ ಅನುಕರಣೆ (Imitation) ಮಾಡುವ ಮೇಲ್ಜಾತಿಯ ಲಿಂಗವಂತರು ವಿಚ್ಛೇದಿತಳಿಗೆ, ವಿಧವೆಗೆ ಮರು ಮದುವೆ ಮಾಡಲು ಹಿಂಜರಿಯುವರು. ಆದರೆ ಬಹುಪಾಲು ಲಿಂಗವಂತರಲ್ಲಿ ಇದು ಆಚರಣೆಯಲ್ಲಿದೆ. ಅಧ್ಯಾತ್ಮಿಕ, ವೈರಾಗ್ಯ ಜೀವನ ನಡೆಸಲು ಅಸಮರ್ಥಳಾದ ಮಹಿಳೆಗೆ ಪುನ ವಿವಾಹ ಮಾಡುವುದು ಎಲ್ಲ ದೃಷ್ಟಿಯಿಂದಲೂ ಸಮರ್ಥನೀಯ.
ಹಳ್ಳಿಗಳಲ್ಲಿ ಇಂಥ ಮದುವೆಗೆ ಉಡಿಕೆ' ಎನ್ನುವರು. ಅಜ್ಞಾನವು ತುಂಬಿರುವುದರಿಂದ ಇದು ಕೇವಲ ಎರಡನೆಯ ಪತಿಯೊಡನೆ ಕೂಡಿ ಬಾಳಲು ಸಮಾಜ ಕೊಡುವ ಒಪ್ಪಿಗೆಯಾಗಿದ್ದು, ಇದಕ್ಕೆ ವಿವಾಹಕ್ಕೆ ಇರುವ ಘನತೆ ಇಲ್ಲ. 'ಉಡಿಕೆ'ಯನ್ನು ಹಂದರ ಹಾಕಿ ಮನೆಯಲ್ಲಿ ಮಾಡದೆ ದೇವಾಲಯದಲ್ಲಿ ಸಂಕ್ಷಿಪ್ತವಾಗಿ ಮಾಡುವರು. ನೂತನ ದಂಪತಿಗಳು ಮತ್ತು ಮಕ್ಕಳು ಈ ವಿಧಿಯಲ್ಲಿ ಭಾಗವಹಿಸಲು ನಿಷೇಧವಿರುವುದು.*
ವಿವಾಹವಾದರೂ ಸ್ತ್ರೀಯ ಸಾಮಾಜಿಕ ಅಂತಸ್ತು ಹೆಚ್ಚುವುದಿಲ್ಲ. ಅವಳು ಹಣೆಗೆ ಕುಂಕುಮ ಇಡುವಂತಿಲ್ಲ: ಕೊರಳಲ್ಲಿ ಮಂಗಳ ಸೂತ್ರ ಧರಿಸುವಂತಿಲ್ಲ, ಮುಡಿಯಲ್ಲಿ ಹೂವು ಇಡುವಂತಿಲ್ಲ, ಕಾಲಿನ ಬೆರಳಲ್ಲಿ ಕಾಲುಂಗರ ತೊಡುವಂತಿಲ್ಲ. ಇದು ತಪ್ಪು, ಪ್ರತಿಯೊಂದು ವಿಷಯದಲ್ಲೂ ಇದು ಪಕ್ಷಪಾತ ತೋರುವ ಸಮಾಜದ ನಿಲುವೇ ವಿನಾ ಶರಣರ ಸೈದ್ಧಾಂತಿಕ ನಿಲುವಲ್ಲ. ಆದ್ದರಿಂದ ಬಸವ ತತ್ತ್ವಾನುಯಾಯಿಗಳು ತಮ್ಮ ಮಗಳು, ಸೋದರಿ ಮೊದಲಿನಂತೆಯೇ ಬದುಕಲು ಅನುವು ಮಾಡಿಕೊಡಬೇಕೆಂಬುದಾದರೆ ಮೊದಲ ಮದುವೆಯಂತೆ ಸಂಭ್ರಮದಿಂದಲೇ ಮಾಡಬೇಕು. ಎಲ್ಲ ಲಾಂಛನಗಳನ್ನು ಧರಿಸಿಕೊಳ್ಳಲು ಅವಕಾಶ ನೀಡಬೇಕು. ಶರಣರ ವಿಚಾರಧಾರೆಯಲ್ಲಿಲ್ಲದೆ ವರ್ಣಾಶ್ರಮ ಧರ್ಮದ ಪ್ರಭಾವದಿಂದ ಬಂದು ಸೇರಿರುವ ವಿಚಾರಗಳನ್ನು ಹೊರಗೆ ಹಾಕಬೇಕು. ವಿಧಿವತ್ತಾಗಿಯೇ ಮರುಮದುವೆಗಳನ್ನು ಮಾಡಿಸಬೇಕು.
ವಯಸ್ಕರ ವಿವಾಹ
ವಿದೇಶಗಳಲ್ಲಿ ಮುಪ್ಪಿನ ಹಣ್ಣು ಹಣ್ಣು ಮುದುಕ-ಮುದುಕಿಯರು ಮದುವೆಯಾಗುವ ಬಗ್ಗೆ ಹಲವಾರು ಕಥೆಗಳನ್ನು ಕೇಳಿ ಭಾರತೀಯರು ಚಕಿತರಾಗುತ್ತಾರೆ. ೬೦ ವರ್ಷ ವಯಸ್ಸು ದಾಟಿದ ಮುದುಕರು ಮದುವೆಯಾಗುವರೆಂದರೆ ಹುಬ್ಬೇರಿಸುವರು. ಆದರೆ ವಾಸ್ತವಿಕ ದೃಷ್ಟಿಯಿಂದ ಪರಿಶೀಲಿಸಿದರೆ ಸಮಸ್ಯೆಗಳು ಅರ್ಥವಾಗಬಹುದು. ಹೆಂಡತಿ ತೀರಿರುವಳು, ಮಕ್ಕಳು ಎಲ್ಲೆಲ್ಲೋ ದೂರದೂರದಲ್ಲಿರುವರು. ಯಾರೂ ತಂದೆಯನ್ನು ನೋಡಿಕೊಳ್ಳರು. ಏಕಾಕಿತನ, ನಿಸ್ಸಹಾಯಕತೆ ಕಾಡುತ್ತದೆ. ಸಾಕಷ್ಟು ಆದಾಯ ಇದ್ದರೂ ಪೋಷಿಸುವವರು ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಂಗಾತಿಯ ಅವಶ್ಯಕತೆ ತೀವ್ರವಾಗಿ ತೋರುತ್ತದೆ. ಹಾಗೆಯೇ ವಿವಾಹವಾಗದೆ ಯಾರನ್ನಾದರೂ ಸಹಾಯಕ್ಕೆ ಇರಿಸಿಕೊಂಡರೆ ಅಪವಾದ ತಪ್ಪದು. ಈ ದೃಷ್ಟಿಯಿಂದ ವಯಸ್ಕರು ಮದುವೆಯಾಗಲೂ ಎಳೆಸಬಹುದು. ಅದನ್ನು ತೀರಾ ಅನುಚಿತವೆಂದು ಭಾವಿಸಬೇಕಾಗಿಲ್ಲ. ಆದರಿಷ್ಟೆ, ಮುಪ್ಪಿನವರು ಎಳೆಯ ಹುಡುಗಿಯನ್ನು, ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವುದು ತಪ್ಪು, ವಿಧವೆ, ವಿಚ್ಛೇದಿತೆ, ಬಹಳ ಕಾಲ ಮದುವೆಯಾಗದೆ ಉಳಿದ ವಯಸ್ಕಳು ಇಂಥವರನ್ನು ಮದುವೆಯಾಗಿ ಅವರಿಗೂ ಲೇಸನ್ನು ಉಂಟು ಮಾಡುವುದು ಶ್ರೇಯಸ್ಕರ. ತನ್ನ ಆಸ್ತಿಪಾಸ್ತಿಯಿಂದ ಆಕೆಗೂ ಆರ್ಥಿಕ ಭದ್ರತೆ ದೊರೆತಂತಾಗುತ್ತದೆ. ಸರಳವಾಗಿ, ಬಸವೇಶ್ವರ ಪೂಜಾವ್ರತಮಾಡಿ ಆತ್ಮೀಯ ಸ್ನೇಹಿತರ ಉಪಸ್ಥಿತಿಯಲ್ಲಿ ಮದುವೆಯನ್ನು ಮಾಡಿಕೊಳ್ಳಬೇಕು.
ಅಂತರ್ ಜಾತಿ ವಿವಾಹ
ಬಸವ ತತ್ತ್ವದ ಪ್ರಕಾರ ಅಂಗದ ಮೇಲೆ ಲಿಂಗವಿದ್ದವರನ್ನು ಸಮಾನವಾಗಿ ಕಂಡು, ಅವರೊಡನೆ ಉಂಬ-ಉಡುವ ಕ್ರಿಯಾಚಾರ, ಹೆಣ್ಣು-ಗಂಡು ಕೊಡುವ-ಕೊಳ್ಳುವ ಕುಲಾಚಾರ ಎರಡನ್ನೂ ಪಾಲಿಸಬೇಕು. ಹೀಗೆ ಮಾಡದೆ ಲಿಂಗವಂತರಲ್ಲಿ ಒಳಪಂಗಡ ನೋಡಿ ವಿವಾಹ ಸಂಬಂಧಗಳನ್ನು ಇತರ ಪಂಗಡಗಳವರೊಡನೆ ಬೆಳೆಸದಿರುವುದು ತಪ್ಪು, ವಿದ್ಯೆ, ಗುಣ, ಶೀಲ ಮುಂತಾದ್ದು ಒಪ್ಪಿಗೆಯಾದರೆ ಒಳಪಂಗಡ ನೋಡಬೇಕಿಲ್ಲ.
ಇನ್ನು ಲಿಂಗಾಯತೇತರ ಜಾತಿಗಳಲ್ಲಿ ಹುಟ್ಟಿದ ಹುಡುಗ ಹುಡುಗಿ ಪರಸ್ಪರ ಪ್ರೇಮಿಸಿದಾಗ ಅವರಲ್ಲೊಬ್ಬರು ಲಿಂಗವಂತರಲ್ಲೇ ಹುಟ್ಟಿದವರಿದ್ದಾಗ ಯಾವ ಸಂಕೋಚವಿಲ್ಲದೆ ಲಿಂಗದೀಕ್ಷೆ ಕೊಡಿಸಿ ಬಸವ ಧರ್ಮದ ತಾತ್ವಿಕ ಚೌಕಟ್ಟಿನಲ್ಲಿ ಮದುವೆ ಮಾಡಬಹುದು. ಜಾತಿ ಕಾರಣವಿಡಿದು ಹಿರಿಯರು ಒಪ್ಪಿಗೆ ಕೊಡದಿದ್ದರೆ, ಪ್ರೇಮಿಗಳು ಧರ್ಮವನ್ನು ಕಡೆಗಣಿಸಿ ತಾವು ಒಂದಾಗುವರು. ಏಕೆಂದರೆ ಕಾಮ-ಪ್ರೇಮಗಳ ಉನ್ಮಾದವೇರಿದಾಗ ಅವರಿಗೆ ಧರ್ಮವೂ ಬೇಕಾಗದು. ತಾಯಿ-ತಂದೆ, ಗುರು-ಹಿರಿಯರು ಸಮಾಜ ಎಲ್ಲವೂ ಮರೆವಾಗುವುವು. ವಯಸ್ಸಿನ ಪ್ರಭಾವವಿದು. ಈ ಸೂಕ್ಷ್ಮವನ್ನರಿತು ತಾಯಿ-ತಂದೆ ಬಂಧು ಬಳಗದವರು ವರ್ತಿಸಬೇಕು. ಎಂಥದೇ ಪ್ರಸಂಗದಲ್ಲಿಯೂ ಅವರು ತಮ್ಮ ನಿರ್ಧಾರವನ್ನು ಸಡಲಿಸುವಂತೆ ಕಾಣದಾಗ ತಾಯಿ ತಂದೆ ಹಠ ಮಾಡದೆ ಅವರ ಮಕ್ಕಳ ಭವಿಷ್ಯ ದೃಷ್ಟಿಯಿಂದ ಆಲೋಚಿಸಬೇಕು. ಇವರು ಪಟ್ಟು ಹಿಡಿಯುವುದರಿಂದ ಪ್ರೌಢರಾದ ಮಕ್ಕಳು ಕೈಬಿಡುವರು; ಕೆಲವೊಮ್ಮೆ ಅನ್ಯ ಧರ್ಮಗಳಿಗೂ ಮತಾಂತರ ಹೊಂದಿಬಿಡಬಹುದು. ಅವರ ಒಂದು ಸಂತಾನವೇ ಮಾತೃಧರ್ಮದಿಂದ ದೂರವಾಗಬಹುದು. ಮಾತೃಧರ್ಮ ಸಮಾಜಗಳ ಬಗ್ಗೆ ಜಿಗುಪ್ಪೆ ಹುಟ್ಟಬಹುದು. ಕಾಲಾನಂತರದಲ್ಲಿ ತಾಯಿ-ತಂದೆ, ಅಣ್ಣ-ತಮ್ಮ ಮುಂತಾದವರ ಪ್ರೀತಿಯಿಂದ ವಂಚಿತರಾಗಿ ಮಾನಸಿಕ ಖಿನ್ನತೆ ಒದಗಬಹುದು. ಈ ಖಿನ್ನತೆ ಪತಿ-ಪತ್ನಿಯರಲ್ಲಿ ನಿಧಾನವಾಗಿ ವಿರಸಕ್ಕೂ ಕಾರಣವಾಗಬಹುದು. ನಿನಗಾಗಿ ನಾನು ನನ್ನ ಹೆತ್ತವರನ್ನು ಕಳೆದುಕೊಂಡೆ' ಎಂದು ಪರಸ್ಪರರಲ್ಲಿ ತಿಕ್ಕಾಟ ಆರಂಭವಾಗಬಹುದು.
ಆದ್ದರಿಂದ ಅವರ ಪ್ರೇಮ ತೋರಿಕೆಯದಿರದೆ (ಬಹಳ ಜನರು ತರುಣ ವಯಸ್ಸಿನ ಉನ್ಮಾದವನ್ನೇ ಪ್ರೇಮ ಎಂದು ತಿಳಿದು, ತಾಯಿ-ತಂದೆ ಸ್ವಲ್ಪ ಬಂಧನದಲ್ಲಿಟ್ಟರೆ ಪುನಃ ಸರಿಯಾಗಿ, ಸಂಗಾತಿಯನ್ನು ಮರೆತೇ ಬಿಡುವರು.) ಗಾಢವಾಗಿ, ಆದರ್ಶವಾಗಿ ಇದ್ದರೆ ಮತ್ತು ಅವರು ಒಳ್ಳೆಯ ಸಂಸ್ಕಾರದವರೇ ಇದ್ದರೆ ಲಿಂಗ ದೀಕ್ಷೆ ಕೊಡಿಸಿ, ಧರ್ಮಾಂತರಗೊಳಿಸಿ ಸಂತೋಷದಿಂದ ಮದುವೆ ಮಾಡಿಬಿಡಬೇಕು. ಇದರಿಂದ ಮುಂದೆ ವಿವಾಹಿತರ ಮತ್ತು ಹೆತ್ತವರ ಸಂಕಟಗಳು ತಪ್ಪುವವು. ಇದರಿಂದ ಧರ್ಮಾನುಯಾಯಿಗಳ ಸಂಖ್ಯೆ ಬೆಳೆಯುವುದು ಮತ್ತು ಬಸವಧರ್ಮದ ಪ್ರಗತಿಪರ ಚಿಂತನೆಯ ಬಗ್ಗೆ ಗೌರವಭಾವವೂ ಹುಟ್ಟುವುದು.
ಪ್ರೇಮ ವಿವಾಹವಾಗುವ ದಂಪತಿಗಳಲ್ಲಿ ಓರ್ವರು ಲಿಂಗಾಯತರಿದ್ದು ಇನ್ನೊಬ್ಬರು ಲಿಂಗಾಯತೇತರರು ಇದ್ದಾಗ ಇವರಿಗೆ ದೀಕ್ಷೆ ಕೊಡಿಸಿ ಧರ್ಮಾಂತರಮಾಡಿಕೊಳ್ಳುವುದು. ಒಂದು ವಿಷಯ ಇನ್ನೊಂದು ಮುಖದಿಂದಲೂ ಇಲ್ಲಿ ಚಿಂತನೆ ಮಾಡಬೇಕಿದೆ. ಎಷ್ಟೋ ಜಾತಿಗಳವರಿಗೆ ಧರ್ಮ ಸಂಸ್ಕಾರವೇ ಇಲ್ಲ. ಪ್ರೇಮ ವಿವಾಹ ಮಾಡಿಕೊಳ್ಳಬಯಸಿದ ಉಭಯತರೂ ಲಿಂಗಾಯತೇತರು ಇದ್ದು, ಅವರಿಗೆ ಬಸವ ಧರ್ಮದ, ಶರಣ ಸಮಾಜದ ಆಶ್ರಯ ಬೇಕಿದ್ದರೆ ಆಗಲೂ ಮುಕ್ತಮನಸ್ಸಿನಿಂದ ಅವರಿಗೆ ದೀಕ್ಷೆ ಕೊಟ್ಟು ಬರಮಾಡಿಕೊಳ್ಳುವುದು ಪುರಸ್ಕರಣೀಯ. ಈ ಔದಾರ್ಯ, ವಿಶಾಲತೆ ಲಿಂಗವಂತರಿಗೆ ಅತ್ಯಗತ್ಯವೆನಿಸುತ್ತಿದೆ.