- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಕೆಲವೊಂದು ಐಚ್ಛಿಕ ವಿಧಿಗಳು
ಧಾರ್ಮಿಕ ಜೀವನದಲ್ಲಿ ಕೆಲವೊಂದು ಕಡ್ಡಾಯವಿಧಿಗಳಾದರೆ ಕೆಲವು ಐಚ್ಛಿಕವಾಗಿರುತ್ತವೆ. ಲಿಂಗಧಾರಣೆ, ವಿವಾಹ ಇಂಥವು ಕಡ್ಡಾಯವಾದರೆ, ಷಷ್ಠಪೂರ್ತಿ ಸಮಾರಂಭ, ದತ್ತು ಸ್ವೀಕಾರ, ಗೃಹಪ್ರವೇಶ ಮುಂತಾದುವು ಐಚ್ಛಿಕ ವ್ಯಕ್ತಿಯ ಅಪೇಕ್ಷೆಗೆ ಅನುಸಾರವಾಗಿ ಇರುತ್ತವೆ. ಸಾಮಾನ್ಯವಾಗಿ ವೈವಾಹಿಕ ಜೀವನದ ಗುರಿಯೇ ಸಂತಾನೋತ್ಪತ್ತಿ ವಂಶದ ಮುಂದುವರಿಯುವಿಕೆ ಯಾವುದಾದರೂ ಕಾರಣದಿಂದ ಶಾರೀರಿಕ ದೋಷವೋ ಕರ್ಮಬಂಧನವೋ, ಬಾಲ್ಯ ವೈಧವ್ಯವೋ, ಮಕ್ಕಳು ಆಗದೆ ಇದ್ದಾಗ ಗೃಹಸ್ಥರು ಚಟಪಟಿಸುವುದುಂಟು. ಮುಪ್ಪಾಗಿ ನಿಸ್ಸಹಾಯಕರು ಆದಾಗ ನೋಡಿಕೊಳ್ಳುವರೆಂದೂ, ತಾವು ಗಳಿಸಿದ ಆಸ್ತಿಯನ್ನು ಹೊಂದಿ ಅನುಭವಿಸುವವರು ಇರಬೇಕೆಂದೊ, ಅಥವಾ ತಮ್ಮ ವಂಶದ ಹೆಸರನ್ನು ಉಳಿಸುವವರು ಇರಬೇಕೆಂದೂ ದತ್ತು ಸ್ವೀಕಾರ ಮಾಡುವುದುಂಟು. ಚಿಕ್ಕ ಮಕ್ಕಳನ್ನು ಹಾಗೆ ದತ್ತು ಮಾಡಿಕೊಳ್ಳುವರು; ಕೆಲವೊಮ್ಮೆ ದೊಡ್ಡವರನ್ನೂ ದತ್ತು ಮಾಡಿಕೊಳ್ಳುವರು. ಮತ್ತೆ ಕೆಲವರು ದೇವರ ಇಚ್ಛೆ ಇಲ್ಲದಿದ್ದ ಮೇಲೆ ಬೇಡವೇ ಬೇಡವೆಂದು ತಿಳಿದು ಧರ್ಮಸಂಸ್ಥೆಗಳಿಗೆ, ಸಾರ್ವಜನಿಕ ಸೇವಾಕಾರ್ಯಗಳಿಗೆ ಆಸ್ತಿಯನ್ನು ದಾನಮಾಡಿಬಿಡುತ್ತಾರೆ.
ಅಷ್ಟೊಂದು ಪ್ರೌಢತೆ, ಉದಾತ್ತ ವಿಚಾರಧಾರೆ ಇಲ್ಲದವರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವುದು ಸ್ವಾಭಾವಿಕ. ಅಂಥ ಸಂದರ್ಭದಲ್ಲಿಯೂ ಬಂಧುಬಳಗದವರ, ಕುಲೀನ ಮನೆತನದ ಮಕ್ಕಳನ್ನು ಹುಡುಕುವರು. ತಾಯಿ ತಂದೆಯಿಲ್ಲದ ಅನಾಥ ಮಕ್ಕಳನ್ನು ಬಡವರ ಮಕ್ಕಳನ್ನೂ ದತ್ತು ತೆಗೆದುಕೊಂಡು ಸಾಕುವುದು ಮಾನವೀಯ ದೃಷ್ಟಿಯಿಂದ ಶ್ರೇಯಸ್ಕರವಾದರೂ, ಅವರೂ ಪ್ರೀತಿ ವಿಶ್ವಾಸಗಳಿಂದ ಇರುವ ಸಂಭವ ಹೆಚ್ಚಿದ್ದರೂ ದತ್ತು ತಗೊಳ್ಳುವವರಲ್ಲಿ ಉದಾತ್ತತೆ ಇರುವುದಿಲ್ಲ.
ದತ್ತು ಸ್ವೀಕಾರ ವಿಧಿ
ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವುದು ಮೊದಲ ಕಾರ್ಯ, ಗುರುಗಳನ್ನು ಕ್ರಿಯಾಮೂರ್ತಿಗಳನ್ನು ಆಹ್ವಾನಿಸಬೇಕು. ಗುರುಗಳು ಕೊಟ್ಟ ಮಂತ್ರೋದಕ (ಹಸ್ತೋದಕ)ದಲ್ಲಿ ದತ್ತು ಪುತ್ರ (ಪುತ್ರಿ)ನಿಗೆ ಸ್ನಾನ ಮಾಡಿಸಬೇಕು. ಸ್ನಾನಾನಂತರ ಕರೆದುತಂದು ಗುರುಮೂರ್ತಿಯ ಕೈಯಿಂದ ಭಸ್ಮಧಾರಣೆ, ಚಿಕ್ಕಮಗುವಿದ್ದರೆ ಲಿಂಗಧಾರಣೆ ಮಾಡಿಸಬೇಕು. ದತ್ತುಪುತ್ರನ ತಲೆಯ ಮೇಲೆ ಕೈಯಿಟ್ಟು ಗುರುಗಳು ಹರಸಬೇಕು. ಅಷ್ಟರೊಳಗೆ ಅವರು ಸ್ನಾನ ಲಿಂಗಾರ್ಚನೆ ಪೂರೈಸಿರುವರು. ದತ್ತುಪುತ್ರ (ಪುತ್ರಿ)ನ ಕೈಲಿ ಬಸವೇಶ್ವರ ಪೂಜಾವ್ರತ ಮಾಡಿಸಬೇಕು. ಮಗು ಸಣ್ಣದಿದ್ದರೆ ದತ್ತು ಪಡೆಯುವ ತಾಯಿತಂದೆಯರೇ ಮಾಡಬೇಕು. ಹೂವುಗಳನ್ನು ಮಗುವಿನ ಕೈಲಿ ಸ್ಪರ್ಶಿಸಿ ಇಟ್ಟುಕೊಂಡು ತಾವೇ ಪುಷ್ಪಾರ್ಚನೆ ಮಾಡಬೇಕು. ಮಹಾಮಂಗಲದ ನಂತರ ಗುರುಮೂರ್ತಿಯು ಕರುಣ ಪ್ರಸಾದವನ್ನು ಅನುಗ್ರಹಿಸಬೇಕು. ಈಗ ಮಗುವಿನ ತಾಯಿತಂದೆ, ದತ್ತು ತಗೊಳ್ಳುವವರು ಕರುಣಪ್ರಸಾದ ಪಡೆಯಬೇಕು. ಪ್ರತಿಜ್ಞಾವಿಧಿಯನ್ನು ಕೈಗೊಳ್ಳಬೇಕು.
ಮಗುವಿನ ತಾಯಿತಂದೆ, ಈಗ ಮಗುವನ್ನು ದತ್ತು ಪಡೆಯುವವರ ತೊಡೆ ಮೇಲಿರಿಸಿ ಹೇಳಬೇಕು. ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಎಲ್ಲ ಶರಣರ ಸಾಕ್ಷಿಯಾಗಿ,
ನಮ್ಮ ಮಗು .................. ................................ ನನ್ನು/ಳನ್ನು ಶರಣೆ ..................... ..................................... ಮತ್ತು ಶರಣ .......................... ..................... ಅವರಿಗೆ ದತ್ತು ಮಗುವನ್ನಾಗಿ ಸ್ವಸಂತೋಷದಿಂದ ಒಪ್ಪಿಸಿಕೊಡುತ್ತಿದ್ದೇವೆ. ಇನ್ನು ಮುಂದೆ ಇವರನ್ನೇ ತನ್ನ ಮಾತಾಪಿತೃಗಳೆಂದು ತಿಳಿದು ಪ್ರೀತಿ ಗೌರವಗಳಿಂದ ನೋಡಿಕೊಳ್ಳಲೆಂದು ಹಾರೈಸುತ್ತೇವೆ. ಜಯಗುರು ಬಸವೇಶ ಹರಹರ ಮಹಾದೇವ ದತ್ತು ಪಡೆಯುವ ತಾಯಿತಂದೆ ಹೀಗೆ ಹೇಳಬೇಕು :
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಎಲ್ಲ ಶರಣರ ಸಾಕ್ಷಿಯಾಗಿ,
ಶರಣೆ ........................... ....................... ಮತ್ತು ಶರಣ ........................ ............................ ಅವರ ಮಗನನ್ನು/ಳನ್ನು ನಮ್ಮ ಮಗನನ್ನಾಗಿ/ಳನ್ನಾಗಿ ದತ್ತು ಪಡೆದುಕೊಂಡಿದ್ದು, ನಮ್ಮ ಆಸ್ತಿಗೆ ವಾರಸುದಾರನೆಂದು/ಳೆಂದು ಘೋಷಿಸುತ್ತೇವೆ. ಕುಮಾರ............................ ................................. ನು. ಆಯುರಾರೋಗ್ಯಭಾಗ್ಯವಂತನಾಗಿ ನಮ್ಮನ್ನು ಪ್ರೀತಿ ಗೌರವಗಳಿಂದ ನಡೆಸಿಕೊಳ್ಳುವಂತೆ ಆಗಲೆಂದು ಧರ್ಮಗುರು ಬಸವಣ್ಣನವರಲ್ಲಿ ಪ್ರಾರ್ಥಿಸುತ್ತೇವೆ. ಜಯಗುರು ಬಸವೇಶ ಹರಹರ ಮಹಾದೇವ.
ಮಗು-ಬಾಲಕನನ್ನು ಅಲಂಕರಿಸಿ, ಒಂದು ಮಣೆ (ಕುರ್ಚಿ)ಯ ಮೇಲೆ ಕುಳ್ಳಿರಿಸಿ ಹೆಣ್ಣು ಮಕ್ಕಳು ಹಣೆಗೆ ಭಸ್ಮ ಇಟ್ಟು ಆರತಿ ಮಾಡಬೇಕು. ಗಂಡು ಮಕ್ಕಳು ಸಹ ಹಣೆಗೆ ಭಸ್ಮ ಧರಿಸಿ ಶುಭವನ್ನು ಹಾರೈಸಬೇಕು.
ದತ್ತು ಪುತ್ರನು ವಯಸ್ಕನಾಗಿದ್ದರೆ ತಾನೂ ಪ್ರತಿಜ್ಞೆಯನ್ನು ಸ್ವೀಕರಿಸಬೇಕು.
ಬಸವ (ಲಿಂಗಾಯತ) ಧರ್ಮದ ದತ್ತುಪುತ್ರನ ಪ್ರತಿಜ್ಞಾವಿಧಿಗಳು
ಓಂ ಶ್ರೀಗುರು ಬಸವ ಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರು ಬಸವಂಗೆ ಶರಣಾಗಿದೆ
ಲಿಂಗದೇವನಿಗೆ ಶರಣಾಗಿಹೆ
ಶರಣಗಣಕ್ಕೆ ಶರಣಾಗಿಹೆ
ಗಣಪದವಿಯನ್ನು ನಾ ಹೊಂದಿಹೆ
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷದ ಶಿವರಾತ್ರಿಯಂದು ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. |
7 | ವ | ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀ / ಪರಪುರುಷ, ಪರದೈವಂಗಳಿಗೆ ಎಳಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ನನ್ನನ್ನು ತಮ್ಮ ಮಗನೆಂದು ದತ್ತು ತೆಗೆದುಕೊಳ್ಳುತ್ತಿರುವವರನ್ನೇ ನನ್ನ ಮಾತಾಪಿತೃಗಳೆಂದು ಭಾವಿಸಿ, ಅವರನ್ನು ಪ್ರೀತಿ-ಗೌರವಗಳಿಂದ ನೋಡುತ್ತ ಮನೆತನಕ್ಕೆ ಕೀರ್ತಿಯನ್ನು ತರುತ್ತೇನೆ. |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯಗುರು ಬಸವೇಶ ಹರಹರ ಮಹಾದೇವ
ಪ್ರತಿಜ್ಞಾ ವಿಧಿಯ ನಂತರ ಮಹಾಮಂಗಲ ಮಾಡಿ, ಎಲ್ಲರಿಗೂ ಪ್ರಸಾದವನ್ನು ಎಡೆಮಾಡಬೇಕು. ಗುರುಗಳಿಗೆ, ಹೆತ್ತ ತಾಯಿತಂದೆಯರಿಗೆ, ದತ್ತು ಪಡೆದವರಿಗೆ ದತ್ತುಮಗನು ನಮಸ್ಕರಿಸಬೇಕು.
ಈ ಧಾರ್ಮಿಕ ಕ್ರಿಯೆಯ ನಂತರ ದತ್ತು ಪತ್ರವನ್ನು ಅಧಿಕೃತವಾಗಿ ನೋಂದಣಿ ಮಾಡುವ ಕಾರ್ಯ ಇಟ್ಟುಕೊಳ್ಳಬಹುದು.
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.