ಮೈ ನೆರೆಯುವಿಕೆ
ವಿದ್ಯಾರಂಭದ ನಂತರ ಹೆಣ್ಣುಮಕ್ಕಳ ಜೀವನದಲ್ಲಿ ಘಟಿಸುವ ಮಹತ್ವಪೂರ್ಣ ಕ್ರಿಯೆ ಎಂದರೆ ಮೈ ನೆರೆಯುವುದು. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರಂಭದ ನಂತರ ಮತ್ತೆರಡು ವಿಧಿಗಳನ್ನು ಆಚರಿಸಲಾಗುವುದು. ಮೂಗು ಚುಚ್ಚಿಸಿಕೊಳ್ಳುವುದು, ಮತ್ತು ಹಚ್ಚೆ ಹಾಕಿಸಿಕೊಳ್ಳುವುದು. [2]
ಈಗ ಇವೆರಡೂ ಮೊದಲಿನಷ್ಟೂ ಮಹತ್ವ ಪಡೆದಿಲ್ಲ. ಈಗೆಲ್ಲ ಸೌಂದರ್ಯವರ್ಧನೆಯ ಸಲುವಾಗಿ ಮೂಗು ಚುಚ್ಚಿಸಿಕೊಂಡು ಮೂಗುಬೊಟ್ಟು ಇಟ್ಟುಕೊಳ್ಳುವರು. ಸ್ವಲ್ಪ ಕಾಲ, ಸುಧಾರಿಸಿದವರಲ್ಲಿ ಮೂಗು ಚುಚ್ಚಿಸಿಕೊಳ್ಳುವುದು ಮಾಯವಾಗಿತ್ತು. ಈಗ ಪುನಃ ಅದು ಫ್ಯಾಷನ್ ಆಗಿ ಬರುತ್ತಲಿದೆ. ಹಚ್ಚೆ ಹಾಕಿಸಿಕೊಳ್ಳುವುದು ಬಣಾಚರಣೆ (tribal practice) ಯಿಂದ ಬಂದು ಸೇರಿದುದು. ಆದಿವಾಸಿ ಜನರು ತಮ್ಮ ಗುಂಪಿನ (ಬಣದ) ಜನರನ್ನು ಗುರುತಿಸಿಕೊಳ್ಳಲು ತಮ್ಮ ಬಣದ ಕುರುಹ (tribal symbol) ನ್ನು ಮೈಮೇಲೆ ಹಾಕಿಸಿಕೊಳ್ಳುತ್ತಿದ್ದರು. ಶರಣರು ೧೨ನೆಯ ಶತಮಾನದಷ್ಟು ಪೂರ್ವದಲ್ಲೇ ಹಚ್ಚೆ ಚುಚ್ಚಿಸಿಕೊಳ್ಳುವುದನ್ನು ನಿಷೇಧಿಸಿದ್ದಾರೆ. ಆದ್ದರಿಂದ ಲಿಂಗವಂತರಿಗಿದು ಮಾನ್ಯವಲ್ಲ.
ಹೆಣ್ಣು ಮಕ್ಕಳು ಮೈ ನೆರೆಯುವುದು ಅವರ ಜೀವನದಲ್ಲಿ ಬಹಳ ಮಹತ್ವದ ಪ್ರಸಂಗ. ಅವರ ತಂದೆ ತಾಯಿಗಳ ಹೊಣೆಯನ್ನು ಇದು ಹೆಚ್ಚಿಸುತ್ತದೆ. ಋತುಮತಿಯಾಗು, ದೊಡ್ಡವಳಾಗು, ರಜಸ್ವಲೆಯಾಗು ಎಂದು ಈ ಪ್ರಾಕೃತಿಕ ಬದಲಾವಣೆಗೆ ಒಳಗಾದವಳನ್ನು ಕರೆಯಲಾಗುತ್ತದೆ.
ಋತುಮತಿಯಾಗುವ ಮೊದಲಿಗೇ ಲಿಂಗದೀಕ್ಷಾ' ಕಾರ್ಯವು ನೆರವೇರಿದ್ದರೆ, ಈಗ ಕೇವಲ ಶುದ್ದೀಕರಣ ಮಾಡಲಾಗುತ್ತದೆ. ಲಿಂಗ ದೀಕ್ಷೆ ಆಗಿಲ್ಲದಿದ್ದರೆ, ಈಗ ಶುದ್ದೀಕರಣ - ದೀಕ್ಷೆ ಎರಡೂ ನಡೆಯುತ್ತವೆ.
ಹೆಣ್ಣು ಬಾಲ್ಯಾವಸ್ಥೆ ಕಳೆದು ಕನ್ಯೆನ್ಯಾವಸ್ಥೆಗೆ ತಲುಪುವ ಸ್ಥಿತ್ಯಂತರವು ಶರೀರದಲ್ಲಿ ಆಗುವ ಪ್ರಕ್ರಿಯೆಯೇ ಪುಷ್ಪವತಿಯಾಗುವುದು ಎನ್ನಿಸಿ ಕೊಳ್ಳುವುದು, ಗಂಡುಮಕ್ಕಳ ಶರೀರದಲ್ಲಿಯೂ ಬದಲಾವಣೆ ಇರುವುದು. ಬಾಲಕಿಯಲ್ಲಿ ಮೊಟ್ಟಮೊದಲಿಗೆ ರಜಸ್ಸು ಕಾಣುತ್ತಲೇ ಅವಳನ್ನು ಉಳಿದವರಿಂದ ಬೇರ್ಪಡಿಸಿ ಕುಳ್ಳಿರಿಸಲಾಗುವುದು. ಲಿಂಗಾಯತೇತರರಲ್ಲಿ ವಿಪರೀತವಾದ ಸೂತಕ, ಮೈಲಿಗೆಯ ಭಾವದಿಂದ ಅಸ್ಪೃಶ್ಯರಂತೆ ಕಾಣಲಾಗುವುದು. ಇಲ್ಲಿ ಅಷ್ಟೊಂದು ನಿಕೃಷ್ಟ ಭಾವವಿರದು. ಗುರುಗಳು ಬಂದು ಶುದ್ದೀಕರಣ ಮಾಡಿದ ಬಳಿಕ ಈ ಪ್ರತ್ಯೇಕತೆ ಕೊನೆಗೊಳ್ಳುವುದು.
ಬಾಲಕಿ ಮೈ ನೆರೆಯುತ್ತಲೇ ಆಹಾರ ಏನೂ ಕೊಡದೇ, ಗುರುಗಳಿಗೆ ಬಿನ್ನಹ ನೀಡಲಾಗುವುದು. ಅವರು ಬರುತ್ತಲೇ ಸ್ನಾನ ಮಾಡಿ ತಮ್ಮ ಪಾದೋದಕ ಕೊಡುವರು. [3] ಈ ಕಾಲಕ್ಕೆ ತಕ್ಕಂತೆ ಮಂತ್ರಸಹಿತವಾಗಿ ಹಸ್ತೋದಕ ಮಾಡಿಕೊಡುವುದು ಸೂಕ್ತ. ಸಕಾಲದಲ್ಲಿ ಗುರುಗಳು ಸಿಕ್ಕಲಿಕ್ಕಿಲ್ಲ. ಆಗ ತಾಯಿ, ಅಜ್ಜಿ ಮುಂತಾದ ಹಿರಿಯರೇ ಮಂತ್ರೋದಕ ಮಾಡಬೇಕು.
ಆ ಮಂತ್ರೋದಕವನ್ನು ಸ್ನಾನದ ನೀರಿನಲ್ಲಿ ಬೆರೆಸಿ, ಅಭ್ಯಂಗನ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸಿ, ಮಡಿ ಬಟ್ಟೆಗಳನ್ನುಡಿಸಿ, ಪೂಜಾಗೃಹಕ್ಕೆ ಕರೆತರಬೇಕು.
ಮೊದಲೇ ದೀಕ್ಷೆಯಾಗಿದ್ದರೆ ಗುರುಗಳು ತಮ್ಮ ಪೂಜೆಯ ಜೊತೆಗೆ ಆ ಬಾಲಕಿಯ ಇಷ್ಟಲಿಂಗಕ್ಕೂ ಪೂಜೆ ಮಾಡಿಸುವರು. ನಂತರ ಇಷ್ಟಲಿಂಗ ತೀರ್ಥವನ್ನು ಆಕೆಯ ಮೇಲೆ ಸಿಂಪಡಿಸಿ, ಆಶೀರ್ವಾದಪೂರ್ವಕವಾಗಿ ಭಸ್ಮ ಧರಿಸಿ, ತಲೆಯ ಮೇಲೆ ಕೈಯಿಟ್ಟು ಓಂ ಲಿಂಗಾಯ ನಮಃ, ಓಂ ಶ್ರೀ ಗುರುಬಸವಲಿಂಗಾಯ ನಮಃ' ಮಂತ್ರಗಳನ್ನು ಉಚ್ಚರಿಸುವರು. ನಂತರ ಬಾಲಕಿಯ ಇಷ್ಟಲಿಂಗದ ಮೇಲೆ ಮೂರು ಬಾರಿ ತೀರ್ಥ ಎರೆದು ಕರುಣ ಪ್ರಸಾದ ಕೊಡುವರು. ನಂತರ ಆಕೆ ಶ್ರೀ ಬಸವೇಶ್ವರರಿಗೆ ಪೂಜೆ ಸಲ್ಲಿಸಿ ೧೦೮ ಬಸವಲಿಂಗ ಮಂತ್ರಪಠಣ ಮಾಡಿ ಪುಷ್ಪಗಳನ್ನು ಏರಿಸುವಳು. ಗುರುಗಳು ಇತರ ಎಲ್ಲರಿಗೆ ತೀರ್ಥಪ್ರಸಾದ ಕೊಟ್ಟನಂತರ ಮಹಾಮಂಗಲವಾಗುವುದು.
ಈ ಮೊದಲು ದೀಕ್ಷೆಯಾಗಿರದೇ ಇದ್ದರೆ ಈಗ ದೀಕ್ಷೆಯನ್ನು ಮಾಡಬೇಕು. (ಲಿಂಗದೀಕ್ಷೆಯ ವಿವರಗಳಿಗೆ ಇಷ್ಟಲಿಂಗದೀಕ್ಷೆ ಎಂಬ ಮುಂದಿನ ಅಧ್ಯಾಯ ನೋಡಿರಿ)
ಬಾಲಕಿಯು ಪ್ರಥಮಬಾರಿಗೆ ರಜಸ್ವಲೆಯಾದಾಗ ಕೆಲವು ಜನರು, ರಜೋ ವಿಸರ್ಜನೆ ನಿಲ್ಲುವವರೆಗೆ ೩, ೫, ೭ ದಿವಸಗಳ ಕಾಲ ಆಕೆಯನ್ನು ಹೊರಗೇ ಕುಳ್ಳಿರಿಸಿ, ದೂರದಿಂದ ಊಟ-ನೀರು ಕೊಟ್ಟು, ರಜೋ ವಿಸರ್ಜನೆ ನಿಂತ ಮೇಲೆ ಗುರುಗಳನ್ನು ಆಹ್ವಾನಿಸಿ ದೀಕ್ಷೆಯಾಗಿರದಿದ್ದರೆ ದೀಕ್ಷೆಯನ್ನು, ದೀಕ್ಷೆಯಾಗಿದ್ದರೆ ಕರುಣ ಪ್ರಸಾದವನ್ನು ಕೊಡಿಸಿ, “ಒಳಗೆ ಕರೆದುಕೊಳ್ಳುವರು. ಇದು ಶುದ್ಧಾಂಗ ತಪ್ಪು. ವೈದಿಕ ಆಚರಣೆಗಳ ಪ್ರಭಾವ ಗಾಢವಾಗಿ ಇರುವ ಹಳೆಯ ಮೈಸೂರಿನ ಕಡೆ ಇದನ್ನು ಗಮನಿಸಬಹುದು.
ಲಿಂಗವಂತ ಧರ್ಮದಲ್ಲಿ ರಜೆವಿಸರ್ಜನೆ ಎಂಬ ಪ್ರಾಕೃತಿಕ ಕ್ರಿಯೆಯನ್ನು ಸೂತಕವೆಂದು ಪರಿಗಣಿಸಿಲ್ಲ. ಶರೀರವು ಬಾಲ್ಯಾವಸ್ಥೆ ದಾಟಿ ಕನ್ಯೆಯ ಅವಸ್ಥೆಯನ್ನು ಪ್ರವೇಶಿಸುತ್ತಿರುವುದರಿಂದ ಮಾನಸಿಕ ಪರಿವರ್ತನೆಯನ್ನು ತರುವ ದೀಕ್ಷಾ ಸಂಸ್ಕಾರವೂ ಈಗಲೇ ಆಗುವುದು ಸೂಕ್ತ ಎಂಬ ಭಾವವಿದೆ. ದೇವರ ಕೃಪೆಯ ಸಂಕೇತವಾದ `ಕರುಣ ಪ್ರಸಾದ ಸ್ವೀಕಾರದೊಡನೆ ತನ್ನ ಸ್ತ್ರೀ ಜೀವನವನ್ನು ಆರಂಭಿಸಲೆಂಬ ಆಲೋಚನೆ ಇದೆ. ಆದ್ದರಿಂದ ರಜೋವಿಸರ್ಜನೆ ನಿಲ್ಲುವವರೆಗೂ ಕಾಯದೆ, ರಜಸ್ಸು ಕಾಣಿಸಿಕೊಳ್ಳುತ್ತಿದ್ದರಂತೆಯೇ ಬಾಲಕಿಯನ್ನು ಒಂದೆಡೆ ಕುಳ್ಳಿರಿಸಿ, ದೀಕ್ಷಾ ಸಂಸ್ಕಾರ ಕೊಡಿಸಬೇಕು. ದೀಕ್ಷೆಯಾಗಿದ್ದರೆ ಆಶೀರ್ವಾದ - ಕರುಣ ಪ್ರಸಾದ ಕೊಡಿಸಬೇಕು.
ಲಿಂಗಾಯತ ಧರ್ಮದಲ್ಲಿ ರಜಸ್ಸೂತಕ ಆಚರಣೆ ಇಲ್ಲ. ಆದ್ದರಿಂದ ಯಾರೂ ಮುಟ್ಟಿಸಿಕೊಳ್ಳದಂತೆ ಹುಡುಗಿಯರನ್ನು ದೂರವಿರಿಸಬಾರದು. ಗುರುಗಳಿಂದ ಶುದ್ದೀಕರಣ ಅಥವಾ ದೀಕ್ಷೆ ಆದ ಮೇಲೆ ಅವರು ಇಷ್ಟಲಿಂಗಾರ್ಚನೆ, ಬಸವ ಗುರುಪೂಜೆ, ಆಹಾರ ಸ್ವೀಕಾರ ಎಲ್ಲವನ್ನೂ ಮಾಡಬಹುದು. ರಜ ವಿಸರ್ಜನೆ ನಿಲ್ಲುವವರೆಗೂ ಸ್ಥಳ ಬಿಟ್ಟು ಕದಲಬಾರದೆಂದು ಹೇಳಲಾಗುವುದು. ವಿಶ್ರಾಂತಿಯ ಅಗತ್ಯವಿರುವುದರಿಂದ ಇದು ಒಳ್ಳೆಯದು. ಮೊದಲ ಅನುಭವವಾದ್ದರಿಂದ ಒಳ ಬಟ್ಟೆಗಳನ್ನು ಹಾಕುವುದು ಮುಂತಾದ ತರಬೇತಿಯನ್ನು ಹಿರಿಯ ಮಹಿಳೆಯರು ಕೊಡಲು ಅನುಕೂಲವಾಗುವುದು. ಮೈನೆರೆದ ದಿನದಿಂದ ೫ ದಿವಸ ಅಥವಾ ೧೧ ದಿವಸಗಳವರೆಗೆ ಹಿರಿಯ ಮಹಿಳೆಯರು (ಮುತ್ತೈದೆಯರೇ ಮಾಡಬೇಕೆಂಬ ನೇಮವೇನೂ ಇಲ್ಲ) ಎಣ್ಣೆಯನ್ನು ಅರಿಶಿಣ ಸಹಿತವಾಗಿ ಮೈಗೆಲ್ಲ ಹಚ್ಚಿ, ಎಣ್ಣೆ-ನೀರು ಹಾಕುವರು. ಇಷ್ಟಲಿಂಗ ಪೂಜಾ ನಂತರ ವಿಶೇಷವಾದ ಆಹಾರ ಕೊಡುವರು. ಶಾವಿಗೆ, ಸಕ್ಕರೆ, ತುಪ್ಪ, ಹಾಲು, ಕೊಬ್ಬರಿ, ಪರಡಿ ಪಾಯಸ, ಖರ್ಜೂರ, ಏಲಕ್ಕಿ, ಬಾದಾಮಿ, ಕಲ್ನಾರು, ದ್ರಾಕ್ಷಿ ಬೆರೆಸಿದ ಮಿಶ್ರಣ, ಭಕ್ಷ್ಯ ಭೋಜ್ಯಗಳನ್ನು ಸಮೀಪದ ಬಂಧು ಬಳಗದವರು, ನೆರೆಮನೆಯವರು, ನೆರೆಯ ಓಣಿಯವರು ಒಬ್ಬೊಬ್ಬರು ಒಂದೊಂದು ಹೊತ್ತು ತಂದುಕೊಡುವರು.
ಈ ಎರಡು ಆಚರಣೆ ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ದೃಷ್ಠಿಯಿಂದ ಮಹತ್ವಪೂರ್ಣ. ಶರೀರದ ಅವಯವಗಳು ಪೂರ್ಣವಾಗಿ ವಿಕಾಸವಾಗುವ ಕಾಲವಾದ್ದರಿಂದ ಮೈಗೆ ಎಣ್ಣೆ ತಿಕ್ಕುವುದು ಸಹಾಯಕವಾಗುವುದು. ಚರ್ಮದ ಕಾಂತಿಯೂ ವರ್ಧಿಸುವುದು. ಹಳ್ಳಿಗಳಲ್ಲಿ ನಿರಂತರವಾಗಿ ದುಡಿಯುವ ಬಡವರ ಮಕ್ಕಳಿಗೆ ಈ ಅಲ್ಪಾವಧಿ ವಿಶ್ರಾಂತಿ, ಉಪಚಾರ, ಬಂಧು ಬಳಗ, ನೆರೆಮನೆಗಳವರ ಭೋಜನದಿಂದ ಸ್ವಲ್ಪ ಮೈತುಂಬಿಕೊಳ್ಳಲು ಅವಕಾಶ ದೊರೆಯುವುದು. ಎಷ್ಟೇ ಬಡವರಿದ್ದರೂ ಸ್ವಾಭಿಮಾನದಿಂದಾಗಿ, ಇನ್ನೊಬ್ಬರ ಮನೆಯ ಊಟಕ್ಕೆ ಕೈ ಚಾಚಲು ಸಾಧ್ಯವಾಗದು. ಆದರೆ, ಈ ನಿಮಿತ್ತವಾಗಿ ಅದೊಂದು ಸಂಪ್ರದಾಯವೆಂಬಂತೆ ಇತರರು ಊಟ ಕೊಟ್ಟಾಗ ತೆಗೆದುಕೊಳ್ಳಲು ಮುಜುಗರವಾಗದು.
ಆರತಿ
ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಉಳಿದು, ಪಟ್ಟಣ - ನಗರಗಳಲ್ಲಿ ಆರತಿ ಮಾಡುವ ಪದ್ಧತಿ ಈಗ ನಶಿಸಿ ಹೋಗುತ್ತಿದೆ. ಐದನೆಯ ದಿನದಿಂದ ಕನ್ಯೆಗೆ ಚೆನ್ನಾಗಿ ಅಲಂಕಾರ ಮಾಡಿ ದಿನನಿತ್ಯ ಸಂಜೆಯ ವೇಳೆ ಕೂರಿಸುವರು. ಬಗೆಬಗೆಯ ಅಲಂಕಾರ ಮಾಡುವುದುಂಟು. ಆಗ ಗೆಳತಿಯರು, ಬಂಧುಗಳು, ಬಂದು ಬಗೆಬಗೆಯ ಭಕ್ಷ್ಯಗಳನ್ನು ತಿನ್ನಿಸಿ, ಆರತಿ ಬೆಳಗಿ, ಮುಖ್ಯ (ಕೊಡುಗೆ, ಆಹೇರು) ಗಳನ್ನು ಕೊಡುವರು. ಇಂಥ ವೇಷಧಾರಣೆ ಮತ್ತು ಆರತಿ ೧೬ ದಿವಸಗಳವರೆಗೆ ನಡೆಯುವುದುಂಟು.
ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮ. ಹಾಗೆ ಆರತಿ ಕೂಡಿಸುವುದಿದ್ದರೆ, ಸಮೀಪದಲ್ಲಿ ಒಂದು ಮಂಟಪ ಮಾಡಿ, ಆದಿ ಪ್ರಮಥ ಬಸವಣ್ಣನವರ ಭಾವಚಿತ್ರ ಇಟ್ಟು ಪ್ರತಿನಿತ್ಯವೂ ಮೊದಲು ಹುಡುಗಿಯ ಕೈಯಿಂದ ಪೂಜೆ ಮಾಡಿಸಿ, ನಂತರ ಅವಳನ್ನು ಕೂರಿಸುವುದು ಒಳ್ಳೆಯದು.
ಮೈನೆರೆದುದನ್ನು ಇಷ್ಟು ಸುದ್ದಿಯಾಗಿ ಮಾಡುವ ಹಿನ್ನೆಲೆ ಎಂದರೆ ಇನ್ನು ಕೊಡುವ - ಕೊಳ್ಳುವ ವ್ಯವಹಾರಕ್ಕೆ ಒಬ್ಬ ವ್ಯಕ್ತಿ ಸಿದ್ಧವಾಗಿದ್ದಾಳೆ. ಮದುವೆ ಮಾಡಿಕೊಳ್ಳುವವರು ಕೇಳಲು ಬರಬಹುದು ಎಂಬುದನ್ನು ಪ್ರಸಿದ್ಧಪಡಿಸುವುದೇ ಆಗಿದೆ. ಬಾಲ್ಯ ವಿವಾಹಗಳಲ್ಲಿ ಮೈನೆರೆವ ಪೂರ್ವದಲ್ಲೇ ಮಾಂಗಲ್ಯಧಾರಣೆ ಆಗಿಯೇ ಬಿಟ್ಟಿದ್ದರೂ, ಹುಡುಗಿಯನ್ನು ತೌರಿನಲ್ಲೇ ಇರಿಸಿಕೊಂಡಿರುತ್ತಾರೆ. ಪುಷ್ಪವತಿಯಾದ ಮೇಲೆಯೇ ಕಳಿಸುವುದರಿಂದ ಈ ಸುದ್ದಿಯನ್ನು ಗಂಡನ ಮನೆಗೆ ತಿಳಿಸುವುದು ಅವರಿಗೆ ಅಗತ್ಯವೆನಿಸುತ್ತದೆ.
ಮದುವೆಯೊಂದೇ ಪರಮ ಸಾಧನ, ಧೈಯ-ಸಿದ್ದಿ ಎಲ್ಲವೂ ಆಗಿರುವ ಗ್ರಾಮಾಂತರ ಜನಜೀವನದಲ್ಲಿ ಮೈನೆರೆದ ಸುದ್ದಿ ಹಬ್ಬಿಸುವುದು ಅವಶ್ಯಕ ಎನಿಸಿದ್ದರೂ, ಪಟ್ಟಣಗಳಲ್ಲಿ ಇದು ಅಗತ್ಯವಿಲ್ಲವಾಗಿ ತೋರುತ್ತಿದೆ. ಈಗಂತೂ ಪುಷ್ಟವಾದ ಆಹಾರ, ಸುಧಾರಿಸಿದ ಜೀವನಮಟ್ಟದಿಂದ ಹುಡುಗಿಯರು ತುಂಬ ಬೇಗ ಬೇಗ ಬೆಳೆದು ಋತುಮತಿಯಾಗುತ್ತಾರೆ. ಈ ವಯಸ್ಸಿಗೆ ಮದುವೆ ಮಾಡುವುದನ್ನು ನಗರವಾಸಿಗಳು ಕಲ್ಪನೆ ಸಹ ಮಾಡಿಕೊಳ್ಳರು. ಗಂಡು ಮಕ್ಕಳಿಗೆ ವಿದ್ಯೆ, ಉದ್ಯೋಗ, ಸ್ವಾವಲಂಬನೆ ಅಗತ್ಯವಿದ್ದಂತೆ ಹೆಣ್ಣು ಮಕ್ಕಳಿಗೂ ಅಗತ್ಯವೆನ್ನಿಸತೊಡಗಿದೆ. ಹೀಗಾಗಿ ಈ ಋತುಮತಿಯಾಗುವಿಕೆಯನ್ನು ಊರು, ಕೇರಿಯ ಸುದ್ದಿ ಮಾಡಲು ಹೆತ್ತವರಿಗೂ ಇಷ್ಟವಿರದು, ಹುಡುಗಿಯರಿಗೂ ಇರದು. ಅಲ್ಪಕಾಲಿಕ ವಿಶ್ರಾಂತಿ, ಅಭ್ಯಂಗನ ಸ್ನಾನ, ಉತ್ತಮ ಆಹಾರ ಸ್ವೀಕಾರ, ದೀಕ್ಷಾನುಗ್ರಹ-ಶುದ್ದೀಕರಣ ಮಾತ್ರ ಕಡ್ಡಾಯವಾಗಿ ಗ್ರಾಮ ಮತ್ತು ನಗರವಾಸಿಗಳು ಉಭಯತರೂ ಮಾಡಿದರೆ ಸಾಕು.
ಪ್ರತಿ ತಿಂಗಳೂ ರಜಸ್ವಲೆಯಾಗುವಾಗ, ಮಹಿಳೆಯರಲ್ಲಿ ಮುಟ್ಟು ಕಾಣಿಸಿಕೊಂಡ ಮೇಲೆ ಹಿರಿಯ ಮಹಿಳೆಯರು ತಲೆಯಿಂದ ನೀರನ್ನು ಎರೆದು ಸ್ನಾನ ಮಾಡಿಸುವರು. ಬಚ್ಚಲಿನಲ್ಲಿ ಕುಳಿತು ಸ್ನಾನ ಮಾಡುವಾಗ, ಸ್ನಾನದ ಅಂತ್ಯ ಭಾಗದಲ್ಲಿ ಕರಡಿಗೆ ಬಿಚ್ಚಿ, ಅದರೊಳಗಿನ ಇಷ್ಟಲಿಂಗಕ್ಕೆ ನೀರೆರೆಸಿಕೊಂಡು ಎಡಗೈಯಲ್ಲಿ ಕರಡಿಗೆಯನ್ನು ಭದ್ರವಾಗಿ ಹಿಡಿದು ಬಲಗೈ ಅಂಗೈಗೆ ಕರಡಿಗೆಯಿಂದ ಲಿಂಗೋದಕವನ್ನು ಬಗ್ಗಿಸಿ ಆ ನೀರನ್ನು ಮಹಿಳೆಯು ತಲೆಯ ಮೇಲೆ ಹಾಕಿಕೊಳ್ಳಬೇಕು. ಇದು ಬಹಳ ಅರ್ಥಗರ್ಭಿತವಾದ ಆಚರಣೆ, ಬಟ್ಟೆಯಲ್ಲಿ ಇಷ್ಟಲಿಂಗವನ್ನು ಧರಿಸಿದವರು ಲಿಂಗಸಹಿತವಾಗಿ ಹಿಂಡಿದಾಗ ಬರುವ ಲಿಂಗೋದಕವನ್ನು ನೆತ್ತಿಯ ಮೇಲೆ ಸಿಂಪಡಿಸಿಕೊಳ್ಳಬೇಕು. ಇದು ಮಾಸಿಕ ಶುದ್ದೀಕರಣ ಕ್ರಿಯೆ.
ತುಂಬಿಯೊಂದು ಬಂದಿತಲ್ಲಾ ವಾಮಕರದ ಕಮಲದೊಳಗೆ
ತುಂಬಿ ತಾನು ನಿಂದಿತಲ್ಲಾ ತನುಮನ ಭಾವತ್ರಯವ |
ಶಂಭುಲಿಂಗ ತುಂಬಿ ಬಂದು ಕರಕಮಲ ತುಂಬಿ ನಿಂತು
ಕಣ್ಣುನೋಟ ತುಂಬಿಕೊಂಡು ಸವಿವ ಮನವ ತುಂಬಿತಲ್ಲಾ
ನೋಡ್ವ ಕಣ್ಣು ತುಂಬಿಕೊಂಡು ಭಾವ ತುಂಬಿ ಭಕ್ತಿ ತುಂಬಿ
ಹೊರ ಒಳಗೆ ತಾನು ತುಂಬಿ, ತುಂಬಿತುಂಬಿ ಮನಾಂಬುಜೆಯ
ತುಂಬಿಯಂತೆ ಮಾಡಿತಲ್ಲಾ ಎನ್ನಿರವ ಕೊಂಡೊಯ್ದು
ಝೆಂಕಾರ ನುಡಿಸುವ ತುಂಬಿ ವಿಜೃಂಬಣೆ
ಸಚ್ಚಿದಾನಂದಾ ಹೊನಲು ತುಂಬಿತ್ತು. -ಮಾತೆ ಮಹಾದೇವಿ