Previous ಬಸವೇಶ್ವರ ಪೂಜಾವ್ರತ ಅಧ್ಯಾಯ - ೫ ಲಿಂಗಾಯತ ಧರ್ಮ ಮತ್ತು ಇಷ್ಟಲಿಂಗಪೂಜೆ Next

ಲಿಂಗಾಯತ ಧರ್ಮದ ಲಾಂಛನಗಳು

✍ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

ಪಂಚಕೋನ - ಷಟ್ಕೋನ ಚಿತ್ರಗಳ ಅರ್ಥ

ಪ್ರತಿಯೊಂದು ಧರ್ಮವೂ ತನ್ನದೇ ಆದ ಕೆಲವು ಸಾಂಕೇತಿಕ ಚಿತ್ರಗಳನ್ನು ಲಾಂಛನಗಳನ್ನು ಹೊಂದಿರುತ್ತದೆ. ಲಿಂಗಾಯತ ಧರ್ಮದಲ್ಲಿ ಕಾಣಬರುವ ಅಂಥ ಎರಡು ಚಿತ್ರಗಳೆಂದರೆ 1. ಪಂಚಕೋನ ಪ್ರಣವ ಮತ್ತು 2. ಷಟ್‌ಕೋನ ಬಸವಲಿಂಗ ಮುದ್ರೆ,

ಪಂಚಕೋನ ಪ್ರಣವವು ಸೃಷ್ಟಿಕರ್ತ ಪರಮಾತ್ಮ ಲಿಂಗದೇವನ ಸಂಕೇತ
ಪಂಚಕೋನ ಪ್ರಣವದ ಚಿತ್ರ

ಪಂಚಕೋನ ಪ್ರಣವವು ಸೃಷ್ಟಿಕರ್ತ ಪರಮಾತ್ಮ ಲಿಂಗದೇವನ ಸಂಕೇತ. ಇದರ ಅರ್ಥವೇನೆಂದರೆ

1. ಓಂಕಾರ ಸ್ವರೂಪಿಯೂ, ಸಚ್ಚಿದಾನಂದ ನಿತ್ಯ ಪರಿಪೂರ್ಣನೂ ಆದ ಪರಮಾತ್ಮನೇ ಈ ಸೃಷ್ಟಿಯ ಕೇಂದ್ರಬಿಂದು.

2. ಲಿಂಗಾಯತ ಧರ್ಮದಲ್ಲಿ ದೇವಸೂಚಕವಾದ ಪವಿತ್ರ ಮಂತ್ರವೆಂದರೆ ಓಂ ಲಿಂಗಾಯ ನಮಃ ಮಧ್ಯದಲ್ಲಿ ಓಂ ಬಂದು ಐದು ಕೋನಗಳಲ್ಲಿ ಲಿಂಗಾಯ ನಮಃ ಎಂಬ ಐದಕ್ಷರಗಳು ಬರುವುದರಿಂದ ಪಂಚಕೋನ ಪ್ರಣವವು ಮಂತ್ರ ಸೂಚಕವು ಅಹುದು.

3. ಈ ಚಿತ್ರವು ಜೀವಾತ್ಮ ಸೂಚಕವೂ ಅಹುದು. ಮೇಲಿನ ಶೃಂಗ ಕೋನವು ಶಿರಸ್ಸನ್ನು, ಮೇಲಿನ ಎಡ-ಬಲಬದಿಯ ಕೋನಗಳು ಎರಡು ಭುಜಗಳನ್ನು, ಮಧ್ಯದ ಕೇಂದ್ರವು ಹೃದಯವನ್ನು, ಕೆಳಗಿನ ಎಡ ಮತ್ತು ಬಲ ಬದಿಯ ಕೋನಗಳು ತೊಡೆಗಳನ್ನು ಸಂಕೇತಿಸಿ, ಶಾಂಭವಿ ಮುದ್ರೆಯಲ್ಲಿ ಧ್ಯಾನಕ್ಕೆ ಕುಳಿತ ವ್ಯಕ್ತಿಯ ಸೂಚಕವಾಗಿದೆ.

ಲಿಂಗದೇವ ಸೂಚಕವಾದ ಪಂಚಕೋನ ಪ್ರಣವವನ್ನು ವಿಭೂತಿ ಶುದ್ಧಿ ಮಾಡಲು, ಇಷ್ಟಲಿಂಗಕ್ಕೆ ಮಜ್ಜನವನ್ನು ಎರೆದ ನಂತರ ಅದನ್ನು ಪೂಜೆಗೆ ಅಂಗೈಯಲ್ಲಿಟ್ಟುಕೊಳ್ಳುವ ಮೊದಲು ಅಂಗೈಯಲ್ಲಿ ಬರೆಯಲು ಉಪಯೋಗಿಸಬೇಕು. ಪಂಚಕೋನದ ಅರ್ಥವನ್ನು ಸಾರ ರೂಪದಲ್ಲಿ ಹೀಗೆ ಬರೆದಿದ್ದೇನೆ.

ಪಂಚ ಭೂತಾತ್ಮಕ ಬ್ರಹ್ಮಾಂಡಕಾಧಾರ
ಪಂಚಾಕ್ಷರಿ ಪ್ರಣವ ಪ್ರತ್ಯಕ್ಷರೂಪ
ಶಾಂಭವಿ ಮುದ್ರೆಯ ಪ್ರತಿರೂಪ ತಾನಾದ
ಶುಭ ಪಂಚಕೋನವ ಅಂಗೈಲಿ ಬರೆವೆ ||

ಷಟ್ಕೋನ ಸಹಿತ ಬಸವ ಧ್ವಜ ಲಾಂಛನ

ಷಟ್ಕೋನ ಸಹಿತ ಬಸವ ಧ್ವಜ ಲಾಂಛನ
ಪ್ರತಿಯೊಂದು ಧರ್ಮವೂ ತನ್ನದೇ ಆದ ಗಣಲಾಂಛನ (Community Symbol) ವನ್ನು ಹೊಂದಿದೆ. ಹಿಂದುಗಳಿಗೆ ಓಂಕಾರ, ಬೌದ್ಧರಿಗೆ ಧರ್ಮಚಕ್ರ, ಕ್ರೈಸ್ತರಿಗೆ ಶಿಲುಬೆ, ಮುಸಲೀಮರಿಗೆ ಅರ್ಧಚಂದ್ರ-ನಕ್ಷತ್ರ, ಸಿಬ್ಬರಿಗೆ ಎರಡು ಕತ್ತಿ-ಢಾಲು ಗಣಲಾಂಛನಗಳಾದ ಲಿಂಗಾಯತ ಧರ್ಮಕ್ಕೆ ಷಟ್‌ಕೋನ ಸಹಿತ ಬಸವಲಿಂಗ ಮುದ್ರೆಯೇ ಗಣಲಾಂಛನ.

ಒಂದು ಪೂರ್ಣ ವೃತ್ತ. ಅದರಲ್ಲಿ ಎರಡು ತ್ರಿಕೋನಗಳು, ಮಧ್ಯೆ ಇಷ್ಟಲಿಂಗ; ಅದರ ಮಧ್ಯೆ ಒಂದು ಬೆಳಕಿನ ಗೋಲ. ಆರು ಕೋನಗಳಲ್ಲಿ ಶ್ರೀ ಗುರುಬಸವ ಎಂಬ ಅರಕ್ಷರಗಳು. ಇದು ಲಿಂಗಾಯತ ಧರ್ಮವನ್ನು ಅತ್ಯಂತ ಸೂಕ್ತವಾಗಿ ಪ್ರತಿನಿಧಿಸುತ್ತದೆ.

೧. ವೃತ್ತ : ಬ್ರಹ್ಮಾಂಡದ ಸಂಕೇತ.

೨. ಎರಡು ತ್ರಿಕೋನಗಳು ಬರುತ್ತವೆ. ಒಂದು ಊರ್ಧ್ವಮುಖವಾಗಿದ್ದರೆ ಇನ್ನೊಂದು ಅಧೋಮುಖವಾಗಿರುತ್ತದೆ. ಊರ್ಧ್ವಮುಖವಾದ ತುದಿಯುಳ್ಳ ತ್ರಿಕೋನವು ಆಚಾರ-ಅರಿವು-ಅನುಭಾವಗಳನ್ನು ಸಂಕೇತಿಸುತ್ತದೆ.

ಅಧೋಮುಖಿಯಾದ ತುದಿಯಿರುವ ತ್ರಿಕೋನವು ಗುರು-ಲಿಂಗ- ಜಂಗಮ ತತ್ತ್ವಗಳನ್ನು ಸಂಕೇತಿಸುತ್ತದೆ. ವ್ಯಕ್ತಿಯಲ್ಲಿ ಆಚಾರ ಅಳವಡಲು ಗುರು, ಅರಿವು ಅಳವಡಲು ಲಿಂಗ, ಅನುಭಾವ ಅಳವಡಲು ಜಂಗಮ ಸಹಾಯಕ ಸಾಧನಗಳಾಗುತ್ತವೆ. ಆಚಾರ-ಅರಿವು-ಅನುಭಾವ ಅಳವಟ್ಟಂತೆಲ್ಲ ಗುರು-ಲಿಂಗ-ಜಂಗಮಗಳ ಅನುಗ್ರಹವು ಜ್ಞಾನಾತ್ಮಕವಾಗಿ ಪ್ರಾಪ್ತಿಯಾಗುತ್ತದೆ.
ಊರ್ಧ್ವಮುಖವಾದ ತುದಿಯುಳ್ಳ ತ್ರಿಕೋನವು ಆಚಾರ-ಅರಿವು-ಅನುಭಾವಗಳನ್ನು ಸಂಕೇತಿಸುತ್ತದೆ ಅಧೋಮುಖಿಯಾದ ತುದಿಯಿರುವ ತ್ರಿಕೋನವು ಗುರು-ಲಿಂಗ- ಜಂಗಮ ತತ್ತ್ವಗಳನ್ನು ಸಂಕೇತಿಸುತ್ತದೆ.

೩. ಮಧ್ಯದ ಇಷ್ಟಲಿಂಗ : ಈ ಬ್ರಹ್ಮಾಂಡದ ಕೇಂದ್ರ ಶಕ್ತಿ ಸೃಷ್ಟಿಕರ್ತ ಪರಮಾತ್ಮ, ಅವನು ಪ್ರಕಾಶ ಸ್ವರೂಪನು. ಇಂಥ ನಿರಾಕಾರ ಲಿಂಗದೇವನನ್ನು ಇಷ್ಟಲಿಂಗ ರೂಪದಲ್ಲಿ ಚುಳುಕಾಗಿಸಿಕೊಂಡು ಪೂಜಿಸುವುದೇ ಲಿಂಗಾಯತ ಧರ್ಮದ ಪ್ರಮುಖ ಆಚರಣೆ.

೪. ಆರು ಕೋನಗಳು: ಷಟ್‌ತತ್ವಗಳ ಸಂಕೇತ.

೧) ಷಡ್‌ಭೂತಗಳು : ಪೃಥ್ವಿ-ಅಪ್-ತೇಜ-ವಾಯು-ಆಕಾಶ-ಆತ್ಮ
೨) ಷಟ್‌ಸ್ಥಲಗಳು : ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ
೩) ದೇವಮಂತ್ರ : ಓಂ ಲಿಂಗಾಯ ನಮಃ
೪) ಗುರುಮಂತ್ರ : ಶ್ರೀ ಗುರು ಬಸವ
೫) ಷಡ್ವಿಧ ಭಕ್ತಿ : ಶ್ರದ್ಧಾ, ನಿಷ್ಠಾ, ಅವಧಾನ, ಅನುಭವ, ಆನಂದ, ಸಮರಸ
೬) ಷಟ್‌ಚಕ್ರಗಳು : ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ,
೭) ಷಟ್‌ಶಕ್ತಿಗಳು : ಕ್ರಿಯಾ, ಜ್ಞಾನ, ಇಚ್ಛಾ, ಆದಿ, ಪರಾ, ಚಿಚ್ಛಕ್ತಿ.
೮) ಷಟ್ಟಲೆಗಳು : ನಿವೃತ್ತಿ, ಪ್ರತಿಷ್ಠಾ, ವಿದ್ಯಾ ಶಾಂತಿ, ಶಾಂತ್ಯತೀತ, ಶಾಂತ್ಯತೀತೋತ್ತರ
೯) ಷಡ್ಲಿಂಗಗಳು : ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ
೧೦) ಷಡ್‌ ಸಾಮಾಜಿಕ- ಧ್ಯೇಯಗಳು : ಸಂವೃದ್ಧಿ, ಸಂತೃಪ್ತಿ, ಸರ್ವೋದಯ, ಸೋದರತ್ವ, ಸಮಾನತೆ, ಸಾಮರಸ್ಯ

ಆದ್ದರಿಂದ ಇಷ್ಟಲಿಂಗವೇ ಪ್ರಧಾನವಾದ ಲಾಂಛನವಾಗಿರುವ ಲಿಂಗಾಯತ ಧರ್ಮಕ್ಕೆ ಮಧ್ಯೆ ಇಷ್ಟಲಿಂಗದ ಚಿತ್ರವಿರುವ ಷಟ್‌ಕೋನ ಲಾಂಛನವು ಅತ್ಯಂತ ಸೂಕ್ತವೆನಿಸುತ್ತದೆ. ಷಟ್‌ಕೋನ ಇಷ್ಟಲಿಂಗ ಸಹಿತ ಗಣಲಾಂಛನವನ್ನು ಜೀವನದ ವಿವಿಧ ಕ್ರಿಯೆಗಳಲ್ಲಿ ಅಳವಡಿಸಿಕೊಳ್ಳಬೇಕು.

೧.ಮಠಗಳ ಮೇಲೆ ಮತ್ತು ಮನೆಗಳ ಮುಂಭಾಗದಲ್ಲಿ ಹಾಕಬೇಕು. ತಮ್ಮ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ ಅಂಗಡಿ, ಫ್ಯಾಕ್ಟರಿ ಮೇಲೆ ಹಾಕಬೇಕು.

೨.ವಾಹನಗಳ ಮೇಲೆ ಬರೆಸಬೇಕು. ಸಿಕ್ಕ‌ ಮಾಡಿ ಅಂಟಿಸಿಕೊಳ್ಳಬೇಕು. ಬಸವ ಭಕ್ತರು, ಲಿಂಗಾಯತರು ಹೊಂದಿರುವ ಸಾರಿಗೆ ವಾಹನಗಳ ಮೇಲೆ ಈ ಚಿತ್ರವನ್ನು ಬರೆಸಬೇಕು..

೩. ವಿವಿಧ ಆಹ್ವಾನ ಪತ್ರಿಕೆಗಳ ಮೇಲೆ ಮುದ್ರಿಸಬೇಕು.

ಈ ಪ್ರಚಾರ ಕಾರ್ಯದಲ್ಲಿ ಶರಣ ಬಂಧುಗಳು ಸಿಕ್ಕರ್‌ಗಳನ್ನು ಮಾಡಿಸಿ ಅಥವಾ ಖರೀದಿಸಿ ಪರಿಚಿತರು, ಬಂಧು, ಮಿತ್ರರ ಮನೆಗಳಲ್ಲಿ, ಮನೆಗಳ ತಲೆ ಬಾಗಿಲಲ್ಲಿ ಅಂಟಿಸುವ ಮೂಲಕ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಆಶಿಸುತ್ತೇವೆ.

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previous ಬಸವೇಶ್ವರ ಪೂಜಾವ್ರತ ಅಧ್ಯಾಯ - ೫ ಲಿಂಗಾಯತ ಧರ್ಮ ಮತ್ತು ಇಷ್ಟಲಿಂಗಪೂಜೆ Next