Previous ಶರಣದೀಕ್ಷೆ - ಶರಣಮೇಳವ್ರತ ಸ್ವೀಕಾರ ಸಾಭಾರಿ ಮತ್ತು ನಿರಾಭಾರಿ ಜಂಗಮ Next

ಜಂಗಮ ದೀಕ್ಷಾ ಸಂಸ್ಕಾರ

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಜಂಗಮ ದೀಕ್ಷೆಯ ಕ್ರಮ

ಜಂಗಮನ ಲಕ್ಷಣಗಳೇನು ಎಂಬುದನ್ನು ಈ ಸನ್ನಿವೇಶದಲ್ಲಿ ವಿವರಿಸದೆ ನೇರವಾಗಿ ಸಂಸ್ಕಾರವನ್ನು ಕುರಿತು ಪ್ರಸ್ತಾಪಿಸುತ್ತೇನೆ. ಸ್ವಯಂ ಪ್ರೇರಣೆಯಿಂದ ದಿವ್ಯವಾದ ವೈರಾಗ್ಯ ಜೀವನವನ್ನು ಆರಿಸಿಕೊಳ್ಳುವ ಮುಮುಕ್ಷುವನ್ನು ಗುರುವು ಜಂಗಮ ದೀಕ್ಷೆಗಾಗಿ ಅಣಿಮಾಡಬೇಕು.

ಅನುಕೂಲಕರವಾದ ಒಂದು ದಿವಸವನ್ನು ನಿಗದಿಪಡಿಸಬೇಕು. ಬಸವ ಜಯಂತಿ, ಬಸವ ಪಂಚಮಿ, ಅಕ್ಕನ ಜಯಂತಿ, ಅಲ್ಲಮ ಪ್ರಭು ಜಯಂತಿ - ಹೀಗೆ ಮಹತ್ವಪೂರ್ಣ ದಿನಗಳನ್ನು ಆರಿಸಿಕೊಳ್ಳಬೇಕು. ಒಂದು ವೇಳೆ ಅತ್ಯವಸರವಿದ್ದರೆ ಎಂದಾದರೂ ಮಾಡಬಹುದು.

ಪೂರ್ವಭಾವಿ ಅನುಷ್ಠಾನ: ಮುಮುಕ್ಷುವು ದೀಕ್ಷೆಗೆ ಪೂರ್ವದಲ್ಲಿ ಕನಿಷ್ಠ ೧೫ ದಿವಸ ಕಾಲ ಅನುಷ್ಠಾನ ಮಾಡಬೇಕು. ಬೆಳಿಗ್ಗೆ -ರಾತ್ರಿ ಎರಡೂ ಹೊತ್ತು ಸ್ನಾನ ಮತ್ತು ಇಷ್ಟಲಿಂಗಾರ್ಚನೆ; ನಂತರ ಸಾತ್ವಿಕವಾದ ಸಪ್ಪೆ ಆಹಾರ ಸ್ವೀಕರಿಸಬೇಕು. ಇಡೀ ದಿನ ಮಂತ್ರಜಪ ಮತ್ತು ಧರ್ಮ ಗ್ರಂಥ ಪಾರಾಯಣ ಮಾಡಬೇಕು. ಬೇರಾವ ಲೌಕಿಕ ಮಾತು ಅವಕಾಶ ನೀಡಬಾರದು. ರಾತ್ರಿ ಮಲಗುವಾಗ ಗುರುಮಂತ್ರ - ದೇವಮಂತ್ರಗಳನ್ನು ಧ್ಯಾನಿಸುತ್ತ ನಿದ್ರಿಸಬೇಕು. ದೇವರ ಮತ್ತು ಧರ್ಮಗುರುವಿನ ಕೃಪೆಗಾಗಿ ಹಂಬಲಿಸುತ್ತಿರಬೇಕು.

ಜಂಗಮ ದೀಕ್ಷೆಯ ಹಿಂದಿನ ದಿನ ಪೂರ್ಣ ನಿರಾಹಾರ ಪಾಲಿಸಬೇಕು. ಇಷ್ಟಲಿಂಗಾರ್ಚನೆ ಬಸವೇಶ್ವರ ಪೂಜಾವ್ರತ ಮಾಡಿ, ಮೌನದಿಂದಿದ್ದು ಯಾರೊಡನೆಯು ಮಾತನಾಡಬಾರದು. ಜಪ-ಅಧ್ಯಯನ-ಧ್ಯಾನದಲ್ಲಿ ನಿರತವಾಗಿರಬೇಕು. ದೀಕ್ಷೆಯ ಹಿಂದಿನ ದಿನ ಅಥವಾ ಅಂದೇ ಬೆಳಿಗ್ಗೆ ಕ್ಷೌರಿಕನನ್ನು ಕರೆಸಿ, ಸಂಪೂರ್ಣವಾಗಿ ತಲೆಕೂದಲನ್ನು ತೆಗೆಸಿಕೊಳ್ಳಬೇಕು. ಹೆಣ್ಣು ಮಕ್ಕಳು ಜಂಗಮ ದೀಕ್ಷೆ ಪಡೆಯುವಾಗ ಈ ನಿಯಮಕ್ಕೆ ರಿಯಾಯಿತಿಯುಂಟು. ಜಂಗಮದೀಕ್ಷೆ ಪಡೆದಾನಂತರ ಜಟೆ-ಗಡ್ಡಗಳನ್ನು ಬೆಳೆಸಬೇಕೆಂದರೆ ಅದಕ್ಕೆ ಅವಕಾಶವಿದೆ. ದೀಕ್ಷಾ ಸಮಯದಲ್ಲಿ ಮಾತ್ರ ಸಂಪೂರ್ಣವಾಗಿ ತೆಗೆಸಬೇಕು.

ದೀಕ್ಷೆಯನ್ನು ನೀಡಲಿರುವ ಗುರುವು ತಾನು ಸ್ನಾನ - ಪೂಜೆ ಮುಗಿಸಿ ಇಷ್ಟಲಿಂಗ ತೀರ್ಥವನ್ನು ಸಂಗ್ರಹಿಸಬೇಕು. ಗುರುಬಸವ ಮಂತ್ರದೊಡನೆ ಹಸ್ತೋದಕ (ಬಸವ ತೀರ್ಥ) 'ಸಿದ್ಧಪಡಿಸಬೇಕು. ಒಬ್ಬರು ಗುರುವಿನ ಪಾದಗಳನ್ನು ತೊಳೆದು ಆ ನೀರನ್ನು ಸಂಗ್ರಹಿಸಬೇಕು. ಇಷ್ಟರಲ್ಲಿ ವಟುವಿಗೆ ಮೈಯೆಲ್ಲ ಎಣ್ಣೆಯನ್ನು ತಿಕ್ಕಿರಬೇಕು. ಸಂಪ್ರದಾಯದಂತೆ ಗುರುವು ತನ್ನ ಪಾದವನ್ನು ವಟುವಿನ ತಲೆಯ ಮೇಲೆ ಇಟ್ಟು ನೀರೆರೆಯುವ ಪದ್ಧತಿ ಇದೆ. ಇದರಲ್ಲಿ ಬದಲಾವಣೆ ಅಗತ್ಯ. ಮೇಲೆ ತಿಳಿಸಿರುವಂತೆ ಪಾದೋದಕ ಸಂಗ್ರಹಿಸಿದರೆ ಸಾಕು. ಗುರು-ಲಿಂಗ-ಜಂಗಮ ತೀರ್ಥವನ್ನು ಒಂದು ತಂಬಿಗೆಗೆ ಹಾಕಿ ಗುರುವಿನ ಕೈಗೆ ಕೊಡಬೇಕು. ಅವರು ವಿಭೂತಿಯನ್ನು ಬಲಗೈಗೆ ಸವರಿಕೊಂಡು ೧೨ ಬಾರಿ ಬಸವಲಿಂಗ ಮಂತ್ರವನ್ನು ಪಠಿಸಿ, ತಂಬಿಗೆಯೊಳಗೆ ಷಟ್ಕನ ಬರೆದು ಓಂ ಶ್ರೀ ಗುರು ಬಸವ ಲಿಂಗಾಯನಮಃ ಹೇಳುತ್ತ ಬೆರಳುಗಳನ್ನು ನೀರಿನಲ್ಲಿ ಅದ್ದಿ, ಈ ಪವಿತ್ರ ಜಲವನ್ನು ಬಿಸಿ ನೀರು ಇರುವ ಕೊಳಗಕ್ಕೆ ಬೆರೆಸುವರು. ನಂತರ ಬಸವ ಸ್ತುತಿಗಳನ್ನು ಹೇಳುತ್ತ ೩ ತಂಬಿಗೆ ನೀರನ್ನು ವಟುವಿನ ಮಸ್ತಕದ ಮೇಲೆ ಎರೆಯುವರು. ಜೊತೆಗಿರುವ ಸಾಧಕರು ಸೀಗೇಕಾಯಿ ಮುಂತಾಗಿ ಹಚ್ಚಿ ಸ್ನಾನವನ್ನು ಪೂರ್ತಿ ಮಾಡಿಸುವರು. ವಟುವು ಮಡಿ ವಸ್ತ್ರಗಳನ್ನುಟ್ಟು ದೀಕ್ಷಾ ಮಂಟಪಕ್ಕೆ ಬರುವನು.

ಗುರುಗಳು ತಾವು ಮತ್ತೊಮ್ಮೆ ಸ್ನಾನ ಮಾಡಿ ದೀಕ್ಷಾ ಮಂಟಪಕ್ಕೆ ಬರುವರು.

ಸ್ನಾನವನ್ನು ಮಾಡಿದ ಭಕ್ತನು ಮಡಿವಸ್ತ್ರಗಳನ್ನು ಉಟ್ಟು ಹಣೆಗೆ ಭಸ್ಮಧರಿಸಿ, ಒಂದು ತಟ್ಟೆಯಲ್ಲಿ ಪೂಜಾಸಾಮಗ್ರಿಗಳನ್ನು ಹೊಂದಿಸಿಕೊಂಡು ಪೂಜಾಗೃಹವನ್ನು ಪ್ರವೇಶಿಸಬೇಕು. ತಟ್ಟೆಯಲ್ಲಿ ಹಣ್ಣು, ಊದಿನಕಡ್ಡಿ, ಕರ್ಪೂರ, ಪತ್ರೆ, ಪುಷ್ಪ, ದೀಕ್ಷೆಯ ಪ್ರತಿಜ್ಞಾವಿಧಿ, ದೀಕ್ಷಾ ಕಾಣಿಕೆ, ಗುರುಗಳಿಗೆ ಲಿಂಗದ ವಸ್ತ್ರ, ಭಸ್ಮದ ಗಟ್ಟಿ, ರುದ್ರಾಕ್ಷಿ, ಕಲ್ಲು ಸಕ್ಕರೆ ಹೊಂದಿಸಿಕೊಂಡು ಬಂದು ಜಂಗಮದೀಕ್ಷಾನುಗ್ರಹ ನೀಡಲಿರುವ ಗುರುಗಳ ಎದುರಿನಲ್ಲಿಟ್ಟು ಸಾಷ್ಟಾಂಗ ನಮಸ್ಕಾರವನ್ನು ಮಾಡಬೇಕು. ಮೇಲೆದ್ದು ಹೀಗೆ ನುಡಿಯಬೇಕು.

ಸಂಸಾರವೆಂಬುದೊಂದು ಹಗೆಯಯ್ಯಾ ಎನ್ನ ತಂದೆ
ಎನ್ನ ವಂಶವಂಶದಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯಾ
ಎನ್ನುವನರಸಿಯರಸಿ ಹಿಡಿದು ಕೊಲ್ಲುತ್ತಿದೆಯಯ್ಯಾ
ನಿನ್ನ ನಾ ಮೊರೆಹೊಕ್ಕೆ ಕಾಯಯ್ಯಾ
ಎನ್ನ ಬಿನ್ನಪವನವಧಾರು ಚನ್ನಮಲ್ಲಿಕಾರ್ಜುನಾ.

ಮಹಾಮಹಿಮರಾದ ಗುರುಗಳೇ ಸಂಸಾರ, ಲೌಕಿಕ ಬಂಧನವು ದುಃಖಕಾರಕವೆಂದು ಇದನ್ನು ತ್ಯಜಿಸಿ ವೈರಾಗ್ಯ ಪಥವನ್ನು ಹಿಡಿಯಬೇಕೆಂದು ಸಂಕಲ್ಪಿಸಿದ್ದೇನೆ. ತಾವು ನನಗೆ ಜಂಗಮ ಲಾಂಛನಗಳನ್ನು ಕರುಣಿಸಬೇಕೆಂದು ಕೋರುತ್ತೇನೆ.”

“ಬಸವ ಗುರುವಿನ ಇಚ್ಛೆಯಂತೆ ಹಾಗೆ ಆಗಲಿ ಮಗು...” ಎಂದು ಪೂಜೆಗೆ ಕುಳಿತುಕೊಳ್ಳಲು ಸೂಚಿಸುವರು. ಹಣೆಗೆ ಭಸ್ಮವನ್ನು ಧರಿಸಿ, ಉಳಿದೆಡೆ ಧರಿಸಿಕೊಳ್ಳಲು ಗಟ್ಟಿಯನ್ನು ವಟುವಿನ ಕೈಗೆ ಕೊಡುವರು.

ವಟುವನ್ನು ಎದುರಿಗೆ ಕೂರಿಸಿಕೊಂಡು ಇಷ್ಟಲಿಂಗಾರ್ಚನೆ ಮಾಡುವರು. ತಾವು ತಮ್ಮ ಇಷ್ಟಲಿಂಗಕ್ಕೆ ಮಜ್ಜನಕ್ಕೆ ಎರೆಯುವಾಗ ವಟುವಿನ ಇಷ್ಟಲಿಂಗವನ್ನು ತಮ್ಮ ಕೈಕೆಳಗೆ ಹಿಡಿಯಲು ಹೇಳಿ ಲಿಂಗ ಮಜ್ಜನ ಮಾಡಿಸುವರು. ಅಷ್ಟಾವಿಧಾರ್ಚನೆ - ಲಿಂಗಸ್ತವನ - ಲಿಂಗಾನುಸಂಧಾನ ಲಿಂಗಧ್ಯಾನಗಳನ್ನು ಜೊತೆಗೇ ಮಾಡಿಸುವರು. ತಾವೊಮ್ಮೆ ತೀರ್ಥ ತೆಗೆದು ತಗೊಂಡ ಬಳಿಕ, ತಾವು ಇನ್ನೊಮ್ಮೆ ಪೂಜಿಸಿ ಲಿಂಗ ತೀರ್ಥ ತೆಗೆದು ತೀರ್ಥದ ಬಟ್ಟಲಲ್ಲಿ ಸಂಗ್ರಹಿಸುವರು. ವಟುವಿನ ಕೈಯಿಂದ ಧರ್ಮಗುರುವಿನ ಪೂಜೆ ಮಾಡಿಸಿ ೧೦೮ ಬಸವ ಲಿಂಗ ಮಂತ್ರ ಪಠಿಸಿ ಪುಷ್ಪಾರ್ಚನೆ ಮಾಡಿಸುವರು. ಪೂಜಾ ನಂತರ ಮಂತ್ರೋದಕವನ್ನು ಸಿದ್ಧಪಡಿಸುವರು. ನಂತರ ವಟುವು ಗುರುಗಳ ಪಾದಪೂಜೆಯನ್ನು ಮಾಡಿ, ಅಂಗುಷ್ಟದ ಮೇಲಿಂದ ನೀರನ್ನೆರೆದು ಬಟ್ಟಲಲ್ಲಿ ಸಂಗ್ರಹಿಸಬೇಕು. ಗುರು-ಲಿಂಗ-ಜಂಗಮ ತೀರ್ಥವನ್ನು ಒಂದು ಬಟ್ಟಲಲ್ಲಿ ಹಾಕಿಟ್ಟು ವಸ್ತ್ರವೊಂದನ್ನು ಮುಚ್ಚಬೇಕು.

ತಮ್ಮ ಮಗ ಅಥವಾ ಮಗಳ ದೀಕ್ಷಾ ಸ್ವೀಕಾರಕ್ಕೆ ತಾಯಿತಂದೆ ಅಥವಾ ಹತ್ತಿರದ ಬಂಧುಗಳ ಒಪ್ಪಿಗೆ ಇದ್ದು ಅವರೂ ಈ ಸಮಾರಂಭಕ್ಕೆ ಬಂದಿದ್ದರೆ ಆಗ ದೀಕ್ಷಾರ್ಥಿಯು ಕಡೆಯ ಬಾರಿಗೆ ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಕೋರಬೇಕು. ಅವರು ಹೃದಯತುಂಬಿ ಹರಸಬೇಕು. ಏಕೆಂದರೆ ಇನ್ನು ಮುಂದೆ ಆ ಸಂಬಂಧವೂ ಇರದು ಮತ್ತು ದೀಕ್ಷಾನಂತರ ಜಂಗಮಮೂರ್ತಿಯು ಪೂರ್ವಾಶ್ರಮದ ಬಂಧುಗಳಿಗೆ ನಮಿಸುವಂತಿಲ್ಲ.

ಒಂದು ವೇಳೆ ಜಂಗಮದೀಕ್ಷಾ ಸ್ವೀಕಾರಕ್ಕೆ ಒಪ್ಪದೆ ಇರುವ ತಾಯಿ-ತಂದೆ ಬಂಧುಗಳಿದ್ದಲ್ಲಿ ಆಗ ಅವರ ಒಪ್ಪಿಗೆಗಾಗಿ ದೀಕ್ಷಾರ್ಥಿಯು ಕಾಯುವ ಅಗತ್ಯವೂ ಇರದು.

ಜಂಗಮ ದೀಕ್ಷಾರಂಭ [2]

ದೀಕ್ಷೆ ನೀಡಲು ಆರು ಅಡಿ ಅಗಲ ಎಂಟು ಅಡಿ ಉದ್ದ ಇರುವ ಮಂಟಪ ಒಂದನ್ನು ರಚಿಸಬೇಕು. ರಂಗವೋಲೆಯನ್ನು ಈ ಅಳತೆಗೆ ಹಾಕಬೇಕು. ಮೇಲೆ ಸೂಚಿಸಿದಂತೆ ಆರು ವರ್ತುಲಗಳನ್ನು ರಂಗೋಲೆಯಲ್ಲೇ ಲಿಖಿಸಬೇಕು. ಆರು ವರ್ತುಲಗಳಲ್ಲಿ ಚಿಕ್ಕ ಕಲಶ ಸಹಿತವಾಗಿ ಇರುವ ಎರಡು ದೀಪಾರತಿಗಳನ್ನು ಹೊಂದಿರುವ ತಟ್ಟೆಗಳನ್ನು ಇಡಬೇಕು. ಈ ಮಂಡಲ ರಚಿಸುವಾಗ ದಿಕ್ಕು ನೋಡುವುದಗತ್ಯವಿಲ್ಲ; ಸ್ಥಳದ ಅನುಕೂಲತೆಗೆ ತಕ್ಕಂತೆ ಹೊಂದಿಸಬಹುದು. ಹಿಂಬದಿಯಲ್ಲಿ ಗುರುಗಳು ಕೂಡಲು ಗದ್ದುಗೆ ಮಾಡಬೇಕು. ಅವರ ಎಡಬದಿಗೆ ಧರ್ಮಪಿತ ಬಸವಣ್ಣನವರ ಭಾವಚಿತ್ರ ಇಟ್ಟು ಅಲಂಕರಿಸಬೇಕು. ಗುರುಗಳ ಬಲಬದಿಗೆ ದೀಕ್ಷಾರ್ಥಿಯು ಬಂದು, ಬಲಗೈಗೆ ಭಸ್ಮಸವರಿಕೊಂಡು, ಮಧ್ಯದ ಬೆರಳಿನಿಂದ ಗದ್ದುಗೆಯ ಮೇಲೆ ಮನಸ್ಸಿನಲ್ಲಿ “ಓಂ ಲಿಂಗಾಯ ನಮಃ ” ಮಂತ್ರವನ್ನು ಸ್ಮರಿಸುತ್ತ ಪಂಚಕೋನ ಪ್ರಣವವನ್ನು ಬರೆದು ಕುಳಿತುಕೊಳ್ಳಬೇಕು.

“ಓಂ ಶ್ರೀಗುರುಬಸವ ಲಿಂಗಾಯ ನಮಃ” ಹೇಳುತ್ತ ಮೊಟ್ಟ ಮೊದಲು ತೀರ್ಥವನ್ನು ತಮ್ಮ ಬಲಗೈಯಲ್ಲಿ ಹಾಕಿಕೊಂಡು ವಟುವಿನ ತಲೆಯ ಮೇಲೆ ಸಿಂಪಡಿಸುವರು.[3] ವಿಭೂತಿಯನ್ನು ನೆತ್ತಿಯ ಮೇಲೆ ಮತ್ತು ಹಣೆಗೆ ಧರಿಸುವರು. ೩೨ ಮಣಿ ಮತ್ತು ಒಂದು ಶಿಖಾಮಣಿಯುಳ್ಳ ರುದ್ರಾಕ್ಷಿ ಕಂಠ ಮಾಲೆಯನ್ನು ಶುದ್ದೀಕರಿಸಿ ಕೊರಳಿಗೆ ಹಾಕುವರು.

ಇಷ್ಟಲಿಂಗವನ್ನು ಕರಡಿಗೆಯಿಂದ ತೆಗೆದು ಅಂಗೈಯಲ್ಲಿ ಇಟ್ಟುಕೊಳ್ಳಲು ಹೇಳುವರು. (ಜಂಗಮದೀಕ್ಷೆ ಕೊಡುವ ಹೊತ್ತಿಗೆ ಆಗಲೇ ಮೊದಲೇ ಲಿಂಗದೀಕ್ಷೆ ಆಗಿರುತ್ತದೆ. ಇಷ್ಟಲಿಂಗಕ್ಕೆ ಭಸ್ಮಧರಿಸುವರು. ತಮ್ಮ ಹಸ್ತವನ್ನು ದೀಕ್ಷಾರ್ಥಿಯ ಮಸ್ತಕದ ಮೇಲೆ ಇಟ್ಟು “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ದ್ವಾದಶ ಪ್ರಣವ ಮಂತ್ರವನ್ನು ೧೨ ಬಾರಿ ನಿಧಾನವಾಗಿ ಉಚ್ಚರಿಸಿ, ದೀಕ್ಷಾರ್ಥಿಗೆ ಪುನರಾವರ್ತನೆ ಮಾಡಲು ಹೇಳುವರು.

ಮಂತ್ರೋಪದೇಶದ ನಂತರ ಇಷ್ಟಲಿಂಗದ ಮೇಲೆ ೩ ಬಾರಿ ಗುರು-ಲಿಂಗ-ಜಂಗಮ ತೀರ್ಥ ಎರೆದು ಕರುಣಪ್ರಸಾದ ನೀಡುವರು. ಕಾಷಾಯ ಬಣ್ಣದ ಲಿಂಗವಸ್ತ್ರವನ್ನೂ ಅನುಗ್ರಹಿಸುವರು. ನಂತರ ಪುನರ್ ನಾಮಕರಣವನ್ನು ಮಾಡುವರು. ತಾಯಿತಂದೆಯರು ಶರೀರಕ್ಕೆ ಇಟ್ಟ ಹೆಸರಿನ ಬದಲು ನೂತನವಾದ ಹೆಸರನ್ನಿಟ್ಟು ಅದರ ಮುಂದೆ ಸ್ವಾಮಿಗಳು ಎಂಬ ವಿಶೇಷಣವನ್ನು ಸೇರಿಸುವರು.

“ಇಲ್ಲಿಯವರೆಗೂ ತಾಯಿತಂದೆಯರ ಮಗನಾಗಿದ್ದ ............................... ......................... ಇಂದು ಗುರುಬಸವಣ್ಣನವರ ಕರುಣೆಯ ಕಂದರಾಗಿ ಪೂಜ್ಯಶ್ರೀ ................ ...................... ......... ಸ್ವಾಮಿಗಳು. (ಹೆಣ್ಣು ಮಕ್ಕಳಿಗೆ ಮಾತೆ ಎಂಬ ವಿಶೇಷಣ ಸೇರಿಸಬೇಕು) ಎಂಬ ನೂತನನಾಮವನ್ನು ಹೊಂದಿ ಸಮಾಜದ ಶಿಶುವು ಆಗುತ್ತಿದ್ದಾರೆ.” ಎಂದು ಗುರುಗಳು ಘೋಷಿಸುತ್ತಾರೆ. ಈಗ ೬ ಲಾಂಛನಗಳನ್ನು ಮತ್ತು ೬ ಅಂಗವಸ್ತ್ರಗಳನ್ನು ದಯಪಾಲಿಸುತ್ತಾರೆ. ೧. ಕಾಷಾಯವಸ್ತ್ರ, ೨. ದಂಡ(ಬೆತ್ತ), ೩. ಜೋಳಿಗೆ, ೪. ಧರ್ಮಗ್ರಂಥ, ೫. ಪ್ರಸಾದ ಬಟ್ಟಲು, ೬. ಹಾವುಗೆ. ಕೌಪೀನ, ಧೋತ್ರ, ಅಂಗಿ, ಲಿಂಗವಸ್ತ್ರ, ಪೇಟ, ಮೇಲುವಸ್ತ್ರ ಎಂಬ ಆರು ಅಂಗವಸ್ತ್ರಗಳನ್ನು ಮಂತ್ರ ಸಂಸ್ಕಾರ ನೀಡಿ, ಕೊಡುತ್ತಾರೆ. ನ್ಯಾಯದ ಸಂಕೇತವಾದ ಮತ್ತು ರಕ್ಷಣೆಗೂ ನೆರವಾಗುವ ಬೆತ್ತ ಕೊಡುತ್ತಾರೆ. ತ್ಯಾಗದ ಸಂಕೇತವಾದ ಜೋಳಿಗೆಯಲ್ಲಿ ಧರ್ಮಗ್ರಂಥವನ್ನಿಟ್ಟು, “ಇದರ ಒಳಣ ಜ್ಞಾನವನ್ನು ಬಿತ್ತರಿಸಿ ಉಪಜೀವನ ಮಾಡು, ಲೋಕದ ಹಿತಕ್ಕಾಗಿ ಈ ಜೋಳಿಗೆಯನ್ನು ಬಳಸು ಎಂಬರ್ಥದಲ್ಲಿ ಧರ್ಮಗ್ರಂಥವನ್ನಿಟ್ಟ ಜೋಳಿಗೆಯನ್ನು, ಪ್ರಸಾದ ಸ್ವೀಕಾರಕ್ಕಾಗಿ ತಟ್ಟೆಯನ್ನು, ಮೆಟ್ಟುವ ಹಾವುಗೆಯನ್ನು ದಯಪಾಲಿಸುವರು.

ದೀಕ್ಷಾರ್ಥಿಯು ತನ್ನ ಮೊದಲ ವಸ್ತ್ರಗಳನ್ನು ತೆಗೆದು ಕಾಷಾಯ ವಸ್ತ್ರಗಳನ್ನು ಮರೆಗೆ ಹೋಗಿ ಧರಿಸಿಕೊಂಡು ಹಣ್ಣು-ಹಾಲುಗಳನ್ನು ಸ್ವೀಕರಿಸಿ ಬರುತ್ತಾನೆ. ಹಿಂದಿನ ದಿನದಿಂದ ಈವರೆಗೂ ಉಪವಾಸದಲ್ಲಿರುವನೆಂಬುದು ಲಕ್ಷದಲ್ಲಿರಬೇಕು.

ಈಗ ಪ್ರತಿಜ್ಞಾ ಸ್ವೀಕಾರ:

ಗುರುಗಳು ಮೊದಲು ಹೇಳುವರು, ಜಂಗಮ ಮೂರ್ತಿಯು ಪುನರುಚ್ಚರಿಸುವನು.

ಬಸವ (ಲಿಂಗಾಯತ) ಧರ್ಮದ ಜಂಗಮ (ಎರಕ್ತ) ದೀಕ್ಷೆಯ ಪ್ರತಿಜ್ಞಾ ವಿಧಿ

ಓಂ ಶ್ರೀ ಗುರು ಬಸವಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ,ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.

ಶ್ರೀ ಗುರುಬಸವಂಗೆ ಶರಣಾಗಿಹೆ
ಲಿಂಗದೇವನಿಗೆ ಶರಣಾಗಿಹೆ
ಶರಣ ಗಣಕ್ಕೆ ಶರಣಾಗಿಹೆ
ಗಣಪದವಿಯನ್ನು ನಾ ಹೊಂದಿಹೆ.

1ಓಂ ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ.
2ಶ್ರೀ ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ.
3ಗು ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ.
4ರು ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ.
5 ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ.
6 ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. ಮತ್ತು ಗಣಮೇಳವನ್ನು ನಡೆಸುತ್ತೇನೆ.
7 ಜಂಗಮ ದೀಕ್ಷೆಯನ್ನು ಪಡೆದು ವೈರಾಗ್ಯ ಮಾರ್ಗದಲ್ಲಿ ನಡೆಯಲು ಬಯಸಿರುವ ನಾನು, ನಾನು ನನ್ನದು ಎಂಬ – ವ್ಯಾಮೋಹವನ್ನು, ಪೂರ್ವಾಶ್ರಮದ ಸಂಕೋಲೆಯನ್ನು ಹರಿದುಕೊಂಡು ತ್ಯಾಗಿಯಾಗಿ ಶ್ರೀಗುರುವು ನನಗೆ ವಿಧಿಸಿರುವ ಸತ್ಯಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ, ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ, ಧರ್ಮ ಪ್ರಚಾರಕ್ಕೆ ಗಳಿಕೆಯನ್ನು ವಿನಿಯೋಗಿಸುತ್ತೇನೆ.
8ಲಿಂ ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ.
9ಗಾ ಪರಧನ, ಪರಸ್ತ್ರೀ / ಪರಪುರುಷ, ಪರದೈವಂಗಳಿಗೆ ಎಳಸುವುದಿಲ್ಲ.
10ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ.
11ಬಸವ ತತ್ತ್ವದ ಪಥದಲ್ಲಿ ನಡೆಯ ಬಯಸಿರುವ ನಾನು, ಅಲ್ಲಮಪ್ರಭು ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ದರಾಮೇಶ್ವರರಂತೆ ವಿರಕ್ತ ಜೀವನವನ್ನು ಸ್ವೀಕರಿಸಿ ನನ್ನ ತನು-ಮನ-ಧನ-ಸಮಯ-ಅಭಿಮಾನ-ಪ್ರಾಣ ಎಂಬ ಷಡಂಗಗಳನ್ನೂ ಬಸವ ಧರ್ಮದ ಏಳಿಗೆಗಾಗಿ ಮೀಸಲಿಡುತ್ತೇನೆ. ಸ್ವಧರ್ಮಿಯರನ್ನು ಧರ್ಮ ಬಂಧುಗಳೆಂದು, ಪರಧರ್ಮಿಯರನ್ನು ಸ್ನೇಹಿತರೆಂದು ಭಾವಿಸಿ ಆದರಿಸುತ್ತೇನೆ.
12ಮಃ ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ.
ಜಯ ಗುರು ಬಸವೇಶ ಹರಹರ ಮಹಾದೇವ ಎಂದು ಪ್ರತಿಜ್ಞಾ ಸ್ವೀಕಾರದ ಹಂತರ ಜಯಘೋಷ ಮಾಡಬೇಕು. ಜಯಘೋಷದ ನಂತರ ಗುರುಗಳ ಪಾದಕ್ಕೆ ವಂದಿಸುವನು; ವಂದಿಸುವಾಗ ಹೀಗೆ ಹೇಳಬೇಕು :

ಸಂಸಾರ ಸಂಗದಲ್ಲಿರ್ದೆ ನೋಡಾ ನಾನು
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರು
ಅಂಗವಿಕಾರದ ಸಂಗವ ನಿಲಿಸಿ
ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು
ಹಿಂದಣ ಜನ್ಮವ ತೊಡೆದು, ಮುಂದಣ ಪಥವ ತೋರಿದನೆನ್ನ ತಂದೆ
ಚನ್ನಮಲ್ಲಿಕಾರ್ಜುನನ ನಿಜವ ತೋರಿದನೆನ್ನ ಗುರು.


ದೀಕ್ಷಾವಂತನಾದ ಜಂಗಮ ಮೂರ್ತಿಯನ್ನು ಭಕ್ತರ ಬಳಗವು ಕೈಹಿಡಿದು ಕರೆದೊಯ್ದು ಅಲಂಕರಿಸಿದ ಗದ್ದುಗೆಯ ಮೇಲೆ ಕೂರಿಸುವದು. ಭಕ್ತರಿಂದ ಜಂಗಮ ಮೂರ್ತಿಯ ಪಾದಪೂಜೆಯು ನೆರವೇರುವುದು.

ಪಾದಪೂಜೆಯ ಮಾಡಿರಿ
ಸದ್ಗುರುವಿನ ಪಾದಪೂಜೆಯ ಮಾಡಿರಿ

ಚಿನ್ಮಯ ಮೂರುತಿ ಚರಿಪ ಶಿವಕೀರುತಿ
ಮೃಣ್ಮಯ ದೇಹದಿ ಮೃಡನನು ತೋರುವ || ಅ.ಪ ||

ಕಾಯದ ಕತ್ತಲೆಯು ಬಿಡದೆಮ್ಮ
ಮಾಯಾಜಾಲಕೆ ಸೆಳೆಯ
ಸೂರ್ಯನು ತಾನಾಗಿ ಕರ್ಮ ತಿಮಿರವ ತೊಡೆದು
ಭಾರ್ಯಳಾಗಿ ಗೈದು ಶಿವನಡಿಗೆ ಸಲಿಸುವ

ಭಕುತಿರಸ ಮಜ್ಜನವ ಎರೆಯುತ್ತ
ಜೋಕೆಯಿಂದಲಿ ಒರೆಸಿ
ಶೋಕ ಮೋಹವ ಸುಟ್ಟ ಭಸಿತವ ಜೀವನ್ಮುಕ್ತನಾಗಿ ಧರಿಸಿ
ಪಾಕಗೊಂಡ ಹೃದಯವೆಂಬ ನೈವೇದ್ಯವ ಸಲಿಸುತ್ತ

ಹರಪ್ರೇಮ ಪುಷ್ಪಗಳ ಚರಣಕೆ ಧರಿಸಿ
ವಿರತಿ ಗಂಧವನೆ ಸೂಡಿ
ಪರಮ ಸದುಗುಣ ಧೂಪಧೂಮವ ತೂರ್ಯಭಾವದಿ ಅರ್ಪಿಸುತ್ತ
ಅರಿವಿನ ಆರತಿಯ ಮನಮುಟ್ಟಿ ಬೆಳಗುತ್ತ

ಹರನೆ ತಾ ಪತಿಯೆಂದು ಬೋಧಿಸಿ
ಗುರುವೆ ತಾ ಪಿತನಾಗಿ
ಸಾರಸುಂದರ ಪರಮಪ್ರಭುವ ತಂದು ಹೃದಯದಿ ನಿಲಿಸುವಂಥ
ಭೂರಿಬ್ರಹ್ಮಾನಂದ ದೈವೀಪಥವ ತೋರುವಂಥ

ಪಾದಪೂಜಾ ನಂತರ ಪುಷ್ಪ ವೃಷ್ಟಿ ಮಾಡಬೇಕು. ಜಂಗಮದೀಕ್ಷೆ, ಉತ್ತರಾಧಿಕಾರ, ಪಟ್ಟಾಧಿಕಾರ, ಪೀಠಾರೋಹಣ ಈ ಎಲ್ಲ ಸಂದರ್ಭಗಳಲ್ಲೂ ಪಾದಪೂಜೆ, ಹೂ ಮಾಲಾರ್ಪಣೆ, ಪುಷ್ಪವೃಷ್ಟಿ ಅತ್ಯಗತ್ಯ.

ಹೂವ ಸೂರ‍್ಯಾಡೋಣ ಜಂಗಮ ಜ್ಯೋತಿಯ ಮೇಲೆ
ಚಿನ್ಮಯ ಮೂರ್ತಿಯ ಮೇಲೆ ಹೂವ ಸೂರ‍್ಯಾಡೋಣ

ಜಡ ದೇಹದಿ ತಾ ಮೃಡನನು ತೋರುತ
ಕಡಲನು ದಾಂಟಿಪ ಪರಮ ಮೂರ್ತಿಯ ಮೇಲೆ

ಲೋಕವ ಬೆಳಗುವ ಸೂರ‍್ಯಾಧಿಪನೊಲು
ಮರೆವಿನ ತಿಮಿರವ ತೊಡೆವ ಸದ್ಗುರು ತಾನು

ಎದೆ ಹಾಲೀಯುತ ಪೋಷಿಪ ತಾಯೊಲು
ಮುದದಿಂ ಅರಿವನು ನೀಡ್ವ ಗುರುವಿನ ಮೇಲೆ

ಗಂಗಾಧರನೊಲು ಕರುಣೆಯ ಹರಿಸುತ
ಮನವನು ತಣಿಸುವ ಮಂಗಳಮೂರ್ತಿಯ ಮೇಲೆ

ಪ್ರಣವ ಪಂಚಾಕ್ಷರಿಯ ಪ್ರತಿರೂಪ ತಾನಾಗಿ
ಮಿನುಗುವ ಶಶಿಯಹ ಸದ್ಗುರು ದೇವನ ಮೇಲೆ

ಸಚ್ಚಿದಾನಂದನ ಚಿತ್ಕಳ ತಾನಾದ
ನಿಚ್ಚಳ ಹೃದಯದ ಜಂಗಮ ಜ್ಯೋತಿಯ ಮೇಲೆ

ಈ ಹಾಡನ್ನು ಸದ್ಭಕ್ತ ವೃಂದದವರು ಹಾಡುವಾಗ ಗಣ್ಯರು, ಅಭಿಮಾನಿಗಳು ಹೂವುಗಳನ್ನು ತಲೆಯ ಮೇಲೆ ಸೃಷ್ಟಿಸುತ್ತಿರಬೇಕು. ನಂತರ

ಜಂಗಮ ಮಂಗಲ
ಬೆಳಗಿರಿ ಬೆಳಗಿರಿ ಮಂಗಲದಾರತಿ
ಜಂಗಮ ಜ್ಯೋತಿ ಮಂಗಳಮೂರ್ತಿಗೆ

ಬಸವಾದಿ ಪ್ರಮಥರ ಪಥವನು ಪಿಡಿದು
ಕುಸುಮಗಳಾಗಿಸಿ ತನು-ಮನ-ಪ್ರಾಣವ
ನಂಬಿದ ಭಕ್ತರ ಮುನ್ನಡೆಸಲೆಂದು
ಇಂಬಿನಿಂ ಜಂಗಮ ಲಾಂಛನ ತೊಟ್ಟಿಹ

ನಾನು-ನನ್ನದೆಂಬ ಮಮಕಾರವಳಿದು
ಎಲ್ಲವು ದೇವನದೆಂಬ ಶರಣಭಾವ ಉಳಿದು
ಎಲ್ಲರವ ನಾನೆಂಬ ವಿನಯಭಾವ ಬಲಿದು
ಎಲ್ಲರು ನನ್ನವರೆಂಬ ಭೂಮಭಾವ ಬೆಳೆದ

ಆಯುಷ್ಯ-ಆರೋಗ್ಯ ನಿಮಗಿರಲಿ ಎಂದು
ಸತ್ಕೀರ್ತಿ-ಸಂಪದ ನಿಮಗಾಗಲೆಂದು
ಗುರು ಬಸವೇಶನ ರಕ್ಷೆಯು ಇರಲೆಂದು
ಸಚ್ಚಿದಾನಂದನ ಬೇಡುವೆವಾವಿಂದು

ಮಂಗಲ ಗೀತೆ ಹಾಡುತ್ತ ಆರತಿಗಳನ್ನು ಬೆಳಗಬೇಕು. ನಂತರ ಜಯಘೋಷ

ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹಕಾರಣಿಕ ಪರಶಿವನ ನಿಜತೇಜ
ಜಯತು ಕರುಣಾಸಿಂಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀಗುರು ಬಸವಾ
ಜಯಗುರು ಬಸವೇಶ ಹರಹರ ಮಹಾದೇವ

ಎಂದು ಪುಷ್ಪವನ್ನು ಜಂಗಮಮೂರ್ತಿಯ ಮೇಲೆ ವರ್ಷಿಸಬೇಕು.

ಷಟ್‌ಪ್ರಮಥರಿಗೆ ಜಯಕಾರ

ಜಂಗಮದೀಕ್ಷೆ-ಉತ್ತರಾಧಿಕಾರ-ಪಟ್ಟಾಧಿಕಾರ-ಪೀಠಾರೋಹಣ ಮುಂತಾದ ವಿಶೇಷ ವೈರಾಗ್ಯಪೂರಕ ಸಮಾರಂಭಗಳಲ್ಲಿ ಷಟ್ ಪ್ರಮಥರ ಹೆಸರುವಿಡಿದು ಜಯಘೋಷ ಮಾಡುವುದು ಶೋಭಾಯಮಾನ.

೧. ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ
೨. ಶೂನ್ಯಪೀಠಾಧೀಶ ಅಲ್ಲಮಪ್ರಭುಗಳಿಗೆ ಜಯವಾಗಲಿ
೩. ಚಿನ್ಮಯಜ್ಞಾನಿ ಚನ್ನಬಸವಣ್ಣನವರಿಗೆ ಜಯವಾಗಲಿ
೪. ಶಿವಯೋಗಿ ಸಿದ್ಧರಾಮೇಶ್ವರರಿಗೆ ಜಯವಾಗಲಿ
೫. ವೀರವಿರಾಗಿಣಿ ಅಕ್ಕಮಹಾದೇವಿಗೆ ಜಯವಾಗಲಿ
೬. ವೀರ ಗಣಾಚಾರಿ ಮಡಿವಾಳ ಮಾಚಿದೇವರಿಗೆ ಜಯವಾಗಲಿ
೭. ಸರ್ವ ಶರಣರಿಗೆ ಜಯವಾಗಲಿ

ಜಯಗುರು ಬಸವೇಶ ಹರಹರ ಮಹಾದೇವ. ಜಂಗಮದೀಕ್ಷಾವಿಧಿಗೆ ಈ ಏಳು ಜಯಘೋಷ ಬಳಸಬಹುದು. ಪೀಠಾರೋಹಣ ಪಟ್ಟಾಧಿಕಾರದಲ್ಲಿ ಈ ಏಳು ಜಯಘೋಷಗಳೊಡನೆ ಮಠದ ಕರ್ತ, ಹಿರಿಯ ಮತ್ತು ಕಿರಿಯ ಸ್ವಾಮಿಗಳ ಹೆಸರನ್ನು ಸೇರಿಸಿ ೧೦ ಜಯಘೋಷ ಮಾಡಬಹುದು.

ನೆರೆದ ಸದ್ಭಕ್ತರು ಹೂ ಮಾಲಾರ್ಪಣೆ ಮಾಡಿ, ಹಣ್ಣು-ಕಾಯಿ ಕಾಣಿಕೆ ಕೊಟ್ಟು ನಮಸ್ಕರಿಸಬೇಕು. ಈಗ ನುಡಿ ಕಾಣಿಕೆ ಸಮರ್ಪಣೆ. ದೀಕ್ಷೆಯನ್ನು ನೀಡಿದ ಗುರುಗಳಿಂದ, ಬೇರೆ ಇನ್ನಿತರ ಗಣ್ಯರಿಂದ ನಂತರ ದೀಕ್ಷಿತನಾದ ಜಂಗಮಮೂರ್ತಿಯಿಂದ ಉಪನ್ಯಾಸಗಳಾದ ಮೇಲೆ ಬಸವ ಮಹಾಮಂಗಲ, ಮಂಗಲದ ನಂತರ ಗಣ ಸಮೂಹಕ್ಕೆ ಪ್ರಸಾದ ದಾಸೋಹ ನಡೆಯುವುದು. ಜಂಗಮಮೂರ್ತಿಯು ತನಗೆ ಬಂದ ಕಾಣಿಕೆಯನ್ನು ದೀಕ್ಷೆ ನೀಡಿದ ಗುರುಗಳ ಪಾದಕ್ಕೆ ಸಲ್ಲಿಸಿ, ಪ್ರಸಾದ ಸ್ವೀಕಾರಕ್ಕೆ ನಿರ್ಗಮಿಸಬೇಕು.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.
[2] “ಮೂರೇಳು ದೀಕ್ಷಾವಿಧಿ” ಎಂಬ ಕೃತಿಯನ್ನು ಶರಣ ಪಿ.ಎಂ. ಗಿರಿರಾಜುರವರು ಪ್ರಕಟಿಸಿದ್ದು, ಇದರಲ್ಲಿ ನಿರಾಭಾರಿ ಜಂಗಮದೀಕ್ಷೆಯ ವಿವರವಿದೆ. ೨೧ ಹಂತಗಳನ್ನು ಬೋಧಿಸಲಾಗಿದೆ. ಇದನ್ನು ಗಣಸಾಕ್ಷಿಯಾಗಿ ಚನ್ನಬಸವಣ್ಣನವರು ನಿರ್ಲಜ್ಜ ಶಾಂತಯ್ಯನಿಗೆ ದೀಕ್ಷೆ ನೀಡಿ ಬೋಧಿಸಿದರು ಎಂದು ಸಂಪಾದನಕಾರರು ಹೇಳುತ್ತಾರೆ.
[3] ಸಂಪ್ರದಾಯ ಮಠಾಧಿಕಾರಿಗಳಲ್ಲಿ ಕೆಲವರು ದರ್ಭೆಯನ್ನು ತೀರ್ಥದಲ್ಲಿ ಎದ್ದಿ ಅದರಿಂದ ಚಿಮುಕಿಸುವರು, ಇದು ತಪ್ಪು.

ಪರಿವಿಡಿ (index)
Previous ಶರಣದೀಕ್ಷೆ - ಶರಣಮೇಳವ್ರತ ಸ್ವೀಕಾರ ಸಾಭಾರಿ ಮತ್ತು ನಿರಾಭಾರಿ ಜಂಗಮ Next