ಕ್ರಿಯಾಮೂರ್ತಿ ದೀಕ್ಷೆ (ಅಯ್ಯಾಚಾರ)
ಅಯ್ಯನವರ ಮಕ್ಕಳಿಗೆ ಸುಮಾರು ೮ ವರ್ಷಗಳಿಂದ ೧೬ ವರ್ಷಗಳವರೆಗಿನ ಅವಧಿಯಲ್ಲಿ ಅಯ್ಯಾಚಾರ ಎಂಬ ಧಾರ್ಮಿಕ ವಿಧಿಯನ್ನು ಮಾಡುವರು. ಇದನ್ನು ಮಾಡಿಸಿಕೊಂಡ ಬಳಿಕವೇ ಅವರಿಗೆ ಇನ್ನೊಬ್ಬರ ಮನೆಗೆ ಹೋಗಿ ಬಿನ್ನಹ ತೀರಿಸಲು, ಲಿಂಗಧಾರಣೆ - ಮದುವೆ - ಮರಣ ಕ್ರಿಯೆ ಮುಂತಾದುವನ್ನು ನಡೆಸಲು ಅರ್ಹತೆ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.
ಈ ಅಯ್ಯಾಚಾರವು ವೈದಿಕ ಧರ್ಮದ ಉಪನಯನದ ಅನುಕರಣೆ ಎಂದು, ಬಸವಣ್ಣನವರು ಕೊಟ್ಟ ಲಿಂಗವಂತ ಧರ್ಮದ ಸಂವಿಧಾನಕ್ಕೆ ಹೊರತಾದುದು ಎಂದು ಯಾರಿಗಾದರೂ ಸ್ಪಷ್ಟವಾಗುತ್ತದೆ. ಏಕೆಂದರೆ ಯಾವುದೇ ಜಾತಿಯವರನ್ನು ಹುಟ್ಟುತ್ತಲೇ ಶ್ರೇಷ್ಠರು, ಪವಿತ್ರರು ಎಂದು ಬಸವ ಧರ್ಮ ಮಾನಿಸದು.
ಜಾತಿಯ ಆಧಾರದ ಮೇಲೆ ವಿಶೇಷ ಹಕ್ಕುಗಳನ್ನು ನೀಡುವುದನ್ನು ಬಸವ ಸಿದ್ಧಾಂತ ಒಪ್ಪದು. ಅಯ್ಯಾಚಾರದಲ್ಲಿ ಮುಹೂರ್ತ ನೋಡಲಾಗುವುದಲ್ಲದೆ ಅಯ್ಯಾಚಾರ ಹೊಂದುವ ವಟು ಮತ್ತು ಅನುಗ್ರಹಿಸುವ ಗುರುವು ಇಬ್ಬರ ಗೋತ್ರಗಳು ಒಂದೇ ಆಗಿರಬೇಕೆಂದು ಹೇಳಲಾಗುವುದು. [2] ಬಸವ ಧರ್ಮದ ಪ್ರಕಾರ ಮುಹೂರ್ತ ನೋಡುವುದು ಇಲ್ಲ ಮತ್ತು ಗೋತ್ರ - ಸೂತ್ರಗಳನ್ನು ನಂಬುವುದೂ ಇಲ್ಲ. ಆದ್ದರಿಂದ ಗೋತ್ರ ಒಂದೇ ಇರಬೇಕು ಎಂಬುದು ಅರ್ಥರಹಿತವಾದುದು ಮತ್ತು ಚಿಕ್ಕ ಮಕ್ಕಳಿಗೆ ಈ ರೀತಿ ಅಯ್ಯಾಚಾರ ಮಾಡಿ ಭಿಕ್ಷೆ ಬೇಡಲು ಹಚ್ಚುವುದು 'ಕಾಯಕ ಧರ್ಮ'ವಾದ ಬಸವ ಧರ್ಮಕ್ಕೆ ಹೊಂದದ ಆಚರಣೆ. ಅಯ್ಯಾಚಾರವನ್ನು ಅಯ್ಯನವರ ಗಂಡುಮಕ್ಕಳಿಗೆ ಮಾತ್ರ ಮಾಡಿ, ಹೆಣ್ಣು ಮಕ್ಕಳಿಗೆ ಮಾಡದಿರುವುದು ಸಹ ಇದು ಉಪನಯನದ ಅನುಕರಣೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಹೀಗೆ ಅಯ್ಯಾಚಾರವು ಆಗಂತುಕವಾಗಿ ತೀರಾ ಇತ್ತಿತ್ತಲಾಗಿ ಬಂದು ಸೇರಿರುವ ಆಚರಣೆ. ಇದನ್ನು ಆರಂಭಿಸಲು ಬಹುಶಃ ಕೆಳಗಿನ ಪ್ರೇರಣೆಗಳು ಕಾರಣವಾಗಿರಬಹುದು.
೧. ಮತ ಮತಗಳ ತಿಕ್ಕಾಟ, ಪೂಜಾರಿಕೆಯ ಹಕ್ಕಿಗಾಗಿ ಹೋರಾಟ, ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆದಾಗ, 'ಲಿಂಗಾಯತರು ಜುಟ್ಟು - ಜನಿವಾರ, ಉಪನಯನ ಇಲ್ಲದ್ದರಿಂದ ಶೂದ್ರರು. ಆದ್ದರಿಂದ ಅವರಿಗೆ ಪೂಜೆಯ ಹಕ್ಕು ಇಲ್ಲ'. ಎಂದು ಬ್ರಾಹ್ಮಣ ಪುರೋಹಿತರು ವಾದಿಸಿ ಕೆಲವೊಂದು ದೇವಾಲಯಗಳ ಪೂಜಾರಿಕೆಯನ್ನು ಕಿತ್ತುಕೊಳ್ಳಲು ಎಳೆಸಿದಾಗ, ಆಗ ಲಿಂಗವಂತ ಮಠಾಧೀಶರೂ ಉಪನಯನದ ಯಥಾ ನಕಲಾಗಿ ಈ ಅಯ್ಯಾಚಾರ ತಂದು ಶಿಖೆಯನ್ನು ಹೊಂದಿ, ತಾವು ಲಿಂಗೀ ಬ್ರಾಹ್ಮಣರೆಂದು ಕರೆದುಕೊಳ್ಳುವ ಸಾಹಸ ಮಾಡಿದ್ದಾರೆ. ಜನಿವಾರವನ್ನು ಹೋಲುವಂತೆ ಅಡ್ಡಡ್ಡಲಾಗಿ ಶಿವದಾರ ಕಟ್ಟಿಕೊಂಡು ತುದಿಗೆ ಲಿಂಗವನ್ನು ಕಟ್ಟಿ ಪಂಚೆಯೊಳಕ್ಕೆ ಸಿಕ್ಕಿಸಿಕೊಂಡು ತಾವೂ ಜನಿವಾರ ಧಾರಿಗಳೆಂದು ತೋರಿಸಿಕೊಳ್ಳಲು ಯತ್ನಿಸಿದ್ದಾರೆ.
೨. ಒಂದು ಕಾಲದಲ್ಲಿ ಜೀವಂತವಾಗಿ ವಿಜೃಂಭಿಸಿ ಅರ್ಹತಾ ಪರಂಪರೆಯ ಮೇಲೆ ಬೆಳೆದು ಬಂದ ಲಿಂಗವಂತ ಸಮಾಜದಲ್ಲಿ ಅಸಂಖ್ಯಾತ ಶರಣರು, ಶಿವಯೋಗಿಗಳು, ಧರ್ಮ ಪ್ರಚಾರಕ ಜಂಗಮರು ಇದ್ದಾಗ ಅಷ್ಟಾಗಿ ತೊಂದರೆ ಕಾಣದ ಸಮಾಜದಲ್ಲಿ, ಕಾಲಾನಂತರದಲ್ಲಿ ಇಂಥ ಅಧ್ಯಾತ್ಮ ಜೀವಿಗಳು, ಅನುಗ್ರಹ ನೀಡುವ ಸಾಮರ್ಥ್ಯವಿರುವವರು ದೊರೆಯದಾದಾಗ ಧಾರ್ಮಿಕ ವಿಧಿ-ವಿಧಾನಗಳನ್ನು, ಜನನ-ಮರಣ ಮುಂತಾದ ಕ್ರಿಯೆಗಳನ್ನು ನೆರವೇರಿಸುವವರ ಕೊರತೆ ಆಗ ತೊಡಗಿರಬೇಕು. ಅಷ್ಟು ಹೊತ್ತಿಗೆ ಮಠಗಳು ಶಿಥಿಲಗೊಳ್ಳುತ್ತಿರುವಾಗ, ಮಠಗಳಲ್ಲಿ ಯಾರು ಉಳಿದಿರುವರೋ ಅವರಿಗೆ ಒಂದು ದೀಕ್ಷೆ ಅಂತ ಅಯ್ಯಾಚಾರವನ್ನು ಮಾಡಿ, ಅವರನ್ನು ಧಾರ್ಮಿಕ - ಸಾಮಾಜಿಕ ವಿಧಿ-ವಿಧಾನವನ್ನು ಪೂರೈಸಲು ಬಾಧ್ಯಸ್ಥರನ್ನಾಗಿ ಮಾಡುವ ಪ್ರಯತ್ನ ಆರಂಭವಾಗಿರಬೇಕು.
೩. ಸಾಮಾನ್ಯವಾಗಿ ಲಿಂಗವಂತ ಸಮಾಜದ ಇನ್ನಿತರರೆಲ್ಲ ಕಾಯಕ ಜೀವಿಗಳು. ಕಾಯಕದಿಂದ ಬರುವಷ್ಟು ಆದಾಯವು ಪೂಜಾರಿಕೆಯಿಂದ ಬರಲು ಸಾಧ್ಯವಿಲ್ಲವಷ್ಟೆ. ಹೀಗಾಗಿ ಕಾಯಕ ಜೀವಿಗಳು (ಅಂದರೆ ಭಕ್ತರು) ಪೂಜಾರಿಕೆಯಲ್ಲಿ ಆಸಕ್ತಿ ತೋರಿಸದೆ, ನಂತರ ಪೂಜಾರಿಕೆ ಮಾಡುವವರದು ಒಂದು ಜಾತಿಯ ಗುಂಪಾಗಿ ಧ್ರುವೀಕರಣಗೊಂಡಿದೆ. ಅಯ್ಯಾಚಾರವು ಅದಕ್ಕೇ ಸೀಮಿತವಾಗಿದೆ ಮತ್ತು ಭಕ್ತ - ಮಹೇಶ್ವರ ಎಂಬ ಎರಡು ವರ್ಗಗಳ ಹುಟ್ಟಿಗೆ ಕಾರಣವಾಗಿ, ಬಲಿ ಚಕ್ರವರ್ತಿಯಿಂದ ದಾನ ಪಡೆದ ವಾಮನನು ಅವನನ್ನೇ ಪಾತಾಳಕ್ಕೆ ತುಳಿದಂತೆ ಭಕ್ತವರ್ಗದವರ ಬಿನ್ನಹ - ಕಾಣಿಕೆ - ಗೌರವದಿಂದಲೇ ಬೆಳೆದು ನಿಂತ ಮಹೇಶ್ವರ ವರ್ಗ ಭಕ್ತರ ಗುರುತ್ವ ಜಂಗಮತ್ವಗಳ ಹಕ್ಕನ್ನು ಸಹ ನಿರಾಕರಿಸುವ (ಕಿತ್ತುಕೊಳ್ಳುವ) ಮಟ್ಟ ಮುಟ್ಟಿದೆ.
ಈ ವಂಚನೆ ಎಲ್ಲಿಗೆ ಮುಟ್ಟುತ್ತಿದೆ ಎಂದರೆ, ಧರ್ಮಗುರು ಬಸವಣ್ಣನವರ ವಚನಗಳಲ್ಲಿ ಬರುವ ಜಂಗಮವನ್ನು ಮನಸ್ಸಿಗೆ ಬಂದಂತೆ ವ್ಯಾಖ್ಯಾನಿಸಿ ಮೂಢ ಭಕ್ತರಿಂದ ಮನಸ್ಟೇಚ್ಛೆ ಸೌಲಭ್ಯಗಳನ್ನು ಪಡೆದುಕೊಳ್ಳುತ್ತ, ತಮ್ಮ ಶ್ರೇಷ್ಠತೆ ಮೆರೆಯುತ್ತಿದ್ದ ಇವರು ಈಗ ಬಸವಣ್ಣನವರನ್ನು ಕೈಬಿಡುತ್ತಿರುವುದು ಚೆನ್ನಾಗಿ ಸ್ಪಷ್ಟವಾಗುತ್ತಿದೆ. ವಚನ ಸಾಹಿತ್ಯದ ಅಧ್ಯಯನ ಈಗ ಗಾಢವಾಗಿ ಬಸವಾದಿ ಪ್ರಮಥರ ಆದರ್ಶ ಕಲ್ಪನೆಗಳಾದ ಜಂಗಮ - ಕಾಯಕ - ದಾಸೋಹ ಹೆಚ್ಚು ಅರ್ಥವಾಗಿ, ಜಂಗಮವು ಜಾತಿ ವಾಚಕವಲ್ಲ ತತ್ವವಾಚಕ ಎಂದು ಜನರಿಗೆ ಮನದಟ್ಟಾಗುತ್ತಿದೆ. ಜಾತಿಯಿಂದ ಶ್ರೇಷ್ಠರೆಂದು ವಿಶೇಷ ಸವಲತ್ತು ಪಡೆಯುತ್ತಿದ್ದ ಲಿಂಗಾಯತ ಸಮಾಜದ ಪುರೋಹಿತವರ್ಗ ಬಸವಣ್ಣನವರ ಸಮತಾವಾದ ಕಂಡರೆ ಈಗ ಕಿಡಿಕಾರುತ್ತದೆ. ಸಮತಾವಾದ, ಏಕೇಶ್ವರವಾದ, ಬಹುದೇವತೋಪಾಸನೆಯ ನಿಷೇಧ ಇವು ಅವರಿಗೆ ನುಂಗಲಾರದ ಕಹಿಗುಳಿಗೆಗಳು. ಹಾಗಾಗಿ ಈಗ ಬಸವಣ್ಣನವರು ಆದ್ಯರೆಂಬುದನ್ನು, ಲಿಂಗಾಯತ ಧರ್ಮವು ಅವರಿಂದ ಸ್ಥಾಪಿತವಾಯಿತೆಂಬುದನ್ನು ನಿರಾಕರಿಸಲು ಈ ಪುರೋಹಿತವರ್ಗ ವ್ಯವಸ್ಥಿತ ಸಂಚು ಮಾಡುತ್ತಿದೆ, ಕೃತ್ರಿಮ ಸಾಹಿತ್ಯವನ್ನು ಹುಟ್ಟು ಹಾಕುತ್ತಿದೆ.
ಎಲ್ಲ ಮಾನವರ ಸಾಮಾಜಿಕ, ಧಾರ್ಮಿಕ ಹಕ್ಕುಗಳನ್ನು ಬಸವ ಧರ್ಮದ ಸಂವಿಧಾನ ರಕ್ಷಿಸುತ್ತದೆ ಎಂದ ಮೇಲೆ ಅಯ್ಯನವರ ಹಿತವನ್ನು ಅದು ಕಾಯ್ದೆ ಕಾಯುತ್ತದೆ. ಆದ್ದರಿಂದ ಅವರು ಬಸವಣ್ಣನವರನ್ನು ದ್ವೇಷಿಸದೆ ಅವರನ್ನು ಧರ್ಮ ಗುರುವೆಂದು, ವಚನ ಸಾಹಿತ್ಯವನ್ನು ಧರ್ಮ ಸಂಹಿತೆ ಎಂದು ನಂಬಿ ನಡೆದರೆ ಅವರಿಗೂ ಹಿತ ಮತ್ತು ಸಮಾಜಕ್ಕೂ ಕ್ಷೇಮ. ಧಾರ್ಮಿಕ ವಿಧಿವಿಧಾನಗಳನ್ನು ಮಾಡುವವರ ಅಗತ್ಯವಿರುವ ಕಾರಣ ಅವರು ಈ ವಿಶೇಷ ದೀಕ್ಷೆಯನ್ನು ಪಡೆದುಕೊಳ್ಳಲಿ. ಆದರೆ ಅದು ಅಯ್ಯಾಚಾರದ ಹೆಸರಿನಿಂದ ಬೇಡ, ಅಯ್ಯಾಚಾರ ಎಂದರೆ ಅಯ್ಯನವರಿಗೆ ಮಾತ್ರ ಮಾಡಬೇಕಾದುದು ಎಂದಾಗುತ್ತದೆ. ಇದನ್ನು 'ಕ್ರಿಯಾಮೂರ್ತಿ ದೀಕ್ಷೆ' ಎನ್ನೋಣ, ಬಸವ ಗುರುವಿನ ಬದ್ದ ದ್ವೇಷಿಗಳಾದ ವರ್ಗದ ಅಯ್ಯನವರ ಸಂಖ್ಯೆ ತೌಲನಿಕವಾಗಿ ಕಡಿಮೆ. ವಿರಕ್ತ ಮಠಗಳ ಪ್ರಭಾವದಲ್ಲಿ ಬೆಳೆದ ಅಯ್ಯನವರು (ಈವರೆಗೂ ಅಷ್ಟೊಂದು) ಬಸವ ದ್ವೇಷಿಗಳಾಗಿಲ್ಲ ಮತ್ತು ನಮ್ಮ ಪ್ರವಚನ ಕೇಳಿ, ವಚನ ಸಾಹಿತ್ಯ ಓದಿ ತಿಳುವಳಿಕೆ ಪಡೆದುಕೊಂಡ ಪ್ರೌಢರು ಬಸವ ತತ್ತ್ವ ಪ್ರೇಮಿಗಳಾಗಿದ್ದಾರೆ. ಇವರುಗಳು ಬಸವ ತತ್ತ್ವದ ಪ್ರಕಾರ ತಮ್ಮ ಮಕ್ಕಳಿಗೆ ಕ್ರಿಯಾಮೂರ್ತಿ ದೀಕ್ಷೆ ಮಾಡಿಸಲಿ.
ವಾತಾವರಣ ಬದಲಾದಂತೆ ವಿಚಾರಗಳೂ ಬದಲಾಗುತ್ತಿವೆ. ಒಂದು ಕಾಲದಲ್ಲಿ ಬ್ರಾಹ್ಮಣರಲ್ಲಿ, ಅಯ್ಯನವರಲ್ಲಿ ನಾವು ಧಾರ್ಮಿಕ ವಿಧಿಗಳನ್ನು ಮಾಡಲಷ್ಟೆ ಮೀಸಲು. ಎಷ್ಟೇ ಬಡತನ ಬಂದರೂ ಉಪವಾಸವಾದರೂ ಸತ್ತೇವೆ ವಿನಾ ಬೇರೆ ಉದ್ಯೋಗ ಮಾಡುವುದಿಲ್ಲ, ಎಂಬ ಛಲವಿತ್ತು. ಈಗ ಹಾಗಿಲ್ಲ. ಉಭಯತರೂ ಸೆರೆಯ ಗುತ್ತೇದಾರಿಕೆ, ಚಪ್ಪಲಿ ತಯಾರಿಕೆ, ಬಾರ್, ಪಂಚತಾರಾ ಹೋಟೆಲ್, ಹೀಗೆ ಯಾವುದೇ ಉದ್ಯಮ ಉದ್ಯೋಗ ಮಾಡಲು ಸಿದ್ಧರಿದ್ದಾರೆ. ಪೂಜಾರಿಕೆ ಹೊಟ್ಟೆ ತುಂಬಿಸದು ಎಂಬುದನ್ನು ಅರಿತ ಅವರು ಬೇರೆ ಬೇರೆ ಉದ್ಯೋಗಗಳನ್ನು ಅವಲಂಬಿಸುತ್ತಿದ್ದಾರೆ. ಬೇಡ ಜಂಗಮ' ಎಂದು ಕರೆಸಿಕೊಂಡು ಪರಿಶಿಷ್ಟ ಜಾತಿಗೆ ಸೇರಲೂ ಹವಣಿಸುತ್ತಿದ್ದಾರೆ. ಹೀಗಿರುವಾಗ ಇನ್ನು ಧಾರ್ಮಿಕ ವಿಧಿ ವಿಧಾನ ಪೂರೈಸಲು ಅವರೂ ಮೀಸಲಾಗಿ ಉಳಿಯರು.
ಆದ್ದರಿಂದ, ಈಗ ಸಮಸ್ತ ಸಮಾಜವು ಚಿಂತಿಸಿ ಕಾರ್ಯೋನ್ಮುಖವಾಗಬೇಕಾಗಿದೆ. ಲಿಂಗವಂತ ಸಮಾಜದ ಯಾವುದೇ ಉಪಪಂಗಡಗಳವರಿರಲಿ ಅವರಿಗೆ ಕ್ರಿಯಾಮೂರ್ತಿ ದೀಕ್ಷೆಯನ್ನು ಬಸವ ತತ್ತ್ವದ ಪ್ರಕಾರ ಕೊಡಿಸಿ, ಜೊತೆಗೆ ಸರಿಯಾದ ತರಬೇತಿ ಸಹ ನೀಡಿದರೆ ಒಳ್ಳೆಯದು, ರಾಷ್ಟ್ರೀಯ ಬಸವ ದಳಗಳವರು ಇಂಥ ತರಬೇತಿ ಪಡೆಯಬೇಕು.
ಬಸವ ತತ್ತ್ವಾನುಯಾಯಿಗಳು ತಾವೂ ಇಂಥ ಕಾರ್ಯಗಳನ್ನು ನೆರವೇರಿಸಬಹುದೆಂಬ ತಿಳುವಳಿಕೆ, ಆತ್ಮ ವಿಶ್ವಾಸ ಪಡೆದು, ತರಬೇತಿ ಹೊಂದಿ ತಮ್ಮ ಸ್ವತಂತ್ರವಾದ, ನಿತ್ಯ ಕಾಯಕದ ಜೊತೆಗೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುವ ಪರಿಪಾಠ ಬೆಳೆಸಿಕೊಂಡರೆ ಅದ್ಭುತವಾದ ಜಾಗೃತಿ ಆಗುವುದು. ಹೊಟ್ಟೆಪಾಡಿಗಾಗಿ ಪೂರ್ಣಾವಧಿ ಉದ್ಯೋಗವನ್ನಾಗಿ ಪೂಜಾರಿಕೆ, ಪೌರೋಹಿತ್ಯ ಅಳವಡಿಸಿಕೊಂಡವರು ಹಣದ ಆಸೆಯಿಂದ, ತತ್ತ್ವ ಬಿಟ್ಟು ನಡೆಯುವರು. ಶ್ರೀಮಂತರಿಗೆ ಸರಿದಾರಿ ತೋರಿಸುವ ಬದಲು, ಅವರು ಹೇಳುವಂತೆ ಪೂಜಾದಿಗಳನ್ನು ಮಾಡಿ ಧರ್ಮನಿಷ್ಠೆಯನ್ನು ಶಿಥಿಲಗೊಳಿಸುವರು. ನವಗ್ರಹ ಪೂಜೆ, ಹೋಮ, ಸತ್ಯನಾರಾಯಣ ವ್ರತ ಮಾಡಿಸುವ ಲಿಂಗವಂತ ಪುರೋಹಿತರನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಕಾಯಕ ಜೀವಿಗಳಾದ ಶರಣರು ಹುಟ್ಟು - ಮದುವೆ - ಗೃಹ ಪ್ರವೇಶ ಮರಣ ಇತ್ಯಾದಿ ಕಾರ್ಯಗಳನ್ನು ನೆರವೇರಿಸುವುದರಿಂದ ತಾತ್ವಿಕ ಶ್ರೀಮಂತಿಕೆ, ಧರ್ಮನಿಷ್ಠೆ ಉದ್ದೀಪನಗೊಳ್ಳುವವು.
ಆದ್ದರಿಂದ ಬಸವ ಪಥದಲ್ಲಿ ನಡೆಯಬಯಸುವ ಅಯ್ಯನವರು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಸದುದ್ದೇಶದಿಂದ ಮಾಡಿಸಲು ಬಯಸುವ ಯಾವುದೇ ಉಪಪಂಗಡಗಳವರು ಕ್ರಿಯಾಮೂರ್ತಿ ದೀಕ್ಷೆಯನ್ನು ತೆಗೆದುಕೊಳ್ಳಬಹುದು. ಅದರ ಕ್ರಮವನ್ನು ಈಗ ಕೊಡಲಾಗುವುದು.
ಕ್ರಿಯಾಮೂರ್ತಿ ದೀಕ್ಷೆಯ ವಿಧಾನ
ಲಿಂಗಧಾರಿಗಳಾದ ಯಾರು ಬೇಕಾದರೂ ಈ ದೀಕ್ಷೆಯನ್ನು ಪಡೆಯಬಹುದು. ಹೆಣ್ಣುಮಕ್ಕಳು ಸಹ ಇದನ್ನು ಪಡೆಯುವ ಹಕ್ಕು ಹೊಂದಿದ್ದಾರೆ. ಮುಖ್ಯವಾಗಿ ಅವರಲ್ಲಿರಬೇಕಾದುದು ಬಸವ ಗುರುವಿನಲ್ಲಿ ಶ್ರದ್ದೆ, ಲಿಂಗನಿಷ್ಠೆ, ಸದಾಚಾರ ಸಂಪನ್ನತೆ, ತತ್ತ್ವನಿಷ್ಠೆ, ಸಮಾಜದ ಬಗ್ಗೆ ಅಭಿಮಾನ. ಇದನ್ನು ಪಡೆದವರು ಲಿಂಗಧಾರಣ, ಲಿಂಗದೀಕ್ಷೆ, ಗೃಹಪ್ರವೇಶ, ಶವ ಸಂಸ್ಕಾರ, ಕಟ್ಟಡಗಳ ಪ್ರಾರಂಭೋತ್ಸವ, ಬಸವೇಶ್ವರ ಪೂಜಾವ್ರತ, ಶುದ್ದೀಕರಣ ಮುಂತಾದುವನ್ನು ಮಾಡಿಸಲು ಅರ್ಹರಾಗುತ್ತಾರೆ.
ಈಗಾಗಲೇ ಜಂಗಮದೀಕ್ಷೆ ಪಡೆದಿರುವವರು ಇದನ್ನು ಕೊಡಲು ಅರ್ಹರು. ಪಡೆಯುವವರು ಈಗಾಗಲೇ ಲಿಂಗದೀಕ್ಷೆ ಪಡೆದಿದ್ದರೆ ಈಗ ಅದರ ಅಗತ್ಯವಿಲ್ಲ. ಲಿಂಗ ದೀಕ್ಷೆಯಾಗಿರದಿದ್ದರೆ ಈಗ ಲಿಂಗದೀಕ್ಷೆ . ನೀಡಬೇಕು. ಬೆಳಗಿನಿಂದ ನಿರಾಹಾರದಿಂದಿದ್ದು ಸ್ನಾನಮಾಡಿ ಲಿಂಗದೀಕ್ಷೆಯನ್ನು, ನಂತರ ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆಯಬೇಕು. ಸಾಮಾನ್ಯವಾಗಿ ಉಳಿದ ಶರಣರು ಲಿಂಗದೀಕ್ಷೆ ಪಡೆದು ಕಾಲಾನಂತರದಲ್ಲಿ ಕ್ರಿಯಾಮೂರ್ತಿ ದೀಕ್ಷೆಗಾಗಿ ಮುಂದೆ ಬರುವರು. ಅಯ್ಯಾಚಾರದ ಬದಲಿಗೆ ಮಾಡಿಸುವವರಿಗೆ ಮಾತ್ರ ಮೇಲಿನ ಪ್ರಶ್ನೆ ಎದುರಾಗುತ್ತದೆ. ಜಂಗಮನು ಇಷ್ಟಲಿಂಗಪೂಜೆಯನ್ನು ತಾನು ಮಾಡುತ್ತ ಅದನ್ನು ವಿವರಿಸುತ್ತ ವಟುಗಳೂ ಮಾಡಿಕೊಳ್ಳುವಂತೆ ಹೇಳಬೇಕು. ಪೂಜಾ ನಂತರ ಲಿಂಗತೀರ್ಥ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕ್ರಿಯಾಮೂರ್ತಿ ದೀಕ್ಷೆ ಕೊಡುವ ಜಂಗಮನು ಮೊದಲು ಉಪದೇಶ ಮಾಡಿ, ಈ ದೀಕ್ಷೆಯ ಉದ್ದೇಶವೇನು ಎಂಬುದನ್ನು ದೀಕ್ಷಾರ್ಥಿಗೆ ಮನದಟ್ಟು ಮಾಡಬೇಕು.
ಗುರೂಪದೇಶ
“ಓಂ ಶ್ರೀ ಗುರು ಬಸವ ಲಿಂಗಾಯ ನಮಃ "
ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆಯಲಿರುವ ಸಮಸ್ತರೇ, ನೀವು ಈ ಉಪದೇಶವನ್ನು ಲಕ್ಷ್ಯಗೊಟ್ಟು ಆಲಿಸಬೇಕು.
ಮಾನವನು ಸಂಘಜೀವಿ. ಅವನು ಕೂಡಿ ಬಾಳಬೇಕೆಂದು 'ಧರ್ಮ' ಎಂಬ ಸಂಘಟನಾ ಸೂತ್ರವು ಬಳಕೆಗೆ ಬಂದಿತು. ಪರಮಾತ್ಮನು ತಾನು ಸೃಷ್ಟಿಸಿದ ಈ ಜಗತ್ತು, ಜೀವಾತ್ಮರುಗಳ ಉದ್ಧಾರಕ್ಕಾಗಿಯೂ ಮತ್ತು ಸೃಷ್ಟಿಸಿದ ತನ್ನನ್ನು ಲೋಕದ ಜೀವರುಗಳು ಅರಿತು ಆರಾಧಿಸಲೆಂದು ಇದನ್ನು ಕಲಿಸಲೋಸುಗ ಕಾರಣಿಕರನ್ನಾಗಿ ಗುರು ಬಸವಣ್ಣನವರನ್ನು ಆಯ್ಕೆ ಮಾಡಿಕೊಂಡ. ಅವರು ಹಾಕಿಕೊಟ್ಟ ಮಾರ್ಗವೇ ನಮಗಿಂದು ದಾರಿ ದೀಪವಾಗಿದೆ.
ಮನುಷ್ಯನು ಹುಟ್ಟು - ಸಾವು, ಮದುವೆ - ಸಂತಾನೋತ್ಪತ್ತಿ, ವ್ಯಾಪಾರ ವ್ಯವಹಾರ ಮುಂತಾದ ಕ್ರಿಯೆಗಳಿಗೆ ಒಳಗಾಗುವನು. ಇವನ್ನೆಲ್ಲ ತಮ್ಮ ತಮ್ಮ ಧರ್ಮದ ಹಿನ್ನೆಲೆಯಲ್ಲಿಯೇ ಆಚರಿಸಬೇಕಾಗುತ್ತದೆ. ಅದಕ್ಕಾಗಿ ಇಂತಹ ಧಾರ್ಮಿಕ ವಿಧಿಗಳನ್ನು ನೆರವೇರಿಸಲು, ವ್ಯಕ್ತಿಯನ್ನು ಸಮಾಜದ ಒಂದು ಅಂಗವಾಗಿ ಮುನ್ನಡೆಸಲು ನೀವು ಕ್ರಿಯಾಮೂರ್ತಿ ದೀಕ್ಷೆಯನ್ನು ಹೊಂದಿ, ಈಗ ಪ್ರತಿಜ್ಞಾಬದ್ಧರಾಗುತ್ತಿದ್ದೀರಿ.
ನೀವು ಧರ್ಮಗುರು ಬಸವಣ್ಣನವರು ಹಾಕಿಕೊಟ್ಟ ಮಾರ್ಗ, ವಚನ ಸಾಹಿತ್ಯದ ಮೂಲಕ ನೀಡಿದ ಆದೇಶದಂತೆ ನಡೆಯಬೇಕು. ಇನ್ನಿತರರ ಒತ್ತಡ, ಹಣದ ಆಮಿಷಕ್ಕೆ ಬಲಿಯಾಗಿ ತತ್ತ್ವವನ್ನು ಬಿಟ್ಟು ನಡೆಯಬೇಡಿರಿ. ದೀಕ್ಷಾವಿಧಿಗಳನ್ನು ಪೂರೈಸುವಾಗ ಬಡವ - ಬಲ್ಲಿದರೆಂದು ಭೇದವನ್ನೆಣಿಸದೆ ಅವರ ಆಹ್ವಾನವನ್ನು ಒಪ್ಪಿಕೊಳ್ಳಬೇಕು. ಲಿಂಗಧಾರಿಗಳಲ್ಲಿ ಜಾತಿಭೇದವನ್ನೆಣಿಸದೆ ಅವರ ಮನೆಗೆ ಹೋಗಿ ಪೂಜಾದಿ ಕ್ರಿಯೆಗಳನ್ನು ನೆರವೇರಿಸಿ ಬನ್ನಿರಿ. ಲಿಂಗಧಾರಿಗಳ ಸಿರಿವಂತಿಕೆ - ಅಂತಸ್ತು ನೋಡಬೇಡಿರಿ. ಅವರ ಆಚಾರ - ವಿಚಾರಕ್ಕೆ ಮನ್ನಣೆ ಕೊಡಿರಿ. ಈ ಮೂಲಕ ಜಗತ್ಕರ್ತನ ಮತ್ತು ಧರ್ಮಗುರು ಬಸವಣ್ಣನವರ ಕೃಪೆಗೆ ಪಾತ್ರರಾಗಿರಿ.”
ಉಪದೇಶದ ನಂತರ ದೀಕ್ಷಾರ್ಥಿಗಳ ಕೈಯಿಂದ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಮಾಡಿಸಬೇಕು. ಪುಷ್ಪಾರ್ಚನೆ ೧೦೮ ಮಂತ್ರ ಪಠಣ, ಮಹಾಮಂಗಲ ಮಾಡಿ ನಂತರ ಮಂತ್ರೋ (ಹಸ್ತೋದಕ)ವನ್ನು ಮಾಡಿ ಲಿಂಗತೀರ್ಥದ ಬಟ್ಟಲಿನಲ್ಲಿ ಹಾಕಿಡಬೇಕು. ಪಾದ ಪೂಜೆಯನ್ನು ಮಾಡಿಸಿ ಪಾದೋದಕವನ್ನು ಸಂಗ್ರಹಿಸಬಹುದು. ಗುರು-ಲಿಂಗ-ಜಂಗಮ ತೀರ್ಥವನ್ನು ಕರುಣ ಪ್ರಸಾದವಾಗಿ ಈಗ ಕ್ರಿಯಾಮೂರ್ತಿಗಳಾಗುವವರಿಗೆ ಕೊಡಬೇಕು. ಮೊದಲು ಭಸ್ಮ ಧರಿಸಿ, ರುದ್ರಾಕ್ಷಿ ಕಂಠ ಮಾಲೆ ಹಾಕಿ, ಇಷ್ಟಲಿಂಗದ ಮೂಲಕ ಕರುಣ ಪ್ರಸಾದ ಕೊಡಬೇಕು.
ಧರ್ಮಗುರು ಬಸವಣ್ಣನವರ ಷಟಸ್ಥಲ ವಚನಗಳ ಒಂದು ಹೊತ್ತಿಗೆಯನ್ನು ವಟುವಿನ ಕೈಯಲ್ಲಿ ಕೊಟ್ಟು, ಧರ್ಮಲಾಂಛನಗಳು ಮುದ್ರಿತವಾಗಿರುವ ಕಾವಿಯ ಮೇಲು ವಸ್ತ್ರವನ್ನು ಹೊದಿಸಿ, ತಲೆಯ ಮೇಲೆ ಕೈ ಇಟ್ಟು “ಓಂ ಶ್ರೀ ಗುರುಬಸವ ಲಿಂಗಾಯ ನಮಃ” ಮಂತ್ರವನ್ನು ಬೋಧಿಸಬೇಕು. ೧೨ ಬಾರಿ ಉಚ್ಚರಣೆ - ಪುನರುಚ್ಚರಣೆ ಆದ ಮೇಲೆ ಪ್ರತಿಜ್ಞಾವಿಧಿಯನ್ನು ಉಪದೇಶಿಸಬೇಕು.
ಬಸವ (ಲಿಂಗಾಯತ) ಧರ್ಮಾನುಯಾಯಿಗಳ ಪ್ರತಿಜ್ಞಾವಿಧಿ ಹನ್ನೆರಡು ಪ್ರತಿಜ್ಞೆಗಳು (Twelve Oaths)
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರು ಬಸವಂಗೆ ಶರಣಾಗಹೆ, ಲಿಂಗದೇವನಿಗೆ ಶರಣಾಗಹೆ, ಶರಣಗಣಕ್ಕೆ ಶರಣಾಗಿದೆ, ಗಣಪದವಿಯನ್ನು ನಾ ಹೊಂದಿಹೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. |
7 | ವ | ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀಯರನ್ನು ಬಯಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ಧರ್ಮಕರ್ತ ಬಸವಣ್ಣನವರ ತತ್ವಗಳ ಚೌಕಟ್ಟಿನಲ್ಲಿಯೇ ಹುಟ್ಟು-ವಿವಾಹ ಗೃಹಪ್ರವೇಶ - ಅಂತ್ಯ ಸಂಸ್ಕಾರ ಮುಂತಾದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುತ್ತೇನೆ. |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯ ಗುರು ಬಸವೇಶ ಹರಹರ ಮಹಾದೇವ
ಈ ರೀತಿಯಾಗಿ ಪ್ರತಿಜ್ಞಾವಿಧಿ ಪೂರೈಸಿದ ನಂತರ ಸಾಮೂಹಿಕವಾಗಿ ಬಸವ ಮಂಗಲವನ್ನು ಮಾಡಿ ಜಯಕಾರ ಮಾಡಬೇಕು. ದೀಕ್ಷೆಯನ್ನು ನೀಡಿದ ಜಂಗಮಮೂರ್ತಿಗೆ ದೀಕ್ಷಿತರು ಕಾಣಿಕೆ ಕೊಟ್ಟು ನಮಸ್ಕರಿಸಬೇಕು. ಉಳಿದವರೆಲ್ಲ ಕರುಣ ಪ್ರಸಾದ ಪಡೆದಾದ ಮೇಲೆ ಎಲ್ಲರಿಗೂ ಮಹಾ ಪ್ರಸಾದದ ಆರೋಗಣೆ ನಡೆಯಬೇಕು.
ಸಾಂಪ್ರದಾಯಿಕ ಅಯ್ಯಾಚಾರದಲ್ಲಿ ವಟುವಿಗೆ ಕಾವಿಯ ಹೊಸ ಪಂಚೆ, ಕೌಪೀನ (ಕೈಪ) ಭಿಕ್ಷಾ ಪಾತ್ರೆ, ಬೆತ್ತ, ಜಂಗು ಕೊಡಲಾಗುವುದು. ಅಯ್ಯಾಚಾರದ ನಂತರ ವಟು “ಭವತಿ ಭಿಕ್ಷಾಂ ದೇಹಿ” ಎಂದು ತಾಯಿ, ತಂದೆ, ಬಂದವರ ಬಳಿ ಬೇಡುತ್ತಾನೆ. ಬಂದ ಭಿಕ್ಷೆಯನ್ನು ದೀಕ್ಷೆ ನೀಡಿದ ಗುರುವಿಗೆ ಕೊಡುತ್ತಾನೆ [3] ಭಿಕ್ಷೆಯಿಂದ ತಂದ ಹಣ (ವಸ್ತು)ವನ್ನು ಸಮಾಜಕ್ಕೆ ವಿನಿಯೋಗಿಸು ಎಂದು ಗುರುವು ಉಪದೇಶಿಸುತ್ತಾನೆ.
ಬಸವ ಧರ್ಮದ ಸೈದ್ಧಾಂತಿಕ ಹಿನ್ನೆಲೆಯಲ್ಲಿ ನೋಡಿದರೆ ಈ ಆಚರಣೆ ತಪ್ಪು ಎಂದು ಯಾರಿಗಾದರೂ ಅನ್ನಿಸುವುದು.
ವಯಸ್ಸು ಎಳೆಯದಿರುವ ಮಕ್ಕಳಿಗೆ ಕಾವಿ ತೊಡಿಸುವುದು ಮೊದಲ ತಪ್ಪು. ಇವನ ವೃತ್ತಿಯು ಭಿಕ್ಷಾಟನೆ ಎಂಬಂತೆ ಭಿಕ್ಷಾಪಾತ್ರೆ ನೀಡಲಾಗುವುದು. ಜಂಗಮನು ಯಾಚಕನಲ್ಲ, ಭಿಕ್ಷುಕನಲ್ಲ. ಅವನು ಕಾಯಕ ಜೀವಿ. ಮನೆ ಮನೆಗೆ ತಿರುಗಿ ಭಿಕ್ಷೆ ಬೇಡುವುದು ಅವನ ಕೆಲಸವಲ್ಲ. ಅವನು ವಚನ ಸಾಹಿತ್ಯ ಅಧ್ಯಯನ ಮಾಡಿ ವಿದ್ವತ್ತೂರ್ಣನಾಗಿ ಮನೆಮನೆ ಸಂದರ್ಶಿಸಿ ಅವರಿಗೆ ಧರ್ಮದ ಬಗ್ಗೆ ಹೇಳಿ, ದೀಕ್ಷೆ ನೀಡಿ, ಆಚಾರ - ವಿಚಾರಗಳನ್ನು ಕಲಿಸುವ ಧಾರ್ಮಿಕ ಶಿಕ್ಷಕನೀತ. ಜಂಗಮತ್ವ ಶಿಥಿಲಗೊಂಡು ಆಗಿರುವ ಅಯ್ಯತನದಿಂದ. ಅವರು ಮನೆಮನೆಗೆ ರೊಟ್ಟಿ ಹಿಟ್ಟು ಬೇಡಲು ದೀನವದನರಾಗಿ ತಿರುಗುವ ವೃತ್ತಿಯಿಂದ, ಜನರು ತಿರಸ್ಕಾರದಿಂದ ಏನೋ ಇಷ್ಟು ರೊಟ್ಟಿ - ಹಿಟ್ಟು ಕೊಟ್ಟು ವ್ಯಂಗ್ಯ ಮಾತುಗಳನ್ನಾಡಿ ಕಳಿಸುವುದರಿಂದ ಲಿಂಗವಂತ ಧರ್ಮದ ಜಂಗಮ ತಮ್ಮ ಅಪಹಾಸ್ಯಕ್ಕೆ ಒಳಗಾಗಿದೆ. ಮಕ್ಕಳಿಗೆ ವಿದ್ಯೆ ಕೊಡಿಸೋಣ ಪರಿಜ್ಞಾನವಿಲ್ಲದೆ ಹಿಟ್ಟು ಬೇಡಲಿಕ್ಕೆ ಅಯ್ಯಾಚಾರ ಮಾಡಿ ಕಳಿಸುವ ತಾಯಿ ತಂದೆಯರಿಂದ ಮಕ್ಕಳ ಭವಿಷ್ಯ ಮಂಕಾಗುತ್ತದೆ. ಬಡತನದ ಪರಿಸ್ಥಿತಿಯಿಂದಾಗಿ ಅಯ್ಯಾಚಾರ ಹೊಂದಿದ ಮಕ್ಕಳು ಕಾವಿ ಧರಿಸಿ ದನಕಾಯುವುದನ್ನು ಸಹ ಮಾಡಿದಾಗ ಎಲ್ಲರ ಅವಮಾನಕರ ಮಾತುಗಳಿಗೆ ಒಳಗಾಗಬೇಕಾಗುತ್ತದೆ. ಶಾಲೆಗೆ ಹೋಗಲು ಮುಜುಗರ, ಬಾಯಿ ಚಪಲ ತಡೆಯಲಾರದೆ ಹೋಟೆಲ್ಲುಗಳಿಗೆ ಕಾವಿ ಧರಿಸಿ ಹೋದಾಗ ಎಲ್ಲರ ಕಣ್ಣು ಅವರ ಮೇಲೆಯೇ. ಆದ್ದರಿಂದ ಕ್ರಿಯಾಮೂರ್ತಿ (ಅಯ್ಯಾಚಾರ) ದೀಕ್ಷೆ ಹೊಂದುವವರಿಗೆ ಒಂದು ಕಾವಿಯ ಮೇಲು ವಸ್ತ್ರ ಕೊಡಬೇಕು ಅಷ್ಟೆ. ಅವರು ಉಳಿದಂತೆ ಸಾಮಾನ್ಯವಾದ ಬಟ್ಟೆಗಳನ್ನು ತೊಡುತ್ತ, ಧಾರ್ಮಿಕ ವಿಧಿಗಳನ್ನು ನಡೆಸಲು ಹೋದಾಗ ಮಾತ್ರ ಕಾವಿಯ ಮೇಲು ವಸ್ತ್ರ ಹೊದ್ದು, ಧಾರ್ಮಿಕ ನೇಮಗಳನ್ನು ನಿರ್ವಹಿಸಬೇಕು. ಬದಲಾವಣೆಯಾಗುವ ಮನಸ್ಸು, ವಯಸ್ಸು ಎರಡೂ ಇರುವ ಕಾರಣ ಈ ಹಂತದಲ್ಲಿ ಕಾವಿ ಕೊಡದೆ, ಅವರ ಜೀವನ ವಿಧಾನವು ನಿರ್ಧಾರವಾದ ಮೇಲೆ ಜಂಗಮ ದೀಕ್ಷೆ ಕೊಟ್ಟು ಕಾವಿ ಕೊಡುವುದು ಸೂಕ್ತವಾದುದು. ಕಾವಿ ಹಾಕಿದ ಮೇಲೆ ತೆಗೆಯುವುದು ಸೋಲಿನ ಲಕ್ಷಣವೆನಿಸುತ್ತದೆ.
ಕ್ರಿಯಾಮೂರ್ತಿ ದೀಕ್ಷೆಯನ್ನು ಪಡೆಯುವ ಇನ್ನಿತರರು ಸಹ ತಾವು ತಮ್ಮ ಸಹಜ ವೇಷ ಭೂಷಣದಲ್ಲಿಯೇ ಇದ್ದು, ಧಾರ್ಮಿಕ ವಿಧಿಗಳನ್ನು ನಿರ್ವಹಿಸುವಾಗ ಮಾತ್ರ ಶರಣರು ಬಿಳಿಯ ಲುಂಗಿ (ಧೋತ್ರ) - ಅಂಗಿ, ಶರಣೆಯರು ಬಿಳಿಯ ಸೀರೆ ಉಟ್ಟು ಮೇಲೆ ಕಾವಿಯ ಮೇಲು ವಸ್ತ್ರ ಹೊದೆಯಬೇಕು. ಜಂಗಮ (ಸನ್ಯಾಸ) ದೀಕ್ಷೆ ಹೊಂದಿದವರು ಮಾತ್ರ ಸದಾಕಾಲವೂ ಕಾವಿಯನ್ನು ಧರಿಸಬೇಕು.