Previous ಸಂಸ್ಕಾರ - ಪದದ ಅರ್ಥ ಮತ್ತು ಉದ್ದೇಶ ಗರ್ಭ ಲಿಂಗಧಾರಣೆ Next

ಸಂಸ್ಕಾರದ ವಿವಿಧ ಮುಖಗಳು


- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಮುಖಗಳು

ಲಿಂಗಾಯತ ಧರ್ಮವು ಸ್ವಭಾವತಃ ಅಧ್ಯಾತ್ಮಿಕ ಧರ್ಮ, ಸೃಷ್ಟಿಕರ್ತನ ಮೇಲೆ ಅನನ್ಯ ನಂಬುಗೆ ಇಟ್ಟು ಅವನ ಕಾರುಣ್ಯ (grace) ದ ಮೇಲೆಯೇ ಬದುಕನ್ನು ರೂಪಿಸುವ ದೃಷ್ಟಿಕೋನ (view) ಮತ್ತು ಜೀವನ ವಿಧಾನ (way of life) ಉಳ್ಳದ್ದು. ಈ ದಿವ್ಯ ಕೃಪೆಯು ಗುರು - ಲಿಂಗ - ಜಂಗಮದ ರೂಪದಲ್ಲಿ ಮತ್ತು ಅವರ ಮೂಲಕ ಹರಿದು ಬರುವುದೆಂಬ ವಿಶ್ವಾಸ ಧೃಢವಾಗಿದೆ. ಆದ್ದರಿಂದ ಯಾವುದೇ ಸಮಾರಂಭವಿದ್ದರೂ ಅದಕ್ಕೆ ಒಂದು ಆಂತರಿಕ ಮುಖ, ಇನ್ನೊಂದು ಬಹಿರಂಗಿಕ ಮುಖ ಇರುತ್ತದೆ. ಆಂತರಿಕ ಮುಖ ಧಾರ್ಮಿಕ ವಿಧಿಗೆ ಸಂಬಂಧಿಸಿದ್ದಾದರೆ ಬಹಿರಂಗಿಕ ಮುಖ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಾಪ್ತಿಯುಳ್ಳದ್ದು. ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳೋಣ. ಒಬ್ಬ ಬಾಲಿಕೆ ಮೈ ನೆರೆದಳು ಎಂದು ಕೊಳ್ಳೋಣ. ಆಕೆಗೆ ಉಣ್ಣಿಸುವುದು, ಉಪಚರಿಸುವುದು, ಅಲಂಕರಿಸುವುದು, ಆರತಿ ಮಾಡುವುದು, ಬಂಧುಬಳಗದವರನ್ನು ಆಹ್ವಾನಿಸುವುದು, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆ. ಮೊಟ್ಟ ಮೊದಲು ಗುರೂಪದೇಶವಾಗಬೇಕು. ತನ್ಮೂಲಕ ಶುದ್ದಿಯಾಗಬೇಕು ಎಂದು ದೀಕ್ಷೆ ಮಾಡಿಸುವುದು ಧಾರ್ಮಿಕ ಅಂಶ. ಗೃಹಿಣಿ ಚೊಚ್ಚಲ ಮಗುವಿಗೆ ಗರ್ಭವತಿಯಾದಾಗ ಸೀಮಂತ ಮಾಡಿಸುವುದು, ಗಂಡ ಹೆಂಡತಿಯನ್ನು ಕೂರಿಸಿ ಆರತಿ ಮಾಡುವುದು, ಸಾಮಾಜಿಕ ಸಾಂಸ್ಕೃತಿಕ ಕ್ರಿಯೆಯಾದರೆ ಗರ್ಭಸ್ಥ ಶಿಶುವಿಗೆ ಮಂತ್ರೋಪದೇಶ ಆಗಬೇಕು ಎಂಬುದು ಧಾರ್ಮಿಕ ಕ್ರಿಯೆ. ಹೀಗೆ ಪ್ರತಿಯೊಂದು ಸಂಸ್ಕಾರದ ಹಿಂದೆ ಕೇವಲ ಸಮಾರಂಭ (ceremony) ಅಷ್ಟೇ ಇರದು. ಧಾರ್ಮಿಕ ವಿಧಿ (religious rite)ಯೂ ಇರುತ್ತದೆ ಎಂಬುದು ಗಮನಾರ್ಹ ಮತ್ತು ಅದುವೆ ಬಹಳ ಮಹತ್ವಪೂರ್ಣ ಎಂಬುದನ್ನು ಲಕ್ಷ್ಯದಲ್ಲಿಡಬೇಕು. ಧರ್ಮಪಿತರು ಹೇಳುತ್ತಾರೆ :

ನೀನೊಲಿದರೆ ಕೊರಡು ಕೊನರುವುದಯ್ಯಾ
ನೀನೊಲಿದರೆ ಬರಡು ಹಯನಹುದಯ್ಯಾ
ನೀನೊಲಿದರೆ ವಿಷವು ಅಮೃತವಹುದಯ್ಯಾ
ನೀನೊಲಿದರೆ ಸಕಲ ಪಡಿಪದಾರ್ಥಗಳು
ಇದಿರಲ್ಲಿಪ್ಪವು, ಕೂಡಲ ಸಂಗಮದೇವ.


ಪರಮಾತ್ಮನ ಒಲುಮೆಯಾದರೆ ಕೊರಡಿನಂತಹ ಜೀವನ ಕೊನರುವುದು, ಬರಡಿನಂತಿರುವುದು ಹಯನಾಗುವುದು, ವಿಷದಂತೆ ನಾಶಪಡಿಸಲು ಬಂದ ವಿಪತ್ತು ಅಮೃತದಂತೆ ಪೋಷಕವಾಗುವುದು. ದೇವರ ಕೃಪೆಯಾದರೆ ಬಯಸಿದುದು, ಬಯಸದಿದ್ದರೂ ಅಗತ್ಯವಿರುವುದು ತಾನೇ ಒದಗಿ ಬರುವುದು.

ಸಂಸ್ಕಾರಗಳು ಹಲವಾರು ಉದ್ದೇಶಗಳನ್ನು ಹೊಂದಿವೆ.

1. ಶುದ್ದೀಕರಣ ಕ್ರಿಯೆ, ಉದಾ: ಋತುಮತಿಯಾದ ಹುಡುಗಿಗೆ ಸಂಸ್ಕಾರ.
2. ಧಾರ್ಮಿಕ ಚೌಕಟ್ಟಿಗೆ ಒಳಪಡುವುದು ಉದಾ : ಲಿಂಗದೀಕ್ಷೆ, ಜಂಗಮ ದೀಕ್ಷೆ,
3. ಸಮಾಜದ ಒಕ್ಕೂಟದಲ್ಲಿ ಒಂದು ಅಂಗವಾಗುವುದು. ಉದಾ : ವಿವಾಹ.
4. ಅನುಗ್ರಹ ಪಡೆಯುವುದು ಉದಾ : ಲಿಂಗದೀಕ್ಷೆ, ಕರುಣ ಪ್ರಸಾದ.


ಕೆಲವೊಮ್ಮೆ ಮನುಷ್ಯ ಅನೇಕ ರೀತಿಯ ವಿರಸಗಳಿಗೆ ಬಲಿಯಾಗಿ ಹತ್ತಿರದವರಿಂದ ದೂರವಾಗಿರುತ್ತಾನೆ. ಕೆಲವೊಂದು ಸುಖದುಃಖಗಳ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ವಿರಸವು ದೂರವಾಗಿ ಭಿನ್ನಾಭಿಪ್ರಾಯಗಳು ತೊಲಗಿ ಪುನಃ ಒಂದುಗೂಡಬಹುದು.

ಕೆಲವೊಂದು ಹಿಂದೂ ಸಂಸ್ಕಾರಗಳಲ್ಲಿ ಮೂರು ಅಂಶಗಳನ್ನು ಸಮಾಜ ವಿಜ್ಞಾನಿಗಳು ಗುರುತಿಸಿದ್ದಾರೆ.[1]

(1) ಬೇರ್ಪಡಿಸುವುದು (separation),
(2) ಸ್ಥಿತ್ಯಂತರ (transition) ಮತ್ತು
(3) ಒಳಗೊಳ್ಳುವುದು (incorporation).

ವ್ಯಕ್ತಿಯ ದೈಹಿಕ ಸ್ಥಿತ್ಯಂತರಗಳು ಆ ವ್ಯಕ್ತಿ, ಪರಿಸರ, ಕುಟುಂಬದ ಮೇಲೆ ಸತತವಾಗಿ ಪರಿಣಾಮ ಬೀರುವುದರಿಂದ ಈ ಹಂತಗಳನ್ನು ಸಮಾಜದಲ್ಲಿ ಅಳವಡಿಸಲಾಗಿದೆ ಎಂದು ಅಭಿಪ್ರಾಯ ಪಡಬಹುದು. ಎರಡು ಉದಾಹರಣೆ ನೋಡುವಾ - ಓರ್ವ ಬಾಲಿಕೆ ಋತುಮತಿಯಾಗುತ್ತಾಳೆ. ಆಕೆಗೆ ಹೊಸ ಅನುಭವ, ಭಯ - ಭೀತಿ, ಆತಂಕ - ಅಜ್ಞಾನ ಕಾಡುತ್ತಿರುತ್ತದೆ. ಆ ಮುದ್ದೆಯನ್ನು ಮೊದಲು ಇನ್ನಿತರರಿಂದ ಬೇರ್ಪಡಿಸಿ ಆಕೆ ಹೊಸ ಬದಲಾವಣೆಗೆ ಹೊಂದಿಕೊಳ್ಳಬೇಕಾದ ಬಗ್ಗೆ ಹಿರಿಯರು ತರಬೇತಿ ನೀಡಿ, ನಂತರ ಆರತಿ ಮುಂತಾಗಿ ಮಾಡಿ ಹೊರಜಗತ್ತಿಗೆ ತೋರ್ಪಡಿಸಿ ಪುನಃ ಸಾಮಾಜಿಕ ಜೀವನದಲ್ಲಿ ಬಿಡಲಾಗುವುದು.

ಆದರೆ ಲಿಂಗಾಯತ ಸಮಾಜದಲ್ಲಿ ಈ ಪ್ರಸಂಗದಲ್ಲಿ ಹೊರಗಿಟ್ಟು ಅಸ್ಪೃಶ್ಯರಂತೆ ತೀರಾ ವಿಲಕ್ಷಣವಾಗಿ ಕಾಣುವ ಪದ್ಧತಿ ಇಲ್ಲ. ತಮ್ಮ ತಿಳಿದವರು ಅಂದೇ ಅಭ್ಯಂಜನ ಸ್ನಾನ ಮಾಡಿಸಿ ದೀಕ್ಷೆ ಕೊಡಿಸುವರು. ಈಗ ಇನ್ನಿತರ ಸಮಾಜಗಳಲ್ಲೂ ಸಾಮಾಜಿಕ ಪರಿಸರ ಬದಲಾವಣೆಯಿಂದಾಗಿ ಸಾಕಷ್ಟು ಬದಲಾವಣೆ ಕಾಣಬರುತ್ತಿವೆ.

ಗರ್ಭಿಣಿ ಮಹಿಳೆಗೆ ಏಳು ತಿಂಗಳು ತುಂಬುತ್ತಿದ್ದಂತೆಯೇ ಸೀಮಂತ ಮಾಡಿಸಿ, ಪತಿ-ಪತ್ನಿಯರ ಸಂಬಂಧಕ್ಕೆ ವಿರಾಮ ಕೊಡಲು ಸೂಚನೆ ನೀಡಲಾಗುವುದು. ಹೆರಿಗೆಯಾಗಿ ಆಕೆ ಅಶಕ್ತತೆಯಿಂದ ಚೇತರಿಸಿಕೊಂಡ ಬಳಿಕ ಮೂರು ತಿಂಗಳ ಬಳಿಕ ಪತಿಯ ಗೃಹಕ್ಕೆ ಕಳಿಸಲಾಗುವುದು. ಹೀಗೆ ಬೇರ್ಪಡಿಸುವ - ಸ್ಥಿತ್ಯಂತರಗೊಳ್ಳುವ - ಒಳಗೊಳ್ಳುವ ಹಂತಗಳನ್ನು ಈ ಕ್ರಿಯೆಗಳಲ್ಲಿ ಕಾಣಬಹುದಾದರೂ ಇಂದಿನ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆ ಆಗುತ್ತಲಿವೆ, ಆಗುವುದು ಅವಶ್ಯವೂ ಇದೆ.

ಅತ್ಯಂತ ಸಂಕ್ಷಿಪ್ತಗೊಳಿಸಿ ನಾನು ಬರೆಯಬಹುದಿತ್ತು. ಹಾಗೆ ಮಾಡದೇ ಪ್ರತಿಯೊಂದು ವಿಧಿ-ವಿಧಾನದ ಹಿಂದೆ ಇರುವ ಅರ್ಥ ವ್ಯಾಪ್ತಿಯನ್ನು ವಿವರಿಸಿ, ಎಲ್ಲವನ್ನೂ ವಿವರವಾಗಿ ಬರೆದಿರುವೆ. ಸದ್ಯದ ಪರಿಸ್ಥಿತಿಯಲ್ಲಿ ಜನರಲ್ಲಿ ಧಾರ್ಮಿಕ ಮೌಲ್ಯಗಳಲ್ಲಿ ವಿಶ್ವಾಸ ಕುಸಿದಿದೆ. ಗ್ರಾಮೀಣ ಜನರಲ್ಲಿ ಮೂಢನಂಬಿಕೆಯೇ ಧರ್ಮದ ವೇಷ ಧರಿಸಿದ್ದರೆ ಪಟ್ಟಣಗಳಲ್ಲಿ ಧರ್ಮದ ನಿರ್ಲಕ್ಷ್ಯ - ಉದಾಸೀನ ತುಂಬಿವೆ. ಆದರೆ ಮುಸುಕಿರುವ ಬಗೆಬಗೆಯ ಅಗಂತುಕ ಸಂಗತಿಗಳ ತೆರೆ ಸರಿಸಿದರೆ ಧಾರ್ಮಿಕ ಆಚರಣೆ ಅದರಲ್ಲೂ ವಿಚಾರವಾದಿ ಬಸವಣ್ಣನವರು ಬೋಧಿಸಿದ ಧರ್ಮದಲ್ಲಿ ಅಪಾರವಾದ ಅರ್ಥವಿದೆ, ವೈಜ್ಞಾನಿಕತೆ ಇದೆ. ತಿಳಿದ ಬಳಿಕ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚು ಶ್ರದ್ಧೆಯುಳ್ಳವನಾಗುತ್ತಾನೆ.

ಮಾನವ ಸಮಾಜ, ಮುಖ್ಯವಾಗಿ ಭಾರತೀಯ ಸಮಾಜ ಆಧುನಿಕ ಸುಖ-ಭೋಗ-ವಿಲಾಸಗಳ ಬೆನ್ನು ಹತ್ತಿ ಧರ್ಮಕ್ಕೆ ವಿರುದ್ಧವಾಗಿ ಸಾಗುತ್ತಿದೆ. ಒಂದು ದಿನ ಸುಖ-ವಿಲಾಸಗಳ ಬಗ್ಗೆ, ಆಧುನಿಕ ಹೇಯವಾದ ಭೋಗಜೀವನದ ಬಗ್ಗೆ ಜಿಗುಪ್ಪೆ ಹುಟ್ಟಿ, ಓಕರಿಕೆ ಬರುತ್ತದೆ. ಆಗಲಾದರೂ ಅವನು ಒಳ್ಳೆಯದರ ಅನ್ವೇಷಣೆಗೆ ತೊಡಗುವನು. ಆದ್ದರಿಂದ ಉತ್ತಮ ವಿಚಾರಗಳನ್ನು ಗ್ರಂಥರೂಪದಲ್ಲಿ ಕಾಲನ ಗರ್ಭದಲ್ಲಿ ಹುದುಗಿಸಿದರೆ ಆಗ, ತಡವಾಗಿ ಹಂಬಲಿಸುವ ಮಾನವನಿಗಾದರೂ ದಿವ್ಯ ಜೀವನದ ದಾರಿ ಲಭ್ಯವಾಗುತ್ತದೆ.

ಒಟ್ಟಾರೆ ಹೇಳಬೇಕೆಂದರೆ ಜನನದಿಂದ ಹಿಡಿದು ಮರಣದವರೆಗೆ ವ್ಯಕ್ತಿಯು ಹೊಂದುವ ಸಂಸ್ಕಾರಗಳು ಹಂತಹಂತವಾಗಿ ವ್ಯಕ್ತಿಯನ್ನು ಆತ್ಮಿಕವಾಗಿ ಸಹ ಉತ್ಥಾನಿಸುವ ಕ್ರಿಯೆಗಳೇ ಎಂಬುದನ್ನು ಅರಿಯಬಹುದು.

ಲಿಂಗಾಯತ ಧರ್ಮ ಹಲವಾರು ರೀತಿಯಲ್ಲಿ ವಿಶೇಷವಾಗಿಯೂ, ಬೇರೆ ಇನ್ನಿತರ ಮತ ಪಂಥ ಧರ್ಮಗಳ ಆಚರಣೆಗಿಂತಲೂ ಭಿನ್ನವಾಗಿಯೂ ಇದೆ. ಇದನ್ನು ಕ್ರೋಢೀಕರಿಸಿ ರೂಪಿಸಿಕೊಡುವ ಕಾಲದಲ್ಲಿ ಬಸವಣ್ಣನವರು ಎರಡು ರೀತಿಯ ದೋಷಗಳು ಒಳಬರದಂತೆ ನೋಡಿಕೊಳ್ಳಬೇಕಾಯಿತು. ಈ ದೋಷಗಳೆಂದರೆ :

(1) ಶಾಸ್ತ್ರೀಯವಾದ ಸಂಪ್ರದಾಯವಾಗಿದ್ದ (classical tradition) ವೈದಿಕ ಮತದಿಂದ ನುಸುಳುವ ದೋಷಗಳು.
(2) ಅಶಾಸ್ತ್ರೀಯವಾದ, ಕ್ಷುಲ್ಲಕವಾದ, ಮೂಢರೀತಿಯ ಬಣಾಚರಣೆಗಳು (tribal practices), ಮಗುವು ಹುಟ್ಟಿದ ತಕ್ಷಣವೇ ಜ್ಯೋತಿಷ್ಯ ಕೇಳಿ, ಜಾತಕ ಬರೆಸುವುದು, ವೈದಿಕ ದೋಷವಾದರೆ, ಗಡಿಗೆಯಲ್ಲಿ ಮಾಸ ಹಾಕಿ ಅದರಲ್ಲಿ ಐದು ತರಹದ ಕಾಳು - ಜೋಳ, ಗೋಧಿ, ಹೆಸರು, ಮಡಿಕೆ, ತೊಗರಿ, ಹಣ ಹಾಕಿ ಮುಚ್ಚಿ ಮರೆಯಾದ ಜಾಗದಲ್ಲಿ ಹುಗಿಯುವುದು ಬಣಾಚರಣೆ.

ಇಂದಿನ ಲಿಂಗಾಯತ ಸಮಾಜದಲ್ಲಿ ಪುನಃ ಇವೆಲ್ಲವೂ ವಿಫುಲವಾಗಿ ಬಂದು ಸೇರಿರುವ ಕಾರಣ, ಬಸವ ಧರ್ಮದ ಸೈದ್ಧಾಂತಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಇವೆಲ್ಲವನ್ನು ತೆಗೆದು ಶುದ್ದೀಕರಿಸುವುದು ಅತ್ಯಂತ ಅಗತ್ಯವಿದೆ.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.
[2] ಲಿಂಗಾಯತ ಸಂಸ್ಕಾರಗಳು. ಡಾ ಶಿವಾನಂದ ಗುಬ್ಬಣ್ಣನವರು. ಪುಟ - ೨೭

ಪರಿವಿಡಿ (index)
Previous ಸಂಸ್ಕಾರ - ಪದದ ಅರ್ಥ ಮತ್ತು ಉದ್ದೇಶ ಗರ್ಭ ಲಿಂಗಧಾರಣೆ Next