![]() | ಪರಮಾತ್ಮ ಸ್ವರೂಪ | ಸಂಸ್ಕಾರದ ವಿವಿಧ ಮುಖಗಳು | ![]() |
ಸಂಸ್ಕಾರ - ಪದದ ಅರ್ಥ ಮತ್ತು ಉದ್ದೇಶ |
ಪ್ರತಿಯೊಂದು ವಸ್ತುವನ್ನು ಅದರ ಯಥಾರೂಪದಲ್ಲಿ ಬಳಸದೇ ಸಂಸ್ಕರಿಸಿ ಬಳಸುವುದು ಮಾನವ ಸಮಾಜದಲ್ಲಿ ಬೆಳೆದು ಬಂದಿರುವ ಪರಿಪಾಠ. ಪ್ರಾಣಿಗಳು ಮಾನವನಂತೆಯೇ ಜೀವಂತ ವಸ್ತುಗಳು. ಆದರೆ ಅವು ಎಲ್ಲವನ್ನು ಇರುವಂತೆಯೇ ಉಪಯೋಗಿಸುತ್ತವೆ.: ಹಸಿವೆಯಾದ ಸಸ್ಯಾಹಾರಿ ಪ್ರಾಣಿ ಹುಲ್ಲನ್ನು ತಿನ್ನುವುದು, ಮಾಂಸಾಹಾರಿ ಪ್ರಾಣಿ ಜೀವವನ್ನು ತಿನ್ನುವುದು. ಮಾನವನಾದರೋ ಆ ವಸ್ತುಗಳನ್ನು ತೊಳೆದು, ಬೇಯಿಸಿ, ರುಚಿಕಟ್ಟಾಗಿ ಮಾಡಿ ಅಂದರೆ ಸಂಸ್ಕರಿಸಿ ತಿನ್ನುವನು. ಪ್ರಾಣಿಗಳಿಗೆ ಲೈಂಗಿಕ ಬಯಕೆ ಉಂಟಾದ ತಕ್ಷಣ ಯಾವುದೇ ಸಂಬಂಧ, ನಂಟು ನೋಡದೆ ಸಜಾತಿಯ ಪ್ರಾಣಿಗಳು ಪರಸ್ಪರ ಕೂಡುವವು. ಮನುಷ್ಯ ಹಾಗಲ್ಲ. ಮದುವೆ ಎಂಬ ಧಾರ್ಮಿಕ - ಸಾಂಸ್ಕೃತಿಕ - ನೈತಿಕ ರೂಪ ಕೊಟ್ಟು ಅಣ್ಣ - ತಂಗಿ, ಅತ್ತಿಗೆ - ಚಿಕ್ಕಮ್ಮ ಎಂಬ ಸಂಬಂಧಗಳನ್ನು ಪರಿಶೀಲಿಸಿ ಸಂಗಾತಿಯನ್ನಾಗಿ ಸ್ವೀಕರಿಸುವರು. ಉಳಿದ ಪ್ರಾಣಿಗಳಿಗೂ ನೈತಿಕ - ಮಾನವ ಪ್ರಾಣಿಗಳಿಗೂ ಇರುವ ವ್ಯತ್ಯಾಸವೇ ಈ ಸಾಮಾಜಿಕ - ಸಾಂಸ್ಕೃತಿಕ ಧಾರ್ಮಿಕ ಚೌಕಟ್ಟು, ವ್ಯಕ್ತಿಯ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಸಂಸ್ಕರಣ ಕ್ರಿಯೆ ನಿರಂತರವಾಗಿ ಸಾಗುತ್ತದೆ.
ಮಾನವ ಶಿಶುವು ಈ ಲೋಕಕ್ಕೆ ಬಂದಾಗ ಒಂದು ಪ್ರಾಣಿಯೇ. ಇಂಥ ಜೀವಿಯನ್ನು ಹಲವು ಬಗೆಯಿಂದ ಸಂಸ್ಕರಿಸಿ, ಐಹಿಕ ಮತ್ತು ಪಾರಮಾರ್ಥಿಕ ಜೀವನಕ್ಕೆ ಅಣಿ ಮಾಡಲಾಗುವುದು. ಸಂಸ್ಕರಿಸು ಎಂಬ ಪದಕ್ಕೆ ಹಲವಾರು ಅರ್ಥಗಳನ್ನು ನೀಡಬಹುದು. ಸ್ವಚ್ಛಕರಿಸುವುದು. ಶುದ್ದೀಕರಿಸುವುದು, ದೈವೀಕರಿಸುವುದು ಇವು ವಿವಿಧ ಹಂತಗಳನ್ನು ಚಿತ್ರಿಸುತ್ತವೆ. ಅದೇ ರೀತಿ ಪರಿವರ್ತಿಸು (ಮಾರ್ಪಡಿಸು) ಪರಿಷ್ಕರಿಸು (ಸುಧಾರಿಸು) ವುದು ಎಂದು ಆಗುತ್ತದೆ. ಒಂದು ಹಣ್ಣನ್ನು ಅಂಗಡಿಯಿಂದ ತರುತ್ತೇವೆ. ಅದನ್ನು ಸಂಸ್ಕರಿಸು ಎಂದರೆ ಚೆನ್ನಾಗಿ ತೊಳೆಯುವುದು, ಹೆಚ್ಚುವುದು ಎಂದು ಅರ್ಥ. ತಟ್ಟೆಯಲ್ಲಿಟ್ಟುಕೊಂಡು ದೇವರಿಗೆ ನೈವೇದ್ಯ ಮಾಡುತ್ತೇವೆ. ಈಗ ಸಂಸ್ಕರಿಸುವುದು ಎಂದರೆ ದೈವೀಕರಿಸುವುದು ಎಂದು ಅರ್ಥ. ಈ ಸಂಸ್ಕರಣದ ಉದ್ದೇಶ ಹೊತ್ತು ಹುಟ್ಟಿ ಬಂದ ತತ್ವಗಳೇ ನಾಗರಿಕತೆ, ಸಂಸ್ಕೃತಿ, ನೀತಿಶಾಸ್ತ್ರ, ಧರ್ಮಶಾಸ್ತ್ರ ಮುಂತಾದುವು.
ಧರ್ಮವು ವ್ಯಕ್ತಿಯನ್ನು ಪರಮೋನ್ನತ ಗುರಿಗೆ ಒಯ್ಯುವ ಉದ್ದೇಶದಿಂದ ಸಂಸ್ಕಾರ ನೀಡುತ್ತದೆ. ನಾಗರಿಕ ಸಂಸ್ಕಾರ ಸಮಾಜ ಪ್ರಜ್ಞೆಯನ್ನು, ನೀತಿ ಶಾಸ್ತ್ರದ, ಸಂಸ್ಕಾರ ಮಾನವೀಯತೆಯನ್ನು ಬೆಳೆಸಿದರೆ ಧರ್ಮವು ನೀಡುವ ಸಂಸ್ಕಾರವು ಪರಮಾತ್ಮನಲ್ಲಿಗೆ ವ್ಯಕ್ತಿಯನ್ನು ಕೊಂಡೊಯ್ಯುತ್ತದೆ. ಈ ಅಂತಿಮ ಗುರಿಯನ್ನು ಹೊಂದಿದ ಜೀವಿ ತನ್ನ ಸುತ್ತಲೂ ಇರುವ ಕುಟುಂಬ, ಸಮಾಜ, ರಾಷ್ಟ್ರ ಮುಂತಾದ ಘಟಕಗಳೊಂದಿಗೆ ಹೇಗೆ ಹೊಂದಿಕೊಳ್ಳಬೇಕೆಂಬುದನ್ನೂ ಧರ್ಮವು ಕಲಿಸುತ್ತದೆ. ಸಂಸ್ಕಾರವು ಸಂಘಜೀವಿಯಾದ ಮಾನವನನ್ನು ತನ್ನ ಒಕ್ಕೂಟಕ್ಕೆ ಹೇಗೆ ಸೇರಿಸಿಕೊಳ್ಳಬಹುದೆಂಬುದನ್ನೂ ಕಲಿಸುತ್ತದೆ. ಹೀಗಾಗಿ ವ್ಯಕ್ತಿಯು ಸಮಾಜದ ಅವಿಭಾಜ್ಯ ಅಂಗವಾಗಿ ಉಪಯುಕ್ತನಾಗುತ್ತಾನೆ.
ಹೀಗೆ ಸಂಸ್ಕರಿಸುವ ಉದ್ದೇಶದಿಂದ ಕೆಲವೊಂದು ವಿಧಿ (rites)ಗಳನ್ನು ಧಾರ್ಮಿಕವಾಗಿ ಅಳವಡಿಸಲಾಗಿರುವ ಕಾರಣ ಎಲ್ಲ ಮತಧರ್ಮಗಳಲ್ಲಿಯೂ ಇಂಥ ವಿಧಿಗಳನ್ನು ಕಾಣಬಹುದು. ಸಂಸ್ಕಾರ ಪದವನ್ನು ಇನ್ನೊಂದು ಅರ್ಥದಲ್ಲಿಯೂ ಬಳಸಲಾಗುವುದು. 'ಏನು ಮಾಡುವುದು, ನಾವು ಅವನಿಗೆ ಏನು ಹೇಳಿದರೂ ನಾಟದು, ಅವನ ಸಂಸ್ಕಾರವೇ ಹಾಗಿದೆ' ಎನ್ನುತ್ತೇವೆ. “ಎಂಥ ಸಂಸ್ಕಾರ ಉಳ್ಳ ವ್ಯಕ್ತಿ; ಸಭ್ಯ, ತುಂಬಿದ ಕೊಡದಂತಹವನು” ಎನ್ನುತ್ತೇವೆ. ಇಲ್ಲಿ ವ್ಯಕ್ತಿಯಲ್ಲಿ ಅಳವಟ್ಟ, ಅಂತರ್ಗತ ತರಬೇತಿ ಎಂಬರ್ಥ ಬರುತ್ತದೆ.
ಈಗ ನಾವು ವಿಧಿ - ವಿಧಾನ, ಕಾರ್ಯ - ಕಾರಣ, ರೂಢಿ - ನಿಯಮ, ಮುಂತಾದ ಪದಗಳ ಬಗ್ಗೆ ತಿಳಿಯೋಣ.
೧. ವಿಧಿಗಳು rites :
ವ್ಯಕ್ತಿಗೆ ಹುಟ್ಟಿನಿಂದ ಅಥವಾ ಜನನ ಪೂರ್ವದಿಂದಲೇ ಹಿಡಿದು ಸಾಯುವವರೆಗೆ ಮಾಡುವ ಧಾರ್ಮಿಕ ಸಂಸ್ಕಾರಗಳು, ಧಾರ್ಮಿಕ ವಿಧಿ ಮತ್ತು ಧಾರ್ಮಿಕ ಸಂಸ್ಕಾರಗಳು ಸಮಾನಾರ್ಥದಲ್ಲಿ ಬಳಸುವ ಪದಗಳು,
೨. ವಿಧಾನ ritual :
ಧಾರ್ಮಿಕ ವಿಧಿಗಳನ್ನು ಮಾಡಬೇಕಾದರೆ ಅದಕ್ಕೆ ಒಂದು ವಿಧಾನವಿರುತ್ತದೆ. ಹಲವಾರು ವೈಧಾನಿಕ ಕ್ರಿಯೆಗಳ (ritualistic activities) ಒಕ್ಕೂಟವೇ ಒಂದು ವಿಧಿಯಾಗುತ್ತದೆ. ವೈದಿಕರ ಉಪನಯನ ಸಂಸ್ಕಾರದಲ್ಲಿ ಹೋಮವು ಒಂದು ವೈಧಾನಿಕ ಕ್ರಿಯೆ. ಲಿಂಗಾಯತ ಧರ್ಮದ ಯಾವುದೇ ಸಂಸ್ಕಾರದಲ್ಲಿ ಗುರು - ಲಿಂಗ - ಜಂಗಮ ಪೂಜೆಗಳು ವೈಧಾನಿಕ ಕ್ರಿಯೆಗಳು.
ಚಿಂತನೆ ಮಾಡಿದಾಗ ನನಗೆ ಅನ್ನಿಸುತ್ತಿದೆ. ವಿಧಿ - ವಿಧಾನ (rites and rituals) ಸಮಾನಾರ್ಥದಲ್ಲಿ ಬಳಸುವರಾದರೂ ತುಸು ವ್ಯತ್ಯಾಸವಿದೆ. ವಿಧಿ (rite) ಯು ವ್ಯಕ್ತಿಗೆ ಮಾಡುವಂಥಾದ್ದು, ವಿಧಾನ (ritual) ವು ವ್ಯಕ್ತಿಯು ಮಾಡುವಂಥಾದ್ದು. ಜನನ ವಿಧಿ (birth rites), ಮರಣ ವಿಧಿ (funeral rites) ವ್ಯಕ್ತಿಗೆ ಮಾಡುತ್ತೇವೆ. ಲಿಂಗಪೂಜೆ - ಗುರುಪೂಜೆ - ಮುಂತಾದ ವಿಧಾನ (rituals) ಗಳನ್ನು ವ್ಯಕ್ತಿಯು ಮಾಡುವನು. ಈ ವೈಧಾನಿಕ ಕ್ರಿಯೆಗಳು (ritualistic activities) ಧಾರ್ಮಿಕ ವಿಧಿ (religious rite)ಯ ಅಂಗವೇ ಆಗಿರುತ್ತವೆ ಕೂಡ.
೩. ವಿಧಿಯನ್ನು ಹಿಂಬಾಲಿಸಿ ಸಮಾರಂಭಗಳು (ceremony) ನಡೆಯುತ್ತವೆ. ಉದಾ: ಲಿಂಗಧಾರಣೆಯ ವಿಧಿಯ ನಂತರ ತೊಟ್ಟಿಲು ಕಾರ್ಯ, ಕೂದಲು ತೆಗೆದ ನಂತರ ಗಣ ಪ್ರಸಾದ ಇವಕ್ಕೆ ಕಾರ್ಯ, ಕಾರಣ ಎಂದು ರೂಢಿಯಲ್ಲಿ ಬಳಸುತ್ತಾರೆ. ಇಂದು ಜವಳದ ಕಾರ್ಯ (ಕಾರಣ) ಇತ್ತು, ಬಂದಿದ್ದೆವು ಎನ್ನುವರು.
೪. ರೂಢಿ ನಿಯಮಗಳು (customs):
ಕೆಲವೊಂದು ನಿಯಮಗಳು ಸಮಾಜದಲ್ಲಿ ರೂಢಿಗೊಂಡಿರುತ್ತವೆ. ಅವುಗಳಿಗೆ ತನ್ನದೇ ಆದ ತಾತ್ವಿಕ ಹಿನ್ನೆಲೆ, ಸೈದ್ಧಾಂತಿಕ ಅರ್ಥ ಇರಬಹುದು. ಅಥವಾ ಇಲ್ಲದೇ ಹಾಗೆಯೇ ಅಚರಣೆಯಲ್ಲಿ ಉಳಿದು ಬಂದಿರಬಹುದು. ಇವುಗಳನ್ನು ರೂಢಿಯಲ್ಲಿ ಬಂದಿರುವವು ಎಂದು, ಸಂಪ್ರದಾಯದಲ್ಲಿ ನಡೆದು ಬಂದುದು ಎಂದು ಹೇಳುವರು. (ಲಿಂಗಾಯತ ಧರ್ಮವು ಸೈದ್ಧಾಂತಿಕ ಹಿನ್ನೆಲೆಯಿಲ್ಲದ ರೂಢಿ ನಿಯಮಗಳನ್ನು ಉಗ್ರವಾಗಿ ನಿಷೇಧಿಸಿದ್ದರೂ, ಇವು ಬಣಾಚರಣೆ (tribal practices) ಪಳೆಯುಳಿಕೆಗಳಾಗಿ ಲಿಂಗಾಯತ ಸಮಾಜದಲ್ಲಿ ವಿಫುಲವಾಗಿ ತುಂಬಿಕೊಂಡಿರುವುದನ್ನು ಕಾಣಬಹುದು).
ಜೈಮಿನಿ ಸೂತ್ರದ ವ್ಯಾಖ್ಯಾನಕಾರನಾದ ಶಾಬ್ರನು "ಕೆಲವು ವಸ್ತು ಇಲ್ಲವೇ ವ್ಯಕ್ತಿಗಳಿಗೆ ಅರ್ಹತೆ ಪ್ರಾಪ್ತವಾಗುವಂತೆ ಮಾಡುವ ಕ್ರಿಯೆಗಳಿಗೆ ಸಂಸ್ಕಾರ"ವೆಂದು ವಿವರಣೆ ಕೊಡುತ್ತಾನೆ.[1] ಈ ಸಂಸ್ಕಾರದಿಂದ ವ್ಯಕ್ತಿಗಳಲ್ಲಿ ಪೂರ್ವಾಶ್ರಯ ನಿವೃತ್ತಿಯಾಗಿ ಅಂದರೆ ಪೂರ್ವಗುಣಗಳು ಅಳಿದು ಹೊಸ ಜನ್ಮ - ಹೊಸ ಗುಣ ಬಂದಂತೆಯೂ ಆಗುವುದು.
ಎನ್ನ ಕಾಯದ ಕತ್ತಲೆಯ ಕಳೆಯಯ್ಯ
ಎನ್ನ ಮಾಯದ ಮದವ ಮುರಿಯಯ್ಯ
ಎನ್ನ ಜೀವದ ಜಂಜಡವ ಮಾಣಿಸಯ್ಯ. - ಅಕ್ಕಮಹಾದೇವಿ
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ
ಮನದ ಭಂಗವ ಅರುಹಿನ ಮುಖದಿಂದ ಗೆಲಿದೆ
ಜೀವದ ಭಂಗವ ಶಿವಾನುಭವದಿಂದ ಗೆಲಿದೆ. - ಅಕ್ಕಮಹಾದೇವಿ
ಕಾಯದ ಕತ್ತಲೆ, ಮನದ ಮಾಯೆ, ಜೀವದ ಜಂಜಡ ಇವು ಶರೀರ - ಮನಸ್ಸು - ಜೀವಕ್ಕೆ ಸುತ್ತಿದವು. ಇವನ್ನು ನಿರ್ಮೂಲನೆ ಮಾಡಿ ಅಂದರೆ ಶರೀರ - ಮನಸ್ಸು (ಬುದ್ದಿ)ಗಳನ್ನು ಪವಿತ್ರಗೊಳಿಸಿ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುವುದೇ ಸಂಸ್ಕಾರದ ಗುರಿ. ಅಂಗದ ಭಂಗವನ್ನು ಕಳೆಯಲು ಲಿಂಗಪೂಜೆ, ಮನದ ಭಂಗವನ್ನು ಕಳೆಯಲು ಶರಣರ ಸಂಗದಲ್ಲಿ ದೊರೆಯುವ ಸುಜ್ಞಾನ, ಜೀವನದ ಭಂಗ ಕಳೆಯಲು ದಿವ್ಯಾನುಭೂತಿ ಇವನ್ನು ಒದಗಿಸಿ ಕೊಡುವ ಕ್ರಿಯೆಯೇ ಸಂಸ್ಕಾರ.
ವೈದಿಕ ಧರ್ಮದ ಲೋಪದೋಷಗಳ ನಿವಾರಣೆಗಾಗಿಯೇ ಹುಟ್ಟಿದ್ದು ಲಿಂಗಾಯತ ಧರ್ಮ. ಬ್ರಾಹ್ಮಣ ಧರ್ಮದಲ್ಲಿ ಹುಟ್ಟಿದ ಬಸವಣ್ಣನವರು ಅಲ್ಲಿದ್ದ ಲೋಪದೋಷ, ಮೂಢ ನಂಬಿಕೆ, ಧರ್ಮದ ಹೆಸರಿನಲ್ಲಿಯೇ ಸಾಗಿದ್ದ ಶೋಷಣೆ, ಅಸಮಾನತೆ ಮುಂತಾದವುಗಳನ್ನು ಕಂಡು ಬೇಸತ್ತು ಹೊಸಧರ್ಮವೊಂದನ್ನು ಸ್ಥಾಪಿಸಿದಾಗ ಜನ್ಮ ತಾಳಿದ್ದೇ ಲಿಂಗಾಯತ ಧರ್ಮ. ಹೀಗಾಗಿ ಅದು ಏತಿ ಎಂದರೆ ಇದು ಪ್ರೀತಿ ಎನ್ನುತ್ತದೆ. ಕೇವಲ ವಿರೋಧಿಸಬೇಕು ಎಂಬ ದ್ವೇಷಮನೋಭಾವದಿಂದ ವಿರೋಧಿಸುವುದಿಲ್ಲ. ಸತ್ಯವನ್ನು ಪ್ರತಿಪಾದಿಸಿ, ಎತ್ತಿ ಹಿಡಿದು, ವೈದಿಕ ಧರ್ಮದ ಲೋಪದೋಷಗಳನ್ನು ವಿರೋಧಿಸುತ್ತದೆ.
ಆದರೆ, ದುರ್ದೈವವೆಂಬಂತೆ ಬಸವಾದಿ ಪ್ರಮಥರ ಜೀವಿತಾನಂತರ ಲಿಂಗಾಯತ ಸಮಾಜದ ಒಳಹೊಕ್ಕ ಪುರೋಹಿತಶಾಹಿಯು, ಶಿವಭಕ್ತನಾದ ಹಿರಣ್ಯ ಕಶ್ಯಪುವಿನ ಹೊಟ್ಟೆಯಲ್ಲಿ ಹುಟ್ಟಿ, ಸ್ವಧರ್ಮವಿರೋಧಿಯಾಗಿ, ಶತೃವನ್ನು ಕರೆತಂದು ತನ್ನ ತಂದೆಯನ್ನು ಕೊಲ್ಲಿಸಿದ ಪ್ರಹ್ಲಾದನಂತೆ ಇಂದು ಲಿಂಗವಂತ ಸಮಾಜ ಸಂಸ್ಕೃತಿಯನ್ನು ಕೊಂದಿದೆ. ಬಸವಾದಿ ಪ್ರಮಥರು ಹೊರಹಾಕಿದ್ದ ಎಲ್ಲ ವೈದಿಕ ಕ್ರಿಯೆಗಳನ್ನು ಲಿಂಗವಂತ ಸಮಾಜದ ಪುರೋಹಿತರು ಮತ್ತು ಮಠಾಧಿಪತಿಗಳು ವೈದಿಕರಿಗಿಂತಲೂ ಹೆಚ್ಚಿನ ನಿಷ್ಠೆಯಿಂದ ಪಾಲಿಸುತ್ತಿರುವರು. “ಬಸುರ ಬಾಳುವೆಗೆ ಮಸಿಯ ಪೂಸಿ ನೇರಿಳೆ ಹಣ್ಣ ಮಾರುವಂತೆ” ವೈದಿಕ ಸಂಪ್ರದಾಯಕ್ಕೆ ಬಲಿಬಿದ್ದ ಪುರೋಹಿತರು, ಸ್ವಾಮಿಗಳು ಮೂಢ ಭಕ್ತರು ಕೊಡುವ ಕಾಣಿಕೆಯ ಆಸೆಗಾಗಿ ಏನನ್ನು ಪೂಜಿಸಲೂ ಸಿದ್ಧರಿದ್ದಾರೆ. ಆದರೆ, ಸೈದ್ದಾಂತಿಕ ದೃಷ್ಠಿಯಿಂದ ವೈದಿಕ ಧರ್ಮ - ಲಿಂಗವಂತ ಧರ್ಮಗಳು ಪೂರ್ವ - ಪಶ್ಚಿಮದಂತೆ ಎಂಬುದು ಗಮನಾರ್ಹ.
೧. ವೈದಿಕ ಧರ್ಮದಲ್ಲಿ ಅಗ್ನಿ ಬಹಳ ಮಹತ್ವಪೂರ್ಣವಾದುದು. ಅಗ್ನಿಗೆ ಹವಿಸ್ಸನ್ನು ಕೊಡುವ ಮೂಲಕ ಎಲ್ಲ ಕಾರ್ಯಗಳು ನೆರವೇರುವವು. ಮದುವೆಯು ಅಗ್ನಿಸಾಕ್ಷಿಯಾಗಿ ಅಗುವುದು, ಹೆಂಡತಿಯ ಶೀಲ ಪರೀಕ್ಷೆಯೂ ಅಗ್ನಿ ಮೂಲಕವೇ. ಲಿಂಗಾಯತ ಧರ್ಮದಲ್ಲಿ ಎಲ್ಲ ಕ್ರಿಯೆಗಳೂ ಗುರು - ಲಿಂಗ - ಜಂಗಮ ಸಾಕ್ಷಿಯಾಗಿ ಆಗುವವು. ಇಲ್ಲಿ ಅಗ್ನಿಯು ಪಂಚಭೂತಗಳಲ್ಲಿ ಒಂದು ಭೂತವೇ ವಿನಾ ದೇವರಲ್ಲ. ಮತ್ತು ವಿಶೇಷ ದೈವಿಕತೆ, ಪಾವಿತ್ರ್ಯತೆ ಹೊಂದಿದ ವಸ್ತುವಲ್ಲ.
೨. ವೈದಿಕ ಧರ್ಮದಲ್ಲಿ ಎಲ್ಲ ಶುಭಕಾರ್ಯ ಮಾಡಲು ಮುಹೂರ್ತ ನೋಡಬೇಕು, ಪಂಚಾಂಗ ಬೇಕೇ ಬೇಕು. ಮನಸ್ಸು ಒಪ್ಪಿದ್ದರೂ ಜಾತಕ ಕೂಡದಿದ್ದರೆ ಆ ಮದುವೆ ಮುರಿಯುವುದು. ಲಿಂಗವಂತ ಧರ್ಮದಲ್ಲಿ ಮನಸ್ಸು ಒಪ್ಪಿದರೆ ಸಾಕು ಉಳಿದವೆಲ್ಲ ಕೂಡಿ ಬಂದಂತೆಯೇ !
ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯ
ರಾಶಿಕೂಟ ಗಣ ಸಂಬಂಧ ಉಂಟೆಂದು ಹೇಳಿರಯ್ಯ
ಚಂದ್ರಬಲ, ತಾರಾಬಲ ಉಂಟೆಂದು ಹೇಳಿರಯ್ಯ
ನಾಳಿನ ದಿನಕ್ಕಿಂದಿನದಿನ ಲೇಸೆಂದು ಹೇಳಿರಯ್ಯ
ಕೂಡಲ ಸಂಗಮ ದೇವರ ಪೂಜಿಸಿದ ಫಲ ನಿಮ್ಮದಯ್ಯ
- ಗುರು ಬಸವಣ್ಣ
ವೈದಿಕ ಧರ್ಮದಲ್ಲಿ ಗ್ರಹಬಲ ಮುಖ್ಯ. ಲಿಂಗಾಯತ ಧರ್ಮದಲ್ಲಿ ಸೃಷ್ಟಿಕರ್ತನ ಬಲ ಮುಖ್ಯ. ಕೂಡಲ ಸಂಗನ ಪೂಜಿಸಿದ ಫಲ ಕೈಯ್ಯ ಮೇಲೆ ಎನ್ನುವರು.
ಚಂದ್ರಬಲ, ತಾರಾಬಲ ಎಂಬಿರಿ
ಇಂದ್ರಂಗೆ ಯಾರ ಬಲ, ಚಂದ್ರಂಗೆ ಯಾರ ಬಲ ?
ಮುಕುಂದಂಗೆ ಯಾರ ಬಲ,
ಬರದೆ ಸೊಡ್ಡಳನ ಬಲವು ?
೩. ವೈದಿಕ ಧರ್ಮದಲ್ಲಿ ಸೂತಕದ ಕಾಟ ಬಹಳ. ಜನನ ಸೂತಕ, ಮರಣ ಸೂತಕ, ಜಾತಿಸೂತಕ, ರಜಸ್ಸೂತಕ, ಉಚ್ಛಿಷ್ಟ ಸೂತಕಗಳ ಭಯ ಬಹಳ. ಹೀಗಾಗಿ ಸಾವಾದರೆ ಮದುವೆಯಂಥಾ ಶುಭಕಾರ್ಯ ಮುಂದೆ ಹೋಗುತ್ತದೆ ಅಥವಾ ಅಪಶಕುನವೆಂದು ನಿಂತರೂ ನಿಲ್ಲಬಹುದು.
ಲಿಂಗಾಯತ ಧರ್ಮದಲ್ಲಿ ಈ ಸೂತಕಗಳಾವುವೂ ಕಾಡವು. ಸ್ನಾನ - ಇಷ್ಟ ಲಿಂಗಾರ್ಚನೆ ಮಾಡಿ ಸೂತಕದ ಭಯ ನಿವಾರಿಸಿಕೊಳ್ಳುವ ಪರಿಪಾಠವಿದೆ.
ಇಷ್ಟೆಲ್ಲ ಪ್ರಗತಿಪರವೂ, ವೈಚಾರಿಕವೂ ಸರಳವೂ ಆಗಿದ್ದರೂ ಮೂಢ ಲಿಂಗಾಯತರು ಅವರಿವರನ್ನು ನೋಡಿ ತಾವು ಏನೇನೋ ಆಚರಣೆ ರೂಢಿಸಿಕೊಳ್ಳುತ್ತಿರುವರು. ತಪ್ಪು ಇವರದಲ್ಲ; ಈ ಕುರುಡರನ್ನು ಕೈಹಿಡಿದು ನಡೆಸುತ್ತಿರುವ ಕೆಲವು ಮಠಾಧಿಪತಿಗಳೆಂಬ ಹಿರಿಯ ಕುರುಡರದು.
೪. ಗೋಮಯ, ಗೋಮೂತ್ರ, ಗೋಕ್ಷೀರ, ಗೋದಧಿ, ಗೋಸ್ಕೃತ ಮುಂತಾದ ಪಂಚಗವ್ಯಗಳು ವೈದಿಕ ಧರ್ಮದಲ್ಲಿ ಶುದ್ದೀಕರಿಸುವ ಸಾಧನಗಳು. ಲಿಂಗವಂತ ಧರ್ಮದಲ್ಲಿ ಗುರು - ಲಿಂಗ - ಜಂಗಮದ ಕರುಣೋದಕ ಪ್ರಧಾನ ಪಾತ್ರ ವಹಿಸುತ್ತದೆ. ವೈದಿಕರು ಗೃಹಪ್ರವೇಶದಲ್ಲಿ ಗೋವನ್ನು ಮೊದಲು ನುಗ್ಗಿಸಿದರೆ, ಲಿಂಗಾಯತ ಧರ್ಮದಲ್ಲಿ ಗುರು (ಜಂಗಮ) ಪ್ರವೇಶಕ್ಕೆ ಪ್ರಮುಖ ಸ್ಥಾನ. ಲಿಂಗವಂತ ಧರ್ಮದ ಸಂಸ್ಕಾರಗಳು, ವಿಧಿ - ವಿಧಾನಗಳು, ಸಾಮಗ್ರಿಗಳು, ಆಚರಣೆಗಳು ಇವೆಲ್ಲವುಗಳಲ್ಲಿ ಎರಡು ಪ್ರಕಾರದ ಮಾಲಿನ್ಯ ಬಂದು ಸೇರಿವೆ. ಒಂದು ಶಾಸ್ತ್ರೀಯ ಸಂಪ್ರದಾಯವಾದ ವೈದಿಕ ಧರ್ಮದಿಂದ, ಇನ್ನೊಂದು ಕ್ಷುದ್ರ ಸಂಪ್ರದಾಯದ ಬಣ (tribal) ಧರ್ಮದಿಂದ, ಹೋಮ, ಯಜ್ಞ, ಇವು ವೈದಿಕದಿಂದ ಬಂದು ಸೇರಿದವಾಗಿದ್ದರೆ ಕ್ಷುದ್ರ ದೈವಂಗಳಿಗೆ ಕೊಡುವ ಬಲಿ ಮುಂತಾದುವು ಬಣಧರ್ಮದಿಂದ ಬಂದು ಸೇರಿದವು. ಬೆಂಗಳೂರು ಪಟ್ಟಣದ ಲಿಂಗಾಯತರ ಮಕ್ಕಳ ಮದುವೆ, ತಮ್ಮ ಷಷ್ಠಬ್ದ ಶಾಂತಿಯಲ್ಲಿ ಹೋಮ ಮಾಡಿಸಿದರೆ, ಹಳ್ಳಿಯ ಲಿಂಗಾಯತರು ಮಾರಮ್ಮನಿಗೆ ಕುರಿ ಕೋಳಿ ಕೊಡುವುದಾಗಿ ಹರಕೆ ಹೊರುತ್ತಾರೆ. ಈ ಮಾಲಿನ್ಯಗಳನ್ನು ತೆಗೆದು ಲಿಂಗವಂತ ಸಮಾಜವನ್ನು ಶುದ್ದೀಕರಿಸುವುದು ಸಾಧ್ಯವೇ ಎಂದು ನಿರಾಶೆಯುಂಟಾಗುತ್ತದೆ. ಇಷ್ಟು ದಿನ ಮುಖ್ಯ ದೀಪ, ಹಾರ್ನ್ ಎರಡೂ ಇಲ್ಲದೇ ಓಡಿರುವ ಗಾಡಿಯಂತೆ ಇದಿದೆ. ಈಗ ಅವನ್ನು ಅಳವಡಿಸಿದರೆ ಸುಧಾರಣೆಯಾಗಬಹುದೇನೋ ಎಂಬ ಆಸೆಯೂ ಬತ್ತಿಹೋಗಿಲ್ಲ.
ಮನುಸ್ಮೃತಿಯು 13 ಸಂಸ್ಕಾರಗಳನ್ನು ಗುರುತಿಸಿದೆ. ಗರ್ಭಧಾರಣೆ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೂಡಕರ್ಮ, ಉಪನಯನ, ಕೇಶಾಂತ, ಸಮಾವರ್ತನ, ವಿವಾಹ ಹಾಗೂ ಮರಣ.
ಸ್ವಾಮಿ ದಯಾನಂದರು ಈ 13ಕ್ಕೆ ಇನ್ನೂ ಮೂರು ಸೇರಿಸಿ ಒಟ್ಟು 16 ಹೇಳುವರು. ಮಹಾನಾಮ್ನೀ, ಮಹಾವ್ರತ, ಉಪನಿಷದ್‌ವ್ರತ, ಲಿಂಗಾಯತ ಧರ್ಮದ ತಾತ್ವಿಕ ಚೌಕಟ್ಟಿನಲ್ಲಿ ಕೆಳಗಿನವುಗಳನ್ನು ಗುರುತಿಸಬಹುದು.
1. ಗರ್ಭಲಿಂಗಧಾರಣೆ ಮತ್ತು ಸೀಮಂತ
2. ಲಿಂಗಧಾರಣೆ - ನಾಮಕರಣ ತೊಟ್ಟಿಲು ಶಾಸ್ತ್ರ.
3. ಜಾವಳ.
4. ಅನ್ನ ಪ್ರಸಾದ ಸ್ವೀಕಾರ.
5. ವಿದ್ಯಾರಂಭ
6. ಮೈ ನೆರೆಯುವಿಕೆ.
7. ಇಷ್ಟಲಿಂಗ ದೀಕ್ಷೆ ವಿಧಾನ
8. ವಿವಾಹ ಮತ್ತು ಪುನರ್ವಿವಾಹ.
9. ವಿಭೂತಿ ವೀಳ್ಯ
10. ಲಿಂಗೈಕ್ಯ ಸಂಸ್ಕಾರ
11. ಶುದ್ದೀಕರಣ (ಪಶ್ಚಾತ್ತಾಪ)- ವಸ್ತು ಮತ್ತು ವ್ಯಕ್ತಿ.
12. ಅಯ್ಯಾಚಾರ (ಕ್ರಿಯಾಮೂರ್ತಿ ದೀಕ್ಷೆ)
13. ಪ್ರಸಾದ ದೀಕ್ಷೆ.
14. ಜಂಗಮ ದೀಕ್ಷೆ,
15. ಪಟ್ಟಾಧಿಕಾರ.
16. ದತ್ತು ಸ್ವೀಕಾರ, ಷಷ್ಠ್ಯಬ್ಧಿ, ಪುನಶ್ಚೇತನ, ಗಣಾಚಾರ ದೀಕ್ಷೆ, ಇತ್ಯಾದಿ.
೧. ಹದಿನಾರು ಸಂಸ್ಕಾರಗಳಲ್ಲಿ ವೈರಾಗ್ಯ ಜೀವನಕ್ಕೆ ಸಂಬಂಧಪಟ್ಟವು. ಎರಡು – ಜಂಗಮ ದೀಕ್ಷೆ ಮತ್ತು ಪಟ್ಟಾಧಿಕಾರ.
೨. ಕೇವಲ ಹೆಣ್ಣು ಮಕ್ಕಳಿಗೆ ಸಂಬಂಧಿಸಿದವು ಕೆಲವು.
೩. ಉಭಯತರಿಗೂ ಸಂಬಂಧಿಸಿದವು ಕೆಲವು.
೪. ಕೆಲವು ಕಡ್ಡಾಯವಾದವು. ಉದಾ : ಲಿಂಗಧಾರಣೆ.
೫. ಕೆಲವು ಐಚ್ಛಿಕ - ಉದಾಹರಣೆಗೆ ಪ್ರಸಾದ ದೀಕ್ಷೆ - ವಿಭೂತಿ ವೀಳ್ಯ
ಗ್ರಂಥ ಋಣ:
[1] R.B. Pande, Hindu Samskaras, Motilal Banarsidas Delhi 1976, P.15.
[2] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.
[3] ಲಿಂಗಾಯತ ಸಂಸ್ಕಾರಗಳು. ಡಾ ಶಿವಾನಂದ ಗುಬ್ಬಣ್ಣನವರು. ಪುಟ - ೨೭
![]() | ಪರಮಾತ್ಮ ಸ್ವರೂಪ | ಸಂಸ್ಕಾರದ ವಿವಿಧ ಮುಖಗಳು | ![]() |