![]() | ಶವ ಸಂಸ್ಕಾರದ ಬಗೆಗಳು | ವಸ್ತು- ಶುದ್ದೀಕರಣ | ![]() |
ಲಿಂಗೈಕ್ಯ ಸಂಸ್ಕಾರ |
೧. ಎಣ್ಣೆ - ಸ್ನಾನಕ್ಕೆ ನೀರು
೨. ವಾದ್ಯದವರು - ಭಜನಾ ಮೇಳದವರು, ವಚನ ಪಾಠಕರು.
೩. ಹೂವು - ಪತ್ರೆ
೪. ಶವದ ಚೀಲ - ವಿಭೂತಿ ಗಟ್ಟಿಗಳು - ಶಿವದಾರಗಳು.
೫. ಮಡಿ ಬಟ್ಟೆಗಳು, ಉಪ್ಪು
೬. ಹೆಣ್ಣುಮಗಳಿಗೆ ತವರಿನ ಸೀರೆ - ಕುಪ್ಪಸದ ಖಣ.
೭. ಮಣ್ಣಿನ ಪ್ರಣತೆಗಳು - ೧೩ ಸಂಖ್ಯೆ, ಬತ್ತಿ-ಎಣ್ಣೆ.
೮. ಶವ ಕೂರಿಸಿ ಒಯ್ಯುವ ಕೈವಲ್ಯ ಮಂಟಪ
೯. ಷಟ್ಕೋನ ಬಸವ ಧ್ವಜ
೧೦. ತಾಮ್ರದ ಮಂತ್ರಾಕ್ಷರ ಸಹಿತ ತಗಡುಗಳು.
೧೧. ಬಸವ ಭಾವಚಿತ್ರ (ಅಥವಾ ಬಸವ ಮುದ್ರೆ, ನಾಣ್ಯ)
೧೨. ಬಸವ-ಲಿಂಗ ಮುದ್ರೆ ಕಲ್ಲು
೧೩. ಪೂಜಾ ಸಾಮಗ್ರಿಗಳಾದ ನೀರು, ಗಂಧ, ಅಕ್ಷತೆ, ಧೂಪ, ಊದಿನಕಡ್ಡಿ, ಕರ್ಪೂರ, ಕಳಸದಾರತಿ.
೧೪. ಸುಗಂಧ ದ್ರವ್ಯಗಳು.
೧೫. ೬ ಅಡಿ ಉದ್ದ ೫ ಅಡಿ ಅಗಲ ೬ ಅಡಿ ಆಳದ ಕುಣಿ (ತಗ್ಗು)
೧೬. ಹಿಂಭಾಗದ ಗೋಡೆಯಲ್ಲಿ ೩ ಅಡಿ ಅಗಲ, ೩ ಅಡಿ ಎತ್ತರ, ಎರಡೂವರೆ ಅಡಿ ಉದ್ದದ ಲಿಂಗದ (ಕಿರುಗುಣಿಯ) ಗೂಡು, ವ್ಯಕ್ತಿಯ ಶರೀರದ ಗಾತ್ರವನ್ನು ಅನುಸರಿಸಿ ಈ ಲಿಂಗದ ಗೂಡಿನ ಅಳತೆ ನಿರ್ಧರಿಸಬಹುದು.
೧೭. ಲಿಂಗದ ಗೂಡಿಗೆ (ಕಿರುಗೂಡಿಗೆ) ಬೇಕಾದ ಹಲಗೆ ಅಥವಾ ಕಲ್ಲು ಚಪ್ಪಡಿ ಅಥವಾ ಇಟ್ಟಿಗೆ, ಕಟ್ಟುವ ಮಣ್ಣು.
ಶವಕ್ಕೆ ಸಂಸ್ಕಾರ
ಸಾವಿನ ಸುದ್ದಿಯನ್ನು ದೂರವಾಣಿ, ದೂರತಂತಿಯ ಮೂಲಕ ಸಂಬಂಧಪಟ್ಟವರಿಗೆ ತಿಳಿಸುವುದು ಒಂದು ಕೆಲಸವಾದರೆ, ಶವಕ್ಕೆ ಸ್ನಾನ - ಪೂಜೆ ಮಾಡುವುದು ಇನ್ನೊಂದು ಕ್ರಿಯೆ. ಕೆಲವು ಕಡೆಗೆ ಸಾವಿನ ಸುದ್ದಿಯನ್ನು ಮುಟ್ಟಿಸಲು ಜನರನ್ನು ಕಳಿಸುತ್ತಲೇ ಶವವನ್ನು ಇಟ್ಟುಕೊಂಡೇ ಅಡಿಗೆ ಮಾಡುವ ಪದ್ಧತಿ ಇದೆಯಂತೆ. ಬಹುಶಃ ಅಂತಿಮ ದರ್ಶನಕ್ಕಾಗಿ ದೂರ ದೂರದಿಂದೆಲ್ಲ ಜನರು ಬರಬೇಕಾದುದರಿಂದ ಮಲೆನಾಡುಗಳಲ್ಲಿ ೨-೩ ದಿವಸ ಶವವನ್ನು ಇಟ್ಟು ಕಾಯುವುದರಿಂದ ಅಷ್ಟು ದಿವಸ ಮಕ್ಕಳು ಮರಿ ಉಪವಾಸವಿರಲು ಆಗದೆ ಇರುವುದರಿಂದ ಈ ಪದ್ಧತಿ ಬಂದಿರಬಹುದು. ಮತ್ತೆ ಕೆಲವು ಕಡೆ ಸಾವಿನ ಮನೆಯಲ್ಲಿ ಅಡಿಗೆ ಮಾಡಬಾರದೆಂಬ ಪದ್ಧತಿ ಇರುವುದರಿಂದ ಅಕ್ಕಪಕ್ಕದ ಮನೆಯವರು ಅಡಿಗೆ ಮಾಡಿ ತಂದುಕೊಡುತ್ತಾರೆ ಮತ್ತು ತಮ್ಮ ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಕೆಲವರು ಶವಸಂಸ್ಕಾರ ಆಗುವವರೆಗೆ ಸ್ನಾನ ಮಾಡಬಾರದೆಂದು ಹಾಗೆಯೇ ಇದ್ದು ಬಿಡುತ್ತಾರೆ. ಸ್ನಾನ-ಪೂಜೆ ಆಗದೇ ಏನೂ ತಿನ್ನುವುದಿಲ್ಲ ಎಂಬ ಆಚಾರವಂತರು ಉಪವಾಸದಿಂದ ಬಳಲಿ, ಪ್ರಜ್ಞಾಶೂನ್ಯರಾಗುವುದುಂಟು. ಶವಸಂಸ್ಕಾರಕ್ಕೆ ಹೋದಲ್ಲಿ ಪ್ರಜ್ಞೆ ತಪ್ಪಿ ಕುಸಿಯುವುದುಂಟು. ಇನ್ನು ಕೆಲವರು ಸ್ನಾನ ಪೂಜೆಯಿಲ್ಲದೆ ಹಾಗೆಯೇ ಊಟ-ತಿಂಡಿ ಮಾಡುತ್ತಾರೆ. ಇಂದಿನ ವಾತಾವರಣಕ್ಕೆ ತಕ್ಕಂತೆ ಕೆಲವು ಸುಧಾರಣೆಗಳನ್ನು ಬಸವ ಧರ್ಮದ ಸೈದ್ಧಾಂತಿಕ ಹಿನ್ನೆಲೆಯಲ್ಲಿ ತಂದುಕೊಳ್ಳಬೇಕು. ಸ್ನಾನ ಪೂಜೆ ಮಾಡಿ ಉಪಾಹಾರ
ಮಾಡಬಹುದು.
ಸಾಮಾನ್ಯವಾಗಿ ಹಿತ್ತಿಲು ಅಂಗಳ ಮುಂತಾದ ಮನೆಯ ಹೊರಭಾಗದಲ್ಲಿ ಶವಕ್ಕೆ ಸ್ವಚ್ಛವಾಗಿ ಸ್ನಾನ ಮಾಡಿಸುವರು. ಶವಕ್ಕೆ ಎಣ್ಣೆ ಸವರಿ, ಸರ್ವಾಂಗವನ್ನೂ ಶುಚಿ ಮಾಡಿ, ಮಂತ್ರೋದಕದಿಂದ ಸ್ನಾನ ಮಾಡಿಸಬೇಕು. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಬಲಗೈಯ ಐದು ಬೆರಳುಗಳಿಗೆ ಭಸ್ಮ ಸವರಿ, ೧೨ ಬಾರಿ ಓಂ ಶ್ರೀ ಗುರುಬಸವಲಿಂಗಾಯ ನಮಃ ಎಂದು ಪಠಿಸಿ ಆ ಬೆರಳುಗಳನ್ನು ನೀರಿನಲ್ಲಿ ಅದ್ದಿ ಈ ಗುರುಕರುಣೋದಕವನ್ನು ಸ್ನಾನದ ನೀರಿನಲ್ಲಿ ಬೆರೆಸಿ, ಆ ನೀರಿನಿಂದಲೇ ಶವಕ್ಕೆ ಸ್ನಾನ ಮಾಡಿಸಬೇಕು. ಉತ್ತಮ ಸುವಾಸನೆಯ ಸೋಪನ್ನು ಹಚ್ಚಬಹುದು. ಪನ್ನೀರನ್ನೂ ಸಿಂಪಡಿಸಬಹುದು. ನಂತರ ಒಂದು ಚಚೌಕಾರದ ಮಡಿ ಬಟ್ಟೆಯನ್ನು ತೆಗೆದುಕೊಂಡು ಹಾಸಿ ಅದರ ಮಧ್ಯದಲ್ಲಿ ಅರಳೆಯ ಪದರನ್ನು ಹರಡಬೇಕು. ಅರ್ಧ ಸೇರು ಉಪ್ಪು ಮತ್ತು ಅರ್ಧ ಸೇರಿನಷ್ಟು ಬೂದಿಯನ್ನು ಹರಡಿ ಪುನಃ ಅದರ ಮೇಲೆ ಅರಳೆಯ ದಪ್ಪ ಮಡಿಕೆಯನ್ನು ಹಾಕಿ, ಲಿಂಗೈಕ್ಯರ ಶರೀರವನ್ನು ಇದರ ಮೇಲೆ ಕೂರಿಸಿ, ಆ ಬಟ್ಟೆಯ ತುದಿಗಳನ್ನು ಮೇಲಕ್ಕೆ ತೆಗೆದುಕೊಂಡು ಸೊಂಟಕ್ಕೆ ಬಿಗಿಯಲಾಗುತ್ತದೆ. ಗುದದ್ವಾರದಿಂದ ಒಸರುವ ಮಲಿನ ವಸ್ತುವಿನಿಂದ ವಾತಾವರಣವು ದುರ್ಗಂಧಮಯವಾಗಬಾರದೆಂದು ಹೀಗೆ ಮಾಡಲಾಗುತ್ತದೆ.
ಶವಕ್ಕೆ ಈಗ ಮಡಿಬಟ್ಟೆ (ಅಥವಾ ಹೊಸಬಟ್ಟೆ)ಗಳನ್ನು ತೊಡಿಸಿ, ಸ್ವಸ್ತಿಕಾಸನ, ಸುಖಾಸನ, ಸಿದ್ಧಾಸನ - ಯಾವುದಾದರೊಂದರಲ್ಲಿ, ಗೋಡೆಗೆ ಒರಗಿಸಿ ಕೂರಿಸಬೇಕು. ಜನರಿಗೆ ಸುಲಭವಾಗಿ ಕಾಣಲೆಂದು ಎತ್ತರದ ವೇದಿಕೆ ಸಹ ಮಾಡಬಹುದು ಅಥವಾ ಮಂಚದ ಮೇಲೆ ಸಹ ಕೂರಿಸಬಹುದು. ಶವದ ತಲೆಯು ಜೋತು ಬೀಳದಂತಿರಲು ಕುತ್ತಿಗೆಗೆ ಕತ್ತರಿಯಾಕಾರದ ಕವಲು ಕಟ್ಟಿಗೆ (ಸಿಪಾಯಿ ಕಟ್ಟಿಗೆ) ಕೊಡಲಾಗುವುದು. ಸನ್ಯಾಸಿಗಳು ಯೋಗಿಗಳಿಗೆ ಯೋಗದಂಡವನ್ನೂ ಗದ್ದದ ಕೆಳಗೆ ಕೊಡಬಹುದು. ಕುತ್ತಿಗೆಯ ಕೆಳಗಿನಿಂದ ದಾರ ಅಥವಾ ಪಟ್ಟಿಯನ್ನು ಕಟ್ಟಿ ಅದನ್ನು ಮೇಲಕ್ಕೆ ತೆಗೆದುಕೊಂಡು ಹಿಂದಿನ ಗೂಟಗಳಿಗೆ ಕಟ್ಟಲಾಗುವುದು. ಇದನ್ನು ಗ್ರಾಮೀಣ ಭಾಷೆಯಲ್ಲಿ ಗೂಟಕ್ಕೆ ಬಡಿಯಲಾಗುವುದು ಎಂದು ಕರೆಯುತ್ತಾರೆ. ಶವ ಸಂಸ್ಕಾರವನ್ನು ಮಾಡುವ ಹಿರಿಯ ಮಗ ಅಥವಾ ಮಗಳು ಯಾರು ಇರುವರೋ ಅವರು ಕೂಡಾ ಸ್ನಾನ - ತಮ್ಮ ಇಷ್ಟಲಿಂಗಾರ್ಚನೆ ಪೂರೈಸಿ ಈಗ ಬರಬೇಕು. ಕ್ರಿಯಾಮೂರ್ತಿ ಅಥವಾ ಗುರುಮೂರ್ತಿಯು ಮಾರ್ಗದರ್ಶನ ಮಾಡಿದಂತೆ ವಿಧಿವಿಧಾನಗಳನ್ನು ಪೂರೈಸಬೇಕು.
ಪ್ರಥಮತಃ ಗುರುಮೂರ್ತಿಗೆ ಶರಣು ಸಲ್ಲಿಸಿ ಒಂದು ಹೊಸ ತಟ್ಟೆಯಲ್ಲಿ ವೀಳೆಯದೆಲೆ, ಅಡಿಕೆ, ಕೊಬ್ಬರಿ, ವಿಭೂತಿ ಗಟ್ಟಿ, ಸ್ವಲ್ಪ ಕಾಣಿಕೆಯಿಟ್ಟು ಸಮರ್ಪಿಸಿ ಹೀಗೆ ಬಿನ್ನಹ ಮಾಡಿಕೊಳ್ಳಬೇಕು. “ಪೂಜ್ಯರೇ ಶರಣರೇ, ಇಂದು ನಮ್ಮ ................... ಯವರಾದ ಶರಣ/ಶರಣೆ........................................... ಲಿಂಗೈಕ್ಯರಾಗಿದ್ದಾರೆ. ಗುರು ಬಸವಣ್ಣನವರ ಕೃಪೆಯಿಂದ ಅವರು ಪರಮಾತ್ಮನಲ್ಲಿ ಒಂದಾಗಬೇಕು. ಮರಳಿ ಭವಕ್ಕೆ ಬರಬಾರದು. ಅದಕ್ಕಾಗಿ ತಾವು ಎಲ್ಲ ಪ್ರಮಥರ ಸಾಕ್ಷಿಯಾಗಿ ವಿಭೂತಿ ವೀಳ್ಯವನ್ನು ಕೊಡಿರಿ .....”
“ದೇವರಿಚ್ಛೆ, ಕಾರ್ಯಗಳನ್ನು ಆರಂಭಿಸಿರಿ.” ಎಂದು ಸೂಚನೆ ನೀಡುವರು. ಸ್ನಾನ ಮಾಡಿಸಿ ಕುಳ್ಳಿರಿಸಿರುವ ಲಿಂಗೈಕ್ಯರ ಶವಕ್ಕೆ ಈಗ ಭಸ್ಮಧಾರಣ ಮಾಡಬೇಕು. ರುದ್ರಾಕ್ಷಿ ಮಾಲೆ ಹಾಕಬೇಕು. ಶವದ ತೊಡೆಯ ಮೇಲೆ ಒಂದು ಅಂಗವಸ್ತ್ರ ಹಾಕಿ, ಆ ವಸ್ತ್ರದ ಸೂತ್ರದ ಸಂಬಂಧ ಮಾಡುವಂತೆ ತನ್ನ ತೊಡೆಯ ಮೇಲೆ ಹಾಕಿಕೊಳ್ಳಬೇಕು. ಲಿಂಗೈಕ್ಯರು ಪೂಜಿಸುತ್ತ ಬಂದ ಇಷ್ಟಲಿಂಗವನ್ನು ತಾವು ಈಗ ವಿದ್ಯುಕ್ತವಾಗಿ ಪೂಜಿಸಬೇಕು. ಮೃತ ವ್ಯಕ್ತಿಯು ನಾಸ್ತಿಕನೂ, ವಿಲಾಸಿಯ ಅಥವಾ ಉದ್ದಟನಿದ್ದು ಜೀವನ ಪರ್ಯಂತರ ಲಿಂಗಧಾರಣೆ ಮಾಡಿಕೊಂಡಿರಲಿಕ್ಕಿಲ್ಲ, ಪೂಜೆ ಪುರಸ್ಕಾರ ಮಾಡಿರಲಿಕ್ಕಿಲ್ಲ: ಮಾಂಸಾಹಾರಿ ಆಗಿದ್ದಿರಬಹುದು. ಮದ್ಯವ್ಯಸನಿಯೂ ಆಗಿದ್ದು, ಧಾರ್ಮಿಕ ಚಟುವಟಿಕೆಗಳಿಂದ ದೂರವಿದ್ದಿರಬಹುದು. ಆದರೆ ಈಗಲಾದರೂ ಅವನಿಗೆ ಲಿಂಗಧಾರಣೆ ಮಾಡಿ, ಬಾಯಿಯಲ್ಲಿ ಅದನ್ನಿಟ್ಟು ಹುಗಿಯುವುದು ಶ್ರೇಯಸ್ಕರ. ಗುರು (ಕ್ರಿಯಾ) ಮೂರ್ತಿಯು ಒಂದು ಇಷ್ಟಲಿಂಗವನ್ನು ತೆಗೆದುಕೊಂಡು, ಪೂಜಿಸಿ, ತೀರ್ಥವನ್ನು ಶವದ ಬಾಯಿಯಲ್ಲಿ ಹಾಕಿ, ಆ ಲಿಂಗವನ್ನು ರಟ್ಟೆಗೆ ಒಂದು ಬಟ್ಟೆಯಲ್ಲಿ ಕಟ್ಟಬೇಕು.
ಪೂಜಾ ನಂತರ ಗುರುಮೂರ್ತಿಯು ಮೂರು ಬಾರಿ ತೀರ್ಥವನ್ನು ಇಷ್ಟಲಿಂಗದ ಮೇಲೆ ಗುರು ಪಾದೋದಕ, ಲಿಂಗ ಪಾದೋದಕ, ಜಂಗಮ ಪಾದೋದಕ ಎಂದು ಎರೆಯುವರು. ಇದನ್ನು ಚಿಕ್ಕ ಬಟ್ಟಲಲ್ಲಿ ಸಂಗ್ರಹಿಸಿಕೊಂಡು ಇಡಬೇಕು. ಇಷ್ಟಲಿಂಗಕ್ಕೆ ಭಸ್ಮ ಧರಿಸಿ, ಮೊದಲು ಲಿಂಗೈಕ್ಯನು ಹಾಕಿಕೊಂಡಿದ್ದ ಬೆಳ್ಳಿ ಅಥವಾ ಬಂಗಾರದ ಕರಡಿಗೆ ತೆಗೆದುಕೊಂಡು, ಒಂದು ಹೊಸ ಲಿಂಗವಸ್ತ್ರಕ್ಕೆ ಭಸ್ಮ ಧರಿಸಿ ಇಷ್ಟಲಿಂಗವನ್ನಿಟ್ಟು ಶವದ ರಟ್ಟೆಗೆ ಕಟ್ಟಬೇಕು. ತೀರ್ಥವನ್ನು ಬಾಯೊಳಕ್ಕೆ ಉದ್ದರಣೆ - ಚಮಚೆಯ ಮುಖಾಂತರ ಹಾಕಿ, ಉಳಿದುದನ್ನು ನೆಟ್ಟಿ, ಭುಜ, ತೊಡೆ ಹೀಗೆ ಸಿಂಪಡಿಸಬೇಕು. ತೀರ್ಥವನ್ನು ಕುಡಿಸಿದ ನಂತರ ಬಾಯಿಯಿಂದ ದುರ್ಗಂಧ ಹೊರಡಬಾರದೆಂದು, ತಾಂಬೂಲ ಇಡಬೇಕು. ಎಲೆ, ಅಡಿಕೆ, ಸುಣ್ಣ, ಏಲಕ್ಕಿ ಮುಂತಾದ ಸುವಾಸನೆಯ ವಸ್ತು ಸೇರಿಸಿ ಕುಟ್ಟಿದ ತಾಂಬೂಲವನ್ನು ತುಟಿ ತೆರೆದು ಇಟ್ಟು, ತುಟಿಗಳನ್ನು ಅಂಟು ಹಚ್ಚಿ ಮುಚ್ಚಬೇಕು. ಅರಳೆಯನ್ನು ಸುಗಂಧ ದ್ರವ್ಯದಲ್ಲಿ ಅದ್ದಿ ಮೂಗಿನ ಹೊರಳೆಗಳಿಗೆ ಸಿಕ್ಕಿಸಬೇಕು. ಕೆಲವರು ಬಂಗಾರದ ತುಣುಕನ್ನು ಬಾಯಿಯಲ್ಲಿ ಹಾಕಿ ಮುಚ್ಚುವುದುಂಟು. ಅಂದರೆ ಬಂಗಾರದ, ಲೌಕಿಕ ಸಂಪತ್ತಿನ ಮೋಹ ಅಳಿಯಲಿ ಎಂಬ ಭಾವ ಇರುವುದಂತೆ. ಶವದ ಬಾಯಿಗೆ ಬಂಗಾರ ಹಾಕಿದ ಮಾತ್ರಕ್ಕೆ ಆ ಮೋಹ ಅಳಿಯದು ಮತ್ತು ಅಂಥ ವಸ್ತುವನ್ನು ವ್ಯರ್ಥ ಮಾಡಬಾರದು. ಶವದ ಮೇಲೆ ಸುಗಂಧ ದ್ರವ್ಯ ಬೇಕಾದರೆ ಸಿಂಪಡಿಸಬಹುದು, ಊದಿನ ಕಡ್ಡಿಯನ್ನು ಕೋಣೆಯಲ್ಲಿ ಸುವಾಸನೆಗಾಗಿ ಹಚ್ಚಿ ಇಟ್ಟಿರಬಹುದು.
ಆರು ಪೂಜೆ
ಸಾಮಾನ್ಯವಾಗಿ ಶವವನ್ನು ಮಣ್ಣು ಮಾಡುವ ಮೊದಲಿಗೆ ಆರು ಪೂಜೆಗಳನ್ನು ಸಲ್ಲಿಸಲಾಗುತ್ತದೆ.
೧. ಸ್ನಾನ ಮಾಡಿಸಿ ಕೂಡಿಸಿದಾಗ ಮೊದಲ ಪೂಜೆ - ಗೂಟಕ್ಕೆ ಬಡಿದಾಗ ಎಂದು ಗ್ರಾಮೀಣ ಭಾಷೆಯಲ್ಲಿ ಅನ್ನುವರು.
೨. ಶವವನ್ನು ಎತ್ತುವ ಮುನ್ನ, ಅಂದರೆ ಶವಯಾತ್ರೆಗೆ ವಿಮಾನ (ಕೈವಲ್ಯ ಮಂಟಪ)ದೊಳಗೆ ಇಡುವ ಮುನ್ನ ಎರಡನೇ ಪೂಜೆ.
೩. ಸ್ಮಶಾನಕ್ಕೆ ಅಥವಾ ಸಮಾಧಿ ಮಾಡುವ ಸ್ಥಳಕ್ಕೆ ಒಯ್ದು ತಗ್ಗಿನಲ್ಲಿ, ಬಸವಗುರು ಪಾದ (ಚೌಕಾಕಾರದ ವೇದಿಕೆ)ದ ಮೇಲೆ ಇಟ್ಟಾಗ ಮೂರನೆಯ ಪೂಜೆ,
೪. ಲಿಂಗದ ಗೂಡಿ (ಕಿರುಗುಣಿ) ನಲ್ಲಿ ಇಟ್ಟಾಗ ನಾಲ್ಕನೆಯ ಪೂಜೆ.
೫. ಮಣ್ಣು ಎಳೆದ ಮೇಲೆ ಸಮಾಧಿ ಮೇಲೆ ಶವಚೀಲದ ದಾರವನ್ನು ಮೇಲಕ್ಕೆತ್ತಿ ಬಸವ-ಲಿಂಗ ಮುದ್ರೆಗೆ ಕಟ್ಟಿದಾಗ ಐದನೆಯ ಮತ್ತು
೬. ಬಸವಲಿಂಗ ಮುದ್ರೆ ಶಿಲೆಗೆ ಅಂತಿಮ ಮತ್ತು ಆರನೇ ಪೂಜೆ ಮಾಡಬೇಕು.
ವಿಶೇಷ ಸೂಚನೆ
ಬಸವ ಧರ್ಮವನ್ನು ಪರಿಪೂರ್ಣವಾಗಿ ಪಾಲಿಸಬೇಕೆಂಬ ಶರಣರು ಏಕದೇವೋಪಾಸಕರು, ಏಕಗುರೂಪಾಸಕರು ಆಗಿರಬೇಕಾದ್ದರಿಂದ ಮೃತ ಶರೀರದ ಮೇಲೆ ಬಸವ ಗುರುವಿನ ಮುದ್ರೆ ಅಥವಾ ನಾಣ್ಯ ಅಥವಾ ಲೋಹದ ಭಾವಚಿತ್ರ ಇಟ್ಟು ಅದಕ್ಕೇ ಪೂಜಿಸಬೇಕು. ಅದರ ಸಾಕ್ಷಿಯಾಗಿ ಶವಕ್ಕೆ ಪೂಜಾಸಾಮಗ್ರಿ ಸಲ್ಲಿಸಬೇಕು. ಈಗ ಶ್ರೀ ಬಸವೇಶ್ವರ ಪೂಜಾವ್ರತ ಮಾಡಬೇಕು. ಸಮಯಾವಕಾಶಕ್ಕೆ ತಕ್ಕಂತೆ ಪೂರ್ತಿ ವಿವರವಾಗಿ ೬ ಪೂಜೆ ಮಾಡಬಹುದು. ಇಲ್ಲವೇ ೧ ಪೂಜೆ ಮಾಡಬಹುದು. ೧೦೮ ಮಂತ್ರಗಳ ಜಪ ಮಾಡಿ ಪುಷ್ಪಾರ್ಚನೆಯನ್ನು ತಪ್ಪದೇ ಮಾಡಬೇಕು. ಪತ್ರ-ಪುಷ್ಪಗಳನ್ನು ಏರಿಸುತ್ತ ಮಂತ್ರ ಜಪ ಪೂರೈಸಬೇಕು. ಬಸವಮಂಗಲ ಮಾಡಬೇಕು. ಸಾಮಾನ್ಯವಾಗಿ ಮೃತನ ಎಡತೊಡೆಯ ಮೇಲೆ ಅಯ್ಯನವರು ಬಲಪಾದವನ್ನಿಟ್ಟು ಪುಷ್ಪಾಂಜಲಿ ಮಾಡುತ್ತಾರೆ. ಈ ಪದ್ಧತಿಯನ್ನು ಬಿಟ್ಟುಬಿಡಬೇಕು. ಶ್ರೀಗುರು ಬಸವಣ್ಣನವರ ಚಿಕ್ಕ ಲೋಹದ ಪಟ, ಅಥವಾ ಷಟ್ಕೋನ ಸಹಿತ ಚಿತ್ರ, ಬಸವ ಮಂತ್ರ, ಪಾದ ಇರುವ ಬಸವ ಮುದ್ರೆ, ಬಸವ ನಾಣ್ಯ ಇಂಥವನ್ನು ತೊಡೆಯ ಮೇಲೆ ಇಡಬೇಕು. ಒಬ್ಬರು ವಿಚಾರಶೀಲರು, ಪ್ರಗತಿಪರ ಚಿಂತಕರು ಆದ ವ್ಯಕ್ತಿ ಸತ್ತಾಗ ಧರ್ಮದ ಗಂಧವೂ ಇಲ್ಲದ ಅವರ ಮಕ್ಕಳು ಮೂಢ ಅಯ್ಯನವರೊಬ್ಬರನ್ನು ಕರೆತಂದು ಮೃತರ ಶವದ ತಲೆ ಮೇಲೆ ಪಾದ ಇಡಿಸಿದಾಗ ನನಗಂತೂ ಬಲು ಅಸಹ್ಯವೆನಿಸಿತು. ಆ ವ್ಯಕ್ತಿ ಜೀವಂತ ಇದ್ದಿದ್ದರೆ ಆ ಮಕ್ಕಳಿಗೆ ಕೆನ್ನೆಗೆ ನಾಲ್ಕು ಬಿಗಿಯುತ್ತಿದ್ದರೇನೋ. ಆದ್ದರಿಂದ ಯಾವುದೇ ವ್ಯಕ್ತಿಯ ಪಾದ ಇಡಿಸದೇ, ಧರ್ಮಗುರು ಬಸವಣ್ಣನವರ ಚಿತ್ರ ಸಾಕ್ಷಿಯಾಗಿ ಕಾರ್ಯ ಮಾಡುವುದು ಶ್ರೇಯಸ್ಕರ.
ಲಿಂಗಾಯತ ಧರ್ಮದ ಪ್ರಕಾರ ಗುರು-ಲಿಂಗ-ಜಂಗಮ ಪೂಜಾರ್ಹವಾದುವು. ಆತ್ಮ ಸಹಿತ ದೇಹವು ''ಜಂಗಮ' ಸ್ವರೂಪವಿರುವ ಕಾರಣ ಪೂಜಿಸಬಹುದು. ಆತ್ಮ ವಿರಹಿತ ದೇಹವು ಜಡವೆನಿಸುವುದು; ಪೂಜೆಗೆ ಯೋಗ್ಯವಲ್ಲ, ಆ ದೃಷ್ಟಿಯಿಂದ ಜಂಗಮನ ಪಾದವಿರಿಸಿ, ಆ ಚೈತನ್ಯಕ್ಕೆ ಪೂಜಿಸುವ ಸತ್ ಸಂಪ್ರದಾಯ ರೂಢಿಗೊಂಡಿತು. ಆದರೆ ಜಂಗಮತ್ವವು ಜಾತಿಯಾಗಿ ವಿಕೃತಗೊಂಡಿರುವ ಈ ಕಾಲದಲ್ಲಿ, ಮೃತರು ಅನುಭಾವಿಗಳು, ಜ್ಞಾನಿಗಳು, ಸದಾಚಾರ ಸಂಪನ್ನರು ಆಗಿದ್ದು ಅವರಿಗಿಂತಲೂ ಎಲ್ಲ ದೃಷ್ಟಿಯಿಂದಲೂ ಕೆಳಗಿರುವ ಯಾರಾದರೊಬ್ಬರು ಜಾತಿ ಕಾರಣದಿಂದ ಅವರ ತಲೆಯ ಮೇಲೆ, ತೊಡೆಯ ಮೇಲೆ ಕಾಲಿಟ್ಟು ನಿಲ್ಲುವುದು ತುಂಬಾ ಹಾಸ್ಯಾಸ್ಪದವಾಗಿ ತೋರುತ್ತದೆ. ಈ ಮೂಢಾಚರಣೆ ಎಲ್ಲಿಯವರೆಗು ಹೋಗಿದೆ ಎಂದರೆ ಕೆಲವು ಮಹಾಜ್ಞಾನಿಗಳು ಯೋಗಿಗಳು ಆದ ಶಿವಯೋಗಿಗಳು, ಶರಣರ ಗದ್ದುಗೆಗಳ ಮೇಲೆ ಸಹ ಅಯ್ಯನವರ ಪಾದವಿಡಿಸಿ, ಪೂಜೆ ಮಾಡುವುದುಂಟು. ಭಕ್ತರಿಗೆ ತಿಳುವಳಿಕೆ ಇದ್ದಿದ್ದರೆ ಹೀಗೆ ಮಾಡಿಯಾರೆ ?ಹೋಗಲಿ ಆ ಅಯ್ಯನವರಿಗಾದರೂ ತಮ್ಮ ಸಾಮರ್ಥ್ಯದ ಅರಿವು ಇರುವುದೇ ? ಅಷ್ಟು ತಿಳುವಳಿಕೆ ಇದ್ದರೆ ಮಹಾಪುರುಷರ ಸಮಾಧಿಯ ಮೇಲೆ ಕಾಲಿಡುವ ದಾರ್ಷ್ಟ ತೋರಿಯಾರೆ ? ಈ ಎಲ್ಲಾ ಅಚಾತುರ್ಯಗಳನ್ನು ತಪ್ಪಿಸಲು ಶ್ರೀ ಗುರುಬಸವಣ್ಣನವರನ್ನು ಸಾಕ್ಷಿಯಾಗಿ ಇಟ್ಟುಕೊಂಡು ಕಾರ್ಯ ಮಾಡಬೇಕು.
ಈಗ ಬಸವ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಶವಕ್ಕೆ ಗೌರವಾರ್ಪಣೆ ಮಾಡಬೇಕು.
೧. ಶರಣ ಪೂಜೆಯ ಮಾಡಿರಿ
೨. ಹೂವ ಸೂರ‍್ಯಾಡೋಣ
೩. ಬೆಳಗಿರಿ ಬೆಳಗಿರಿ
ವಿಭೂತಿ ವೀಳ್ಯ ವಿಧಾನದಲ್ಲಿ ಕೊಟ್ಟ ಕ್ರಮದಂತೆಯೇ ಮಾಡಿ, ಪುಷ್ಪಾಂಜಲಿ ಆರತಿ ಮಾಡಿ ಶವವನ್ನು ದರ್ಶನಕ್ಕೆ ಇಟ್ಟುಬಿಡಬೇಕು. ಬಂದಂತಹ ಜನರು ಹಾಕಲು ಪತ್ರ-ಪುಷ್ಪ ಇಟ್ಟಿರಬೇಕು. ಬಂದವರು ವಿಭೂತಿ ಧರಿಸಿ, “ಜಯಗುರು ಬಸವೇಶ ಹರಹರ ಮಹದೇವ ಎಂದು ಪತ್ರೆ - ಪುಷ್ಪ ಹಾಕಬೇಕು. ಮೃತದೇಹದ ಮುಂದೆ ಧೂಪದ ಕುಂಡವನ್ನಿಡುವರು, ಧೂಪವನ್ನು ಹಾಕಿ ದರ್ಶನಾರ್ಥಿಗಳು ಶರಣು ಮಾಡುವರು. ವಚನ ಶಾಸ್ತ್ರದ ಪಾರಾಯಣ ಮಾಡುತ್ತಿರಬೇಕು. ಭಕ್ತಿಗೀತೆಗಳ ಧ್ವನಿಸುರುಳಿ ಹಾಕಬಹುದು, ಭಜನಾ ಮೇಳ ಇಡಿಸಬಹುದು.
ಶವಕ್ಕೆ ಭಸ್ಮ ಧರಿಸಿ, ಪತ್ರೆ-ಪುಷ್ಪ ಹಾಕುವಾಗ ಕನಿಷ್ಠ ಒಂದು ವಚನವನ್ನಾದರೂ ನುಡಿದು, ಪತ್ರೆ-ಪುಷ್ಪ ಹಾಕುವಾಗ 'ಜಯಗುರು ಬಸವೇಶ ಹರಹರ ಮಹದೇವ' ಎಂದು ಜಯಘೋಷ ಮಾಡಬೇಕು.
೧. ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು ಸಾವೆಂಬುದು ಸಯವಲ್ಲ ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ ಕೂಡಲ ಸಂಗಮದೇವರ ಶರಣ ...... ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ ಉಪಮಿಸಬಲ್ಲವರ ಕಾಣೆನು. |
೨.ವನದ ಕೋಗಿಲೆ ಮನೆಗೆ ಬಂದಡೆ ತನ್ನ ವನವ ನೆನೆವುದ ಮಾಣ್ಬುದೆ ? ಮಲೆಯ ಗಜವು ಮನೆಗೆ ಬಂದಡೆ ತನ್ನ ಮಲೆಯ ನೆನೆವುದ ಮಾಣ್ಬುದೆ ? ಕೂಡಲ ಸಂಗನ ಶರಣರು ಮರ್ತ್ಯಕ್ಕೆ ಬಂದಡೆ ತಮ್ಮ ಆದಿಮಧ್ಯಾಂತರಂಗದ ಲಿಂಗವ ನೆನೆವುದ ಮಾಣ್ಬರೆ ? |
೩. ಗೀತವ ಬಲ್ಲಾತ ಜಾಣನಲ್ಲ ಮಾತ ಬಲ್ಲಾತ ಜಾಣನಲ್ಲ ಜಾಣನು ಜಾಣನು ಆತ ಜಾಣನು ಲಿಂಗವ ನೆರೆ ನಂಬಿದಾತ; ಆತ ಜಾಣನು ಜಂಗಮಕ್ಕೆ ಧನವ ಸವೆಸುವಾತ ಆತ ಜಾಣನು ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು ನಮ್ಮ ಕೂಡಲ ಸಂಗನ ಶರಣನು. |
೪. ಅಯ್ಯಾ, ನಿಮ್ಮ ಶರಣರು ಪರಮ ಸುಖಿಗಳಯ್ಯಾ ಅಯ್ಯಾ ನಿಮ್ಮ ಶರಣರು ಕಾಯವೆಂಬ ಕರ್ಮಕ್ಕೆ ಹೊದ್ದದ ನಿಷ್ಕರ್ಮಿಗಳಯ್ಯಾ ಅಯ್ಯಾ ನಿಮ್ಮ ಶರಣರು ಮನದಲ್ಲಿ ನಿರ್ಲೇಪ ಜ್ಞಾನಿಗಳಯ್ಯಾ ಕೂಡಲ ಸಂಗಮದೇವಯ್ಯಾ, ನಿಮ್ಮ ಶರಣರ ಫನತೆಗೆ ನಮೋ ನಮೋ ಎನುತಿರ್ದೆನು. |
ಇವುಗಳಲ್ಲಿ ಯಾವುದಾದರೊಂದು ವಚನವನ್ನು ಪಠಿಸಿ ಪತ್ರೆ-ಪುಷ್ಪ ಹಾಕಬೇಕು.
ಗಂಡ ಸತ್ತಾಗ
ವಿವಾಹಿತನಾದ ಗಂಡ ಸತ್ತರೆ ಆಗ ಅವನ ಹೆಂಡತಿಗೆ ಕೆಲವು ಕ್ರಿಯೆಗಳುಂಟು. ಅವಳು ತಲೆಯಿಂದ ಸ್ನಾನ ಮಾಡಿ ಬಂದು ಇಷ್ಟಲಿಂಗಾರ್ಚನೆ ಮಾಡಬೇಕು. ನಂತರ ಬಸವಗುರುವಿಗೆ ಪುಷ್ಪವನ್ನೇರಿಸಿ, ಆರತಿ ಬೆಳಗಬೇಕು. ತೌರು ಮನೆಯವರು ಹೊಸದಾದ ಸೀರೆಯನ್ನು ಕುಬುಸದ ಕಣವನ್ನು ತಂದಿರುತ್ತಾರೆ. ಅವನ್ನು ಮತ್ತು ತಟ್ಟೆಯಲ್ಲಿ ಅಕ್ಕಿ, ಎಲೆ, ಅಡಿಕೆ, ಬೆಲ್ಲ ಮುಂತಾದುವನ್ನು ಬಸವ ಭಾವಚಿತ್ರದ ಮುಂದಿಟ್ಟು, ಭಸ್ಮ ಧರಿಸಿ ಶುದ್ದೀಕರಿಸುತ್ತಾರೆ. ಆ ವಸ್ತ್ರಗಳನ್ನು ಆಕೆ ಉಟ್ಟು ಕುಳಿತಾಗ ಹಣೆಗೆ ಭಸ್ಮ ಧರಿಸಿ (ಕುಂಕುಮವಿಟ್ಟು) ಹೂ ಮುಡಿಸಿ, ಉಳಿದ ವಸ್ತುಗಳನ್ನು ಉಡಿ ತುಂಬುತ್ತಾರೆ. ಇದೇ ವಸ್ತ್ರದ ಸಹಿತವಾಗಿಯೇ ಆಕೆ ಸ್ಮಶಾನಕ್ಕೆ ಹೋಗುತ್ತಾಳೆ, ಶವ ಸಂಸ್ಕಾರದಲ್ಲಿ ಭಾಗವಹಿಸಲು.
ತೌರಿನವರು ಈ ರೀತಿ ಸೀರೆ ತರುವುದು ಮಾನಸಿಕವಾಗಿ ಅರ್ಥವುಳ್ಳದ್ದು. “ಗಂಡ ತೀರಿಕೊಂಡರೂ ನಾವು ನಿನಗೆ ಆಸರೆಯಾಗಿರುತ್ತೇವೆ'' ಎಂಬ ಭರವಸೆ ಸಾಂತ್ವನವನ್ನು ನೀಡುತ್ತದೆ. ದುಃಖದ ಕಾಲದಲ್ಲಿ ಸೀರೆ ತರುವ ಮೂಲಕ ಈ ರೀತಿ ಧೈರ್ಯ ಹೇಳದಿದ್ದರೆ ಮಹಿಳೆ ಇನ್ನಷ್ಟು ಹತಾಶಳಾಗುವುದು ಸ್ವಾಭಾವಿಕ. ಆದರೆ ಈ ಸೀರೆಗೆ ಗ್ರಾಮೀಣ ಭಾಷೆಯಲ್ಲಿ ರಂಡೆ ಸೀರೆ ಅಥವಾ ಮುಂಡೆ ಸೀರೆ” ಎನ್ನುವುದು ಅಸಭ್ಯತೆಯ ಪರಮಾವಧಿ. ಅತ್ಯಂತ ಸುಸಂಸ್ಕೃತ ಮಾತುಗಳನ್ನು ನುಡಿಯಲು ಕಲಿಸಿದ ಶರಣ ಧರ್ಮದಲ್ಲಿ ಈ ರೀತಿ ಬಳಸದೆ ತವರಿನ ಸೀರೆ ಅಥವಾ ತಾಯಿ ಸೀರೆ'' ಎಂದು ಕರೆಯುವ ಪರಿಪಾಠ ಬರಬೇಕು.
ಮಹಿಳೆ ಸತ್ತಾಗ
ಮಹಿಳೆಯು ಸತ್ತರೆ ಆ ಶವಕ್ಕೆ ಸ್ನಾನ ಮಾಡಿಸಿದ ಬಳಿಕ ಒಗೆದು ಮಡಿಯಾದ ಹಳೆ ಸೀರೆ ಮೊದಲು ಉಡಿಸಿ, ಅದರ ಮೇಲೆ, ಮೇಲೆ ತಿಳಿಸಿದಂತೆ ಸೀರೆಯನ್ನು ಬಸವ ಗುರುವಿನ ಮುಂದಿಟ್ಟು ಮಂತ್ರಶುದ್ಧಿ ಮಾಡಿ ಹೊಸದಾದ ಸೀರೆಯನ್ನು ಸುತ್ತುವರು. ಮುಂದೆ ಗುರುಬಸವನ ಪಾದದ (ಚಚೌಕಾಕಾರದ ವೇದಿಕೆಯ) ಮೇಲೆ ಕುಳ್ಳಿರಿಸಿದಾಗ ಶವಕ್ಕೆ ಸುತ್ತಿದ ಈ ಹೊಸ ಸೀರೆಯನ್ನು ತೆಗೆದು ಮನೆಯ ಹಿರಿಯ ಮಗಳಿಗೆ ಕೊಡುವರು. ಇಲ್ಲವೆ ಬೇರೆ ಯಾರಿಗಾದರು ಬಡವರಿಗೆ ದಾನ ಮಾಡುವರು. ಸ್ನಾನ ಮಾಡಿಸಿ ಉಡಿಸಿದ ಮಡಿ ಸೀರೆಯ ಸಮೇತ ಸ್ತ್ರೀಯರ ಶವವನ್ನು ಕಿರುಗುಣಿಯಲ್ಲಿ (ಲಿಂಗದ ಗೂಡಿನಲ್ಲಿ) ಇಡುವರು.
ಶರಣ ಸಮಾಧಿ ಯಾತ್ರೆಯ ಸಿದ್ಧತೆ
ಶರಣ (ಶವ) ಯಾತ್ರೆಯಲ್ಲಿ ಎಲ್ಲಕ್ಕಿಂತ ಮುಂದೆ ವಾದ್ಯ ಮೇಳದವರು, ಕಹಳೆಯವರು ಇರುವರು. ನಂತರ ಭಜನೆಯ ತಂಡದವರು, ವಚನ ಪಾಠಕರು, ವೀರಗಾಸೆಯವರು (ಲಭ್ಯವಿದ್ದರೆ) ಇರಬಹುದು. ಲಿಂಗಾಯತ ಧರ್ಮದಲ್ಲಿ ಮರಣವು ಅಶುಭವಲ್ಲ, ಅಮಂಗಲವಲ್ಲ. ಆದ್ದರಿಂದ ಇಲ್ಲಿ ಮಂಗಲವಾದ್ಯ-ಮೃದುವಾದ್ಯಗಳು ಇರಬೇಕೇ ವಿನಾ ಹಲಗೆಯಂಥವು ಅಲ್ಲ. ಬ್ಯಾಂಡ್ ಸೆಟ್ಟು ಸಹ ಇರಬಹುದು. ಕುಗ್ರಾಮಗಳಲ್ಲಿ ಹಲಗೆ ಬಿಟ್ಟು ಏನೂ ಇರುವುದಿಲ್ಲವಾದ್ದರಿಂದ ಸದ್ದು ಮಾಡಲು ಅನಿವಾರ್ಯವಾಗಿ ಬಳಸುವರು. ವಚನ ಪಾಠಕರ ಪಾತ್ರ ಬಲು ಮುಖ್ಯ. ಓಂ ಶ್ರೀ ಗುರುಬಸವ ಲಿಂಗಾಯನಮಃ ಮಂತ್ರ ಪಠಿಸಬೇಕು. ಶರಣರ ವಚನಗಳನ್ನು ಹೇಳಬೇಕು. ಆಗಾಗ ಜಯ ಘೋಷ ಮಾಡುತ್ತಿರಬೇಕು. ಎಂಥಾ ಪ್ರಸಂಗದಲ್ಲೂ ಹಣಕೊಟ್ಟು ಸೆರೆ ಕುಡಿಸಿ ಕುಣಿಸಬಾರದು. ಉಳಿದ ಎಲ್ಲ ಸಿದ್ಧತೆ ನಡೆಯುತ್ತಿರುವಾಗ ಈಗ ಶವಸಂಸ್ಕಾರ ಬೇಗನೆ ಆಗುವುದಿದ್ದರೆ, ಸಂಸ್ಕಾರದ ನಂತರ ಸ್ನಾನ-ಇಷ್ಟಲಿಂಗಾರ್ಚನೆ ಪೂರೈಸಿ ಗುರುಮೂರ್ತಿ ಮತ್ತು ಮನೆಯ ಇನ್ನಿತರರು ಊಟ ಮಾಡಬಹುದು. ಯಾರಿಗಾದರೂ ಕಾಯುವುದೇ ಇದ್ದು ಶವಸಂಸ್ಕಾರ ತಡವಿದ್ದರೆ, ಶವಕ್ಕೆ ಸ್ನಾನ-ಶೃಂಗಾರ ಮುಂತಾದ ವಿಧಿಗಳನ್ನು ಪೂರೈಸಿ ಶವವನ್ನು ಅಂತಿಮ ದರ್ಶನಕ್ಕೆ ಇಟ್ಟು, ಬಾಕಿಯವರೆಲ್ಲ ಸ್ನಾನ-ಇಷ್ಟಲಿಂಗಾರ್ಚನೆ ಪೂರೈಸಿ ಉಪಾಹಾರ ಅಥವಾ ಊಟವನ್ನು ಮಾಡಬಹುದು. ಮಕ್ಕಳು, ರೋಗಪೀಡಿತರು ಇದ್ದರೆ ಅವರನ್ನು ಬಳಲಿಸುವುದು ಸೂಕ್ತವಲ್ಲ. ಹಾಗೆಯೇ ಸ್ನಾನಪೂಜೆ ಇಲ್ಲದೇ ತಿನ್ನುವುದೂ ಧರ್ಮಬಾಹಿರ. ದುಃಖಿತರಾದ ಆತ್ಮೀಯರಿಗೆ ತಿನ್ನುಣ್ಣಲು ಮನಸ್ಸಿಲ್ಲದಿದ್ದರೆ ಬಿಡಲಿ, ಆದರೆ ಸ್ನಾನ-ಪೂಜೆ ಮಾಡದೆ ಇರಬಾರದು.
ಸುಮಾರು ಆರೂವರೆ ಅಡಿ ಉದ್ದದ ಎರಡು ಗುಂಡಾದ ಕಟ್ಟಿಗೆ ತುಂಡು ತೆಗೆದುಕೊಂಡು, ಅದರ ಮೇಲೆ ನಾಲ್ಕೂ ಮೂಲೆಗಳಲ್ಲಿ ನಾಲ್ಕು ಸುಂದರವಾದ ಕಂಭಗಳನ್ನು ನಿಲ್ಲಿಸಬೇಕು. ಶವವನ್ನು ಕೂರಿಸಿದಾಗ ಸ್ಪಷ್ಟವಾಗಿ ಕಾಣಿಸುವಂತೆ ಮಂಟಪದ ಎತ್ತರ ಮೂರೂವರೆ ಅಡಿಯಾದರೂ ಇರಬೇಕು. ಹಿಂಬದಿಯಲ್ಲಿ ಸಂಪೂರ್ಣವಾಗಿ ಹಲಗೆ ಇರಬೇಕು. ಇದು ತೆಗೆಯಲು ಹಾಕಲು ಬರುವಂತಿರಬೇಕು. ಶವವನ್ನು ಹಿಂದಿನಿಂದ ಇಳಿಸಲು ಬರುವಂತೆ, ಪಡಕ (shutter) ಮಾಡಬೇಕು. ಮೇಲೆ ಗೋಳಾಕಾರದ ಗುಮ್ಮಟ ಮಾಡಬೇಕು. ಮಂಟಪದ ಎದುರು ಮತ್ತು ಅಕ್ಕಪಕ್ಕದಲ್ಲಿ ಷಟ್ ಸೂತ್ರಗಳ ಚಿತ್ರ ಬರೆಸಬೇಕು. ಮುಂಭಾಗದ ಪಟ್ಟಿಯ ಮೇಲೆ “ಓಂ ಶ್ರೀ ಗುರು ಬಸವ ಲಿಂಗಾಯನಮಃ” ಅಕ್ಷರ ಬರೆಸಬೇಕು. ಮಂಟಪದ ಮೇಲೆ ಧ್ವಜ ಹಾರಿಸಲು ಬರುವಂತೆ ಕಂಭವಿರಬೇಕು. ವಾದ್ಯಮೇಳದವರು ಮನೆಯ ಮುಂದೆ ಕುಳಿತು ವಿವಿಧ ಗೀತೆಗಳನ್ನು ನುಡಿಸುತ್ತಿರುತ್ತಾರೆ.
ಶವವನ್ನು ಸ್ಮಶಾನಕ್ಕೆ ಒಯ್ಯಲು ಶಾಶ್ವತವಾದ ವಿಮಾನ (ಕೈವಲ್ಯ ಅಥವಾ ತೇರು) ವನ್ನು ಸಮಾಜದ ಪರವಾಗಿ ಮಾಡಿಸಿ ಇಟ್ಟಿರಬೇಕು. ನಿಗದಿ ಪಡಿಸಿದ ಬಾಡಿಗೆ ಕೊಟ್ಟು ಒಯ್ಯಲು ಅನುಕೂಲವಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಸಿದಿಗೆ', 'ಚಟ್ಟ' ಎಂದೂ ಕರೆಯುತ್ತಾರೆ. ಈ ಮಧ್ಯಂತರ ಸಮಯದಲ್ಲಿ ಶವದ ಗಾತ್ರಾನುಸಾರ ಹೊಸಬಟ್ಟೆಯಲ್ಲಿ ಒಂದು ಶವಚೀಲವನ್ನು ಸಿದ್ಧಪಡಿಸಿಕೊಳ್ಳಬೇಕು. ಮತ್ತು ಸ್ಮಶಾನದಲ್ಲಿ ಕುಣಿ, ತಗ್ಗನ್ನು ಸಹ ತೋಡಿಸುವ ವ್ಯವಸ್ಥೆ ನಡೆಸಿರಬೇಕು.
ಶವಸಂಸ್ಕಾರದಲ್ಲಿ ಭ್ರಾತೃಭಾವ ಮತ್ತು ಶಿಷ್ಟಾಚಾರ.
೧. ಜೀವಿತ ಕಾಲದಲ್ಲಿ ಪರಸ್ಪರ ಶತ್ರುತ್ವ ಇದ್ದರೂ ಸತ್ತಾಗ ಆ ಶತ್ರುತ್ವ ಸಾಧಿಸದೆ ಶವಯಾತ್ರೆ ಮತ್ತು ಸಂಸ್ಕಾರದಲ್ಲಿ ಭಾಗಿಯಾಗಬೇಕು.
೨. ಧರ್ಮಬಂಧುವು ಎಷ್ಟೇ ದೀನನಿರಲಿ, ಬಡವನಿರಲಿ ಸಹಧರ್ಮಿಯರು ಶವ ಸಂಸ್ಕಾರಕ್ಕೆ ಹೋಗಬೇಕು ಮತ್ತು ಕೆಲವು ಕ್ಷಣಗಳವರೆಗಾದರೂ ಶವವನ್ನು ಒಯ್ಯುವ ವಿಮಾನಕ್ಕೆ ಹೆಗಲುಕೊಡಬೇಕು. ಸಾವಿನಲ್ಲಿ ಎಲ್ಲರೂ ಸಮ; ಭೇದ ಭಾವ ಮಾಡಬಾರದು.
೩. ಆರ್ಥಿಕ ಸಂಕಷ್ಟದಿಂದ ಶವಸಂಸ್ಕಾರ ಮಾಡಲಿಕ್ಕಾಗದೆ ಬಡವರು ಕಷ್ಟಪಡುತ್ತಿದ್ದರೆ ಅನುಕೂಲ ಉಳ್ಳವರು ಕೈಲಾದಷ್ಟು ಸಹಾಯವನ್ನು ಮಾಡಬೇಕು. ಧಾರ್ಮಿಕ ಸಂಘ-ಸಂಸ್ಥೆಗಳ ಮೂಲಕ ಸಹಾಯ ಧನ ಅಥವಾ ಬಡ್ಡಿರಹಿತ ಸಾಲ ಕೊಡಬೇಕು. ಇಲ್ಲವೇ ತಾವೇ ಆ ಕಾರ್ಯಪೂರೈಸಬೇಕು. ಅನಾಥಶವಗಳ ಸಂಸ್ಕಾರ ಸಹ ನಡೆಸಬೇಕು.
೪. ಲಿಂಗಾಯತ ಧರ್ಮದ ಅನುಯಾಯಿತ್ವ ಕೇವಲ ಹುಟ್ಟಿನಿಂದ ಬರದು, ಸ್ವೀಕರಣೆ (acceptance) ಯಿಂದಲೂ ಬರುವುದು, ಯಾರೇ ಆಗಲಿ ದೀಕ್ಷಾವಂತರಾಗಿ ಲಿಂಗವಂತರಾದಾಗ ಅವರನ್ನು ಜೀವಿತದ ಅವಧಿಯಲ್ಲಿ ಆತ್ಮೀಯವಾಗಿ ಕಾಣಬೇಕು. ಮಾತ್ರವಲ್ಲದೆ ಸತ್ತಾಗ ಲಿಂಗವಂತರ ಸ್ಮಶಾನದಲ್ಲೇ ಸಮಾಧಿ ಮಾಡಿಸಬೇಕು. ಹುಟ್ಟು ಲಿಂಗಾಯತರು ಆಗಂತುಕ ಲಿಂಗಾಯತರು ಎಂದು ಭೇದಮಾಡದೆ, ಸ್ಮಶಾನದಲ್ಲೇ ಸಮಾಧಿ ಮಾಡಿಸಬೇಕು. ಹುಟ್ಟು ಲಿಂಗಾಯತರು ಆಗಂತುಕ ಲಿಂಗಾಯತರು ಎಂದು ಭೇದಮಾಡಿ, ಸ್ಮಶಾನದಲ್ಲಿ ಸ್ಥಳಾವಕಾಶ ನೀಡದಿರುವುದು ಅಮಾನವೀಯ, ಅಧಾರ್ಮಿಕ, ಗುರುಬಸವೇಶರ ಆಜ್ಞೆಯ ಉಲ್ಲಂಘನೆ ಮತ್ತು ಭೇದಭಾವ ಮಾಡದೆ ಶವಯಾತ್ರೆಯಲ್ಲಿ ಪಾಲ್ಗೊಳ್ಳಬೇಕು.
೫. ಭಾರತದಲ್ಲಿ ಸ್ಮಶಾನಗಳನ್ನು ಸರಿಯಾಗಿ ಇಟ್ಟುಕೊಳ್ಳುವ ಸಂಸ್ಕೃತಿಯೇ ಇಲ್ಲ. ನಿರ್ಲಕ್ಷ್ಯ, ಕೊಳಕು ವಾತಾವರಣವನ್ನು ಕಾಣಬಹುದು. ಶವಸಂಸ್ಕಾರಕ್ಕೆ ಬಂದ ಜನರಿಗೆ ನಿಲ್ಲಲು ನೆರಳು, ಬೆಂದು ಬಸವಳಿದಾಗ ಕುಡಿಯಲು ನೀರು, ಶೌಚಾಲಯ ಮುಂತಾದ ವ್ಯವಸ್ಥೆ ಇರಬೇಕು. ಶವಸಂಸ್ಕಾರದ ನಂತರ ಸ್ನಾನ ಮಾಡಿ ಹೋಗಲು ಸಾಮೂಹಿಕ ಸ್ನಾನಗೃಹ-ನೀರಿನ ವ್ಯವಸ್ಥೆ ಇರಬೇಕು. ವಿದೇಶಗಳಲ್ಲಿ ಚರ್ಚಿಗೆ ಸಂಬಂಧಿಸಿದ ಸ್ಮಶಾನ ವಲಯದಲ್ಲಿ ಸುಂದರ ಉದ್ಯಾನವನ್ನೇ ಮಾಡಿರುತ್ತಾರೆ. ಶವ ಹೂಳಲಿಕ್ಕೆ ಮಾತ್ರ ಹೋಗದೆ ಜನರು, ಸಂದರ್ಶನಕ್ಕೆ ಹೋಗುವಷ್ಟು ಚೆನ್ನಾಗಿ ಉದ್ಯಾನಗಳನ್ನು ರಕ್ಷಿಸಿರುತ್ತಾರೆ.
ಶವ ಸಂಸ್ಕಾರದಲ್ಲಿ ಮಾನವೀಯತೆ
೧. ಕೆಲವೊಮ್ಮೆ ವಾರಸುದಾರರಿಲ್ಲದ ಶವಗಳು ಕಂಡಾಗ ಮಾನವೀಯತೆಯ ದೃಷ್ಟಿಯಿಂದ ತಾವೇ ಖರ್ಚು ಮಾಡಿ ಆ ಶವ ಯಾವುದೇ ಧರ್ಮಾನುಯಾಯಿಯದಾಗಿರಲಿ ಸಂಸ್ಕಾರ ಮಾಡಿಸಬೇಕು.
೨. ಒಂದು ವೇಳೆ ಆತನ ಧರ್ಮ ಯಾವುದು ತಿಳಿಯದಿದ್ದರೆ ಲಿಂಗಧಾರಣೆ ಮಾಡಿ, ಲಿಂಗಾಯತ ಧರ್ಮಕ್ಕನುಗುಣವಾಗಿ ಸಂಸ್ಕಾರ ಮಾಡಬಹುದು. ಈ ಪುಣ್ಯದಿಂದಲಾದರೂ ಆ ಆತ್ಮವು ಮರುಜನ್ಮದಲ್ಲಿ ಲಿಂಗಾಯತ ಧರ್ಮಾನುಯಾಯಿಯಾಗಿ ಹುಟ್ಟಬಹುದು.
ಶರಣ ಸಮಾಧಿ ಯಾತ್ರೆಯ ಆರಂಭ
ಬರುವವರೆಲ್ಲ ಬಂದು ಅಂತ್ಯ ಸಂಸ್ಕಾರಕ್ಕೆ ಹೊರಡಬೇಕು ಎನ್ನುವಾಗ, ಶವಕ್ಕೆ ಭಸ್ಮಧಾರಣೆ ಮಾಡಿ, ಶ್ರೀ ಬಸವ ಮಂಗಲವನ್ನು ಮಾಡಿ “ಜಯಗುರು ಬಸವೇಶ ಹರಹರ ಮಹಾದೇವ' ಎಂದು ಜಯಘೋಷ ಮಾಡಿ, ಶವವನ್ನು ಎತ್ತಿ, ಮನೆಯ ಹೊರಗೆ ಇರುವ “ಅಲಂಕೃತ ವಿಮಾನ ಕೈವಲ್ಯ ಮಂಟಪ' ದಲ್ಲಿ ಕೂರಿಸಬೇಕು. ಆಗ ಒಮ್ಮೆ ಜಯಘೋಷ ಮಾಡಬೇಕು. ಶವದ ಮುಖ ಕೆಳಗೆ ಜೋತು ಬೀಳದಿರಲೆಂದು ಎರಡೂ ಮೊಳಕಾಲು ಮಧ್ಯದಿಂದ ಕತ್ತರಿಯಾಕಾರದ ಕಟ್ಟಿಗೆ (ಯೋಗಿಗಳಿಗೆ ಯೋಗದಂಡ) ಕೊಡಲಾಗುವುದು. ನಾಲ್ಕು ಜನರು ಕೈವಲ್ಯ ಮಂಟಪದ ನಾಲ್ಕು ಮೂಲೆ ಹಿಡಿದು ಎತ್ತಿ ಹೆಗಲ ಮೇಲೆ ಇರಿಸಿಕೊಂಡು ಜಯಘೋಷ ಮಾಡುವರು. ಹೊತ್ತವರಿಗೆ ದಣಿವಾಗದಿರಲೆಂದು ಮತ್ತು ತಾವು ಈ ಪವಿತ್ರ ಯಾತ್ರೆಯಲ್ಲಿ ಪಾಲುಗಾರರಾಗಬೇಕೆಂದು ಇತರರು ಬಂದು ಹೆಗಲು ಕೊಡುತ್ತಾ ಸಾಗುವರು. ಶರಣರ ಶವ ಯಾತ್ರೆಯಲ್ಲಿ ಮುಂಭಾಗದಲ್ಲಿ ವಾದ್ಯದವರು, ಅವರ ಹಿಂದೆ ಭಜನಾ ತಂಡದವರು ಬಂಧು ಬಳಗದವರು, ಮಿತ್ರರು ಸಾಗುತ್ತಿರುತ್ತಾರೆ. ಬ್ರಾಹ್ಮಣರಲ್ಲಿ ಶವಸಂಸ್ಕಾರಕ್ಕೆ ಹೋಗಲು ಜನರು ಬಹಳ ಹೆದರಿ, ಮನೆಯವರು ಬಹಳ ಪಾಡು ಪಡುತ್ತಾರೆ ಎಂದು ಕೆಲವರ ಬಾಯಲ್ಲಿ ಕೇಳಿದ್ದೇನೆ. ಆ ರೀತಿ ಭಯವು ಲಿಂಗಾಯತ ಧರ್ಮದಲ್ಲಿಯಾಗಲೀ ಮುಸ್ಲಿಮರಲ್ಲಾಗಲೀ ಇಲ್ಲ. ಹೆಣ್ಣುಮಕ್ಕಳು ಬ್ರಾಹ್ಮಣರಲ್ಲಿ-ಮುಸ್ಲಿಮರಲ್ಲಿ ಶವಯಾತ್ರೆಯಲ್ಲಿ ಭಾಗವಹಿಸುವುದು ನಿಷಿದ್ಧ. ಲಿಂಗಾಯತ ಸಮಾಜದಲ್ಲಿ ಹಾಗಿಲ್ಲ. ಹೆಣ್ಣು ಮಕ್ಕಳು ಮತ್ತು ಸಣ್ಣ ಮಕ್ಕಳೂ ಭಾಗವಹಿಸಬಹುದು. ಪೂಜೆ ಪುನಸ್ಕಾರಗಳಲ್ಲಿ ಸಮಾನ ಅವಕಾಶವಿದ್ದಂತೆ ಶವಯಾತ್ರೆಯಲ್ಲೂ ಉಂಟು ಮತ್ತು ಶವದ ವಿಮಾನಕ್ಕೆ ಹೆಗಲು ಕೊಡುವುದು ಪವಿತ್ರ ಕಾರ್ಯ ಎಂಬ ನಂಬಿಕೆಯೂ ಇಲ್ಲಿ ಇದೆ.
ತಪ್ಪು ಆಚರಣೆಗಳ ನಿಷೇಧ
ಲಿಂಗಾಯತ ಸಮಾಜಕ್ಕೆ ವ್ಯವಸ್ಥಿತವಾದ ಒಂದು ಕ್ರಿಯಾ ಸಂಹಿತೆ ಇಲ್ಲದ್ದರಿಂದ, ಆದಿ ಶರಣರ ಆಚರಣೆಗಳು ಮಾಯವಾಗಿ ಅನ್ಯ ಧರ್ಮ ಮತ ಸಂಪ್ರದಾಯಗಳ ಅರ್ಥರಹಿತ ಆಚರಣೆಗಳನ್ನು ಅಲ್ಲಲ್ಲೇ ಅಳವಡಿಸಿಕೊಂಡಿದ್ದಾರೆ. ಈಗಾಗಲೇ ನಾನು ತಿಳಿಸಿರುವಂತೆ ಇವುಗಳಲ್ಲಿ ಕೆಲವು ಕ್ಷುದ್ರ ಬಣ (tribal) ಧರ್ಮದಿಂದ ಬಂದು ಸೇರಿದಂಥವು.
೧. ಮಾರ್ಗದುದ್ದಕ್ಕೂ ತೆಂಗಿನ ಕಾಯಿಗಳನ್ನು ಪಟಾರನೆ ಒಡೆದು ಬಿಡುವುದು. ಬಡವರ ಹುಡುಗರು ಕಾದಾಡಿ ಮಣ್ಣಿನಲ್ಲಿ ಬಿದ್ದ ಕಾಯಿ ಚೂರುಗಳನ್ನು ಆಯ್ದುಕೊಳ್ಳುತ್ತಾರೆ. ಮಣ್ಣು ಒರೆಸಿ ತಿನ್ನುತ್ತಾರೆ. ಚುರಮುರಿ (ಮಂಡಕ್ಕಿ-ಪುರಿ) ಕಡಲೆ (ಪುಟಾಣಿ) ಬೆರೆಸಿ ತೂರುತ್ತಾ ಹೋಗುವುದು. ಇದಂತೂ ಪೂರ್ತಿ ಮಣ್ಣಿನಲ್ಲಿ ಬೆರೆತು ಹೋಗುವುದು.
ಧರ್ಮಗುರು ಬಸವಣ್ಣನವರ ಸಿದ್ಧಾಂತ “ಆಪ್ಯಾಯನ ಪ್ರಸಾದ ಕೆಡಿಸಬಾರದು” ಎಂಬುದಕ್ಕೆ ಈ ಆಚರಣೆ ವಿರುದ್ಧವಾದುದು. ಹೀಗೆ ಹೇಳಿದಾಗ ಕೆಲವು ಮೂಢರು ಹೇಳುವರು ಬಡ ಹುಡುಗರು ಆರಿಸಿಕೊಂಡು ತಿನ್ನುತ್ತಾರೆ, ವ್ಯರ್ಥವೇಕೆ ಆಗುತ್ತದೆ ಎಂದು. ಇದು ಬಡವರಿಗೆ ಕೊಡುವ ವಿಧಾನವೆ ? ಇದರಲ್ಲಿ ಎಂಥಾ ತಿರಸ್ಕಾರದ ಅಮಾನವೀಯ ವರ್ತನೆಯಿರುತ್ತದೆ ?! ಇದು ದಾನವು ಅಲ್ಲ, ದಾಸೋಹವೂ ಅಲ್ಲ ! ಮೃತರು ಬಹಳ ಕೆಟ್ಟ ಸ್ವಭಾವದವರು, ಆಶಾ ಪೀಡಿತರು, ಜಿಪುಣರು ಕಿರಿಕಿರಿ ಮಾಡಿ ಎಲ್ಲರನ್ನೂ ಕಾಡುವ ಗುಣದವರೂ ಆಗಿದ್ದರೆ ಅವರು ಮತ್ತೆ ಪಿಶಾಚಿಯಾಗಿ ಕಾಡಬಾರದೆಂದು ನವಣೆ ಬಿತ್ತುವುದನ್ನು ಹಳ್ಳಿಗಳಲ್ಲಿ ಮಾಡುವರಂತೆ. ಅಂದರೆ ಶವದ ಮಂಟಪ ಮುಂದೆ ಸಾಗಿದಂತೆ ಒಬ್ಬರು ಒಂದು ಬಟ್ಟೆಯಲ್ಲಿ ನವಣೆಕಾಳು ಒಂದು ಸೇರು-ಅರ್ಧಸೇರಿನಷ್ಟು ತೆಗೆದುಕೊಂಡು ಶವದ ಹಿಂದೆ ನಿಧಾನವಾಗಿ ಸ್ಮಶಾನದವರೆಗೂ ಹಾಕುತ್ತಾ ಹೋಗುವರಂತೆ. ಅಥವಾ ಶವದ ಮಂಟಪದ ಹಿಂದೆ ಬೊಂಬಿಗೆ ಆ ಧಾನ್ಯದ ಗಂಟನ್ನು ನೇತುಹಾಕುವರಂತೆ. ತಳದಲ್ಲಿ ತೂತು ಮಾಡಿದ್ದು ನಿಧಾನವಾಗಿ ನವಣೆಕಾಳು ಜಾರುತ್ತ ಹೋಗುತ್ತವೆ. ಹೀಗೆ ಮಾಡುವುದರ ಹಿಂದಿನ ಉದ್ದೇಶವೆಂದರೆ, “ಆ ಆಶಾಪೀಡಿತರು ಪಿಶಾಚಿಯಾಗಿ ಮನೆಯತ್ತ ಹೊರಟರೆ ನವಣೆಕಾಳು ನೋಡಿ ಆರಿಸುವ ಆಮಿಷಕ್ಕೆ ಒಳಗಾಗಿ ಆರಿಸುತ್ತ ಬರುವರು. ಸಣ್ಣ ಕಾಳನ್ನು ಆರಿಸುವುದು ಮುಗಿಯುವುದೇ ಇಲ್ಲ. ಅಷ್ಟರಲ್ಲಿ ಬೆಳಕು ಹರಿಯುವುದು, ಪ್ರೇತದ ಕಾಟ ತಪ್ಪುವುದು.” ಇದು ಕೇವಲ ಮಾನಸಿಕ ಭ್ರಾಂತಿ ಮಾತ್ರ. ಇಂಥ ಮಾನಸಿಕ ಭ್ರಾಂತಿ ನಿವಾರಣೆಗೆ ಮನೆಯಲ್ಲಿ ಬಸವೇಶ್ವರ ಮಂತ್ರ ಪಠಣ ಮಾಡಿದರೆ ಸಾಕು. ಮಂತ್ರೋದಕವನ್ನು ಮಾಡಿ ಮನೆಯ ಸುತ್ತ ಹಾಕಬೇಕು; ಆಗ ಯಾವ ಭೂತ ಪ್ರೇತದ ಕಾಟವೂ ಇರುವುದಿಲ್ಲ.
೨. ಶವಯಾತ್ರೆಯಲ್ಲಿ ಕುಣಿವವರನ್ನು ಕರೆಸಿ, ಅವರಿಗೆ ಸೆರೆ ಕುಡಿಸಿ ಕುಣಿಸಲಾಗುವುದು, ಕೂಲಿಕೊಟ್ಟು ಮಾಡಿಸುವ ಈ ಪ್ರೇತನೃತ್ಯ ಅಸಹ್ಯ, ಅಸಭ್ಯ.
೩. ಸತ್ತವರ ಸಲುವಾಗಿ ಕೂಲಿಕೊಟ್ಟು ಅಳಿಸುವ ಪದ್ಧತಿ ರಾಜಸ್ಥಾನ ಗುಜರಾತ ಮುಂತಾದ ಕಡೆ ಇದೆ. ಹೀಗೆ ಹಣ ಪಡೆದು ಅಳುವ ವೃತ್ತಿಯವರೇ ಇರುತ್ತಾರೆ. (ಇವರಿಗೆ ರುಡಾಲಿ ಎಂದು ಹೆಸರು). ಕರ್ನಾಟಕದಲ್ಲಿ ಇದು ಇಲ್ಲವಾದರೂ, ಹೊರಗಿನ ರಾಜ್ಯಗಳಲ್ಲಿರುವ ಲಿಂಗಾಯತರು ತಮ್ಮ ಮಿತ್ರರನ್ನು ನೋಡಿ ಅನುಕರಣೆ ಮಾಡುವುದುಂಟು. ಇದು ತಪ್ಪು.
೪. ಕೆಲವರು ಸತ್ತವರಿಗೆ ಸದ್ಗತಿ ದೊರೆಯಿತು ಎಂದು ಸಂತೋಷಸೂಚಕ ಎನಿಸುವ ಅರ್ಥದಲ್ಲಿ ಪಟಾಕಿ ಸಿಡಿಸಿ, ಕೇಕೆ ಹಾಕುವುದುಂಟು, ಇದು ತಪ್ಪು. ಶವಯಾತ್ರೆ ಸುಸಂಸ್ಕೃತವಾಗಿ, ತಾತ್ವಿಕವಾಗಿ, ಶಾಂತವಾಗಿ ಇರಬೇಕು.
ವಚನಗಳನ್ನು ಹಾಡುವುದು, ಭಜನೆ ಮಾಡುವುದು, ಜಯಘೋಷ ಮಾಡುವುದು, ಮೃತರ ಹೆಸರಿನಲ್ಲಿ ವೀರಘೋಷ, ಲಿಂಗವಂತ ಧರ್ಮದ ಮಂತ್ರ ಪಠಣದ ಕ್ಯಾಸೆಟ್ಟಿನ ಶ್ರವಣ, “ಬಸವಲಿಂಗ, ಬಸವಲಿಂಗ ” ಎಂದು ಸಾಮೂಹಿಕವಾಗಿ ಹಾಡಬೇಕು.
ಹೀಗೆ ಭಕ್ತಿ ನಿರ್ಭರತೆಯಿಂದ ಶವಯಾತ್ರೆ ಸಾಗಬೇಕು. ಶವಯಾತ್ರೆಯು ಸ್ಮಶಾನವನ್ನು ಪ್ರವೇಶ ಮಾಡುತ್ತಿರುವಾಗ ಕ್ರಿಯಾ ಮತ್ತು ಗುರುಮೂರ್ತಿಗಳಾದ ಇಬ್ಬರು ಲಿಂಗೈಕ್ಯರನ್ನು ಸ್ವಾಗತಿಸಲು ಬರುತ್ತಾರೆ. “ಶರಣು ಶರಣಾರ್ಥಿ' ವಿಮಾನ ಹೊತ್ತವರು ಹೇಳುತ್ತಾರೆ.
ಗು.ಮೂ: ತಾವಾರು ಶರಣರೆ.... ?
ವಿ.ಹೊ: ಲಿಂಗೈಕ್ಯರಾಗಿರುವ ............................. .......................... ಇವರ ಬಂಧುಮಿತ್ರರು. ಇವರು ಇನ್ನು ಮರಳಿ ಭವಕ್ಕೆ ಬಾರದಂತೆ ಪರಮಾತ್ಮನಲ್ಲಿ ಒಂದಾಗಲು ಬಸವೇಶನು ಅನುಗ್ರಹಿಸಲು ತಾವು ಪ್ರಯತ್ನಿಸಬೇಕು.
ಗು.ಮೂ: ಲಿಂಗನಿಷ್ಠಾಪರನಾದ ಶರಣನು ಲಿಂಗೈಕ್ಯನಾದನೆಂಬ ವಾರ್ತೆ ಕೇಳಿ ಬಸವಾದಿ ಪ್ರಮಥರ ಪರವಾಗಿಯೇ ಅವರ ಪ್ರತಿನಿಧಿಗಳಾಗಿ ಬಂದಿದ್ದೇವೆ.
ವಿ.ಹೊ: ಬಹಳ ಸಂತೋಷ, ತಾವಿನ್ನು ಅನುಗ್ರಹಿಸಿರಿ.
ಗು.ಮೂ: ಇದು ತುಸು ಕಠಿಣ.
ವಿ.ಹೊ: ಏಕೆ ?
ಗು.ಮೂ: ಧರ್ಮಗುರು ಬಸವಣ್ಣನವರು ಆದೇಶಿಸಿದಂತೆ 'ಅಷ್ಟಾವರಣ ಸಂಪನ್ನರು, ಪಂಚ ಆಚಾರ ಪಾರಾಯಣರು, ಷಟಸ್ಥಲ ಅನುಭಾವಿಗಳೂ ಆಗಿ ಶರಣ ಮಾರ್ಗದಲ್ಲಿ ಇವರು ನಡೆದಿದ್ದಾರೆಂದು ಇವರ ಪರವಾಗಿ ನೀವು ಸಾಕ್ಷಿ ಹೇಳಬಲ್ಲಿರಾ ?
ಈಗ ಶವಸಂಸ್ಕಾರದ ಹೊಣೆಹೊತ್ತವರು, ಹಿರಿಯ-ಮಗ, ಆಪ್ತ ಬಂಧು ಯಾರಾದರೊಬ್ಬರು ಶವದ ಮಂಟಪದ ಮುಂದೆ ನಿಂತು ಹೇಳುವರು.
“ಅದು ಆ ಜಗತ್ಕರ್ತ ಮತ್ತು ಧರ್ಮಪಿತ ಬಸವಣ್ಣನವರಿಗೆ ಗೊತ್ತಿರುವ ಸತ್ಯ. ಈಗ ಇವರು ಭಸ್ಮ-ರುದ್ರಾಕ್ಷಿ-ಇಷ್ಟಲಿಂಗ ಎಂಬ ಲಾಂಛನಧಾರಿಗಳಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಹೇಳಬಲ್ಲೆವು.”
ಗು.ಮೂ: ಒಳ್ಳೆಯದು, ನ್ಯಾಯ ನಿರ್ಣಯವನ್ನು ಧರ್ಮಪಿತರಿಗೇ ಬಿಡೋಣ. ಮೋಕ್ಷದಾಯಕರಾದ ಬಸವಣ್ಣನವರು ಮುಕ್ತಿದಾತ ಪರಮಾತ್ಮನಿಗೆ ತಮ್ಮ ಚಿತ್ರದಂತೆ ಸಾಕ್ಷಿ ನುಡಿಯಲಿ ಎಂದು ಬೇಡಿಕೊಳ್ಳೋಣ. ಬಸವಾದಿ ಪ್ರಮಥರ ಪರವಾಗಿ ನಾವು ಇವರನ್ನು ಸ್ವೀಕರಿಸುತ್ತೇವೆ.
“ಎಲ್ಲರೂ ಜಯಗುರು ಬಸವೇಶ ಹರಹರ ಮಹಾದೇವ' ಎಂದು ಜಯಘೋಷ ಮಾಡಬೇಕು. ಗುರುಮೂರ್ತಿಯು ಮುಂದೆ ಸಾಗಿದಂತೆ ಮಂಟಪ ಹೊತ್ತವರು ಹಿಂಬಾಲಿಸುವರು. ಸಮಾಧಿಯ ಸುತ್ತ (ತೋಡಿರುವ ತಗ್ಗು ಲಿಂಗಾಯ ನಮಃ ಎನ್ನುತ್ತ ಬಲಗಡೆಯಿಂದ ಒಂದು ಪ್ರದಕ್ಷಿಣೆ ಮಾಡಿ, ಮಂಟಪವನ್ನು ಕೆಳಗೆ ಇಳಿಸುವರು. ಸೋಪಾನ ತೋಡಿದ್ದರೆ ಅದರ ಮುಂಭಾಗದಲ್ಲಿ ಕಿರುಕುಣಿಯ ಮೇಲ್ಬಾಗದಲ್ಲಿ ವಿಮಾನವನ್ನು ಇಳಿಸಲಾಗುವುದು.
೧. ಹೃದಯ ಕಮಲ | ఓం |
೨. ನೆತ್ತಿ | ಶ್ರೀ |
೩. ಶಿಖಾಸ್ಥಾನ (ಕುತ್ತಿಗೆಯ ಹಿಂಭಾಗ) | ಗು |
೪. ಪಶ್ಚಿಮ ಚಕ್ರ | ರು |
೫. ಭ್ರೂಮಧ್ಯ | ಬ |
೬. ಕುತ್ತಿಗೆಯ ಎಡಬದಿ | ಸ |
೭. ಕುತ್ತಿಗೆಯ ಬಲಬದಿ | ವ |
೮. ಕಂಠ | ಲಿಂ |
೯. ಎಡಭುಜ | ಗಾ |
೧೦. ಬಲಭುಜ | ಯ |
೧೧. ಎಡ ಕಂಕುಳ | ನ |
೧೨. ಬಲ ಕಂಕುಳ | ಮಃ |
೧೩. ನಡು ಬೆನ್ನು | ಓಂ |
೧೪. ಬಲ ತೊಡೆ | ಲಿಂ |
೧೫. ಎಡ ತೊಡೆ | ಗಾ |
೧೬. ನಾಭಿ (ಹೊಕ್ಕುಳ) | ಯ |
೧೭. ಬಲ ಪಾದ | ನ |
೧೮. ಎಡ ಪಾದ | ಮಃ |
ಉಟ್ಟ ವಸ್ತ್ರಗಳನ್ನು ತೆಗೆಯುವಲ್ಲಿ ಎರಡು ಉದ್ದೇಶವಿದೆ. ಒಂದು, ಮಂತ್ರಾಕ್ಷರದ ತಗಡನ್ನು ಶರೀರಕ್ಕೆ ನೇರವಾಗಿ ಇಡಬಹುದು ಎಂಬುದಾದರೆ, ಇನ್ನೊಂದು ತಾಯಿಯ ಗರ್ಭದಿಂದ ಬೆತ್ತಲೆಯಾಗಿ ಬಂದು (ಜೀವನದಲ್ಲಿ ಎಷ್ಟೇ ಮೆರೆದಾಡಿದರೆ) ಭೂಮಿಯ ಗರ್ಭವನ್ನು ಹೊಗುವಾಗ ನಗ್ನನಾಗಿಯೇ ಹೋಗುವನಲ್ಲ ಎಂದು ಚಿಂತಿಸುವ ವಿರತಿ ಭಾವ. ಶವಚೀಲ ತಾಯಿಯ ಗರ್ಭವನ್ನು ಸಂಕೇತಿಸುತ್ತದೆ. ಆದರೂ ಕೆಲವರು ಬಟ್ಟೆಗಳನ್ನು ಬಿಚ್ಚಿ ಶರೀರವನ್ನು ನಗ್ನಗೊಳಿಸುವುದು ಅರ್ಥರಹಿತವಾದುದು, ಅಸಭ್ಯತೆ ಎಂದು ಭಾವಿಸಿ, ಬಟ್ಟೆಗಳ ಸಹಿತವಾಗಿ ಶವದ ಚೀಲದಲ್ಲಿಟ್ಟು ಹುಗಿಯಲು ಸೂಚನೆ ನೀಡುತ್ತಾರೆ. ಉಟ್ಟ ಬಟ್ಟೆಗಳೇ ಶವದ ಚೀಲದಂತೆ ಕೆಲಸ ಮಾಡುತ್ತವೆ ಎಂದವರ ವಾದ. ಇಲ್ಲಿ ಒಂದು ಗಮನಾರ್ಹ ಅಂಶವಿದೆ. ಶವದ ಚೀಲದಲ್ಲಿ ಉಪ್ಪು, ವಿಭೂತಿ ಪುಡಿ ಹಾಕಿ ಶವವನ್ನು (ಕೇವಲ ಚಡ್ಡಿಯಂತೆ ಕಟ್ಟಿದ ಬಟ್ಟೆಯೊಡನೆ) ನಗ್ನವಾಗಿ ಇಟ್ಟು ಕಿರುಗುಣಿಯಲ್ಲಿ ಇಡಲಾಗುವುದಷ್ಟೇ. ಶವವು ಕೊಳೆಯುತ್ತ ರಸ ಬಸಿದಾಗ ಉಪ್ಪು-ವಿಭೂತಿ ಹೀರಿಕೊಳ್ಳುತ್ತದೆ. ಶವವು ಬೇಗನೆ ಕೊಳೆಯಲು ಇವು ಸಹಾಯಕವಾಗುತ್ತವೆ. ಶವಚೀಲವು ಹತ್ತಿ ಬಟ್ಟೆಯದಾಗಿರುತ್ತದೆ. ಅದರ ಹೊರಗೆ ಉಪ್ಪು-ವಿಭೂತಿ, ನಂತರ ಮಣ್ಣಿನ ಗೋಡೆ. ಶವಕ್ಕೆ ಧರಿಸಿದ ಬಟ್ಟೆ ಕೃತಕ ನೂಲಿನದು ಇದ್ದರೆ ಇವು ಬೇಗನೆ ಕೊಳೆಯುವುದಿಲ್ಲ ಎಂಬುದು ವಾಸ್ತವಿಕ ಸತ್ಯ. ಕೆಲವೊಮ್ಮೆ ಹಾಕಿದ ಬಟ್ಟೆ ಉತ್ತಮ ದರ್ಜೆಯದಿದ್ದರೆ ಅದರ ಆಸೆಗಾಗಿ ಕಳ್ಳರು ಸಮಾಧಿಯನ್ನು ಕೆದರಿದರೂ ಕೆದರಬಹುದು.
ಶವಕ್ಕೆ ಸ್ನಾನ ಮಾಡಿಸಿ, ಅರಳೆಪದರ-ಉಪ್ಪಿನ ಪದರನ್ನು ಬಟ್ಟೆಯಲ್ಲಿ ಹಾಕಿ ಆಸನ ಭಾಗಕ್ಕೆ ಕಟ್ಟಿದ ಮೇಲೆ, ಹೊಸ ಬಟ್ಟೆಗಳನ್ನು ಶವಕ್ಕೆ ಉಡಿಸುವರು. ಹೊಸದಾದ ಅಂಗಿಬಟ್ಟೆ, ಧೋತ್ರ, ಶಲ್ಯ, ಪೇಟ ಇಷ್ಟು ವಸ್ತುಗಳನ್ನು ಮಣ್ಣಿನಲ್ಲಿ ಹಾಕಿ ವ್ಯರ್ಥ ಮಾಡಲು ಯಾರೂ ಇಷ್ಟಪಡರು. ಕಿರುಗುಣಿಗೆ ಶವವನ್ನು ಇಡುವ ಮೊದಲು ಈ ಹೊಸಬಟ್ಟೆಗಳನ್ನು ಕಳಚುವರು. ಊರಿನ ಹಿರಿಯರು ಶವದ ತಲೆಯ ಮೇಲಿನ ಪೇಟ (ಪಟಕ) ತೆಗೆದು ಮುಂದೆ ಮನೆಯ ಹಿರಿಯತನ ವಹಿಸಿಕೊಳ್ಳುವ ಮಗನ ತಲೆಯ ಮೇಲೆ ಇಟ್ಟು ಭಸ್ಮವನ್ನು ಧರಿಸುವರು. ಉಳಿದ ಹೊಸ ಬಟ್ಟೆಗಳನ್ನು ಮಕ್ಕಳೇ ಧರಿಸಿಕೊಳ್ಳಬಹುದು. ಅಥವಾ ಬೇರೆ ಯಾರಿಗಾದರೂ ದಾನ ಮಾಡಬಹುದು.
ಶವವನ್ನು ಈಗ ಶವದ ಚೀಲದಲ್ಲಿ ಇಡಬೇಕು. ಅದರಲ್ಲಿ ಉಪ್ಪು-ವಿಭೂತಿ ಪುಡಿ ಹಾಕಿಟ್ಟಿರಬೇಕು. ಶವದ ಚೀಲವನ್ನು ಭುಜದವರೆಗೆ ಎಳೆದು ಮುಖಮಾತ್ರ ಕಾಣುವಂತೆ ಮಾಡಿ, ಬಸವನ ಪಾದದ ಮೇಲೆ ಕೂರಿಸಿರಬೇಕು.
ಈಗ ಲಿಂಗದ ಗೂಡಿನ ಮೇಲೆ ಮತ್ತು ಇನ್ನುಳಿದ ಮೂರೂ ಗೋಡೆಗಳಲ್ಲಿರುವ ದೀಪದ ಗೂಡುಗಳಲ್ಲಿ ಮೂರು ಮಣ್ಣಿನ ಪ್ರಣತೆಗಳನ್ನಿಟ್ಟು ಎಣ್ಣೆ-ಬತ್ತಿಹಾಕಿ ದೀಪ ಹಚ್ಚಬೇಕು.
ದೀಪ ಉದ್ದೀಪನದ ಬಳಿಕ ಒಂದು ಭಕ್ತಿಗೀತೆಯನ್ನು ಸಾಮೂಹಿಕವಾಗಿ ಹಾಡಬೇಕು.
ಓಂ ಲಿಂಗಾಯ ನಮಃ ಎಂಬ ನಾಮದ ಬೀಜವ
ನಾಲಿಗೆ ತುದಿಯಲ್ಲಿ ಬಿತ್ತಿರಯ್ಯ
ಹೃದಯ ಹೊಲವ ಮಾಡಿ ಮನದ ನೇಗಿಲಗೂಡಿ
ಶ್ವಾಸಕೋಶವೆಂಬ ಎರಡೆತ್ತುಗಳ ಹೂಡಿ
ಜ್ಞಾನೋದಯವೆಂಬ ಹಗ್ಗ ಕಣ್ಣಿಯ ಮಾಡಿ
ನಿರ್ಮಲವೆಂಬ ಕುಂಟೆ ಹೊಡೆಯಿರಯ್ಯ
ಮದಮತ್ಸರವೆಂಬ ಮರಗಳ ಕಡಿಯುತ (ಕರಿಕೆಯ ಕಳೆದಿಟ್ಟು)
ಕಾಮಕ್ರೋಧವೆಂಬ ಕಳೆಯನೆ ಕಿತ್ತು
ಪಂಚೇಂದ್ರಿಯಗಳ ಮಂಚಿಕೆಯನೆ ಹೂಡಿ
ಚಂಚಲವೆಂಬ ಪಕ್ಷಿ ಹೊಡೆಯಿರಯ್ಯ
ಉದಯಾಸ್ತಮಾನವೆಂಬ ಎರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆಯುತ್ತಿದೆ ಅಲ್ಲಿ
ಸ್ವಾಮಿ ಶ್ರೀ ಕೂಡಲ ಸಂಗನ ನೆನೆದರೆ
ಹುಟ್ಟು ಸಾವು ಎಂಬುದಿಲ್ಲವಯ್ಯ - ವಿಶ್ವಗುರು ಬಸವಣ್ಣನವರು
ಈಗ ಬಸವ ಮಂಗಲವನ್ನು ಹಾಡಬೇಕು
ಓಂ ಗುರು ಓಂ ಗುರು ಓಂ ಗುರು ಬಸವಾ
ಸದ್ಗುರು ಬಸವಾ ತವ ಶರಣಂ |
ಮಂಗಳರೂಪಿನ್ ಜಂಗಮ ಮೂರ್ತೆ
ಮದ್ಗುರು ಬಸವಾ ತವಶರಣಂ ||
ನಮಾಮಿ ಸದ್ಗುರು ಪ್ರಣವ ಸ್ವರೂಪಿನ್
ಮಂತ್ರಪುರುಷಹೇ ತವ ಶರಣಂ
ಜಗದೋದ್ಧಾರಕ ಪತಿತೋದ್ದಾರಕ
ವರಗುರು ಬಸವಾ ತವ ಶರಣಂ
ಶರಣ ರಕ್ಷಕ ಕರುಣಾಮೂರ್ತೆ
ಮರಣವಿದೂರ ತವ ಶರಣಂ
ಸಮತಾವಾದಿನ್ ಮನುಕುಲಕೀರ್ತೇ
ಚಿನ್ಮಯ ಮೂರ್ತೆ ತವ ಶರಣಂ
ಸನ್ಮಯ ಗಾತ್ರಾ ಪರಮ ಪವಿತ್ರಾ
ಮಮತಾ ಮೂರ್ತೆ ತವ ಶರಣಂ
ಮಾತೃಸ್ವರೂಪಿನ್ ಪಿತೃ ಸ್ವರೂಪಿನ್
ಜ್ಯೋತಿ ಸ್ವರೂಪಿನ್ ತವ ಶರಣಂ
ಭವತಾಪ ಹಾರಕ ಶಿವಸುಖದಾಯಕ
ಪಾವನಪುರುಷ ತವಶರಣಂ
ವರಗುಣ ಸಹಿತ ನಿರುಪಮ ಚರಿತ
ಪರಶಿವ ಭರಿತ ತವ ಶರಣಂ
ನಿತ್ಯಾನಂದಿನ್ ಸತ್ಯ ಸ್ವರೂಪಿನ್
ಭ್ರಾಂತಿ ವಿನಾಶಕ ತವ ಶರಣಂ
ಆನಂದ ರೂಪಿನ್ ಚಿದಾನಂದ ರೂಪಿನ್
ಸಚ್ಚಿದಾನಂದಾ ತವ ಶರಣಂ - ಜಗದ್ಗುರು ಮಾತೆ ಮಹಾದೇವಿ
ಮಂಗಲ ಗೀತೆ ಹಾಡುವಾಗ ಪತ್ರೆ-ಪುಷ್ಪ ಬೆರೆಸಿಟ್ಟ ಪುಟ್ಟಿಯಲ್ಲಿ ವಿಭೂತಿಯನ್ನು ಪುಡಿಮಾಡಿ, ಬೆರೆಸಿ ನೆರೆದ ಎಲ್ಲ ಜನರ ಕೈಯಲ್ಲಿ ವಿತರಿಸುತ್ತ ಹೋಗಬೇಕು. ಆ ಸಮಯದಲ್ಲಿ ಕ್ರಿಯಾಮೂರ್ತಿಯು ಲಿಂಗದ ಗೂಡಿನಲ್ಲಿ ಹಿಂದೆ ವಿಭೂತಿ ಗಟ್ಟಿಗಳನ್ನು ಜೋಡಿಸುವುದು, ಉಪ್ಪನ್ನು ಹರಡುವುದು ಮುಂತಾಗಿ ಮಾಡಬೇಕು.
ಮಂಗಲಗೀತೆಯು ಪೂರ್ತಿಯಾಗುತ್ತಲೇ ಗುರುಮೂರ್ತಿ ಹೇಳಬೇಕು:
ಭಕ್ತಿ ಎಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿ ಎಂಬ ಹಣ್ಣಾಯಿತ್ತು.
ನಿಷ್ಪತ್ತಿ ಎಂಬ ಹಣ್ಣು ತಾನು
ತೊಟ್ಟು ಕಳಚಿ ಬೀಳುವಲ್ಲಿ,
ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
ಗು.ಮೂ: ಶರಣ ಬಂಧುಗಳೇ, ಲಿಂಗನಿಷ್ಠಾಪರರಾದ ಶರಣರು ಏನಾದರು ?
ನೆರೆದ ಜನ: ಉರಿಯುಂಡ ಕರ್ಪುರದಂತೆ ಲಿಂಗದೇವನಲ್ಲಿ ಐಕ್ಯರಾದರು.
ಗು.ಮೂ: ಎಲ್ಲರೂ ಭಸ್ಮಸಹಿತ ಇರುವ ಪತ್ರ-ಪುಷ್ಪಗಳನ್ನು ಎಸೆಯಿರಿ. ಜಯಗುರು ಬಸವೇಶ ಹರಹರ ಮಹಾದೇವ ಎಂದು ಎಸೆಯುವರು.
ಶವದ ಮೇಲೆ ಬೀಳುವಂತೆ ಎಸೆಯುವುದೇ ಅರ್ಥಗರ್ಭಿತ ; ಆದರೆ ಕೆಲವರು ಅದು ಶವವೇ ಇದ್ದು, ಸಂವೇದನೆಗಳಿರದ ಜಡವಸ್ತುವೇ ಆದರೂ, ಬೀಳುವ ಪತ್ರ-ಪುಷ್ಪಗಳ ತಾಡನ ತಪ್ಪಿಸಲು ಬಟ್ಟೆಯೊಂದನ್ನು ಹಿಡಿಯುವರು. ನಾಲ್ಕು ಜನರು ಒಂದು ಬಿಳಿಯ ಬಟ್ಟೆಯನ್ನು ನಾಲ್ಕೂ ಮೂಲೆಗಳಲ್ಲಿ ಹಿಡಿದು ಶವದ ನೆತ್ತಿಯ ಮೇಲೆ ಹಿಡಿಯುವರು. ಜನರು ಎಸೆದ ಪತ್ರ-ಪುಷ್ಪಗಳು ಆ ಬಟ್ಟೆಯಲ್ಲಿ ಸಂಗ್ರಹವಾಗುವವು. (ಅದನ್ನು ಎತ್ತಿಕೊಂಡು ಒಂದು ಕಡೆಯಿಟ್ಟು, ಲಿಂಗದ ಗೂಡಿನಲ್ಲಿ ಶವವನ್ನು ಇಟ್ಟಾಗ ಈ ಪತ್ರೆ-ಪುಷ್ಪಗಳನ್ನು ತಲೆಯ ಮೇಲೆ ಹೊಂದಿಸುವರು.
ಈಗ ಶವದ ಚೀಲವನ್ನು ಮುಖಮಾತ್ರ ತೆರೆದಿರುವಂತೆ ಬಿಟ್ಟು ಲಿಂಗದ ಗೂಡಿ (ಕಿರುಗುಣಿ)ನಲ್ಲಿ ಇಡಲಾಗುವುದು. ಶವದ ತಲೆಯ ಮೇಲೆ ಬಸವ ಮುದ್ರೆ (ಅಥವಾ ಬಸವ ನಾಣ್ಯ) ಇಟ್ಟು ಆಗಲೇ ಸಂಗ್ರಹಿಸಿಟ್ಟಿದ್ದ ಪತ್ರ-ಪುಷ್ಪ ತಲೆಯ ಮೇಲೆ ಪೇರಿಸಲಾಗುವುದು. ನಂತರ ಮುಖವು ಪೂರ್ತಿಮುಚ್ಚುವಂತೆ ಶವದ ಚೀಲವನ್ನು ಪೂರ್ಣ ಮೇಲಕ್ಕೆತ್ತಿ ದಾರದ ಸರುಕನ್ನು ಹಾಕಿ ಬಿಗಿದು ಬಿಡಲಾಗುವುದು. ಈ ದಾರದ ತುದಿಗೆ ಇನ್ನೊಂದು ಶಿವದಾರವನ್ನು ಕಟ್ಟಿ, ಆ ದಾರವನ್ನು ಸಮಾಧಿಯ ತಗ್ಗಿನಿಂದ ಮೇಲಕ್ಕೆ ತೆಗೆದುಕೊಂಡು ಓರ್ವ ವಿರಕ್ತ ಸ್ವಾಮಿಗಳ ಕೈಗೆ ಕೊಡಲಾಗುವುದು. ಅವರು ಅದನ್ನು ಕೈಲಿ ಹಿಡಿದುಕೊಂಡು ಕುಳಿತು, “ಓ ಶ್ರೀಗುರುಬಸವಲಿಂಗಾಯನಮಃ” “ಓಂ ಲಿಂಗಾಯ ನಮಃ ” ಎಂದು ಪಠಿಸುತ್ತ ಕುಳಿತಿರುವರು. ಜನರೂ ಈ ಮಂತ್ರಗಳನ್ನು ಪುನರುಚ್ಚರಿಸುವರು. ದೇವರ ಸ್ವರೂಪವನ್ನು ಹೇಳುವ ವಚನಗಳನ್ನೂ ಪಠಿಸಬಹುದು. ವಿರಕ್ತ ಸ್ವಾಮಿಗಳು ಸಿಗದಿದ್ದರೆ, (ಸಿಕ್ಕರೂ ಸಹ ಅವರ ಮುಂದೆ) ಒಂದು ಮಣ್ಣಿನ ಬಸವಣ್ಣನನ್ನು ಮಾಡಿ (ಮಣ್ಣೆತ್ತು) ಅದಕ್ಕೆ ಈ ದಾರವನ್ನು ಸುತ್ತುವರು. ಸಂಪ್ರದಾಯದಲ್ಲಿ ಹೀಗೆ ಮಣ್ಣೆತ್ತನ್ನು ಇಡುವ ಪರಿಪಾಠವಿದೆ. ಈಗ ನಮಗೆ ಬಸವಣ್ಣನವರ ಲೋಹಪಟ, ನಾಣ್ಯ, ಮುದ್ರೆ ಎಲ್ಲ ಲಭ್ಯವಿರುವುದರಿಂದ ಅದನ್ನೇ ಇಡಬೇಕೇ ವಿನಾ ಮಣ್ಣೆತ್ತು ಇಟ್ಟು ಕ್ರಿಯೆ ಮಾಡುವುದು ಅಗತ್ಯವಿಲ್ಲ.
ಈಗ ಒಳಗಿರುವ ಕ್ರಿಯಾ ಮೂರ್ತಿಯು ಶವದ ಪಕ್ಕ ಇರುವ ಪೊಳ್ಳಿಗೆ ವಿಭೂತಿ, ಉಪ್ಪು ತುಂಬುವನು. ಹೀಗೆ ಪೂರ್ತಿ ಪೊಳ್ಳನ್ನು ತುಂಬಿದ ಮೇಲೆ ಲಿಂಗದ ಗೂಡಿ (ಕಿರುಕುಣಿ)ಗೆ ಒಂದು ಹಲಗೆಯನ್ನಾಗಲೀ, ಕಲ್ಲಿನ ಚಪ್ಪಡಿಯನ್ನಾಗಲೀ ಇಡುವರು ಅಥವಾ ಇಟ್ಟಿಗೆಗಳನ್ನು ಹಸಿಮಣ್ಣಿನಲ್ಲಿ ಕಟ್ಟಿ ಪೂರ್ತಿ ಮುಂಭಾಗವನ್ನು ಮುಚ್ಚಲಾಗುವುದು, ಕುಣಿಯಲ್ಲಿರುವವರು ಮೇಲಕ್ಕೆ ಬರುವರು. ಇಷ್ಟರಲ್ಲಿ ಗುರುಮೂರ್ತಿಯು ಒಂದು ದೊಡ್ಡ ಬೊಗುಣಿಯಲ್ಲಿ ಮಣ್ಣನ್ನು ತೆಗೆದುಕೊಂಡು ಮಂತ್ರಮಯ ಮಾಡುವರು, ಐದೂ ಬೆರಳುಗಳಿಗೆ ಭಸ್ಮ ಧರಿಸಿ, ೧೨ ಬಾರಿ 'ಓಂ ಲಿಂಗಾಯ ನಮಃ’ ಪಠಿಸಿ, ಆ ಮಣ್ಣಿನ ಮೇಲೆ ಬಸವ ಲಿಂಗ ಮುದ್ರೆಯನ್ನು ಬರೆಯುವರು. ಒಂದು ವೃತ್ತವನ್ನು ಬರೆದು ಷಟ್ಕೋನ ರಚಿಸಿ “ಓಂ ಶ್ರೀಗುರುಬಸವ ಲಿಂಗಾಯನಮಃ” ಎನ್ನುತ್ತ ಮಂತ್ರಮಯವಾದ ಮೃತ್ತಿಕೆಯನ್ನು ಮುಖ್ಯವಾದವರಿಗೆ ವಿತರಿಸಿ, ಉಳಿದುದನ್ನು ಹೆಚ್ಚಿನ ಮಣ್ಣಿಗೆ ಬೆರೆಸುವನು.
ಗು.ಮೂ: ಶರಣ ಬಂಧುಗಳೇ, ಲಿಂಗ ನಿಷ್ಠಾಪರರಾದ ಶರಣರು ಏನಾದರು ?
ನೆರೆದ ಜನ: ಉರಿಯುಂಡ ಕರ್ಪುರದಂತೆ ಲಿಂಗದೇವನಲ್ಲಿ ಅಡಗಿದರು, ಲಿಂಗೈಕ್ಯರಾದರು. *
ಬಸವೈಕ್ಯ - ಲಿಂಗೈಕ್ಯ
ಕೆಲವು ಕಡೆ ಬಸವೈಕ್ಯರಾದರು, ಬಸವನ ಪಾದ ಸೇರಿದರು ಎಂದು ೩ ಸಲ ಸ್ವಸ್ತಿವಾಚನ ಮಾಡಿ ಕ್ರಿಯೆ ಮುಗಿಸುವ ಪರಿಪಾಠವಿದೆಯಂತೆ. ನೀಲಗಿರಿಯ ಲಿಂಗಾಯತರಲ್ಲಿ ಕೆಲವು ಕಡೆ ಇದು ಪ್ರಚಲಿತವಿದೆ. ಕೆಲವು ಶರಣರಿಗೆ ಧರ್ಮಪಿತರ ಬಗ್ಗೆ ಅತ್ಯುತ್ಕಟ ಭಕ್ತಿ ಇದ್ದುದರಿಂದ ಆ ಕಾಲದಿಂದಲೇ ಈ ಪದ್ಧತಿ ಬಂದಿರಬಹುದು. ಆದರೆ ಧರ್ಮಪಿತರ ಸೈದ್ಧಾಂತಿಕ ಚಿಂತನೆಯ ಹಿನ್ನೆಲೆಯಲ್ಲಿ 'ಲಿಂಗೈಕ್ಯ' ಪದವೇ ಸರಿ. ಸರ್ವವ್ಯಾಪಿ ಲಿಂಗದೇವನಲ್ಲಿ ಧರ್ಮಪಿತರು ಸಮರಸ ಹೊಂದಿರುವಾಗ, ಅವರು ಖಂಡಿತ-ಮೂರ್ತಿಯಾಗಿ ಇಲ್ಲದ ಕಾರಣ, ಎಲ್ಲ ಶರಣರು ದೇವನಲ್ಲಿ ಅಡಗುವುದೇ ಗುರಿಯಾಗಿರುವಾಗ ಲಿಂಗೈಕ್ಯರಾಗು ಎಂಬ ಪದ ಬಳಕೆಯೇ ಸೂಕ್ತ..
ಗು.ಮೂ: ಈಗ ೫ ಹಿಡಿಕೆ ಮಂತ್ರಸಹಿತವಾದ ಮಣ್ಣನ್ನು ಎಸೆಯಿರಿ.
ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ;
ಬಸವಾದಿ ಪ್ರಮಥರ ಪರಂಪರೆಗೆ ಜಯವಾಗಲಿ,
ಬಸವ ಸಂತತಿಗೆ ಜಯವಾಗಲಿ,
ಸರ್ವ ಶರಣರಿಗೆ ಜಯವಾಗಲಿ,
ಜಯಗುರು ಬಸವೇಶ ಹರಹರ ಮಹಾದೇವ.
ಒಂದೊಂದು ಜಯಘೋಷಕ್ಕೂ ಒಂದೊಂದು ಹಿಡಿಯಂತೆ ಐದು ಹಿಡಿ ಮಣ್ಣನ್ನು ಮುಖ್ಯಸ್ಥರು ಹಾಕುವರು. ನಂತರ ಉಳಿದವರು ಹಾಕುವರು. ಸನಿಕೆಯಿಂದ ಬೇಗಬೇಗನೆ ಮಣ್ಣನ್ನು ಎಳೆಯುವರು. ಪೂರ್ತಿ ಮಣ್ಣನ್ನು ಎಳೆದಾದ ಮೇಲೆ ದಾರಸುತ್ತಿ ಮಣ್ಣು ಗುಡ್ಡೆಯ ಮೇಲೆ ಇಟ್ಟಿದ್ದ ಬಸವಣ್ಣನನ್ನು ಪೂಜಿಸಿ, ಒಂದು ದೀಪ ಹಚ್ಚಿಟ್ಟು, ಪುಷ್ಪಾಂಜಲಿ ಹೇಳುವರು.
ಜಯ ಬಸವರಾಜ ಭಕ್ತಜನ ಸುರಭೂಜ
ಜಯತು ಮಹ ಕಾರಣಿಕ ಪರಶಿವನ ಘನ ತೇಜ
ಜಯತು ಕರುಣಾಸಿಂಧು ಭಜಕಜನ ಬಂಧು
ಜಯ ಇಷ್ಟದಾಯಕ ರಕ್ಷಿಸು ಶ್ರೀಗುರು ಬಸವ.
ಜಯಗುರು ಬಸವೇಶ ಹರಹರ ಮಹಾದೇವ
ವಿಶ್ವಗುರು ಬಸವೇಶ್ವರ ಮಹಾತ್ಮಕೀ ಜೈ,
ಈಗ ಕ್ರಿಯಾಮೂರ್ತಿ ಗುರುಮೂರ್ತಿ ಜಂಗಮಮೂರ್ತಿ ಇನ್ನಿತರರೆಲ್ಲರೂ ಮನೆಗಳತ್ತ ತೆರಳುವರು.
ಉತ್ತರ ಕ್ರಿಯೆ
ಸಮಾಧಿಯ ಮೇಲೆ ದೀಪವನ್ನು ಹಚ್ಚಿಡುವ ಉದ್ದೇಶವೆಂದರೆ ತಡವಾಗಿ ಬಂದವರು ಆ ದೀಪವನ್ನಾದರೂ ದರ್ಶಿಸಲಿ ಎಂಬುದು (ಶ್ರೀ ಗುರು ಬಸವಣ್ಣನವರನ್ನು ಸಮಾಧಿ ಮಾಡಿದ ಮೇಲೆ ಹಚ್ಚಿಟ್ಟ ದೀಪವನ್ನು ತಾಯಿ ನೀಲಲೋಚನೆ ಕೃಷ್ಣಾ ನದಿಯ ಆ ತೀರದಿಂದ ದರ್ಶಿಸುತ್ತಾಳೆ. ಕೊಳವೆ ಭಾವಿಗಳನ್ನು ಎರಡೂ ಸಮಾಧಿ ಮಂಟಪಗಳಿಗೆ ಕಟ್ಟುವ ಮೊದಲು ನೀಲಾಂಬಿಕೆಯ ಗದ್ದುಗೆಯ ಒಂದು ಕಿಂಡಿಯಿಂದ ಶ್ರೀ ಬಸವೇಶ್ವರ ಐಕ್ಯ ಮಂಟಪದಲ್ಲಿ ಹಚ್ಚಿಟ್ಟ ದೀಪವನ್ನು ನೋಡುವ ಸಂಪ್ರದಾಯವಿತ್ತು) ಅಂತ್ಯ ಸಂಸ್ಕಾರಕ್ಕೆ ಬಂದವರು ಹೋಗಿ ತಲೆಯಿಂದ ಸ್ನಾನ ಮಾಡಿ ಮಡಿಬಟ್ಟೆ ಧರಿಸಿ, ಇಷ್ಟಲಿಂಗಾರ್ಚನೆ ಪೂರೈಸಿ ತಮ್ಮ ಇನ್ನಿತರ ಕಾರ್ಯಗಳನ್ನು ಮಾಡಬಹುದು.
ಶವದ ಚೀಲವನ್ನು ಕಟ್ಟಿದ ಸೂತ್ರವನ್ನು ತಗ್ಗಿನಿಂದ ಮೇಲಕ್ಕೆ ತೆಗೆದುಕೊಂಡು ಲಿಂಗದ ಗೂಡಿನಲ್ಲಿ (ಕಿರುಗುಣಿಯಲ್ಲಿ) ಲಿಂಗೈಕ್ಯನನ್ನು ಕೂರಿಸಿದ ಸ್ಥಳಕ್ಕೆ ನೇರವಾಗಿ ಮಣ್ಣಿನ ಬಸವಣ್ಣನಿಗೆ ಸುತ್ತುವ ಸಂಪ್ರದಾಯ ಪ್ರಚಲಿತವಿದೆಯಷ್ಟೆ. ಇದರ ಅಂತರಾರ್ಥ ಧರ್ಮಗುರು ಬಸವಣ್ಣನ ಮೂಲಕವಾಗಿ ಪರಮಾತ್ಮನನ್ನು ಸೇರಬೇಕು ಎಂಬುದೇ ಆಗಿದೆ. 'ಬಸವಣ್ಣನವರು ಎಂದರೆ ಎತ್ತಲ್ಲ; ಮಂತ್ರ ಪುರುಷರು, ಐತಿಹಾಸಿಕ ಮಹಾನ್ ವ್ಯಕ್ತಿಗಳು' ಎಂಬ ತಿಳುವಳಿಕೆ ಬಂದಿರುವ ಈ ಕಾಲದಲ್ಲಿ (ಸಗಣಿ ಉಂಡೆ ಮಾಡಿ ಗಣಪತಿ ಎಂದುಕೊಂಡಂತೆ) ಮಣ್ಣಿನ ಮುದ್ದೆ ಮಾಡಿ ಬಸವಣ್ಣ ಎಂದುಕೊಳ್ಳುವುದು ಯೋಗ್ಯವಲ್ಲ. ಆದ್ದರಿಂದ ಬಸವ ಲಿಂಗಮುದ್ರೆಯ ಚಚೌಕಾಕಾರದ ಕಲ್ಲನ್ನು (ಕ್ರೈಸ್ತರು ಶಿಲುಬೆಯನ್ನು ಬಳಸುವಂತೆ) ಬಳಸುವುದು ಒಳ್ಳೆಯದು.
ಬಸವ ಲಿಂಗ ಮುದ್ರೆ
ಈ ಬಸವ-ಲಿಂಗ ಮುದ್ರೆಯ ಕಲ್ಲು ೧೩ ರಿಂದ ೨ ಅಡಿವರೆಗೆ ಇರಬಹುದು. ಇದರಲ್ಲಿ ಗುರು ಮತ್ತು ದೇವರು ಎರಡೂ ತತ್ತ್ವಗಳ ಸಂಕೇತವು ಬರುವುದಷ್ಟೆ ಮತ್ತು ಇದನ್ನು ಕಡಪಾಕಲ್ಲು ಅಥವಾ ಕಪ್ಪು ಗ್ರಾನೈಟ್ ಶಿಲೆಯಲ್ಲಿ ಕೆತ್ತಿಸಿ ಕೂರಿಸಬಹುದು. ಇದರಲ್ಲಿ
ಲಿಂ. ಶರಣ ................................................
ಜನನ : ದಿ. ..................................
ಲಿಂಗೈಕ್ಯ : ದಿ. ...............................
ಎಂದೂ ಕೊರೆಸಬಹುದು.
ಲಿಂಗವಂತರಿಗೆ ಸಾವಿನ ಸೂತಕ ಮುಂತಾದ ಯಾವ ಭ್ರಾಂತಿಯೂ ಇಲ್ಲ. ಶವ ಸಂಸ್ಕಾರಕ್ಕೆ ಹೋಗಿ ಬಂದವರು ಸ್ನಾನ ಮಾಡುವುದು ಸೂತಕ ನಿವಾರಣೆಯ ದೃಷ್ಟಿಯಿಂದಲ್ಲ, ಆರೋಗ್ಯ ಮತ್ತು ಶುಚಿತ್ವದ ದೃಷ್ಟಿಯಿಂದ, ಸ್ಮಶಾನದಲ್ಲಿ ಎಷ್ಟೋ ರೀತಿಯ ಶವಗಳನ್ನು ಹೂಳಿರುತ್ತಾರೆ; ಎಷ್ಟೋ ಬಗೆಯ ಜನರು ಸಂಸ್ಕಾರಕ್ಕೆ ಬಂದಿರುತ್ತಾರೆ. ಆದ್ದರಿಂದ ಅಲ್ಲಿ ತೊಟ್ಟಿದ್ದ ಬಟ್ಟೆ ಕಳಚಿ ಸ್ನಾನ ಮಾಡುವುದರಿಂದ ರೋಗಾಣುಗಳು ಮನೆಯೊಳಕ್ಕೆ ಪ್ರವೇಶಮಾಡುವುದಿಲ್ಲ. ಕೋಳಿ ಸಾಕಾಣಿಕೆ ಮನೆಯೊಳಗೆ ಹೋಗುವಾಗ ಕಾಲು ತೊಳೆದು ಹೋಗುತ್ತಾರೆ. ಮನುಷ್ಯನ ಬಗ್ಗೆಯೂ ಕಾಳಜಿ ಬೇಡವೆ ?
ಸತ್ತವರ ಮನೆಗೆ ಹೋಗಬಾರದು, ಅವರ ಮನೆಯ ದೀಪ ನೋಡಬಾರದು ಎಂಬ ಕೆಟ್ಟ ನಂಬಿಕೆ ಇರಬಾರದು, ಅಷ್ಟಾಗಿ ಲಿಂಗವಂತರಲ್ಲಿ ಇರುವಂತೆಯೂ ಕಾಣದು.
ಗಳಿಗೆ ನೋಡಬಾರದು
ತಮ್ಮ ಧರ್ಮದ ಮೂಲ ಸಿದ್ಧಾಂತ ತತ್ತ್ವವನ್ನು ಅರಿಯದ ಲಿಂಗಾಯತರು ವೈದಿಕ ಧರ್ಮದ ಪ್ರಭಾವಕ್ಕೆ ಒಳಗಾಗಿ ಹುಟ್ಟಿದ ಮಗುವಿನ ಜನ್ಮ ಮುಹೂರ್ತ ನೋಡುವಂತೆ ಸತ್ತ ಗಳಿಗೆ ಬಗ್ಗೆ ಕೇಳಲು ಜ್ಯೋತಿಷಿಗಳ ಬಳಿ ಹೋಗುವರು. ಅವರು ಇಂತಹ ಕುರಿಗಳಿಗಾಗಿಯೇ ಕಾಯುತ್ತಲಿರುವರು. ಸತ್ತ ಗಳಿಗೆ ಚೆನ್ನಾಗಿಲ್ಲವೆಂದು ಹೇಳಿ, ಇದರ ನಿವಾರಣಾರ್ಥ ಶಾಂತಿ ಮಾಡಿಸಬೇಕೆಂದೋ, ಅಥವಾ ಮನೆಯನ್ನು ಮೂರು ತಿಂಗಳು, ಆರು ತಿಂಗಳು ಬಿಡಬೇಕೆಂದು ಹೇಳಿ ಮನಸ್ಸಿನಲ್ಲಿ ಭೀತಿ-ಭ್ರಾಂತಿಗಳನ್ನು ಹೊಗಿಸುವರು. ಈ ಬಡಪಾಯಿಗಳು ಬಾಡಿಗೆ ಮನೆ ಹುಡುಕಲು ಪರದಾಡುವರು. ಆಮೇಲೆ ಅದೂ ಇದೂ ಶಾಂತಿ ಮಾಡಿ ಆರು ತಿಂಗಳ ನಂತರ ಮನೆಯೊಳಗೆ ಬರುವರು. ಮನೆ ಬಿಡುವಾಗ ಮನೆ ಬಾಗಿಲಿಗೆ ಮುಳ್ಳು ಬಡಿಯುವುದು, ಬಾಗಿಲು-ಕಿಟಕಿ ಸಂದಿಗೆಲ್ಲ ಬಟ್ಟೆ ತುರುಕುವುದು, ಕಿಟಕಿಯ ಗಾಜುಗಳಿಗೆ ಕಾಗದ ಮೆತ್ತುವುದು ಮುಂತಾಗಿ ಮಾಡಿಸಿ, ಇನ್ನಷ್ಟು ಭಯವನ್ನು ಬೆಳೆಸುವರು.
ಮನೆಯ ಹಿರಿಯರಾಗಿ ಬಾಳಿ ಮಕ್ಕಳು, ಮೊಮ್ಮಕ್ಕಳನ್ನು ಪ್ರೀತಿಸಿದವರು ಸತ್ತು ಪ್ರೇತವಾಗಿ ಕಾಡುವುದುಂಟೆ ? ವೈದಿಕ ಧರ್ಮದಲ್ಲಿ ಪ್ರೇತದ ಕಾಟ ಬಹಳ, ಪ್ರೇತ ಕರ್ಮಗಳ ಜಂಜಡವೂ ಬಹಳ. ಬಸವ ಧರ್ಮ ಭೀತಿ-ಭ್ರಾಂತಿಯ ತಳಹದಿಯ ಮೇಲೆ ನಿಂತಿರದೆ ಪ್ರೀತಿ-ಆತ್ಮವಿಶ್ವಾಸದ ಮೇಲೆ ನಿಂತಿದೆ. ಆದ್ದರಿಂದ ಸತ್ತ ಘಳಿಗೆ ಒಳ್ಳೆಯದಿದೆಯೋ ಕೆಟ್ಟದ್ದಿದೆಯೋ ಎಂದು ಜ್ಯೋತಿಷಿಗಳನ್ನು ಕೇಳುವ ಗೊಡವೆಗೆ ಹೋಗಲೇಬಾರದು. ಮಾನಸಿಕ ಸಂದೇಹ ನಿವಾರಣೆಗೆ ಗುರು-ಲಿಂಗ-ಜಂಗಮ ಪೂಜೆ ಹೇಳಲ್ಪಟ್ಟಿವೆ. ವ್ಯಕ್ತಿಯು ಸತ್ತ ನಂತರದ ಮೂರನೆಯ ದಿವಸ ಮನೆಯನ್ನೆಲ್ಲ ಸ್ವಚ್ಛವಾಗಿ ಒರೆಸಿ, ಮನೆಯಲ್ಲಿ ವ್ಯಕ್ತಿಯು ಸತ್ತ ಜಾಗದಲ್ಲಿ ಅಥವಾ ಹೊರಗೆ ಸತ್ತಿದ್ದು ಶವವನ್ನು ಮನೆಗೆ ತಂದು ಇಟ್ಟಿದ್ದ ಜಾಗದಲ್ಲಿ ಶ್ರೀ ಬಸವೇಶ್ವರ ಪೂಜಾವ್ರತವನ್ನು ಮಾಡಬೇಕು. ಅಂದು ಗುರುಮೂರ್ತಿಯನ್ನು ಆಹ್ವಾನಿಸಿದರೆ ಅವರೂ ಬಂದು ಇಷ್ಟಲಿಂಗಾರ್ಚನೆ ಮಾಡುವರು, ಪೂಜಾವ್ರತ ಮಾಡಿಸುವರು. ಸಾಮೂಹಿಕವಾಗಿ, ಗುರುಮಂತ್ರ - ಓಂ ಶ್ರೀಗುರು ಬಸವಲಿಂಗಾಯ ನಮಃ, ದೇವ ಮಂತ್ರ - ಓಂ ಲಿಂಗಾಯ ನಮಃ ಪಠಿಸಿಬಿಟ್ಟರೆ ಸಾಕು. ವಾತಾವರಣವು ದೈವೀಮಯವಾಗುವುದು. ಮೃತರ ಆತ್ಮಕ್ಕೂ ಶಾಂತಿ ದೊರೆಯುವುದು.
ಹಾಲು-ತುಪ್ಪ ಮತ್ತು ಎಡೆ
ಮೂರನೆಯ ದಿವಸ ಜಂಗಮಾರಾಧನೆ ಎಂದು ಇಟ್ಟುಕೊಂಡು ವಿವಿಧ ಬಗೆಯ ಭಕ್ಷ್ಯ-ಭೋಜ್ಯಗಳನ್ನು ಸಿದ್ಧಪಡಿಸುವರು. ಸತ್ತವರಿಗೆ ಪ್ರಿಯವಾದ ಅಡಿಗೆ ಮಾಡುವರು. ಮನೆಯಲ್ಲಿ ಕಳಸ ಹೂಡಿ, ಅದಕ್ಕೆ ಹೊಸ ಬಟ್ಟೆ ತೊಡಿಸಿ ಪೂಜಿಸುವರು. ಮೃತರ ಭಾವಚಿತ್ರ ಇಟ್ಟು ಅದನ್ನು ಪೂಜಿಸಿ ಅದರ ಮುಂದೆ ಮಾಡಿದ ಅಡಿಗೆಯನ್ನು ಎಡೆ ಹಿಡಿಯುವರು. ಗುರು-ಜಂಗಮರಿಗೆ ಪ್ರಸಾದ ಮಾಡಿಸುವರು. ಕೆಲವರು ಸ್ಮಶಾನಕ್ಕೆ ಅಥವಾ ಸಮಾಧಿ ಮಾಡಿದಲ್ಲಿಗೆ ಎಡೆ ಒಯ್ದು, ಸಮಾಧಿ ಪೂಜೆ ಮಾಡಿ, ಹಾಲು-ತುಪ್ಪ ಸುರಿದು, ಅದರ ಮೇಲೆ ಎಡೆ ಇಟ್ಟು ಬರುವರು. ಅದನ್ನು ಕಾಗೆ ಮುಂತಾದುವು ತಿನ್ನುವುವು. ಇಲ್ಲವೇ ಸಮಾಧಿಯ ಮಣ್ಣನ್ನು ಕೆದರಿ ಆ ಎಡೆಯನ್ನು ಹಾಕಿ ಮಣ್ಣು ಮುಚ್ಚಿ ಬರುವರು. ಮೃತರಿಗೆ ಪ್ರಿಯವಾದುದನ್ನೆಲ್ಲ ಕೊಡಬೇಕು ಎಂಬ ನಂಬಿಕೆಯಿಂದ ಸೆರೆಗುಡುಕರಿದ್ದರೆ ಮದ್ಯವನ್ನು, ಧೂಮ್ರಪಾನಿಗಳಿದ್ದರೆ ಸಿಗರೇಟನ್ನು ಸಮಾಧಿ ಮೇಲೆ ಇಟ್ಟು ಬರುವುದುಂಟು. ಇವೆಲ್ಲವೂ ಲಿಂಗಾಯತ ಧರ್ಮದಂತಹ ಪ್ರಗತಿಪರ, ಸುಸಂಸ್ಕೃತ ಧರ್ಮಕ್ಕೆ ಹೊರತಾದ ಆಚರಣೆಗಳು. ಲಿಂಗಾಯತ ಧರ್ಮದಲ್ಲಿ ಪ್ರಸಾದವು (ಊಟ) ಅತ್ಯಂತ ಪವಿತ್ರ ವಸ್ತು. ಅದನ್ನು ವ್ಯರ್ಥ ಮಾಡುವುದಾಗಲಿ, ಅಪವಿತ್ರವೆಂದು ಬಿಸಾಡುವುದಾಗಲಿ, ಪಾತಕವೆಂದು ಪರಿಗಣಿಸಲಾಗಿದೆ. ಆದ್ದರಿಂದ ಸಮಾಧಿಗೆ ಒಯ್ದು ಎಡೆ ಮಾಡಿ, ಅದನ್ನು ನಾಯಿ, ಕಾಗೆಗಳ ಪಾಲಿಗೆ ಬಿಡುವುದಾಗಲೀ ಅಥವಾ ಮಣ್ಣಿನಲ್ಲಿ ಮುಚ್ಚುವುದಾಗಲೀ ಸಲ್ಲದು. ಇದು ವ್ಯರ್ಥತೆ ಮತ್ತು ಅಪವಿತ್ರತೆಯ ಕಲ್ಪನೆ ತಂದುಕೊಡುವುದು. ಮನೆಯಲ್ಲಿ ಶರಣರಿಗೆ ಉಣ್ಣಿಸಿದರೆ ಸಾಕು, ಸಮಾಧಿ ಗುಡ್ಡೆಗೆ ಎಡೆ ಹಿಡಿಯಬೇಕಾಗಿಲ್ಲ.
ಪ್ರೇತಕರ್ಮಗಳು ನಿಷಿದ್ಧ
ಜಾತಕರ್ಮ ಶುಭಕರ್ಮ ಪ್ರೇತಕರ್ಮವ
ಮಾಡುವರು ಲೋಕದ ಮನುಜರು
ಅದೆಂತೆಂದೊಡೆ:
ಈಳಿಲು, ಮೂವಟ್ಟಲು, ಹಸೆ-ಹಂದರ, ತೊಂಡಿಲು ಬಾಸಿಂಗ
ಹಣೆಯಕ್ಕಿ, ಹೆಣನ ಶೃಂಗಾರ, ಶ್ರಾದ್ಧಕೂಳು,
ಈ ಪರಿಯ ಮಾಡುವನೆ ಶಿವಭಕ್ತ ?
ಅದೆಂತೆಂದೊಡೆ:
ಹುಟ್ಟಿದ ಮಕ್ಕಳಿಗೆ ಲಿಂಗಧಾರಣೆ
ನೆಟ್ಟನೆ ವಿವಾಹದಲ್ಲಿ ಶಿವಗಣಂಗಳ ಪ್ರಸಾದ
ದೇವರ ಪಾದಕ್ಕೆ ಸಂದಲ್ಲಿ
ಶಿವಭಕ್ತಂಗೆ ವಿಭೂತಿ ವೀಳೆಯಂಗೊಟ್ಟು
ಸಮಾಧಿಪೂರ್ಣನಂ ಮಾಡುವುದೆ ಶಿವಾಚಾರ
ಲೋಕದ ಕರ್ಮವ ಮಾಡಿದಡೆ ಆತ ಭಕ್ತನಲ್ಲ
ಲಿಂಗದೂರ, ಅಘೋರ ನರಕಿಯಯ್ಯ
ಕೂಡಲ ಚನ್ನಸಂಗಮದೇವಾ.
ಸಮಾಧಿಗೆ ಹಾಲು-ತುಪ್ಪ ಹಾಕುವುದು, ಎಡೆ ಎಂದು ತಿನ್ನುಣ್ಣುವ ವಸ್ತುಗಳನ್ನು ಸಮಾಧಿಯ ಮೇಲೆ ಹಾಕುವುದು, ಮುಂತಾದ್ದು ಮಾಡಬಾರದು. ಶವಸಂಸ್ಕಾರಕ್ಕಾಗಿ ಬಂದ ಬಂಧು ಬಾಂಧವರು ಹೋಗಲಿರುವ ಕಾರಣ ಲಿಂಗೈಕ್ಯರಾದ ಮೂರನೆಯ ದಿನಕ್ಕೆ ಶರಣ ಗಣಾರಾಧನೆಯನ್ನು ಇಟ್ಟುಕೊಳ್ಳಬಹುದು ಮತ್ತು ಮಾನಸಿಕ ಭಯ ನಿವಾರಣೆಗೆ ಗುರು-ಲಿಂಗ-ಜಂಗಮ ಪೂಜೆ ನಡೆದರೆ ಸಾಕು.
ಹನ್ನೊಂದನೆಯ ದಿನಕ್ಕೆ ಗಣಾರಾಧನೆಯನ್ನು ಇಡುವ ಪದ್ಧತಿ ಬೆಳೆದು ಬಂದಿದೆ. ಇದರ ಹಿನ್ನೆಲೆ ಕುರಿತು ಹೀಗೆ ಹೇಳಬಹುದು. ಸಾವು ಸಂಭವಿಸಿದಾಗ ಆಗುವ ಮಾನಸಿಕ ಉದ್ವೇಗದಿಂದ ಕೆಲವು ಬಂಧುಬಾಂಧವರಿಗೆ ತಿಳಿಸಲು ಮರೆತು ಹೋಗಿರಬಹುದು ಮತ್ತು ದೂರದಲ್ಲಿದ್ದವರಿಗೆ ತಿಳಿಸುವುದು ಕಷ್ಟಸಾಧ್ಯ ಮತ್ತು ಸಾವಿನ ಸುದ್ದಿ ತಿಳಿದ ಬಳಿಕ ಬಂದು ಸಾಂತ್ವನ ಹೇಳುವುದೂ ಕರ್ತವ್ಯವಾಗಿರುತ್ತದೆ. ಇದಕ್ಕಾಗಿ ಒಂದು ದಿನವನ್ನು ನಿಗದಿಪಡಿಸಿಬಿಟ್ಟರೆ ಜನರು ಸುದ್ದಿ ಮುಟ್ಟಿ ಬಂದು ಹೋಗಲೂ ಅನುಕೂಲವಾಗುತ್ತದೆ. ಇದಕ್ಕೆ ೧೧ನೇ ದಿನವೇ ಬೇಕೆಂದೇನು ಇಲ್ಲ. ಈ ೧೧ನೇ ದಿನದ ವಿಷಯದಲ್ಲಿ ಕುತೂಹಲಿಯಾಗಿ ನಾನು ಹುಡುಕುತ್ತಿರುವಾಗ ಮನುಸ್ಮೃತಿಯಲ್ಲಿ ಪ್ರೇತಾತ್ಮ ಸತ್ತ ನಂತರ ೧೧ನೇ ದಿನದವರೆಗೂ ಈ ಭೂಮಿಯಲ್ಲಿ ಸುಳಿದಾಡುತ್ತಿರುತ್ತದೆ ಎಂದು ಪ್ರಸ್ತಾಪವಾಗಿದೆ. 'ಓಹೋ, ಅದರ ಪ್ರಭಾವ ಇದು !' ಎಂದು ಅಂದುಕೊಂಡೆ. ರಜಾ ದಿವಸ ಬರುವ ಒಂದು ದಿನವನ್ನು ಗೊತ್ತುಮಾಡಿದರೆ ಸಾಕು. ಕೈಲಾಸ ಗಣಾರಾಧನೆ, ಶಿವಗಣಾರಾಧನೆ, ಪುಣ್ಯತಿಥಿ ಎಂದೆಲ್ಲ ಬರೆಯುವುದುಂಟು. ಕೈಲಾಸ - ಶಿವಲೋಕಗಳನ್ನು, ಪುಣ್ಯತಿಥಿಯನ್ನು ಲಿಂಗವಂತ ಧರ್ಮ ಒಪ್ಪದು. ಶಿವಗಣ (ಭೂತ-ಪ್ರೇತ)ಗಳನ್ನೂ ಒಪ್ಪದು. ಆದ್ದರಿಂದ ಯೋಗ್ಯ ಪದವೆಂದರೆ 'ಲಿಂಗೈಕ್ಯರ ಸಂಸ್ಮರಣೆ' ಅಥವಾ 'ಶರಣಗಣಾರಾಧನೆ' ಇದೆ ರೀತಿಯಾಗಿ ಆಹ್ವಾನ ಪತ್ರಗಳನ್ನು ಮುದ್ರಿಸಬೇಕು. ಯಾರಾದರೂ ಪೂಜ್ಯರು, ಶರಣರು ಮುಂತಾದವರ ಸಮ್ಮುಖದಲ್ಲಿ ನಡೆಸಬೇಕು.
ಕೆಲವರು ಮೃತರಾದವರ ಭಾವಚಿತ್ರಗಳನ್ನಿಟ್ಟು ಅವಕ್ಕೆ ಪೂಜೆ ಮಾಡುವರು; ಲಿಂಗವಂತ ಧರ್ಮದ ಪ್ರಕಾರ ಗುರು ಬಸವಣ್ಣನವರ ಪೂಜೆ - ಇಷ್ಟಲಿಂಗಪೂಜೆ - ಚೈತನ್ಯಾತ್ಮಕ ಜಂಗಮ (ಜ್ಞಾನಿ)ಯ ಪೂಜೆಯ ಹೊರತು ಮತ್ತೆ ಬೇರೆ ಪೂಜೆ ಮಾಡಬಾರದು. ಧರ್ಮದ ಆಳವನ್ನರಿಯದ ಮೂಢರು ಈ ರೀತಿ ತತ್ತ್ವವನ್ನು ಅರಿಯದೆ ಮೃತರ ಭಾವಚಿತ್ರ ಇಟ್ಟು ಪೂಜಿಸುವರು. ಅವರಿಗೆ ಸ್ವಯಂ ಜ್ಞಾನವಿರದ್ದರಿಂದ ಹೇಳಿದರೆ ಅರ್ಥವೂ ಆಗದು. ಆದ್ದರಿಂದ ಅವರ ಪಾಡಿಗೆ ಸ್ವಾತಂತ್ರ್ಯ ಕೊಡಬೇಕು. ಗುರುಮೂರ್ತಿಯು ಮಾತ್ರ ಶ್ರೀ ಬಸವೇಶ್ವರ ಪೂಜಾವ್ರತ ಮಾಡಿಸಿ, ೧೦೮ ಮಂತ್ರ ಪಠಣ ಮಾಡಿ ಮನೆಯವರ ಕಡೆಯಿಂದ ಪುಷ್ಪಾರ್ಚನೆ ಮಾಡಿಸಬೇಕು. ಈ ಪುಷ್ಪಗಳನ್ನು ಸಂಗ್ರಹಿಸಿ ಲಿಂಗೈಕ್ಯರಿಗೆ ಮೋಕ್ಷವನ್ನು ಹಾರೈಸಿ, ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿಸಬೇಕು. ಬಸವ ಭಾವಚಿತ್ರಕ್ಕೆ ಮಹಾಮಂಗಲ ಮಾಡಿಸಿ ಪ್ರಸಾದದಾರೋಗಣೆಗೆ ಅನುಮತಿ ನೀಡಬೇಕು.
ಹಿರೇರ ಹಬ್ಬ
ವರ್ಷಕ್ಕೊಮ್ಮೆ ಹಿರಿಯರ ಹಬ್ಬ ಹಿರೇರ ಹಬ್ಬ ಎಂದು ಲಿಂಗವಂತರೂ ಸಹ ಮಾಡುವುದುಂಟು. ಇದು ಅರ್ಥರಹಿತ, ಹಾಸ್ಯಾಸ್ಪದ. ಒಂದು ರೀತಿಯಲ್ಲಿ ಸಾಮೂಹಿಕವಾಗಿ ಪ್ರೇತಗಳನ್ನು ಆಹ್ವಾನಿಸಿ, ತೃಪ್ತಿ ಪಡಿಸುವ ಕ್ರಿಯೆಯಂತೆ. ಅಂದು ಯಾರೊಬ್ಬರ ಹೆಸರಲ್ಲಿ ಮಾಡದೆ ತಂಬಿಗೆ-ಕಳಸ ಇಟ್ಟು, ಪುರುಷರ-ಸ್ತ್ರೀಯರ ಬಟ್ಟೆಗಳನ್ನು ತಂದಿಟ್ಟು ಸತ್ತುಹೋದ ಎಲ್ಲ ಹಿರಿಯರಿಗೂ ಒಟ್ಟಾಗಿ ಸಮಾಧಾನ - ಸಂತೃಪ್ತಿ ಮಾಡುವುದು. ಇದು ಅಪ್ಪಟ ವೈದಿಕ ಕರ್ಮದ ಪ್ರತಿರೂಪ. ಅಗಸ್ತ್ಯ ಒಮ್ಮೆ ಸಂಚರಿಸುತ್ತಿದ್ದನಂತೆ. ಆಗ ಗಿಡ ಒಂದರಲ್ಲಿ ಪ್ರೇತಗಳು ನರಳುತ್ತಿದ್ದವಂತೆ. ಯಾಕೆ ಹೀಗೆ ಎಂದುದಕ್ಕೆ, 'ನೀನು ವಿವಾಹವಾಗಲಿಲ್ಲ. ಅದಕ್ಕೆ ನಮಗೆ ಸದ್ಗತಿಯಾಗಿಲ್ಲ' ಎಂದವಂತೆ. ಆಗ ಆತ ಲೋಪಾಮುದ್ರೆಯನ್ನು ವಿವಾಹವಾಗಿ ಸಂತಾನ ಪಡೆದು ಪ್ರೇತಕರ್ಮಗಳನ್ನು ಪೂರೈಸಿದಾಗ ಆ ಪ್ರೇತಾತ್ಮರು ಬಿಡುಗಡೆ ಹೊಂದಿದರಂತೆ ! ಇವನ ಮದುವೆಗೂ ಪ್ರೇತಗಳಿಗೂ ಸದ್ಗತಿಗೂ ಸಂಬಂಧವೇನಿದೆ. ಕರ್ಮಸಿದ್ಧಾಂತದ ಪ್ರಕಾರ ಅವರವರ ಕರ್ಮಫಲ ಅವರೇ ಉಣ್ಣಬೇಕು, ಎಂದೂ ಅನ್ನುವರು. ಸತ್ತಾಗ ಅಂದರೆ ಜೀವಾತ್ಮವು ಈ ಪಾರ್ಥಿವ ಶರೀರವನ್ನು ತೊರೆದಾಗ ವ್ಯಕ್ತಿಯನ್ನು ಹುಗಿಯಲಾಗುವುದು. ಆಗ ಏನಾಗುವುದು ?
ಪೃಥ್ವಿ ಪೃಥ್ವಿಯ ಕೂಡದ ಮುನ್ನ
ಅಪ್ಪು ಅಪ್ಪುವ ಕೂಡದ ಮುನ್ನ
ತೇಜ ತೇಜವ ಕೂಡದ ಮುನ್ನ
ವಾಯು ವಾಯುವ ಕೂಡದ ಮುನ್ನ
ಆಕಾಶ ಆಕಾಶವ ಕೂಡದ ಮುನ್ನ
ಪಂಚೇಂದ್ರಿಯಗಳೆಲ್ಲ ಹಂಚು ಹರಿಯಾಗದ ಮುನ್ನ
ಚನ್ನ ಮಲ್ಲಿಕಾರ್ಜುನಂಗೆ ಶರಣೆನ್ನಿರೆ.
ಅಕ್ಕನ ವಚನದಲ್ಲಿ ಹೇಳಲಾಗಿರುವಂತೆ ಪಂಚಭೂತಾತ್ಮಕ ಶರೀರವು ಹಂಚು ಹರಿ (decompose) ಆಗುವುದು. ನಂತರ ಪೃಥ್ವಿ ತತ್ತ್ವ ಪೃಥ್ವಿ ತತ್ವದಲ್ಲಿ ಹೀಗೆ ಬ್ರಹ್ಮಾಂಡದ ಪಂಚಭೂತಗಳಲ್ಲಿ ದೇಹದಲ್ಲಿರುವ ಪಂಚಭೂತಾತ್ಮಕ ಅಂಶಗಳು ಸೇರಿಕೊಳ್ಳುವವು.
ಕರ್ಮಸಿದ್ಧಾಂತದ ಪ್ರಕಾರ ಜೀವಾತ್ಮವು ಶರೀರವನ್ನು ತೊರೆಯುತ್ತಲೇ ಈ ಜನ್ಮದ ಕರ್ಮಫಲಾನುಸಾರವಾಗಿ ಇನ್ನೊಂದು ಜನ್ಮವನ್ನು ಹುಡುಕುತ್ತದೆ. ತನ್ನ ಕರ್ಮಫಲಕ್ಕನುಸಾರವಾಗಿ ಸೂಕ್ತ ಭೂಮಿಕೆ ದೊರೆಯದೆ ಇದ್ದರೆ ಕೊಂಚಕಾಲ ಸೂಕ್ಷ್ಮ ಶರೀರಧಾರಿಯಾಗಿದ್ದುಕೊಂಡು ಕಾಯುತ್ತದೆ. ಯೋಗ್ಯ ಭೂಮಿಕೆ ದೊರೆಯುತ್ತಲೇ ಹೊಸಜನ್ಮ ಪಡೆಯುತ್ತದೆ. ಈ ಕಾಯುವಿಕೆ ಅತ್ಯಲ್ಪ ಕಾಲದ್ದು. ಇನ್ನು ಮುಕ್ತಾತ್ಮರಾದರೆ ಅವರ ಜೀವಾತ್ಮವು 'ಸಮುದ್ರವನ್ನು ಬೆರೆದ ನದಿಯಂತೆ', 'ಉರಿಯುಂಡ ಕರ್ಪುರದಂತೆ' ದೇವನಲ್ಲಿ ಲೀನವಾಗಿ ಒಂದಾಗುತ್ತದೆ. ಅಂದಾಗ ಹಿರೇರ ಹಬ್ಬ ಎಂದು ಮೂಢಮತಿಗಳು ಮಾಡುವ ಪೂಜೆ-ನೈವೇದ್ಯ ಯಾರಿಗೆ ಸಲ್ಲಬೇಕು ? ಆದ್ದರಿಂದ ಗೊತ್ತುಗುರಿ ಇಲ್ಲದ ಸಾಮೂಹಿಕ ಪ್ರೇತಾತ್ಮರ ಪೂಜೆ ಹಿರೇರಹಬ್ಬ ಆಚರಣೆಗೆ ಯೋಗ್ಯವಲ್ಲ.
ಲಿಂಗೈಕ್ಯರ ಸಂಸ್ಮರಣೆ
ಮಹಾತ್ಮರು, ಜ್ಞಾನಿಗಳು, ಮನೆಯಲ್ಲಿ ಆಗಿ ಹೋದ ಹಿರಿಯರು ಲಿಂಗೈಕ್ಯರಾದ ಎಂದು ಅವರ ಸ್ಮರಣೆ ಮಾಡುವ ಪದ್ಧತಿಯುಂಟು. ಏನಾದರೂ ಸಾಧನೆ ಮಾಡಿದವರ ಬಗ್ಗೆ ವರ್ಷಕ್ಕೊಮ್ಮೆ ಇದನ್ನು ಮಾಡುವುದಿರುತ್ತದೆ. ವಾರ್ಷಿಕ ಪುಣ್ಯತಿಥಿ, ಕೈಲಾಸ ಗಣಾರಾಧನೆ ಎಂದು ಕರೆಯದೆ ಲಿಂಗೈಕ್ಯರ ಸಂಸ್ಮರಣೆ ಎಂದು ಕಾರ್ಯಕ್ರಮ ಇಟ್ಟು ಆಚರಿಸಬಹುದು. ವಚನಾನುಭವ ಗೋಷ್ಠಿ, ಉಪನ್ಯಾಸ ಅನ್ನ ದಾಸೋಹ ಮುಂತಾಗಿ ಇಟ್ಟು ಲಿಂಗೈಕ್ಯರ ಹೆಸರಿನಲ್ಲಿ ಉತ್ತಮ ಕಾರ್ಯ ಮಾಡಬಹುದು, ಸಾಹಿತ್ಯ ಕೃತಿಗಳನ್ನು ಮುದ್ರಿಸಿ ಹಂಚಬಹುದು. ಆಸ್ಪತ್ರೆ ರೋಗಿಗಳಿಗೆ ಹಣ್ಣು, ಅನಾಥಾಲಯ ಉಚಿತ ವಿದ್ಯಾರ್ಥಿನಿಲಯಗಳಿಗೆ ಪ್ರಸಾದ ದಾಸೋಹ, ಹಿರಿಯರ ಹೆಸರಿನಲ್ಲಿ ದಾನ ಘೋಷಣೆ, ಓದುವ ಬಡವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಜ್ಞಾನದ ಪುಸ್ತಕ ವಿತರಣೆ ಮುಂತಾಗಿ ಮಾಡಬಹುದು.
ಒಳಗೆ ಕರೆದುಕೊಳ್ಳುವುದು ?
ಮೃತರು ತೀರಿಕೊಂಡ ೩ ದಿವಸಗಳಿಂದ ೧ ತಿಂಗಳವರೆಗೆ ಸಾಮಾನ್ಯವಾಗಿ ೧೧ ದಿವಸಕ್ಕೆ ಒಳಗೆ ಕರೆದುಕೊಳ್ಳುವುದು ಅಥವಾ ದೈವದಲ್ಲಿ ಹಾಕಿಕೊಳ್ಳುವುದು ಎಂದು ಕರೆಯಲ್ಪಡುವ ಗಣಾರಾಧನೆ ಮಾಡುವರು, ಇದು ಮಾಡುವ ತನಕ ಮನೆಯಲ್ಲಿ ಯಾವುದೇ ಶುಭಕಾರ್ಯ ಆಗಬಾರದೆಂಬ ನಂಬಿಕೆ ಬೇರೆ. ಮದುವೆ, ನಾಮಕರಣ, ತೊಟ್ಟಿಲು ಶಾಸ್ತ್ರ ಇವು ಏನೂ ಆಗುವಂತಿಲ್ಲವಾದ್ದರಿಂದ ಮನೆಯಲ್ಲಿ ಗರ್ಭಿಣಿ ಇದ್ದರೆ ಬೇಗನೇ ಗಣಾರಾಧನೆ ಮಾಡಿ ಮುಗಿಸುವಂತೆ ಈ ಕಾರ್ಯಕ್ರಮವನ್ನು 'ಶರಣ ಗಣಾರಾಧನೆ' ಎಂದೇ ಕರೆಯಬೇಕೇ ವಿನಾ “ಒಳಗೆ ಕರೆದುಕೊಳ್ಳುವುದು”, “ದೈವದಲ್ಲಿ ಹಾಕಿಕೊಳ್ಳುವುದು' ಎಂದು ಕರೆಯಬಾರದು. ಈ ಪದಗಳು ಅವರನ್ನು ಇಷ್ಟು ದಿವಸ ಹೊರಗಿಟ್ಟಿದ್ದೆವು ಎಂದು ಸಾರಿದಂತೆ ಆಗುವುದಲ್ಲದೆ ಬ್ರಾಹ್ಮಣ ಧರ್ಮದ 'ಮರಣ ಸೂತಕ'ವನ್ನು ಅಪ್ರತ್ಯಕ್ಷವಾಗಿ ಪಾಲಿಸಿದಂತೆ ಆಗುವುದು.
ಮಾತಾಡಿಸಲು ಬರುವುದು ಮತ್ತು ಕೂಡಿ ಉಣ್ಣುವುದು
ಇದು ಧಾರ್ಮಿಕ ನಿಯಮವಲ್ಲವಾದರೂ ಮಾನವೀಯತೆಯ ದೃಷ್ಟಿಯಿಂದ ಶಿಷ್ಟಾಚಾರ. ಮಣ್ಣು ಕೊಡಲು ಬಂದವರು, ಇನ್ನಿತರ ಬಂಧು, ಬಳಗದವರು ಬಂದು ಮನೆಯ ಹಿರಿಯರನ್ನು ಮಾತನಾಡಿಸಿ, ಸಾಂತ್ವನ ಹೇಳಿ ಹೋಗುವರು. ಹಾಗೆ ಬರುವಾಗ 'ರೊಟ್ಟಿ ಬುತ್ತಿ ಜೊತೆಗೆ ತರುತ್ತಾರೆ. ಬೇರೆ ಬೇರೆ ಕಡೆಯಿಂದಲೂ ತಿಂಡಿ ತಿನಿಸು ಸಿಹಿ ಭಕ್ಷ್ಯ ಮಾಡಿಕೊಂಡು ಬಂದು ಕೂಡಿ ಉಣ್ಣುವುದನ್ನು ಮಾಡುತ್ತಾರೆ. ಇದರ ಉದ್ದೇಶ ಸಾಂತ್ವನದ ಜೊತೆಗೆ ನಿಮ್ಮ ಆಸರೆಗೆ ನಾವೂ ಇದ್ದೇವೆ ಎಂದು ಧೈರ್ಯ ಹೇಳುವುದೇ ಆಗಿರುತ್ತದೆ.
ಸ್ತ್ರೀ ಮತ್ತು ವೈಧವ್ಯ
ಲಿಂಗಾಯತ ಧರ್ಮವು ಅತ್ಯಂತ ಪ್ರಗತಿಪರ ಧರ್ಮವಾಗಿದ್ದರೂ ನೆರೆಹೊರೆಯವರ ಪ್ರಭಾವದಿಂದ ತನ್ನ ಮೂಲ ಸ್ವರೂಪವನ್ನು ಆಚರಣೆಯಲ್ಲಿ ಕಳೆದುಕೊಂಡಿರುವುದನ್ನು ಕಾಣುತ್ತೇವೆ. ಗಂಡನು ಸಾಯುತ್ತಲೇ ಅವನ ಪತ್ನಿ ವಿಧವೆ ಎಂದು ಘೋಷಿಸಲ್ಪಡುವಳು ಸಮಾಧಿಯ ಬಳಿ ಆಕೆಯ ಮಾಂಗಲ್ಯ ತೆಗೆಯುವುದು, ಬಳೆ ಒಡೆಯುವುದು ಮುಂತಾದ್ದನ್ನು ಮಾಡಲಾಗುತ್ತದೆ. ವಿವಾಹವಾಗುವ ಪೂರ್ವದಲ್ಲಿಯೂ ಆಕೆ ಕುಂಕುಮ ಧರಿಸುತ್ತಿದ್ದಳು, * ಬಳೆ ಹಾಕುತ್ತಿದ್ದಳು. ಗಂಡ ಸತ್ತ ಬಳಿಕ ಅವನು ಕಟ್ಟಿದ ಮಾಂಗಲ್ಯ ಒಂದನ್ನು ತೆಗೆದರೆ ಸಾಕೇನೊ, ಗಾಜಿನ ಬಳೆ ಒಡೆಯುವುದು ಮತ್ತು ಅಲಂಕಾರಿಕ ವಸ್ತುವಾಗಿ ಇಟ್ಟುಕೊಳ್ಳುವ ಕುಂಕುಮ ಅಳಿಸುವುದು ಪ್ರಸ್ತುತ ಕಾಲದಲ್ಲಿ ಯೋಗ್ಯವೆನಿಸದು.
* ಲಿಂಗಾಯತ ಧರ್ಮದ ಪ್ರಕಾರ ಕುಂಕುಮ ಹಚ್ಚುವುದೇ ನಿಷೇಧಿಸಲ್ಪಟ್ಟಿದೆ. ನಿಜ ಶರಣರು ಗಂಡ ಇದ್ದಾಗಲೂ ಹಚ್ಚುವುದಿಲ್ಲ, ಆದ್ದರಿಂದ ತೆಗೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಒಂದು ವೇಳೆ ಆಕೆ ತನ್ನ ಗಂಡನ ಮೇಲಿನ ಉತ್ಕಟ ಪ್ರೀತಿಯಿಂದ ಅಲಂಕಾರದಲ್ಲಿ ತಾನಾಗಿ ನಿರಾಸಕ್ತಳಾದರೆ ಅಥವಾ ನಿರ್ಲಿಪ್ತಳಾಗಿ ರುದ್ರಾಕ್ಷಿ ಮುಂತಾದ ಶರಣ ಲಾಂಛನ ಧರಿಸಿದರೆ ಅದಕ್ಕೆ ಅನುಮತಿಕೊಡಬಹುದು. ಅಷ್ಟೇನೂ ಜ್ಞಾನ, ತಿಳುವಳಿಕೆಯಿಲ್ಲದ ಸಣ್ಣ ವಯಸ್ಸಿನ ವಿಧವೆಯರು ಕರಿಮಣಿ ಸರ - ಮಾಂಗಲ್ಯ - ಕಾಲುಂಗುರ ತೆಗೆದು ಬಾಕಿ ಅಲಂಕಾರಿಕ ವಸ್ತುಗಳಾದ ಬಳೆ, ಕುಂಕುಮ, ಮೂಗುತಿ ಹೊಂದಿದ್ದರೆ ಪುನರ್ವಿವಾಹಕ್ಕೆ ಬೇರೆ ತರುಣರು ಮುಂದೆ ಬಂದರೂ ಬರಬಹುದು.
ವಿಧವೆಯರನ್ನು ಶರಣ ಸಂಸ್ಕೃತಿಯಲ್ಲಿ ಅಮಂಗಲೆ, ಮೈಲಿಗೆ ಎಂದು ತಿಳಿಯುವುದಿಲ್ಲ. ಆಕೆ ಧರಿಸಿ ಪೂಜಿಸುವ ಇಷ್ಟಲಿಂಗ ಮಹಿಳೆಗೆ ಸಮಾನ ಸ್ಥಾನ-ಸಮಾನ ಗೌರವ ಕೊಡುವುದಲ್ಲದೆ ಎಲ್ಲ ಧಾರ್ಮಿಕ ಮತ್ತು ಮಂಗಲಕಾರ್ಯಗಳಲ್ಲಿ ಆಕೆ ಭಾಗಿಯಾಗಲು ಅರ್ಹತೆ ಕೊಡುವುದು. ಹೀಗಾಗಿಯೇ ಗುರು-ಜಂಗಮ ಪಾದ ಪೂಜೆ, ಧಾರೆ ಎರೆಯುವಿಕೆ ಅಕ್ಷತಾರೋಪಣೆ ಮುಂತಾದ ಎಲ್ಲ ಕಾರ್ಯಗಳಲ್ಲಿ 'ತಾಯಿ-ಅಕ್ಕ-ಸೋದರತ್ತೆ ಮುಂತಾದವರು ವಿಧವೆಯರಾಗಿದ್ದರೂ ಭಾಗಿಯಾಗುವರು.
ತಪ್ಪು ಆಚರಣೆಯ ನಿಷೇಧ
೧. ಲಿಂಗೈಕ್ಯರನ್ನು ಮಣ್ಣು ಮಾಡುವಾಗ ಅವರು ದೀರ್ಘಕಾಲದಿಂದ ಉಪಯೋಗಿಸಿದ ವಸ್ತುಗಳನ್ನು (ಉದಾ : ಗಡಿಯಾರ, ರೇಡಿಯೋ ಇತ್ಯಾದಿ) ಸಮಾಧಿಯಲ್ಲೇ ಹಾಕುವ ಕೆಟ್ಟ ಪದ್ಧತಿ ಇದೆ. ಅವು ಉಪಯುಕ್ತವಾಗಿಲ್ಲದ ಹಾಳಾದ ವಸ್ತುಗಳಿದ್ದರೆ ಹಾಕಲಿ. ಉಪಯೋಗಕ್ಕೆ ಬರುವವು ಇದ್ದರೆ ಮಣ್ಣಿನಲ್ಲಿ ಮುಚ್ಚಿ ಅನ್ಯಾಯ ಮಾಡುವ ಬದಲಿಗೆ ಯಾರಿಗಾದರೂ ಬಡವರಿಗೆ ದಾನ ಕೊಡಬಹುದು.
೨. ಸತ್ತವರು ಕುಡುಕರು, ಧೂಮ್ರಪಾನಿಗಳು, ಇಸ್ಪೀಟಿನ ಚಟದವರು, ಮಾಂಸಾಹಾರದ ಪ್ರವೃತ್ತಿ ಬೆಳೆಸಿಕೊಂಡಿದ್ದವರಿದ್ದರೆ ಅಂಥ ವಸ್ತುಗಳನ್ನು ಸಮಾಧಿಯ ತಗ್ಗಿನಲ್ಲಿ ಹಾಕುವರು. ಇದೂ ಅಸಹ್ಯ ಮತ್ತು ಧರ್ಮಬಾಹಿರ. ಆ ಆಸೆಗಳನ್ನು ಹೊತ್ತು ಅವರು ಸಾಯಬಾರದು ಎಂದು ಉಳಿದವರ ಆಲೋಚನೆ. ಈ ಜಡವಸ್ತುಗಳನ್ನು ಮಣ್ಣಿನಲ್ಲಿ ಹಾಕಿದ ಮಾತ್ರಕ್ಕೆ ಸತ್ತವರ ಆಸೆ ಪೂರ್ತಿಯಾದವು ಎಂದೇನಿಲ್ಲ. ಅದಕ್ಕಾಗಿಯೇ ಬದುಕಿದ್ದಾಗ ಲಿಂಗಧಾರಣೆ, ಮಾಡಿಕೊಂಡು ಪೂಜೆ ಮಾಡಿರದಿದ್ದರೂ ಸತ್ತಾಗಲಾದಲೂ ಲಿಂಗಧಾರಣೆ, ಭಸ್ಮಧಾರಣೆ ಮಾಡುವುದು. ಮಾಂಸಾಹಾರ, ಮದ್ಯಪಾನ, ಧೂಮ್ರಪಾನ, ಜೂಜನ್ನು ನಿಷೇಧಿಸಿರುವ ಲಿಂಗವಂತ ಧರ್ಮಾನುಯಾಯಿಯ ಸಮಾಧಿಯಲ್ಲಿ ಇಂಥ ವಸ್ತುಗಳನ್ನು ಹಾಕುವುದು ಅವಿವೇಕದ ಪರಮಾವಧಿ.
೩. ಕೆಲವು ಕಡೆ ಮೃತರ ಗಂಡು ಮಕ್ಕಳು ತಲೆ ಕೂದಲು, ಗಡ್ಡ, ಮೀಸೆ ಬೋಳಿಸಿ ಶುಚಿರ್ಭೂತರಾಗಿ ಪ್ರೇತಕರ್ಮಗಳನ್ನು ಮಾಡುವುದುಂಟು. ಇದು ಸಹ ಲಿಂಗಾಯತ ಧರ್ಮದಲ್ಲಿ ನಿಷೇಧಿಸಲ್ಪಟ್ಟಿದೆ.
ದುಂದುವೆಚ್ಚ ಸಲ್ಲದು
“ಬ್ರಾಹ್ಮಣ ದುಡಿದದ್ದು ಪಿಂಡಕ್ಕೆ, ಹೊಲೆಯ ದುಡಿದದ್ದು ಹೆಂಡಕ್ಕೆ, ಒಕ್ಕಲಿಗ ದುಡಿದದ್ದು ದಂಡಕ್ಕೆ” ಎಂಬ ಒಂದು ಕನ್ನಡ ಗಾದೆಯಿದೆ. ಮುಗ್ಧ ರೈತ ಹೊಲದ ತಂಟೆ ತಕರಾರು ಬಗೆಹರಿಸಿಕೊಳ್ಳಲು ತಾನು ದುಡಿದುದ್ದನ್ನು ದಂಡವಾಗಿ ಕೊಡುವನು. ದಲಿತರು ಅಜ್ಞಾನ ಮತ್ತು ಸಂಸ್ಕಾರ ಹೀನತೆಯ ಫಲವಾಗಿ ದುಡಿದುದ್ದನ್ನು ಹೆಂಡಕ್ಕೆ ಕಳೆಯುವರು. ಬ್ರಾಹ್ಮಣರು ಶ್ರಾದ್ಧ ಮುಂತಾದ ಪ್ರೇತಕರ್ಮಗಳಿಗೆ ತುಂಬಾ ಹಣ ವ್ಯಯಿಸುವರು.
ಸಾಯುವವರು ಸತ್ತು ಹೋಗುತ್ತಾರೆ. ಅವರ ಹೆಸರಿನಲ್ಲಿ ಕರ್ಮ ಮಾಡಲು ಇತರರು ಉಣ್ಣುವುದಕೋಸ್ಕರ ಕೆಲವು ಜನರು ಅಪಾರವಾದ ಸಾಲ ಮಾಡುವರು. ಸಮಾಜದ ಜನರ ಬಾಯಿಗೆ ಹೆದರಿ ಸಾಲ ಮಾಡಿಯಾದರೂ ಎಲ್ಲರಿಗೂ ಉಣ್ಣಿಸುವರು. ಇವೆಲ್ಲ ಅರ್ಥರಹಿತ. ಸಾಲದ ಹೊಣೆಗಾರಿಕೆಯನ್ನರಿತು ವಾಸ್ತವವಾದಿಗಳಾಗಿ ವಿಚಾರ ಮಾಡಬೇಕು. ತಮ್ಮ ಶಕ್ತಿಗೆ ನೀಗುವಷ್ಟು ಮಾತ್ರ ವೆಚ್ಚ ಮಾಡಬೇಕು. ಆಡಿಕೊಳ್ಳುವವರಾರೂ ಸಹಾಯಕ್ಕೆ ಬರುವುದಿಲ್ಲ ಎಂಬ ಕಟುಸತ್ಯ ಮನಗಾಣಬೇಕು.
ವೈದಿಕ ಕರ್ಮಗಳಲ್ಲಿ 'ಪಿಂಡದಾನ ಮಹತ್ವದ್ದು. ಬಗೆ ಬಗೆಯ ಅಡಿಗೆ ಸಿದ್ಧಪಡಿಸಿ, ಶವವನ್ನು ಸುಟ್ಟ ಸ್ಥಳದಲ್ಲಿ ಬಾಳೆ ಎಲೆಯ ಮೇಲೆ ಹರಡಿ ಕಾಗೆಗಳಿಗಾಗಿ ಕಾಯುವರು. ಪ್ರೇತಾತ್ಮವು ಕಾಗೆಯ ರೂಪದಲ್ಲಿ ಬಂದು, ತಿಂದು, ಸಂತೃಪ್ತಿಪಡುವುದೆಂಬ ನಂಬಿಕೆಯುಂಟು. ಅದು ಬಂದು ತಿನ್ನದಿದ್ದರೆ ತಲೆಗೆ ಒಂದೊಂದು ಮಾತನ್ನು ಜನರು ಆಡುವರು. ಕಾಗೆಗಳಿಗಿಂತಲೂ ಹೆಚ್ಚಾಗಿ ಮನೆಯವರನ್ನು ನಿಂದಕರೇ ಕುಕ್ಕುವರು. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಕಾಗೆ ಅನಿಷ್ಟ ಪಕ್ಷಿ, ಮನೆ ಹೊಕ್ಕರೆ ಕೇಡು ಎಂದು ಹೇಳುವವರೇ ಈಗ ಮಾತ್ರ ಕಾಗೆಯ ರೂಪದಲ್ಲಿ ಮೃತಾತ್ಮರು ಬರುತ್ತಾರೆ ಎಂದು ನಂಬುತ್ತಾರೆ. ಕಾಗೆ ಮನೆ ಹೊಕ್ಕಾಗಲೂ ನಮ್ಮ ಅಜ್ಜನೋ ಅಜ್ಜಿಯೋ ಮೊಮ್ಮಕ್ಕಳೊ ಮರಿಮಕ್ಕಳನ್ನು ನೋಡಲು ಬಂದಿದ್ದಾರೆ ಎಂದೇಕೆ ಭಾವಿಸುವುದಿಲ್ಲವೋ ? ಇಂಥ ಮೂಢನಂಬಿಕೆ ಬಿಡುವುದು ಒಳ್ಳೆಯದು.
ಸಾಧ್ಯವಾದಷ್ಟು ಹೆಚ್ಚಿನ ಆಡಂಬರ - ಖರ್ಚು ಇಲ್ಲದೆ ತಾತ್ವಿಕವಾಗಿ, ಧಾರ್ಮಿಕವಾಗಿ ವಿಧಿ ವಿಧಾನಗಳನ್ನು ನೆರವೇರಿಸಿದರೆ ಸಾಕು.
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.
![]() | ಶವ ಸಂಸ್ಕಾರದ ಬಗೆಗಳು | ವಸ್ತು- ಶುದ್ದೀಕರಣ | ![]() |