ಶರಣದೀಕ್ಷೆ - ಶರಣಮೇಳವ್ರತ ಸ್ವೀಕಾರ
ಬಸವಕ್ರಾಂತಿ ದಿನ (ಮಕರ ಸಂಕ್ರಾಂತಿ) ದಂದು ಕೂಡಲ ಸಂಗಮದಲ್ಲಿ ಬಸವ ಜ್ಯೋತಿ ದರ್ಶನದೊಡನೆ ಈ ಶರಣ ವ್ರತವನ್ನು ಪೂರ್ತಿಗೊಳಿಸುವ ಸಂಕಲ್ಪದೊಡನೆ ವ್ರತವನ್ನು ಸ್ವೀಕಾರ ಮಾಡಬೇಕು.
ವ್ರತ ಆರಂಭಿಸುವ ದಿನಗಳು :
೧. ಅಖಂಡ ಶರಣ ವ್ರತ - ಮಾರ್ಗಶಿರ ಮಾಸದ ಏಕಾದಶಿಯಂದು
೨. ಮಾಸ ಶರಣವ್ರತ - ಮಾರ್ಗಶಿರ ಬಹುಳ ಷಷ್ಠಿಯಂದು
೩. ಖಂಡ ಶರಣವ್ರತ - ಪುಷ್ಯ ಶುದ್ಧ ಏಕಾದಶಿಯಂದು
ಅಖಂಡ ಶರಣವ್ರತ: ಬಸವ ಕ್ರಾಂತಿ (ಸಂಕ್ರಾಂತಿ) ದಿನ ಬಿಟ್ಟು, ಹಿಂದೆ ೪೦ ದಿವಸಗಳ ಕಾಲ ಆಗುವಂತೆ ವ್ರತವನ್ನು ಆರಂಭಿಸಬೇಕು. ಸಾಮಾನ್ಯವಾಗಿ ಇದು ಮಾರ್ಗಶಿರ ಮಾಸದ ಏಕಾದಶಿಯಂದು ಒದಗುತ್ತದೆ.
ಮಾಸ ವ್ರತ: ೩೦ ದಿವಸಗಳ ಕಾಲ ಸಾಧ್ಯವಾಗುವಂತೆ ಮಾರ್ಗಶಿರ ಮಾಸದ ಬಹುಳ ಷಷ್ಠಿಯಂದು (ಹುಣ್ಣಿಮೆಯಾಗಿ ೬ ದಿವಸಗಳಿಗೆ) ವ್ರತವನ್ನು ಆರಂಭಿಸಬೇಕು.
ಖಂಡವ್ರತ: ೧೦ ದಿವಸಗಳ ಕಾಲ ಸಾಧ್ಯವಾಗುವಂತೆ ಪುಷ್ಯಶುದ್ಧ ಏಕಾದಶಿಯಂದು ವ್ರತಾರಂಭ ಮಾಡಬೇಕು.
ಶರಣ ಮೇಳವ್ರತವನ್ನು ಕೈಗೊಳ್ಳುವ ಮೊದಲ ಕ್ರಿಯೆ 'ಶರಣ ದೀಕ್ಷೆ'ಯ ಸ್ವೀಕಾರ. ಈ ಪವಿತ್ರ ವ್ರತಾಚರಣೆಯ ಪ್ರಾರಂಭದ ಹಿಂದಿನ ದಿನ ಈ ದೀಕ್ಷೆಯನ್ನು ಸ್ವೀಕರಿಸಬೇಕು. ೪೦ ದಿವಸಗಳ ಅಖಂಡ ಶರಣವ್ರತ ಕೈಗೊಳ್ಳುವವರು ಮಾರ್ಗಶಿರ ದಶಮಿಯಂದು, ಮಾಸ ಶರಣವ್ರತದವರು ಮಾರ್ಗಶಿರ ಬಹುಳ ಪಂಚಮಿಯಂದು, ಖಂಡ ವ್ರತದವರು ಪುಷ್ಯ ಶುದ್ದ ದಶಮಿಯಂದು ದೀಕ್ಷಾವ್ರತವನ್ನು ಹೊಂದಬೇಕು.
ಈಗಾಗಲೇ ಈ ದೀಕ್ಷಾವ್ರತವನ್ನು ಹೊಂದಿರುವ ಗುರುಮೂರ್ತಿಗಳಿದ್ದರೆ ಅವರಿಂದ ಪಡೆಯಬೇಕು. ವ್ರತಕಾಲದಲ್ಲಿ ಆರು ಮುದ್ರೆಗಳನ್ನು ಸದಾ ಧರಿಸಿರಬೇಕು. ಗುರುಮುದ್ರೆ (ಕೈ ಕಂಕಣ) - ಲಿಂಗ - ಭಸ್ಮ - ರುದ್ರಾಕ್ಷಿಮಾಲೆ - ಕಾವಿಯ ಷಟ್ಕೋನ ವಸ್ತ್ರ - ಮಂತ್ರ, ಬಿಳಿಯ ಬಟ್ಟೆ ಧರಿಸಿ, ಮೇಲೆ ಷಟ್ಕೋನ ವಸ್ತ್ರ ಹಾಕಬೇಕು. ಲಿಂಗಾಯತೇತರರು ಸಹ ಇದನ್ನು ಸ್ವೀಕರಿಸುವ ಇಚ್ಛೆ ಹೊಂದಿದ್ದರೆ ಇಷ್ಟಲಿಂಗವನ್ನುಳಿದು ಉಳಿದ ಐದು ಮುದ್ರೆಗಳನ್ನು ಧರಿಸಬೇಕು. ಲಿಂಗಾಯತರಿದ್ದು ಲಿಂಗಧಾರಣೆ ಇರುವವರು ದಿನ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಸ್ನಾನ ಮಾಡಿ, ಇಷ್ಟಲಿಂಗ ಪೂಜೆ ಪೂರೈಸಿ ನಂತರ ಬಸವೇಶ್ವರ ಪೂಜೆ - ಪ್ರಾರ್ಥನೆ (ಭಜನೆ) - ಪಾರಾಯಣ - ಪ್ರಸಾದ ಸ್ವೀಕಾರ ಮಾಡಬೇಕು. ಸೂರ್ಯಾಸ್ತದ ನಂತರ ಇದೇ ಪೂಜಾವಿಧಿ ಅನುಸರಿಸಬೇಕು. ಎರಡು ಪೂಜೆಗಳ ನಡುವೆ ನೀರನ್ನು ಕುಡಿಯಬಹುದೇ ವಿನಹ ಆಹಾರ ಸೇವಿಸಬಾರದು. ಲಿಂಗಾಯತೇತರರು ಇಷ್ಟಲಿಂಗಾರ್ಚನೆಯನ್ನಷ್ಟೇ ಮಾಡುವುದಿಲ್ಲ. ಬಾಕಿ ಕ್ರಮ ಇಬ್ಬರಿಗೂ ಒಂದೆಯೇ.
ಲಾಂಛನ ಧಾರಣೆ : ಸ್ನಾನ ಮಾಡಿ ಬಿಳಿಯ ವಸ್ತ್ರಗಳನ್ನುಟ್ಟು ಷಟ್ಕೋನ ಲಾಂಛನವಿರುವ ಮೇಲುವಸ್ತ್ರ ಹೊದ್ದು, ಭಸ್ಮ - ರುದ್ರಾಕ್ಷಿ ಮಾಲೆ ಧರಿಸಿಯೇ ಎಲ್ಲ ವಿಧಿಗಳನ್ನು ನೆರವೇರಿಸಬೇಕು.
ಎಲ್ಲರೂ ಮಾಡಬಹುದು : ಶ್ರೀಗುರು ಬಸವಣ್ಣನವರ ಸಿದ್ಧಾಂತದಂತೆ ಸ್ತ್ರೀ ಪುರುಷರೆಂಬ ಲಿಂಗಭೇದ, ಮೇಲು-ಕೀಳೆಂಬ ಜಾತಿ ಭೇದ, ಬಡವ-ಶ್ರೀಮಂತರೆಂಬ ವರ್ಗಭೇದ ಮತ್ತು ವಯೋಭೇದ ಇಲ್ಲದೆಯೇ ಈ ವ್ರತವನ್ನು ಕೈಗೊಂಡು ಮಾಡಬಹುದು.
ನಿಯಮಗಳು : ವ್ರತಧಾರಣೆಯ ಕಾಲದಲ್ಲಿ ಕೆಳಕಂಡ ನಿಯಮಗಳನ್ನು ಪಾಲಿಸಬೇಕು.
೧. ಮುಂಜಾನೆ ಮತ್ತು ಸಂಜೆ ಎರಡೂ ಹೊತ್ತೂ ಸ್ನಾನ ಮಾಡಿ, ಪೂಜೆ - ಪ್ರಾರ್ಥನೆ ವಚನ ಪಠಣ ಮಾಡಬೇಕು.
೨. ನಿಗದಿ ಪಡಿಸಿಕೊಂಡ ಪೂಜೆ-ಪಠಣವಾಗದೆ ಆಹಾರವನ್ನು ಸ್ವೀಕರಿಸಬಾರದು.
೩. ಬೀಡಿ-ಸಿಗರೇಟು-ಭಂಗಿ-ಅಫೀಮು-ತಂಬಾಕು ಮುಂತಾಗಿ ಸೇದಬಾರದು.
೪. ಸೆರೆ-ಸೇಂದಿ, ಬ್ರಾಂಡಿ-ಬೀರು ಮುಂತಾದ ಮಾದಕ ಪಾನೀಯಗಳನ್ನು ಕುಡಿಯಬಾರದು.
೫. ಮೊಟ್ಟೆ-ಮೀನು, ಮಾಂಸ ಮುಂತಾದ ಮಾಂಸಾಹಾರ ಸೇವನೆ ಮಾಡಬಾರದು.
೬. ಕಡ್ಡಾಯವಾಗಿ ಸಂಯಮ (ಬ್ರಹ್ಮಚರ್ಯ) ವನ್ನು ಪಾಲಿಸಬೇಕು. ಇದಕ್ಕಾಗಿ ಸಾಧ್ಯವಾದಷ್ಟೂ ಸ್ತ್ರೀ - ಪುರುಷರು ಪ್ರತ್ಯೇಕವಾದ ಗುಂಪುಗಳಲ್ಲಿ ಮಲಗಬೇಕು.
ಈ ರೀತಿ ವ್ರತಪಾಲನೆ ಮಾಡಿ, ಶರಣ ಮೇಳಕ್ಕೆ ಬಂದು, ಬಸವ ಕ್ರಾಂತಿ ದಿನದಂದು ಮಹಾಮನೆ ಮಹಾಮಠದಲ್ಲಿ ಧ್ವಜಾರೋಹಣದಲ್ಲಿ ಭಾಗಿಗಳಾಗಿ,ಧರ್ಮಪೀಠಾಧಿಕಾರಿಗಳಾದ ಮಹಾಜಗದ್ಗುರುಗಳು ಉದ್ದೀಪನ ಮಾಡುವ ಬಸವಜ್ಯೋತಿಯ ದರ್ಶನ ಪಡೆದು, ಪ್ರತಿಜ್ಞಾವಿಧಿಯಲ್ಲಿ ಭಾಗಿಗಳಾಗಿ, ಗುರುಕಾಣಿಕೆ ಸಲ್ಲಿಸಿ, ವ್ರತವನ್ನು ಪೂರ್ತಿ ಮಾಡಬೇಕು.
ಮಾಘ ಪೌರ್ಣಿಮೆ-ಶರಣ ಜ್ಯೋತಿ ದರ್ಶನ
ಕಾರಣಾಂತರದಿಂದ ಅಂದರೆ ಅನಾರೋಗ್ಯ ನಿಮಿತ್ತವಾಗಿಯೋ ಮತ್ತಾವ ಕಾರಣದಿಂದಲೋ ಬಸವ ಕ್ರಾಂತಿ ದಿನದಂದು ಬರಲಿಕ್ಕಾಗದವರು, ಮಾಘಪೌರ್ಣಿಮೆಯವರೆಗೆ ಇರುವ ಮಧ್ಯಂತರದ ಅವಧಿಯಲ್ಲಿ ಮಹಾಮನೆಗೆ ಬಂದು ಹೋಗಬಹುದು. ಮಾಘ ಪೌರ್ಣಿಮೆಯಂದು, ವಿಶೇಷ ಕಾರ್ಯಕ್ರಮವಿರುತ್ತಿದ್ದು ಅಂದು ಶರಣ ಜ್ಯೋತಿ ಉದ್ದೀಪನ ಕಾರ್ಯವಿರುತ್ತದೆ.
ಶರಣವ್ರತ ಕೈಗೊಂಡವರು ಬಸವ ಕ್ರಾಂತಿ ದಿನದಂದು ಕೂಡಲ ಸಂಗಮಕ್ಕೆ ಬರಲು ಆಗದೇ ಇದ್ದಾಗ, ತಮ್ಮ ಮನೆಯಲ್ಲೇ ವ್ರತವನ್ನು ಪೂರೈಸಿ, ಮಾಘ ಪೌರ್ಣಿಮೆವರೆಗೆ ಅನುಕೂಲವಾದ ದಿವಸ ಕೂಡಲ ಸಂಗಮದ ಮಹಾಮನೆಗೆ ಬಂದು ವಿಶ್ವಗುರು ಬಸವಣ್ಣನವರ ದರ್ಶನವನ್ನು ಪಡೆಯಬೇಕು.
ಗುರುಮೂರ್ತಿ ಅಥವಾ ಶರಣ ಗಣ ಸಾಕ್ಷಿಯಾಗಿ ಪ್ರತಿಜ್ಞಾ ಸ್ವೀಕಾರವನ್ನು ಮಾಡಬೇಕು. ಗುರುಗಳು ಶರಣವ್ರತಿಗೆ ಭಸ್ಮಧರಿಸಿ. ರುದ್ರಾಕ್ಷಿ ಮಾಲೆ ಹಾಕಿ, ಬಲಗೈಗೆ ಬಸವಕಂಕಣ ತೊಡಿಸಿ, ಓಂ ಶ್ರೀ ಗುರುಬಸವಲಿಂಗಾಯ ನಮಃ ಬೋಧಿಸಿ, ನಂತರ ಪ್ರತಿಜ್ಞೆಯನ್ನು ಮಾಡಿಸುವರು.
ಬಸವ (ಲಿಂಗಾಯತ) ಧರ್ಮಾನುಯಾಯಿಗಳ ಶರಣವ್ರತದ ಪ್ರತಿಜ್ಞಾ ವಿಧಿ
ಓಂ ಶ್ರೀ ಗುರುಬಸವಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರುಬಸವಂಗೆ ಶರಣಾಗಿದೆ
ಲಿಂಗದೇವನಿಗೆ ಶರಣಾಗಿಹೆ
ಶರಣಗಣಕ್ಕೆ ಶರಣಾಗಿದೆ
ಗಣಪದವಿಯನ್ನು ನಾ ಹೊಂದಿಹೆ
ಹನ್ನೆರಡು ಪ್ರತಿಜ್ಞೆಗಳು (Twelve Oaths)
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರು ಬಸವಂಗೆ ಶರಣಾಗಹೆ, ಲಿಂಗದೇವನಿಗೆ ಶರಣಾಗಹೆ, ಶರಣಗಣಕ್ಕೆ ಶರಣಾಗಿದೆ, ಗಣಪದವಿಯನ್ನು ನಾ ಹೊಂದಿಹೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. |
7 | ವ | ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀಯರನ್ನು ಬಯಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ಶರಣ ಗಣ ಸಾಕ್ಷಿಯಾಗಿ ನಾನಿಂದು ಅಖಂಡಮಾಸ ಶರಣ ವ್ರತವನ್ನು ಸ್ವೀಕರಿಸುತ್ತಿದ್ದು ನಿಯಮಪೂರ್ವಕವಾಗಿ ಪಾಲನೆ ಮಾಡಿ ಬಸವಕ್ರಾಂತಿ ದಿನದಂದು ಕೂಡಲ ಸಂಗಮದ ಮಹಾಮನೆಯಲ್ಲಿ ಪೂರ್ಣಗೊಳಿಸುತ್ತೇನೆ. (ಜೀವನ ಪರ್ಯಂತರ ಪ್ರಸಾದ ದೀಕ್ಷೆಯನ್ನು ತೆಗೆದುಕೊಳ್ಳುಬೇಕೆನ್ನುವವರು ಹೀಗೆ ಹೇಳಬೇಕು: ಪ್ರಸಾದಿಕ ದೀಕ್ಷೆಯನ್ನು ಪಡೆದಿರುವ ನಾನು ಚಾಚೂ ತಪ್ಪದಂತೆ ಗುರುಗಳು ವಿಧಿಸಿದ ನೇಮವನ್ನು ಪಾಲಿಸುತ್ತೇನೆ.) |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯ ಗುರು ಬಸವೇಶ ಹರಹರ ಮಹಾದೇವ ಎಂದು ಪ್ರತಿಜ್ಞಾ ಸ್ವೀಕಾರದ ಹಂತರ ಜಯಘೋಷ ಮಾಡಬೇಕು.
ಪ್ರತಿಜ್ಞಾ ಸ್ವೀಕಾರದ ನಂತರ ಗುರುಮೂರ್ತಿಯು ಕರುಣ ಪ್ರಸಾದವನ್ನು ನೀಡುವರು. ನಂತರ ಮಹಾಮಂಗಲ ಮತ್ತು ಪ್ರಸಾದದ ಆರೋಗಣೆ.
ವ್ರತ ವಿಸರ್ಜನೆ : ಮಹಾಮನೆಯ ಬಸವ ಮಂಟಪದಲ್ಲಿ ಶ್ರೀ ಗುರು ಬಸವಣ್ಣನವರ ದರ್ಶನ ಪಡೆದು, ಬಲಗೈಯಲ್ಲಿ ಕಟ್ಟಿದ ಕಂಕಣವನ್ನು ಗುರುಕಾಣಿಕೆ ಸಹಿತವಾಗಿ ಪಾದಗಟ್ಟೆಯ ಮೇಲಿಟ್ಟು ನಮಸ್ಕರಿಸಿ ತೀರ್ಥಪ್ರಸಾದಗಳನ್ನು ಸ್ವೀಕರಿಸಬೇಕು. ಇಲ್ಲಿಗೆ ವ್ರತವು ಪೂರ್ತಿಯಾದಂತೆ.
ದಾಸೋಹ ವ್ರತ - ಬಸವ ಜ್ಯೋತಿ ಕಾರ್ಯಕ್ರಮ
ದಾಸೋಹವು ಬಸವ ಧರ್ಮದಲ್ಲಿ ಶ್ರೇಷ್ಠವಾದ ಕಲ್ಪನೆ. ಅನ್ನ ದಾಸೋಹ, ಜ್ಞಾನ ದಾಸೋಹ, ಧನ ದಾಸೋಹ ಮುಂತಾದವು ಈ ದಾಸೋಹದ ಅಂಗವಾಗಿ ಬರುತ್ತವೆ. ಶ್ರಾವಣಮಾಸದ ಪಂಚಮಿಯಂದು ಧರ್ಮಗುರು ಬಸವಣ್ಣನವರು ಲಿಂಗೈಕ್ಯರಾದುದು. ಮರುದಿನ ಷಷ್ಠಿಯಂದು ನೀಲಾಂಬಿಕಾ ತಾಯಿ ಲಿಂಗೈಕ್ಯಳಾದುದು. ದಾಸೋಹದ ಪರಿಕಲ್ಪನೆ ಕೊಟ್ಟವರು ಧರ್ಮಪಿತರಾದರೆ ಪರಮ ದಾಸೋಹ ಮೂರ್ತಿಯಾಗಿ ಮಹಾಮನೆಯಲ್ಲಿ ಶರಣರನ್ನು ಆದರಿಸಿದವಳು ನೀಲಾಂಬಿಕಾ ತಾಯಿ, ಆದ್ದರಿಂದ ಈ ಪವಿತ್ರ ಚೇತನಗಳ ನೆನಪಿನಲ್ಲಿ ಶ್ರಾವಣಮಾಸವನ್ನು ಅನ್ನ ದಾಸೋಹ - ಜ್ಞಾನದಾಸೋಹದ ಮಾಸವನ್ನಾಗಿ ಆಚರಿಸಬೇಕು. ರೂಢಿಯಲ್ಲಿ ಅಯ್ಯನವರನ್ನು ಬರಮಾಡಿಕೊಂಡು ಲಿಂಗಾರ್ಚನೆ ಮಾಡಿಸಿ, ಅವರಿಗೆ ಪ್ರಸಾದ ದಾಸೋಹ ಮಾಡುವ ಪರಿಪಾಠವಿತ್ತು.
ಅದಕ್ಕೆ ಪರ‍್ಯಾಯವಾಗಿ ಈಗ ತಮ್ಮ ಪರಿಚಿತ ಶರಣ ಬಂಧುಗಳನ್ನು ಆಹ್ವಾನಿಸಿ, ಅವರೊಡನೆ ತಾವೂ ಇಷ್ಟಲಿಂಗಾರ್ಚನೆಗೆ ಕುಳಿತುಕೊಂಡು ಸಾಮೂಹಿಕ ಲಿಂಗಪೂಜೆ ಮಾಡಿ, ನಂತರ ಬಸವೇಶ್ವರ ಪೂಜೆ ಮಾಡಿ ಪ್ರಸಾದ ದಾಸೋಹ ಮಾಡಬೇಕು. ಅವರಿಗೆ ತಮ್ಮ ಕೈಲಾದ ಕೊಡುಗೆ (ಗ್ರಂಥ ಅರ್ಪಣೆಯಾದರೆ ಸೂಕ್ತ)ಯನ್ನು ಕೊಟ್ಟು ಕಳಿಸಬೇಕು. ಈ ರೀತಿ ದಿನಾಲೂ ಕನಿಷ್ಟಪಕ್ಷ ಒಬ್ಬರನ್ನಾದರೂ ಕರೆದು ಪ್ರಸಾದ ದಾಸೋಹ ಮಾಡಬಹುದು. ಅಥವಾ ಶ್ರಾವಣಮಾಸದಲ್ಲಿ ಒಂದು ದಿವಸ ಹೆಚ್ಚಿನ ಜನರನ್ನು ಕರೆದು ದಾಸೋಹ ಮಾಡಬಹುದು. ಈ ಪವಿತ್ರ ಸೇವೆಯನ್ನು ಬಿಡಬಾರದು.
ಈ ದಾಸೋಹದ ಅಂಗವಾಗಿ ದಿನಾಲೂ ಒಬ್ಬೊಬ್ಬರು ತಮ್ಮ ಮನೆಯಲ್ಲಿ ಸಂಜೆಯ ವೇಳೆಯಲ್ಲಿ ಬಸವ ಜ್ಯೋತಿ ಕಾರ್ಯಕ್ರಮವಿಟ್ಟು ಬಸವ ಜ್ಯೋತಿ ಕಾರ್ಯಕ್ರಮಕ್ಕೆ ಇನ್ನಿತರ ಶರಣ ಬಂಧುಗಳನ್ನು ಆಹ್ವಾನಿಸಿ ಪೂಜೆ ಮಾಡಿ, ಪ್ರಸಾದ ವಿತರಣೆ ಮಾಡಬೇಕು. ಈ ವ್ರತವನ್ನು ಸ್ವಯಂ ಪ್ರೇರಣೆಯಿಂದ ಕೈಗೊಳ್ಳಬಹುದು; ದೀಕ್ಷಾರೂಪದಲ್ಲಿಯೂ ಸ್ವೀಕರಿಸಬಹುದು. ಶ್ರಾವಣ ಪ್ರತಿಪದೆಯಂದು ಬಸವೇಶ್ವರ ಪೂಜಾವ್ರತ ಆರಂಭಿಸಿ, ಪೂಜ್ಯರನ್ನು ಆಹ್ವಾನಿಸಿ ಇದೇ ರೀತಿ ಈ ತಿಂಗಳು ಪರ್ಯಂತರ ದಾಸೋಹ ನಡೆಸುವ ಶಕ್ತಿ ಕೊಡಿರಿ.” ಎಂದು ಪ್ರಾರ್ಥಿಸಿ ಕರುಣ ಪ್ರಸಾದ ಪಡೆಯಬೇಕು.