Previous ವಿಭೂತಿ ವೀಳ್ಯ ಲಿಂಗೈಕ್ಯ ಸಂಸ್ಕಾರ Next

ಶವ ಸಂಸ್ಕಾರದ ಬಗೆಗಳು

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಶವ ಸಂಸ್ಕಾರದ ಬಗೆಗಳು

ಮೃಣ್ಮಯ ಶರೀರ ಅಥವಾ ಆತ್ಮವಿರಹಿತವಾದ ಜಡಶರೀರಕ್ಕೆ ಹಲವಾರು ಬಗೆಯ ಸಂಸ್ಕಾರ ಮಾಡುವುದುಂಟು.

೧. ಬಯಲಿನಲ್ಲಿ ಇಡುವುದು: ಶರೀರವನ್ನು ಒಯ್ದು ಎತ್ತರವಾದ ಬೆಟ್ಟ, ವಿಶಾಲವಾದ ಬಯಲಿನಲ್ಲಿ ಇಟ್ಟು (ಎಸೆದು) ಬಂದು ಬಿಡುವುದು. ನಾಯಿ-ನರಿ, ಹದ್ದು ಕಾಗೆಗಳಿಗೆ ಆಹಾರ ದೊರೆಯುವುದು ಎಂಬ ಮನೋಭಾವ ಈ ಕ್ರಿಯೆಯ ಹಿಂದಿನ ಉದ್ದೇಶ. ಇದು ಬಹಳ ಅನಾರೋಗ್ಯಕರ. ಬಹುಶಃ ಮಾನವನಲ್ಲಿ ಯಾವುದೇ ನಾಗರಿಕತೆ ಬೆಳೆಯದೇ ಇದ್ದಾಗ ಶವವನ್ನು ಏನು ಮಾಡಬೇಕೆಂಬುದು ತಿಳಿಯದೇ ಹಾಗೆಯೇ ಎಸೆಯುವ ಪದ್ಧತಿ ಉಂಟಾಗಿರಬೇಕು. ಆ ಶವ ಸಂಪೂರ್ಣ ಶಿಥಿಲವಾಗುವ ತನಕ ಇರುವ ದುರ್ಗಂಧ ತಾಳಲಾರದ್ದಕ್ಕೆ ಬೆಟ್ಟದ ತುದಿ, ನಿರ್ಜನ ಬಯಲು ಮುಂತಾದಲ್ಲಿ ಇಡುವುದು ಬೆಳೆದು ಬಂದಿರಬಹುದು. ರೋಗರುಜಿನಗಳು ಹಬ್ಬುವ ಸಾಧ್ಯತೆ ಇಲ್ಲಿ ಇದೆ ಮತ್ತು ಪರಿಸರ (ಹವಾ ಮಾಲಿನ್ಯ ಸಹಾ ಉಂಟಾಗುತ್ತದೆ. ಹದ್ದು ಕಾಗೆಗಳು ರೋಗಗ್ರಸ್ತ ಶವವನ್ನು ತಿಂದು ಪುನಃ ಬೇರೆಡೆಗೆ ಹೋಗಿ ಆ ರೋಗವನ್ನು ಹಬ್ಬಿಸುವ ಸಾಧ್ಯತೆ ಇದೆ. ಇದು ಅಷ್ಟೊಂದು ವೈಜ್ಞಾನಿಕ ಅಲ್ಲವೆಂದು ತಿಳಿದಿದ್ದರೂ ಕೆಲವು ಮತೀಯರು ಸಂಪ್ರದಾಯಕ್ಕೆ ಅಂಟಿಕೊಂಡು ಇಂದಿಗೂ ಆಚರಿಸುತ್ತಿರುವರು.

೨. ಜಲ ಸಮಾಧಿ : ಮತ್ತೆ ಕೆಲವರು ಶವಗಳನ್ನು ನೀರಿಗೆ ತಳ್ಳಿಬಿಡುವುದುಂಟು. ಜಲಚರ ಪ್ರಾಣಿಗಳಿಗೆ ಆಹಾರವಾಗಲೆಂದು. ಇದೂ ಸಹ ಜಲ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು.

೩. ದಹನ ಕ್ರಿಯೆ : ಶವವನ್ನು ಬೆಂಕಿಯಲ್ಲಿ ಹಾಕಿ ಸುಡುವುದು. ಇದು ವೈದಿಕ ಸಂಪ್ರದಾಯವಾಗಿದ್ದು ದ್ವಿಜ ವರ್ಣಿಯರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು) ಆಚರಿಸುತ್ತಿರುವರು.

೪. ಶವವನ್ನು ಭೂಮಿಯಲ್ಲಿ ಹಾಕಿ ಸಮಾಧಿ ಮಾಡುವುದು : ಜಗತ್ತಿನ ಪ್ರಮುಖ ಧರ್ಮಗಳಾದ ಕ್ರೈಸ್ತ, ಇಸ್ಲಾಂ ಧರ್ಮಗಳು ಇದೆ ಪದ್ಧತಿ ಅನುಸರಿಸುತ್ತವೆ. ಲಿಂಗಾಯತ ಧರ್ಮವು ಸಮಾಧಿ ಕ್ರಿಯೆಯನ್ನೇ ಮಾನ್ಯ ಮಾಡುತ್ತದೆ. ಹೀಗೆ ಮಾಡುವುದರ ಹಿಂದೆ ಈ ಕೆಳಗಿನಂತೆ ಆಲೋಚನೆಗಳಿರುವುವು.

ಅ) ಶುದ್ಧಶೈವ ಮತ್ತು ದ್ರಾವಿಡ ಸಂಸ್ಕೃತಿ ಸಮಾಧಿ ಕ್ರಿಯೆಯನ್ನೇ ಅಳವಡಿಸಿಕೊಂಡಿತ್ತು. ಹರಪ್ಪಾ ಮೊಹೆಂಜೋದಾರೋಗಳಲ್ಲಿ ಶವವನ್ನು ಹುಗಿಯುವ ಬೇರೆ ಬೇರೆ ಗಾತ್ರದ ಮಡಕೆಗಳು ಸಿಕ್ಕಿವೆ. ಅಸ್ಥಿಪಂಜರ ಸಹಿತ ಮಡಕೆಗಳೂ ಸಿಕ್ಕಿವೆ. ಆರ್ಯ ಸಂಸ್ಕೃತಿಗಿಂತಲೂ ದ್ರಾವಿಡ ಸಂಸ್ಕೃತಿಯ ಕೆಲವು ಅಂಶಗಳಿಂದ ಲಿಂಗಾಯತ ಧರ್ಮಕರ್ತ ಬಸವಣ್ಣನವರು ಪ್ರಭಾವಿತರಾಗಿರುವಂತೆ ತೋರುತ್ತದೆ.

ಆ) ಸಮಾಧಿ ಕ್ರಿಯೆಯಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ. ಭೂಮಿಯ ಆಳದಲ್ಲಿ ದೇಹವನ್ನು ಹೂಳುವುದರಿಂದ ಶರೀರವು ನಿಧಾನವಾಗಿ ಶಿಥಿಲವಾಗುತ್ತದೆ. ಇದರಿಂದ ಪಂಚಭೂತಾತ್ಮಕ ಶರೀರವು ತಾನು ಪಡೆದುಕೊಂಡ ಧಾತುಗಳನ್ನು ಪುನಃ ನಿಸರ್ಗಕ್ಕೆ ಮರಳಿಸಲು ಸಾಕಷ್ಟು ಸಮಯ ದೊರೆಯುತ್ತದೆ. ಅದೇ ದಹನ ಕ್ರಿಯೆಯಲ್ಲಿ ಕೇವಲ ಅಗ್ನಿಗೆ ಮಾತ್ರ ಆಹಾರ ದೊರೆತು, ಹವೆಯೂ ಮಲಿನವಾಗುವುದು. ಶವವನ್ನು ಸುಡುವ ಭಯಂಕರ ದೃಶ್ಯವನ್ನು ನೋಡುವೆ ಅನಿವಾರ್ಯತೆ ಒದಗುವುದು. ಬಹಳಷ್ಟು ಧಾತುಗಳು ಸುಟ್ಟು ವ್ಯರ್ಥವಾಗುತ್ತವೆ.

ಆರ್ಥಿಕ ದೃಷ್ಟಿಯಿಂದಲೂ ಸಮಾಧಿಕ್ರಿಯೆ ಮಿತವ್ಯಯಕ್ಕೆ ಕಾರಣವಾಗುವುದು. ಇಂಧನ ಕೊರತೆಯ ಈ ದಿನಗಳಲ್ಲಿ ವಿಪರೀತ ಕಟ್ಟಿಗೆ (ವಿದ್ಯುತ್ ಚಿತಾಗಾರದಲ್ಲಿ ವಿದ್ಯುತ್) ವ್ಯಯವಾಗುವುದು. ಕೆಲವರು ಅನ್ನುವರು, ಭೂಮಿಯಲ್ಲಿ ಹಾಕುವುದರಿಂದ ತುಂಬಾ ಭೂಮಿ ವ್ಯರ್ಥವಾಗುವುದು ಎಂದು. ಸಾಮಾನ್ಯವಾಗಿ ಒಂದು ಶವ ಹುಗಿದ ಕೆಲವಾರು ದಿನಗಳ ಬಳಿಕ ಪುನಃ ಅದೇ ಸ್ಥಳದಲ್ಲಿ ಇನ್ನೊಂದು ಹಾಕಬಹುದು. ಹೊಲತೋಟಗಳಲ್ಲಿ ಅವರವರ ಶವಗಳನ್ನು ಹುಗಿದು, ಮೇಲೆ ನೆರಳಿನ ಮರಗಳನ್ನು ನೆಟ್ಟರೆ ಆ ಶವದ ಸಂಪೂರ್ಣ ಸಾರ ನಿಸರ್ಗಕ್ಕೆ ದೊರೆಯುವುದು. ದಹನ ಕ್ರಿಯೆಯಲ್ಲಿ ಕೆಲವರು ದೊಡ್ಡವರು ಸತ್ತಾಗಲಂತೂ ಸಾಕಷ್ಟು ಶ್ರೀಗಂಧದ ಕಟ್ಟಿಗೆ ಸುಡುವರು. ನಂತರ ಅವರ ಬೂದಿಯನ್ನು ಬೆಟ್ಟ, ನದಿಗಳಲ್ಲಿ ಸುರಿಯಲು ಕೋಟ್ಯಂತರ ರೂಪಾಯಿಗಳನ್ನು ಹಾಳು ಮಾಡುವರು. ಜಗತ್ತಿನ ಎಲ್ಲ ಧರ್ಮಗಳಲ್ಲಿ ಅತ್ಯಂತ ವೆಚ್ಚದಾಯಕ, ವ್ಯರ್ಥ, ಕೆಟ್ಟ ಆಚರಣೆಗಳನ್ನು ಹುಟ್ಟು ಹಾಕಿರುವುದು ವೈದಿಕ ಧರ್ಮ ಎಂದು ಘಂಟಾಘೋಷವಾಗಿ ಹೇಳಬಹುದು. ಯಜ್ಞಯಾಗಗಳ ರೂಪದಲ್ಲಿ, ಹೋಮ-ಹವನಗಳ ನೆಪದಲ್ಲಿ, ಶವದಹನ-ಚಿತಾಭಸ್ಮ ವಿತರಣೆ ರೂಪದಲ್ಲಿ ಪುಣ್ಯತಿಥಿ-ಪ್ರೇತಕರ್ಮಗಳ ನೆಪದಲ್ಲಿ ಸಂಪತ್ತು ವ್ಯರ್ಥವಾಗಿ ಖರ್ಚಾಗುತ್ತದೆ. ಸಮಾಧಿ ಕ್ರಿಯೆಯಲ್ಲಿ ತಗ್ಗು ತೋಡುವ ಖರ್ಚು ಮಾತ್ರ ಇರುತ್ತದೆ. ಬಾಕಿ ಎಲ್ಲ ತಮ್ಮ ಅನುಕೂಲತೆಗೆ ತಕ್ಕಂತೆ ಹೊಂದಿಸಬಹುದು.

ಇ) ದ್ವಿಜರಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಗೃಹಸ್ಥರ ಶವಗಳನ್ನು ದಹಿಸಲಾಗುವುದು. ಅದೆ ಸನ್ಯಾಸಿಯು ಮುಕ್ತಾತ್ಮನೆಂಬ ಭಾವದಿಂದ ಅವನ ಶವವನ್ನು ಸಮಾಧಿ ಮಾಡಲಾಗುವುದು. ಬಸವಣ್ಣನವರು ರೂಪಿಸಿಕೊಟ್ಟ ಲಿಂಗಾಯತ ಧರ್ಮದ ಸೈದ್ಧಾಂತಿಕ ನಂಬಿಕೆಯಂತೆ ಎಲ್ಲ ಲಿಂಗವಂತರೂ ಗುರುಕಾರುಣ್ಯ ಪಡೆಯುವರು, ಲಿಂಗಧಾರಿಗಳಾಗಿ ಪೂಜೆಯನ್ನು ಮಾಡಿ, ಮುಕ್ತಾತ್ಮರಾಗುವರು. ಆದ್ದರಿಂದಲೇ ವಿರಕ್ತ-ಗೃಹಸ್ಥ ಎಂಬ ಭೇದವಿಲ್ಲದೆ ಎಲ್ಲರನ್ನೂ ಸಮಾಧಿ ಮಾಡಲಾಗುವುದು.

ಈ) ಎಲ್ಲರನ್ನೂ ಸಮಾಧಿ ಮಾಡುವ ಪದ್ಧತಿ ಇರುವುದಾದರೂ ಶಿವಯೋಗಿಗಳು, ಶರಣರು, ವಿಶೇಷ ಅಧ್ಯಾತ್ಮ ಸಾಧನೆ ಮಾಡಿದವರ ಸಮಾಧಿಗಳ ಮೇಲೆ ಗದ್ದುಗೆಗಳನ್ನು ಕಟ್ಟಿ, ಸ್ಥಾನಗಳನ್ನು ರಕ್ಷಿಸಿಕೊಂಡು ಹೋಗಲಾಗುವುದು. ಉದಾಹರಣೆಗೆ ಕೂಡಲ ಸಂಗಮದಲ್ಲಿರುವ ಶ್ರೀ ಬಸವೇಶ್ವರ ಐಕ್ಯಮಂಟಪ, ಕೃಷ್ಣಾ ನದಿಯ ಆ ಬದಿಯಲ್ಲಿರುವ ತಾಯಿ ನೀಲಾಂಬಿಕೆಯ ಗದ್ದುಗೆ, ಹಡಪದ ಅಪ್ಪಣ್ಣನವರ ಗದ್ದುಗೆ, ಉಳವಿ ಚೆನ್ನಬಸವಣ್ಣನವರ ಸಮಾಧಿ, ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ಸಮಾಧಿ ಮುಂತಾದುವು ಇದಕ್ಕೆ ಉದಾಹರಣೆ.

ಕ್ರಿಯಾಮೂರ್ತಿ ಗುರುಮೂರ್ತಿ ಜಂಗಮಮೂರ್ತಿ

ಅಂತಿಮ ಸಂಸ್ಕಾರವು ಅತ್ಯಂತ ಮಹತ್ವಪೂರ್ಣವಾದುದು. ಇದು ಆಡಂಬರಕ್ಕಿಂತಲೂ ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ ಅರ್ಥಗರ್ಭಿತವಾಗಿರಬೇಕು. ಇಲ್ಲಿಯವರೆಗೂ ಒಂದು ಏಕರೂಪತೆ, ಶಿಸ್ತು ಈ ಸಮಾಜದಲ್ಲಿ ತರಬೇಕೆಂದು ಯಾರೂ ಚಿಂತನೆ ಮಾಡದೇ ಬಂದಿರುವುದನ್ನು ನೋಡಿದರೆ ಸೋಜಿಗವೆನಿಸುತ್ತದೆ.

ಈ ಪುಸ್ತಕವನ್ನು ಬರೆಯಲು ಆರಂಭಿಸಿದ ಮೇಲೆ ಬೇರೆ ಬೇರೆ ಕಡೆ ಪ್ರಚಲಿತವಾಗಿರುವ ಪದ್ದತಿಯನ್ನು ತಿಳಿದುಕೊಳ್ಳೋಣ ಎಂದು ಪುಸ್ತಕಗಳನ್ನು ಓದಿದುದೇ ಅಲ್ಲದೇ ಕೆಲವರನ್ನು ಕೇಳಿದೆ. ಕೂಡಲ ಸಂಗಮದ ಓರ್ವ ಹಿರಿಯರನ್ನು ಕೇಳಿದೆ. “ನಾವು ಹಿರೇಮಠದವರು ಉಳಿದ ಅಯ್ಯೋರಿಗಿಂತ ಶ್ರೇಷ್ಠರು. ಎಷ್ಟೇ ರೊಕ್ಕ ಕೊಡ್ತೀವಿ ಅಂದರೂ ಶವ ಸಂಸ್ಕಾರ ಮಾಡೋದಿಲ್ಲ. ಅದನ್ನು ಮಾಡೋದು ಮಠಪತಿ, ಅವರು ನಮಗಿಂತ ಕೆಳಗೆ ..... ಎಂದರವರು.

'ಶವಸಂಸ್ಕಾರ ಕೀಳು? ಎಂದು ಅವರು ತಳೆದ ಅಭಿಪ್ರಾಯ ನೋಡಿ ಆಶ್ಚರ್ಯವಾಯಿತು. ವ್ಯಕ್ತಿಗೆ ಸದ್ಗತಿ ಕಾಣಿಸುವ ಕ್ರಿಯೆ ಅದೆಂತು ಕೀಳು ?
“ಹೋಗಲಿ, ಏನೇನು ಮಾಡ್ತಾರೆ, ಅದಾದರೂ ಗೊತ್ತಿದೆಯಾ ?” ಎಂದೆ. “ಗೊತ್ತಿಲ್ಲ ಬಿಡ್ರಿ .... ಹೋಗ್ತಿವಿ ಮಣ್ಣುಕೊಟ್ಟು ಬರ್ತಿವಿ ...

“ಏನು ಮಂತ್ರ ಹೇಳುವರು ?” ನಾನು ಕೇಳಿದೆ. “ನಮ್ಮೂರಲ್ಲಿ ಯಾರಿಗೂ ಬರೋದಿಲ್ಲ. ಬಹು ಸಂಖ್ಯಾತರಾಗಿ ಲಿಂಗಾಯತರು ವಾಸಿಸುವ ಕೂಡಲ ಸಂಗಮ ಗ್ರಾಮದಲ್ಲೇ ಈ ಪಾಡಾದರೆ ಇನ್ನು ಪಟ್ಟಣಗಳ ಪಾಡೇನು ? ಅಲ್ಲಿ ಯಾರು ಮಾಡಬೇಕು ?

ಸಮಾಜದ ರಚನೆಯ ಸ್ವರೂಪ ಬದಲಾಗುತ್ತಿದೆ. ಮೊದಲಿನಂತೆ ಪೌರೋಹಿತ್ಯ ಮಾಡಿಕೊಂಡೇ ಬದುಕುವ ಮನೆತನಗಳು ಕಮ್ಮಿ, ಎಂದೋ ಒಂದೊಂದು ದಿನ ಒದಗುವ ಧಾರ್ಮಿಕ ಕ್ರಿಯೆಗಳಿಗಾಗಿ ದೊರೆಯುವ ಕಾಣಿಕೆಯೂ ಅಷ್ಟಕ್ಕಷ್ಟೇ. ಹೀಗಾಗಿ ಅಯ್ಯನವರುಗಳೂ ಬೇರೆಬೇರೆ ಉದ್ಯೋಗಗಳನ್ನೂ ಅವಲಂಬಿಸಿಕೊಂಡು ಹೋಗಿಬಿಡುತ್ತಾರೆ. ಆದ್ದರಿಂದ ಅತ್ಯಂತ ಅಗತ್ಯಕ್ರಿಯೆಗಳಾದ ಲಿಂಗಧಾರಣ, ವಿವಾಹ, ಮರಣ, ಗೃಹಪ್ರವೇಶ ಮುಂತಾದವನ್ನು ನೆರವೇರಿಸಲು ಶರಣ ಗಣವೃಂದ ತಯಾರಾಗಬೇಕು. ಅವರುಗಳಿಗೆ ಈ ರೀತಿ ಹೆಸರು ಕೊಡುವುದು ಸೂಕ್ತವೆನಿಸುತ್ತಿದೆ.

ಕ್ರಿಯಾಮೂರ್ತಿ: ಗುರುಮೂರ್ತಿಯ ಸಹಾಯಕರು, ಸಾಮಗ್ರಿಗಳನ್ನು ಮನೆಯವರ ನೆರವಿನಿಂದ ಜೋಡಿಸಿಕೊಳ್ಳುವುದು. ಪೂಜಾದಿಗಳನ್ನು ನೆರವೇರಿಸುವ ಗುರುಮೂರ್ತಿಗೆ ಸಹಾಯ ಮಾಡುವುದು ಇವರ ಕೆಲಸ. ಸಾಂಪ್ರದಾಯಿಕ ಮಠಪತಿಗೆ ಇವರನ್ನು ಹೋಲಿಸಬಹುದು.

ಗುರುಮೂರ್ತಿ: ಪೂಜಾವ್ರತ - ಇಷ್ಟಲಿಂಗಾರ್ಚನೆ ಮಾಡುವುದು. ಮನೆಯವರಿಗೆ ಮಾರ್ಗದರ್ಶನ ಮಾಡುತ್ತಾ ಕ್ರಿಯೆಗಳನ್ನು ನೆರವೇರಿಸುವವರು. ಸಾಂಪ್ರದಾಯಿಕವಾಗಿ ಗುರುವರ್ಗದ ಶಾಸ್ತ್ರಿಗಳಿಗೆ ಇವರನ್ನು ಹೋಲಿಸಬಹುದು.

ಜಂಗಮಮೂರ್ತಿ: ಜ್ಞಾನಿಯೂ, ವೈರಾಗ್ಯ ಮೂರ್ತಿಯೂ ಇದ್ದು ಜಂಗಮಪೂಜೆ ಸ್ವೀಕರಿಸಿ, ಪಾದಪೂಜೆ ಮಾಡಿಸಿಕೊಂಡು ಕರುಣ ಪ್ರಸಾದ ಕೊಡುವ ವ್ಯಕ್ತಿ. ಸಾಂಪ್ರದಾಯಿಕವಾಗಿ ವಿರಕ್ತರಿಗೆ ಹೋಲಿಸಬಹುದು.

ಸಂಪ್ರದಾಯದಲ್ಲಿ ಇವೆಲ್ಲ ಜಾತಿ ಆಧಾರದ ಮೇಲೆ ನಡೆಯುತ್ತಿರುವುದರಿಂದ ಶರಣಜನರಿಗೆ ಈ ಪದ್ಧತಿ ಸೂಕ್ತವೆನಿಸುವುದಿಲ್ಲ. ಪೂಜಾನಿಷ್ಠರು, ವಚನ ಶಾಸ್ತ್ರಾಭ್ಯಾಸಿಗಳೂ, ಬಸವ ತತ್ತ್ವಾನುಯಾಯಿಗಳೂ ಆದವರು ಅರ್ಹತೆಯ ಆಧಾರದ ಮೇಲೆ ವ್ಯಕ್ತಿತ್ವವನ್ನು ಅಳೆಯುವರೇ ವಿನಾ ಜಾತಿಯ ಆಧಾರದ ಮೇಲೆ ಅಲ್ಲ. ಆದ್ದರಿಂದ ಯೋಗ್ಯ ಜಂಗಮ ಮೂರ್ತಿಯ ಸನ್ನಿಧಿ ದೊರೆತರೆ ಸರಿ, ಇಲ್ಲದಿದ್ದರೆ ಒಬ್ಬರು ಗುರುಮೂರ್ತಿ, ಇನ್ನೊಬ್ಬರು ಕ್ರಿಯಾಮೂರ್ತಿ ಆಗಿ ಧರ್ಮಗುರು ಬಸವಣ್ಣನವರ ವಚನ ಗ್ರಂಥವನ್ನು ಜಂಗಮ ಎಂದು ಭಾವಿಸಿ ಕೊಟ್ಟಿರುವ ಕ್ರಮದಲ್ಲಿ ಅಂತ್ಯಸಂಸ್ಕಾರವನ್ನು ನಡೆಸಿದರೆ ಸಾಕು. ಅಲ್ಲದೇ ಜಗಜ್ಜಂಗಮ ಧರ್ಮಕರ್ತ, ಮೋಕ್ಷಗುರು ಬಸವಣ್ಣನವರ ದಿವ್ಯಸನ್ನಿಧಿ ಇದ್ದೇ ಇರುವುದಷ್ಟೆ !ಆದ್ದರಿಂದ ಶರಣ ಬಂಧುಗಳು ಈ ಪುಸ್ತಕವನ್ನು ಓದಿ ಚೆನ್ನಾಗಿ ಮನನ ಮಾಡಿಕೊಳ್ಳಬೇಕು ಮತ್ತು ಸಂಸ್ಕಾರವನ್ನು ನಿರ್ವಹಿಸಲು ಅಧಿಕೃತ ಒಪ್ಪಿಗೆ ಬೇಕಿದ್ದರೆ ಬಸವಧರ್ಮದ ಮಹಾಜಗದ್ಗುರು ಪೀಠದಿಂದ ಪ್ರಮಾಣಪತ್ರ ಕೊಡಲಾಗುವುದು.

ಇವರು ಬೇರೆಬೇರೆ ಕಾಯಕಗಳನ್ನು ಅವಲಂಬಿಸಿದ ಶರಣರಿದ್ದೂ ಸಹ ರಜೆ ಹಾಕಿ, ಅಂತ್ಯ ಸಂಸ್ಕಾರದಂತಹ ಪವಿತ್ರ ಸೇವೆ ಮಾಡಬೇಕು. ಅಯ್ಯನವರ ಮನೆತನಗಳವರೂ ಸಹ ಗ್ರಂಥವನ್ನು ಮನನ ಮಾಡಿಕೊಂಡು ವಿಧಿವಿಧಾನಗಳನ್ನು ಪರಿಣಾಮಕಾರಿಯಾಗಿ ರೂಢಿಸಿಕೊಳ್ಳಬೇಕು. ನಾವು ಶ್ರೇಷ್ಟ ಜಾತಿಯವರು, ನಾವು ಹೇಳಿದ್ದೆ ಮಂತ್ರ; ಮಾಡಿಸಿದ್ದೇ ಆಚಾರ” ಎಂಬ ಅಜ್ಞಾನಯುಕ್ತವಾದ ಹಮ್ಮು ಬಿಟ್ಟು ಇಂದಿನ ಪ್ರಗತಿಪರ ಚಿಂತನೆಗೆ ಅನುಗುಣವಾಗಿ ತಾವೂ ಬುದ್ಧಿವಂತರೂ ಶಾಸ್ತ್ರಾಭ್ಯಾಸಿಗಳೂ ಆಗಬೇಕು. ಜನರನ್ನು ಕಾಣಿಕೆಗಾಗಿ ದುಃಖದ ಸನ್ನಿವೇಶಗಳಲ್ಲಿ ಹಿಂಸಿಸದೇ ಅವರ ಮನಸ್ಸು ಅರಳಿ ಕಾಣಿಕೆ ಕೊಡುವಂತೆ ವಿಧಿವಿಧಾನಗಳನ್ನು ಬಸವ ತತ್ತ್ವಕ್ಕನುಸಾರವಾಗಿ ರೂಢಿಸಿಕೊಂಡು ಅವರ ಬಗ್ಗೆ ಕುಸಿಯುತ್ತಿರುವ ವಿಶ್ವಾಸವನ್ನು ಪುನಃ ಪಡೆದುಕೊಳ್ಳಬೇಕು.

ಕೆಲವು ಮಹತ್ವದ ಸೂಚನೆಗಳು

೧. ಶವಸಂಸ್ಕಾರವನ್ನು ವೈದಿಕ ಧರ್ಮದಲ್ಲಿಯ ನಿಯಮದಂತೆ ಗಂಡು ಮಕ್ಕಳೇ ಮಾಡಬೇಕೆಂದೇನು ಇಲ್ಲ. ಮನೆಯ ಹೆಣ್ಣು ಮಕ್ಕಳೂ ಮಾಡಬಹುದು.

೨. ಗುರುಮೂರ್ತಿ - ಕ್ರಿಯಾಮೂರ್ತಿ - ಜಂಗಮಮೂರ್ತಿಯ ಕೆಲಸವನ್ನು ಶರಣೆಯರೂ ನೆರವೇರಿಸಬಹುದು. ಶವಕ್ಕೆ ಸ್ನಾನ ಮಾಡಿಸಲು, ಎತ್ತಿ ಇಳಿಸಲು, ಮುಂತಾದ್ದಕ್ಕೆ ಗಂಡುಮಕ್ಕಳು ಸಹಾಯ ಮಾಡುವರು.

೩. ಏಕರೂಪದ ವಿಧಿವಿಧಾನಗಳನ್ನು ಸಮಾಜದಲ್ಲಿ ತರುವ ಬಗ್ಗೆ ಯಾರೂ ಗಂಭೀರವಾಗಿ ಆಲೋಚಿಸದೇ ಇರುವುದರಿಂದ ಅನೇಕ ಭೇದಭಾವ ವ್ಯತ್ಯಾಸಗಳನ್ನು ಬದುಕಿನಲ್ಲಿಯಂತೆ, ಸಾವಿನಲ್ಲೂ ಕಾಣಬಹುದಾಗಿದೆ. ಮದುವೆಯಾಗದೇ ಸತ್ತವರನ್ನು (ಧಾರ್ಮಿಕ ದೀಕ್ಷೆ ಪಡೆಯದವರು) ಅಂಗಾತ ಮಲಗಿಸಿ ಒಯ್ಯಲಾಗುತ್ತದೆ. ಅವರನ್ನು ಕೂರಿಸುವುದಿಲ್ಲ. ಹೀಗೆ ಸತ್ತವರು ಅನಾಮಿಕರಿರದೇ, ಗಣ್ಯರು - ಮಾನ್ಯರು ಇದ್ದರೆ ಅವರಿಗೆ “ಎಕ್ಕೆ ಗಿಡ'ದ ಜೊತೆ ಮದುವೆ ಮಾಡಿಸಿ, ನಂತರ ಮದುವೆಯಾಗಿ ಸತ್ತವರಿಗೆ ಮಾಡುವಂತೆ ಅಲಂಕಾರ ಮಾಡಲಾಗುವುದು. (ಲಿಂಗಾಯತ ಸಂಸ್ಕಾರಗಳು - ಪುಟ ೧೫೦) ಇದು ತಪ್ಪು. ಸರಳವಾಗಿಯಾದರೂ ಚಿಂತೆಯಿಲ್ಲ ಒಂದೇ ರೀತಿಯಲ್ಲಿ ವಿಧಿವಿಧಾನ ಆಚರಿಸಬೇಕು. ಎಕ್ಕೆ ಗಿಡಕ್ಕೆ ಮದುವೆ ಮಾಡಿಸುವುದು, ಮುಂತಾದ್ದು ಮೂರ್ಖತನ. ಸೀತೆಯನ್ನು ಕಾಡಿಗಟ್ಟಿ, ಯಜ್ಞ ಮಾಡುವಾಗ ಸೀತೆಯ ಬಂಗಾರದ ಬೊಂಬೆಯನ್ನು ಜೊತೆಗಿಟ್ಟುಕೊಂಡು ಯಜ್ಞ ಮಾಡಿದ ಶ್ರೀರಾಮನ ವಿಚಾರಧಾರೆಯನ್ನಿಲ್ಲಿ ಕಾಣಬಹುದು. ಮದುವೆಯಾಗುವುದು ಬಿಡುವುದು ಪಾರಮಾರ್ಥಿಕ ಪಥಕ್ಕೆ ಯಾವ ರೀತಿಯಲ್ಲೂ ಸಂಬಂಧವಿಲ್ಲ.

೪. ಲಿಂಗೈಕ್ಯ (ಸಾವಿನ) ಸುದ್ದಿಯನ್ನು ತಿಳಿಸುವ ಪತ್ರದ ನಾಲ್ಕೂ ತುದಿಗಳಿಗೆ ಕಪ್ಪು ಬಣ್ಣ ಹಚ್ಚಿರುವುದು, ಆ ಪತ್ರ ಓದಿದ ನಂತರ ಅದನ್ನು ಹರಿದು ಹಾಕುವುದು ಅಥವಾ ಸುಡುವುದು, ಸಾವಿನ ಸುದ್ದಿಯನ್ನು ಪತ್ರ ಓದಿದ ತಕ್ಷಣ ಮನೆಯ ಮಂದಿ ಸ್ನಾನ ಮಾಡುವುದು ಕೆಲವು ಕಡೆ ಪ್ರಚಲಿತವಿದೆ. ಇವೆಲ್ಲ ತಪ್ಪು ಆಚರಣೆ, ಸಾವು ಸೂತಕ ಎಂಬ ಭ್ರಾಂತಿ, ವೈದಿಕ ಧರ್ಮದ ಪ್ರಭಾವ ಇದು. ಎಲ್ಲೋ ಯಾರೋ ಎಂದೋ ಸತ್ತ ಮಾತ್ರಕ್ಕೆ ಸುದ್ದಿ ಕೇಳಿ ಸ್ನಾನ ಮಾಡುವುದು ಮೂರ್ಖ ನಂಬಿಕೆ ಅಷ್ಟೇ.

೫. ಪ್ರತಿ ಊರುಗಳಲ್ಲಿಯೂ ಕೈವಲ್ಯ ಮಂಟಪ, ಮುಕ್ತಿ ಮಂಟಪಗಳನ್ನು ಸಿದ್ಧಪಡಿಸಿ ಇಟ್ಟುಕೊಂಡು ಶವಸಂಸ್ಕಾರಕ್ಕೆ ಕೊಡುವುದು ಒಳ್ಳೆಯದು. ದಾನಿಗಳು ತಮ್ಮ ಖರ್ಚಿನಲ್ಲಿ ಮಾಡಿಸಿ ದಾನವಾಗಿ ಮಠಗಳಿಗೆ, ಗುಡಿಗಳಿಗೆ ಕೊಟ್ಟಿರಬೇಕು.

೬. ಸಹಧರ್ಮಿಯರು ಸತ್ತಾಗ ಮನೆಗೊಬ್ಬರಂತೆ ಶವಯಾತ್ರೆಯಲ್ಲಿ ಪಾಲುಗಾರರಾಗಬೇಕು. ತಪ್ಪಿದರೆ ಸಾಮಾಜಿಕವಾಗಿ ದಂಡಶುಲ್ಕ ಹಾಕಿ, ವಸೂಲಿ ಮಾಡಬೇಕು.

ಶವವಾಹಕಗಳ ಬಗೆಗಳು

ಸ್ಮಶಾನಕ್ಕೆ ಶವವನ್ನು ಕೊಂಡೊಯ್ಯುವ ವಾಹಕಗಳಲ್ಲಿ ಹಲವಾರು ಬಗೆಗಳಿವೆ.

೧. ಪಾಟು (ಹಾಸು)
೨. ಸಿದಿಗೆ ಅಥವಾ ಚಟ್ಟ
೩. ಕೈವಲ್ಯ ಮಂಟಪ
೪. ಮುಕ್ತಿ ಮಂಟಪ,

ಇವುಗಳ ಚಿತ್ರಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಸಮಾಜದ ಪರವಾಗಿ 'ಕೈವಲ್ಯ ಮಂಟಪ ಇಲ್ಲದಿದ್ದರೆ ಬಡಗಿಗೆ ಹೇಳಿ ಬಿದಿರು-ಬೊಂಬುಗಳ ನೆರವಿನಿಂದ ಮಂಟಪ ಮಾಡಿಸಬೇಕು.

ಪಾಟು (ಹಾಸು)
೧. ಪಾಟು(ಹಾಸು):

ಮಲಗಿಸಿಕೊಂಡು ಒಯ್ಯುವ ಸಂಪ್ರದಾಯ ಲಿಂಗಾಯತ ಧರ್ಮದಲ್ಲಿ ಇಲ್ಲ. ಸತ್ತ ವ್ಯಕ್ತಿ ಬಹಳಷ್ಟು ಕಾಲ ಕಾಯಿಲೆಯಿಂದ ನರಳಿ, ಅಶಕ್ತನಾಗಿದ್ದರೆ, ಆಗ ಕೂರಿಸಲು ಬರುವುದಿಲ್ಲವಾದ ಕಾರಣ ಹಾಸನ್ನು ಸಿದ್ಧಪಡಿಸಲಾಗುತ್ತದೆ.

ಗೋಣಿಯ ತಾಟಿನ ಚೀಲವನ್ನು ಬಿಚ್ಚಿ, ಎರಡು ಚೀಲಗಳನ್ನು ಎರಡು ಪದರಗಳನ್ನೂ ಸೇರಿಸಿ, ಎರಡೂ ತುದಿಗಳಿಗೆ ಉದ್ದವಾದ ಕಟ್ಟಿಗೆ ತುಂಡು ತೂರಿಸಲಾಗುತ್ತದೆ. ಶವವನ್ನು ಮಧ್ಯೆ ಇಟ್ಟು, ನಾಲ್ಕು ಜನರು ಹೊರುವರು. ತಲೆ ಕುಸಿಯದಂತೆ ಒಬ್ಬರು ಗೋಣಿಚೀಲದ ಕೆಳಗೆ ಕೈಕೊಟ್ಟು ತಲೆಯನ್ನು ಎತ್ತಿಹಿಡಿಯುವರು.

ಸಿದಿಗೆ ಅಥವಾ ಚಟ್ಟ
೨. ಸಿದಿಗೆ ಅಥವಾ ಚಟ್ಟ

ಅನಾಥರು-ವಾರಸುದಾರರಿಲ್ಲದ ಅಪರಿಚಿತರ ಶವ ಒಯ್ಯಲು ಚಟ್ಟ ಅಥವಾ ಸಿರಿಗೆಯನ್ನು ಮಾಡುವರು. ಒಂಭತ್ತು ಅಡಿ ಉದ್ದದ ಎರಡು ಬೊಂಬು ತೆಗೆದುಕೊಂಡು ಮೂರು ಅಡಿ ಅಗಲದ ಹಾಸನ್ನು ಸಿದ್ಧಪಡಿಸುವಂತೆ ಮೂರೂವರೆ ಅಡಿಯ ಮೂರು ಕಟ್ಟಿಗೆ (ಬೊಂಬಿನ ತುಂಡನ್ನು ಅತ್ತ ಇತ್ತ ಮಧ್ಯೆ ಕಟ್ಟಿ, ಉದ್ದವಾದ ಬಿದಿರನ್ನು ಹೆಣೆದು ಈ ಚಟ್ಟ ಸಿದ್ಧಪಡಿಸುವರು. ಕೆಲವೊಮ್ಮೆ ಶವಗಳು ಛಿದ್ರವಾಗಿದ್ದು ಅಥವಾ ಸೆಟೆದುಕೊಂಡಿದ್ದು ಕುಳ್ಳಿರಿಸಲು ಬರದೆ ಇರುವ ಸನ್ನಿವೇಶದಲ್ಲಿ ಈ ಚಟ್ಟಗಳು ಶವಗಳನ್ನು ಮಲಗಿಸಿ ಒಯ್ಯಲು ನೆರವಾಗುತ್ತವೆ. ಚಿಕ್ಕಮಕ್ಕಳ ಶವಗಳನ್ನು ಚಾಪೆಯಲ್ಲಿ ಸುತ್ತಿ ಮುಂಚಾಚಿದ ಅಂಗೈಗಳಲ್ಲಿ ಇರಿಸಿಕೊಂಡು ಒಯ್ಯಲಾಗುವುದು.

ಕೈವಲ್ಯ ಮಂಟಪ
೩. ಕೈವಲ್ಯ ಮಂಟಪ.

ಆರ್ಥಿಕವಾಗಿ ಇದು ಹೆಚ್ಚು ವೆಚ್ಚದಾಯಕವಾದುದರಿಂದ ಮಧ್ಯಮ ವರ್ಗದವರು ಇದನ್ನು ಮಾಡಿಸುವರು. ಸುಮಾರು ಆರು ಅಡಿ ಉದ್ದದ ಎರಡು ಬೊಂಬು (ಅಥವಾ ಗಟ್ಟಿಮುಟ್ಟಾದ ಸರ್ವೆಮರ) ತೆಗೆದುಕೊಂಡು ಎರಡರ ಮಧ್ಯೆ ಮೂರೂವರೆ ಅಡಿ ಅಂತರವಿಟ್ಟು ಸೀಳುಬಿದಿರುಗಳನ್ನು ಬಡಿಯಲಾಗುವುದು. ಇದರ ಮೇಲೆ ಬಟ್ಟೆಯ ಪದರುಗಳನ್ನು ಹಾಸಬಹುದಾಗಿದೆ. ಮುಂದೆ ಒಂದೂವರೆ ಅಡಿ, ಹಿಂದೆ ಒಂದೂವರೆ ಅಡಿ ಬೊಂಬನ್ನು ಹೊರಲಿಕ್ಕೆ ಬಿಟ್ಟು ಮೂರು ಅಡಿ ಸ್ಥಳದಲ್ಲಿ ಈ ಆಸನ ಸ್ಥಳ ಸಿದ್ಧವಾಗುತ್ತದೆ. ಹಿಂಬದಿಗೆ ಎರಡು ಬಿದಿರುಗಳನ್ನು ನಿಲ್ಲಿಸಲಾಗುವುದು. ಅವಕ್ಕೆ ಅಡ್ಡಪಟ್ಟಿ ಸಹ ಸೀಳು ಬಿದಿರಿನಲ್ಲಿ ಬಡಿಯಲಾಗುವುದು. ಹಿನ್ನೆಲೆಯಲ್ಲಿ ಹೂವಿನ ಅಲಂಕಾರ ಮಾಡಲಿಕ್ಕೆ ಈ ಬಿದಿರಿನ ತೆರೆ ಸಹಾಯಕವಾಗುವುದು. ಮುಂದಿನ ಕೋಲುಗಳು ಮತ್ತು ಹಿಂದಿನ ನೆಟ್ಟನೆ ನಿಂತ ಬಿದಿರುಗಳನ್ನು ಸೇರಿಸಿ ತೆಂಗಿನ ಹುರಿಯನ್ನು ಬಿಗಿಯಲಾಗುವುದು. ಹಿಂಭಾಗದಲ್ಲಿ ಕಮಾನಿನ ಆಕಾರದಲ್ಲಿದ್ದು ಕಟ್ಟಲ್ಪಟ್ಟ ಬಿದಿರಿನ ಪರದೆಗೆ ಹೂವುಗಳಿಂದ, ಬಣ್ಣ ಬಣ್ಣದ ಕಾಗದಗಳಿಂದೆಲ್ಲ ಅಲಂಕಾರ ಮಾಡಬಹುದು. ಕಮಾನಿನ ಮಧ್ಯೆ ಇರುವ ಬಿದಿರಿನ ನೆಟ್ಟನೆಯ ಕೋಲಿನ ತುದಿಯಲ್ಲಿ ಬಸವ ಮಂತ್ರ ಸಹಿತ ಷಟ್ಕೋನ ಧ್ವಜವನ್ನು ಹಾರಿಸಬೇಕು.

ಮುಕ್ತಿ ಮಂಟಪ ಮುಕ್ತಿ ಮಂಟಪ

೪. ಮುಕ್ತಿ ಮಂಟಪ

ಆರ್ಥಿಕ ಸ್ಥಿತಿ ಚೆನ್ನಾಗಿದ್ದು ಇನ್ನೂ ಹೆಚ್ಚಿನ ಖರ್ಚು ಮಾಡುವ ಸಾಮರ್ಥ್ಯವಿದ್ದವರು ಇನ್ನೂ ಸುಂದರವಾದ ಮಂಟಪವನ್ನೇ ಮಾಡಿಸಬಹುದು. ಕೇವಲ ಒಬ್ಬ ವ್ಯಕ್ತಿಗಾಗಿ ಮಂಟಪಮಾಡಿ ಹಣ ವ್ಯರ್ಥಮಾಡುವುದಕ್ಕಿಂತಲೂ ಸಮಾಜದ ಪರವಾಗಿ ಗಟ್ಟಿಮುಟ್ಟಾದ ಸುಂದರ 'ಮುಕ್ತಿಮಂಟಪ' ಮಾಡಿಸಿಟ್ಟು ಉಪಯೋಗಿಸಿಕೊಳ್ಳುವುದು ಯೋಗ್ಯವಾದುದು.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.

ಪರಿವಿಡಿ (index)
Previous ವಿಭೂತಿ ವೀಳ್ಯ ಲಿಂಗೈಕ್ಯ ಸಂಸ್ಕಾರ Next