Previous ವಸ್ತು- ಶುದ್ದೀಕರಣ ಗೃಹ ನಿರ್ಮಾಣ ಮತ್ತು ಗುರು ಪ್ರವೇಶ. Next

ಶುದ್ದೀಕರಣ-ವ್ಯಕ್ತಿ (ಪಶ್ಚಾತ್ತಾಪ-ಪ್ರಾಯಶ್ಚಿತ್ತ)

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ವಸ್ತು- ಶುದ್ದೀಕರಣ


ಮಾನವ ತನ್ನ ಪ್ರಾಕೃತಿಕ ಗುಣ-ಸ್ವಭಾವಗಳಿಂದಾಗಿ ಕೆಲವೊಂದು ತಪ್ಪನ್ನು ಮಾಡುತ್ತಾನೆ. ನೀತಿ-ಶಾಸ್ತ್ರ, ಧರ್ಮಶಾಸ್ತ್ರ ಒಪ್ಪದೆ ಇರುವ ಕೆಲವೊಂದು ಕೆಲಸಗಳನ್ನು ಮಾಡುತ್ತಾನೆ. ಇನ್ನಿತರರ ಒತ್ತಡದಿಂದಲೋ, ಕಾನೂನಿನ ಭಯದಿಂದಲೋ, ಆಂತರಿಕ ಪಶ್ಚಾತ್ತಾಪದಿಂದಲೋ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಬಯಸಿ ಕ್ಷಮೆ ಕೋರುತ್ತಾನೆ. ಅಂಥ ವ್ಯಕ್ತಿಗೆ ಕ್ಷಮೆ ನೀಡಿ, ಪಾಪ ಪ್ರಜ್ಞೆಯಿಂದ ಅವನನ್ನು ಮುಕ್ತಗೊಳಿಸಿ, ಒಳ್ಳೆಯ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡುವುದು ಅತ್ಯವಶ್ಯಕ. ಬಸವಾದಿ ಪ್ರಮಥರು ಈ ಬಗ್ಗೆ ನೇರವಾದ ಪ್ರಸ್ತಾಪ ಮಾಡಿರದಿದ್ದರೂ ಅವರ ವಿಚಾರಧಾರೆಯ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ಉಂಟು.

೧. ಎಲವೊ ಎಲವೋ ಪಾಪ ಕರ್ಮವ ಮಾಡಿದವನೆ ?
ಎಲವೊ ಎಲವೋ ಬ್ರಹ್ಮಹತ್ಯವ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ !
ಒಮ್ಮೆ ಶರಣೆಂದಡೆ ಪಾಪ ಕರ್ಮ ಓಡುವುವು
ಸರ್ವ ಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದಾವು
ಓರ್ವಂಗೆ ಶರಣೆನ್ನು, ನಮ್ಮ ಕೊಡಲ ಸಂಗಮದೇವರಿಗೆ !


೨. ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ
ಕಹಿ ಸೋರೆಯ ಕಾಯ ತಂದು ವಿಭೂತಿಯ ತುಂಬಿದಡೆ
ಸಿಹಿಯಾಗದೆ ಮೂರು ದಿವಸಕ್ಕೆ ?
ಹಲವು ಕಾಲ ಕೊಂದ ಸೆನೆಗಾರನ ಕೈಯ ಕತ್ತಿಯಾದಡೇನು
ಪರುಷ ಮುಟ್ಟಲಿಕೆ ಹೊನ್ನಾಗದೆ ?
ಲಲಾಟದಲ್ಲಿ ವಿಭೂತಿ ಬರಲಿಕೆ (ಬರೆಯಲಿಕೆ)
ಪಾಪ ಪಲ್ಲಟವಾಗದೆ ಕೂಡಲಸಂಗಮದೇವಾ?

ಬರಲಿಕೆ-ಬರೆಯಲಿಕೆ ಎರಡೂ ಪಾಠಾಂತರಗಳಿವೆ. ವಿಭೂತಿ ಬರಲಿಕೆ ಎಂದರೆ ವ್ಯಕ್ತಿಯ ಅಂತರಂಗದಲ್ಲಿ ಪಶ್ಚಾತ್ತಾಪ ಉಂಟಾಗಿ, ಮಾನಸಾಂತರ ಪ್ರಾಪ್ತಿಯಾಗಿ ಅವನ ಹಣೆಯ ಮೇಲೆ ಧರ್ಮಲಾಂಛನವಾದ ವಿಭೂತಿ ಕಾಣಿಸಿಕೊಳ್ಳುವುದು, ಹಣೆಯ ಮೇಲೆ ವಿಭೂತಿ ಗೆರೆ ಕಂಡರೆ ಒಳಗೆ ಪರಿವರ್ತನೆ ಆರಂಭವಾಗಿದೆ ಎಂದರ್ಥ.

'ಬರೆಯಲಿಕೆ' ಎಂದರೆ ಗುರುವು ವಿಭೂತಿಯನ್ನು ಹಣೆಯ ಮೇಲೆ ಬರೆಯುವನು. ಗುರುವಿನ ಕೃಪೆ ಹೀಗೆ ಹರಿಯುತ್ತಲೇ ಪೂರ್ವಕರ್ಮ ನಿವೃತ್ತಿಯಾಗಿ ಪಾಪವು ಪಲ್ಲಟವಾಗುವುದು, ಪಲಾಯನಗೊಳ್ಳುವುದು ಎಂದರ್ಥ.

೩. ಬಂದ ಯೋನಿಯನರಿದು ಸಲಹೆನ್ನ ತಂದೆ.

೪. ಕೂಡಲ ಸಂಗಮದೇವಾ, ನೀನೆನ್ನಲ್ಲಿ ಸದ್ಗುಣವನರಸುವುದೆ ?

೫. ವಾರುವ ಮುಗ್ಗಿದಡೆ ಮಿಡಿಯ ಹರಿಯಹೊಯ್ದರೆ ? ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು. ನಿನ್ನ ನೀ ಸಂಹರಿಸಿ ಕೈದುವ ಕೊಳ್ಳಿರಣ್ಣಾ. -ಅಕ್ಕಮಹಾದೇವಿ

ಈ ಎಲ್ಲ ಉಕ್ತಿಗಳು ಮಾನವನಲ್ಲಿರುವ ದೌರ್ಬಲ್ಯವನ್ನು ಗುರುತಿಸಿ, ಅದರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತವೆ. ಗೆರೆ ಕೊರೆದಂತೆ ಮನುಷ್ಯನನ್ನು ಅಳೆದು ಅವನನ್ನು ನಿಕೃಷ್ಟವಾಗಿ ಕಾಣಬಾರದು. ಯುದ್ಧದಲ್ಲಿ ಓಡುವಾಗ ಕುದುರೆ ಮುಗ್ಗುರಿಸುವುದು, ಕೈಯೊಳಗಣ ಆಯುಧ ಜಾರುವುದು. ಕುದುರೆಯು ಮೇಲೆದ್ದು ಸುಧಾರಿಸಿಕೊಂಡು ಓಡಲು ಅವಕಾಶ ಕೊಡಬೇಕು, ಮುಗ್ಗುರಿಸಿದ ತಕ್ಷಣ ಅದರ ಕಾಲನ್ನೇ ಕಡಿಯಬಾರದು. ಬಿದ್ದ ಆಯುಧವನ್ನೂ ಮೇಲೆತ್ತಿಕೊಂಡು ಪುನಃ ಹೋರಾಡಬೇಕು.

ಪವಿತ್ರ ಚೇತನಗಳಾಗಿ ಬಾಳಿ ಬೆಳಗಿದ ಶರಣರು ಅಂಗವಿಡಿದವಂಗೆ ಲಿಂಗಪ್ರಸಾದವಲ್ಲದೆ, ಲಿಂಗದೇಹಿಗೆ ಲಿಂಗಪ್ರಸಾದ ಅಗತ್ಯವಿದೆಯೆ ಎಂಬ ದೃಷ್ಟಿಕೋನ ಹೊಂದಿರುವುದು ನಮ್ಮನ್ನು ಬೆರಗುಗೊಳಿಸುತ್ತದೆ. ಪಾಪಿಗಳನ್ನು ಕುರಿತು ಇದ್ದ ಸಹಾನುಭೂತಿ ಪಶ್ಚಾತ್ತಾಪಕ್ಕೆ ಅವಕಾಶ ತೆರೆಯುತ್ತದೆ.

ಪ್ರಾಯಶ್ಚಿತ್ತ:

ಮಾಡಿದ ತಪ್ಪಿಗೆ ಕ್ಷಮೆ ಕೇಳುವ ವಿಧಾನವೇ ಪ್ರಾಯಶ್ಚಿತ್ತ. ಇದು ಯಾಂತ್ರಿಕವಾಗಿದ್ದರೆ ಏನೂ ಪ್ರಯೋಜನವಿಲ್ಲ. ಯಾವುದೋ ತಪ್ಪಾಯಿತು ಎಂದು ಹಲವಾರು ತೀರ್ಥಕ್ಷೇತ್ರ ದರ್ಶನ ಕಾಡುಮೇಡು ಅಲೆದಾಟ, ಯಜ್ಞ ಮಾಡುವುದು, ವಸ್ತುಗಳನ್ನು ದಾನವಾಗಿ ಕೊಡುವುದು ಇವೆಲ್ಲ ಬಹಳ ಕೃತಕವೆನಿಸುತ್ತವೆ. ಇಲ್ಲೆಲ್ಲ 'ತನ್ನನ್ನು ಒಳಗೊಳಿಸದೆ, ಬರೀ ತನ್ನದಾದ ವಸ್ತುಗಳನ್ನು ಅದೂ ಹೊರಗಿನ ವಸ್ತುಗಳನ್ನು ಕೊಟ್ಟು ಪಾಪವನ್ನೂ ಬಿಡುಗಡೆ ಮಾಡಿಕೊಳ್ಳುವ ಹಗರಣ ಇರುತ್ತದೆ ಅಷ್ಟೆ. ಇಂಥ ಪ್ರಾಯಶ್ಚಿತ್ತಕ್ಕೆ ಹೊನ್ನಿನ ಪರ್ವತಗಳಾದರೂ ಸಾಲವು. ಇದು ಶ್ರೀಮಂತರಲ್ಲಿ ಆಡಂಬರ ಪ್ರದರ್ಶನವಾದರೆ ಬಡವರಿಗೆ ಸಾಲದ ಶೂಲವಾಗುತ್ತದೆ.

'ಸದಾಚಾರ ಸದ್ಭಕ್ತಿ ಇಲ್ಲದವರನೊಲ್ಲ
ಅವರಾರಾಧನೆ ದಂಡ
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನೊಲ್ಲ
ಕೂಡಲಸಂಗಮದೇವಾ, ಭೂಭಾರಕರ.”

ಕೈಗೊಳ್ಳುವ ಪ್ರಾಯಶ್ಚಿತ್ತವು ಪಶ್ಚಾತ್ತಾಪದ ತಳಹದಿಯ ಮೇಲೆ ನಿಂತಾಗ ಅದು ಪರಿಣಾಮವನ್ನು ಬೀರುವುದು. ಪಶ್ಚಾತ್ತಾಪದಲ್ಲಿ ದೇವರನ್ನು ಕುರಿತು ಶರಣಾಗತಿ ಇರುತ್ತದೆ. ಹೃತ್ಪೂವ೯ಕವಾದ ಕ್ಷಮಾ ಯಾಚನೆ ಇರುತ್ತದೆ. ಮುಂದೆ ಆ ತಪ್ಪನ್ನು ಪುನಃ ಮಾಡಬಾರದೆಂಬ ಕಳಕಳಿ ಇರುತ್ತದೆ. ಪ್ರಾಯಶ್ಚಿತ್ತದಲ್ಲಿ ಹೊರಗಿನ ಒತ್ತಡವೋ ಅಥವಾ ಶ್ರೀಮಂತಿಕೆಯ ಪ್ರದರ್ಶನವೋ ಇರಬಹುದು.
ಅಂತರಂಗದ ಪಶ್ಚಾತ್ತಾಪವು ಪ್ರಾಯಶ್ಚಿತ್ತ ರೂಪದಲ್ಲಿ ವ್ಯಕ್ತವಾದಾಗ ಮಾತ್ರ ಅದು ಅರ್ಥಪೂರ್ಣವಾಗಿರುತ್ತದೆ; ಇಲ್ಲವಾದರೆ ಯಾಂತ್ರೀಕೃತವಾಗುತ್ತದೆ.

ಒಮ್ಮೆ ಉತ್ತರ ಭಾರತದೊಂದು ಕುಟುಂಬ ಕಂಗಾಲಾಗಿ ಬಂದಿತ್ತು ಅವರ ಮನೆಯವರು ಯಾರೋ ಪ್ರಾಣಿಹತ್ಯೆ (ಗೋಹತ್ಯೆ ಇರಬೇಕು; ನನಗೆ ಮರೆತು ಹೋಗಿದೆ) ಮಾಡಿ ಅದರ ಪರಿಹಾರಕ್ಕೆ ಜ್ಯೋತಿಷಿಯನ್ನು ಕೇಳಿದರು. ಆತ ಕಾಶ್ಮೀರದಿಂದ ಹಿಡಿದು ರಾಮೇಶ್ವರದವರೆಗಿನ ತೀರ್ಥಕ್ಷೇತ್ರದರ್ಶನ ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೇಳಿದ್ದ. ಟ್ರ್ಯಾಕ್ಟರ್ ಕೊಳ್ಳಲು ಮಾಡಿದ್ದ ಸಾಲದ ಹಣ ತೆಗೆದುಕೊಂಡು ಅವರು ತೀರ್ಥಕ್ಷೇತ್ರ ಸಂದರ್ಶನ ಮಾಡಲು ಬಂದು ಪಡಬಾರದ ಯಾತನೆ ಪಟ್ಟಿದ್ದರು. ಶ್ರೀಮಂತರು ಇಂಥಾ ಪ್ರಾಯಶ್ಚಿತ್ತಗಳನ್ನು ಸುಲಭವಾಗಿ ಮಾಡಿಕೊಳ್ಳುವರು, ಅದರೆ ಬಡವರಿಗೆ ಇದೇ ಒಂದು ಪಾಪದ ಹೊರೆಯಾಗುತ್ತದೆ. ಪಶ್ಚಾತ್ತಾಪವನ್ನು ೩ ರೀತಿಯಲ್ಲಿ ತೋರ್ಪಡಿಸಬಹುದು.

೧. ವೈಯಕ್ತಿಕ ಮತ್ತು ಆಂತರಂಗಿಕ,

ತಾನು ಮಾಡಿದ್ದು ಅನುಚಿತ, ಅನೈತಿಕ, ಧರ್ಮವಿರೋಧಿ ಎಂದು ತಿಳಿದಾಗ ವ್ಯಕ್ತಿಯು ತನ್ನೊಳಗೆ ಪಶ್ಚಾತ್ತಾಪಪಟ್ಟು ಧರ್ಮಗುರುವಿನಲ್ಲಿ, ದೇವರಲ್ಲಿ ಕ್ಷಮೆ ಕೇಳಿಕೊಳ್ಳುವುದು. * ತೀವ್ರವಾಗಿ ಪರಿತಾಪಪಟ್ಟು ತನ್ನ ಆತ್ಮಶುದ್ದಿ (Self-purification) ಗಾಗಿ ಉಪವಾಸ, ಪೂಜೆ, ಜಪ, ಧ್ಯಾನ ಮಾಡುವುದು. ತಪ್ಪು ಮಾಡಿದ ದೇಹಮನಸ್ಸುಗಳನ್ನು ಸ್ವಂತ ಇಚ್ಛೆಯಿಂದ ಶಿಕ್ಷಿಸುವುದು. ಇದು ಹೊರಗಿನವರಿಗೆ ತಿಳಿಯದು. ತನಗಷ್ಟೆ ವಿದಿತವಾಗಿರುವುದು. ಈ ಮೂಲಕ ಪಾಪ ಪ್ರಜ್ಞೆಯನ್ನು ನಿವಾರಿಸಿಕೊಳ್ಳುವುದು.

೨. ಗುರು-ಹಿರಿಯ-ಜಂಗಮರ ಮುಂದೆ ವ್ಯಕ್ತಪಡಿಸುವುದು.

ತಪ್ಪು ಮಾಡಿದ ವ್ಯಕ್ತಿಯು ಮಾನಸಿಕ ತುಮುಲದಲ್ಲಿ ಸಿಕ್ಕಿಬಿದ್ದಿರುತ್ತಾನೆ. ಪಾಪಪ್ರಜ್ಞೆ ಕಾಡುವುದರಿಂದ ಶಾಂತಿಯಿಲ್ಲದೆ ತೊಳಲಾಡುತ್ತಾನೆ. ಇಂಥ ಸಮಯದಲ್ಲಿ ನಿಜವಾದ ಗುರುಗಳು, ತನ್ನ ಹಿತಚಿಂತಕರಾದ ಹಿರಿಯರು, ಜ್ಞಾನಿಗಳಾದ ಜಂಗಮರ ಮುಂದೆ ನಡೆದ ಘಟನೆ, ಮಾಡಿದ ತಪ್ಪು ವಿವರಿಸಿ, ಕ್ಷಮೆ ಕೇಳಿಕೊಳ್ಳಬೇಕು. ವೈದ್ಯರು ಹೇಗೆ ರೋಗಿಗಳ ರೋಗದ ಬಗ್ಗೆ ರಹಸ್ಯ ಕಾಪಾಡಿಕೊಂಡು, ಇನ್ನಿತರರಿಗೆ ಪ್ರಚುರಪಡಿಸಿ, ಹಾದಿಬೀದಿಯ ವಸ್ತುವನ್ನಾಗಿ ಮಾಡರೋ ಅದೇ ರೀತಿ ಗುರು-ಜಂಗಮರು ವಿವೇಕದಿಂದ ವರ್ತಿಸಬೇಕು. ವ್ಯಕ್ತಿಯು ಅಭಿವ್ಯಕ್ತಗೊಳಿಸಿದ್ದನ್ನೆಲ್ಲ, ಇನ್ನಿತರರ ಮುಂದೆ ಆಡಿಕೊಳ್ಳಬಾರದು. ಆ ವ್ಯಕ್ತಿಗೆ ಪ್ರಾಯಶ್ಚಿತ್ತವಾಗಿ ಇಷ್ಟಲಿಂಗಾರ್ಚನೆ, ಬಸವೇಶ್ವರ ಪೂಜಾವ್ರತ, ಧರ್ಮಗ್ರಂಥದ ಅಧ್ಯಾಯ ಪಠಣ, ಗುರು ಅಥವಾ ದೇವಮಂತ್ರ ಜಪ ಮುಂತಾದುವನ್ನು ವಿಧಿಸಿ, ವ್ಯಕ್ತಿಯು ಪೂರೈಸಿದಾಗ ಅವನಿಗೆ ಭಸ್ಮಧಾರಣೆ ಮಾಡಿ, ಆಶೀರ್ವದಿಸಿ, ಕರುಣ ಪ್ರಸಾದವನ್ನು ಕರುಣಿಸಬೇಕು. ಇಂಥ ಶುದ್ದೀಕರಣದಿಂದ ವ್ಯಕ್ತಿಯಲ್ಲಿರುವ ಪಾಪ ಪ್ರಜ್ಞೆ ತೊಲಗಿ ಹೋಗುತ್ತದೆ. ಕ್ರೈಸ್ತ ಧರ್ಮಿಯರಲ್ಲಿ ತಪ್ಪೋಪ್ಪಿಗೆ (Confession) ಎಂಬ ಧಾರ್ಮಿಕ ವಿಧಿಯಿದೆ. ಇದರ ಉದ್ದೇಶವು ವ್ಯಕ್ತಿಯಲ್ಲಿ ಹೊಕ್ಕ ಪಾಪ ಪ್ರಜ್ಞೆಯನ್ನು ನಿವಾರಿಸಿ ಅವನ ಮುಂಬಾಳಿಗೆ ಬೆಳಕು ತೋರುವುದೇ ಆಗಿದೆ.

೩. ಸಾರ್ವಜನಿಕ ಪ್ರಾಯಶ್ಚಿತ್ತ:

ಇದು ಸಿಖ್ ಸಮಾಜದಲ್ಲಿ ಜೀವಂತವಾಗಿದೆ. ವ್ಯಕ್ತಿಯ ವೈಯಕ್ತಿಕ ಸಂಗತಿಗಳನ್ನು ಈ ವಿಧಿಯಲ್ಲಿ ಗಣಿಸದೆ ಸಾಮಾಜಿಕ-ತಾತ್ವಿಕ ವಿಷಯಗಳನ್ನು ಪ್ರಧಾನ ಕಾರಣವಾಗಿಟ್ಟುಕೊಳ್ಳಬೇಕು. ವ್ಯಕ್ತಿಯು ಅರಿತೋ ಅರಿಯದೆಯೋ ಮಾಡಿದ ತಪ್ಪನ್ನು ಬಹಳ ಪ್ರಚಾರ ಪಡಿಸದೆ ಅವನು ಪ್ರಾಯಶ್ಚಿತ್ತ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ೭ನೆಯ ಅಂಶದಲ್ಲಿ ಹೇಳಲಾಗಿದೆ. ಸಾರ್ವಜನಿಕ ಪ್ರಾಯಶ್ಚಿತ್ತದಲ್ಲಿ ರಾಷ್ಟ್ರೀಯ, ತಾತ್ವಿಕ, ಸಾಮಾಜಿಕ ವಿಷಯಗಳನ್ನು ಇರಿಸಿಕೊಳ್ಳಬೇಕು.

ರಾಷ್ಟ್ರೀಯ:

ತನ್ನ ದೇಶದ మిలిటరి ವಿವರಗಳನ್ನೂ ಸರ್ಕಾರದ ಗೋಪ್ಯಗಳನ್ನೂ ಬಹಿರಂಗಪಡಿಸುವುದು, ಲಂಚ ತಿಂದು ರಾಷ್ಟ್ರೀಯ ಅಪರಾಧಗಳನ್ನು ಮುಚ್ಚಿಡುವುದು, ತಳ್ಳಿಹಾಕುವುದು ಮುಂತಾದುವು ರಾಷ್ಟ್ರೀಯ ಪಾಪಗಳು. ಇವುಗಳಿಗಾಗಿ ಸಾರ್ವಜನಿಕವಾಗಿ ಕ್ಷಮೆ ಬೇಡಿ ಸಾರ್ವಜನಿಕವಾಗಿಯೇ ಪಶ್ಚಾತ್ತಾಪ ಪಡಬಹುದು.

ತಾತ್ವಿಕ ದೋಷಗಳು:

ತನ್ನ ಧರ್ಮಕ್ಕೆ ವಿರುದ್ಧವಾದ ನಂಬಿಕೆ ಹೊಂದಿರುವುದು, ಆಚರಣೆ ಮಾಡುವುದು ತಾತ್ವಿಕ ಅಪರಾಧ. ಇದು ತಪ್ಪು ಎಂದು ತಿಳಿದ ಬಳಿಕ ವ್ಯಕ್ತಿಯು ಸಾರ್ವಜನಿಕವಾಗಿಯೇ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸುವ ಸಲುವಾಗಿ ಪ್ರಾಯಶ್ಚಿತ್ತ ಕೈಗೊಳ್ಳಬಹುದು.

ಧರ್ಮಗುರುಗಳ ಸನ್ನಿಧಿಯಲ್ಲಿ, ಗಣ ಸಾಕ್ಷಿಯಾಗಿ ಈ ಪ್ರಾಯಶ್ಚಿತ್ತ ಕ್ರಿಯೆ ನಡೆಯಬೇಕು. ಗುರು ಬಸವಣ್ಣನವರ ಪೂಜೆ-ಲಿಂಗಪೂಜೆ-ಜಂಗಮಪೂಜೆ ಮಾಡಿ, ೧೦೮ ವಚನಗಳನ್ನು ಓದಿ ವ್ಯಕ್ತಿಯು ಕರುಣ ಪ್ರಸಾದವನ್ನು ಪಡೆಯಬೇಕು. ವ್ಯಕ್ತಿಯು ಗಣಸಂಕುಳಕ್ಕೆ ಪ್ರಸಾದವನ್ನು ಆರೋಗಣೆ ಮಾಡಿಸಿ, ಪ್ರಸಾದ ಸ್ವೀಕಾರಕ್ಕೆ ಮೊದಲು ಗಣಸಮೂಹಕ್ಕೆ ಸಾಷ್ಟಾಂಗವೆರಗಬೇಕು.

ಪಾಪಗಳೆಂದು ಯಾವುವನ್ನು ತಿಳಿಯಬೇಕು ? ಇದು ಬಹಳ ಕಷ್ಟಸಾಧ್ಯದ ವಿಚಾರ. ಆದರೂ ಧರ್ಮವು ಯಾವುದನ್ನು ನಿಷೇಧಿಸಿದೆಯೋ ಅದನ್ನು ಪಾಪವೆಂದು ತಿಳಿಯಬೇಕು.

೧. ಪರಸತಿ-ಪರಪುರುಷನಿಗೆ ಎಳೆಸುವುದು. (ಬ.ಷ.ವ ೧೦೬)
೨. ಮಾಂಸಾಹಾರ-ಮದ್ಯಪಾನ ಮಾಡುವುದು. (ಬ.ಷ.ವ ೧೦೬)
೩. ಪರಧನವನ್ನು ನಿಸ್ಸಹಾಯಕರ, ಆಶ್ರಿತರ ಹಣವನ್ನು ಕಬಳಿಸುವುದು. ಮುಗ್ಧರ, ನಂಬಿಕೆ ಇಟ್ಟವರ ಆಸ್ತಿ ಹೊಡೆದುಕೊಳ್ಳುವುದು.
೪. ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದು.
೫. ಇನ್ನೊಬ್ಬರಿಗೆ ಕೆಡುಕಾಗಲೆಂದು ಸುಳ್ಳು ಕಥೆಗಳನ್ನು ಹಬ್ಬಿಸುವುದು.
೬. ಗುರು-ಲಿಂಗ-ಜಂಗಮ ನಿಂದೆ ಮಾಡುವುದು.
೭. ಅತ್ಯಾಚಾರ, ಕಳವು, ಕೊಲೆ, ದರೋಡೆ ಮುಂತಾದುವನ್ನು ಮಾಡಲು ಎಳಸಿರುವುದು; ಮಾಡಿರುವುದು. ಕಳ್ಳಸಾಗಾಣಿಕೆ ಮುಂತಾದ ರಾಷ್ಟ್ರದ್ರೋಹ ಮಾಡುವುದು.
೮. ಕೆಲವು ವೈಯಕ್ತಿಕ ಪಾಪಗಳಿದ್ದರೆ, ಕೆಲವು ಸಾಮಾಜಿಕ ಪಾಪಗಳಿರುತ್ತವೆ. ಅತ್ಯಾಚಾರ-ಕಳವು-ಕೊಲೆ-ದರೋಡೆ ಇವು ದೇಶದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧಗಳಾದ ಕಾರಣ, ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸುವುದು ಸ್ವಾಭಾವಿಕ. ಆದರೆ ವ್ಯಕ್ತಿಯು ಧಾರ್ಮಿಕ ದೃಷ್ಟಿಯಿಂದ ಗುರು-ಹಿರಿಯರು-ಜಂಗಮರ ಮುಂದೆ ತಪ್ಪು ಒಪ್ಪಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸಿ, ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಬಹಳ ಶ್ರೇಷ್ಠವಾದುದು. ಇದರಿಂದ ವ್ಯಕ್ತಿಯಲ್ಲಿ ಆಂತರಂಗಿಕ ಶುದ್ಧಿಯು ಪ್ರಾಪ್ತಿಯಾಗಿ ವ್ಯಕ್ತಿತ್ವವು ಉತ್ತಮವಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ.

ಇಷ್ಟಲಿಂಗ ಕಳೆಯುವಿಕೆ

ದೀಕ್ಷಾವಂತನಾಗಿ ಒಬ್ಬ ವ್ಯಕ್ತಿ ನಿಷ್ಠೆಯಿಂದ ಸಾಧನೆ ಮಾಡುತ್ತಿರುತ್ತಾನೆ. ಒಮ್ಮೆ ಈಜಾಡುವಾಗ ಇಷ್ಟಲಿಂಗ ಜಾರಿ ಬಿದ್ದುಬಿಡುತ್ತದೆ ಎಂದುಕೊಳ್ಳೋಣ. ಆಗ ಜೀವವನ್ನು ಕಳೆದುಕೊಳ್ಳುವುದಾಗಲೀ ಜೀವವನ್ನು ಪಣಕ್ಕಿಟ್ಟು ಅದನ್ನು ಹುಡುಕುವುದನ್ನಾಗಲೀ ಮಾಡಬಾರದು. ಇಷ್ಟಲಿಂಗವು ಈಜಾಡುವಾಗ, ಬೆಳ್ಳಿ ಬಂಗಾರದ ಆಸೆಗೆ ಕಳ್ಳರು ಕಿತ್ತುಕೊಂಡು ಲಿಂಗದ ಸಮೇತ ಕರಡಿಗೆ ಒಯ್ದಾಗ, ಕಳೆದುಹೋದರೆ ಆಗ ಗುರುಗಳ ಕಡೆಯಿಂದ ಪುನಃ ಹೊಸದೊಂದನ್ನು ಅನುಗ್ರಹಪೂರ್ವಕವಾಗಿ ಪಡೆದುಕೊಳ್ಳಬೇಕು.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.

ಪರಿವಿಡಿ (index)
Previous ವಸ್ತು- ಶುದ್ದೀಕರಣ ಗೃಹ ನಿರ್ಮಾಣ ಮತ್ತು ಗುರು ಪ್ರವೇಶ. Next