![]() | ಮದುವೆ ದಿವಸ : ಭಾಗ-೨ ಪೂಜಾವ್ರತ | ಮದುವೆ ದಿವಸ : ಭಾಗ-೪ ಮಾಂಗಲ್ಯ ಧಾರಣೆ | ![]() |
ಮದುವೆ ದಿವಸ |
“ಈ ವರೆಗೂ ಶ್ರೀ ಬಸವೇಶ್ವರ ಪೂಜಾವ್ರತ ಮಾಡಿಸಿರುವ ಶ್ರೀ...... ......... ...... ..........ಅವರನ್ನು ಇಂದಿನ ವಿವಾಹ ಮಹೋತ್ಸವವನ್ನು ನಡೆಸಿಕೊಡಲು ಕ್ರಿಯಾಮೂರ್ತಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಗೆ ಶರಣ ಬಂಧುಗಳಾದ ನಿಮ್ಮೆಲ್ಲರ ಒಪ್ಪಿಗೆ ಇದೆಯೆಂದು ನಂಬುತ್ತೇವೆ”.
ಆಗ ಸಭಿಕರು ಕರತಾಡನ ಮಾಡಿ ಒಪ್ಪಿಗೆ ಸೂಚಿಸಬೇಕು. ವಧು-ವರರ ಪರವಾಗಿ ಒಬ್ಬರು ಕ್ರಿಯಾಮೂರ್ತಿಗೆ ಮಾಲಾರ್ಪಣೆ ಮಾಡಬೇಕು.
ಸ್ವಾಗತ :
ಮದುವೆಯವರ ಪರವಾಗಿ ಒಬ್ಬರು ಸ್ವಾಗತವನ್ನು ಮಾಡಬೇಕು.
“ಮಂತ್ರಪುರುಷ ಬಸವಣ್ಣನವರನ್ನು ಹೃದಯ ಮಂದಿರದಲ್ಲಿ ಸ್ಮರಿಸಿ, ದಿವ್ಯ ಸನ್ನಿಧಿವಹಿಸಿರುವ ಪೂಜ್ಯ ..................................... ಅವರಿಗೆ ವಂದಿಸಿ, ಕ್ರಿಯಾಮೂರ್ತಿಗಳಾದ ......................... ಅವರಿಗೆ ವಂದಿಸಿ, ಇಂದು ನಡೆಯಲಿರುವ ಶರಣ ......................................... ಮತ್ತು ಶರಣೆ ................................ಅವರ ವಿವಾಹಕ್ಕೆ ಆಗಮಿಸಿರುವ ನಿಮ್ಮೆಲ್ಲರನ್ನೂ ಹೃತ್ತೂರ್ವಕವಾಗಿ ಸ್ವಾಗತಿಸುತ್ತೇವೆ. ತಾವು ಸಾವಧಾನ ಚಿತ್ತರಾಗಿ ಕುಳಿತು, ವಧೂವರರನ್ನು ಹರಸಿ ದಾಸೋಹಂ ಭಾವದಿಂದ ನಾವು ಸಲ್ಲಿಸಲಿರುವ ಪ್ರಸಾದವನ್ನು ಆರೋಗಿಸಬೇಕೆಂದು ವಿನಯ ಪೂರ್ವಕವಾಗಿ ಕೋರುತ್ತೇವೆ.
ಈಗ ಕ್ರಿಯಾಮೂರ್ತಿಗಳು ಮುಂದಿನ ಕಾರ್ಯವನ್ನು ಆರಂಭಿಸಬೇಕೆಂದು ಪ್ರಾರ್ಥಿಸುತ್ತೇವೆ.
ದಿವ್ಯ ಸನ್ನಿಧಿ ವಹಿಸಿರುವವರು ಆಶೀರ್ವದಿಸಿ, ಬಸವ ರಕ್ಷೆ (ಕೈಕಂಕಣ)ಯನ್ನು ಮತ್ತು ಬಾಸಿಂಗಗಳನ್ನು ವಧು-ವರರ ಹತ್ತಿರದ ಬಂಧುಗಳ ಕೈಗೆ [2] ಕೊಡುವರು. ಹೆಣ್ಣಿನ ಎಡ ಮುಂಗೈಗೆ, ಗಂಡಿನ ಬಲ ಮುಂಗೈಗೆ ಕಂಕಣ ಕಟ್ಟಲಾಗುವುದು. ಬಂಧುಗಳು ಕೈಗೆ ಕಂಕಣ ಕಟ್ಟುವಾಗ ಕ್ರಿಯಾಮೂರ್ತಿ ಹೀಗೆ ಹೇಳಿ, ವಧು-ವರರ ಕೈಯಿಂದ ಹೇಳಿಸುವನು.
ವಧು :
ಕಂಡುದಕ್ಕೆ ಎಳೆಸೆ ಎನ್ನ ಮನದಲ್ಲಿ
ನೋಡಿ ಸೋಲೆನೆನ್ನ ಕಂಗಳಲ್ಲಿ
ಆಡಿ ಹುಸಿಯನೆನ್ನ ಜಿಹ್ವೆಯಲ್ಲಿ
ಕೂಡಲ ಸಂಗಮ ದೇವಾ,
ನಿಮ್ಮ ಶರಣರ ಪರಿಯಿಂತುಟಯ್ಯ,
“ಜೈ ಗುರು ಬಸವೇಶ ಹರಹರ ಮಹಾದೇವ' ಎಂದು ಎಲ್ಲರೂ ಜಯಘೋಷ ಮಾಡುವರು.
ವರ :
ಧೃತಿಗೆಟ್ಟು ಅನ್ಯರ ಬೇಡದಂತೆ,
ಮತಿಗೆಟ್ಟು ಪರರ ಹೊಗಳದಂತೆ
ಪರಸತಿಯರ ರತಿಗೆ ಮನಹಾರದಂತೆ
ಶಿವಪಥವೊಲ್ಲದವರ ಒಡನಾಡದಂತೆ,
ಅನ್ಯ ಜಾತಿಯ ಸಂಗವ ಮಾಡದಂತೆ
ಎನ್ನ ಪ್ರತಿ ಪಾಲಿಸು, ಕೂಡಲ ಸಂಗಮದೇವಾ,
“ಜೈ ಗುರು ಬಸವೇಶ ಹರಹರ ಮಹಾದೇವ' ಎಂದು ಎಲ್ಲರೂ ಜಯಘೋಷ ಮಾಡಬೇಕು.
ಇದೇ ಸಮಯದಲ್ಲಿ ಆರು ಕಲಶಗಳನ್ನು ಹಿಡಿಯುವ ೬ ಜನ ಮಹಿಳೆಯರಿಗೂ ಕಂಕಣ ಕಟ್ಟಲಾಗುವುದು.
ಸಮೀಪದ ಬಂಧುಗಳು ಬಾಸಿಂಗವನ್ನು ಕಟ್ಟುವರು. ಈಗ ವಧುವರರು ಪೂಜ್ಯರಿಗೆ ನಮಸ್ಕರಿಸುವರು. ಕ್ರಿಯಾಮೂರ್ತಿ ಮುಂದೆ ನಡೆಯುವನು. ಅವರವರ ತಾಯಿತಂದೆಯರು ಅಥವಾ ಆಪ್ತ ಬಂಧುಗಳು ವಧುವರರನ್ನು ಮಂಗಲ ಮಂಟಪದ ಮಧ್ಯಭಾಗಕ್ಕೆ ಕರೆತರುವರು. ಅವರ ಹಿಂದೆ ನಿಲ್ಲುವರು. ಒಂದು ಕರಿಯ ಕಂಬಳಿ ಅಥವಾ ಉತ್ತಮ ರತ್ನಗಂಬಳಿ ಹಾಸಿರಬಹುದು. ಎರಡು ಮಣೆಗಳನ್ನು ಅಥವಾ ಕುರ್ಚಿಗಳನ್ನು ಅಕ್ಕ-ಪಕ್ಕದಲ್ಲಿ ಅಥವಾ ಎದುರು ಬದುರು ಇಡಲಾಗಿದ್ದು, ವಧು-ವರರು ಅದರ ಮೇಲೆ ಕುಳಿತುಕೊಳ್ಳುವರು. ಮೊದಲು ಹೆಣ್ಣು ಬಲಕ್ಕೆ ಗಂಡು ಎಡಕ್ಕೆ ಕೂರುವರು. ಈಗ ಧಾರೆಯ ಕಾರ್ಯಕ್ರಮ. ಮದುವೆಯ ಅತ್ಯಂತ ಮಹತ್ವದ ಅಂಗಗಳೆಂದರೆ (೧) ಕೈಕಂಕಣ ಕಟ್ಟುವಿಕೆ (೨) ಧಾರೆ ಎರೆಯುವಿಕೆ (೩) ದೇವನಾಜ್ಞೆ (ಬ್ರಹ್ಮಗಂಟು) ಕಟ್ಟುವುದು (೪) ಪ್ರತಿಜ್ಞಾ ಸ್ವೀಕಾರ (೫) ಮಾಂಗಲ್ಯಧಾರಣೆ (೬) ಅಕ್ಷತಾರೋಪಣೆ, ಉತ್ತರ ಕರ್ನಾಟಕದ ಈ ಭಾಗದಲ್ಲಿ (ಬಿಜಾಪುರ) ಧಾರೆ ಎರೆಯುವ ಪದ್ಧತಿ ಇಲ್ಲ ಎಂದು ಕೇಳಿ ಆಶ್ಚರ್ಯವಾಯಿತು. ಧಾರೆ ಎರೆದುಕೊಡುವುದು ಎನ್ನುವುದಕ್ಕೆ ವಿಶಿಷ್ಟವಾದ ಮತ್ತು ಮಹತ್ವದ ಅರ್ಥವಿದೆ.
ವಿವಾಹ ವಿಧಿಯು ಷಡಂಗಗಳು
೧. ಕಂಕಣ ಕೈಗೆ ಕಟ್ಟುವುದು : ಇದರಲ್ಲಿ ವಧು-ವರರು ವ್ರತ ಸ್ವೀಕಾರ ಮಾಡಿದಂತೆ.
೨. ಧಾರೆ ಎರೆಯುವಿಕೆ : ಹೆತ್ತವರು ತಮ್ಮ ಮನೆಯ ಆಸ್ತಿಯನ್ನು ಅಳಿಯನಿಗೆ ಒಪ್ಪಿಸಿಕೊಡುವುದು ಇಲ್ಲಿ ಅಭಿವ್ಯಕ್ತವಾಗುವುದು. ಪೂಜೆಯಲ್ಲಿ ನೈವೇದ್ಯ ಮಾಡಿ ಅರ್ಘ್ಯವನ್ನು ಬಿಡುವದಿಲ್ಲವೆ ಹಾಗೆ, “ನಿನ್ನ ಕೈಯಲ್ಲಿ ನನ್ನ ಮಗಳ ಕೈಯಿಟ್ಟು, ಧಾರಾಪೂರ್ವಕವಾಗಿ ಒಪ್ಪಿಸಿದ್ದೇನೆ' ಎಂಬುದರ ಪ್ರತೀಕ.
೩. ದೇವನಾಜ್ಞೆ :ಗುರು-ಲಿಂಗ-ಜಂಗಮ ಸಾಕ್ಷಿಯಾಗಿ ನೀವು ಒಂದಾಗಿದ್ದೀರಿ ಎಂಬಂತೆ ಇಬ್ಬರನ್ನೂ ಸೇರಿಸಿ ಶಲ್ಯ - ಮೇಲು ಸೆರಗಿಗೆ ದೇವನಾಜ್ಞೆ (ಬ್ರಹ್ಮಗಂಟು) ಕಟ್ಟುವುದು.
೪. ಪ್ರತಿಜ್ಞಾ ಸ್ವೀಕಾರ : ಈಗ ವಧುವರರು ಈ ಸಮಾಗಮವನ್ನು ಒಪ್ಪಿಕೊಂಡು ಪ್ರತಿಜ್ಞಾ ಸ್ವೀಕಾರ ಮಾಡುವರು
೫. ಮಾಂಗಲ್ಯ - ಉಂಗುರಧಾರಣೆವರನು ಮಾಂಗಲ್ಯ ಕಟ್ಟುವನು, ವಧುವು ಉಂಗುರ ತೊಡಿಸುವಳು.
೬. ಅಕ್ಷತಾರೋಪಣೆ : ಗುರು-ಹಿರಿಯರು ಈ ದಾಂಪತ್ಯವನ್ನು ಮನ್ನಿಸಿ ಅಕ್ಷತೆಯನ್ನು ಹಾಕುವರು. ಹೀಗೆ ಆರು ಅಂಗಗಳಿಂದ ಶೋಭಿತವಾಗುವ ವಿವಾಹ ಕಾರ್ಯವನ್ನು ವಿದ್ಯುಕ್ತವಾಗಿ ಎಲ್ಲೆಡೆಯಲ್ಲಿ ಮಾಡುವುದನ್ನು ಬಳಕೆಗೆ ತರಬೇಕು. ಯಾವ ಭಾಗದಲ್ಲಿ ಯಾವ ಅಂಶಗಳು ಇಲ್ಲವೋ ಅವನ್ನು ಅಳವಡಿಸಿಕೊಳ್ಳಬೇಕು.
ಧಾರೆಯ ಕ್ರಮ
ವರನ ಕೈಯಲ್ಲಿ ವಧುವಿನ ಕೈಗಳನ್ನು ಇರಿಸಿ, ಅಂಗೈಯ (ತೆಂಗಿನಕಾಯಿ ) ವೀಳೆಯದೆಲೆ-ಅಡಕೆ-ಬಸವ ಮುದ್ರೆ ಇಟ್ಟು ಧಾರೆ ಎರೆಸಬೇಕು. ಬಸವ ಭಾವಚಿತ್ರದ ಮುಂದಿರುವ ಬಸವ ತೀರ್ಥ ಧಾರೆಯನ್ನು ಮೊದಲು ಜಂಗಮ ಮೂರ್ತಿಯ ಕೈಯಲ್ಲಿ ಮುಟ್ಟಿಸಬೇಕು. (ಈಗ ನಡೆದು ಬಂದಿರುವ ಪ್ರಥವೆಂದರೆ ಎಲೆ-ಅಡಕೆ, ನಾಣ್ಯ, ತೆಂಗಿನಕಾಯಿ ಇಟ್ಟಿರುತ್ತಾರೆ. ಧಾರೆ ಎರೆಯಲು ಏನಾದರೂ ಬೇಕು ಎಂದು ತೆಂಗಿನಕಾಯಿ ಇಡುವ ಪರಿಪಾಠ ಬೆಳೆದು ಬಂದಿರಬಹುದು. ಅದು ಬಹಳ ಭಾರವಾದ ವಸ್ತು. ಜಡ ತೆಂಗಿನಕಾಯನ್ನು ಸಾಕ್ಷಿಯಾಗಿ ಇರಿಸಿಕೊಳ್ಳುವುದಕ್ಕಿಂತಲೂ ಶ್ರೀ ಗುರು ಬಸವಣ್ಣನವರ ಮುದ್ರೆಯನ್ನು ಸಾಕ್ಷಿಯಾಗಿ ಇರಿಸಿಕೊಳ್ಳುವುದು ಶ್ರೇಯಸ್ಕರ.) ವಧುವಿನ ತಾಯಿತಂದೆಯರು, ಸಮೀಪದ ಬಂಧು ಬಳಗದವರು ಬಂದು ಒಂದು ನಾಣ್ಯವನ್ನು ಇಟ್ಟು ಒಬ್ಬರಾದ ಮೇಲೆ ಒಬ್ಬರು ಧಾರೆ ಎರೆಯಬೇಕು. ಆ ರೀತಿ ಸಂಗ್ರಹವಾದ ನಾಣ್ಯಗಳನ್ನು ಕ್ರಿಯಾಮೂರ್ತಿಗೆ ಕೊಡಬೇಕು.
ಧಾರೆ ಎರೆಯುವಾಗ ಮೊಟ್ಟ ಮೊದಲು ವಧುವಿನ ತಂದೆ ಹೇಳುತ್ತಾನೆ:
ನನ್ನ ಮಗಳಾದ ಶರಣೆ ......................................ಯನ್ನು ಶರಣ ........................................ ಅವರ ಮಗನಾದ ಶರಣ ........................................ ಎಂಬ ವರನಿಗೆ ಗುರು-ಲಿಂಗ-ಜಂಗಮ-ಗಣ ಸಾಕ್ಷಿಯಾಗಿ ಸ್ವಸಂತೋಷದಿಂದ ಧಾರೆ ಎರೆದು ಕನ್ಯೆದಾನ ಮಾಡುತ್ತಿದ್ದೇನೆ.
ಆಗ ವರನು ತನ್ನ ಬಲಗೈಯಿಂದ ವಧುವಿನ ಬಲಭುಜವನ್ನು ಸ್ಪರ್ಶಿಸಿ, 'ಶುಭವಾಗಲಿ' (ದೇವರ ಕೃಪೆ) ಎನ್ನುವನು. ತಂದೆಯು “ನನ್ನ ಮಗಳನ್ನು ಈಗ ಒಪ್ಪಿಸಿದ್ದೇನೆ.” ಎಂದಾಗ ವರನು “ದೇವರಿಚ್ಚೆ ಎಂದು ಸ್ವೀಕರಿಸಿದ್ದೇನೆ.” ಎನ್ನುವನು. ನಂತರ ಉಳಿದ ಆಪ್ತರು ಧಾರೆ ಎರೆಯುವರು.
ಧಾರೆಯ ನಂತರ ಹೆಣ್ಣನ್ನು ಎಡಗಡೆಗೆ, ಗಂಡನ್ನು ಬಲಗಡೆಗೆ ಕುಳ್ಳಿರಿಸಿ, ಈಗ ದೇವನಾಜ್ಞೆ (ಬ್ರಹ್ಮಗಂಟು) ಯನ್ನು ಕಟ್ಟಬೇಕು. ವರನ ಹೆಗಲಿಗೆ ಒಂದು ಶಲ್ಯ (ಮೇಲುವಸ್ತ್ರ) ಹೊದಿಸಿ, ಅದರ ಒಂದು ತುದಿಗೆ ಮತ್ತು ಕನ್ಯೆಯ ಸೆರಗಿನ ತುದಿಗೆ ಗಂಟು ಹಾಕಬೇಕು. ಹಾಗೆ ಗಂಟುಹಾಕುವಾಗ ಎಲೆ-ಅಡಕೆ, ವಚನ ಸಾಹಿತ್ಯದ ಚಿಕ್ಕ ಹೊತ್ತಿಗೆ - (ತಾಳವೋಲೆ), ಕೊಬ್ಬರಿ, ಬೆಲ್ಲ, ಬಸವನಾಣ್ಯ, ಪೂಜಾ ಹೂವು ಮುಂತಾಗಿ ೬ ವಸ್ತುಗಳನ್ನು ಸೇರಿಸಿ ಶಿವನಾಜ್ಞೆ (ಬ್ರಹ್ಮಗಂಟು)ಯನ್ನು ಕಟ್ಟಬೇಕು. ವಧುವರರಿಗೆ ಉತ್ತಮವಾದ ಹೂ ಮಾಲೆಗಳನ್ನು ಕೊರಳಿಗೆ ಹಾಕಬೇಕು. ವಧುವಿಗೆ ಕಾಲುಂಗುರವನ್ನು ತೊಡಿಸಬೇಕು.
ಧಾರೆಯ ನಂತರ ಪ್ರತಿಜ್ಞಾ ಸ್ವೀಕಾರ
ಈಗ ಕ್ರಿಯಾಮೂರ್ತಿ ಮತ್ತು ವಧುವರರು ಉಭಯತರೂ ಎದ್ದು ನಿಂತು ಪ್ರತಿಜ್ಞಾ ಸ್ವೀಕಾರ ಮಾಡಬೇಕು. ಮೊದಲಿಗೆ ಕ್ರಿಯಾಮೂರ್ತಿಯಿಂದ
ಧರ್ಮಗುರು ಸ್ಮರಣೆ : ಓಂ ಶ್ರೀ ಗುರುಬಸವಲಿಂಗಾಯ ನಮಃ
ಬಸವೇಶನೆ ಬಸವರಾಜನೆ ಬಸವಣ್ಣನೆ ಬಸವ ತಂದೆ
ಬಸವ ಕೃಪಾನಿಧಿ, ಬಸವ ಪರಮೇಶ್ವರೀಶ್ವರ
ಬಸವ ಪ್ರಮಥಾದಿದೇವ ರಕ್ಷಿಸು ಬಸವಾ.
ಕ್ರಿಯಾಮೂರ್ತಿಯು ತಾನು ಉಚ್ಚರಿಸುತ್ತ, ವಧುವರರ ಕೈಲಿ ಹೇಳಿಸುತ್ತ ಹೋಗಬೇಕು.
"ಧರ್ಮಗುರು ಬಸವಣ್ಣನ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಎಲ್ಲ ಶರಣರ ಸಾಕ್ಷಿಯಾಗಿ, ನಾವಿಂದು ದಾಂಪತ್ಯ ಜೀವನವನ್ನು ಸ್ವೀಕರಿಸುತ್ತಿದ್ದೇವೆ. ಶ್ರೀಗುರುಬಸವಗೆ ಶರಣಾಗಿಹೆ, ಲಿಂಗದೇವನಿಗೆ ಶರಣಾಗಿದೆ, ಶರಣಗಣಕ್ಕೆ ಶರಣಾಗಿಹೆ, ಗಣಪದವಿಯನ್ನು ನಾ ಹೊಂದಿಹೆ. "
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. |
7 | ವ | ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ |
ಮನಕ್ಕೆ ಮನ ಒಂದಾಗಿ ಧನಕ್ಕೆ ಧನ ಒಂದಾಗಿ ನಚ್ಚಿದ ಮಚ್ಚು ಅಚೊತ್ತಿದಂತಿರಬೇಕು. ಪ್ರಾಣಕ್ಕೆ ಪ್ರಾಣ ಒಂದಾಗಿ ಶುಭ ಸೂಚನೆ ಒಂದಾಗಿರದ ನಚ್ಚು ಮಚ್ಚು ಪಾರವೈದುವುದೆ ? ಶಿರ ಹರಿದರೇನು, ಕರುಳು ಕುಪ್ಪಳಿಸಿದರೇನು ? ಎಂತಪ್ಪ ಸಮಸ್ತ ವಸ್ತುವೆಲ್ಲವೂ ಹೋದಡೇನು ? ಚಿತ್ತ ಮನ ಬುದ್ದಿ ಒಂದಾದ ಮಚ್ಚು ಬಿಚ್ಚಿ ಬೇರಾಗದಿದ್ದಡೆ ಮೆಚ್ಚುವ ನಮ್ಮ ಕೂಡಲಸಂಗಮದೇವ. ಎಂಬ ಗುರುಬಸವಣ್ಣನವರ ವಾಣಿಯಂತೆ ದೇಹಗಳು ಎರಡಾದರೂ ಭಾವ ಒಂದಾದ ಅನ್ನೋನ್ಯತೆಯಿಂದ ಬಾಳುವ, ಧರ್ಮ-ಅರ್ಥ-ಕಾಮ-ಮೋಕ್ಷ, ಸುಖ-ದುಃಖ, ನಲಿವು-ನೋವುಗಳೆಲ್ಲದರಲ್ಲೂ ಸಹಭಾಗಿಗಳಾಗಿ ಜೊತೆಗೂಡಿ ಸಾಗುವ ಸಂಕಲ್ಪ ಮಾಡುತ್ತೇವೆ. |
10 | ಯ |
ವರನ ಪ್ರತಿಜ್ಞೆ :
ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಪರವಧುವನು ಮಹಾದೇವಿ ಎಂಬೆ, ಕೂಡಲಸಂಗಮದೇವಾ. ಎಂಬ ಗುರುಬಸವಣ್ಣನವರ ಆದೇಶದಂತೆ ಇಂದು, ನನ್ನ ಧರ್ಮ ಸಹಚರಿಣಿ, ಅರ್ಧಾಂಗಿನಿಯಾಗಿರುವ ....................... ಳನ್ನು ಹೊರತುಪಡಿಸಿ ಉಳಿದೆಲ್ಲ ಮಹಿಳೆಯರು ನನ್ನ ಮಾತೃ ಸ್ವರೂಪರು, ಸೋದರಿಯರು ಎಂದು ಭಾವಿಸಿ ಏಕಪತ್ನಿ ವ್ರತಸ್ಥನಾಗಿರುತ್ತೇನೆ. ವಧುವಿನ ಪ್ರತಿಜ್ಞೆ : ಎರದ ಮುಳ್ಳಿನಂತೆ ಪರಗಂಡರೆನಗವ್ವಾ ಸೋಂಕಲಮ್ಮೆ ಸುಳಿಯಲಮ್ಮ ನಂಬಿ ನಚ್ಚಿ ಮಾತಾಡಲಮ್ಮನವ ಧರ್ಮಸಾಕ್ಷಿಯಾಗಿ ಕೈಹಿಡಿದ ಪತಿಯಲ್ಲದವನ ನಾ ಮನಸಲ್ಲೂ ಬಯಸೆನವ್ವಾ ಎಂಬ ಶರಣವಾಣಿಯಂತೆ ಇಂದು ನನ್ನ ಜೀವನದ ಸಂಗಾತಿಯೂ, ಪೋಷಕರು ಆಗಿರುವ ..................................... ರನ್ನು ಹೊರತು ಪಡಿಸಿ ಉಳಿದ ಪುರುಷರು, ನನ್ನ ತಂದೆಯ, ಸೋದರರ ಸಮಾನ ಎಂದು ಭಾವಿಸಿ ಪತಿವ್ರತೆಯಾಗಿರುತ್ತೇನೆ. |
11 | ನ | ಸತ್ಯ ಶುದ್ಧ ಕಾಯಕವನ್ನು ಮಾಡುತ್ತ ಸದಾಚಾರ ಸಂಪನ್ನರಾಗಿ ಬಾಳುತ್ತೇವೆ. ಗುರು-ಜಂಗಮರಲ್ಲಿ ಭಕ್ತಿ, ಇಷ್ಟಲಿಂಗದಲ್ಲಿ ನಿಷ್ಠೆ, ಹಿರಿಯರಲ್ಲಿ ಗೌರವ, ವೃದ್ಧರ ಸೇವೆಯಲ್ಲಿ ಆಸಕ್ತಿ, ಕಿರಿಯರಲ್ಲಿ ವಾತ್ಸಲ್ಯ, ಸ್ನೇಹಿತರಲ್ಲಿ ಆತ್ಮೀಯತೆ ಹೊಂದಿ, ನಮ್ಮ ಕರ್ತವ್ಯವನ್ನು ಪಾಲಿಸುತ್ತೇವೆ. ಧರ್ಮಪಾಲನೆ, ನೀತಿವಂತಿಕೆ ನಮ್ಮ ಬಾಳ ಬಂಡಿಯ ಎರಡು ಚಕ್ರಗಳೆಂದು ನಂಬಿ ಸಾಗುತ್ತೇವಲ್ಲದೆ ವ್ಯಕ್ತಿಗಿಂತಲೂ ಸಮಾಜ ಶ್ರೇಷ್ಠ: ವ್ಯಷ್ಟಿಗಿಂತಲೂ ಸಮಷ್ಟಿ ಶ್ರೇಷ್ಠ, ಎಂಬ ಬಸವವಾಣಿಯಂತೆ ಸಮಾಜ, ಧರ್ಮ, ರಾಷ್ಟ್ರಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯುತ್ತೇವೆ. |
12 | ಮಃ |
ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ ಕೂಡಲ ಸಂಗಮದೇವಾ, ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ. ಎಂಬ ಶ್ರೀ ಗುರು ಬಸವಣ್ಣನವರ ವಾಣಿಯಂತೆ ಇವರು ಯಾರು ಇವರು ಯಾರು ಎಂದು ನಮ್ಮನ್ನು ಯಾರೂ ಭೇದಭಾವದಿಂದ ಕಾಣದೆ, ಇವರು ನಮ್ಮವರು ಇವರು ನಮ್ಮವರು ಎಂಬ ಆತ್ಮೀಯತೆಯಿಂದ ನಮ್ಮನ್ನು ಕಾಣುವಂತಾಗಲಿ; ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಸಲ್ಲುವ ನಾಣ್ಯಗಳು ನಾವಾಗಿ ಬಾಳಬೇಕೆಂಬ ಬಯಕೆಯಿಂದ ಗುರುಹಿರಿಯರೆಲ್ಲರ ಹರಕೆ-ಹಾರೈಕೆ-ಆಶೀರ್ವಾದಗಳನ್ನು ಬೇಡುತ್ತೇವೆ. |
ಕ್ರಿಯಾಮೂರ್ತಿ : ಜಯ ಗುರು ಬಸವೇಶ ಹರಹರ ಮಹಾದೇವ. | ||
ವರನ ಸಹಿ ........................................................ ವಧುವಿನ ಸಹಿ...... ............................................... ಹೆಸರು ...... .................................................... ಹೆಸರು ...... .................................................... ದಿನಾಂಕ ...... .................................................... ಈ ವಿವಾಹದಲ್ಲಿ ಸನ್ನಿಧಿ ವಹಿಸಿದವರು ............................ ......................................................... ..................................... |
ವಿ.ಸೂ. : ಸಂಘ-ಸಂಸ್ಥೆಗಳವರು ಈ ಪ್ರತಿಜ್ಞಾವಿಧಿಯ ಪಟವನ್ನು ಮುದ್ರಿಸಿ ಇಟ್ಟುಕೊಳ್ಳಬೇಕು. ಇದರಲ್ಲಿ ವಧುವರರು ಸಹಿ ಮಾಡಲು ಬರುವಂತೆ ಸ್ಥಳ ಇಟ್ಟಿರಬೇಕು.
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.
[2] ತಾಮ್ರದ ಕಂಕಣ ಬಸವ ಚಿತ್ರ ಸಹಿತವಾಗಿ ಸಿಗುತ್ತದೆ. ರಾಖಿಗಳನ್ನು ತಂದು ಅದಕ್ಕೆ ಬಸವ ಗುರುವಿನ ಚಿತ್ರ ಅಂಟಿಸಬಹುದು. ಹಳ್ಳಿಗಳಲ್ಲಿ ಎಲೆ ಕಂಕಣ ಅಂತ ಮಾಡಿ, ವೀಳೆಯದೆಲೆಯನ್ನು ಸುರುಳಿ ಸುತ್ತಿ ಕಟ್ಟುವರು.
![]() | ಮದುವೆ ದಿವಸ : ಭಾಗ-೨ ಪೂಜಾವ್ರತ | ಮದುವೆ ದಿವಸ : ಭಾಗ-೪ ಮಾಂಗಲ್ಯ ಧಾರಣೆ | ![]() |