Previous ಉತ್ತರಾಧಿಕಾರ ದತ್ತು ಸ್ವೀಕಾರ ವಿಧಿ Next

ಪಟ್ಟಾಧಿಕಾರ, ಉತ್ತರಾಧಿಕಾರಿಗೆ ಪಟ್ಟ ಕಟ್ಟುವುದು

- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.

ಉತ್ತರಾಧಿಕಾರಿಯ ಆಯ್ಕೆ

ಮಠಾಧಿಕಾರಿಗಳು ತಾವು ಜೀವಂತವಾಗಿರುವಾಗಲೇ ತಮ್ಮ ಉತ್ತರಾಧಿಕಾರಿಗೆ ಪಟ್ಟ ಕಟ್ಟುವುದು ಸುರಕ್ಷಿತ. ತಾವು ಇರುವ ತನಕ ಸುಮ್ಮನಿದ್ದು ಆಕಸ್ಮಿಕವಾಗಿ ತೀರಿ ಹೋದರೆ ನಂತರ ಭಯಂಕರ ಗೊಂದಲಗಳು ಉಂಟಾಗುವವು. ಚೆನ್ನಾಗಿರುವಾಗಲೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ, ತರಬೇತಿ ನೀಡಿ, ಮಠದ ಪ್ರಭಾವ ವಲಯವನ್ನು ಪರಿಚಯ ಮಾಡಿಕೊಟ್ಟರೆ ಎಲ್ಲರಿಗೂ ಕ್ಷೇಮ. ಮೊದಲು ಉತ್ತರಾಧಿಕಾರಿಯನ್ನಾಗಿ ಮಾಡಿಕೊಂಡು ತರಬೇತಿ ನೀಡಿ ನಂತರ ಪಟ್ಟವನ್ನು ಕೊಡಬಹುದು. ಅಥವಾ ನೇರವಾಗಿಯೂ ಕೊಡಬಹುದು. ಪಟ್ಟಾಧಿಕಾರಿಯನ್ನು ಆಯ್ಕೆ ಮಾಡದೆ ಮಠಾಧೀಶರು ತೀರಿಕೊಂಡರೆ ಆಗ ಇನ್ನಿತರ ಸ್ವಾಮಿಗಳು, ಮಠದ ಭಕ್ತರು ಯೋಗ್ಯ ವ್ಯಕ್ತಿಯನ್ನು ಅರ್ಹತೆಯ ಆಧಾರದ ಮೇಲೆ ಆರಿಸಿ ಪಟ್ಟಗಟ್ಟಲು ಏರ್ಪಾಡು ಮಾಡಬಹುದು.

'ಮಠ' - ಗುರು-ಜಂಗಮರು ವಾಸಿಸುವ ಸ್ಥಳ, ಪೀಠ' ಮಠದಲ್ಲಿರುವ ಅಧಿಕಾರ ಸೂಚಕವಾದ ಒಂದು ಸ್ಥಾನ, ಸಿಂಹಾಸನ - ಪಟ್ಟಾಭಿಷೇಕ - ಮಹಾರಾಜ ಮುಂತಾದ ಪದಗಳು ಮಹಾತ್ಮರಿಗೆ ಸೂಕ್ತವಲ್ಲ, ಅದರಲ್ಲೂ ಬಸವ ಧರ್ಮಕ್ಕೆ ಸಲ್ಲದ ನುಡಿಕಟ್ಟುಗಳು. ಈ ಮೂರು ಪದಗಳಲ್ಲಿ ರಾಜಸಿಕ, ಅಧಿಕಾರ ಸೂಚಕ ದರ್ಪ-ವೈಭವಗಳನ್ನು ಕಾಣಬಹುದು. ಆದ್ದರಿಂದ ಬಳಸುವಾಗ ಪೀಠ-ಪೀಠಾರೋಹಣ ಗುರು ಸ್ವಾಮಿಗಳು ಎಂದು ಬಳಸಬೇಕು. ಪಟ್ಟಗಟ್ಟುವಾಗ ಒಂದು ವಿಶೇಷ ಪೀಠವನ್ನು, ಸರಳವಾಗಿ, ಚಿಕ್ಕದಾಗಿದ್ದರೂ ಪರವಾಗಿಲ್ಲ. ಸೂಕ್ತ ಧರ್ಮಲಾಂಛನಗಳೊಡನೆ ಸಿದ್ಧಪಡಿಸಬೇಕು.

ಪಟ್ಟಾಧಿಕಾರದ ದಿವಸ ಜಂಗಮ ದೀಕ್ಷಾ ವಿಧಾನದಲ್ಲಿ ತಿಳಿಸಿರುವಂತೆ ಅಭ್ಯಂಗನ ಸ್ನಾನ ಮಾಡಿ ಮಡಿ ಕಾಷಾಯ ವಸ್ತ್ರಗಳನ್ನು ಉಟ್ಟು ಬಂದು ಉತ್ತರಾಧಿಕಾರಿಯನ್ನು ತನ್ನ ಒಡನೆ ಎದುರಿಗೆ ಕುಳ್ಳಿರಿಸಿಕೊಂಡ ಸದ್ಯದ ಪಟ್ಟಾಧಿಕಾರಿ ಇಷ್ಟಲಿಂಗಾರ್ಚನೆ ಮಾಡಿಸಬೇಕು. ನಂತರ ಉತ್ತರಾಧಿಕಾರಿ ಬಸವೇಶ್ವರ ಪೂಜಾವ್ರತವನ್ನು ಮಾಡಿ ಗುರುಗಳಿಂದ ಕರುಣ ಪ್ರಸಾದವನ್ನು ಪಡೆಯಬೇಕು. ನಂತರ ಒಕ್ಕ ಪ್ರಸಾದವನ್ನು ಗುರುಗಳಿಂದ ಪಡೆದು ತಾನೂ ಉಪಾಹಾರ ಮಾಡಬೇಕು.

ಪಟ್ಟಾಧಿಕಾರ (ಪೀಠಾರೋಹಣ)ಕ್ಕೆ ಒಂದು ಉತ್ತಮವಾದ - ವಿಶಾಲವಾದ ಸಭಾಗೃಹದಲ್ಲಿ ಏರ್ಪಾಡು ಮಾಡಬೇಕು. ಹಿಂದೆ ಎತ್ತರದಲ್ಲಿ ಕಾಣುವಂತೆ ಅಥವಾ ಪೀಠದ ಪಕ್ಕದಲ್ಲಿ ಒಂದು ಸುಂದರ ಮಂಟಪ ಕಟ್ಟಿ ಧರ್ಮಪಿತ ಬಸವಣ್ಣನವರ ಭಾವಚಿತ್ರವನ್ನಿಟ್ಟು ಅಲಂಕರಿಸಬೇಕು. ಮುಂದೆ ನಂದಾದೀಪಗಳನ್ನು ಇಡಬೇಕು. ಪೀಠದ ಅಕ್ಕ-ಪಕ್ಕದಲ್ಲಿ ಎರಡು ಕುರ್ಚಿಗಳನ್ನು, ಇನ್ನಿತರ ಅತಿಥಿಗಳಿಗೆ ಪ್ರತ್ಯೇಕ ಕುರ್ಚಿಗಳನ್ನು ಹಾಕಿರಬೇಕು.

ಪಟ್ಟಾಧ್ಯಕ್ಷರು - ಉತ್ತರಾಧಿಕಾರಿ ಉಭಯತರೂ ಸಭಾ ಮಂಟಪ (ಗೃಹ)ವನ್ನು ಪ್ರವೇಶಿಸುವಲ್ಲಿ ಇನ್ನಿತರರು ಹೋಗಿ ಪಾದಕ್ಕೆ ನೀರೆರೆದು ಪಾದವನ್ನು ಪೂಜಿಸಿ, ಮಾಲಾರ್ಪಣೆ ಮಾಡಿ ಆರತಿ ಬೆಳಗಿ ಉಭಯತರನ್ನು ಸ್ವಾಗತಿಸಬೇಕು. ಉತ್ತರಾಧಿಕಾರಿಯು ಹಿರಿಯ ಸ್ವಾಮಿಗಳನ್ನು ಪೀಠದ ಪಕ್ಕ ಇರುವ ಕುರ್ಚಿಯಲ್ಲಿ ಕುಳ್ಳಿರಿಸಿ ತಾನು ಇನ್ನೊಂದು ಬದಿಯಲ್ಲಿರುವ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು.

ಆರಂಭದಲ್ಲಿ ಶರಣ-ಶರಣೆಯರು ಕೆಲವರು ಶ್ರೀ ಗುರು ಬಸವಣ್ಣನವರ ಭಾವಚಿತ್ರಕ್ಕೆ “ಮುಕ್ತಿದಾಯಕ ಶರಣ ರಕ್ಷಕ'' ಎಂಬ ಹಾಡನ್ನು ಹಾಡುತ್ತ ಪೂಜೆ ಸಲ್ಲಿಸಬೇಕು. ಎಲ್ಲರೂ ಎದ್ದು ನಿಂತ ನಂತರ ಬಸವ ಮಂಗಲವನ್ನು ಮಾಡಬೇಕು. ಪ್ರಸ್ತುತ ಪಟ್ಟಾಧ್ಯಕ್ಷರು ಹೂವು-ಪತ್ರೆಗಳನ್ನು ತೆಗೆದುಕೊಂಡು ಬಸವ ಭಾವಚಿತ್ರಕ್ಕೆ ಏರಿಸಿ, ಆರತಿಯನ್ನು ಬೆಳಗಬೇಕು. ನಮಸ್ಕರಿಸಿ ಹೋಗಿ ಪೀಠದ ಮೇಲೆ ಕುಳಿತುಕೊಳ್ಳಬೇಕು. ಅವರು ಕುಳಿತುಕೊಳ್ಳುವಾಗ “ಜಯಗುರು ಬಸವೇಶ ಹರಹರ ಮಹಾದೇವ' ಎಂದು ಎಲ್ಲರೂ ಜಯಘೋಷ ಮಾಡಬೇಕು.

ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ
ಬಸವನ ಮುದ್ರೆ ಮರೆದಾವು | ಧರೆಯವಗೆ
ವಶವಾಗದಿಹುದೆ ಸರ್ವಜ್ಞ ||


ಬಸವಣ್ಣ ನಡೆದುದೇ ಮಾರ್ಗ, ನುಡಿದುದೇ ವೇದ
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು
ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು
ಬಸವಣ್ಣ ನಡೆದುದೇ ಮಾರ್ಗ ಅಖಿಳಗಣಂಗಳಿಗೆ
ನುಡಿದುದೇ ವೇದ ಮಹಾಪುರುಷರಿಗೆ - ಶ್ರೀ ಮರುಳ ಶಂಕರದೇವರು

ಕುಳಿತುಕೊಂಡ ಬಳಿಕ ಪಟ್ಟಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಬೇಕು ಮತ್ತು ಆರತಿಯನ್ನು ಮಾಡಬೇಕು. ಪಟ್ಟಾಧ್ಯಕ್ಷರು ತಮ್ಮ ಮಠಪೀಠದ ಪರಂಪರೆ ಕುರಿತು, ತಮ್ಮ ಉತ್ತರಾಧಿಕಾರಿಯಾಗಿ ಬರುವ ಕಿರಿಯ ಸ್ವಾಮಿಗಳು ಮಾಡಬೇಕಾದ ಕರ್ತವ್ಯ ಕುರಿತು. ಹಿತೋಪದೇಶ ಮಾಡಿ, “ನಾವು ..................................................... ಇಂಥವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದು ಇದೀಗ ಇವರನ್ನು ಪಟ್ಟಕ್ಕೆ ಏರಿಸುತ್ತಿದೇವೆ. ಇದಕ್ಕೆ ಗಣ ಸಮೂಹ (ಸಮಾಜ)ದ ಒಪ್ಪಿಗೆ ಇದೆಯೆಂದು ತಿಳಿಯುತ್ತೇವೆ ಎನ್ನುತ್ತಾರೆ. ಆಗ ಜೈ ಗುರು ಬಸವೇಶ ಹರಹರ ಮಹಾದೇವ, ಬಸವೇಶ್ವರರಿಗೆ ಜಯವಾಗಲಿ ಎಂಬ ಜಯಘೋಷಗಳನ್ನು ಉದ್ಧರಿಸಬೇಕು. ಉತ್ತರಾಧಿಕಾರಿಯು ಸಾಷ್ಟಾಂಗವನ್ನು ಹಾಕುವರು. ಎದ್ದು ಗುರುಗಳ ಮುಂದೆ ಕೈಜೋಡಿಸಿ ನಿಲ್ಲುವರು. ಈಗ ಗುರುಗಳು ಪ್ರತಿಜ್ಞಾ ವಿಧಿಯನ್ನು ಬೋಧಿಸುವರು:

ಬಸವ (ಲಿಂಗಾಯತ) ಧರ್ಮದ ಪರಂಪರೆಯ ಧರ್ಮಪೀಠವನ್ನು ಏರುವ ಪೀಠಾಧಿಕಾರಿಯ ಪ್ರತಿಜ್ಞೆಗಳು

ಓಂ ಶ್ರೀಗುರು ಬಸವ ಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.

ಶ್ರೀಗುರು ಬಸವಂಗೆ ಶರಣಾಗಿಹೆ
ಲಿಂಗದೇವನಿಗೆ ಶರಣಾಗಿಹೆ
ಶರಣಗಣಕ್ಕೆ ಶರಣಾಗಿಹೆ
ಗಣಪದವಿಯನ್ನು ನಾ ಹೊಂದಿಹೆ

1ಓಂ ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ.
2ಶ್ರೀ ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ.
3ಗು ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ.
4ರು ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ.
5 ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ.
6 ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. ಮತ್ತು ಗಣಮೇಳವನ್ನು ನಡೆಸುತ್ತೇನೆ.
7 ಜಂಗಮ ದೀಕ್ಷೆಯನ್ನು ಪಡೆದು ವೈರಾಗ್ಯ ಮಾರ್ಗದಲ್ಲಿ ನಡೆಯಲು ಬಯಸಿರುವ ನಾನು, ನಾನು ನನ್ನದು ಎಂಬ – ವ್ಯಾಮೋಹವನ್ನು, ಪೂರ್ವಾಶ್ರಮದ ಸಂಕೋಲೆಯನ್ನು ಹರಿದುಕೊಂಡು ತ್ಯಾಗಿಯಾಗಿ ಶ್ರೀಗುರುವು ನನಗೆ ವಿಧಿಸಿರುವ ಸತ್ಯಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ, ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ, ಧರ್ಮ ಪ್ರಚಾರಕ್ಕೆ ಗಳಿಕೆಯನ್ನು ವಿನಿಯೋಗಿಸುತ್ತೇನೆ.
8ಲಿಂ ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ.
9ಗಾ ಪರಧನ, ಪರಸ್ತ್ರೀ / ಪರಪುರುಷ, ಪರದೈವಂಗಳಿಗೆ ಎಳಸುವುದಿಲ್ಲ.
10ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ.
11ಬಸವ ತತ್ತ್ವ ಪಥದಲ್ಲಿ ನಡೆಯಬಯಸಿರುವ ನಾನು, ಅಲ್ಲಮ ಪ್ರಭು ಅಕ್ಕಮಹಾದೇವಿ, ಚನ್ನಬಸವಣ್ಣ - ಸಿದ್ಧರಾಮೇಶ್ವರರಂತೆ ವಿರಕ್ತ ಜೀವನವನ್ನು ಸ್ವೀಕರಿಸಿ ನನ್ನ ತನು-ಮನ-ಧನ-ಸಮಯ ಅಭಿಮಾನ ಪ್ರಾಣ ಎಂಬ ಷಡಂಗಗಳನ್ನೂ ಬಸವಧರ್ಮದ ಏಳಿಗೆಗಾಗಿ ಮೀಸಲಿಡುತ್ತೇನೆ.
12ಮಃ ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ.
ಜಯಗುರು ಬಸವೇಶ ಹರಹರ ಮಹಾದೇವ

ಜಯಘೋಷದ ಬಳಿಕ ಉತ್ತರಾಧಿಕಾರಿಯು ಗುರುಗಳಿಗೆ ಬಾಗಿ ನಮಸ್ಕರಿಸಬೇಕು. ಗುರುವು ಭುಜ ಹಿಡಿದು ಎತ್ತುವನು. ಹಣೆಗೆ ಭಸ್ಮವನ್ನು ಧರಿಸುವನು. ತನ್ನ ಕೊರಳಿನಲ್ಲಿರುವ ಹೂಮಾಲೆಯನ್ನು ಉತ್ತರಾಧಿಕಾರಿಗೆ ಹಾಕುವನು. ಪೀಠವು ವಿಶಾಲವಾಗಿದ್ದರೆ' ಕೈಹಿಡಿದು ಉತ್ತರಾಧಿಕಾರಿಯನ್ನು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳಬಹುದು. ಇಲ್ಲದಿದ್ದರೆ ಈಗ ತಾನು ಇಳಿದು, ಕೈಹಿಡಿದು ಉತ್ತರಾಧಿಕಾರಿಯನ್ನು ಪೀಠದ ಮೇಲೆ ಕೂರಿಸುವನು. ಪೀಠವನ್ನೇರುವ ಮೊದಲು ನಿಂತಲ್ಲಿಂದಲೇ ಗುರುಬಸವಣ್ಣನವರ ಭಾವಚಿತ್ರಕ್ಕೆ ವಂದಿಸಿ, ಸಭೆಯ ಎದುರು ನಿಂತ ಗಣಸಮೂಹಕ್ಕೆ ಶರಣುಗೈದು ಪೀಠವನ್ನೇರಬೇಕು. ಆಗ ಗಣಸಮೂಹವು ಒಕ್ಕೊರಲಿನಿಂದ “ಜಯಗುರು ಬಸವೇಶ ಹರಹರ ಮಹಾದೇವ' ಎಂದು ಜಯಘೋಷ ಮಾಡಬೇಕು.

ಉತ್ತರಾಧಿಕಾರಿಯನ್ನು ಪಟ್ಟಕ್ಕೆ ಏರಿಸುವ ಮೊದಲೇ ಮಠಾಧಿಪತಿಯು ಲಿಂಗೈಕ್ಯನಾಗಿದ್ದರೆ, ಬೇರೆ ಮಠದ ಸ್ವಾಮಿಗಳು ಈ ವಿಧಿಯನ್ನು ನಡೆಸಿಕೊಡಬೇಕು. ಪಟ್ಟ (ಪೀಠ)ದ ಮೇಲೆ ಕೂರುತ್ತಲೇ ಗುರುಗಳು ಧರ್ಮಗುರು ಬಸವಣ್ಣನವರ ಭಾವಚಿತ್ರವನ್ನು ಸಮರ್ಪಿಸಬೇಕು. ಅವರೇ ಉಳಿದ ನಾಲ್ಕು ಲಾಂಛನಗಳನ್ನು ಕೊಡಬಹುದು ಇಲ್ಲವೇ ಇತರ ನಾಲ್ವರು ಮಠಾಧೀಶರು ಒಂದೊಂದನ್ನು ಸಮರ್ಪಿಸಬಹುದು. ೧. ಧರ್ಮಗುರು ೨. ಧರ್ಮಗ್ರಂಥ ೩. ಧರ್ಮದಂಡ (ಬೆತ್ತ) ೪. ಧರ್ಮಪೀಠ ಇವೇ ಲಾಂಛನಗಳು.

ಈಗ ಹಿರಿಯ ಸ್ವಾಮಿಗಳು ಪಕ್ಕದಲ್ಲಿರುವ ಕುರ್ಚಿಯ ಮೇಲೆ ಕುಳಿತುಕೊಳ್ಳುವರು. ಮಠದ ಅಭಿಮಾನಿಗಳು ಈಗ ಪಾದ ಪೂಜೆ ಮಾಡುವರು. ಪಾದಪೂಜೆ - ಪುಷ್ಪವೃಷ್ಟಿ - ಮಂಗಲ ಈ ಮೂರೂ ಜಂಗಮ ದೀಕ್ಷಾ ವಿಧಿ ಮತ್ತು ಉತ್ತರಾಧಿಕಾರಿಯ ದೀಕ್ಷಾವಿಧಿಗಳಲ್ಲಿದ್ದಂತೆಯೇ ನೂತನ ಪೀಠಾಧ್ಯಕ್ಷರಿಂದ ಈಗ ಪೀಠಾರೋಹಣ ಸಂದೇಶ ನೆರವೇರುವುದು. ನಂತರ ಭಕ್ತ ವೃಂದದಿಂದ ಮಾಲಾರ್ಪಣೆ ಬಿನ್ನವತ್ತಳೆ - ಫಲ - ಕಾಣಿಕೆ ಸಮರ್ಪಣೆ. ಸಮಾರಂಭಕ್ಕೆ ಆಗಮಿಸಿದ ಅತಿಥಿಗಳು - ಗಣ್ಯರಿಂದ ಉಪನ್ಯಾಸಗಳು, ನಂತರ ಬಸವ ಮಹಾಮಂಗಲ, ಮೊದಲು ಧರ್ಮಗುರು ಬಸವಣ್ಣನವರಿಗೆ ಆರತಿ, ನಂತರ ಹಿರಿಯ ಪಟ್ಟಾಧಿಕಾರಿಗೆ, ನಂತರ ಪ್ರಸ್ತುತ ಪಟ್ಟಾಧಿಕಾರಿಗೆ, ನಂತರ ಜಯಘೋಷ (ನೋಡಿ ಪುಟ ೨೧೬) ಇಲ್ಲಿಗೆ ಪಟ್ಟಾಧಿಕಾರ ವಿಧಿಯು ಪೂರ್ತಿಗೊಳ್ಳುತ್ತದೆ. ಜನರು ಇಚ್ಚಿಸಿದರೆ ಸಾರ್ವಜನಿಕ ಮೆರವಣಿಗೆಯನ್ನು ಇಟ್ಟುಕೊಳ್ಳಬಹುದು; ಪಾದಯಾತ್ರೆ ಮಾಡಬಹುದು, ಅಡ್ಡಪಲ್ಲಕ್ಕಿ ನಿಷೇಧಿಸಲಾಗಿದೆ.

ಹಿಮ್ಮಾತು

ಬಹುಪಾಲು ಸಾಂಪ್ರದಾಯಿಕ ಮಠಾಧಿಕಾರಿಗಳು ಧರ್ಮಗುರು ಬಸವಣ್ಣನವರು ಹಾಕಿಕೊಟ್ಟ ಪಥದಿಂದ ದೂರಸರಿದಿದ್ದಾರೆ. ಮುಖ್ಯ ಕಾರಣ ಅವರು ವೈದಿಕ - ಶೈವಾಚಾರಣೆಯ ಸೆಳವಿಗೆ ಸಿಕ್ಕಿದ್ದಾರೆ. ಮೂಲತಃ ಲಿಂಗವಂತ ಸಮಾಜದಲ್ಲಿ ಗುರು-ವಿರಕ್ತ ಇವು ಕಾಯಕಗಳ ವರ್ಗಿಕರಣವಾಗಿದ್ದವೇ ವಿನಾ ಎರಡು ಗುಂಪುಗಳಾಗಿರಲಿಲ್ಲ. ಮೊದಲು ಸಿದ್ಧಮಾರ್ಗಾನುಯಾಯಿಯಾಗಿದ್ದ ರೇವಣಸಿದ್ದರು ಲಿಂಗವಂತ ಧರ್ಮದ ಸ್ವೀಕಾರ ಮಾಡಿದರಷ್ಟೇ ಅಲ್ಲ, ತಮ್ಮ ಮಗ ರಂದ್ರಮುನಿ ದೇವರನ್ನು ಮಹಾಮನೆಯಲ್ಲೇ ಬಿಟ್ಟು ಬೆಳೆಸಿದರು. ಈತ ಅಕ್ಕ ನಾಗಲಾಂಬಿಕೆಯ ಜೊತೆಗೆ ಉಳವಿಗೆ ಹೋದುದು, ಪುನಃ ಆಕೆಯೊಡನೆ ಮಲೆನಾಡಿನಲ್ಲಿ ಸಂಚಾರ ಮಾಡಿದುದು, ಸ್ವತಃ ಅಕ್ಕ ನಾಗಮ್ಮನೇ ಧರ್ಮಪ್ರಚಾರಕ್ಕಾಗಿ ಬಾಳೇಹೊನ್ನೂರಿನಲ್ಲಿ ಮಠ ಮಾಡಿ ರುದ್ರಮುನಿ ದೇವರನ್ನು ಅಧಿಕಾರಿಯನ್ನಾಗಿ ಮಾಡಿದುದು ನಮ್ಮ ಪ್ರತಿಪಾದನೆಗೆ ಜ್ವಲಂತ ಸಾಕ್ಷಿ, ಸಮತಾ ತತ್ತ್ವದ ಬಗ್ಗೆ ನಿರಾಸಕ್ತಿ ಹುಟ್ಟಿ ಜಂಗಮತ್ವವನ್ನು ಜಾತಿಗೆ ವಿಕೃತಿಗೊಳಿಸಬೇಕೆಂಬ ಹುನ್ನಾರದಲ್ಲಿ ಈ ವರ್ಗಿಕರಣ ಉಂಟಾಯಿತು. ಗುರು ವರ್ಗದವರೆಂದುಕೊಂಡು ವೈದಿಕ-ಶೈವ ಮಾರ್ಗಾನುಯಾಯಿಗಳು ಪಂಚಾಚಾರ್ಯರ ಕಲ್ಪನೆ ಹುಟ್ಟಿಸಿಕೊಂಡು ಬಸವಾದಿ ಪ್ರಮಥರ ಸಾಹಿತ್ಯವನ್ನು, ಸ್ಥಾಪಕತ್ವವನ್ನು ಅಲ್ಲಗಳೆಯತೊಡಗಿದರು. ವಿರಕ್ತರು ಅಷ್ಟು ನಿರ್ಭಯವಾಗಿ ಜಾತಿವಾದಿಗಳಾಗಲಿಲ್ಲ. ಅಷ್ಟಿಷ್ಟು ಕಲಬೆರಕೆ ಮಾಡುತ್ತ, ಬಸವ ತತ್ತ್ವದ ಕಹಿಗುಳಿಗೆಗಳನ್ನು ಕಷ್ಟಪಟ್ಟು ನುಂಗುತ್ತ ಮೆಲ್ಲಮೆಲ್ಲಗೆ ಬಸವಾದಿ ಪ್ರಮಥರ ಮಾರ್ಗದಿಂದ ದೂರ ಸರಿಯುತ್ತಿದ್ದಾರೆ. ಪಂಚಾಚಾರ್ಯರಷ್ಟು ಜಾತ್ಯಂಧರಾಗಿರದೆ ಇದ್ದುದರಲ್ಲೇ ಸುಸಂಸ್ಕೃತರಿರುವ ಕಾರಣ ಇವರು ನಿಧಾನಗತಿಯವರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬಸವಧರ್ಮದ ಸಂಪರ್ಕ ಕಳೆದುಕೊಂಡು ಅಪ್ಪಟ ಜಾತಿವಾದಿಗಳು, ಬಹುದೇವತೋಪಾಸಕರು ಆಗುವ ಎಲ್ಲ ಲಕ್ಷಣಗಳೂ ತೋರಿಬರುತ್ತಿವೆ. ಪಂಚಾಚಾರ್ಯರು - ವಿರಕ್ತರ ನಡುವಿನ ಗೆರೆ ಇನ್ನೇನು ಬಹಳ ಉಳಿದಿಲ್ಲ.

ಪರಮಾಶ್ಚರ್ಯದ ಇನ್ನೊಂದು ಸಂಗತಿ ಇದೆ. ಮೇಲ್ಕಂಡ ಎರಡು - ಬಲಿಷ್ಠ ಸಂಪ್ರದಾಯಗಳು ಭಕ್ತ-ಮಹೇಶ ಎಂಬ ಭೇದಮಾಡಿ, ಭಕ್ತವರ್ಗದವರ ಧಾರ್ಮಿಕ ಮಠಾಧಿಪತ್ಯದ ಹಕ್ಕುಗಳನ್ನೇ ದೋಚತೊಡಗಿದಾಗ ಇದಕ್ಕೆ ಪ್ರತಿಭಟನೆ ಎಂಬಂತೆ ಹುಟ್ಟಿದ ಲಿಂಗಾಯತ ಸಾದರು - ನೊಳಂಬರು ಗೌಡರು ಪಟ್ಟಸಾಲಿ - ಕುರುಹಿನ ಶೆಟ್ಟರು : ಗಾಣಿಗರು ಮುಂತಾದವರ ಗುರುಪೀಠಗಳು ಬಸವ ನಿಷ್ಠೆಯಿಂದ ದೂರ ಸರಿದುದು ಸೋಜಿಗಗಳಲ್ಲೇ ಹೆಚ್ಚಿನ ಸೋಜಿಗ. ಈ ಮಠಗಳ ಮೂಲ ಗುರುಗಳು ಮರುಳುಸಿದ್ದರು, ನೊಳಂಬರ ಕುಲಗುರು ಸಿದ್ಧರಾಮೇಶ್ವರರು - ಸಿದ್ಧಲಿಂಗೇಶ್ವರರು ಮುಂತಾದವರು ಅಪ್ಪಟ ಬಸವ ಪಥಿಕರು ಈಗಿನ ಆ ಪರಂಪರೆಯ ಮಠಗಳು ಆ ನಿಷ್ಠೆ ಉಳಿಸಿಕೊಳ್ಳಲು ಯತ್ನಿಸದೆ ಇರುವುದು ದೃಗ್ಗೋಚರವಾಗುತ್ತದೆ. ಲಿಂಗಾಯತ ಭಕ್ತ ವರ್ಗದವರಿಗೆ (ಮತ್ತು ಇತರ ಯಾವುದೇ ಮಾನವಗೆ) ಗುರುತ್ವ - ಜಂಗಮತ್ವದ ಹಕ್ಕು ದೊರೆಯುತ್ತಿದ್ದರೆ ಅದು ಧರ್ಮಗುರು ಬಸವಣ್ಣನವರ ಸಂವಿಧಾನದ ಬಲದಿಂದ. ಹೀಗಿರುವಾಗ ಈ ಭಕ್ತವರ್ಗದ ಮಠಗಳವರು ಬಸವಣ್ಣನವರನ್ನು ಆದಿ ಪ್ರಮಥರೆಂದು ಅಗ್ರಪೀಠದಲ್ಲಿಟ್ಟು ಗೌರವಿಸದೆ ಇರುವುದು ಅಂದರೆ ಧರ್ಮಗುರು, ಧರ್ಮಸ್ಥಾಪಕ ಎಂದು ಒಪ್ಪದೆ ಇರುವುದು ನನಗೆ ಒಡೆಯಲಾರದ ಒಗಟಾಗಿದೆ. ಅವರುಗಳ ಮನಸ್ಸಿನಲ್ಲಿ ಯಾವ ಭಯ ಹೊಕ್ಕಿದೆಯೊ, ಕಷ್ಟಪಟ್ಟು ಕೃತ್ರಿಮ ಸಾಹಿತ್ಯ ರಚಿಸುತ್ತಾರೆ. ಬಸವಾದಿ ಪ್ರಮಥರು ವಚನ ಸಾಹಿತ್ಯದ ಗಟ್ಟಿ ನೆಲದ ಮೇಲೆ ನಿಂತು ಹಕ್ಕು ಬಾಧ್ಯತೆಗಳಿಗೆ ಹೋರಾಡುವ ವಿಪುಲ ಅವಕಾಶವಿರುವುದು ಇವರಿಗೆ ತಿಳಿಯುತ್ತಲಿಲ್ಲ. ಅವರು ವಿಚಾರ ಮಾಡಲು ಸಮಯವನ್ನು ವ್ಯಯಮಾಡುತ್ತಲಿಲ್ಲ.

ಮೂಲವನ್ನು ಹುಡುಕುತ್ತಾ ಹೋದರೆ ಇವರೆಲ್ಲ ಒಂದು ಬೊಡ್ಡೆಯಿಂದ ಬಂದವರು. ಮಹಾತ್ಮ ಗಾಂಧೀಜಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಪಕ್ಷದ ಮೂಲಕ ತಂದುಕೊಟ್ಟರು. ಕಾಂಗ್ರೆಸ್ ಪಕ್ಷದ ಉದಾತ್ತವಾದ ತ್ಯಾಗ – ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಪ್ರಾಪ್ತಿಯಾಯಿತು. ಆ ಕಾಂಗ್ರೆಸ್ ಒಡೆದು ಒಡೆದು ಹಲವಾರು ಪಕ್ಷಗಳಾದಂತೆ ಇಂದು ಗುರು-ವಿರಕ್ತ-ಶರಣ ಮಾರ್ಗಗಳು ಆಗಿವೆ. ಸಂಪ್ರದಾಯಗಳಲ್ಲಿ ಮುಂದಾದರೊಮ್ಮೆ ಹುಟ್ಟಿ ಬರುವ ವಿಚಾರಶೀಲರು ಅಂತಃಕರಣಪೂರ್ವಕವಾಗಿ ಆತ್ಮಾವಲೋಕನ ಮಾಡಿಕೊಂಡು, ಹೃದಯ ಪರಿವರ್ತನೆಯಾಗಿ ಎಲ್ಲರೂ ಬಸವಮಾರ್ಗಾನುಯಾಯಿಗಳಾದರೆ ಸಮಾಜಕ್ಕೂ ಕ್ಷೇಮ - ದೇಶಕ್ಕೂ ಕ್ಷೇಮ. ಯಾರೂ ಬಸವಣ್ಣನವರನ್ನು ಅವರ ತತ್ತ್ವಗಳನ್ನು ದ್ವೇಷಿಸುವ ಕಾರಣವೇ ಇಲ್ಲ. ಸಂಕುಚಿತ ಮತಿಗಳು, ಸ್ವಾರ್ಥಿಗಳು ಮಾತ್ರ ದ್ವೇಷಿಸುತ್ತಾರೆ. ದೇವರು ಪ್ರತ್ಯಕ್ಷನಾಗಿ, 'ನಾನು ಎಲ್ಲಾ ಭೂಮಿಗಳಿಗೂ ಒಳ್ಳೆಯ ಮಳೆ ಮತ್ತು ಬೆಳೆ ಕೊಡುತ್ತೇನೆ” ಎಂದಾಗ, “ಇಲ್ಲ, ಇಲ್ಲ, ನನ್ನ ಜಮೀನಿಗಷ್ಟೆ ಕೊಡು, ಎಂಬುದು ಹೇಗೆ ಸ್ವಾರ್ಥವೋ ಹಾಗೆ, ಬಸವಣ್ಣನವರು ಎಲ್ಲರ ಹಿತವನ್ನು ಕಾಯುತ್ತೇನೆ ಎಂದರೆ, “ಬೇಡ ನಮ್ಮ ಜಾತಿಯ ಹಿತವನ್ನಷ್ಟೆ ಕಾಯಬೇಕು. ಎಂಬುದು ಸ್ವಾರ್ಥತೆಯಲ್ಲವೆ ? ಆದ್ದರಿಂದ ಎಲ್ಲರೂ ಬಸವ ತತ್ತ್ವದ ಆರಾಧಕರಾಗಿ ಈ ವಿಧಿವಿಧಾನಗಳನ್ನು ಅಳವಡಿಸಿಕೊಂಡರೆ ಅವರಿಗೆ, ಸಮಾಜದ ಅನುಯಾಯಿಗಳಿಗೆ ಬಹಳ ಹಿತವಾಗುವುದು.

ಆಡಂಬರ - ವೈಭವ

ಸಮಾರಂಭಗಳ ಆಚರಣೆಗಳಲ್ಲಿ ಸಂಭ್ರಮವಿರಬೇಕೇ ವಿನಾ ಆಡಂಬರ, ಅದ್ದೂರಿತನ ಅಪವ್ಯಯ ಇರಬಾರದು. ಸಾಮೂಹಿಕ ಮಂತ್ರಪಠಣ, ಭಜನೆ, ಜಯಘೋಷಗಳಿಂದ ಕೂಡಿದ ಮೆರವಣಿಗೆಗಳಲ್ಲಿ ಸಂಭ್ರಮ, ಸಂತೋಷ ಇರುತ್ತದೆ ಆಡಂಬರವಿರದು. ಇದು ತಮ್ಮ ಮಠದ ವಿಶೇಷ ಸಂಪ್ರದಾಯ ಎಂದು ಬೀಗುತ್ತ ಮಾಡುವ ಅಡ್ಡಪಲ್ಲಕ್ಕಿ ಉತ್ಸವ ಮುಂತಾದುವುಗಳಲ್ಲಿ ಆಡಂಬರವಿರುತ್ತದೆ. ಸತ್ಯ-ತತ್ತ್ವ ವಸ್ತುನಿಷ್ಠವಾಗಿರುತ್ತವೆ. ಇದು ಚಂದವಲ್ಲ' ಎಂದು ಯಾರಿಗಾದರೂ ಅನ್ನಿಸುತ್ತಿರುತ್ತದೆ. ಆಗ ಇದು, “ನಮ್ಮ ಸಂಪ್ರದಾಯ ವಿಶೇಷ. ನಾವು ರಾಜಗುರುಗಳು; ಅದಕ್ಕೆ ನಾವು ಹೀಗೆ ಮಾಡುತ್ತೇವೆ.” ಎಂದು ಸಮರ್ಥಿಸಿಕೊಳ್ಳುವುದು ಸೂಕ್ತವಲ್ಲ. ರಾಜರಿಗೆ ಗುರುವೇ ಇದ್ದರೂ ಗುರು ಗುರುವೆ ! ಅವನ ಆದರ್ಶ ಒಂದೆ.

೧. ಪಂಚಾಚಾರ್ಯ ಸ್ವಾಮಿಗಳಿಗೆ ಅಡ್ಡಪಲ್ಲಕ್ಕಿ ಹುಚ್ಚು ಬಹಳ; ಅವರಿಗಿಂತ ನಾವೇನು ಕಡಿಮೆ ಎಂದು ಕೆಲವು ವಿರಕ್ತರೂ ಇದನ್ನು ರೂಢಿಸಿಕೊಂಡಿದ್ದಾರೆ. ನಾವೇನು ಕಡಿಮೆ ಎಂದು ಕೆಲವು ಸ್ವಯಂಪ್ರೇರಣೆಯ ಅಧ್ಯಾತ್ಮ ಜೀವಿ ಸ್ವಾಮಿಗಳೂ ಅಭ್ಯಾಸ ಮಾಡಿಕೊಂಡಿದ್ದಾರೆ. ಸತ್ತವರನ್ನು ಹೊರುವುದು ಧರ್ಮ-ಕರ್ತವ್ಯ! ಜೀವಂತವಿದ್ದವರನ್ನು ಹೀಗೆ ಹೊರುವುದು ಅಧರ್ಮ- ಮೂಢನಂಬಿಕೆ, ಅಡ್ಡಪಲ್ಲಕ್ಕಿ ಸ್ವಾಮಿಗಳು ತಾವು ಜೀವಂತವಿರುವಾಗಲೇ ಸತ್ತಂತಾಗಿ ಹೊರಿಸಿಕೊಳ್ಳುತ್ತೇವೆ ಎಂದು ಸಾರಿಸಾರಿ ಹೇಳುವರು ಅಂತ ತೋರುತ್ತದೆ. ಆದ್ದರಿಂದ ಬಸವ ಪಥಿಕರಾದ ಸ್ವಾಮಿಗಳು ಜನರ ಅಭಿಮಾನಕ್ಕೆ ಸ್ಪಂದಿಸಿ, ಅಲಂಕೃತ ಜೀಪು, ಕಾರು, ಟ್ರ್ಯಾಕ್ಟರುಗಳ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳಲಿ, ಅಡ್ಡಪಲ್ಲಕ್ಕಿ ಏರುವುದು ಬೇಡ.

೨. ಬಂಗಾರ ವಜ್ರ ವೈಢೂರ್ಯದ ಮೋಹ ಕೆಲವು ಸ್ವಾಮಿಗಳಿಗೆ ಬಹಳ ಪಂಚಾಚಾರ್ಯ ಗುಂಪಿನವರಲ್ಲೇ ಇದು ಎದ್ದು ಕಾಣುವಂತಿದೆ. ಶ್ರೀಮಂತ ಮಹಿಳೆಯರನ್ನು ಇವರು ನಾಚಿಸುತ್ತಾರೆ. ಬಂಗಾರದ ಕಿರೀಟವೇನು, ಕೊರಳ ಪದಕವೇನು, ಹತ್ತು ಬೆರಳಿಗೆ ಹತ್ತು ಉಂಗುರಗಳೇನು ? ಬಂಗಾರ-ವಜ್ರ-ವೈಡೂರ್ಯಗಳ ಮೋಹ ಗುರುಪೀಠಗಳಿಗೆ ಸಾಧುವಲ್ಲ. ಅಷ್ಟ ಆವರಣಗಳಲ್ಲಿ ರುದ್ರಾಕ್ಷಿಯೂ ಇರುವ ಕಾರಣ ರುದ್ರಾಕ್ಷಿ ಕಿರೀಟವನ್ನು ಧರ್ಮಲಾಂಛನಗಳ ಸಹಿತ ಮಾಡಿಸಿ ಧರಿಸಬಹುದು. ರುದ್ರಾಕ್ಷಿ ಕೂರಿಸಲು ಭೂಮಿಕೆಗೆ ಬೆಳ್ಳಿಯ ಧಾತುವನ್ನು ಬಳಸಬಹುದು. ಬಂಗಾರ-ವಜ್ರ-ವೈಡೂರ್ಯ-ರತ್ನ ಮುಂತಾದುವುಗಳ ಬಳಕೆ ಸಲ್ಲದು. ಇದು ಆದರ್ಶವೂ ಅಲ್ಲ. ಸುರಕ್ಷಿತತೆಯ ದೃಷ್ಟಿಯಿಂದಲೂ ಸಲ್ಲ. ರುದ್ರಾಕ್ಷಿಯ ಕಿರೀಟವನ್ನು ಧರಿಸುವ ಇಷ್ಟವಿದ್ದರೆ ಪೀಠಾರೋಹಣಕಾಲದಲ್ಲಿ ಗುರುವು ಅದನ್ನು ಶಿಷ್ಯನ ತಲೆಯ ಮೇಲೆ ಇಡುವ ಕ್ರಮ ಅಳವಡಿಸಬಹುದು.*

೩. ಕೆಲವು ಮಠಾಧೀಶರು (ಪಂಚಾಚಾರ್ಯ ಗುಂಪಿನವರು) ತಮ್ಮ ಪೀಠಗಳು ಬೇರೆ ಬೇರೆ ವರ್ಣಕ್ಕೆ ಸಂಬಂಧ ಎಂದು ಹಸಿರು, ನೀಲಿ, ಕೆಂಪು ಮುಂತಾದ ಬಣ್ಣಗಳ ರೇಷಿಮೆಯ ಜರಿಯುಳ್ಳ ಪೀತಾಂಬರಗಳನ್ನು ಹೊದೆಯುವುದುಂಟು. ಇದು ಸಹ ಬಹಳ ಕೃತಕವೂ ಆಡಂಬರ ಪೂರ್ಣವೂ ಆಗುತ್ತದೆ. ಕಾವಿಯ ಬಣ್ಣ ತ್ಯಾಗದ ಸಂಕೇತ, ಸರ್ವಶ್ರೇಷ್ಠ ಉದಾತ್ತತೆಯ ಪ್ರತೀಕ. ಆದ್ದರಿಂದ ಕಾವಿಯ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಸಾಕು. ಇದರ ಬೆಲೆಯನ್ನು ಯಾವ ಪೀತಾಂಬರವೂ ಸಮಗಟ್ಟಲಾರದು.

ಗುರುವಾಗಿ, ಮಹಿಳೆಯಾಗಿ ನಮ್ಮಲ್ಲೂ ಇಲ್ಲದ ಬಂಗಾರ, ಪೀತಾಂಬರಗಳ ಮೋಹ ನಿಮಗೇಕೆ ಎಂದು ನಾನು ಅಂಥ ಗುರುಗಳನ್ನು ಕೇಳಬಯಸುತ್ತೇನೆ. ಎಲ್ಲರೂ ಸರಳತೆ, ತ್ಯಾಗ ಮುಂತಾದ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಬಹಳ ಲೇಸಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಬಯಸುತ್ತೇನೆ.

ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್‌, ಬೆಂಗಳೂರು, ೧೯೯೫.

ಪರಿವಿಡಿ (index)
Previous ಉತ್ತರಾಧಿಕಾರ ದತ್ತು ಸ್ವೀಕಾರ ವಿಧಿ Next