- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಗಣಾಚಾರ ದೀಕ್ಷೆ (ಬಸವಲೆಂಕ ವ್ರತ)
ಅಂಕ ಕಂಡಾ ಕೋಲಾಸೆ ಮತ್ತೇಕಯ್ಯಾ ?
ಲೆಂಕ ಕಂಡಾ ಪ್ರಾಣದಾಸೆ ಮತ್ತೇಕಯ್ಯಾ ?
ಇದು ಧರ್ಮಪಿತರ ವಾಣಿ, `ಲೆಂಕ'ನು ಒಡೆಯನ ರಕ್ಷಣೆಯ ಹೊಣೆಗಾರಿಕೆ ಹೊತ್ತ “ವೀರವ್ರತಿ', ಹಿಂದಿನ ಕಾಲದಿಂದಲೂ ಕೆಲವು ವ್ಯಕ್ತಿಗಳು ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಒಂದು ವಿಶೇಷ ಆಚರಣೆ ನಡೆದು ಬಂದಿದೆ. ವ್ಯಕ್ತಿಗಳಿಗೆ, ತತ್ತ್ವಕ್ಕೆ ಸಮರ್ಪಿಸಿಕೊಳ್ಳುವ ಬಗೆಯಿದು. ಧರ್ಮಪಿತ ಬಸವಣ್ಣನವರ ವಚನದಲ್ಲಿ ಜೋಳವಾಳಿ, ವೇಳೆವಾಳಿ ಎಂಬ ಪ್ರಯೋಗವಿದೆ. ಜೋಳವಾಳಿ ಎಂದರೆ ಉಪಜೀವನಕ್ಕೆ ಆಶ್ರಯಿಸಿಕೊಂಡವನು ಎಂದಾದರೆ, ವೇಳೆವಾಳಿ ಎಂದರೆ ಕಷ್ಟ ಪ್ರಸಂಗಗಳು ಎದುರಾದಾಗ ಜೊತೆಗೆ ನಿಲ್ಲುವವನು ಎಂದರ್ಥ.
ಧರ್ಮ-ತತ್ತ್ವ-ಸಂಸ್ಕೃತಿಗಳ ರಕ್ಷಣೆಗೆ ಇಂಥ ಲೆಂಕನಾಗುವುದು ಇಂದು ಅತ್ಯಗತ್ಯ. ಕೆಟ್ಟದ್ದು ತನ್ನೊಳಗೇ ಇರಲಿ, ಹೊರಗೆ ಇರಲಿ, ಅದನ್ನು ಆದಷ್ಟು ಬೇಗ ತೆಗೆದು ಹಾಕಬೇಕು. ಕೆಟ್ಟ ವಸ್ತುಗಳನ್ನು ಶರೀರದೊಳಗೆ ಇಟ್ಟುಕೊಂಡಾಗ ರೋಗಗಳು ನೆಲೆಯೂರುತ್ತವೆ. ಹಾಗೆಯೇ ಮೂಢ ಮತ್ತು ಕೆಟ್ಟ ಮೌಲ್ಯಗಳನ್ನು, ಆಚರಣೆಗಳನ್ನು ಸಮಾಜದ ಒಳಗೆ ಇಟ್ಟುಕೊಂಡಾಗ ಹಲವು ಬಗೆಯ ಸಾಮಾಜಿಕ ವೈಪರೀತ್ಯಗಳು ಕಾಣಬರುತ್ತವೆ. ಏನೇ ಕೆಟ್ಟುದನ್ನು ಗಮನಿಸಿದರೂ ಭಾರತೀಯರು 'ನಮಗೇಕೆ ಬೇಕು' ಎಂದು ಉದಾಸೀನ ತಾಳುವರು. ಇಲ್ಲಿಯ ಅಸಹ್ಯ ಪರಿಸ್ಥಿತಿಗೆ ಇನ್ನೊಂದು ಕಾರಣವು ಇದೆ. ಅದೆಂದರೆ, ಯಾರನ್ನೂ ನೋಯಿಸಬಾರದು ಅವಾಸ್ತವವಾದಿ ಸಿದ್ಧಾಂತ, ವೈಯಕ್ತಿಕವಾಗಿ ನೋಯಿಸಬಾರದೆಂದು ಸಾಮಾಜಿಕ, ರಾಷ್ಟ್ರೀಯ ಅನಾಹುತಗಳಿಗೆ ಕಾರಣರಾಗುವ ಜನರೇ ಬಹಳ. ಇದಕ್ಕಾಗಿಯೇ ಬಸವಾದಿ ಪ್ರಮಥರು ಅನಿಷ್ಟದೊಡನೆ ಹೋರಾಡಿ ಇಷ್ಟವನ್ನು ಸಾಧಿಸಬೇಕು ಎಂಬ ಸೂತ್ರವನ್ನುಳ್ಳ ಗಣಾಚಾರ ಎಂಬ ಆಚರಣೆಯನ್ನು ಇಟ್ಟರು. ಸಮತಾವಾದ, ಏಕೇಶ್ವರವಾದ, ಬಸವಾದಿ ಪ್ರಮಥರ ಗೌರವ ಮುಂತಾದ ಉತ್ತಮ ಮೌಲ್ಯಗಳಿಗೆ ಕುತ್ತು ಬಂದಾಗ, ಗಣಾಚಾರಿಯು ಪ್ರತಿಭಟಿಸಬೇಕು.
ಬಸವ ಧರ್ಮ, ಶರಣರ ಪರಂಪರೆ, ಇವುಗಳಿಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಂಕಷ್ಟ-ವಿರೋಧ ಒದಗಿದಾಗ ಪ್ರತಿಭಟಿಸಬೇಕಾದುದು, ರಕ್ಷಿಸಬೇಕಾದುದು ಅತ್ಯಗತ್ಯ. ಇಂಥ ಕಾರ್ಯಕ್ಕಾಗಿ ನನ್ನ ಜೀವನವನ್ನು ಪ್ರಾಣವನ್ನು ಮೀಸಲಿಡುತ್ತೇನೆ' ಎಂದು ಗಣಾಚಾರ ದೀಕ್ಷೆಯನ್ನು ಹೊಂದಿ 'ಬಸವ ಬೆಂಕ ವ್ರತ'ವನ್ನು ಕೈಗೊಳ್ಳುವುದು ಬಹಳ ಉದಾತ್ತವಾದುದು. ಈ ಸಂಕಲ್ಪವನ್ನು ಬಸವ ತತ್ತ್ವನಿಷ್ಠರಾದ ಗುರು-ಜಂಗಮರುಗಳ ಸನ್ನಿಧಿಯಲ್ಲಿ ತೊಡಬಹುದು. ಇಲ್ಲವೇ ಬಸವ ತತ್ತ್ವನಿಷ್ಠರಾದ ಗಣಸಮೂಹದ ಎದುರಿಗೆ ತೊಡಬಹುದು.
ದೀಕ್ಷಾವಿಧಿ
ಮೊಟ್ಟ ಮೊದಲು ಇಷ್ಟಲಿಂಗಾರ್ಚನೆ ನಂತರ ಬಸವೇಶ್ವರ ಪೂಜಾವ್ರತ, ದೀಕ್ಷಾರ್ಥಿಯು ಪೂಜಾವ್ರತ ಪೂರೈಸಿ, ಕರುಣ ಪ್ರಸಾದವನ್ನು ಪಡೆಯಬೇಕು. ನಂತರ ಲೋಹದಿಂದ ಮಾಡಿದ ಬಸವ ಕಂಕಣ (ಕಡಗ)ವನ್ನು ಧರಿಸಬೇಕು. ಈಗ ಪ್ರತಿಜ್ಞಾವಿಧಿ:
ಬಸವ (ಲಿಂಗಾಯತ) ಧರ್ಮದ ಗಣಾಚಾರ ವ್ರತಿಯ ಪ್ರತಿಜ್ಞಾ ವಿಧಿ
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷದ ಶಿವರಾತ್ರಿಯಂದು ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. |
7 | ವ | ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀ / ಪರಪುರುಷ, ಪರದೈವಂಗಳಿಗೆ ಎಳಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ಇಂದಿನಿಂದ ನಾನು ನನ್ನ ತನು-ಮನ-ಪ್ರಾಣಗಳನ್ನು ಬಸವಧರ್ಮದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಗೆ ಮೀಸಲಿಡುತ್ತೇನೆ. ಬಸವಧರ್ಮವು ಬೋಧಿಸುವ ತತ್ತ್ವಗಳ ಉಳುವಿಗಾಗಿ ಪ್ರಸಂಗ ಬಂದರೆ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಗಣಾಚಾರಿಯಾಗಿರುತ್ತೇನೆ. |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯಗುರು ಬಸವೇಶ ಹರಹರ ಮಹಾದೇವ
ಪ್ರತಿಜ್ಞಾ ವಿಧಿಯ ನಂತರ ಈ ವೀರವ್ರತಿ (ಗಣಾಚಾರಿ) ಬಸವ ಲೆಂಕನಿಗೆ ನೆರೆದವರು ವಿಭೂತಿಯ ಬೊಟ್ಟನ್ನಿಟ್ಟು ಆರತಿ ಬೆಳಗಿ, ತಮ್ಮ ಪ್ರೀತಿಯ ಕೊಡುಗೆ ಕೊಟ್ಟು ಶುಭ ಕೋರಬೇಕು.
ಗ್ರಂಥ ಋಣ:
[1] "ಬಸವ ಧರ್ಮದ ಸಂಸ್ಕಾರಗಳು", ಲೇ:ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ, ಪ್ರ: ವಿಶ್ವಕಲ್ಯಾಣ ಮಿಷನ್, ಬೆಂಗಳೂರು, ೧೯೯೫.
[2] ಗೋಧಿ ಹಿಟ್ಟನ್ನು ಕಲಸಿ ಚಿಕ್ಕ ಚಿಕ್ಕ ದೀಪಗಳನ್ನು ಮಾಡಬಹುದು.