ಇಷ್ಟಲಿಂಗ ದೀಕ್ಷೆ ವಿಧಾನ
ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿರಲಿ ಬಾಲ್ಯಾವಸ್ಥೆಯನ್ನು (Boyhood - Girl hood) ಕಳೆದು ಯೌವ್ವನಾವಸ್ಥೆ, ಕನ್ಯೆವಸ್ಥೆಗೆ, ಕಾಲಿಡುವ ಸಮಯ ಬಹಳ ಮಹತ್ವಪೂರ್ಣವಾದುದು. ಶರೀರವು ಸಂಪೂರ್ಣವಾಗಿ ಸ್ಥಿತ್ಯಂತರಗೊಳ್ಳುವ ಕಾಲವಿದು. ಹೀಗಾಗಿ ಹುಟ್ಟಿದಾಗ ಲಿಂಗಧಾರಣೆಯಾಗಿದ್ದ ಮಗುವಿಗೆ, ಈಗ ದೀಕ್ಷೆಯನ್ನು ನೆರವೇರಿಸಲಾಗುವುದು. ಬಾಲಕಿಯು ಋತುಮತಿಯಾದಾಗ, ಗಂಡು ಮಕ್ಕಳು ೧೨ ರಿಂದ ೧೬ ವರ್ಷಗಳ ಅವಧಿಯಲ್ಲಿರುವಾಗ ಲಿಂಗದೀಕ್ಷೆಯು ನೆರವೇರುವುದು: ಚನ್ನಬಸವಣ್ಣನವರು ದೀಕ್ಷೆಗಾಗಿ ಗುರು ಬಸವಣ್ಣನವರನ್ನು ಪ್ರಾರ್ಥಿಸುವ ಮತ್ತು ಅನುಗ್ರಹ ಪಡೆಯುವ ಒಂದು ಅಧ್ಯಾಯವೇ ಶೂನ್ಯ ಸಂಪಾದನೆಯಲ್ಲಿದೆ. ಹುಟ್ಟಿದಾಗ ಲಿಂಗಧಾರಣೆಯನ್ನು ಅಕ್ಕಮಹಾದೇವಿಯು ಮಾಡಿಸಿಕೊಂಡಿರುತ್ತಾಳೆ;
ಗುರುವಿನ ಕರುಣದಿಂದ ಲಿಂಗವ ಕಂಡೆ, ಜಂಗಮವ ಕಂಡೆ
ಗುರುವಿನ ಕರುಣದಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ,
ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಯೋಷ್ಠಿಯ ಕಂಡೆ
ಚನ್ನ ಮಲ್ಲಿಕಾರ್ಜುನಯ್ಯಾ,
ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ
ಲಿಂಗಸ್ವಾಯತವ ಮಾಡಿದನಾಗಿ, ಧನ್ಯಳಾದೆನು.
ಪುನಃ ಲಿಂಗದೀಕ್ಷೆಯನ್ನು ಪಡೆಯುತ್ತಾಳೆ. ಇದರಿಂದ ಲಿಂಗಧಾರಣೆ ಲಿಂಗದೀಕ್ಷೆಗಳೆರಡೂ ಧರ್ಮಾನುಯಾಯಿಗೆ ಅತ್ಯಗತ್ಯ ಎಂಬ ನೇಮವಿರುವುದು ಖಚಿತವಾಗುತ್ತದೆ. ಹಳೆಯ ಮೈಸೂರು ಭಾಗದಲ್ಲಿ ಇತ್ತೀಚಿನವರೆಗೂ ಈ ಪದ್ದತಿ ಆಚರಣೆಯಲ್ಲಿದ್ದಿತು; ಉತ್ತರ ಕರ್ನಾಟಕದಲ್ಲಿ ಇದು ನಶಿಸಿ ಹೋಗಿರುವುದನ್ನು ಕಾಣಬಹುದು.
ಲಿಂಗಧಾರಣೆ ವಿವಾಹಪೂರ್ವದ ನಿಶ್ಚಯ - ಕಾರ್ಯವಿದ್ದಂತೆ, ಲಿಂಗದೀಕ್ಷೆ ವಿವಾಹವಿದ್ದಂತೆ, ಕೇವಲ ನಿಶ್ಚಯಮಾಡಿಸಿಕೊಂಡು ವಿವಾಹವಾಗದಿದ್ದರೆ ಸಾಮಾಜಿಕವಾಗಿ ಸತಿಪತಿ ಸಂಬಂಧ ಹೇಗಿರದೋ ಹಾಗೆ ಲಿಂಗದೀಕ್ಷೆಯಾಗದ ದೇವ-ಭಕ್ತರ ಸಂಬಂಧ. ಲಿಂಗಾಯತ ಧರ್ಮದ ಅನುಯಾಯಿತ್ವವು ಕೇವಲ ಹುಟ್ಟಿನಿಂದ ಬರದು; ಸ್ವೀಕಾರ (acceptance) ದಿಂದ ಬರುವುದು... ನಿಶ್ಚಯ ಕಾರ್ಯದಲ್ಲಿ ವಧು-ವರರ 'ತಾಯಿ ತಂದೆಯರು . ಪರಸ್ಪರ ಮಾತುಕತೆಯಾಡಿ ನಿಶ್ಚಯಿಸುವರು. ಹಾಗೆಯೇ ಲಿಂಗಧಾರಣೆಯಲ್ಲಿ ಮಗುವಿನ ಪರವಾಗಿ ಅದರ ತಾಯಿತಂದೆಯರು ಪ್ರತಿಜ್ಞೆಯನ್ನು ಸ್ವೀಕರಿಸುವರು. ವಿವಾಹದಲ್ಲಿ ವಧುವರರು ನೇರವಾಗಿ ಪ್ರತಿಜ್ಞಾ ಸ್ವೀಕಾರ ಮಾಡುವರು. ಹಾಗೆ ಇಲ್ಲಿ ಭಕ್ತನು ನೇರವಾಗಿ ಗುರುವಿನ ಸನ್ನಿಧಿಯಲ್ಲಿ ಪ್ರತಿಜ್ಞಾಬದ್ಧನಾಗುವನು. ಹುಟ್ಟಿನಿಂದ ಲಿಂಗಾಯತರಲ್ಲದವರು ಲಿಂಗಧಾರಣೆ ಮಾಡಿಸಿಕೊಂಡಿರುವುದಿಲ್ಲ; ಅವರು ಸ್ವಯಂ ಪ್ರೇರಣೆಯಿಂದ ದೀಕ್ಷೆ ಪಡೆಯುವರು. ಇವರು ನಿಶ್ಚಯ ಕಾರ್ಯವಾಗದಿದ್ದರೂ ವಿವಾಹವಾದ ಗೃಹಿಣಿಯರಂತೆ ಶ್ರೇಷ್ಠರಾಗುವರು. ಲಿಂಗಧಾರಣೆ ಮಾಡಿಸಿಕೊಂಡೂ ದೀಕ್ಷೆ ಪಡೆಯದ ಲಿಂಗಾಯತರು, ನಿಶ್ಚಯ ಮಾತ್ರವಾಗಿ ವಿವಾಹವಾಗದಿರುವ ಕನ್ಯೆಯಂತೆ, ಕನಿಷ್ಠರಾಗುವರು. ಮಗುವಿಗೆ ಮಾಡುವ ಲಿಂಗಧಾರಣೆಯನ್ನು ಕ್ರೈಸ್ತ ಧರ್ಮದಲ್ಲಿ ಮೊದಲು ಮಾಡಿಸುವ ದೀಕ್ಷಾ ಸ್ನಾನ (Baptism) ಕ್ಕೆ, ಲಿಂಗದೀಕ್ಷೆಯನ್ನು ಪ್ರೌಢ ಬಾಲಕರಿಗೆ ಮಾಡುವ ಸ್ಥಿರೀಕರಣ (Confirmation)ಕ್ಕೆ ಹೋಲಿಸಬಹುದು. ತಾನು ಮಗುವಿದ್ದಾಗ ತನ್ನ ತಂದೆತಾಯಿ ಗುರುವಿಗೆ ಕೊಟ್ಟ ಮಾತಿನಂತೆ ನಡೆಯುವುದಕ್ಕಿಂತಲೂ ತಾನು ಪ್ರತಿಜ್ಞಾಬದ್ದನಾಗುವುದು ಶ್ರೇಷ್ಠವಲ್ಲವೆ ? ಆದ್ದರಿಂದ ಎಲ್ಲರೂ ಲಿಂಗದೀಕ್ಷೆಯನ್ನು ಕಡ್ಡಾಯವಾಗಿ ಪಡೆಯಬೇಕು.
ಲಿಂಗಧಾರಣವು ಒಂದು ಸಾಂಪ್ರಾದಾಯಿಕ ವಿಧಿಯಾಗಿರುವುದರಿಂದ ಅಯ್ಯನವರಿಂದಲೋ, ಅವರು ಸಿಕ್ಕದಿದ್ದಾಗ ಯಾರಾದರೂ ಉತ್ತಮ ಸಂಸ್ಕಾರದ ಶರಣರಿಂದಲೋ ಕಡೆಗೆ ಮನೆಯ ಹಿರಿಯರಿಂದಲೋ ನಡೆಯಬಹುದು. ಆದರೆ ಲಿಂಗದೀಕ್ಷೆಯನ್ನು ಜ್ಞಾನಿಗಳು, ಪೂಜಾನಿಷ್ಠರು, ಬಸವ ಪಥಿಕರೂ ಆದವರಿಂದ ಮಾಡಿಸಿಕೊಳ್ಳುವುದೇ ಯೋಗ್ಯ. ಇದು ಜೀವನದಲ್ಲಿ ಮಹತ್ತರ ಪರಿಣಾಮವನ್ನು ಬೀರುವ ಕ್ರಿಯೆ ಎಂಬುದನ್ನು ನೆನಪಿನಲ್ಲಿಡಬೇಕು. ಆದ್ದರಿಂದ ಸೂಕ್ತ ಗುರುವನ್ನು ಅರಸುತ್ತಿದ್ದು ಅಂಥವರು ದೊರೆತಾಗ ಲಿಂಗವಂತರು ದೀಕ್ಷೆ ಮಾಡಿಸಿಕೊಳ್ಳಬೇಕು. ತಿಳುವಳಿಕೆ ಇಲ್ಲದ್ದರಿಂದ, ಅಜ್ಞಾನದಿಂದ ೧೬ ವರ್ಷಗಳ ಒಳಗೆ ಮಾಡಿಸಿಕೊಂಡಿರದಿದ್ದವರೂ ವಯೋಮಿತಿಯಿಲ್ಲದೆ ಯೋಗ್ಯ ಗುರುಗಳು ಸಿಕ್ಕಾಗ ದೀಕ್ಷಾವಂತರಾಗಬೇಕು.
ಕೆಲವರು ಗುರುವರ್ಗದವರಿಂದಲೇ ಮಾಡಿಸಿಕೊಳ್ಳಬೇಕು, ಬೇರೆಯವರು ಮಾಡಿದ್ದು ಫಲಕೊಡುವುದಿಲ್ಲ' ಎಂದು ಮುಗ್ಧಭಕ್ತರಲ್ಲಿ ಪ್ರಚಾರ ಮಾಡುತ್ತಾರೆ. ಇದು ತಪ್ಪು, ಗುರುತ್ವ ಜಂಗಮತ್ವಗಳು ಯಾವುದೇ ಜಾತಿಗೆ, ವರ್ಗಕ್ಕೆ ಸೀಮಿತವಾಗಿಲ್ಲ. ಗುರು ಮುಟ್ಟಿ ಗುರುವಾದ ಯಾರು ಬೇಕಾದರೂ ದೀಕ್ಷಾನುಗ್ರಹ ನೀಡಬಹುದು. ಮತ್ತೆ ಕೆಲವು ವಿರಕ್ತರು ತಾವು ದೀಕ್ಷೆ ಮಾಡದೆ, ಗುರುವರ್ಗದವರಿಂದ ಮಾಡಿಸುವರು. ಇದೂ ತಪ್ಪೆ, ಗುರು-ಜಂಗಮರು ಅರ್ಹತೆಯಿಂದ ಆಗುವ ಕಾರಣ ತಮ್ಮ ಅನುಯಾಯಿಗಳಿಗೂ ತಾವೇ ಲಿಂಗದೀಕ್ಷೆ ನೀಡುವುದು ಉಚಿತ.
ಕೆಲವರು ತಮಗೆ ಯಾವ ವಿಷಯದಲ್ಲೂ ತಿಳುವಳಿಕೆ ಇರದೆ, ಸರಿಯಾಗಿ ಏನನ್ನೂ ಕಲಿಸದೆ ದೀಕ್ಷೆ ಕೊಡುವುದುಂಟು. ಆಗ ಅವರು ದೀಕ್ಷೆ ಎಂದರೆ ವಿವಾಹವಿದ್ದಂತೆ, ಒಂದೇ ಸಲ ಆಗುವುದು. ಪುನಃ ಬೇರೆಯವರಿಂದ ಅನುಗ್ರಹ ಪಡೆಯಬಾರದು.” ಎಂದು ಹೇಳುತ್ತಾರೆ. ಮುಂದೆ ಜ್ಞಾನಿಗಳಾದ ಗುರುಗಳು ಎಲ್ಲವನ್ನೂ ಸರಿಯಾಗಿ ತಿಳಿಸಿ, ಮನವರಿಕೆ ಮಾಡಿಕೊಟ್ಟಾಗ ಜನರಿಗೆ ಜ್ಞಾನಿಗಳಿಂದ ದೀಕ್ಷೆ ಪಡೆಯಬೇಕೆಂದು ಅಪೇಕ್ಷೆಯುಂಟಾಗಿ, ಮಾನಸಿಕ ತೊಳಲಾಟ ಆರಂಭವಾಗುತ್ತದೆ. ಬಾಲ್ಯದಲ್ಲಿ ತಮಗೆ ತಿಳುವಳಿಕೆಯಿಲ್ಲದಾಗ ವಿವರವನ್ನರಿಯದೆ ಪಡೆದ ದೀಕ್ಷೆ ಹೆಚ್ಚು ಫಲದಾಯಕವಾಗದು; ಆದ್ದರಿಂದ ಸಂಕಲ್ಪಶಕ್ತಿಯೊಡಗೂಡಿ ಜ್ಞಾನಿಗಳು ಅನುಗ್ರಹಿಸುವ ದೀಕ್ಷೆಯನ್ನು ತಿಳುವಳಿಕೆ ಬಂದಾಗ ಪಡೆದರೆ ತಪ್ಪೇನೂ ಇಲ್ಲ. ಮೊದಲು ದೀಕ್ಷೆ ನೀಡಿದವರು ಜ್ಞಾನಿಗಳಿರದಿದ್ದರೂ, ಸಾತ್ವಿಕರು, ಪೂಜಾ ನಿಷ್ಠರು ಇದ್ದರೆ ಆಗ ಭಕ್ತರು ನಂತರ ದರ್ಶಿಸಿದ ಮಹಾತ್ಮರನ್ನು ಶಿಕ್ಷಾ ಗುರುವೆಂದು, ಜ್ಞಾನ ಗುರುವೆಂದು ಭಾವಿಸಿ ಕರುಣ ಪ್ರಸಾದ ಪಡೆದರೆ ಸಾಕು; ತಲೆಯ ಮೇಲೆ ಕೈ ಇಡಿಸಿಕೊಂಡು ಆಶೀರ್ವಾದ ಪಡೆದರೆ ಸಾಕಾದೀತು, ಪುನಃ ದೀಕ್ಷೆ ಬೇಕಿಲ್ಲ.
ಇಷ್ಟಲಿಂಗ ದೀಕ್ಷಾ ವಿಧಾನ
ದೀಕ್ಷೆಯನ್ನು ಪಡೆದುಕೊಳ್ಳುವವರು ಪಡೆದುಕೊಳ್ಳುವ ದಿವಸ ತಲೆಯ ಮೇಲಿಂದ ನೀರನ್ನೆರೆದುಕೊಂಡು ಮಡಿ ಬಟ್ಟೆಗಳನ್ನುಟ್ಟುಕೊಂಡು, ಏನೂ ಆಹಾರವನ್ನು ಸ್ವೀಕರಿಸದೆಯೇ ಚಹಾ - ಹಾಲು - ಕಾಫಿ ಸಹ ಕುಡಿಯದೆ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬರಬೇಕು.
೧. ಧರಿಸಿಕೊಳ್ಳಲು ಇಷ್ಟಲಿಂಗ, ಇದು ಕಂಥೆ ಸಹಿತವಾಗಿ ಇರಬೇಕು.
೨. ಇಷ್ಟಲಿಂಗವನ್ನು ಧರಿಸಲು ಕರಡಿಗೆ, ಬಟ್ಟೆ ಅಥವಾ ಬಟ್ಟೆಯ ಚಿಕ್ಕ ಚೀಲ.
೩. ಗುರುಬಸವಣ್ಣನವರ ಭಾವಚಿತ್ರ.
೪. ಪ್ರತಿಜ್ಞಾವಿಧಿಯ ಪಟ - ದೇವಪೂಜಾ ವಿಧಾನ ಮತ್ತು ಶ್ರೀ ಬಸವೇಶ್ವರ ಪೂಜಾವ್ರತ ಪುಸ್ತಕಗಳು.
೫. ವಿಭೂತಿ - ರುದ್ರಾಕ್ಷಿ ಕಾಳು ಶಿವದಾರ.
೬. ಜಪಮಾಲೆ (ರುದ್ರಾಕ್ಷಿ ಅಥವಾ ಭದ್ರಾಕ್ಷಿಯದು)
೭. ಊದಿನ ಕಡ್ಡಿ - ಕರ್ಪೂರ.
೮. ಪತ್ರೆ - ಪುಷ್ಪ,
೯. ಬಾಳೆಹಣ್ಣು - ಕಲ್ಲು ಸಕ್ಕರೆ.
೧೦. ದೀಕ್ಷಾ ಕಾಣಿಕೆ (ಶಕ್ತ್ಯಾನುಸಾರ)
ಅವನ್ನು ತಟ್ಟೆಯಲ್ಲಿ ಜೋಡಿಸಿಕೊಂಡು ಬರಬೇಕು. ಗುರುಗಳು ಕುಳಿತಿರುವ ಪೂಜಾಗೃಹವನ್ನು ಪ್ರವೇಶಿಸಿ ಮೊಳಕಾಲೂರಿ ನಮಸ್ಕರಿಸಿ ಇನ್ನಿತರ ದೀಕ್ಷಾರ್ಥಿಗಳೊಡನೆ ಕುಳಿತುಕೊಳ್ಳಬೇಕು.
ಗುರುಗಳು ಸ್ನಾನವನ್ನು ಪೂರೈಸಿ, ಮಡಿಯನ್ನುಟ್ಟು ಬರುವರು. ದೀಕ್ಷಾರ್ಥಿಗಳು ಒಬ್ಬಿಬ್ಬರಿದ್ದರೆ ಗುರುಗಳು ನಿರಾಹಾರದಿಂದಲೇ ದೀಕ್ಷೆ ನೀಡಬಹುದು. ದೀಕ್ಷಾರ್ಥಿಗಳು ಬಹಳ ಜನರಿದ್ದು ಸಮಯ ಬಹಳ ಬೇಕಾಗುವುದರಿಂದ ಗುರುಗಳು ಅನಾರೋಗ್ಯ ಪೀಡಿತರಿದ್ದರೆ ಆಗ ಅವರು ಬೆಳಗಿನ ಸ್ನಾನ - ಪೂಜೆ ಪೂರೈಸಿ ಲಘು ಉಪಾಹಾರ ಮಾಡಿ (ಅಥವಾ ಹಾಲನ್ನು ಸ್ವೀಕರಿಸಿ) ನಂತರ ಪುನಃ ಸ್ನಾನ ಮಾಡಿ ಅಥವಾ ಮಡಿ ವಸ್ತ್ರಗಳನ್ನುಟ್ಟು ದೀಕ್ಷೆ ನೆರವೇರಿಸಬಹುದು.
ಗುರುಗಳು ಮೊದಲು ತಾವು ಇಷ್ಟಲಿಂಗಾರ್ಚನೆ ಮಾಡಿಕೊಳ್ಳುತ್ತ ದೀಕ್ಷಾರ್ಥಿಗಳಿಗೆ ವಿವರಿಸುತ್ತ ಹೋಗಬೇಕು. ಪೂಜೆಯ ವಿಧಾನವನ್ನು ತೋರಿಸದೆ ದೀಕ್ಷೆ ಕೊಟ್ಟರೆ ಏನೂ ಪ್ರಯೋಜನವಾಗದು, ಕತ್ತಲೆಯಲ್ಲಿ ಕನ್ನಡಿಯನ್ನು ನೋಡಿಕೊಳ್ಳಲು ಕೊಟ್ಟಂತೆ ಆಗುವುದು. (ಇಷ್ಟಲಿಂಗ ಪೂಜಾ ವಿಧಾನಕ್ಕಾಗಿ ದೇವಪೂಜಾ ವಿಧಾನ ಪುಸ್ತಕ ನೋಡಿರಿ). ಪೂಜೆ ಮಾಡಿ ತೀರ್ಥಪ್ರಸಾದವನ್ನು ತಾವು ಮೊದಲು ಸ್ವೀಕರಿಸಬೇಕು.
ಲಿಂಗ ನಿಷ್ಠಾಪರರಾದ ಶರಣಮಾರ್ಗಿಗಳು ತಮ್ಮ ಬದುಕಿನ ಆಸೆಗಳನ್ನು ಪೂರೈಸಿಕೊಳ್ಳಲಿಕ್ಕೆ ಹಲವಾರು ದೇವ-ದೇವತೆಗಳ ಆರಾಧನೆ ಮಾಡಿ, ಕ್ಷುದ್ರ ದೈವೋಪಾಸನೆಗೆ ಬಲಿಯಾಗದೆ, ಇಷ್ಟಲಿಂಗ ಪೂಜೆ - ಬಸವೇಶ್ವರ ಪೂಜಾವ್ರತದ ಮೂಲಕವೇ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬೇಕೆಂದು ಹೇಳಿ ಸಂಕಲ್ಪ ಜಪ, ಸಾಮೂಹಿಕ ಜಪ ಮಾಡುವ ವಿಧಾನ ಹೇಳಿಕೊಡಬೇಕು. ವಿವಾಹ - ಸಂತಾನ ಪ್ರಾಪ್ತಿ, ಕಾಯಕದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಅಭಿವೃದ್ಧಿ ಮುಂತಾದ ಯಾವುದೇ ಇಷ್ಟಾರ್ಥ ಸಿದ್ಧಿಗೆ ಸಂಕಲ್ಪಜಪ ಮಾಡುವುದು ಒಳ್ಳೆಯದು. ಇಂಥ ಕಾರ್ಯ ಸಿದ್ಧಿಸುವ ತನಕ ಇಷ್ಟು ಜಪ ಮಾಡುವೆ” ಎಂಬುದೇ ಸಂಕಲ್ಪ ಜಪ, ಗುರುಗಳು ಸಾಮೂಹಿಕವಾಗಿ ಮಂತ್ರ ಜಪ ಮಾಡಿಸಿ, ನಂತರ ಇಷ್ಟಲಿಂಗಕ್ಕೆ ತೀರ್ಥವನ್ನು ಮೂರು ಬಾರಿ ಎರೆದು ಆ ತೀರ್ಥವನ್ನು ಬಟ್ಟಲಿನಲ್ಲಿ ಸಂಗ್ರಹಿಸಿಕೊಳ್ಳಬೇಕು.
ನಂತರ ಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಂಗಲ ಮಾಡಿ ಬಸವ ಮಂತ್ರೋ (ಹಸ್ತೋ)ದಕವನ್ನು ಸಿದ್ಧಪಡಿಸಿಕೊಳ್ಳಬೇಕು. ಅದನ್ನು ಇಷ್ಟಲಿಂಗ ತೀರ್ಥದೊಡನೆ ಬೆರೆಸಿ ಇಟ್ಟುಕೊಳ್ಳಬೇಕು. ಕೆಲವೊಮ್ಮೆ ದೀಕ್ಷಾನುಗ್ರಹಕ್ಕೆಂದು ಗುರುಗಳಿಗೆ ಬಿನ್ನಹ ನೀಡಿದ ಮನೆಯವರು ಪಾದಪೂಜೆ ಮಾಡಲು ಇಚ್ಛಿಸುವರು. ಗುರುಬಸವ ಪೂಜೆ - ಇಷ್ಟ ಲಿಂಗ ಪೂಜೆ ಆದ ಮೇಲೆ ಈಗ ಪಾದಪೂಜೆಗೆ ಅವಕಾಶ ನೀಡಿ, ಭಕ್ತರು ಬಟ್ಟಲಲ್ಲಿ ಸಂಗ್ರಹಿಸುವ ಅಂಗುಷ್ಠೋದಕ (ಪಾದೋದಕ)ವನ್ನು ತೀರ್ಥದ ಬಟ್ಟಲಿಗೆ ಹಾಕಿ, ಒಂದು ವಸ್ತ್ರವನ್ನು ಮುಚ್ಚಿ ಇಡಬೇಕು. ಗುರು-ಲಿಂಗ-ಜಂಗಮ ಮೂರೂ ತೀರ್ಥಗಳು ಒಟ್ಟುಗೂಡಿದಂತೆ ಆಗುವುದು.
ಗುರುಗಳು ಈಗ ದೀಕ್ಷಾರ್ಥಿಯ ಇಷ್ಟಲಿಂಗವನ್ನು ತೆಗೆದುಕೊಂಡು ತಾವು ಪೂಜಿಸಬೇಕು. ಮೊದಲು ಶುದ್ಧಜಲ ಎರೆಯಬೇಕು. ನಂತರ ಗುರು-ಲಿಂಗ-ಜಂಗಮ ತೀರ್ಥವನ್ನು ಎರೆಯಬೇಕು. ನಿತ್ಯ ಲಿಂಗಾರ್ಚನೆ ಮಾಡುವ ವಿಧಿಯಂತೆ ಮಜ್ಜನಕ್ಕೆರೆದು, ಅಂಗೈಯಲ್ಲಿ ಪಂಚಕೋನ ಬರೆದು ಲಿಂಗವನ್ನಿರಿಸಿ ಭಸ್ಮ ಧರಿಸಿ, ಗಂಧವನ್ನಿರಿಸಿ, ಅಕ್ಷತೆಯನ್ನಿಟ್ಟು, ಪತ್ರೆ - ಪುಷ್ಪಗಳನ್ನೇರಿಸಿ, ಧೂಪ ಧೂಮ ನೀಡಿ, ಆರತಿ ಬೆಳಗಿ, ನೈವೇದ್ಯವನ್ನು ಇರಿಸಿ, ಅರ್ಘ್ಯವನ್ನು ಬಿಟ್ಟು, ಗಂಟೆಯನ್ನು ತಾಡಿಸಿ ಕುರಂಗ ಮುದ್ರೆಯಿಂದ ನಮಸ್ಕರಿಸಬೇಕು. ಅಷ್ಟವಿಧಾರ್ಚನೆಯ ನಂತರ ತ್ರಾಟಕ (ದೃಷ್ಟಿ) ಯೋಗದ ಮೂಲಕ ಚಿತ್ಕಳೆಯನ್ನು ತುಂಬಬೇಕು. ಮನಸ್ಸಿನಲ್ಲಿ ಸತ್ ಸಂಕಲ್ಪ ಧಾರಣೆ ಮಾಡಿ, ಆ ಸಂಕಲ್ಪವನ್ನು ದೃಷ್ಟಿಯ ಮೂಲಕ ಇಷ್ಟಲಿಂಗದಲ್ಲಿ ನೆಲೆಗೊಳಿಸಬೇಕು. ಈ ಚಿತ್ಕಳಾಭರಿತ ಇಷ್ಟಲಿಂಗವನ್ನು ಶಿಷ್ಯನಿಗೆ ಧರಿಸಬೇಕು.
ಒಬ್ಬರು - ಇಬ್ಬರು ದೀಕ್ಷಾರ್ಥಿಗಳಿದ್ದಾಗ ತಮ್ಮ ಅಂಗೈಯಲ್ಲೇ ಇಷ್ಟಲಿಂಗವಿಟ್ಟು ಪೂಜೆ - ತ್ರಾಟಕ ಮಾಡಬೇಕು. ಬಹಳ ಜನರಿದ್ದಾಗ ಚಿಕ್ಕದಾದ ಒಂದು ತಟ್ಟೆಯಲ್ಲಿ ಸಾಲಾಗಿ - ಅಂದರೆ ದೀಕ್ಷಾರ್ಥಿಗಳನ್ನು ಕೂಡ್ರಿಸಿದ ಕ್ರಮದಲ್ಲೇ - ಇಷ್ಟಲಿಂಗಗಳನ್ನು ಜೋಡಿಸಿ ಪೂಜಿಸಬೇಕು. (ಒಮ್ಮೆ ಕೂತವರು ಸ್ಥಳ ಬದಲಿಸದಂತೆ ಎಚ್ಚರ ವಹಿಸಬೇಕು) ಮತ್ತು ತ್ರಾಟಕ ಮಾಡಬೇಕು.
ಮೊಟ್ಟ ಮೊದಲು ಬಟ್ಟಲಲ್ಲಿರುವ ತೀರ್ಥವನ್ನು ಬಲಗೈಗೆ ಹಾಕಿಕೊಂಡು ದೀಕ್ಷಾರ್ಥಿಯ ತಲೆಯ ಮೇಲೆ ಸಿಂಪಡಿಸಬೇಕು. ನಂತರ ಲಿಂಗನೈವೇದ್ಯಕ್ಕಿಟ್ಟ ಕಲ್ಲು ಸೆಕ್ಕರೆಯನ್ನು ಸೇವಿಸಲು (ತಿನ್ನಲು) ಕೊಡಬೇಕು. ನಂತರ ಮೂರು ಎಳೆ ಭಸ್ಮವನ್ನು ಹಣೆಗೆ ಮೂರು ಬಾರಿ ಧರಿಸಬೇಕು; ಹಾಗೆ ಧರಿಸುವಾಗ "ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂದು ಪಠಿಸಬೇಕು. ಶಿವದಾರಕ್ಕೆ ಪೋಣಿಸಿದ ಒಂದು ರುದ್ರಾಕ್ಷಿಯನ್ನು ಕೊರಳಿಗೆ ಹಾಕಬೇಕು. (ನಂತರ ಕರಡಿಗೆಯ ಶಿವದಾರಕ್ಕೆ ಇದನ್ನು ಅವರು ಏರಿಸಿಕೊಳ್ಳುವರು. ಬಟ್ಟೆಯಲ್ಲಿ ಲಿಂಗಧಾರಣೆ ಮಾಡಿಕೊಳ್ಳುವವರು ಪ್ರತ್ಯೇಕವಾಗಿ ರುದ್ರಾಕ್ಷಿ ಹಾಕಿಕೊಳ್ಳಬಹುದು).
ಎಡ ಅಂಗೈಯಲ್ಲಿ ಪಂಚಕೋನ ಪ್ರಣವವನ್ನು ಓಂ ಲಿಂಗಾಯ ನಮಃ ಎಂದು ಉಚ್ಚರಿಸುತ್ತ ಬರೆಯಬೇಕು. ಮಧ್ಯದ ಪ್ರಣವ ಪೀಠದ ಮೇಲೆ ಇಷ್ಟಲಿಂಗವನ್ನು - ಅದರ ಕಂತೆಯ ಮೇಲೆ ಇರುವ ಕಚ್ಚು ಹೆಬ್ಬೆರಳಿನ ಕಡೆಗೆ ಮುಖವಾಗುವಂತೆ - ಇಡಬೇಕು. ಶಾಂಭವಿ ಮುದ್ರೆಯಲ್ಲಿ ಕುಳಿತ ಪೂಜಕನು, ತನ್ನ ಸ್ವರೂಪ (ಆತ್ಮ) ಪೂಜೆಯನ್ನೇ ಮಾಡುವುದರಿಂದ ಹೀಗೆ ತಾನು ಕುಳಿತಂತೆಯೇ ಇಷ್ಟಲಿಂಗವನ್ನು ಇಡುವನು. ಕಂತೆಯ ಒಳಗಿರುವ ಪಂಚಸೂತ್ರ ಲಿಂಗದ ಜಲಹರಿಯು ಇರುವುದನ್ನು ಈ ಗುರುತು ಸೂಚಿಸುತ್ತದೆ. ದೀಕ್ಷಾರ್ಥಿಯ ಅಂಗೈಯಲ್ಲಿ ಇಷ್ಟಲಿಂಗವನ್ನಿಟ್ಟು ಇನ್ನೊಮ್ಮೆ ಭಸ್ಮ - ಪುಷ್ಪ ಮುಂತಾದ ಎಲ್ಲ ವಸ್ತುಗಳನ್ನಿಟ್ಟು, ನೈವೇದ್ಯಕ್ಕೆ ಕಲ್ಲು ಸಕ್ಕರೆ ಇಡುವನು.
ಈಗ ಬಲಗೈಯನ್ನು ದೀಕ್ಷಾರ್ಥಿಯ ಮಸ್ತಕದ ಮೇಲೆ ಅಂದರೆ ಸಹಸ್ರಾರ ಚಕ್ರದ ಮೇಲೆ ಇಟ್ಟು ಭಾವಪೂರ್ಣವಾಗಿ, ಸಂಕಲ್ಪ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಓಂ ಲಿಂಗಾಯ ನಮಃ ಮಂತ್ರವನ್ನು ಕರುಣೆ (grace) ಯನ್ನು - ಶಕ್ತಿ (power) ಯನ್ನು 'ಶಕ್ತಿಪಾತ'ದ ಮೂಲಕ ಅಂಗವಿಸುವಂತೆ (ವೇಧಿಸುವಂತೆ) ಕಣ್ಣು ಮುಚ್ಚಿಕೊಂಡು ಅವತೀರ್ಣ (descend) ಗೊಳಿಸಬೇಕು. ದೀಕ್ಷಾರ್ಥಿಯೂ ಅಷ್ಟೇ ಭಕ್ತಿಯುತನಾಗಿ ಕಣ್ಣುಗಳನ್ನು ಮುಚ್ಚಿ ಆ ಕರುಣೆಯನ್ನು ಶಕ್ತಿಯನ್ನು ಅವಧರಿಸುವಂತೆ (ಸ್ವೀಕರಿಸುವಂತೆ) ಓಂ ಲಿಂಗಾಯ ನಮಃ ಮಂತ್ರವನ್ನು ಪುನರುಚ್ಚರಿಸಬೇಕು. ಗುರುಬಸವ ಮಂತ್ರದ ಸಂಕೇತವಾಗಿ ೧೨ ಬಾರಿಯಾಗಲಿ ಅಥವಾ ನವಚಕ್ರಗಳನ್ನು ಜಾಗೃತಿಸುವಂತೆ ೯ ಬಾರಿಯಾಗಲಿ ಹೀಗೆ ಗುರು ಉಸುರಬೇಕು. ಕಡೆಯಲ್ಲಿ ಪೂರ್ಣಾಶೀರ್ವಾದ ನೀಡುವಂತೆ ಎರಡೂ ಹಸ್ತಗಳನ್ನು ತಲೆಯ ಮೇಲಿಟ್ಟು ಮನಸ್ಸಿನಲ್ಲಿ ಮಂತ್ರವನ್ನು ನೆನೆಯುತ್ತ ಶಿಷ್ಯನನ್ನು ವಾತ್ಸಲ್ಯಭಾವದಿಂದ ದೃಷ್ಟಿಯ ಮೂಲಕ ದೇವನ ಕರುಣೆ - ಸಂಕಲ್ಪ ಶಕ್ತಿಯನ್ನು ಕೊಡುವಂತೆ ಕ್ಷಣಕಾಲ ನೋಡಬೇಕು.
ಮಂತ್ರೋಪದೇಶ ಪಡೆದ ವ್ಯಕ್ತಿಯು ನೇರವಾಗಿ ಕುಳಿತು, ಎಡಗೈಯನ್ನು ಮೇಲಕ್ಕೇರಿಸಿ, ಮೂಗಿನಿಂದ ೧೨ ಅಂಗುಲ ದೂರವಿರುವಂತೆ ಇಷ್ಟಲಿಂಗ ಇಟ್ಟುಕೊಂಡು ಕಣ್ಣುಗಳನ್ನು ಪೂರ್ತಿ ತೆರೆಯದೆ, ಪೂರ್ತಿ ಮುಚ್ಚದೆ ಅರೆತೆರೆದ ದೃಷ್ಟಿಯಿಂದ ಅಂದರೆ ಅನಿಮಿಷನೋಟದಿಂದ ಇಷ್ಟಲಿಂಗವನ್ನು ದೃಷ್ಟಿಸಬೇಕು. ಬಲಗೈಯಲ್ಲಿ ಜಪಮಾಲೆ (ರುದ್ರಾಕ್ಷಿ, ಭದ್ರಾಕ್ಷಿ ಅಥವಾ ಚಕ್ರವಾಕ ಮಣಿ) ಹಿಡಿದು ಒಂದೊಂದು ಮಣಿ ಸರಿಸಿದಾಗ ಒಂದು ಸಲ “ಓಂ ಲಿಂಗಾಯ ನಮಃ" ಎಂದು ಸ್ಮರಿಸುತ್ತ ಮನಸ್ಸಿನಲ್ಲಿ ಮಂತ್ರಜಪ ಮಾಡಬೇಕು. ಕನಿಷ್ಠ ಪಕ್ಷ ೧೦೮ ಸಲ ಮಂತ್ರ (ಜಪಮಾಲೆ ಒಂದು ಸುತ್ತು ಬರುವಂತೆ ಹೇಳಿ ನಂತರ ಲಿಂಗಧ್ಯಾನ ಮಾಡಬೇಕು.
ಗುರುವು ಮತ್ತೊಬ್ಬರಿಗೆ ಹಸ್ತಮಸ್ತಕ ಸಂಯೋಗ, ಮಂತ್ರೋಪದೇಶ ಮಾಡಲು ಮುಂದೆ ಸಾಗುವನು.
ಲಿಂಗಧ್ಯಾನವೆಂದರೆ ಇಷ್ಟಲಿಂಗ ಸಹಿತವಾದ ಎಡ ಅಂಗೈಯನ್ನು ಮೇಲಿಟ್ಟು, ಬಲ ಅಂಗೈಯನ್ನು ಎಡ ಅಂಗೈಗೆ ಆಸರೆಯಾಗಿ ಕೆಳಗಿಟ್ಟು ಎರಡನ್ನೂ ಸೇರಿಸಿ ಹೊಕ್ಕುಳಿಗೆ ಸಮಾನಾಂತರದಲ್ಲಿ ತೊಡೆಯ ಮೇಲೆ ಇಟ್ಟು ದೃಷ್ಟಿಯನ್ನು ಅಂತರುಖಗೊಳಿಸಿಕೊಂಡು ಮನಸ್ಸಿನಲ್ಲೇ "ಓಂ ಲಿಂಗಾಯ ನಮಃ ” ಎಂದು ಧ್ಯಾನಿಸುವುದು. ಇಷ್ಟಲಿಂಗಯೋಗದಲ್ಲಿ ಅತ್ಯಂತ ಮಹತ್ವಪೂರ್ಣವಾದ ಅಂಗಗಳೆಂದರೆ ದೃಷ್ಟಿಯೋಗ ಮತ್ತು ಲಿಂಗಧ್ಯಾನ. ಸಾಮಾನ್ಯ ಧಾರ್ಮಿಕರಿಗೆ ಇಷ್ಟಲಿಂಗ ತ್ರಾಟಕ ಮಾಡುವಾಗ ೧೦೮ ಸಲ ಮಂತ್ರ ಜಪ ಮಾಡಿರಿ ಎಂದು ಹೇಳಿ ಬಿಡುತ್ತೇವೆ. ಈ ನಿಯಮ ಅಷ್ಟನ್ನೂ ಮಾಡಲು ತಾಳ್ಮೆ ಇರದ ಜನರಿಗಾಗಿ, ಸಾಧನೆಯಲ್ಲಿ ಆಸಕ್ತರಾದ ಅಧ್ಯಾತ್ಮ ಜೀವಿಗಳಿಗೆ ಈ ನಿಯಮ ಅನ್ವಯಿಸದು. ನೇಮಕ್ಕಾಗಿ ಜಪಮಾಲೆಯನ್ನು ಹಿಡಿದುಕೊಂಡು ೧೦೮ ಸಲ ಮಂತ್ರ ಜಪ ಮಾಡಿದರೂ, ನಂತರ ಇವರು ತಮ್ಮ ಮನಸ್ಸಿಗೆ ಸಂತೋಷವೆನಿಸುವಷ್ಟು ಸಮಯ, ಶರೀರವು ಕುಳಿತುಕೊಳ್ಳಲು ಸಾಧ್ಯವಿರುವಷ್ಟು ಕಾಲ ಅರೆತೆರೆದ ಕಣ್ಣುಗಳಿಂದ ನೋಡುತ್ತ ಲಿಂಗತ್ರಾಟಕವನ್ನು ಮಾಡಬೇಕು. ಎಣಿಕೆ ಇಲ್ಲಿ ಮುಖ್ಯವಲ್ಲ ಸಾಧನೆ ಮುಖ್ಯ.
ಲಿಂಗಧ್ಯಾನದಲ್ಲಿ ಕಣ್ಣುಗಳನ್ನು ಮುಚ್ಚಿ ಒಳಗೆ ದೃಷ್ಟಿ ನಿಲ್ಲಿಸುವುದು ಮುಖ್ಯ ಮತ್ತು ಉಸಿರಾಟ ಕ್ರಿಯೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ದೃಷ್ಟಿಯನ್ನು ಭೂಮಧ್ಯಕ್ಕೆ ಅಥವಾ ಹೃದಯ ಕಮಲಕ್ಕೆ ನಿಲ್ಲಿಸಬೇಕು. ಈ ಕೇಂದ್ರಗಳನ್ನು ಗುರುತಿಸುವುದು ಹೇಗೆ ?ನಮ್ಮ ಎರಡೂ ಕಣ್ಣುಗುಡ್ಡೆಗಳನ್ನು ಕಣ್ಣುಗಳ ತುದಿಗೆ ತಂದು ಮೇಲಕ್ಕೆತ್ತಿದರೆ ಅದು ಭೂಮಧ್ಯಕ್ಕೆ ನಿಲ್ಲುತ್ತದೆ, ಕೆಳಕ್ಕೆ ಇಳಿಸಿದರೆ ಹೃದಯ ಕಮಲಕ್ಕೆ ನಿಲ್ಲುತ್ತದೆ. ಹೀಗೆ ನಿಲ್ಲಿಸಿ ನಿಧಾನವಾಗಿ ಸಮಪ್ರಮಾಣದಲ್ಲಿ ಉಸಿರಾಡಬೇಕು. ಒಳಗೆ ಎಷ್ಟು ಅವಧಿಗೆ ಉಸಿರನ್ನು ತೆಗೆದುಕೊಳ್ಳುತ್ತೇವೆಯೋ ಅಷ್ಟೇ ಅವಧಿಕಾಲ ಉಸಿರನ್ನು ಹೊರಬಿಡಬೇಕು. ಉಸಿರಾಟ ನಿಧಾನವಾಗಿ, ಉಚ್ಚಾಸ - ನಿಶ್ವಾಸ ಸಮಪ್ರಮಾಣವಾಗಿ, ಆಳವಾಗಿ (slow, equal, deep breathing) ಇರಬೇಕು. ಉಸಿರಿನ ಜೊತೆಗೆ ಓಂ ಲಿಂಗಾಯ ನಮಃ ಷಡಕ್ಷರಿ ಮಂತ್ರದ ಸಂಚಾರವು ನಡೆದಿರಬೇಕು. ಮಂತ್ರವನ್ನು ಉಸಿರಿನ ಸಾಧನದ ಮೂಲಕವಾಗಿ ಸರ್ವಾಂಗಕ್ಕೂ ಇಳಿಸುತ್ತೇನೆ ಎಂಬ ಭಾವದಿಂದ ಅದು ಆಳವಾಗಿ ಹೋಗಬೇಕು. ತ್ರಾಟಕ ಯೋಗದಲ್ಲಿ ಆಗುವ ಆನಂದವನ್ನು ಅಂಗಗತ ಮಾಡಿಕೊಳ್ಳಲು ಈ ಧ್ಯಾನವು ಸಹಾಯಕವಾಗುತ್ತದೆ.
ಗುರುಗಳು ಮಂತ್ರೋಪದೇಶ ಮುಗಿಸಿದ ಮೇಲೆ ಈಗ ಪ್ರತಿಜ್ಞೆಯನ್ನು ಬೋಧಿಸಬೇಕು. ಈ ಪ್ರತಿಜ್ಞಾವಿಧಿಯ ಒಂದು ಪಟವನ್ನು ಕಡ್ಡಾಯವಾಗಿ ಇಟ್ಟುಕೊಂಡು ಬಸವ ಧರ್ಮಾನುಯಾಯಿಯು ಮನನ ಮಾಡುತ್ತಿರಬೇಕು.
ಬಸವ (ಲಿಂಗಾಯತ) ಧರ್ಮಾನುಯಾಯಿಗಳ ಪ್ರತಿಜ್ಞಾವಿಧಿ ಹನ್ನೆರಡು ಪ್ರತಿಜ್ಞೆಗಳು (Twelve Oaths)
|| ಓಂ ಶ್ರೀ ಗುರು ಬಸವ ಲಿಂಗಾಯ ನಮಃ ||
ಧರ್ಮಗುರು ಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
ಶ್ರೀಗುರು ಬಸವಂಗೆ ಶರಣಾಗಹೆ, ಲಿಂಗದೇವನಿಗೆ ಶರಣಾಗಹೆ, ಶರಣಗಣಕ್ಕೆ ಶರಣಾಗಿದೆ, ಗಣಪದವಿಯನ್ನು ನಾ ಹೊಂದಿಹೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಶ್ರೀ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗು | ಗುರು ಬಸವಣ್ಣನವರೇ ಆದಿ ಪ್ರಮಥರಾಗಿ, ಅವರ ಸಮಕಾಲೀನರು ಮತ್ತು ಅವರ ಪರಂಪರೆಯ ಶರಣರು ಕೊಟ್ಟ ವಚನ ಸಾಹಿತ್ಯವೇ ನನ್ನ ಧರ್ಮ ಸಂಹಿತೆ ಎಂದು ತಿಳಿದು ಶರಣ ಪಥದಲ್ಲಿ ನಡೆಯುತ್ತೇನೆ. |
4 | ರು | ಧರ್ಮಪಿತರು ವಿಶ್ವದಾಕಾರದಲ್ಲಿ ರೂಪಿಸಿಕೊಟ್ಟ ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಶ್ರದ್ಧೆಯಿಂದ ಧರಿಸಿ, ನಿಷ್ಠೆಯಿಂದ ನಿತ್ಯವೂ ಪೂಜಿಸುತ್ತೇನೆ. |
5 | ಬ | ಧರ್ಮಪಿತ ಬಸವಣ್ಣನವರು ಬಯಲಾದ ದಿವ್ಯಕ್ಷೇತ್ರ ಕೂಡಲ ಸಂಗಮವನ್ನು ನಮ್ಮ ಧರ್ಮಕ್ಷೇತ್ರವೆಂದು ನಂಬಿ ಸಂದರ್ಶಿಸುತ್ತೇನೆ. |
6 | ಸ | ಏಳು ದಿವಸಗಳ ವಾರದಲ್ಲಿ ಒಂದು ದಿವಸವಾದರೂ ಶರಣರ ಸಂಗದಲ್ಲಿ ಸೇರಿ ಕರ್ತನನ್ನು ಸ್ಮರಿಸಿ, ಧರ್ಮಪಿತರನ್ನು ಕೊಂಡಾಡಿ, ಗಣ ಮೇಳಾಪ-ಅನುಭವ ಗೋಷ್ಠಿಯಲ್ಲಿ ಭಾಗಿಯಾಗುತ್ತೇನೆ. ಪ್ರತಿವರ್ಷವೂ ಶಿವರಾತ್ರಿಯಂದು ಸ್ಥಳೀಯವಾಗಿ ನಡೆಯುವ ಗಣಮೇಳದಲ್ಲಿ ತಪ್ಪದೆ ಭಾಗಿಯಾಗುತ್ತೇನೆ. |
7 | ವ | ಸತ್ಯ ಶುದ್ಧ ಕಾಯಕದಿಂದ ಧನವನ್ನು ಸಂಪಾದಿಸಿ ದಾಸೋಹ ತತ್ತ್ವದ ಮೂಲಕ ಧರ್ಮ-ಸಮಷ್ಟಿಗಳ ಉದ್ಧಾರಕ್ಕೆ ವಿನಿಯೋಗಿಸುತ್ತೇನೆ. |
8 | ಲಿಂ | ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಪ್ರತಿ ವರ್ಷವೂ ಬಸವ ಕ್ರಾಂತಿ ದಿನದಂದು ನಡೆಯುವ ಶರಣ ಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಎಷ್ಟೇ ಅನಾನುಕೂಲತೆಗಳಿದ್ದರೂ ಬಂದು ಭಾಗಿಯಾಗಿ, ನನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸುತ್ತೇನೆ. |
9 | ಗಾ | ಪರಧನ, ಪರಸ್ತ್ರೀಯರನ್ನು ಬಯಸುವುದಿಲ್ಲ. |
10 | ಯ | ಮಾಂಸಾಹಾರವನ್ನು, ಮದ್ಯಪಾನವನ್ನು ಮಾಡುವುದಿಲ್ಲ. |
11 | ನ | ಸ್ವಧರ್ಮಿಯರನ್ನು ಧರ್ಮಬಂಧುಗಳೆಂದು ಪರಧರ್ಮಿಯರನ್ನು ಸ್ನೇಹಿತರೆಂದು ಭಾವಿಸಿ, ಆದರಿಸುತ್ತೇನೆ. |
12 | ಮಃ | ಧರ್ಮಪಿತರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ(ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಪ್ರಯತ್ನ ಮಾಡುತ್ತೇನೆ. |
ಜಯ ಗುರು ಬಸವೇಶ ಹರಹರ ಮಹಾದೇವ ಎಂದು ಪ್ರತಿಜ್ಞಾ ಸ್ವೀಕಾರದ ಹಂತರ ಜಯಘೋಷ ಮಾಡಬೇಕು.
ಪ್ರತಿಜ್ಞಾ ಬೋಧೆಯ ನಂತರ, ಕುರಂಗ ಮುದ್ರೆಯಿಂದ ಇಷ್ಟಲಿಂಗಕ್ಕೆ ನಮಸ್ಕರಿಸಬೇಕು. ಕುರಂಗವೆಂದರೆ ಜಿಂಕೆ, ಜಿಂಕೆಯ ಕಣ್ಣು ಬಹಳ ತೀಕ್ಷ್ಯವಿರುವಂತೆ ನಮ್ಮ (ಒಳ) ನೋಟವೂ ತೀಕ್ಷ್ಯಗೊಂಡು ದೇವನನ್ನು ಕಾಣುವಂತಾಗಲಿ ಎಂಬ ಭಾವ ಇಲ್ಲಿದೆ. ಹೆಬ್ಬೆರಳಿಗೆ ನಡುಬೆರಳು ಮತ್ತು ಅದರ ಪಕ್ಕದ್ದನ್ನು ತಾಗಿಸಿ, ತೋರು ಬೆರಳು ಮತ್ತು ಕಿರಿಬೆರಳನ್ನು ಮೇಲಕ್ಕೆ ಎತ್ತಿದಾಗ ಕುರಂಗಮುದ್ರೆಯಾಗುತ್ತದೆ. ಹೆಬ್ಬೆರಳನ್ನು ಎಡ ಅಂಗೈಗೆ ಇಟ್ಟು, ತೋರು ಬೆರಳನ್ನು ಭ್ರೂಮಧ್ಯಕ್ಕೆ ಮುಟ್ಟಿಸಬೇಕು. ಈ ಕುರಂಗ ನಮನದ ನಂತರ ಲಿಂಗಕ್ಕೆ ಏರಿಸಿರುವ ಪತ್ರೆ - ಪುಷ್ಪಗಳನ್ನು ತೆಗೆದು, ಕಣ್ಣಿಗೆ ಸ್ಪರ್ಶಿಸಿ ಮಜ್ಜನದ ಪಾತ್ರೆಯಲ್ಲಿ ಹಾಕಬೇಕು.
ನಂತರ ತೀರ್ಥ-ಪ್ರಸಾದ ಸ್ವೀಕಾರ, ಗುರುಮೂರ್ತಿಯು ಈಗ ದೀಕ್ಷಿತನ ಇಷ್ಟಲಿಂಗಕ್ಕೆ ಮೂರುಬಾರಿ ಗುರು-ಲಿಂಗ-ಜಂಗಮ ಸ್ಮರಣೆಯೊಡನೆ ತೀರ್ಥವನ್ನು ಎರೆಯಬೇಕು. ಬಲಗೈಯ ಐದೂ ಬೆರಳುಗಳಿಂದ ಸ್ವಲ್ಪವೇ ತೀರ್ಥವನ್ನು ತೆಗೆದು ಇಷ್ಟಲಿಂಗದ ನೆತ್ತಿಯ ಮೇಲೆ ಧಾರೈಸಬೇಕು.
ಬಸವ ಕರುಣೋದಕ
ಲಿಂಗ ಕರುಣೋದಕ
ಶರಣ ಕರುಣೋದಕ
ಎಂದು ೩ ಬಾರಿ ಎರೆಯಬೇಕು. ಅಂಗೈಯನ್ನು ಬಟ್ಟಲಿನಂತೆ ಮಾಡಿ ಹಾಕಿಸಿಕೊಂಡ ಆ ತೀರ್ಥವು ಚೆಲ್ಲದಂತೆ ಜೋಪಾನವಾಗಿ ದೀಕ್ಷಿತನು ಸ್ವೀಕರಿಸಬೇಕು. ಇಷ್ಟಲಿಂಗವನ್ನು ಕೊಂಚ ಮೇಲಕ್ಕೆತ್ತಿ ಎಡಗೈ ತುದಿಯಲ್ಲಿ ಬಲಗೈಯಿಂದ ಹಿಡಿದು, ಗುರುಗಳ ಮುಖವನ್ನು ಭಕ್ತಿಪೂರ್ವಕವಾಗಿ ಒಂದು ಕ್ಷಣಕಾಲ ನೋಡಿ ತೀರ್ಥ ಮತ್ತು ಪ್ರಸಾದಗಳನ್ನು ಒಟ್ಟಿಗೇ ಶಿಷ್ಯನು ಸ್ವೀಕರಿಸಬೇಕು.
ಅಂಗೈಯಲ್ಲಿ ಇಷ್ಟಲಿಂಗವನ್ನು ಇರಿಸಿ ಬಲಗೈಯ ತೇವವನ್ನು ಎಡ ಕೈಗೆ ಒರೆಸಬೇಕು. ನಂತರ ಬಲಗೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಎಡಗೈಯ ದ್ರವವನ್ನು ಬಲಗೈಗೆ ಸವರಿ, ತೇವವನ್ನು ಆರಿಸಬೇಕು. ಅಂದರೆ ಅಂಗಗತಗೊಳಿಸಬೇಕು.
ಈಗ ಗುರುಗಳು ಮೂರು ಎಳೆ ಭಸ್ಮವನ್ನು ಲಿಂಗಕ್ಕೆ ಧರಿಸುವರು. ಶಿಷ್ಯನು ಒಂದು ಚಿಕ್ಕ ಬಟ್ಟೆ (ಹುದುಗ ಪಾವುಡ) ತೆಗೆದುಕೊಂಡು ಅದರ ಮೇಲೆ ಪಂಚಕೋನ ಪ್ರಣವವನ್ನು ವಿಭೂತಿಯಿಂದ ಬರೆದು ಇಷ್ಟಲಿಂಗವನ್ನಿಟ್ಟು ಕರಡಿಗೆಯಲ್ಲಿಟ್ಟುಕೊಂಡು, ಒಂದು ಸುತ್ತುದಾರದ ಮಲಕು ಹಾಕುವನು. ಬಟ್ಟೆಯಲ್ಲೇ ಕಟ್ಟುವವರು ಆ ವಸ್ತ್ರದ ತುದಿಯಲ್ಲಿ ಪಂಚಕೋನ ಪ್ರಣವ ಬರೆದು ಇಷ್ಟಲಿಂಗ ಇಟ್ಟು ಸುತ್ತಿ ಕಟ್ಟಿಕೊಂಡು ಬಸವಗುರುವಿನ ಚಿತ್ರವಿರುವ ಒಂದು ಉಂಗುರವನ್ನು ಅದಕ್ಕೆ ಹಾಕಬಹುದು. ಈಗ ಗುರುಗಳು, ಬೀಜವಿಲ್ಲದ ಬಾಳೆಗೆ ಪುನರ್ಜನ್ಮವಿಲ್ಲವೆಂತೋ ಹಾಗೆ ಈ ಜೀವನವೂ ದೇವರ ಕೃಪೆಯಿಂದ ಪಾಪ-ಪುಣ್ಯಗಳ ಬೀಜಗಳಿಂದ ರಹಿತವಾಗಲಿ, ಪರಮಾತ್ಮನಿಗೆ ಪ್ರಸಾದವಾಗಿ ಎಡೆಯಾಗಿ ಮುಕ್ತಿಯನ್ನು ಪಡೆಯಲಿ.” ಎಂಬ ಭಾವದಿಂದ ಆಶೀರ್ವದಿಸಿ ಬಾಳೆಯ ಹಣ್ಣಿನ ಸಿಪ್ಪೆಯನ್ನು ಸುಲಿದು, ಆ ಹಣ್ಣನ್ನು ದೀಕ್ಷಾವಂತನು ಸೇವಿಸಲು ಕೊಡಬೇಕು. ದೀಕ್ಷಾವಂತನು ಗುರು ಕಾಣಿಕೆಯನ್ನು ತಾನು ತಂದ ಸಾಮಗ್ರಿಗಳ ಜೊತೆ ಜೋಡಿಸಿ ಗುರುಗಳಿಗೆ ಸಮರ್ಪಿಸಿ ನಮಸ್ಕರಿಸಬೇಕು. ಗುರುಗಳು ತೆಂಗಿನ ಕಾಯಿಯನ್ನು ಒಡೆದು ಬಸವ ಗುರುವಿನ ಭಾವಚಿತ್ರಕ್ಕೆ ನೈವೇದ್ಯ ಮಾಡಿ ಅದನ್ನು ಮತ್ತು ಶುದ್ದೀಕರಿಸಿದ ಭಸ್ಮ, ಜಪಮಾಲೆ ಮುಂತಾದುವನ್ನು ಕೊಡಬೇಕು.
ಹೀಗೆ ಇಷ್ಟಲಿಂಗ ದೀಕ್ಷಾವಿಧಿಯು ಪೂರ್ತಿಯಾಗುತ್ತದೆ.
ದೀಕ್ಷೆಯ ಹಿಂದಿರುವ ಸಿದ್ಧಾಂತ
ದೀಕ್ಷೆಯಿಲ್ಲದೆ ಮೋಕ್ಷವಿಲ್ಲ' ಎಂಬ ನಂಬಿಕೆ ಹೊಂದಿ, ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಹೆಣ್ಣಿರಲಿ - ಗಂಡಿರಲಿ ಹುಟ್ಟಿದಾಗ ಪಡೆಯುವ ಲಿಂಗಧಾರಣೆಯೊಡನೆ ಬೌದ್ಧಿಕ ಪ್ರೌಢತೆ ಬಂದಾಗ ಲಿಂಗದೀಕ್ಷೆ ಪಡೆಯಬೇಕು ಎಂಬುದನ್ನು ಸಾರಿ, ಎಲ್ಲರಿಗೂ ದೀಕ್ಷೆಯ ಅವಕಾಶ ಕೊಟ್ಟ ಮಹಾಪ್ರವಾದಿ ಬಸವಣ್ಣನವರು. ದೀಕ್ಷೆ ಐಚ್ಛಿಕವಲ್ಲ ಕಡ್ಡಾಯವಾಗಿ ವ್ಯಕ್ತಿಯು ಪಡೆಯುವ ಒಂದು ಹಕ್ಕು ಎಂಬ ಭಾವ ಇಲ್ಲಿದೆ. ಗುರುವು ಮಧ್ಯವರ್ತಿಯಾಗಿ (Mediator) ಪರಮಾತ್ಮನ ಕರುಣೆಯನ್ನು ಪಡೆದು ಮುಮುಕ್ಷುವಿಗೆ ನೀಡುತ್ತಾನೆ. ಅನುಗ್ರಹಿಸುವ ವಿಧಾನ ಮೂರು; ಸ್ಪರ್ಶ-ನೋಟ-ಸಂಕಲ್ಪ. ಇವುಗಳನ್ನು ಶಾಸ್ತ್ರಗಳಲ್ಲಿ ಕುಕ್ಕುಟ ನ್ಯಾಯ - ಮತ್ಸ್ಯನ್ಯಾಯ- ಕೂರ್ಮನ್ಯಾಯ ಎನ್ನಲಾಗಿದೆ. ಹಸ್ತಮಸ್ತಕ ಸಂಯೋಗದಲ್ಲಿ ಸ್ಪರ್ಶ, ಮಂತ್ರೋಪದೇಶದ ನಂತರ ಒಂದು ಕ್ಷಣ ವಾತ್ಸಲ್ಯಪೂರಿತವಾಗಿ ನೋಡುವಲ್ಲಿ ನೋಟ, ಸಂಕಲ್ಪ ಸಹಿತವಾಗಿ ಆಶೀರ್ವಾದ ಮಾಡುವಲ್ಲಿ ಸಂಕಲ್ಪ ; ಮೂರೂ ಅಳವಟ್ಟಿವೆ. ಈ ಕಾರಣದಿಂದಲೇ ಇಷ್ಟಲಿಂಗ ದೀಕ್ಷೆಯಲ್ಲಿ ತ್ರಿವಿಧ ಅಂಗಗಳನ್ನು ಅಳವಡಿಸಲಾಗಿದೆ. ಇವುಗಳನ್ನು ವೇಧಾದೀಕ್ಷೆ, ಮಂತ್ರದೀಕ್ಷೆ, ಕ್ರಿಯಾದೀಕ್ಷೆ ಎಂದು ಹೆಸರಿಸಲಾಗಿದೆ.
ಮೈಲಾರ ಬಸವಲಿಂಗ ಶರಣರು ವಿವರಿಸುವಂತೆ :
ಪಾವನಾತ್ಮಕ ಸುಪುತ್ರನ ಮಸ್ತಕದೊಳು ಗುರು
ದೇವ ಕರವಾಂತು ಸಾಸಿರ ದಳದ ಚಿತ್ಕಳೆಯ
ಭಾವದಿಂ ಮನ ಮನದಿಂ ನೇತ್ರ ನೇತ್ರಂಗಳಿಂ ತೆಗೆದಿಷ್ಟರೂಪಗೊಳಿಸಿ
ತೀವಿ ತಚ್ಛಿಷ್ಯನಂಗದ ಮೇಲೆ ಧರಿಸಿ ಸಂ
ಜೀವ ಷಣ್ಮಂತ್ರವಿದೆಂದು ತಿಳುಹೆ ಚಿದ್
ಭಾವ ಕಳೆಯೊಳಗಿಷ್ಟಲಿಂಗವೇ ತಾನಾದ
ಲಿಂಗಭಕ್ತನೇ ಶ್ರೇಷ್ಠನು ||
ಮಸ್ತಕದ ಮೇಲೆ ಹಸ್ತವನ್ನಿಟ್ಟು ಅನುಗ್ರಹವನ್ನು ಹರಿಸುವುದೇ ವೇಧಾದೀಕ್ಷೆ, ಮಂತ್ರವನ್ನು ಉಚ್ಚರಿಸುವುದೇ ಮಂತ್ರದೀಕ್ಷೆ, ಚಿತ್ಕಳಾ ಪರಿಪೂರ್ಣವಾದ ಇಷ್ಟಲಿಂಗವನ್ನು ಮೊದಲು ಅಂಗೈಗೆ ನಂತರ ಅಂಗಕ್ಕೆ ಧರಿಸುವುದೇ ಕ್ರಿಯಾದೀಕ್ಷೆ. ಮಳೆಗಾಲದಲ್ಲಿ ಒಂದು ಪ್ರಕ್ರಿಯೆಯನ್ನು ಕಾಣುತ್ತೇವೆ. ಮೊದಲು ನಿರಾಕಾರವಾದ ಸೂಕ್ಷ್ಮಾತಿ ಸೂಕ್ಷ್ಮವಾದ ಮಿಂಚು, ನಂತರ ಕೊಂಚ ಸ್ಥೂಲವಾದ ಗುಡುಗು, ನಂತರ ಪೂರ್ಣ ಸ್ಥೂಲವಾದ ಮಳೆ. ಹೀಗೆ ನಿಸರ್ಗ ಶಕ್ತಿಯು ಸಾಕಾರಗೊಂಡಂತೆ ಇಲ್ಲಿ ಸಹ ವೇಧಾ ದೀಕ್ಷೆಯಲ್ಲಿ ಕಾರಣ ದೇಹದಲ್ಲಿ ಶಕ್ತಿಯನ್ನು ಜಾಗೃತಗೊಳಿಸುವ, ನಂತರ ಮಂತ್ರೋಚ್ಚಾರದಿಂದ ಸೂಕ್ಷ್ಮ ಶರೀರದಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸುವ ನಂತರ ಸ್ಥೂಲ ಶರೀರದ ಮೇಲೆ ನೆಲೆ ನಿಲ್ಲುವ ಇಷ್ಟಲಿಂಗವನ್ನು ಆಯತ ಮಾಡಿ ಕ್ರಿಯಾದೀಕ್ಷೆಯನ್ನು ಮಾಡುವ ವ್ಯವಸ್ಥಿತ ಚಿಂತನೆ ಇದೆ.
ಮಾನವನಲ್ಲಿರುವವು ೩ ಶರೀರಗಳು. ಇವುಗಳಲ್ಲಿ ಮೂರು ಮಲಗಳಿರುವುವು. ಅವೇ ಆಣವ, ಮಾಯಾ, ಕಾರ್ಮಿಕ. ಇವುಗಳಿಂದಾಗಿಯೇ ಜೀವನಿಗೆ ಬಹಳ ಬಾಧೆ.
ಎನ್ನ ಕಾಯದ ಕತ್ತಲೆಯ ಕಳೆಯಯ್ಯ
ಎನ್ನ ಮಾಯದ ಮದವ ಮುರಿಯಯ್ಯ
ಎನ್ನ ಜೀವದ ಜಂಜಡವ ಮಾಣಿಸಯ್ಯ
ಎನ್ನ ಸುತ್ತಿದ ಮಾಯಾ ಪ್ರಪಂಚವ
ಬಿಡಿಸೋ ನಿಮ್ಮ ಧರ್ಮ, ಚನ್ನಮಲ್ಲಿಕಾರ್ಜುನಾ.
ಎಂದು ಅಕ್ಕಮಹಾದೇವಿ ಬಣ್ಣಿಸುವಂತೆ ಕಾಯದ ಕತ್ತಲೆಯೆ ಕಾರ್ಮಿಕ ಮಲ, ಸ್ಥೂಲ ಶರೀರವನ್ನು ಕಾಡಿಸುವಂಥದು. ಮನಸ್ಸಿನ ಮಾಯೆಯೇ ಮಾಯಾ ಮಲ, ಸೂಕ್ಷ್ಮ ಶರೀರವನ್ನು ಕಾಡಿಸುವಂಥದು. ಜೀವದ ಜಂಜಡವೇ ಆಣವಮಲ, ಕಾರಣ ಶರೀರದಲ್ಲಿ ಸೇರಿ, ಜೀವ (ಆತ್ಮ)ನನ್ನು ಸುತ್ತುವರಿದಿರುವುದು. ಈ ಮೂರೂ ಶರೀರಗಳಲ್ಲಿರುವ ಮೂರು ಮಲಗಳನ್ನು ನಿವಾರಿಸಿ ಮೂರು ಲಿಂಗಗಳನ್ನು ಸ್ಥಾಪಿಸುವುದೇ ತ್ರಿವಿಧ ದೀಕ್ಷೆ.
ಸ್ಥೂಲ ಶರೀರದಲ್ಲಿರುವ ಕಾರ್ಮಿಕ ಮಲ ನಿವಾರಣೆಗೆ ಸಾಧನವಾಗಿ ಆಚಾರ ಪ್ರಧಾನವಾದ ಇಷ್ಟಲಿಂಗವನ್ನು ದೇಹಕ್ಕೆ ಆಯತ ಮಾಡುವುದೇ ಕ್ರಿಯಾದೀಕ್ಷೆ. ಸೂಕ್ಷ್ಮ ಶರೀರದಲ್ಲಿರುವ ಮಾಯಾ ಮಲ ನಿವಾರಿಸಿ (ಅಥವಾ ನಿವಾರಣೆಗೆ ಸಾಧನವಾಗುವ) ಜ್ಞಾನಾತ್ಮಕವಾದ ಪ್ರಾಣಲಿಂಗವನ್ನು ಸ್ವಾಯತ ಮಾಡುವುದೇ ಮಂತ್ರೋಪದೇಶದಿಂದ ಕೂಡಿದ ಮಂತ್ರದೀಕ್ಷೆ, ಕಾರಣ ಶರೀರದಲ್ಲಿರುವ ಆಣವ ಮಲವನ್ನು ನಿವಾರಣೆ ಮಾಡುವ 'ಅನುಗ್ರಹ' ನೀಡಿ, ಭಾವಾತ್ಮಕವಾದ ಭಾವಲಿಂಗ (ಮಹಾಲಿಂಗವನ್ನು) ಸನ್ನಿಹಿತ ಮಾಡುವುದೇ ವೇಧಾ ದೀಕ್ಷೆ.
ಸಾಮೂಹಿಕ ದೀಕ್ಷಾ ವಿಧಾನ
ದೀಕ್ಷೆ ಮಾಡಿಸಿಕೊಳ್ಳುವವರು ಬಹಳ ಜನರು ಇದ್ದಾಗ ಸಾಮೂಹಿಕವಾಗಿ ದೀಕ್ಷೆ ಮಾಡುವುದು ಒಳ್ಳೆಯದು. ಏಕೆಂದರೆ ಎಲ್ಲರೂ ಪೂಜೆಯನ್ನು ಗಮನಿಸಲು ಸಾಧ್ಯವಾಗುತ್ತದೆ ಮತ್ತು ಇನ್ನಿತರರಿಗೆ ಹೇಳುತ್ತಿರುವುದನ್ನು ಪುನಃ ಪುನಃ ಕೇಳಿ ಚೆನ್ನಾಗಿ ಮನದಟ್ಟಾಗುತ್ತದೆ. ಉಳಿದೆಲ್ಲ ಬೋಧೆ, ಪ್ರತಿಜ್ಞಾ ವಿಧಿಯನ್ನು ಸಾಮೂಹಿಕವಾಗಿ ಹೇಳಿಸಿದರೂ, ಹಸ್ತಮಸ್ತಕ ಸಂಯೋಗ ಮಾಡಿ ಮಂತ್ರೋಪದೇಶವನ್ನು ಮಾಡುವುದನ್ನು ಪ್ರತಿಯೊಬ್ಬರಿಗೂ ಮಾಡಲೇಬೇಕು. ಅದಿಲ್ಲದ ಹೊರತು ದೀಕ್ಷೆ ಪೂರ್ಣಗೊಳ್ಳದು.
ದೀಕ್ಷಾಪೇಕ್ಷಿಗಳ ಸಂಖ್ಯೆ ಬಹಳವಿದ್ದಾಗ (ನಾನು ಒಂದು ದಿನ ೪೦೦ ಜನರಿಗೆ ದೀಕ್ಷೆ ಮಾಡಿದ್ದಿದೆ. ಬೆಳಗಿನ ೯ ರಿಂದ ಸಂಜೆ ೫ ರವರೆಗೆ ಮಾಡಿದೆ) ೧೦-೧೨ ಜನರನ್ನು ಸಾಲಾಗಿ ಅಥವಾ ಅರ್ಧವರ್ತುಳಾಕಾರದಲ್ಲಿ ಕೂರಿಸಿ, ನಡೆದು ಹೋಗಿ ಅವರ ಮುಂದೆ ನಿಂತು ಹಸ್ತ ಮಸ್ತಕ ಸಂಯೋಗ ಮತ್ತು ಮಂತ್ರೋಪದೇಶ ಮಾಡಬಹುದು. ಏಕೆಂದರೆ ಗುರುವು ಕುಳಿತಿದ್ದರೆ ಅವರು ಒಬ್ಬೊಬ್ಬರು ಬಂದು ಉಪದೇಶ ಪಡೆಯಲು ಬಹಳಷ್ಟು ಸಮಯ ಹಿಡಿಯುತ್ತದೆ.
ದೀಕ್ಷಾರ್ಥಿಗಳು ಒಬ್ಬಿಬ್ಬರೇ ಇದ್ದರೂ ಗುರುಗಳು ಗಣಸಾಕ್ಷಿಯಾಗಿ ದೀಕ್ಷೆ ಮಾಡಬೇಕು ಎಂದು ಶರಣರ ಶಾಸನವಿರುವುದರಿಂದ ಮತ್ತೊಬ್ಬರ ಎದುರಿಗೆ ದೀಕ್ಷೆ ಮಾಡುವುದು ಒಳ್ಳೆಯದು. ಹೆಣ್ಣು ಮಕ್ಕಳು ಪುರುಷ ಗುರುಗಳಿಂದ ದೀಕ್ಷೆ ಪಡೆಯುವಾಗ ಈ ಎಚ್ಚರಿಕೆ ಬಹಳ ಅಗತ್ಯ. ಆ ಬಗ್ಗೆ ಸುರಕ್ಷಿತತೆಯ ದೃಷ್ಟಿಯಿಂದ ದೀಕ್ಷಾರ್ಥಿಗಳ ಮನೆಯವರು, ಅಪವಾದದ ದೃಷ್ಟಿಯಿಂದ ಗುರು-ಜಂಗಮರು ಉಭಯತರೂ ಈ ವಿಧಾನವನ್ನು ಬಳಕೆಗೆ ತರಬೇಕು. ಅದೇ ರೀತಿ ಹೆಣ್ಣು ಮಕ್ಕಳು ಗುರುಗಳಿದ್ದವರೂ ತಮ್ಮ ಸುರಕ್ಷಿತತೆಯ ದೃಷ್ಟಿಯಿಂದ ಗಣಸಾಕ್ಷಿಯಾಗಿ ದೀಕ್ಷೆ ಕೊಡುವುದು ಅತ್ಯುತ್ತಮ. ಸಂಪ್ರದಾಯದಲ್ಲಿ ರೂಢಿಯಲ್ಲಿ ಬಂದಿರುವ, “ಗುರುವು ಏಕಾಂತದಲ್ಲಿ ಮಂತ್ರೋಪದೇಶ ಮಾಡಬೇಕು. ಇನ್ನೊಬ್ಬರಿಗೆ ಕೇಳಿಸುವಂತೆ ಮಂತ್ರವನ್ನು ಹೇಳಬಾರದು.” ಎಂಬುದು ಅವ್ಯವಹಾರಿಕ, ಅಪಾಯಕಾರಿ. ಈ ಬದಲಾವಣೆ ಇಂದು ಅತ್ಯಗತ್ಯ.
ಇನ್ನು ಕೆಲವರು ಒಂದು ಮುಸುಕನ್ನು ತಮ್ಮ ತಲೆಯ ಮೇಲೆ ಹೊದ್ದು, ಆ ಮುಸುಕನ್ನು ದೀಕ್ಷಾರ್ಥಿಯ ತಲೆಯ ಮೇಲೂ ಹೊದ್ದಿಸಿ, ಆ ಮುಸುಕಿನೊಳಗೆ ಮಂತ್ರೋಪದೇಶ ಮಾಡುವರಂತೆ !ಇದೂ ಸೂಕ್ತವಲ್ಲ. ಅಷ್ಟು ಗುಟ್ಟಾಗಿ ಹೇಳುವುದು ಕೇಳುವುದು ಏನೂ ಇರದು. ಉಪದೇಶಿಸಲ್ಪಡುವುದು ಒಂದೇ ಮಂತ್ರ, ಅಂದಾಗ ಮುಚ್ಚು ಮರೆ ಏಕೆ ? ಹಲವಾರು ಆಚರಣೆಗಳನ್ನು ಅತೃಪ್ತ ಮನಸ್ಕರು ಯಾವ ಯಾವ ಕಾಲದಲ್ಲೋ ರೂಢಿಗೆ ತಂದಿರುವ ಸಂಭವವಿದೆ. ಆದ್ದರಿಂದ ಈ ಆಚರಣೆಯನ್ನು ಬಹಿಷ್ಕರಿಸಬೇಕು.
ಇಷ್ಟಲಿಂಗ ದೀಕ್ಷೆಯ ಮಹತ್ವ
ಇಷ್ಟಲಿಂಗವು ಗಣಲಾಂಛನ, ದೇವರನ್ನು ಆರಾಧಿಸುವವರು ನಾವು ಎಂಬುದನ್ನು ಸಾರುವ ಅಮೂಲ್ಯ ಕುರುಹು. ಇದರ ಧಾರಣೆಯಿಂದಲೇ ಒಬ್ಬ ವ್ಯಕ್ತಿ ಒಂದು ಗಣ (community)ದ ಸದಸ್ಯನಾಗುತ್ತಾನೆ. ಲಿಂಗಾಯತತ್ವ ಒಂದು ಜಾತಿಯಲ್ಲ, ಇದರ ಅನುಯಾಯಿತ್ವ ಹುಟ್ಟಿನಿಂದ ಬರದು. ಹುಟ್ಟಿನಿಂದ ಬರುವುದು ಸಂಪ್ರದಾಯವಾದರೂ, ನಿಜ ಅನುಯಾಯಿತ್ವ ದೊರೆಯುವುದು ಗುರುವಿನ ಮೂಲಕ ; ಪ್ರೌಢಾವಸ್ಥೆಗೆ ಬಂದಾಗ, ಸ್ವೀಕರಿಸಿ (Acceptance), ಅನುಯಾಯಿತ್ವವನ್ನು ಪ್ರತಿಜ್ಞಾಪೂರ್ವಕವಾಗಿ ಸ್ಥಿರೀಕರಿಸುವುದರ (Confirmation) ಮೂಲಕ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ಹೊಂದಲೇಬೇಕು.
ಇಷ್ಟಲಿಂಗ ದೀಕ್ಷೆ ವ್ಯಕ್ತಿಗೆ ಪ್ರಾಪ್ತವಾಗುವ ಒಂದು ವಿಶೇಷ ಭಾಗ್ಯ. ಇದರ ಪರಿಜ್ಞಾನವಿಲ್ಲದ ಲಿಂಗವಂತರು ಬಹುಪಾಲು ಜನ ದೀಕ್ಷೆಯನ್ನೇ ಪಡೆಯರು. ಪಡೆಯುವ ಕೆಲವರು ಹತ್ತರೊಳಗೆ ಹನ್ನೊಂದು ಎಂಬಂತೆ ತೀರಾ ಸಾಮಾನ್ಯವೆಂಬಂತೆ ಪಡೆಯುವರು. ವೈದಿಕ ಧರ್ಮಾನುಯಾಯಿಗಳು ಉಪನಯನ ಸಂಸ್ಕಾರಕ್ಕೆ ಎಷ್ಟೊಂದು ಮಹತ್ವವನ್ನು ಕೊಡುವರು ಎಂಬುದನ್ನು ನೋಡಿ ಅರಿಯಬೇಕು. ಜಾವಳ, ಸೀಮಂತ, ವಿವಾಹ, ಮುಂತಾದ ಲೌಕಿಕ ಕಾರ್ಯಗಳಿಗಿಂತಲೂ ದೀಕ್ಷೆಯು ಮಹತ್ವಪೂರ್ಣ ಎಂದು ತಿಳಿಯಬೇಕು. ಈ ಅರಿವು ಮೂಡಿಸಿಕೊಂಡ ಬಸವ ತತ್ತ್ವ ನಿಷ್ಠರು ತಮ್ಮ ಅಥವಾ ತಮ್ಮ ಮಕ್ಕಳ ದೀಕ್ಷಾ ಕಾರ್ಯವನ್ನು ಚೆನ್ನಾಗಿ ಆಚರಿಸಬೇಕು. ಗುರುಗಳನ್ನು ಆಹ್ವಾನಿಸಿ, ಆಮಂತ್ರಣ ಪತ್ರಿಕೆ ಮುದ್ರಿಸಿ, ಬಂಧು ಮಿತ್ರರಿಗೆಲ್ಲ ಕಳಿಸಿ, ಇಷ್ಟಲಿಂಗ ದೀಕ್ಷೆಯ ಮಹತ್ವವನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಬೇಕು. ಇದರಿಂದಾಗಿ ಒಬ್ಬರನ್ನು ನೋಡಿ ಮತ್ತೊಬ್ಬರು ಆಚರಿಸಲು ಆರಂಭಿಸುವರು.
ಯಾರಿಗೆ ಬೇಕಾದರೂ ಕೊಡಬಹುದು
ಗುರು ಬಸವಣ್ಣನವರು ಯಾವ ಘನೋದ್ದೇಶದಿಂದ ಲಿಂಗವಂತ ಧರ್ಮವನ್ನು ಸ್ಥಾಪಿಸಿದರೋ ಆ ಉದ್ದೇಶ - ಕಳಕಳಿ ದೂರವಾಗಿ ನಮ್ಮ ಮಠಾಧೀಶರಲ್ಲಿ ಬಹುಪಾಲು ಜನರು, ಲಿಂಗವಂತ ಧರ್ಮದ ಮೂಲ ಸಂವಿಧಾನಕ್ಕೆ ಹೊರತಾದ ಆಚಾರ - ವಿಚಾರಗಳನ್ನು ಪುನಃ ನೆಲೆಗೊಳಿಸಿದ್ದಾರೆ. ಇಂಥವರು ಹುಟ್ಟಿನಿಂದ ಲಿಂಗವಂತರಲ್ಲದವರು ಎಷ್ಟೇ ಮೋಕ್ಷಾಪೇಕ್ಷಿಗಳು, ಭಕ್ತಿವಂತರು, ಸದಾಚಾರ ಸಂಪನ್ನರೂ ಆಗಿದ್ದರೂ ಅವರಿಗೆ ದೀಕ್ಷೆ ಕೊಡಲು ಒಪ್ಪರು. ಇದು ಸಂಪೂರ್ಣವಾಗಿ ಧರ್ಮಗುರುವಿಗೆ ಮಾಡುವ ಅಪಚಾರ. ಮಾನವ ಮಾತ್ರರಾದ ಯಾರಿಗೆ ಬೇಕಾದರೂ, ಅವರು ಮಾಂಸಾಹಾರ ತೊರೆಯಲು ಸಿದ್ಧರಾದರೆ ಬಸವ ಧರ್ಮದ ಪ್ರಕಾರ ದೀಕ್ಷೆಯನ್ನು ಕೊಡಬಹುದು. ದೀಕ್ಷೆಯ ಹಕ್ಕನ್ನು ನಿರಾಕರಿಸುವುದೆಂದರೆ ಬಸವ ಧರ್ಮದ ಸಂವಿಧಾನಕ್ಕೆ ಮಾಡುವ ಅಪಚಾರ, ಮಾನವ ಕುಲಕ್ಕೆ ಮತ್ತು ಸೃಷ್ಟಿಕರ್ತನಿಗೇ ಬಗೆಯುವ ದ್ರೋಹವೆಂದು ಸ್ಪಷ್ಟವಾಗಿ ಹೇಳಬಹುದು.
ಇನ್ನು ಕೆಲವರು ತಿಳಿದುಕೊಂಡಿರುವುದೇನೆಂದರೆ ಲಿಂಗವಂತರಿಗೆ ಬಾಲ್ಯದಲ್ಲಿ ಮಾಡುವ ಲಿಂಗಧಾರಣೆ ಅಷ್ಟೇ ಇರುತ್ತದೆ, ಅಯ್ಯನವರ ಮಕ್ಕಳಿಗೆ ಅಯ್ಯಾಚಾರದ ವಿಶೇಷ ಸೌಲಭ್ಯವಿರುತ್ತದೆ; ಲಿಂಗದೀಕ್ಷೆಯು ಅನ್ಯ ಜಾತಿಮತಗಳಿಂದ ಬಂದು ದೀಕ್ಷೆ ಪಡೆಯುವವರಿಗೆ ಮಾತ್ರ ಇರುತ್ತದೆ. * ಇದು ಅಜ್ಞಾನದ ಪರಮಾವಧಿ, ಹಳೆಯ ಮೈಸೂರು ಭಾಗದಲ್ಲಿ ಹೆಣ್ಣು ಮಕ್ಕಳು ದೊಡ್ಡವರಾದಾಗ, ಗಂಡು ಮಕ್ಕಳು ೧೪ ವರ್ಷದಿಂದ ೧೮ ವರ್ಷದವರಿರುವಾಗ ದೀಕ್ಷೆ ಕೊಡಿಸುವ ಸಂಪ್ರದಾಯವಿದೆ. ನಾವುಗಳೆಲ್ಲ ಹಾಗೆ ಪಡೆದಿದ್ದೆವು. ದುರ್ದೈವದಿಂದ ಉತ್ತರ ಕರ್ನಾಟಕದಲ್ಲಿ ಅಯ್ಯಾಚಾರದ ಪ್ರಾಬಲ್ಯದಲ್ಲಿ ಎಲ್ಲರೂ ಪಡೆಯುವ, ಪಡೆಯಬೇಕಾದ ಲಿಂಗದೀಕ್ಷೆ ನಶಿಸಿಯೇ ಹೋಗಿದೆ. ಹಳೆಯ ಮೈಸೂರಿನಲ್ಲಿ ಹುಡುಗ ಹುಡುಗಿಯರಿಗೆ ಮೊದಲು ದೀಕ್ಷೆ ಇಲ್ಲದಿದ್ದರೂ ವಿವಾಹದ ಸಮಯದಲ್ಲಾದರೂ ದೀಕ್ಷೆ ಮಾಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಎಷ್ಟೋ ಮದುವೆಗಳು ದೀಕ್ಷೆ - ಲಿಂಗಧಾರಣೆ ಇಲ್ಲದೆಯೇ ನಡೆದುಬಿಡುತ್ತವೆ. ಈ ಶೈಥಿಲ್ಯ ವಿಪರೀತವಾಗಿರುವುದನ್ನು ಕಾಣಬಹುದು. ಹಳೆ ಮೈಸೂರು ಲಿಂಗಾಯತರಲ್ಲಿ ಸ್ವಲ್ಪ ಮಡಿವಂತಿಕೆ ಹೆಚ್ಚಾಗಿದೆಯಾದರೂ ಧಾರ್ಮಿಕ ಆಚರಣೆಗಳು ಉಳಿದುಕೊಂಡು ಬಂದಿವೆ. ಎಂಬುದು ಗಮನಾರ್ಹ ಸಂಗತಿ.
ದೀಕ್ಷಾವಂತನ ನಿತ್ಯನೇಮ
ದೀಕ್ಷೆಯನ್ನು ಪಡೆದುಕೊಂಡ ವ್ಯಕ್ತಿ (ಮಾತ್ರವಲ್ಲ ಪ್ರತಿಯೊಬ್ಬ ಲಿಂಗಾಯತನೂ) ಬೆಳಿಗ್ಗೆ ಸ್ನಾನ - ಪೂಜೆಯಾಗಿ ಲಿಂಗತೀರ್ಥ ಪ್ರಸಾದವನ್ನು ಸೇವಿಸಿದಲ್ಲದೆ ಏನನ್ನೂ ತಿನ್ನಬಾರದು. ಪಾನೀಯಗಳನ್ನು ಕುಡಿಯಬಾರದು ಎಂಬ ನಿಯಮವಿದೆ.
[2] ಒಂದು ವೇಳೆ ಪ್ರವಾಸದಲ್ಲಿ, ಅನಾರೋಗ್ಯದಲ್ಲಿ ಸ್ನಾನ ಮಾಡಲು ಆಗದೆ ಇದ್ದರೆ ಭಸ್ಮ ಸ್ನಾನ ಮಾಡಿಕೊಂಡು ಪೂಜಿಸಿ, ತೀರ್ಥ-ಪ್ರಸಾದ ಪಡೆಯಬೇಕು. ಆಪದ್ಧರ್ಮದಲ್ಲಿ ಜಲಸ್ನಾನ ಲಭ್ಯವಾಗದೆ ಇದ್ದರೆ ಭಸ್ಮ ಸ್ನಾನ, ಮಂತ್ರ ಸ್ನಾನಗಳನ್ನು ಹೇಳಲಾಗಿದೆ. ವ್ಯಕ್ತಿಯು ತೀರಾ ಅಶಕ್ತನಾಗಿ ಎದ್ದು ಕೂಡುವ ಅಥವಾ ಪೂಜಿಸುವ ಶಕ್ತಿ ಇಲ್ಲದಿದ್ದರೆ ಆಗ ಆತ ಮಂತ್ರಧ್ಯಾನ ಮಾಡುತ್ತ ಮಲಗಿರಬೇಕು. ಇತರರು ಪೂಜಿಸಿ ತೀರ್ಥ - ಪ್ರಸಾದ ಕೊಡುವರು.
ದಿನಕ್ಕೆ ಮೂರು ಬಾರಿ ಅರ್ಚಿಸುವುದು ಶ್ರೇಷ್ಠ. ಎರಡು ಬಾರಿ ಅರ್ಚಿಸುವುದು ಮಧ್ಯಮ, ಒಮ್ಮೆ ಅರ್ಚಿಸುವುದು ಕನಿಷ್ಠ [3] ಎಂದು ಶರಣರು ಆದೇಶಿಸಿದ್ದಾರೆ. ಎಲ್ಲರಿಗೂ ಅದರಲ್ಲೂ ಕಾಯಕ ಜೀವಿಗಳಿಗೆ ೩ ಬಾರಿ ಅರ್ಚಿಸುವುದು ಆಗದ ಮಾತು. ಮಠಗಳಲ್ಲಿ ಸೀಮಿತರಾಗಿ ಕುಳಿತವರಿಗೆ ಮತ್ತು ಭಕ್ತರ ಮನೆಯ ಬಿನ್ನಹ ಪಾದಪೂಜೆ ಅಷ್ಟೇ ಕೆಲಸವಾದವರಿಗೆ ಇದು ಸಾಧ್ಯ. ಹೊರಗಿನ ಕಾಯಕವತ್ತಲಿರಲಿ, ಅಧ್ಯಯನ, ಬರವಣಿಗೆ ಮುಂತಾದ್ದು ಮಾಡುವ ಸ್ವಾಮಿಗಳಿಗೆ ಸಹ ೩ ಬಾರಿ ಸಾಧ್ಯವಾಗದು. ಸಾಧ್ಯ ಮಾಡಿಕೊಳ್ಳಬಹುದಾದರೂ ಅದು ಸಮಯ ಹರಣ. ಊಟಕ್ಕಾಗಿ ಸ್ನಾನ - ಪೂಜೆಯಾದೀತೇ ವಿನಾ ದೇವನಿಗಾಗಿ ಅಲ್ಲ. ತತ್ವ ತಿಳಿದು ಹೆಚ್ಚಿನ ಧಾರ್ಮಿಕ ಶ್ರದ್ದೆ ಬೆಳಸಿಕೊಂಡವರು ದಿನಕ್ಕೆ ಎರಡು ಬಾರಿ ಪೂಜಿಸುವುದನ್ನು ರೂಢಿಸಿಕೊಳ್ಳಬೇಕು. ಸಂಜೆ ತಮ್ಮ ದಿನನಿತ್ಯದ ಕಾಯಕ ಮುಗಿಸಿ ಬಂದು ಪೂಜೆ ಮಾಡಿ ರಾತ್ರಿಯ ಪ್ರಸಾದ ತೆಗೆದುಕೊಳ್ಳಬೇಕು. ಪ್ರವಾಸದಲ್ಲಿದ್ದಾಗ ಸಂಜೆಯ ವೇಳೆ ಬರೀ ಭಸ್ಮಧಾರಣೆ ಮಾಡಿಕೊಂಡು ಇಷ್ಟಲಿಂಗವನ್ನು ಸ್ಪರ್ಶಿಸಿ, ದೇವರನ್ನು ಮನದಲ್ಲೇ ನೆನೆದು ಊಟ ಮಾಡಬಹುದು. ಸನ್ಯಾಸಿಗಳು ಸಾಧಕರು ಈ ವಿಷಯದಲ್ಲಿ ರಿಯಾಯಿತಿ ಕೇಳಬಾರದು.
ಸಾಮಾನ್ಯ ಧಾರ್ಮಿಕ ಶ್ರದ್ಧೆಯುಳ್ಳವರು ದಿನಕ್ಕೆ ಒಂದು ಬಾರಿ, ಬೆಳಿಗ್ಗೆ ಹೊತ್ತು ಸ್ನಾನ ಮಾಡಿ ಪೂಜೆ ಮಾಡಿಕೊಳ್ಳಬೇಕು. ತೀರಾ ಅನಿವಾರ್ಯ ಪ್ರಸಂಗಗಳಲ್ಲಿ ಪೂಜೆ ಮಾಡಿಕೊಳ್ಳದಿದ್ದರಷ್ಟೆ. ಸುಮ್ಮನೆ ಅಂಗದ ಮೇಲೆ ಲಿಂಗವನ್ನು ಧರಿಸಿದ್ದರೂ ಸಾಕು ಎನ್ನುತ್ತಾರೆ ಶರಣರು.
ನೆನೆವುದರಿಂ ನಿರೀಕ್ಷಿಸುವುದು ಅತ್ಯಧಿಕಂ ನೆನಹಿಂ ನಿರೀಕ್ಷೆಯಿಂ |
ದನುದಿವಸಂ ಸಮರ್ಚಿಸುವುದತ್ಯಧಿಕಂ ನೆನಹಿಂ ನಿರೀಕ್ಷೆಯಿಂ
ದನು ದಿವಸಂ ಸಮರ್ಚಿಸುವುದರಿಂ ಶಿವಲಿಂಗವನಂಗದಲ್ಲಿ ಸು
ಮ್ಮನೆ ಧರಿಸಿರ್ಪುದತ್ಯಧಿಕಂ ನಿರುತಂ ಶಿವಾಧವಾ ||
'ಸೃಷ್ಟಿಕರ್ತನನ್ನು ನಂಬಿದ್ದೇನೆ; ಅವನನ್ನು ವಿಶ್ವದಾಕಾರದ ಇಷ್ಟಲಿಂಗ ರೂಪದಲ್ಲಿ ಧರಿಸುತ್ತಿದ್ದೇನೆ.' ಎಂಬ ಅರಿವೂ ಮಹತ್ವಪೂರ್ಣವಾದುದೆ. ಅನಿವಾರ್ಯ ಸಂದರ್ಭಗಳಲ್ಲಿ ಪೂಜಿಸಲಾಗದಿದ್ದರೆ ಅದನ್ನು ಅರಿಯದೆ ಶಿಕ್ಷಿಸುವಷ್ಟು ದೇವರು ಅಜ್ಞನಲ್ಲ. ನಾವು ಅವನಿಗೆ ಕೊಟ್ಟುದಕ್ಕಿಂತಲೂ ದೇವನು ನಮಗೆ ಕೊಡುವುದೆ ಹೆಚ್ಚು !
ಸಾಮಾಜಿಕ ಸಮಾನತೆ
ಇಷ್ಟಲಿಂಗ ದೀಕ್ಷೆಯನ್ನು ಪಡೆದವರೆಲ್ಲರೂ ಗುರು ಬಸವಣ್ಣನವರ ಸಾಕ್ಷಿಯಾಗಿ ಶರಣ ಬಂಧುಗಳಾಗುವುದರಿಂದ ಅವರ ಪೂರ್ವದ ವರ್ಣ, ಜಾತಿ, ಮತ, ಪಂಥ ಭೇದಗಳು ನಿರಸನವಾಗಿ ಸಾಮಾಜಿಕವಾಗಿ ಸಮಾನರಾಗುವರು. ಬೇರೆ ಬೇರೆ ಕಟ್ಟಿಗೆಗಳು ಬೆಂಕಿಯಲ್ಲಿ ಬಿದ್ದಾಗ ಅವು ಸುಟ್ಟು ಪೂರ್ವದ ರೂಪ-ರುಚಿ-ಗುಣಗಳಳಿದು ಬೂದಿಯೊಂದೇ ಉಳಿಯುವಂತೆ, ಪೂರ್ವದ ಭಿನ್ನತೆಯಳಿದು ಶರಣತ್ವ ಒಂದೇ ಉಳಿಯುವುದು. ಆದ್ದರಿಂದ ದೀಕ್ಷೆಯನ್ನು ಪಡೆದುಕೊಂಡವರಲ್ಲಿ ಉಂಬ-ಉಡುವ ಮತ್ತು (ಹೆಣ್ಣು-ಗಂಡುಗಳನ್ನು) ಕೊಂಬ-ಕೊಡುವ ಕ್ರಿಯೆಗಳನ್ನು ನಿಸ್ಸಂದೇಹಪೂರ್ವಕವಾಗಿ ಮಾಡಬಹುದು.
ಧಾರ್ಮಿಕ ಸಮಾನತೆ
ದೀಕ್ಷಾ ಸಂಸ್ಕಾರದಿಂದ ಸಾಮಾಜಿಕ ಸಮಾನತೆ ಮಾತ್ರವಲ್ಲ ಧಾರ್ಮಿಕ ಸಮಾನತೆ ಸಹ ಪ್ರಾಪ್ತವಾಗುತ್ತದೆ. ಆಚಾರದಿಂದ ಭಕ್ತನಾಗಿ, ಅರಿವಿನಿಂದ ಗುರುವಾಗಿ, ಅನುಭಾವದಿಂದ ವ್ಯಕ್ತಿ ಜಂಗಮ ಸಹಿತ ಆಗಬಲ್ಲನು. ಯಾವುದೇ ಮಾನವನು ದೀಕ್ಷಾ ಸಂಸ್ಕಾರದ ಮೂಲಕ ಭವಿತ್ವವನ್ನು ಕಳೆದುಕೊಂಡು ಭಕ್ತನಾಗಿ ಧರ್ಮವನ್ನು ಪ್ರವೇಶಿಸಿ, ನಂತರ ಸಾಧನೆಯ ಮೂಲಕ ವಿವಿಧ ಹಂತಗಳನ್ನೇರಿ ಗುರು, ಶರಣ, ಜಂಗಮ ಆಗಬಲ್ಲನು.
ಗುರೂಪದೇಶ (ಗುರುಕಾರುಣ್ಯ)
ಮುಮುಕ್ಷುಗಳ ಜೀವನದಲ್ಲಿ ಒಂದು ಪ್ರಾಯೋಗಿಕ ಸಮಸ್ಯೆ ಬರುತ್ತದೆ. ಆಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮನೆತನಗಳವರು ಮಕ್ಕಳಿಗೆ ಲಿಂಗಧಾರಣೆ ಮತ್ತು ಲಿಂಗದೀಕ್ಷೆ ಎರಡೂ ಮಾಡಿಸುವ ಸತ್ ಪರಂಪರೆ ಪಾಲಿಸುತ್ತಾರೆ. ಹೀಗೆ ಯಾಂತ್ರಿಕವಾಗಿ ಪಾಲಿಸುವ ಮನೆತನಗಳಲ್ಲಿ ಹುಟ್ಟಿದ ಮಗುವಿಗೆ ಲಿಂಗಧಾರಣೆ, ೧೨ ರಿಂದ ೧೫ ವಯಸ್ಸಿನ ಬಾಲಕ ಬಾಲಕಿಯರಿಗೆ ಲಿಂಗದೀಕ್ಷೆ ಮಾಡಿಸುವವರು. ಆಗಲೂ ಸಹ ಇನ್ನೂ ವೈಚಾರಿಕ ಪ್ರೌಢತೆಯು ಬಂದಿರುವುದಿಲ್ಲ. ಮುಂದೆ ವಿಚಾರ ಪರಿಪಕ್ವವಾದಾಗ ಬಾಲ್ಯದಲ್ಲಿ ದೀಕ್ಷೆ ನೀಡಿದ ವ್ಯಕ್ತಿಯನ್ನು 'ಗುರು' ಎಂದು ಸ್ವೀಕರಿಸಲು ಮನಸ್ಸು ಒಪ್ಪುವುದಿಲ್ಲ. ಬುದ್ದಿಯು ಅನುಮೋದಿಸುವುದಿಲ್ಲ. ಮುಮುಕ್ಷುಗಳಿಗೆ ತನ್ನ ಗುರು ಎಂದು ಹೇಳಿಕೊಳ್ಳಲು ಅರ್ಹ ವ್ಯಕ್ತಿ ಬೇಕಾಗಿರುತ್ತಾನೆ. ತನಗೆ ತಿಳುವಳಿಕೆ ಬರುವ ಮುನ್ನವೇ ದೀಕ್ಷೆ ನೀಡಿದ, ವಿಚಾರ ಭಿನ್ನಾಭಿಪ್ರಾಯ ಇರುವ ವ್ಯಕ್ತಿಯನ್ನು ಗುರು ಎಂದುಕೊಳ್ಳಲು ಅಂತರಂಗ ಒಪ್ಪದು. ಆದ್ದರಿಂದ ಈ ಮಾನಸಿಕ ತೊಳಲಾಟದಿಂದ ಪಾರಾಗಲು 'ಗುರೂಪದೇಶ' ಎಂಬ ಸಂಸ್ಕಾರ ಅತ್ಯಗತ್ಯ. ಇದು ಲಿಂಗದೀಕ್ಷೆಯ ಪ್ರತಿರೂಪವೇ ಹೊರತು ಬೇರೆಯಲ್ಲ. ಕೆಲವರು ಮಗುವಿದ್ದಾಗ ಲಿಂಗಧಾರಣೆ ಹೊಂದಿ ಪ್ರೌಢತೆ ಹೊಂದಿದಾಗ ಯೋಗ್ಯ ಗುರುವನ್ನು ಪಡೆಯುವ ಭಾಗ್ಯಶಾಲಿಗಳಾಗಿ ಲಿಂಗದೀಕ್ಷೆ ಹೊಂದುತ್ತಾರೆ. ಕೆಲವರಿಗೆ ಇದು ಸಾಧ್ಯವಾಗದೆ ಯಾಂತ್ರಿಕವಾಗಿ ಮನೆಗುರು - ಕುಲ ಗುರುಗಳಿಂದ ದೀಕ್ಷೆ ಹೊಂದುತ್ತಾರೆ. ಲೌಕಿಕ ಜೀವನದಲ್ಲಿ ಹೇಳಿಕೊಳ್ಳಲು ಮಕ್ಕಳಿಗೆ ಅಪ್ಪನ ಹೆಸರು ಎಷ್ಟು ಅಗತ್ಯವೊ, ಹೆಂಡತಿಗೆ ಗಂಡನ ಹೆಸರು ಎಷ್ಟು ಮುಖ್ಯವೋ ಪಾರಮಾರ್ಥದಲ್ಲಿ ಮುಮುಕ್ಷುವಿಗೆ ಗುರುವಿನ ಹೆಸರು ಅಷ್ಟೆ ಅಗತ್ಯ ಗೌರವದಾಯಕ. ಅಂಥ ಸನ್ನಿವೇಶದಲ್ಲಿ ನಿಜಗುರುವನ್ನು ಕಂಡಾಗ ವ್ಯಕ್ತಿಯು ಗುರೂಪದೇಶವನ್ನು ಹೊಂದಿ ಗುರು ಕಾರುಣ್ಯವನ್ನು ಪಡೆಯಬಹುದಾಗಿರುತ್ತದೆ. ದೀಕ್ಷಾ ಕ್ರಮವು ಇಷ್ಟಲಿಂಗ ದೀಕ್ಷೆಯಂತೆಯೇ ಇರುತ್ತದೆ.
ಇಷ್ಟಲಿಂಗ ಶುದ್ಧಿ
ಕೆಲವು ಜನರು ದೀಕ್ಷೆಯ ಬಗ್ಗೆ ಸರಿಯಾದ ತಿಳುವಳಿಕೆ ಇರದೆ, ದೀಕ್ಷೆ ಪಡೆದುಕೊಳ್ಳಲು ಹಿಂಜರಿಯುವರು. ಇಷ್ಟ ಲಿಂಗವನ್ನು ಬರಿ ಶುದ್ದಿ ಮಾಡಿಕೊಡಿರಿ ಸಾಕು, ಮತ್ತೆ ದೀಕ್ಷೆ ತೆಗೆದುಕೊಳ್ಳುತ್ತೇವೆ. ಅಲ್ಲಿಯ ತನಕ ಹಾಗೆಯೇ ಪೂಜೆ ಮಾಡುತ್ತೇವೆ.” ಎನ್ನುವರು. ಅವರನ್ನು ಒತ್ತಾಯಿಸಿದರೂ ಏನೂ ಪ್ರಯೋಜನವಾಗದು. ಆದ್ದರಿಂದ ಆಗ ಇಷ್ಟಲಿಂಗವನ್ನು ಶುದ್ದಿ ಮಾಡಿಕೊಡಬೇಕು. ಇದರಲ್ಲಿ ಅತಿ ಸರಳವೆಂದರೆ ಬಲಗೈಗೆ ಭಸ್ಮವನ್ನು ಧರಿಸಿಕೊಂಡು ಆ ಹೊಸಲಿಂಗವನ್ನು ಸ್ಪರ್ಶಿಸಿ “ಓಂ ಲಿಂಗಾಯ ನಮಃ ” ಎಂದು ಉಚ್ಚರಿಸುತ್ತ ಅದನ್ನು ತೆಗೆದುಕೊಳ್ಳುವವರಿಗೆ ಕೊಡಬೇಕು.
ವಿಶೇಷ ಶುದ್ಧಿ : ಬೆಳಿಗ್ಗೆ ಪೂಜೆ ಮಾಡುವಾಗ ಹೊಸಲಿಂಗವನ್ನು ಶುದ್ಧಿ ಮಾಡಬೇಕು ಗುರುಗಳು ತಮ್ಮ ಇಷ್ಟಲಿಂಗಕ್ಕೆ ಮಜ್ಜನಕ್ಕೆ ಎರೆಯುವಾಗ ತಮ್ಮ ಇಷ್ಟಲಿಂಗದ ಕೆಳಗೆ ಹೊಸ ಲಿಂಗವನ್ನು ಹಿಡಿದು ಮಜ್ಜನವೆರೆದು ನಂತರ ಭಸ್ಮ ಧರಿಸಿ, ಪತ್ರೆ-ಪುಷ್ಪ ಮುಂತಾಗಿ ಇಟ್ಟು, ಕೊಡುವಾಗ ಮಂತ್ರವನ್ನು ಉಚ್ಚರಿಸಿ ಕೊಡಬೇಕು. ಈ ವಿಧಾನ ಅರೆಬರೆ ಭಕ್ತರಿಗಾಗಿ ಹೇಳಲ್ಪಟ್ಟ ಅನುಕೂಲಸಿಂಧು ವಿಧಾನ ಮಾತ್ರ.
ಇಷ್ಟಲಿಂಗ ದೀಕ್ಷೆ - ಅಧ್ಯಾತ್ಮಿಕ ಮುಖ
ವಿಶ್ವಗುರು ಬಸವಣ್ಣನವರು ಇಷ್ಟಲಿಂಗ ದೀಕ್ಷೆಯನ್ನು ಧರ್ಮ ಮಂದಿರದ ಹೆಬ್ಬಾಗಿಲನ್ನಾಗಿ ಇಟ್ಟರು. ಧರ್ಮಮಂದಿರವನ್ನು ಪ್ರವೇಶಿಸಬೇಕೆಂಬ ಹಂಬಲಿಗನು ವರ್ಣ-ಜಾತಿ-ವೃತ್ತಿ-ವರ್ಗ-ಅಂತಸ್ತು - ಲಿಂಗಭೇದವಿಲ್ಲದೆ ಗುರು ಕರಕಮಲ ಸಂಜಾತನಾಗಿ, ದೀಕ್ಷೆಯನ್ನು ಹೊಂದುವ ಸದವಕಾಶವನ್ನು ಧರ್ಮಗುರು ಬಸವಣ್ಣನವರು ಮಾನವರಿಗೆ ಒದಗಿಸಿಕೊಟ್ಟರು. ಈ ಅಮೂಲ್ಯ ಮತ್ತು ದೈವಿಕ ಕೊಡುಗೆಯಿಂದ ಆಕರ್ಷಿತರಾಗಿ ಅಸಂಖ್ಯಾತ ಜನರು ಧರ್ಮದೀಕ್ಷೆಯನ್ನು ಪಡೆದರು. ಧರ್ಮಪಿತ ಬಸವಣ್ಣನವರ ಕಾಲದಲ್ಲೇ ಒಂದು ಲಕ್ಷದ ಮೇಲೆ ತೊಂಭತ್ತಾರು ಸಾವಿರ ಅನುಯಾಯಿಗಳು ಲಿಂಗವಂತ ಧರ್ಮವನ್ನು ಸ್ವೀಕರಿಸಿದರು. ಇಷ್ಟಲಿಂಗ ದೀಕ್ಷೆಯನ್ನು ಪಡೆಯುವುದು ಒಂದು ಸೌಭಾಗ್ಯವೆಂದು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಜನರು ತಿಳಿಯುತ್ತಿದ್ದರು.
ಆದರೆ ಬರುಬರುತ್ತ ವೈದಿಕ ಧರ್ಮದ ವಿಚಾರಧಾರೆಗೆ ಒಲಿದ ಲಿಂಗವಂತ ಮಠಾಧೀಶರು ಧರ್ಮಗುರುವಿನ ಆಶಯಕ್ಕೆ ವಿರುದ್ಧವಾದ, ಅವರ ವಿಚಾರಗಳಿಗೆ ಹೊರತಾದ ನಂಬಿಕೆ ಆಚರಣೆಗಳನ್ನು ರೂಢಿಗೊಳಿಸಿದರು. ಮಡಿವಂತಿಕೆ ತೋರಿಸಲ್ಪಟ್ಟಿತು. ಸ್ವಾಭಾವಿಕ ಗುಣದಿಂದ ಲಿಂಗವಂತ ಧರ್ಮವು ಎಲ್ಲರನ್ನೂ ಕೈಬೀಸಿ ಆಹ್ವಾನಿಸುವ ಧರ್ಮವಾಗಿದ್ದರೂ, ಕೆಲವು ಧೂರ್ತ ಮಠಾಧೀಶರು ಮತ್ತು ಅವರನ್ನು ಸುತ್ತುವರಿದ ಮೇಲ್ವರ್ಗದ ಶ್ರೀಮಂತ ಅನುಯಾಯಿಗಳಿಂದ, ತನ್ನ ತೀವ್ರತೆ ಕಳೆದುಕೊಂಡು ಹೊಸಬರನ್ನು ಆಹ್ವಾನಿಸುವುದಿರಲಿ ತನ್ನಲ್ಲಿ ಇರುವ, ಯಾವುದೋ ಕಾಲದಲ್ಲಿಯೋ ದೀಕ್ಷೆ ಪಡೆದು ಒಳಗೆ ಬಂದ ಅನುಯಾಯಿಗಳಲ್ಲಿ ಸಹ ಭೇದವನ್ನು ಮಾಡುವ ಮಟ್ಟಕ್ಕೆ ಇಳಿದು ನಿಂತಿದೆ. ಹೀಗಾಗಿ ಬಸವಣ್ಣನವರ ಅದ್ಭುತ ವ್ಯಕ್ತಿತ್ವ, ಲಿಂಗವಂತ ಧರ್ಮದ ಮಹತ್ವ ತಿಳಿದು ಮಾರು ಹೋದವರು ಸಹ ಇಷ್ಟಲಿಂಗ ದೀಕ್ಷೆ ಪಡೆಯಲು ಹಿಂದೆ-ಮುಂದೆ ನೋಡುವಂತೆ ಆಗಿದೆ. ಸಸಿಯು ಮಡಿಯಿಂದ ಕಿತ್ತಲ್ಪಟ್ಟ ಮೇಲೆ ತೀವ್ರವಾಗಿ ಗದ್ದೆಯಲ್ಲಿ ಬೇರೂರಬೇಕು. ಮಡಿಯಿಂದ ಕಿತ್ತ ಸಸಿಯನ್ನು ಹಾಗೆಯೇ ಇಟ್ಟರೆ ಬಾಡುತ್ತದೆ. ಹಾಗೆ ಹುಟ್ಟಿದ ಜಾತಿ ಎಂಬ ಮಡಿಯನ್ನು ಬಿಟ್ಟ ಅನುಯಾಯಿ ಎಂಬ ಸಸಿ ಶರಣ ಸಮಾಜ” ಎಂಬ ಗದ್ದೆಯಲ್ಲಿ ನೆಡಲ್ಪಡಬೇಕು. ಎರಡೂ ಇಲ್ಲವಾದರೆ ಸಸಿ ಬಾಡುವಂತೆ ಅನುಯಾಯಿಗೆ ತ್ರಿಶಂಕು ಸ್ವರ್ಗವಾಗುವುದು. ಬಸವಾದಿ ಶರಣರ ಕಾಲದ ಜೀವಂತಿಕೆ - ತುಡಿತ - ವಿಶಾಲತೆ - ಪ್ರೀತಿಸುವ ಗುಣ ಕಳೆದುಕೊಂಡ ಲಿಂಗವಂತ ಸಮಾಜ ಬಂದವರನ್ನು, ಬರುವವರನ್ನು ಸ್ವಾಗತಿಸುವ ಗುಣವನ್ನು ಕಳೆದುಕೊಂಡು ಬಿಟ್ಟಿದೆ. ಹೀಗಾಗಿ ಹೊಸ ಜನರು ಅಂದರೆ ಲಿಂಗಾಯತೇತರರು ಇಡೀ ಕುಟುಂಬ ಸಹಿತವಾಗಿ ದೀಕ್ಷೆ ಪಡೆಯುವ ಆಸಕ್ತಿ ಕಳೆದುಕೊಂಡಿದ್ದಾರೆ.
ಸರ್ಕಾರದ ಧೋರಣೆ ಎಲ್ಲರನ್ನೂ ಒಂದು ಮಾಡುವುದಾಗಿರದೆ, ಒಡೆದು ಆಳುವ ನೀತಿಯ ಮೇಲೆ ನಿಂತಿರುವುದರಿಂದ ಧರ್ಮದ ಸ್ಥಾನ ಗೌಣವಾಗುತ್ತ ಹೊರಟಿದೆ. ಧೂರ್ತ ರಾಜಕಾರಣಿಗಳೆಂಬ ವಿಷಜಂತುಗಳ ಪ್ರವೇಶದಿಂದ ಜಾತಿ-ಉಪಜಾತಿಗಳ ವಿಘಟನೆ, ಸಂಘರ್ಷ ಜಾಸ್ತಿಯಾಗುತ್ತಿದೆ. ಒಂದು ಕಾಲದಲ್ಲಿ ಧಾರ್ಮಿಕ ಹಕ್ಕು ಹೊಂದಲು ಜನರು ಯಾವುದೇ ತ್ಯಾಗಕ್ಕೆ ಸಿದ್ದರಾಗುತ್ತಿದ್ದರೆ ಈಗ ಆರ್ಥಿಕ ಅನುಕೂಲತೆಗಳಿಗಾಗಿ ಯಾವ ಉದಾತ್ತ ಮೌಲ್ಯವನ್ನೂ ಬಲಿಗೊಡಲು ಜನರು ಸಿದ್ಧರಾಗುತ್ತಿದ್ದಾರೆ.
ಇಂಥ ಮರುಭೂಮಿಯ ವಾತಾವರಣದಲ್ಲಿಯೂ ತಾಣ (ಓಯಸಿಸ್)ಗಳನ್ನು ಕಾಣುವಂತೆ, ಜಾತೀಯತೆ - ಮತಾಂಧತೆಯ ಮಧ್ಯೆಯೂ ಅಧ್ಯಾತ್ಮಿಕ ಹಂಬಲದ ಸಾತ್ವಿಕರು ಕಾಣಬರುತ್ತಾರೆ. ಇವರು ವಿಶ್ವಗುರು ಬಸವಣ್ಣನವರ ದಿವ್ಯಭವ್ಯ ವ್ಯಕ್ತಿತ್ವಕ್ಕೆ ಮಾರು ಹೋಗಿ, ಅವರು ಕೊಟ್ಟ ಇಷ್ಟಲಿಂಗವನ್ನು ಪಡೆದು ತ್ರಾಟಕ ಯೋಗಾಭ್ಯಾಸ ಮಾಡಬೇಕೆನ್ನುತ್ತಾರೆ. ಇಂಥ ಅಭೀಷ್ಟೆ ಹೊಂದಿದವರ ಇಡೀ ಕುಟುಂಬವೇ ದೀಕ್ಷೆ ತೆಗೆದುಕೊಳ್ಳಲು ಸಿದ್ಧವಾಗಲಿಕ್ಕಿಲ್ಲ, ಮಾಂಸಾಹಾರ ತೊರೆಯಲು ಇಷ್ಟಪಡಲಿಕ್ಕಿಲ್ಲ. ಇಂಥ ಸನ್ನಿವೇಶದಲ್ಲಿ ಇಷ್ಟಲಿಂಗ ದೀಕ್ಷೆಯನ್ನು - ಆಚರಣೆಗಳನ್ನು ಪಾಲಿಸುತ್ತೇನೆ ಎನ್ನುವ ವ್ಯಕ್ತಿಗೆ ದೀಕ್ಷೆ ಕೊಟ್ಟರೆ ತಪ್ಪಾಗಲಿಕ್ಕಿಲ್ಲ. ಧರ್ಮಪಿತರ ಕಾಲದಲ್ಲಿ ಇಷ್ಟಲಿಂಗ ದೀಕ್ಷೆ ಅಧ್ಯಾತ್ಮಿಕ-ಧಾರ್ಮಿಕ-ಸಾಮಾಜಿಕ ಮೂರು ಮುಖಗಳನ್ನು ಹೊಂದಿರುವ ಕ್ರಿಯೆ, ಧಾರ್ಮಿಕವಾಗಿ ಒಂದು, ಸಾಮಜಿಕವಾಗಿ ಮತ್ತೊಂದು ಆಗಿರಲು ಅವಕಾಶವಿರಲಿಲ್ಲ. ದೀಕ್ಷಾವಂತನು ನವ ಸಮಾಜದ ಅವಿಭಾಜ್ಯ ಅಂಗವಾಗಬೇಕಿತ್ತು. ಇಂದಿನ ಬದಲಾದ ಪರಿಸರದಲ್ಲಿ ತಿದ್ದುಪಡಿ ತಂದು ಇಷ್ಟಲಿಂಗ ದೀಕ್ಷೆಯನ್ನು ಅಧ್ಯಾತ್ಮಿಕ ದೀಕ್ಷೆಯನ್ನಾಗಿ ಮಾಡಿ, ದೈವೀಹಂಬಲವಿರುವ ವ್ಯಕ್ತಿಗೆ ಕೊಡುವುದು ಒಳ್ಳೆಯದು. ಹಸಿವಿದ್ದವರಿಗೆ ಉಣಲಿಕ್ಕಬೇಕು. ಅವರ ಒಡನಾಡಿಗಳು ಕುಟುಂಬದವರಿಗೆ ಅಧ್ಯಾತ್ಮಿಕ ಹಸಿವೆಯಿಲ್ಲದಾಗ, ಅವರಿಗಾಗಿ ಇವರನ್ನು ವಂಚಿತರನ್ನಾಗಿ ಮಾಡಬಾರದು. ಆಸಕ್ತಿಯಿರುವ ಮಹಿಳೆಯರು ಪುರುಷರು ತಮ್ಮ ಸಂಗಾತಿಯು ಪಡೆದುಕೊಳ್ಳದಿದ್ದರೂ ತಾವು ದೀಕ್ಷೆ ಪಡೆದುಕೊಂಡು ಸಾಧನೆ ಮಾಡಲು ಅನುವು ಮಾಡಿ ಕೊಡಬೇಕು.
ತ್ರಾಟಕ ಸಾಧನ :
ಯೋಗಶಾಸ್ತ್ರಕ್ಕೆ ವಿಶ್ವಗುರು ಬಸವಣ್ಣನವರು ಕೊಟ್ಟ ಒಂದು ಅಮೂಲ್ಯ ಕುರುಹು, ಸಾಧನ, ತಂತ್ರ, ಇಷ್ಟಲಿಂಗ ! ಸಾಮಾಜಿಕ ಸಂಸಾರಿಕ ಕಾರಣಗಳಿಂದ ದೀಕ್ಷೆಯ ಮೂಲಕ ಪಡೆದು ಧರಿಸಿಕೊಂಡು ಪೂಜಿಸಲು ಆಗದ ಕೆಲವು ಮುಮುಕ್ಷುಗಳು ಮಂತ್ರೋಪದೇಶದ ಮೂಲಕ ಪಡೆದು ಶರೀರದ ಮೇಲೆ ಧರಿಸಿ ಪೂಜೆ ಮಾಡದೆ ಅಂಗೈಯಲ್ಲಿಟ್ಟು ಪೂಜಿಸಿ, ತ್ರಾಟಕ ಯೋಗಕ್ಕೆ ಬಳಸಿಕೊಳ್ಳುತ್ತೇವೆ ಎಂದರೆ ಸಮ್ಮತಿ ನೀಡುವುದು ಅತ್ಯಂತ ಅಗತ್ಯವಾಗಿದೆ. ಹಲವಾರು ಮುಮುಕ್ಷುಗಳು ತಮ್ಮ ತಮ್ಮ ಕೈಗಳಲ್ಲಿ ಇಷ್ಟಲಿಂಗವನ್ನು ಇರಿಸಿಕೊಂಡು ಶಾಂಭವೀ ಮುದ್ರೆಯಲ್ಲಿ ಕುಳಿತು ಸಾಮೂಹಿಕವಾಗಿ ಅಥವಾ ವೈಯಕ್ತಿಕವಾಗಿ ದೃಷ್ಟಿ (ತ್ರಾಟಕ) ಯೋಗ ಸಾಧನೆ ಮಾಡುವುದು ಪುರಸ್ಕರಣೀಯ.
ಸ್ವಯಂದೀಕ್ಷೆ, ಬಸವ ಗುರುವಿನಿಂದ ದೀಕ್ಷೆ
ಶ್ರೀ ಮಂತ್ರ ಪುರುಷ, ಮಹಾಗುರು ಬಸವಣ್ಣನವರು ಪರಮಾತ್ಮನಿಂದಲೇ ನೇರವಾಗಿ ಅನುಗ್ರಹ ಪಡೆದ ಮಹಾ ವಿಭೂತಿಗಳು. ಇಂಥ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲವಾದ್ದರಿಂದ, ಪರಮಾತ್ಮನ ದಿವ್ಯಜ್ಞಾನ ಮತ್ತು ದಿವ್ಯ ಕೃಪೆ ಅಳವಡಿಸಿಕೊಂಡ ವ್ಯಕ್ತಿಯು ಗುರುವಾಗಿ, ಮಧ್ಯವರ್ತಿಯಾಗಿ ಇನ್ನುಳಿದವರನ್ನು ಅನುಗ್ರಹಿಸಬೇಕು ಎಂದು ಆಲೋಚಿಸಿದರು. ಈ ದೇಶದಲ್ಲಿ ಎಲ್ಲ ಜಾತಿ-ಜನಾಂಗದವರಿಗೆ ಕಡ್ಡಾಯವಾಗಿ ಧಾರ್ಮಿಕ ಸಂಸ್ಕಾರವಿಲ್ಲದಿರುವುದರಿಂದ, ಎಲ್ಲರಿಗೂ ಜಾತಿ-ಮತ-ಕುಲ-ವರ್ಗ-ವರ್ಣ-ಲಿಂಗ ಭೇದವಿಲ್ಲದೆ ದೀಕ್ಷೆಯನ್ನು ಕೊಡುವಂತಾಗಬೇಕು ಎಂಬುದೇ ಅವರ ಉದಾತ್ತ ಚಿಂತನೆಯಾಗಿತ್ತು.
ಕಾಲ ಬದಲಾಗಿದೆ, ನಿಜವಾದ ಗುರುಗಳು ದೊರೆಯುವುದೇ ದುಸ್ತರವಾಗಿದೆ. ಜನಗಳಲ್ಲಿರುವ ಭಾವುಕತೆ, ಶ್ರದ್ದೆ-ಶರಣಾಗತಿಗಳನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚಾಗುತ್ತಿದ್ದಾರೆ. ಶಾಸ್ತ್ರಿ-ಪುರೋಹಿತರು ಜಾತಿಯ ಆಧಾರದ ಮೇಲೆ ಸಿಗುವರಾದರೂ ಎಲ್ಲರಲ್ಲೂ ಆಧ್ಯಾತ್ಮಿಕ ಶಕ್ತಿ ಇರದು. ಆಧ್ಯಾತ್ಮ ಜೀವಿಗಳ ಹಂಬಲವು ಉತ್ಕಟವಾದರೂ ಅದು ತಣಿಯದೇ ಅವರು ನಿರಾಶರಾಗುವ ಸಂಭವ ಇರುತ್ತದೆ. ಕೆಲವೊಮ್ಮೆ ಯಾರನ್ನೂ ಉತ್ತಮರೆಂದು ಭಾವಿಸಿ ದೀಕ್ಷೆಯನ್ನು ಪಡೆದಿರುತ್ತಾರೆ; ನಂತರ ಅವರು ಚಾರಿತ್ರ್ಯಹೀನರೋ, ಸ್ವಾರ್ಥಿಗಳೋ, ಜಾತಿವಾದಿಗಳೋ ಎನಿಸುತ್ತದೆ. ಆಗ ಮನಸ್ಸಿನಲ್ಲಿ ಉಂಟಾದ ಜಿಗುಪ್ಸೆ ತಿರಸ್ಕಾರವು ಆ ಗುರುವಿನ ಬಗ್ಗೆ ಹೇಯ ಭಾವನೆ ಹುಟ್ಟಿಸುವುದಿರಲಿ, ಅವನು ಕೊಟ್ಟ ಇಷ್ಟಲಿಂಗದ ಬಗ್ಗೆಯೂ ತಿರಸ್ಕಾರ ಹುಟ್ಟಿ, ಕಡೆಗೆ ದೇವರು - ಧರ್ಮದ ಬಗ್ಗೆಯೇ ನಂಬಿಕೆ ಹೋಗುತ್ತದೆ. ಒಂದು ಮಾತನ್ನು ಚನ್ನಬಸವಣ್ಣನವರು ಹೇಳುವರು. “ತಿಪ್ಪೆಯ ಮೇಲೆ ಒಂದು ಮಾಣಿಕ್ಯ ಬಿದ್ದಿದ್ದರೆ ಆ ತಿಪ್ಪೆಯು ಕೊಳಕಿನ ಆಗರ ಎಂದು ಮಾಣಿಕ್ಯವನ್ನು ಯಾರೂ ಬಿಸಾಡುವುದಿಲ್ಲ. ಹಾಗೆಯೇ ಅರಿಯುವ ಮುನ್ನವೋ, ಅನಿವಾರ್ಯವಾಗಿ ಸಂಪ್ರದಾಯವೆಂದೋ . (ಬೇರೆ ಯಾರೂ ಸಕಾಲಕ್ಕೆ ಸಿಗದೇ ಇದ್ದಾಗ) ಯೋಗ್ಯನಲ್ಲದ ವ್ಯಕ್ತಿಯಿಂದ ಲಿಂಗ ದೀಕ್ಷೆ ಪಡೆದಿದ್ದರೆ ಕೊಟ್ಟ ಗುರುವು ಅಯೋಗ್ಯನಾದ ಕಾರಣ ಬೆಲೆಯುಳ್ಳ ಇಷ್ಟಲಿಂಗವನ್ನು, ಅದರ ಪೂಜೆಯನ್ನು ಬಿಡಬಾರದು” ಎಂದು.
ಇದೂ ಒಂದು ಉತ್ತಮ ವಿಚಾರವೆ. ಆದರೆ, ದೀಕ್ಷೆ ನೀಡಿದ ವ್ಯಕ್ತಿ ಯೋಗ್ಯನಲ್ಲ ಎಂದು ತಿಳಿದ ಬಳಿಕ ಮನಸ್ಸಿಗೆ ಅಪಾರವಾದ ಅಶಾಂತಿಯುಂಟಾಗುತ್ತದೆ. ಪೂಜೆಯಲ್ಲಿ ಏಕಾಗ್ರತೆ ಉಳಿಯುವುದಿಲ್ಲ; ಇದು ಒಂದು ಕಾರಣವಾದರೆ ಇನ್ನೂ ಒಂದು ಕಾರಣವಿದೆ, ಒಬ್ಬ ವ್ಯಕ್ತಿಗೆ ಆಧ್ಯಾತ್ಮಿಕ ಆಸಕ್ತಿಯು ಆಕಸ್ಮಿಕವಾಗಿ, ಯಾವುದಾದರೊಂದು ಪುಸ್ತಕ ಓದಿಯೋ, ಏನಾದರೂ ಘಟನೆ ನಡೆದೋ ಉಂಟಾಗುತ್ತದೆ. ಅನುಗ್ರಹ-ದೀಕ್ಷೆ ಪಡೆಯಬೇಕು ಎಂಬ ಉತ್ಕಟ ಹಂಬಲ ಇರುವಾಗ ಆಗಲೇ ಗುರುವು ದೊರೆಯದಿದ್ದರೆ ಹಂಬಲವು ಕಡಿಮೆ ಆಗಿಬಿಡಬಹುದು. ಗುರುವನ್ನು ಹುಡುಕುತ್ತ ಅಲ್ಲಿಯವರೆಗೂ ಪೂಜೆ-ಧ್ಯಾನಾದಿಗಳನ್ನು ಮಾಡದೆ ಬೆಲೆಯುಳ್ಳ ಸಮಯವು ಸರಿದು ಹೋಗುತ್ತದೆ. ಆದ್ದರಿಂದ ಇದಕ್ಕೊಂದು ಉತ್ತಮ ಪರಿಹಾರವನ್ನು ಧರ್ಮಕರ್ತ ಬಸವಣ್ಣನವರು ಇಂದು (೧೯-೬-೧೯೯೪) ನನಗೆ ಅನುಗ್ರಹಿಸಿದ್ದಾರೆ. ಅದುವೇ ಮಂತ್ರ ಪುರುಷ ಬಸವಣ್ಣನವರನ್ನೇ ದೀಕ್ಷಾಗುರುವನ್ನಾಗಿ ಹೊಂದುವುದು. ಇದನ್ನು ನಾನು, ಧರ್ಮಕರ್ತ ಬಸವಣ್ಣನವರು ತಂದ ನೇಮ ಪ್ರತಿಯೊಬ್ಬ ಧರ್ಮಾನುಯಾಯಿಯೂ ವ್ಯಕ್ತಿ ಗುರುವೊಬ್ಬನಿಂದ ಕಡ್ಡಾಯವಾಗಿ ದೀಕ್ಷೆ ಹೊಂದಬೇಕು?* ಎಂಬ ಆದೇಶಕ್ಕೆ ತಿದ್ದುಪಡಿ (Amendment) ; ಅವರೇ ಅನುಮತಿ ನೀಡಿದ ತಿದ್ದುಪಡಿ ಎಂದು ಭಾವಿಸುತ್ತೇನೆ. ಮುಗ್ಧ ಭಕ್ತರನ್ನು ಧಾರ್ಮಿಕ ಶೋಷಣೆಯಿಂದ ಮುಕ್ತಗೊಳಿಸಲು ಕಳಕಳಿಯಿಂದ ಧರ್ಮಪಿತರು ಈ ಆದೇಶ ನೀಡಿದ್ದಾರೆ ಎಂದು ನಂಬುತ್ತೇನೆ.
ಗುರು ವಚನವಿಲ್ಲದೆ ಲಿಂಗವೆಂದೆನಿಸದು;
ಗುರು ವಚನವಿಲ್ಲದೆ ನಿತ್ಯವೆಂದೆನಿಸದು;
ಗುರು ವಚನವಿಲ್ಲದೆ ನೇಮವೆಂದೆನಿಸದು
ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ
ಉಭಯ ಭ್ರಷ್ಟರ ಮೆಚ್ಚುವನೆ
ನಮ್ಮ ಕೂಡಲಸಂಗಮದೇವ ?
ಸ್ವಯಂ ದೀಕ್ಷೆಯನ್ನು ಹೊಂದುವ ದೀಕ್ಷಾರ್ಥಿಯು ತಲೆಯಿಂದ ಸ್ನಾನಮಾಡಿ, ಮಡಿ ಬಟ್ಟೆಗಳನ್ನುಟ್ಟು ಬರಬೇಕು. ಪೂಜಾ ಸಾಮಗ್ರಿಗಳನ್ನು ತಾನೇ ಹೊಂದಿಸಿಕೊಳ್ಳಬಹುದು; ಅಥವಾ ಬೇರಿತರರು ಸಹಾಯ ಮಾಡಬಹುದು. ಧರ್ಮಕರ್ತ ಬಸವಣ್ಣನವರ ಭಾವಚಿತ್ರವನ್ನು ಎದುರಿಗಿಟ್ಟುಕೊಂಡು ಭಕ್ತಿಯಿಂದ ಪೂಜಿಸಬೇಕು. ನಂತರ 'ಬಸವ ಕರುಣೋದಕ' ವನ್ನು (ತೀರ್ಥವನ್ನು) ಸಿದ್ಧಪಡಿಸಬೇಕು. ಈಗ ಇಷ್ಟಲಿಂಗ ಪೂಜೆಯನ್ನು ಸಂಪೂರ್ಣ ಶ್ರದ್ಧೆಯಿಂದ ಮಾಡಬೇಕು.* ಇಷ್ಟಲಿಂಗ ತ್ರಾಟಕವನ್ನು ಮಾಡುವ ಮೊದಲು ಶ್ರೀ ಬಸವ ಗುರುವಿನ ಭಾವಚಿತ್ರದಲ್ಲಿರುವ ಹಸ್ತ ಮತ್ತು ಪಾದಗಳಿಗೆ ವಿಭೂತಿ ಧರಿಸಿ, ಆ ವಿಭೂತಿಯನ್ನು ಇಷ್ಟಲಿಂಗಕ್ಕೆ ಧರಿಸಬೇಕು. ನೇರವಾಗಿ ಭಾವಚಿತ್ರದಲ್ಲಿರುವ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಾ ಅನುಗ್ರಹನ್ನು ಪಡೆದುಕೊಳ್ಳುವಂತೆ ಭಾವಿಸಬೇಕು. ನಿಧಾನವಾಗಿ “ಓಂ ಲಿಂಗಾಯ ನಮಃ” ಎಂಬ ಮಂತ್ರವನ್ನು ಉಚ್ಚರಿಸಬೇಕು. ನಂತರ ಬಸವ ಗುರುವಿನಿಂದ ಪಡೆದ ಅನುಗ್ರಹವನ್ನು ಚಿತ್ಕಳಾರೂಪದಲ್ಲಿ ಇಷ್ಟಲಿಂಗಕ್ಕೆ ತುಂಬುವಂತೆ ಲಿಂಗತ್ರಾಟಕ ಮಾಡಬೇಕು. ನಂತರ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚಿ ಆ ದಿವ್ಯ ಅನುಗ್ರಹವನ್ನು ಸರ್ವಾಂಗದೊಳಗೆ ಅಳವಡಿಸಿಕೊಳ್ಳುವಂತೆ ಮಂತ್ರೋಚ್ಚಾರ ಮಾಡುತ್ತಾ ಧ್ಯಾನಮಾಡಬೇಕು.
ಧ್ಯಾನಾನಂತರ ಕುರುಂಗ ಮುದ್ರೆಯಿಂದ ಇಷ್ಟಲಿಂಗಕ್ಕೆ ಶರಣು ಮಾಡಿ' - ಲಿಂಗ ತೀರ್ಥ-ಪ್ರಸಾದ ಪಡೆಯಬೇಕು. ಬಸವ ಕರುಣೋದಕ, ಲಿಂಗ ಕರುಣೋದಕ , ಶರಣ ಕರುಣೋದಕ ಎಂದು ಮೂರು ಬಾರಿ ಹೇಳಿ ತೀರ್ಥವನ್ನು ಎರೆದು, ಆ ತೀರ್ಥ - ಪ್ರಸಾದಗಳನ್ನು ಸಂಪೂರ್ಣವಾಗಿ ಸ್ವೀಕರಿಸಬೇಕು. ನಂತರ ಪ್ರತಿಜ್ಞಾವಿಧಿಯ ಪಟವನ್ನು ಇಟ್ಟುಕೊಂಡು ಪ್ರತಿಜ್ಞೆ ಮಾಡಬೇಕು.
ಹಿಂದುತ್ವ - ಮಂತ್ರದೀಕ್ಷೆ
ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬನಿಗೂ ಧರ್ಮ ಸಂಸ್ಕಾರ ಅತ್ಯಗತ್ಯ. ಅನ್ನ-ನೀರು-ಉಸಿರಾಟ-ನಿದ್ರೆ ಅತ್ಯಗತ್ಯವಾದಂತೆ ಧರ್ಮವೂ ಅತ್ಯಗತ್ಯವಾದ ಅಂಶ. ದುರ್ದೈವದಿಂದ ವರ್ಣಾಶ್ರಮ ಸಮಾಜ ವ್ಯವಸ್ಥೆಯ ವೈದಿಕ ಧರ್ಮ ಇಂಥದೊಂದು ಧರ್ಮಸಂಸ್ಕಾರವನ್ನು ಎಲ್ಲರಿಗೂ ಕೊಡದೆ ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂಬ ಮೂರು ವರ್ಣಿಯರಿಗೆ ನೀಡಿ ಶೂದ್ರರು ಮತ್ತು ಅಸ್ಪೃಶ್ಯರನ್ನು ಮತ್ತು ಮಾನವ ಸಮಾಜದ ಅರ್ಧ ಭಾಗವಾದ ಮಹಿಳೆಯರನ್ನು ಧರ್ಮ ಸಂಸ್ಕಾರದಿಂದ ವಂಚಿಸಿದೆ. ಇದರಿಂದ ಚಿಂತಿತರಾದ ಗುರು ಬಸವಣ್ಣನವರು ನಾಲ್ಕು ವರ್ಣಿಯರಿಗೆ, ಅಸ್ಪೃಶ್ಯರಿಗೆ ಮಾತ್ರವಲ್ಲ ಧಾರ್ಮಿಕವಾಗಿ ಅಸ್ಪೃಶ್ಯರಾಗಿದ್ದ ಸ್ತ್ರೀಯರಿಗೆ ಧರ್ಮ ಸಂಸ್ಕಾರ ಕೊಡುವ ಪ್ರಯತ್ನ ಮಾಡಿದರು. ಜಾತಿ ವರ್ಣವರ್ಗ ಲಿಂಗಭೇದವಿಲ್ಲದೆ ಇಷ್ಟಲಿಂಗ ದೀಕ್ಷಾ ಸಂಸ್ಕಾರವನ್ನು ಎಲ್ಲರಿಗೂ ಕೊಟ್ಟರು.
ಇಂದು ಕಾಲ ಬದಲಾಗಿದೆ. ಹಲವಾರು ಸಾಮಾಜಿಕ ಕಾರಣಗಳಿಗಾಗಿ ಮತ್ತು ಸರ್ಕಾರ ಕೊಡುವ ಸೌಲಭ್ಯಗಳಿಗಾಗಿ ಸಾಮಾಜಿಕ ಕಾರಣಗಳಿಗಾಗಿ ಮತ್ತು ಸರ್ಕಾರ ಕೊಡುವ ಸೌಲಭ್ಯಗಳಿಗಾಗಿ ಲಿಂಗಾಯತೇತರ ಹಿಂದೂಗಳು (ಮತ್ತು ಅಹಿಂದುಗಳು) ಲಿಂಗದೀಕ್ಷೆ ಪಡೆದುಕೊಳ್ಳಲು ಹಿಂಜರಿಯುವರು. ಧರ್ಮಗುರು ಬಸವಣ್ಣನವರ ಆಶಯದಂತೆ ಲಿಂಗಧಾರಿಗಳನ್ನೆಲ್ಲ ಸಮಭಾವದಿಂದ ಕಾಣದ ಲಿಂಗವಂತ ಸಮಾಜದಿಂದಾಗಿ ದೀಕ್ಷೆಯನ್ನು ಹೊಂದಿದವರು ವಿವಾಹಾದಿ ಸಂಬಂಧ ಬೆಳೆಸುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುವುದು. ಹುಟ್ಟಿದ ಜಾತಿ ಮತ್ತು ಸ್ವೀಕರಿಸಿದ ಧರ್ಮದ ಸಮಾಜ, ಎರಡರ ಆಶ್ರಯವೂ ಇಲ್ಲದೆ ಗೃಹಸ್ಥರು ತೊಂದರೆಗೆ ಒಳಗಾಗುವರು. ಆದರೆ ಅವರ ಅಧ್ಯಾತ್ಮಿಕ ಹಂಬಲ, ಸಾಧನೆಯ ಬಗ್ಗೆ ಆಸಕ್ತಿ ಉತ್ಕಟವಾಗಿರುವವು.
ಲಿಂಗವಿರಹಿತ ಮಂತ್ರದೀಕ್ಷೆ
ಅಂಥ ಹಂಬಲವುಳ್ಳವರು ವಿನಂತಿಸಿದಾಗ ಗುರುಮೂರ್ತಿ, ಕ್ರಿಯಾಮೂರ್ತಿಗಳು, ಲಿಂಗವಂತ ಸ್ವಾಮಿಗಳು ಹಿಂಜರಿಯದೆ ಮಂತ್ರ ದೀಕ್ಷೆ ಕೊಡಬೇಕು. ಭಸ್ಮಧಾರಣೆ ರುದ್ರಾಕ್ಷಿಧಾರಣೆ ಮಾಡಿಕೊಂಡು ಮುಮುಕ್ಷುಗಳು ನಿತ್ಯವೂ ಗುರೂಕ್ತವಾದ ಮಂತ್ರವನ್ನು ಪಠಿಸಲು ಉಪದೇಶ ಮಾಡಬೇಕು. ಮಂತ್ರದೀಕ್ಷೆ ಹೊಂದಿದವರು ಸ್ನಾನ ಮಾಡಿ ಬಂದು ಪೂಜಾಗೃಹದಲ್ಲಿ ಕುಳಿತು ಭಸ್ಮಧಾರಣೆ - ರುದ್ರಾಕ್ಷಿ ಧಾರಣೆ ಮಾಡಿಕೊಂಡು, ವಿಶ್ವಗುರು ಬಸವಣ್ಣನವರನ್ನು ತಮ್ಮ ಜ್ಞಾನಗುರುವೆಂದು, ಮೋಕ್ಷಗುರುವೆಂದು ಭಾವಿಸಿ ಅವರ ಭಾವಚಿತ್ರವನ್ನು ಪೂಜಿಸಬೇಕು. ಲಿಂಗವಂತರು ಅಷ್ಟವಿಧಾರ್ಚನೆಯನ್ನು ಇಷ್ಟಲಿಂಗಕ್ಕೆ, ಧರ್ಮಗುರು ಬಸವಣ್ಣನವರಿಗೆ ಸಲ್ಲಿಸಿದರೆ ಲಿಂಗಾಯತೇತರರು ಬಸವಣ್ಣನವರಿಗೆ ಸಲ್ಲಿಸಬೇಕು. ನಂತರ ಸ್ವರೂಪ ಚಿಂತನೆ ಮಾಡಬೇಕು. ಆತ್ಮ-ಪರಮಾತ್ಮ, ಇವೆರಡರ ಸಂಬಂಧ, ಮುಂತಾಗಿ ಚಿಂತನೆ ಮಾಡಿ ನಂತರ ದೃಷ್ಟಿಯೋಗ ಸಾಧಿಸಬೇಕು. ಬಸವಣ್ಣನವರ ಅನುಗ್ರಹ - ದರ್ಶನ ಪಡೆಯುವ ಮನೀಷೆ ಇದ್ದರೆ ಭಾವಚಿತ್ರದಲ್ಲಿರುವ ಕಣ್ಣುಗಳನ್ನು ಮುಮುಕ್ಷುವು ಅರೆತೆರೆದ (ಅನಿಮಿಷ) ದೃಷ್ಟಿಯಿಂದ ದಿಟ್ಟಿಸಿ, ಮನದಲ್ಲಿ 'ಓಂ ಶ್ರೀಗುರು ಬಸವಲಿಂಗಾಯ ನಮಃ' ಮಂತ್ರವನ್ನು ನುಡಿಯಬೇಕು. ಪರಮಾತ್ಮನ ಅನುಗ್ರಹ - ಸಾಕ್ಷಾತ್ಕಾರ ಪಡೆಯುವ ಇಷ್ಟವಿದ್ದರೆ ಕಣ್ಣುಗಳನ್ನು ಪೂರ್ತಿ ಮುಚ್ಚಿ ದೃಷ್ಟಿಯನ್ನು ಒಳಮುಖ ಮಾಡಿಕೊಂಡು ಭ್ರೂಮಧ್ಯ ಅಥವಾ ಹೃದಯ ಕಮಲದಲ್ಲಿ ನಿಲ್ಲಿಸಿ, “ಓಂ ಲಿಂಗಾಯ ನಮಃ" ಮಂತ್ರವನ್ನು ಅನುಸಂಧಾನ ಮಾಡಬೇಕು. ಕಡೆಯಲ್ಲಿ ತೀರ್ಥ - ಪ್ರಸಾದ ಸ್ವೀಕಾರ, ಭಾವಚಿತ್ರಕ್ಕೆ ಪೂಜೆ ಮಾಡುವಾಗ ನೈವೇದ್ಯ ಮಾಡಿ ಇಟ್ಟಿರಬೇಕು. ಧ್ಯಾನಾನಂತರ ಮಂತ್ರೋದಕ ಸಿದ್ಧಪಡಿಸಬೇಕು. ಬಲ ಅಂಗೈಯಲ್ಲಿ ಕಲ್ಲು ಸಕ್ಕರೆ, ದ್ರಾಕ್ಷಿ ಮುಂತಾದ ನೈವೇದ್ಯವನ್ನಿಟ್ಟು ಉದ್ದರಣೆಯಿಂದ ೩ ಬಾರಿ ಅರ್ಥ್ಯವನ್ನು ಅಂಗೈಯಲ್ಲಿ ಹಾಕಿಕೊಳ್ಳಬೇಕು.
ಗುರು ಕರುಣೆ
ಪರಮಾತ್ಮನ ಕರುಣೆ
ಮಹಾತ್ಮರ ಕರುಣೆ
ಎಂದು ಹೇಳುತ್ತ ೩ ಬಾರಿ ಹಾಕಿಕೊಂಡು ತೀರ್ಥ - ಪ್ರಸಾದಗಳನ್ನು ಒಟ್ಟಿಗೆಯೇ ಸ್ವೀಕರಿಸಬೇಕು. ಮಂತ್ರದೀಕ್ಷೆ ಪಡೆದುಕೊಂಡ ಮುಮುಕ್ಷುಗಳು ಒಮ್ಮೆ ಪೂಜೆಗೆ ಕುಳಿತಾಗ ಕನಿಷ್ಠಪಕ್ಷ ೧೦೮ ಸಲ ಮಂತ್ರವನ್ನು ನುಡಿಯಬೇಕು. ಒಂದು ವೇಳೆ ಹೆಚ್ಚು ಕಾಲ ಜಪಯೋಗ ಮಾಡುವ ಅಭೀಷ್ಟೆಯಿದ್ದರೆ ೧೦೮ ಸಲ ಜಪ ಮಾಡಿದ ಮೇಲೆ ಮಾಲೆಯ ಮೂಲಕ ಎಣಿಕೆ ಕೈಬಿಟ್ಟು, ಮನಸ್ಸಿಗೆ ಆನಂದವೆನಿಸುವಷ್ಟು ಕಾಲ ಜಪ ಮಾಡಬಹುದು.
ಮಂತ್ರ ದೀಕ್ಷಾ ವಿಧಾನ
ಮಂತ್ರದೀಕ್ಷೆ ಕೊಡುವ ಮುನ್ನ ಕ್ರಿಯಾಮೂರ್ತಿ-ಗುರುಮೂರ್ತಿ ಮುಮುಕ್ಷುವನ್ನು ಕೇಳಬೇಕು. ದೇವಮಂತ್ರ "ಓಂ ಲಿಂಗಾಯ ನಮಃ ”, ಗುರು ಮಂತ್ರ ಶ್ರೀಗುರುಬಸವಲಿಂಗಾಯನಮಃ,” ಇವು ಎರಡರಲ್ಲಿ ಯಾವುದು ಉಪದೇಶಿಸಬೇಕು ಎಂಬುದನ್ನು, ಈ ಮೂರರ ಹೊರತು ಮತ್ತಾವ ಮಂತ್ರವನ್ನೂ ಉಪದೇಶಿಸಬಾರದು. ಅವರವರ ಇಷ್ಟದೇವತೆಗಳ ಮಂತ್ರವನ್ನು ಉಪದೇಶಿಸಿರಿ ಎಂದು ಕೇಳಿದರೂ ಹಾಗೆ ಬಸವ ಧರ್ಮವು ಅನುಮತಿಸದೆ ಇರುವ ಮಂತ್ರವನ್ನು ಉಚ್ಚರಿಸಬಾರದು, ಉಪದೇಶಿಸಬಾರದು.
ಯಾವುದೇ ಜಾತಿಮತ ಪಂಥ ಪಂಗಡದವರಿರಲಿ ಅವರಿಗೆ ಮಂತ್ರದೀಕ್ಷೆ ಕೊಡಬಹುದು. ಸ್ನಾನ ಮಾಡಿ ಆಗಮಿಸಿದ ಮುಮುಕ್ಷುವು ನಮಸ್ಕರಿಸಿ ಕುಳಿತುಕೊಳ್ಳುತ್ತಾನೆ. ಆಗ ಮೊಟ್ಟಮೊದಲು ಪ್ರಸಾದವನ್ನು ಅಂಗೈಗೆ ಕೊಡಬೇಕು. ಆತನು ಭಕ್ತಿಯಿಂದ ಕಣ್ಣುಗಳಿಗೆ ಸ್ಪರ್ಶಿಸಿದಂತೆ ಮಾಡಿ ಪ್ರಸಾದ ಸ್ವೀಕರಿಸಬೇಕು. ಗುರು ತನ್ನ ಬಲಗೈ ಅಂಗೈಯಲ್ಲಿ ಮಂತ್ರೋದಕ (ಕರುಣೋದಕ) ವನ್ನು ತೆಗೆದುಕೊಂಡು ಮುಮುಕ್ಷುವಿನ ತಲೆಯ ಮೇಲೆ ಸಿಂಪಡಿಸಬೇಕು. ನಂತರ “ಓಂ ಶ್ರೀಗುರುಬಸಲಿಂಗಾಯನಮಃ” ಎಂದು ಹೇಳುತ್ತ ಹಣೆಗೆ ಭಸ್ಮಧರಿಸಬೇಕು. ಕೊರಳಿಗೆ ಒಂದು ಕಾಳು ರುದ್ರಾಕ್ಷಿ ದಾರದಲ್ಲಿ ಪೊಣಿಸಿ ಹಾಕಬೇಕು. ಬಲಗೈಯನ್ನು ತಲೆಯ ಮೇಲಿಟ್ಟು ೬ ಬಾರಿ, ಎರಡೂ ಕೈಗಳನ್ನು ಇಟ್ಟು ೩ ಬಾರಿ ಹೀಗೆ ೯ ಸಲ ಮಂತ್ರವನ್ನು ನಿಧಾನವಾಗಿ ಸ್ಪಷ್ಟವಾಗಿ ಹೇಳಿ ಮುಮುಕ್ಷುವಿನಿಂದಲೂ ಹೇಳಿಸಬೇಕು. ಮೇಲೆ ತಿಳಿಸಿದ ೩ರಲ್ಲಿ ಯಾವುದಾದರೊಂದು ಮುಂತ್ರದ ಉಪದೇಶ ಮಾಡಬೇಕು. ಈ ಮಂತ್ರವನ್ನು ಕಣ್ಣು ಮುಚ್ಚಿ ಮನನ ಮಾಡಲು ಸಮಯ ಕೊಡಬೇಕು.
ಈಗ ಪ್ರತಿಜ್ಞಾ ವಿಧಿಯನ್ನು ಬೋಧಿಸಬೇಕು.
ಓಂ ಶ್ರೀಗುರುಬಸವಲಿಂಗಾಯನಮಃ
ಶ್ರೀ ಗುರುಬಸವಣ್ಣನವರ ಸಾಕ್ಷಿಯಾಗಿ, ಜಗತ್ಕರ್ತ ಪರಮಾತ್ಮನ ಸಾಕ್ಷಿಯಾಗಿ, ಸರ್ವ ಶರಣರ ಸಾಕ್ಷಿಯಾಗಿ, ನಾನಿಂತು ಪ್ರತಿಜ್ಞೆಯನ್ನು ಸ್ವೀಕರಿಸುತ್ತೇನೆ.
|
|
|
1 | ಓಂ | ಜಗತ್ತನ್ನು ನಿರ್ಮಾಣ ಮಾಡಿದ ಸೃಷ್ಟಿಕರ್ತನ ಅಸ್ತಿತ್ವದಲ್ಲಿ ನಂಬಿಕೆ ಇಡುತ್ತೇನೆ. ಅವನು ಒಬ್ಬನೇ ಮತ್ತು ಪರಮೋನ್ನತ ಶಕ್ತಿ ಎಂದು ನಂಬಿ ಶರಣಾಗುತ್ತೇನೆ. |
2 | ಲಿಂ | ವಿಶ್ವಗುರು ಬಸವಣ್ಣನವರು ದೇವರು ಲೋಕೋದ್ಧಾರಕ್ಕಾಗಿ ಕಳುಹಿಸಿ ಕೊಟ್ಟ. ಪ್ರತಿನಿಧಿ, ಕಾರಣಿಕ, ದೇವರ ಕರುಣೆಯ ಕಂದ, ನಮ್ಮೆಲ್ಲರ ರಕ್ಷಕ ಎಂದು ನಂಬಿ ಶರಣಾಗುತ್ತೇನೆ. |
3 | ಗಾ | ಪ್ರತಿನಿತ್ಯವೂ, ಗುರುಗಳು ಉಪದೇಶಿಸಿರುವ "ಓಂ ಲಿಂಗಾಯ ನಮಃ, ಓಂ ಶ್ರೀಗುರುಬಸವಲಿಂಗಾಯ ನಮಃ' ಮಂತ್ರವನ್ನು ತಪ್ಪದೆ ನಿಷ್ಠೆಯಿಂದ ಜಪ-ಧ್ಯಾನ ಮಾಡುತ್ತೇನೆ. |
4 | ಯ | ಬಸವ ಪಥದಲ್ಲಿ ಶ್ರದ್ದೆ ಇಟ್ಟಿರುವ ನಾನು ಬಸವ ಕ್ರಾಂತಿ ದಿನದಂದು ಜರಗುವ ಶರಣಮೇಳಕ್ಕೆ ಬರುತ್ತೇನೆ. ಜೀವಮಾನದಲ್ಲಿ ಒಮ್ಮೆಯಾದರೂ ಶರಣ ಮೇಳದಲ್ಲಿ ಭಾಗಿಯಾಗುತ್ತೇನೆ. |
5 | ನ | ನೀತಿವಂತನಾಗಿ/ಳಾಗಿ ಇರುತ್ತೇನೆ. ಸ್ವಧರ್ಮಿಯರನ್ನು ಧರ್ಮಬಂಧುಗಳಂತೆ, ಪರಧರ್ಮಿಯರನ್ನು ಸ್ನೇಹಿತರಂತೆ ಆದರಿಸುತ್ತೇನೆ. |
6 | ಮಃ | ಧರ್ಮಪಿತ ಬಸವಣ್ಣನವರ ಸಂಕಲ್ಪದಂತೆ ಮರ್ತ್ಯಲೋಕದ ಈ ಕರ್ತ್ಯನ ಕಮ್ಮಟದಲ್ಲಿ ಜಾತಿವರ್ಣವರ್ಗರಹಿತ ಧರ್ಮ ಸಹಿತ ಕಲ್ಯಾಣ (ದೈವೀ) ರಾಜ್ಯದ ನಿರ್ಮಾಣಕ್ಕೆ ನಿಷ್ಠೆಯಿಂದ ಶ್ರಮಿಸುತ್ತೇನೆ. |
ಜಯಗುರು ಬಸವೇಶ ಹರಹರ ಮಹಾದೇವ
ಈ ಪ್ರತಿಜ್ಞಾ ಸ್ವೀಕಾರದ ನಂತರ ಗುರುಮೂರ್ತಿಯು ಮುಮುಕ್ಷುವಿನ ಬಲ ಅಂಗೈಯಲ್ಲಿ ಪ್ರಸಾದದ ತುಣುಕು (ಕಲ್ಲುಸಕ್ಕರೆ ಅಥವಾ ದ್ರಾಕ್ಷಿ) ಇರಿಸಿ ಮೂರುಬಾರಿ ಉದ್ಧರಣೆಯಿಂದ ಅರ್ಘ್ಯವನ್ನು ಎರೆಯಬೇಕು.
ಬಸವ ಕರುಣೋದಕ
ಕರ್ತ ಕರುಣೋದಕ
ಶರಣ ಕರುಣೋದಕ
ಉಪದೇಶಿತನು ಪುನರುಚ್ಚರಿಸಿ, ತೀರ್ಥ-ಪ್ರಸಾದಗಳೆರಡನ್ನೂ ಒಟ್ಟಿಗೆ ಸೇವಿಸಬೇಕು.
ಸಂಕಲ್ಪ ಜಪ :
ಏನಾದರೂ ಇಷ್ಟಾರ್ಥ ಸಿದ್ದಿಯಾಗಬೇಕೆಂದು ಇಷ್ಟಪಡುವವರು ಗುರೂಪದೇಶದ ಮೂಲಕ ಬಂದ
“ಓಂ ಲಿಂಗಾಯ ನಮಃ ” ಅಥವಾ “ಓಂ ಶ್ರೀಗುರು ಬಸವಲಿಂಗಾಯ ನಮಃ'
ಮಂತ್ರಗಳನ್ನೇ ಒಂದು ಸಾವಿರ, ಎರಡು ಸಾವಿರ ಹೀಗೆ ಜಪ ಮಾಡುವ ಸಂಕಲ್ಪ ಕೈಗೊಳ್ಳಬೇಕು. ಈ ರೀತಿಯ ಕಾಮ್ಯಕ ಜಪವು ತಮ್ಮ ತಮ್ಮ ಇಷ್ಟಾರ್ಥಗಳನ್ನು ಪೂರೈಸಬಲ್ಲುದು.
ಅನುಭಾವಾಸಕ್ತರು :
ಅಧ್ಯಾತ್ಮಿಕ ದಿವ್ಯ ದರ್ಶನ, ಅನುಭಾವ ಹೊಂದಬೇಕೆನ್ನುವವರು ನಿಯಮವೆಂದು ೧೦೮ ಸಲ ಮಂತ್ರ ಜಪ ಮಾಡಿದರೂ ನಂತರ ಮಾಲೆ - ಎಣಿಕೆ - ಜಪ ಬಿಟ್ಟು ಮಂತ್ರದ ಅನುಸಂಧಾನದಲ್ಲಿ ಹೆಚ್ಚು ಹೆಚ್ಚು ತೊಡಗಬೇಕು. ಜಪವು ವಾಚಕವಾಗಿದ್ದರೆ ಧ್ಯಾನವು ಮಾನಸಿಕವಿರುತ್ತದೆ. ದೃಷ್ಟಿಯನ್ನು ಅಂತರ್ಮುಖ ಮಾಡಿ, ನಿಧಾನವಾಗಿ ಸಮ ಪ್ರಮಾಣದಲ್ಲಿ ಉಚ್ಚಾಸ ನಿಶ್ವಾಸ ಮಾಡುತ್ತ, ಉಸಿರನ್ನು ಆಳವಾಗಿ ಇಳಿಸುತ್ತ ಆ ಉಸಿರಿನೊಡನೆ ಸರ್ವಾಂಗದಲ್ಲಿಯೂ ಮಂತ್ರವನ್ನು ವೇಧಿಸುವಂತೆ ಸಾಧನೆ ಮಾಡಬೇಕು. .
✡✡✡✡✡✡