ಮರಣ ಸೈದ್ಧಾಂತಿಕ ಪರಿಕಲ್ಪನೆ
ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು.
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲ ಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ
ಉಪಮಿಸಬಲ್ಲವರ ಕಾಣೆನು. (ಬ.ಪ.ಹೆ.ವ ೧೨೭೩)
ಹುಟ್ಟಿನಂತೆ ಸಾವು ಅನಿವಾರ್ಯ. ಹುಟ್ಟು-ಸಾವು ಜೀವನ ನಾಣ್ಯದ ಎರಡು ಮುಖಗಳಿದ್ದಂತೆ. ಹುಟ್ಟು ಸಾವನ್ನು ಜೊತೆಗಿಟ್ಟುಕೊಂಡೇ ಬರುತ್ತದೆ. ನಿರಾಶಾವಾದಿಯ ದೃಷ್ಟಿಯಲ್ಲಿ ಹುಟ್ಟಿನಿಂದ ಪ್ರಾರಂಭವಾಗುವ ಜೀವನ ಚಕ್ರ ಸಾವಿನತ್ತ ಚಲಿಸುತ್ತದೆ. ಹೀಗಾಗಿ ನಿರಾಶಾವಾದಿ, 'ಏಕೆ ಬಾಳಬೇಕು ? ಎಂದಿದ್ದರೂ ಸಾಯಬೇಕಲ್ಲ' ಎಂದು ಹತಾಶನಾದರೆ ಆಶಾವಾದಿಯು ಜೀವನದ ಅಂತಿಮ ನಿಲ್ದಾಣವೇ ಸಾವು ಅದು ಸಮೀಪಿಸುವುದರೊಳಗೆ ಬಾಳಿನ ಪ್ರತಿಯೊಂದು ಕ್ಷಣವನ್ನೂ ಸಾರ್ಥಕ ಮಾಡಿಕೊಳ್ಳಬೇಕು ಎಂದು ಉತ್ಸಾಹದಿಂದ ಮುಂದುವರಿಯುತ್ತಾನೆ.
ಲಿಂಗವಂತ ಧರ್ಮ ಹುಟ್ಟಿಗೆ ಮಹತ್ವ ಕೊಟ್ಟಂತೆ ಸಾವಿಗೂ ಅಷ್ಟೇ ಮಹತ್ವವನ್ನು ಕೊಡುತ್ತದೆ. ಈ ಧರ್ಮದ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಮೂಡಿರುವ ಉಕ್ತಿಗಳೆಂದರೆ,
ಶರಣರ ಜೀವನ ಮರಣದಲ್ಲಿ ನೋಡು
ಮರಣವೇ ಮಾನವಮಿ ಹಬ್ಬ.
ಸಾವು ಅನಿವಾರ್ಯ
ಸಾವು ಅನಿವಾರ್ಯ, ಯಾರಾದರೇನು ಐಹಿಕ ಬದುಕಿಗೆ ಪೂರ್ಣ ವಿರಾಮ ನೀಡಿ ಹೋಗಲೇಬೇಕು. ಎಷ್ಟೇ ದೀರ್ಘಕಾಲ ಬದುಕಿದರೂ ಒಂದು ದಿವಸ ಜೀವನ ನಾಟಕಕ್ಕೆ ಅಂತಿಮ ತೆರೆ ಎಳೆಯಬೇಕು. ಜೀವನ (Life) ಹುಟ್ಟು ಸಾವುಗಳೆರಡರ ಮಧ್ಯೆ ಇರುವ ಘಟನಾವಳಿಗಳ ಒಂದು ಚಕ್ರ. ಹುಟ್ಟು ಎಂಬುದು ಆರಂಭಿಕ ನಿಲ್ದಾಣವಾದರೆ ಬಾಲ್ಯ, ಯೌವ್ವನ, ಮುಪ್ಪು ಎಂಬ ಮೂರು ನಿಲ್ದಾಣಗಳಲ್ಲಿ ಹಾಯ್ದು ಜೀವನದ ಗಾಡಿ ಮರಣ ಎಂಬ ಕೊನೆಯ ನಿಲ್ದಾಣದಲ್ಲಿ ನಿಲ್ಲುತ್ತದೆ. ಇದು ಜೀವನದ ಪ್ರಯಾಣದ ಬಗೆಯಾದರೆ ಇನ್ನು ಜೀವ (Soul) ಇದರ ಪ್ರಯಾಣ ಇನ್ನೂ ದೀರ್ಘ. ಇದು ಅನಂತ ಜನ್ಮಗಳೆಂಬ ನಿಲ್ದಾಣಗಳಲ್ಲಿ ಹಾಯುವಂತಹುದು. ಜೀವಾತ್ಮದ ಆದಿ ತಾಣ ಪರಮಾತ್ಮ, ಅಂತ್ಯ ತಾಣವೂ ಅದೇ. ಅದನ್ನೇ ಧರ್ಮಪಿತರು ಹೀಗೆ ಹೇಳಿರುವುದು 'ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಒಂದು ರುದ್ರಾಕ್ಷಿ ಮಾಲೆ ಇದೆ ಎಂದುಕೊಳ್ಳಿ. ಇದರಲ್ಲಿ ಒಂದು ಶಿಖಾಮಣಿ ಎಂದು ಇದೆ ಈ ಶಿಖಾಮಣಿಯಿಂದ ಒಂದು ಸೂತ್ರವು ಹೊರಟಿರುತ್ತದೆ. ಇದು ಹಲವಾರು ಮಣಿಗಳನ್ನು ಬಂಧಿಸಿ, ಪುನಃ ಹೋಗಿ ಶಿಖಾಮಣಿಯಲ್ಲಿ ಸೇರಿಕೊಳ್ಳುತ್ತದೆ. ಆಗಲೇ ರುದ್ರಾಕ್ಷಿಯ ಮಾಲೆ ಪೂರ್ಣಗೊಳ್ಳುತ್ತದೆ. ಅದೇ ರೀತಿ ಪರಮಾತ್ಮ, ಸೃಷ್ಟಿಕರ್ತನೆಂಬ ಶಿಖಾಮಣಿಯಿಂದ ಜೀವಾತ್ಮನೆಂಬ ಸೂತ್ರ ಹೊರಟು, ಅನಂತ ಜನ್ಮಗಳೆಂಬ ಮಣಿಗಳಲ್ಲಿ ಹಾಯುತ್ತ ಅಂತಿಮವಾಗಿ ಪರಮಾತ್ಮನೆಂಬ ಶಿಖಾಮಣಿಯಲ್ಲಿ ಒಡವೆರೆದು ಸೇರಿಕೊಳ್ಳುತ್ತದೆ. ಹೀಗೆ ಲಿಂಗದಲ್ಲಿ ಉದಯವಾದ ಶರಣಂಗೆ ಆ ಲಿಂಗವೇ ನಿಜನೆಲೆ. ಆ ನಿಜನೆಲೆಯನ್ನು ಸೇರುವ ತನಕ ಜೀವಾತ್ಮನ ಪರಿಭ್ರಮಣ ತಪ್ಪಿದ್ದಲ್ಲ.
ಈ ಪ್ರಯಾಣದ ವೇಗವನ್ನು ತೀವ್ರಗೊಳಿಸುವ ಸಾಧನಗಳೇ ದೀಕ್ಷೆ, ಸಾಧನೆ, ಜಪ-ತಪ ಮುಂತಾದುವು. ಶರಣನಾದವನಿಗೆ ಇದೇ ಜನ್ಮಕಡೆ, ಪುನಃ ಭವವಿಲ್ಲ. ಅವನು ಉರಿಯುಂಡ ಕರ್ಪುರದಂತೆ ದೇವನಲ್ಲಿ ಒಂದಾಗಿ ಬೆರೆಯುವನು. ಕೆಲವರು ಹೇಳುವುದುಂಟು ಲಿಂಗವಂತರಿಗೆ ಪುನರ್ಜನ್ಮವಿಲ್ಲ ಎಂದು, ಯಾವ ಲಿಂಗವಂತರು ? ಕೇವಲ ಒಂದು ಧರ್ಮದಲ್ಲಿ ಹುಟ್ಟಿದ ಮಾತ್ರಕ್ಕೆ, ಆ ಧರ್ಮದ ಆಚಾರ-ವಿಚಾರಗಳನ್ನು ಅರಿತು ಅಂಗವಿಸಿಕೊಳ್ಳದವರಿಗೆಲ್ಲ ಮುಕ್ತಿ ಸಾಧ್ಯವೆ ? ಯಾವುದಾದರೊಂದು ತರಗತಿಯಲ್ಲಿ ತೇರ್ಗಡೆ ಹೊಂದಿದವರಿಗೆ ಮತ್ತೆ ಅದೇ ಪರೀಕ್ಷೆಗೆ ಕೂಡಬೇಕಾದುದಿಲ್ಲ ನಿಜ, ಆದರೆ ತೇರ್ಗಡೆ ಹೊಂದದವನು ಪುನಃ ಪರೀಕ್ಷೆಗೆ ಕೂಡಬೇಕಾಗುತ್ತದಲ್ಲವೆ ? ಹಾಗೆಯೇ ಶರಣನಾದವನು ಶರಣನಾದವನು ದೇವನಲ್ಲಿ ಒಂದಾಗುವನು. ಶರಣನಾಗದವನು ಪುನಃ ಹುಟ್ಟಲೆಬೇಕಲ್ಲವೆ ?
ಮರಣಗಳ ಬಗೆ
ಮಾನವನ ಸಾವಿನಲ್ಲೂ ಹಲವಾರು ಬಗೆಗಳಿವೆ. ಮುಖ್ಯವಾಗಿ ೭ ಬಗೆಯಲ್ಲಿ ವರ್ಗಿಕರಿಸಬಹುದು. ಆತ್ಮಹತ್ಯೆ, ದುರ್ಮರಣ, ಅಕಾಲಿಕ ಸಾವು, ಸಹಜ ಸಾವು, ವೀರಮರಣ, ಶರಣನ ಸಾವು, ಇಚ್ಛಾಮರಣತ್ವ.
೧. ಆತ್ಮಹತ್ಯೆ: ಈ ಪದ ಪ್ರಯೋಗವೇ ತಪ್ಪು, ಭಾರತೀಯ ತತ್ವಶಾಸ್ತ್ರದ ಪ್ರಕಾರ ಆತ್ಮ (soul) ವನ್ನು ಹತ್ಯೆಮಾಡಲು ಸಾಧ್ಯವಿಲ್ಲ. ಸ್ವಹತ್ಯೆ-ತನ್ನನ್ನು ತಾನೇ ಕೊಂದುಕೊಳ್ಳುವುದು ಎಂಬ ಅರ್ಥದಲ್ಲಿ ಹೀಗೆ ಬಳಸಲಾಗುತ್ತದೆ. ಜೀವನದಲ್ಲಿ ನೊಂದು, ಬದುಕುವ ಆತ್ಮ ವಿಶ್ವಾಸವನ್ನು ಕಳೆದುಕೊಂಡು ಕೆಲವರು ಸ್ವಹತ್ಯೆಗೈದುಕೊಳ್ಳುವುದುಂಟು.
೨. ದುರ್ಮರಣ: ವಾಹನಗಳ ಅಪಘಾತಕ್ಕೀಡಾಗಿ, ಪ್ರಾಣಿಗಳ ದಾಳಿಗೆ ಸಿಕ್ಕಿ, ಅನ್ಯರಿಂದ ಹಲ್ಲೆಗೀಡಾಗಿ ಆಕಸ್ಮಿಕವಾಗಿ ಸಾಯುವದು ದುರ್ಮರಣ.
೩. ಅಕಾಲಿಕ ಸಾವು: ರೋಗ ಪೀಡಿತರಾಗಿ ಚಿಕ್ಕವಯಸ್ಸಿನಲ್ಲೇ ಸಾಯುವುದು,
೪. ಸಹಜಸಾವು: ತುಂಬುಜೀವನ ನಡೆಸಿ, ವೃದ್ಧಾಪ್ಯದಿಂದ ಹಣ್ಣಾಗಿ ಸಾಯುವುದು. ಸಂತೃಪ್ತವಾಗಿಯೇ ಪ್ರಾಣಬಿಡುವುದು.
೫. ವೀರಮರಣ: ಯುದ್ಧಭೂಮಿಯಲ್ಲಿ, ಅನ್ಯಾಯದ ವಿರುದ್ಧ ಪ್ರತಿಭಟಿಸುವಾಗ, ಧರ್ಮರಕ್ಷಣೆ-ದೇಶ ರಕ್ಷಣೆಗಾಗಿ, ಉದಾತ್ತ ಮೌಲ್ಯಗಳ ರಕ್ಷಣೆಗಾಗಿ, ಇನ್ನಿತರ ಅಮಾಯಕರನ್ನು ರಕ್ಷಿಸಲು ಹೋಗಿ ಸಾವಿಗೀಡಾಗುವುದು.
೬. ಶರಣರ ಸಾವು: ಆಚಾರ-ಅರಿವು-ಅನುಭಾವಗಳನ್ನು ಅಳವಡಿಸಿಕೊಂಡು ನಿತ್ಯತೃಪ್ತರಾಗಿ ಬದುಕುತ್ತ, ಸಾವು ಬೇಕೆಂದು ಬಯಸದೆ ಬಂದಾಗ ಕಳವಳಗೊಳ್ಳದೆ ಸಹಜವಾಗಿ ಅತಿಥಿಯನ್ನು ಸ್ವಾಗತಿಸಿದಂತೆ ಸ್ವಾಗತಿಸಿ ಪ್ರಾಣಬಿಡುವುದು ಶರಣರ ಸಾವು. ಸಾಯುವಾಗ ಅತ್ತು ಕರೆದು ಗಾಬರಿಗೊಂಡು ಮಕ್ಕಳುಮರಿಗಳನ್ನು ಕರೆದು ಕೈಹಿಡಿದುಕೊಂಡು ಉಳಿಸಿಕೊಳ್ಳಿ ಎಂದು ಗೋಗರೆಯುತ್ತ ಚಟಪಟಿಸದೆ, “ನಾನು ಬಂದ ಕೆಲಸ ಮುಗಿಯಿತು, ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಇನ್ನು ನೀವೆಲ್ಲ ನಮ್ಮ ಧರ್ಮಗುರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಅವರಿಗೆ ಮೆಚ್ಚುಗೆಯವರಾಗಿರಿ. ಪರಮಾತ್ಮನ ಪಾದಕ್ಕೆ ಸಲ್ಲುವ ನನ್ನನ್ನು ಸಂತೋಷದಿಂದ ಕಳಿಸಿಕೊಡಿರಿ” ಎಂದು ಶಾಂತವಾಗಿ ಲಿಂಗಪೂಜೆ ಮಾಡುತ್ತ ಅಥವಾ ಧ್ಯಾನಮಾಡುತ್ತ ಮಂತ್ರಜಪ ಮಾಡುತ್ತ, ಅಥವಾ ಬೇರಿತರರು ಮಾಡುವ ಮಂತ್ರ ಜಪ ಕೇಳುತ್ತ ಪ್ರಾಣಬಿಡುವುದು ಶರಣರ ಸಾವು.
೭. ಇಚ್ಛಾಮರಣತ್ವ: ಇದು ಅತ್ಯುನ್ನತವಾದ ಸಾವಿನ ಬಗೆ, ಯೋಗಾಭ್ಯಾಸ ಮಾಡಿ ಕಾಯಜೀವದ ಹೊಲಿಗೆಯನ್ನು ಬಿಚ್ಚಿಕೊಂಡ ಯೋಗಿಗೆ ಮಾತ್ರ ಇದು ಸಾಧ್ಯ. ಬದ್ಧಜೀವಿ ಪಂಜರದ ಪಕ್ಷಿಯಿದ್ದಂತೆ, ಬುದ್ಧ (ಶರಣ)ಜೀವಿ ಗೂಡಿನ ಪಕ್ಷಿ ಇದ್ದಂತೆ. ಪಂಜರ ತೆರೆದಾಗ ಮಾತ್ರ ಪಂಜರದ ಪಕ್ಷಿ ಹಾರಿಹೋಗಬಲ್ಲುದು. ಗೂಡಿನ ಪಕ್ಷಿ ತನಗೆ ಬೇಕೆನಿಸಿದಾಗ ಹಾರಿಹೋಗಬಲ್ಲುದು. ಹಾಗೆಯೇ ಸಾಮಾನ್ಯ ಜೀವಿಯು ಸಾವು ಬಂದು ದೇಹದ ಪಂಜರವನ್ನು ಬಿಚ್ಚಿದಾಗ ಬಿಡುಗಡೆ ಹೊಂದುವನು. ಇಚ್ಛಾಮರಣಿಯು ತನಗೆ ಬೇಕಾದಾಗ ಶಿವಯೋಗದಲ್ಲಿ ಕುಳಿತು ಶರೀರವನ್ನು ವಿಸರ್ಜಿಸಿ, ಆತ್ಮವನ್ನು ಶರೀರದಿಂದ ಬಿಡಿಸಬಲ್ಲನು. ಧರ್ಮಪಿತ ಬಸವಣ್ಣನವರು, ಶಿವಯೋಗಿಣಿ ಅಕ್ಕಮಹಾದೇವಿ, ತಾಯಿ ನೀಲಾಂಬಿಕೆ, ಶಿವಯೋಗಿ ಸಿದ್ಧರಾಮೇಶ್ವರರು ಇವರೆಲ್ಲರೂ ಲಿಂಗೈಕ್ಯರಾದುದೇ ಹೀಗಿದೆ. ಇವರುಗಳು ಗವಿಯಂತಹ ಸ್ಥಳಗಳಲ್ಲಿ ಪೂಜೆಗೆ ಕುಳಿತು ಲಿಂಗೈಕ್ಯರಾಗುವರು. ಅದನ್ನೇ ಸಾಮಾನ್ಯ ಜನರು ಜೀವಂತ ಸಮಾಧಿ ಆದರು ಎಂದು, ಕಾಯವೆರಸಿ ಕೈಲಾಸಕ್ಕೆ ಹೋದರು ಅಂತ ತಪ್ಪು ತಪ್ಪಾಗಿ ಹೇಳುವರು. ನಂತರ ಪುರಾಣಕಾರರು, ಅವುಗಳನ್ನಾಧರಿಸಿ ಸಿನಿಮಾ ಮಾಡುವವರು ವಿಮಾನದಲ್ಲಿ ಕೂರಿಸಿ ಕೈಲಾಸಕ್ಕೆ ಏರಿಸುವರು. ಧರ್ಮಪಿತ ಬಸವಣ್ಣನವರು ಪೂಜೆಗೆ ಕುಳಿತುಕೊಂಡು ಅಂತರ್ಮುಖಿಗಳಾದುದು, ದಿವ್ಯ ತನ್ಮಯತೆಯಲ್ಲಿರುವಾಗ ದೇವನ ಕರೆ ಕೇಳಿದುದು, ತಾವಿನ್ನು ಅವನಲ್ಲಿ ಒಂದಾಗಲು ನಿರ್ಧರಿಸಿದ್ದು, ದೇವನಿಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದು, ಹೀಗೆ ಕಡೆಯ ಕ್ಷಣದವರೆಗೆ ತಮ್ಮ ದಿವ್ಯಾನುಭವಗಳನ್ನು ಬರೆದಿಟ್ಟಿದ್ದಾರೆ. ಇದೇ ರೀತಿ ತಾಯಿ ನೀಲಾಂಬಿಕೆ ಸಹ ಇಷ್ಟಲಿಂಗಪೂಜೆಗೆ ಕುಳಿತು, ಇಷ್ಟಲಿಂಗ ದರ್ಪಣದಲ್ಲಿಯೇ ಗುರು ಬಸವಣ್ಣನವರ ದರ್ಶನ ಪಡೆದು, ಲಿಂಗೈಕ್ಯಳಾಗಲು ಆದೇಶವನ್ನೂ ಪಡೆದು, ತಾನೂ ಸಹ ಯೋಗಶಕ್ತಿಯಿಂದಲೇ ಪ್ರಾಣ ವಿಸರ್ಜನೆ ಮಾಡುತ್ತಾಳೆ.
ಕೆಲವರು ಇಚ್ಛಾಮರಣತ್ವವು ಸಹ ಒಂದು ಬಗೆಯ ಆತ್ಮಹತ್ಯೆಯಲ್ಲವೆ ? ಎಂದು ಸಂದೇಹಿಸುತ್ತಾರೆ. ಇದು ಆತ್ಮಹತ್ಯೆಯಲ್ಲ.
೧. ಆತ್ಮಹತ್ಯೆ ಮಾಡಿಕೊಳ್ಳುವವನು ಜೀವನವನ್ನು ಎದುರಿಸಲಾರದ ದುರ್ಬಲನಿರುತ್ತಾನೆ. ಇಚ್ಛಾಮರಣಿಯು ಜೀವನವನ್ನು ತುಂಬು ಧೈರ್ಯದಿಂದ ಎದುರಿಸಿದವನಾಗಿರುತ್ತಾನೆ.
೨. ಆತ್ಮಹತ್ಯೆ ಮಾಡಿಕೊಳ್ಳುವವನು ಅಜ್ಞಾನಿಯಾಗಿರುತ್ತಾನೆ. ಇಚ್ಛಾಮರಣಿಯು ಪರಿಪೂರ್ಣಜ್ಞಾನಿಯಾಗಿರುತ್ತಾನೆ.
೩. ಆತ್ಮಹತ್ಯೆಗೆ ಎಳಸುವವನಲ್ಲಿ ದೇವರ ಬಗ್ಗೆ, ಗುರುವಿನ ಬಗ್ಗೆ ಕಡೆಗೆ ತನ್ನ ಬಗ್ಗೆಯೇ ವಿಶ್ವಾಸವಿರದು. ಇಚ್ಛಾಮರಣಿ ದೇವರ ಬಗ್ಗೆ ಅನನ್ಯ ಶ್ರದ್ಧೆ ಹೊಂದಿರುವನು. ಅವನ ಆದೇಶದಂತೆಯೇ ಪ್ರಾಣವಿಸರ್ಜನೆ ಮಾಡುವನು.
೪. ಆತ್ಮಹತ್ಯೆ ಮಾಡಿಕೊಳ್ಳುವವನಲ್ಲಿ ಬದುಕಲಾರದ ಹೇಡಿತನವಿದ್ದರೆ ಇಚ್ಛಾಮರಣಿಯಲ್ಲಿ ತಾನು ಬಂದ ಮಣಿಹವನ್ನು ಪೂರೈಸಿದ ಸಂತೃಪ್ತಿ ಇರುತ್ತದೆ ಮತ್ತು ತನ್ನ ತಂದೆ (ಸೃಷ್ಟಿಕರ್ತನನ್ನು)ಯನ್ನು ಕೂಡಿಕೊಳ್ಳುವ ಹಂಬಲವಿರುತ್ತದೆ.
೫. ಯೋಗ ಸಾಮರ್ಥ್ಯದ ಪ್ರಯೋಗ ಪರೀಕ್ಷೆ: ಪ್ರಾಣಲಿಂಗಿ ಸ್ಥಲದವರೆಗೂ ಯೋಗಿಕವಾಗಿ ವಿವಿಧ ಪ್ರಯೋಗಗಳನ್ನು ಮಾಡಿಕೊಂಡ ಶರಣರು ಕಡೆಯ ಪ್ರಯೋಗ-ಅಂಗ- ಪ್ರಾಣ-ಆತ್ಮಗಳನ್ನು ಬೇರ್ಪಡಿಸುವ ಅಂತಿಮ ಪ್ರಯೋಗವನ್ನು ಇಚ್ಛಾಮರಣತ್ವದಲ್ಲಿ ಮಾಡುತ್ತಾರೆ.
ಶರಣನ ದೃಷ್ಟಿಯಲ್ಲಿ ಸಾವು
೧. ಗೀತವ ಬಲ್ಲಾತ ಜಾಣನಲ್ಲ,
ಮಾತ ಬಲ್ಲಾತ ಜಾಣನಲ್ಲ,
ಜಾಣನು ಜಾಣನು ಆತ ಜಾಣನು,
ಆತ ಜಾಣನು, ಲಿಂಗವ ನೆರೆ ನಂಬಿದಾತ.
ಆತ ಜಾಣನು ಜಂಗಮಕ್ಕೆ ಧನವ ಸವೆಸುವಾತ.
ಆತ ಜಾಣನು ಜವನ ಬಾಯಲು ಬಾಲವ ಕೊಯ್ದು ಹೋದಾತ.
ಆತ ಜಾಣನು ನಮ್ಮ ಕೂಡಲ ಸಂಗನ ಶರಣನು (ಬ. ಷ. ವ. ೧೫೩)
ಧರ್ಮಕರ್ತ ಬಸವಣ್ಣನವರು ಹೇಳುವರು ವೇದೋಪನಿಷತ್ತು, ಗೀತೆಗಳನ್ನು ಓದಿದವರಾಗಲೀ, ಬಹಳ ಚೆನ್ನಾಗಿ ಮಾತುಗಳನ್ನಾಡುವವರಾಗಲೀ ಜಾಣರಲ್ಲ. ನಿಜ ಜಾಣರು ಯಾರೆಂದರೆ,
೧. ಸೃಷ್ಟಿಕರ್ತನನ್ನು ದೃಢವಾಗಿ ನಂಬಿದವರು
೨. ಸೃಷ್ಟಿಕರ್ತನ ಪ್ರತಿರೂಪವೇ ಈ ಸಮಾಜ ಎಂದು ದುಡಿಯುವವರು.
೩. ಸಾವಿನ ಬಾಲವನ್ನೇ ಕೊಯ್ದವರು; ಸಾವಿನ ಭಯವನ್ನು ಗೆದ್ದವರು.
೨. ಪರಿಣಾಮದೊಳಗೆ ಮನದ ಪರಿಣಾಮವೇ ಚೆಲುವು
ಸಂಗದೊಳಗೆ ಶರಣರ ಸಂಗವೇ ಚೆಲುವು
ಕಾಯಗೊಂಡು ಹುಟ್ಟಿದ ಮೂಢರೆಲ್ಲ
ಸಾಯದ ಸಂಚವನರಿವುದೇ ಚೆಲುವು ಗುಹೇಶ್ವರಾ
ಜೀವನದಲ್ಲಿ ನಿಜವಾದ ಸಂತೃಪ್ತಿ ಎಂದರೆ ಮನಸ್ಸಿನ ಸಂತೃಪ್ತಿ, ಸಂಗದಲ್ಲಿ ಶರಣರ ಸಂಗವೇ ನಿಜಾನಂದವನ್ನು ಕೊಡುವಂಥದು. ಹಾಗೆಯೇ ಮಾನವ ಜನ್ಮದ ಸಾರ್ಥಕ್ಯ ಇರುವುದೇ ಸಾಯದೆ ಇರುವುದರಲ್ಲಿ ! ಸಾಯದೇ ಇರಲು ಹೇಗೆ ಸಾಧ್ಯ ? - ಸಾಯಬಾರದು ನಿಜಲಿಂಗೈಕ್ಯರಾಗಬೇಕು. ಹುಟ್ಟು ನಮ್ಮ ಕೈಲಿ ಇರಲಿಲ್ಲ. ಹೇಗೋ ಹುಟ್ಟಿದ್ದೇವೆ, ಸಾಯುವ ಬಗೆ ಮಾತ್ರ ನಮ್ಮ ಕೈಲಿದೆ. ಇದರ ರಹಸ್ಯ ಅರಿತವನೇ ಜಂಗಮ. ಜನನ-ಮರಣ-ಗಮನಗಳನ್ನು ಇಲ್ಲವಾಗಿ ಮಾಡಿಕೊಂಡವನೇ ಜಂಗಮ.
ಕಾಯದ ಹುಟ್ಟು ಸಾಮಾನ್ಯವಾಗಿ ಮೂಢತನದಲ್ಲೇ ಆಗುತ್ತದೆ. ಮುಂದೆ ಗುರುಕಾರುಣ್ಯ ಪಡೆದುಕೊಂಡು ಅಧ್ಯಾತ್ಮಿಕ ಹುಟ್ಟು ಹೊಂದಿದಾಗ ಜನನವನ್ನು " ಗೆದ್ದಂತಾಗುತ್ತದೆ. ಮರಣದ ಭಯವನ್ನು ಗೆಲಿದಾಗ ಮರಣವನ್ನು ಗೆದ್ದಂತೆ ಆಗುತ್ತದೆ. ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ಜೀವಾತ್ಮವು ಸಂಚರಿಸುವ ಪರಿಭ್ರಮಣವನ್ನು ಗೆದ್ದಾಗ ಗಮನವನ್ನು ಗೆದ್ದಂತಾಗುತ್ತದೆ. ಹುರಿಯಲ್ಪಟ್ಟ ಬೀಜಗಳು ಮರಳಿ ಹುಟ್ಟುವುದಿಲ್ಲ. ಹಾಗೆಯೇ ಜ್ಞಾನಾಗ್ನಿಯಲ್ಲಿ ಹುರಿಯಲ್ಪಟ್ಟ ಕರ್ಮಗಳು ಭವಕ್ಕೆ ಕಾರಣವಾಗವು.
ಸಾವು ಭಯಪಡುವಂತಹುದಲ್ಲ, ಶಿಥಿಲವಾದ ಬಟ್ಟೆಗಳನ್ನು ಬಿಸುಟಿ ಹೊಸಬಟ್ಟೆಗಳನ್ನು ತಾಯಿ ತೊಡಿಸುವಾಗ ಮಗುವು ಅಳುವುದೆ ? ಹಾಗೆಯೇ ರೋಗ-ರುಜಿನ, ಮುಪ್ಪಿನಿಂದ ಜರ್ಜರಿತಗೊಂಡ ಶರೀರವನ್ನು ಕಳಚಿ ಹೊಸ ಶರೀರವನ್ನು ದೇವರು ತೊಡಿಸುವುದಾದರೆ ಅಥವಾ ತನ್ನಲ್ಲಿ ಇಂಬಿಟ್ಟುಕೊಳ್ಳುವದಾದರೆ ಅದಕ್ಕೆ ಅಳಲೇಕೆ ?
ಸಾವನ್ನು ಬಯಸಬಾರದು, ಶಿವನಾಜ್ಞೆಯಂತೆ ಬಂದಾಗ ಸ್ವಾಗತಿಸಲು ಹೆದರಬಾರದು.
ಒಂದು ತೆಂಗಿನಕಾಯಿಯ ಗಿಟುಕು ಇರುತ್ತದೆ ಎಂದುಕೊಳ್ಳಿರಿ, ಅದು ಗಿಟುಕಾಗಿದ್ದರೆ ಚಿಪ್ಪನ್ನು ಒಡೆಯುತ್ತಲೇ ಸುಲಭವಾಗಿ ಕಳಚಿಕೊಂಡು ಹೊರಬರುತ್ತದೆ. ಕೆಟ್ಟ ಕಾಯಾಗಿದ್ದರೆ ಕಳಚಿಕೊಳ್ಳದೆ ಚಿಪ್ಪಿಗೆ ಅಂಟಿಕೊಂಡಿರುತ್ತದೆ. ಒಳಗೆ ನೀರಿದ್ದರೂ ಸುಲಭವಾಗಿ ಬಿಚ್ಚಿಕೊಳ್ಳದು. ತುರಿದು ತೆಗೆಯಬೇಕಾಗುತ್ತದೆಯಷ್ಟೆ. ಹಾಗೆಯೇ ಸಾವು ದೇಹದ ಚಿಪ್ಪಿನಿಂದ ಜೀವವನ್ನು ಬಿಡಿಸುತ್ತೇನೆಂದು ಬಂದಾಗ ಜ್ಞಾನಿಯಾದ ಜೀವಾತ್ಮನು ಗಿಟುಕಿನಂತೆ ವರ್ತಿಸುತ್ತಾನೆ. ಅಜ್ಞಾನಿಯು ನೀರುಳ್ಳ ಕಾಯಿಯಂತೆ, ದುರಾತ್ಮನು ಕೆಟ್ಟ ಕಾಯಿಯಂತೆ ವರ್ತಿಸುತ್ತಾರೆ. ಆದರೆ ಜ್ಞಾನಿಗಳು ಅದನ್ನು ದೇವರ ಆಜ್ಞೆಯೆಂದೇ ತಿಳಿಯುತ್ತಾರೆ. ಧರ್ಮಕರ್ತರ ಈ ವಚನವನ್ನು ನೋಡಿರಿ.
ಕರ್ತನಟ್ಟಿದಡೆ ಮರ್ತ್ಯದಲ್ಲಿ ಮಹಾಮನೆಯ ಕಟ್ಟಿದೆ
ಸತ್ಯ ಶರಣರಿಗೆ ತೊತ್ತು ನೃತ್ಯನಾಗಿ ಸವೆದು ಬದುಕಿದೆನು
ಕರ್ತನ ಬೆಸನು ಮತ್ತೆ ಬರಲೆಂದಟ್ಟಿದಡೆ
ಕೂಡಲ ಸಂಗಮ ದೇವರ ನಿರೂಪಕ್ಕೆ
ಮಹಾಪ್ರಸಾದವೆಂಬೆನು. ಬ. ಷ. ವ. ೧೦೬೭