![]() | ಪುರದ ನಾಗಣ್ಣ | ಒಕ್ಕಲಿಗ ಮುದ್ದಣ್ಣ | ![]() |
ಕಿನ್ನರಿ ಬ್ರಹ್ಮಯ್ಯ ವಚನಗಳು |
ಆಯ್ಕೆ ಮಾಡಿದ ವಚನ |
---|
ಆಕಾರವೆಂಬೆನೆ ನಿರಾಕಾರವಾಗಿದೆ ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ. ತನ್ನನಳಿದು ನಿಜವುಳಿದ ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ./1 |
ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಲ್ಲ. ಮಣ್ಣ ಮಡಕೆ ಒಕ್ಕಲಿಗನಲ್ಲಿ, ಚಿನ್ನದ ಮಡಕೆ ಅರಮನೆಯಲ್ಲಿ. ಅರಮನೆ ಗುರುಮನೆ ಹಿರಿದಾದ ಕಾರಣ- ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!/2 |
ಆಶ್ರಯ ನಿರಾಶ್ರಯ ಹರಪುರಾತರಿಗಲ್ಲದೆ ಕಿರಾತರಿಗುಂಟೆ? ಆಶ್ರಯಿಸಬಹುದು ಪ್ರಭುವಿನ ನುಡಿಯ; ಆಶ್ರಯಿಸಬಹುದು ಹರಗಣಂಗಳ ನುಡಿಯ. ಅದೇನು ಕಾರಣವೆಂದಡೆ: ಕಾರಣವಿಲ್ಲದೆ ಕಂಡಂತಾದರು ತ್ರಿಪುರಾಂತಕಲಿಂಗ ಶರಣರು ಚೆನ್ನಬಸವಯ್ಯಾ./3 |
ಕಲ್ಲಿಲಿಟ್ಟವಂಗೊಲಿದೆ, ಕಾಲಲೊದ್ದವಂಗೊಲಿದೆ, ಬಾಯಲ್ಲಿ ಉಗಿದವಂಗೊಲಿದೆ. ಅದು ನಿನ್ನ ಭಕ್ತಿಯೋ ಸತ್ಯವೋ ಗರ್ವವೋ! ತ್ರೈಭುವನಂಗಳಿಗಭೇದ್ಯ ತಿಳಿವಡೆ ನಿನ್ನ ಮಹಿಮೆ, ಉಮೆಯ ವರ ತ್ರಿಪುರಾಂತಕಲಿಂಗವೆ./4 |
ಕಲ್ಲೊಳಗಣ ಬೆಲ್ಲವ ಮೆದ್ದವರಿನ್ಯಾರೊ? ಕಲ್ಲನೆ ಹಿಡಿದು ಬಿಡದೆ ಹಾರುವಿರಿ. ಕಲ್ಲು ಹಲ್ಲನೆ ಕಳೆಯಿತ್ತು, ಬಲ್ಲವರಿದ ಹೇಳಿ. ಕಲ್ಯಾಣದ ತ್ರಿಪುರಾಂತಕ ನೀನೆ ಬಲ್ಲೆಯಯ್ಯಾ./5 |
ಕಾಯದಲ್ಲಿ ಕಳವಳವಿರಲು, ಪ್ರಾಣದಲ್ಲಿ ಮಾಯೆಯಿರಲು, ಏತರ ಗಮನ ಏತರ ನಿರ್ವಾಣ. ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ ಸಜ್ಜನೆಯೆಂದು ಕೈವಿಡಿವನಲ್ಲ./6 |
ಚಂದ್ರನ ಸೂಡುವವ ಲಿಂಗನೊ ಅಂಗನೊ? ಸುಸಂಗದ ಮುಕುಟದಲ್ಲಿ ಗಂಗೆಯ ಧರಿಸುವವ ಭಂಗನೊ ಆಭಂಗನೊ? ಭಕ್ತರಂಗದಿಚ್ಛೆಯಲ್ಲಿ ಅಡಗುವವ ಬಂಧನೊ ನಿರ್ಬಂಧನೊ? ಇದು ನನಗೆ ಸಂದೇಹವಾಗಿದೆ. ತ್ರೈಭುವನಂಗಳಿಗೆ ಚೋದ್ಯ ನಿಮ್ಮ ಪರಿ, ಅಂಬಿಕಾವರ ತ್ರಿಪುರಾಂತಕಲಿಂಗವೆ./7 |
ಚನಿಪಾಲ ಚಿನ್ನದ ಹರಿವಾಣದಲ್ಲಿ ಭೋಗಿಪುದು ಭೂಷಣವಲ್ಲದೆ, ಮಣ್ಣ ಹರಿವಾಣದಲ್ಲಿ ಭೂಷಣವೆ? ತಾ ಮಾಳ್ಪ ಶಿವಲಿಂಗ ಪೂಜೆಗೆ ಕಾಯ ಪವಿತ್ರವಲ್ಲದೆ, ಅಪವಿತ್ರವೆಂತೊ ತ್ರಿಪುರಾಂತಕಲಿಂಗವೆ?/8 |
ತನು ಸೆಜ್ಜೆ ಮನ ಲಿಂಗವಾದ ಬಳಿಕ ಆನು ಮತ್ತೆ ಬೇರೆ ಅರಸಲುಂಟೆ? ತನುವೆ ಬಸವಣ್ಣ ಮನವೇ ಪ್ರಭುದೇವರೆಂಬ ಮಹಾ ಘನವನೊಳಕೊಂಡಿರ್ದ ಬಳಿಕ ಗುಣಾವಗುಣವ ಸಂಪಾದಿಸುವರೆ? ಮಹಾಲಿಂಗ ತ್ರಿಪುರಾಂತಕದೇವ, ಸಂಗನ ಬಸವಣ್ಣನಲ್ಲಿ ನಿಮ್ಮಡಿಗಳಲ್ಲಿ ಸಂದು ಸಂಶಯವುಂಟೆ? ಬಿಜಯಂಗೈವುದಯ್ಯಾ ಪ್ರಭುವೆ./9 |
ನಿನ್ನ ಸ್ವರೂಪ ಕಂಡೆನ್ನ ದೃಷ್ಟಿ ನಟ್ಟುದೆನಗೆ. ನಿನ್ನ ಲಾವಣ್ಯರಸವ ಕಂಡು ಮನ ಹಾರೈಸಿತ್ತೆನಗೆ. ನಿನ್ನ ಪ್ರವುಡಿಯಿಂದ ಕೂಡಿದೆನೆಂಬುದು ಭಾವದಲ್ಲಿ ಬಚ್ಚಬರಿಯ ಹೆಂಗುಸಾಗಿ ತೋರಿತ್ತೆನೆಗೆ. ಮಹಾಲಿಂಗ ತ್ರಿಪುರಾಂತಕನೆನಗೊಡ್ಡಿದ ಮಾಯೆಯ ನಿನ್ನ ಸಮಸುಖ ಕೂಟದೊಳಿರ್ದು ಶಿವಭಾವಭಕ್ತಿಯಿಂ ಗೆಲುವೆನು ಮಹಾ ಹೆಣ್ಣು ಎಂದು ಕೈವಿಡಿದೆನು./10 |
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
![]() | ಪುರದ ನಾಗಣ್ಣ | ಒಕ್ಕಲಿಗ ಮುದ್ದಣ್ಣ | ![]() |