Back to Top
Previous ಮೋಳಿಗೆ ಮಾರಯ್ಯ ಮಡಿವಾಳ ಮಾಚಿದೇವ Next

ಉರಿಲಿಂಗಪೆದ್ದಿಗಳ ವಚನಗಳು

ವಚನ ಆಯ್ಕೆ ಮಾಡಿ:

ಆಯ್ಕೆ ಮಾಡಿದ ವಚನ
*
ಅಂಗದ ಮೇಲೆ ಲಿಂಗಸಂಬಂಧಿಯಾಗಲು
ಸಾಲೋಕ್ಯವೆಂದರೇನೋ ?
ಗುರುಲಿಂಗಜಂಗಮಸನ್ನಿಧಿ ದಾಸೋಹದೊಳಗಿರಲು
ಸಾಮೀಪ್ಯವೆಂದರೇನೋ ?
ಸರ್ವಾಂಗಮನ ಇಂದ್ರಿಯಂಗಳ ಸಂಗದೊಳಗಿರಲು
ಸಾರೂಪ್ಯವೆಂದರೇನೊ ?
ಚತುರ್ದಶಭುವನಂಗಳನೊಳಕೊಂಡ ಮಹಾಘನಲಿಂಗವು
ತನ್ನ ಮನದೊಳಗವಗವಿಸಿ ನೆನವುತ್ತಿರಲು ಸಾಯುಜ್ಯವೆಂದರೇನೊ ?
ಇಂತೀ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ
ಚತುರ್ವಿಧಪದಂಗಳೆಂದರೇನೊ ?
ಎಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮನರಿದ ಶರಣಂಗೆ./1
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
ಮರಳಿ ಅನ್ಯದೈವಂಗಳನಾರಾಧಿಸುವ ಕುನ್ನಿಗಳು ನೀವು ಕೇಳಿಭೋ
ವಿಷ್ಣುವೇ ದೈವವೆಂದು ಆರಾಧಿಸಿದ ಬಲಿಗೆ ಬಂಧನವಾಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ಕರ್ಣನ ಕವಚ ಹೋಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ನಾಗಾರ್ಜುನನ ಶಿರ ಹೋಯಿತ್ತು.
ಅದಂತಿರಲಿ,
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ಗೌತಮಂಗೆ ಗೋವಧೆಯಾಯಿತ್ತು.
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ದಕ್ಷಂಗೆ ಕುರಿದಲೆಯಾಯಿತ್ತು.
ಮೈಲಾರನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ನಾಯಾಗಿ ಬೊಗಳುತಿರ್ಪ.
ಭೈರವನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ಕರುಳ ಬೆರಳ ಕಡಿದಿಕ್ಕಿ, ಬಾಹಿರನಾದನು.
ಮಾಯಿರಾಣಿಯೇ ದೈವವೆಂದು ಆರಾಧಿಸಿದಾತನು
ಕೊರಳಿಗೆ ಕವಡಿಯ ಕಟ್ಟಿ, ತಲೆಯಲ್ಲಿ ಕೆರಹ ಹೊತ್ತು,
ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ.
ಈ ಬಿನುಗು ದೈವಂಗಳ ಭಕ್ತಿ ಬಣಗು ನಾಯಿ ಒಣಗಿದೆಲುವ ಕಚ್ಚಿಕೊಂಡು
ಕಂಡ ಕಂಡೆಡೆಗೆ ಹರಿದಂತಾಯಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ./2
ಅಂಗಭಾವ ಹಿಂಗದೆ ಮಜ್ಜನಕ್ಕೆರೆವಿರಿ,
ಅರ್ಪಿತವನರಿಯದೆ ಅರ್ಪಿಸುವಿರಿ.
ಅರ್ಪಿತ ಸವೆಯಿತ್ತೆ ? ಲಿಂಗ ಸವೆಯಿತ್ತೆ ?
ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತಿವತ್ಸಲ
ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್
ಇಂತೆಂದುದಾಗಿ, ತನುವರ್ಪಿತ ಗುರುವಿಂಗೆ,
ಮನವರ್ಪಿತ ಲಿಂಗಕ್ಕೆ, ಧನವರ್ಪಿತ ಜಂಗಮಕ್ಕೆ.
ಇಂತೀ ತ್ರಿವಿಧಕ್ಕೆ ಅರಿದರ್ಪಿಸಬಲ್ಲಡೆ ಅರ್ಪಿತ.
ಈ ತ್ರಿವಿಧ ಸವೆಯದೆ ಅರ್ಪಿಸುವ ಅರ್ಪಿತವೆಂತೊ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ?/3
ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ
ಅಂಗೇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾದವು.
ಅಂಜದಿರು ಮನವೇ, ಲಿಂಗವು ನಿನಗೆ ದೂರನೆಂದು.
ಮನೋಮಧ್ಯದೊಳಿಪ್ಪ, ಅಂಗದ ಕಂಗಳಲಿಪ್ಪ,
ಭಾವದ ಪ್ರಾಣದಲ್ಲಿಪ್ಪ.
ಅಂಗಪ್ರಾಣಭಾವ ಸರ್ವಾಂಗಲಿಂಗವಾದ ಬಳಿಕ,
ಲಿಂಗಮಧ್ಯಪ್ರಾಣ, ಪ್ರಾಣಮಧ್ಯಲಿಂಗ.
ಇದು ಕಾರಣ ಉತ್ಪತ್ತಿಸ್ಥಿತಿಲಯವುಂಟೆಂದು ಅಂಜದಿರು.
ಅಂಜಿಕೆ ಇಲ್ಲ, ಅಳುಕಿಲ್ಲ, ಬಂದುದೇ ಲಿಂಗದ ಲೀಲೆ,
ಇದ್ದುದೇ ಲಿಂಗದಾನಂದ, ಭಾವಲೀಯವಾದುದೇ ಲಿಂಗನಿರವಯವು.
ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ./4
ಅಂಡಜನುದರದಲ್ಲಿ ತಂದಿಕ್ಕಿದಾ ತತ್ತಿ
ಮುಂದಣಾಧಿಕ್ಯವನರಿಯಲ್ಲುದೆ ನೋಡಾ.
ಪಿಂಡಾಧಿಕ್ಯದ ಸಂದಳಿಯದ ಮುನ್ನ ಮುಂದೆ ಬಂದಿಪ್ಪುದು ಅದು ನೋಡಾ.
ಒಬ್ಬ ಹೆಂಗೂಸಿಂಗೆ ಗಂಡು ನಾಲ್ವರು,
ಗರ್ಭಿಣಿಯಾಗದ ಮುನ್ನ ಪ್ರಸೂತೆ,
ಬಂಜೆಯ ಮಕ್ಕಳು ಮೂವರೈದಾರೆ,
ನಾಲ್ವರ ಮೂಲವರಿಯದ ಕಾರಣ ಧರೆಯ ಮೇಲೆನಿಸಿದವು ?
ಉಪಮೆಗುಡದ ಬಣ್ಣ ನೋಡಿ ಸಿಲಿಕಿದ ಕೂಟ
ಉಂಟು ದಣಿಯದ ತೃಪ್ತಿ
ಶ್ರೋತ್ರೇಂದ್ರಿಯದಲ್ಲಿ ಸವಿದು ಹರಿಯದ ಪರಿಮಳ
ಸಂದು ಸವೆದೊಂದಾದ ಕೂಟ
ನೋಡುವ ನೋಟವರಿತು ವಾಸಿಸುವ ವಾಸನೆ ಅರಿತು .
ಆಚಾರ ಪ್ರಾಣವಾಗಿ ಅರಿವರಿತು
ಮರಹು ನಷ್ಟವಾದಾತನೈಕ್ಯನು.
ಆಚಾರವರಿತು ಅನಾಚಾರ ನಷ್ಟವಾದಾತನನುಪಮಮಹಿಮನು.
ಶುದ್ಧ ಸಿದ್ಧ ಪ್ರಸಿದ್ಧಕ್ಕಾತ ನೆಲಮನೆ,
ಆತನ ಮೀರುವದೊಂದೊಡ್ಡವಣೆಯ ಕಾಣೆ.
ಕರುಣಾಮೃತಪೂರ್ಣವಾದ ಕುಂಭಕ್ಕೆ ವಿರಳ ಉಂಟೆ ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನನೊಡಗೂಡಿ
ಸಂದಳಿದ ಶರಣಂಗೆ ಬಳಕೆಯ ಬೇಟದ ಬಣ್ಣ ಉಂಟೆ ?/5
ಅಂತರಂಗ ಬಹಿರಂಗ ಪರಮಾಕಾಶದ ಪರಬ್ರಹ್ಮಸ್ಥಾನ ಬ್ರಹ್ಮರಂಧ್ರದಲ್ಲಿ,
ಪರಬ್ರಹ್ಮ ಪರಮಾತ್ಮನು,
ನಿಷ್ಕಳ ನಿರವಯ ನಿರುಪಮ ಶ್ರೀಗುರುಮೂರ್ತಿ ಲಿಂಗಭರಿತವಾಗಿಪ್ಪನು,
`ಶಿವಂ ಪರಮಾಕಾಶಮಧ್ಯೇ ಧ್ರುವಂ ತತ್ವಾಧಿಕಂ' ಎಂದುದಾಗಿ,
ಇದುಕಾರಣ,
ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಮತವು, ಇದು ಶ್ರುತವು,
ಭ್ರೂಮಧ್ಯದಲ್ಲಿ ಅಂತರಾತ್ಮನು
ಸಕಲ ನಿಷ್ಕಲ ಪರಂಜ್ಯೋತಿರ್ಲಿಂಗಮೂರ್ತಿಭರಿತವಾಗಿಪ್ಪನು.
`ಪರಾತ್ಪರಂ ಪರಂಜ್ಯೋತಿರ್ಭ್ರೂಮಧ್ಯೇ ತು ವ್ಯವಸ್ಥಿತಂ' ಎಂದುದಾಗಿ
ಹೃದಯಕಮಲಮಧ್ಯದಲ್ಲಿ ಜೀವಾತ್ಮನು.
ಕೇವಲ ಸಕಲಜಂಗಮಮೂರ್ತಿ ಲಿಂಗಭರಿತವಾಗಿಪ್ಪನು,
`ಹೃದಯಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಎಂದುದಾಗಿ.
ಇಂತು ಪರಬ್ರಹ್ಮ, ಬ್ರಹ್ಮರಂಧ್ರ ಭ್ರೂಮಧ್ಯ ಹೃದಯಸ್ಥಾನದಲ್ಲಿ
ನಿಷ್ಕಲ, ಸಕಲನಿಷ್ಕಲ, ಸಕಲ
ಪರಮಾತ್ಮ ಅಂತರಾತ್ಮ ಜೀವಾತ್ಮನೆಂದೆನಿಸಿ
ಶ್ರುತ ದೃಷ್ಟ ಅನುಮಾನದಿಂ ಕಂಡು
ವಿನೋದ ಕಾರಣ ಮಾಯಾವಶವಾಗಿ, ಪಂಚಭೂತಂಗಳನ್ನು ಸೃಜಿಸಿ
ಸಕಲಪ್ರಪಂಚವನೂ ಬೆರಸಿ, ಮಾಯಾಧೀನವಾಗಿ ವಿನೋದಿಸಿ
ಆ ಮಾಯೆಯನೂ ಸಕಲಪ್ರಪಂಚವನೂ ತ್ಯಜಿಸಲಿಕೆ
ಬಹಿರಂಗದಲಿ ಶ್ರೀಗುರುರೂಪಾಗಿ ಬೋಧಿಸಿ
ಪರಮಾತ್ಮನು ಪರಬ್ರಹ್ಮವಾಗಿ ನಿಜಪದವನೈದಿ ಸುಖಿಯಾಗಿಪ್ಪನು.
ಇಂತಹ ಅರಿವೇ ಪರಬ್ರಹ್ಮ, ಮರವೆಯೇ ಮಾಯಾಸಂಬಂಧವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ./6
ಅಂತರಂಗ ಬಹಿರಂಗವೆಂದೆಂಬರು,
ಆವುದು ಮುಂದು ಆವುದು ಹಿಂದೆಂದರಿಯರು.
ಎಳ್ಳೊಳಗಣ ಎಣ್ಣೆ ಕಲ್ಲೊಳಗಣ ಹೇಮ ಹಾಲೊಳಗಣ ತುಪ್ಪ
ಕಾಷ್ಠದೊಳಗಣ ಅಗ್ನಿಯಿಪ್ಪಂತಿಪ್ಪ ಚಿನುಮಯ ಮೂರ್ತಿಯನೂ
ಶ್ರೀಗುರುಹಸ್ತಾಬ್ಜಮಂ ಶಿಷ್ಯನ ಮಸ್ತಕದಲ್ಲಿಟ್ಟು
ಆಕರ್ಷಣಂ ಮಾಡಿ ತೆಗೆದು
ತಲ್ಲಿಂಗವನಂಗದಲ್ಲಿ ಸ್ಥಾಪ್ಯವಂ ಮಾಡಿ
ಸುಜ್ಞಾನಕ್ರೀಯ ಉಪದೇಶವಂ ಮಾಡಲು
ಘಟದ ಹೊರಗಿಹ ಆನಲನೂ ಆ ಘಟವ ಭೇದಿಸಿ
ತಜ್ಜಲವ ಹಿಡಿದು ತೆಗೆದುಕೊಂಬಂತೆ
ಬಾಹ್ಯದಿಂ ಮಾಡುವ ಸತ್ಕ್ರಿಯಾವರ್ತನದಿಂ
ಜೀವಶಿವ ಸಂಗವಹ ಬಟ್ಟೆಯನರಿಯದೆ
ಹಲವು ಬಟ್ಟೆಯಲ್ಲಿ ಹರಿವರು,
ಅಜ್ಞಾನಸಂಬಂಧಿಗಳು, ಗುರುವಚನಪರಾಙ್ಮುಖರು,
ಕರ್ಮನಿರ್ಮಲವಾಗದ ಜಡರುಗಳು, ಲಿಂಗನಿಷ್ಠಾವಿರಹಿತರು,
ನಿಮ್ಮನೆತ್ತಬಲ್ಲರಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ./7
ಅಂತ್ಯಜನಾಗಲಿ, ಅಗ್ರಜನಾಗಲಿ
ಮೂರ್ಖನಾಗಲಿ, ಪಂಡಿತನಾಗಲಿ
ಜಪಿಸುವುದು ಶ್ರೀ ಪಂಚಾಕ್ಷರಿಯ.
ಆ ಜಪದಿಂದ ರುದ್ರನಪ್ಪುದು ತಪ್ಪದು.
ಅದೆಂತೆಂದಡೆ:ಲೈಂಗೇ
ಅಂತ್ಯಜೋಪ್ಯಗ್ರಜೋ ವಾಪಿ ಮೂರ್ಖೊ ವಾ ಪಂಡಿತೋಪಿ ವಾ
ಪಂಚಾಕ್ಷರೀಂ ಜಪೇನ್ನಿತ್ಯಂ ಸ ರುದ್ರೋ ನಾತ್ರ ಸಂಶಯಃ
ಇಂತೆಂದುದಾಗಿ,
ಇದು ಸತ್ಯ, ಇದು ಸತ್ಯ, ಇದು ಸತ್ಯ ಜಪಿಸುವುದು,
ಶಪಥ ಮಾಡಿದೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ./8
ಅಕಟಕಟಾ ಬೆಡಗು ಬಿನ್ನಾಣ ಒಂದೇ ನೋಡಾ.
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂಬುದೆ ಯಂತ್ರ.
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂಬುದೆ ತಂತ್ರ.
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಎಂಬುದೆ ಮಂತ್ರ.
ಪ್ರಣಮಪಂಚಾಕ್ಷರಿಯ ಮಂತ್ರವನುಚ್ಚರಿಸುವರೆಲ್ಲರೂ
ಅಪ್ರಮಾಣಿಕರು ನೋಡಾ,
ಅಪ್ರಣಮ ಪಂಚಾಕ್ಷರ ಮಂತ್ರವ ವಿಶ್ವಾಸದಿಂದವಗ್ರಹಿಸಿ
ಮಂತ್ರಾರ್ಥವ ತಿಳಿದು ಉಚ್ಚರಿಸಲರಿಯದ ಕಾರಣ
ಮತ್ತೆ ಆಕಾರ ಉಕಾರ ಮಕಾರದ ಮೂಲವಂ ಭೇದಿಸಿ,
ಓಂಕಾರದ ನೆಲೆಯಂ ತಿಳಿದು, ಆ ಓಂಕಾರದಲ್ಲಿ
ಪಂಚವರ್ಣದ ಲಕ್ಷಣವನರಿದು, ಓಂ ನಮಃ ಶಿವಾಯ
ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಸ್ಮರಿಸಬಲ್ಲಡೆ
ಇದೆ ಜಪ, ಇದೇ ತಪ, ಇದೇ ಸರ್ವಸಿದ್ಧಿಯಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ./9
ಅಕಾರ ಉಕಾರ ಮಕಾರಂಗಳು ಪ್ರಕೃತಿಯಲ್ಲಿ ನಾದ ಬಿಂದು ಕಳೆಯಾದವು.
ಅಕಾರ ನಾದ, ಉಕಾರ ಬಿಂದು, ಮಕಾರ ಕಳೆ.
ಅಕಾರ ರುದ್ರ, ಉಕಾರ ಈಶ್ವರ, ಮಕಾರ ಸದಾಶಿವ.
ಅಕಾರ ಉಕಾರ ಮಕಾರಂಗಳಿಗೆ ನಾದ ಬಿಂದು ಕಳೆಯೇ ಆಧಾರ.
ನಾದ ಬಿಂದು ಕಳೆಗಳಿಗೆ ಪ್ರಕೃತಿಯೇ ಆಧಾರ.
ಆ ಪ್ರಾಣಕ್ಕೆ ಲಿಂಗವೇ ಆಧಾರ.
ಅ ಎಂಬಲ್ಲಿ ನಾದವಾಯಿತ್ತು.
ಉ ಎಂಬಲ್ಲಿ ನಾದ ಉಳಿದಿತ್ತು.
ಮ ಎಂಬಲ್ಲಿ ಬಿಂದು ಒಂದುಗೂಡಲು ಓಂಕಾರಶಕ್ತಿಯಾಗಿ ತೋರಿತ್ತು.
ಆ ಓಂಕಾರಶಕ್ತಿಯಲ್ಲಿ ನಕಾರ ಮಕಾರ ಶಿಕಾರ ವಕಾರ
ಯಕಾರಗಳೆಂಬ ಪಂಚಾಕ್ಷರಗಳುದಯಿಸಿದವು.
ನಕಾರವೇ ಬ್ರಹ್ಮ, ಮಕಾರವೇ ವಿಷ್ಣು, ಶಿಕಾರವೇ ರುದ್ರ,
ವಕಾರವೇ ಈಶ್ವರ, ಮಕಾರವೇ ಸದಾಶಿವ. ಈ ಪಂಚ ಶಾಖೆಗಳ
ವಕಾರವೇ ದೇವನ ನೆತ್ತಿಯಲ್ಲಿ ಆ ಓಂಕಾರ ಶಕ್ತಿ ಸ್ವರೂಪಿಯಾಗಿ ಕಾಣಿಸಿತ್ತು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ./10

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

*
Previous ಮೋಳಿಗೆ ಮಾರಯ್ಯ ಮಡಿವಾಳ ಮಾಚಿದೇವ Next