| ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ ವಚನಗಳು |  | 
        
    
    
        784
        ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು
        ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ
        ಅರಿವೆಂಬುದಿಲ್ಲ, ಮರವೆಂಬುದಿಲ್ಲ,
        ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ,
        ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ,
        ಸಂಗ ನಿಸ್ಸಂಗವೆಂಬುದಿಲ್ಲ,
        ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ.
        ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ,
        ಭ್ರಮರದೊಳಡಗಿದ ಕೀಟದಂತೆ
        ಉರಿಯೊಳಡಗಿದ ಕರ್ಪುರದಂತೆ
        ಕ್ಷೀರದೊಳು ಬೆರೆದ ಪಯದಂತೆ
        ಅಂಬುಧಿಯೊಳಡಗಿದ ವಾರಿಕಲ್ಲಿನಂತೆ
        ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ
        ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ,
        ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?         
        
        785
        ಅರಿವನಲ್ಲ ಮರವನಲ್ಲ ಕುರುಹಿಟ್ಟರಸುವನಲ್ಲ.
        ತಾನೆ ಪರಿಪೂರ್ಣನಾಗಿ ತಾನೆಂಬ ಭಾವವಳಿದು,
        ಇದಿರೆಂಬ ಶಂಕೆಯನರಿಯ.
        ಭಾವಿಸಿ ಬಳಲುವ ಭಾವದ ಭ್ರಮೆಯಳಿದು,
        ಭಾವವೆ ಬ್ರಹ್ಮವಾಗಿ, ಭಾವಿಸುವ ಭಾವಕನಲ್ಲ.
        ಆಗುಹೋಗು ಭೋಗಭೂಷಣಂಗಳ ಅನುರಾಗಮಂ ತ್ಯಜಿಸಿ,
        ಬಂಧ ಮೋಕ್ಷ ಸಂದುಸಂಶಯವೆಂಬ ಜಡತ್ವಮಂ ಕಳೆದು,
        ನಿಂದ ನಿಲವಿನ ವಶಕ್ಕೆ ವಶವಾಗದೆ,
        ಸಹಜ ಶಾಂತಿಸಮತೆ ನೆಲೆಗೊಂಡು ನಿಂದಾತನೆ ಶರಣ.
        ಇಂತಪ್ಪ ಶರಣ ನುಡಿದುದೆ ಸಿದ್ಧಾಂತ, ನೋಡಿದುದೆ ಅರ್ಪಿತ,
        ಮುಟ್ಟಿದುದೆ ಪ್ರಸಾದ, ಪರಿಣಾಮಿಸಿದುದೆ ತೃಪ್ತಿಯಾದ ಮಹಾಶರಣಂಗೆ
        ಶರಣೆಂದು ಬದುಕಿದೆನು ಕಾಣಾ,
        ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.
        
        786
        ಅಲ್ಲೆನ್ನ ಅಹುದೆನ್ನ, ಎಲ್ಲವು ತನ್ನಿಂದಾಯಿತ್ತಾಗಿ.
        ಬೇಕೆನ್ನ ಬೇಡೆನ್ನ, ನಿತ್ಯತೃಪ್ತ ತಾನೆಯಾಗಿ.
        ಆಕಾರ ನಿರಾಕಾರವೆನ್ನ, ಉಭಯವನೊಳಕೊಂಡ ಗಂಭೀರ ತಾನೆಯಾಗಿ.
        'ನಿಶ್ಯಬ್ದಂ ಬ್ರಹ್ಮ ಉಚ್ಯತೇ ' ಎಂಬ ಶ್ರುತಿಯ ಮತದಿಂದ ನುಡಿಗೆಟ್ಟವನಲ್ಲ.
        ಬೆಳಗು ಬೆಳಗನೆಯ್ದಿ ಮಹಾಬೆಳಗಾದ ಬಳಿಕ,
        ಹೇಳಲಿಲ್ಲದ ಶಬ್ದ ಕೇಳಲಿಲ್ಲದ ಕೇಳುವೆ.
        ರೂಹಿಲ್ಲದ ಕೂಟ, ಕೂಟವಿಲ್ಲದ ಸುಖ.
        ಸುಖವಿಲ್ಲದ ಪರಿಣಾಮ, ಪರಿಣಾಮವಿಲ್ಲದ ಪರವಶ.
        ಪರವಶ ಪರಮಾನಂದವೆಂಬುದಕ್ಕೆ ಎರವಿಲ್ಲವಾಗಿ ಆತ ಲಿಂಗೈಕ್ಯನು.
        ಇಂತಪ್ಪ ಲಿಂಗೈಕ್ಯನೊಳಗೆ ಏಕವಾಗಿ ಬದುಕಿದೆನು ಕಾಣಾ,
        ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.
        
        787
        ಕರಸ್ಥಲದ ಲಿಂಗವ ಬಿಟ್ಟು,
        ಧರೆಯ ಮೇಲಣ ಪ್ರತುಮೆಗೆರಗುವ
        ನರಕಿ ನಾಯಿಗಳನೇನೆಂಬೆನಯ್ಯಾ,
        ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಾ.
        
        788
        ಸತಿಯ ನೋಡಿ ಸಂತೋಷವ ಮಾಡಿ,
        ಸುತರ ನೋಡಿ ಸುಮ್ಮಾನವ ಮಾಡಿ,
        ಮತಿಯ ಹೆಚ್ಚುವಿನಿಂದ ಮೈಮರೆದೊರಗಿ,
        ಸತಿಸುತರೆಂಬ ಸಂಸಾರದಲ್ಲಿ ಮತಿಗೆಟ್ಟು,
        ಮರುಳಾದುದನೇನೆಂಬೆ,
        ಎನ್ನ ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಾ.
    
    ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
    *