![]() | ಮುಮ್ಮಡಿ ಕಾರ್ಯೇಂದ್ರ | ನೀಲಗಂಗಾಂಬಿಕೆ/ ನೀಲಾಂಬಿಕೆ (ನೀಲಮ್ಮ) | ![]() |
ಮೂರುಸಾವಿರ ಮುಕ್ತಿಮುನಿ ವಚನಗಳು |
ಆಯ್ಕೆ ಮಾಡಿದ ವಚನ |
---|
ಅಂತೊಪ್ಪುವ ಸಚ್ಚಿದಾನಂದ ಧ್ಯಾನದಿಂದ, ನಿಮ್ಮ ಪರಿಪೂರ್ಣ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ಎಂದು ಬೇಡಿಕೊಂಡು ಅಭಯವಾದ ಮೇಲೆ ಬಂದು ಮೊದಲಹಾಗೆ ಅಲ್ಲಿ ಮೂರ್ತವ ಮಾಡಿ, ಆ ಜಂಗಮಮೂರ್ತಿಗಳು ಸಲಿಸಿದೋಪಾದಿಯಲ್ಲಿ ಅನಾದಿಮೂಲಮಂತ್ರಸೂತ್ರವಿಡಿದು ತಾನು ಸಲಿಸುವುದು. ಆ ಮೇಲೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಮೊದಲಾದ ಷಟ್ಸ್ಥಲ ಭಕ್ತ ಮಹೇಶ್ವರರು, ಅದೇ ರೀತಿಯಲ್ಲಿ ಸಲಿಸುವುದು ಪೂರ್ವಪುರಾತನೋಕ್ತವು. ಉಳಿದ ತ್ರಿವಿಧ ದೀಕ್ಷೆಗಳರಿಯದೆ, ಕ್ರಿಯಾಪ್ರಸಾದದ ಕುರುಹ ಕಾಣದೆ, ಷಟ್ಸ್ಥಲಮಾರ್ಗವರಿಯದೆ, ಇಷ್ಟಲಿಂಗಧಾರಕ ಉಪಾಧಿಗಳು ಆ ಗದ್ದುಗೆಯ ತೆಗೆದು, ಲಿಂಗಕ್ಕರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ : ಅವರಿಗೆ ತ್ರಿವಿಧದೀಕ್ಷಾನುಗ್ರಹ ಪ್ರಸನ್ನಪ್ರಸಾದ ಷಟ್ಸ್ಥಲಮಾರ್ಗ ಸರ್ವಾಚಾರಸಂಪತ್ತಿನ ಆಚರಣೆ ಮುಂದಿಹುದರಿಂದ ಅವರು ಬಟ್ಟಲ ಎತ್ತಲಾಗದು. ಹೀಂಗೆ ಸರ್ವರು ಸಲಿಸಿದ ಮೇಲೆ ಕೊಟ್ಟ ಕೊಂಡ ಭಕ್ತ ಜಂಗಮವು ಇರ್ವರೂ ಕೂಡಿ, ಅನಾದಿ ಮೂಲಮಂತ್ರಸೂತ್ರವಿಡಿದು, ಮುಕ್ತಾಯವ ಮಾಡಿದಲ್ಲಿಗೆ ದಶವಿಧಲಿಂಗಸಂಬಂಧದಿಂದ ದಶವಿಧಪಾದೋದಕ ಲಿಂಗೋದಕ ಪ್ರಸಾದೋದಕಂಗಳಲ್ಲಿ ಪರಿಪೂರ್ಣತೃಪ್ತರೆ ನಿಮ್ಮ ಪ್ರತಿಬಿಂಬರಯ್ಯ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./1 |
ಅನಂತ ತಪಸ್ಸಿನ ಫಲ ಒದಗಿ, ಗುರುಕರುಣದಿಂದ ಚಿದ್ಘನಲಿಂಗಾಂಗಸಂಬಂಧ ವೀರಶೈವೋದ್ಧಾರಕರಾದ ಮಹಾಗಣ ಪ್ರಸನ್ನಪ್ರಸಾದವೆನಿಸುವ ವಚನಸಾರಾಮೃತನುಭಾವಸುಖಮಂ ಸವಿಸವಿದುಂಡುಪವಾಸಿ ಬಳಸಿಬ್ರಹ್ಮವಾಗಲರಿಯದೆ ಒಬ್ಬರಿಗೆ ಹುಟ್ಟಿ,ಒಬ್ಬರಿಗೆ ಹೆಸರಹೇಳಿ,ಶಿವಾಚಾರಮಾರ್ಗಸಂಪನ್ನರೆನಿಸಿ, ತಮ್ಮ ತಾವರಿಯದೆ, ಹಲವು ಮತದವರ ಎಂಜಲಶಾಸ್ತ್ರವಿಡಿದು, ಶೈವಕರ್ಮೊಪವಾಸ ಕ್ರಿಯಾಚಾರವಿಡಿದು, ಜ್ಞಾನವ ಬಳಕೆಯಾಗಿರ್ಪುದೆ ಅಂತರಂಗದ ಚತುರ್ಥಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./2 |
ಅನಾದಿ ಪೂರ್ವಪುರಾತನ ಗಣನಾಯಕ ಹಿರಿದಂಡನಾಥನ ಘನಭಕ್ತಿ ದಾಸೋಹಂಭಾವನೊಲ್ಲೆನೊಲ್ಲೆ, ಬೇಕು ಬೇಕು, ಅದೇನು ಕಾರಣವೆಂದಡೆ : ಅಯೋಗ್ಯ ರೂಪು, ಅಕ್ರಿಯೆ, ಅಜ್ಞಾನ, ಅನಾಚಾರಗಳ ಕಂಡು ಕಣ್ಣಮುಚ್ಚಿ, ಮಹಾಬೆಳಗಿನ ಷಟ್ಸ್ಥಲದ ಮಾರ್ಗವ ಸೇರದೆ, ಲಿಂಗಲಾಂಛನಕ್ಕೆ ಶರಣೆಂದು ತನುಮನಧನವನರ್ಪಿಸಿದ ಪರಿಪೂರ್ಣಗುಪ್ತಭಕ್ತಿ ಎನ್ನಂತರಂಗನಾಥ ಪ್ರಾಣಲಿಂಗಕ್ಕೆ ಅರ್ಪಿತ, ಎನ್ನ ಬಹಿರಂಗದನಾಥ ಇಷ್ಟಲಿಂಗಕ್ಕೆ ಅನಾರ್ಪಿತ. ನಿಜಮೋಕ್ಷಸ್ವರೂಪರ ಮಹಾಬೆಳಗಿನ ನಿಜಭಕ್ತಿಜ್ಞಾನವೈರಾಗ್ಯಾಚಾರ ಕ್ರಿಯಾನುಭಾವವೆಂಬ ಚಿದ್ಬಿಂದುವ ಬಿತ್ತಿ, ಬೆಳೆಮಾಡಿ, ಭವಸಮುದ್ರಕ್ಕೆ ಹಡಗವ ಹಾಕಿ ದಾಂಟಿ, ನಿಜದುನ್ಮನಿಯ ಸೇರಿ, ನಿಂದ ಹಲಾಯುಧನಂಬಿಗರ ಚೌಡಯ್ಯನ ಘನಭಕ್ತಿದಾಸೋಹಂಭಾವ ಬೇಕು ಬೇಕು. ಅದೇನುಕಾರಣವೆಂದಡೆ : ಘನಕ್ಕೆ ಘನಯೋಗ್ಯ ಸದ್ರೂಪು ಸತ್ಕ್ರಿಯಾ ಸಮ್ಯಜ್ಞಾನ, ಸದಾಚಾರಗಳ ಕಂಡು ಕಣ್ದೆರೆದು ತನು ಉಬ್ಬಿ, ಮನ ಉಬ್ಬಿ , ಭಾವಭರಿತನಾಗಿ, ನಿಜೋಲ್ಲಾಸದಿಂದ ಸರ್ವಾಚಾರ ಷಡುಸ್ಥಲಸಂಪತ್ತಿನ ನಿಜಾನುಭಾವ ನಡೆನುಡಿ ದೃಢಚಿತ್ತ ಚಿದ್ಘನಲಿಂಗಲಾಂಛನಕ್ಕೆ ಶರಣು ಶರಣಾರ್ಥಿಯೆಂದು ಸರ್ವಾಂಗಪ್ರಣುತರಾಗಿ, ನಿರ್ವಂಚಕತ್ವದಿಂದ, ಮಹಿಮಾಪದಭಕ್ತಿಯನುಳಿದು, ಅರ್ಥಪ್ರಾಣಾಭಿಮಾನ ಸಮರ್ಪಿಸಿದ ಪರಿಪೂರ್ಣರಹಸ್ಯತ್ವ ಕ್ರಿಯಾಶಕ್ತಿ, ಎನ್ನಂತರಂಗದೊಡೆಯ ಪ್ರಾಣಲಿಂಗನಾಥ, ಎನ್ನ ಬಹಿರಂಗದೊಡೆಯ ಇಷ್ಟಲಿಂಗನಾಥರಾದ ಸಾಕಾರ ನಿರಾಕಾರದಾಚರಣೆಯ ಸಂಬಂಧ ಸತ್ಕ್ರಿಯೆ ಸಮ್ಯಜ್ಞಾನ ಸಾಕ್ಷಿಯಾಗಿ, ಅರ್ಪಿತವೆ ಪ್ರಭಾವಿಸಿ, ಸಂದುಸಂಶಯವಿಲ್ಲದೆ ಹೊರೆಯೇರಿ ಸರ್ವಾಂಗ ಉಕ್ಕಿ, ಕುಂದುಕೊರತೆ ನಿಂದ್ಯಾದಿಗಳಿಗಳುಕದೆ, ಅನಾಚಾರಕ್ಕೊಯಿರಿಯಾದ ಎನ್ನ ಗುರುಕರುಣ ವೀರಮಾಹೇಶ್ವರಾಚಾರಕ್ಕೆ ಮೋಹಿಸಿ ತಲೆಬಾಗಿದ ನಿಜಭಕ್ತಿ ಎನ್ನದೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./3 |
ಅನಾದಿ ಪ್ರಮಥಗಣ ನಿಜೋಪದೇಶ ಪ್ರಸನ್ನ ಪ್ರಸಾದಾಚಾರ ನಡೆನುಡಿಸಂಬಂಧಗಳಾಚರಣೆಗಳ ಬಳಿವಿಡಿದು, ಮುಕ್ತಿಸ್ವರೂಪರಾದ ಘನಗುರುಚರಮೂರ್ತಿಗಳು, ಪ್ರಥಮದಲ್ಲಿ ಗುರುಕರುಣ ಲಿಂಗಧಾರಣಸ್ಥಲವಳವಟ್ಟು, ಲಿಂಗನಡೆ ಲಿಂಗನುಡಿಯಾಗಿ, ಪಾತಕಸೂತಕವಳಿದುಳಿದು ನಿಜೋತ್ತಮಂಗೆ ಕ್ರಿಯೋಪದೇಶದಿಂದ ಶುದ್ಧಪ್ರಸಾದವ ಕೊಟ್ಟು, ಮಂತ್ರೋಪದೇಶದಿಂದ ಸಿದ್ಧಪ್ರಸಾದವ ಕೊಟ್ಟು, ವೇದೋಪದೇಶದಿಂದ ಪ್ರಸಿದ್ಧಪ್ರಸಾದವ ಕೊಟ್ಟು, ಇವ ಮೂರು ಸ್ಥಲವಿದ್ದವರಲ್ಲಿ ಕೊಳಬಲ್ಲಾತನೆ ಅನಾದಿಪ್ರಮಥಗಣ ಗುರುಮಾರ್ಗಿಕರೆನಿಸುವರು ನೋಡಾ. ಇವರನರಿಯದೆ ಕ್ರಿಯಾದೀಕ್ಷೆ, ಶುದ್ಧಪ್ರಸಾದದೀಕ್ಷೆ, ಪಾದೋದಕ ಮಂತ್ರದೀಕ್ಷೆ, ಸಿದ್ಧಪ್ರಸಾದ ಶಿಕ್ಷಾಪಾದೋದಕದಿರವನರಿಯದೆ ತನುಶುದ್ಧ ಮನಸಿದ್ಧವಿಲ್ಲದೆ, ವೇಧಾದೀಕ್ಷೊಪದೇಶ ಪ್ರಸಿದ್ಧಪ್ರಸಾದ ಜ್ಞಾನಪಾದೋದಕದಲ್ಲಿ ಸಮರಸನಾಚರಿಸುವಾತನ ಯೋಗ್ಯನೆಂಬೆ ನೋಡಾ. ಪ್ರಸಿದ್ಧ ಪಾದೋದಕ ಪ್ರಸಾದ ಮಂತ್ರವರಿಯದ ಲಿಂಗಲಾಂಛನಧಾರಿಗಳಿಂದ ಷಟ್ಸ್ಥಲಬ್ರಹ್ಮೋಪದೇಶ ಪಡೆದರೆಂದು, ಭಕ್ತನಾಗಿ, ಹತ್ತು ಹನ್ನೊಂದರ ಪ್ರಸಾದಿಗಳೆಂದು, ಸತ್ಕ್ರಿಯೆ ಸಮ್ಯಜ್ಞಾನಾಚಾರದ ಇರವನರಿಯದೆ, ಸಮರಸದ ಕ್ರಿಯೆಗಳ ಬಳಸಿ ಉದರವ ಹೊರೆವಾತನಯೋಗ್ಯ ನೆಂಬೆನು ನೋಡಾ. ಮಲಮೂತ್ರ ವಿಸರ್ಜಿಸಿ, ಸ್ನಾನವಿಲ್ಲದೆ, ಅನ್ನುದಕ ಹಣ್ಣು ಫಲಾದಿ ಕಬ್ಬು ಕಡಲೆಗಳೆಂದು ಕೈಗೆಬಂದಂತೆ ತಿಂದು ತೇಗಿ, ಪ್ರಸಾದಿಯೆಂದು, ತೀರ್ಥವ ಸಲಿಸಿ, ಪ್ರಸಾದವ ಮರೆದೆನೆಂದು ಮತ್ತೆ ತೀರ್ಥಪ್ರಸಾದವೆಂದು ಕೊಡುಕೊಂಬರಿವರು. ಚಿದ್ಘನಲಿಂಗಾಂಗಸಂಗವೇ ಪರಿಪೂರ್ಣಾನಂದ ತೀರ್ಥಪ್ರಸಾದವೆಂದರಿಯದವರು, ಬಿಂದು ಚಿದ್ಬಿಂದು ಪರಬಿಂದುವ ಅಯೋಗ್ಯಪರಮುಖದಲ್ಲಿ ಚೆಲ್ಲಾಡುವವರು, ಚರ್ಮಾಸನ ಚರ್ಮದಲ್ಲಿಟ್ಟಂಥ ರಸದ್ರವ್ಯ ಲಿಂಗಾಭಿಷೇಕ ಪಾದಾಭಿಷೇಕ ಪಂಚಾಮೃತ ಪಂಚಕಜ್ಜಾಯ ಪರಮಾನ್ನ ಫಲಹಾರವೆಂದು ಆಡಂಬರವ ಹರಹಿ, ಲಿಂಗಾರ್ಚನೆ ನೈವೇದ್ಯ ಪಾದಪೂಜೆಯ ನೈವೇದ್ಯಭುಂಜಿಸಿ, ಮತ್ತೆ ನಾಚಿಕೆಯಿಲ್ಲದೆ ಭಕ್ತ ಜಂಗಮ ಪ್ರಸಾದಿಗಳೆಂಬವರು, ಹೋಮ ನೇಮ ಭಸ್ಮ ಯಜ್ಞಾದಿ ಕೃತ್ಯವ ಮಾಡಿ ಅಮಲು ಮೊದಲಾದ ಲಾಹರಿಭುಂಜಕರು, ಮಂತ್ರತಂತ್ರಯಂತ್ರ ಶಕುನ ವೈದ್ಯಗಾರರು, ದ್ವಿನೇತ್ರ ಪ್ರಕಾಶದೊಳಗಣ ಕುರುಗಿನರುಹನರಿಯದವರು, ಅಪಾದಮಸ್ತಕ ಪರಿಯಂತರ ಸತ್ಪ್ರಾಣಿಸಿಕೊಂಡಿರ್ಪನಿಜವನರಿಯದವರು. ಗುರುಚರಪರಗಣ ಸನ್ಮಾನಿಗಳ ಆಜ್ಞೆಯ ಮೀರಿ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಬಾಹ್ಯರೆಂಜಲ ನುಡಿನಡೆಯ ವ್ಯವಹಾರಿಗಳ ಯೋಗ್ಯರಯೋಗ್ಯರೆಂದು ಗಣಸಾಕ್ಷಿಯಾಗಿ ಗುರುನಿರೂಪಣದಿಂದ ಡಂಗುರವ ಸಾರಿದೆ ಸಾರಿದೆ ಸಾರಿದೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./4 |
ಅನಾದಿ ಪ್ರಮಥಗಣನಾಯಕ ಶ್ರೀಗುರುಕರಜಾತ ತ್ರಿವಿಧೋದಕ ತ್ರಿವಿಧಪ್ರಸಾದಸ್ಥಲಸಂಬಂಧೋಪದೇಶ ಆಚಾರಭಕ್ತಗಣಾರಾಧ್ಯರಿಗೆ ಯೋಗ್ಯವುಳ್ಳ, ಆಚರಣೆಯೆ ಪ್ರಾಣವಾದ ತ್ರಿವಿಧಾಚಾರ ಸೂತ್ರವದಕ್ಕೆ. ಹರನಿರೂಪಣ ಸಾಕ್ಷಿ : ``ಕ್ರಿಯಾಚಾರೋ ಜ್ಞಾನಾಚಾರಃ ಭಾವಾಚಾರಸ್ತಥೈವ ಚ | ಸದಾ ಸನ್ಮಾರ್ಗಸಂಪೂಜ್ಯಂ ಆಚಾರಾಂಗಂ ಪ್ರಕೀರ್ತಿತಂ||'' ಸರ್ವೆಂದ್ರಿಗಳಲ್ಲಿ ಆಹ್ವಾನಿಸುವ ಪರಿಣಾಮವೆಲ್ಲ ತಿಯಕ್ಷರಮೂರ್ತಿ ಇಷ್ಟಲಿಂಗದ ಸೊಮ್ಮು ಸಂತೋಷವೆಂದರಿದು. ವಿಸರ್ಜಿಸುವ ಪರಿಣಾಮವೆಲ್ಲ ಪಂಚಾಕ್ಷರಮೂರ್ತಿ ಪ್ರಾಣಲಿಂಗದ ಸೊಮ್ಮು ಸಂತೋಷವೆಂದರಿದು, ಈ ಎರಡರ ಪರಿಣಾಮವೆಲ್ಲ ಷಡಕ್ಷರಮೂರ್ತಿ ಭಾವಲಿಂಗದ ಸೊಮ್ಮು ಸಂತೋಷವೆಂದರಿದು, ತ್ರಿವಿಧಾಚಾರಲಿಂಗಮೂರ್ತಿ ತಾನೇ ತಾನಾಗಿ, ಜಾಗ್ರದಿಂದ ಕ್ರಿಯಾಘನಗುರುವಚನ ಪ್ರಮಾಣಸಾಕ್ಷಿಯಿಂದ, ಗುದ ಗುಹ್ಯದ ವಿಸರ್ಜನೆಗಳ ಬಿಡುಗಡೆಯ ಪರಿಣಾಮ ಪ್ರಕ್ಷಾಲ್ಯವೆ ಸಮ್ಯಜ್ಞಾನಾನಂದವಾಗಿ, ನಾಸಿಕ ಜಿಹ್ವೆಯ ವಿಸರ್ಜನೆಗಳ ಬಿಡುಗಡೆಯ ಪರಿಣಾಮ ಪ್ರಕ್ಷಾಲ್ಯವೆ ಸತ್ಕ್ರಿಯಾನಂದವಾಗಿ, ಇಷ್ಟಲಿಂಗಜಂಗಮದಾರ್ಚನೆಯರ್ಪಿತವಧಾನನುಭಾವಸುಖ ಸಮರತಿ ವಿಲಾಸದ ಪರಿಣಾಮದಾಹ್ವಾನವೆ ಸಮ್ಯಜ್ಞಾನಾನಂದವಾಗಿ, ಗುದಗುಹ್ಯಗಳೆರಡು ಕ್ರಿಯಾಶಕ್ತಿ ಜ್ಞಾನಶಕ್ತಿಸ್ವರೂಪವೆನಿಸಿ, ಪ್ರಮಥಗಣ ಒಪ್ಪಿ ಸೊಪ್ಪಡಗಿದ ನಿಃಪತಿಯನೈದುವದೆ ಮುಕ್ತಿಸ್ವರೂಪವು. ಇಷ್ಟಲಿಂಗ ಜಂಗಮರೊಪ್ಪಿತದ ಸುಗಂಧ ಸುರಸದ್ರವ್ಯಗಳ ಪವಿತ್ರಮುಖವನರಿದು, ಮಂತ್ರಾಹ್ವಾನದ ನಿಜನಿಷ್ಠೆಯಗಲದೆ, ಅಲ್ಲಿ ತಟ್ಟಿಮುಟ್ಟುವ ಕಾಯದ ಕೈಯ ಸುಚಿತ್ತ ಸುಬುದ್ಧಿಯ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ, ಇವು ನಾಲ್ಕು ಇಷ್ಟಲಿಂಗಾಲಯವೆಂದರಿದು, ಗುರುಪೀಠದಾಧಾರ ಸ್ವಾಧಿಷ್ಠಾನದ ಕ್ರಿಯಾಚಾರದ ಮನೆ ಕಾಣಿರಣ್ಣಗಳಿರಾ. ಅಲ್ಲಿಂದ ಪಾದ ಪಾಣಿಗಳ ತಟ್ಟುಮುಟ್ಟಿನ ವಿಸರ್ಜನೆಗಳ ಪ್ರಕ್ಷಾಲ್ಯದ ಪರಿಣಾಮವೆ ಸಮ್ಯಜ್ಞಾನಾನಂದವಾಗಿ, ನೇತ್ರ ತ್ವಗೇಂದ್ರಿಯದ ವಿಸರ್ಜನೆಗಳ ಪ್ರಕ್ಷಾಲ್ಯದ ಪರಿಣಾಮವೆ ಸತ್ಕ್ರಿಯಾನಂದವಾಗಿ, ಪಾದ ಪಾಣಿಗಳೆರಡು ಇಚ್ಛಾಶಕ್ತಿ ಆದಿಶಕ್ತಿಸ್ವರೂಪವೆನಿಸಿ, ಪ್ರಮಥಗಣ ಒಪ್ಪಿ ಪರಮಾನಂದವನೈದುವುದೆ ಮುಕ್ತಿಸ್ವರೂಪವು. ಇಷ್ಟಲಿಂಗ ಜಂಗಮಾರೋಪಿತದ ಸುರೂಪು ಸುಸ್ಪರಿಶನದ್ರವ್ಯಗಳ ಪವಿತ್ರಮುಖವನರಿದು, ನಿಜದೃಷ್ಟಿ ಮಂತ್ರಾಹ್ವಾನದ ಪರಿಪೂರ್ಣನೈಷ್ಠೆಯಗಲದೆ, ಅಲ್ಲಿ ತಟ್ಟು ಮುಟ್ಟುವ ಕಾಯಕದ ಕೈಯ ನಿರಹಂಕಾರ ಸುಮನದ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ, ಇವು ನಾಲ್ಕು ಪ್ರಾಣಲಿಂಗಾಲಯವೆಂದರಿದು, ಚರಪೀಠದ ಮಣಿಪೂರಕನಾಹತದ ಜ್ಞಾನಾಚಾರದ ಮನೆಯ ಕಾಣಿರಣ್ಣಗಳಿರಾ. ಅಲ್ಲಿಂದ ವಾಕು ಪಾಯುವಿನ ದುಃಕೃತದ ತಟ್ಟುಮುಟ್ಟಿನ ವಿಸರ್ಜನೆಗಳ ಪರಮಾನಂದ ಚಿಜ್ಜಲದಿಂ ಪ್ರಕ್ಷಾಲ್ಯದ ಪರಿಣಾಮವೆ ಸಮ್ಯಜ್ಞಾನಾನಂದವಾಗಿ, ಶ್ರೋತ್ರದ ಶಬ್ದದ ದುಃಕೃತ್ಯದ ತಟ್ಟುಮುಟ್ಟಿನ ವಿಸರ್ಜನೆಗಳ ಪರಿಪೂರ್ಣಾನಂದಜಲದಿಂ ಪ್ರಕ್ಷಾಲ್ಯದ ಪರಿಣಾಮವೆ ಸತ್ಕ್ರಿಯಾನಂದವಾಗಿ, ವಾಕು ಪಾಯುಗಳೆರಡು ಪರಶಕ್ತಿ ಚಿಚ್ಛಕ್ತಿ ಸ್ವರೂಪವೆನಿಸಿ, ಪ್ರಮಥಗಣ ಒಪ್ಪಿ, ಪರಮಾನಂದವನೈದುವುದೆ ಮುಕ್ತಿಸ್ವರೂಪವು. ಇಷ್ಟಲಿಂಗ ಜಂಗಮಾರೋಪಿತದ ಸುಶಬ್ದ ಸುತೃಪ್ತಿದ್ರವ್ಯಗಳ ಪವಿತ್ರಮುಖವನರಿದು, ಪರನಾದ ಬಿಂದು ಕಳೆಗಳ ಮಂತ್ರಜ್ಞಾನದ ಪರಿಪೂರ್ಣನೈಷ್ಠೆಯಗಲದೆ, ಅಲ್ಲಿ ತಟ್ಟುಮುಟ್ಟುವ ಕಾಯದ ಕೈಯಲ್ಲಿ ಸುಜ್ಞಾನ ಸದ್ಭಾವದ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ, ಇವು ನಾಲ್ಕು ಭಾವಲಿಂಗಾಲಯವೆಂದರಿದು, ಪರಪೀಠದ ವಿಶುದ್ಧಿ ಆಜ್ಞಾಮಂಟಪ ಶೂನ್ಯಸಿಂಹಾಸನದ ಭಾವದಾಚಾರದ ಮನೆ ಕಾಣಿರಣ್ಣಗಳಿರಾ. ಇಂತೆಸೆವ ತ್ರಿವಿಧಾಚಾರಸಂಪನ್ನರೆ ಕೂಡೊಂದೊಡಲಾಗಿ, ಮನದ ಮಾಯಾಪಾಶವ ಕಡಿದು ಕಂಡ್ರಿಸುತ್ತ , ತಮ್ಮ ತಾವರಿದು, ನಡೆನುಡಿ ಒಂದಾಗಿ, ಮಾಯಾಭೋಗಾಪೇಕ್ಷೆಯ ನೆರೆ ನೀಗಿ, ತ್ರಿವಿಧಾಚಾರಬ್ರಹ್ಮವಾಗಿ, ತ್ರಿಗುಣಗಳಡಿಮೆಟ್ಟಿ ನಿಂದ ನಿಜೋತ್ತಮರಿಗಿದೀಗ ತಮ್ಮ ಮನಸಂಬಂಧವಾದ ನಿಜಾಲಯಕ್ಕೆ ಯೋಗ್ಯವಾದ ತ್ರಿವಿಧಾಚಾರದಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./5 |
ಅನಾದಿ ಶರಣಲಿಂಗ ಗುರುಭಕ್ತ ಜಂಗಮದ ಏಕಸಮರಸೈಕ್ಯ ಅಭಿನ್ನರ್ಚನೆಗಳಲ್ಲಿ ತೀರ್ಥಪ್ರಸಾದ ಪೂಜೆಯ ಸಂಬಂಧವೆನಿಸಿ, ಪೂರ್ವಪುರಾತನೋಕ್ತಿಯಿಂದ ಚಿದ್ಘನಪಾದತೀರ್ಥವ ಪಡಕೊಂಡ ಶಿವಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನು ಕಾಯ-ಕರಣ-ಭಾವಗಳ ಸಂಚಲಗಳನಳಿದುಳಿದು ನಿಃಸಂಚಲನಾಗಿ, ಕೇವಲ ಕಿಂಕುರ್ವಾಣ ಪರಿಪೂರ್ಣಸಾವಧಾನ ಭಯಭಕ್ತಿಯಿಂದ ಆ ತೀರ್ಥದ ಬಟ್ಟಲೆತ್ತಿ , ಆ ಜಂಗಮಲಿಂಗಮೂರ್ತಿಗೆ ಶರಣಾರ್ಥಿಸ್ವಾಮಿ, ಮಹಾಲಿಂಗಾರ್ಪಣವ ಮಾಡಬೇಕೆಂದು ಅಭಿವಂದಿಸಿದಲ್ಲಿ, ಆ ಜಂಗಮಲಿಂಗಶರಣನು ಘನಮಹಾಮಂತ್ರಸೂತ್ರವಿಡಿದು, ಪರಿಪೂರ್ಣಾನಂದ ಸಾವಧಾನಭಕ್ತಿ ಮುಖದಲ್ಲಿ ಸಲಿಸಿದಮೇಲೆ, ಪೂರ್ವದಂತೆ ಆ ಪ್ರಸನ್ನಪ್ರಸಾದತೀರ್ಥದ ಬಟ್ಟಲ ಗರ್ದುಗೆಯಲ್ಲಿ ಮೂರ್ತಗೊಳಿಸಿ ಆ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಜ್ಯೋತಿರ್ಮಯಸ್ವರೂಪ ಜಂಗಮಲಿಂಗ ಲಿಂಗಜಂಗಮದ ಶೇಷೋದಕ ಪರಿಪೂರ್ಣಾನಂದ ತೀರ್ಥ ಸ್ತೋತ್ರವಂ ಮಾಡಿ, ಸರ್ವಾಂಗಪ್ರಣುತನಾಗಿ ಪೊಡಮಟ್ಟು, ಹರಹರಾ ಶಿವಶಿವಾ ಜಯಜಯಾ ಕರುಣಾಕರ ಭಕ್ತವತ್ಸಲ ಭವರೋಗವೈದ್ಯ ಮತ್ಪ್ರಾಣನಾಥ ಮಹಾಲಿಂಗಜಂಗಮವೆಯೆಂದು, ಅಂತರಂಗದ ಪರಿಪೂರ್ಣರೆ ನಿರವಯಪ್ರಭು ಮಹಾಂತರ ಘನಶರಣ ಲಿಂಗ ತಾನೆಯೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./6 |
ಅನಾದಿ ಹರಗಣಮಾರ್ಗದ ಪ್ರಾಣಲಿಂಗಾಚಾರ ನಡೆನುಡಿ ಏಕವಾದ ಚಿದ್ಬೆಳಗೆ ಅಂತರಂಗವಾಗಿ, ಪರೋಪಕಾರನಿಮಿತ್ಯರ್ಥವಾಗಿ ಅದೇ ಅಂತರಂಗಸಂಬಂಧವಾದ ನಿಜಚಿತ್ಕಳೆಯ ಪ್ರಭಾವಿಸಿ, ಮಹದರುವೆಂಬ ಪರಮಗುರುವೆಂಬ ಮಾರ್ಗದ ಇಷ್ಟಲಿಂಗಾಚಾರ ನಡೆನುಡಿ ಒಂದೊಡಲಾದ ಚಿದ್ಬೆಳಗೆ ಬಾಹ್ಯರಂಗವಾಗಿ, ಉಭಯ ಸಂಬಂಧದಾಚರಣೆಗಳಿಂದ ಅಣುಮಾತ್ರ ಹೋದಲ್ಲದೆ ಬಾಹ್ಯದಲ್ಲಿ ಸತ್ಕ್ರಿಯಾವರ್ತಕ, ಅಂತರಂಗದಲ್ಲಿ ಸಮ್ಯಜ್ಞಾನವರ್ತಕದಿರವಿನ ಮೂಲಾಧಾರ ಭಾವಲಿಂಗವೆಂಬ ನಿಜಶರಣಜಂಗಮದೇವನ ಚಿದಂಗ ಚಿದ್ಘನಲಿಂಗದ ಅಖಂಡ ಜ್ಯೋತಿರ್ಮಯಗೋಳಕದ ಕೊನೆಮೊನೆಯೊಳಗೆ ನೆಲಸಿರ್ಪ ಸತ್ತುಚಿತ್ತಾನಂದ ಪರಬ್ರಹ್ಮದಿರವಿನ, ಕ್ರಿಯಾಮಂಡಲ ಸುಜ್ಞಾನಮಂಡಲ ಮಹಾಜ್ಞಾನಮಂಡಲವೆಂಬ ಷಟ್ಪ್ರಕಾರದ ಮನೆಯೊಳ್ ತನ್ನ ತಾನು ಚುಂಬಿಸಿದಾನಂದದಿರವಿನ ಬೆಳಗ ಕಂಡು, ಕಣ್ಮುಚ್ಚಿ, ಮನ ಮೈಮರೆದು, ಬಚ್ಚಬರಿಯಾನಂದವಾಗಿ, ತಮ್ಮ ತಾವರಿದು, ಸುಸಂಗಸಂಗಿಗಳಾಗಿ, ನಿಜಮೋಕ್ಷದಖಣಿಯೆಂಬ ಮುಕ್ತಿಮಂದಿರವ ಹೊಕ್ಕು ಹೊರಡದ ಭಾವಭರಿತರೆ ನಿಮ್ಮ ಪ್ರತಿಬಿಂಬರು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./7 |
ಅನಾದಿಪ್ರಮಥಗಣ ಸನ್ಮಾನಿಗಳಾದವರ ಹೊಂದಿ ಹೊರೆದ ಪಿತ-ಮಾತೆ, ಸತಿ-ಸುತ, ಸಹೋದರ-ನಂಟರು ಮೊದಲಾದವರಿಗೆ ಸಲುವಂಥ ಪಂಚಾಚಾರದಿರವಿನ ಸೂತ್ರ. ಹರನಿರೂಪಣ ಸಾಕ್ಷಿ : ``ಗುರುಲಿಂಗಜಂಗಮಶ್ಚೈವ ಪ್ರಸಾದಂ ಪಾದವಾರಿ ಚ | ಲಿಂಗಬಾಹ್ಯಾನ್ನಜಾನಾತಿ ಅಣುಮಾತ್ರಂ ಚ ಕಾರಯೇತ್ || ಲಿಂಗಾಚಾರಸ್ಸದಾಚಾರಃ ಶಿವಾಚಾರಸ್ತಥೈವ ಚ | ಗಣಾಚಾರಃ ಭೃತ್ಯಾಚಾರೋ ಪಂಚಾಚಾರಾಃ ಪ್ರಕೀರ್ತಿತಾಃ ||'' ತಮ್ಮಾಚಾರ ಗೃಹದಲ್ಲಿ ಕ್ರಿಯಾಭಾಂಡಂಗಳೊಳಗೆ ಶುಚಿರುಚಿಯಿಂದ ಗುರುಲಿಂಗಜಂಗಮಾರ್ಪಣಕ್ಕೆಂದು ಭಾವಭರಿತವಾಗಿ ಶೋಧಕತ್ವದಿಂದ ಮಂತ್ರಸ್ಮರಣೆಯಿಂದ ಪಾಕಂಗೈದು, ಮಧುರ ಒಗರು ಖಾರ ಆಮ್ಲ ಕಹಿ ಲವಣ ಮೊದಲಾದ ಷಡ್ರಸದ್ರವ್ಯಗಳ ಇಷ್ಟಲಿಂಗ ಬಾಹ್ಯರಿಗೆ ಹಾಕಲಾಗದು. ಅವರ ಕಣ್ಣಿಗೆ ದರ್ಶನದಿಂದ ಪಾಕದ ಭಾಂಡಗಳ ಕಾಣಗೊಡಲಾಗದು. ಅವರ ಸಂಭಾಷಣೆಗಳಿಂದ ಪಾಕವ ಮಾಡಲಾಗದು. ಭಕ್ತಲಿಂಗಜಂಗಮಕ್ಕೆ ಸಂಭಾಷಣೆಯಿಂದ ನೀಡಲಾಗದು. ತನ್ನ ಶ್ರೀಗುರು ಕರುಣಿಸಿದ ಲಿಂಗದೇವನ ನಿಮಿಷಾರ್ಧವಗಲಿರಲಾಗದು. ಆ ಲಿಂಗವಲ್ಲದೆ ಅನ್ಯವಾಗಿ ಭೂಪ್ರತಿಷ್ಠಾದಿಗಳ ನೆನೆಯಲಾಗದು, ಅರ್ಚಿಸಲಾಗದು, ವಂದಿಸಲಾಗದು. ಜಡನೇಮವ್ರತ ತಿಥಿ ಉಪವಾಸಗಳ ಮಾಡಲಾಗದು. ದೇಹ ದಂಡಿಸಿದೊಂದು ಕಾಯಕ ಬೇಡಿತಂದುದೊಂದು ಕಾಯಕವಲ್ಲದೆ ಅಕೃತ್ಯದಿಂದ ಕಿರಾತರಂತೆ ಗಳಿಕೆಗೊಳಗಾಗಲಾಗದು. ಶಿವಲಿಂಗಲಾಂಛನಕ್ಕೆ ಅನ್ನುದಕಾದಿವಸ್ತ್ರಪಾವುಡಗಳ ವಂಚಿಸಿ ವಿಷಯವ್ಯಸನಿಗಳಾಗಲಾಗದು. ಆಚಾರ್ಯಬಾಹ್ಯವಾದ ನೀಚಾಶ್ರಯಗಳಲ್ಲಿರಲಾಗದು. ಆಚಾರಬಾಹ್ಯರ ಸಮರಸಕ್ರಿಯಗಳ ಬಳಸಲಾಗದು. ಸದಾಚಾರ ಭಕ್ತಗಣ ಗುರುಲಿಂಗಜಂಗಮಕ್ಕೆ ರಾಗದ್ವೇಷದಿಂದ ಗರ್ವಿಸಿ ನುಡಿಯಲಾಗದು. ಸರ್ವರು ಒಂದೊಡಲಾಗಿ, ಲಿಂಗನಡೆ, ಲಿಂಗನುಡಿ, ದೃಢಚಿತ್ತದಿಂದ ಸರ್ವಭೋಗವ ನೀಗಿ, ಪಂಚಾಚಾರಬ್ರಹ್ಮವಾಗಿ, ಆರುವೈರಿಗಳಡಿಮೆಟ್ಟಿನಿಂದ ನಿಜೋತ್ತಮರಿದೀಗ ತಮ್ಮ ತನುಸಂಬಂಧವಾದ ನಿಜಾಲಯಕ್ಕೆ ಯೋಗ್ಯವಾದ ಪಂಚಾಚಾರದಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./8 |
ಅನಾದಿಪ್ರಮಥಗಣದಿರವನರಿದು, ಸತ್ಯಶುದ್ಧ ನಡೆನುಡಿದೃಢಚಿತ್ತರಾಗಿ, ಇಹ ಪರ ಭೋಗಯೋಗದ ಬಯಕೆಯ ನೀಗಿ, ನಿರವಯಲ ಸೇರಿ, ನಿತ್ಯಮುಕ್ತರಾಗಬೇಕಾದ ಭಕ್ತ ಜಂಗಮ ಗುರುಲಿಂಗಕ್ಕೆ ಆಚಾರವೆ ಗುರು, ಆಚಾರವೆ ಲಿಂಗ, ಆಚಾರವೆ ಜಂಗಮ, ಆಚಾರವೆ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ, ಭಕ್ತಗಣಪ್ರಸಾದಿ ಶರಣೈಕ್ಯರೆಂದುದು ಗುರುವಚನ; ಅದು ಕಾರಣವಾಗಿ, ಆಚಾರದ ಕುರುಹ ತಿಳಿದು, ಆಚರಿಸಿ, ಸಂಬಂಧವಿಟ್ಟು, ತನ್ನ ತಾನಾಗಬಹುದಲ್ಲದೆ, ಆಚಾರವನುಲ್ಲಂಘಿಸಿ, ಆಚಾರವ ಬಿಟ್ಟು, ಅನಾಚಾರಸಂಗಸಮರತಿಯ ಬಳಸಿದೊಡೆ ತನ್ನ ತಾನಾಗಬಾರದೆಂದುದು ಹರಗುರುವಾಕ್ಯವು. ಇದ ತಿಳಿದ ಮಹಾಂತರು, ಆಚಾರವನಾಚರಿಸಬೇಕು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./9 |
ಅನಾದಿಪ್ರಮಥಗಣನಾಯಕ ಪರಮಾರಾಧ್ಯ ಶ್ರೀಗುರುಕರಜಾತ ಏಕವಿಂಶೋಪದೇಶ ಷಟ್ಪ್ರಸಾದ ಪಾದೋದಕ ಮಂತ್ರಸ್ವರೂಪ ಷಟ್ಸ್ಥಲಸಂಬಂಧವಾದ ಭಕ್ತ ಮಹೇಶ ಗಣಾರಾಧ್ಯರಿಗೆ ಯೋಗ್ಯವುಳ್ಳ ತ್ರಿವಿಧಾಚಾರಸಂಬಂಧವೆ ಪ್ರಾಣವಾದ ಸೂತ್ರವದಕ್ಕೆ ಹರನಿರೂಪಣ ಸಾಕ್ಷಿ: `ಸತ್ಯಾಚಾರಂ ನಿತ್ಯಾಚಾರಂ ಧರ್ಮಾಚಾರಂ ವರಾನನೆ' ಎಂದುದಾಗಿ, ಜಾಗ್ರಾವಸ್ಥೆಯ ವಿಶ್ವಪ್ರಪಂಚಿನ ಶಿವಾತ್ಮನ ಪಾಶಬದ್ಧನಡೆನುಡಿಗಳ ಹೊದ್ದಲೀಯದೆ, ಕೇವಲ ಗುರುವಾಕ್ಯಪ್ರಮಾಣವಾಗಿ, ಪೂರ್ವಪುರಾತನೋಕ್ತಿ ವಚನಸಾರಾಮೃತವಿಡಿದು, ಇಷ್ಟಲಿಂಗದೊಳಗಣ ನವಲಿಂಗಮಂ ಭೇದಿಸಿ, ಸತ್ಕ್ರಿಯೆ ಸಮ್ಯಜ್ಞಾನ ಸದ್ಭಾವವಿಡಿದು, ಸತ್ಕ್ರಿಯಾಜಪೋಪದೇಶ ಸಮ್ಯಜ್ಞಾನಜಪೋಪದೇಶ ಮಹಾಜ್ಞಾನಜಪೋಪದೇಶ ಪರಿಪೂರ್ಣಜ್ಞಾನಜಪೋದೇಶದ ಮಹಾಬೆಳಗನರಿದು, ಫಲಪದದಾಯುಷ್ಯದ ಭೋಗಯೋಗಮಂ ನೆರೆ ನೀಗಿ, ಸತ್ಕ್ರಿಯೆ ಘನಗುರುಲಿಂಗಜಂಗಮದ ಕೃಪಾನಂದದ ನಿರಾಸೆ ನಿರ್ಲಜ್ಜ ನಿರ್ವಿಷಯ ನಿರ್ಮೊಹ ನಿರಾಪೇಕ್ಷ ನಿರ್ದೆಶ ನಿರಾಶ್ರಯ ನಿರವಯಬ್ರಹ್ಮದ ನಿರಾವರಣನಾಗಿ, ತನ್ನ ತಾನರ್ಚಿಸಿ ಕೊಡುವಲ್ಲಿ ಕೊಂಬಲ್ಲಿ ನುಡಿವಲ್ಲಿ ನಡೆವಲ್ಲಿ ಕೈ ಎರಡಾಗದೆ, ನುಡಿ ಎರಡಾಗದೆ, ಪಾದವಚನಾನಂದದಿಂದ ಶೀಲವ್ರತಾಚಾರ ನಿತ್ಯನೇಮಂಗಳಲ್ಲಿ ಅಭಿನ್ನಸ್ವರೂಪರಾಗಿ, ಯಥಾರ್ಥದಿಂದ ಇಹಪರಲೋಕದ ಭೋಗಮೋಕ್ಷಾಪೇಕ್ಷ ಹೊದ್ದದಿರ್ಪುದೆ ಮಾರ್ಗಾಚರಣೆಯ ಸತ್ಯದಾಚಾರದಿರವಿನ ಇಷ್ಟಲಿಂಗ ತಾನೆ ನೋಡಿರಣ್ಣಗಳಿರಾ. ಅಲ್ಲಿಂದ ಸ್ವಪ್ನಾವಸ್ಥೆಯ ತೈಜಸನ ಪ್ರಪಂಚಿನ ಅಂತರಾತ್ಮನ ಪಾಶಬದ್ಧ ನಡೆನುಡಿಗಳಂ ಹೊದ್ದಲೀಯದೆ, ಕೇವಲ ಘನಲಿಂಗವಾಕ್ಯ ಪ್ರಮಾಣವಾಗಿ, ಪೂರ್ವಪುರಾತನೋಕ್ತಿ ವಚನ ಸಾರಾಮೃತವಿಡಿದು, ಪ್ರಾಣಲಿಂಗದೊಳಗಣ ನವಲಿಂಗಮಂ ಭೇದಿಸಿ, ಮಹಾಮಂತ್ರದ ಚಿದ್ಬೆಳಗನರಿದು, ಮಹಾಬೆಳಗಾಗಿ, ಸುಳಿಗಾಳಿಯಂತೆ ಲಿಂಗಪ್ರದಕ್ಷಿಣದಿಂದ ಸುಳಿದಾಡಿ, ಪ್ರದಕ್ಷಿಣಮಂ ಮಾಡುತ್ತ, ಹರಗಣ ಸಮ್ಮೇಳಮಂ ಕೂಡಿಕೊಂಡಾಡುತ್ತಂ, ಭವರೋಗವೈದ್ಯರಾಗಿರ್ಪುದೆ ನಿತ್ಯಾಚಾರದಿರವಿನ ಪ್ರಾಣಲಿಂಗಸಂಧಾನದ ಮೀರಿದಾಚರಣೆಯ ಚಿದ್ಭ್ರಹ್ಮಮೂರ್ತಿ ಮಹಾಘನ ಪ್ರಾಣಲಿಂಗ ತಾನೆ ನೋಡಿರಣ್ಣಗಳಿರಾ. ಅಲ್ಲಿಂದಂ ಸುಷುಪ್ತ ತೂರ್ಯ ತೂರ್ಯಾತೀತ ನಿರವಯನೆಂಬ ಪ್ರಜ್ಞಾಪರಿಪೂರ್ಣ ಪರಾತ್ಪರ ನಿರಾತಂಕನ ಪ್ರಪಂಚಿನ ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಆನಂದಾತ್ಮನ ನಟನಾಟಕ ಕಪಟವೇಷಮಂ ಹೊದ್ದಲೀಯದೆ, ಕೇವಲ ಪರಿಪೂರ್ಣಾನಂದ ಜ್ಯೋತಿರ್ಮಯನಚಲಾನಂದ ನಿಃಶಬ್ದ ಚಿದ್ಬ್ರಹ್ಮಮಂ ಕೂಡಿ, ಭಿನ್ನಭಾವವಿಲ್ಲದೆ, ತಾನೇ ತಾನಾಗಿ, ಸಕಲನಿರಾಕಾರ ಜಾಗ್ರಸ್ವಪ್ನ ತನುಮನದ ಅಭೀಷ್ಟಾದಿಗಳಿಗೆ ಚೈತನ್ಯ ತಾನಾಗಿ, ತನಗೊಂದು ಸುಖ-ದುಃಖ, ಪುಣ್ಯ-ಪಾಪ, ಸ್ತುತಿ-ನಿಂದ್ಯಾದಿಗಳ ಹೊದ್ದಿಗೆಯಿಲ್ಲದೆ, ಬೆಳಗಿಂಗೆ ಮಹಾಬೆಳಗಾಗಿ, ಬಯಲೊಳಗೆ ಮಹಾಬಯಲಾಗಿರ್ಪುದೆ ಭಾವಲಿಂಗಸಂಧಾನದ ಪರಿಪೂರ್ಣಾಚರಣೆಯ ಸದ್ಧರ್ಮದಾಚಾರದಿರವು ಕಾಣಿರಣ್ಣಗಳಿರಾ. ಇಂತೆಸೆವ ಜಾಗ್ರಾವಸ್ಥೆಯೆ ಸಾಕಾರವಾದ ಇಷ್ಟಲಿಂಗವಾಗಿ, ಸ್ವಪ್ನಾವಸ್ಥೆಯೆ ನಿರಾಕಾರವಾದ ಪ್ರಾಣಲಿಂಗವಾಗಿ, ಸುಷುಪ್ತಾವಸ್ಥೆಯೆ ನಿರವಯವಾದ ಭಾವಲಿಂಗವಾಗಿ ಈ ತ್ರಿವಿಧಲಿಂಗಸ್ವರೂಪನೆ ಶರಣ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./10 |
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
![]() | ಮುಮ್ಮಡಿ ಕಾರ್ಯೇಂದ್ರ | ನೀಲಗಂಗಾಂಬಿಕೆ/ ನೀಲಾಂಬಿಕೆ (ನೀಲಮ್ಮ) | ![]() |