![]() | ಸಿದ್ಧಮಲ್ಲಪ್ಪ | ಬಾಹೂರ ಬೊಮ್ಮಣ್ಣ | ![]() |
ಗಜೇಶ ಮಸಣಯ್ಯ ವಚನಗಳು |
ಆಯ್ಕೆ ಮಾಡಿದ ವಚನ |
---|
ಅಂಗಸಂಗದಲ್ಲಿದ್ದು ಬಂದುದನೆ ಕಂಡು ಹಾವು ಹಸು ಮಗುವಿನಂತೆ ಆದೆ ನೋಡವ್ವಾ. ಕಂಗಳ ನೋಟದ ಸುಖಕ್ಕೆ ಮನವನೊಪ್ಪಿಸುವೆ. ಪತಂಗದ ಬೆಸನಿಯಂತೆ ಆದೆ ನೋಡವ್ವಾ. ಮದಾಳಿಯ ನಾಸಿಕದಂತೆ ಸುಳಿದು ಸುಖಬಡುವೆ. ಮಹಾಲಿಂಗ ಗಜೇಶ್ವರಾ ನಿನ್ನ ವಿನಯ ನೋಡವ್ವಾ./1 |
ಅಖಂಡ ಪರಿಪೂರ್ಣ ಲಿಂಗ ತಾನೆಯಾದ ಶರಣಂಗೆ ಲಿಂಗವೆಂಬುದೇನು ಹೇಳಾ? ಲಿಂಗ ಹೊರಗೊ ಒಳಗೊ ಎಂದು ಶಂಕಿಸಿ ನುಡಿವ ಶಂಕಿತರಂತಿರಲಿ. ಮುನ್ನ ಮುನ್ನವೆ ಮಹಾಲಿಂಗವಾದ ಬಳಿಕ ಮತ್ತೇನೆಂದುನೆನೆಯಲಿಲ್ಲ. ಮಹಾಲಿಂಗ ಗಜೇಶ್ವರನಲ್ಲಿ ನಿಜೈಕ್ಯವಾದ ಶರಣಂಗೆ ಮುಂದೆ ಒಂದೂ ಇಲ್ಲ, ಮಾಣು./2 |
ಅಗಲಲಿಲ್ಲದ ನಲ್ಲನನಗಲಿ ನೆರೆದೆಹೆನೆಂಬ ಕಾಮಿನಿಯರ ಭಂಗವ ನೋಡಾ! ಆ ನಮ್ಮ ನಲ್ಲನ ಅನುವಿನೊಳಿರ್ದು ನೆರೆದೆಹೆನೆಂಬ ಭರವೆನಗವ್ವಾ ಮಹಾಲಿಂಗ ಗಜೇಶ್ವರದೇವರನಗಲುವಡೆ ನಾನೇನು ಕಲ್ಲುಮನದವಳೆ ಅವ್ವಾ/3 |
ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ. ಸಂಸಾರವೆಂಬುದು ಹುಸಿ ಕಂಡಾ ಎಲವೋ! ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ. ದಿನದಿನದ ಸುಖ ಹುಸಿ ಕಂಡಾ ಎಲ್ಲವೊ! ಘನಘನವೆಂಬ ರೂಪಿಂಗೆ ರತಿಯಿಲ್ಲಯ್ಯಾ. ಮಹಾಲಿಂಗ ಗಜೇಶ್ವರನಲ್ಲಿ ತಿಳಿದು ನೋಡಾ ಎಲ್ಲವೊ!/4 |
ಅಪ್ಪಿನ ಸೋಂಕಿನ ಸುಖವನಗಲುವ ಮನಕ್ಕಿಂದ ಬಂಜೆಯಾಗಿಪ್ಪುದು ಕರಸುಖ ನೋಡವ್ವಾ. ಕಂಗಳ ನೋಟ ಮನಕ್ಕೆ ಸೈರಿಸದು, ಎಣೆಗೊಂಡು ಬಡವಾದ ಪರಿಯ ನೋಡವ್ವಾ. ತುಪ್ಪುಳನಿಕ್ಕಿದ ಹಂಸೆಯಂತಾದೆನವ್ವಾ ಮಹಾಲಿಂಗ ಗಜೇಶ್ವರನುಳಿದಡೆ./5 |
ಅರಳಿದ ಪುಷ್ಪ, ಪರಿಮಳಿಸದಿಹುದೆ ಅಯ್ಯಾ? ತುಂಬಿದ ಸಾಗರ, ತೆರೆನೊರೆಗಳಾಡದಿಹುದೆ ಅಯ್ಯಾ? ಆಕಾಶವ ಮುಟ್ಟುವವ, ಅಟ್ಟಗೋಲ ಹಿಡಿವನೆ ಅಯ್ಯಾ? ಪರದಲ್ಲಿ ಪರಿಣಾಮಿಯಾದ ಶರಣ, ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ./6 |
ಅವ್ವಾ, ನಾನು ಸೀರೆಯನುಡಲಮ್ಮೆನು. ಅಲ್ಲಿ ಗಂಡೆಣೆ ಇದ್ದೂದೆಂದೆಲೆ ಅವ್ವಾ. ಅವ್ವಾ, ಬೇಟದ ರತಿಯಲ್ಲಿ ಹುಟ್ಟಿ ಬೆಳೆದುದಯವಾದಳು. ಅವ್ವಾ, ಇಂದೆನ್ನ ಮಹಾಲಿಂಗ ಗಜೇಶ್ವರನುಳಿದನೆಂದಟ್ಟಿದಡೆ ಅವ್ವಾ, ನಾನು ಮುತ್ತಲಮ್ಮೆ ಅಲ್ಲಿ ಪ್ರತಿಬಿಂಬವಿದ್ದೂದೆಂದು./7 |
ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯಲ್ಲಿ ಲಿಂಗವುಂಟೆ? `ಸ್ವಯಮಾತ್ಮ ಪರೋಲಿಂಗ' ವೆಂದುಲಿವ ಬೀದಿಯ ಭಂಡರ ಮಾತ ಕೇಳಲಾಗದು. ತಿಲಕುಸುಮ ಪರಿಮಳದಂತೆ ಒಳ ಹೊರಗು ಪರಿಪೂರ್ಣ ಮಹಾಲಿಂಗ ಗಜೇಶ್ವರಾ./8 |
ಅಹುದಹುದು, ಲಿಂಗವಿಲ್ಲದೆ ಶಿಷ್ಯನನರಿಯಬಲ್ಲ ಗುರು, ಲಿಂಗವಿಲ್ಲದೆ ಗುರುವನರಿಯಬಲ್ಲ ಶಿಷ್ಯ. ಗುರುವನರಿಯಬಲ್ಲ ಶಿಷ್ಯ, ಶಿಷ್ಯನನರಿಯಬಲ್ಲ ಗುರು, ಇವರಿಬ್ಬರ ಭೇದವ ನೀನೆ ಬಲ್ಲೆ ಗಜೇಶ್ವರಾ./9 |
ಆಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ. ಕಂಡ ಕನಸು ದಿಟವಾದಡೆ ಆವ ನಮ್ಮ ನಲ್ಲನವ್ವಾ. ಮನಸುಳ್ಳವರು ನೀವು ಪುಣ್ಯಗೈದಿರವ್ವಾ ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ. ಕನಸಿನ್ನೆಲ್ಲಿ ಬಹುದವ್ವಾ./10 |
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
![]() | ಸಿದ್ಧಮಲ್ಲಪ್ಪ | ಬಾಹೂರ ಬೊಮ್ಮಣ್ಣ | ![]() |