![]() | ಕಡಕೋಳ ಮಡಿವಾಳಪ್ಪ | ಮೂರುಸಾವಿರ ಮುಕ್ತಿಮುನಿ | ![]() |
ಮುಮ್ಮಡಿ ಕಾರ್ಯೇಂದ್ರ -ಮುಮ್ಮಡಿ ಕಾರ್ಯ ಕ್ಷಿತೀಂದ್ರನ ವಚನಗಳು |
ಆಯ್ಕೆ ಮಾಡಿದ ವಚನ |
---|
ಅಂಗದೊಳಗಿರ್ಪ ಶಕ್ತಿಯಾತ್ಮಸಂಗದಿಂ ಪ್ರಕಾಶಮಾಗಿ, ಆ ಶರೀರಕ್ಕೂ ತನಗೂ ಭೇದಮೆನಿಸಿಕೊಳ್ಳಲು, ಅಲ್ಲಿ ಕರ್ಮವು ಉತ್ಪನ್ನಮಾಗಿ, ಆ ಕರ್ಮಮುಖದಿಂ ಪ್ರಪಂಚವನವಗ್ರಹಿಸಲೋಸುಗ ಸೃಷ್ಟಿಸ್ಥಿತಿಸಂಹಾರಂಗಳೆಸಗೆ, ಆ ಶರೀರವು ವ್ಯಯವನೆಯ್ದಿ, ಪೃಥ್ವಿಯ ಚರಿಸುವಂದದಲಿ ಲಿಂಗದಲ್ಲಿರ್ಪ ಶಿವನಿಂದ ತತ್ವಪ್ರಕಾಶಮಾಗಿ, ಮನಸ್ಸಿನಲ್ಲಿ ಭೇದತೋರದೆ ಕೂಡಿದಲ್ಲಿ, ಜ್ಞಾನಮುತ್ಪನ್ನಮಾಯಿತ್ತು. ಜ್ಞಾನಮುಖದಿಂ ಮನ ಮಹವನವಗ್ರಹಿಸಿ, ಸತ್ತುಚಿತ್ತಾನಂದದಿಂ ಸಾಧಿಸುತ್ತಿರಲು, ಮನವಳಿದು ಲಿಂಗಮಪ್ಪುದು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./1 |
ಅಖಂಡಕಾಲಾತೀತಮಾದ ಮಹಾಲಿಂಗವೇ ಆದಿಶಕ್ತಿಯ ಸಂಗದಿಂ ಸೋಮನಾದುದರಿಂ ಆದಿತ್ಯನೇ ಶಕ್ತಿಯು, ಸೋಮನೇ ಶಿವನು. ಆದಿತ್ಯ ಸೋಮರಿಂದುದಯಿಸಿದ ಶನಿಯೇ ವಿಷ್ಣುವು, ಶುಕ್ರನೇ ಲಕ್ಷ್ಮಿಯು. ಆ ಶನಿ ಶುಕ್ರರಿಂದುದಿಸಿದ ಬೃಹಸ್ಪತಿಯೇ ಬ್ರಹ್ಮನು, ಅದಕೆ ಬುಧನೇ ಶಕ್ತಿ; ಆ ಬೃಹಸ್ಪತಿ ಬುಧರಿಂದುದಿಸಿದ ಪ್ರಪಂಚವೇ ಮಂಗಳ, ಸೋಮನೇ ಬ್ರಾಹ್ಮಣನು, ಅದಕೆ ಕ್ಷತ್ರಿಯ ಶಕ್ತಿ, ಶನಿಯೇ ಕ್ಷತ್ರಿಯನು, ಅದಕೆ ವೈಶ್ಯಶಕ್ತಿ; ಬೃಹಸ್ಪತಿಯೇ ವೈಶ್ಯನು, ಅದಕೆ ಬ್ರಾಹ್ಮಣಶಕ್ತಿ; ಅಂಗಾರಕನೇ ಶೂದ್ರನು, ಅದಕೆ ಆತ್ಮಶಕ್ತಿ. ಇಂತು ಕೃಷ್ಯಾದಿಕರ್ಮಂಗಳಿಗೆ ಕಾರಣಮಾಗಿಹ ಸೋಮನೇ ಸಪ್ತವಾರಂಗಳೊಳು ಅಂಶವಾದೊಡೆ, ಆದಿತ್ಯನಲ್ಲಿ ಶನಿರೂಪಮಾಗಿ ತಾನೇ ಜನಿಸುತ್ತಿಹನು. ಈ ಪ್ರಕಾರದಲ್ಲಿ ಸಪ್ತವಾರಂಗಳು ಒಂದಕ್ಕೊಂದು ಕಾರಣಮಾಗಿಹವು. ಸೋಮಾದಿತ್ಯ ಶನಿ ಶುಕ್ರಾಂಗಾರಕರು ಉಪಾಸನಾದಿ ಪೂಜಾಯೋಗ್ಯರಾಗಿಹರು. ಬೃಹಸ್ಪತಿ ಬುಧರು ಬ್ರಹ್ಮಸರಸ್ವತೀ ಸ್ವರೂಪಿಗಳಾದುದುರಿಂದ ಉಪಾಸನಾಕರ್ಮಯೋಗ್ಯರಲ್ಲದಿಹರು. ಪರಮಶಾಂತಿಮಯನಾದ ಶಿವನು ಉಗ್ರಸ್ವರೂಪವಾದ ಆದಿಶಕ್ತಿಯಂ ಕೂಡಿದುದರಿಂ ತಮೋಗುಣಸ್ವರೂಪಿಯಾಗಿಹನು, ಉಗ್ರಸ್ವರೂಪವಾದ ವಿಷ್ಣುವು ಶಾಂತಶುಕ್ಲಸ್ವರೂಪಮಾದ ಲಕ್ಷ್ಮಿಯೊಳಗೆ ಕೂಡಿದುದರಿಂ ಸತ್ವಗುಣಸ್ವರೂಪಿಯಾಗಿಹನು, ಹೀಗೆ ಈ ಈರ್ವರು ಸಂಸಾರಯುಕ್ತರಾಗಿರಲು, ಈ ಪ್ರಪಂಚದಲ್ಲಿ ಸಂಸಾರಬದ್ಧನಾದ ನಾನು ನಿಜವಾಸನೆಯಲ್ಲಿ ಸಂಚರಿಸಬಲ್ಲೆನೇನಯ್ಯಾ? ಮಿಥ್ಯೆಯಲ್ಲಿ ನನ್ನಂ ಕೂಡಿ ಸತ್ಯಪ್ರಕಟನವಂ ಮಾಡಲಿಲ್ಲೆಂದು ನನ್ನಂ ಸಾಧಿಸುವುದು ನಿನಗೆ ಯೋಗ್ಯವೇ? ನಿನ್ನಂತೆ ನನ್ನಂ ನೋಡದಿದರ್ೊಡೆ ಆತ್ಮವತ್ಸರ್ವಭೂತಾನಿ ಎಂಬ ಶ್ರುತ್ಯರ್ಥಕ್ಕೆ ಹಾನಿ ಬಾರದಿರ್ಪುದೆ? ಶ್ರುತಿಯಬದ್ಧದಲ್ಲಿ ಕರ್ಮಕ್ಕೆ ಹಾನಿಯಪ್ಪುದು, ಕರ್ಮನಾಶವೇ ಸಂಸಾರಕಾರಣವು. ಇದನರಿತು ನನ್ನ ಮಿಥ್ಯಾದುರ್ಗುಣಂಗಳಂ ವಿಚಾರಿಸಿದೆ ನನ್ನಂ ಪರಿಗ್ರಹಿಸಿ ಕೊಡಿದೊಡೆ, ನಿನ್ನ ಸರ್ವಜ್ಞತ್ವವು ಸಾರ್ಥಕಮಾಗಿ ನಿನ್ನ ಕ್ರೀಡೆಗೆ ಕೇಡುಬಾರದು ಕಂಡ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /2 |
ಅಖಂಡಪರಿಪೂರ್ಣವಾಗಿ ಸಕಲವೂ ತಾನೇ ಆಗಿರ್ಪ ಸದಾಶಿವನು, ಸಕಲ ಸುಖದುಃಖಾದ್ಯನುಭವಂಗಳನನುಭವಿಸುತ್ತಾ, ನಿತ್ಯಾನಂದಮಯನಾಗಿರ್ಪನದೆಂತೆಂದೊಡೆ : ಸ್ತ್ರೀವಂಶಗತನಾದವಂಗೆ ನಖಕ್ಷತ, ದಂತಕ್ಷತ, ತಾಡನ, ಅರ್ಥವ್ಯಯಾದಿ ಸಕಲ ಸುಖ ದುಃಖಂಗಳು ಸುಖರೂಪಮಾಗಿ ತೋರುತ್ತಿರ್ಪಂತೆ. ಮಹಾದೇವಿಯೊಡನೆ ಕ್ರೀಡಿಸುತ್ತಿರ್ಪ ಶಿವನಿಗೆ ಸಕಲಸುಖದುಃಖಂಗಳಾನಂದಜನಕಮಾಗಿರ್ಪವು. ಜೀವಾಂಶಗಳಾಗಿರ್ಪ ಗುಣಂಗಳು ಆ ಜೀವಸ್ವರೂಪಸ್ವಭಾವವನರಿಯದಿರ್ಪಂತೆ, ನಿನ್ನ ಮಹಿಮೆಯಂ ಕಿಂಚಿತಜ್ಞನಾದ ನಾನೆತ್ತ ಬಲ್ಲೆನು ? ಮನವಂ ಜಯಿಸಬಲ್ಲ ಸರ್ವಜ್ಞನಾದ ಜೀವನು ಗುಣಂಗಳು ಮಾಡಿದ ದುಷ್ಕರ್ಮಂಗಳಂ ಹೊಂದದೆ ಸ್ವಸ್ವರೂಪದಲ್ಲಿ ಪ್ರಕಾಶಿಸುತ್ತಿರ್ಪಂತೆ, ಬ್ರಹ್ಮಾದಿ ಸಕಲಪ್ರಪಂಚವಂ ಸಂಹರಿಸಲು ಶಕ್ತನಾದುದರಿಂ ಜೀವರು ಮಾಡಿದ ದುಷ್ಕರ್ಮಂಗಳು ನಿನ್ನಂ ಹೊಂದದೆ, ಸಕಲವೂ ನೀನೆಯಾಗಿರ್ಪ ನಿನ್ನ ಮಹಿಮೆಯು ನನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./3 |
ಅಗ್ನಿಯಲ್ಲಿ ಕಾಣಿಸುವ ಛಾಯೆಯು ನಿರಾಕಾರ ತಮೋರೂಪುಳ್ಳದ್ದು, ಜಲದಲ್ಲಿ ಕಾಣಿಸುವ ಛಾಯೆಯು ಸಾಕಾರಸತ್ವಸ್ವರೂಪುಳ್ಳದ್ದು. ಅಗ್ನಿಯಲ್ಲಿ ರೂಪುಮಾತ್ರವೇ, ಜಲದಲ್ಲಿ ರೂಪುರುಚಿಗಳೆರಡೂ ಪ್ರತ್ಯಕ್ಷಮಾಗಿಹವು. ಸಾಕಾರಛಾಯೆ ನಿಜಮಾಗಿ, ಹಾವಭಾವವಿಲಾಸವಿಭ್ರಮ ಕಾರಣಮಾಗಿಹುದು. ನಿರಾಕಾರಛಾಯೆ ಜಡಮಾಗಿ ವೈರಭಿನ್ನಮಾಗಿಹುದು. ಗುರುದತ್ತಲಿಂಗದಿಂದ ತನ್ನ ನಿಜಭಾವಮಂ ತಿಳಿದು, ಲಿಂಗವೂ ತಾನೂ ಏಕಮೆಂಬ ಭಾವವು ಬಲಿದು ಭಿನ್ನಭ್ರಮೆಯಳಿದು ಮನಂಗೊಂಡಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /4 |
ಆಕಾಶವಿಷಯಕ್ಕೆ ವಾಯುವೇ ಪ್ರಕಾಶಕಾರಣವು, ಆ ವಾಯುವಿಷಯಕ್ಕೆ ತೇಜಸ್ಸೇ ಪ್ರಕಾಶಕಾರಣವು, ಆ ಅಗ್ನಿ ವಿಷಯಕ್ಕೆ ಜಲವೇ ಪ್ರಕಾಶಕಾರಣವು, ಆ ಜಲವಿಷಯಕ್ಕೆ ಪೃಥ್ವಿಯೇ ಪ್ರಕಾಶಕಾರಣವು, ಆ ಪೃಥ್ವೀವಿಷಯಕ್ಕಾತ್ಮನೇ ಪ್ರಕಾಶಕಾರಣವು, ಆ ಆತ್ಮನು ಎಲ್ಲಕ್ಕೂ ಪ್ರಕಾಶಕಾರಣನೂ ಆಧಾರಭೂತನೂ ಆಗಿರ್ಪನು. ಆತನು ವಾಸನೆವಿಡಿದಲ್ಲಿ ಜೀವನಹನು, ವಾಸನೆಯಳಿದಲ್ಲಿ ಪರಮನಹನು, ಜಪಸ್ಫಟಿಕನ್ಯಾಯದಂತಾ ವಾಸನೆಯ ಫಲ ಕಾರಣ, ಆ ಫಲವೇ ಸೃಷ್ಟಿ ಸ್ಥಿತಿ ಸಂಹಾರಕಾರಣವು, ಅದೇ ಸುಖದುಃಖಾನುಭವಕಾರಣಮಾದ ಭವವೆನಿಸಿಕೊಂಬುದು, ಬೀಜದಲ್ಲಿ ವಾಸನೆಯಡಗಿಪ್ಪಂತೆ ಜೀವನಲ್ಲಿ ವಾಸನೆಯಡಗಿ, ಕಾಲಕರ್ಮದಿಂದ ಪ್ರಕಾಶಮಾಗಿರ್ಪುದು. ಅಖಂಡವಾಯೂಪಾಧಿಯಿಂದ ಅಕ್ಷರರೂಪಮಾಗಿ, ಅಕ್ಷರಂಗಳೊಳಗೆ ಕೂಡಿ, ನಾನಾರ್ಥಂಗಳನ್ನೀವುತ್ತಾ , ಶರೀರಂಗಳಳಿದರೆ ಭವಿಷ್ಯಚ್ಛರೀರಂಗಳಂ ಹೊಂದಿ, ತತ್ತದರ್ಥಕ್ರಿಯಾನುಗುಣಮಾಗಿ ಪ್ರವರ್ತಿಸುವಂತೆ, ಆತ್ಮನು ವಾಸನೆವಿಡಿದು, ಖಂಡಿತ ಜೀವರೂಪದಲ್ಲಿ ಶರೀರಬದ್ಧನಾಗಿ, ಒಂದಂ ಬಿಟ್ಟೊಂದಂ ಹಿಡಿದು, ಶರೀರೋಪಾಧಿಯಂ ಬಿಡದಿರ್ಪುದೇ ಭವವು. ಇಂತಪ್ಪ ಪ್ರಪಂಚವಾಸನೆವಿಡಿದ ಜೀವನಿಗೆ ಪ್ರಪಂಚದ ಕೂಡ ಅಲ್ಲದೆ ಮೋಕ್ಷವಿಲ್ಲ. ಸದಾಶಿವಾತ್ಮ ಪಂಚಾಕ್ಷರಮಂತ್ರವೆಲ್ಲ ಆ ಶಿವಸ್ವರೂಪಮಾಗಿ ತೋರ್ಪಂತೆ, ಲಿಂಗಾತ್ಮವಾದ ಜೀವನ ಭಾವದಲ್ಲೆಲ್ಲ ಲಿಂಗವೇ ಕಾಣುತ್ತಿರ್ಪುದು. ಮಂತ್ರದಲ್ಲಿ ಶಿವನೂ ಶಿವನಲ್ಲಿ ಮಂತ್ರವೂ ಅಡಗಿಪ್ಪಂತೆ, ಲಿಂಗದಲ್ಲಿ ಭಕ್ತನೂ, ಭಕ್ತನಲ್ಲಿ ಲಿಂಗವೂ ಅಡಗಿಪ್ಪುದು. ಅರ್ಥವಂ ತಿಳಿದಾನಂದಿಸುವಾಗಕ್ಷರವಂ ಮರೆವಂತೆ, ಲಿಂಗವಂ ತಿಳಿದಾನಂದಿಸಿ ತನ್ನಂ ಮರೆದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./5 |
ಆಕಾಶವೇ ಸೂಕ್ಷ್ಮವು, ಪೃಥ್ವಿಯೇ ಸ್ಥೂಲವು, ಪೃಥ್ವಿಯಲ್ಲಿ ಮನುಷ್ಯರಿಹರು, ಆಕಾಶದಲ್ಲಿ ದೇವತೆಗಳಿಹರು. ಮನುಷ್ಯರಿಗೆ ತಮೋ ರೂಪಮಾದ ರಾತ್ರಿಯೇ ದೇವತೆಗಳಿಗೆ ಸತ್ವರೂಪಮಪ್ಪ ದಿವವೇ ಅಹಸ್ಸಾಗಿ, ಅದರಲ್ಲಿ ಸಂಚರಿಸುತ್ತಿಹರು. ದಿವದಲ್ಲಿ ಪೃಥ್ವಿಯು ಪ್ರತ್ಯಕ್ಷಮಾಗಿಹುದು, ರಾತ್ರಿಯಲ್ಲಿ ಆಕಾಶವು ಪ್ರತ್ಯಕ್ಷಮಾಗಿಹುದು. ಮನುಷ್ಯರಿಗೆ ದೇವಲೋಕವು ಉದ್ದವಾಗಿ, ದೇವತೆಗಳಿಗೆ ಮನುಷ್ಯಲೋಕವು ಉದ್ದವಾಗಿರ್ಪುದರಿಂದ ಮನುಷ್ಯರಿಗೆ ಸೂರ್ಯಮಂಡಲವು ಉನ್ನತಮಾಗಿ, ಆ ಸೂರ್ಯನಿಂದ ಬಂದ ಜ್ಞಾನವೇ ಭೂಮಿಯಲ್ಲಿ ಕರ್ಮವಶಮಾಗಿ, ಮನುಷ್ಯರಿಗೆ ಬಿಂದುರೂಪದಲ್ಲಿ ಫಲಿಸಿ, ಅದೇ ಜೀವನಮಾಯಿತ್ತು. ದೇವತೆಗಳಿಗೆ ಚಂದ್ರಮಂಡಲವು ಉನ್ನತಮಾಗಿ, ಆ ಚಂದ್ರಕಿರಣದಿಂದ ಬಂದ ಅಮೃತವು ಆಕಾಶದಲ್ಲಿ ವ್ಯಾಪಿಸಿ, ಜ್ಞಾನಮುಖದಲ್ಲಿ ಸದ್ಯಃಫಲವಾಗಿರ್ಪ ಕಳೆಯೇ ದೇವತೆಗಳಿಗೆ ಜೀವನಮಾಯಿತ್ತು. ದೇವತೆಗಳಿಗೆ ಶಾಸ್ತ್ರವೇ ಸಿದ್ಧಾಂತಮಾಯಿತ್ತು, ಮನುಷ್ಯರಿಗೆ ಜ್ಯೋತಿಷ್ಯವೇ ಸಿದ್ಧಾಂತಮಾಯಿತ್ತು. ದೇವತೆಗಳಿಗೆ ಕಾಲದಲ್ಲಿ ಕರ್ಮವು ಸವೆದುದೇ ಮರಣವು. ಮನುಷ್ಯರು ಮರಣಾಂತದಲ್ಲಿ ಬ್ರಹ್ಮಾಂಡದಲ್ಲಿರ್ಪ ನರಕವನನುಭವಿಸಿ, ಪಾತಾಳಲೋಕದಲ್ಲಿ ಕಳಾಮುಖದಲ್ಲಿ ಹೋಗಿ ದೇವಲೋಕದಲ್ಲಿ ಜನಿಸುತ್ತಿಹರು. ದೇವತೆಗಳು ಮರಣಾಂತದಲ್ಲಿ ಪಿಂಡಾಂಡ ನರಕವನನುಭವಿಸಿ, ಸೂಕ್ಷ್ಮ ತ್ರಿಕೋಣಸ್ವರೂಪಮಪ್ಪ ಪಾತಾಳದಲ್ಲಿ ಬಿಂದುಮುಖದಲ್ಲಿ ಜನಿಸುತ್ತಿಹರು. ದೇವತೆಗಳೇ ಸತ್ವಸ್ವರೂಪರು, ಮನುಷ್ಯರು ತಮಸ್ವರೂಪರು, ಮನುಷ್ಯರೂಪಾದ ತಮಸ್ಸನ್ನು ದೇವತೆಗಳು ಆಚರಿಸುತ್ತಿಹರು, ದೇವತಾರೂಪಮಾದ ಸತ್ವವನ್ನು ಮನುಷ್ಯರು ಆಚರಿಸುತ್ತಿರಲು, ಈ ಮನುಷ್ಯರು ಆಚರಿಸುವ ಸತ್ವವೇ ಸತ್ವರೂಪವಾದ ದೇವಲೋಕವಂ ಹೊಂದಿಸುತ್ತದೆ. ದೇವತೆಗಳು ಆಚರಿಸುವ ತಮಸ್ಸೇ ತಮೋರೂಪವಾದ ಮತ್ರ್ಯಲೋಕವಂ ಹೊಂದಿಸುತ್ತಿರ್ಪ ಯಾತಾಯಾತವೇ ಭವವೆನಿಸಿಕೊಂಡಿತ್ತು. ಇಂತಪ್ಪ ವಿವೇಕವನ್ನು ಗುರುಮುಖದಿಂದ ತಿಳಿದ ಮಹಾಪುರುಷನು ಸ್ಥೂಲವನ್ನು ಕರ್ಮದಿಂದ ಪರಿಶುದ್ಧಿಮಾಡಿ, ಸೂಕ್ಷ್ಮವನ್ನು ಜ್ಞಾನದಿಂ ಪರಿಶುದ್ಧವಂ ಮಾಡಿ, ಎರಡಕ್ಕೂ ಮಧ್ಯದಲ್ಲಿ ತನ್ನ ನಿಜಸ್ವರೂಪಮಾಗಿರ್ಪ ಶಬ್ದಪ್ರಕಾಶಮಪ್ಪ ಆ ಭಾವದಲ್ಲಿ ಬೆರದು, ಆ ಭಾವದಿಂದಲೇ ಈ ಸ್ಥೂಲ ಸೂಕ್ಷ್ಮಂಗಳಂ ಭೇದಿಸಿ, ಆ ಭೇದಿಸುವುದಕ್ಕೆ ಇದೇ ಕಾರಣಮಾಗಿ, ಆ ಭಾವವು ಬಲಿದುಬರಲು, ಸ್ಥೂಲಸೂಕ್ಷ್ಮಂಗಳಳಿದು ಭಾವದೊಳಗೆ ಲೀನಮಾಗಲು, ಸ್ವರ್ಗನರಕಂಗಳಳಿದು ಭಾವಸ್ವರೂಪಮಾಗಿರ್ಪುದೇ ನಿಜವು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./6 |
ಆತ್ಮಧರ್ಮವೇ ತಮಸ್ಸು, ಆತ್ಮನು ಜಡಮಾಗಿರ್ಪನು. ಆತ್ಮನು ತಮೋವಶನಾದಲ್ಲಿ ಪ್ರಪಂಚವು ಉತ್ಪನ್ನಮಾಗಿರ್ಪುದು. ತಮಸ್ಸು ಆತ್ಮನೂ ಪ್ರಾಣವು ಶಬ್ದವೂ ಆದಲ್ಲಿ, ನಿಜವು ಪ್ರಕಾಶಮಾಗಿ ಪ್ರಪಂಚವು ನಷ್ಟಮಾಗಿರ್ಪುದು. ಜೀವಧರ್ಮವಾಗಿರ್ದ ನಿದ್ರೆಯು ಜೀವನಂ ಬಂಧಿಸಿದಲ್ಲಿ ಅನೇಕ ಸ್ವಪ್ನಂಗಳುದಿಸಿ ಜೀವಾನುಭವಕಾರಣಮಾಗಿಹುದು. ಆ ಜೀವನಲ್ಲಿ ನಿದ್ರೆಯು ಲೀನಮಾದಲ್ಲಿ ಸ್ವಪ್ನವಳಿದು ಜಾಗ್ರದೊಳಗೆ ಬೆರೆವಂತೆ, ತಮೋಧರ್ಮವಾಗಿರ್ಪ ಪ್ರಪಂಚವು ಪರಮನಂ ಭ್ರಮಿಸುತ್ತಿರ್ಪುದು. ಹಗಲಿರುಳು ಜಾಗ್ರತ್ಸುಷುಪ್ತಿಗಳು ಹೇಗೋ ಹಾಗೆ ನಿಜಪ್ರಪಂಚಗಳು ಪರಮನ ಸಹಚರಗಳಾಗಿರ್ಪವು. ಜೀವಪರಮರಿಗೆ ಸ್ಥೂಲಸೂಕ್ಷ್ಮ ಮಾತ್ರ ಭೇದವಲ್ಲದೆ, ಕೆರೆಯ ನೀರೂ ಹರವಿಯ ನೀರೂ ಕೂಡಿದಲ್ಲಿ ಏಕವಾಗುವಂತೆ ವಸ್ತು ಒಂದೇ ಆಗಿರ್ಪುದು. ಭಿನ್ನಿಸಿದಲ್ಲಿ ನೀಚೋಚ್ಚಗಳು ಕಾಣುತಿರ್ಪವು, ಅವೇ ಸುಖದುಃಖಂಗಳು. ಅಂತಪ್ಪ ಭೇದವಂ ತೊಲಗಿಸಿ ನನ್ನನ್ನು ನಿನ್ನೊಳಗೇಕಮಾಗಿ ಕೂಡಲಿಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./7 |
ಆತ್ಮಾಂಶವೆ ಚೈತನ್ಯ ಅಂತಃಕರಣಾದಿ ಸಕಲ ಲೋಕದ್ವಿಕಾರ. ಆ ಚೈತನ್ಯದಿಂ ಶಕ್ತಿ ಪ್ರಕಟನಮಾದಂತೆ ಆತ್ಮನಿಂದಾಕಾಶ ಪ್ರಕಟನಮಪ್ಪುದು. ಆ ಶಕ್ತಿಯಿಂ ಕರ್ಮಮುತ್ಪನ್ನಮಪ್ಪಂತೆ ಆಕಾಶದಿಂ ವಾಯುವುತ್ಪನ್ನಮಪ್ಪುದು. ಆ ಕರ್ಮದಿಂ ಧರ್ಮ ಜನಿಸುವಂತೆ, ವಾಯುವಿಂದಗ್ನಿ ಜನಿಸುತ್ತಿಪ್ಪುದು. ಆ ಧರ್ಮದಿಂ ಫಲಮುದಿಸುವಂತೆ ಅಗ್ನಿಯಿಂ ಜಲಮುದಿಸುತ್ತಿಪ್ಪುದು. ಆ ಫಲದಿಂದನುಭವ ಪ್ರತ್ಯಕ್ಷಮಾದಂತೆ ಜಲದಿಂ ಪೃಥ್ವಿ ಪ್ರತ್ಯಕ್ಷಮಪ್ಪುದು. ಆ ಅನುಭವದಲ್ಲಿ ಸುಖದುಃಖಂಗಳುದ್ಭವಿಸುವಂತೆ ಪೃಥ್ವಿಯಲ್ಲಿ ಸ್ಥಾವರ ಜಂಗಮಂಗಳುದ್ಭವಿಸುವವು. ಆ ಸುಖದುಃಖಂಗಳಲ್ಲಿ ಸ್ವರ್ಗ ನರಕಂಗಳುತ್ಪನ್ನಮಪ್ಪಂತೆ ಆ ಸ್ಥಾವರ ಜಂಗಮಂಗಳಲ್ಲಿ ಆಹಾರ ಮೈಥುನಂಗಳುತ್ಪನ್ನಮಪ್ಪವು. ಅವೇ ಆವಾಹನ ವಿಸರ್ಜನ. ಅಂತಪ್ಪ ಆವಾಹನ ವಿಸರ್ಜನೆಯೇ ಹಂಸರೂಪಮಾದ ಚೈತನ್ಯ. ಅಂತಪ್ಪ ಚೈತನ್ಯರೂಪವಾದ ಶಿವನು ಸ್ವಶಕ್ತಿ ಪ್ರಕಟನ ನಿಮಿತ್ಯ ಆಹಾರಮುಖಕ್ಕೆ ಪ್ರಪಂಚವ ಸಂವಹರಿಸುತ್ತಿರ್ಪಂತೆ, ಆಕಾಶ ಪ್ರಕಟನ ನಿಮಿತ್ಯ ಆತ್ಮನು ಪ್ರಪಂಚವ ಸಂಹರಿಸುತ್ತಿರ್ಪನು. ಜೀವನು ಸ್ವಧರ್ಮವನಾಶ್ರಯಿಸಿ ತೊಳಲುತ್ತಿರ್ಪಂತೆ ಆತ್ಮನು ತೇಜೋಧರ್ಮವನಾಶ್ರಯಿಸಿ ವ್ಯವಹರಿಸುತ್ತಿರ್ಪನು. ಆ ಧರ್ಮಪದ ವಿಕ್ಷೇಪಣೆಯೇ ಕಾಲ, ಆ ಕಾಲವೇ ಸಂಹಾರ ಹೇತು. ಅಂತಪ್ಪ ಧರ್ಮವೇ ಬಸವ ನಾಮಾಂಕಿತಮುಳ್ಳ ಮಹಾಗುರು. ಅಂತಪ್ಪ ಮಹಾಗುರುವಿನ ಪಾದವಿಡಿದು ಸೃಷ್ಟಿ ರಜೋರೂಪಮಾಗಿರ್ಪ ಲಲಾಟಬೀಜಾಕ್ಷರಂಗಳನೊರಸಿ ಕೆಡಿಸಿ ಆ ಪಾದವ ನನ್ನ ಹೃದಯದಲ್ಲಿ ಬರೆದು ಪಟಲಮಾಡಿದಲ್ಲಿ ಆ ಕಾಲವಳಿದು ಕಾಲಾತೀತನಪ್ಪುದೆ ನಿಜ. ಅಂತಪ್ಪ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ./8 |
ಆದಿಬಿಂದುವೇ ಶೂನ್ಯಮಾದುದರಿಂ ಸಂಹಾರರೂಪಮಾಯಿತ್ತು. ಇದು ಜೀವನ ಆದಿಮಧ್ಯಾವಸಾನಗಳನಾಶ್ರೈಸಿರ್ಪುದರಿಂ ಹಂ ಆಯಿತ್ತು. ವಿಸರ್ಜನರೂಪಮಾದ ಹಕಾರವು ನಿಜಶೂನ್ಯದೊಳ್ಪ್ರತಿಫಲಿಸಲು ತದ್ರೂಪಮಾದ ಸಕಾರಮಾಯಿತ್ತು. ಸಂಹಾರರೂಪಮಾದ ಬಿಂದುವೆಂಬ ದರ್ಪಣದಲ್ಲಿ ಸೃಷ್ಟಿಸ್ಥಿತಿರೂಪಮಾದ ಮಾಯಾಛಾಯೆಯೇ ಜೀವನಮಾಯಿತ್ತು. ಛಾಯಾಜನಿತವೇ ಭಾವಮಾಯಿತ್ತು, ಆ ಭಾವವೇ ಜೀವನಿಷ್ಠ ಧರ್ಮವು. ಅದು ಪ್ರತಿವಸ್ತುವಂ ಪ್ರಕಾಶಪಡಿಸುತ್ತಿರ್ಪುದು, ಸೃಷ್ಟಿಸ್ಥಿತಿರೂಪಮಾದ ಪ್ರತಿವಸ್ತುವಿನಿಂ ಸಂಹಾರದಲ್ಲಿ ತಾನುದಿಸಿ ಪ್ರತಿಯಳಿಯಲು, ತನ್ನ ಜನ್ಮಸ್ಥಾನದಲ್ಲಿ ತಾಂ ಲಯಮಪ್ಪುದೇ ಮೋಕ್ಷವು. ಆ ಹಮ್ಮೇ ತಾನೆಂಬಹಂಕಾರವು, ಅಲ್ಲಿ ತೋರುತ್ತಿರ್ಪ ಛಾಯಾಜೀವನೇ ತನ್ನದೆಂಬಲ್ಲಿ, ತತ್ಸಂಧಿಕಾಲದಲ್ಲಿ ತೋರ್ಪ ಮಮತ್ವವೇ ಮನವು, ಆ ಜೀವನ ಕಾರ್ಯಕ್ಕದೇ ಕಾರಣಮಾಗಿರ್ಪುದು, ಅದು ಜೀವನಿಷ್ಠಧರ್ಮವಾದ ಭಾವದೊಳಗೆ ಕೂಡಿ ಪಾತ್ರಾಪಾತ್ರಗಳಂ ವಿಚಾರಿಸುತ್ತಿರ್ಪುದೇ ಬುದ್ಧಿಯು, ಆ ವಸ್ತುವಂ ತಿಳಿವ ವಿವೇಕವೇ ಚಿತ್ತವು, ಈ ಮನೋಬುದ್ಧಿ ಚಿತ್ತಾಹಂಕಾರಗಳೇ ಜೀವನ ಅಂತಃಕರಣಂಗಳು. ನಾದರೂಪಿಯಾದ ಜೀವನು ಅಕ್ಷರಸ್ವರೂಪಿಯಾದುದರಿಂ ಮಂತ್ರದಿಂ ಪರಿಶುದ್ಧನಾಗಿ, ಕ್ರಿಯಾಮುಖದಲ್ಲಿ ಕರ್ಮಕ್ಕೆ ಬಂದು, ಜ್ಞಾನಮುಖದಲ್ಲಿ ಮಹದರ್ಥಕ್ಕೆ ಕಾರಣನಾಗಿಹನು. ಅವನು ಆ ಜ್ಞಾನಭಾವದೊಳ್ಕೂಡಿ, ಅಕ್ಷರವಂ ಮಹತ್ತಾಗಿ ಪ್ರಕಾಶಿಸಿ, ಆ ಅಕ್ಷರವಂ ಬಿಟ್ಟು ಅದರರ್ಥವಂ ಭಾವಮುಖದಲ್ಲಿ ಕೊಂಡು, ಗೂಢಮಾಗಿ ಮಿಥ್ಯಾರೂಪಮಾಗಿರ್ಪ ಅರ್ಥವಂ ಪ್ರಕಾಶಿಸಿ, ನಿಜಸಿದ್ಧಾಂತವಂ ಮಾಡಿ, ಸಂಶಯಮುಖದಲ್ಲಿ ಪುನರಾಗಮನಕ್ಕೆ ಬಾರದೆ, ನಿಜಮಾಗಿ ಪರಮಾನಂದದೊಳಗೆ ಹೊಂದಿ, ಪ್ರಕಾಶಿಸಿ ಸಕಾರವೆಂಬ ಛಾಯಾಯೋಗವನಳಿಯಲು, ಉಳಿದ ಪದಾರ್ಥವೇ ಮುಕ್ತಿಯು. ಅಂತಪ್ಪ ಮುಕ್ತಿಸಾಮ್ರಾಜ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./9 |
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ, ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ; ಬಿಂದುಮಯವಾದ ಶರೀರದಲ್ಲಿ ರೂಪು ನಾದಮಯಮಾದ ಪ್ರಾಣದಲ್ಲಿ ನಾಮ ಕಳಾಮಯಮಾದ ಮನದಲ್ಲಿ ಕ್ರಿಯೆ ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ, ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು, ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು. ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು . ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು . ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ, ಆ ಬಿಂದುವೇ ಆದಿಶಕ್ತಿಮಯಮಾಯಿತ್ತು. ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ, ಆ ನಾದವೇ ಪರಾಶಕ್ತಿಯಾಯಿತ್ತು. ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ, ಆ ಕಳೆಯೇ ಜ್ಞಾನಶಕ್ತಿಯಾಯಿತ್ತು. ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ, ಪ್ರಾಣವು ಗುರುವಿನಿಂದ ಪವಿತ್ರಮಾಗಿ, ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./10 |
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
![]() | ಕಡಕೋಳ ಮಡಿವಾಳಪ್ಪ | ಮೂರುಸಾವಿರ ಮುಕ್ತಿಮುನಿ | ![]() |