ಬಸವಣ್ಣನವರೇ ನಮ್ಮೆಲ್ಲರ ದೀಕ್ಷಾಗುರು :👈 👉:ಲಿಂಗಾಯತ

ಮಾಯೆಯ ಗೆದ್ದ ಮಹಾಮಹಿಮ ಗುರು ಅಲ್ಲಮಪ್ರಭುದೇವರ ವ್ಯಕ್ತಿತ್ವ ಮತ್ತು ಸಂದೇಶ

- ✍: ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಶ್ರೀ ಮದಮಲಜ್ಞಾನಭಕ್ತಿ
ಪ್ರೇಮ ವೇದಪುರಾಣಶಾಸ್ತ್ರ
ಸ್ತೋಮನುತನತಚಾರುಚರಣಾಂಬೋಜ ಘನ ಮಹಿಮ
ನಾಮ-ರೂಪ-ಕ್ರಿಯಾಕಳಾಪವಿ
ರಾಮನನುಪಮದಿವ್ಯತೇಜೋ
ವ್ಯೋಮ ಮೂರುತಿ ಗುರು ಗುಹೇಶ್ವರ ಲಿಂಗ ಶರಣಾರ್ಥಿ.
-ಚಾಮರಸ
ಅಲ್ಲಮ ಪ್ರಭುದೇವರ ವಚನಗಳಲ್ಲಿ ಪ್ರಮುಖವಾಗಿ ಮನಸ್ಸನ್ನು ನಿಲ್ಲಿಸುವುದು ಸಲಹೆಗಳು ಹಾಗೂ ಇಷ್ಟಲಿಂಗ ಯೋಗ ಮತ್ತು ಗುರು ಬಸವ ಭಕ್ತಿಯ ಬಗ್ಗೆ ಹೇಳುತ್ತಾರೆ.

ಸುತ್ತಿ ಸುತ್ತಿ ಬಂದಡಿಲ್ಲ ಲಕ್ಷ ಗಂಗೆಯ ಮಿಂದಡಿಲ್ಲ.
ತುಟ್ಟ ತುದಿಯ ಮೇರು ಗಿರಿಯ ಮೆಟ್ಟಿ ಕೂಗಿದಡಿಲ್ಲ.
ನಿತ್ಯ ನೇಮದಿಂದ ತನುವ ಸುಟ್ಟುಕೊಂಡರಿಲ್ಲ.
ನಿಚ್ಚಕ್ಕೆ ನಿಚ್ಚ ನೆನೆವ ಮನವ ಅಂದಂದಿಗೆ ಅತ್ತಲಿತ್ತ ಹರಿವ ಮನವ
ಚಿತ್ತದಲಿ ನಿಲಿಸಬಲ್ಲಡೆ ಬಚ್ಚ ಬರಿಯ ಬಯಲು ಗುಹೇಶ್ವರ ಲಿಂಗವು


ಮೊಟ್ಟ ಮೊದಲು ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಅರಿಯಬೇಕು, ಅದನ್ನರಿಯದೇ ಏನೇ ಮಾಡಿದರೂ ಪ್ರಯೋಜನವಿಲ್ಲ ಎನ್ನುತ್ತಾರೆ. ಮನಸ್ಸನ್ನು ನಿಲ್ಲಿಸಲಿಕ್ಕೆ ಇಷ್ಟಲಿಂಗವೇ ಸಾಧನ. ಅನೇಕ
ಜನ್ಮಗಳ ಪುಣ್ಯದಿಂದ ಇಷ್ಟಲಿಂಗ ಪ್ರಾಪ್ತಿಯಾಗುತ್ತದೆ ಎಂದು ತಿಳಿಸುತ್ತಾ ಇಷ್ಟಲಿಂಗ ಧರಿಸದೇ, ಪೂಜೆ ಮಾಡದೇ, ಯಾವುದೇ ಧ್ಯಾನ ತಪಸ್ಸುಗಳಿಂದ ಪ್ರಯೋಜನವಿಲ್ಲ ಎನ್ನುತ್ತಾರೆ. ಗುರು ಅಲ್ಲಮ ಪ್ರಭುದೇವರ ಪ್ರಕಾರ ಇಷ್ಟಲಿಂಗ ಒಂದು ಕುರುಹು ಮಾತ್ರ, ಆ ಕುರುಹಿನಿಂದ ಅರುಹ ಅರಿಯಬೇಕು. ಆರಂಭದ ಹಂತದಲ್ಲಿ ಇಷ್ಟಲಿಂಗವನ್ನೇ ಸಾಕ್ಷಾತ್ ದೇವರೆಂದು ಅರಿತ ಭಕ್ತನು ನಂತರದಲ್ಲಿ ದೇವರನ್ನು ಕೇವಲ ಇಷ್ಟಲಿಂಗದಲ್ಲಿ ಮಾತ್ರ ಕಾಣದೆ ತನ್ನ ಸರ್ವಾಂಗದಲ್ಲಿಯೂ ಕಾಣಬೇಕು. ತನ್ನನ್ನು ಲಿಂಗದೇವನಲ್ಲಿ ಕಾಣಬೇಕು. ಇದು ಬಿಟ್ಟು ಕೇವಲ ರಾಶಿ ರಾಶಿ ಪತ್ರೆ ಪುಷ್ಪಗಳಿಂದ ಅಚರ್ಚಿಸುವವರನ್ನು ಆಡಿನ ದಾಯಾದಿಗಳು (ಶತ್ರು) ಎಂದು ಕರೆಯುತ್ತಾರೆ.

ಆಡಿಗೆ ದಾಯಾದಿಯಾದಿರಲ್ಲ!
ಕಾಡಗಿಡುವಿಂಗೆ ಮೃತ್ಯುವಾದಿರಲ್ಲ!
ಅರಿವನರಿಯ ಹೇಳಿ ಶ್ರೀ ಗುರು ಕುರುಹು ಕೈಯಲ್ಲಿ ಕೊಟ್ಟಡೆ
ಅರಿವನೆ ಮರೆತು ಕುರುಹು ಪೂಜಿಸುವ
ಕುರಿಗಳ ನೋಡಾ ಗುಹೇಶ್ವರಾ.
ಅದಕ್ಕಾಗಿ ಇಷ್ಟಲಿಂಗವನ್ನು ಧರಿಸಿದ ಭಕ್ತನು ದಿನದಿಂದ ದಿನಕ್ಕೆ ಹೆಚ್ಚು ಯೋಗ ಧ್ಯಾನಗಳನ್ನು ಮಾಡುತ್ತ ಜ್ಞಾನಮಾರ್ಗ, ಭಕ್ತಿಮಾರ್ಗದಲ್ಲಿ ನಡೆಯಬೇಕು ಎನ್ನುತ್ತಾರೆ. ಕೇವಲ ಲಿಂಗಾಯತರಾಗಿ ಹುಟ್ಟಿದ್ದೇವೆ, ಇಷ್ಟಲಿಂಗ ಕಟ್ಟಿಕೊಳ್ಳುವುದು ಒಂದು ನಿಯಮವೆಂದು ತಿಳಿದು, ಅದರ ಮರ್ಮವನ್ನರಿಯದೆ ಕಟ್ಟಿಕೊಳ್ಳುವವರನ್ನು ಜರಿಯುತ್ತಾರೆ.

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ಹಸಿವು ಹೋಹುದೆ?
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು? ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿಸಿದಡೆ
ಆ ಕಲ್ಲು ಲಿಂಗವೆ? ಇಟ್ಟಾತ ಗುರುವೆ?
ಇಂಥವರ ಕಂಡರೆ ನಾಚುವೆನಯ್ಯ ಗುಹೇಶ್ವರಾ.


ಹೊಟ್ಟೆಯ ಮೇಲೆ ಸ್ವಾದಿಷ್ಟವಾದ ಊಟದ ಗಂಟನ್ನು ಕಟ್ಟಿಕೊಂಡ ಮಾತ್ರಕ್ಕೆ ಹಸಿವು ಹೋಗಲಾರದು, ಅದನ್ನು ಬಿಚ್ಚಿಕೊಂಡು ಉಣ್ಣಬೇಕು. ಅದೇ ರೀತಿ ಗೋಡೆಯ ಮೊಳೆಗೆ ನೇತು ಹಾಕಿರುವ ಹಾಗೆ ಕೇವಲ ಯಾಂತ್ರಿಕವಾಗಿ ಲಿಂಗವನ್ನು ಧರಿಸಿದರೆ ಪ್ರಯೋಜನವಿಲ್ಲ. ಭಕ್ತಿಯಿಂದ ದಿನನಿತ್ಯ ಅರ್ಚಿಸಿ ಲಿಂಗ ಪ್ರೇಮವನ್ನು ಬೆಳೆಸಿಕೊಂಡು ಇಷ್ಟ ಲಿಂಗಯೋಗ ಮಾಡಬೇಕು ಎನ್ನುತ್ತಾರೆ. ಇಷ್ಟಲಿಂಗವನ್ನು ಭಾವನಾತ್ಮಕವಾಗಿ ಧರಿಸಬೇಕು.

ವಚನ:
ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ
ಲಿಂಗವನರಿದ ಬಳಿಕ ಮತ್ತೇನನರಿದಡೂ ಫಲವಿಲ್ಲ
ಸರ್ವಕಾರಣ ಲಿಂಗವಾಗಿ, ಲಿಂಗವನೆ ಅರಿದರಿದು,
ಲಿಂಗಸಂಗನೆ ಮಾಡುವೆ
ಸಂಗ ಸುಖದೊಳು ಓಲಾಡುವೆ ಗುಹೇಶ್ವರಾ.

ಯಾವುದನ್ನು ಅರಿತರೆ ಎಲ್ಲವನ್ನು ಅರಿತಂತಾಗುತ್ತದೆಯೋ ಅದುವೇ ಇಷ್ಟಲಿಂಗ, ಪರಮಾತ್ಮ ತತ್ವ.
ಅಲ್ಲಮ ಪ್ರಭುದೇವರು ತಮ್ಮ ವಚನಗಳಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡಬಾರದು ಎಂದು ಹೇಳಿ ದೇವಾಲಯಗಳ ಸಂಸ್ಕೃತಿಯನ್ನು ತಿರಸ್ಕರಿಸುತ್ತಾರೆ.

ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕಟಿದೊಡೆ ದೇವರೆತ್ತ ಹೋದರೋ!
ಲಿಂಗ ಪ್ರತಿಷ್ಟೆಯ ಮಾಡಿದವರಿಗೆ ನಾಯಕ ನರಕ ಗುಹೇಶ್ವರಾ.


ಭಕ್ತರಿಂದ ಕಾಣಿಕೆ ಬರುವುದು ಎಲ್ಲಿ ತಪ್ಪಿ ಹೋಗುತ್ತೋ ಎನ್ನುವ ಭಯದಿಂದ ಅನೇಕ ಲಿಂಗಧಾರಿ (ವೇಷಧಾರಿ) ಮಠಾಧೀಶರುಗಳು, ಗಣಪತಿ, ನವಗ್ರಹಗಳ ಪ್ರತಿಷ್ಠಾಪನೆ ಮಾಡುತ್ತಾರೆ. ಭಕ್ತರಿಗೆ ಜ್ಞಾನವನ್ನು ಕೊಡದೇ ಮತ್ತಷ್ಟು ಅಜ್ಞಾನದ ಕೂಪದಲ್ಲಿ ಅವರನ್ನು ತಳ್ಳುತ್ತಾರೆ.

ಮನುಷ್ಯನಿಗೆ ದಿನನಿತ್ಯದಲ್ಲಿ ಬರುವ ಸಮಸ್ಯೆಗಳು, ಸ್ತುತಿ ನಿಂದೆಗಳನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.

ವಚನ:
ಸ್ತುತಿ ನಿಂದೆಗೆ ಕಿವುಡನಾಗಿರಬೇಕು.
ಪರಧನ ಪರಸತಿಯರಿಗೆ ಅಂಧಕನಾಗಿರಬೇಕು.
ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳ ಎಡೆಯಲ್ಲಿ
ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು.
ಒಂದು ಎಂದು ಅರಿದಲ್ಲಿ ಸಂದೇಹವಿಲ್ಲದಿರಬೇಕು.
ಗುಹೇಶ್ವರ ಲಿಂಗದಲ್ಲಿ ತನ್ನ ತಾ ಮರೆದಿರಬೇಕು.


ಯಾವ ವ್ಯಕ್ತಿ ಸ್ತುತಿಸಿದಾಗ ಅತ್ಯಂತ ಹಿಗ್ಗುತ್ತಾನೋ ಅಂಥವನು ನಿಂದನೆಗಳು ಬಂದಾಗ ಅಷ್ಟೇ ದುಃಖಿಸುತ್ತಾನೆ. ನಿಂದನೆಗಳನ್ನು ಎದುರಿಸುವ ಶಕ್ತಿ ಅವನಲ್ಲಿರುವುದಿಲ್ಲ. ಅದಕ್ಕಾಗಿಯೇ ಇಲ್ಲಿ ಪ್ರಭುದೇವರು ಸುತ್ತಿ ನಿಂದೆ ಎರಡನ್ನು ಗಮನಕ್ಕೆ ತೆಗೆದುಕೊಳ್ಳಬಾರದು ಎನ್ನುತ್ತಾರೆ.

ಅಲ್ಲಮ ಪ್ರಭುದೇವರು ನಮಗೆ ಕಲಿಸುವ ಇನ್ನೊಂದು ಅತೀ ಮುಖ್ಯವಾದ ಅಂಶವೆಂದರೆ ಗುರು ಬಸವ ಭಕ್ತಿ. ತಾವು ಅನುಭಾವ ಮಂಟಪಕ್ಕೆ ಬರುವ ಮೊದಲೇ ವ್ಯೋಮಕಾಯ ಸಿದ್ಧಿಯ ಜೊತೆಗೆ ಅನೇಕ ಸಿದ್ಧಿಗಳನ್ನು ಪಡೆದ ಅವರು, ಬಸವಣ್ಣನಾಗಿ ಹುಟ್ಟಿಸದೆ ಪ್ರಭುವಾಗಿ ಏಕೆ ಹುಟ್ಟಿಸಿದೆ? ಎಂದು ದೇವರನ್ನು ಕೇಳುತ್ತಾರೆ. ಇದನ್ನು ನೋಡಿದರೆ ಅವರಿಗೆ ಗುರುಬಸವಣ್ಣನವರ ಮೇಲಿರುವ ಭಕ್ತಿ, ಅಭಿಮಾನ ಎಷ್ಟೆಂಬುದು ಗೊತ್ತಾಗುತ್ತದೆ.

ವಚನ:
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ.
ಶೂನ್ಯವ ನುಡಿದು ಸುಖದುಃಖಕ್ಕೆ ಒಳಗಾದೆನಯ್ಯಾ.
ಗುಹೇಶ್ವರಾ ನಿಮ್ಮ ಶರಣ ಸಂಗನ ಬಸವಣ್ಣನ
ಸಾನಿಧ್ಯದಿಂದಾನು ಸದ್ಭಕ್ತನಾದೆನಯ್ಯ.

ಹೀಗೆ ಅವರ ವಚನಗಳಲ್ಲಿ ಬಸವ ಭಕ್ತಿ ನೀರಿನ ಬುಗ್ಗೆಯಂತೆ ಪುಟಿದೇಳುತ್ತದೆ. ಮಹಾ ಮಹಿಮ ಸಂಗ ಬಸವಣ್ಣ ಎನಗೆಯೂ ಗುರು ನಿನಗೆಯೂ ಗುರು ಜಗವೆಲ್ಲಕ್ಕೂ ಗುರು ಕಾಣಾ ಗುಹೇಶ್ವರಾ
ಆದಿಯ ಲಿಂಗ ಮೇದಿನಿಗೆ ತಂದು ಮತ್ರ್ಯಲೋಕದಲಿ ಮಹಾಮನೆಯ ಕಟ್ಟಿದನಯ್ಯ ಸಂಗನ ಬಸವಣ್ಣನು

ಆದಿಯಲ್ಲಿ ನೀನೇ ಗುರುವಾದ ಕಾರಣ, ನಿನ್ನಿಂದ ಹುಟ್ಟಿತ್ತು ಲಿಂಗ; ``ಬಸವಾಕ್ಷರ ತ್ರಯವೆನ್ನ ಸರ್ವಾಂಗದಲ್ಲಿ ತೊಳಗಿ ಬೆಳಗುವ ಬೇಧವನರಿದು ಆನು ನೀನು ಬಸವ ಬಸವ ಎನುತಿರ್ದೆವಯ್ಯಾ ಗುಹೇಶ್ವರಾ"
``ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಣ್ಣ ಮುಂದೆ".

ಇಂಥ ನೂರಾರು ವಚನ ವಾಕ್ಯಗಳಲ್ಲಿ ಅಲ್ಲಮ ಪ್ರಭುದೇವರು. ಗುರು ಬಸವಣ್ಣನವರನ್ನು ಕೊಂಡಾಡಿದ್ದಾರೆ.
ಬಸವ ಭಕ್ತಿಯಿಂದ ಮಾತ್ರ ಭವ ಹರಿಯಲು ಸಾಧ್ಯವಾಗುತ್ತದೆ, ಬಸವ ಭಕ್ತಿಯಿಂದ ಸರ್ವಜ್ಞಾನಿಯಾಗಲೂ ಸಾಧ್ಯವಿದೆ ಎಂದು ಅಲ್ಲಮ ಪ್ರಭುದೇವರು ನಮಗೆ ಕಲಿಸಿಕೊಡುತ್ತಾರೆ. ಅದಕ್ಕಾಗಿ ನಾವು ಇನ್ನಷ್ಟು ಮತ್ತಷ್ಟು ಬಸವ ಭಕ್ತಿಯನ್ನು, ಶರಣಾಗತಿಯನ್ನು ಅಳವಡಿಸಿಕೊಳ್ಳೋಣ

ಮಾಯೆ ಗೆದ್ದ ಮಹಾಯೋಗಿ: ಗುರು ಅಲ್ಲಮ ಪ್ರಭುದೇವರ ಜೀವನ ಸಾಧನೆ ಮತ್ತು ಸಂದೇಶ

ಲಿಂಗಾಯತ ಚಳವಳಿಯ ಮಹಾಸಾಗರದಲ್ಲಿ, ಗುರು ಅಲ್ಲಮ ಪ್ರಭುದೇವರು ಅತೀ ಗಂಭೀರ ಮತ್ತು ಮೌನಮಯ ಅಲೆ. ಅವರು ಮಾತುಗಳಿಂದ ಮಾತ್ರ ಬೋಧಿಸಿದವರು ಅಲ್ಲ; ತಮ್ಮ ವಚನಗಳ ಮೂಲಕ ಮನಸ್ಸಿನ ಮರ್ಮವನ್ನೇ ಮುಟ್ಟಿದ ದಾರ್ಶನಿಕ ಯೋಗಿ. ಅವರ ಸಂದೇಶವು ಭಕ್ತಿ, ಜ್ಞಾನ ಮತ್ತು ಆಂತರಿಕ ಅನುಭವಗಳ ಸಮನ್ವಯವಾಗಿದ್ದು, ಇಂದಿನ ಯಾಂತ್ರಿಕ ಧಾರ್ಮಿಕ ಆಚರಣೆಗಳಿಗೆ ತೀಕ್ಷ್ಣ ಪ್ರಶ್ನೆ ಎತ್ತುತ್ತದೆ.

ಚಾಮರಸರ ವಂದನೆಯಂತೆ, ಅಲ್ಲಮ ಪ್ರಭುದೇವರು “ನಾಮ-ರೂಪ-ಕ್ರಿಯೆಗಳನ್ನು ಮೀರಿ ಇರುವ ವ್ಯೋಮಮೂರ್ತಿ.” ಅವರ ವಚನಗಳ ಕೇಂದ್ರಬಿಂದು — ಮನಸ್ಸಿನ ಸ್ಥಿರತೆ ಮತ್ತು ಇಷ್ಟಲಿಂಗ ಯೋಗ.

“ನಿಚ್ಚಕ್ಕೆ ನಿಚ್ಚ ನೆನೆವ ಮನವ… ಚಿತ್ತದಲಿ ನಿಲಿಸಬಲ್ಲಡೆ ಬಚ್ಚ ಬರಿಯ ಬಯಲು ಗುಹೇಶ್ವರ ಲಿಂಗವು”

ಅಲ್ಲಮರ ಮಾತು ಸ್ಪಷ್ಟ:
ಮನಸ್ಸನ್ನು ಅರಿಯದೆ ಮಾಡುವ ಯಾವ ಧರ್ಮಾಚರಣೆಗೂ ಅರ್ಥವಿಲ್ಲ. ಯಾತ್ರೆಗಳು, ತಪಸ್ಸುಗಳು, ಆಚರಣೆಗಳು—ಇವೆಲ್ಲವೂ ಮನಸ್ಸು ಸ್ಥಿರವಾಗದಿದ್ದರೆ ಶೂನ್ಯ. ಇಷ್ಟಲಿಂಗವೇ ಆ ಮನಸ್ಸನ್ನು ನಿಲ್ಲಿಸುವ ಸಾಧನ, ಆದರೆ ಅದು ಕೇವಲ ಸಂಕೇತ; ಅದರ ಮೂಲಕ ಅರಿವಿನ ಬಾಗಿಲು ತೆರೆಯಬೇಕು.

ಇಲ್ಲಿ ಅವರು ಒಂದು ಕ್ರಾಂತಿಕಾರಿ ಎಚ್ಚರಿಕೆ ನೀಡುತ್ತಾರೆ—
ಕುರುಹನ್ನು ದೇವರನ್ನಾಗಿ ಮಾಡಿಕೊಂಡು, ಅರ್ಥವನ್ನು ಕಳೆದುಕೊಳ್ಳಬೇಡಿ.

“ಅರಿವನೆ ಮರೆತು ಕುರುಹು ಪೂಜಿಸುವ ಕುರಿಗಳ ನೋಡಾ…”

ಇದು ಕೇವಲ ಧಾರ್ಮಿಕ ವಿಮರ್ಶೆ ಅಲ್ಲ; ಇದು ಮಾನವ ಮನಸ್ಸಿನ ಮೇಲಿನ ಗಂಭೀರ ವಿಶ್ಲೇಷಣೆ. ಸಂಕೇತವನ್ನು ಹಿಡಿದುಕೊಂಡು ಸತ್ಯವನ್ನು ಮರೆತಾಗ, ಭಕ್ತಿ ಅಂಧತೆಯಾಗುತ್ತದೆ.

ಅಲ್ಲಮ ಪ್ರಭುದೇವರು ಇಷ್ಟಲಿಂಗ ಧಾರಣೆಯನ್ನೇ ಪ್ರಶ್ನಿಸುವಷ್ಟು ತೀವ್ರರಾಗುತ್ತಾರೆ:

“ಅಂಗದ ಮೇಲೆ ಲಿಂಗ ಸ್ವಾಯತವಾದಡೇನು? ಭಕ್ತನಾಗಬಲ್ಲನೆ?”

ಅವರ ಪ್ರಶ್ನೆ ಇಂದಿಗೂ ಕಾಡುತ್ತದೆ—
ಲಿಂಗವನ್ನು ಧರಿಸುವುದು ಸಾಕೇ? ಅಥವಾ ಅದನ್ನು ಬದುಕುವುದು ಮುಖ್ಯವೇ?

ಅವರು ದೇವಾಲಯ ಸಂಸ್ಕೃತಿಯನ್ನೇ ತಿರಸ್ಕರಿಸುತ್ತಾರೆ:

“ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ…”

ಇದು ದೇವಾಲಯ ವಿರೋಧವಲ್ಲ; ಜೀವಂತ ದೇವನನ್ನು ಕಲ್ಲಿನಲ್ಲಿ ಬಂಧಿಸುವ ಮನೋಭಾವದ ವಿರುದ್ಧದ ಬಂಡಾಯ.

ಇಂದಿನ ಸಮಾಜದಲ್ಲಿ ಧರ್ಮವು ವ್ಯಾಪಾರವಾಗುತ್ತಿರುವ ಸಂದರ್ಭದಲ್ಲಿ, ಅಲ್ಲಮರ ಈ ಮಾತುಗಳು ಇನ್ನಷ್ಟು ಪ್ರಸ್ತುತ. ಭಕ್ತಿಯ ಹೆಸರಿನಲ್ಲಿ ನಡೆಯುವ ಆಚರಣೆಗಳು, ಪ್ರತಿಷ್ಠಾಪನೆಗಳು, ಆರ್ಥಿಕ ವ್ಯವಹಾರಗಳು—ಇವೆಲ್ಲವೂ ಅವರ ದೃಷ್ಟಿಯಲ್ಲಿ ಅಜ್ಞಾನದ ವಲಯ.

ಅಲ್ಲಮ ಪ್ರಭುದೇವರು ಮಾನವ ಜೀವನದ ಮಾನಸಿಕ ಶಿಸ್ತನ್ನೂ ಹೀಗೆ ನಿರ್ಧರಿಸುತ್ತಾರೆ:

“ಸ್ತುತಿ ನಿಂದೆಗೆ ಕಿವುಡನಾಗಿರಬೇಕು…”

ಇದು ಆತ್ಮಶಕ್ತಿಯ ಸೂತ್ರ. ಸ್ತುತಿಯಿಂದ ಹಿಗ್ಗದವನು, ನಿಂದೆಯಿಂದ ಕುಗ್ಗುವುದಿಲ್ಲ. ಇದು ಯೋಗಿಯ ಲಕ್ಷಣ.

ಆದರೆ ಅಲ್ಲಮ ಪ್ರಭುದೇವರ ವ್ಯಕ್ತಿತ್ವದ ಅತ್ಯಂತ ಮೃದುವಾದ ಹಾಗೂ ಮಹಾನ್ ಅಂಶ — ಗುರು ಬಸವಣ್ಣನವರ ಮೇಲಿನ ಅವರ ಅನನ್ಯ ಭಕ್ತಿ.

ಅದ್ವೈತ, ಬ್ರಹ್ಮ, ಶೂನ್ಯ—ಎಲ್ಲದರ ಅನುಭವ ಪಡೆದ ಅವರು ಕೊನೆಗೆ ಒಪ್ಪಿಕೊಳ್ಳುತ್ತಾರೆ:

“ಗುರು ಬಸವಣ್ಣನ ಸಾನಿಧ್ಯದಿಂದಾನು ಸದ್ಭಕ್ತನಾದೆನಯ್ಯ”

ಇದು ಆಧ್ಯಾತ್ಮಿಕ ಪರಿಪಕ್ವತೆಯ ಪರಾಕಾಷ್ಠೆ. ಜ್ಞಾನದಿಂದ ಭಕ್ತಿ ಕಡೆಗೆ ಆಗುವ ಈ ಪ್ರವಾಸವೇ ಅಲ್ಲಮರ ಮಹಿಮೆ.

ಇಂದಿನ ಕಾಲದಲ್ಲಿ, ಧರ್ಮವು ರೂಪಕಗಳಲ್ಲಿ ಸಿಲುಕಿಕೊಂಡು, ಆಂತರಿಕ ಅನುಭವವನ್ನು ಮರೆತಿರುವಾಗ, ಅಲ್ಲಮ ಪ್ರಭುದೇವರ ಸಂದೇಶ ಒಂದು ಎಚ್ಚರಿಕೆಯ ಗಂಟೆ:

ಕುರುಹನ್ನು ಮೀರಿ ಅರ್ಥವನ್ನು ಅರಿತುಕೊಳ್ಳಿ

ಆಚರಣೆಯನ್ನು ಮೀರಿ ಅನುಭವವನ್ನು ಹುಡುಕಿ

ಭಕ್ತಿಯನ್ನು ಯಾಂತ್ರಿಕತೆಯಿಂದ ಮುಕ್ತಗೊಳಿಸಿ

ಅಲ್ಲಮ ಪ್ರಭುದೇವರು ನಮಗೆ ಹೇಳುವುದು ಒಂದೇ—
ಲಿಂಗವನ್ನು ಧರಿಸುವುದಲ್ಲ, ಲಿಂಗವಾಗುವುದೇ ಸಾಧನೆ.

ಅವರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ, ಭಕ್ತಿ ಜ್ಞಾನವಾಗುತ್ತದೆ, ಜ್ಞಾನ ಅನುಭವವಾಗುತ್ತದೆ, ಅನುಭವ ಮುಕ್ತಿ ಆಗುತ್ತದೆ.

ಪರಿವಿಡಿ (index)
ಬಸವಣ್ಣನವರೇ ನಮ್ಮೆಲ್ಲರ ದೀಕ್ಷಾಗುರು :👈 👉:ಲಿಂಗಾಯತ