ರೇಣುಕಾಚಾರ್ಯ ಮತ್ತು ಪಂಚಾಚಾರ್ಯರು ಕಾಲ್ಪನಿಕವೆ ?
|
|
✍ — ಪ್ರೋ. ಸಂಜಯಕುಮಾರ ಮಾಕಲ್.
🙏 - ಶರಣು ಶರಣಾರ್ಥಿ
ರೇಣುಕಾಚಾರ್ಯ ಮತ್ತು ಪಂಚಾಚಾರ್ಯರು ಕಾಲ್ಪನಿಕವೆ ?
ಕೇದಾರ ಜಗದ್ಗುರುಗಳು ವೀರಶೈವ ಧರ್ಮವು ಐದು ಸಾವಿರ ವರ್ಷಗಳಿಗಿಂತಲೂ ಹಳೆಯದ್ದಾಗಿದೆˌ ಇದಕ್ಕೆ ಅವರ ಬಳಿ ಆಧಾರಗಳಿವೆ ಎಂದು ಹೆಳಿದ್ದಾರೆ. ಖ್ಯಾತ ಸಂಶೋಧಕರು ಆಗಿದ್ದ ದಿ. ಡಾ ಎಂ ಚಿದಾನಂದಮೂರ್ತಿಯವರು ಇಡಿ ಭಾರತ ಇತಿಹಾಸ ಪರಂಪರೆಯಲ್ಲಿ ವೀರಶೈವವು ಹನ್ನೊಂದನೇಯ ಮತ್ತು ಹನ್ನೆರಡನೇಯ ಶತಮಾನದ ನಡುವೆ ಕಂಡುಬರುತ್ತದೆ ಎಂದು ಸಂಶೋಧನಾತ್ಮಕವಾದ ಲೇಖನದಲ್ಲಿ ಹೇಳಿದ್ದಾರೆ.
ಹಾಗಾದರೆ ಈ ಇಬ್ಬರಲ್ಲಿ ಯಾರದು ಸತ್ಯವಾದದ್ದಿದೆ ? ಜನರು ಯಾವುದನ್ನು ಸ್ವೀಕಾರ ಮಾಡಬೇಕು ?
ಕೇದಾರ ಜಗದ್ಗುರುಗಳ ವಾದ
ಕೇದಾರ ಜಗದ್ಗುರುಗಳು ವೀರಶೈವ ಧರ್ಮ ಐದುಸಾವಿರ ವರ್ಷಗಳಿಗಿಂತಲೂ ಮುಂಚಿನದ್ದಾಗಿದೆ. ವೀರಶೈವ ಧರ್ಮದ ಸ್ಥಾಪಕರು ಪಂಚಾಚಾರ್ಯರಾಗಿದ್ದುˌ ಸಿದ್ದಾಂತ ಶಿಖಾಮಣಿ ಇದರ ಧರ್ಮಗ್ರಂಥವಾಗಿದೆ. ಇವುಗಳ ಆಧಾರ ಲಿಖಿತವಾಗಿಯೂˌ ಮೌಕಿಕವಾಗಿಯು ಮತ್ತು ಪರಂಪರಾಗತವಾಗಿಯೂ ಇದೆ ಎಂದು ಹೇಳುತ್ತಾರೆ. ಇದು ಇಲ್ಲವೆ ಇಲ್ಲ ಎನ್ನುವವರುˌ ಅದು ಹೇಗೆ ಇಲ್ಲ ಎಂದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಜಗದ್ಗುರುಗಳು ಹೀಗೆ ಸವಾಲು ಹಾಕುವದಕ್ಕಿಂತ ಅದರ ಸತ್ಯಾಸತ್ಯತೆ ಹೇಳಿದ್ದರೆ ಎಲ್ಲ ಗೊಂದಲಗಳಿಗೆ ತೆರೆ ಬಿಳುತ್ತದೆ. ಜನತೆ ತಾನಾಗಿಯೆ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ.
📚 ಐತಿಹಾಸಿಕ ಮತ್ತು ಶಾಸನಾತ್ಮಕ ವಿಶ್ಲೇಷಣೆ
ಹಾಗಾದರೆ ಐದುಸಾವಿರ ವರುಷಗಳ (ಅಥವಾ ದೇವ ವರುಷಗಳ) ಹಿಂದಿನಿಂದಲೂ ವೀರಶೈವದ ಕುರಿತˌ ಪಂಚಾಚಾರ್ಯರು ಇರಲಿಲ್ಲ ಎನ್ನುವದಕ್ಕೆ ಭಾರತದಲ್ಲಿ ಲಭ್ಯವಿರುವ ಪರಂಪರೆˌ ಚರಿತ್ರೆˌ ಶಾಸನ ಮತ್ತು ಪುರಾಣಗಳನ್ನು ಗಮನಿಸಬೇಕಾಗುತ್ತದೆ.
📜 ವೇದಗಳು ಮತ್ತು ಪುರಾಣಗಳು
- ಭಾರತದ ಅತಿ ಪ್ರಾಚೀನವಾದ ನಾಲ್ಕು ವೇದಗಳಾದ ೠಗ್ವೇದˌ ಯಜುರ್ವೇದˌ ಸಾಮವೇದˌ ಅಥರ್ವಣ ವೇದಗಳನ್ನು ಗಮನಿಸಿದಾಗ ಅದರಲ್ಲಿ ರೇಣುಕಾಚಾರ್ಯˌ ಪಂಚಾಚಾರ್ಯರ ಪಂಚಪೀಠಗಳ ಉಲ್ಲೇಖಗಳು ಇರುವದಿಲ್ಲ.
- ಪ್ರಾಚಿನ ಕಾಲದಿಂದಲೂ ಭಾರತದಲ್ಲಿ ಕಂಡುಬರುವ ಪುರಾಣಗಳಾದ ಶಿವಪುರಾಣˌ ಲಿಂಗಪುರಾಣˌ ವಿಷ್ಣುಪುರಾಣˌ ಗರುಡಪುರಾಣˌ ಬ್ರಹ್ಮಪುರಾಣˌಮತ್ತ್ಯಪುರಾಣˌ ಸ್ಕಂದಪುರಾಣˌ ವರಾಹ ಪುರಾಣˌ ವಿಷ್ಣು ಭಾಗವತ, ದೇವಿಭಾಗವತ ಇತ್ಯಾದಿ ಯಾವುದೆ ಪುರಾಣಗಳಲ್ಲಿಯೂ ರೇಣುಕಾಚಾರ್ಯ ಪಂಚಾಚಾರ್ಯ ಹಾಗೂ ಪಂಚಪೀಠಗಳ ಉಲ್ಲೇಖಗಳು ಅಪ್ಪಿತಪ್ಪಿಯೂ ಕಂಡುಬರುವದಿಲ್ಲ.
- ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಬರೆದ ಪುರಾಣಗಳಲ್ಲೂˌ ಪರಂಪರೆಯಲ್ಲೂ ರೇಣುಕಾಚಾರ್ಯ ಪಂಚಾಚಾರ್ಯ ಹಾಗೂ ಪಂಚಪೀಠಗಳ ಉಲ್ಲೇಖಗಳು ಅಪ್ಪಿತಪ್ಪಿಯೂ ಕಂಡುಬರುವದಿಲ್ಲ.
- ಭಾರತದಲ್ಲಿ ಪ್ರಚಲಿತದಲ್ಲಿರುವ ಮಹಾತಂತ್ರಗಳೆಂದೆ ಕರೆಯಲ್ಪಡುವ 108 ವೈಷ್ಣವ ಆಗಮಗಳುˌ 64 ಶಾಕ್ತ ಆಗಮಗಳು ಹಾಗೂ 28 ಶಿವಾಗಮಗಳಲ್ಲಿಯೂ ಅಪ್ಪತಪ್ಪಿಯೂ ರೇಣುಕಾಚಾರ್ಯ ಹಾಗೂ ಪಂಚಾಚಾರ್ಯ ಪಂಚಪೀಠಗಳ ಉಲ್ಲೇಖಗಳು ಇರುವದಿಲ್ಲ.
- ಭಾರತದ ಪ್ರಾಚೀನ ಗ್ರಂಥಗಳಾದ ಪ್ರಸ್ಥಾನತ್ರಯಗಳೆಂದು ಕರೆಯಲ್ಪಡುವ ಬ್ರಹ್ಮಸೂತ್ರˌ ಭಗವತ್ಗೀತೆˌ ಉಪನಿಷತ್ ಗಳಲ್ಲಿಯೂ ರೇಣುಕಾಚಾರ್ಯ ಪಂಚಾಚಾರ್ಯ ಹಾಗೂ ಪಂಚಪೀಠಗಳ ಉಲ್ಲೇಖ ಇರುವದಿಲ್ಲ.
- ಭಾರತದ ಮಹಾಕಾವ್ಯಗಳಾದ ವಾಲ್ಮಿಕಿ ರಾಮಾಯಣದಲ್ಲಿˌ ವ್ಯಾಸನ ಮಹಾಭಾರತದಲ್ಲಿˌ ಭಾರತದ ವಿವಿಧ ಭಾಷೆಗಳಲ್ಲಿ ಬರೆಯಲ್ಪಟ್ಟ ರಾಮಾಯಣ ಮಹಾಭಾರತ ಗ್ರಂಥಗಳಲ್ಲೂ ಸಹ ರೇಣುಕಾಚಾರ್ಯˌ ಪಂಚಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಇಲ್ಲ.
- ಶಂಕರಾಚಾರ್ಯರˌ ವಿದ್ಯಾವಾಚಸ್ಪತಿಯˌ ಯಮುನಾಚಾರ್ಯˌ ರಾಮಾನುಜಾಚಾರ್ಯˌ ಮದ್ವಾಚಾರ್ಯರ ಜೀವನ ಚರಿತ್ರೆಗಳಲ್ಲಿ ಮತ್ತು ಅವರು ರಚಿಸಿರುವ ಹಾಗೂ ಪ್ರತಿಪಾದಿಸಿರುವ ಸಿದ್ಧಾಂತ ಸಾಹಿತ್ಯಗಳಲ್ಲೂ ರೇಣುಕಾಚಾರ್ಯˌ ಪಂಚಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಬರುವದೆ ಇಲ್ಲ.
- ಶಿವಭಕ್ತರಾಗಿದ್ದ ಚೋಳ ಸಾಮ್ರಾಜ್ಯದ ವಂಶಸ್ಥರು ಶಿವಪರಂಪರೆಯನ್ನು ಬೆಳೆಸಿದವರು . ಅರವತ್ತು ಮೂರು ತಮಿಳು ಶಿವಭಕ್ತ ನಯನಾರರ ಜೀವನ ಕುರಿತ ಅನೇಕ ಗ್ರಂಥಗಳು ಲಭ್ಯವಾಗಿವೆ. ಆದರೆ ಇಡಿ ತಮಿಳು ಶಿವಭಕ್ತ ಪರಂಪರೆಯಲ್ಲಿ ˌ ತಮಿಳು ಶೈವ ಪರಂಪರೆಯಲ್ಲಿ ಎಲ್ಲೂ ರೇಣುಕಾಚಾರ್ಯ ˌ ಪಂಚಾಚಾರ್ಯ ಮತ್ತು ಪಂಚಪೀಠಗಳ ಉಲ್ಲೇಖಗಳು ಸಿಗುವದಿಲ್ಲ. ಬಸವಣ್ಣನವರು ಈ ತಮಿಳು ಶಿವಭಕ್ತ ನಯನಾರರನ್ನು ಅರವತ್ತುಮೂರು ಪುರಾತನರನ್ನು ತಮ್ಮ ವಚನಗಳಲ್ಲಿ ಸ್ಮರಿಸಿರುವುದು ಕಂಡುಬರುತ್ತದೆ. ಆದರೆ ಬಸವಾದಿ ಫ್ರಮಥರ ಯಾವುದೆ ವಚನಗಳಲ್ಲಿ ಅಪ್ಪಿತಪ್ಪಿಯೂ ರೇಣುಕಾಚಾರ್ಯ ˌ ಪಂಚಾಚಾರ್ಯ ಮತ್ತು ಪಂಚಪೀಠಗಳ ಹೆಸರುಗಳು ಸಹ ಕಂಡು ಬರುವದಿಲ್ಲ.
- 11ನೇಯ ಶತಮಾನದಲ್ಲಿ ಕಾಶ್ಮಿರದ ಕವಿ ಪಂಡಿತ ಕಲ್ಹಣನು ಬರೆದ ರಾಜತರಂಗಿಣಿ ಎಂಬ ಗ್ರಂಥದಲ್ಲಿ ವೇದಕಾಲದ ಕಶ್ಯಪ ಮಹರ್ಷಿಯಿಂದ ಹಿಡಿದು 12ನೆಯ ಶತಮಾನದವರೆಗಿನ ಶೈವ ಪರಂಪರೆಯ ˌ ಬೌದ್ದ ಪರಂಪರೆಯˌ ವೈದಿಕ ಪರಂಪರೆಯ ಕುರಿತ ˌ ಅನೇಕ ರಾಜ ಮನೆತನಗಳ ಕುರಿತ ಇತಿಹಾಸವನ್ನು ಬರೆದಿದ್ದಾನೆ. ಆದರೆ ಆ ರಾಜತರಂಗಿಣಿ ಗ್ರಂಥದಲ್ಲಿ ರೇಣುಕಾಚಾರ್ಯ ˌ ಪಂಚಾಚಾರ್ಯ ಮತ್ತು ಪಂಚಪೀಠಗಳ ಹೆಸರುಗಳು ಸಿಗುವದಿಲ್ಲ
- ಕ್ರಿ.ಶ.11 ಮತ್ತು 12ನೇಯ ಶತಮಾನದಲ್ಲಿ ಬದುಕಿದ್ದ ಕುರುಬರ ಕುಲಗುರು ರೇವಣಸಿದ್ದರ ಜೀವನ ಚರಿತ್ರೆಯಲ್ಲಿ ˌ ರೇವಣಸಿದ್ದರ ಕುರಿತ ಪುರಾಣಗಳಲ್ಲಿಯೂ ಅಪ್ಪಿತಪ್ಪಿಯೂ ರೇಣುಕಾಚಾರ್ಯ ಪಂಚಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಕಂಡುಬರುವದಿಲ್ಲ . ಬದಲಿಗೆ ಯಾದಗಿರಿ ಜಿಲ್ಲೆಯಲ್ಲಿನ ಶಹಾಪೂರ ತಾಲ್ಲೂಕಿನ 12ನೇಯ ಶತಮಾನದ ಶಿರವಾಳ ಶಾಸನದಲ್ಲಿ ಗುರು ರೇವಣಸಿದ್ದರು ಲಿಂಗದಿಕ್ಷೆ ಪಡೆದರೆಂಬ ಉಲ್ಲೇಖವಿದೆ . ಗುರು ರೇವಣಸಿದ್ದರು ಬಸವಾದಿ ಪ್ರಮಥರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದೆ.
- ಕ್ರಿ.ಶ. 11-12ನೇಯ ಶತಮಾನದಲ್ಲಿ ಬದುಕಿದ್ದ ಕೊಂಡಗುಳಿ ಕೇಶಿರಾಜನು ಶೈವಕವಿ ಪಂಡಿನೆಂದುˌ ಮಹಾಶಿವಭಕ್ತನೆಂದು ಫ್ರಖ್ಯಾತನಾಗಿದ್ದಾನೆ. ಕಲ್ಯಾಣ ಚಾಲುಕ್ಯರ ಆರನೇಯ ವಿಕ್ರಮಾದಿತ್ಯನ ಆಸ್ತಾನದಲ್ಲಿ ದಂಡನಾಯಕನಾಗಿದ್ದನು. ಕೊಂಡಗುಳಿ ಕೇಶಿರಾಜನ ಕುರಿತು ಕ್ರಿ.ಶ.1107 ಹಾಗೂ ಕ್ರಿ.ಶ.1132ರ ಎರಡು ಶಾಸನಗಳು ಕಂಡುಬರುತ್ತವೆ . ಈ ಎಲ್ಲ ಶಾಸನಗಳು ಕೊಂಡಗುಳಿ ಕೇಶಿರಾಜನು ಶೈವನೆಂದೆ ಹೇಳುತ್ತವೆ ಹೊರತು ವೀರಶೈವನೆಂದಲ್ಲ. ಕ್ರಿ.ಶ. 1132ರ ಶಾಸನದಲ್ಲಿ ಕೊಂಡಗುಳಿ ಕೇಶಿರಾಜನು ಸೂತ್ರಸಂಹಿತೆ ˌ ಯಾಜ್ಞ್ಯವಲ್ಕ್ಯ ಸಂಹಿತೆ ಮತ್ತು ವ್ಯಾಕರಣ ಉಪದೇಶಿಸುವ ಉಪಾಧ್ಯಾಯರಿಗೆ ಮಾಶಾಸನ ದಾನವಾಗಿ ಕೊಡುತ್ತಿದ್ದ. ಈ ಎರಡು ಶಾಸನಗಳಲ್ಲಿ ಸಿದ್ದಾಂತ ಶಿಖಾಮಣಿ ಎಂದಾಗಲಿˌ ವೀರಶೈವ ಎಂದಾಗಲಿˌ ರೇಣುಕಾಚಾರ್ಯˌ ಪಂಚಾಚಾರ್ಯ ಮತ್ತು ಪಂಚಪೀಠಗಳ ಉಲ್ಲೇಖಗಳಾಗಲಿ ಕಂಡುಬರುವದಿಲ್ಲ. ಕೇಶಿರಾಜನು ಷಡಕ್ಷರ ಮಂತ್ರಮಹಿಮೆ, ಲಿಂಗಮಹತ್ವದ ಕಂದ, ಮಂತ್ರಮಹತ್ವದಕಂದ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಅವನ ಯಾವ ಗ್ರಂಥಗಳಲ್ಲೂ ವೀರಶೈವ ˌ ಸಿದ್ದಾಂತ ಶಿಖಾಮಣಿಯˌ ರೇಣುಕಾಚಾರ್ಯ ಪಂಚಾಚಾರ್ಯ ಹಾಗೂ ಪಂಚಪೀಠಗಳ ಉಲ್ಲೇಖಗಳು ಕಂಡುಬರುವದಿಲ್ಲ .
- 12ನೇಯ ಶತಮಾನದ ಬಸವಾದಿ ಶಿವಶರಣರ ಮತ್ತು ನಂತರ ಬರುವ ಶಿವಶರಣರ ವಚನಗಳು ನಮಗೆ ಇಲ್ಲಿಯವರೆಗೆ ಇಪ್ಪತ್ತಾರು ಸಾವಿರ ವಚನಗಳು ಲಭ್ಯವಾಗಿವೆ. ಇವುಗಳಲ್ಲಿ ಒಂದೆ ಒಂದು ಶರಣರ ವಚನದಲ್ಲಿ ರೇಣುಕಾಚಾರ್ಯ ಹಾಗೂ ಪಂಚಾಚಾರ್ಯ ಪಂಚಪೀಠಗಳ ಹೆಸರುಗಳು ಅಪ್ಪಿತಪ್ಪಿಯೂ ಇರುವದಿಲ್ಲ .
-
12ನೇಯ ಶತಮಾನದ ಹಾಗೂ ನಂತರದಲ್ಲಿ ಬಸವಾದಿ ಶರಣರ ಕುರಿತ ಜೀವನ ಚರಿತ್ರೆಗಳಲ್ಲಿ ಹಾಗೂ ಅವರ ಕುರಿತು ಹರಿಹರˌ ಭೀಮಕವಿ ˌ ಚಾಮರಸ ಬರೆದ ಪುರಾಣಗಳಲ್ಲಿ ಹಾಗೂ ರಗಳೆಗಳಲ್ಲಿಯೂ ಸಹ ಅಪ್ಪಿತಪ್ಪಿ ರೇಣುಕಾಚಾರ್ಯˌ ಪಂಚಾಚಾರ್ಯ ಹಾಗೂ ಪಂಚಪೀಠಗಳ ಹೆಸರುಗಳು ಇಲ್ಲವೆ ಇಲ್ಲ .
- 12ನೇಯ ಶತಮಾನದಲ್ಲಿ ತೆಲಗು ಕವಿ ಪಾಲ್ಕುರಿಕೆ ಸೋಮನಾಥ ˌ ಪಂಡಿತಾರಾಧ್ಯ ˌ ಹರಿಹರˌ ಭೀಮಕವಿ ˌ ಚಾಮರಸ ಮುಂತಾದವರ ಮಹಾಕಾವ್ಯ ಪುರಾಣ ಸ್ತೋತ್ರ ರಗಳೆಗಳಲ್ಲಿಯೂ ಸಹ ರೇಣುಕಾಚಾರ್ಯ ˌ ಪಂಚಾಚಾರ್ಯ ಮತ್ತು ಪಂಚಪೀಠಗಳ ಉಲ್ಲೇಖ ಕಂಡುಬರುವದಿಲ್ಲ.
- ಅಗಸ್ತ್ಯ ಮುನಿಗೆ ರೇಣುಕಾಚಾರ್ಯರು ಸಿದ್ದಾಂತ ಶಿಖಾಮಣಿ ಬೋಧಿಸಿದರು ಎಂದು ಸಿದ್ದಾಂತ ಶಿಖಾಮಣಿಯಲ್ಲಿ ಹೇಳಲಾಗುತ್ತದೆ. ಆದರೆ ಅಗಸ್ತ್ಯಮುನಿಯ ಜೀವನದ ಘಟನೆಗಳು ವೇದ ಪುರಾಣಗಳಲ್ಲಿ ಬರುವದರಿಂದ ಅಗಸ್ತ್ಯ ಮುನಿಯ ಜೀವನ ಕಥೆಯಲ್ಲಿ ರೇಣುಕಾಚಾರ್ಯರು ಸಿದ್ದಾಂತ ಶಿಖಾಮಣಿ ಬೋಧಿಸಿರುವ ಘಟನೆ ಯಾವುದೆ ವೇದ ಪುರಾಣಗಳಲ್ಲಿ ಕಂಡು ಬರುವದಿಲ್ಲ. ಸ್ವತಃ ಅಗಸ್ತ್ಯಮುನಿಯೆ ಸಂಸ್ರ್ಕುತದಲ್ಲಿ ರಚಿಸಿರುವ ಅಗಸ್ತ್ಯಗೀತಾ ಉಪದೇಶ ವರಾಹ ಪುರಾಣದಲ್ಲಿ ಮತ್ತು ಅಗಸ್ತ್ಯ ಸಂಹಿತೆ ಸ್ಕಂದ ಪುರಾಣದಲ್ಲಿ ಮತ್ತು ದ್ವೈಧ ನಿರ್ಣಯ ತಂತ್ರಗಳಲ್ಲಿಯೂ ರೇಣುಕಾಚಾರ್ಯ ˌ ಪಂಚಾಚಾರ್ಯ ಮತ್ತು ಪಂಚಪೀಠಗಳ ಉಲ್ಲೇಖ ಕಂಡುಬರುವದಿಲ್ಲ
- 14ನೇಯ ಶತಮಾನದಲ್ಲಿ ವಿಜಯನಗರದ ಅರಸನಾದ ಪ್ರೌಢದೇವರಾಯನ ಶಾಸನದಲ್ಲಿ ವೀರಶೈವ ಎಂದಿದೆ. ಆದರೆ ಆ ಶಾಸನದಲ್ಲಿ ರೇಣುಕಾಚಾರ್ಯ ಪಂಚಾಚಾರ್ಯ ಮತ್ತು ಪಂಚಪೀಠಗಳ ಉಲ್ಲೇಖಗಳು ಇರುವದಿಲ್ಲ. ಪ್ರೌಢದೇವರಾಯ ಹಾಗೂ ಅವನ ನಂತರದ ಕಾಲದಲ್ಲಿ ಬಸವಾದಿ ಶರಣರ ಕುರಿತು ಅನೇಕ ಸಾಹಿತ್ಯಗಳುˌ ಪುರಾಣಗಳು ˌರಗಳೆಗಳು ಹೊರಬಂದವು. ಆದರೆ ಅಪ್ಪಿತಪ್ಪಿಯೂ ವಿಜಯನಗರದ ಸಾಮ್ರಾಜ್ಯದ ಅವಧಿಯ ಯಾವ ಸಾಹಿತ್ಯದಲ್ಲಿಯೂ ರೇಣುಕಾಚಾರ್ಯˌ ಪಂಚಾಚಾರ್ಯ ಮತ್ತು ಪಂಚಪೀಠಗಳ ಉಲ್ಲೇಖಗಳು ಕಂಡುಬರುವದಿಲ್ಲ.
- ಯಡಿಯೂರು ಸಿದ್ದಲಿಂಗೇಶ್ವರರ ಪುರಾಣ ಜೀವನ ಚರಿತ್ರೆಯಲ್ಲಾಗಲಿ ˌ ಅವರ ರಚಿಸಿರುವ ವಚನಗಳಲ್ಲಾಗಲಿ ರೇಣುಕಾಚಾರ್ಯ ˌ ಪಂಚಾಚಾರ್ಯ ˌ ಪಂಚಪೀಠಗಳ ಉಲ್ಲೇಖಗಳು ಸಿಗುವದಿಲ್ಲ.
- ವಿಜಯನಗರ ಸಾಮ್ರಾಜ್ಯದಲ್ಲಿ ಬರುವ ಮಗ್ಗೆಯ ಮಾಯಿದೇವರು " ಜಯ ಬಸವೇಶˌ ಭಕ್ತಜನಭಾಗ್ಯ ˌ ಶುಭೋದಯ ವೀರಶೈವ ನಿರ್ಣಯ " ಎಂದು ಹೇಳಿದ್ದಾರೆ . ಆದರೆ ಅವರು ರಚಿಸಿದ ಯಾವೊಂದು ಸಾಹಿತ್ಯದಲ್ಲೂ ರೇಣುಕಾಚಾರ್ಯ ˌ ಪಂಚಾಚಾರ್ಯ ಪಂಚಪೀಠಗಳ ಉಲ್ಲೇಖಗಳು ಬರುವದಿಲ್ಲ.
- ಕ್ರಿ.ಶ. 15ನೇಯ ಶತಮಾನದಲ್ಲಿ ಬದುಕಿದ್ದ ಕನ್ನಡನಾಡಿನ ಅಧ್ಯಾತ್ಮ ಶಿಖರವೆಂದೆ ಕರೆಯಲ್ಪಡುವ ನಿಜಗುಣ ಶಿವಯೋಗಿಗಳು ಕೈವಲ್ಯ ಪದ್ದತಿ ˌ ವಿವೇಕ ಚಿಂತಾಮಣಿ ಯಂತಹ ಆರು ಷಟ್ ಶಾಸ್ರ್ತಗಳನ್ನು ರಚಿಸಿದ್ದಾರೆ . ಆ ಷಟ್ ಶಾಸ್ರ್ತಗಳಲ್ಲಿ ನಿಜಗುಣ ಶಿವಯೋಗಿಗಳು ಕೈಲಾಸದ ಶಿವನನ್ನು ˌ ಪಾರ್ವತಿ ˌ ಗಣಪತಿˌ ಷಣ್ಮುಖ ˌ ನಂದಿˌ ವೀರಭದ್ರರನ್ನು ಸ್ಮರಿಸಿದ್ದಾರೆ. ಆದರೆ ಅವರ ಷಟ್ ಶಾಸ್ರ್ತಗಳಲ್ಲಿ ರೇಣುಕಾಚಾರ್ಯ ಪಂಚಾಚಾರ್ಯ ಹಾಗೂ ಪಂಚಪೀಠಗಳ ಕುರಿತು ಉಲ್ಲೇಖಗಳು ಇರುವದಿಲ್ಲ.
- ಕ್ರಿ ಶ 16ನೇಯ ಶತಮಾನದಲ್ಲಿ ನಿಜಗುಣ ಶಿವಯೋಗಿಗಳ ಸಮಕಾಲಿನರು ಆದ ಮುಪ್ಪಿನ ಷಡಾಕ್ಷರಿಯವರ ಜೀವನ ಚರಿತ್ರೆಯಲ್ಲಾಗಲಿ ಹಾಗೂ ಅವರು ರಚಿಸಿರುವ ಯಾವುದೆ ಕಾವ್ಯ ಸಾಹಿತ್ಯದಲ್ಲೂ ಅಪ್ಪಿತಪ್ಪಿಯೂ ರೇಣುಕಾಚಾರ್ಯˌ ಪಂಚಾಚಾರ್ಯ ಪಂಚಪೀಠಗಳ ಉಲ್ಲೇಖಗಳು ಕಂಡುಬರುವದಿಲ್ಲ.
- ಕ್ರಿ.ಶ. 17ನೇಯ ಶತಮಾನದಲ್ಲಿದ್ದ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ರಚಿಸಿರುವ 800ಕ್ಕೂ ಹೆಚ್ಚು ವಚನಗಳು ಲಭ್ಯವಾಗಿವೆ. ಷಣ್ಮುಖ ಶಿವಯೋಗಿಗಳು ರಚಿಸಿರುವ ವಚನಗಳಲ್ಲಿ ರೇಣುಕಾಚಾರ್ಯ ˌ ಪಂಚಾಚಾರ್ಯ ಪಂಚಪೀಠಗಳ ಉಲ್ಲೇಖಗಳು ಇರುವದಿಲ್ಲ.
- 16ನೇಯ ಶತಮಾನದಲ್ಲಿ ಮಹಾರಾಷ್ರ್ಟ ರಾಜ್ಯದ ಕಪಿಲಧಾರಾದಲ್ಲಿ ಮನ್ಮಥಸ್ವಾಮಿಗಳೆಂಬ ಮಹಾತ್ಮರು ಆಗಿಹೋಗಿದ್ದಾರೆ. ಮನ್ಮಥಸ್ವಾಮಿಗಳು ಜನರಲ್ಲಿ ಶಿವಭಕ್ತಿ ಮೂಡಿಸಲು ಶಿವಲೀಲಾಮ್ರುತ ˌ ಶಿವಸಪ್ತಾಹಗಳನ್ನು ಜಾರಿಗೆ ತಂದಿದ್ದರು. ಮನ್ಮಥ ಸ್ವಾಮಿಗಳು ಮರಾಠಿಯಲ್ಲಿ "ಪರಮ ರಹಸ್ಯ" ಎಂಬ ಗ್ರಂಥ ರಚಿಸಿದ್ದಾರೆ. ಆ ಗ್ರಂಥದಲ್ಲಿ ಮನ್ಮಥ ಸ್ವಾಮಿಗಳು ತಾವು ಬಸವಣ್ಣನವರ ತೊಟ್ಟಿಲ ಕಂದ ಎಂದು ಹೇಳಿಕೊಂಡಿದ್ದಾರೆ. ಅವರು ಬರೆದ " ಪರಮ ರಹಸ್ಯ" ಗ್ರಂಥದಲ್ಲಿ ಸುಮಾರು ಹನ್ನೊಂದಕ್ಕೂ ಹೆಚ್ಚಿನ ಕಡೆ ಲಿಂಗಾಯತ ಪದ ಬಳಸಿದ್ದಾರೆ ˌ ಆದರೆ ಅವರ ಗ್ರಂಥದಲ್ಲಿ ರೇಣುಕಾಚಾರ್ಯ ಪಂಚಾಚಾರ್ಯ ಮತ್ತು ಪಂಚಪೀಠಗಳ ಬಗ್ಗೆ ಯಾವುದೆ ಉಲ್ಲೇಖಗಳು ಕಂಡುಬರುವದಿಲ್ಲ.
- ಸಿದ್ದಾರೂಢರು ಹಾಗೂ ಸಿದ್ದಾರೂಢರ ಪರಪಂರೆಯಲ್ಲೂ ಅಪ್ಪಿತಪ್ಪಿಯೂ ರೇಣುಕಾಚಾರ್ಯರ ಪಂಚಾಚಾರ್ಯ ಪರಂಪರೆರವರ ಹೆಸರು ಎಲ್ಲೂ ಕಂಡುಬರುವದಿಲ್ಲ.
✍️ ಆಚಾರ್ಯರರು ಬೇರೆ ˌ ಧರ್ಮ ಸ್ಥಾಪಕರು ಬೇರೆ
ಧರ್ಮಸ್ಥಾಪಕರು ಧರ್ಮ ಸ್ಥಾಪಿಸಿದರೆˌ ಆ ಧರ್ಮವನ್ನು ಮುಂದುವರೆಸಿಕೊಂಡು ಹೋಗುವವರಿಗೆˌ ಆ ಧರ್ಮದಲ್ಲಿರುವ ತತ್ವ ಸಿದ್ದಾಂತಗಳನ್ನು ಬೆಳಕಿಗೆ ತಂದು ಮರುಸ್ಥಾಪಿಸುವವರಿಗೆ ಆಚಾರ್ಯ ಎಂದು ಕರೆಯುತ್ತಾರೆ
ಶಂಕರˌ ರಾಮಾನುಜˌ ಮಧ್ವ ˌ ಸಾಯಣ ˌ ನಿಂಬಾರಕ ˌ ವಿದ್ಯಾರಣ್ಯರಿಗೆ ಆಚಾರ್ಯರೆಂದು ಕರೆಯುತ್ತಾರೆ . ಇವರನ್ನು ಧರ್ಮಸ್ಥಾಪಕರೆಂದು ಕರೆಯುವದಿಲ್ಲˌ . ಏಕೆಂದರೆ ಇವರೆಲ್ಲರು ಹುಟ್ಟುವದಕ್ಕಿಂತ ಮುಂಚೆ ವೈದಿಕ ಧರ್ಮ ಅಸ್ತಿತ್ವದಲ್ಲಿತ್ತು. ಈ ಎಲ್ಲ ಆಚಾರ್ಯರು ಹುಟ್ಟುವದಕ್ಕಿಂತ ಮುಂಚೆಯೆ ವೇದˌ ಉಪನಿಷತ್ˌ ಬ್ರಹ್ಮಸೂತ್ರ, ಭಗವತ್ಗೀತೆಗಳು ಇದ್ದವು. ಕಾಲಾನಂತರದಲ್ಲಿ ಆಚಾರ್ಯರು ವೈದಿಕ ಧರ್ಮಶಾಸ್ರ್ತದ ಪ್ರಸ್ತಾನತ್ರಯಗಳಿಗೆ ಭಾಷ್ಯೆ ಬರೆದರು ˌ ಅದನ್ನು ತಮ್ಮ ಶಿಷ್ಯಂದಿರ ಮುಖಾಂತರ ಪ್ರಸಾರ ಮಾಡಿದರು. ಇಂತಹವರಿಗೆ ಆಚಾರ್ಯರೆಂದು ಕರೆಯುತ್ತಾರೆಯೆ ಹೊರತು ಇವರಿಗೆ ಎಂದೂ ಧರ್ಮ ಸ್ಥಾಪಕರೆಂದು ಕರೆಯಲ್ಪಡುವದಿಲ್ಲ.
-
ರೇಣುಕಾಚಾರ್ಯ ಪಂಚಾಚಾರ್ಯ ಐವರಿಗೆ ಆಚಾರ್ಯರೆಂದೆ ಕರೆಯಲ್ಪಡುವದರಿಂದ ಇವರು ಧರ್ಮಸ್ಥಾಪಕರಾಗುವದಿಲ್ಲ. ಹೀಗಾಗಿ ಇವರನ್ನು ವೀರಶೈವ ಧರ್ಮ ಸ್ಥಾಪಕರೆನ್ನಲಾಗದು. ಏಕೆಂದರೆ ಇವರು ಅವತರಿಸುವದಕ್ಕಿಂತ ಮುಂಚೆಯೆ ಇಪ್ಪತ್ತೆಂಟು ಶಿವಾಗಮಗಳು ಅಸ್ಥಿತ್ವದಲ್ಲಿದ್ದವು. ಸಾಕ್ಷಾತ ಶಿವನು ಇಪ್ಪತ್ತೆಂಟು ಶೈವಸಿದ್ದಾಂತಗಳು ˌ ಆಗಮಗಳನು ಪಾರ್ವತಿ ಮತ್ತು ಷಣ್ಮುಖನಿಗೆ ಭೋದಿಸಿ ಸ್ಥಾಪನೆ ಮಾಡಿರುತ್ತಾನೆ.
ನಂತರದಲ್ಲಿ ಶಿವನು ರೇಣುಕಾಚಾರ್ಯನಿಗೆ ಭೂಲೋಕದಲ್ಲಿ ಹೋಗಿ ಶಿವಾದ್ವೈತವಾದ ವೇದವೇದಾಂತ ಶಾಸ್ರ್ತವನು ಮತ್ತೊಮ್ಮೆ ಪುನರ ಸ್ಥಾಪಿಸು ಎಂದು ಅಪ್ಪಣೆ ಕೊಡುತ್ತಾರೆ.
ರೇಣುಕಾಚಾರ್ಯರು ಅಗಸ್ತ್ಯನಿಗೆ ಶಿವನಿಂದ ಹೇಳಲ್ಪಟ್ಟ ಈ ಎಲ್ಲ ಇಪ್ಪತ್ತೆಂಟು ಶಿವಾಗಮಗಳನು ಹೇಳಿದರೆಂದು. ಶಿವಾಗಮಗಳ ಉತ್ತರ ಭಾಗಗಳೆ ವೀರಶೈವ ಮತವಾಗಿದೆ ಎಂದು ಸಿದ್ದಾಂತ ಶಿಖಾಮಣಿಯ ಐದನೇಯ ಪರಿಚ್ಚೇಧ (ಅಧ್ಯಾಯ)ದ 14ನೇಯ ಶ್ಲೋಕವೆ ಹೇಳುತ್ತದೆ.
"ಸಿದ್ಧಾಂತಾಖ್ಯೆ ಮಹಾತಂತ್ರೇ ಕಾಮಿಕಾದೇ ಶಿವೊದಿತೇ ನಿರ್ದಿಷ್ಟಮುತ್ತರೇಭಾಗೇ ವೀರಶೈವಮತಂ ಪರಮ್ ॥" -(5 -24)
ಈ ಶ್ಲೋಕದಲ್ಲಿ ಗಮನಿಸಬೇಕಾದ ಮಹತ್ವವಾದ ಅಂಶವೆನೆಂದರೆ ವೀರಶೈವ ಮತವೆಂದು ಹೇಳಿದೆಯೆ ಹೊರತು ಧರ್ಮವೆಂದು ಹೇಳಿಲ್ಲ.
-
ಇನ್ನೊಂದು ಸಾಕ್ಷಿ ಎಂಬಂತೆ ಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ರೇಣುಕಾಚಾರ್ಯ ಅವತರಿಸುವದಕ್ಕಿಂತ ಮುಂಚೆಯೆ ರಾವಣನು ಆರು ಕೋಟಿ ಲಿಂಗಗಳನ್ನು ಸ್ಥಾಪನೆ ಮಾಡಿರುತ್ತಾನೆ. ಇನ್ನೂ ಮೂರುಕೋಟಿ ಲಿಂಗಗಳನ್ನು ಸ್ಥಾಪನೆ ಮಾಡದೆ ರಾವಣನ ಸಂಕಲ್ಪ ಅರ್ಧಕ್ಕೆ ನಿಂತಿರುತ್ತದೆ. ರೇಣುಕಾಚಾರ್ಯರು ರಾವಣನ ಅರ್ಧಕ್ಕೆ ನಿಂತ ಇನ್ನುಳಿದ ಮೂರುಕೋಟಿ ಲಿಂಗಗಳನ್ನು ವಿಭಿಷಣನ ಮುಖಾಂತರ ಸ್ಥಾಪನೆ ಮಾಡಿರುವುದು ಕಂಡುಬರುತ್ತದೆ. ಹೀಗಾಗಿ ರೇಣುಕಾಚಾರ್ಯಾದಿ ಪಂಚಾಚಾರ್ಯರು ಆಚಾರ್ಯರೆ ಹೊರತು ಧರ್ಮಸ್ಥಾಪಕರಾಗುವದಿಲ್ಲ.
- ಸ್ವಯಂಭುವಾಗಮದಲ್ಲಿ ರೇಣುಕಾಚಾರ್ಯ ˌ ದಾರುಕಾಚಾರ್ಯ ˌ ಘಂಟಾಕರ್ಣˌ ಗಜಕರ್ಣ, ವಿಶ್ವಕರ್ಣರೆಂಬ ಐದು ಆಚಾರ್ಯರರು ಕೃತಯುಗ (ಸತ್ ಯುಗ)ದಲ್ಲಿ ಸುಮಾರು 11000 (ದೇವ)ವರುಷಗಳ ಹಿಂದೆ ಅವತರಿಸಿದರು ಎಂದು ಹೇಳುತ್ತದೆ. ರಾವಣ ವಿಭಿಷಣರು ತ್ರೇತಾಯುಗದಲ್ಲಿ ಸುಮಾರು 6000 (ದೇವ)ವರುಷಗಳ ಹಿಂದೆ ಬದುಕಿದ್ದರು . ರೇಣುಕಾಚಾರ್ಯˌ ಪಂಚಾಚಾರ್ಯರು ಹಾಗೂ ರಾವಣ ವಿಭಿಷಣರ ನಡುವೆ 5000 (ದೇವ)ವರುಷಗಳ ಅಂತರವಿದೆ. ಹೀಗಿರುವಾಗ ರೇಣುಕಾಚಾರ್ಯರು ಅದು ಹೇಗೆ ವಿಭಿಷಣನ ಮುಖಾಂತರ ಮೂರು ಕೋಟಿ ಲಿಂಗಸ್ಥಾಪನೆ ಮಾಡಲು ಸಾಧ್ಯ?
📘 ಸಿದ್ದಾಂತ ಶಿಖಾಮಣಿ ಕುರಿತ ವಿಚಾರಗಳು
ವಿಚಿತ್ರವೆಂದರೆ ಸಿದ್ದಾಂತ ಶಿಖಾಮಣಿಯಲ್ಲಿ ರಾವಣನು ಮಡಿದ ಮೇಲೆ ರೇಣುಕಾಚಾರ್ಯರು ಅವತರಿಸುತ್ತಾರೆ. ಈ ಘಟನೆ ಯಾವ ರಾಮಾಯಣದಲ್ಲೂ ˌ ಉತ್ತರ ರಾಮಾಯಣ (ಉತ್ತರಕಾಂಡ)ದಲ್ಲೂ ಬರುವದಿಲ್ಲ. ಸಿದ್ದಾಂತ ಶಿಖಾಮಣಿ ಗ್ರಂಥ ಐದುಸಾವಿರ ವರ್ಷ ಹಳೆಯದ್ದಲ್ಲ ಅದು ಹದಿನಾಲ್ಕನೇಯ ಶತಮಾನದಲ್ಲಿ ಬರೆಯಲ್ಪಟ್ಟಿದೆ.
-
ಸಿದ್ದಾಂತ ಶಿಖಾಮಣಿಯ ಅಧ್ಯಾಯ ಪರಿಚ್ಛೇದ ಒಂದರಲ್ಲಿ ರೇವಣಸಿದ್ದೇಶ್ವರರ ಹೆಸರು ಪ್ರಸ್ತಾಪವಾಗುತ್ತದೆ . ಆ ರೇವಣಸಿದ್ದರು 12ನೇಯ ಶತಮಾನದಲ್ಲಿ ಬದುಕಿದ್ದರು.
ಗುರು ರೇವಣಸಿದ್ದರು 12ನೇಯ ಶತಮಾನದಲ್ಲಿದ್ದರು ಎಂಬುದಕ್ಕೆ ಇಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಿರವಾಳ ಶಾಸನವೆ ಸಾಕ್ಷಿ. ಆ ಶಾಸನದಲ್ಲಿ ಗುರು ರೇವಣಸಿದ್ದರು ಲಿಂಗದಿಕ್ಷೆ ಪಡೆದರು ಎಂಬ ಮಾಹಿತಿ ಸಿಗುತ್ತದೆ . ಈ ಶಾಸನದ ಪ್ರಕಾರ ರೇವಣಸಿದ್ದರು ಇಷ್ಟಲಿಂಗಧಾರಿಗಳಾಗಿರಲಿಲ್ಲ ನಂತರ ಇಷ್ಟಲಿಂಗದಿಕ್ಷೆ ಪಡೆದರು ಎಂದು ತಿಳಿದು ಬರುತ್ತದೆ.
-
ಸಿದ್ದಾಂತ ಶಿಖಾಮಣಿ ಗ್ರಂಥವನ್ನು ರಚಿಸಿದ ಶಿವಯೋಗಿ ಶಿವಾಚಾರ್ಯನು ಅಧ್ಯಾಯ 1ರಲ್ಲಿ ತನ್ನ ವಂಶದ ಪರಿಚಯ ಮಾಡಿಕೊಂಡಿದ್ದಾನೆ . 12ನೇಯ ಶತಮಾನದಲ್ಲಿದ್ದ ರೇವಣಸಿದ್ದೇಶ್ವರ ನಂತರದ ತರುವಾಯದಲ್ಲಿ ಸಿದ್ದರಾಮೇಶ್ವರನ ವಂಶದ ಕುಡಿಯಾದ ಆಚಾರಸಿದ್ದನಾದ ಶಿವಯೋಗಿ ಇದ್ದನು. ಆ ಶಿವಯೋಗಿಗೆ ಮುದ್ದದೇವನೆಂಬ ಮಗ. ಆ ಮುದ್ದದೇವನಿಗೆ ಸಿಧ್ಧನಾಥನೆಂಬ ಮಗ . ಆ ಸಿದ್ದನಾಥನಿಗೆ ಹುಟ್ಟಿದವನು ಶಿವಯೋಗಿ ಶಿವಾಚಾರ್ಯ ಎಂದು ತನ್ನ ವಂಶಾವಳಿಯ ಕುರಿತು ಪರಿಚಯ ಮಾಡಿಕೊಂಡಿದ್ದಾನೆ. ಅಂದರೆ 12ನೇಯ ಶತಮಾನದಲ್ಲಿ ಸಿದ್ದರಾಮೇಶ್ವರರ ನಾಲ್ಕನೇಯ ತಲೆಮಾರಿನ ನಂತರ ಹುಟ್ಟಿದ ಶಿವಯೋಗಿ ಶಿವಾಚಾರ್ಯನು ಕ್ರಿ.ಶ. 13— 14ನೇಯ ಶತಮಾನದಲ್ಲಿ ಇದ್ದನೆಂದು ಖ್ಯಾತ ಸಂಶೋಧಕರಾದ ಡಾ ಎಂ ಚಿದಾನಂದಮೂರ್ತಿಯವರ ವಾದ ಸತ್ಯವೆನಿಸುತ್ತದೆ.
-
ರೇಣುಕಾಚಾರ್ಯರು ಅಗಸ್ತ್ಯಮುನಿಗೆ ವೀರಶೈವ ಸಿದ್ದಾಂತವನ್ನು ಬೋಧಿಸಿದರು ಎಂದು ಸಿದ್ದಾಂತ ಶಿಖಾಮಣಿಯಲ್ಲಿ ಹೇಳಲಾಗಿದೆ. ಆದರೆ ಅಗಸ್ತ್ಯ ಮುನಿಯ ಜೀವನದಲ್ಲಿ ಎಲ್ಲೂ ರೇಣುಕಾಚಾರ್ಯರು ಭೋದಿಸಿರುವ ವಿಷಯ ಎಲ್ಲೂ ಕಂಡುಬರುವದಿಲ್ಲ.
ವರಾಹ ಪುರಾಣದಲ್ಲಿ ಮತ್ತು ಸ್ಕಂದ ಪುರಾಣ ಹಾಗೂ ದ್ವೈಧ ನಿರ್ಣಯ ತಂತ್ರಗಳಲ್ಲಿ ಸ್ವತಃ ಅಗಸ್ತ್ಯಮುನಿ ಸಂಸ್ಕೃತದಲ್ಲಿ ರಚಿಸಿರುವ ಅಗಸ್ತ್ಯ ಗೀತಾˌ ಅಗಸ್ತ್ಯ ಸಂಹಿತೆ ಕಂಡುಬರುತ್ತವೆ. ಅವುಗಳಲ್ಲಿ ರೇಣುಕಾಚಾರ್ಯರ ಹೆಸರಾಗಲಿ ˌ ವೀರಶೈವ ಎಂದಾಗಲಿ ಯಾಕೆ ಇಲ್ಲ ?. ಅನೇಕ ಪುರಾಣಗಳಲ್ಲಿ ˌ ವೇದಗಳಲ್ಲಿ ˌ ರಾಮಾಯಣದಲ್ಲಿ ಅಗಸ್ತ್ಯ ಮುನಿಯ ಹೆಸರು ಮತ್ತು ಘಟನೆಗಳು ಕಂಡುಬರುತ್ತವೆ. ಆದರೆ ಯಾವುದರಲ್ಲೂ ರೇಣುಕಾಚಾರ್ಯರ ಹೆಸರು ಅಥವಾ ರೇಣುಕಾಗಸ್ತ್ಯರ ಸಂವಾದ ಕಂಡುಬರುವದಿಲ್ಲ.
-
ರೇಣುಕಾಚಾರ್ಯ ಅವತರಿಸುವದಕ್ಕಿಂತ ಮುಂಚೆಯೆ ರಾವಣನು ಆರು ಕೋಟಿ ಲಿಂಗಗಳನ್ನು ಸ್ಥಾಪನೆ ಮಾಡಿರುತ್ತಾನೆ. ರಾವಣನ ಸಂಕಲ್ಪ ಅರ್ಧಕ್ಕೆ ನಿಂತಿರುತ್ತದೆ. ರೇಣುಕಾಚಾರ್ಯರು ಇನ್ನುಳಿದ ಮೂರುಕೋಟಿ ಲಿಂಗಗಳನ್ನು ವಿಭಿಷಣನ ಮುಖಾಂತರ ಸ್ಥಾಪನೆ ಮಾಡಿರುವುದು ಸಿದ್ದಾಂತ ಶಿಖಾಮಣಿಯಲ್ಲಿ ಹೇಳಲಾಗಿದೆ. ಆದರೆ ಈ ಘಟನೆ ವಾಲ್ಮಿಕಿ ರಾಮಾಯಣದಲ್ಲಿ ಕಂಡುಬರುವದಿಲ್ಲ. ಅಷ್ಟೆ ಏಕೆ ಭಾರತದಲ್ಲಿ ಪ್ರಚಲಿತದಲ್ಲಿರುವ ಯಾವುದೆ ರಾಮಾಯಣದಲ್ಲೂ ಈ ಘಟನೆಯ ಪ್ರಸ್ತಾಪ ಇಲ್ಲ. ಯಾವುದೆ ಉತ್ತರ ರಾಮಾಯಣಗಳಲ್ಲಾಗಲಿ ˌ ರಾವಣನನ್ನು ಆರಾಧಿಸುವ ದ್ರಾವಿಡ ಪರಂಪರೆಯವರಲ್ಲಾಗಲಿ ˌ ತಮಿಳು ಶೈವದಲ್ಲಾಗಲಿ ರೇಣುಕಾಚಾರ್ಯರು ವಿಭಿಷಣನ ಮುಖಾಂತರ ಮೂರು ಕೋಟಿ ಲಿಂಗಸ್ಥಾಪನೆ ಮಾಡಿರುವ ಘಟನೆಯ ಉಲ್ಲೇಖಗಳು ಕಂಡುಬರುವದಿಲ್ಲ.
-
ಕುಲ್ಯಪಾಕ (ಕೋಲ್ಲಿಪಾಕ) ಸೋಮೆಶ್ವರ ದೇವಸ್ತಾನದ ಸುತ್ತಮುತ್ತಲಿನ ಪ್ರದೇಶ ಗಮನಿಸಿದರೆ ಅದು ಜೈನ ಧರ್ಮಿಯರ ಕೇಂದ್ರವಾಗಿತ್ತು ಎಂಬುದಕ್ಕೆ ಇಂದಿಗೂ ದೇವಾಲಯದ ಸುತ್ತಮುತ್ತಲಿನ ಭವ್ಯವಾದ ಜೈನ ಬಸದಿಗಳು ಇವೆ. ಈ ಜೈನಕೇಂದ್ರವು ಕ್ರಿ.ಶ. 4ನೇ ಶತಮಾನಕ್ಕಿಂತಲೂ ಹಳೆಯದಿದೆ ಎಂದು ಭಾರತ ಸರಕಾರದ ಪ್ರಾಚ್ಯವಸ್ತು ಇಲಾಖೆಯ ದಾಖಲೆಗಳು ಹೇಳುತ್ತವೆ. ಇದರ ಮೂಲ ಹೆಸರು ಕುಲ್ಯಪಾಕ ˌಕುಲಪಾಕˌ ಕುಲಪಾಕ್ಜಿ ಇದ್ದು ಇಂದು ಕೋಲನಪಾಕ ಎಂದಾಗಿದೆ ಎಂದು ಶಾಸನಗಳಿಂದ ತಿಳಿದುಬರುತ್ತದೆ.
ಇಂದಿಗೂ ಅಲ್ಲಿ ಸುಮಾರು ಇಪ್ಪಂತ್ತಕ್ಕಿಂತಲೂ ಹೆಚ್ಚು ಜೈನ ಶಾಸನಗಳು ಸಿಗುತ್ತವೆ. ಆ ಜೈನಕೇಂದ್ರಕ್ಕೆ ರಾಷ್ರ್ಟಕೂಟ ˌ ಚಾಲುಕ್ಯ ಹಾಗೂ ಕಾಕತಿಯ ಅರಸರು ಕಾಲಕಾಲಕ್ಕೆ ಜೈನಕೇಂದ್ರದ ಜೀರ್ಣೋದ್ದಾರ ಮಾಡಿರುವ ಇತಿಹಾಸ ಮತ್ತು ಶಾಸನಗಳಲ್ಲಿ ಲಭ್ಯವಿದೆ. ಈ ಜೈನಕೇಂದ್ರವು ಕ್ರಿ.ಶ. 4ನೇಯ ಶತಮಾನಕ್ಕಿಂತಲೂ ಅತಿ ಪ್ರಾಚೀನವಾದ ಕೇಂದ್ರವಾಗಿತ್ತೆಂದು ಭಾರತ ಸರಕಾರ ಪ್ರಾಚ್ಯವಸ್ತು ಇಲಾಖೆಯ ದಾಖಲೆಗಳಿಂದ ಮಾಹಿತಿ ಸಿಗುತ್ತದೆ. ಈ ಶಾಸನಗಳಲ್ಲಿ ರಾಜಾ ಭರತನು ಈ ಜೈನ ಧರ್ಮಕೇಂದ್ರದ ಅನುಯಾಯಿ ಆಗಿದ್ದನು ಎಂದು ತಿಳಿದು ಬರುತ್ತದೆ. ಹೀಗಾಗಿ ಇದು ಪ್ರಸಿದ್ದವಾದ ಜೈನಕೇಂದ್ರವಾಗಿತ್ತು. ಹಾಗೆಯೆ ಆ ಜೈನಕೇಂದ್ರಕ್ಕೆ ಹೊಂದಿಕೊಂಡು ಕುಲ್ಯಪಾಕ (ಕೊಲ್ಲಿಪಾಕ) ಶ್ರೀ ಸೋಮೆಶ್ವರ ದೇವಾಲಯ ಇದೆ. ಆ ದೇವಾಲಯದ ಒಂದು ಶಾಸನದ ಪ್ರಕಾರ ಕ್ರಿ.ಶ. 1070 -1126 ರಲ್ಲಿ ಚಾಲುಕ್ಯ ಅರಸರು ಭೂದಾನ ˌ ಗೋದಾನ ˌ ಚಿನ್ನ ದಾನ ಇತ್ಯಾದಿಗಳನ್ನು ದಾನವಾಗಿ ಕೊಟ್ಟು ಸೋಮೆಶ್ವರ ದೇವಸ್ತಾನ ಕಟ್ಟಿಸಲಾಗಿದೆ ಎಂದು ಹೇಳಿದೆ. ಕೋಲನಪಾಕ ಅಂದು ಚಾಲುಕ್ಯರ ಎರಡನೇಯ ರಾಜಧಾನಿಯಾಗಿತ್ತು ಎಂದು ತಿಳಿದು ಬರುತ್ತದೆ. ನಂತರದ ದಿನಗಳಲ್ಲಿ ಕಾಕತೀಯ ಅರಸರು ಆ ದೇವಸ್ತಾನದ ಜಿರ್ಣೋದ್ದಾರ ಮಾಡಿಸಿರುವುದು ಮತ್ತು ಅಲ್ಲಿರುವ ಶಿಲ್ಪಕಲೆಗಳಿಂದ ತಿಳಿದುಬರುತ್ತವೆ. ಆ ಶಾಸನಗಳಲ್ಲಿ ಎಲ್ಲಿಯೂ ರೇಣುಕಾಚಾರ್ಯ ಸೋಮೇಶ್ವರ ಲಿಂಗದಿಂದ ಉಧ್ಬವರಾಗಿದ್ದ ವಿಷಯ ಕಂಡು ಬರುವದಿಲ್ಲ. ಕಾಕತೀಯ ಅರಸರ ಚರಿತ್ರೆಯಲ್ಲೂˌ ˌ ಚಾಲುಕ್ಯರ ಚರಿತ್ರೆಯಲ್ಲೂ ರೇಣುಕಾಚಾರ್ಯ ಬಗ್ಗೆ ಯಾವ ಉಲ್ಲೇಖಗಳು ಸಿಗುವದಿಲ್ಲ.
-
ಇನ್ನು ರೇಣುಕ ವಿಜಯದಲ್ಲಿ ರೇವಣಸಿದ್ದರು ಶಂಕರಾಚಾರ್ಯರಿಗೆ ಚಂದ್ರಮೌಳಿ ಲಿಂಗ ಕೊಟ್ಟು ಅನುಗ್ರಹಿಸಿದರು ಎಂದು ಹೇಳಲಾಗಿದೆ . ಭಾರತದ ಇತಿಹಾಸವನ್ನು ಗಮನಿಸಿದಾಗ ಶಂಕರಾಚಾರ್ಯರು ಕ್ರಿ.ಶ. 8ನೇಯ ಶತಮಾನದಲ್ಲಿ ಬದುಕಿದ್ದರು . ರೇವಣಸಿದ್ದರು ಕ್ರಿ. ಶ. 11-12ನೇಯ ಶತಮಾನದಲ್ಲಿ ಬದುಕಿದ್ದರು. ಇವರಿಬ್ಬರು ಬದುಕಿದ್ದ ಕಾಲಮಾನಗಳೆ ಬೇರೆˌ ಶಂಕರಾಚಾರ್ಯರು ಆಗಿಹೋದ 300 ವರುಷಗಳ ನಂತರ ರೇವಣಸಿದ್ದರು ಬದುಕಿದ್ದರು. ಹೀಗಾಗಿ ರೇವಣಸಿದ್ದರು ತಾವು ಹುಟ್ಟುವದಕ್ಕಿಂತ 300 ವರುಷಗಳ ಹಿಂದೆಯೆ ಬದುಕಿದ್ದ ಶಂಕರಾಚಾರ್ಯರಿಗೆ ಬೋಧನೆ ಕೊಟ್ಟು ˌ ಚಂದ್ರಮೌಳಿ ಲಿಂಗವನ್ನು ಅನುಗ್ರಹಿಸಿದ್ದರು ಎನ್ನುವುದು ಕಾಲ್ಪನಿಕ ಕಥೆಯಾಗುತ್ತದೆ.
ಶಂಕರಾಚಾರ್ಯರ ಜೀವನ ಚರಿತ್ರೆಯಲ್ಲಿ ಅಪ್ಪಿತಪ್ಪಿಯೂ ರೇವಣಸಿದ್ದರು ಶಂಕರಾಚಾರ್ಯರಿಗೆ ಭೇಟಿಯಾದ ಘಟನೆ ಬರುವದಿಲ್ಲ. ಶಂಕರಾಚಾರ್ಯರು ರಚಿಸಿದ ಯಾವ ಸಾಹಿತ್ಯ ಸಿದ್ದಾಂತ ಗ್ರಂಥಗಳಲ್ಲಿಯೂ ಇವುಗಳ ಉಲ್ಲೇಖವಿರುವದಿಲ್ಲ.
ಅದೆ ರೇವಣಸಿದ್ದರ ಕುರಿತ ಚರಿತ್ರೆ ˌ ಇತಿಹಾಸ ಪುರಾಣಗಳಲ್ಲಿಯೂ ರೇವಣಸಿದ್ದರು ಶಂಕರಾಚಾರ್ಯರಿಗೆ ಅನುಗ್ರಹಿಸಿರುವ ಘಟನೆ ಬರುವದಿಲ್ಲ.
- ಇನ್ನೊಂದು ಪ್ರಸಂಗ ವೀರಭದ್ರ ದೇವರು ಹನುಮಂತನಿಗೆ ವೀರಶೈವ ಸಿದ್ದಾಂತ ರಹಸ್ಯ ಬೋಧಿಸಿˌ ಇಷ್ಟಲಿಂಗ ಧಾರಣೆ ಮಾಡಿಸಿದರು ಎಂಬ ಪ್ರಸಂಗ ಇದೆ. ಈ ಘಟನೆ ವಾಲ್ಮಿಕಿ ರಾಮಾಯಣದಲ್ಲಾಗಲಿ ˌ ತುಳಸಿದಾಸರು ಬರೆದ ರಾಮಚರಿತ ಮಾನಸದಲ್ಲಾಗಲಿ ಅಥವಾ ಭಾರತದ ಯಾವುದೆ ರಾಮಾಯಣದಲ್ಲೂ ಇದು ಕಂಡುಬರುವದಿಲ್ಲ . ಹನುಮಾನ ಚಾಲಿಸಾದಲ್ಲೂ ಇಲ್ಲ . ಹನುಮಂತನ ಕುರಿತ ಇತರ ಚರಿತ್ರೆ ˌ ವಾಲ್ಮಿಕಿಯ ಉತ್ತರಕಾಂಡದಲ್ಲೂ ಈ ಘಟನೆಯ ಪ್ರಸ್ತಾಪವಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆನೆಂದರೆ ವೀರಭದ್ರನು ನಿಜಶೈವನು ಮತ್ತು ಶಿವನ ಭದ್ರಾವತಾರಿ. ಶಿವನ ಉಗ್ರರೂಪವೆ ಭದ್ರರೆಂದು ಕರೆಯುತ್ತಾರೆ . ಆ ಭದ್ರರಲ್ಲಿ ವೀರಭದ್ರನು ಒಬ್ಬ. ವೀರಭದ್ರನ ಕಣಕಣದಲ್ಲೂ ಶಿವನ ಅಂಶದಿಂದ ಕೂಡಿದೆ. ಹನುಮಂತನೂ ನಿಜವೈಷ್ಣವನು ˌ ಬ್ರಹ್ಮನ ರುದ್ರಾವತಾರಿ. ಬ್ರಹ್ಮನು ರೌದ್ರರೂಪಕ್ಕೆ ರುದ್ರರೆಂದು ಕರೆಯುತ್ತಾರೆ. ಆ ರುದ್ರರಲ್ಲಿ ಹನುಮಂತನು ಒಬ್ಬ. ಹನುಮಂತನು ವಿಷ್ಣು ಅವತಾರಿ ರಾಮನ ನಿಜಭಕ್ತ. ಹನುಮಂತನ ಕಣ ಕಣದಲ್ಲಿ ರಾಮನ ಅಂಶ ತುಂಬಿದೆ. ವೀರಭದ್ರರಿಗೂ ಹನುಮಂತನಿಗೂ ಯಾವುದೆ ತಾಳಮೇಳವಿಲ್ಲ.