Previous ಹೇಮರೆಡ್ಡಿ ಮಲ್ಲಮ್ಮ ಲಿಂಗಾಯತ Next

ಕಾಶೀನಾಥ ಶಾಸ್ತ್ರಿಗಳ ನಿಜ ಜೀವನ ಚರಿತ್ರೆ - ಗ್ರಂಥ ವಿಮರ್ಶೆ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

ಕಾಶೀನಾಥ ಶಾಸ್ತ್ರಿಗಳ ನಿಜ ಜೀವನ ಚರಿತ್ರೆ - ಗ್ರಂಥ ವಿಮರ್ಶೆ

ಬಸವ ಧರ್ಮ ಪ್ರಕಾಶನ, ಉದ್ದಿಮೆ ವಸಾಹತು, ಎಂ.ಎಸ್.ಕೆ.ಮಿಲ್ ರಸ್ತೆ, ಕಲಬುರ್ಗಿ - 585102 ಇವರು ಮರು ಮುದ್ರಿಸಿರುವ (ಬೆಲೆ 50ರೂ) ಬಹಳ ಮಹತ್ವಪೂರ್ಣ ಪುಸ್ತಕ “ಪಂ, ಕಾಶೀನಾಥ ಶಾಸ್ತ್ರಿಗಳ ನಿಜ ಜೀವನ ಚರಿತ್ರೆ", 2010ನೆಯ ಇಸವಿಯ ವಿಜಯ ದಶಮಿಯಂದೇ ಬಿಡುಗಡೆಯಾಗಿದೆ. ಪ್ರಥಮ ಮುದ್ರಣ ಬೆಳಕು ಕಂಡಿರುವುದು1935ನೆಯ ವಿಜಯ ದಶಮಿಯಂದು. ಇದರ ಮೂಲ ಲೇಖಕರು ಎನ್. ಗುಂಡಶಾಸ್ತ್ರಿ ಮೈಸೂರು. ಇವರು ಬರೆದ ಮಾತುಗಳು ಬಹಳ ಅಧಿಕೃತ. ಏಕೆಂದರೆ ಅವರು ಒಂದನೆಯದಾಗಿ ಬ್ರಾಹ್ಮಣರು; ಎರಡು, ಅವರು ಮೈಸೂರು ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್‌ದಲ್ಲಿ ಮೇನೇಜರ್ ಆಗಿದ್ದು ಎಲ್ಲವನ್ನೂ ಪ್ರತ್ಯಕ್ಷವಾಗಿ ಕಂಡವರು. ನಮ್ಮ ವಿಚಾರಧಾರೆಗೆ ಸೂಕ್ತ ಆಧಾರ ಮತ್ತು ಪುಷ್ಟಿ ಕೊಡುವ ಪುಸ್ತಕವಿದು.

1. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ.
2. ರೇಣುಕಾಚಾರ್ಯರು ಕೇವಲ ಕಲ್ಪನೆ
3. ವಿರಕ್ತ ವರ್ಗ ಮತ್ತು ಗುರು ವರ್ಗ ಎಂಬ ವಿಭಜನೆ ಇತ್ತೀಚಿನ ಸೃಷ್ಟಿ


ಪಂ.ಕಾಶೀನಾಥ ಶಾಸ್ತ್ರಿಗಳು ಮಾಡಿದ ಪಾಪವನ್ನು ಎಂದೆಂದೂ ತೊಳೆಯಲು ಸಾಧ್ಯವಿಲ್ಲ. ಪಂಚಾಚಾರ್ಯರೆಂಬ ಕೃತಕ ಸೃಷ್ಟಿಯನ್ನು ಮಾಡಿ ಲಿಂಗಾಯತರ ತಲೆಯೊಳಗೆ ತೂರಿಸಿ, ಐತಿಹಾಸಿಕವೆಂಬಂತಹ ಭ್ರಮೆಯನ್ನು ಈ ಪುಣ್ಯಾತ್ಮ(ಪಾಪಾತ್ಮ) ಹುಟ್ಟಿಸಿ ಲಿಂಗಾಯತ ಸಮಾಜದ ದಿಕ್ಕು ಕೆಡಿಸಿಬಿಟ್ಟರು. ಮತ್ತೊಂದು ಕಡೆ ಹಾನಗಲ್ ಕುಮಾರಸ್ವಾಮಿಗಳ ಪಾಪದ ಕೂಸಾಗಿ ವೀರಶೈವ ಮಹಾಸಭೆ ಹುಟ್ಟಿ ಲಿಂಗಾಯತರು ವೀರಶೈವರೆಂಬ ಭ್ರಮೆಯನ್ನು ಹುಟ್ಟಿಸಿತು. ಗುರು ಬಸವಣ್ಣನವರೆಂಬ ಕ್ರಾಂತಿಕಾರಿ ಯುಗಪುರುಷರಿಂದ ಹುಟ್ಟಿದ ಲಿಂಗಾಯತ ಧರ್ಮದ ಶ್ರೇಷ್ಠ ಶರಣ ಪರಂಪರೆಯು 12ನೆಯ ಶತಮಾನದಿಂದ ಇತ್ತೀಚಿನವರೆಗೆ ಎಲ್ಲ ಜಾತಿ ಮತಗಳವರಿಗೆ ಭಕ್ತ ಗುರು, ಜಂಗಮವಾಗುವ ಅವಕಾಶ ನೀಡಿ ಕೀರ್ತಿಗೆ ಪಾತ್ರವಾಗಿದ್ದುದು, ಹಾನಗಲ್ ಕುಮಾರ ಸ್ವಾಮಿಗಳಿಂದ ಕಲಂಕಿತವಾಗಿ ಜಂಗಮವನ್ನು ಇಂದು ಜಾತಿಯಾಗಿ ವಿಕೃತಗೊಳಿಸಿತು. ಈ ಉಭಯ ಮಹನೀಯರು ಮತ್ತು ವೇದ ಶಾಸ್ತ್ರ ಸಂಸ್ಕೃತ ಪಾಠಶಾಲೆಗಳನ್ನು ತೆಗೆದು ಲಿಂಗಾಯತ ಸಮಾಜವನ್ನು ವೈದಿಕೀಕರಣಗೊಳಿಸಿದ ಇತ್ತೀಚಿನ ಅನೇಕ ವಿರಕ್ತ ಸ್ವಾಮಿಗಳು ತಾವು ಮಾಡಿರುವ, ಮಾಡುತ್ತಿರುವ ಅಪರಾಧವೇನೆಂಬುದನ್ನು ಅರಿಯದೆ ಶರಣ ಪರಂಪರೆ - ಸಂಸ್ಕೃತಿ ವಿಕೃತಗೊಳ್ಳಲು ಕಾರಣರಾಗಿದ್ದಾರೆಂದರೆ ಉತ್ಪ್ರೇಕ್ಷೆಯಲ್ಲ.

ಮೈಸೂರಿನ ಸ್ಟಾರ್ ಪತ್ರಿಕೆಯಲ್ಲಿ ಬಸವ ತತ್ವಕ್ಕೆ ಸಂಬಂಧಿಸಿದ ಲೇಖನಗಳು ಕಾಶಿನಾಥ ಶಾಸ್ತ್ರೀಗಳ ಬರಹಗಳಿಗೆ ಪ್ರತ್ಯುತ್ತರವಾಗಿ ಪ್ರಕಟವಾಗುತ್ತಲಿದ್ದವು. ಅವುಗಳಿಗೆ ಪ್ರತಿಯಾಗಿ ಶಾಸ್ತ್ರಿಗಳು ಬೇರೆ ಬೇರೆ ಹೆಸರುಗಳಿಂದ ಪ್ರತಿಕ್ರಿಯೆ ನೀಡುತ್ತಿದ್ದು, ಅವು ಪಂಚಾಚಾರ್ಯ ಪ್ರಭಾದಲ್ಲಿ ಪ್ರಕಟವಾಗುತ್ತಿದ್ದವು. ಅಂಥ ಒಂದು ಬರಹದ ಭಾಷೆ ನೋಡಿರಿ. (ಪಂ.ಪ್ರ.ಸಂ.1, ಸಂಚಿಕೆ 24, ಪುಟ 8, ದಿ.24-10-1927. ಗುರುಭಕ್ತ ಎಸ್. ಸಿದ್ದಪ್ಪ ಎನ್ನುವವರ ಹೆಸರಿನಲ್ಲಿ ಏಕಾಶಿಪುರದ ಪಿಶಾಚಿಯು ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಉತ್ತರ. “ಈ ಬಸವ ಕುಲದವನು ತನ್ನಂತೆ ಸರ್ವರನ್ನು ಮಾಡಿಕೊಳ್ಳುವುದಕ್ಕೋಸ್ಕರ ಉದ್ಯುಕ್ತನಾಗಿರುವುದನ್ನು ನೋಡಿದರೆ ನಗೆಯು ಬರುವಂತಿದೆ. ಇವನು ಗುರುಭಕ್ತಿ ಶೂನ್ಯನಾಗಿ ಪಿಶಾಚಿಯಂತೆ ಮನ ಬಂದಂತೆ ಕುಣಿದಾಡುತ್ತಿರುವನು.”

ಇಲ್ಲಿ ಗುರುಭಕ್ತಿ ಎಂದರೆ ಕಾಶೀನಾಥ ಶಾಸ್ತ್ರಿಗಳ ಅಭಿಪ್ರಾಯದಲ್ಲಿ ಪಂಚ ಪೀಠಾಧೀಶರ ಮೇಲಿನ ಭಕ್ತಿ ಎಂದರ್ಥ. ಈ ಬೈಗುಳದ ಪತ್ರದಲ್ಲಿ ಬಸವ ಕುಲದವನು ತನ್ನಂತೆ ಸರ್ವರನ್ನು ಮಾಡಿಕೊಳ್ಳುವವನು. ಎಂಬ ಸತ್ಯವಿದೆ. ಯಾರಿಗೆ ಬೇಕಾದರೂ ಲಿಂಗದೀಕ್ಷೆ ಕೊಡುವ ಪರಂಪರೆ ಗುರು ಬಸವಣ್ಣನವರಿಂದ ಆರಂಭವಾಗಿ ಮಾದೇಶ್ವರ, ಸಿದ್ದಲಿಂಗೇಶ್ವರ, ಷಣ್ಮುಖ ಶಿವಯೋಗಿ, ಗುರು ಮಲ್ಲೇಶ್ವರರವರೆಗೆ ಸಾಗಿ ಬಂದುದು ನಂತರ ನಿಂತು ಹೋಯಿತು ಎಂಬುದು ಗಮನಾರ್ಹ. ಕೊಲ್ಲಾಪುರದ ರಾಜ ಛತ್ರಪತಿ ಶಾಹು ಅವರು ಅಸಂಖ್ಯಾತ ಅನುಯಾಯಿಗಳೊಡನೆ ಲಿಂಗಾಯತ ಧರ್ಮವನ್ನು ಸ್ವೀಕರಿಸುವ ಅಪೇಕ್ಷೆ ವ್ಯಕ್ತಪಡಿಸಿದಾಗ, ಹುಟ್ಟು ಲಿಂಗಾಯತರಿಗೆ ಮಾತ್ರ ದೀಕ್ಷೆಕೊಡುವುದಾಗಿ ಹೇಳಿ ಕೊಲ್ಲಾಪುರದ ಮುರುಘಾ ಮಠದವರು ದೀಕ್ಷೆ ನೀಡಲು ನಿರಾಕರಿಸಿದರು. ಒಂದು ವೇಳೆ ದೀಕ್ಷೆ ಕೊಟ್ಟಿದ್ದೇ ಆದರೆ ಕರ್ನಾಟಕ ಮಹಾರಾಷ್ಟ್ರ ಗಡಿಸಮಸ್ಯೆಗಳೇ ಇರುತ್ತಿರಲಿಲ್ಲ.

ಡಾ|| ಅಂಬೇಡ್ಕರರಿಗೆ ಬಸವ ತತ್ವ (ಲಿಂಗಾಯತ ಧರ್ಮ)ದ ಮರ್ಮ ತಿಳಿದಿದ್ದರೆ ಅವರು ಬೌದ್ಧ ಧರ್ಮ ಸ್ವೀಕಾರ ಮಾಡುತ್ತಿರಲಿಲ್ಲ ಎಂದು ಕೆಲವರು ಹೇಳುವುದುಂಟು. ಡಾ|| ಅಂಬೇಡ್ಕರರಿಗೆ ಬಸವ ತತ್ವ ಗೊತ್ತಿತ್ತು. ಆದರೆ ಲಿಂಗಾಯತ ಸಮಾಜವು ಆಗಲೇ ಜಡಗಟ್ಟಿ ಮಡುಗಟ್ಟಿ ಹೋಗಿದ್ದರಿಂದ ಅವರು ಇದರಿಂದ ಆಕರ್ಷಿತರಾಗಲಿಲ್ಲ.

ಹಿಂದೆ ವಿರಕ್ತರು ಅಷ್ಟಿಷ್ಟು ಪ್ರಗತಿಪರರಾಗಿದ್ದರೂ ನಂತರ ನುಸುಳಿದ ವೀರಶೈವ ವಿಚಾರ ಧಾರೆಯಿಂದ ಜಾತಿವಾದದ ಬೇರು ಲಿಂಗಾಯತ ಸಮಾಜದಲ್ಲಿಳಿದು ಮೇಲು ಕೀಳೆಂಬ ವರ್ಗಿಕರಣ ಇದರಲ್ಲೂ ಉಂಟಾಯಿತು.
ಕಾಶೀನಾಥ ಶಾಸ್ತ್ರಿ ಆಂಡ್ ಪಂಚಪೀಠಾಧೀಶರ ಕಂಪೆನಿಯ ವಿಚಾರ - ವೀರಶೈವ ವಿಚಾರಧಾರೆಯನ್ನು ಪ್ರತಿಭಟಿಸುವ ಕಾರ್ಯ ಅಲ್ಲಲ್ಲಿ ನಡೆಯುತ್ತಿತ್ತು ಎಂಬುದರ ಬಗ್ಗೆ ಒಂದು ಪತ್ರವಿದೆ.

ಬಿಡಾಡಿ ಜಂಗಮ ಎಂಬ ಶೀರ್ಷಿಕೆಯಡಿ ಪಂಚಾಚಾರ್ಯ ಪ್ರಭಾದಲ್ಲಿ (ಸಂ.4, ಸಂಚಿಕೆ 9, ಪುಟ 3, 30-6-1930) ಮುದ್ರಣಗೊಂಡಿದೆ.

“ಶಿಷ್ಯ ಸಾಂಪ್ರದಾಯವಿಲ್ಲದೆ ಒಬ್ಬಾನೊಬ್ಬ ಬಿಡಾಡಿ ಜಂಗಮನು ನಮ್ಮ ಬಳ್ಳಾವಿಗೆ ಬಂದು ಮಠದವನೆಂದು ಹೇಳಿಕೊಳ್ಳುತ್ತ ಶುದ್ಧ ಸಾಂಪ್ರದಾಯದ ಮಠದವರನ್ನೆಲ್ಲಾ ಕೆಡಿಸಹತ್ತಿರುವನು. ವೈದಿಕ ಮಾರ್ಗವನ್ನು ತಿರಸ್ಕರಿಸುತ್ತಿರುವನು, ಶಿಖಾಧಾರಿಗಳನ್ನು ಕಂಡರಂತೂ ಇವನು ಹೆಂಡ ಕುಡಿದ ಚಂಡಾಲನಂತೆ ಉನ್ಮತ್ತನಾಗಿ ಅಮಂಗಲ ಮಾತುಗಳನ್ನಾಡತೊಡಗುವನು. ಇದು ಶೂದ್ರ ಬೀಜದ ಪ್ರಭಾವವಾಗಿದೆ. ಯಥಾಬೀಜಸ್ತಥಾಂಕುರ: ಎಂಬ ನೀತಿಯಂತೆ ಇವನು ವರ್ತಿಸುತ್ತಿರುವನು. ಹೀಗೆ ವರ್ತಿಸುವದೇ ಇವನಿಗೆ ಭೂಷಣವಾಗಿದೆ. ಆದರೆ ಶುದ್ಧ ಸಂಪ್ರದಾಯದ ಮಠದವರು ಈ ರಂಡಾಪುತ್ರನ ಸಹವಾಸದಲ್ಲಿ ಬಿದ್ದು ಕೆಡದೆ ತಮ್ಮ ಧರ್ಮವನ್ನು ಕಾಯ್ದು ಕೊಳ್ಳಬೇಕೆಂದು ಇಚ್ಛಿಸುತ್ತೇನೆ." - ಓರ್ವ ಸ್ಥಳೀಕ
ಗುಪ್ತನಾಮದಿಂದ ಬರೆದ ಈ ಪತ್ರ ಬಹಿರಂಗ ಪಡಿಸುವ ಸತ್ಯವೆಂದರೆ ಗುರುವರ್ಗದ (ಶುದ್ಧ ಸಾಂಪ್ರದಾಯದ) ಮಠಗಳವರ ಆಚರಣೆ, ಇವರು ವೈದಿಕ ಮಾರ್ಗ ಅನುಸರಿಸುವರೆಂಬುದು, ಇವರು ಜುಟ್ಟು (ಶಿಖಾಧಾರಣೆ) ಬಿಡುವರೆಂಬುದು ಇದನ್ನು ಆ ಜಂಗಮನು ಖಂಡಿಸುತ್ತಿರುವನು ಎಂಬುದನ್ನು, ಅದಕ್ಕಾಗಿ ಕಾಶೀನಾಥ ಶಾಸ್ತ್ರಿಗಳು ಆ ಜಂಗಮನನ್ನು ಶೂದ್ರ ಬೀಜದವನಿರಬೇಕೆಂದು ವ್ಯಂಗ್ಯವಾಡಿರುವುದಲ್ಲದೆ, ಗುರು ವರ್ಗದ ಶುದ್ಧ ಸಾಂಪ್ರದಾಯದವರು, ತಮ್ಮ (ಜಾತಿ ವಾದ) ತತ್ವ ಬಿಡದೆ ಕಾಯ್ದುಕೊಳ್ಳಬೇಕೆಂದು ಎಚ್ಚರಿಕೆ ಸಹ ನೀಡಿರುವರು.

ಬಸವ ತತ್ವವನ್ನು ಪ್ರತಿಪಾದಿಸುವವರನ್ನು ವೇಶ್ಯಾಪುತ್ರರು ಎನ್ನುವ ಮಟ್ಟಕ್ಕೂ ಹೋಗಿರುವ ಕಾಶೀನಾಥ ಶಾಸ್ತ್ರಿಗಳು (ದೈವಜ್ಞವಿನೋದ ಎಂಬ ಹೆಸರಿನಲ್ಲಿ) ಬಳಸಿರುವ ಭಾಷೆ ನೋಡಿರಿ. ಇದೇ ದೈವಜ್ಞವಿನೋದ ಎಂಬ ಪ್ರಚ್ಛನ್ನನಾಮದಿಂದ ಕಾಶೀನಾಥ ಶಾಸ್ತ್ರಿ ಬರೆದ ಮತ್ತೊಂದು ಪತ್ರ ನೋಡಿರಿ,
ವೀರಶೈವ ಮತವು ರಾಜಕೀಯ ತೊತ್ತಿನ ಕೂಸಲ್ಲ.

ಬಸವನು ಮತೋದ್ದಾರ ಮಾಡಿದನೆಂದೂ, ಕನ್ನಡವಾಙ್ಮಯವನ್ನು ಬೆಳಕಿಗೆ ತಂದನೆಂದೂ, ಕನ್ನಡ ವಚನಶಾಸ್ತ್ರವು ಇವನಿಂದಲೇ ಆಯಿತೆಂದೂ, ಅನ್ನುವುದು ಅಸತ್ಯವಾದುದು. ವಚನ ಪ್ರಚಾರವು ವಿಜಯನಗರದ ರಾಜ್ಯಾರಂಭದಿಂದ ಆಯಿತು. ಕೆಲ ಜನ ಪಂಡಿತರು ಈ ಕನ್ನಡ ವಚನಗಳಿಗೆ ತಮ್ಮ ಮುದ್ರಿಕೆಯನ್ನಿಡದೆ, ಬಸವ - ಚನ್ನಬಸವ ನಾಗವ್ವ - ನೀಲವ್ವ ಮೊದಲಾದ ಅಕ್ಷರ ಶೂನ್ಯರ ಮುದ್ರಿಕೆಯನ್ನೊತ್ತಿ ಪ್ರಚಾರ ಮಾಡಿದರು....... (ಲೇಖಕ- ದೈವಜ್ಞ ವಿನೋದ, ಶಿರೋಳ)
ವಚನ ಸಾಹಿತ್ಯ ಬಸವಾದಿ ಪ್ರಮಥರಿಂದ ಆಗಲಿಲ್ಲವಂತೆ. ಇದು ವಿಜಯದ ನಗರದ ರಾಜ್ಯಾರಂಭದಿಂದ ಆಯಿತಂತೆ. ಕೆಲವು ಪಂಡಿತರು ವಚನಗಳನ್ನು ಬರೆದು ತಮ್ಮ ಮುದ್ರಿಕೆ ಯನ್ನಿಡದೆ ಬಸವ -ಚನ್ನಬಸವ-ನಾಗವ್ವ-ನೀಲವ್ವ ಮೊದಲಾದ ಅಕ್ಷರ ಶೂನ್ಯರ ಮುದ್ರಿಕೆ ಯನೊತ್ತಿ ಪ್ರಚಾರ ಮಾಡಿದರಂತೆ! ಕಾಶೀನಾಥ ಶಾಸ್ತ್ರಿ ಎಂತಹ ವಿಷಜಂತು ಎಂಬುದು ಈ ಬರಹದಿಂದ ಬಯಲಾಗುವುದು.

ಕೆಲವು ವಿರಕ್ತರು ಉದಾ: ಮುಂಡರಗಿ ಶ್ರೀಗಳು, ಮೂರು ಸಾವಿರ ಮಠದವರು ವೀರಶೈವದ ಮೋಹಿಗಳಾಗಿರುವರು. ಅವರನ್ನು ಒಂದು ಕಾಲದಲ್ಲಿ ಕಾಶೀನಾಥ ಶಾಸ್ತ್ರಿಗಳು ಎಷ್ಟು ನಿಂದಿಸಿದ್ದಾರೆಂಬುದನ್ನು ಕಾಣಬಹುದು.
ನನ್ನ ಪ್ರವಾಸದಲ್ಲಿ ವಿರಕ್ತರ ಬಗ್ಗೆ ನಡೆದ ಕೆಲವು ಪ್ರಶೋತ್ತರಗಳು

....... ಮೂಕನ ಎದುರಿಗೆ ಮೂಗು ತುರಿಸಿಕೊಂಡರೆ ಸಿಟ್ಟಿಗೆ ಬರುವಂತೆ ಗುರುವರ್ಗದ ಉದ್ಧಾರಕ್ಕಾಗಿ ಅಹೋರಾತ್ರಿ ಶ್ರಮಪಡುತ್ತಿರುವ ಲೋಕಮಾನ್ಯರಾದ ಪಂಡಿತ ಶ್ರೀ ಕಾಶೀನಾಥ ಶಾಸ್ತ್ರಿಗಳ ಹೆಸರನ್ನು ಕೇಳಿ ವಿರಕ್ತರೂ ಅವರ ಅನುಯಾಯಿಗಳೂ ಸಹ ರೇಗಬಹುದು... ಆ ಪುಣ್ಯಾತ್ಮನ ಅವತಾರವಾಗದಿದ್ದರೆ ಇಷ್ಟರಲ್ಲಿ ಗುರುವರ್ಗವು ನಾಮಾವಶೇಷ ವಾಗುತ್ತಿತ್ತೆಂದು ಹೇಳುವಲ್ಲಿ ಯಾವ ಅಭ್ಯಂತರವೂ ಇಲ್ಲ. ಆ ಮಹನೀಯನು ವಯಸ್ಸಿನಿಂದ ಚಿಕ್ಕವನಾಗಿದ್ದರೂ ಆಚಾರ್ಯರ ಕೃಪೆಯಿಂದ ಅಘಟಿತ ಘಟನ ಕರ್ತೃಶ್ವಶಾಲಿಯಾಗಿ ದುರ್ವಿ ರಕ್ತರ ಉಪಟಳವನ್ನು ಅತ್ಯಲ್ಪ ಕಾಲದಲ್ಲಿಯೇ ಬಗ್ಗುಬಡಿದನು. ಗುರು ವರ್ಗದ ಉದ್ಧಾರಕ್ಕಾಗಿ ಸದುಪದೇಶ ಮಾಡುವ ಪ್ರಭಾ ಪತ್ರಿಕೆಯನ್ನು ಜಗತಿನಲ್ಲಿ ಪ್ರಕಾಶಗೊಳಿಸಿದನು. ಭೀಷ್ಮ ಬ್ರಹ್ಮಚಾರಿಯಾದ ಆ ಪಂಡಿತನ ನಾಮಸ್ಮರಣೆಯನ್ನು ಮಾಡುವುದರ ಬದಲು ನಿಂದಿಸಿದರೆ ಸೂರ್ಯನ ಮೇಲೆ ಮಣ್ಣು ತೂರಿ ತಮ್ಮ ಕಣ್ಣಿನಲ್ಲಿ ಹಾಕಿಕೊಂಡಂತೆಯೇ ಸರಿ!........” - ಎಚ್.ಎಸ್.ಆರಾಧ್ಯಮಠ, ಬೇವಿನಹಳ್ಳಿ
ನಾವು ಹುಡುಕುತ್ತಿದ್ದ ಕಳ್ಳ ಸಿಕ್ಕ. ಪಂಚಾಚಾರ್ಯ ಪ್ರಭಾದ ಸಂಪುಟ 1 ಸಂಚಿಕೆ 25, ಪುಟ 3ರಲ್ಲಿ ದಿ.3-10-1927ರ ಸಂಚಿಕೆಯಲ್ಲಿ ಈ ಪ್ರಶಂಸಾಪತ್ರ ಮುದ್ರಣಗೊಂಡಿದೆ. ಅಂದರೆ ಲಿಂಗಾಯತ ಧರ್ಮ - ಸಮಾಜಗಳು ವೈದಿಕೀಕರಣಗೊಂಡಿದ್ದು 20ನೆಯ ಶತಮಾನದ 2, 3ನೆಯ ದಶಕದಲ್ಲಿ ಎಂಬುದಕ್ಕೆ ಈ ಪತ್ರವು ದಾಖಲೆ ನೀಡುತ್ತದೆ.

ಗುಂಡ ಶಾಸ್ತ್ರಿಗಳು ಈ ಪತ್ರಕ್ಕೆ ಟಿಪ್ಪಣಿ ಬರೆದು ಹೇಳುತ್ತಾರೆ, “ಶಾಂತವಾಗಿದ್ದ ವೀರಶೈವ ಸಮಾಜದ ಸಾಗರದಲ್ಲಿ ಬಸವಾದಿ ಪ್ರಮಥರ ನಿಂದೆ ಎಂಬ ಭಯಂಕರವಾದ ಬಿರುಗಳಿಯನ್ನೆಬ್ಬಿಸಿ, ತಮ್ಮ ಸ್ವಾರ್ಥವನ್ನು ಈ ಶಾಸ್ತ್ರಿಗಳು ಸಾಧಿಸಿಕೊಳ್ಳುತ್ತಿರುವರು.”ಎಂಬುದಾಗಿ ವೀರಶೈವ ಶೂದ್ರರೇ ಇತ್ತ ಲಕ್ಷ್ಯಕೊಡಿರಿ ಎಂಬ ಶೀರ್ಷಿಕೆಯಡಿಯಲ್ಲಿ ಎಸ್.ಬಸಪ್ಪ ಗುಡ್ಡದಹಳ್ಳಿ ಎಂಬ ಗುಪ್ತನಾಮದಿಂದ ಶಾಸ್ತ್ರಿಗಳು ಸ್ವಪ್ರಶಂಸೆ ಹೀಗೆ ಮಾಡಿಕೊಂಡಿದ್ದಾರೆ.

ವೀರಶೈವ ಶೂದ್ರರೇ ಇತ್ತ ಲಕ್ಷ್ಯ ಕೊಡಿರಿ

“ಲೋಕಮಾನ್ಯ ಪಂಡಿತ ವೇ|| ಕಾಶೀನಾಥ ಶಾಸ್ತ್ರಿಗಳವರು ಪಂಚಾಚಾರ್ಯ ಪ್ರಭಾ ಪತ್ರಿಕಾ ಮೂಲಕವಾಗಿ ವೀರಶೈವ ಮತ ಧರ್ಮತತ್ವಗಳನ್ನು ಪ್ರಪಂಚದಲ್ಲೆಲ್ಲಾ ಪ್ರಕಾಶಿಸುವಂತೆ ಮಾಡಿ ಮತೋದ್ದಾರ ಮಾಡುತ್ತಿರುವುದು ಸರ್ವಜನ ವಿದಿತವಾಗಿದೆ.....? - ಎಸ್.ಬಸಪ್ಪ, ಗುಡ್ಡದಹಳ್ಳಿ
ಲಿಂಗಾಯತ ಸಮಾಜದಲ್ಲಿ ಆರಾಧ್ಯರನ್ನು ಜಂಗಮರನ್ನು ವೀರಶೈವ ಬ್ರಾಹ್ಮಣರೆಂದು ಮತ್ತೆ ಕೆಲವರನ್ನು ವೀರಶೈವ ಶೂದ್ರರೆಂದು ವರ್ಗಿಕರಿಸುವ ಅನಿಷ್ಠ ಪದ್ಧತಿಯನ್ನು ಜಾರಿಗೆ ತಂದವರು ಇದೇ ಕಾಶೀನಾಥರು ಮತ್ತು ಅವರ ಬೋಧೆಯನ್ನು ಅನುಸರಿಸಿದ ಪಂಚಪೀಠ ಮಠದವರು.

ಭದ್ರಾವತಿಯಲ್ಲಿ ಮುರಿಗೆಪ್ಪಜ್ಞ ಎಂಬ ಶರಣರಿದ್ದರು. ಬಹಳ ತತ್ವ ನಿಷ್ಠರು. ಪೂಜ್ಯ ಶ್ರೀ ಲಿಂಗಾನಂದ ಅಪ್ಪಾಜಿಯವರ ಪ್ರವಚನವಾದಾಗ ತಪ್ಪದೆ ಬರುತ್ತಿದ್ದರು. ಅವರೊಂದು ಅನುಭವ ಹೇಳಿದ್ದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 1930ರ ದಶಕ. ಗುರು-ವಿರಕ್ತರ ಮಧ್ಯೆ ಸಂಘರ್ಷ ನಡೆಯುತ್ತಿದ್ದ ಕಾಲ. ರಂಭಾಪುರಿ ಮಠದಿಂದ (ಬಹುಶಃ ಕಾಶೀನಾಥ ಶಾಸ್ತ್ರಿಗಳ ದುರ್ಬೋಧೆಯ ಫಲವಾಗಿ ಇರಬಹುದು) ಒಂದು ಪುಸ್ತಕ ಹೊರಟಿತು. ಅದರಲ್ಲಿ ಲಿಂಗಾಯತ ಸಮಾಜದ ಒಳಗಿನ ಎಲ್ಲ ಒಳಪಂಗಡಗಳವರನ್ನು ಚತುರ್ವಣ್ರಗಳಿಗೆ ಅನುಸಾರವಾಗಿ ವರ್ಗಿಕರಿಸಲಾಗಿತ್ತು, ಗುರು ಬಸವಣ್ಣನವರ ತತ್ವದ ಪ್ರಕಾರ ದೀಕ್ಷೆ ಹೊಂದಿದವರೆಲ್ಲ ಸಮಾನರು; ಭೇದ ಮಾಡಬಾರದು. ಈ ಪುಸ್ತಕ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟು ಮಾಡಿತು. ಭದ್ರಾವತಿಯಿಂದ ಒಂದು ಬಸ್ ಜನ ಲಿಂಗಾಯತ ಪ್ರಮುಖರು ಮುರಿಗೆಪ್ಪನವರ ನೇತೃತ್ವದಲ್ಲಿ ಬಾಳೇಹೊನ್ನೂರು ಮಠಕ್ಕೆ ಹೋದರು.

“ಬುದ್ದಿ, ಬ್ರಾಹ್ಮಣರು ಶೂದ್ರರ ಮನೆಯಲ್ಲಿ ಉಣ್ಣುವರೆ ?” ಪ್ರಶ್ನಿಸಿದರು
“ಇಲ್ಲ.''
"ಉಂಡರೆ"
“ಅವನು ಭ್ರಷ್ಟನಾಗುವನು.
“ಪರಿಹಾರವೇನು??
“ನಾಲಿಗೆ ಸುಟ್ಟು ಶುದ್ದೀಕರಿಸಬೇಕು.”ಸ್ವಾಮಿಗಳ ಉತ್ತರ
“ಹಾಗಾದರೆ, ನೀವು ಬರೆಸಿರುವ ಪುಸ್ತಕದಲ್ಲಿ ನೀವು ವೀರಶೈವ ಬ್ರಾಹ್ಮಣರು, ನಾವು ವೀರಶೈವ ಶೂದ್ರರು. ಎಷ್ಟೋ ಬಾರಿ ನಮ್ಮಲ್ಲಿಗೆ ಬಂದು ಬಿನ್ನಹ ಸ್ವೀಕರಿಸಿದ್ದೀರಿ. ಆದ್ದರಿಂದ ಈಗ ನಿಮ್ಮ ನಾಲಿಗೆ ಸುಡಬೇಕು.”
ಸ್ವಾಮಿಗಳು ಪೆಚ್ಚಾಗಿ ಕುಳಿತರಂತೆ.

ರೇಣುಕಾಚಾರ್ಯರ ಜನ್ಮದಾತ ಶಾಸ್ತ್ರಿಗಳು

ಶಾಸ್ತ್ರಿಗಳು ವೀರಶೈವ ಮತೋದ್ದಾರ ಎಂಬ ನೆಪದಿಂದ ಹಲವಾರು ಪುಸ್ತಕಗಳನ್ನು ಕಾಶೀನಾಥ ಗ್ರಂಥ ಮಾಲೆ ಮೂಲಕ ಪ್ರಕಟಪಡಿಸಿದ್ದಾರೆ. 1926ರಲ್ಲಿ ಸಿದ್ದನಾಥ ಶಿವಾಚಾರ್ಯ ವಿರಚಿತ ರೇಣುಕ ವಿಜಯ ಎಂಬ ಕೃತ್ರಿಮ ನಾಮದಿಂದ ಒಂದು ಸಂಸ್ಕೃತ ಚಂಪೂ ಗ್ರಂಥವನ್ನು ಮೈಸೂರು ವೆಸ್ಲಿಯನ್ ಮಿಷನ್ ಪ್ರೆಸ್ಸಿನಲ್ಲಿ ಮುದ್ರಿಸಿದರು. ಬಾಳೇ ಹೊನ್ನೂರು ಮಠದ ಹರೀಶ್ವರ ಶಾಸ್ತ್ರಿಗಳು ಇದರ ಪ್ರಕಾಶಕರು. ಇದೇ ಕಾಲ್ಪನಿಕ ರೇಣುಕಾಚಾರ್ಯರಿಗೆ ಜನ್ಮಕೊಟ್ಟ ಪುಸ್ತಕ. ಆನಂತರ 1928ರಲ್ಲಿ ಮೈಸೂರು ಆಸ್ಥಾನ ವಿದ್ವಾನ್ ಸಿರಸಿ ಗುರು ಶಾಂತ ಶಾಸ್ತ್ರಿಗಳು ಅದನ್ನು ಕನ್ನಡ ಗದ್ಯರೂಪವಾಗಿ ಬರೆದರು. ಅದು ಕಾಶೀನಾಥ ಗ್ರಂಥಮಾಲೆಯ 2ನೆಯ ಪುಷ್ಪವಾಗಿ ಪ್ರಕಟವಾಯಿತು. ಅನಂತರ ಮೈಸೂರು ಆಸ್ಥಾನ ವಿದ್ವಾನ್ ನಂಜನಗೂಡು ಶ್ರೀಕಂಠ ಶಾಸ್ತ್ರಿಗಳು ರೇಣುಕ ವಿಜಯ ಪುರಾಣ ಎಂಬ ಪದ್ಯ ಗ್ರಂಥ ರಚಿಸಿದ್ದು 1932ರಲ್ಲಿ ಅದು ಕಾಶೀನಾಥ ಗ್ರಂಥ ಮಾಲೆಯ 18ನೆಯ ಕೃತಿಯಾಗಿ ಪ್ರಕಟವಾಯಿತು.

ಈ ಪುಸ್ತಕ 975 ವರ್ಷಗಳ ಹಿಂದೆ ಸಿದ್ದನಾಥ ಶಿವಾಚಾರ್ಯ ಎಂಬುವವರಿಂದ ರಚಿಸಲ್ಪಟ್ಟರುತ್ತೆಂದು ಹೇಳಿ ರೇಣುಕಾಚಾರ್ಯರು ಅಗಸ್ಯರಿಗೆ ಶಿವತತ್ವೋಪದೇಶ ಮಾಡಿದ್ದು, ವಿಭೀಷಣನ ಮೂಲಕ 3 ಕೋಟಿ ಲಿಂಗಗಳ ಸ್ಥಾಪನೆ ಮಾಡಿದ್ದು ವಿಕ್ರಮಾದಿತ್ಯನಿಗೆ ಖಡ್ಗವನ್ನು ಕೊಟ್ಟುದು, ಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರ ಲಿಂಗ ಕೊಡಲಾಯಿತು ಎಂಬ ಬಗ್ಗೆ ಬರೆಯಲಾಗಿದೆ.

ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಯಳಂದೂರು ಶ್ರೀಕಂಠಶಾಸ್ತ್ರಗಳೆಂಬುವರ ಪತ್ನಿ ಕೋನಮ್ಮ ಎನ್ನುವವರು 1931-32ರಲ್ಲಿ ಮೈಸೂರು ಕೋರ್ಟಿನಲ್ಲಿ ಒಂದು ದಾವೆ ಹೂಡಿದರು. ತಮ್ಮ ಯಜಮಾನರು ಬರೆದ ಒಂದು ಚಂಪೂ ಪ್ರಬಂಧದ ಕೈಬರವಣಿಗೆಯ ಪ್ರತಿಯನ್ನು ನೋಡಲೆಂದು ತೆಗೆದುಕೊಂಡು ಹೋಗಿ ಅದರಲ್ಲಿ ಕೆಲವು ವ್ಯತ್ಯಾಸಗಳನ್ನು ಮಾಡಿ 1926ನೇ ಇಸವಿಯಲ್ಲಿ ಹರೀಶ್ವರಶಾಸ್ತ್ರಿಗಳ ಹೆಸರಿನಲ್ಲಿ ಕಾಶೀನಾಥ ಶಾಸ್ತ್ರಿಗಳು ಪ್ರಕಟಿಸಿರುವರು, ಅದೇ ಗ್ರಂಥವನ್ನು ಕನ್ನಡದಲ್ಲಿ ಗುರುಶಾಂತ ಶಾಸ್ತ್ರಿಗಳು ಬರೆದಿರುವರೆಂದು ಕಾಶೀನಾಥ ಶಾಸ್ತ್ರಿ ಹರೀಶ್ವರ ಮತ್ತು ಗುರುಶಾಂತ ಶಾಸ್ತ್ರಿಗಳ ಮೇಲೆ ಕೋನಮ್ಮ ದಾವೆ ಹೂಡಿದರು. ಇದರರ್ಥ ಕಾಶೀನಾಥ ಶಾಸ್ತ್ರಿಗಳದು ಕೃತಿಚೌರ್ಯವೆಂದು ಅರ್ಥವಾಗುವುದಲ್ಲದೆ, ಕಾಲ್ಪನಿಕ ರೇಣುಕಾಚಾರ್ಯರ ಜನ್ಮದಾತರು ಶ್ರೀಕಂಠಶಾಸ್ತ್ರಿ ಕಾಶೀನಾಥ ಶಾಸ್ತ್ರಿ ಮತ್ತು ಗುರುಶಾಂತ ಶಾಸ್ತ್ರಿಎಂಬುದು ದೃಢವಾಗುವುದು. ಕಾಶೀನಾಥ ಶಾಸ್ತ್ರಿಗಳ ಇಂಥ ದುರ್ವೃತ್ತಿಯಿಂದಾಗಿ ಮೈಸೂರಿನ ವೀರಶೈವರಿಗಂತೂ ಅವರ ಮೇಲೆ ಎಳ್ಳಷ್ಟೂ ಗೌರವವಿಲ್ಲ ಎಂದು ಗುಂಡಶಾಸ್ತ್ರಿಗಳು ಬರೆಯುತ್ತಾರೆ. (ಪುಟ 19) ಮತ್ತು ಶಾಸ್ತ್ರಿಗಳನ್ನು ವಿರೋಧಿಸುತ್ತಿದ್ದವರು ನಗರದ ಪ್ರಮುಖರು, ಗೌರವಸ್ಥರು, ಸದಾಚಾರ ಸಂಪನ್ನರು, ಪ್ರಮುಖ ವ್ಯಾಪಾರಸ್ಥರು ಎಂದೂ ಬರೆಯುತ್ತಾರೆ.

ಕಾಲ್ಪನಿಕ ರೇಣುಕಾಚಾರ್ಯರ ಅವತಾರಕ್ಕೆ ಶಿವನ ಶಾಪವೇ ಕಾರಣವೆಂದು ಗ್ರಂಥ ಕೃರ್ತಗಳಾದ ಶ್ರೀಕಂಠಶಾಸ್ತ್ರಿಗಳು ಬರೆದರೆ ಭೂಮಿಯಲ್ಲಿ ಶಿಥಿಲಗೊಂಡ ವೀರಶೈವ ಮತವನ್ನು ಉದ್ದರಿಸಲು ಅವತರಿಸಿದರೆಂದು ಹರೀಶ್ವರ ಶಾಸ್ತ್ರಿಗಳ ಹೆಸರಿನಲ್ಲಿ ಕಾಶೀನಾಥ ಶಾಸ್ತ್ರಿಗಳು ಬರೆಯುತ್ತಾರೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಶೀನಾಥ ಶಾಸ್ತ್ರಿಗಳು ರೇಣುಕಾಚಾರ್ಯರು ವೀರಶೈವ ಮತೋದ್ದಾರಕ್ಕೆ ಬಂದರೆಂದು ಹೇಳಿದ್ದಾರಲ್ಲದೆ ಸಂಸ್ಥಾಪನೆಗಲ್ಲ. ಅಂದರೆ ವೀರಶೈವ ಮತ ಆಗಲೇ ಇತ್ತೆಂದು ಅದು ಶಿಥಿಲವಾಗಿತ್ತೆಂದು ಅರ್ಥವಾಗುವುದಲ್ಲವೆ?

ರೇವಣ ಸಿದ್ಧ ಮತ್ತು ರೇಣುಕಾಚಾರ್ಯ

ಸುಳ್ಳಿನ ಅಡಿಪಾಯದ ಮೇಲೆ ಪಂಚಾಚಾರ್ಯರ ಕಲ್ಪನೆಯ ಮರಳಿನ ಮಂದಿರವನ್ನು ಕಟ್ಟಿದ ಶಾಸ್ತ್ರಿಗಳು ಸುಳ್ಳಿಗೆ ಜೀವಕೊಡಲು ಬಳಸಿಕೊಂಡುದು ರೇವಣಸಿದ್ದರೆಂಬ ಐತಿಹಾಸಿಕ ವ್ಯಕ್ತಿಯನ್ನು ರೇವಣಸಿದ್ಧರು ಗುರು ಬಸವಣ್ಣನವರ ಸಮಕಾಲೀನರು. ಅವರ ಮಗ ರುದ್ರಮುನಿ ಚನ್ನಬಸವಣ್ಣನವರ ವಯಸ್ಸಿನವರು. ಹುಟ್ಟಿನಿಂದ ಹಾಲುಮತ( ಕುರುಬ) ದವರಾದ 'ರೇವಣ ರು ಲಕುಲೀಶ ಶೈವ ಮಾರ್ಗಾನುಯಾಯಿಗಳಾಗಿದ್ದರು. ಹರಿಹರ ಮಹಾಕವಿ ತನ್ನ ರೇವಣಸಿದ್ದ ರಗಳೆ ಎಂಬ ಗ್ರಂಥದಲ್ಲಿ ಲಾಕುಳದ ಲಾಕ್ಷಣಿಕ ನಮ್ಮಮ್ಮ ಬರುತಿದ ಎಂದು ಬಣ್ಣಿಸಿದ್ದಾನೆ. ಹರಿಹರನ ರಗಳೆಯಲ್ಲಿ ಎಲ್ಲೆಲ್ಲಿಯೂ ಲಿಂಗಧಾರಣೆಯ ವಿಷಯ ಬಂದಿಲ್ಲ, ವೀರಶೈವ, ಷಟಸ್ಥಲ ಮುಂತಾದ ಪ್ರಯೋಗವಿಲ್ಲ. ಹೀಗಾಗಿ ರೇವಣಸಿದ್ದರು ಮೊದಲು ಲಾಕುಲೀಶ ಶೈವರಾಗಿದ್ದರು. ಆನಂತರ ಲಿಂಗಧಾರಣೆ ಮಾಡಿಕೊಂಡು ಲಿಂಗಾಯತರಾಗಿದ್ದಾರೆ. ಗುಂಡಶಾಸ್ತ್ರಿಗಳ ಒಂದು ಅಭಿಪ್ರಾಯ ಬಹಳ ಮಹತ್ವಪೂರ್ಣ, ಅಷ್ಟಾವರಣ, ಪಂಚಾಚಾರ, ಷಟಸ್ಥಲ ಎಂಬ ತತ್ವ ಪ್ರತಿಪಾದಕ ಶಬ್ದಗಳು ಬಸವೇಶ್ವರನಿಗಿಂತಲೂ ಪೂರ್ವದಲ್ಲಿ ರಚಿಸಲ್ಪಟ್ಟ ಯಾವ ಗ್ರಂಥ ದಲ್ಲಿಯೂ ಕಂಡು ಬರುವುದಿಲ್ಲ......... ಬಸವೇಶ್ವರನ ಕಾಲದಲ್ಲಿ ಕಾಳಾಮುಖ ಮತ್ತು ಇತರ ಶೈವ ಗುರುಗಳನೇಕರು ಲಿಂಗಾಯತ ರಾಗಿದ್ದರು. ಲಿಂಗಾಯತ ಮಠಗಳಾದರೂ ಬಸವೇಶ್ವರನ ನಂತರವೇ ಸ್ಥಾಪಿತವಾದವು. -ಗುಂಡಶಾಸ್ತ್ರಿ ಪುಟ.31, ಕಾ.ನಿ.ಜಿ.ಚ

ರೇಣುಕಾಚಾರ್ಯರು ಆಂಧ್ರದ ಕೊಲ್ಲಿಪಾಕಿಯ ಶ್ರೀ ಸೋಮೇಶ್ವರ ಲಿಂಗದಿಂದ ಉದ್ಭವಿಸಿದ ರೆಂಬ ಕಥೆಯನ್ನು ಕಾಶಿನಾಥ ಶಾಸ್ತ್ರಿ ಹರೀಶ್ವರ ಶಾಸ್ತ್ರಿ ಗುರು ಶಾಂತಶಾಸ್ತ್ರಿ ಎಂಬ ಮೂವರು ಸೃಷ್ಟಿಸಿದರು. ಹೀಗಾಗಿ ಜನನ, ಇತಿಹಾಸ ಏನೂ ಇಲ್ಲದ ರೇಣುಕಾಚಾರ್ಯರು ಹುಟ್ಟಿದರು. ಡಾ|| ನಂದಿಮಠರು 1929ನೆಯ ಇಸವಿಯ ಮೇ ತಿಂಗಳಿನ ಫ.ಗು.ಹಳಕಟ್ಟಿ ಸಂಪಾದಿತ ಶಿವಾನುಭವ ಪತ್ರಿಕೆಯಲ್ಲಿ ನಿಜಾಮ ಸಂಸ್ಥಾನಕ್ಕೆ ಸೇರಿದ ಶಿರಿವಾಳದ ಸಿದ್ಧಲಿಂಗೇಶ್ವರ ದೇವಸ್ಥಾನ ದಲ್ಲಿ ದೊರೆತ ಒಂದು ಶಿಲಾಶಾಸನ ಪ್ರಕಟಿಸಿದ್ದಾರೆ. ಅದರಲ್ಲಿ ಶ್ರೀಮದ್ಯಣಿಮಾದ್ಯಷ್ಟ ಗುಣ ಸಂಪನ್ನರೂ ಷಟ್‌ಯಾನಿರತರುಂ ಸಾರ ಸೌರಭ್ಯ ಸರ್ವ ನಿಸ್ಸಂಗರುಮಪ್ಪ ಶಿವಯೋಗಿ ಶಾಂತಿಮೈಯ್ಯಗಳ ಪುತ್ರ ರೇಣುಕಾಚಾರ್ಯರ ಪ್ರಸಿದ್ದಿಯೆಂತೆಂದಡೆ.” (ಪುಟ 31)

ಕಾಲಜ್ಞಾನ ವಚನಗಳಲ್ಲಿ ಸಹ ಸಿದ್ಧ (ಶೈವ) ಮಾರ್ಗಾನುಯಾಯಿಗಳಾದ ರೇವಣರು ಶಾಂತಿಮಯ್ಯಗಳ ಕೈಯಿಂದ ಲಿಂಗದೀಕ್ಷೆ ಪಡೆದುದು ಉಲ್ಲೇಖವಾಗಿದೆ. ಶಿವಯೋಗಿ ಶಾಂತಿಮಯ್ಯಗಳು ವಿರಕ್ತರು, ಅವರಿಗೆ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರಿಂದ ದೀಕ್ಷೆಯಾಗಿದೆ. ಶ್ರೀರೇವಣಸಿದ್ದರು ಸಿದ್ದರಾಮೇಶ್ವರರ ತಾಯಿಯು ಗರ್ಭವತಿ ಇದ್ದಾಗ, ಮುದ್ದೇಗೌಡನ ಮನೆಗೆ ಬಂದು ಸುಗ್ಗವ್ವಗೆ ತಲೆಬಾಗಿ ನಮಸ್ಕರಿಸುವ ಪ್ರಸಂಗವು ಬೊಮ್ಮರಸನಕಾವ್ಯದಲ್ಲಿ ಪ್ರಸ್ತಾಪವಾಗಿದೆ. ಈ ಐತಿಹಾಸಿಕ ಸಂಗತಿಯನ್ನು ಕಾಶೀನಾಥ ಶಾಸ್ತ್ರಿಗಳು ಸುಳ್ಳೆಂದು ಪ್ರತಿಪಾದಿಸುತ್ತಾರೆ.

ಅಗಸ್ಯರಿಗೆ ವೀರಶೈವ ತತ್ತ್ವಪದೇಶವನ್ನು ರೇಣುಕಾಚಾರ್ಯರು ಮಾಡಿದರು. ವಿಭೀಷಣನಿಂದ 3 ಕೋಟಿ ಲಿಂಗಗಳನ್ನು ಸ್ಥಾಪಿಸಿದರು, ಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರ ಸ್ಥಾವರ ಲಿಂಗವನ್ನು ಕೊಟ್ಟರು ಎಂದೆಲ್ಲ ಕಾಲ್ಪನಿಕ ಕಥೆಗಳನ್ನು ಶಾಸ್ತ್ರಿಗಳು ಸೃಷ್ಟಿಸಿದರು. ಇವರಿಗೆ ಶತಮಾನಗಳ ಲೆಕ್ಕಾಚಾರವೇ ತಿಳಿದಂತೆ ಕಾಣದು. ಅಗಸ್ತ್ಯರು ಪುರಾಣ ಪುರುಷ, ವಿಭೂಷಣ ಯಾವ ಕಾಲದವನು? ಶಂಕರಾಚಾರ್ಯರು 8ನೆಯ ಶತಮಾನದವರು. 12ನೆಯ ಶತಮಾನ ದವರು ರೇವಣಸಿದ್ದರು. ಹಾಗೆಂದ ತಕ್ಷಣ ರೇಣುಕಾಚಾರ್ಯರು ನಾಲ್ಕುಯುಗಗಳಲ್ಲಿ ಅವತರಿಸಿ ಈ ಮೇಲ್ಕಂಡ ಕಾರ್ಯ ಮಾಡಿದರು ಎನ್ನಲಾಗುವುದು. ವಿಭೀಷಣನಿಗೆ ಹೇಳಿ 3 ಕೋಟಿ ಲಿಂಗ ಸ್ಥಾಪನೆ ಮಾಡಿದ್ದರೆ ಅವು ಶ್ರೀಲಂಕಾದಲ್ಲಿ ಇರಬೇಕಾಗಿತ್ತಲ್ಲವೆ? ಲಿಂಗಾಯತ ಗುರುವು ಕೊಡಬೇಕಾದುದು ಇಷ್ಟಲಿಂಗವನ್ನು ಸ್ಥಾವರಲಿಂಗವನ್ನಲ್ಲ. 3 ಕೋಟಿ ಲಿಂಗಸ್ಥಾಪನೆ ಮಾಡಿಸಿದರೆ ಆ ಗುರು ಲಿಂಗಾಯತ ಗುರುವೇ ಅಲ್ಲ. ಅಂದಾಗ ಈ ಧರ್ಮಕ್ಕೆ ಅವರು ಸಂಬಂಧಿಸಿದವರೇ ಅಲ್ಲ. ಶ್ರೀ ಶಂಕರಾಚಾರ್ಯರ ಮಠದವರು ಪೂಜಿಸುವ ಚಂದ್ರಮೌಳೀಶ್ವರ ಲಿಂಗವು ಇಷ್ಟಲಿಂಗವಲ್ಲ ಒಂದು ವೇಳೆ ರೇಣುಕರು ಕೊಟ್ಟಿದ್ದರೆ ಶ್ರೀ ಶಂಕರಾಚಾರ್ಯರು ಗುರುಗಳನ್ನು ಸ್ತುತಿಸದೆ ಇರುತಿದ್ದರೆ?

ಬಾಳೇಹೊನ್ನೂರು ಮಠದಲ್ಲಿ ಪೂಜಿಸಲ್ಪಡುತ್ತಿದ್ದ ಚಂದ್ರಮೌಳೀಶ್ವರ ಲಿಂಗವು ಶೃಂಗೇರಿ ಮಠಕ್ಕೆ ಹೇಗೆ ಬಂದಿತೆಂಬ ಬಗ್ಗೆ ಕೆಳದಿ ರಾಜರ ಒಂದು ಶಾಸನವಿದೆ. (ಶಾಸನದ ಪೂರ್ಣಪಾಠ ಕಾಶೀನಾಥ ಶಾಸ್ತ್ರಿಗಳ ನಿಜ ಜೀವನ ಚರಿತ್ರೆ ಪುಸ್ತಕದ ಪುಟ 46ರಲ್ಲಿ)

'ರಾಜಾಧಿರಾಜ ಸೋಮಶೇಖರ ನಾಯಕರು ಶಕವರುಷ 1594, ಆನಂದನಾಮ ಸಂವತ್ಸರದ ವೈಶಾಖ ಬಹುಳ ದ್ವಿತೀಯದಂದು ಬಾಳೆಹೊನ್ನೂರು ಸಿಂಹಾಸನದ ಮಠದ ಗುರು ಶಾಂತಸ್ವಾಮಿ ಎಂಬುವವರ ದುಷ್ಟ ಕೃತ್ಯಾದಿಗಳ ನಡುವಳಿಕೆಗೋಸ್ಕರ ಚಂದ್ರಮೌಳೀಶ್ವರ ಬಲದ ಶಂಖ ಏಕಬೆತ್ತ ಮುತ್ತಿನ ಚವುಕಳಿ ಇತ್ಯಾದಿ..... ಶೃಂಗೇರಿ ಅಗ್ರಹಾರದಲ್ಲಿರತಕ್ಕ ಶಂಕರಾಚಾರ್ಯರ ಕರಸಂಜಾತರಾದ ಶೃಂಗಶಾಸ್ತ್ರಿಯೆಂಬಾತಗೆ....

ಹೀಗೆ ಬಾಳೇಹೊನ್ನೂರು ಮಠದ ಸ್ವಾಮಿಯೋರ್ವರ ನಡತೆಯಿಂದ ಕುದ್ದರಾಗಿ ಕೆಳದಿ ರಾಜರು ಚಂದ್ರಮೌಳೀಶ್ವರ ಲಿಂಗ, ಇತರ ಸಾಮಗ್ರಿ ನೀಡಿ ಜೊತೆಗೆ ಅದರ ಪೂಜೆಗಾಗಿ ಕಪ್ಪಕಾಣಿಕೆ ಸಹ ಕೊಟ್ಟುದಾಗಿ ತಿಳಿದುಬರುತ್ತದೆ.

ಗುರು ವರ್ಗ ಎಂಬ ಕಲ್ಪನೆಯ ಸೃಷ್ಟಿ

ಇದಕ್ಕೆ ಪ್ರೇರಕರು ಕಾಶೀನಾಥ ಶಾಸ್ತ್ರಿಗಳು. ಇವರ ಜನ್ಮನಾಮ ಮುದುಕಯ್ಯ ಕಾಶಿಗೆ ಹೋಗಿ ಅಲ್ಲಿಯ ಜಂಗಮವಾಡಿ ಮಠದಲ್ಲಿ ಆಶ್ರಯ ಪಡೆದು, ಸಂಸ್ಕೃತ ಅಭ್ಯಾಸ ಮಾಡಿ (ಜಾತಿ) ಜಂಗಮಾಧಿಕ್ಯತೆಗೆ ಪ್ರಚೋದನೆ ಕೊಡಲು ಕೆಲವರನ್ನು ಹುರಿದುಂಬಿಸಿದರು.

“ಈತನಂತೆ ಅಲ್ಪಸ್ವಲ್ಪ ಕಾಕುಪೋಕು ವಿದ್ಯೆಗಳನ್ನು ಕಲಿತ ಕೆಲಶಾಸ್ತ್ರಿಗಳು ಒಟ್ಟಾಗಿ ತಾವು ಸಮಾಜದಲ್ಲಿ ಮುಂದೆ ಬರಬೇಕೆಂದು ಹವಣಿಸಿ ಅಜ್ಞಾನದೆಶೆಯಲ್ಲಿದ್ದ ಕೆಲವು ಗುರುಗಳೆಂಬವರನ್ನು ನಿಮ್ಮ ಗೌರವವು ಉಳಿದಿರುವುದಿಲ್ಲ. ಸಮಾಜದಲ್ಲಿ ನಿಮ್ಮ ವರ್ಚಸ್ಸು ಕಡಿಮೆಯಾಗಿದೆ. ವಿರಕ್ತರೇ ನಿಮಗೆ ಸಲ್ಲತಕ್ಕ ಮಾನಮರ್ಯಾದೆ ಬಾಬು ಕಾಣಿಕೆ ಮೊದಲಾದವನ್ನು ಅಪಹರಿಸುವರು. ಸಮಾಜದಲ್ಲಿ ಇವರೇ ಎಲ್ಲ ಪೂಜ್ಯತ್ವಕ್ಕೆ ಅಧಿಕಾರಿಗಳಾಗಿರುತ್ತಾರೆ. ಮತ್ತು ಬಸವಾದಿ ಪ್ರಮಥರ ಸ್ತೋತ್ರವೇ ವೀರಶೈವರ ಬಾಯಿಂದ ಸದಾ ಹೊರಡುತ್ತಿದೆ. ನೀವು ಸಮಾಜದಲ್ಲಿ ಶ್ರೇಷ್ಠಪೀಠಕ್ಕೆ ಹೊಂದಿದವರೆನಿಸಿಕೊಳ್ಳಬೇಕಾದರೆ ಬಸವಾದಿ ಶರಣರನ್ನೂ ಶೂನ್ಯ ಸಿಂಹಾಸನಾಧಿ ಪತಿಗಳಾದವರನ್ನೂ ನಿಂದಿಸುವ ಕಾರ್ಯವನ್ನು ಕೈಕೊಳ್ಳದ ವಿನಃ ನೀವು ಮುಂದಕ್ಕೆ ಬರಲಾರಿರಿ? ಎಂದು ಮೊದಲಾಗಿ ಅವರನ್ನು ಹುರುದುಂಬಿಸಿ ದುರ್ಬೊಧ ಮಾಡಿ ಅಲ್ಲಿ ಒಂದು ಪಂಚಾಚಾರ್ಯ ಸಭೆಯನ್ನೇರ್ಪಡಿಸಿ ಅದರಲ್ಲಿ ತಮ್ಮ ಧೈಯಕ್ಕನುಸರಿಸಿ ಕೆಲವು ಗುಪ್ತನಿರ್ಧಾರಗಳನ್ನು ಮಾಡಿದರು.

ಇದೇ ಧೈಯಕ್ಕನುಗುಣವಾಗಿ ಮೊದಲನೇ ಸಭೆಯು ಕುಂದಗೋಳದಲ್ಲಿಯೂ, ಎರಡನೇದನ್ನು ನವಲಗುಂದದಲ್ಲಿಯೂ ಸಭೆಯು ಬಾಗಿಲವನ್ನು ಬಂದಿಟ್ಟು, ಕೇವಲ ಜ್ಞಾನವಿಲ್ಲದ ದುರ್ವಿದಗ್ಧರು ಮಾತ್ರ ಸೇರಿ ಗುರುವರ್ಗವನ್ನು ಸ್ಥಾಪಿಸಿದರು. ವೀರಶೈವರಲ್ಲಿ ಭಕ್ತರನ್ನು ಕೀಳುವರ್ಗ ದವರನ್ನಾಗಿ ನಿರ್ಧರಿಸಿದರು. ಈ ಸಭೆಗಳಲ್ಲಿ ಭಕ್ತರು ಯಾರೇ ಇರಲಿ, ಅವರು ಮಾಹೇಶ್ವರ ರಾಗಲಿಕ್ಕೆ ಬರುವುದಿಲ್ಲೆಂದು ಮೊದಲಿಗೆ ತಮ್ಮ ನವೀನ ಗುರುವರ್ಗವನ್ನು ಬಲಪಡಿಸಲಿಕ್ಕೆ ಬೇಕಾಗುವ ನಿರ್ಣಯಗಳನ್ನು ಮಾಡಿ ಸಭೆಯನ್ನು ಮುಗಿಸಿದರು. ಈ ಎರಡೂ ಸಭೆಗಳಲ್ಲಿ ಇವರ ತುಚ್ಛವಾದ ಮತ್ತು ಸಮಾಜದ ಐಕ್ಯಕ್ಕೆ ಘಾತುಕವಾದ ನಿರ್ಣಯಗಳನ್ನು ಖಂಡಿಸಲಿಕ್ಕೆ ವಿದ್ವಾಂಸರು ಸಭೆಯಲ್ಲಿ ಬರಲು ಅಪ್ಪಣೆ ಕೇಳಿದರೆ ಅದನ್ನು ಮಾನ್ಯ ಮಾಡದೆ ತಮ್ಮ ಗುಪ್ತ ಕಾರ್ಯಸ್ಥಾನವನ್ನು ನಡೆಯಿಸಿದರು. ಈ ರೀತಿ ಕೆಲವು ಜನರ ಬೆಂಬಲವು ತನಗೆ ಸಿಕ್ಕಿದ್ದಕ್ಕೆ ಮುದುಕಯ್ಯನು ಹಿಗ್ಗಿ ಆದರೂ, ವೀರಶೈವರನೇಕರು ಈ ಸಭೆಯ ಧ್ಯೇಯಕ್ಕೆ ವಿರೋಧಿಗಳಿರುವದನ್ನು ತಿಳಿದು ಧಾರವಾಡ ಶುಭೋದಯ ಪತ್ರದಲ್ಲಿ ಆರ್. ಶ್ರೀನಿವಾಸಾಚಾರ್ಯನೆಂಬ ಕಳ್ಳ ಹೆಸರಿನಿಂದ ವೀರಶೈವ ಸಮಾಜಕ್ಕೆ ಪರಮಪೂಜ್ಯರೆನಿಸಿದ ಶ್ರೀಮದ್ಬಸವ, ಚನ್ನಬಸವ, ಅಲ್ಲಮಪ್ರಭುಗಳನ್ನು ತನ್ನ ಅಪವಿತ್ರ ನಾಲಿಗೆಯಿಂದ ಮನಬಂದಂತೆ ನಿಂದಿಸಿ ಅವಾಚ್ಯ ಶಬ್ದಗಳಿಂದ ಶೂನ್ಯ ಸಿಂಹಾಸನಾಧೀಶ್ವರರನ್ನು ಜರಿದು ತನ್ನ ಹೇಯವಾದ ಸಂಕಲ್ಪವನ್ನು ಈಡೇರಿಸಿ ಕೊಂಡನು.”

ಇಂತಹ ವಿಲಕ್ಷಣ ವಿಭಜನೆಯಿಂದ ತಪ್ತರಾದ ಲಿಂಗಾಯತ ಮುಖಂಡರು ಪರಸ್ಪರ ಚರ್ಚಿಸಲು ನಿರ್ಧರಿಸಿ ಬಹಿರಂಗ ಆಹ್ವಾನ ನೀಡಿ ಶರಣ. ಸಿದ್ದರಾಮಪ್ಪ ಪಾವಟೆಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಒಂದು ಸಭೆ ಕರೆದರು. ಆಗ ಕಾಶೀನಾಥ ಶಾಸ್ತ್ರಿಗಳು ಚರ್ಚೆಯಲ್ಲಿ ಭಾಗವಹಿಸುವ ಧೈರ್ಯ ತೋರದೆ ಮುಖಭಂಗ ಹೊಂದಿದರು. ಈತನ ಪ್ರಚೋದನೆಗೆ ಬಾಳೆಹಳ್ಳಿ, ಉಜ್ಜಯಿನಿ, ಕೇದಾರ, ಕಾಶಿ ಸ್ವಾಮಿಗಳು ಒಳಗಾದರು. ತಮ್ಮ ವಿಚಾರದ ಪ್ರಚಾರಕ್ಕಾಗಿ ಪಂಚಾಚಾರ್ಯ ಪ್ರಭಾ ಎಂಬ ವಾರಪತ್ರಿಕೆಯನ್ನು ಮೈಸೂರಿನಲ್ಲಿ ಆರಂಭಿಸಲು ಪ್ರೋತ್ಸಾಹ ನೀಡಿದರು. ಆಗ ಮುದುಕಯ್ಯನು ಕಾಶೀನಾಥ ಶಾಸ್ತ್ರಿಗಳಾದರು. ಇದಕ್ಕೆ ಪ್ರತಿಯಾಗಿ ಹುಬ್ಬಳ್ಳಿಯ ಶ್ರೀಗುರು ಸಿದ್ದೇಶ್ವರ ಪ್ರಿಂಟಿಂಗ್ ವರ್ಕ್ಸದಲ್ಲಿ 1923ರಲ್ಲಿ ಕೆಲವು ಉತ್ತರಗಳು ಮುದ್ರಣಗೊಂಡವು. ಶರ್ಮ ದರ್ಪಹರಣ ಎಂಬ ಅಂಥ ಲೇಖನದ ಕೆಲವು ವಿಚಾರ ಹೀಗಿವೆ. “ನಮ್ಮ ಗುರು ವರ್ಗ ದವರೆನಿಸಿಕೊಳ್ಳುವವರು ಒಬ್ಬನು ಹಿರಿಯ ಕುಲದವನು ಇನ್ನೊಬ್ಬನು ಕಿರಿಯ ಕುಲದವನು ವೀರಶೈವರಲ್ಲಿ ಇವರು ಬ್ರಾಹ್ಮಣರು ಇವರು ಶೂದ್ರರು ಎಂದು, ಶ್ರೀ ಬಸವನುದ್ಧರಿಸಿದ ವೀರಶೈವ ಸಮಾಜದ ಒಕ್ಕಟ್ಟನ್ನು ಸಡಲಿಸಿ ಅದನ್ನು ಪಲ್ಲಟಿಸಿ ಭಿನ್ನವಿಭಿನ್ನವಾಗಿ ಮಾಡಿ ಅದರ ವಿನಾಶಕ್ಕೆ ಕಾರಣೀ ಭೂತವಾದ ಉಪಾಯಗಳನ್ನು ಮುದುಕಯ್ಯನ- ಇವನಿಗೆ ಇತ್ತೀಚೆಗೆ ಬೆಂಬಲವಾಗಿರುವ ಶಿರಸಿ ಗುರುಶಾಂತಯ್ಯನ ಮುಖಂಡತ್ವದಿಂದ ಕೈಕೊಂಡದ್ದನ್ನು ಪ್ರತಿಯೊಬ್ಬ ವೀರಶೈವನು ತನ್ನಲ್ಲಿರುವ ಸದಸದ್ವಿವೇಕ ಬುದ್ದಿಯಿಂದ ವಿಚಾರಿಸಿದರೆ ಈ ನವೀನ ಶರ್ಮವರ್ಗವು (ಇತ್ತೀಚೆಗೆ ಗುರುಗಳೆನಿಸಿಕೊಳ್ಳುವವರು) ವೀರಶೈವ ಸಮಾಜದ ಬಂಧುರತೆಗೆ ಎಷ್ಟು ಘಾತುಕವಾಗಿದೆ ಎಂಬುದು ಒಡೆದು ಕಾಣುವುದು.

“ಹೀಗೆ ನವೀನ ವರ್ಗದವರ ಉದ್ಧಾರಕ್ಕಾಗಿ ಬದ್ಧಕಂಕಣರಾಗಿದ್ದ ಕಾಶೀನಾಥ ಶಾಸ್ತ್ರಿಗಳಿಗೆ ತಾವು ಸ್ಥಾಪಿಸಿದ ಗುರುವರ್ಗವೆಂಬುದು ಪುರಾತನವೆಂದೂ ವಿರಕ್ತರಿಗಿಂತಲೂ ತಾವು ಹೆಚ್ಚಿನವ ರೆಂದೂ ತೋರಿಸಿಕೊಳ್ಳುವುದೇ ಮುಖ್ಯ ಆಶಯವಾಗಿದ್ದಿತು.” (- ಗುಂಡಶಾಸ್ತ್ರಿ ಪುಟ-42)

ಕಾಶೀನಾಥಶಾಸ್ತ್ರಿಗಳುತಮ್ಮಆತ್ಮಕಥೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಕಲಿಪುರುಷರಾದ ವಿರಕ್ತರ ಉಪಟಳವನ್ನು ನಾಶ ಮಾಡಲು ಪ್ರಪಂಚದಲ್ಲಿ ಶಾಸ್ತ್ರವಿಹಿತವಾದ ಚಳುವಳಿಯನ್ನು ಎಬ್ಬಿಸಬೇಕಾಯಿತು. ಎಂದು. ಈ ಚಳುವಳಿಯ ವಿಷಫಲಗಳೆಂದರೆ ಪಂಚವಿಂಶತಿ ಪ್ರಶ್ನಪ್ರಕಾಶ ಮತ್ತು “ಬಸವದ್ವಾಂತ ದಿವಾಕರ' ಎಂಬ ಗ್ರಂಥಗಳು. ಇವುಗಳ ತುಂಬ ವಿರಕ್ತರ ದೂಷಣೆ ಮತ್ತು ಬಸವ ಅವಹೇಳನೆಗಳೇ ತುಂಬಿರುವುವು. ಈ ಜಾತಿವಾದಿ ಶಾಸ್ತ್ರಿಗಳು ಅಸ್ಪೃಶ್ಯತಾ ನಿವಾರಣೆಗಾಗಿ ಮಹಾತ್ಮಗಾಂಧೀಜಿ ಆರಂಭಿಸಿದ ಚಳುವಳಿಯನ್ನು ಟೀಕಿಸುತ್ತಾರೆ. “ಗಾಂಧಿ ಯವರು ವರ್ಣ ಸಾಂಕರವನ್ನು ಮಾಡುವುದರಲ್ಲಿ ಮೊದಲನೆಯ ಕಲಿ ಪುರುಷರಾಗಿದ್ದಾರೆ. ಇವರನ್ನು ಸನಾತನ ಹಿಂದು ಧರ್ಮದ ಧ್ವಂಸಕಮೂರ್ತಿಯೆಂದರೆ ಇದನ್ನು ಯಾರೂ ಅಲ್ಲಗಳೆ ಯಲಾರರು. ಈ ಚಂಚಲಮೂರ್ತಿಗಳು ಜೈಲಿಗೆ ಹೆದರಿ ಅಸ್ಪೃಶೋದ್ಧಾರದ ಸೋಗು ಹಾಕಿ ಕೊಂಡಿದ್ದಾರೆ.'ಎಂದು ಶಾಸ್ತ್ರಿಗಳು ಬರೆಯುವುದು ನೋಡಿದಾಗ ಅವರ ಕೂಪಮಂಡೂಕ ಮನೋಭಾವ ಸ್ಪಷ್ಟವಾಗುತ್ತದೆ. ಇವರು ಸುಧಾರಣಾ ವಿರೋಧಿಗಳೆಂದು ಮನವರಿಕೆ ಯಾಗುವುದು.

ಲಿಂಗಾಯತ ಸಮಾಜವು 12ನೆಯ ಶತಮಾನದಿಂದಲೂ ಹಲವಾರು ಜಾತಿ ಮತ ಪಂಥಗಳವರನ್ನು ಬರಮಾಡಿಕೊಂಡಿದೆ. ಆದರೆ ಇದನ್ನು ಕೆಟ್ಟ ಭಾಷೆಯಲ್ಲಿ ನಿಂದಿಸಿರುವ ಪಂಚಾಚಾರ್ಯ ಪ್ರಭಾ ಸಂಪಾದಕರಾದ ಗುರುಶಾಂತ ಶಾಸ್ತ್ರಿಗಳ ಬರಹ ನೋಡಿರಿ. (1-12-1930ರ ಸಂಚಿಕೆ) ಈ ಬರಹದ ಹಿಂದಿನ ಕೈ ಕಾಶೀನಾಥ ಶಾಸ್ತ್ರಿಗಳೇ ಅಹುದು.

“ಈ ಕಾಲದಲ್ಲಿ ಲಿಂಗಧಾರಿಗಳಾದ ಕೆಲಜನ ಕನ್ವರ್ಟ (ಮಿಶ್ರ)ರೂ, ಕಡಿಮೆ ಕುಲದವರೂ, ದುರ್ಬೀಜ ಜಾತರೂ, ಅನಾದಿ ಸಂಸಿದ್ಧ ಸಂಪ್ರದಾಯ ಶುದ್ಧರಾದ ವಂಶೀಯ ಗುರುಗಳನ್ನು ಬಿಟ್ಟು ಒಕ್ಕಲಿಗನೇ ಇರಲಿ, ಜಾಡನೇ ಇರಲಿ, ಬಣಜಿಗನೇ ಇರಲಿ, ಅನ್ಯರೇ ತೋಜಾತನೇ ಇರಲಿ, ದುರಭಿಮಾನ ಪೂರಿತರಾಗಿ ತಮ್ಮ ತಮ್ಮ ಪಂಗಡಗಳಲ್ಲಿ ಗುರುಗಳನ್ನು ಮಾಡಿಕೊಳ್ಳಹತ್ತಿದ್ದಾರೆ. ಈ ನವೀನನಾಸ್ತಿಕರಿಗೆ ಯಾವ ಬೋಧೆಯನ್ನು ಮಾಡಿದರೂ ಪ್ರಯೋಜನವಾಗುವಂತಿಲ್ಲ. ಜಂಗಮರಿಗೂ ನಮಗೂ ಏನು ವ್ಯತ್ಯಾಸವಿದೆ? ಅವರಲ್ಲಿದ್ದ ಅವಯವಗಳು ನಮ್ಮಲ್ಲಿಯೂ ನಮ್ಮಲ್ಲಿದ್ದ ಅವಯವಗಳು ಅವರಲ್ಲಿಯೂ ಇವೆ. ಹೀಗಿದ್ದ ಮೇಲೆ ಪರಸ್ಪರ ವ್ಯತ್ಯಾಸವೇನು ಎಂದು ಪಾಷಂಡಿಗಳಿಗಿಂತಲೂ ಹೆಚ್ಚಾಗಿ ಬೊಗಳುತ್ತಿರುವರು. ಶ್ವಾನಸದೃಶರಾದ ಈ ಪಾಪಾತ್ಮರಿಗೆ ಯಾವತ್ತು ಅವಯವಗಳಿಂದ ಸಮಾನರಾಗಿದ್ದ ತಾಯಿಯೂ, ಹೆಂಡತಿಯೂ ಒಂದೇ ಸರಿ.” (ಪುಟ-63)

ಮೈಸೂರಿನ ಲಿಂಗಾಯತರು ಉಗ್ರವಾಗಿ ಇದನ್ನೆಲ್ಲ ವಿರೋಧಿಸಿದ್ದಲ್ಲದೆ ರಂಭಾಪುರ ಸ್ವಾಮಿಗಳು ಮೈಸೂರು ಸಂದರ್ಶನಕ್ಕೆ ಸಂಚಾರ ಕೈಗೊಂಡಾಗ ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ಅದೇ ರೀತಿ ನಂಜನಗೂಡು, ಚಾಮರಾಜನಗರ ಮುಂತಾದ ಕಡೆ ಬಂದಾಗಲೂ ವಿರೋಧವನ್ನು ಎದುರಿಸಬೇಕಾಯಿತು. ಇವರ ಉತ್ಸವಕ್ಕೆ ವಿಶೇಷ ಅಡಚಣೆಯುಂಡಾಗಿ ಕಡೆಗೆ ಕೆಲವು ಸಂದು ಗೊಂದುಗಳಲ್ಲಿ ಉತ್ಸವ ಮಾಡಿಸಿಕೊಂಡರಂತೆ. (ಪುಟ -64)

ಕಾಶೀನಾಥಶಾಸ್ತ್ರಿಗಳ ವೀರಶೈವ ರತ್ನ ಕೃತಿಯಲ್ಲಿ ಅವರು ವರ್ಣಾಶ್ರಮಗಳ ವಿಚಾರವಾಗಿ ಪ್ರಸ್ತಾಪಿಸುತ್ತ ಹೇಳುತ್ತಾರೆ, ಸಾವಿರಾರು ಗ್ರಂಥಗಳಲ್ಲಿ ವರ್ಣಾಶ್ರಮ ಧರ್ಮಗಳ ವಿಚಾರವು ಪ್ರತಿಪಾದಿಸಲ್ಪಟ್ಟಿದ್ದರೂ .... ಈ ಕನ್ವರ್ಟರು (ಮಿಶ್ರರು).... ವೀರಶೈವರ ಮತದಲ್ಲಿ ವರ್ಣಾಶ್ರಮ ಗಳಿರುವುದಿಲ್ಲವೆಂದು ಅಪಲಪಿಸಿರುವುದನ್ನು ನೋಡಿ ಅನ್ಯಮತೀಯರು ಈ ವಿಷಯವು ನಿಜವಿರಬಹುದೆಂದು ಭಾವಿಸಿದ್ದಾರೆ.....”ಎಂದೂ, ವೀರಶೈವ ಮತೀಯರಾದ ಶೈವರ್ಣಿಕ ಸಜಾತೀಯ ಧ್ವಜರು ಸಜಾತೀಯ ದ್ವಿಜರಲ್ಲಿಯೇ ಭೋಜನ ಮಾಡಬೇಕೆಂದೂ.... ಶಿವೋಕ್ತವಾದ ಜಾತಿ ಮರ‍್ಯಾದೆಯನ್ನು ಯಾವನು ಮೀರಿ ನಡೆಯುವನೋ ಅವನು ಚಂಡಾಲ ನೆಂದೂ, ಸರ್ವಕರ್ಮಬಹಿಷ್ಕೃತನೆಂದೂ ಬರೆದಿರುತ್ತಾರೆ. ಇರಲಿ; ಮೊನ್ನೆ ಮೊನ್ನೆ ರಂಭಾಪುರೀ ಸ್ವಾಮಿಗಳು ಬೆಂಗಳೂರು ಮೈಸೂರು ಪ್ರಾಂತಗಳಲ್ಲಿ ಸಂಚಾರ ಮಾಡಿದರಷ್ಟೇ! ಆಗ ಇಡೀ ಸಮಾಜವು ಇವರನ್ನು ಪುರಸ್ಕರಿಸದಿದ್ದರೂ, ಕೆಲವರು ಸ್ವಾಗತಿಸಿ, ತಮ್ಮ ತಮ್ಮ ಮನೆಗಳಲ್ಲಿ ಪಾದಪೂಜೆಗಳನ್ನು ಸಹ ಮಾಡಿದರು. ಇವರು ಮನೆಗಳಲ್ಲೆಲ್ಲಾ ರಂಭಾಪುರಿ ಸ್ವಾಮಿಗಳೂ ಅವರ ಕಡೆಯವರೂ ಭೋಜನ ಮಾಡಿ ಬರಲಿಲ್ಲವೇ? ಇವರೆಲ್ಲರೂ ಯಾವ ಯಾವ ವರ್ಣಗಳಿಗೆ ಸೇರಿದವರು? ರಂಭಾಪುರೀ ಸ್ವಾಮಿಗಳ ವರ್ಣವಾವುದು? ಫಕೀರಯ್ಯನವರ ಮಕ್ಕಳಾದ ಗುರುಶಾಂತಶಾಸ್ತ್ರಿಗಳ ವರ್ಣವಾವುದು? ಇವರೂ ಪಾದಪೂಜೆ ಮಾಡಿದವರೂ ಎಲ್ಲರೂ ಒಂದೇ ವರ್ಣದವರೇ? ಇಲ್ಲವಾದರೆ ಇವರೆಲ್ಲರೂ ಶಿವೋಕ್ತವಾದ ಜಾತಿ ಮರ್ಯಾದೆಯನ್ನು ಮೀರಿದಂತಾಗಲಿಲ್ಲವೇ? ಇದರಿಂದ ಇವರೆಲ್ಲರೂ ಚಂಡಾಲತ್ವವೂ, ಸರ್ವಕರ್ಮ ಬಹಿಷ್ಕ ತತ್ವವೂ ಪ್ರಾಪ್ತವಾಗಲಿಲ್ಲವೇ?

ಈ ಹಿಂದೆ, 1921ಕ್ಕೂ ಮೊದಲು ಪಂಚಪೀಠಾಧೀಶರಿಗೆ ಜಗದ್ಗುರು ಪದವು ಬಳಕೆಯಾಗುತ್ತಿರಲಿಲ್ಲ. ಈ ಪದವನ್ನು ರೂಢಿಗೊಳಿಸಿದವರು ಕಾಶೀನಾಥ ಶಾಸ್ತ್ರಿಗಳೆ! ವೀರಶೈವವೇ ಬೇರೆ ಬಸವ ಪಂಥವೇ ಬೇರೆ ಎಂದು ಆಕ್ರೋಶದಿಂದ ಕಾಶೀನಾಥ ಶಾಸ್ತ್ರಿಗಳು ಹೇಳುತ್ತಾರೆ. ರೇಣುಕಾದಿ ಪಂಚಾಚಾರ್ಯರನ್ನು ಹುಟ್ಟಿಸುವಲ್ಲಿ ಶಾಸ್ತ್ರಿಗಳು ಸುಳ್ಳಿನ ಹಂದರವನ್ನು ಹಬ್ಬಿಸಿದ್ದಾರೆ ಆದರೆ ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಹೇಳುವಲ್ಲಿ ಪರಮ ಸತ್ಯವನ್ನು ನುಡಿದ್ದಾರೆ. ಸೈದ್ಧಾಂತಿಕವಾಗಿ, ಸಾಮಾಜಿಕವಾಗಿ ಇವೆರಡೂ ಕೂಡದ ಮಾರ್ಗಗಳು, ಕಾಶೀನಾಥ ಶಾಸ್ತ್ರಿಗಳು ಪ್ರತಿಪಾದಿಸುವಂತೆ ವೀರಶೈವವು ವರ್ಣಾಶ್ರಮಾಧಾರಿತ ವೈದಿಕ ಮತ, ಲಿಂಗಾಯತವು ವರ್ಣಾಶ್ರಮಾಧಾರಿತ ವ್ಯವಸ್ಥೆಯನ್ನು ವಿರೋಧಿಸುವ ಸ್ವತಂತ್ರ ಧರ್ಮ. ವೀರಶೈವದ ಧ್ಯೇಯ ವಸ್ತು ಶಿವ, ಲಿಂಗಾಯತದ ಧ್ಯೇಯ ವಸ್ತು ಸೃಷ್ಟಿಕರ್ತನಾದ ಲಿಂಗದೇವ.

ಗುಂಡಶಾಸ್ತ್ರಿಗಳು ಪ್ರತ್ಯಕ್ಷದರ್ಶಿಗಳಾಗಿ ಕಾಶೀನಾಥ ಶಾಸ್ತ್ರಿಗಳ ಸುಳ್ಳು ಸೃಷ್ಟಿಯನ್ನು ಬಯಲು ಮಾಡಿ ಬಹುದೊಡ್ಡ ಉಪಕಾರವನ್ನು ಇತಿಹಾಸಕ್ಕೆ ಮಾಡಿರುವರಲ್ಲದೆ ಹೇಗೆ ಅಖಂಡವಾಗಿದ್ದ ಸಮಾಜವನ್ನು ಜಂಗಮ ಮತ್ತು ಭಕ್ತರೆಂದು, ಧಾರ್ಮಿಕ ಜಗತ್ತಿನಲ್ಲಿ ವಿರಕ್ತ ವರ್ಗ, ಗುರು ವರ್ಗ ಎಂದು ಒಡೆಯುವ ಕೆಲಸವನ್ನು ಕಾಶೀನಾಥ ಶಾಸ್ತ್ರಿಗಳು ಮಾಡಿದರೆಂಬುದನ್ನು ಸಾಧಾರಪೂರ್ವಕವಾಗಿ ಪ್ರಸ್ತುತ ಕೃತಿಯಲ್ಲಿ ಪ್ರತಿಪಾದಿಸಿ ಅಭಿನಂದನೀಯರಾಗಿದ್ದಾರೆ. ಮರುಮುದ್ರಣ ಮಾಡಿ ಬಸವ ಧರ್ಮ ಪ್ರಕಾಶನ, ಕಲಬುರ್ಗಿ ಇವರೂ ಅಭಿನಂದಿನೀಯ ರಾಗಿದ್ದಾರೆ.

ಕಲ್ಯಾಣ ಕಿರಣ
ನವೆಂಬರ್-2010

ಪರಿವಿಡಿ (index)
Previous ಹೇಮರೆಡ್ಡಿ ಮಲ್ಲಮ್ಮ ಲಿಂಗಾಯತ Next