| ಬಸವಣ್ಣ ಲಿಂಗೈಕ್ಯ- ವಚನ ಆಧಾರ :👈 | 👉:ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ |
ನಿರ್ವಹಣಾ ತಜ್ಞ ಗುರು ಬಸವಣ್ಣನವರು |
✍ – ಶಿವಕುಮಾರ ಎಸ್. ಬಳಿಗಾರ
ಇಂದು ರಾಷ್ಟ್ರದ ಎಲ್ಲ ರಂಗಗಳಲ್ಲಿ ಆಗಾಧವಾದ ಪ್ರಗತಿಯಾಗಿದೆ. ಆರ್ಥಿಕ, ವ್ಯಾವಹಾರಿಕ, ಔದ್ಯಮಿಕ, ವೈಜ್ಞಾನಿಕ ರಂಗದಲ್ಲಾದ ಪ್ರಗತಿಯಿಂದ ಮಾನವನ ಐಹಿಕ ಬದುಕು ನಿತ್ಯನೂತನ ಸಾಧನ ಸೌಲಭ್ಯಗಳಿಂದ ಸುಖಮಯವಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ವ್ಯವಸ್ಥಿತವಾಗಿ ಸುನಿಯೋಜಿತವಾಗಿ ಮಾಡಲು ಮಾನವ ಪ್ರಯತ್ನಿಸುತ್ತಾನೆ. ಸಮಕಾಲೀನ ವ್ಯವಹಾರದಲ್ಲಿನ ತೀವ್ರ ಬದಲಾವಣೆಗಳಿಂದ 'ವೇಗ' ಹೆಚ್ಚು ಮಹತ್ವ ಪಡೆದಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಶೀಘ್ರ ನಿರ್ಣಯ ಅವಶ್ಯಕವಾಗಿದೆ. ಆಧುನಿಕ ಜೀವನ ಅನುಕೂಲಗಳ ಮಹಾಪೂರವನ್ನೇ ಮಾನವನ ಮುಂದೆ ತಂದೊಡ್ಡಿದರೂ ಕೂಡ ಅವುಗಳನ್ನು ಅನುಭೋಗಿಸಬೇಕಾದರೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಬೇಕಾಗುತ್ತದೆ. ಮಾನವನ ಜೀವನ ಹಲವು ಕ್ಷೇತ್ರಗಳ (ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಇತ್ಯಾದಿ) ಸಾಮೂಹಿಕ ಪ್ರಭಾವದಿಂದ ಸಂಕೀರ್ಣವಾಗಿದೆ. ಆದ್ದರಿಂದ ಜೀವನದ ನಿರ್ದಿಷ್ಟ ಗುರಿ ಸಾಧನೆಗೆ ವೈಜ್ಞಾನಿಕ ಆಡಳಿತ ನಿರ್ವಹಣ ತತ್ವಗಳನ್ನು ಪಾಲಿಸಬೇಕಾಗುತ್ತದೆ. ಒಂದು ಸಂಸ್ಥೆ ಮತ್ತು ವ್ಯವಸ್ಥೆಯ ಯಶಸ್ಸು ಅದರ ಸಮರ್ಪಕ ನಿರ್ವಹಣೆಯನ್ನವಲಂಬಿಸಿದೆ.
ನಿರ್ವಹಣಾಶಾಸ್ತ್ರ ಒಂದು ಪ್ರತ್ಯೇಕ ಜ್ಞಾನಭಂಡಾರವಾಗಿ ಬೆಳೆದುಕೊಂಡು ಬಂದಿದೆ. ಕೈಗಾರಿಕಾ ಕ್ರಾಂತಿಯ ನಂತರ ದೊಡ್ಡ ಪ್ರಮಾಣದ ವ್ಯವಹಾರವನ್ನು ಸಂಯುಕ್ತ ಬಂಡವಾಳ ಸಂಸ್ಥೆಯ ರೂಪದಲ್ಲಿ ಸಂಘಟಿಸಿದಾಗ ಮಾಲಿಕತ್ವ ಮತ್ತು ಆಡಳಿತದ ಪ್ರತ್ಯೇಕತೆಯ ಕಾರಣ ವೈಜ್ಞಾನಿಕ ನಿರ್ವಹಣೆಯು ಮಹತ್ವ ಪಡೆಯಿತು. ಎಫ್.ಡಬ್ಲ್ಯೂ ಟೇಲರ್, ಗಿಲ್‌ಬೆತ್ ಮತ್ತಿತರ ತಜ್ಞರ ಪ್ರಯತ್ನದ ಫಲವಾಗಿ ವೈಜ್ಞಾನಿಕ ಆಡಳಿತದಿಂದ ದೊಡ್ಡ ಪ್ರಮಾಣದ ವ್ಯವಹಾರ ಎಲ್ಲ ಸವಾಲುಗಳನ್ನು ಎದುರಿಸಿ ಲಾಭಕರವಾಗಿ ನಡೆಸುವುದು ಸಾಧ್ಯವಾಯಿತು. ಇಂದು ಆಧುನಿಕ ವ್ಯವಹಾರದ ಶೀಘ್ರ ಬೆಳವಣಿಗೆಗೆ ಅನುಕೂಲಕರವಾಗುವಂತೆ ನಿರ್ವಹಣಾಶಾಸ್ತ್ರ ಬೆಳೆದುಕೊಂಡುಬಂದಿದೆ.
ಯಶಸ್ವಿ ಆಡಳಿತ ನಿರ್ವಹಣೆಯಲ್ಲಿ ಈ ಕೆಳಗಿನ ಕಾರ್ಯಗಳನ್ನು ಕಾಣಬಹುದು.
ಇದಕ್ಕೆ ಪೂರಕ ಕಾರ್ಯಗಳೆಂದರೆ :
ಗುರು ಬಸವಣ್ಣನವರು ಬಹುಮುಖ ವ್ಯಕ್ತಿತ್ವವುಳ್ಳವರು. ಅವರು ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಧರ್ಮಶಾಸ್ತ್ರಜ್ಞರಾಗಿ, ಮನಃಶಾಸ್ತ್ರಜ್ಞರಾಗಿ ಮತ್ತು ಜಗತ್ತಿನ ಎಲ್ಲ ಜನರ ದೃಷ್ಟಿಯಲ್ಲಿ ಭಕ್ತಿಭಂಡಾರಿಯಾಗಿ ಪ್ರಸಿದ್ಧರಾಗಿದ್ದಾರೆ. ಗುರು ಬಸವಣ್ಣನವರ ಜೀವನ ಮತ್ತು ಸಾಧನೆಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾ ಹೋದಂತೆ ಅವರ ವ್ಯಕ್ತಿತ್ವ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಾ ಹೋಗುತ್ತದೆ. ಅವರ ಸಮಗ್ರ ವ್ಯಕ್ತಿತ್ವವನ್ನು ಗುರುತಿಸುವ ಪ್ರಯತ್ನ "ಅಂಗೈಯಲ್ಲಿ ಆಗಸ ಹಿಡಿದಂತೆ ಆಗುತ್ತದೆ". ಅದಕ್ಕಾಗಿಯೇ ದೇ.ಜ.ಗೌ. ಅವರು 'ಬಸವಣ್ಣನವರ ಜನನವೊಂದು ವಿಸ್ಮಯಕಾರಿ ಘಟನೆ. ವಿಶ್ವ ಚೈತನ್ಯದ ಪೂರ್ಣಾವತಾರವೆಂದೇ ಹೇಳಬಹುದು" ಎಂದಿದ್ದಾರೆ. ೧೨ನೆಯ ಶತಮಾನದಲ್ಲಿ ಅವರು ಉಂಟುಮಾಡಿದ ಮೂಲಭೂತ ಬದಲಾವಣೆಗಳು ಇಂತಿವೆ:
ಬಸವಣ್ಣನವರ ನೇತೃತ್ವದಲ್ಲಾದ ಈ ಕ್ರಾಂತಿಗಳ ಪರಿಣಾಮವಾಗಿ ಸರ್ವರಿಗೂ ಸಮಪಾಲು ದೊರೆತು ಸಮಾನತೆವುಂಟಾಗಿ ಶರಣ ಸಂಸ್ಕೃತಿಯ ಮೂಲಕ ಶಾಂತಿ ಸಮೃದ್ಧಿ ಸಹಜವಾಗಿ ನೆಲೆಗೊಂಡಿತ್ತು. ಈ ಮೂಲಭೂತ ಬದಲಾವಣೆಗಳು ಅಂದಿನ ಸಮಾಜದಲ್ಲಾದುದು ಆಕಸ್ಮಿಕವಲ್ಲ. ಬಸವಣ್ಣನವರ ದೂರದೃಷ್ಟಿ, ಮುಂದಾಲೋಚನೆ, ಸಮಗ್ರ ದೃಷ್ಟಿ, ಮಾನವೀಯ ಅನುಕಂಪ, ವ್ಯವಸ್ಥೆಯ ತಿಳುವಳಿಕೆ, ಸಕಲಜೀವಿಗಳಿಗೆ ಲೇಸನುಂಟು ಮಾಡುವ ಮಾನವೀಯ ತುಡಿತ ಮತ್ತು ಉತ್ತಮ ನಿರ್ವಹಣಾ ತತ್ವಗಳ ಸಮರ್ಥ ಪ್ರಯೋಗವೇ ಕಾರಣ. ಬಸವಣ್ಣನವರು ಉತ್ತಮ ನಿರ್ವಹಣಾ ತಜ್ಞರಾಗಿದ್ದರು ಎಂಬುದನ್ನು ಗುರುತಿಸುವ ಪ್ರಯತ್ನ ಈ ಲೇಖನದ್ದಾಗಿದೆ.
ನಿರ್ವಹಣಾ ತಜ್ಞರಾಗಿ ಬಸವಣ್ಣನವರು ಎಂದಾಕ್ಷಣ ಒಂದು ಪ್ರಶ್ನೆ ಉದ್ಭವಿಸುತ್ತದೆ. ನಿರ್ವಹಣಾಶಾಸ್ತ್ರ ವ್ಯವಹಾರ ಉದ್ದಿಮೆ ಸಂಸ್ಥೆಯ ದಕ್ಷ ಮತ್ತು ವೈಜ್ಞಾನಿಕ ಆಡಳಿತ ನಿರ್ವಹಣೆಗೆ ರೂಪಿಸಲ್ಪಟ್ಟ ತತ್ವಗಳ ಜ್ಞಾನಭಂಡಾರವಾಗಿದೆ. ಬಸವಣ್ಣನವರ ಸಾಧನೆ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ನೈತಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ್ದು, ಮೂಲಭೂತವಾಗಿ ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಪಡುತ್ತದೆ. ಆದ್ದರಿಂದ ಅವರನ್ನು ನಿರ್ವಹಣಾ ತಜ್ಞರು ಎಂದು ಪರಿಗಣಿಸಬಹುದೇ ? ಈ ದಿಶೆಯಲ್ಲಿ ಅಮೆರಿಕಾದ ನಿರ್ವಹಣಾ ಶಾಸ್ತ್ರದ ಗುರು ಪೀಟ ಎಫ್ ಡ್ರಕ್ಕರ್ ಅವರು ಆಡಳಿತದ ಬಗ್ಗೆ ನೀಡಿದ ಉಪದೇಶ ಉಲ್ಲೇಖನೀಯ.
"ನಿರ್ವಹಣಾಶಾಸ್ತ್ರವು ಎಲ್ಲರೂ ದುಡಿಯುವ ಒಂದು ಕೆಲಸದ ಬಗೆಗಿನ ಪ್ರೇರಣೆ ಮತ್ತು ದಾರಿಗಳನ್ನು ಕುರಿತು ವ್ಯವಹರಿಸುವುದು. ಆದ್ದರಿಂದ ಅದು ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುತ್ತದೆ. ಆದ್ದರಿಂದ ನಿರ್ವಹಣಾಕಾರರು ಎದುರಿಸುವ ಪ್ರಮುಖ ಸವಾಲೆಂದರೆ ತಮ್ಮ ಕೆಲಸಗಾರರ ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಅವರ ಕೆಲಸವನ್ನು ಕಟ್ಟುವ ನಿರ್ಮಾಣ ಘಟಕಗಳಾಗಿ ಒದಗುವ ಅಂಶಗಳನ್ನು ಗುರುತಿಸುವುದು. ನಿರ್ವಹಣಾಶಾಸ್ತ್ರವು ಮಾನವನ ಸಹಜಗುಣ, ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದರ ಅರಿವು" (ನ್ಯುರಿಯಾಲಿಟೀಸ್),
"ಅವರ ಆದರ್ಶ ಆಧ್ಯಾತ್ಮಿಕವಾದುದು ಆದರೂ ವ್ಯಾವಹಾರಿಕವಾದುದು. ಅವರ ದೃಷ್ಟಿ ದೂರದ ದಿಗಂತದತ್ತ ಆದರೂ ತನ್ನ ಜಂಘೆಯ ಸುತ್ತ, ಆಳದ ಬೇರಿನ ಸುತ್ತಲೂ, ಪರಿಸರ ಸೂಕ್ಷ್ಮ ವ್ಯಾಪಾರದತ್ತಲೂ ಎಚ್ಚರ, ಹಾಗೆಯೇ ಭಿನ್ನ ಭಿನ್ನ ರಂಗಗಳಲ್ಲಿ ಮಾನವನ ಚರ್ಯೆಯ ಬೃಹತ್ ಹಾಗೂ ಸೂಕ್ಷ್ಮ ಪರಿಣಾಮಗಳನ್ನು ಗ್ರಹಿಸುತ್ತಲೇ ಇದ್ದರು."
ಬಸವಣ್ಣನವರು ಲೌಕಿಕದಲ್ಲಿದ್ದುಕೊಂಡೇ ಆಚಾರದಿಂದ ಪರಮಾರ್ಥ ಸಾಧನೆಗೆ ದಾರಿ ತೋರಿದವರು. ಆದ್ದರಿಂದ ಅವರು ಅತ್ಯುತ್ತಮ ಆಡಳಿತ ತಜ್ಞರು ಆಗಿದ್ದರೆಂಬುದು ಉಪ್ಪೇಕ್ಷೆಯಲ್ಲ.
ಒಂದು ಸಂಸ್ಥೆ ಅಥವಾ ವ್ಯವಸ್ಥೆಯಲ್ಲಿ ಮುಂದೇನು ಮಾಡಬೇಕೆಂಬುದರ ನೀಲ- ನಕ್ಷೆಯೇ ಯೋಜನೆ, ನೀನು ಮಾಡುವ ಕೆಲಸಕ್ಕಾಗಿ ಯೋಜನೆ ರೂಪಿಸು, ಯೋಜನೆಯಂತೆ ಕೆಲಸ. ಆಗ ಯಶಸ್ಸು ನಿನಗೆ ಕಟ್ಟಿಟ್ಟ ಬುತ್ತಿ ಎಂಬ ಉಕ್ತಿ ಇದೆ. ಯೋಜಿಸುವ ಕಾರ್ಯದ ಹಿನ್ನೆಲೆ ಮೊದಲು ಯೋಚಿಸು ತದನಂತರ ಕಾರ್ಯ ಮಾಡು ಎಂಬು ದಾಗಿದೆ.
ಯೋಜಿಸುವುದು ಎಂದರೆ ಒಂದು ಕಾರ್ಯವ್ಯವಸ್ಥೆಯ ಉದ್ದೇಶಗಳನ್ನು ಗೊತ್ತುಪಡಿಸಿ ಅವುಗಳನ್ನು ಈಡೇರಿಸಲು ವೇಳಾಪಟ್ಟಿ, ಮುಂಗಡಪತ್ರ, ನೀತಿ, ವಿಧಾನ, ಕಾರ್ಯಕ್ರಮ ಮತ್ತು ತಂತ್ರ ರೂಪಿಸುವುದಾಗಿದೆ. ಯೋಜನೆ ಯಾವಾಗಲೂ ಭವಿಷ್ಯಕ್ಕೆ ಸಂಬಂಧಿಸಿರುವ ಕಾರಣ ಅನಿಶ್ಚಿತತೆ ಸಹಜ. ಸರಿಯಾದ ಜ್ಞಾನ, ಅನುಭವ, ಅಂಕಿ ಅಂಶಗಳು ಮತ್ತು ಮುಂದಾಲೋಚನೆ ಮತ್ತು ದೂರದೃಷ್ಟಿಯಿಂದ ಉತ್ತಮ ಯೋಜನೆ ರೂಪುಗೊಳ್ಳುತ್ತದೆ. ಯೋಜಿಸುವ ಕಾರ್ಯ ಎಲ್ಲ ವಿಭಾಗಗಳಲ್ಲಿ ಸತತವಾಗಿ ನಡೆಯುತ್ತಿರುತ್ತದೆ.
ಬಸವಣ್ಣನವರು ಬಾಲ್ಯದಿಂದಲೂ ಸೃಜನಶೀಲ ವ್ಯಕ್ತಿತ್ವವುಳ್ಳರಾಗಿದ್ದರು. ಬಾಗೇವಾಡಿ ಇಂಗಳೇಶ್ವರ ಕಮ್ಮೆಕುಲದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು ಹಲವು ಅರ್ಥಹೀನ ಆಚರಣೆಗಳ ಬಗ್ಗೆ ಮೊದಲಿನಿಂದಲೂ ಪ್ರಶ್ನಿಸುತ್ತಾ ವಿಚಾರಮಗ್ನರಾದವರು. ಅವರು ಸಮಾಜದಲ್ಲಿ ಬ್ರಾಹ್ಮಣರು ಪಾಲಿಸಿಕೊಂಡು ಬಂದ ಮೌಡ್ಯ ಆಚರಣೆಗಳು, ದಲಿತರು, ಬಡವರ ಶೋಷಣೆ, ದೇವಾಲಯಕ್ಕೆ ಕೀಳು ಜಾತಿಯವರಿಗೆ ಅವಕಾಶವಿಲ್ಲದಿರುವಿಕೆ ಮತ್ತಿತರ ವಿಷಯಗಳ ಚಿಂತನ ಮಂಥನ ಬಾಲ್ಯದಲ್ಲಿಯೇ ಮಾಡುತ್ತ ಬಂದಿದ್ದರು. ಈ ವಿಷಮತೆಗೆ ಪರಿಹಾರ ಕಂಡುಹಿಡಿಯಲು ತವಕಪಡುತ್ತಿದ್ದ ಅವರ ಮನಸ್ಸು ಉಪನಯನ ಸಂದರ್ಭದಲ್ಲಿ ಸ್ಫೋಟಗೊಂಡು ಹಿರಿಯರ ನೆರೆಹೊರೆಯವರ ಅವಕೃಪೆಗೆ ಪಾತ್ರರಾಗಬೇಕಾಯಿತು. ಅಲ್ಲಿನ ದ್ವಂದ್ವ ನೀತಿಯ ಆಚರಣೆಗಳಿಂದ ಬೇಸತ್ತ ಅವರ ಸೃಜನಶೀಲ ಮನಸ್ಸು ಯೋಚಿಸುವ ಪರಿಯನ್ನು ಅವರ ವಚನಗಳಲ್ಲಿ ಕಂಡುಕೊಳ್ಳಬಹುದು. ಅಕ್ಕನಾಗಮ್ಮ ಶಿವಸ್ವಾಮಿಯ ಜೊತೆಗೆ ಕೂಡಲ ಸಂಗಮನ ಸನ್ನಿಧಿಗೆ ಬಂದಾಗ ಈಶಾನ್ಯ ಗುರುಗಳಲ್ಲಿ ವೇದ ಉಪನಿಷತ್ ಮತ್ತಿತರ ಗ್ರಂಥಗಳ ಆಳವಾದ ಅಧ್ಯಯನದಿಂದ ಗುರುಗಳ ಜೊತೆಗೆ ವಿಚಾರಿಸಿ ಚರ್ಚಿಸಿ ತಮ್ಮ ಮನಸ್ಸಿನಲ್ಲಿನ ಸಂಶಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಯೋಜನೆ ಅವರ ಚಿತ್ತಭಿತ್ತಿಯಲ್ಲಿ ಸಿದ್ಧಗೊಳ್ಳುತ್ತದೆ. ಅದನ್ನೇ ಕಾಲ ಕೂಡಿಬಂದಾಗ ಕಾರ್ಯಗತಗೊಳಿಸಿ ಜಗತ್ತು ಕಂಡರಿಯದ ಅಭೂತಪೂರ್ವ ಸರ್ವ ಸಮಾನತೆಯ ಸುಖೀ ಸಮಾಜ ನಿರ್ಮಿಸುತ್ತಾರೆ.
ಯೋಜನೆಯಲ್ಲಿ ಗೊತ್ತುಪಡಿಸಿದ ಉದ್ದೇಶ ಸಾಧನೆಯಾಗಬೇಕಾದರೆ ಉತ್ತಮ ಸಂಘಟನಾ ಸಂರಚನೆ ಬೇಕು. ಸಂಘಟನೆ ಎಂದರೆ ಒಂದು ಸಂಸ್ಥೆಯ ಗುರಿಸಾಧನೆಗಾಗಿ ನಿರ್ವಹಿಸಬೇಕಾದ ವಿವಿಧ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ವಿಭಾಗೀಕರಿಸಿ ಕಾರ್ಯ ಮಾಡುವ ಸಿಬ್ಬಂದಿಗಳ ಅಧಿಕಾರ ಜವಾಬ್ದಾರಿಯ ಸಂಬಂಧಗಳನ್ನು ಗೊತ್ತುಪಡಿಸುವುದು.
ಬಸವಣ್ಣನವರು ಹಾಕಿಕೊಂಡ ಸಾಮಾಜಿಕ ಧಾರ್ಮಿಕ/ನೈತಿಕ ಸುಧಾರಣಾ ಯೋಜನೆಯನ್ನು ಕಾರ್ಯಗತಗೊಳಿಸಲು ಸಂಘಟಿಸುವುದು ಸುಲಭವಾಗಿರಲಿಲ್ಲ. ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಜನಾಂಗವನ್ನು ವಿವಿಧ ಲಿಂಗ, ಜಾತಿ, ವರ್ಗ, ವರ್ಣ, ವೃತ್ತಿಗಳಲ್ಲಿ ವರ್ಗಿಕರಿಸಿ ಜನರನ್ನು ದೂರೀಕರಿಸಲಾಗಿತ್ತು. ಊರನ್ನು ಶುಚಿಗೊಳಿಸುವ ಪಂಚಮರು ಊರುಬಿಟ್ಟು ದೂರ ವಾಸಿಸುವಂತೆ ಮಾಡಿ ಅಸ್ಪೃಶ್ಯತೆಯನ್ನು ಪಾಲಿಸುತ್ತಿದ್ದರು. ಎಲ್ಲರಿಗೂ ಅವಶ್ಯಕ ವಸ್ತುಗಳನ್ನು ಉತ್ಪಾದಿಸುವ, ಸೇವೆ ಒದಗಿಸುವ ಶ್ರಮಿಕರನ್ನು ಶೂದ್ರರನ್ನಾಗಿ ದೂರವಿಡಲಾಗಿತ್ತು. ಶ್ರಮಿಕರ ವಸ್ತುಗಳನ್ನು ವಿನಿಮಯ ಮಾಡಿ ಲಾಭಗಳಿಸುವ ವೈಶ್ಯರು, ದುಡಿಯದೇ ದೇವರ ಹೆಸರಿನಲ್ಲಿ ಇತರರ ಶ್ರಮದ ಫಲ ಭೋಗಿಸುತ್ತಾ, ರಾಜರನ್ನು ತಮ್ಮ ಅಂಕೆಯಲ್ಲಿಟ್ಟು ವರ್ಣಾಶ್ರಮ ಧರ್ಮ ಪೋಷಿಸಿಕೊಂಡು ಬಂದ ಬ್ರಾಹ್ಮಣವರ್ಗ ಸರ್ವಸುಖ ಅನುಭವಿಸುತ್ತಿದ್ದರು. ಜಾತಿರಹಿತ, ಲಿಂಗಭೇದವಿಲ್ಲದ ಸರ್ವರಿಗೂ ಸಮಾನ ಅವಕಾಶ ಕಲ್ಪಿಸುವ ಶರಣ ಧರ್ಮವನ್ನು ಸಾಕಾರಗೊಳಿಸಲು ಎಲ್ಲ ಜನರನ್ನು ಶರಣರಾಗಿ ಸಂಘಟಿಸುವುದು ಜಟಿಲವಾಗಿತ್ತು. ಏಕೆಂದರೆ ಕರ್ಮಠರ ಮತ್ತು ರಾಜಸತ್ತೆಯ ವಿರೋಧ ಕಟ್ಟಿಕೊಂಡು ಇದನ್ನು ಸಾಧಿಸುವುದು ಸಾಧ್ಯವಿರಲಿಲ್ಲ. ಅದಕ್ಕಾಗಿಯೇ ಬಸವಣ್ಣನವರು ತಮ್ಮ ವೈಯಕ್ತಿಕ ಪ್ರತಿಭೆಯಿಂದ ಬಿಜ್ಜಳನ ಒಲವನ್ನು ಗಳಿಸಿಕೊಂಡು, ವಿವಿಧ ಜಾತಿ ವರ್ಗದ ಜನರನ್ನು ಇಷ್ಟಲಿಂಗ ಧಾರಣೆಯ ಮೂಲಕ ಏಕಸೂತ್ರದಲ್ಲಿ ಬಂಧಿಸಿ, ಪ್ರೀತಿ, ವಿಶ್ವಾಸ ವಿನಯದಿಂದ ಶರಣರಾಗಿ 'ಇವ ನಮ್ಮವ ಇವ ನಮ್ಮವ' ಎನ್ನುವ ಧೋರಣೆಯೊಂದಿಗೆ ಉತ್ತಮ ರೀತಿಯಲ್ಲಿ ಸಂಘಟಿಸಿ ಸಾಮಾಜಿಕ ಧಾರ್ಮಿಕ ಮನ್ವಂತರವನ್ನೇ ಸೃಷ್ಟಿಸಿದರು.
ಸಂಘಟನೆಯಲ್ಲಿ ಗೊತ್ತುಪಡಿಸಿದ ಕಾರ್ಯಗಳನ್ನು ನಡೆಸಲು ದಕ್ಷ ಸಿಬ್ಬಂದಿಯನ್ನು ಒದಗಿಸಬೇಕು. ಸಂಸ್ಥೆಯ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಮಾನವ ಸಂಪನ್ಮೂಲ ಯೋಜನೆ ರೂಪಿಸಿ, ವೈಜ್ಞಾನಿಕವಾಗಿ ಸಿಬ್ಬಂದಿ ಆಯ್ಕೆ ಮಾಡಿ, ತರಬೇತಿ ನೀಡಿ, ಕೆಲಸ ವಹಿಸಿ ಕೊಟ್ಟು, ಸೂಕ್ತ ಸಂಭಾವನೆ ನೀಡಿ, ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸಿ ವರ್ಗಾವಣೆ, ಮುಂಬಡ್ತಿಯ ಮೂಲಕ ಸಿಬ್ಬಂದಿ ಸೇವೆ ಉಪಯೋಗಿಸುವುದು ಅವಶ್ಯಕ.
ವ್ಯವಹಾರದಲ್ಲಿ ಅತೀ ಮಹತ್ವದ್ದು ಮಾನವ ಸಂಪನ್ಮೂಲ. ಇತರ ಎಲ್ಲ ಸಂಪನ್ಮೂಲಗಳ ಸೂಕ್ತ ಬಳಕೆ ಸಾಧ್ಯವಾಗುವುದು ಮಾನವನಿಂದ. ಹೂಡಿಕೆಗಿಂತ ಹೆಚ್ಚು ಫಲ ನೀಡಬಲ್ಲ ಘಟಕ ಮಾನವನ ಶ್ರಮ. ಆದ್ದರಿಂದ ಸರಿಯಾದ ಕೆಲಸಕ್ಕೆ ಸರಿಯಾದ ವ್ಯಕ್ತಿಯನ್ನು ನೇಮಿಸಿದಾಗ ಕಾರ್ಯ ದಕ್ಷರೀತಿಯಲ್ಲಿ ನಡೆಯುತ್ತದೆ.
ಬಸವಣ್ಣನವರ ಕಾರ್ಯಸಾಧನೆ ಸಿದ್ಧಿಯ ಹಿಂದೆ ಪ್ರಮುಖವಾಗಿರುವುದು ಈ ಮಾನವಸಂಪನ್ಮೂಲವೇ. ಅಂದಿನ ಭೇದ ಸಂಸ್ಕೃತಿಯ ಸಮಾಜದಲ್ಲಿ ಮೇಲ್ಜಾತಿಯವರ ಶೋಷಣೆಗೆ ಬಲಿಯಾಗಿದ್ದ ಕಡೆಗಣಿಸಿದ್ದ ಸ್ತ್ರೀಯರನ್ನು, ಸಮಾಜದ ಆರ್ಥಿಕ ಬೆನ್ನೆಲುಬಾಗಿದ್ದ ಶ್ರಮಿಕ ವರ್ಗವನ್ನು ಕಾಯಕ-ದಾಸೋಹ ತತ್ವಗಳ ಮೂಲಕ ಜಾಗೃತಗೊಳಿಸಿ ಅವರೆಲ್ಲರೂ ಸ್ವಯಂ ಪ್ರೇರಣೆಯಿಂದ ದುಡಿಯುವಂತೆ ಮಾಡಿದರು. ಜನ್ಮದಿಂದ ನಿರ್ಧಾರವಾದ ಜಾತಿ ವೃತ್ತಿಗಳನ್ನು ನಿರಾಕರಿಸಿ, ಪ್ರತಿಭೆ, ಶ್ರದ್ಧೆ, ಭಕ್ತಿ, ಪಾವಿತ್ರ್ಯ ಸತ್ಯಶುದ್ಧತೆ ಮತ್ತು ದಾಸೋಹ ಬೆರೆಸಿ ಕಾಯಕವನ್ನೇ ಕೈಲಾಸವಾಗಿಸಿ, ಕಾಯಕ ಜೀವಿಗಳನ್ನು ಶೋಷಣೆಯಿಂದ ವಿಮುಕ್ತಗೊಳಿಸಿ, ಸ್ವತಂತ್ರ ಧೀರ ಶರಣರನ್ನಾಗಿ ರೂಪಿಸಿದರು. ಆಗ ಸ್ವಕಾಯಕ ಮುಖ್ಯವಾಗಿತ್ತು. ವ್ಯಕ್ತಿ ಜಾತಿಭೇದ ಮಾಡದೆ ತನ್ನ ಕೌಶಲ್ಯ, ಪ್ರತಿಭೆ ಅಭಿರುಚಿಗೆ ತಕ್ಕಂತೆ ಉದ್ಯೋಗ ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಲಾಯಿತು. ತಾನು ಮಾಡುವ ಉದ್ಯೋಗದಲ್ಲೇ ದೇವನನ್ನು ಕಾಣುವ ಹೊಸ ವಿಚಾರ ರೂಢಿಸಿ ನೀಚೋಚ್ಚ ಭಾವನೆಯನ್ನು ತೊಡೆದು ಹಾಕಿದರು. ಎಲ್ಲರೂ ತಮ್ಮ ತಮ್ಮ ಕಾಯಕದಿಂದಲೇ ಗಳಿಸಿ ಸಮಾಜಕ್ಕೆ ದಾಸೋಹದ ಮೂಲಕ ಅರ್ಪಿಸಿದ ಕಾರಣ ಆರ್ಥಿಕ ಸಮಾನತೆ ಉಂಟಾಯಿತು. ದುಡಿಯುವ ವರ್ಗದವರ ಆತ್ಮಗೌರವ ಹೆಚ್ಚಿತು. ಎಲ್ಲರೂ ಸ್ವಾವಲಂಬಿಗಳಾಗಿ ಜೀವನ ಸಾಗಿಸುವಂತಾಯಿತು. ಜಗತ್ತಿನಲ್ಲಿ ಎಲ್ಲೂ ಕಾಣದ ವಿಶಿಷ್ಟ ತತ್ವ ಈ ಕಾಯಕ ಮತ್ತು ದಾಸೋಹ, ಸಮಾಜವಾದ, ಸರ್ವೋದಯ ಮತ್ತು ಸರ್ವಸಮಾನತೆಯನ್ನು ಏಕಕಾಲಕ್ಕೆ ರೂಢಿಸಿ ಮಾನವನನ್ನು ಮಹಾದೇವನಾಗಿಸುವುದು ಇದರಿಂದ ಸಾಧ್ಯವಾಯಿತು. ಬಿಜ್ಜಳನ ಆಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸೂಕ್ತ ಪ್ರೇರಣೆ ನೀಡಿ ನ್ಯಾಯ ಸಮ್ಮತ ಸಂಭಾವನೆ ನೀಡಿ, ಸಿಬ್ಬಂದಿ ನಿರ್ವಹಣೆಯ ಮೂಲಕ ಭಂಡಾರದಲ್ಲಿ ಸ್ಥಿತಿವಂತಿಕೆ ಕಾಯ್ದುಕೊಂಡಿದ್ದರು. ಬಸವಣ್ಣನವರ ಈ ಸಾಮಾಜಿಕ ಕಳಕಳಿ, ಶರಣಧರ್ಮದ ಪ್ರಸಿದ್ದಿ ಕೇಳಿ ಬೇರೆ ಬೇರೆ ದೇಶದಿಂದ ಜನರು ಬಂದು ಕಾಯಕ ದಾಸೋಹ ತತ್ವದಿಂದ ಜೀವನ ನಡೆಸಿದ್ದು ಅವರ ನಾಯಕತ್ವಕ್ಕೆ ಸಾಕ್ಷಿ, ಕಾಶ್ಮೀರದರಸು ಮಹಾದೇವ ಭೂಪಾಲ ಅವನ ಪತ್ನಿಯೊಂದಿಗೆ ಕಲ್ಯಾಣಕ್ಕೆ ಬಂದು ಮೋಳಿಗೆ ಮಾರಯ್ಯನಾಗಿ ಕಾಯಕದಿಂದ ಜೀವನ ನಡೆಸಿದ್ದು, ಒಂದು ಉದಾಹರಣೆ.
ಸಂಸ್ಥೆಯ ಯೋಜನೆಗೆ ರೂಪಿಸಿದ ಸಂಘಟನೆ, ಒದಗಿಸಿದ ಸಂಪನ್ಮೂಲ ಮತ್ತು ಸಿಬ್ಬಂದಿ ಕಾರ್ಯ ನಡೆಸಬೇಕಾದರೆ ನಿರ್ದೇಶನಬೇಕು. ನಿರ್ದೇಶನ ಎಂದರೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರಿಗೆ ಏನು ಮಾಡಬೇಕೆಂಬುದನ್ನು ಹೇಳಿ ಅವರು ತಮ್ಮ ಗರಿಷ್ಠ ಸಾಮರ್ಥ್ಯಕ್ಕನುಗುಣವಾಗಿ ದುಡಿಯುವಂತೆ ಮಾಡುವುದಾಗಿದೆ. ಉತ್ತಮ ನಿರ್ದೇಶನಕ್ಕೆ ಸಂಪರ್ಕ ವ್ಯವಸ್ಥೆ, ಸಾಮರಸ್ಯ, ಪ್ರೇರೇಪಣೆ ಮತ್ತು ನಾಯಕತ್ವ ಬೇಕು. ಸಂಪರ್ಕ ವ್ಯವಸ್ಥೆ ಕಾರ್ಯನಿರ್ವಹಿಸುವ ವಿವಿಧ ವ್ಯಕ್ತಿ ವಿಭಾಗಗಳಲ್ಲಿ ಸರಿಯಾಗಿ ವಿಚಾರ ಅಭಿಪ್ರಾಯ ಮಾಹಿತಿ ವಿನಿಮಯಮಾಡಿಕೊಳ್ಳಲು ಅನುಕೂಲವಿರಬೇಕು.
ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವವರೆಲ್ಲ ಪರಸ್ಪರ ಸಹಕಾರದಿಂದ ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಂಸ್ಥೆಯ ಒಟ್ಟು ಗುರಿ ಸಾಧನೆಯಾಗುತ್ತದೆ. ಕೆಲಸಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರಕೂಡದು. ಎಲ್ಲರೂ ಪರಿಪೂರ್ಣ ಸಾಮರಸ್ಯದಿಂದ ಕೆಲಸ ಮಾಡಬೇಕು.
ವ್ಯಕ್ತಿ ಮನಸ್ಸು ಕೊಟ್ಟು ಕೆಲಸ ಮಾಡಬೇಕಾದರೆ ಪ್ರೇರಣೆಬೇಕು. ಸಂಸ್ಥೆ ಸಿಬ್ಬಂದಿಗೆ ಧನಾತ್ಮಕ ಮತ್ತು ಋಣಾತ್ಮಕ ಪ್ರೇರಣೆ ಒದಗಿಸುತ್ತದೆ. ಉತ್ತಮ ಕೆಲಸಕ್ಕೆ ಸೂಕ್ತ ಪ್ರತಿಫಲ, ಮನ್ನಣೆ ಪ್ರೋತ್ಸಾಹ ಮತ್ತು ಸ್ಫೂರ್ತಿ ಒದಗಿಸಿದರೆ ವ್ಯಕ್ತಿಗಳು ಉತ್ತಮ ಸಾಧನೆ ಮಾಡಿತೋರಿಸುತ್ತಾರೆ.
ಒಂದು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಜನಸಮುದಾಯವನ್ನು ತನ್ನ ವ್ಯಕ್ತಿತ್ವದ ಪ್ರಭಾವದಿಂದ ಮುನ್ನಡೆಸಿಕೊಂಡು ಹೋಗುವುದೇ ನಾಯಕತ್ವ. ಯಾರ ಮೇಲೂ ಒತ್ತಡ ಹೇರದೆ, ಭಯಬೀಳಿಸದೆ, ಪ್ರೀತಿ ಮತ್ತು ಸ್ಫೂರ್ತಿಯಿಂದ ಚೆನ್ನಾಗಿ ಕೆಲಸಮಾಡುವಂತೆ ಜನರನ್ನು ಆಕರ್ಷಿಸುವವನೇ ಉತ್ತಮ ನಾಯಕ.
ಬಸವಣ್ಣನವರು ೧೨ನೆಯ ಶತಮಾನದಲ್ಲಿ ತಮ್ಮ ನಾಯಕತ್ವದ ಗುಣಲಕ್ಷಣಗಳಿಂದ ಶರಣ ಸಮೂಹವನ್ನು ಮುನ್ನಡೆಸಿಕೊಂಡು ಹೋದದ್ದು ಅವರು ಉತ್ತಮ ನಿರ್ದೇಶಕರೆಂಬುದಕ್ಕೆ ಸಾಕ್ಷಿ. ಅವರು ಶರಣರಲ್ಲಿ ಉತ್ತಮ ಸಂಪರ್ಕ ಕಲ್ಪಿಸಿದರು. ಕನ್ನಡವನ್ನೇ ಸಂಪರ್ಕಮಾಧ್ಯಮವನ್ನಾಗಿ ಬಳಸಿ ವಚನಗಳ ಮೂಲಕ ವಿಚಾರಗಳನ್ನು ಪರಸ್ಪರ ಅರ್ಥಮಾಡಿಕೊಳ್ಳುತ್ತಿದ್ದರು. ಎಲ್ಲ ಶರಣರು ಒಂದೆಡೆ ಸೇರಿ ವಿಚಾರ ವಿನಿಮಯ ವಿಮರ್ಶೆಗಾಗಿ ಜಗತ್ತಿನ ಪ್ರಥಮ ಸಂಸತ್ತು ಅನುಭವಮಂಟಪವನ್ನು ಸ್ಥಾಪಿಸಿದರು. ಎಲ್ಲ ಶರಣರ ಆತ್ಮಗೌರವ ಹೆಚ್ಚಿಸಿ ಸ್ವಯಂ ಸ್ಫೂರ್ತಿಯಿಂದ ಕಾರ್ಯಮಾಡಲು ಪ್ರೇರಣೆ ಒದಗಿಸಿದ್ದರು. ಅಧಿಕಾರಿಯ ದರ್ಪ ತೋರದೆ, ಆದೇಶಿಸದೆ, ಗದರಿಸದೆ 'ಸದುವಿನಯವೇ ಸದಾಶಿವನ ಒಲುಮೆ' ಎಂಬಂತೆ ತಮ್ಮ ಸೌಜನ್ಯದ ವರ್ತನೆಯಿಂದ ಎಲ್ಲರಿಗೂ ಸ್ಫೂರ್ತಿ ಚಿಲುಮೆಯಾಗಿದ್ದರು.
ಬಸವಣ್ಣನವರು ಎಲ್ಲ ಶರಣರ ನಾಯಕರಾಗಿದ್ದರು. ನಾಯಕತ್ವದ ಸಕಲಗುಣ ವಿಶೇಷತೆಗಳು ಅವರಲ್ಲಿದ್ದವು. ಅವರ ನಡೆ, ನುಡಿ, ವ್ಯಕ್ತಿತ್ವ ಶರಣರಲ್ಲಿ ಅಷ್ಟೇ ಏಕೆ ಅವರ ವಿರೋಧಿಗಳಲ್ಲೂ ಗೌರವಭಾವ ಮೂಡಿಸಿ ಪ್ರಭಾವ ಬೀರುತ್ತಿತ್ತು. "ಒಬ್ಬ ದಕ್ಷ ಆಡಳಿತಗಾರ ನಾಯಕನಾಗಿ ಜನರನ್ನು ಎಲ್ಲಿಗೆ ಮುನ್ನಡೆಸಬೇಕು ಎಂಬುದನ್ನು ಅರಿತಿರಬೇಕು ಮತ್ತು ಅವರನ್ನು ಅಲ್ಲಿಗೆ ಹೇಗೆ ಕರೆದೊಯ್ಯಬೇಕು ಎಂಬುದನ್ನು ಅರಿತಿರಬೇಕು. ಅವರು ಜನರನ್ನು ಈಗಿರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ನಡೆಸಬೇಕು. ಇದಕ್ಕೆ ಅವರಲ್ಲಿರಬೇಕಾದ ವಿಶೇಷ ಗುಣಲಕ್ಷಣಗಳು - ದರ್ಶನ, ಚಾರಿತ್ರ್ಯ, ಅರ್ಪಣೆ, ದಯೆ, ಧೈರ್ಯ, ನಿಷ್ಠೆ, ಮನೋದಾರ್ಢ್ಯ, ಸಂವಹನ, ಸಾಂಘಿಕ ವ್ಯವಸ್ಥಾಪನ ಮತ್ತು ತಂತ್ರ ಕೌಶಲಗಳು, ಔದಾರ್ಯ, ಆತ್ಮಭರವಸೆ, ವಿಶಾಲ ದೃಷ್ಟಿ ಮತ್ತು ಪ್ರಜ್ಞಾವಂತ ಮಾನವ ಪ್ರೇಮ."
ಈ ಗುಣಗಳಿಂದ "ಅವರು ಜನರಿಗೆ ಪ್ರೇರಣೆ ಇತ್ತು ಮುನ್ನಡೆಸಿ ಸಾಂಪ್ರದಾಯಿಕ, ರಾಜಕೀಯ, ಆರ್ಥಿಕ, ವೈಜ್ಞಾನಿಕ, ಸಾಮಾಜಿಕ, ಧಾರ್ಮಿಕ, ಸೈದ್ಧಾಂತಿಕ ಮಿತಿಗಳಿಂದ ಆಚೆಗೆ ನಡೆಸಿ ಇತಿಹಾಸದ ಮೇಲೆ ಶಾಶ್ವತ ಗುರುತನ್ನು ಬಿಟ್ಟು ಹೋಗುತ್ತಾರೆ." ಬಸವಣ್ಣನವರು ದಾರ್ಶನಿಕರಾಗಿ ಈ ಎಲ್ಲ ನಾಯಕತ್ವದ ಗುಣಗಳನ್ನು ಹೊಂದಿದ ಕಾರಣ ಸಮರ್ಥ ನಿರ್ವಹಣಾ ತಜ್ಞರೂ ಆಗಿದ್ದರೆಂಬುದು ವೇದ್ಯ.
"ಯೋಜನೆಯಿಲ್ಲದ ನಿಂಯತ್ರಣ ವ್ಯರ್ಥ
ನಿಯಂತ್ರಣವಿಲ್ಲದ ಯೋಜನೆ ವಿಫಲ"
ನಿಯಂತ್ರಣದಿಂದ ಕೆಲಸ ಯೋಜನೆಗನುಗುಣವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ಕಂಡುಬಂದ ತಪ್ಪುಗಳನ್ನು ತಿದ್ದುಪಡಿ ಮಾಡುತ್ತ, ಅಂದುಕೊಂಡ ಗುರಿ ತಲುಪುವುದು ಎಂದರ್ಥ. ತಪ್ಪುಗಳನ್ನು ಸರಿಪಡಿಸಿ, ಅವು ಮರುಕಳಿಸದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ.
ವ್ಯವಸ್ಥಾಪನೆ ಫಲಪ್ರದವಾಗುವುದು ಸರಿಯಾದ ನಿಯಂತ್ರಣದಿಂದಲೇ. ಬಸವಣ್ಣನವರು ಶರಣರಲ್ಲಿ ನೈತಿಕ ನೆಲೆಗಟ್ಟಿನ ಮೂಲಕ ಸ್ವಯಂ ನಿಯಂತ್ರಣ ವ್ಯವಸ್ಥೆ ನಿರ್ಮಿಸಿದ್ದರು. ಅನುಭವ ಮಂಟಪದಲ್ಲಿ ನಡೆಯುವ ಚರ್ಚೆಯಲ್ಲಿ ಕಂಡುಬಂದ ದೋಷ/ ತಪ್ಪು ನಡವಳಿಕೆಗಳನ್ನು ತಿದ್ದುವ, ಸರಿಪಡಿಸುತ್ತಿದ್ದ ಮಾರ್ಗ ಸೂಚಿಸಲಾಗುತ್ತಿತ್ತು. ತಪ್ಪು ಮಾಡಿದವರಿಗೆ ಕ್ಷಮಿಸಿ ಬುದ್ದಿ ಹೇಳಿ ಸರಿದಾರಿಗೆ ತರುತ್ತಿದ್ದರು.
ಬಸವಣ್ಣನವರು ಒಬ್ಬ ಅದ್ವಿತೀಯ ನಿರ್ವಹಣಾ ತಜ್ಞರಾಗಿದ್ದರು ಎಂಬುದು ನಿಸ್ಸಂದೇಹ. ಅವರು ಇಷ್ಟಲಿಂಗದ ಮೂಲಕ ಜಾತಿಭೇದ, ಲಿಂಗಭೇದ, ವೃತ್ತಿಭೇದದಿಂದ ಚದುರಿಹೋಗಿದ್ದ ಶೋಷಿತ ವರ್ಗದ ಜನರನ್ನು ಏಕಸೂತ್ರದಲ್ಲಿ ಸಂಘಟಿಸಿ ಶರಣರನ್ನಾಗಿಸಿದರು. ದೇವಾಲಯ ಪ್ರವೇಶ ವಿರೋಧಿಸಿ, ಮಂತ್ರ ಹೇಳಿದರೆ ನಾಲಿಗೆ ಸೀಳಿಸುವ, ಕೇಳಿದರೆ ಕಿವಿಯಲ್ಲಿ ಕಾದ ಸೀಸ ಹಾಕುವ ಅಮಾನವೀಯ ವರ್ತನೆಯಿಂದ ಜನರನ್ನು ವಿಮುಕ್ತಗೊಳಿಸಲು ದೇಹವನ್ನೇ ದೇವಾಲಯವನ್ನಾಗಿಸಿ ಆತ್ಮೋನ್ನತಿಗೆ ದಾರಿತೋರಿದರು. ಕಾಯಕ ದಾಸೋಹ ತತ್ವಗಳ ಮೂಲಕ ಸಂಪನ್ಮೂಲಗಳ ಪೂರ್ಣ ಬಳಕೆಗೆ ಅವಕಾಶ ಮಾಡಿ ಎಲ್ಲರನ್ನು ಆರ್ಥಿಕ ಸ್ವಾವಲಂಬಿಗಳಾಗಿಸಿ, ಆತ್ಮಗೌರವ ಹೆಚ್ಚಿಸಿ ಸಮೃದ್ದಿ ಉಂಟು ಮಾಡಿದರು. ಕಡೆಗಣಿಸಿದ ಸ್ತ್ರೀ ಸಂಕುಲವನ್ನು ಸಮಾಜದ ಮುಂಚೂಣಿಗೆ ತಂದು ಅವರನ್ನು ವ್ಯವಸ್ಥೆಯಲ್ಲಿ ಪ್ರಗತಿಯ ಪಾಲುದಾರರಾಗಿ ರೂಪಿಸಿದರು. "ಎಲ್ಲರ ಏಳ್ಗೆಯಲ್ಲಿ ನನ್ನ ಏಳ್ಗೆ ಇದೆ” ಎಂಬ ಸಹಕಾರ ತತ್ವದರಿವು ಮೂಡಿಸಿ ದಾಸೋಹದಿಂದ ಸಕಲಜೀವಿಗಳ ಲೇಸಿಗೆ ಶ್ರಮಿಸುವ ಶರಣ ಸಂಸ್ಕೃತಿ ನಿರ್ಮಿಸಿದರು. ಕಾಯಕವೇ ಕೈಲಾಸ, ದಾಸೋಹವೇ ದೀಕ್ಷೆ, ಸದುವಿನಯವೇ ಸದಾಶಿವನ ಒಲುಮೆ, ಮರ್ತ್ಯಲೋಕ ಎಂಬುದು ಕರ್ತಾರನ ಕಮ್ಮಟ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು, ದಯವೇ ಧರ್ಮದ ಮೂಲ ಮತ್ತು ಸಪ್ತಶೀಲ ನೀತಿಯನ್ನು ರೂಢಿಸಿ ಸಮಾಜವನ್ನು ಶಾಂತಿ ಸುಭಿಕ್ಷೆಯ ನಂದನವನವನ್ನಾಗಿಸಿದ್ದರು. ಮಾನವನನ್ನು ಪ್ರಭಾವಿಸುವ ಮೂಲಕ ಪ್ರೀತಿ ಮತ್ತು ಅರಿವು ಎಂದರಿತು ಅಂತೆಯೇ ನಡೆದುಕೊಂಡು ಯುಗದ ಉತ್ಸಾಹವಾಗಿ, ಭಕ್ತಿ ಭಂಡಾರಿಯಾಗಿ, ಜನನಾಯಕರಾಗಿ ೧೨ನೆಯ ಶತಮಾನವನ್ನು ಸ್ವರ್ಣಯುಗವಾಗಿಸಿದ್ದರು. ವಚನ ರತ್ನಮಾಲೆಯನ್ನು ಕನ್ನಡ ತಾಯಿಯ ಕೊರಳಿಗೆ ತೊಡಿಸಿ ಗೌರವಿಸಿದರು. ಈ ಎಲ್ಲ ಸಾಧನೆಯಲ್ಲಿ / ಕ್ರಾಂತಿಯಲ್ಲಿ ಎಲ್ಲೂ ಹಿಂಸೆಗೆ ಅವಕಾಶಕೊಡದಂತೆ ಎಚ್ಚರವಹಿಸಿದ್ದು ಅವರ ಮಾನವೀಯತೆಗೆ ನಿದರ್ಶನ.
ಬಸವಣ್ಣನವರು ಕಲ್ಯಾಣದಲ್ಲಿ ಬಿಜ್ಜಳನ ಆಸ್ಥಾನದಲ್ಲಿ ಕರಣಿಕರಾಗಿ, ಭಂಡಾರದ ಮಂತ್ರಿಗಳಾಗಿ ಉತ್ತಮ, ನಿರ್ವಹಣಾತಜ್ಞರೆಂಬುದನ್ನು ನಿರೂಪಿಸಿದರು. ಅದರಿಂದಲೇ ವಿರೋಧಿಗಳ ಸತತ ಕುತಂತ್ರದಿಂದಲೂ ಅವರಿಗೇನೂ ಆಗುವಂತಿರಲಿಲ್ಲ. ಸ್ವತಃ ರಾಜ ಅವರ ಕಾರ್ಯದಿಂದ ತೃಪ್ತನಾಗಿದ್ದ.
ಸಮಾಜದಲ್ಲಿ ಶರಣ ಧರ್ಮ ಪ್ರಸಾರ, ದಲಿತರೊಡನೆ ಸ್ನೇಹ ಪ್ರೀತಿ ಒಡನಾಟ, ಮಹಾಮನೆಯಲ್ಲಿ ದಾಸೋಹ, ಅನುಭವಮಂಟಪದಲ್ಲಿ ಶರಣರ ಸಹಕಾರದೊಂದಿಗೆ ಉತ್ತಮ ಆಡಳಿತ ನಡೆಸಿ ಖ್ಯಾತಿ ಪಡೆದಿದ್ದರು.
ವೈಯಕ್ತಿಕ ಜೀವನದ ಕೆಲವು ಘಟನೆಗಳಲ್ಲಿ ಇವರು ತೋರಿದ ಪ್ರತಿಕ್ರಿಯೆ, ನಡೆದುಕೊಂಡ ರೀತಿ ಅವರ ನಿರ್ವಹಣಾ ಚಾತುರ್ಯಕ್ಕೆ ಸಾಕ್ಷಿ.
ಬಸವಣ್ಣನವರ ಜೀವನ ಮತ್ತು ವಚನದಲ್ಲಿರುವ ಸಂದೇಶಗಳು ಇಡೀ ಪ್ರಪಂಚಕ್ಕೆ ಸನ್ಮಾರ್ಗದ ವಿಶ್ವಕೋಶವಿದ್ದಂತೆ. ಅಧ್ಯಯನ ಮಾಡಿದಷ್ಟು ಹೊಸ ಆಯಾಮ ಪಡೆಯುವುದು ಅವರ ವ್ಯಕ್ತಿತ್ವ. ಅವರು ದೇವರು ಸೃಷ್ಟಿಸಿದ ಅತ್ಯುತಮ ಮಾನವ ಮಾದರಿ ಎಂದು ಹೇಳಬಹುದು. ಅವರು ಇಡೀ ಮನುಕುಲಕ್ಕೆ ನಾಯಕರಾಗಿದ್ದಾರೆ. ಅವರು ಕೇವಲ ಅನುಯಾಯಿಗಳನ್ನು ಬೆಳೆಸಿಕೊಂಡು ಹೋಗುವ ನಾಯಕರಾಗದೇ, ತಮ್ಮ ಸಂಪರ್ಕದಲ್ಲಿ ಬಂದ ಸಮರ್ಥ ವ್ಯಕ್ತಿತ್ವದ ಶರಣರನ್ನೂ ನಾಯಕರನ್ನಾಗಿ ರೂಪಿಸಿ ಸಮಾಜದ ಸಮುನ್ನತಿಗೆ ಕೊಡುಗೆ ನೀಡುವಂತೆ ಮಾಡಿದ್ದಾರೆ. ಅದಕ್ಕಾಗಿಯೇ ಅವರು 'ನಾಯಕರ ನಾಯಕರು'. ಬಸವಾದಿ ಶರಣರನ್ನು ವಿವಿಧ ನಾಯಕತ್ವ ಗುಣ ವಿಶೇಷತೆಗೆ ಮಾದರಿಯಾಗಿ ನಿರ್ವಹಣಾ ಶಾಸ್ತ್ರದ ಪಠ್ಯದಲ್ಲಿ ಸೇರಿಬಸಬಹುದು. ಬಸವಣ್ಣನವರನ್ನು ಸಮಗ್ರ ವ್ಯಕ್ತಿತ್ವದ ಶ್ರೇಷ್ಠ ಮಾದರಿಯಾಗಿ ಪರಿಗಣಿಸಬಹುದು. ವಚನಗಳು ತತ್ವಜ್ಞಾನ ಆಧ್ಯಾತ್ಮ ಅನುಭಾವದ ಖಣಿಗಳಷ್ಟೇ ಅಲ್ಲ ಅವು ವಾಸ್ತವಿಕ ಜೀವನಕ್ಕೆ ಮಾರ್ಗದರ್ಶನವನ್ನು ನೀಡುತ್ತವೆ. ಅವುಗಳಲ್ಲಿ ದಕ್ಷ ನಿರ್ವಹಣೆಗೆ ಸೂತ್ರಗಳು ಇವೆ. ಉತ್ತಮ ಆಡಳಿತಕ್ಕೆ ನೀತಿ ತತ್ವಗಳಿವೆ, ನೊಂದವರಿಗೆ ಸಾಂತ್ವನವಿದೆ. ಮಾನಸಿಕ ಒತ್ತಡಕ್ಕೆ ಸೂಕ್ತ ಪರಿಹಾರವಿದೆ. ಅವು ಸ್ವಯಂ ಆಡಳಿತ ಮತ್ತು ಒತ್ತಡ ನಿರ್ವಹಣೆಗೆ ಸಿದ್ಧಾಂತ ಒದಗಿಸಬಲ್ಲವು. ಆಧುನಿಕ ವ್ಯವಹಾರದ ಹಲವು ವಿಷಮ ಬೆಳವಣಿಗೆಗಳನ್ನು ಹೋಗಲಾಡಿಸಿ, ಸಮಾಜದಲ್ಲಿ ಅನೀತಿ, ಅಸಮಾನತೆ ಮತ್ತು ಭಯೋತ್ಪಾದನೆ ನಿವಾರಿಸಲು ಮತ್ತು ಉತ್ತಮ ಆಡಳಿತಕ್ಕೆ ಸರಿಯಾದ ತತ್ವ ಸೂತ್ರ, ನೀತಿ/ನಿಯಮಗಳನ್ನು ಶರಣರ ವಚನಗಳು ಒದಗಿಸಬಲ್ಲವು.
| ಬಸವಣ್ಣ ಲಿಂಗೈಕ್ಯ- ವಚನ ಆಧಾರ :👈 | 👉:ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ |