Previous ೧೨೬೦ ರ ಅರ್ಜುನವಾಡ ಶಾಸನದಲ್ಲಿ ಬಸವಣ್ಣ ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next

🙏 ಗುರು ಬಸವಣ್ಣನವರ ಲಿಂಗೈಕ್ಯ- ವಚನಗಳ ಆಧಾರ

✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ

ಗುರು ಬಸವಣ್ಣನವರ ಲಿಂಗೈಕ್ಯ — ವಚನಗಳ ಆಧಾರ

ಗುರು ಬಸವಣ್ಣನವರ ಜೀವಿತಾವಧಿಯ ಬಗ್ಗೆ ಕಾಲಜ್ಞಾನ ವಚನಗಳು ಬಹಳ ಮಹತ್ವಪೂರ್ಣ ಮಾಹಿತಿಯನ್ನು ನೀಡುತ್ತವೆ. ಗುರು ಬಸವಣ್ಣನವರು ಜನಿಸಿದ್ದು ಆನಂದ ನಾಮ ಸಂವತರ ವೈಶಾಖಮಾಸದ ಅಕ್ಷಯ ತೃತೀಯದಂದು ರೋಹಿಣಿ ನಕ್ಷತ್ರದಲ್ಲಿ. ಅವರು ಲಿಂಗೈಕ್ಯರಾದುದು ನಳನಾಮ ಸಂವತ್ಸರ ಶ್ರಾವಣ ಶುದ್ಧ ಪಂಚಮಿಯಂದು, ಶ್ರೀ ಕನ್ನುಸ್ವಾಮಿ ಪಿಳ್ಳೆಯವರ ಇಂಡಿಯನ್ ಎಫಿಮರೀಸ್ ಆಧಾರದ ಮೇಲೆ ಭಾರತೀಯ ಕಾಲಮಾನವನ್ನು ಕ್ರಿಸ್ತಶಕಕ್ಕೆ ಪರಿವರ್ತಿಸಿದರೆ ಹುಟ್ಟು ದಿ.30-4-1134ಕ್ಕೆ ಲಿಂಗೈಕ್ಯ 30- 7-1196ಕ್ಕೆ ಬರುತ್ತದೆ. ಕಲ್ಯಾಣ ಕ್ರಾಂತಿ ನಡೆದುದು ರಾಕ್ಷಸನಾಮ ಸಂವತ್ಸರದಲ್ಲಿ. ಇದು ಕ್ರಿಶ.1196ಕ್ಕೆ ಸಂವಾದಿಯಾಗಿದೆ. ಹೀಗಾಗಿ ಗುರು ಬಸವಣ್ಣನವರು ಜೀವಿಸಿದ್ದು, 62 ವರ್ಷ 3 ತಿಂಗಳು 2 ದಿನ ಎಂದು ಖಚಿತವಾಗಿ ಹೇಳಬಹುದು.

ಕೆಲ ಸಾಹಿತಿಗಳು ಗುರು ಬಸವಣ್ಣನವರು ಜೀವಿಸಿದ್ದು ಕೇವಲ 36 ವರ್ಷ ಎಂದು ಹೇಳು ತ್ತಾರೆ. ಇದು ಸೂಕ್ತವಲ್ಲ. ಗುರು ಬಸವಣ್ಣನವರ ಒಂದು ವಚನ ಹೀಗಿದೆ.

📜 ಅಯ್ಯಾ, ಭಕ್ತಿಗೆ ಬೀಡಾದುದು ಕಲ್ಯಾಣ ಮೂವತ್ತಾರು ವರುಷ
ಅಯ್ಯಾ ಅನುಭವಕ್ಕೆ ಶಿವಸದನವಾದುದು ಇಪ್ಪತ್ತೇಳು ವರುಷ
ಅಯ್ಯಾ, ಹಿಂದಿನಂತನುಭವ ಹಿಂದಿನಂತೆ ಭಕ್ತಿಯಿಲ್ಲ
ಮೂರು ಮಾಸದೊಳಗಾಗಿ ಇಲ್ಲಿ ಆಡಲುಭಯವಿಲ್ಲ
ಕೇಳಯ್ಯಾ, ಕೂಡಲಸಂಗಮದೇವಾ - ಬ. ಷಟ್‌ಸ್ಥಲದ ಹೆಚ್ಚಿನ ವಚನಗಳು -1166 (ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)

ಈ ವಚನದ ಪ್ರಕಾರ ಕಲ್ಯಾಣವು ಗುರು ಬಸವಣ್ಣನವರ ಇರುವಿಕೆಯಿಂದ 36 ವರ್ಷಗಳ ಕಾಲ ಭಕ್ತಿಯ ಬೀಡಾಯಿತು. ಅನುಭವ ಮಂಟಪವು ಅವರು ಕಲ್ಯಾಣಕ್ಕೆ ಬಂದ 9 ವರ್ಷಗಳ ನಂತರ ನಿರ್ಮಾಣವಾಗಿ 27 ವರ್ಷ ನಡೆಯಿತು. ವರ್ಣಾಂತರ ವಿವಾಹವಾದ 3 ತಿಂಗಳೊಳಗಾಗಿ ಎಲ್ಲವೂ ಅಸ್ತವ್ಯಸ್ತವಾಯಿತು. ಗುರು ಬಸವಣ್ಣನವರು ಕಲ್ಯಾಣವನ್ನು ಪ್ರವೇಶಿಸಿದ್ದು ವಿಕ್ರಮನಾಮ ಸಂವತ್ಸರ, ಶ್ರಾವಣ ಸೋಮವಾರದಂದು. ಕಲ್ಯಾಣದಿಂದ ನಿರ್ಗಮಿಸಿದ್ದು ರಾಕ್ಷಸನಾಮ ಸಂವತ್ಸರ ಫಾಲ್ಗುಣ ಮಾಸದ ಮಂಗಳವಾರ ಎಂದು. ಈ ವಚನಕ್ಕೂ ಕಾಲಜ್ಞಾನ ವಚನಗಳಲ್ಲಿ ಬರುವ ಇತಿಹಾಸ ನಿರೂಪಣೆಗೂ ಸಂಪೂರ್ಣ ಹೋಲಿಕೆ ಇದೆ. ಗುರು ಬಸವಣ್ಣನವರು ಮನೆಯಲ್ಲಿ ಇದ್ದುದು 8 ವರ್ಷ, ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದ್ದು 12 ವರ್ಷ, ವಿವಾಹವಾಗಿ ಮಂಗಳವೇಡೆಯಲ್ಲಿದ್ದುದು 5 ವರ್ಷ, ಕಲ್ಯಾಣದಲ್ಲಿದ್ದುದು 36 ವರ್ಷ ಎಂದು ಖಚಿತವಾಗಿ ಹೇಳಬಹುದು. ತೆಲುಗಿನಲ್ಲಿ ಬಸವಣ್ಣನವರ ಸಮಗ್ರ ವಚನಗಳನ್ನು ಭಾಷಾಂತರಿಸಿ “ಬಸವ ವಚನಾಮೃತ: ” ಪ್ರಕಟಿಸಿರುವ ಡಾ| ಬಾಡಾಲ ರಾಮಯ್ಯನವರು ಅದರಲ್ಲಿ ಅತ್ಯಂತ ಅಧಿಕೃತವಾಗಿ ಗರು ಬಸವಣ್ಣನವರು ಲಿಂಗೈಕ್ಯರಾದುದು ಶ್ರಾವಣ ಶುದ್ಧ ಪಂಚಮಿಯಂದು ಎಂಬುದನ್ನು ಕಾಲಜ್ಞಾನ ವಚನಗಳ ಆಧಾರದ ಮೇಲೆ ಸಿದ್ಧಪಡಿಸಿದ್ದಾರೆ. ಇಚ್ಛಾಮರಣ : ಇದೊಂದು ಯೋಗವಿದ್ಯೆ, ಪ್ರಾಣಲಿಂಗಿ ಸ್ಥಲವನ್ನು ಸಾಧಿಸಿದವರೆಲ್ಲರೂ ಇಚ್ಛಾಮರಣದಿಂದಲೇ ದೇಹವನ್ನು ಬಿಟ್ಟಿದ್ದಾರೆ. ಉದಾ: ಗುರು ಬಸವಣ್ಣನವರು, ಅಲ್ಲಮಪ್ರಭುದೇವರು, ಅಕ್ಕಮಹಾದೇವಿ, ಎಡೆಯೂರು ಸಿದ್ಧಲಿಂಗೇಶ್ವರ ಮುಂತಾದವರು.

📜 ಪಶ್ಚಿಮ ಪದ್ಮಾಸನದಲ್ಲಿ ಕುಳಿತು ನೆಟ್ಟೆಲುವ ಮುರಿದು
ತುಟಿ ಮಿಡುಕದೆ ಅಟ್ಟಿಯಾಡಿತ್ತಲ್ಲಾ !
ಬಿಟ್ಟ ಕಣ್ಣು, ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ, ಕಟ್ಟು ಗುಡಿಯ
ಕೂಡಲಸಂಗಮದೇವ ಹಿಡಿವಡೆದ. -ಬ. ಷಟ್‌ಸ್ಥಲದ ಹೆಚ್ಚಿನ ವಚನಗಳು-814 (ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)

ಹೀಗೆ ಗುರು ಬಸವಣ್ಣನವರು ಯೋಗವಿದ್ಯೆಯಲ್ಲಿ ಬಲ್ಲಿದರಾಗಿದ್ದರು. ಅಂದು ಶ್ರಾವಣ ಶುದ್ಧ ಪಂಚಮಿ, ಎಂದಿನಂತೆ ಇಷ್ಟಲಿಂಗ ಯೋಗದಲ್ಲಿ ತಲ್ಲೀನರಾಗಿರುವಾಗ ಅವರಿಗೆ ದೇವನಿಂದ ಕರೆಬಂದಿತು. ಆಗ ಅವರು ಶರೀರವನ್ನು ತೊರೆದು ಪ್ರಾಣವನ್ನು ವಿಸರ್ಜಿಸಿ ಲಿಂಗದೇವನಲ್ಲಿ ಲೀನವಾಗಲು ಬಯಸಿ ಪ್ರಾರ್ಥಿಸುವರು.

📜 ಅಯ್ಯಾ ಹಿಂದೆಯಾನು ಮಾಡಿದ ಮೆರಹಿಂದ ಬಂದೆನೀ ಭವದಲ್ಲಿ
ನಿಮ್ಮ ಲೀಲೆ ನಿಮ್ಮ ವಿನೋದ ಸೂತ್ರದಿಂದ
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗೀತಂಗಳ ಆಡಿ ಹಾಡಿ,
ಆ ದಾಸೋಹವೆಂಬ ಮಹಾಗಣಸಂಕುಳದೊಳೆನ್ನನಿರಿಸಿ,
ನಿಮ್ಮ ಭಕ್ತಿಯ ಘನವ ನೀವೇ ಮೆರೆಯಲೆಂದು
ಪರವಾದಿ ಬಿಜ್ಜಳನ ತಂದೊಡ್ಡಿ, ಎನ್ನನು ಅವನೊಡನೆ ಹೋರಿ,
ಮುನ್ನೂರ ಅರವತ್ತು ಸತ್ತ ಪ್ರಾಣವನೆತ್ತಿಸಿ
ಮೂವತ್ತಾರು ಕೊಂಡೆಯವ ಗೆಲಿಸಿ,
ಎಂಬತ್ತೆಂಟು ಪವಾಡಗಳಂ ಕೊಂಡಾಡಿ,
ಮರ್ತ್ಯಲೋಕದ ಮಹಾಗಣಂಗಳ ಒಕ್ಕುದನಿಕ್ಕಿ ಎನ್ನ ಸಲಹಿದಿರಿ
ನಿಮ್ಮ ಮಹಾಗಣಂಗಳು ಮೆಚ್ಚಿ ಎನ್ನ ಸೂತಕವ ತೊಡೆದು
ಪ್ರಭುದೇವರ ಕರುಣದಿಂದ ಪ್ರಾಣಲಿಂಗ ಸಂಬಂಧ ಸಯವಾಯಿತ್ತು
ನೀವು ಕಳುಹಿದ ಬೆಸನು ಸಂದಿತ್ತು,
ಉಘೇ! ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ, -ಬ. ಷಟ್‌ಸ್ಥಲದ ಹೆಚ್ಚಿನ ವಚನಗಳು -1381

ಅವರ ಪ್ರಾರ್ಥನೆ ಮುಂದುವರಿಯುವುದು.

🌿 ಧರೆಯಾಕಾಶದ ನಡುವೆ ಒಂದು ಮಾಮರ ಹುಟ್ಟಿತ್ತು
ಆ ಮರಕ್ಕೆ ಕೊಂಬೆ ಎರಡು, ಎಲೆ ಮೂರು
ಮೂವತ್ತಾರು ಪುಷ್ಪ, ಕಾಯಿ ಒಂದೆ!
ಹಣ್ಣು ರಸ ತುಂಬಿದಲ್ಲಿ ಏನನೂ ಕಾಣೆ !
ಎಲೆ ಉದುರಿದಡೆ ಹಣ್ಣು ತೊಟ್ಟು ಬಿಟ್ಟು ಬಿದ್ದಿತ್ತು.
ಆ ಹಣ್ಣ ಪ್ರಭುದೇವರು ಆರೋಗಣೆಯ ಮಾಡಿ
ನಿಜದಲ್ಲಿ ನಿರ್ವಯಲಾದರು.
ಪ್ರಭುವಿನ ಕಾರುಣ್ಯ ಪ್ರಸಾದವ ನಾನು ಕೊಂಡೆನಾಗಿ,
ಕೂಡಲಸಂಗಮದೇವರು ಇತ್ತ ಬಾರೆಂದು
ತಮ್ಮ ಹೃದಯ ಕಮಲದಲ್ಲಿ ಇಂಬಿಟ್ಟುಕೊಂಡರು. -ಬ. ಷಟ್‌ಸ್ಥಲದ ಹೆಚ್ಚಿನ ವಚನಗಳು -1391 (ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)

“ಇತ್ತ ಬಾರೆಂದು ತಮ್ಮ ಹೃದಯಕಮಲದಲ್ಲಿ ಇಂಬಿಟ್ಟುಕೊಂಡರು.” ಎಂಬ ವಾಕ್ಯ ಗುರು ಬಸವಣ್ಣನವರ ಲಿಂಗೈಕ್ಯದ ಸ್ಥಿತಿಯನ್ನು ಹೇಳುತ್ತದೆ. ಇನ್ನೂ ಮುಂದುವರಿದು ಹೇಳುತ್ತಾರೆ.

📜 ಭಕ್ತಿ ಎಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣಾಯಿತ್ತು
ನಿಷ್ಪತ್ತಿಯೆಂಬ ಹಣ್ಣು ತಾನು
ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವಾ ತನಗೆ ಬೇಕೆಂದು ಎತ್ತಿಕೊಂಡ 🌸 -ಬ. ಷಟ್‌ಸ್ಥಲದ ಹೆಚ್ಚಿನ ವಚನಗಳು -524 (ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)

ಕುಂಡಲಿನಿ ಶಕ್ತಿಯನ್ನು ಊರ್ಧ್ವಮುಖವಾಗಿ ಏರಿಸಿ ಹೃದಯ ಕಮಲದಲ್ಲಿ ಕೊಂಚಕಾಲ ನಿಲ್ಲಿಸಿ, ಮತ್ತೆ ಶಿಖಾ ಚಕ್ರದವರೆಗೆ ಒಯ್ದು ಪಶ್ಚಿಮಚಕ್ರದ ಮೂಲಕ ಪ್ರಾಣವನ್ನು ವಿರ್ಸಸಿದ ನಿಪ್ಪತ್ತಿಯ ಹಣ್ಣಾದ ಗುರು ಬಸವಣ್ಣನವರ ಚೈತನ್ಯವು 'ಉರಿಯುಂಡ ಕರ್ಪುರಿದಂತೆ ದೇವನಲ್ಲಿ ಬೆರೆಯಿತು ಎಂಬುದನ್ನು ಈ ವಚನವು ಸ್ಪಷ್ಟಪಡಿಸುತ್ತದೆ. ಲಿಂಗೈಕ್ಯರಾಗುವಾಗ ಯಾವುದೇ ಭಯವಾಗಲಿ, ಆತಂಕವಾಗಲಿ, ಅಧೈರ್ಯವಾಗಲಿ ಕಾಣದೆ ಯೋಗಿಕ ಸ್ಥಿತಿಯಿಂದ ಗುರು ಬಸವಣ್ಣನವರು ಪ್ರಾಣಬಿಟ್ಟಿರುವುದಕ್ಕೆ ಆತ್ಮಕಥೆಯಂತಿರುವ ವಚನಗಳೇ ಸಾಕ್ಷಿಯಾಗಿವೆ.

ಗುರು ಬಸವಣ್ಣನವರು ಇಚ್ಛಾಮರಣಿ

ಗುರು ಬಸವಣ್ಣನವರು ಗಳಿಸಿದ್ದ ಮತ್ತೊಂದು ಸ್ಥಿತಿ ಎಂದರೆ ಇಚ್ಛಾಮರಣತ್ವ, ಇದು ಕುಂಡಲಿನೀಯೋಗದಿಂದ ಲಭ್ಯವಾಗುವ ಮತ್ತೊಂದು ಸಿದ್ಧಿ, ಕಾಯ ಜೀವಗಳ ಬೆಸುಗೆಯ ಬಿಡುಗಡೆಯನ್ನು ಸಾಧಕನು ಮಾಡಿಕೊಂಡರೆ, ಹಂಸ ಪಕ್ಷಿಯು ಹಾಲನ್ನು ನೀರಿನಿಂದ ಬಿಡುಗಡೆ ಮಾಡುವ ತೆರದಲ್ಲಿ, ಕಾಯದಿಂದ ಯಾವಾಗ ಬೇಕಾದರೂ ಆತ್ಮನನ್ನು ಬಿಡುಗಡೆ ಮಾಡಬಲ್ಲ ಒಂದು ಸಾಮರ್ಥ್ಯವು ಬರುವುದು. ಗುರು ಬಸವಣ್ಣನವರ ಜೀವನದ ಅವಸಾನವೇ ಒಂದು ವಿಶೇಷ ರೀತಿಯಲ್ಲಿ ಆಗಿದೆ. ಅನೇಕರು ತರ್ಕಿಸಿ ತಿಳಿದಂತೆ ಅವರು ನದಿಯನ್ನಾಗಲೀ, ಬಾವಿಯನ್ನಾಗಲೀ ಹಾರಿಕೊಂಡಿಲ್ಲ. ಕೆಲವರು ಮೂಢಭಕ್ತರು ನಂಬಿದಂತೆ – ಸಂಗಮಕ್ಷೇತ್ರದ ಸ್ಥಾವರಲಿಂಗವನ್ನು ಭೇದಿಸಿಕೊಂಡು ಒಳಹೋಗಲಿಲ್ಲ. ಯಾವ ರೋಗರುಜಿನಗಳಿಗೆ ಈಡಾಗಿಯೂ ಹೋಗಲಿಲ್ಲ. ಅಪೂರ್ವ ಯೋಗಸಿದ್ಧಿಯಿಂದ ಹೇಗೆ ಪ್ರಾಣ ವಿಸರ್ಜನೆಯನ್ನು ಮಾಡಿದರೆಂಬುದಕ್ಕೆ ಆತ್ಮ ಕಥೆಯಂತಿರುವ ವಚನಗಳೇ ಸಾಕ್ಷಿ.

ಪವನ ಕುಂಡಲಿನಿ ಯೋಗಗಳಲ್ಲಿ ಸಂಪೂರ್ಣ ವಿಜಯವನ್ನು ಪಡೆದಿದ್ದ ಅವರು, ಯಾವಾಗ ಬೇಕಾದರೂ ಆತ್ಮನನ್ನು ಈ ಕಾಯದ ಪಂಜರದಿಂದ ಬಿಡುಗಡೆ ಮಾಡಿ, ಪಶ್ಚಿಮದ್ವಾರ ಮುಖೇನ ಪ್ರಾಣವನ್ನು ವಿಸರ್ಜಿಸಬಲ್ಲ ಸಾಮರ್ಥ್ಯಗಳಿಸಿದ್ದರು.

ಅಂದು ರಾಕ್ಷಸನಾಮ ಸಂವತ್ಸರದ ಶ್ರಾವಣ ಶುದ್ಧ ಪಾಡ್ಯದ ಮಂಗಳವಾರ (ಕಾಲಜ್ಞಾನ) ಚೇತೋಹಾರಿ ಸುಪ್ರಭಾತದಲ್ಲಿ ಮಿಂದು ಮಡಿಯುಟ್ಟು ಪೂಜೆಗೆ ಕುಳಿತಿದ್ದಾರೆ, ತಾವು ಬಂದ ಮಣಿಹ ಪೂರೈಸಿತು ಎಂಬ ಭಾವನೆ ಬಲಿಯುತ್ತಿದೆ. ಪೂಜೆಯ ಪರವಶತೆಯಲ್ಲಿ ಅವರು ಮೈಮರೆಯುತ್ತಿದ್ದಾರೆ. ಸೂರ್ಯೋದಯವಾಗಿ ಇಪ್ಪತ್ತೈದು ಗಳಿಗೆ ದಾಟುತ್ತಿದೆ. ಕಾಯ ಪಂಜರದಿಂ ಆತ್ಮನನ್ನು ಬಿಡಿಸಿ, ಶಾಶ್ವತವಾಗಿ ವಿಲೀನಮಾಡಬೇಕೆಂಬ ಭಾವ ಬೆಳೆಯುತ್ತಿದೆ. ನಗುನಗುತ್ತಾ ತಮ್ಮ ಸಮರಸಕ್ಕಾಗಿ ದೇವನಲ್ಲಿ ಬೇಡಿಕೆ ಸಲ್ಲಿಸುತ್ತಾರೆ.

📚 ಗ್ರಂಥ ಋಣ: ಕಲ್ಯಾಣ ಕಿರಣ ಜುಲೈ - 2018, ವಿಶ್ವ ವಿಭೂತಿ ಬಸವಣ್ಣ

ಪರಿವಿಡಿ (index)
Previous ೧೨೬೦ ರ ಅರ್ಜುನವಾಡ ಶಾಸನದಲ್ಲಿ ಬಸವಣ್ಣ ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next