| ಗುರು ಬಸವಣ್ಣನವರ ಬಗ್ಗೆ ಬಹುರೂಪಿ ಚೌಡಯ್ಯನವರ ವಚನಗಳು |  | 
            
        
             
        
        130
        ಅಲ್ಲಿಯಬಹುರೂಪ ಇಲ್ಲಿಗೆ ಬಂದಿತ್ತು.
        ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?
        ಎನ್ನ ಬಹುರೂಪ ಬಲ್ಲವರಾರೋ ?
        ನಾದ ಹರಿದು ಸ್ವರವು ಸೂಸಿದ ಬಳಿಕ
        ಈ ಬಹುರೂಪ ಬಲ್ಲವರಾರೋ ?
        ರೇಕಣ್ಣಪ್ರಿಯ ನಾಗಿನಾಥನಲ್ಲಿ
        ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
        
        133
        ಆದಿಶುದ್ಧ ಆಚಾರಲಿಂಗವೆನ್ನುತ್ತಿರ್ಪರೆಲ್ಲರು
        ಅನಾದಿಯ ಲಿಂಗದ ಭೇದವನರಿಯರಾಗಿ,
        ನಾಸಿಕಪುಟದ ಆಶ್ರಯದಲ್ಲಿ ಲಿಂಗವನರಿಯರಾಗಿ.
        ಕೆಲಬರಿಗೆ ಲಿಂಗವು ಹಲಬರಿಗೆ ದೂಷಣೆಯ ಮಾಡಿ
        ಹೋದ ಲಿಂಗವನರಿಯರಾಗಿ ದೂಷಣೆ ಪಥ್ಯವಾಗಿ,
        ಮನದಾಶ್ರಯಕ್ಕೆ ತಂದಾತ, ರೇಕಣ್ಣಪ್ರಿಯ ನಾಗಿನಾಥ.
        ಬಸವಣ್ಣನಿಂದ ಬದುಕಿದೆ.
        
        136
        ಇನ್ನಾಡುವೆ ಜಂಗಮ ಬಹುರೂಪ,
        ಕಲ್ಯಾಣವೆಲ್ಲಾ ಅರಿಯಬೇಕೆಂದು.
        ಎನ್ನ ಬಹುರೂಪ ಕಾಮ ಹೊಯ್ದುಕೊಂಡಿಯೆಂದಡೆ
        ಪ್ರಸಾದವ ಮಾಡಿಕೊಟ್ಟಡೆ
        ಇದು ಬಸವನ ಪ್ರಸಾದವೆಂದು ಕೈಕೊಂಡೆ ಕಾಣಾ.
        ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ.
        
        139
        ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಬಸವಣ್ಣ.              
        ನಾದವನರ್ಪಿಸಿದಲ್ಲಿ ಅರ್ಪಿತಗೊಂಡಾತ ಬಸವಣ್ಣ.              
        ನಾ ಹೆಂಡಿರನರ್ಪಿಸುವಲ್ಲಿ ಅರ್ಪಿತಗೊಂಡಾತ ಬಸವಿದೇವ.              
        ಎನ್ನ ಧನ ಕೆಟ್ಟಿತ್ತು ಬಸವನಿಂದ, ಮನ ಕೆಟ್ಟಿತ್ತು ಬಸವನಿಂದ.
        ಎನ್ನ ಗೋತ್ರ ನಿವಾರಣವಾಯಿತ್ತು ಬಸವನಿಂದ .
        ವೇಳೆವಾಳಿ ನಾ ಹೆಣ್ಣನರ್ಪಿತ ಮಾಡಿದಲ್ಲಿ ಒಪ್ಪುಗೊಂಡಾತ ಬಸವಣ್ಣ.              
        ಕಡುಗಲಿ ತಮ್ಮನನಿರಿಯಲು ಮುರಿಯಿತ್ತು ಅಲಗು ಬಸವನಿಂದ.
        ಎನ್ನೊಡಲಲಿರ್ದ ಏಳು ಮಾನಿಸಸ್ತ್ರೀಯರು ಏಳಲಾರದೆ ಹೋದರು ಬಸವನಿಂದ.
        ನಾ ಕೆಟ್ಟೆ ಕಾಣಾ, ರೇಕಣ್ಣಪ್ರಿಯನಾಗಿನಾಥಾ
        ಬಸವನಿಂದ ಬದುಕಿತೀ ಲೋಕವೆಲ್ಲಾ.
        
        140
        ಎಲ್ಲರಾಟದಂತಲ್ಲ ಎನ್ನಾಟ, ಕರದಾಧಾರದಲಪ್ಪಿ,
        ಪಂಚಾಮೃತ ಮಂತ್ರವನುಂಡಾಡಿದೆ.
        ಆ ದೇಶ ಈ ದೇಶವೆಂತೆನ್ನದೆ ಪರದೇಶದಲಾಡಿ ಪರದೇಶಿಯಾದೆನು.
        ಕಾಲನ ಮೇಲೆ ನಿಂದು, ಕಪಾಲದ ಭಿಕ್ಷವ ಹಿಡಿದು
        ಹರಿಯ ಶೂಲದಲೆತ್ತಿಯಾಡಿದೆ.
        ಹರಶರಣರಾಧಾರದ ಬಸವನ ಶಿಶು ನಾನು ಕಾಣಾ
        ರೇಕಣ್ಣಪ್ರಿಯ ನಾಗಿನಾಥಾ.
        
        160
        ನಿಃಕಲಶಿವ ತಾನೆ ಗುರುರೂಪವಾಗಿ
        ಕೊಂಡಾಡಿದನಯ್ಯ ಬಸವಣ್ಣನು.              
        ಆ ಬಸವಣ್ಣನಿಂದ ಬಹುರೂಪ ಧರಿಸಿ ಹಲವಾಕಾರವನಾಡಿ
        ಸಾಕಾರದಲ್ಲಿ ಸನುಮತನಾದೆನು.
        ನಿರಾಕಾರದಲ್ಲಿ ನಿರತವಾದ ರೇಕಣ್ಣಪ್ರಿಯ ನಾಗಿನಾಥಾ
        ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಲಿರ್ದೆನು.
         
        ಟಿಪ್ಪಣಿ: ವಚನಗಳ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ.         (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ         ಸರಕಾರ, ಬೆಂಗಳೂರು.)