Previous ಎಲ್ಲ ದಿನವೂ ಶುಭ ದಿನವೇ! ಎಲ್ಲಾ ಕಾಲವೂ ಶುಭವೇ! ದೇವರು ಒಬ್ಬನೆ - ಏಕ ದೇವೋಪಾಸನೆ Lingayat Monotheism Next

ವೇದಶಾಸ್ತ್ರ ಆಗಮ ಪುರಾಣಕ್ಕಿಂತ ಶರಣರ ವಚನ ಶ್ರೇಷ್ಠ

*

ವೇದಂಗಳ ಹಿಂದೆ ಹರಿಯದಿರು

ವೇದಂಗಳ ಹಿಂದೆ ಹರಿಯದಿರು, ಹರಿಯದಿರು
ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು
ಪುರಾಣಂಗಳ ಹಿಂದೆ ಬಳಲದಿರು, ಬಳಲದಿರು
ಆಗಮಂಗಳ ಹಿಂದೆ ತೊಳಲದಿರು, ತೊಳಲದಿರು
ಸೌರಾಷ್ಟ್ರ ಸೋಮೇಶ್ವರನ ಕೈಪಿಡಿದು
ಶಬ್ದ ಜಾಲಂಗಳಿಗೆ ಬಳಲದಿರು ಬಳಲದಿರು - ಆದಯ್ಯ

ವೇದ, ಶಾಸ್ತ್ರ, ಪುರಾಣ, ಆಗಮಗಳ ಬೆನ್ನು ಹತ್ತಿ ವ್ಯರ್ಥವಾಗಿ ಬಳಲಬೇಡ, ಸಬ್ದ ಜಾಲಗಳಿಗೆ ಸಿಕ್ಕಿ ತೊಳಲಬೇಡ, ಪರಮಾತ್ಮನ ದಿವ್ಯಾನುಭವ ಪಡೆಯುವ ಅನುಭಾವ ಮಾರ್ಗ ಹಿಡಿ.

ವೇದಶಾಸ್ತ್ರ ಆಗಮ ಪುರಾಣಂಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿ ಭೋ!
ಅವ ಕುಟ್ಟಲೇಕೆ ಕುಸುಕಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನ - ಅಕ್ಕಮಹಾದೇವಿ -೩/೩೦೫ #

ಕೊಟ್ಟಣ = ಭತ್ತ , ಕುಸುಕು = ಹಗುರಾಗಿ ತಳಿಸು, ಮೆಲ್ಲಗೆ ಕುಟ್ಟು

ವೇದವೆಂಬುದು ಓದಿನ ಮಾತು: ಶಾಸ್ತ್ರವೆಂಬುದು ಸಂತೆಯ ಸುದ್ದಿ,
ಪುರಾಣವೆಂಬುದು ಪುಂಡರ ಗೋಷ್ಟಿ; ತರ್ಕವೆಂಬುದು ತಗರ ಹೋರಟೆ,
ಭಕ್ತಿ ಎಂಬುದು ತೋರಿ ಉಂಬುವ ಲಾಭ
ಗುಹೆಶ್ವರನೆಂಬುದು ಮೀರಿದ ಘನವು. -ಅಲ್ಲಮ ಪ್ರಭು

ತಗರ = ಒಂದು ಬಗೆಯ ಲೋಹ, ಎಣ್ಣೆಯಲ್ಲಿ ಮಾಡಿದ ಒಂದು ಬಗೆಯ ಖಾದ್ಯ, ಹೋರಟೆ = ಕಾಳಗ, ಯುದ್ಧ, ತಿಕ್ಕಾಟ, ವಿವಾದ, ಚರ್ಚೆ, ಪೀಡೆ, ಹಿಂಸೆ (ತಗರ ಹೋರಟೆ = ಲೋಹದೊಂದಿಗೆ ತಿಕ್ಕಾಟ)?

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ,ನೋಡಯ್ಯಾ
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ. - ಬಸವಣ್ಣ -1/717 #

ಒರೆ = ಖಡ್ಗದ ಹೊದಿಕೆ (ವೇದಕ್ಕೆ ಒರೆಯ ಕಟ್ಟುವೆ = ವೇದಕ್ಕೆ ಹೊದಿಕೆ ಕಟ್ಟುವೆ), ನಿಗಳ = ಬೇಡಿ, ಸಂಕೋಲೆ (ಶಾಸ್ತ್ರಕ್ಕೆ ನಿಗಳವನಿಕ್ಕುವೆ = ಶಾಸ್ತ್ರಕ್ಕೆ ಬೇಡಿ/ಸಂಕೋಲೆ ತೊಡಿಸುವೆ), ಬಾರನೆತ್ತು = ಚರ್ಮ ಸುಲಿ,

ತಪ್ಪು ಅರ್ಥಗಳು/ ಆಚರಣೆಗಳು

ವೇದ ದೈವವೆಂದು ನುಡಿವರು, ಶಾಸ್ತ್ರ ದೈವವೆಂದು ನುಡಿವರು,
ಪುರಾಣ ದೈವವೆಂದು ನುಡಿವರು, ಕಲ್ಲು ದೈವವೆಂದು ನುಡಿವರು,
ಕಾಷ್ಠ ದೈವವೆಂದು ನುಡಿವರು, ಪಂಚಲೋಹ ದೈವವೆಂದು ನುಡಿವರು,
ಇವರೆಲ್ಲ ಸಕಲದಲ್ಲಾದ ಸಂದೇಹವನೆ ಪೂಜಿಸಿ ಸತ್ತು ಹೊದರಲ್ಲಾ!
ಸಮಸ್ತ ಪ್ರಾಣಿಗಳೂ-ತಾಯನರಿಯದ ತರ್ಕಿಗಳು,
ತಂದೆಯನರಿಯದ ಸಂದೇಹಿಗಳು.
ತನು ಪೃಥ್ವಿಯಿಂದಲಾಯಿತ್ತು ಮನ ವಾಯುವಿನಿಂದಾಯಿತ್ತು.
ಕಲ್ಲು ಕಾಷ್ಠ ಸಕಲ-ನಿಷ್ಕಲದಿಂದಲಾಯಿತ್ತು
ವಾಯುವಾಧಾರದ ಪವನಸಂಯೊಗದ ಅನಾಹತ ಚಕ್ರದಿಂದ ಮೇಲಣ ಆಜ್ಞಾ ಚಕ್ರದಲ್ಲಿ ನಿಂದು;
ಅನಂತಕೋಟಿ ಬ್ರಹ್ಮಾಂಡಗಳ ಮೆಟ್ಟಿ-ಕಾಯದ ಕಣ್ಣ ಮುಚ್ಚಿ,
ಜ್ಞಾನ ಕಣ್ಣ ತೆರೆದು ನೋಡಲ್ಕೆ. ಅಲ್ಲಿ ಒಂದು ನಿರಾಕಾರ ಉಂಟು.
ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ, ಅಲ್ಲಿ ಒಂದು ನಿಶೂನ್ಯವುಂಟು.
ಆ ನಿಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ,
ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ! - ಅಲ್ಲಮಪ್ರಭುದೇವರ ವಚನ ಸವಸ-2/1532 #

ಕಾಷ್ಠ = ಕಟ್ಟಿಗೆ, ಸೌದೆ

ಸಕಲ ವೇದ ಆಗಮ ಶಾಸ್ತ್ರ ಪುರಾಣಂಗಳಲ್ಲಿರುವುದು ವಚನದಲ್ಲಿ ಇದೆ, ವಚನದಲ್ಲಿರುವುದು ವೇದ ಆಗಮ ಶಾಸ್ತ್ರ ಪುರಾಣಂಗಳಲ್ಲಿ ಇಲ್ಲ.

ಈ ವಚನಾನುಭಾವದಲ್ಲುಳ್ಳರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಲ್ಲಿ ಉಂಟು ನೋಡ
ಈ ವಚನಾನುಭಾವದಲ್ಲುಳ್ಳರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯೂ ಎಲ್ಲ ನೋಡ
ಈ ವಚನಾನುಭಾವದರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಿಗೂ ನಿಲುಕದು ನೊಡಾ
ಈ ವಚನಾನುಭಾವದರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಿಗತೀತವು ನೋಡಾ
ಅಪ್ರಮಾಣ ಕೂಡಲಸಂಗಮದೇವಾ -ಬಾಲ ಸಂಗಯ್ಯನವರ ವಚನ (66. ಪುಟ ಸಂಖ್ಯೆ 21-22)

ಮೂರ್ತಿ ಪೂಜೆ, ದೇವತಾಆರಾಧನೆಗಳು ಲಿಂಗಾಯತಕ್ಕೆ ಹೊರಗು. ದೇವ ಶಿವನು ದೇಹದಾಕಾರದಲ್ಲಿಲ್ಲ.

ವೇಧಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು.
ಸಾಧಿಸಿದ ಶಾಸ್ತ್ರಂಗಳೆಲ್ಲ ಸೋಹೋ ಎಂದಡಗಿದವು.
ವಿದ್ಯಾಮುಖ ಪ್ರಣಮವು ಸಿದ್ಧ ಸಿದ್ಧ ಎಂದು
ಕದ್ದ ಕಳ್ಳರಂತೆ ತಡವಡಿಸುತ್ತಿರ್ದವು ನೋಡಾ.
ಅರ್ಧನಾರೀಶ್ವರನ ರೂಪು ಇಂತೆಂದು
ಶುದ್ಧವಾಯಿತ್ತೀ ಲೋಕದೊಳಗೆ.
ಜಡೆಯಿಲ್ಲ ಎಮ್ಮ ದೇವಂಗೆ, ಮುಡಿಯಿಲ್ಲ ಎಮ್ಮ ದೇವಂಗೆ.
ಮಡದಿಯರಿಬ್ಬರಿಲ್ಲ ಎಮ್ಮ ದೇವಂಗೆ.
ಬೆಡಗ ನುಡಿವವರಿಲ್ಲ, ನುಡಿಯಲಮ್ಮದ ಕಾರಣ ಅರಸುತ್ತಿದ್ದಾರು.
ಎಡೆಯ ಮಧ್ಯದಲ್ಲಿ ನುಡಿಯ ನುಂಗಿದ ಬೆಡಗ ಹಿಡಿತಂದು
ಅರ್ಪಿತವ ಮಾಡಿ; ನಡೆಸಿ ತೋರಿದ ಭಕ್ತರ ತನುವಿನೊಳಗೆ
ಕಡೆಯಲ್ಲದ ಲಿಂಗವ ಖಂಡಿತವ ಮಾಡಿ ತೋರಿದ
ರೇಕಣ್ಣಪ್ರಿಯ ನಾಗಿನಾಥ, ಇಬ್ಬರಿಂದ ಬದುಕಿತೀ ಲೋಕವೆಲ್ಲಾ. - ಬಹುರೂಪಿ ಚೌಡಯ್ಯ ಸವಸ 8/178 #

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!
'ಭರ್ಗೋ ದೇವಸ್ಯ ಧೀಮಹಿ' ಎಂಬರು,
ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ
ಕೂಡಲಸಂಗಮದೇವ. - ಬಸವಣ್ಣ ಸವಸ 1/586 #

ವಿಪ್ರ = ಬ್ರಾಹ್ಮಣ, ಹೊನಲು = ಪ್ರವಾಹ

ದ್ವೈತ ಅದ್ವೈತಗಳಿಂದ ದೇವರ ನಿಜಸ್ವರೂಪ ಅರಿಯಲಾಗದು

ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ
ದ್ವೈತಾದ್ವೈತಕ್ಕೆ ನಿಲುಕದ ನಿಜವ ಕಂಡವರಾರನೂ ಕಾಣೆ.
ವಾಣಿಯ ಹಂಗಿನಲ್ಲಿ ಉಲಿದುಲಿದು ಹೋದರಲ್ಲದೆ
ಉಲುಹಡಗಿದ ನಿಲವ ಕಂಡವರಾರನೂ ಕಾಣೆ.
ತನು ಕರಣ ಭುವನ ಭೋಗಂಗಳ ಕಂಡಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗದುಳುಮೆಯ ಕಂಡು
ಸುಖಿಯಾದವರಾರನೂ ಕಾಣೆ. - ಆದಯ್ಯಗಳ ವಚನ ಸವಸ 6 /1092#

ಉಲಿ = ಸದ್ದು ಮಾಡು, ಉಲುಹು = ಧ್ವನಿ, ತನು = ದೇಹ, ಕರಣ = ಜ್ಞಾನೇಂದ್ರಿಯ

ಶಾಸ್ತ್ರಗಳನೋದಿ ಕೇಳಿದಡೇನು? ಮಹಾಸಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲ.
ಪುರಾಣವನೋದಿ ಕೇಳಿದಡೇನು? ಪುರಾಣಿಕಪ್ಪನಲ್ಲದೆ ಭಕ್ತನಲ್ಲ.
ಆಗಮಂಗಳನೋದಿ ಕೇಳಿದಡೇನು? ಆಗಮಿಕನಪ್ಪನಲ್ಲದೆ ಭಕ್ತನಲ್ಲ.
ಇಂತೀ ಸರ್ವ ವಿದ್ಯಂಗಳನೋದಿ ಕೇಳಿದಡೇನು?
ಇದಿರ ಬೋಧಿಸಿ ಉದರವ ಹೊರೆವ ಉದರಪೋಷಕಪ್ಪನಲ್ಲದೆ ಭಕ್ತನಲ್ಲ.
ಯಮಭಾಧೆಗಂಜಿ ಧರ್ಮವ ಮಾಡಿದಡೆ ಧರ್ಮಿಯಪ್ಪನಲ್ಲದೆ ಭಕ್ತನಲ್ಲ. ಸ್ವರ್ಗಭೋಗಿಯಪ್ಪನಲ್ಲದೆ ಭಕ್ತನಲ್ಲ.
ಇದು ಕಾರಣ
ಶ್ರೀಗುರು ಲಿಂಗ ಜಂಗಮಕ್ಕೆ
ತನು ಮನ ಧನವನರ್ಪಿಸುವ ಭಕ್ತಿವುಳ್ಳಡೆ
ಭಕ್ತದೇಹಿಕ ದೇವ ಪರಶಿವನು,
'ಭಕ್ತಕಾಯ ಮಮಕಾಯ' ಎಂದುದಾಗಿ.
'ಲಿಂಗಾಲಿಂಗೀ ಮಹಾಜೀವೀ' ಎಂದುದಾಗಿ
ಇಂತಪ್ಪ ಮಹಾಭಕ್ತಿಯುಳ್ಳ ಭಕ್ತನ
ಸತ್ಯನೆಂಬೆ, ಮುಕ್ತನೆಂಬೆ.
ಜಂಗಮವೆಂಬೆ, ಪ್ರಸಾದಿಯೆಂಬೆ, ಪರಮಸುಖಿಯೆಂಬೆನು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. - ಉರಿಲಿಂಗಪೆದ್ದಿ ಸವಸ6/1541#

ಉದರ = ಹೊಟ್ಟೆ

ವೇದ, ಶಾಸ್ತ್ರ, ಪುರಾಣ, ಆಗಮ, ತರ್ಕಗಳ ಮುಖಾಂತರ ಮುಕ್ತಿ ಸಾದ್ಯವಿಲ್ಲ.

ವೇದವನೋದುವರೆಲ್ಲ ಬಂಜೆಯ ಮಕ್ಕಳು.
ಶಾಸ್ತ್ರವನೋದುವರೆಲ್ಲ ಸೂಳೆಯ ಮಕ್ಕಳು.
ಪುರಾಣವ ಹೇಳುವರೆಲ್ಲ ಕುಂಟಲಗಿತ್ತಿಯ ಮಕ್ಕಳು.
ಆಗಮವ ನೋಡುವರೆಲ್ಲ ಹಾರುತಿಯ ಮಕ್ಕಳು.
ತರ್ಕತಂತ್ರಗಳ ನೋಡಿ ಹೇಳುವರೆಲ್ಲ ವೈದ್ಯಗಾರತಿಯ ಮಕ್ಕಳು.
ಇಂತೀ ವೇದಾಗಮಶಾಸ್ತ್ರಪುರಾಣ ತರ್ಕತಂತ್ರಂಗಳೆಲ್ಲ ಕೇಳಿ ಆಚರಿಸುವವರೆಲ್ಲ ಡೊಂಬಜಾತಕಾರ್ತಿಯ ಮಕ್ಕಳು,
ಇಂತಪ್ಪ ಜಡಮತಿ ವ್ರತಭ್ರಷ್ಟ ಮೂಳಹೊಲೆಯರಿಗೆ ಭವಬಂದನ ಎಂದೂ ಹಿಂಗದು, ಮುಕ್ತಿದೋರದು.
ಇಂತಿವರ ಪುಣ್ಯಕ್ಕೆ ಅಧಿಕಾರಿಗಳಾದ ಬ್ರಹ್ಮ ವಿಷ್ಣು ರುದ್ರ ಮೊದಲಾದ ದೇವತೆಗಳಿಗೆ ಮುನ್ನವೇ ಭವಹಿಂಗದು,
ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. -ಕಾಡಸಿದ್ದೇಶ್ವರ ವಚನ ಸವಸ12/ 263#

ವೇದಕ್ಕಿಂತ ತ್ರಿವಿಧದಾಸೋಹ ಶ್ರೇಷ್ಠ

ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ? ಪ್ರಾಣ ವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧ ದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ. - ಬಸವಣ್ಣ ಸವಸ1/208#

ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಳಕ್ಕೆ ಸಾರಿದ್ದಿತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ!
ಆಗಮ ಹೆರೆತೊಲಗಿ ಅಗಲಿದ್ದಿತಯ್ಯಾ!
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ - ಬಸವಣ್ಣ ಸವಸ1/750 #

ವೇದ, ಶಾಸ್ತ್ರ, ಆಗಮ, ಪುರಾಣಂಗಳು ದೈವವಲ್ಲ

ವೇದಂಗಳು ದೈವವಾದಡೆ ಕುಕ್ಕುರ ಕುದುರೆಗಳಾಗಲೇಕೋ?
ಶಾಸ್ತ್ರಂಗಳು ದೈವವಾದಡೆ ಹೊರಜು ಕಣ್ಣಿಗಳಾಗಲೇಕೋ?
ಆಗಮಂಗಳು ದೈವವಾದಡೆ ಕೀಲುಗುಣಿಕೆಗಳಾಗಲೇಕೋ?
ಪುರಾಣಂಗಳು ದೈವವಾದಡೆ ಅಚ್ಚು ಹೊರಜೆಯಾಗಲೇಕೋ?
ಚಂದ್ರಸೂರ್ಯರು ದೈವವಾದಡೆ ಗಾಲಿಗಳಾಗಲೇಕೋ?
ಇವ ಹಿಡಿದಾಡಿ ಭಜಿಸಿ ಪೂಜೆಮಾಡಿದವರು ದೈವವಾದಡೆ,
ಪುಣ್ಯ-ಪಾಪಕ್ಕೀಡಾಗಲೇಕೋ?
ಇದು ಕಾರಣ, ವೇದಂಗಳು ದೈವವಲ್ಲ, ಶಾಸ್ತ್ರಂಗಳು ದೈವವಲ್ಲ,
ಆಗಮಂಗಳು ದೈವವಲ್ಲ, ಪುರಾಣಂಗಳು ದೈವವಲ್ಲ,
ಚಂದ್ರ ಸೂರ್ಯರು ದೈವವಲ್ಲ, ಆತ್ಮನು ದೈವವಲ್ಲ,
ಕಪಿಲಸಿದ್ಧಮಲ್ಲಿಕಾರ್ಜುನಾ, ನೀನೊಬ್ಬನೇ ದೈವ -೩/೯೯೬ #

ವೇದ ಶಾಸ್ತ್ರ ಆಗಮ ಪುರಾಣಗಳು ಅರ್ಥವನ್ನು ಹೊಂದಲು ಅನರ್ಹ

ವೇದವನೋದಿದವರು ವಿಧಿಗೊಳಗಾದರಲ್ಲದೆ, ದೇವರಿಹ ಠಾವನರಿದಿಪ್ಪುದಿಲ್ಲ.
ಶಾಸ್ತ್ರವನೋದಿದವರು ಸಂಶಯಕ್ಕೋಳಗಾದರಲ್ಲದೆ, ಸದ್ಗುರುವನರಿದುದಿಲ್ಲ.
ಆಗಮವನೋದಿದವರೆಲ್ಲರು ಆಗುಚೇಗಿಗೆ ಒಳಗಾದರಲ್ಲದೆ
ಆದಿ ಅನಾದಿಯಿಂದತ್ತಣ ಶರಣ-ಲಿಂಗ ಸಂಭಂಧವನರಿದುದಿಲ್ಲ.
ಪುರಾಣವನೋದಿದವರೆಲ್ಲರು ಪೂರ್ವದ ಬಟ್ಟೆಗೊಳಗಾದವರಲ್ಲದೆ
ಪೂವದ ಕರ್ಮವ ಹರಿದು ಪುರಾತನರನರಿದುದಿಲ್ಲ.
ಇಂತಿವರೆಲ್ಲರು ಚರಶೇಷವ ಲಿಂಗಕ್ಕಪರ್ಸಲರಿಯರಾಗಿ
ಇವರಿಗೆ ಲಿಂಗವು ಕಾಣಿಸದೆಂದಾತ ನಮ್ಮ ಅಂಬಿಗರ ಚೌಡಯ್ಯ, - ಅಂಬಿಗರಚೌಡಯ್ಯ ಸವಸ-6/253#

ಯೋಗ, ಓದು, ವೇದ ಶಾಸ್ತ್ರಗಳು ಮುಕ್ತಿಗೆ ಮಾರ್ಗವಲ್ಲ.

ಯೋಗದಿಂದರಿದಿಹೆನೆಂಬಿರಿ, ಓದಿನಿಂದರಿದಿಹೆನೆಂಬಿರಿ,
ವೇದದಿಂದರಿದಿಹೆನೆಂಬಿರಿ, ಶಾಸ್ತ್ರದಿಂದರಿದಿಹೆನೆಂಬಿರಿ,
ಕೇಳಿರಣ್ಣಾ, ಯೋಗದಂತು ಅಲ್ಲ, ಓದಿನದಂತು ಅಲ್ಲ,
ವೇದದಂತದು ಅಲ್ಲ, ಶಾಸ್ತ್ರದಂತು ಅಲ್ಲ, ಶರಣಸ್ಥಲ ಬೇರೆ,
ಅದೆಂತೆಂದಡೆ: ಗಂಡಳಿದು ಹೆಣ್ಣಾಗಬೇಕು, ಹೆಣ್ಣಳಿದು ಗಂಡಾಗಬೇಕು.
ಉಂಡುಟ್ಟೆನೆಂಬ ಹಂಗಳಿದು, ಈ ಲೋಕದ ಸಂದೇಹವಳಿದ ಶರಣಂಗೆ
ನಮೋ ನಮೋ ಎನುತಿರ್ದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣ. - ಹಡಪದ ಅಪ್ಪಣ್ಣ ಸವಸ 9/1016#

ವೇದ ಶಾಸ್ತ್ರ ಅಗಮಂಗಳು ಪೂರ್ಣ ಜ್ಞಾನವನ್ನು ನೀಡುವುದಿಲ್ಲ.

ಅರಿವಿನಾಪ್ಯಾಯನವೆ ಅಪೂರ್ವ ಕಂಡಯ್ಯಾ.
ಪೂರ್ವಜ್ಞಾನವೆಂಬುದೆ ವೇದ. ಶಾಸ್ತ್ರ ಆಗಮಗಳೆಂಬುವು
ಪೂರ್ಣ ಪ್ರಮಾಣ ಇವಲ್ಲ ಕಂಡಯ್ಯಾ.
ಇಂತೀ ಪ್ರಮಾಣವನರಿಯದೆ ನಿಂದ
ನಿಮ್ಮ ಶರಣರ ತೋರಾ, ಕಲಿದೇವಯ್ಯಾ. - ಮಡಿವಾಳ ಮಾಚಿದೇವ ಸವಸ 8/479#

ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು.
ಪುರಾಣ ಪುಂಡರ ಗೋಷ್ಠಿ, ಆಗಮ ಅನೃತದ ನುಡಿ
ತರ್ಕ ವ್ಯಾಕರಣ ಕವಿತ್ವ ಪ್ರೌಢಿ.
ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ.
ಇದು ಕಾರಣ, ತನ್ನೊಳಗನವರಿದ
ಅನುಭಾವಿಯಿಂದ ಘನವಿಲ್ಲೆಂದ ಕಲಿದೇವ. - ಮಡಿವಾಳ ಮಾಚಿದೇವ

ಎಮ್ಮವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯಾ.
ಎಮ್ಮ ವಚನದ ನೂರೆಂಟರಧ್ಯನಕ್ಕೆ
ಶತರುದ್ರೀ(ಯಾಗ)ಸಮ ಬಾರದಯ್ಯಾ.
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನ. - ಸಿದ್ದರಾಮೇಶ್ವರ ಸವಸ 4/1613#

ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಸುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು ನೇಣು ಹರಿದು,ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು. - ಅಲ್ಲಮಪ್ರಭುದೇವರ ವಚನ ಸವಸ 2/460 #

ವೇದ ವೇಧಿಸಲರಿಯದೆ ಕೆಟ್ಟವು
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು
ಪುರಾಣ ಪೂರೈಸಲರಿಯದೆ ಕೆಟ್ಟವು
ಹಿರಿಯರು ತಮ್ಮ ತಾವು ಅರಿಯದೆ ಕೆಟ್ಟರು
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು
ನಿಮ್ಮನೆತ್ತ ಬಲ್ಲರೋ ಗುಹೇಶ್ವರಾ? - ಅಲ್ಲಮಪ್ರಭುದೇವ

ವೇದಗಳೆಂಬವು ಬ್ರಹ್ಮನ ಬೂಟಾಟ
ಶಾಸ್ತ್ರಗಳೆಂಬವು ಸರಸ್ವತಿಯ ಗೊಡ್ಡಾಟ
ಆಗಮಗಳೆಂಬವು ಋಷಿಯ ಮರುಳಾಟ
ಪುರಾಣಗಳೆಂಬವು ಪೂರ್ವದವರ ಒದ್ದಾಟ
ಇಂತು- ಇವನ್ನು ಅರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು. - ಅಲ್ಲಮಪ್ರಭುದೇವ

ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು, ಆ ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ.
ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು, ಆ ಲಿಂಗವಂತರ ಮಹಾಶಾಸ್ತ್ರಮಾರ್ಗವ ಲಿಂಗವೇ ಬಲ್ಲನಯ್ಯಾ.
ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು, ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ.
ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು, ಆ ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ.
ದೇವ ದಾನಮಾನವರಿಗೆಯೂ ಅರಿಯಬಾರದು.
ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ
ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ ಎಂದುದಾಗಿ,
ಆರಿಗೆಯೂ ಅರಿಯಬಾರದು.
ಲಿಂಗವಂತರು ಉಪಮಾತೀತರು, ವಾಙ್ಮನಾತೀತರು, ಆರ ಪರಿಯೂ ಇಲ್ಲ.
ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾ:
ಶಿವೇನ ಸಹ ತೇ ಭುಙ್ತ್ವಾ ಭಕ್ತಾ ಯಾಂತಿ ಶಿವಂ ಪದಂ
ಲೋಕಚಾರನಿಬಂಧೇನ ಲೋಕಾಲೋಕಾವಿವರ್ಜಿತಾ:
ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನ:
ಎಂದುದಾಗಿ,
ಈ ಲೋಕದ ಮಾರ್ಗವ ನಡೆಯರು, ಲೋಕದ ಮಾರ್ಗವ ನುಡಿಯರು.
ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ ಬೇರೆ ಕಾಣಿರಣ್ಣಾ.
ಶ್ರೀಗುರುಲಿಂಗದಿಂದಲುದಯಿಸಿ ಪ್ರಾಣಲಿಂಗಸಂಭಂಧಿಗಳಾದ ಮಹಾಲಿಂಗವಂತರಿಗೆ, ಪ್ರಾಣಲಿಂಗ, ಕಾಯಲಿಂಗ
ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ,
ಇದು ಕಾರಣ. ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ.
ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದುದೆಲ್ಲಾ ಪ್ರಸಾದ. ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. -- ಉರಿಲಿಂಗಪೆದ್ದಿ

ವೇದ ಶಾಸ್ತ್ರ ಪುರಾಣ ಇತರೆ ಜ್ಞಾನ ನಮುನೆಗಳನ್ನು ಅರಿಯುವದಕ್ಕಿಂತ ತನು ಮನ ಧನವನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸುವುದು ಹೆಚ್ಚು ಸೂಕ್ತ.

ವೇದನವನೋದಿ ಕೇಳಿದಡೇನು? ವೇದಜ್ಞನಪ್ಪನಲ್ಲದೆ ಭಕ್ತನಲ್ಲ.
ಶಾಸ್ತ್ರಗಳನೋದಿ ಕೇಳಿದಡೇನು? ಮಹಾಸಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲ.
ಪುರಾಣವನೋದಿ ಕೇಳಿದಡೇನು? ಪುರಾಣಿಕಪ್ಪನಲ್ಲದೆ ಭಕ್ತನಲ್ಲ.
ಆಗಮಂಗಳನೋದಿ ಕೇಳಿದಡೇನು? ಆಗಮಿಕನಪ್ಪನಲ್ಲದೆ ಭಕ್ತನಲ್ಲ.
ಇಂತೀ ಸರ್ವ ವಿದ್ಯಂಗಳನೋದಿ ಕೇಳಿದಡೇನು?
ಇದಿರ ಬೋಧಿಸಿ ಉದರವ ಹೊರೆವ ಉದರಪೋಷಕಪ್ಪನಲ್ಲದೆ ಭಕ್ತನಲ್ಲ.
ಯಮಭಾಧೆಗಂಜಿ ಧರ್ಮವ ಮಾಡಿದಡೆ ಧರ್ಮಿಯಪ್ಪನಲ್ಲದೆ ಭಕ್ತನಲ್ಲ.
ಸ್ವರ್ಗಭೋಗಿಯಪ್ಪನಲ್ಲದೆ ಭಕ್ತನಲ್ಲ.
ಇದು ಕಾರಣ
ಶ್ರೀಗುರು ಲಿಂಗ ಜಂಗಮಕ್ಕೆ
ತನು ಮನ ಧನವನರ್ಪಿಸುವ ಭಕ್ತಿವುಳ್ಳಡೆ
ಭಕ್ತದೇಹಿಕ ದೇವ ಪರಶಿವನು,
'ಭಕ್ತಕಾಯ ಮಮಕಾಯ' ಎಂದುದಾಗಿ.
'ಲಿಂಗಾಲಿಂಗೀ ಮಹಾಜೀವೀ'ಎಂದುದಾಗಿ
ಇಂತಪ್ಪ ಮಹಾಭಕ್ತಿಯುಳ್ಳ ಭಕ್ತನ
ಸತೈನೆಂಬೆ, ಮುಕ್ತನೆಂಬೆ.
ಜಂಗಮವೆಂಬೆ, ಪ್ರಸಾದಿಯೆಂಬೆ, ಪರಮಸುಖಿಯೆಂಬೆನು.
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.- ಉರಿಲಿಂಗಪೆದ್ದಿ ಸವಸ 6/1541 #

ವಿಷ್ಣು ವರಾಹವತಾರದಲ್ಲಿ ಹಂದಿಯಂ ತಿಂಬುದಾವಾಚಾರವೋ?
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೋ?
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೋ?
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೋ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,
ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ ಹೋತನ ಕೊಂದು
ತಿಂಬುದಾವಾಚಾರದೊಳಗೋ?
ಇಂತೀ ಶ್ರತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬವರ ಬಾಯಲ್ಲಿ ಸುರಿಯವೆ
ಬಾಲಹುಳುಗಳು?- ಬಸವಣ್ಣ ಸವಸ 1/1353 #

ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ,
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು.- ಬಸವಣ್ಣ ಸವಸ 1/81 #

ಕೃತಯುಗ ಮುವತ್ತೆರಡುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಕುಂಜರನೆಂಬ ಆನೆಯ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು.
ತ್ರೇತಾಯುಗ ಹದಿನಾರುಲಕ್ಷವರುಷದಲ್ಲಿ ಬ್ರಾಹ್ಮಣರು ಹೋಮವನಿಕ್ಕುವಾಗ
ಮಹಿಷನೆಂಬ ಕರಿ ಎಮ್ಮೆಯ ಮಗನ ಕೊಂದು ಹೋಮವನಿಕ್ಕಿದರು ಬ್ರಾಹ್ಮಣರು
ದ್ವಾಪರಯುಗ ಎಂಟುಲಕ್ಷವರುಷದಲ್ಲಿ ಹೋಮವನಿಕ್ಕುವಾಗ
ಅಶ್ವನೆಂಬ ಕುದುರೆಯ ಕೊಂದು ಹೋಮವನಕ್ಕಿದರು ಬ್ರಾಹ್ಮಣರು,
ಕಲಿಯುಗ ನಾಲ್ಕುಲಕ್ಷವರುಷದಲ್ಲಿ ಹೊಮವನಿಕ್ಕುವಾಗ
ಜಾತಿಯಾಡಿನ ಮಗನ ಹೊತನಕೊಂದು ಹೋಮವನಿಕ್ಕಿದರು ಬ್ರಾಹ್ಮಣರು
"ಅಣೋರಣೀಯಾನ್ ಮಹತೋ ಮಹಿಯಾನ್ "ಎಂದುದಾಗಿ,
ಶಿವಭಕ್ತ ಹೊತ್ತಾರೆಯೆದ್ದು ಗುರುಲಿಂಗಜಂಗಮಕ್ಕೆ ಶರಣೆನ್ನದೆ
ಮುನ್ನ ಒಂಟಿಬ್ರಾಹ್ಮಣನ ಕಂಡು ಶರಣಾರ್ಥಿ ಎಂದಡೆ
ಎಂಭತ್ತುನಾಲ್ಕು ಲಕ್ಷ ಯೋನಿಯಲ್ಲಿ
ಹಂದಿಯ ಬಸುರಲ್ಲಿ ಬಪ್ಪುದು ತಪ್ಪುದು ಕಾಣಾ,
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.- ಕಾಳವ್ವೆ ಸವಸ5/734 #

#: ಈ ತರಹದ ಸಂಖ್ಯೆಯ ವಿವರ:-ಸವಸ1/653 :- ಸಮಗ್ರ ವಚನ ಸಂಪುಟದ ಸಂಖ್ಯೆ-1, ವಚನ ಸಂಖ್ಯೆ-1653 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001)

ಪರಿವಿಡಿ (index)
*
Previous ಎಲ್ಲ ದಿನವೂ ಶುಭ ದಿನವೇ! ಎಲ್ಲಾ ಕಾಲವೂ ಶುಭವೇ! ದೇವರು ಒಬ್ಬನೆ - ಏಕ ದೇವೋಪಾಸನೆ Lingayat Monotheism Next