Previous ಶರಣ ಕ್ಷೇತ್ರಗಳು Lingayat Piligram Centers ಸೊಲ್ಲಾಪುರ Next

ಉಳವಿ ಉತ್ತರಕನ್ನಡ ಜಿಲ್ಲಾ

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರು ಅಂತರ್ಜಾತಿ ಮದುವೆ ನಡೆಸಿದಾಗ ಕಲ್ಯಾಣ ಕ್ರಾಂತಿಯಾಗಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು. ಬಸವಣ್ಣನವರ ಅಳಿಯ ಚನ್ನಬಸವಣ್ಣ ,ಅಕ್ಕ ನಾಗಲಾಂಬಿಕೆ ಹಾಗೂ ಇತರ ಶರಣರ ದಂಡು ಕಟ್ಟಿಕೊಂಡು ಸುರಕ್ಷಿತ ಜಾಗ ಹುಡುಕಿ ಹೊರಟರು. ಶರಣರು ರಚಿಸಿದ ವಚನ ಸಾಹಿತ್ಯ ದ ಗಂಟುಗಳು ಈ ಶರಣರ ಹೆಗಲ ಮೇಲಿದ್ದವು. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಹೊರಟ ಇವರು ತಲುಪಿದ್ದು ದೂರದ ಗೋವಾ ಬಳಿಯ ಕಾಡಿನ ಬೆಟ್ಟದ ಹತ್ತಿರ ಬಂದು ಉಳಿದು ಕೊಂಡರು. ಬಿಜ್ಜಳನ ಸೈನಿಕರ ಜೊತೆ ಹೊಡೆದಾಡುತ್ತಲೇ ಈ ಜಾಗಕ್ಕೆ ಅವರು ಬಂದು ಮುಟ್ಟಿದ್ದರು. ಅಲ್ಲೇ ಲಿಂಗೈಕ್ಯರಾದರು. ಅಲ್ಲಿಯೇ ಚನ್ನಬಸವಣ್ಣನವರ ಸಮಾಧಿ ಯನ್ನು ಕಟ್ಟಲಾಗಿದೆ. ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ. ಶರಣರು ಬಂದು "ಉಳಿ"ದುಕೊಂಡದ್ದರಿಂದ ಈ ಸ್ಥಳವು "ಉಳವಿ" ಅಂತ ಆಯಿತು ಈ ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವನ್ನು ನಿರ್ಮಿಸಿಲಾಗಿದೆ.

Haralayya Chilume, Ulavi, Karnataka

ಹರಳಯ್ಯನವರ ಚಿಲುಮೆ:

ಬಿಜ್ಜಳನು ಹರಳಯ್ಯನವರನ್ನು ಅನೆ ಕಾಲಿಗೆ ಕಟ್ಟಿ ಎಳೆಸಿದಾಗ ಅವರು ಲಿಂಗೈಕ್ಕ್ಯರಾಗುತ್ತಾರೆ . ನಂತರ ಬಿಜ್ಜಳನ ಸೈನ್ಯ ಮತ್ತು ಜಾತಿ ವಾದಿಗಳು ವಚನಗಳನ್ನು ನಾಶಪಡಿಸಲು ಮುಂದಾಗುತ್ತಾರೆ. ಶರಣರು ವಚನ ಸಾಹಿತ್ಯದ ರಕ್ಷಣೆಗಾಗಿ ಉಳವಿ ತಲುಪುತ್ತಾರೆ. ಅಲ್ಲಿರುವ ಒಂದು ಚಿಲುಮೆಗೆ ಹುತಾತ್ಮರಾದ ಹರಳಯ್ಯನವರ ಹೆಸರಿಡುತ್ತಾರೆ. ಆ ನೀರಿನ ಚಿಲುಮೆ ಇನ್ನು ಇದೆ, ಅದುವೇ ಹರಳಯ್ಯನವರ ಚಿಲುಮೆ.

veergallu, Ulavi, Karnataka

ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು

ಕಲ್ಯಾಣದ ಕ್ರಾಂತಿ ಆದಾಗ ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು. ಉಳವಿಯ ಬಸವಣ್ಣನ ಗುಡಿಯ ಮುಂಬಾಗ ಈ ವೀರಗಲ್ಲನ್ನು ಕಾಣಬಹುದು. ವಚನ ಕ್ರಾಂತಿಗೆ ಯುದ್ದದ ಮಾಹಿತಿಗೆ ಮುನ್ನುಡಿಗೆ ಪುಷ್ಟಿ ಮತ್ತು ಆಧಾರ ನೀಡುವಂತಹದು. ಗಮನಿಸಿ ಮೊದಲನೇ ಚಿತ್ರದಲ್ಲಿ ಅಕ್ಕ ನಾಗಮ್ಮ ಬಿಜ್ಜಳನ ಸೈನಿಕರ ಜೊತೆ ಅಕ್ಕ ನಾಗಲಾಂಬಿಕೆ ಮತ್ತು ಕೆಲವು ಶರಣರ ಕಾದಾಟದ ದೃಶ್ಯವನ್ನ ಕಾಣಬಹುದು, ಎರಡನೇ ಚಿತ್ರದಲ್ಲಿ ಯುದ್ದದಲ್ಲಿ ಮಡಿದು ವೀರಗತಿ ಪ್ರಾಪ್ತಿಹೊಂದಿದವರು, ಬಸವಣ್ಣನನ್ನು ಕೂಡುತ್ತಿರುವ ದೃಶ್ಯ, ಮದ್ಯ ಭಾಗದಲ್ಲಿ ಬಸವಣ್ಣ ಲಿಂಗವನ್ನು ಹಿಡಿದು ಪೂಜೆ ಮಾಡಿಕೊಳ್ಳುವ ದೃಶ್ಯವನ್ನ ಕಾಣಬಹುದು.

ಉಳವಿ ಕಾರವಾರದಿಂದ ಸುಮಾರು ೭೫ ಕಿ.ಮೀ. ದೂರದಲ್ಲಿದೆ. ಹತ್ತಿರದ ಸ್ಥಳಗಳು: ದಾಂಡೇಲಿ, ಧಾರವಾಡ, ಹುಬ್ಬಳ್ಳಿ.

ಸಾರಿಗೆ: ಸ್ವಂತ ವಾಹನದಲ್ಲಿ ಪ್ರಯಾಣ ಮಾಡುವುದು ಉತ್ತಮ. ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ ಮತ್ತು ಬೆಳಗಾವಿಯಿಂದ ಬಸ್ಸುಗಳಿವೆ.

ಸಿಂಥೇರಿ ಬಂಡೆ, ಕಾಳಿ ನದಿ, ಅಣಸಿ ಮೀಸಲು ಅರಣ್ಯ , ಸೂಪಾ ಅಣೆಕಟ್ಟು ಇಲ್ಲಿನ ಇತರ ನೋಡತಕ್ಕ ಸ್ಥಳಗಳು.

ಉಳವಿ ಸುತ್ತಮುತ್ತಲೂ ಯಾವ ಯಾವ ಸ್ಥಳಗಳನ್ನು ನೋಡಬಹುದು?

1) ಚಿನ್ಮಯಜ್ಞಾನಿ ಚನ್ನಬಸವೇಶ್ವರ ಲಿಂಗೈಕ್ಯ ಗದ್ದುಗೆ (ದೇವಸ್ಥಾನ)
2) ಶ್ರೀ ಅಡಕೇಶ್ವರ ಶರಣರ ಲಿಂಗೈಕ್ಯ ಗದ್ದುಗೆ (ದೇವಸ್ಥಾನ)
3) ಶ್ರೀ ಮಡಿಕೇಶ್ವರ ಶರಣರ ಲಿಂಗೈಕ್ಯ ಗದ್ದುಗೆ (ದೇವಸ್ಥಾನ)
4) ಅಕ್ಕನಾಗಮ್ಮ ಗವಿ (ವೀರಮಾತೆ ಅಕ್ಕನಾಗಲಾಂಬಿಕ ತಾಯಿಯವರು ಲಿಂಗಾಂಗ ಯುಗ ಧ್ಯಾನ ಅನುಸಂಧಾನ ಮಾಡಿದ ಪವಿತ್ರವಾದ ಸ್ಥಳ)
5) ಹರಳಯ್ಯ ಚಿಲುಮೆ
6) ಆಕಳಗವಿ ( ಆಕಳ ಗವಿಗೂ ಹಾಗೂ ಮಾಮನೆಗೆ ಒಳಗಡೆಯಿಂದ ಸಂಪರ್ಕವಿದೆ ಎಂಬ ಇತಿಹಾಸವಿದೆ)
7) ಶಿವಪುರ (ಪರಮಪೂಜ್ಯ ಚನ್ನಬಸವೇಶ್ವರ ಆನಂದ ಸ್ವಾಮೀಜಿಯವರ ಆಶ್ರಮ)
8) 12ನೇ ಶತಮಾನದ ರೇಚಯ್ಯ ಶರಣರ ಗದ್ದುಗೆ, ಇವರು 770 ವರ್ಷ ಜೀವಿಸಿದ್ದರು (ಲಿಂಗೈಕ್ಯ ಸ್ಥಳ)
9) ಮಹಾಮನೆ ( ಶರಣರು ವಚನಗಳನ್ನು ರಕ್ಷಣೆ ಮಾಡಿದ ಗವಿ ಹಾಗೂ ಅವರು ಇಲ್ಲಿಂದ ಬೇರೆ ಬೇರೆ ಕಡೆ ಮತ್ತೆ ಲಿಂಗಾಯತ ತತ್ವಗಳನ್ನು ಜನಸಾಮಾನ್ಯರಿಗೆ ತಿಳಿಸಲು ವಚನಗಳನ್ನು ಶರಣರೊಂದಿಗೆ, ಜಂಗಮ ರೊಂದಿಗೆ ಕಳಿಸುತ್ತಿದ್ದರು)
10) ವೀರಮಾತೆ ಅಕ್ಕ ನಾಗಲಾಂಬಿಕತಾಯಿ ಪೀಠ (ಮಾತಾಜಿ ಆಶ್ರಮ)
11) ತೋಗು ಸೇತುವೆ (ಕಾಳಿ ನದಿಗೆ ಅಡ್ಡಲಾಗಿ ಉಳವಿಯಿಂದ ಯಲ್ಲಾಪುರಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ )
11) ಸಾತೋಡಿ ಫಾಲ್ಸ್

ಉಳವಿಯ ಚಿತ್ರಗಳು (ಫೊಟೊಗಳು)

ಉಳವಿ ಪ್ರಾಚೀನ ಲಿಂಗಾಯತ ಕ್ಷೇತ್ರ. ಅಷ್ಟೇ ಸುಪ್ರಸಿದ್ಧ ಯಾತ್ರಾ ಸ್ಥಳ, ೧೨ನೆಯ ಶತಮಾನದ ಚೆನ್ನಬಸವಣ್ಣ ಹಾಗೂ ಅನೇಕ ಶರಣರು ನೆಲೆನಿಂತ ಅನುಪಮ ಪುಣ್ಯಭೂಮಿ, ಶ್ರೀಕ್ಷೇತ್ರ ಉಳವಿ ಧಾರ್ಮಿಕ ಚಾರಿತ್ರಿಕ ಮಹತ್ವದ ತಾಣ. ಶರಣರ ಭಕ್ತಿ ಸಾಕ್ಷಾತ್ಕಾರ ಕೈಕೊಳ್ಳಲು ಚಿತ್ತಶುದ್ದಿಯನ್ನು ಒದಗಿಸುವ ಪವಿತ್ರ ಕ್ಷೇತ್ರ.

ಲಿಂಗಾಯತ ಕವಿ ಲಕ್ಕಣದಂಡೇಶ ತನ್ನ ಶಿವತತ್ವ ಚಿಂತಾಮಣಿ ಯಲ್ಲಿ ಲಿಂಗಾಯತರ ಆರು ಸುಪ್ರಸಿದ್ಧ ಕೇಂದ್ರಗಳಲ್ಲಿ ಉಳವಿಯೂ ಒಂದು ಎಂದು ಹೇಳಿದ್ದಾನೆ. ಅಂದು ಶರಣರು ಕಲ್ಯಾಣದಿಂದ ನಡೆಯುವಾಗ ಪ್ರಾಕೃತಿಕ ನೋವು ನಲಿವುಗಳನ್ನು ಅನುಭವಿಸುತ್ತ ಕೊನೆಗೊಮ್ಮೆ ಕೊಳ್ಳದಲ್ಲಿರುವ ಉಳವಿಯ ಪುಣ್ಯತಾಣಕ್ಕೆ ಬಂದು ತಲುಪಿದರು. ಅಂಬರ ಶರಣಕ್ಷೇತ್ರ ಉಳವಿಯ ಇತಿಹಾಸ ಇಂದಿನ ವರೆಗೆ ಮುಂದುವರೆದುಕೊಂಡು ಬಂದಿದೆ. ಧಾರ್ಮಿಕ ಸಾಂಸ್ಕೃತಿಕ ಬದುಕಿನಲ್ಲಿ ಉಳವಿ ನಿರ್ವಹಿಸಿದ ಪಾತ್ರ ಗಮನಾರ್ಹವೆನಿಸಿದೆ.

ಯಲ್ಲಾಪುರದ ಸಮೀಪವಿರುವ ಮಹತ್ವದ ಶರಣ ತಾಣ. ನಿಬಿಡಾರಣ್ಯ ಹೊಂದಿದ ಪ್ರದೇಶ, ತಗ್ಗು ದಿನ್ನೆಗಳಿಂದ ಹಳ್ಳಕೊಳ್ಳ ಗಳಿಂದ ಕೂಡಿದ ದುರ್ಗಮ ದಾರಿ. ಅಣಿಶಿಘಟ್ಟ ಹಾಗೂ ಸೂಪಾದ ಎರಡು ಅಭಯಾರಣ್ಯಗಳಿದ್ದು ಬೇಸಿಗೆಯಲ್ಲಿ ಸಂದರ್ಶನ ಕೈಕೊಳ್ಳ ಬಹುದಾದ ಪವಿತ್ರ ಕ್ಷೇತ್ರವಿದಾಗಿದೆ.

ಶರಣಕ್ಷೇತ್ರದ ಹೆಸರು 'ಉಳವಿ' ಎಂದು ಬಂದದ್ದು ೧೨ನೆಯ ಶತಮಾನದ ತರುವಾಯ. ಶರಣರು ಚನ್ನಬಸವಣ್ಣ, ಅಕ್ಕ ನಾಗಮ್ಮ ಮುಂದಾಳತ್ವದಲ್ಲಿ ಉಳಿದುಕೊಂಡುದರಿಂದ 'ಉಳವಿ' ಹೆಸರು ಅನ್ವರ್ಥಕವಾಗಿದೆ. ಸೂಪಾ ತಾಲ್ಲೂಕಿನ ಔಸೊಳ್ಳಿ, ವೀರಸೊಳಿ ಅಸೂಳಿ, ಕುಂಬೆಳ್ಳಿ, ಜಮಗಳ್ಳಿ, ಶೀರೊಳ್ಳಿ ಗ್ರಾಮಗಳನ್ನು ಗಮನಿಸಿದರೆ ಉಳುವಳಿ ಉಳವಿ ಆಗಿರಬೇಕೆನಿಸುತ್ತದೆ. ಉಳವಿ ಹೆಸರಿನ ವೃಕ್ಷಗಳಿಗೆ ಇದು ಪ್ರಸಿದ್ಧವಾದ ತಾಣ. ಚನ್ನಬಸವ ಪುರಾಣದಲ್ಲಿ ಈ ಸ್ಥಳದ ಬಗೆಗೆ 'ನಾನು ಇಲ್ಲೇ ಉಳಿವೆ' ಎಂದು ಚೆನ್ನಬಸವಣ್ಣ ತಿಳಿಸಿದಂತೆ ಉಲ್ಲೇಖವಿದೆ. ಶರಣರು ಇಲ್ಲಿಗೆ ಬಂದು ನೆಲೆನಿಲ್ಲುವುದಕ್ಕಿಂತ ಮೊದಲು ಯಾವ ಹೆಸರು ಇತ್ತೆಂಬುದು ಇತಿಹಾಸ ಸ್ಪಷ್ಟಪಡಿಸುವು ದಿಲ್ಲ. ಮೂಲದ ಹೆಸರು, ಕ್ಷೇತ್ರದ ಪೂರ್ವದ ಇತಿಹಾಸದ ಬಗೆಗೆ ಹೆಚ್ಚಿನ ಶೋಧನೆ ಬಯಸುತ್ತಿದೆ.

ಕಲ್ಯಾಣಕ್ರಾಂತಿಯ ಅನಂತರದ ಘಟನೆ ಗಳಲ್ಲಿ ಉಳವಿ ಪ್ರಮುಖ ಘಟ್ಟವೆನಿಸಿದೆ. 'ಶಿವತತ್ತ್ವ ಚಿಂತಾಮಣಿ' ಲಕ್ಕಣ್ಣದಂಡೇಶನ ಗರುಡದೃಷ್ಟಿಗೆ ಸೇರಿದ ಲಿಂಗಾಯತ ವಿಶ್ವಕೋಶ ಕನ್ನಡನಾಡಿನುದ್ದಕ್ಕೂ ಸಮಸ್ತ ಶರಣರ ಇತಿಹಾಸವನ್ನು ದೊರಕಿಸಿಕೊಡುವ ಮಹತ್ವದ ಆಕರ ಅದರಲ್ಲಿ ಲಕ್ಕಣ್ಣ ದಂಡೇಶ ತಿಳಿಸಿದ ಆರು ಲಿಂಗಾಯತ ಕೇಂದ್ರಗಳಲ್ಲಿ ಶ್ರೀಶೈಲ, ಹಂಪೆ, ಲಕ್ಷ್ಮೀಶ್ವರ, ಗುಮ್ಮಳಾಪುರ, ಕಲ್ಯಾಣ ಹಾಗೂ ಉಳವಿ. ಇವೆಲ್ಲ ಕಾಲದಿಂದ ಕಾಲಕ್ಕೆ ಇತಿಹಾಸ ಮೆರೆದ ಕ್ಷೇತ್ರಗಳು, ಉಳವಿ ಇತಿಹಾಸ ಅವನ ಗಮನ ಸೆಳೆದಿದೆ.

ಧರ್ಮದ ಆಂದೋಲನದಲ್ಲಿ ಕಲ್ಯಾಣ ಕುಸಿದಾಗ ಅದನ್ನು ವಿಕೇಂದ್ರಿಕೃತಗೊಳಿಸಿ ಜನಮನದಲ್ಲಿ ಬಿತ್ತುವುದು ಚೆನ್ನಬಸವಣ್ಣ ಇತರ ಶರಣರ ಪ್ರಮುಖ ಆಶಯವಾಗಿತ್ತು. ಶರಣಸಮೂಹಕ್ಕೆ ಒದಗಿದ ಆಧ್ಯಾತ್ಮದ ಪರಿಕಲ್ಪನೆ ಉಳವಿಯ ದುರ್ಗಮ ಅರಣ್ಯ ಮಾರ್ಗದ ಪರಿಚಯ, ವಚನಸಾಹಿತ್ಯ ರಕ್ಷಣೆಗೆ ಅವಕಾಶ ದೊರೆತಿದೆ. ಶರಣರ ಮಹಾಯಾತ್ರೆಯಿಂದ ಉತ್ತರ ಕರ್ನಾಟಕದಲ್ಲಾದ ಧಾರ್ಮಿಕ ಸಾಂಸ್ಕೃತಿಕ ಜಾಗೃತಿ ಗಮನಾರ್ಹ. ಉಳವಿ ಅಂದು ಲಿಂಗಾಯತ ಧರ್ಮ ಸಂಘಟನೆಯ ಪ್ರಮುಖ ಕೇಂದ್ರವಾಗಿ ಜನಮನವನ್ನು ತನ್ನೆಡೆಗೆ ಆಕರ್ಷಿಸುತ್ತ ಬಂದಿದೆ.

ಭಕ್ತಿ ಬಸವಣ್ಣನ ಕಲ್ಯಾಣದ ಮಹಾಮನೆ ಉಳವಿಯ ಮಹಾಮನೆ ಯಲ್ಲಿ ಚೆನ್ನಬಸವಣ್ಣನಿಂದ ಸಾರ್ಥಕಗೊಂಡಿದೆ. ಧರ್ಮರಕ್ಷಣೆಯ ಹೊಣೆ ಶರಣರನ್ನು ಕಟ್ಟಿಕೊಂಡು ಉಳವಿಯವರೆಗೆ ಪ್ರಯಾಸಪಟ್ಟು ಬಂದ ಚೆನ್ನಬಸವಣ್ಣನಿಗೆ ಕೆಲಕಾಲ ಮತ್ತೆ ಸಂಘಟಿತರಾಗಲು ಅವಕಾಶಕೊಟ್ಟ ಮಹತ್ವದ ತಾಣ ಉಳವಿಯ ಅಭಯಾರಣ್ಯ. ಪ್ರವಾಸ ಮಾರ್ಗದಲ್ಲಿ ಶರಣರಗೆ ಲಿಂಗತತ್ವರಹಸ್ಯ, ಅದರ ಪ್ರಕ್ರಿಯೆಗಳು, ಶಿವಯೋಗ ಸಾಧನೆಯ ಪರಿಣಾಮ ತಿಳಿಸುವದು ಅತ್ಯಾವಶ್ಯಕವಾಗಿತ್ತು. ಉಳವಿಯಲ್ಲಿ ಸಾಧನೆಗೈದು ಅದನ್ನು ಅನುಷ್ಠಾನಕ್ಕೆ ತಂದು ಶರಣರಿಗೆ ಮನಮುಟ್ಟುವಂತೆ ಅರುಹಿ ಶರಣಧರ್ಮವನ್ನು ಜನರ ಬಳಿಗೆ ಕೊಂಡೊಯ್ಯುವ ಆಶಯ ಚೆನ್ನಬಸವಣ್ಣನದಾಗಿತ್ತು.

ಶರಣರ ದಿಕ್ಕೆಟ್ಟ ಬದುಕಿಗೆ ವ್ಯವಸ್ಥಿತ ನೆಲೆ ಕಲ್ಪಿಸಿ ಕೊಟ್ಟವರಲ್ಲಿ ಕಲ್ಯಾಣದ ಚಾಲುಕ್ಯ ೬ನೆಯ ವಿಕ್ರಮಾದಿತ್ಯನ ಮಗಳು ಮೈಳಲದೇವಿ ಹಾಗೂ ಜಯ ಸಿಂಹರ ಮನೆತನ ಗೋವೆ ಕದಂಬರ ಸಂಸ್ಥಾನ ಮುಖ್ಯವೆನಿಸಿದೆ.

ಉಳವಿಯ ರಹಸ್ಯಮಯ ಪ್ರದೇಶದ ಆಯ್ಕೆಯಲ್ಲಿಯಂತೂ ಗೋವೆ ಕದಂಬ ಮಂಡಲೇಶ್ವರರ ರಕ್ಷಣೆ ಶರಣರಿಗೆ ಬದುಕಿನ ಕೊನೆವರೆಗೆ ದೊರೆತಿರಬಹುದೆಂಬುದು ಸೂಕ್ಷ್ಮ ಅವಗಾಹನೆಯಿಂದ ತಿಳಿದು ಬರುವಂಥದು. ಉಳವಿ ಪ್ರದೇಶದ ರಹಸ್ಯಸ್ಥಳ ಬಿಜ್ಜಳನ ರಾಜ್ಯಸೀಮೆಯಿಂದ ಹೊರಗಿದ್ದು ಶರಣರ ಸುರಕ್ಷಿತ ಆಯ್ಕೆಗೆ ಕಾರಣವಾಗಿದೆ.

ಕಲ್ಯಾಣದ ಕ್ರಾಂತಿ, ಶರಣರಿಗೆ ಒದಗಿದ ಆಘಾತ, ಕಲ್ಯಾಣದಲ್ಲಿ ಶರಣರ ಗುಂಪು ಉತ್ತರದ ಆಂಧ್ರದಲ್ಲಿ ಆಶ್ರಯಪಡೆದು ಕಾರ್ಯ ಪ್ರವೃತ್ತವಾಗಬೇಕೆಂದು ನಿರ್ಧಾರವಾಯಿತು. ಶ್ರೀಶೈಲದಿಂದ ಬಂದಿದ್ದ ಸಕಳೇಶ ಮಾದರಸರಿಗೆ ಆ ಪ್ರದೇಶದ ಪರಿಚಯವಿತ್ತು. ಹಂಪೆ ಮಹಿಷಮಂಡಲ ಮೊದಲಾದ ಕಡೆಗಳಲ್ಲಿ ಕೆಲವು ಶರಣರನ್ನು ಕಳಿಸಲು ನಿರ್ಧರಿಸಲಾಯಿತು. ಆದಷ್ಟು ಬೇಗನೆ ಶರಣರು ಸುರಕ್ಷಿತ ಸ್ಥಳಗಳಿಗೆ ಚದುರಿ ವಚನ ಸಾಹಿತ್ಯದಂತಹ ಅಮೂಲ್ಯ ಸಾಹಿತ್ಯ ಪ್ರಕಾರವನ್ನು ರಕ್ಷಿಸಲು ಸಾಧ್ಯವಾಯಿತು.

ಶರಣರ ದಂಡಿನ ದಾರಿಯನ್ನು ತಿಳಿಯಪಡಿಸುವುದು ಚೆನ್ನಬಸವಪುರಾಣ. ಅದರಲ್ಲಿ ಶರಣರು ನಡೆದು ಬಂದ ಮಾರ್ಗ ಕಲ್ಯಾಣ, ತೊರಗಲ್ಲು ತಡೆಗೋಡ, ಕಾದರವಳ್ಳಿ ಮುರಗೋಡ, ಉಳವಿ ಮಾರ್ಗದ ಪ್ರಸ್ತಾಪವಿದೆ. ಇದು ಕಲ್ಯಾಣ ಬಿಟ್ಟನಂತರ ಶರಣರು ನಡೆದು ಬಂದ ನೇರ ಉತ್ತರಾರ್ಧದ ದಂಡಿನ ದಾರಿ ಎನಿಸಿದೆ.

'ಶರಣಲೀಲಾಮೃತ': ಕಂಡುಬರುವ ದಂಡಿನ ದಾರಿಯಲ್ಲಿ ಕಲ್ಯಾಣ, ತಡಕೊಡ, ಮುರಗೋಡ, ಮೂಗಬಸವ, ಗೊಡಬ್ಬಿ ಉಳುವೆ ಎಂದಿದ್ದು ಇದರಲ್ಲಿ ಗೊಡಚಿ ಮುಖ್ಯವಾಗಿ ತೋರಿಸಿದ ಶರಣಕ್ಷೇತ್ರವೆನಿಸಿದೆ.

ರೇಚಣ್ಣನ ವಚನ: ಶರಣರ ದಂಡಿನ ದಾರಿಯಲ್ಲಿ ಕಲ್ಯಾಣ ಕಾದರೊಳ್ಳಿ, ಮುರ ಗೋಡ, ಉಳವಿ ಕುರಿತು ಶರಣಕ್ಷೇತ್ರಗಳ ಪರಿಚಯ ಬ೦ದಿದೆ.

ಕಾಲಜ್ಞಾನ ವಚನ: ಶರಣರ ಕಾಲಜ್ಞಾನ ವಚನದಲ್ಲಿ ಕಲ್ಯಾಣ, ಕಟಕೋಳ, ಮೊದಲೂರು ತವಲೂರು ಮುರುಗೋಡ, ಮೂಗಬಸವ, ಕಾದರೊಳ್ಳಿ ಸಾಂಬ್ರಾಣಿ, ಮೇಲುಗೈಯಲ್ಲಾಪುರ ಉಳವಿ ಎಂದು ವಿವರಿಸಿದೆ.

ಉಳವಿ ಮಹಾತ್ಮ ಕೃತಿ: ಶರಣರ ದಂಡಿನ ದಾರಿಯ ಮೇಲೆ ವಿಶಿಷ್ಟ ಬೆಳಕು ಬೀರುವ ಕೃತಿ ಇದು. ಸೋದೆ ಅರಸ ಸದಾಶಿವರಾಯ ರಚಿತ 'ಉಳವಿ ಮಹಾತ್ಮ' ಎಂಬುದು ಅಪರೂಪದ ಕೃತಿ. ಕಲ್ಯಾಣಕ್ರಾಂತಿಯ ತರುವಾಯ ಶರಣರ ದಂಡು ಚೆನ್ನಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣ ಪರವತಾಬಾದ (ಗುಲಬರ್ಗ ತಾ.) ಪೇರಜಾಬಾದ (ಫಿರೋಜಾಬಾದ ತಾ.) ಕೊಳಕೂರು (ಜೇವರಗಿ ತಾ.) ಸಗೆರೆ (ಸವದತ್ತಿ ತಾ.) ಮುರಗೋಡ, ಹುಬ್ಬಳ್ಳಿ, ಬಂಕಾಪುರ, ಹಾನಗಲ್ಲು, ಮಳಗಿ (ಮುರಗೋಡ ತಾ.) ಲಂಬೋದರ ಹನುಮ, ಬೆನಕನಘಟ್ಟ (ಯಲ್ಲಾಪುರ ತಾ.) ಜಾಂಗಲ ಕ್ಷೇತ್ರ ಜಗಳಬೆಟ್ಟ (ಸೂಪಾ ತಾ.) ಸೋದೆ ತುಂಬೆಬೀಡು (ಯಲಾಪುರ ತಾ.), ಅಂಜನಾನದಿ ಬಿದುರೆಪುರ (ಯಲ್ಲಾಪುರ ತಾ.) ಹೆಬ್ಬಳಪಳ್ಳಿ (ಸಿರ್ಸಿ ತಾ.) ಮೂಲಕ ನೇರ ಪ್ರಯಾಣ ಬೆಳೆಸಿದುದನ್ನು ಸೂಕ್ಷ್ಮ ಅವಲೋಕನೆ ಕೈಕೊಂಡು ತಿಳಿಸಿದೆ. ಇದು ಉಳವಿ ಮಹಾತ್ಮೆಯಲ್ಲಿ ಸ್ವಾದಿ ಸದಾಶಿವರಾಯ ವ್ಯಕ್ತಪಡಿಸಿದ ಮಹತ್ವದ ಶರಣರ ದಂಡಿನ ದಾರಿ. ೭೫ ಪದ್ಯಗಳ ಉಳವಿ ಕ್ಷೇತ್ರದ ವಿಸ್ತ್ರತ ಕೃತಿ ಇದು.

'ಉಳವಿ ಚೆನ್ನಬಸವೇಶ್ವರ ವಾರ್ಧಕ'ವೂ ಶರಣ ಕ್ಷೇತ್ರ ಉಳವಿಯ ಬಗ್ಗೆ ೧೫ ಪದ್ಯಗಳನ್ನೊಳಗೊಂಡ ಕೃತಿ. ಕಲ್ಯಾಣದ ಶರಣರು ಕಾರವಾರ ಜಿಲ್ಲೆಯ ದುರ್ಗಮ ಕಾಡಿನಲ್ಲಿರುವ ಉಳವಿ ಕ್ಷೇತ್ರಕ್ಕೆ ಆಗಮಿಸಿದ ಇತಿಹಾಸ. ಅಷ್ಟೇ ಸುಂದರವಾಗಿ ಉಳವಿಯ ಇತಿಹಾಸವನ್ನು ವ್ಯಕ್ತಪಡಿಸಿದ ಕೃತಿಯಾಗಿದೆ.

ಸೋದೆ ಸದಾಶಿವರಾಯನ 'ಉಳವಿ ಮಹಾತ್ಮ'ಗೆ ಶರಣರ ಐತಿಹಾಸಿಕ ಕ್ಷೇತ್ರಗಳಲ್ಲಿ ಅಗ್ರಸ್ಥಾನ ದೊರೆತಿದೆ. ಉಳವಿ ಚೆನ್ನಬಸವ ವಾರ್ಧಕವೂ ತಕ್ಕಮಟ್ಟಿಗೆ ಉಳವಿ ಕ್ಷೇತ್ರ ಚಾರಿತ್ರಿಕ ಮಹತಿ ವ್ಯಕ್ತಪಡಿಸಿದೆ. ಇದರಿಂದ ಸದಾಶಿವರಾಯನ ಕೃತಿ ಉಳವಿ ಮಹಾತ್ಮ ಹಾಗೂ ವಾರ್ಧಕದಿಂದ ತಾರ್ತಿಕವಾಗಿ ಶರಣರ ದಂಡಿನ ದಾರಿಯ ಸ್ಪಷ್ಟ, ವಿವೇಚನೆ ದೊರೆತಂತಾಗಿದೆ.

'ಉಳವಿ' ಪ್ರಾಚೀನಕಾಲದಲ್ಲಿ ಚಾಲುಕ್ಯ ರಾಜ್ಯದ ಸೀಮಾ ಪ್ರದೇಶ ವಾಗಿತ್ತು. ಕಲಚೂರ್ಯ ಬಿಜ್ಜಳನ ಕಟ್ಟಾ ವಿರೋಧಿ ಗೋವೆ ಕದಂಬರ ಆಧಿಪತ್ಯಕ್ಕೆ ಒಳಪಟ್ಟ ಪ್ರದೇಶ, ಪಶ್ಚಿಮಘಟ್ಟದ ದಟ್ಟ ಕಾಡಿನ ಮಧ್ಯೆ ಅತಿ ದುರ್ಗಮ ದಾರಿಯಿಂದ ಕೂಡಿದ ಪ್ರದೇಶ. ಅಲ್ಲಿಯ ನೈಸರ್ಗಿಕ ನಿಮಿತ್ತ ವಿಸ್ಮಯಕಾರಿಯಾದ ಗುಹೆಗಳು, ಅಲ್ಲಿಯೆ ಹರಿಯುವ ಕಾಳಿನದಿ ಕಪ್ಪುಹೊಳೆ ಕರೆಹೊಳೆಯಾಗಿ ಅವರಿಗೆ ಅನುಕೂಲ ಒದಗಿಸಿಕೊಟ್ಟಿದೆ. ಧರ್ಮದ ಉಳವಿಗಾಗಿ ರಕ್ಷಣೆಗಾಗಿ ನೆಲೆಯೂರಿದ ಉಳವಿ ಶರಣರ ಸನ್ನಿಧಾನದಿಂದ ಕ್ಷೇತ್ರ ಪುನೀತಗೊಂಡಿದೆ.

ಪ್ರತಿ ವರ್ಷ ಮಾಘ ಮಾಸದ, ಭಾರತ ಹುಣ್ಣಿಮೆಯ ಮರುದಿನ ಶ್ರೀ ಗುರು ಚೆನ್ನಬಸವಣ್ಣನವರ ಜಾತ್ರೆ ಉತ್ಸವ ಮಾಡಲಾಗುತ್ತದೆ.

ಇಂದಿಗೂ ಹುಬ್ಬಳ್ಳಿ, ಉಣಕಲ್ ಹಾಗೂ ಸುತ್ತಮುತ್ತಲಿನ ಸಾವಿರಾರು ಗ್ರಾಮ, ಊರುಗಳ ಹಿರಿಯರು, ಮಹಿಳೆಯರು, ಮಕ್ಕಳು ಮತ್ತು ಯುವಕರು *_ಪ್ರತಿ ವರ್ಷ ಉಳವಿ ಜಾತ್ರೆಗೆ ಹೋಗಿ ಬರುವ ಸಂಪ್ರದಾಯವಿದೆ_* ಜೊತೆಗೆ ಉಳವಿ ಚನ್ನಬಸವಣ್ಣನವರ ಬಗ್ಗೆ ತಿಳಿದುಕೊಳ್ಳುವ ಸಲವಾಗಿ ವಚನಗಳನ್ನು ಓದುತ್ತಿದ್ದಾರೆ ಮತ್ತು 12ನೆಯ ಶತಮಾನದ ಕಲ್ಯಾಣ ಕ್ರಾಂತಿ ಇತಿಹಾಸವನ್ನು ಜನಪದ, ಗೀಗೀ ಪದ, ಭಜನಾ ಪದ ಹಾಡುಗಳಲ್ಲಿ ಬಿ‌ಸುವಾಗ, ಕುಟ್ಟುವಾಗ, ಬಿತ್ತುವಾಗ, ಹಂತಿ ಹೊಡೆಯುವಾಗ, ಬೇರೆ ಬೇರೆ ಕಾಯ೯ಕ್ರಮಗಳನ್ನು ಮಾಡುವ ಸಮಯದಲ್ಲಿ ಹಾಡುತ್ತಾ ಇತಿಹಾಸ ಉಳಿಸಿ ಬೆಳೆಸಿ ಕೊಂಡು ಬರುತ್ತಿದ್ದಾರೆ ಅವರಿಗೆ ನನ್ನ ಶರಣು ಶರಣಾರ್ಥಿಗಳು.

ಪ್ರಶ್ನೆ: ಯಾವಾಗ ಉಳವಿಗೆ ಶ್ರೀ ಚೆನ್ನಬಸವಣ್ಣನವರ ಆಗಮನವಾಯಿತು?
ಉತ್ತರ: 12 ನೇಯ ಶತಮಾನದಲ್ಲಿ, ಕಲ್ಯಾಣ ಕ್ರಾಂತಿಯ ನಂತರ ಉಳಿವಿಗೆ ಬಂದರು.

ಪ್ರಶ್ನೆ: ಉಳಿವಿಗೆ ಏಕೆ ಬಂದರು?
ಉತ್ತರ: ಸಹ್ಯಾದ್ರಿ ಅರಣ್ಯದಲ್ಲಿ ವಚನಗಳನ್ನು ರಕ್ಷಿಸಲು ಅನುಕೂಲವಾದ ವಾತಾವರಣ ಇರುವ ಕಾರಣ ಶ್ರೀ ಗುರು ಚನ್ನಬಸವಣ್ಣನವರು ಹಾಗೂ ಶರಣರು ಈ ಉಳಿದ ನೆಲವೇ ಸುಕ್ಷೇತ್ರ ಉಳವಿ.

ಪ್ರಶ್ನೆ: ಕಲ್ಯಾಣದಿಂದ ಉಳಿವಿಗೆ ಬರುವಾಗ ಚನ್ನಬಸವಣ್ಣನವರ ಜೊತೆಗೆ ಯಾರು ಯಾರು ಆಗಮಿಸಿದರು?
ಉತ್ತರ: ಅಕ್ಕನಾಗಲಾಂಬಿಕಾತಾಯಿ, ಮಡಿವಾಳ ಮಾಚಿದೇವರು, ರೇಚಯ್ಯ ಶರಣರು, ಕೂಗುಮಾರಿತಂದೆ, ಕಲ್ಯಾಣಮ್ಮನವರು, ಡೋಹಾರ ಕಕ್ಕಯ್ಯನವರು, ಬೀಷ್ಠಾದೇವಿ, ಮುಂತಾದ ಶರಣರು ಮತ್ತು ಶರಣೆಯರು.

ಪ್ರಶ್ನೆ: ಅನುಭವಮಂಟಪದಿಂದ ಉಳಿವಿಗೆ ವಚನಗಳನ್ನು ಹೇಗೆ ಸಾಗಿಸಿದರು?
ಉತ್ತರ: ವಚನಗಳ ಕಟ್ಟುಗಳ ಗಂಟುಗಳನ್ನು ಚಕ್ಕಡಿಗಳು, ಕುದುರೆಗಳು, ಎತ್ತುಗಳ ಮೇಲೆ ಮತ್ತು ತೆಲೆಯ ಮೇಲೆ, ಬೆನ್ನಿನ ಹಿಂದೆ, ಹೆಗಲ ಮೇಲೆ ಹೊತ್ತುಕೊಂಡು ಉಳಿವಿಗೆ ಬಂದರು.

ಪ್ರಶ್ನೆ: ಉಳವಿಗೆ ಶರಣರು ಯಾವ ಮಾರ್ಗವಾಗಿ ಬಂದರು?
ಉತ್ತರ: ಒಂದು ಶರಣರ ತಂಡ ಬಿಜ್ಜಳನ ಸೈನಿಕರು ಮತ್ತು ಶರಣರೊಡನೆ ಕಾದ್ರೊಳ್ಳಿ, ಬೈಲಹೂಂಗಲ, ಮೂರಗೋಡ ಯುದ್ದಗಳು ನಡೆದವು ಆ ಯುದ್ದಗಳಲ್ಲಿ ಶರಣರು ಜೈಯಶಾಲಿಯಾಗಿ ಕಿತ್ತೂರು ಮಾರ್ಗವಾಗಿ ಉಳಿವಿಗೆ ಬಂದರು.

ಉತ್ತರ: ಇನ್ನೊಂದು ಶರಣರ ತಂಡ ಹುಬ್ಬಳ್ಳಿ, ತಿಮ್ಮಸಾಗರ, ಉಣಕಲ್, ಧಾರವಾಡ, ಹಳಿಯಾಳ, ದಾಂಡೇಲಿ ಮಾರ್ಗ ಬಳಿಸಿ ಉಳಿವಿಗೆ ಬಂದರು. ಮತ್ತೊಂದು ಶರಣರ ತಂಡ ಹುಬ್ಬಳ್ಳಿ, ಕಲಘಟಗಿ, ಯಲ್ಲಾಪುರ, ಶಿವಪುರ ಮಾರ್ಗ ಬಳಿಸಿ ಉಳಿವಿಗೆ ಬಂದರು.

ಪ್ರಶ್ನೆ: ಜಾತ್ರೆಯಿಂದ ಬರುವಾಗ ಏನನ್ನು ತರಬಹುದು?
ಉತ್ತರ: ಶ್ರೀ ಚನ್ನಬಸವಣ್ಣನವರ ಹಾಗೂ ಶರಣರ ವಚನಗಳ ಪುಸ್ತಕಗಳನ್ನು ಮಾರಾಟ ಮಾಡುತ್ತಿರುತ್ತಾರೆ, ಈ ಪುಸ್ತಕಗಳನ್ನು ಕೊಂಡು ತಂದು ನಾವು ಪ್ರತಿನಿತ್ಯ ಪಾರಾಯಣ ಮಾಡಬೇಕು ಮನೆಯಲ್ಲಿ ಮಕ್ಕಳಿಗೂ ಕಳಿಸಬೇಕು.

ಪ್ರಶ್ನೆ: ಜಾತ್ರೆಯಿಂದ ಬಂದ ನಂತರ ನೆರೆಹೊರೆಯವರಿಗೆ ಪ್ರಸಾದದ ಜೊತೆಗೆ ಏನನ್ನು ಕೊಡಬೇಕು?
ಉತ್ತರ: ಪ್ರಸಾದದ ಜೊತೆಗೆ ಒಂದು ವಿಭೂತಿ, ರುದ್ರಾಕ್ಷಿ, ವಚನದ ಪುಸ್ತಕವನ್ನು ಕೊಡುವುದರಿಂದ ಚೆನ್ನಬಸವಣ್ಣನವರ ಹಾಗೂ ಶರಣರ ಕೃಪೆ ಅನುಗ್ರಹ ಆಶೀರ್ವಾದವಾಗುತ್ತದೆ.

ಪರಿವಿಡಿ (index)
Previous ಶರಣ ಕ್ಷೇತ್ರಗಳು Lingayat Piligram Centers ಸೊಲ್ಲಾಪುರ Next