Previous ಸೊಲ್ಲಾಪುರ ಕೂಡಲ ಸಂಗಮ Next

ಬಸವಕಲ್ಯಾಣ

ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪಟ್ಟಣವೇ ಇಂದಿನ ಬಸವ ಕಲ್ಯಾಣ. ಬೀದರಿನಿಂದ ಪಶ್ಚಿಮ ದಿಕ್ಕಿಗೆ 80 ಕಿ.ಮೀ. ದೂರದಲ್ಲಿರುವ ನಗರವೇ ಬಸವಕಲ್ಯಾಣ. ಇದು ಚಾಲುಕ್ಯರ ರಾಜಧಾನಿಯಾಗಿದ್ದ ಕಲ್ಯಾಣಿ/ಕಲ್ಯಾಣಪುರ. ಚಾಲುಕ್ಯರು ಕಲ್ಯಾಣವನ್ನು ಸುಮಾರು ೨೫೦ ವರುಷಗಳವರೆಗೆ ಆಳ್ವಿಕೆ ನಡೆಸಿದರು. ಇದೇ ಪಟ್ಟಣ ಕಳಚೂರಿಗಳ ರಾಜಧಾನಿಯೂ ಆಗಿದ್ದಿತ್ತು. ಐತಿಹಾಸಿಕ ಮಹತ್ವ ಹೊಂದಿರುವ ಬಸವಕಲ್ಯಾಣ ತಾಲೂಕು ಪ್ರವಾಸ ಆಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಬಸವಣ್ಣನವರು ಮಾಂಡಲಿಕ ಬಿಜ್ಜಳನೊಂದಿಗೆ ಮಂಗಳವೇಡೆಯಿಂದ ಕಲ್ಯಾಣಪುರಕ್ಕೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು. ಬಲದೇವ ಮಂತ್ರಿಯ ನಂತರ ಬಸವಣ್ಣನವರಿಗೆ ಪ್ರಧಾನಿ ಹುದ್ದೆಯನ್ನು ನೀಡಲಾಯಿತು. ಅವರು ಬಿಜ್ಜಳ ಅರಸರ ಭಾಂಡಾರಿಯಷ್ಟೇ ಆಗಿರದೆ ಭಕ್ತಿ ಭಾಂಡಾರಿಯೂ ಆದರು. ನೆಲ ಪಾವನವಾಯಿತು. ಜನಮನ ನೆಲೆ ಕಂಡಿತು.

ಬಸವಕಲ್ಯಾಣ ಕೋಟೆ

ಈ ಕೋಟೆ ಚಾಲುಕ್ಯರ ನಂತರ ದೇವಗಿರಿಯ ಯಾದವರ, ತೊಗಲಖ್‌, ಬಹಮನಿ, ಬರೀದಶಾಹಿ, ಆದಿಲ್‌ಶಾಹಿ, ಮೊಗಲರು, ಮರಾಠರು, ಕೊನೆಯಲ್ಲಿ ನೈಜಾಂರ ವಶದಲ್ಲಿತ್ತು. ವಿವಿಧ ಹಂತಗಳಲ್ಲಿ ಈ ಕೋಟೆ ನಿರ್ಮಾಣಗೊಂಡಿದೆ. ಕಲ್ಯಾಣದ ಕೋಟೆ ಗಾತ್ರದಲ್ಲಿ ಚಿಕ್ಕದಾಗಿದ್ದರೂ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವ ತಳೆದಿದೆ.

ಪರುಷಕಟ್ಟೆ :

ಬಸವೇಶ್ವರ ದೇವಾಲಯದ ಸಮೀಪ ಇರುವ ಈ ಸ್ಮಾರಕ ಕಟ್ಟೆಯೊಂದರ ರೂಪದಲ್ಲಿದೆ. ಇದರ ಸಂಬಂಧ ಬಸವಣ್ಣನವರೊಂದಿಗೆ ಇದ್ದಿತೆಂದು ತಿಳಿದುಬರುತ್ತದೆ.

ಬಸವಣ್ಣನವರ ಅರಿವಿನ ಮನೆ :

ಬಸವ ಕಲ್ಯಾಣದ ಹೊರವಲಯದಲ್ಲಿರುವ ಇದು ಸ್ಮಾರಕ ಗುಹೆಯ ಮಾದರಿಯಲ್ಲಿದೆ. ಬಸವಣ್ಣನವರ ಮಹಾಮನೆ ಎಂದೇ ಜನರು ಇದನ್ನು ಕಾಣುತ್ತಾರೆ.

ಹಡಪದ ಅಪ್ಪಣನವರ ಗುಹೆ :

ಅರಿವಿನ ಮನೆಯ ಪಕ್ಕದಲ್ಲಿಯೇ ಈ ಗುಹೆ ಇದ್ದು , ತಂಪಾದ ನೆಲೆಯಾಗಿದೆ. ಹಡಪದ ಅಪ್ಪಣನವರು ಬಸವಣ್ಣನವರ ನಿಕಟವರ್ತಿಗಳಾಗಿದ್ದರು. ತಾಂಬೂಲವನ್ನು ಸಲ್ಲಿಸುವ ಕಾಯಕ ಅವರದ್ದಾಗಿತ್ತೆಂದು ತಿಳಿದುಬರುತ್ತದೆ.

ಅಕ್ಕ ನಾಗಮ್ಮ - ನೀಲಮ್ಮನವರ ಗವಿಗಳು :

ಈ ಎರಡೂ ಗವಿಗಳು ಅಕ್ಕಪಕ್ಕದಲ್ಲಿವೆ. ಚೆನ್ನಬಸವಣ್ಣನವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಇಲ್ಲಿಯೇ ಎಂಬುದು ಅಭಿಪ್ರಾಯ. ಈ ಗವಿಗಳು ಹನ್ನೆರಡನೇ ಶತಮಾನದ ಮಹಿಳೆಯರ ಆಧ್ಯಾತ್ಮಿಕ ಸಾಧನೆಯ ಕುರುಹುಗಳು.

ಬಸವ ಕಲ್ಯಾಣದ ಚಿತ್ರಗಳು

ಶರಣರ ಕಾರ್ಯ ಕ್ಷೇತ್ರ

ಪ್ರಗತಿಯ ಪ್ರವೃತ್ತನಾದ ಮಾನವನ ಅವಿರತ ಹೋರಾಟದ ಸ್ಪಷ್ಟ ಹೆಜ್ಜೆ ಗುರುತುಗಳು ಕಾಲದಿಂದ ಕಾಲಕ್ಕೆ ಗೋಚರವಾಗುತ್ತವೆ. ಮಾನವ ವಿಕಾಸದ ಸಮಗ್ರ ಅಂಶಗಳನ್ನು ಅಳವಡಿಸಿಕೊಂಡು ಬೆಳೆದು ಮಾನವತೆಯ ಉದ್ಧಾರಗೈದ ಮಹಾತ್ಮರ ಪಂಕ್ತಿಗೆ ಸೇರಿದವರು ವಿಶ್ವವಿಭೂತಿ ಬಸವಣ್ಣನವರು. ಯುಗ ಪ್ರವರ್ತಕ ಶಕ್ತಿಯಾಗಿ ಬಸವಯುಗದ ಮನೋಧರ್ಮವನ್ನೇ ತನ್ನ ಚೈತನ್ಯಪರ ಪ್ರಯೋಗ ಶೀಲತೆಯಿಂದ ಪರಿಪೂರ್ಣತೆಯತ್ತ ಮುನ್ನಡೆಸಿದ ಚೇತನಶಕ್ತಿ.

ಜನಮನದ ಶಕ್ತಿಯ ಮಹಾತ್ಮರನ್ನು ನಮ್ಮಿಳೆಗೆ ಕರೆತರುತ್ತದೆ. ಅವರ ಜೀವನ ಕಾರ್ಯಕ್ಷೇತ್ರಗಳನ್ನು ನೋಡಿದಾಗ ಸಮಷ್ಟಿ ಪ್ರಜ್ಞೆಯನ್ನು ಎಚ್ಚರಗೊಳಿಸುತ್ತದೆ. ಬಸವಣ್ಣನವರ ವ್ಯಕ್ತಿತ್ವ ಬಹುಮುಖವಾದುದು. ಬಸವಕಲ್ಯಾಣ ಕೆಲಕಾಲ ಅವರ ಕಾರ್ಯ ಕ್ಷೇತ್ರವೆನಿಸಿತು. ಕಲ್ಯಾಣವನ್ನು ಕೇಂದ್ರವಾಗಿರಿಸಿಕೊಂಡು ಆಳಿದ ಕಲ್ಯಾಣ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ತರುವಾಯ ಪಟ್ಟಕ್ಕೆ ಬಂದವನು ಕಲಚೂರ್ಯ ಬಿಜ್ಜಳ.

ಚಾರಿತ್ರಿಕ ನೋಟ

ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ ಕಲ್ಯಾಣ ಈಗ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ತಾಲ್ಲೂಕಿನ ಮುಖ್ಯಸ್ಥಳ, ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಧರ್ಮಕೇಂದ್ರ ಶಕ್ತಿಯೆನಿಸಿದೆ. ಕಲ್ಯಾಣದ ರಾಜಕವಿ ವಿಜ್ಞಾನೇಶ್ವರನ ಮಿತಾಕ್ಷರ ಗ್ರಂಥದಲ್ಲಿ 'ಕಲ್ಯಾಣದಂತಹ ನಗರ ಹಿಂದೆ ಇರಲಿಲ್ಲ', ಎಂದಿದ್ದರೆ ಸಂಸ್ಕೃತ ಕವಿ ಬಿಲ್ಹಣ ಕಲ್ಯಾಣವನ್ನು ಮನದುಂಬಿ ವರ್ಣಿಸಿರುವನು.

ಗುರು ಬಸವಣ್ಣನವರು ಕಲ್ಯಾಣಕ್ಕೆ ಬಂದೊಡನೆ ಕೆಲಕಾಲ ಬಿಜ್ಜಳನ ಪ್ರಮುಖ ಅಧಿಕಾರಿ, ಮಂತ್ರಿಯಾಗಿದ್ದರೂ ರಾಜಕೀಯ ಅಧಿಕಾರ ವನ್ನು ಧರ್ಮಸಾಧನೆಗೆ ಸದುಪಯೋಗಮಾಡಿಕೊಂಡುದು ಅವರ ವಿಶೇಷ. 'ಎನಗಿಂತ ಕಿರಿಯರಿಲ್ಲ' ಎಂಬ ದಾಸೋಹಂಭಾವ ಆತ್ಮ ಸಾಕ್ಷಾತ್ಕಾರದ ಸನ್ಮಾರ್ಗವೆನಿಸಿತು. ವೈಯಕ್ತಿಕ ಉದ್ದಾರಕ್ಕಿಂತ ಸಾಮೂಹಿಕ ಸಮಷ್ಟಿ ಉದ್ಧಾರಕ್ಕೆ ಮಹತ್ವ ನೀಡಿದರು. ಅವರ ಸರ್ವಾರ್ಪಣೆಯ ಭಕ್ತಿ, ಸಮಾಜಸೇವೆಯೆನಿಸಿತು. ಸಮಕಾಲೀನ ಶರಣರ ಪ್ರಯತ್ನದ ಫಲವಾಗಿ ಬಸವಣ್ಣನವರ ಮನೆ ಮಹಾಮನೆಯೆನಿಸಿತು. ಧಾರ್ಮಿಕ ವಿಚಾರಗಳ ಚರ್ಚೆಗೆ ಅದು ಕೇಂದ್ರವಾಯಿತು. 'ಅನುಭವ ಮಂಟಪ' ಅನುಭವಗಳ ಮಂಥನಕ್ಕೆ ಕ್ರಿಯಾಶೀಲ ಕೇಂದ್ರವೆನಿಸಿತು. ಜಾತಿ ಭೇದಗಳ ಹಂಗು ಮೀರಿ, ಅಧಿಕಾರ ಅಂತಸ್ತುಗಳ ಸೀಮೆ ದಾಟಿ, ಎಲ್ಲರಿಗೂ ಸಮಾನ ಅವಕಾಶವನ್ನು ಬಸವಣ್ಣನವರು ಅನುಭವಮಂಟಪದಲ್ಲಿ ಮಾಡಿಕೊಟ್ಟರು.

ಬೀಸಿತು ಶರಣಗಾಳಿ

ಈ ಹೊಸಗಾಳಿಗೆ ಅದರಿಂದ ಆಕರ್ಷಿತಗೊಂಡ ಸಾಧಕರು ಎಲ್ಲೆಡೆ ಯಿಂದ ಕರ್ನಾಟಕದತ್ತ ಧಾವಿಸಿದರು. ಕಲ್ಯಾಣ ಅನುಭಾವಿಗಳ ಅನುಭವ ಮಂಥನದ ಕೇಂದ್ರವಾಯಿತು. ಬಸವಣ್ಣನವರ ಕಾಲದಲ್ಲಿ ಧರ್ಮದಾನಿಗಳ ಸಂತಾನವನ್ನು ಕಲ್ಯಾಣದಲ್ಲಿ ಬೆಳೆಸಿತು. ಕರ್ನಾಟಕದ ಅಕ್ಕಪಕ್ಕದ ಪ್ರಾಂತ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಮುಂತಾದ ಪ್ರದೇಶಗಳಿಂದಲೂ ಶರಣರು ಕಲ್ಯಾಣದತ್ತ ಆಗಮಿಸಿದರು. ಕಲ್ಯಾಣದ ಸುತ್ತುಮುತ್ತಲಿನ ಸೊಲ್ಲಾಪುರ, ಗುಡ್ಡಾಪುರ, ಹಿಪ್ಪರಗಿ, ಶಿವಣಗಿ, ಇಳಿಹಾಳ, ಚಿಮ್ಮಲಿಗೆ ಮುದೇನೂರು, ಬಳ್ಳಿಗಾವೆ, ಉಡುತಡಿ, ಹಿರೇಜಂಬೂರುಗಳಿಂದಲೂ ಆಗಮಿಸಿದರು. ಕಳಿಂಗ ದೇಶದ ಮರುಳುಶಂಕರದೇವ, ಸೌರಾಷ್ಟ್ರದಿಂದ ಸೊಡ್ಡಳ ಬಾಚರಸ, ಆದಯ್ಯ, ತಮಿಳು ದೇಶದಿಂದ ಪಿಟ್ಟವ್ವ, ಮೆರೆಮಿಂಡ ದೇವ, ಮಾದಾರ ಚೆನ್ನಯ್ಯ, ಆಂಧ್ರದಿಂದ ಬಹುರೂಪಿ ಚೌಡಯ್ಯ, ಮೈದುನ ರಾಮಯ್ಯ, ಸಕಲೇಶ ಮಾದರಸರು ಮುಖ್ಯರು. ಹೀಗೆ ಕಲ್ಯಾಣಕ್ಕೆ ಕಾಶ್ಮೀರದಂತಹ ಪ್ರದೇಶಗಳಿಂದ ಆಗಮಿಸಿದ ಶರಣರು ಅನುಭವ ಮಂಟಪದ ನೇತೃತ್ವದಲ್ಲಿ ಹೊಸ ಸಾಧನೆ ಕೈಕೊಂಡರು.

ತಿರುವು ಪಡೆದ ಇಂದಿನ ಕಲ್ಯಾಣ

ಕರ್ನಾಟಕವನ್ನಾಳಿದ ದೇವಗಿರಿ ಯಾದವರ ತರುವಾಯ ಕಲ್ಯಾಣ ಪಟ್ಟಣ ಹೆಚ್ಚಾಗಿ ಮುಸ್ಲಿಮರ ಅಧೀನದಲ್ಲಿಯೇ ಉಳಿದುಬಂದಿತು. ಕಾಲಪ್ರವಾಹದಲ್ಲಿ ಶರಣರ ಸ್ಮಾರಕಗಳು ಅಳಿದು ಇಂದು ಉಳಿದವು ಕೆಲವೇ ಕೆಲವು ಅವಶೇಷಗಳು. ಈಗಿನ ಕಲ್ಯಾಣ, ಬುಧವಾರ ಪೇಟೆ, ಸೋಮವಾರ ಪೇಟೆ, ಶಹಪುರ ಪೇಟೆ, ಅಲ್ಲಾನಗರ ಕಸಭೆ ಹೊಸಪೇಟೆ, ಈ ಭಾಗಗಳಿಂದ ಕೂಡಿದ ಬಸವ ಕಲ್ಯಾಣ ತಾಲ್ಲೂಕಿನ ಮುಖ್ಯ ಸ್ಥಳವಾಗಿದೆ. ಇಲ್ಲಿ ಅಂದಿನ ಅವಶೇಷಗಳನ್ನು ಗಮನಿಸಬೇಕಾದರೆ ಬಸವೇಶ್ವರ ಗುಡಿ ಬಸವಣ್ಣನವರ ಅರಿವಿನ ಮನೆ, ಪರುಷಗಟ್ಟೆ, ಹುಲಿಕಂಥೆಮಠ, ಸೋಮೇಶ್ವರ ದೇವಾಲಯ ಕೋಟೆ, ಬಿಜ್ಜಳನ ಅರಮನೆ, ಪ್ರಭುದೇವರ ಗದ್ದುಗೆ, ತ್ರಿಪುರಾಂತಕ ದೇವಾಲಯ, ತ್ರಿಪುರಾಂತಕ ಕೆರೆ, ಅಕ್ಕನಾಗಮ್ಮನ ಗವಿ, ಮಡಿವಾಳ ಮಾಚಿದೇವರ ಹೊಂಡ, ಕಂಬಳಿ ನಾಗಿದೇವನ ಮಠ, ನುಲಿಚಂದಯ್ಯನ ಗವಿ, ಅಂಬಿಗರ ಚೌಡಯ್ಯನ ಗವಿ, ಡೋಹರ ಕಕ್ಕಯ್ಯನ ಗವಿ, ಉರಿಲಿಂಗಪೆದ್ದಿಯ ಗವಿ ಮೊದಲಾದ ಶರಣ ಸ್ಮಾರಕಗಳಿವೆ. ಬಸವಕಾಲದ ವೈಭವವನ್ನು ಪ್ರತಿಬಿಂಬಿಸಬೇಕಾದ ಅವಶೇಷಗಳು ಇಂದು ಮಂಕುಕವಿದಂತಾಗಿವೆ. ತ್ರಿಪುರಾಂತಕ ಕೆರೆಯ ಸುತ್ತಮುತ್ತ ಬಹುಪಾಲು ಶರಣರ ಸ್ಥಳಗಳು, ಅದರ ಪಕ್ಕದ ಎತ್ತರವಾದ ದಿಬ್ಬವೇ ಅನುಭವ ಮಂಟಪದ ನಿವೇಶನವಿರಬೇಕೆಂದು ಊಹಿಸಿ ಇತ್ತೀಚೆಗೆ ಅಲ್ಲಿ ಅನುಭವ ಮಂಟಪ ತಲೆಯೆತ್ತಿದೆ. ತ್ರಿಪುರಾಂತಕಕೆರೆ ನೀರು ಇನ್ನೂ ಅಷ್ಟಾಗಿ ಮಲಿನಗೊಂಡಿಲ್ಲ. ಕೆರೆಯ ಒಡ್ಡಿನಲ್ಲಿ ಅಡಗಿರುವ ಮಡಿವಾಳ ಮಾಚಿದೇವರ ಹೊಂಡವು ಸದಾ ನೀರು ತುಂಬಿ ನಿಂತಿದ್ದು, ಸದ್ಯ ಅಧಿಕ ವರ್ಷಗಳ ಪರಿಣಾಮದಿಂದ ನೀರು ಪಾಚಿಗಟ್ಟಿ, ಮಲಿನಗೊಂಡಿದೆ. ಕರ್ನಾಟಕ ಸರಕಾರದವರು ಪ್ರಾಚ್ಯ ದೇವಸ್ಥಾನಗಳ ಜೀರ್ಣೋದ್ಧಾರದ ಕನಸು ಹೊತ್ತು ಕಾರ್ಯತತ್ಪರರಾಗಿರುವಾಗ ಈ ಹೊಂಡದ ತಳದಲ್ಲಿ ಸಾವಿರಾರು ವರ್ಷಗಳಿಂದ ಪಾತಾಳ ಕಂಡ ಧೂಳು ಹೂಳನ್ನು ತೆಗೆದು ಅದರ ಮಧ್ಯದಲ್ಲಿರುವ ಬಾವಿಯನ್ನು ಜೀರ್ಣೋದ್ಧಾರಗೊಳಿಸಿ, ಹೊಂಡದ ಸುತ್ತಲೂ ಹತ್ತಿ ಇಳಿಯಲು ಅನುಕೂಲವಾಗುವಂತೆ ಪಾವಟಿಗೆಗಳನ್ನು ಕಟ್ಟಿದರೆ ಬಸವಕಲ್ಯಾಣದಂತಹ ಶರಣಕ್ಷೇತ್ರದ ಕೀರ್ತಿಗೆ ಕಾರಣವಾಗುತ್ತದೆ.

ಈಗಾಗಲೇ ಉಳಿದುಬಂದಿರುವ ಶರಣರ ಸ್ಥಾವರ ಅವಶೇಷಗಳನ್ನು ಶಾಸ್ರೋಕ್ತವಾಗಿ ಪುನರಚಿಸಿ ಪರಿಸರ ನಿರ್ಮಲಗೊಳಿಸಿ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಟ್ಟರೆ ಬಸವ ಕಲ್ಯಾಣ ಪೂಜನೀಯ ಕ್ಷೇತ್ರವಾದೀತು.

ಕಲ್ಯಾಣದ ಪರಿಸರ

ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ರಾಜಕವಿಗಳೆನಿಸಿದ ಬಿಲ್ಹಣ ಮತ್ತು ವಿಜ್ಞಾನೇಶ್ವರ ಕೃತಿಗಳಲ್ಲಿ, ಶರಣರ ವಚನಸಾಹಿತ್ಯದಲ್ಲಿ ವರ್ಣಿತವಾದ ಕಲ್ಯಾಣ ಇಂದು ನೋಡಿದವರಿಗೆ ಮರುಕವೆನಿಸದೇ ಇರದು. ಭಕ್ತಿಭಂಡಾರಿ ಬಸವಣ್ಣ ಕಲ್ಯಾಣವನ್ನು ಕೇಂದ್ರವಾಗಿರಿಸಿಕೊಂಡು ಇಂದು ಕೆಳಮಟ್ಟಕ್ಕೆ ಬಂದುದು ವಿಷಾದನೀಯ. ಅಂದು ಸ್ವತಃ ಬಸವೇಶ್ವರ ಪರುಷ ಗಟ್ಟೆಯ ಮೇಲೆ ಕುಳಿತು 'ದಯವೇ ಧರ್ಮದ ಮೂಲ' ಎಂದು ಜಾಗತಿಕ ತತ್ವ ಸಾರಿದ ಸ್ಥಳ ಇಂದು ಮಾಂಸ ಮಾರಾಟ ಮಾಡುವ ಸ್ಥಳವಾಗಿದೆ.

ಈಗ ಅಲ್ಲಲ್ಲಿ ದೊರಕುವ ತ್ರುಟಿತ ಅವಶೇಷಗಳಿಂದ ಹಿಂದಿನ ವೈಭವದ ಬಸವಕಲ್ಯಾಣದ ಕಲ್ಪನೆಯನ್ನು ರೂಪಿಸಿಕೊಳ್ಳಬಹುದಾಗಿದೆ. ಹಿಂದೆ ಕಲ್ಯಾಣ ಸುಮಾರು ಹತ್ತು ಮೈಲು ಉದ್ದ ನಾಲ್ಕು ಮೈಲು ಅಗಲವಾದ ವಿಶಾಲ ಸ್ಥಳವನ್ನು ಆಕ್ರಮಿಸಿತ್ತು. ಇದು ರಾಜಧಾನಿಯ ಕೇಂದ್ರಭಾಗ. ಇದರ ಆಚೆ ಈಚೆ ಉಪನಗರಗಳು ಸೈನ್ಯ ವ್ಯವಸ್ಥೆಯ ಸಾಧನಗಳೂ ಇದ್ದಿರಬೇಕು.

ಇಂದಿನ ಕಲ್ಯಾಣದ ಸುತ್ತಮುತ್ತ ಇರುವ ಹಳ್ಳಿಗಳು ಆಗ ನಗರದ ಒಂದೊಂದು ವಿಭಾಗಗಳಾಗಿದ್ದವು. ತ್ರಿಪುರಾಂತಕ, ಬಾಂದರವಾಡಿ, ಬಲಿಪುರ, ಗೋಕುಲ, ಶಿವಪುರ, ಪ್ರತಾಪಪುರ, ರಾಯಪುರ, ಅಥವಾ ರಾಯನಾರಾಯಣಪುರ ಇವೆಲ್ಲ ಇಂದು ಬೇರೆ ಬೇರೆ ವಿಭಾಗ ಗಳಾಗಿವೆ. ಇದರ ಸ್ಥಳನಾಮಗಳನ್ನು ಗಮನಿಸಿದರೆ ಪ್ರತಾಪ, ರಾಯ, ಚಕ್ರವರ್ತಿ, ರಾಯನಾರಾಯಣ ಎಂಬುವು ಚಾಲುಕ್ಯರ ಬಿರುದು ಗಳಾಗಿದ್ದು ಇಂದಿಗೂ ಐತಿಹಾಸಿಕ ಮಹತಿ ಬಿಂಬಿಸುವಂತಿವೆ.

ಒಂದು ಮೈಲು ಅಂತರದಲ್ಲಿ ಬಲಿಪುರವಿದ್ದು, ಇಲ್ಲಿ ಒಂದು ದೊಡ್ಡ ಗಂಟೆ ಇದೆ. ಮಹಾಮನೆಯ ದಾಸೋಹಕ್ಕೆ ಮುನ್ನ ಅದನ್ನು ಬಾರಿಸುತ್ತಿದ್ದಿತೆಂದು ಹೇಳುತ್ತಾರೆ. ಶಿವಪುರದಲ್ಲಿ ಕುಂತಲೇಶ್ವರ, ಸಿದ್ದೇಶ್ವರ ದೇವಸ್ಥಾನಗಳಿವೆ. ಶಿವಯೋಗಿ ಸಿದ್ದರಾಮ ಕಲ್ಯಾಣಕ್ಕೆ ಆಗಮಿಸಿದುದರ ಸ್ಮಾರಕವಾಗಿ ಸಿದ್ದೇಶ್ವರ ದೇವಸ್ಥಾನ ನಿರ್ಮಾಣವಾಗಿದೆಯಂತೆ. ಆರನೆಯ ವಿಕ್ರಮಾದಿತ್ಯನ ದಂಡನಾಯಕ ಕೊಂಡಗುಳಿ ಕೇಶಿರಾಜ ಈ ಶಿವಪುರದಲ್ಲಿ ವಾಸಿಸುತ್ತಿದ್ದನಂತೆ. ಗೋಕುಲವು ಗೋರಕ್ಷಣ ಶಾಲೆಯಾಗಿತ್ತೆಂದು ತೋರುತ್ತದೆ. ನೈರುತ್ಯದಿಕ್ಕಿನಲ್ಲಿ ಸುಮಾರು ಏಳೆಂಟು ಮೈಲು ದೂರದಲ್ಲಿ ರಾಯವಾಡಿ ಅಥವಾ ರಾಯಪುರವೆಂಬ ಗ್ರಾಮ ಹಿಂದೆ ಅರಸು ಬಿಜ್ಜಳನ ವಿಹಾರನಿವಾಸವಾಗಿದ್ದಂತಿದೆ. ಇಲ್ಲಿರುವ ಹಜಾರ ಹೊನ್ನಮ್ಮನ ಚಾವಡಿಯ ಬಳಿ ದೊರೆ ಬಿಜ್ಜಳನ ಕೊಲೆಯಾಯಿತೆಂದು ಪ್ರತೀತಿ.

ಈಗಿನ ಕಲ್ಯಾಣಕ್ಕೆ ಎರಡು ಮೈಲುಗಳ ದೂರದಲ್ಲಿ ಪೂರ್ವ ಬಲ್ಲಾಳಪುರ ಅಲ್ಲಿರುವ ಬಾಲಕುಂದಿ ಬೆಟ್ಟ ಕಲ್ಯಾಣದ ಒಂದು ಗಡಿರೇಖೆ ಎನ್ನಬೇಕು. ಇಲ್ಲಿಂದ ಉತ್ತರಕ್ಕೆ ಸುಮಾರು ೩೦ ಮೈಲು ದೂರ ಆನೆಗುಡ್ಡವಿದ್ದು ಇಲ್ಲಿ ಚಾಲುಕ್ಯರು ಆನೆಯ ಸೈನ್ಯದ ನೆಲೆಯನ್ನಾಗಿಸಿದ್ದರು. ೧೬ ಮೈಲುಗಳ ಮೇಲಿನ ಭಲಕಿ ಕುದುರೆ ಸೈನ್ಯದ ಶಿಬಿರವಾಗಿದ್ದು ಈ ಭಲಕಿಯ ಈಗ ಬಲ್ಲಹಪುರ ವಲ್ಲಭ ಪುರವೆಂದಾಗಿರುವ ಸಾಧ್ಯತೆ ಇವೆ.

ಮಡಿವಾಳ ಮಾಚಯ್ಯನ ಕೆರೆ, ಗೊಂಡಾರಣ್ಯದಂತಾದ ಬಿಲ್ವಪತ್ರಿಯ ವನ, ಕಣಕಪ್ಪಡಿ, ಅಕ್ಕನಾಗಮ್ಮನ ಗವಿ, ನೀಲಮ್ಮನ ಗವಿ, ಬಸವಣ್ಣನವರ ಅರಿವಿನ ಮನೆ, ತ್ರಿಪುರಾಂತ ಕೆರೆ. ಅಲ್ಲಲ್ಲಿ ಮುರಿದು ಮುಕ್ಕಾಗಿ ಬಿದ್ದ ಅನಾಥ ಸ್ಮಾರಕಗಳನ್ನು ಎಲ್ಲಿ ಬಸವಣ್ಣನ ಮಹಾಮನೆ, ಎಲ್ಲಿ ಶರಣರು ಕುಳಿತು ಅನುಭಾವದ ಮಥನಗೈಯುತಿದ್ದ ಅನುಭವಮಂಟಪ, ಅವುಗಳ ಕುರುಹು ಕಾಣಿಸದಷ್ಟು ಕಲ್ಯಾಣ ಹಾಳಾಗಿ ಹೋಗಿದ್ದನ್ನು ನೋಡಿದರೆ ನಮ್ಮ ಮನಸ್ಸು ಹಿಂಡಿಹೋಗುತ್ತದೆ. ಇದೆಲ್ಲವನ್ನು ನೋಡಿಯೇ ಅಂದು ಕಲ್ಯಾಣದ ರಾಜಕವಿ ಬಿಲ್ಹಣ 'ಕಲ್ಯಾಣದಂತಹ ಪಟ್ಟಣ ಹಿಂದೂ ಇಲ್ಲ ಮುಂದೂ ಇಲ್ಲ. ಎಂಬುದು ಸಾರ್ಥಕವಾದಂತೆನಿಸಿದೆ.

ಭಾಲ್ಕಿ ಕ್ಷೇತ್ರ

ಬೀದರ ಜಿಲ್ಲೆಯ ಭಾಲ್ಕಿ ಮೂಲತಃ ಶರಣಕ್ಷೇತ್ರ. ಅಸ್ಪೃಶ್ಯ ಗೃಹಸ್ಥ ಉರಿಲಿಂಗಪೆದ್ದಿಗೆ ಮಠದ ಪೀಠಾಧಿಕಾರ ನೀಡಿ ಅಧಿಪತಿಯನ್ನಾಗಿಸಿದ್ದು ಹನ್ನೆರಡನೆಯ ಶತಮಾನದ ಬಸವಧರ್ಮದ ಪರಮವೈಶಿಷ್ಟ್ಯ, ಜಾಗತಿಕ ಇತಿಹಾಸದಲ್ಲಿ ಇದೊಂದು ವಿಶಿಷ್ಟ ದಾಖಲೆಯೆನಿಸಿದೆ. ಶತಶತಮಾನಗಳಿಂದ ಎಡೆವಾಯ್ದು ಬಂದ ಅಸ್ಪೃಶ್ಯತೆ ಎಂಬ ಭೂತದ ಬೇರನ್ನು ಕಿತ್ತೆಸೆದು ಸರ್ವಸಮಾನತೆಯ ಕ್ರಿಯೆಗೆ ಒತ್ತುಕೊಟ್ಟುದು ಶರಣಧರ್ಮ. ಬಸವಣ್ಣನವರ ಕಲ್ಯಾಣ ಕ್ರಾಂತಿ ಕೇವಲ ಘೋಷಣೆಯಾಗದೇ ಕ್ರಿಯಾತ್ಮಕ ಹೋರಾಟವೆನಿಸಿತು. ಅನುಭವ ಮಂಟಪವೆಂಬ ನಿತ್ಯ ನೂತನ ಸಂಸ್ಥೆ ಪ್ರಾರಂಭಿಸಿ ತನ್ಮೂಲಕ ನೂತನ ಸಮಾಜ ರೂಪಿಸಿಕೊಟ್ಟ ಶ್ರೇಯಸ್ಸು ಬಸವಾದಿ ಶರಣರದು.

ಕ್ಷೇತ್ರ ಮಹತ್ವ

ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಕಂದಹಾರ ಉರಿಲಿಂಗ ದೇವರ ಮಠದಿಂದ ಪ್ರಸಿದ್ಧವಾದ ಪ್ರದೇಶವಾಗಿತ್ತು. ಅಂದು ಉರಿಲಿಂಗದೇವರ ಖ್ಯಾತಿ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಹಬ್ಬಿ ಹರಡಿತ್ತು. ಇಂದಿಗೂ ಬಸವಕಲ್ಯಾಣ, ಭಾಲ್ಕಿ, ಕೊಡ್ಲ, ಬೇವಿನ ಚಿಂಚೋಳಿ ಪ್ರದೇಶಗಳಲ್ಲಿ ಉರಿಲಿಂಗಪೆದ್ದಿ ಮಠಗಳಿವೆ. ಉರಿಲಿಂಗಪೆದ್ದಿಯವರ ಪರಂಪರೆಯಲ್ಲಿ ಮುಂದೆ ವಿಶ್ವೇಶ್ವರಪೆದ್ದಿ, ಸದಾಶಿವದೇವರು, ಸಂಹಿತೆಯ ಕಾಳಿದಾಸಭಟ್ಟರು, ಸರ್ವೆಶ್ವರ ದೇವರು, ಪ್ರಣಮಿ ದೇವರು, ಈಶಾನದೇವರು, ಮೌನಿದೇವರು, ಚೆನ್ನಸೋಮೇಶ್ವರ ಬಾಗೆಯ ಬಂಕನಾಥದೇವರು, ಶಂಕರದೇವರು, ಗಂಗಾಧರದೇವರು, ಪುರಾಣದ ಮಾಯಿದೇವಪಂಡಿತರು, ಮಹಾಲಿಂಗದೇವರು, ಕುಮಾರ ಬಂಕನಾಥದೇವರು, ಭಕ್ತಿಭಂಡಾರಿ ಜಕ್ಕಣ್ಣ ಹೀಗೆ ಅನೇಕ ಶರಣರು ಈ ಪರಂಪರೆಯಲ್ಲಿ ಬೆಳಗಿರುವರು, ಏಕೋತ್ತರ ಶತಸ್ಥಲ ಕೃತಿ ಇವರನ್ನೆಲ್ಲ ಹೆಸರಿಸಿದೆ.

ಪರಿವಿಡಿ (index)
Previous ಸೊಲ್ಲಾಪುರ ಕೂಡಲ ಸಂಗಮ Next