Previous ಬೈಲಹೊಂಗಲ ಕಿತ್ತೂರು ಸಂಸ್ಥಾನ Next

ನಾಗನೂರು

ನಾಗನೂರು ಕ್ಷೇತ್ರ

ನಾಗನೂರು ಬೈಲಹೊಂಗಲ ಪ್ರದೇಶದಿಂದ ೬ ಮೈಲು ಅಂತರ ದಲ್ಲಿದೆ. ಇಲ್ಲಿ ಶರಣ ಸಿದ್ದರಾಮ ಸ್ವಾಮಿಗಳ ಗದ್ದುಗೆ ಇದೆ. ಇಲ್ಲಿಯ ವಿರಕ್ತಮಠದ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳವರು ಪ್ರಾಣ ಲಿಂಗಪೂಜಕರು. ಅವರ ತಪೋಬಲದಿಂದ ಬಡ ವಿದ್ಯಾರ್ಥಿಗಳಿಗೆ ಬೈಲಹೊಂಗಲ ಬೆಳಗಾವಿ ಬೆಂಗಳೂರುಗಳಲ್ಲಿ ಪ್ರಸಾದನಿಲಯ ಶಿವಯೋಗ ಮಂದಿರ, ಘಟಪ್ರಭೆಯ ಜೆ.ಜೆ. ಆಸ್ಪತ್ರೆ, ಕಿತ್ತೂರು ಚೆನ್ನಮ್ಮ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿಯೂ ಪೂಜ್ಯರು ಸೇವೆ ಸಲ್ಲಿಸಿರುವರು.

ಪೂಜ್ಯರ ಸಮಾಜಸೇವೆಯಿಂದ ನಾಗನೂರು ರುದ್ರಾಕ್ಷಿಮಠವು ಪುಣ್ಯಕ್ಷೇತ್ರವಾಗಿದೆ. ಇಂದು ಪೂಜ್ಯರು ಹಾಕಿಕೊಟ್ಟ ಅನುಪಮ ಸಮಾಜಸೇವೆಯನ್ನು ಪ್ರಭುಸ್ವಾಮಿಗಳವರು ಮುಂದುವರೆಸಿರುವರು.

ಬೈಲಹೊಂಗಲ ತಾಲ್ಲೂಕಿನ ಮುರಕಿಭಾವಿ ಶರಣಕ್ಷೇತ್ರವೆಂದು ರುದ್ರಾಕ್ಷಿ ಮಠದ ಲಿಂಗೈಕ್ಯ ಶ್ರೀ ಶಿವಬಸವ ಸ್ವಾಮಿಗಳು ಗಮನಿಸಿದ್ದರು. ವಿ.ಜಿ. ಪಾಟೀಲ ಎಂಬವರು ಹಿಂದೆ ಶಿವಾನುಭವ ಪತ್ರಿಕೆ ಯಲ್ಲಿ 'ಮುರಕಿಭಾವಿಯಲ್ಲಿ ಮಹತ್ವದ ಶೋಧ'ವೆಂಬ ಲೇಖನ ಪ್ರಕಟಪಡಿಸಿರುವರು. ಶರಣಸಮೂಹ ಚೆನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿಗೆ ಪ್ರಯಾಣ ಬೆಳಸಿದಾಗ ಅವರು ಬಹುಶಃ ಬೈಲಹೊಂಗಲ ತಾಲ್ಲೂಕಿನ ಮುರಕಿಭಾವಿಯ ಮುಖಾಂತರ ಮುಂದುವರೆದಿರಬೇಕು. ಮುರಕಿಭಾವಿಯ ಒಂದು ಮೊರಡಿಯನ್ನು ಇಂದಿಗೂ ಕಲ್ಯಾಣದ ಶರಣರ ಮರಡಿ ಎಂದೇ ಕರೆಯುತ್ತಿದ್ದು ಅಲ್ಲಿರುವ ಪತ್ರಿಗಿಡದ ಕೆಳಗೆ ಕುಳಿತ ಒಂದು ಎದ್ದು ನಿಂತ ಸ್ತ್ರೀವಿಗ್ರಹ ಅವುಗಳ ಸಮೀಪ ಒಂದು ಭಾವಿ ಮತ್ತು ಪಾದುಕೆಗಳ ಗುರುತಿರುವ ಶಿಲ್ಪವಿದೆ. ಕಾಲಜ್ಞಾನ ವಚನದ ಪ್ರಕಾರ ಅಕ್ಕನಾಗಮ್ಮನವರು ಕುಳಿತು ಹೊರಟ ಪಲ್ಲಕ್ಕಿಯ ದಂಡಿಗೆ ಈ ಸ್ಥಳದ ಭಾವಿಯ ಬಳಿ ಮುರಿಯಿತಂತೆ. ಅದರಿಂದಾಗಿ ಇಲ್ಲಿಯ ಊರಿಗೆ ಮುರಕಿಭಾವಿ ಎಂಬ ಹೆಸರು ಬಂದಿದೆ. ಅಲ್ಲಿಂದ ಅರ್ಧ ಮೈಲು ದೂರದಲ್ಲಿ ಗಾಳಿಮರಡಿ ಇದ್ದು ಅದರ ಮೇಲೆ ಒಂದು ವೀರಭದ್ರ ದೇವಾಲಯವಿದೆ. ಆ ದೇವಾಲಯ ದಲ್ಲಿರುವ ವಿಗ್ರಹ ಮಡಿವಾಳ ಮಾಚಯ್ಯನವರದಾಗಿದ್ದು ಸ್ತ್ರೀಮೂರ್ತಿ ಶಿಲ್ಪಗಳೆರಡೂ ರುದ್ರಾಕ್ಷಿ ಧರಿಸಿ ಎಡಗೈಯಲ್ಲಿ ಲಿಂಗ ಬಲಗೈಯಲ್ಲಿ ಜಪಮಾಲೆ ಧರಿಸಿವೆ. ಕುಳಿತ ವಿನ್ಯಾಸದಲ್ಲಿರುವ ಶಿಲ್ಪ ಬಹುಶಃ ಅಕ್ಕನಾಗಮ್ಮನವರದಾಗಿದ್ದು. ಅಕ್ಕನಾಗಮ್ಮನ ಜೊತೆಗೆ ಆಗಮಿಸಿದ ಬೇರೆ ಯಾವದೋ ಶರಣೆಯ ವಿಗ್ರಹ ಇದಾಗಿರುವ ಸಾಧ್ಯತೆ ಇದೆ. ಹೀಗಾಗಿ ಮುರಕಿಭಾವಿ ಇಂದಿಗೂ ಶರಣಕ್ಷೇತ್ರವಾಗಿ ಮೆರೆಯುತ್ತಿದೆ.

ಪರಿವಿಡಿ (index)
Previous ಬೈಲಹೊಂಗಲ ಕಿತ್ತೂರು ಸಂಸ್ಥಾನ Next