ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ :👈 👉:ಹುಂಜಿನ ಕಾಳಗದ ದಾಸಯ್ಯ

ಹಾವಿನಾಳ ಕಲ್ಲಯ್ಯ

ಹೆಸರು: ಹಾವಿನಹಾಳ ಕಲ್ಲಯ್ಯ
ಕಾಲ: ಕ್ರಿ.ಶ. ೧೧೬೦
ತಂದೆ ಶಿವನಯ್ಯ
ತಾಯಿ: ಸೋಮವ್ವೆ
ಅಂಕಿತ: ಮಹಾಲಿಂಗ ಕಲ್ಲೇಶ್ವರ
ಕಾಯಕ: ಅಕ್ಕಸಾಲಿಗ, ಚಿನ್ನ ಬೆಳ್ಳಿ ಮುಂತಾದ ಲೋಹದಿಂದ ಒಡವೆಗಳನ್ನು ಮಾಡುವ ಅಕ್ಕಸಾಲೆ
Havinahala Kallayya, ಹಾವಿನಹಾಳ ಕಲ್ಲಯ್ಯ

೧೦೯೭
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ
ಇದೇ ದೃಷ್ಟ.
ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು :
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು,
ಕಡಿದು ಹಂಚಿ ತಿಂದರಂದು ಗೋಮಾಂಸವ.
ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು,
ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು,
ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು,
ತಿನಕಲಿತರಯ್ಯಾ.
ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್|
ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ||
ಎಂಬುದಾಗಿ,
ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ?
ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ.
`ಭರ್ಗೋ ದೇವಸ್ಯ ಧೀಮಹಿ' ಎಂಬ ದಿವ್ಯಮಂತ್ರವನೋದಿ,
ನಿರ್ಬುದ್ಧಿಯಾದಿರಿ.
ಶಿವಪಥವನರಿಯದೆ ಬರುದೊರೆವೋದಿರಿ.
ಆದಡೀ ನರಕಕ್ಕೆ ಭಾಜನವಾದಿರಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು.

ಅಕ್ಕಸಾಲಿಗ ಮನೆತನಕ್ಕೆ ಸೇರಿದ ಈತನ ಜನ್ಮಸ್ಥಳ ವಿಜಾಪುರ ಜಿಲ್ಲೆಯ ಹಾವಿನಾಳು ಅಲ್ಲಿನ ಕಲ್ಲಿನಾಥ ಆರಾಧ್ಯದೈವ. ತಂದೆ-ಶಿವನಯ್ಯ, ತಾಯಿ-ಸೊಮವ್ವೆ. ಕಾಲ-೧೧೬೦. ಹರಿಹರನ ರಗಳೆಯಲ್ಲಿ ಈತ ಸತ್ತ ಸರ್ಪವನ್ನು ಬದುಕಿಸಿದ, ನಾಯಿಯಿಂದ ವೇದವನ್ನು ಓದಿಸಿದ, ಪರಕಾಯ ಪ್ರವೇಶಮಾಡಿದ ಎಂಬ ಪವಾಡಾತ್ಮಕ ಘಟನೆಗಳು ಉಕ್ತವಾಗಿವೆ. ರೇವಣಸಿದ್ಧ, ರುದ್ರಮುನಿ, ಸಿದ್ಧರಾಮರ ಸಂಪರ್ಕದಿಂದ ಶರಣನಾದ ಈತ, ಕಲ್ಯಾಣಕ್ಕೆ ಬಂದು ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಿದ. ಕಲ್ಯಾಣಕ್ರಾಂತಿಯ ನಂತರ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿಯೇ ಐಕ್ಯನಾದ. ಈತನ ಸಮಾಧಿ ಸಿದ್ಧರಾಮೇಶ್ವರ ದೇವಾಲಯದ ಪ್ರಾಕಾರದಲ್ಲಿದೆ.

ಶರಣ ಹಾವಿನಹಾಳ ಕಲ್ಲಯ್ಯನಿಗೆ ಸಂಬಂಧಿಸಿದಂತೆ ಎರಡು ನೆಲೆಗಳು ಉಲ್ಲೇಖಿತವಾಗುತ್ತವೆ. ವಿಜಾಪುರದ ಬಳಿಗೆ ಇರುವ ಹಾವಿನ ಹಾಳವು ಒಂದಾದರೆ; ಇನ್ನೊಂದು ಕಲಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಹಾವಿನ ಹಾಳ ಗ್ರಾಮ ಎರಡೂ ಸ್ಥಳಗಳಲ್ಲಿಯೂ ಕಲ್ಲಿನಾಥನ ದೇವಾಲಯಗಳಿವೆ. ಕಲ್ಲಯ್ಯನ ಆರಾಧ್ಯ ದೇವರು ಕಲ್ಲಿನಾಥ, ಸಗರನಾಡು ಶಿವಶರಣರ ಕಣಜವಾಗಿದ್ದರಿಂದ, ಕಲ್ಲಯ್ಯ ಕಲಬುರ್ಗಿ ಜಿಲ್ಲೆಯಲ್ಲಿ ಬರುವ ಹಾವಿನ ಹಾಳ ಗ್ರಾಮದವನೇ ಆಗಿರುವ ಸಂಭವ ಹೆಚ್ಚು.

ಸೊನ್ನಲಿಗೆಯ ಶಿವಯೋಗಿ ಸಿದ್ಧರಾಮನ ಪರಮ ಶಿಷ್ಯ ಮತ್ತು ಆಪ್ತಭಂಟ ನಾಗಿ ಕಲ್ಲಯ್ಯ ಅಲ್ಲಿ ತನ್ನ ಹೆಚ್ಚಿನ ಜೀವನವನ್ನು ಕಳೆದಿದ್ದಾನೆ. ಸೊನ್ನಲಿಗೆಯಲ್ಲಿರುವ ಅಕ್ಕಸಾಲಿಗ ಕಾಯಕದಿಂದ ಶರಣ ಜೀವನ ನಿರ್ವಹಿಸುತ್ತಿದ್ದ ಈ ಶರಣನು ಕೆಲವು ಕಾಲ ಕಲ್ಯಾಣದ ಶರಣರ ಸಂಗದಲ್ಲಿಯೂ ಅನುಭಾವ ಸಾಧನೆ ಮಾಡಿರುವ ಸಾಧ್ಯತೆಯಿದೆ.

ಹಾವಿನಹಾಳ ಕಲ್ಲಯ್ಯ ವೇದಗಳನ್ನು ಎಲ್ಲರೂ ಓದಬಹುದೆಂದು ಸಾರಿದ ದಿಟ್ಟ ಶರಣ. ಅವನು ತನ್ನ ನಾಯಿಯ ಮುಖದಿಂದ ವೇದ ಓದಿಸಿದಂತೆ ಕತೆ ಬರುತ್ತದೆ.

ಕಲ್ಲಯ್ಯನು ಹಾವಿನ ಹಾಳ ಬಿಟ್ಟು ಸೊನ್ನಲಿಗೆಗೆ ಹೋಗುವುದಕ್ಕೆ ಅವನು ಮಾಡುತ್ತಿದ್ದ ಅಕ್ಕಸಾಲಿಗ ವೃತ್ತಿಯೇ ಕಾರಣವಾಗುತ್ತದೆ. ಒಂದು ಸಲ ಊರಿನ ಶ್ರೀಮಂತ ಒಡವೆ ಮಾಡಲು ಕಲ್ಲಯ್ಯನಿಗೆ ಬಂಗಾರ ಕೊಟ್ಟನು. ಬಂಗಾರವನ್ನು ಕರಗಿಸುವಾಗ, ಅದರ ಕಾಳಿಕೆ ಹೋಗಿ ಒಂದಿಷ್ಟು ಕಡಿಮೆಯಾಯಿತು. ಅಕ್ಕಸಾಲಿಗ ಕಲ್ಲಯ್ಯನೇ ಬಂಗಾರವನ್ನು ಕದ್ದಿರಬೇಕೆಂದು ಶ್ರೀಮಂತನು ಸಂಶಯಗೊಂಡನು. ಶ್ರೀಮಂತನ ಸಂಶಯವು ಕಲ್ಲಯ್ಯನಿಗೆ ಅರ್ಥವಾಯಿತು. ಸಂಶಯವನ್ನು “ಉಂಟುಮಾಡುವ ವೃತ್ತಿಯೇ ಬೇಡವೆಂದು' ಅಕ್ಕಸಾಲಿಗ ವೃತ್ತಿಯನ್ನು ಬಿಟ್ಟು; ಕಲ್ಲಯ್ಯ ತನ್ನ ತಂದೆ-ತಾಯಿ ಶಿವನಯ್ಯ-ಸೋಮವ್ವಯರನ್ನೂ ಬಿಟ್ಟು, ವೈರಾಗ್ಯ ತಾಳಿ ಶಿವಯೋಗಿ ಸಿದ್ಧರಾಮನ ಸನ್ನಿಧಿಗೆ ಹೋದನು.

ಶಿವಯೋಗಿ ಸಿದ್ಧರಾಮನು ತಾನು ಲಿಂಗೈಕ್ಯನಾಗುವಾಗ ಸೊನ್ನಲಿಗೆ ಸುಕ್ಷೇತ್ರದ ಜವಾಬ್ದಾರಿಯನ್ನು ಕಲ್ಲಯ್ಯ ಶರಣನಿಗೆ ನಿರ್ವಹಿಸಿದಂತೆ ತಿಳಿದು ಬರುತ್ತದೆ. ಸಿದ್ಧರಾಮನ ಶಿಷ್ಯ ಪರಂಪರೆಯಲ್ಲಿ ಒಬ್ಬರಾಗಿದ್ದ ಸ್ತ್ರೀಯನ್ನು ಕಲ್ಲಯ್ಯ ಮೋಹಿಸಿ ಮದುವೆಯಾದನು. ಈ ಶರಣದಂಪತಿಗಳಿಂದ ಕಲ್ಲವೆಯೆಂಬ ಮಗಳು ಜನಿಸಿದಳು.

ತನ್ನ ಜೀವನ ಪೂರ್ತಿಯೆಲ್ಲ ಕಲ್ಲಯ್ಯ ಸೊನ್ನಲಿಗೆಯಲ್ಲಿ ಕಳೆದು ಅಲ್ಲಿಯೇ ಲಿಂಗೈಕ್ಯನಾದನು. 'ಮಹಾಲಿಂಗ ಕಲ್ಲೇಶ್ವರ' ಎಂಬುದು ವಚನಾಂಕಿತವಾಗಿದೆ. 'ಮಹಾಲಿಂಗ ಕಲ್ಲೇಶ್ವರ' ಅಂಕಿತದಲ್ಲಿ ಈತ ರಚಿಸಿದ ೧೦೬ ವಚನಗಳು ದೊರೆತಿದ್ದು, ಅವುಗಳಲ್ಲಿ ಭಕ್ತಿನಿಷ್ಠೆ, ಶರಣತತ್ವ ವಿವೇಚನೆ, ಪರಮತ ಖಂಡನೆ, ನೀತಿ ಭೋಧೆ, ಆತ್ಮನಿರೀಕ್ಷಣೆ, ಶರಣಸ್ತುತಿ ಮೊದಲಾದವು ಪ್ರತಿಪಾದನೆಗೊಂಡಿವೆ. ಅಷ್ಟಾವರಣ, ಲಿಂಗಾಂಗ ಸಾಮರಸ್ಯ, ಶಿವಭಕ್ತಿ, ಶಿವಶರಣರ ನಿಷ್ಠೆ, ನಿಷ್ಕಾಮ ಸೇವೆ, ಅನುಭಾವ - ಇವೇ ಮೊದಲಾದ ವಿಷಯಗಳ ಪ್ರಸ್ತಾಪ ವಚನಗಳಲ್ಲಿ ಬಂದಿವೆ

ಕುರುಗೋಡಿನ ಸ್ವಯಂಭು ಬಸವೇಶ್ವರ ಪ್ರಾಚೀನ ವಿಗ್ರಹ. ಅದರ ಕುರುಹಿನ + ಕೋಡು = ಕುರುಗೋಡು ಎನಿಸಿದೆ. ಕ್ರಿ.ಶ. ೧೨ನೆಯ ಶತಮಾನದ ಶರಣ ಹಾವಿನಹಾಳ ಕಲ್ಲಯ್ಯನ ಉಲ್ಲೇಖವನ್ನೊಳಗೊಂಡ ಶಾಸನ ಕಶ್ವರ ಗುಡಿಯಲ್ಲಿದೆ. ಕಲ್ಯಾಣ ಕ್ರಾಂತಿಯನಂತರವೂ ಹಾವಿನಹಾಳ ಕಲ್ಲಯ್ಯ ಬದುಕಿರಬಹುದೆಂಬುದು ವಿದ್ವಾಂಸರ ಅಭಿಪ್ರಾಯ. ಕಲ್ಯಾಣದ ವಿಪ್ಲವದ ತರುವಾಯ ಕಲ್ಯಾಣ ತ್ಯಜಿಸಿದ ಶರಣ ಪರಮಭಕ್ತರಾದ ಕುರುಗೋಡ ರಾಜರ ಆಶ್ರಯಕ್ಕೆ ಬಂದಿರಬೇಕು. ಚೆನ್ನಬಸವಪುರಾಣ ದಲ್ಲಿ ಶ್ವಾನನಿಂದ ವೇದವನ್ನೋದಿಸಿ ವಿಪ್ರರ ಬಾಯಿ ಮುಚ್ಚಿಸಿದ ಶರಣ ಹಾವಿನಹಾಳ ಕಲ್ಲಯ್ಯ, ವಿಜಾಪುರದಿಂದ ವಾಯುವ್ಯಕ್ಕೆ ೩೬ ಮೈಲು ದೂರದಲ್ಲಿರುವ ಹಾವಿನಹಾಳ ಗ್ರಾಮ ಈತನದು. ಅಕ್ಕಸಾಲಿಗ ವೃತ್ತಿಯಲ್ಲಿ ನಿಪುಣನಾದ ಈತ, ರುದ್ರಮುನಿಗಳಿಂದ ದೀಕ್ಷೆ ಹೊಂದಿ ಪ್ರತಿನಿತ್ಯ ಕಶ್ವರ ಗುಡಿಗೆ ಹೋಗಿ ಆರಾಧ್ಯದೈವ ಪೂಜಿಸುವ ಪರಿಪಾಠ ಹೊಂದಿದ್ದ. ಅಲ್ಲದೆ 'ಮಹಾಲಿಂಗ ಕಲ್ಲೇಶ್ವರ' ಅಂಕಿತ ವಚನ ರಚಿಸಿದ್ದು, ಸಿಂದ ಮನೆತನದ ಬಗೆಗೆ, ಅಂದಿನ ಸಾಂಸ್ಕೃತಿಕ ಬದುಕಿನ ಬಗ್ಗೆ, ದೊರೆ ರಾಚಮಲ್ಲನ ಉದಾರ ಮನೋಭಾವದ ಬಗ್ಗೆ ಮಹತ್ತರ ವಿಷಯ ವಿವೇಚಿಸಿದ್ದಾನೆ.

೧೧೭೭
ವೇದವನೋದಿದಡೇನು ? ಶಾಸ್ತ್ರಪುರಾಣಾಗಮಂಗಳ ಕೇಳಿದಡೇನು ?
ಗುರುಕಾರುಣ್ಯವಿಲ್ಲದವನು ಲಿಂಗವ ಮುಟ್ಟಿ ಪೂಜಿಸಲಾಗದು.
ಜಪತಪಧ್ಯಾನ ವಿಭೂತಿ ರುದ್ರಾಕ್ಷಿಯ ಧರಿಸಿದಡೇನು ?
ಅವನು ಪಂಚಮಹಾಪಾತಕನು, ಅವನ ಮುಖವ ನೋಡಲಾಗದು.
ಇದನರಿದು ಗುರುಕರುಣವಿಡಿದು ಮಾಡುವ ಪೂಜೆಯೇ ಶಿವಂಗೆ ಪ್ರೀತಿ.
ಇದನರಿಯದೆ ಗುರುಕರುಣವಿಲ್ಲದವ ಶಿವಲಿಂಗಪೂಜೆಯ ಮಾಡಿದನಾದಡೆ,
ಅಘೋರನರಕ ತಪ್ಪದು, ಮಹಾಲಿಂಗ ಕಲ್ಲೇಶ್ವರಾ.


೧೧೮೪
ಶ್ರೀಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ,
ಹಸ್ತಮಸ್ತಕಸಂಯೋಗಕಾಲದಲ್ಲಿ,
ಪಂಚಕಳಶದ ನಿರ್ಮಲ ಜಲವ ತನ್ನ ಕರುಣ ಜಲವ ಮಾಡಿ,
ಆತನ ಜನ್ಮದ ಮೇಲಿಗೆಯ ಕಳೆಯಲು,
ತಾ ನಿರ್ಮಲನಾಗಿ ಲಿಂಗವ ಗ್ರಹಿಸಿದಲ್ಲಿ,
ಲಿಂಗಕ್ಕೆ ಮಜ್ಜನಕ್ಕೆರೆಯತೊಡಗಿ, ಮಜ್ಜನೋದಕವನರಿದೆ.
ಲಿಂಗಸ್ಪರುಶನದಿಂದ ಪಾದೋದಕವನರಿದೆ.
ಲಿಂಗಾರ್ಪಿತ ಭೋಗೋಪಭೋಗದಲ್ಲಿ ಅರ್ಪಿತ ಪ್ರಸಾದೋದಕವನರಿದೆ.
ಅರಿದು, ಅನ್ಯೋದಕವ ಮರದು, ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ,
ಮಹಾಲಿಂಗ ಕಲ್ಲೇಶ್ವರಾ.

೧೧೫೯
ಬರಿಯಜ್ಞಾನಿಗಳಾದವರು ಅಂಗದ ಬಲದಲ್ಲಿ ನುಡಿವರು.
ಲಿಂಗಾನುಭಾವಿಗಳು ಲಿಂಗದ ಬಲದಲ್ಲಿ ನುಡಿವರು.
ಜ್ಞಾನಿಗಳಲ್ಲದ ಸುಜ್ಞಾನಿಗಳಲ್ಲದವರು,
ಗಂಡನಿಲ್ಲದ ಮುಂಡೆಯರು, ಹಲಬರನುರುವಂತೆ,
ಹಿಂದನರಿಯದೆ ನುಡಿವರು, ಮುಂದನರಿಯದೆ ಅನುಭಾವವ ಮಾಡುವರು.
ಸದ್ಭಕ್ತರ ನುಡಿಗಳು ಲಿಂಗದ ನುಡಿಗಳು.
ಬರಿಯಜ್ಞಾನಿಗಳ ನುಡಿಗಳು ಗಾಳಿಯ ಶಬ್ದಂಗಳು.
ಮತಿಗೆಟ್ಟು, ಅವಗತಿಯಲ್ಲಿ ಕಾಲೂರಿ, ಆಯತಗೆಟ್ಟು
ನಾಯನಡೆಯಲ್ಲಿ ನಡೆವರು.
ಅವರು ಅನುಭಾವಿಗಳಪ್ಪರೇ ? ಅಲ್ಲಲ್ಲ.
ಆದೆಂತೆಂದಡೆ :
ಸುಜ್ಞಾನಿಗಳಾದಡೆ, ಕಾಮವೆ ಪ್ರಾಣವಾಗಿಹರೆ ? ಅನ್ನವೆ ಜ್ಞಾನವಾಗಿಹರೆ ?
ವರುಣನ ಹೊದಿಕೆಯನೆ ಹೊದೆದು,
ಚಂದ್ರಮನ ತೆರೆಯಲೊರಗಿ,
ಪರದಾರಕ್ಕೆ ಕೈಯ ನೀಡುವರೆ, ಶರಣಾಗುವರೆ ?
ಇಂತವರಲ್ಲಯ್ಯ ನಮ್ಮ ಶರಣರುಗಳು.
ಇವರುಗಳು ಪಾತಕಿಗಳು, ಆಸೆಯ ಸಮುದ್ರರು,
ಅಂಗಶೃಂಗಾರಿಗಳು, ಭವಭಾರಿ ಜೀವಿಗಳು.
ಇವರೆಂತು ಸರಿಯಪ್ಪರಯ್ಯ, ಲಿಂಗಾನುಭವಿಗಳಿಗೆ ?
ಸರ್ವಾಂಗಲಿಂಗಿಗಳಾಗಿರ್ದ ಮಹಾನುಭಾವಿಗಳ ನಿಲುವನು,
ಮಹಾಲಿಂಗ ಕಲ್ಲೇಶ್ವರ ಬಲ್ಲನಲ್ಲದೆ, ತೂತಜ್ಞಾನಿಗಳೆತ್ತ ಬಲ್ಲರಯ್ಯ.

ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ :👈 👉:ಹುಂಜಿನ ಕಾಳಗದ ದಾಸಯ್ಯ