Previous ಎಣ್ಣೆ ಹೊಳೆ ಶ್ರೀ ಅಲ್ಲಮ ಪ್ರಭು ಗಿರಿ (ಅಲ್ಲಮ ಪ್ರಭು ಡೋಂಗರ್‌) ಅಳತೆ, ಮಹಾರಾಷ್ಟ್ರ Next

ಮಲೆ ಮಹಾದೇಶ್ವರ ಬೆಟ್ಟ

*

ಮಹಾದೇಶ್ವರ (ಮಾದೇಶ್ವರ) ಬೆಟ್ಟ

Maleya Mahadeshwara, Maleya Maadeshwara

ಮಹಾದೇಶ್ವರ (ಮಾದೇಶ್ವರ) ಬೆಟ್ಟವು ಕರ್ನಾಟಕದ ದಕ್ಷಿಣ ಭಾಗದ ಪೂರ್ವ ಘಟ್ಟಗಳ ಮಧ್ಯದಲ್ಲಿ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ ೮೦ ಕಿಲೋ ಮೀಟರು ದೂರದಲ್ಲಿರುವ ಶ್ರೀ ಮಹಾದೇಶ್ವರ (ಮಾದೇಶ್ವರರ) ಕ್ಷೇತ್ರ. ಮಾದೇಶ್ವರರು ಲಿಂಗೈಕ್ಯವಾಗಿರುವ ಸ್ಥಾನವಾದ ಗದ್ದುಗೆ ಇರುವ ಜಂಗಮಕ್ಷೇತ್ರ. ಅದು ಮಾದೇಶ್ವರರ ತಪೋನುಷ್ಠಾನಗಳಿಂದ ಪಾವನವಾದ ಮಹಾಕ್ಷೇತ್ರವೆಂದು ಪರಿಗಣಿತವಾದ ಜಾಗೃತಸ್ಥಾನ. ಅಂತಹ ಕ್ಷೇತ್ರದಲ್ಲಿ ಮದ್ಯಪಾನ, ಮಾಂಸಾಹಾರ, ಪ್ರಾಣಿಬಲಿ, ಅನೈತಿಕ ಚಟುವಟಿಕೆಗಳು ನಿಷಿದ್ಧ.

ಸುಮಾರು ೧೪ನೇಯ ಶತಮಾನದ ಮಲೆ ಮಾದೇಶ್ವರರು ಬಸವ ಪಥದಲ್ಲಿ ನಡೆದ ಶುದ್ಧ ಶರಣಮಾರ್ಗಿಗಳೂ, ಕ್ರಾಂತಿಕಾರಿ ಧರ್ಮಪ್ರಸಾರಕರೂ, ವೈರಾಗ್ಯ ಸಂಪನ್ನರೂ, ಕನ್ನಡಿಗರೂ, ಏಕದೇವೋಪಾಸಕರೂ, ಮಹಾಮಹಿಮರೂ, ಐತಿಹಾಸಿಕ ಮಹಾಪುರುಷರೂ ಆಗಿದ್ದಾರೆ. ಅಲ್ಲಮಪ್ರಭುದೇವ, ಚೆನ್ನಬಸವಣ್ಣ, ಸಿದ್ಧರಾಮ, ಅನಾದಿಗಣನಾಥ, ಆದಿಗಣೇಶ್ವರರಂತಹ ಉಜ್ವಲ ಗುರುಪರಂಪರೆಯನ್ನು, ನಿರಂಜನಸ್ವಾಮಿ, ಜ್ಞಾನಾನಂದಸ್ವಾಮಿಗಳಂತಹ ಶಿಷ್ಯ ಪರಂಪರೆಯನ್ನೂ ಹೊಂದಿದವರು.

ಮಾದೇಶ್ವರರು ಶ್ರೀಶೈಲದ ಕಡೆಯಿಂದ ಬಂದು, ಸುತ್ತೂರಿನಲ್ಲಿದ್ದು, ಕುಂತೂರಿಗೆ ಬಂದಾಗ, ಗುರು ಬಸವಣ್ಣನವರು ಸ್ಥಾಪಿಸಿ, ಅಲ್ಲಮಪ್ರಭುದೇವರ ಅಧ್ಯಕ್ಷತೆಯಿಂದ ಪ್ರಾರಂಭವಾದ, ಶೂನ್ಯಪೀಠದ ಆರನೇಯ ಜಗದ್ಗುರುವಾಗಿ ಅಧಿಕಾರ ಹೊಂದಿದರು. ನಂತರ ಧರ್ಮಪ್ರಸಾರ ಕಾರ್ಯವನ್ನು ಮುಂದುವರಿಸಲು ಶೂನ್ಯಪೀಠದ ಅಧಿಕಾರವನ್ನು ಏಳನೇಯ ಜಗದ್ಗುರು ನಿರಂಜನಸ್ವಾಮಿಯವರಿಗೆ ಅನುಗ್ರಹಿಸಿ, ಶಿಷ್ಯ ಸಂಗಪ್ಪನವರ ಜತೆ, ಏಳು ಮಲೆಯ ಮಧ್ಯದ ನಡುಮಲೆಗೆ ಬಂದರು. ಅಲ್ಲಿ ಧ್ಯಾನ ತಪಸ್ಸು ಮಾಡಿ, ಆ ಕಾಡು ಜನರಿಗೆ ಅಹಿಂಸಾ ತತ್ವ ಹೇಳಿ, ಕೃಷಿ ಕಾಯಕ ಕಲಿಸಿ, ಅವರನ್ನು ಸಸ್ಯಾಹಾರಿಗಳನ್ನಾಗಿ ಪರಿವರ್ತಿಸಿ, ಅವರ ಉದ್ಧಾರಕ್ಕಾಗಿ ಸಾಲೂರು ಮಠ ಸ್ಥಾಪಿಸಿ, ದಾಸೋಹ ನಡೆಯಿಸಿ, ದೇವರನ್ನು ಶರಣರು ಲಿಂಗ ಎಂದು ಕರೆದಿರುವುದನ್ನು ತಿಳಿಸಿ, ಅಷ್ಟಾವರಣ, ಪಂಚಾಚಾರ, ಷಟಸ್ಥಲ ಮುಂತಾದ ಲಿಂಗಾಯತ ಧರ್ಮದ ತತ್ವಗಳನ್ನು ಉಪದೇಶಿಸಿ, ಉದ್ಯೋಗ-ಜಾತಿ-ಲಿಂಗ ಭೇದಗಳಿಲ್ಲದೆ ಸೋಲಿಗರು, ಕುರುಬರು, ಬೇಡರಿಗೆಲ್ಲ ಲಿಂಗಧಾರಣೆ ಮಾಡಿಸಿ ಧರ್ಮಸಂಸ್ಕಾರದ ಹಕ್ಕನ್ನು ಕೊಟ್ಟ ಮಹಾತ್ಮರು.

ಆಗ ಈ ಭಾಗಕ್ಕೆ ’ಬೇಡಗಂಪಣ’ ರಾಜ್ಯ ಎಂಬ ಹೆಸರಿತ್ತು. ಅದಕ್ಕೆ ರಾಯಣ್ಣ ರಾಜ ಆಲಂಬಾಡಿ ಅದರ ರಾಜಧಾನಿ. ರಾಯಣ್ಣನ ಮಗಳು ದೇವಕಿ ಅತ್ಯಂತ ಸುಂದರಿ ಅವಳನ್ನು ಬಯಸಿ ತಮಿಳುನಾಡಿನ ರಾಜನೊಬ್ಬನು ಬರಲು, ಮಾದೇಶ್ವರರ ದಿವ್ಯ ಕೃಪೆಯಿಂದ ರಾಯಣ್ಣನು ಕೊಂಗರ ಸೈನ್ಯವನ್ನು ಹಿಮ್ಮೆಟ್ಟಿಸಿ, ದೇವಕಿಯನ್ನು ರಕ್ಷಿಸಿದನು. ಈ ಜಯವು ಮಾದೇಶ್ವರರ ಮಹಿಮೆಯನ್ನು ಇನ್ನೂ ಹೆಚ್ಚಿಸಿತು. ದೇವಸ್ಥಾನದ ಸ್ವಲ್ಪ ದೂರದಲ್ಲಿ ದೇವರಪುರ ಗ್ರಾಮವಿದ್ದು, ಅಲ್ಲಿ ತಮ್ಮಡಿಗಳು ವಾಸವಾಗಿದ್ದು, ಅವರೆಲ್ಲರೂ ಲಿಂಗಾಯತರಾಗಿದ್ದಾರೆ.

ದೇವಸ್ಥಾನವು ಕೆಲವು ಶತಮಾನಗಳು ಸಾಲೂರು ಮಠದ ಸ್ವಾಮಿಗಳು ಮತ್ತು ದೇವಸ್ಥಾನದ ತಮ್ಮಡಿಗಳ ವಶದಲ್ಲಿತ್ತು.

ಮಾದೇಶ್ವರರ ಗದ್ದಿಗೆ ಶೈವಮಯವಾಗಿದೆ. ಅದರ ಸುತ್ತಲೂ ಒಂದು ಕಲ್ಲುಗೋಡೆ ಮಾತ್ರ ಇತ್ತೆಂದು, ಅಲಂಬಾಡಿ ಜುಂಜೇಗೌಡ ಗರ್ಭಗುಡಿ ಕಟ್ಟಿಸಿದರೆಂದು, ಬಂಡಳ್ಳಿಯ ಆಚಾರಿ ಮಾದೇಶ್ವರ ಲಿಂಗದ ಮುಂದೆ ವೃಷಭನನ್ನು ಸ್ಥಾಪಿಸಿದರೆಂದು ಡಾ. ಬಿ. ಶಿವಮೂರ್ತಿಶಾಸ್ತ್ರಿಯವರು ಬರೆದ ’ಶ್ರೀ ಮಾದೇಶ್ವರ ಚರಿತ್ರೆ’ ಎಂಬ ಪುಸ್ತಕದಲ್ಲಿ ಹೇಳಿದೆ. ’ವೃಷಭ’ ಎಂದರೆ ಎತ್ತು ಎಂಬ ಅರ್ಥವಿದ್ದು, ಎತ್ತು ಸಾಮಾನ್ಯ ಮಾನವನಿಗಿಂತಲೂ ಕೆಳಗಿನ ಸ್ತರದಲ್ಲಿರುವ ಜೀವಿ. ಪ್ರಾಣಿ ಪೂಜೆಯು ಲಿಂಗಾಯತ ಧರ್ಮದಲ್ಲಿ ವರ್ಜ್ಯ. ಮಾದೇಶ್ವರರ ಗದ್ದುಗೆಯಲ್ಲಿ ನಾಲ್ಕು ಕಾಲಿನ ಎರಡು ಕೊಂಬಿನ ಒಂದು ಬಾಲದ ನಂದಿಯನ್ನು ಕೂರಿಸುವುದು ಅವರಿಗೆ ಮಾಡುವ ಅಪಚಾರ. ಮಾದೇಶ್ವರರು ಮಹಾತ್ಮರಾದರೆ ಎತ್ತು ವಿಚಾರಶೂನ್ಯ ಮೂಕ ಪ್ರಾಣಿ. ಮಾದೇಶ್ವರರು ಐತಿಹಾಸಿಕ ವ್ಯಕ್ತಿ ಎಂಬುದನ್ನು ತಿಳಿಯದೆ, ಮಾದೇಶ್ವರ ಪರಂಪರೆಯನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡದೆ, ದೇವಸ್ಥಾನಗಳಲ್ಲಿ ಸ್ಥಾಪಿಸುವಂಥ ಪೌರಾಣಿಕ ಹಿನ್ನೆಲೆಯ ವೃಷಭನನ್ನು ಶರಣ ಪರಂಪರೆಯ ಮಾದೇಶ್ವರರ ಗದ್ದುಗೆಯಲ್ಲಿ ಸ್ಥಾಪಿಸಿರುವುದು ಸರಿಯಲ್ಲ.

ಮಾದೇಶ್ವರರ ಗದ್ದಿಗೆ ವೈದಿಕಮಯವಾಗಿದೆ. ಮಾದೇಶ್ವರರು ತಮ್ಮ ವ್ಯಕ್ತಿತ್ವದಿಂದ ಜನರನ್ನು ಆಕರ್ಷಿಸಿ, ಆಧ್ಯಾತ್ಮಿಕ ಜೀವನದ ಶಿಕ್ಷಣ ನೀಡಿದರೇ ಹೊರತು ದೇವಸ್ಥಾನ ಕಟ್ಟಿಸಲಿಲ್ಲ, ವಿಗ್ರಹ ನಿಲ್ಲಿಸಲಿಲ್ಲ. ದೇಹವೇ ದೇವಾಲಯವಾಯಿತು. ಇಂಥ ದೇವನಿರ್ಮಿತ ಚೈತನ್ಯವುಳ್ಳ ದೇಹದೇವಾಲಯವನ್ನು ಬಿಟ್ಟು ಮಾನವ ನಿರ್ಮಿತ ಜಡವಾದ ಕ್ಷೇತ್ರದೇವಾಲಯಕ್ಕೆ ಹೋಗುವ ಹಂಗು ಅವರಿಗೆ ಇಲ್ಲವಾಯಿತು. ಆದರೆ ಮಾದೇಶ್ವರರ ಗದ್ದಿಗೆಯನ್ನು ದೇವಸ್ಥಾನೀಕರಿಸಿ, ವೃಷಭ ಸ್ಥಾಪಿಸಿ, ಗೋಪುರಗಳನ್ನು ನಿರ್ಮಿಸಿ, ಮೂರ್ತಿಗಳನ್ನು ಕೂರಿಸಿ ದೇವಾಲಯದ ಪಶ್ಚಿಮದಲ್ಲೂ ಗೋಪುರ, ಮಹಾದ್ವಾರ, ಸ್ತಂಭಗಳನ್ನು ವಾಸ್ತುವಿನ ದೋಷ ನಿವಾರಣೆಗೆಂದು ನಿರ್ಮಿಸಿರುವುದರಿಂದ ಬಹುಪಾಲು ಜನರು ಮಾದೇಶ್ವರ ಎಂದರೆ ಶಿವನ ಒಂದು ರೂಪ ಅಥವಾ ಅವತಾರ ಎಂದು ತಿಳಿದಿದ್ದಾರೆ. ಇದರಿಂದ ಮಾದೇಶ್ವರರ ಗದ್ದುಗೆ ದೇವಸ್ಥಾನದಂತೆ ಒಂದು ಸ್ಥಾವರ ಕ್ಷೇತ್ರವಾಗಿ ಅಲ್ಲಿ ಅವರ ಪರಂಪರೆಗೆ ಹೊರತಾದ ಉತ್ಸವ ಆಚರಣೆಗಳೇ ನಡೆಯುತ್ತಿವೆ. ಇಂತಹ ಆಚರಣೆಗಳು ಅವರೊಬ್ಬ ಲಿಂಗಾಂಗಯೋಗಿ, ಶರಣ ಪರಂಪರೆಯ ಮಹಾನುಭಾವಿ ಸಮಾಜ ಸುಧಾರಕ, ಧಾರ್ಮಿಕ ಪುರುಷ ಎಂಬ ಸಂಗತಿಗಳನ್ನು ಅನುಯಾಯಿಗಳಿಗೆ ತಿಳಿಸುವುದೇ ಇಲ್ಲ.

ಮಾದೇಶ್ವರರ ಗದ್ದಿಗೆ ಗಣಪತಿಮಯವಾಗಿದೆ. ದೇವಸ್ಥಾನದ ಮಹಾದ್ವಾರದಲ್ಲಿರುವ ಗಣಪತಿಯನ್ನು ಮೈಸೂರಿನ ತಿಮ್ಮಣ್ಣಾಚಾರ್‌ ಎಂಬವರು ಸ್ಥಾಪಿಸಿದರೆಂದು ಹೇಳಲಾಗಿದೆ. ಎಲ್ಲ ಕಾರ್ಯಕ್ರಮಗಳಿಗೆ ಪ್ರಾರಂಭದಲ್ಲಿ ಗಣಪತಿಯ ಪೂಜೆ, ಪ್ರಾರ್ಥನೆ ಮಾಡಬೇಕೆಂಬ ನಂಬಿಕೆ ಸಾಂಪ್ರದಾಯಿಕ ಹಿಂದುಗಳಲ್ಲಿರುವುದು ನಿಜ. ಆದರೆ ಅದು ಬಸವ ಪರಂಪರೆಯ ಮಾದೇಶ್ವರರಿಗೆ ಅನ್ವಯಿಸುವುದಿಲ್ಲ. ಐತಿಹಾಸಿಕ ಮಹಾಪುರುಷ ಮಾದೇಶ್ವರರಿಗೂ, ವೈದಿಕ ಸಂಪ್ರದಾಯದ ಕಾಲ್ಪನಿಕ ದೈವ ಗಣಪತಿಗೂ ಯಾವುದೇ ಸಂಬಂಧವಿಲ್ಲ. ಆದರೆ ಮಾದೇಶ್ವರರ ಗದ್ದಿಗೆ-ಗರ್ಭಗುಡಿಯಲ್ಲೇ ಗಣಪತಿ ಇಟ್ಟು, ಗರ್ಭಗುಡಿಯ ದ್ವಾರದಲ್ಲಿ ಸಹ ಗಣಪತಿ ಕೆತ್ತಿಸಿ, ಗಣಪತಿಗೆ ಬೆಳ್ಳಿಯ ಕವಚವನ್ನೂ ತೊಡಿಸಿ, ಮುಖಮಂಟಪದಲ್ಲಿಯೂ ಗಣಪತಿ ಸ್ಥಾಪಿಸಿರುವುದು ನ್ಯಾಯವಲ್ಲ.

ಮಾದೇಶ್ವರರ ಗದ್ದಿಗೆ ಪೂಜಾ ವಿಧಾನ ಸಂಸ್ಕೃತಮಯವಾಗಿದೆ. ಭಾರತಲ್ಲಿ ಸಂಸ್ಕೃತವು ಮಡಿವಂತ ಭಾಷೆಯಾಗಿ ಪುರೋಹಿತರ ಸ್ವತ್ತಾಯಿತು. ದೇವರನ್ನು ಸಂಸ್ಕೃತ ಭಾಷೆಯಲ್ಲೇ ಮಾತನಾಡಿಸಬೇಕು, ಆ ಭಾಷೆಯೇ ದೇವರಿಗೆ ಅರ್ಥವಾಗುವಂತಹದ್ದು ಎಂಬ ನಂಬಿಕೆ ಕೆಲವರಲ್ಲಿತ್ತು. ದೇವರಿಗೂ ಕನ್ನಡವೂ ಅರ್ಥವಾಗುತ್ತುದೆ ಎಂದು ಅವನನ್ನು ಕನ್ನಡದಲ್ಲೇ ಸ್ತುತಿಸಿ ಎಂದು ಕನ್ನಡಕ್ಕೆ ಪೂಜನೀಯ ಸ್ಥಾನ ಕೊಟ್ಟವರು ಬಸವಣ್ಣನವರು. ನಮ್ಮ ರಾಜ್ಯಭಾಷೆ ಕನ್ನಡ, ಬಸವಾದಿ ಶರಣರ ಭಾಷೆಯೂ ಕನ್ನಡ. ಮೇಲಾಗಿ ಮಾದೇಶ್ವರರೂ ಸಹ ಕನ್ನಡಿಗರೇ. ಕನ್ನಡನಾಡಿನಲ್ಲೇ ಮೆರೆದು ಕರ್ನಾಟಕದ ಬೆಟ್ಟದಲ್ಲಿಯೇ ಲಿಂಗೈಕ್ಯರಾಗಿರುವುದು ಕನ್ನಡ ನಾಡಿನ ವಿಶೇಷ. ಆದರೆ ಇಂದು ಅದೇ ಕ್ಷೇತ್ರದಲ್ಲಿ ಸಂಸ್ಕೃತ ಪಾಠಶಾಲೆಯಾಗಿ ಸಂಸ್ಕೃತದಲ್ಲಿ ಶೈವಾಗಮದಂತೆ ಎಲ್ಲ ಪೂಜೆಗಳನ್ನು ಮಾಡಲಾಗುತ್ತಿರುವುದು ಸಮಂಜಸವಲ್ಲ.

ಮಾದೇಶ್ವರರ ಚರಿತ್ರೆಯನ್ನು ಪುರಾಣದಂತೆ ಹೇಳಲಾಗಿದೆ. ಅವರು ಅಯೋನಿಜರು ತಂದೆ ತಾಯಿ ಹೊಟ್ಟೆಯಲ್ಲಿ ಹುಟ್ಟಲಿಲ್ಲ, ಸಾಕ್ಷಾತ್‌ ಈಶ್ವರನೇ ಮಾದೇಶ್ವರನಾಗಿ ಭೂಮಿಗೆ ಅವತರಿಸಿದ, ಕೈಲಾಸದಿಂದ ಬಂದವರು ಎಂದೆಲ್ಲ ಮಾತುಗಳು ಕೇಳಿಬರುತ್ತಿವೆ. ಹೀಗೆ ಮಾದೇಶ್ವರರ ಗದ್ದುಗೆಯನ್ನು ದೇವಸ್ಥಾನೀಕರಿಸಿ, ಶೈವೀಕರಿಸಿ, ವೈದೀಕೀಕರಿಸಿ, ಗಣಪತೀಕರಿಸಿ, ವ್ಯಾಪಾರೀಕರಿಸಿ, ಪುರಾಣಿಕರಿಸಿರುವುದು ಅವರಿಗೆ ಮಾಡಿದ ಅಪಮಾನ. ಆಶ್ಚರ್ಯವೆಂದರೆ, ಮಾದೇಶ್ವರರ ಗದ್ದಿಗೆಯ ವಾತಾವರಣ, ’ವೈದಿಕ ಪರಂಪರೆಯನ್ನು ಮೆಚ್ಚಿಸುವಂತಿದೆ, ಮಾದೇಶ್ವರರ ಶರಣ ಪರಂಪರೆಯನ್ನು ನಾಚಿಸುವಂತಿದೆ’.

ಇಷ್ಟೆಲ್ಲ ಸಾಲದೆಂಬಂತೆ ಮಾದೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ದೇವಸ್ಥಾನದ ಒಳ ಆವರಣದಲ್ಲಿ ೧೧-೦೨-೨೦೦೮ ರಂದು ಬಲಿಪೀಠ ಎಂದು ಸ್ಥಾಪಿಸಿದರು. ಪ್ರಾಣಿಬಲಿ ಕೊಡದೇ ಇದ್ದರೂ ’ಬಲಿ’ ಪದ ಬಳಸಿರುವುದೇ ತಪ್ಪು. ಬಲಿಪೀಠ ಎಂದರೆ ಬಲಿಯನ್ನು ಕೊಡುವ ಸ್ಥಳ ಎಂದೂ ಅರ್ಥವಾಗುವುದರಿಂದ ಅದು ಪ್ರಾಣಿಬಲಿ ಕೊಡಲು ಪ್ರೇರೇಪಣೆಯಾಗುತ್ತದೆ ಎಂದು ಅದನ್ನು ನಾವು ವಿರೋಧಿಸಿದಾಗ ೨೯-೩-೨೦೦೮ರಂದು ಬಲಿಪೀಠ ಹೆಸರನ್ನು ಬದಲಾಯಿಸಿ ಇಷ್ಟಾರ್ಥಸಿದ್ಧಿಪೀಠ ಎಂದು ನಿರ್ಣಯಿಸಿದರು. ಇದನ್ನೂ ಪ್ರತಿಭಟಿಸಿದಾಗ ಅವರು ಶ್ರೀಪೀಠ ಹೆಸರನ್ನು ಸೃಷ್ಟಿಸಿ ಗೊಂದಲವೆಬ್ಬಿಸಿದರು. ಈ ಎಲ್ಲ ಹೆಸರುಗಳೂ ವೈದಿಕ ಮೂಲದವುಗಳೇ. ಆದರೆ ಮಾದೇಶ್ವರರದು ಶರಣ ಸಂಸ್ಕೃತಿ. ಅಂತಹ ನಾಮಾಂಕಿತಗಳಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆಂಬ ತಪ್ಪು ಸಂದೇಶ ನೀಡಿದಂತಾಗಿ, ಪುರೋಹಿತಶಾಹಿ ಪ್ರವೇಶಕ್ಕೆ ಕಾರಣವಾಗಿ, ಶೋಷಣೆಗೆ ಅವಕಾಶವಾಗುತ್ತದೆ. ಜನರನ್ನು ಭಯಭೀತಿಗೊಳಿಸುವ, ಮೂಢರನ್ನಾಗಿಸುವ ಇಷ್ಟಾರ್ಥಸಿದ್ಧಿಪೀಠವು ವ್ಯಾಪಾರೀಕರಣಕ್ಕೆ ದಾರಿ ಮಾಡುವ ಕೇಂದ್ರವಾಗುವುದೇ ಹೊರತು ಅದು ಮಾದೇಶ್ವರರು ಬಯಸಿದ ಶರಣ ಅಥವಾ ಜಂಗಮಕ್ಷೇತ್ರವಾಗುವುದಿಲ್ಲ. ಅಂಥ ಪರಮ ಪವಿತ್ರಾತ್ಮರಾದ ಮಾದೇಶ್ವರರ ಶರಣಪರಂಪರೆಯಲ್ಲಿ ಯಾವುದೇ ಪ್ರತಿಷ್ಠಾಪನೆ ಆಸ್ತಿತ್ವದಲ್ಲಿಲ್ಲ. ದೇವಸ್ಥಾನ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದೇಶ್ವರರ ಗದ್ದುಗೆ ಹೊರತುಪಡಿಸಿ ಬೇರೆ ಯಾವುದೇ ಪೀಠ, ದೇವಾಲಯ ನಿರ್ಮಿಸುವಂತಿಲ್ಲ. ಇಲ್ಲಿನ ಪ್ರತಿಯೊಂದು ಸ್ಥಳವೂ ಮಾದೇಶ್ವರರ ಮಹಿಮೆಯ ಪ್ರತೀಕವೆಂಬಂತಿದೆ. ತರಾತುರಿಯಲ್ಲಿ ಅದನ್ನು ಇದನ್ನು ನೋಡಿ ಅವರನ್ನು

ಇವರನ್ನು ಕೇಳಿ ಎಲ್ಲೋ ವೈದಿಕ ಶೈವ ದೇವಸ್ಥಾನಗಳಲ್ಲಿ ಸ್ಥಾಪಿಸಿರಬಹುದಾದ ಪೀಠಗಳನ್ನು ಅನುಕರಿಸಿ, ಆಧುನಿಕೀಕರಣದ ನೆಪದಲ್ಲಿ ಗದ್ದುಗೆಯಲ್ಲಿ ಇಷ್ಟಾರ್ಥಸಿಧ್ಧಿಪೀಠ ಸ್ಥಾಪಿಸಿರುವುದು ಮಾದೇಶ್ವರರ ಪರಂಪರೆಗೆ ಚ್ಯುತಿ. ಹೀಗಾಗಿ ಗದ್ದಿಗೆಯ ಭವಿಷ್ಯ ಊಹಿಸಲಸಾಧ್ಯ. ಇದು ಅತ್ಯಂತ ಕಳವಳಕಾರಿ. ಇದಕ್ಕೆಲ್ಲ ಜನರಿಗೆ ಮಾದೇಶ್ವರರ ಭೋಧನೆಗಳ ಅರಿವಿಲ್ಲದಿರುವುದೇ ಕಾರಣ. ಹಿಂದೆ ಮಾದೇಶ್ವರರು ಮಾಡುತ್ತಿದ್ದಂತೆ ಜನರಿಗೆ ಲಿಂಗಧಾರಣೆ ಮಾಡಿಸಿ, ಧರ್ಮ ಸಂಸ್ಕಾರ ನೀಡಿ, ಅಷ್ಟಾವರಣ, ಪಂಚಾಚಾರ, ಷಟಸ್ಥಲ ತತ್ವಗಳನ್ನು ಬೋಧಿಸಿ, ಮಾದೇಶ್ವರರ ಜೀವನ, ಸಾಧನೆ, ಪರಂಪರೆಗಳನ್ನು ಪ್ರಚಾರ ಮಾಡಿ, ಅವರ ಆಲೋಚನೆ ಭಾವನೆಗಳಿಗೆ ಅನುಗುಣವಾದ ಆಚಾರ ವಿಚಾರಗಳನ್ನು ತರಬೇಕು. ಸುಮಾರು ೬೦೦ ವರ್ಷಗಳ ಇತಿಹಾಸವಿರುವ ದೇವಸ್ಥಾನದ ಆವರಣದಲ್ಲಿ ಎಲ್ಲಿಯೂ ಬಲಿಪೀಠವಾಗಲಿ, ಇಷ್ಟಾರ್ಥಸಿದ್ದಿಪೀಠವಾಗಲಿ, ಶ್ರೀಪೀಠವಾಗಲಿ, ಇನ್ನಾವುದೇ ಹೆಸರಿನ ಪೀಠವಾಗಲಿ ಇರಲಿಲ್ಲ. ಭಕ್ತಾದಿಗಳು ಬರುವುದು ಮಾದೇಶ್ವರರ ಮೇಲಿನ ಭಕ್ತಿಯಿಂದಲೇ ವಿನಾ ಕಲ್ಲಿನ ಪೀಠದ ಮೇಲಿನ ಭಕ್ತಿಯಿಂದಲ್ಲ. ಹರಕೆ ಮಾಡಿಕೊಳ್ಳಬೇಕೆಂಬ ಮೂಢತನ ಬೆಳೆಯಲು ಕಾರಣವಾಗುವ ಹರಕೆಪೀಠ ಎಂದಾಗಲಿ, ಕಲ್ಲುಪೀಠದ ಮೇಲೆ ಭಕ್ತಿ ಬೆಳೆಸುವ ಭಕ್ತಿಪೀಠ ಎಂದಾಗಲಿ, ಕಲ್ಲುಪೀಠಕ್ಕೆ ಧರ್ಮಪೀಠ, ಶ್ರೀಪೀಠ ಎಂದಾಗಲಿ ಅಥವಾ ಇನ್ನಾವುದೇ ಹೆಸರಿಟ್ಟು ಗುರುತಿಸುವ ಅವಶ್ಯಕತೆ ಇಲ್ಲ. ಮಾದೇಶ್ವರರ ಗದ್ದುಗೆಯೊಂದೇ ಶ್ರದ್ಧಾಕೇಂದ್ರವಾಗಿದ್ದರೆ ಸಾಕು.

ಮಾದೇಶ್ವರಬೆಟ್ಟದ ಮಾದೇಶ್ವರಸ್ವಾಮಿ ದೇವಸ್ಥಾನದ ಮಳಿಗೆ ಸೇರಿದಂತೆ ವಿವಿಧೆಡೆ ಮಾರಾಟವಾಗುವ ಅಂಗಡಿಗಳಲ್ಲಿನ ಮಾದೇಶ್ವರರ ಭಾವಚಿತ್ರಗಳಲ್ಲಿ ಅವರ ಕೊರಳಲ್ಲಿ ಇಷ್ಟಲಿಂಗ ಧರಿಸಿಲ್ಲ! ಹೀಗೆಯೇ ಇನ್ನೂ ಅನೇಕ ಕಡೆ ಆಗಿದೆ. ಇದು ಮಲೆ ಮಾದೇಶ್ವರರಿಗೆ ಮಾಡಿದ ಅಪಮಾನ ಮಾತ್ರವಲ್ಲ ಶರಣ ಪರಂಪರೆಗೂ ಅಪಚಾರ. ಇದಕ್ಕೆಲ್ಲ ಸಂಬಂಧಪಟ್ಟವರ ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಪ್ರತಿಭಟನೆ ಧರಣಿ ನಡೆಸಿ ಮನವಿ ಕೊಟ್ಟಿದ್ದಾಗ್ಯೂ ಪ್ರಯೋಜನವಾಗಿಲ್ಲ. ೧೨ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಂದ ಸ್ಥಾಪನೆಯಾಗಿ ಅಲ್ಲಮಪ್ರಭುದೇವರ ಅಧ್ಯಕ್ಷತೆಯಿಂದ ಪ್ರಾರಂಭವಾಗಿರುವ ಶೂನ್ಯಪೀಠದ ಆರನೆಯ ಜಗದ್ಗುರು ಮಾದೇಶ್ವರರು ಇಷ್ಟಲಿಂಗಧಾರಿಗಳು, ಶೂನ್ಯಪೀಠ ಮತ್ತು ಸಾಲೂರುಮಠದ ಅಧಿಕಾರಿಗಳೆಲ್ಲ ಇಷ್ಟಲಿಂಗಧಾರಿಗಳೇ, ದೇವಸ್ಥಾನ ಸಮೀಪದ ದೇವರಪುರ ಗ್ರಾಮದಲ್ಲಿ ವಾಸಿಸುತ್ತಿರುವ ತಮ್ಮಡಿಗಳೆಲ್ಲ ಲಿಂಗಾಯತರಾಗಿದ್ದಾರೆ. ಮಾದೇಶ್ವರರ ಗದ್ದುಗೆ ಪೂಜಿಸುವವರೆಲ್ಲ ಲಿಂಗವಂತ ತಮ್ಮಡಿಗಳೇ. ಜಗತ್ತಿಗೊಡೆಯ ನಿರಾಕಾರ ಪರಮಾತ್ಮನ ಕುರುಹೇ ಇಷ್ಟಲಿಂಗ. ಮಾದೇಶ್ವರರು ಉದ್ಯೋಗ-ಜಾತಿ-ಲಿಂಗ ಭೇದಗಳಿಲ್ಲದೆ ಅಲ್ಲಿ ಆ ಸೋಲಿಗರು, ಕುರುಬರು, ಬೇಡರಿಗೆಲ್ಲ ಧರ್ಮಸಂಸ್ಕಾರದ ಹಕ್ಕನ್ನು ಒದಗಿಸಿದ್ದು, ಲಿಂಗಧಾರಣೆ ಮಾಡುವ ಮೂಲಕವೇ. ಪರಮಾತ್ಮನನ್ನು ನೇರವಾಗಿ ಪೂಜಿಸುವ ಅವಕಾಶವನ್ನು ಆ ಕಾಡುಜನರಿಗೆ ಒದಗಿಸಿದ್ದು ಇಷ್ಟಲಿಂಗದಿಂದ, ಶರಣಧರ್ಮದ ಮೂಲಸಿದ್ದಾಂತವೇ ಇಷ್ಟಲಿಂಗಧಾರಣೆ. ಡಾ.ಬಿ.ಶಿವಮೂರ್ತಿಶಾಸಿಗಳು ಬರೆದಿರುವ 'ಶ್ರೀ ಮಾದೇಶ್ವರ ಚರಿತ್ರೆ' ಗ್ರಂಥದಲ್ಲಿ ಮಾದೇಶ್ವರರ ಭಾವಚಿತ್ರಕ್ಕೆ ಇಷ್ಟಲಿಂಗ ಧರಿಸಿದೆ. ಸತ್ಯ ಹೀಗಿರುವಾಗ ಇಷ್ಟಲಿಂಗಧಾರಿಗಳಾದ ಮಾದೇಶ್ವರರ ಭಾವಚಿತ್ರಗಳಲ್ಲಿ ಇಷ್ಟಲಿಂಗ ಕೈಬಿಟ್ಟಿರುವುದು ಅಕ್ಷಮ್ಯ. ಇಷ್ಟಲಿಂಗ ಧರಿಸುವ ಮೂಲಕ ಅದನ್ನು ಸರಿಪಡಿಸಬೇಕು.

ಮಾದೇಶ್ವರಬೆಟ್ಟದಲ್ಲಿ ಹೋಮ-ಹವನ ನಡೆಸುವ ಬಗ್ಗೆ ಟೀಕೆಟಿಪ್ಪಣಿಗಳು ಕೇಳಿಬಂದಿವೆ. ಹೋಮ-ಹವನ ವೈದಿಕ ಧರ್ಮದ ಮುಖ್ಯ ವಿಧಿ, ಅಗ್ನಿಗೆ ಹವಿಸ್ಸನ್ನು ಕೊಡುವ ಮೂಲಕ ಎಲ್ಲ ಕಾರ್ಯಗಳು ನೆರವೇರುವುವು. ಆದರೆ ಶರಣ ಸಂಸ್ಕೃತಿಯಲ್ಲಿ ಎಲ್ಲ ಕ್ರಿಯೆಗಳೂ ಗುರುಲಿಂಗಜಂಗಮ ಸಾಕ್ಷಿಯಾಗಿ ಆಗುವುವು. ಮಾದೇಶ್ವರರ ಶರಣಪರಂಪರೆಯಂತೆ ಹೋಮ-ಹವನ ಮಾಡುವಂತಿಲ್ಲ. ಶರಣ ಸಂಸ್ಕೃತಿಯಲ್ಲಿ ಅದು ಅಸ್ತಿತ್ವದಲ್ಲಿಲ್ಲ. ಅಮೂಲ್ಯ ವಸ್ತುಗಳನ್ನು ಹೋಮದ ಮೂಲಕ ಬೆಂಕಿಯಲ್ಲಿ ಹಾಕಿ ಸುಡುವ ಧಾರ್ಮಿಕ ವಿಧಿಯನ್ನು ಬಸವಣ್ಣನವರು ವಿರೋಧಿಸಿದ್ದಾರೆ. ಮಾದೇಶ್ವರರದು ತಿಂದುಣ್ಣುವ ಪದಾರ್ಥಗಳನ್ನು ಬೆಂಕಿಯಲ್ಲಿ ಸುಡುವ ಧರ್ಮವಲ್ಲ, ಹಸಿದವರಿಗೆ ಕೊಡುವ ಧರ್ಮ. ಮಾದೇಶ್ವರರು ಅಗ್ನಿ ಪೂಜಕರಲ್ಲ. ಹೋಮ-ಹವನಗಳನ್ನು ಅಲ್ಲಿ ಮಾಡಬಾರದು. ಇದೆಲ್ಲ ಶರಣಪರಂಪರೆಯೊಂದರ ಮೇಲೆ ಪುರೋಹಿತಶಾಹಿಯ ದಾಳಿ ಎಂಬುವುದರಲ್ಲಿ ಅನುಮಾನವಿಲ್ಲ. ದೇವರು, ಧರ್ಮ, ಆಧ್ಯಾತ್ಮಗಳು ಅರಿವಿಲ್ಲದೆ ಜನರು ಶೋಷಣೆಗೆ ಒಳಗಾಗಿದ್ದಾರೆ. ಜ್ಞಾನದಾಸೋಹ ಮಾಡಿ, ಮೂಢನಂಬಿಕೆ ಹೋಗಲಾಡಿಸಿ, ಮಾದೇಶ್ವರರ ಉಪದೇಶಗಳನ್ನು ಜಾರಿಗೊಳಿಸುವ ಮತ್ತು ಕ್ಷೇತ್ರದ ಅಸ್ತಿತ್ವ ಅಭಿವೃದ್ದಿಗಳಿಗೆ ಕಾರಣರಾಗಿ ಹಿಂದಿನಿಂದಲೂ ಮಾದೇಶ್ವರರ ಗದ್ದಿಗೆ ಪೂಜಿಸುತ್ತ ಬಂದಿರುವ ತಮ್ಮಡಿಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ, ಆ ಹೋಮಕ್ಕೆ ಖರ್ಚು ಮಾಡುವ ಹಣವನ್ನು ಬಳಸಿದ್ದರೆ ಮಾದೇಶ್ವರರು ಮೆಚ್ಚುತ್ತಿರಲಿಲ್ಲವೇ?

“ಶ್ರೀ ಮಹದೇಶ್ವರ ದರ್ಶನಮ್' ಎಂಬ ದೇವಸ್ಥಾನದ ಮಾಸ ಪತ್ರಿಕೆಯ ಮುಖಪುಟದ ಮಾದೇಶ್ವರಸ್ವಾಮಿಯವರ ಭಾವಚಿತ್ರದ ಅವರ ಹಣೆಯಲ್ಲಿ ಕುಂಕುಮ ಇಟ್ಟಿದ್ದಾರೆ! ಇನ್ನೂ ಅನೇಕ ಕಡೆ ಹೀಗೆಯೇ ಆಗಿದೆ. ಕುಂಕುಮ ವೈದಿಕ ಸಂಸ್ಕೃತಿಯ ಸಂಕೇತ. ಇದನ್ನು ಧರಿಸಲು ಹಿಂದೂಧರ್ಮ ವಿವಾಹಿತ ಮಹಿಳೆಯರಿಗೆ ಕಡ್ಡಾಯಗೊಳಿಸಿ, ವಿಧವೆಯರಿಗೆ ನಿಷೇಧಿಸಿದೆ. ಕುಂಕುಮ ಹಾಕುವುದು ಶರಣ ಸಂಸ್ಕೃತಿಯಲ್ಲಿ ಇಲ್ಲ. ಶರಣರು ಕುಂಕುಮ ಧರಿಸುವುದಿಲ್ಲ. ಮಾದೇಶ್ವರರು ಕುಂಕುಮಧಾರಿಗಳಲ್ಲ. ಆದ್ದರಿಂದ ಅವರ ಎಲ್ಲ ಭಾವಚಿತ್ರಗಳಲ್ಲಿ ಅವರ ಹಣೆಯಲ್ಲಿ ಕುಂಕುಮ ತೆಗೆಸಬೇಕು.

ಮಾದೇಶ್ವರರದು ಶರಣಪರಂಪರೆ. ಆದರೆ ವೇದಗಳನ್ನು ಮಾನ್ಯ ಮಾಡುವುದು, ದೇವಸ್ಥಾನ ಸಂಸ್ಕೃತಿ, ಗಣಪತಿ ಪ್ರತಿಷ್ಠಾಪನೆ, ಚತುರ್ವಣ್ರ, ಚತುರಾಶ್ರಮ, ಬಹುದೇವತೋಪಾಸನೆ, ತೀರ್ಥಕ್ಷೇತ್ರ ಯಾತ್ರೆಯಲ್ಲಿ ನಂಬಿಕೆ, ಜ್ಯೋತಿಷ್ಯ, ಮುಹೂರ್ತ, ಜಾತಕ, ಪುರೋಹಿತರ ಮೂಲಕ ಪೂಜೆ, ಉದ್ಯೋಗದಲ್ಲಿ ಮೇಲು-ಕೀಳು, ಹೋಮಹವನ, ಯಜ್ಞ-ಯಾಗ, ದ್ವಿಜರಿಗೆ ಮಾತ್ರ ಉಪನಯನ, ಶೂದ್ರರು, ಅಸ್ಪಶ್ಯರು, ಎಲ್ಲ ವರ್ಣಗಳ ಸ್ತ್ರೀಯರಿಗೆ ಉಪನಯನವಿಲ್ಲ, ಸಸ್ಯಾಹಾರ-ಮಾಂಸಾಹಾರ ಎರಡೂ ಉಂಟು, ಸೂತಕಗಳಲ್ಲಿ ನಂಬಿಕೆ, ವಿವಾಹದಲ್ಲಿ ಅಗ್ನಿಸಾಕ್ಷಿ, ಉಪವಾಸ ವ್ರತ ಮುಂತಾದವು ಹಿಂದು ಧರ್ಮದ ಲಕ್ಷಣಗಳು. ಇವುಗಳನ್ನು ವಿರೋಧಿಸಿ ಹುಟ್ಟಿದ ಲಿಂಗಾಯತ ಧರ್ಮ ಸ್ಥಾಪಕರಾದ ಬಸವಣ್ಣನವರ ಪರಂಪರೆಯವರೇ ಮಾದೇಶ್ವರರು ಎಂಬುದು ಗಮನಾರ್ಹ.

ಮಹಾಪುರುಷರ ಅಧ್ಯಯನದಲ್ಲಿ ಅವರ ಇತಿಹಾಸ ಮುಖ್ಯ. "ಹೀಗೆ ಖಚಿತವಾಗಿ ನಡೆದದ್ದು" ಇದು ಇತಿಹಾಸ ಪದದ ಅರ್ಥ. ಅಂದರೆ ಹಿಂದೆ ನಡೆದ ಘಟನೆಗಳನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳುವುದೇ ಇತಿಹಾಸ, ಸತ್ಯಾನ್ವೇಷಣೆಯು ಇತಿಹಾಸದ ಗುರಿ. ನಂಬಲಾಗದ ಕಾಲ್ಪನಿಕ ಕಟ್ಟುಕತೆಗಳು ಇತಿಹಾಸವಲ್ಲ. ಮೂಲ ಆಧಾರಗಳಿಲ್ಲದೆ ಇತಿಹಾಸವಿಲ್ಲ. ಇತಿಹಾಸವಿಲ್ಲದೆ ಮಹಾಪುರಷರ ವ್ಯಕ್ತಿತ್ವವನ್ನು ಗುರುತಿಸುವುದು ಕಷ್ಟ. ಅದರಿಂದ ಮಾದೇಶ್ವರರ ಇತಿಹಾಸವನ್ನು ಬರೆಯುವಾಗ ಶ್ರೀಶೈಲ, ಸುತ್ತೂರು ಮಠ, ಕುಂತೂರು ಮಠ, ಇಷ್ಟಲಿಂಗಧಾರಣೆ, ಸಾಲೂರು ಮಠ, ಮಾದೇಶ್ವರರ ಗದ್ದಿಗೆ, ಪಚಮಠಗಳು, ಬೇಡಗಂಪಣರಾಜ್ಯ, ಆಲಂಬಾಡಿ ಜುಂಜೇಗೌಡ, ಕಾರಯ್ಯ, ಬಿಲ್ಲಯ್ಯ, ಅನಸಾಲಮ್ಮ, ಶೇಷಣ್ಣೊಡೆಯ, ತಮ್ಮಡಿಗಳ ಮನೆತನ, ದೇವರಹಳ್ಳಿ, ಬಸವಧರ್ಮತತ್ವ, ಶೂನ್ಯಪೀಠ, ಬಸವಕಲ್ಯಾಣ ಮುಂತಾದವುಗಳನ್ನು ಗಮನಿಸಬೇಕು. ಮಾದೇಶ್ವರರಿಗೆ ಸಂಬಂಧಿಸಿದ ತಾಳೆಯೋಲೆ ಗ್ರಂಥ, ಹಸ್ತಪ್ರತಿ, ಶ್ರೀ ಮಾದೇಶ್ವರ ಚರಿತೆ, ಮಾದೇಶ್ವರ ಸಾಂಗತ್ಯ, ನಿರಂಜನವಂಶರತ್ನಾಕರ, ಸುತ್ತೂರು ಗುರುಪರಂಪರೆ, ಜನಪದಸಾಹಿತ್ಯ, ಸ್ಥಳಪುರಾಣ, ಕಂಪನಿಯ ತಹನಾಮೆ, ಹೈದರಾಲಿ ತಾಮ್ರಶಾಸನ ಮುಂತಾದ ಎಲ್ಲ ಶಾಸನ, ಸಾಹಿತ್ಯ, ಸ್ಮಾರಕ ಆಧಾರಗಳನ್ನು ಸಂಗ್ರಹಿಸಿ, ಮಾದೇಶ್ವರರ ಜೀವನ, ಸಾಧನೆ, ಧರ್ಮಪ್ರಸಾರ, ಪರಂಪರೆಗಳನ್ನು ವೈಜ್ಞಾನಿಕವಾಗಿ ಅಧ್ಯಯನಮಾಡಿ, ಅವುಗಳ ಸತ್ಯಾಸತ್ಯತೆಯನ್ನು ವಿಮರ್ಶಿಸಿ, ಅವುಗಳಲ್ಲಿ ಸಿಗುವ ಚಾರಿತ್ರಿಕ ಅಂಶಗಳನ್ನು ಆಯ್ದುಕೊಂಡು, ಮೌಲ್ಯನಿರ್ಣಯಿಸಿ, ನಂಬಲರ್ಹ ಮತ್ತು ಸತ್ಯವಾದುದನ್ನು ಮಾತ್ರ ಮುಕ್ತಮನಸ್ಸಿನಿಂದ ಪರಿಶೀಲಿಸಿ, ಮಾದೇಶ್ವರರ ಸಮಗ್ರ ಜೀವನವನ್ನು ಸಹಜವಾಗಿ ಇತಿಹಾಸ ನಿಷ್ಠರಾಗಿ ಬರೆಯಬೇಕು. ಇದು ಮಾದೇಶ್ವರರ ನಿಜವಾದ ಇತಿಹಾಸ.

ಸರ್ಕಾರ, ಮುಜರಾಯಿ ಇಲಾಖೆ, ಸಾಲೂರು ಮಠ, ದೇವಸ್ಥಾನದ ಯಾವುದೇ ಆಡಳಿತ ಸಮಿತಿ ಇರುವುದು ಮಾದೇಶ್ವರರ ಗದ್ದಿಗೆಯ ಮತ್ತು ಪರಂಪರೆಯ ರಕ್ಷಣೆಗಾಗಿಯೇ ಹೊರತು ಆ ಗದ್ದಿಗೆಯ ಆಚರಣೆಯ ವಿಧಿವಿಧಾನಗಳಲ್ಲಿ ಹಸ್ತಕ್ಷೇಪ ಮಾಡುವ, ಮಾದೇಶ್ವರರ ಶರಣಪರಂಪರೆಗೆ ವಿರುದ್ದವಾಗಿ ಯಾವುದೇ ನಿರ್ಣಯ ಕೈಗೊಳ್ಳುವ, ಯಾವುದೇ ಪೀಠವನ್ನು ಸ್ಥಾಪಿಸುವ, ಗದ್ದಿಗೆಯ ಮೂಲ ಸ್ವರೂಪವನ್ನೇ ಬದಲಾಯಿಸುವ, ಹೋಮ-ಹವನ ಮಾಡುವ, ವೈದಿಕ ವ್ಯವಹಾರಗಳನ್ನು ತುರುಕುವ ಅಧಿಕಾರ ಹಕ್ಕು ಅವಕಾಶ ಯಾವ ಕಾಲಕ್ಕೂ ಯಾರಿಗೂ ಇಲ್ಲ. ಮೇಲೆ ಹೇಳಿದ ಎಲ್ಲ ವಿಷಯಗಳನ್ನು ಗಮನಿಸಿ, ಜನತೆ ಶರಣ ಸಂಸ್ಕೃತಿಯ ಮೇಲಾಗುತ್ತಿರುವ ಹಲ್ಲೆಯನ್ನು ಪ್ರತಿಭಟಿಸಿ, ಈ ಸಂಚು ಎಲ್ಲರಿಗೂ ಮನವರಿಕೆಯಾಗಿ ಅದು ಮತ್ತಷ್ಟು ಹಬ್ಬದಂತೆ ತಡೆಯುವುದು ತುರ್ತು ಅಗತ್ಯ.

ಆದುದರಿಂದ, ಮಲೆ ಮಾದೇಶ್ವರರ ಕ್ಷೇತ್ರವ್ಯಾಪ್ತಿಯಲ್ಲಿ ಅವರ ಪರಂಪರೆಗೆ ಹೊರತಾದ ಈಗ ಸ್ಥಾಪಿಸಿಕೊಂಡಿರುವ ಎಲ್ಲ ಮೂರ್ತಿ ಪ್ರತಿಷ್ಠಾಪನೆಗಳನ್ನು ತೆರವುಗೊಳಿಸಿ, ಎಲ್ಲ ವೈದಿಕ ವ್ಯವಹಾರಗಳನ್ನು ಹೊರಹಾಕಿ, ಎಲ್ಲ ಲೋಪದೋಷಗಳನ್ನು ಸರಿಪಡಿಸಿ ಮಾದೇಶ್ವರರ ಪರಂಪರೆಯನ್ನು ಉಳಿಸಬೇಕು.

- ಸು.ಮಲ್ಲಿಕಾರ್ಜುನಪ್ಪ,
ಎಂ.ಎ.,ಬಿ.ಇಡಿ.,
ಮತ್ತೀಪುರ ೫೭೧ ೪೪೩, ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ

ಕೃಪೆ: ಕಲ್ಯಾಣ ಕಿರಣ- ಸೆಪ್ಟೆಂಬರ್ 2012

*
ಪರಿವಿಡಿ (index)
Previous ಎಣ್ಣೆ ಹೊಳೆ ಶ್ರೀ ಅಲ್ಲಮ ಪ್ರಭು ಗಿರಿ (ಅಲ್ಲಮ ಪ್ರಭು ಡೋಂಗರ್‌) ಅಳತೆ, ಮಹಾರಾಷ್ಟ್ರ Next