Previous ಶ್ರೀ ಶೈಲ ಬಿಜನಳ್ಳಿ Next

ಬಸವನ ಬಾಗೇವಾಡಿ

ಸುಮಾರು 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.

ಬಸವನ ಬಾಗೇವಾಡಿ ಬಿಜಾಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬಸವನ ಬಾಗೇವಾಡಿ ಬಿಜಾಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಬಿಜಾಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಾಗೇವಾಡಿಯಿಂದ ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ. ಇಲ್ಲಿ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ನೋಡುಗರ ಮನ ಸೆಳೆಯುತ್ತದೆ.

ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನಿಗೊಂದು ಸ್ಥಿರ ಸ್ಮಾರಕ ಆತನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ‘ಬಸವ ಸ್ಮಾರಕ ಭವನ’ ನಿರ್ಮಾಣವಾಗಿದೆ. ಇಂಡೋ-ಸಾರ್ಸೆನಿಕ್ ಶಿಲ್ಪಕಲೆ ಹಾಗೂ ಅಷ್ಟಕೋನಾಕೃತಿ ಶೈಲಿಯ ಈ ಸ್ಮಾರಕ 90 ಅಡಿ ಎತ್ತರವಿದೆ. ಸ್ಮಾರಕದ ಸುತ್ತಲೂ ವರಾಂಡ ಇದ್ದು, ಚಾಲುಕ್ಯ ಶೈಲಿಯಲ್ಲಿ ಕೆತ್ತಿದ ಗ್ರಾನೈಟ್ ಕಲ್ಲಿನ ಕಂಬಗಳನ್ನು ಅಳವಡಿಸಲಾಗಿದೆ. ಪ್ರದರ್ಶನ ಸ್ಥಳದ ಛಾವಣಿ 30 ಅಡಿ ಎತ್ತರವಿದೆ. ಮಧ್ಯದಲ್ಲಿ 36 ಅಡಿ ಎತ್ತರದ ಇಂಡೋ-ಸಾರ್ಸೆನಿಕ್ ಶೈಲಿಯ ಗೋಪುರ ನಿರ್ಮಿಸಲಾಗಿದೆ. ಸುತ್ತಲೂ ಇರುವ ಕಿಂಡಿಗಳಿಂದ ದಿನವಿಡೀ ಸೂರ್ಯನ ಬೆಳಕು ಸ್ಮಾರಕದ ಒಳಗೆ ಬೀಳುವಂತೆ ಮಾಡಲಾಗಿದೆ.

ಬಸವಣ್ಣನವರ ಬಾಲ್ಯದ ದಿನಗಳಿಂದ ಹಿಡಿದು ಕೂಡಲ ಸಂಗಮದಲ್ಲಿ ಐಕ್ಯವಾಗುವವರೆಗೆ ಅವರ ಜೀವನದ ಪ್ರಮುಖ ಘಟನಾವಳಿಗಳನ್ನು ಪರಿಚಯಿಸುವ ಕಟ್ಟಿಗೆ, ಗಾಜು, ಕಲ್ಲು, ಕಂಚಿನಿಂದ ನಿರ್ಮಿಸಿರುವ ಕಲಾಕೃತಿಗಳು ಈ ಸ್ಮಾರಕದ ಮುಖ್ಯ ಆಕರ್ಷಣೆ.

ಬಸವಣ್ಣನವರ ತಂದೆ ಮಾದರಸ, ಅಕ್ಕ ನಾಗಮ್ಮ ಅವರ ಕಂಚಿನ ಮೂರ್ತಿ, ಕಟ್ಟಿಗೆಯ ತೊಟ್ಟಿಲು, ತಾಯಿ ಮಾದಲಾಂಬಿಕೆ ತನ್ನ ಮಗು ಬಸವಣ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡಾಗ ಗುರು ಜಾತವೇದ ಮುನಿಗಳು ಆಶೀರ್ವದಿಸುವ ಮೂರ್ತಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸ್ಮಾರಕದ ಮುಖ್ಯ ರಸ್ತೆಗೆ ಮಹಾದ್ವಾರ ಹಾಗೂ ವಿಶಾಲವಾದ ರಸ್ತೆ, ಉದ್ಯಾನವನ ತಲೆ ಎತ್ತಿದೆ. ಸ್ಮಾರಕದ ಕೆಳ ಮಹಡಿಯಲ್ಲಿ 250 ಆಸನದ ವಿಶಾಲವಾದ ಸಭಾಭವನ, ಗ್ರಂಥಾಲಯ ನಿರ್ಮಿಸಲಾಗಿದೆ. ಗುರು ಬಸವಣ್ಣ ಜನಿಸಿದ ಮನೆಯ ಸುತ್ತಲಿನ 5-6 ಮನೆಗಳನ್ನು ಸ್ವಾಧೀನ ಪಡಿಸಿಕೊಂಡು ಪ್ರಾಧಿಕಾರ ಈ ಸ್ಮಾರಕ ನಿರ್ಮಿಸಿದೆ.

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ಲಿಂಗಾಯತರು ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.

ಬಸವನ ಬಾಗೇವಾಡಿ ಮುಖ್ಯ ನಗರಗಳಿಂದ ಇರುವ ದೂರ

ಬೆಂಗಳೂರುನಿಂದ ೫೨೬ ಕಿ.ಮೀ. NH-13
ಸೋಲಾಪುರ ಮಹಾರಾಷ್ಟ್ರದಿಂದ ೧೪೧ ಕಿ.ಮೀ. NH-13
ಹೈದ್ರಾಬಾದನಿಂದ ಆಂಧ್ರ ಪ್ರದೇಶದಿಂದ ೩೯೦ ಕಿ.ಮೀ.
ಕೂಡಲಸಂಗಮದಿಂದ ೫೮ ಕಿ.ಮೀ. NH-13
ಸಮೀಪದ ರೈಲ್ವೆ ನಿಲ್ದಾಣ ಅಲಮಟ್ಟಿ ೩೨ ಕಿ. ಮೀ.
ಸಮೀಪದ ವಿಮಾನ ನಿಲ್ದಾಣ ಬೆಳಗಾವಿ ೨೦೦ ಕಿ. ಮೀ.

ಬಸವನ ಬಾಗೇವಾಡಿಯ ಚಿತ್ರಗಳು (ಚಿತ್ರಪಟ)
ಪರಿವಿಡಿ (index)
*
Previous ಶ್ರೀ ಶೈಲ ಬಿಜನಳ್ಳಿ Next
cheap jordans|wholesale air max|wholesale jordans|wholesale jewelry|wholesale jerseys