Previous ಸೊಲ್ಲಾಪುರ ಕೂಡಲ ಸಂಗಮ Next

ಬಸವಕಲ್ಯಾಣ

ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪಟ್ಟಣವೇ ಇಂದಿನ ಬಸವ ಕಲ್ಯಾಣ. ಬೀದರಿನಿಂದ ಪಶ್ಚಿಮ ದಿಕ್ಕಿಗೆ 80 ಕಿ.ಮೀ. ದೂರದಲ್ಲಿರುವ ನಗರವೇ ಬಸವಕಲ್ಯಾಣ. ಇದು ಚಾಲುಕ್ಯರ ರಾಜಧಾನಿಯಾಗಿದ್ದ ಕಲ್ಯಾಣಿ/ಕಲ್ಯಾಣಪುರ. ಚಾಲುಕ್ಯರು ಕಲ್ಯಾಣವನ್ನು ಸುಮಾರು ೨೫೦ ವರುಷಗಳವರೆಗೆ ಆಳ್ವಿಕೆ ನಡೆಸಿದರು. ಇದೇ ಪಟ್ಟಣ ಕಳಚೂರಿಗಳ ರಾಜಧಾನಿಯೂ ಆಗಿದ್ದಿತ್ತು. ಐತಿಹಾಸಿಕ ಮಹತ್ವ ಹೊಂದಿರುವ ಬಸವಕಲ್ಯಾಣ ತಾಲೂಕು ಪ್ರವಾಸ ಆಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಬಸವಣ್ಣನವರು ಮಾಂಡಲಿಕ ಬಿಜ್ಜಳನೊಂದಿಗೆ ಮಂಗಳವೇಡೆಯಿಂದ ಕಲ್ಯಾಣಪುರಕ್ಕೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು. ಬಲದೇವ ಮಂತ್ರಿಯ ನಂತರ ಬಸವಣ್ಣನವರಿಗೆ ಪ್ರಧಾನಿ ಹುದ್ದೆಯನ್ನು ನೀಡಲಾಯಿತು. ಅವರು ಬಿಜ್ಜಳ ಅರಸರ ಭಾಂಡಾರಿಯಷ್ಟೇ ಆಗಿರದೆ ಭಕ್ತಿ ಭಾಂಡಾರಿಯೂ ಆದರು. ನೆಲ ಪಾವನವಾಯಿತು. ಜನಮನ ನೆಲೆ ಕಂಡಿತು.

ಬಸವಕಲ್ಯಾಣ ಕೋಟೆ

ಈ ಕೋಟೆ ಚಾಲುಕ್ಯರ ನಂತರ ದೇವಗಿರಿಯ ಯಾದವರ, ತೊಗಲಖ್‌, ಬಹಮನಿ, ಬರೀದಶಾಹಿ, ಆದಿಲ್‌ಶಾಹಿ, ಮೊಗಲರು, ಮರಾಠರು, ಕೊನೆಯಲ್ಲಿ ನೈಜಾಂರ ವಶದಲ್ಲಿತ್ತು. ವಿವಿಧ ಹಂತಗಳಲ್ಲಿ ಈ ಕೋಟೆ ನಿರ್ಮಾಣಗೊಂಡಿದೆ. ಕಲ್ಯಾಣದ ಕೋಟೆ ಗಾತ್ರದಲ್ಲಿ ಚಿಕ್ಕದಾಗಿದ್ದರೂ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವ ತಳೆದಿದೆ.

ಪರುಷಕಟ್ಟೆ :

ಬಸವೇಶ್ವರ ದೇವಾಲಯದ ಸಮೀಪ ಇರುವ ಈ ಸ್ಮಾರಕ ಕಟ್ಟೆಯೊಂದರ ರೂಪದಲ್ಲಿದೆ. ಇದರ ಸಂಬಂಧ ಬಸವಣ್ಣನವರೊಂದಿಗೆ ಇದ್ದಿತೆಂದು ತಿಳಿದುಬರುತ್ತದೆ.

ಬಸವಣ್ಣನವರ ಅರಿವಿನ ಮನೆ :

ಬಸವ ಕಲ್ಯಾಣದ ಹೊರವಲಯದಲ್ಲಿರುವ ಇದು ಸ್ಮಾರಕ ಗುಹೆಯ ಮಾದರಿಯಲ್ಲಿದೆ. ಬಸವಣ್ಣನವರ ಮಹಾಮನೆ ಎಂದೇ ಜನರು ಇದನ್ನು ಕಾಣುತ್ತಾರೆ.

ಹಡಪದ ಅಪ್ಪಣನವರ ಗುಹೆ :

ಅರಿವಿನ ಮನೆಯ ಪಕ್ಕದಲ್ಲಿಯೇ ಈ ಗುಹೆ ಇದ್ದು , ತಂಪಾದ ನೆಲೆಯಾಗಿದೆ. ಹಡಪದ ಅಪ್ಪಣನವರು ಬಸವಣ್ಣನವರ ನಿಕಟವರ್ತಿಗಳಾಗಿದ್ದರು. ತಾಂಬೂಲವನ್ನು ಸಲ್ಲಿಸುವ ಕಾಯಕ ಅವರದ್ದಾಗಿತ್ತೆಂದು ತಿಳಿದುಬರುತ್ತದೆ.

ಅಕ್ಕ ನಾಗಮ್ಮ - ನೀಲಮ್ಮನವರ ಗವಿಗಳು :

ಈ ಎರಡೂ ಗವಿಗಳು ಅಕ್ಕಪಕ್ಕದಲ್ಲಿವೆ. ಚೆನ್ನಬಸವಣ್ಣನವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಇಲ್ಲಿಯೇ ಎಂಬುದು ಅಭಿಪ್ರಾಯ. ಈ ಗವಿಗಳು ಹನ್ನೆರಡನೇ ಶತಮಾನದ ಮಹಿಳೆಯರ ಆಧ್ಯಾತ್ಮಿಕ ಸಾಧನೆಯ ಕುರುಹುಗಳು.

ಬಸವ ಕಲ್ಯಾಣದ ಚಿತ್ರಗಳು
ಪರಿವಿಡಿ (index)
*
Previous ಸೊಲ್ಲಾಪುರ ಕೂಡಲ ಸಂಗಮ Next