Previous Basava Balaga Muscut Basava-Movies Next

Lingavanta / Lingayat in Guru Basava Vachana

*

Guru Basava Vachana in Kannada ವಿಶ್ವ ಗುರು ಬಸವಣ್ಣನವರ ವಚನಗಳು

Few people argued that Guru Basava never said that Lingayat/Lingavanta in his vachana, so we did research and found that that is complete false as Guru Basava clearly Lingavant in his many Vachanas . Here we have collected all those vachans which are having Lingavant word.

ಕೆಲವರು ಗುರು ಬಸವಣ್ಣನವರು ಲಿಂಗಾಯತ/ಲಿಂಗವಂತ ಎಂದು ಎಲ್ಲಿಯೂ ಹೇಳಿಲ್ಲ ಅಂತ ವಾದ ಮಾಡ್ತಾರೆ. ಅವರಿಗೋಸ್ಕರ. ಗುರು ಬಸವಣ್ಣನವರ ವಚನಗಳಲ್ಲಿ ಹುಡುಕಿ ನೋಡಿದಾಗ ಗುರು ಬಸವಣ್ಣನವರು ತಮ್ಮ ವಚನಗಳಲ್ಲಿ ಲಿಂಗವಂತ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂತಹ ಈ ಎಲ್ಲಾ ಗುರು ಬಸವಣ್ಣನವರ ವಚನಗಳನ್ನು ಇಲ್ಲಿ ಸಂಪಾದಿಸಿ ಕೊಡಲಾಗಿದೆ.

ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ,
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ,
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚಿರಿಸುವರ ಮೆಚ್ಚ ಕೂಡಲಸಂಗಮದೇವ.-ಸ. ವ. ಸಂ.-೧ ವಚನ ಸಂಖ್ಯೆ: ೬೫೩

ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು,
ಲಿಂಗವಂತರು ತಾವು ಅಂಜಲದೇಕೆ?
ಲಿಂಗವಿರಿಸಿದಂತಿಪ್ಪುದಲ್ಲದೆ,
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ.-ಸ. ವ. ಸಂ.-೧ ವಚನ ಸಂಖ್ಯೆ: ೬೮೫

ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಗಲ್ಲದೆ ಸಾಧ್ಯವಾಗದು ನೋಡಾ,
ಏಕಲಿಂಗಶರಿಗ್ರಾಹಕನಾದ ಬಳಿಕ,
ಆ ಲಿಂಗನಿಷ್ಠೆ ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವ ಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗ ಲಿಂಗ ಸಂಬಂಧಕ್ಕನ್ಯರಾದ ಜಡಭೌತಿಕ ಪ್ರತಿಷ್ಠೆಯನುಳ್ಳ
ಭವಿ ಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆಯಿಲಿಲ್ಲ, ಮಾಡಲೆಂತೂ ಬಾರದು,
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ
ವೀರಮಾಹೇಶ್ವರನು,
ಇದರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,
ಕೂಡಲಸಂಗಮದೇವ.-ಸ. ವ. ಸಂ.-೧ ವಚನ ಸಂಖ್ಯೆ: ೯೬೬

ಕಾಯದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂತವರಿರಲಿ,
ಷಡು ಮಹಾದೇವ ಶಾಸ್ತ್ರಾಗಮಪುರಾಣದರ್ಥವನೋದಿ
ಲಿಂಗ ಉಂಟು ಇಲ್ಲೆಂಬ ಅಜ್ಞಾನಿಗಳಂತಿರಲಿ,
ಷಡು ಶೈವರು ಹಂಚಾಗಿ ಹೋದರು,
ಎಂತು ನಿಜಲಿಂಗವಂತರಿಗೆ ಸರಿಯೆಂಬೆ?
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು
ಬುದ್ಧಿತಪ್ಪಿ ಕ್ರಮಗೆಟ್ಟು ಹೋದರು,
ಬ್ರಹ್ಮ ನಾನೆಂದು ಶಿರವ ಹೋಗಾಡಿಕೊಂಡನು,
ಬ್ರಹ್ಮಾದಿ ದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು,
ಹಮ್ಮಿಲ್ಲದ ಕಾರಣ
ಕೂಡಲಸಂಗನ ಶರಣರು ಜಗವಂದ್ಯರಾದರು.-ಸ. ವ. ಸಂ.-೧ ವಚನ ಸಂಖ್ಯೆ: ೧೧೪೮

ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು,
ಅವರೆಂತಿದ್ದಡೇನು? ಹೇಗಿದ್ದರೇನು? ಲಿಂಗವಂತರವರು,
ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು.-ಸ. ವ. ಸಂ.-೧ ವಚನ ಸಂಖ್ಯೆ: ೧೩೫೦

ಗಿರಿಗಳ ಮೆಲೆ ಹಲವು ತರುಮರಾದಿಗಳಿದ್ದು
ಶ್ರೀ ಗಂಧದ ಸನ್ನಿಧಿಯೊಳು ಪರಿಮಳವಾಗದೆ?
ಲಿಂಗವಂತನ ಸನ್ನಿಧಿಯಿಂದ ಹಿಂದಣ ದುಸ್ಸಂಗ ಕೆಡುವುದು,
ಕೂಡಲಸಂಗಮದೇವಯ್ಯಾ,
ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ?-ಸ. ವ. ಸಂ.-೧ ವಚನ ಸಂಖ್ಯೆ: ೧೫೧

ಹಾದರದ ಮಿಂಡನ ಹತ್ತಿರ ಮಲಗಿಕೊಂಡು,
ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ?
ತಾ ಶಿವಭಕ್ತನಾಗಿ, ತನ್ನಂಗದ ಮೇಲೆ ಲಿಂಗವಿದ್ದು
ಮತ್ತೆ ಭಿನ್ನಶೈವಕ್ಕೆರುಗುವುದೆ ಹಾದರ,
ಕೂಡಲಸಂಗಯ್ಯನು ಅವರ ಮೂಗ ಕೊಯ್ಯದೆ ಮಾಣ್ಬನೆ?-ಸ. ವ. ಸಂ.-೧ ವಚನ ಸಂಖ್ಯೆ:೧೪೧೫

ಮೋಳಿಗೆ ಮಾರಯ್ಯ

1424
ಅಂಗ ಲಿಂಗವಂತವಾದ ಮತ್ತೆ
ಮುಟ್ಟುವ ತಟ್ಟುವ, ಸೋಂಕಿನಲ್ಲಿ ಸುಳಿವ,
ಇದಿರಿಟ್ಟು ಬಂದ ಪದಾರ್ಥವ
ಅಂಗಲಿಂಗಕ್ಕೆ ಕೊಟ್ಟುಕೊಳಬೇಕು.
ಪ್ರಾಣಲಿಂಗವಾದ ಮತ್ತೆ ಕರಣಂಗಳಿಗಿಂಬುಗೊಡದಿರಬೇಕು.
ತನ್ನನರಿದುದಕ್ಕೆ ಉಭಯಾರೂಢನಾಗಿರಬೇಕು.
ಉಭಯವೇಕವಾದ ಮತ್ತೆ ಸಾಕು ಸತ್ಕ್ರೀ, ನಿಃಕಳಂಕ ಮಲ್ಲಿಕಾರ್ಜುನಾ

ಮಡಿವಾಳ ಮಾಚಿದೇವ

503
ಆ ಮಹಾಲಿಂಗವಂತನೊಬ್ಬನುಂಡನೆನಬೇಡ.
ಆತನ ದಂತಂಗಳೆಲ್ಲ ಪಂತಿಕಾರರು.
ಆತನ ನಡುವಿಪ್ಪ ಕಾಂತಿರೂಪ ನೀನು ಕಾಣಾ, ಕಲಿದೇವಯ್ಯ.

ಚೆನ್ನಬಸವಣ್ಣ

1539
ಲಿಂಗವಂತ ಲಿಂಗಪ್ರಾಣಿ ಸರ್ವಾಂಗಲಿಂಗಿ ಎಂಬಿರಿ.
ಭಂಗವಾಯಿತ್ತಲ್ಲಾ ಈ ಮಾತನಾಡಿದಡೆ !
ಕೊಂಬುದು ಪಾದೋದಕ ಪ್ರಸಾದ, ಕಳಚುವುದು ಮಲಮೂತ್ರ.
ಅಂಗ ಸೋಂಕಿದ ಪಾದೋದಕಕ್ಕೀ ವಿದಿ
ಕೂಡಲಚೆನ್ನಸಂಗಯ್ಯನಲ್ಲಿ ಸಂಗಸುಖದ ಪರಿ ಬೇರೆ.

1538
ಲಿಂಗವಂತನ ಲಿಂಗವೆಂಬುದೆ ಶೀಲ.
ಲಿಂಗವಂತನ ರಾಣಿವಾಸವ ಲಿಂಗದ ರಾಣಿವಾಸವೆಂಬುದೆ ಶೀಲ.
ಲಿಂಗವಂತನ ಅರ್ಥ-ಪ್ರಾಣ-ಅಬಿಮಾನಕ್ಕೆ ತಪ್ಪದಿಪ್ಪುದೆ ಶೀಲ.
ಲಿಂಗವಂತನ ಪಾದೋದಕ-ಪ್ರಸಾದಸೇವೆಯ ಮಾಡುವುದೆ ಶೀಲ.
ಇಂತಪ್ಪ ಶೀಲವೇ ಶೀಲ.
ಉಳಿದ ಶೀಲಕ್ಕೆ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?

ಅಲ್ಲಮಪ್ರಭುದೇವರು

1503
ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೆ ಭಂಗ.
ಹಂಗು ನೋಡಾ ಹಂಗಿನ ಶಬ್ದ ನೋಡಾ !
ಕೊಡನ ತುಂಬಿದ ಹಾಲನೊಡೆಯ ಹಾಯ್ಕಿ
ಇನ್ನು ಉಡಿಗಿಹೆನೆಂದಡೆ ಉಂಟೆ ? ಗುಹೇಶ್ವರಾ ?

1504
ಲಿಂಗವಂತನ ನಡೆ ನುಡಿ ಚಾರಿತ್ರ ನಿಂದಕವನಾಡಿದಡೆ
ಆ ಲಿಂಗ ನಿಮ್ಮ ಹಲ್ಲ ಕಳೆವ; ಆ ಲಿಂಗ ನಿಮ್ಮ ನರಕಕ್ಕಿಕ್ಕುವ.
ಲಿಂಗವಂತ ಲಿಂಗ ಪ್ರಾಣಿಯಾಗಿಪ್ಪ.
ಇದು ಸತ್ಯ ವಚನ.
ಇದ ಕೇಳಿ ಲಿಂಗವಂತನ ನಾಸ್ತಿಕವನಾಡಿದಡೆ
ರೌರವನರಕದಲ್ಲಿಕ್ಕುವ ಕಾಣಾ
ಗುಹೇಶ್ವರಾ.

ಸಿದ್ಧರಾಮೇಶ್ವರ

1890
ಲಿಂಗವಂತರು ತಾವಾದ ಬಳಿಕ,
ಅಂಗನೆಯರ ನಡೆನುಡಿಗೊಮ್ಮೆ
ಲಿಂಗದ ರಾಣಿಯರೆಂದು ಭಾವಿಸಬೇಕು.
ಲಿಂಗವಂತರು ತಾವಾದ ಬಳಿಕ,
ಅನುಭವ ವಚನಗಳ ಹಾಡಿ
ಸುಖದುಃಖಗಳಿಗಭೇದ್ಯವಾಗಿರಬೇಕು.
ಲಿಂಗವಂತರು ತಾವಾದ ಬಳಿಕ,
ಜಂಗಮವ ಪೂಜಿಸಿ ಸದಾ ಲಿಂಗೈಕ್ಯಸುಖಿಗಳಾಗಿರಬೇಕು
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.

1891
ಸರ್ವರು ಲಿಂಗವಂತರೆಂದು ಮನದಲ್ಲಿ ಭಾವಿಸಿ
ನಡೆಯಬೇಕಲ್ಲದೆ,
ನಡೆನುಡಿಯಲ್ಲಿ ಭಾವಿಸಿ ನಡೆಯಬಾರದು ನೋಡಯ್ಯಾ.
ಸರ್ವರು ಲಿಂಗವಂತರೆಂದು ಭಾವಿಸಿದಲ್ಲಿ ಪೂರೈಸಿಕೊಳ್ಳಬೇಕಲ್ಲದೆ,
ಪುರಹರ ಕಪಿಲಸಿದ್ಧಮಲ್ಲಿಕಾರ್ಜುನನ ಮಂರವಾಸಿಗಳೆಂದು
ಭಾವಿಸಬಾರದು ನೋಡಯ್ಯಾ.

ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ

773
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.
ಅದೆಂತೆಂದಡೆ:
'ಬಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ |
ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ || '
ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ
ಕುಂಭೇಶ್ವರಲಿಂಗವೆಂಬೆನು.

ಹೊಡೆಹುಲ್ಲ ಬಂಕಣ್ಣ

1213
ಲಿಂಗವಂತರು, ಲಿಂಗಾಚಾರಿಗಳಂಗಣಕ್ಕೆ.
ಲಿಂಗಾರ್ಪಿತ ಭಿಕ್ಷಕ್ಕೆ ಹೋದಲ್ಲಿ, ಲಿಂಗಾರ್ಪಿತವ ಮಾಡುವಲ್ಲಿ,
ಸಂದೇಹವಿಲ್ಲದೆ ಕಾಣದುದನೆಚ್ಚರಿಸದೆ,
ಕಂಡುದ ನುಡಿಯದೆ, ಕಂಡುದನು ಕಾಣದುದನು,
ಒಂದೆಸಮವೆಂದುತಿಳಿಯಬಲ್ಲಡೆ, ಕುಂಭೇಶ್ವರಲಿಂಗವೆಂಬೆನು.

ಮರುಳಶಂಕರದೇವ

1115
ಲಿಂಗವಂತನ ನಿಲವು ಸಂಗಸೂತಕಿಯಲ್ಲ.
ಕಂಗಳ ಕಳೆಯ ಬೆಳಗಳಿದು ಉಳಿದಾತ ಅಂಗಲಿಂಗೈಕ್ಯ ಕಾಣಾ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ.
ನಿಮ್ಮ ಲಿಂಗವಂತನ ನಿಲುವಿನ ಪರಿಯ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.

1116
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ,
ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ,
ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ,
ದುರ್ಗುಣ ದುರಾಚಾರದಲ್ಲಿ ನಡೆದು,
ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ.
ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ.
ಇದ ನಮ್ಮ ಶಿವಶರಣರು ಮೆಚ್ಚರು.
ಲಿಂಗವಂತನ ಪರಿ ಬೇರೆ ಕಾಣಿರೆ.
ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ.
ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ,
ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು.
ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ
ಸರ್ವನಿರ್ವಾಣಿಕಾಯೆಂಬೆನು.
ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ,
ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ,
ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.

ಉರಿಲಿಂಗಪೆದ್ದಿ

1514
ಲಿಂಗವಂತ ಲಿಂಗವಂತ ಎಂಬಿರಿ,
ಎಂತು ಲಿಂಗವಂತರಾದಿರೋ, ಅನ್ಯದೈವದ ಭಜನೆ ಮಾಣದನ್ನಕ್ಕ ?
ಭವಿಗಳ ಸಂಗವ ಮಾಣದನ್ನಕ್ಕ, ಎಂತು ಲಿಂಗವಂತರಾದಿರೋ ನೀವು ?
ಅದೆಂತೆಂದಡೆ,
ಶಿವಾಚಾರಸಮಾಯುಕ್ತಃ ಅನ್ಯದೈವಸ್ಯ ಪೂಜನಾತ್
ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್
ಅಶನೇ ಶಯನೇ ಯಾನೇ ಸಂಪರ್ಕೆ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಇಂತೆಂದುದಾಗಿ,
ಅನ್ಯದೈವ ಭವಿವುಳ್ಳನಕ,
ನೀವು ಲಿಂಗವಂತರೆಂದಿರೋ, ಮರುಳುಗಳಿರಾ ?
ಇದನರಿತು ಭಕ್ತಿಪಥವ ಸೇರದಿರ್ದಡೆ,
ನೀವೆಂದೆಂದಿಗೂ ಭವಭವದ ಲೆಂಕರು.
ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗ
ಮುನ್ನವೇ ದೂರವಯ್ಯ.

1507
ಲಿಂಗವಂತಂಗೆ ಲಿಂಗವು ಮಾಡಿದ ಪದವನು ಲಿಂಗವಂತರೆ ಬಲ್ಲರು.
ಕೇವಲ ಸಾಕ್ಷಾತ್ಪರವಸ್ತುವನು ಕರಸ್ಥಲದಲ್ಲಿ ಮೂರ್ತಿಯಾಗಿ
ಬಿಜಯಂಗೈಸಿ ಕೊಟ್ಟನಾಗಿ ಸಾಲೋಕ್ಯಪದ,
ಅಂಗದ ಮೇಲೆ ನಿರಂತರ ಪೂಜೆಗೊಳ್ಳುತ್ತಿಹನಾಗಿ ಸಾಮೀಪ್ಯಪದ,
ಸದ್ಭಕ್ತರೂಪ ಮಾಡಿದವನಾಗಿ ಸಾರೂಪ್ಯಪದ,
ಪ್ರಾಣಲಿಂಗವ ಮಾಡಿ ಅವಿನಾಭಾವವ ಮಾಡಿದನಾಗಿ ಸಾಯುಜ್ಯಪದ,
ಇಂತೀ ಚತುರ್ವಿಧ ಪದವಾಯಿತ್ತು.
`ಲಿಂಗಮಧ್ಯೇ ಶರಣಂ ಶರಣಮಧ್ಯೇ ಲಿಂಗಂ' ಎಂಬುದಾಗಿ
ಸರ್ವಭೋಗಂಗಳನೂ ಸಹವಾಗಿ ಭೋಗಿಸಿ
ಪ್ರಸಾದವನಿಕ್ಕಿ ಸಲಹಿದನಾಗಿ ಸದ್ಯೋನ್ಮುಕ್ತನು, ಸರ್ವಾಂಗಲಿಂಗವು.
ಈ ತಾತ್ಪರ್ಯದ ಮರ್ಮವನು ಲೋಕದ ಜಡಜೀವಿಗಳೆತ್ತ ಬಲ್ಲರಯ್ಯಾ ?
ಬಲ್ಲಡೆ, ಲಿಂಗಾನುಭಾವಿಗಳೇ ಬಲ್ಲರಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1513
ಲಿಂಗವಂತರ ಲಿಂಗವೆಂಬುದೇ ಶೀಲ,
ಲಿಂಗವಂತರ ರಾಣಿವಾಸವ ಲಿಂಗದ ರಾಣಿವಾಸವೆಂಬುದೇ ಶೀಲ,
ಲಿಂಗವಂತರ ಅರ್ಥ ಪ್ರಾಣ ಅಭಿಮಾನಕ್ಕೆ ತಪ್ಪದಿಪ್ಪುದೇ ಶೀಲ,
ಲಿಂಗವಂತರ ಪಾದೋದಕ ಪ್ರಸಾದ ಸೇವನೆಯ ಮಾಡುವುದೇ
ಮಹಾಶೀಲವಯ್ಯಾ,
ಇಂತಪ್ಪ ಶೀಲ ಸುಶೀಲದೊಳಗಾದ ಶೀಲವೇ ಶೀಲ.
ಈ ಕ್ರೀಯನರಿದು ನಂಬಿ ಭಯಭಕ್ತಿಯಿಂ
ತನು ಮನ ಧನದಲ್ಲಿ ದುರ್ಭಾವ ಹುಟ್ಟದೆ
ಸ್ವಭಾವ ಸದ್ಭಾವದಿಂ ಏಕಭಾವವಾದಡೆ, ಆತನೇ ಸದ್ಭಕ್ತನು.
ಅಂತಹ ಸದ್ಭಕ್ತದೇಹಿಕದೇವನಾಗಿಪ್ಪನು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1508
ಲಿಂಗವಂತನು ಕೇವಲ ಲಿಂಗಮೂರ್ತಿ.
ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದವ ಧರಿಸಿ,
ಲಿಂಗವಂತರಲ್ಲಿ ವರ್ತಿಸಿ, ಸರ್ವವೂ ಲಿಂಗಕ್ರೀಯಾಗಿದ್ದು
ಲಿಂಗವಿಲ್ಲದವರಲ್ಲಿ ಧನದ ಕೊಳುಕೊಡೆ ಮನದ ಕೊಳುಕೊಡೆ
ತನುವಿನ ಕೊಳುಕೊಡೆಯನೂ ಮಾಡಿದಡೆ
ನಾಚದೆ ಶಿವಾಚಾರ? ನಾಚದೇ ಪ್ರಸಾದ? ನಾಚರೆ ಲಿಂಗವಂತರು.
ಸುಡು, ಸುಡು, ಕಡು ಕಷ್ಟ, ಅವರನು ಬಿಡು ಬಿಡು.
ಆ ತನುವನು ಲಿಂಗವಂತರಲ್ಲಿಯೇ ಸರ್ವಕ್ರೀಯ ಅರ್ತಿಸುವುದು.
ತನಗೆ ಇಚ್ಛೈಸಿತ್ತ ಕೊಂಡು ಕೊಂಬುದು,
ಅವರು ಇಚ್ಛೈಸಿತ್ತ ಕೊಡುವುದು,
ಅವರಲ್ಲಿಯೆ ಅನುಭವವನಾಸೆಗೈವುದು.
ಅ[ನ್ಯ]ರ ವಿಚಾರದಲ್ಲಿ ನಡೆದು ನರಕಕ್ಕಿಳಿಯಲಾಗದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1509
ಲಿಂಗವಂತನು ಲಿಂಗವಂತಂಗೆ
ಅಣುಮಾತ್ರ ಅವಮಾನವ ಮಾಡಿದಡೆ ಮನ ನೋವುದಯ್ಯಾ.
ಲಿಂಗವಂತನು ಶುಚಿ ಸತ್ಯನು ಶಾಂತನು ಲಿಂಗಸುಖಿ,
ಲಿಂಗದಲ್ಲಿ ತನುಮನಧನ ಬೆರಸಿಪ್ಪುದಾಗಿ, ಲಿಂಗವೂ ಒಲಿವುದಯ್ಯಾ.
ಬಳಿಕ ಮಹಾಪರ್ವತಪ್ರಮಾಣ ಸತ್ಕಾರವ ಮಾಡಿದರೂ
ನೋವು ಮಾಣದು, ಶಿವನೊಲವು ತಪ್ಪದು.
ಹಿಂದೆ ವಿಷ್ಣು, ಬ್ರಹ್ಮ, ಇಂದ್ರ, ದಕ್ಷನು
ಇದನರಿದು ತನು ಮನ ಧನದಲ್ಲಿ ವಂಚನೆಯಿಲ್ಲದೆ
ಭಯಭಕ್ತಿಯಿಂದರಿದು ನಡೆದು ಸುಖಸಂಗತಾತ್ಪರ್ಯ
ಸಹಜವಿಡಿದಿಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1510
ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು,
ಲಿಂಗಬಾಹ್ಯರ ಸಂಗವ ಮಾಡಲಾಗದು.
ಸ್ತ್ರೀ ಪುತ್ರರು ಮೊದಲಾದವರ ಕೂಡ
ಲಿಂಗವಿಲ್ಲದವರೊಡನೆ ಸಂಗವ ಮಾಡಲಾಗದು.
ಅದೆಂತೆಂದೆಡೆ :
ಶಿವಲಿಂಗಾಂಗಸಂಪನ್ನೋ ಲಿಂಗಬಾಹ್ಯಸತೀಸುತಾನ್
ಆಲಿಂಗ್ಯ ಚುಂಬನಂ ಕೃತ್ವಾ ರೌರವಂ ನರಕಂ ವ್ರಜೇತ್
ಎಂದುದಾಗಿ ಮತ್ತೆಯೂ_
ಲಿಂಗೀ ಲಿಂಗಿ ಸಹಾವಾಸೀ ಲಿಂಗಿನಾ ಸಹ ವರ್ತಯೇತ್
ಲಿಂಗಿನಾ ಸಹ ಭುಂಜಿತ ಲಿಂಗಯೋಗೋ ನ ಸಂಶಯಃ
ಎಂದುದಾಗಿ ಲಿಂಗವಂತನು ಲಿಂಗವಂತರಲ್ಲಿಯೇ
ಸಂಗವ ಮಾಡುವುದು ಶಿವಪಥವಯ್ಯಾ.
ಲಿಂಗವಿಲ್ಲದವರೊಡನೆ ಸಂಗವ ಮಾಡುವುದು ಮಹಾಪಾತಕವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

1511
ಲಿಂಗವಂತನು ಲಿಂಗವಂತರೊಡನೆ ಸತ್ಯವ ನುಡಿವುದು, ಸಹಜದಲ್ಲಿ ನಡೆವುದು,
ಪ್ರೇಮದಲ್ಲಿ ಸಂಗವ ಮಾಡುವುದು.
ಈ ಕ್ರೀ ಇಹಪರ ಸಿದ್ಧಿ, ಲಿಂಗವನರಿವುದಕ್ಕೆ ದೃಷ್ಟ.
ಲಿಂಗಾರ್ಚನೆಯೇ ಕ್ರೀ, ಲಿಂಗ ಒಲಿದುದಕ್ಕೆ ಚಿಹ್ನ, ಇದು ನಿತ್ಯ.
ಲಿಂಗವಂತನು ಲಿಂಗವಂತರೊಡನೆ
ಹೇಮದಾಸೆಗೆ ಪ್ರೇಮಗುಂದಿ ನುಡಿಯಲಾಗದು,
ಅಸತ್ಯವ ನುಡಿಯಲಾಗದು,
ಕ್ರೋಧಿಸಿ ನುಡಿಯಲಾಗದು, ವಂಚಿಸಿ ನುಡಿಯಲಾಗದು.
ವೇದಶಾಸ್ತ್ರ ಆಗಮ ಪುರಾಣ ಪುರಾತನರ ಚರಿತ್ರವನರಿಯದೆ
ಆದಿ ಮಧ್ಯ ಪರಿಪಕ್ವತೆಯನರಿಯದೆ,
ತರ್ಕಿಸಿ ನುಡಿಯಲಾಗದು, ದುಶ್ಚರಿತ್ರದಲ್ಲಿ ನಡೆಯಲಾಗದು.
ಆಜ್ಞಾನಕ್ರೀಯಲ್ಲಿ ವರ್ತಿಸಿ ನಡೆಯಲು
ಇಹಪರವಿಲ್ಲ, ಲಿಂಗವನರಿಯಬಾರದು,
ಲಿಂಗವಂತರನೆಂತೂ ಅರಿಯಬಾರದು.
ಅರಿಯದವಂಗೆ ಪೂಜಿಸಲೆಂತಹುದು ?
ಪೂಜೆ ಇಲ್ಲದವಂಗೆ ಭಕ್ತಿ ಎಂತಹುದು ?
ಭಕ್ತಿ ಇಲ್ಲದವಂಗೆ ಪ್ರಸಾದವೆಂತಹುದು ?
ಪ್ರಸಾದವಿಲ್ಲದವಂಗೆ ಮುಕ್ತಿ ಎಂತಹುದು ?
ಇದನರಿದು, ಲಿಂಗವಂತನು ಲಿಂಗವಂತರಲ್ಲಿ
ಸತ್ಯಸಂಭಾಷಣೆ ಯೋಗವಾದಡೆ ಕೇವಲ ಮುಕ್ತಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

1512
ಲಿಂಗವಂತನು ಲಿಂಗವಿಲ್ಲದರ ಬಯಸಿದಡೆ ಆತಂಗೆ ಲಿಂಗವಿಲ್ಲ,
ಲಿಂಗವಿಲ್ಲದವನು ಆರಿಗೂ ಬಾತೆ ಅಲ್ಲ.
ಬಾತೆ ಅಲ್ಲದವಂಗೆ ಆರೂ ಸ್ನೇಹಿಸರು, ಆರು ಏನನೂ ಕೊಡರು.
ಇದು ಕಾರಣ,
ದುರಾಶೆಯಂ ಬಿಟ್ಟು ನಿರಾಶೆಯಾಗಿ ಲಿಂಗವನಾಶ್ರೈಸಿದಡೆ ಪ್ರಸಾದವಪ್ಪುದು
ಪ್ರಸಾದದಿಂದಿಹಪರ ಸಿದ್ಧಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1572
ಶಿವ ಶಿವಾ, ಲಿಂಗವಂತರ ಚಿತ್ತಕ್ಕೆ, ಲಿಂಗದ ಚಿತ್ತಕ್ಕೆ
ಬಹಹಾಂಗೆ ನುಡಿದು ನಡೆದು
ಸದ್ಭಕ್ತಿಯ ಮಾಡಿ ಸದ್ಭಕ್ತರೆನಿಸಿಕೊಳ್ಳಿರೆ, ಮೂಕರಾಗಿಯಿರದೆ.
ಹಿಡಿವುದ ಹಿಡಿಯದೆ, ಬಿಡುವುದ ಬಿಡದೆ ನಗೆಗೆಡೆಯಾದಿರಿ,
ಅಭಕ್ತರಾದಿರಿ, ನರಕಕ್ಕೆ ಹೋದಿರಿ.
ಹಿಡಿವುದಾವುದೆಂದಡೆ:
ಗುರು ಲಿಂಗ ಜಂಗಮ ಒಂದೆಂದು ನಂಬಿ
ಲಿಂಗವಿದ್ದುದೆಲ್ಲಾ ಲಿಂಗವೆಂದು ನಂಬಿ
ತನು ಮನ ಧನ ವಂಚನೆಯಿಲ್ಲದೆ ಅರ್ಪಿಸಿ
ಶ್ರೀಗುರುಲಿಂಗಜಂಗಮದ ಶ್ರೀಪಾದವನು
ತನು ಮನ ಧನದಲ್ಲಿ ಹಿಡಿವುದು.
ಪರಸ್ತ್ರೀ ಪರಧನ ಪರದೈವವನು, ಮನೋವಾಕ್ಕಾಯದಲ್ಲಿ
ಅಣುರೇಣು ಮಾತ್ರ ಆಸೆದೋರದೆ ಬಿಡುವುದು.
ಇವ ಬಿಟ್ಟು ನಡೆದುದೆ ನಡೆ, ಇವ ಬಿಟ್ಟೆನೆಂಬ ಸತ್ಯದ ನುಡಿಯೇ ನುಡಿ.
ಇದೇ ಆಚಾರ, ಇದೇ ವ್ರತ, ಇದೇ ಶೀಲ
ಇದೇ ಭಕ್ತಿಯ ಕುಳ, ಇದೇ ಶಿವಭಕ್ತಿಸ್ಥಳ
ಇದೇ ಸತ್ಕ್ರಿಯಾ, ಈ ಸತ್ಕ್ರಿಯೆಯಲ್ಲಿ ನಡೆದಾತನೇ ಭಕ್ತನು.
ಆತನೇ ಮುಕ್ತನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1575
ಶೀಲ ಸಮಾನವಿಲ್ಲೆಂದು ಅಲಿಂಗವಂತರ ಮಗಳಿಗೆ
ಉದ್ದೇಶದಿಂದ ಲಿಂಗಸ್ವಾಯತವ ಮಾಡಲು ಆಚಾರವಲ್ಲ.
ಅದೇನು ಕಾರಣವೆಂದಡೆ, ಅದು ಶಿವಾಚಾರಕ್ಕೆ ಸಲ್ಲದಾಗಿ,
ಮುಂದೆ ಗುರೂಪದೇಶಕ್ಕೆ ದೂರವಾಗಿ.
ಚಿತ್ತಶುದ್ಧದಿಂದ ಸತ್ಯಸದಾಚಾರವ ಬಯಸಿ ಬಂದು ಕೇಳಿದಡೆ
ತನ್ನ ಕೈಯ ಧನವ ವೆಚ್ಚಿಸಿ
ಗುರುದೀಕ್ಷೆ ಲಿಂಗಸ್ವಾಯತವ ಮಾಡಿಸುವುದು ಸದಾಚಾರ.
ಈ ಗುಣವುಳ್ಳಾತನೇ ಲಿಂಗದ ವಮರ್ಿಗನು,
ಆತನೇ ಲಿಂಗದಾತೃ, ಆತನೇ ಲಿಂಗಸನ್ನಹಿತನಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1515
ಲಿಂಗವಂತನು ಲಿಂಗಾಚಾರಿ ಸದಾಚಾರಿ ಭೃತ್ಯಾಚಾರಿಯೆನಿಸಿದಡೆ
ಲಿಂಗವನೊಲಿಸಬಹುದು.
ಲಿಂಗದ ನಚ್ಚು, ಲಿಂಗವಂತರ ಮೆಚ್ಚು.
ಇದು ಸತ್ಯ ಮುಕ್ತಿ ಕೇಳಿರಣ್ಣಾ.
ಲಿಂಗವಂತನು ಪರಧನ, ಪರಸ್ತ್ರೀ, ಪರದೈವಕ್ಕಳುಪಿ
ಅಲ್ಲಿಯೇ ವರ್ತಿಸಿ
ಮಾಹೇಶ್ವರಶೋಭೆಯಂ ಮಾಡಿಹೆನೆಂಬ,
ಮತ್ತೆ ಲಿಂಗಾರ್ಚನೆಯಂ ಮಾಡಿಹೆನೆಂಬ,
ಲಿಂಗವನೊಲಿಸಿಹೆನೆಂಬ,
ಲಿಂಗವಂತರಲ್ಲಿ ಸಲುವೆನೆಂಬ,
ಲಿಂಗವೇನು ತೊತ್ತಿನ ಮುನಿಸೆ ?
ವೇಶ್ಯೆಯ ಸರಸವೇ ?
ವೈತಾಳಿಕನ ಕಲಹವೆ ?
ತಪ್ಪಿ ನಡೆದು, ತಪ್ಪಿ ನುಡಿದು, ತಪ್ಪಿ ಕೂಡಿ
ಮರಳಿ ಮರಳಿ ಪ್ರಯೋಗಿಸುವಂತಾಗಿ, ಅಂತಲ್ಲ ಕೇಳಿರಣ್ಣಾ.
ಪತಿವ್ರತೆಯು ಸತ್ಪುರುಷನ ಕೂಡಿದಂತೆ,
ಸಜ್ಜನಮಿತ್ರರ ಸಂಗದಂತೆ,
ಮಹಾಜ್ಞಾನಿಗಳ ಅರಿವಿನಂತೆ,
ಶುದ್ಧವಾದುದನೇ ಕೂಡಿಕೊಂಡಿಪ್ಪ, ಶುದ್ಧವಿಲ್ಲದುದನೇ ಬಿಡುವ.
ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು
ಅಣುಮಾತ್ರ ತಪ್ಪ, ಕ್ಷಣಮಾತ್ರ ಸೈರಿಸ.

1519
ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ.
ಆತನ ನುಡಿಯೆ ವೇದ, ಆತನ ನಡೆಯೆ ಶಾಸ್ತ್ರ ಪುರಾಣ ಆಗಮ ಚರಿತ್ರವು.
ಆ ಮಹಾಮಹಿಮನ ನುಡಿಯಲ್ಲಿ ತರ್ಕವ ಮಾಡಲಾಗದು.
ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ.
ಲಿಂಗವನರಿದ ಮಹಾಮಹಿಮಂಗೆ ನಮೋ ನಮೋ ಎಂಬೆನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ಕಾಡಸಿದ್ಧೇಶ್ವರ

354
ಲಿಂಗವಂತರಿಗೆ ಮುಹೂರ್ತವ ಪೇಳಿ
ಪಂಚಾಂಗವ ತೋರಬೇಕಲ್ಲದೆ
ಭವಿಗಳಿಗೆ ಮುಹೂರ್ತವ ಪೇಳಿ ಪಂಚಾಂಗವ ತೋರಲಾಗದು.
ಅದೇನು ಕಾರಣವೆಂದಡೆ:
ಕೈಯೊಳಗಿನ ಪಂಚಾಂಗ ಹೃದಯದೊಳಗಣ ಮುಹೂರ್ತ
ತನಗೆ ಸಾಧ್ಯವಾಗದಾಗಿ.
ಪೇಳಿದರೆ ಪೇಳಬಹುದು.
ಹಣವ ಕೊಡವುಳ್ಳವರ ಕಂಡರೆ
ಪಂಚಾಂಗದ ಮುಹೂರ್ತವ ನೋಡೆಂದನಯ್ಯಾ ಗೋವಿಂದಭಟ್ಟ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

ಉರಿಲಿಂಗಪೆದ್ದಿ

ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು,
ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ.
ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು,
ಲಿಂಗವಂತರ ಮಹಾಶಾಸ್ತ್ರಮಾರ್ಗವಲಿಂಗವೇ ಬಲ್ಲನಯ್ಯಾ.
ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು,
ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ.
ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು,
ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ.
ದೇವ ದಾನಮಾನವರಿಗೆಯೂ ಅರಿಯಬಾರದು.
ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ
ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ
ಎಂದುದಾಗಿ,
ಆರಿಗೆಯೂ ಅರಿಯಬಾರದು.
ಲಿಂಗವಂತರು ಉಪಮಾತೀತರು, ವಾಙ್ಮನೋತೀತರು, ಆರ ಪರಿಯೂ ಇಲ್ಲ.
ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾ:
ಶಿವೇನ ಸಹ ತೇ ಭುಙ್ತ್ವಾ ಭಕ್ತಾ ಯಾಂತಿ ಶಿವಂ ಪದಂ
ಲೋಕಚಾರನಿಬಂಧೇನ ಲೋಕಾಲೋಕಾವಿವರ್ಜಿತಾ:
ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನ:
ಎಂದುದಾಗಿ,
ಈ ಲೋಕದ ಮಾರ್ಗವ ನಡೆಯರು, ಲೋಕದ ಮಾರ್ಗವ ನುಡಿಯರು.
ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ ಬೇರೆ ಕಾಣಿರಣ್ಣಾ.
ಶ್ರೀಗುರು ಲಿಂಗದಿಂದಲುದಯಿಸಿ ಪ್ರಾಣಲಿಂಗಸಂಭಂಧಿಗಳಾದ ಮಹಾಲಿಂಗವಂತರಿಗೆ
ಪ್ರಾಣಲಿಂಗ, ಕಾಯಲಿಂಗ ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ,
ಇದು ಕಾರಣ.
ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ.
ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದುದೆಲ್ಲಾ ಪ್ರಸಾದ.
ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ./ಸವಸ6/1539
Back to index

*
Previous Basava Balaga Muscut Basava-Movies Next
cheap jordans|wholesale air max|wholesale jordans|wholesale jewelry|wholesale jerseys