ಸಿದ್ಧಾಂತಿ ವೀರಸಂಗಯ್ಯನ ವಚನಗಳು

604
ಕ್ರೀಯಲ್ಲಿ ವಸ್ತುವಿಪ್ಪುದೆ ದಿಟವಾದಡೆ, ತಿಳಿದು ನೋಡಿದಲ್ಲಿ,
ವಸ್ತುವಿನಲ್ಲಿ ಕ್ರೀ ಇಪ್ಪುದೆ ದಿಟ.
ಇಂತು ಇನ್ನೀ ಉಭಯವ ತಿಳಿದು ನೋಡಿದಲ್ಲಿ,
ವಸ್ತುವಿಂಗೂ ಕ್ರೀಗೂ ಭಿನ್ನ ಉಂಟೆ ?
ಅದೆಂತೆಂದಡೆ : ಸಕ್ಕರೆಯ ಕುಂಭವೆನಲಿಕೆ, ತುಪ್ಪದ ಕಂದಳೆನಲಿಕೆ,
ಕಪರ್ುರದ ಕರಂಡವೆನಲಿಕೆ, ಆ ವಸ್ತು ದೃಷ್ಟ ದಿಟವೆ ?
ಕುಂಭ ಸಕ್ಕರೆಯಲ್ಲ, ಸಕ್ಕರೆ ಕುಂಭವಲ್ಲ,
ತುಪ್ಪ ಕಂದಳಲ್ಲ, ಕಂದಳ ತುಪ್ಪವಲ್ಲ,
ಕರಂಡ ಕಪರ್ುರವಲ್ಲ, ಕರ್ಪುರ ಕರಂಡವಲ್ಲ.
ಅಲ್ಲಿದ್ದ ವಸ್ತು ಹೋದ ಮತ್ತೆ ಉಪದೃಷ್ಟದ ಮಾತಡಗಿತ್ತು.
ಬಣ್ಣವಿಲ್ಲದ ಮತ್ತೆ ಬಂಗಾರವೆಂಬ ಕುರುಹುಂಟೆ ?
ಸಕ್ಕರೆ ತುಪ್ಪ ಕರ್ಪುರ ಹೋದ ಮತ್ತೆ,
ಘಟವಲ್ಲದ ವಸ್ತು ನಾಮವಿಲ್ಲ.
ವಸ್ತು ವಸ್ತುಕದಂತೆ, ಘಟ ಆತ್ಮನಂತೆ,
ಉಭಯಕ್ಕೂ ಭಿನ್ನವಿಲ್ಲದೆ ಸಿದ್ಧಿಯಾಗಿ,
ಆ ಸಿದ್ಧಿ ಪ್ರಸಿದ್ಧಿಯಾಗಿ, ಆ ಪ್ರಸಿದ್ಧಿ ಪ್ರಸನ್ನವಾಗಿ,
ಆ ಪ್ರಸನ್ನ ಪ್ರಸಂಗಕ್ಕೆ ಒಡಲರತುದು,
ಗೋಳಕಾಕಾರ ವಿಶ್ವವಿರಹಿತಲಿಂಗವು ತಾನಾದುದು.

605
ಗಾಜಿನ ಕುಪ್ಪಿಗೆಯಲ್ಲಿ ನೀರೆಣ್ಣೆಯ ಹೊಯ್ಯಲಿಕ್ಕಾಗಿ,
ನೀರೂ ಎಣ್ಣೆಯೂ ಬೇರಾಗಿ ತೋರೂದು.
ಆಧಾರ ಗುಣವೆಂದು ನಿಧಾನಿಸಿಕೊಂಡು ನೋಡಲು,
ಕುಪ್ಪಿಗೆಯ ಒಪ್ಪವೊ ? ನೀರು ಎಣ್ಣೆ ಅದರೊಳಗೊಪ್ಪಿಹ ಭೇದವೊ ?
ಕುಪ್ಪಿಗೆಯ ಗುಣವೆಂದಡೆ ನೀರೆಣ್ಣೆ ಸೇರಿದ ಮತ್ತೆ ,
ಕುಪ್ಪಿಗೆಯಲ್ಲಿ ಕೃತ್ರಿಮ ಒಂದೂ ಇಲ್ಲಾ ಎಂದಡೆ ದೃಷ್ಟವಿರೋಧ.
ಅದೆಂತೆಂದಡೆ : ಆ ಅಂಗ ತಾಳ್ದುದರಿಂದ ಪೃಥಕ್ಕಿಟ್ಟು ಅಂಗ ಬೇರಾಯಿತ್ತು.
ಮತ್ತೆ ಮೃತ್ತಿಕೆಯ ಅಂಗದಲ್ಲಿ ಎಣ್ಣೆ ನೀರ ತುಂಬಿ ನೋಡಲಿಕ್ಕಾಗಿ
ಬಾಹ್ಯವಿದಿರಲ್ಲಿ ಒಂದೂ ಕಾಣಬಂದುದಿಲ್ಲ.
ಈ ಗುಣ ಘಟಹೊರೆಯ ಭೇದ,
ಆತ್ಮದಿರವಿನ ಘಟ, ಸಂಸರ್ಗೆಯ ಭಾವ.
ಇದ ತಿಳಿವುದು ಕುಟಿಲರಿಗೆ ಅಸಾಧ್ಯ.
ಅಕುಟಿಲರಿಗೆ ಸಾಧ್ಯವೇದ್ಯ, ಗೋಳಕಾಕಾರ ವಿಶ್ವವಿರಹಿತ ಲಿಂಗವು.

606
ದ್ವೈತಾದ್ವೈತಂಗಳೆಂದು ಸಂಬಂಧಿಸಿ ನುಡಿವಲ್ಲಿ,
ದ್ವೈತವೆರಡು ಅದ್ವೈತ ಒಂದೆ, ದ್ವೈತ ಉಂಟು ಅದ್ವೈತವಿಲ್ಲ.
ಅದು ಒಂದರಲ್ಲಿ ಹುಟ್ಟಿ ಕುರುಹಿಡುವನ್ನಕ್ಕರ,
ಸಿದ್ಧಾಂತವಲ್ಲ, ಪ್ರಸಿದ್ಧಾಂತವಲ್ಲ.
ಅದ ನಿನ್ನ ನೀ ತಿಳಿ, ಅದು ನಿನಗನ್ಯಭಿನ್ನವಲ್ಲ.
ಗೋಳಕಾಕಾರ ವಿಶ್ವವಿರಹಿತಲಿಂಗವು ತಾನು ತಾನೆ.

607
ರತ್ನಭಂಡಾರ ಮುತ್ತು ವಸ್ತ್ರದ ಪೆಟ್ಟಿಗೆಯಲ್ಲಿ ಬಾಹ್ಯವಸ್ತು ತಾವಪ್ಪವೆ ?
ಬೈಕೆಯ ದೃಷ್ಟವಲ್ಲದೆ ಗುಣವಸ್ತು ಗುಣವೊಳಗಿಲ್ಲದಿರೆ,
ಬಿದಿರು ಮರ ಲೋಹ ಮುಂತಾದ ಇದಿರಿಟ್ಟ ಕರಂಡಕೆಲ್ಲಕ್ಕೂ
ಒಳಗಣ ಗುಣವಸ್ತು ಇಲ್ಲದಿರೆ, ಆತ್ಮನೆಯ್ದಿದ ಘಟದಂತಿಪ್ಪವು.
ಆ ಗುಣವಸ್ತು ವಸ್ತುಕದ ಲಕ್ಷದ ನಿರ್ಲಕ್ಷವ ತಿಳಿದು,
ತಾನೇನ ಹಿಡಿದು ಧರಿಸಿದಲ್ಲಿಯೂ ಅವು ತಾನಲ್ಲ, ಅವರೊಳು ತಾನಿಲ್ಲ.
ಆ ಗುಣ ಮನಭ್ರಾಂತಿಯಲ್ಲದೆ ಲೀಲೋಲ್ಲಾಸತೆ,
ಆ ವಿವರ ಗುಣಭಾವವಳಿದು, ಆ ವಸ್ತು ನಿನಗನ್ಯಭಿನ್ನವಲ್ಲ.
ತಿಳಿದಡೆ ಕರಂಡದೊಳಗಡಗಿದ,
ಅಡಗಿಸಿಕೊಂಡ ಬಾಹ್ಯಗುಣ ವಸ್ತುವಿನಂತಹೆ,
ಗೋಳಕಾಕಾರ ವಿಶ್ವವಿರಹಿತಲಿಂಗವನರಿದ ಉಭಯಸಂಗದ ಗುಣ.

608
ವಾರಿಯಿಂದಾದ ಮುತ್ತು ಶಾಂತಿಯ ಜಲದಲ್ಲಿ ಹಾಕಲಿಕಾಗಿ,
ಮುನ್ನಿನ ಎನ್ನಯ ವಾರಿ ಬಂದಿತ್ತೆಂದು ತಾ ಗಟ್ಟಿಗೊಂಡುದಿಲ್ಲ.
ಈ ಮುತ್ತು ತದ್ಭಾವ ಅಪ್ಪುವಿನಂತಾದುದಿಲ್ಲ.
ಈ ಉಭಯದ ಭೇದವ ತಿಳಿದಡೆ, ದ್ವೈತಾದ್ವೈತವ ಬಲ್ಲರೆಂಬೆ.
ಹೀಂಗಲ್ಲದೆ ಗೆಲ್ಲಸೋಲಕ್ಕೆ ಹೋರುವ ಕಲ್ಲೆದೆಯವರಿಗೆಲ್ಲಿಯದೊ,
ಗೋಳಕಾಕಾರ ವಿಶ್ವವಿರಹಿತ ಲಿಂಗವು ಸಾಧ್ಯವಪ್ಪುದು ?

ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

*
Previousಸತ್ತಿಗೆ ಕಾಯಕದ ಮಾರಯ್ಯಸೂಜಿಕಾಯಕದ ರಾಮಿತಂದೆNext
*